Thursday, December 28, 2017

ಸೂರ್ಯ

ಶರತ್ಕಾಲದ ಹಿತವಾದ ಚಳಿ, ಶಿಶಿರ ಕಾಲಿಟ್ಟೊಡನೆ ತಾರಕಕ್ಕೇರಿ ಮೈ ಮುಖ ಎಂದು ನೋಡದೆ ಒಡೆದು ಚೂರು ಮಾಡಿ, ಮೈನಲ್ಲಿನ ಎಣ್ಣೆಯ ಪಸೆಯೆಲ್ಲ ಹೀರಿ, ದೇಹವನ್ನೇ ಶುಷ್ಕವಾಗಿಸಿಬಿಡುತ್ತದೆ. ಈ ಋತುಕರ್ತನಾದ ಪ್ರಭಾಕರ ಈ ಋತುವಿನಲ್ಲಿ ಪ್ರಜೆಗಳ ಮೇಲಿನ ಕರುಣೆಯಿಂದ ಸ್ವಲ್ಪ ತಡವಾಗಿಯೇ ಉದಯಿಸುತ್ತಾನೆ ನಿಜ. ಆದರೆ ಆತ ಎಷ್ಟು ತಡವಾಗಿ ಉದಯಿಸಿದರೂ ಸಾಲದು ನಮಗೆ. ಶಿಶಿರದ ಚಳಿ ನೀಡುವ ಸುಖ ಅದು. ಆ ಸುಖದ ನಿದ್ದೆ ವರ್ಣನಾತೀತ.
ಚಳಿಗಾಲದಲ್ಲಿ ಮೊದಲು ಶತ್ರುವಾಗಿ, ಬೆಳಗಿನ ಜಾವದ ಸುಖ ನಿದ್ದೆಯನ್ನು ಹಾಳುಗೆಡವಿ, ಮನಸ್ಸಿಗೆ ಬೇಸರವನ್ನು ನೀಡುವ ಸೂರ್ಯ ತಾನೇ ಬೆಚ್ಚಗಿನ ಕಿರಣಗಳಿಂದ ನಮ್ಮನ್ನು ಹಿತಾನುಭವವನ್ನು ಕೊಟ್ಟು, ಮುದಗೊಳಿಸಿ, ಚೇತನವನ್ನು ನೀಡಿ ಒಂದು ರೀತಿಯ ಕೀಟಲೆ ಮಾಡುವ ಸ್ನೇಹಿತ. ಈ ಭಾಸ್ಕರನ ಬಾಧೆ ಇಲ್ಲಿಗಾದರೂ ನಿಂತೀತೆ ಎಂದರೆ ಇಲ್ಲ. ಈ ಚಳಿಗಾಲದಲ್ಲೇ ಇವನಿಗೆ ಬೇಗ ಹೋಗಬೇಕು, ಕೆಲಸವಿದ್ದಾಗಲೇ ರಜೆ ಹಾಕುವ ಉದ್ಯೋಗಿಗಳಂತೆ. ಆದರೆ ಅವನಿಗೂ ಒಂದು ನಿಯಮವಿದೆಯಲ್ಲ. ನಮಗೂ ಅಂಥಾ ಬೇಸರವೇನೂ ಇಲ್ಲ ಬಿಡಿ. ಎಷ್ಟಂದರೊ 'ಮಿತ್ರ' ಅಲ್ಲವೇ ಆತ? ಬಹು ಭರವಸೆಯ ಮಿತ್ರ ಈ ಗಭಸ್ತಿಮಾನ್, ನಾಳೆ ಉದಯಿಸಿಯೇ ಉದಯಿಸುತ್ತಾನೆ ಎನ್ನುವ ಗ್ಯಾರಂಟಿ ನಮಗೆ.

ಲೋಕದಲ್ಲಿ ಎಲ್ಲೂ ನಿಲ್ಲದ ಪ್ರಯಾಣ ಅಂದರೆ ಅದು ಸೂರ್ಯನದ್ದು. ಚಂದ್ರನಿಗೆ ಬಿಡಿ, ಅಮಾವಾಸ್ಯೆಯ ದಿನ ವಿರಾಮ ಇದೆ. ಇವನಿಗೆ ಇಲ್ಲವೇ ಇಲ್ಲ. ಪಾಪ!! ಸಂಬಳ. ಪ್ರಾವಿಡೆಂಟ್ ಫಂಡ್, ಗ್ರಾಚುಯಿಟಿ ಕೂಡಾ ಇಲ್ಲ ಇವನಿಗೆ. ಆದಾಯ ಇಲ್ಲದ್ದರಿಂದ ತೆರಿಗೆಯ ಪ್ರಶ್ನೆಯೇ ಇಲ್ಲ ಬಿಡಿ. ನಮ್ಮಂಥವರಿಗೆ ತೆರಿಗೆ ವಿಚಾರದಲ್ಲಿ, ಗಿರಾಕಿಗಳ ವಿಚಾರದಲ್ಲಿ ದೊಡ್ಡ ಗ್ಯಾರಂಟಿ ಇವನದ್ದೆ. ಈತ ಎಂದಿಗೂ ನಮ್ಮ ಗಿರಾಕಿಯಾಗುವುದಿಲ್ಲ ಎನ್ನುವ ಗ್ಯಾರಂಟಿ.

ತಾನು ಬೆಳಗಿ ಲೋಕವನ್ನೆಲ್ಲಾ ಬೆಳಗುತ್ತಾನೆ ಈ ಸೂರ್ಯ. ಈತನ ಬಿಸಿಲಿನಿಂದಲ್ಲವೇ ಭೂಮಿಯ ಮೇಲಿನ ನೀರು ಆವಿಯಾಗಿ, ಮೋಡವಾಗಿ, ಮಳೆಯಾಗಿ ನದಿಯಾಗೆ ತೊರೆಯಾಗಿ ಹರಿದು ನಮ್ಮ ಜೀವನವನ್ನು ನಡೆಸಲು ಸಹಾಯವಾಗುವುದು. ಈತನ ಉಪಕಾರ ನಿಜಕ್ಕೂ ತೀರಿಸುವುದು ಕಷ್ಟ. ಈ ಉಪಕಾರದ ಸ್ಮರಣೆ ಇರಲಿ ಎಂದೇ ಇರಬೇಕು, ಆತನಿಗೆ ಮೂರೂ ಹೊತ್ತಿನಲ್ಲಿ ಅರ್ಘ್ಯ ಪ್ರದಾನ ಮಾದಬೇಕು ಎಂದಿದ್ದು.

ಈ ಸೂರ್ಯನ ಉದಯ ಅಸ್ತಗಳೆರಡೂ ರೋಚಕ. ಒಂದು ದಿನವನ್ನು ಕೊಟ್ಟರೆ ಇನ್ನೊಂದು ರಾತ್ರಿಯನ್ನು ಕೊಡುತ್ತದೆ. ಒಂದು ಉಲ್ಲಾಸ-ಉತ್ಸಾಹಗಳನ್ನು ಕೊಟ್ಟರೆ ಇನ್ನೊಂದು ಆಯಾಸ-ವಿಶ್ರಾಂತಿಗಳನ್ನು ನೆನಪಿಸುತ್ತದೆ.ಒಂದು ಇಂದಿನ ಬಗ್ಗೆ ಭರವಸೆ ಕೊಟ್ಟರೆ ಇನ್ನೊಂದು ನಾಳಿನ ಭರವಸೆ ಕೊಡುತ್ತದೆ. ಭೂಮಿಯ ಒಂದು ಪಾರ್ಶ್ವದಲ್ಲಿ ಉದಯಿಸುತ್ತಿರುವಾಗಲೇ, ಇನ್ನೊಂದು ಪಾರ್ಶ್ವದಲ್ಲಿ ಅಸ್ತಮಿಸುತ್ತಿರುತ್ತಾನೆ ಈ ವಿಂಧ್ಯ ವೀಥಿ ಪ್ಲಮಂಗಮ. ಒಂದೆಡೆಯಲ್ಲಿ ನೋಡು ನಾನಿದ್ದೇನೆ ಎಂದು ಉರಿಯುತ್ತಿದ್ದಾನೆ ಮಧ್ಯಾಹ್ನದಲ್ಲಿ, ಇನ್ನೊಂದು ಭಾಗದಲ್ಲಿ ಮತ್ತೆ ಬರುವ ಹವಣಿಕೆಯಲ್ಲಿನ ತುಂಟತನ ಇವನಿಗೆ. ವಾಸ್ತವದಲ್ಲಿ ಸ್ಥಿರನಾದ ಈತನಿಗೆ ಉದಯ-ಅಸ್ತಮಾನಗಳೆರಡೂ ಇಲ್ಲ. ಹಗಲು ಮತ್ತು ರಾತ್ರಿಯಾಗುತ್ತಿರುವುದರಿಂದಷ್ಟೆ ನಮಗೆ ಉದಯ ಅಸ್ತಮಾನಗಳ ಅನುಭವ ಇದೆ.

ಇದೆಲ್ಲಾ ನಮ್ಗೆ ಗೊತ್ತಿದ್ದಿದ್ದೇ ಬಿಡಿ. ನಾವೂ 'ಎಜುಕೇಟೆಡ್' ಅಲ್ಲವೇ? ಫಿರಂಗಿಗಳು ದೂರದ ಬ್ರಿಟನ್ನಿನಿಂದ ನಮ್ಮಲ್ಲಿ ತನಕ ಬಂದು, ಅಲ್ಲಿ ನಡೆದ ವಿಜ್ಞಾನದ ಸಂಶೋಧನೆಗಳನ್ನೆಲ್ಲಾ ನಮಗೆ ಕಲಿಸಿ ಕೃತಾರ್ಥರನ್ನಾಗಿಸಿ, ನಮ್ಮ ತಲೆಯಲ್ಲಿ ನಾವು ವೈಜ್ಞಾನಿಕವಾಗಿ ಹಿಂದುಳಿದವರು ಎನ್ನುವ ಬೀಜ ಬಿತ್ತಿದ್ದಾರಲ್ಲವೇ? ಇರಬಹುದು ಬಿಡಿ. ಆದರೆ, ಆ ಬ್ರೀಟಿಷರು, ಇಲ್ಲಿ ಮಹಾಭಾರತ ಬರೆದಾಗ ಸೊಪ್ಪಿನುಡಿಗೆ ಉಟ್ಟು ತಿರುಗಿದ್ದರು ಎಂದಿದ್ದರಂತೆ ರಾಷ್ಟ್ರಕವಿ ಕುವೆಂಪು. ರಸಋಷಿಯಾಡಿದ ಈ ಮಾತು ನಿಜ. ನಮ್ಮ ಮಹರ್ಷಿಗಳ ಜ್ಞಾನದ ಅಗಾಧತೆ ಪರಿಚಯವಿದ್ದಿರಬೇಕು ಆ ಮಹಾಕವಿಗೆ. ಏಕೆಂದರೆ ವಿಷ್ಣುಪುರಾಣದ ಕೆಲ ಶ್ಲೋಕಗಳು ಅದಕ್ಕೆ ಸಾಕ್ಷಿಯಾಗಿವೆ.
ದಿವಸಸ್ಯ ರವಿರ್ಮಧ್ಯೇ ಸರ್ವಕಾಲಂ ವ್ಯವಸ್ಥಿತಃ||
ಸರ್ವದ್ವೀಪೇಷು ಮೈತ್ರೇಯನಿಶಾರ್ದ್ಧಸ್ಯ ಚ ಸಮ್ಮುಖಃ|
ಉದಯಾಸ್ತಮನೇ ಚೈವ ಸರ್ವಕಾಲಂ ತು ಸಮ್ಮುಖೇ||
ವಿದಿಶಾಸು ತ್ವಶೇಷಾಸು ತಥಾ ಬ್ರಹ್ಮನ್ ದಿಶಾಸು ಚ|
ಯೈರ್ಯತ್ರ ದೃಶ್ಯತೇ ಭಾಸ್ವಾನ್ ಸ ತೇಷಾಮುದಯಃ ಸ್ಮೃತಃ||
ತಿರೋಭಾವಂ ಚ ಯತ್ರೈತಿ ತತ್ರೈವಾಸ್ತಮನಂ ರವೇ:|
ನೈವಾಸ್ತಮನಮಕರ್ಮಸ್ಯ ನೋದಯ: ಸರ್ವದಾ ಸತ:||
ಉದಯಾಸ್ತಮನಾಖ್ಯಮ್ ಹಿ ದರ್ಶನಾದರ್ಶನಂ ರವೇಃ|
ಶಕ್ರಾದೀನಾಂ ಪುರೇ ತಿಷ್ಠನ್ ಸ್ಪೃಷ್ಯ್ತತ್ಯೇಷ ಪುರತ್ರಯಮ್||
ವಿಕೋಣೌ ದ್ವೌ ವಿಕೋಣಸ್ಥಃ ತ್ರೀನ್ ಕೋಣಾನ್ ದ್ವೇ ಪುರುಷಾ ತಥಾ|
ಉದಿತೋ ಉದಿತೋ ವರ್ದ್ಧಮಾನಾಭಿರಾಮಧ್ಯಾಹ್ನತ್ತಪನ್ ರವಿ:||

ಶ್ಲೋಕಗಳ ಅರ್ಥ ಸಂಕ್ಷಿಪ್ತವಾಗಿ ಹೀಗಿದೆ.
ಸೂರ್ಯನು ದಿಕ್ಕುಗಳ ಬ್ರಹ್ಮ ಅಂದರೆ ಸೃಷ್ಟಿಕರ್ತ. ಈತನ ಉದಯ-ಅಸ್ತಗಳಿಂದಲೇ ದಿಕ್ಕುಗಳಾಗಿವೆ. ಈತನು ಉದಯ ಹಾಗೂ ಅಸ್ತದ ಸಮಯದಲ್ಲಿ ಒಂದು ದ್ವೀಪದಲ್ಲಿದ್ದು ಇನ್ನೊಂದು ದ್ವೀಪಕ್ಕೆ ಸಮ್ಮುಖವಾಗಿರುತ್ತಾನೆ. ಮಧ್ಯಾಹ್ನವನ್ನುಂಟು ಮಾಡಿದ ದ್ವೀಪಕ್ಕೆ ಸಮ್ಮುಖನಾಗಿ ಮಧ್ಯರಾತ್ರಿಯನ್ನು ಕೊಡುತ್ತಾನೆ. ಸೂರ್ಯನ ಕಾಣುವಿಕೆಯನ್ನು ಉದಯವೆಂತಲೂ ಕಾಣದಿರುವಿಕೆಯನ್ನು ಅಸ್ತ ಎಂದೂ ವ್ಯವಹರಿಸುತ್ತಾರೆ. ಈತನಿಗೆ ಉದಯ-ಅಸ್ತಮ ಎನ್ನುವ ಕರ್ಮಗಳಿಲ್ಲ. ಇಂದ್ರನ ಪುರದಲ್ಲಿ ನಿಂತು ಉಳಿದ ಮೂರು ಪುರಗಳನ್ನು (ದಿಕ್ಕುಗಳನ್ನು) ಸ್ಪರ್ಷಿಸುತ್ತಾನೆ,  ಒಂದು ಕೋಣದಲ್ಲಿ ನಿಂತು ಎರಡು ವಿಕೋಣಗಳನ್ನು,  ವಿಕೋಣದಲ್ಲಿ ನಿಂತು ಮೂರು ವಿಕೋಣಗಳನ್ನು ಬೆಳಗುತ್ತಾನೆ.
ಕೋಣ ಎಂದರೆ ಮುಖ್ಯ ದಿಕ್ಕು. ಪೂರ್ವ, ಪಶ್ಚಿಮ ಹೀಗೆ. ವಿಕೋಣ ಎಂದರೆ ಉಪದಿಕ್ಕುಗಳು. ಆಗ್ನೇಯ, ವಾಯವ್ಯ ಹೀಗೆ.
ಅಂದರೆ ಪೂರ್ವದಲ್ಲಿದ್ದಾಗ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳನ್ನು ಬೆಳಗುತ್ತಾನೆ. ಈ ಮುಖ್ಯ ದಿಕ್ಕುಗಳು ಬೆಳಗಬೇಕಾದರೆ ಅವುಗಳ ಮಧ್ಯದ ಉಪದಿಕ್ಕುಗಳೂ ಬೆಳಗಬೇಕು. ವಿಕೋಣದಲ್ಲಿದ್ದಾಗ ಉದಾಹರಣೆಗೆ ಈಶಾನ್ಯದಲ್ಲಿದ್ದಾಗ, ನೈರುತ್ಯ, ಆಗ್ನೇಯ, ವಾಯವ್ಯಗಳನ್ನು ಬೆಳಗುತ್ತಾನೆ. ಮುಖ್ಯದಿಕ್ಕುಗಳು ಉಪದಿಕ್ಕುಗಳ ಮಧ್ಯದಲ್ಲಿಯೇ ಇರುವುದರಿಂದ ಸಹಜವಾಗಿಯೇ ಅವೂ ಕೂಡಾ ಬೆಳಗನ್ನು ಪಡೆಯುತ್ತವೆ.
ಇಂದಿನ ಕಾಲದ ಸೋಲಾರ್ ಸೆನ್ಸರ್ ಗಳು ಅಂದೂ ಇದ್ದವೇನೋ ಅನ್ನಿಸುವುದಿಲ್ಲವೇ? ಸೌರಾಧಾರಿತ ಉಪಕರಣಗಳಲ್ಲಿರುವ ಈ ಸೆನ್ಸರ್ ಗಳು ಸೂರ್ಯನಿರುವ ದಿಕ್ಕನ್ನು ಗುರುತಿಸಿ ಉಪಕರಣಗಳು ಕೆಲಸ ಮಾಡುವಂತೆ ಮಾಡುತ್ತವೆಯಲ್ಲ, ಅದಕ್ಕೇ ಕೇಳಿದೆ.

No comments:

Post a Comment