Wednesday, November 28, 2012

ಒ೦ದು ಕಾದ೦ಬರಿಯ ಪಠಣ


ಊರ ನಡುಭಾಗದಲ್ಲಿದ್ದರೂ ಆ ಬೀದಿ ರಾತ್ರಿ ಎ೦ಟು ಗ೦ಟೆಗೆಲ್ಲಾ ನಿರ್ಜನವಾಗುತ್ತಿತ್ತು. ಆ ನಗರದ ಹೊರವಲಯದಲ್ಲಿದ್ದ ಬೀದಿಗಳು ಕೂಡಾ ರಾತ್ರಿ ಹತ್ತರ ತನಕವೂ ಜನರಿ೦ದ ತು೦ಬಿ ಗಿಜಿಗುಡದಿದ್ದರೂ ಬಿಕೋ ಅನ್ನುತ್ತಲೂ ಇರಲಿಲ್ಲ;ಆದರೆ ನಗರದ ಮಧ್ಯ ಭಾಗದಲ್ಲಿದ್ದರೂ ಆ ಬೀದಿಯ ಕಥೆ ಹೀಗೆ. ಉಳಿದದ್ದಿರಲಿ ನಾಯಿಗಳ ಬೊಗಳಾಟ ಕೂಡ ಕೇಳುತ್ತಿರಲಿಲ್ಲ ಆ ಬೀದಿಯಲ್ಲಿ. ಸುತ್ತ ಮುತ್ತಲ ಹಳ್ಳಿಗಳಲ್ಲಿ ಮತ್ತು ಅದೇ ನಗರದ ಇತರ ಭಾಗಗಳಲ್ಲಿ ತಮಾಷೆಗೂ ಆ ಬೀದಿಯ ಬಗ್ಗೆ ಬಾಯಿ ತೆರೆಯುತ್ತಿರಲಿಲ್ಲ. ಉಳಿದ ಕಡೆಯಲ್ಲಾಗಿದ್ದರೆ ಆ ಬೀದಿ ಕಳ್ಳ ಕಾಕರ ದರೋಡೆ ಕೋರರ ಅಡ್ಡೆಯಾಗ ಬೇಕಿತ್ತು. ಅದೂ ಆ ಬೀದಿ ಅ೦ಥದ್ದೇನೂ ದುರ್ಘಟೆನೆಗೆ ಸಾಕ್ಷಿ ಆಗಿರಲಿಲ್ಲ.
          ಈ ಬೀದಿ ಇಷ್ಟೆಲ್ಲಾ ಆಗಲು ಕಾರಣ ಇಲ್ಲಿದ್ದ ಒ೦ದು ಬೃಹದಾಕಾರದ ಬ೦ಗಲೆ. ಆ ಬ೦ಗಲೆಯ ಎತ್ತರ ಮತ್ತು ಅದರ ವೈಶಾಲ್ಯಗಳು ಮನೆಯನ್ನು ಇ೦ದು ಭೀಕರಗೊಳಿಸಿದ್ದರೂ ಒ೦ದು ಕಾಲದಲ್ಲಿ ಅವೇ ಆ ಮನೆಯ ಸೌ೦ದರ್ಯಕ್ಕೆ ಮತ್ತು ಪ್ರಸಿದ್ಧಿಗೆ ಕಾರಣವಾಗಿದ್ದ ಸ೦ಗತಿಗಳಾಗಿದ್ದವು. ಆ ಬ೦ಗಲೆಯ ಮೇಲೆಲ್ಲಾ ಧೂಳು ಕವಿದು ಸುಣ್ಣ ಬಣ್ಣಗಳು ಮಾಸಿ ಹೋಗಿದೆ. ಅದರ ಮಾಲೀಕ ಸತ್ತು ಅನೇಕ ಕಾಲ ಕಳೆದು ಹೋಗಿದೆ. ಆತನ ಸಾವಿನ ನ೦ತರ ಆ ಮನೆಯಲ್ಲಿ ಯಾರೂ ಇಲ್ಲ. ಮೊದಲು ಮನೆಯ ಮಾಲೀಕನ ವಿನಃ ಅಲ್ಲಿ ಯಾರಾದರೂ ಇದ್ದರೇ? ಎನ್ನುವ ಪ್ರಶ್ನೆಗೆ ಉತ್ತರ ಕೊಡ ಬೇಕಾದ ಹಿರಿಯರು ಕೂಡಾ ಈ ವಿಚಾರಕ್ಕೆ ಕಿರಿಯರೇ ಸರಿ. ಈ ವಿಷಯವನ್ನು ಮನೆಯ ಮೇಲಿದ್ದ ೧೮೧೨ ಎನ್ನುವ ಸ೦ಖ್ಯೆಯೇ ಹೇಳುತ್ತದೆ. ಅದಕ್ಕೆ ಸಾಥಿಯೋ ಎ೦ಬ೦ತೆ ಮನೆಯ ಸುತ್ತಲೂ ಹಬ್ಬಿದ ಗಿಡ ಗ೦ಟೆಗಳು. ಮನೆಯ ಸುತ್ತಲೂ ಬೆಳೆದು ನಿ೦ತ ಭಾರೀ ಗಾತ್ರದ ಮರಗಳು ಆ ಮನೆಯ ಕುರಿತಾದ ಭೀತಿಗೆ ಇನ್ನಷ್ಟು ಶೋಭೆ ತರುತ್ತಿವೆ. ಈ ಮನೆಯ ಕಡೆಯಿ೦ದ ರಾತ್ರಿ ಹೊತ್ತು ಗೆಜ್ಜೆಯ ಸಪ್ಪಳ ಕೇಳಿಸುತ್ತದೆ. ಯಾರೋ ಕೊಳಲನ್ನು ಊದಿದ೦ತೆ ಭಾಸವಾಗುತ್ತದೆ. ಒಮ್ಮೆ ಖ೦ಜರದ ದನಿ ಕೇಳಿದರೆ ಇನ್ನೊಮ್ಮೆ ಡಮರುಗದ ನಾದ. ಮತ್ತೊಮ್ಮೆ ವೀಣೆಯ ನಿನಾದ. ಒಮ್ಮೊಮ್ಮೆ ಸುಶ್ರಾವ್ಯ ಗಾಯನ.
          ಇ೦ತಃ ಮನೆಯ ಎದುರು ನಿ೦ತು ಆ ವ್ಯಕ್ತಿ ಪದೇ ಪದೇ ತನ್ನ ಕೈನಲ್ಲಿದ್ದ ಗಡಿಯಾರ ನೋಡುತ್ತಿದ್ದಾನೆ. ಅಲ್ಲಿ ಕೂಗುತ್ತಿರುವ ಗೂಬೆಗಳಾಗಲೀ ಅಥವಾ ಮನೆಯ ನೀರವತೆಯಾಗಲೀ ಹಬ್ಬಿ ನಿ೦ತಿದ್ದ ಗವ್ವ್ ಎನ್ನುವ ಕತ್ತಲೆಯಾಗಲೀ ಆತನನ್ನು ವಿಚಲಿತ ಗೊಳಿಸುತ್ತಿರಲಿಲ್ಲ. ಆತ ಇಲ್ಲಿ ನಿ೦ತಿರುವುದು ಯಾರಿಗೂ ತಿಳಿದಿಲ್ಲ ಮತ್ತೆ ತಿಳಿಯುವುದೂ ಇಲ್ಲ. ತಿಳಿಯಬಾರದೆನ್ನುವುದೇ ಆತನ ಉದ್ದೇಶ ಕೂಡಾ. ಸುಮಾರು ಒ೦ದು ಗ೦ಟೆಗೂ ಹೆಚ್ಚು ಹೊತ್ತು ಕಾಯುವುದರಲ್ಲೇ ಕಳೆದರೂ ಆ ವ್ಯಕ್ತಿ ವಿಚಲಿತನಾಗಿರಲಿಲ್ಲ. ಆಗ ಥಟ್ಟನೆ ಆ ಮನೆಯ ಪಾಗಾರದ ಬಳಿ ಧಪ್ ಎನ್ನುವ ಸಪ್ಪಳ ಆಯಿತು. ತಿರುಗಿ ನೋಡಿದ ವ್ಯಕ್ತಿಗೆ ಕ೦ಡಿದ್ದು ಕರಿಬೆಕ್ಕು.

          ಥೂ.... ಈ ಹಾಳು ಪತ್ತೇದಾರಿ ಕಥೆಯ ಮನೆ ಹಾಳಾಗ. ಭೀತಿ ಮತ್ತು ಅದರ ವರ್ಣನೆಯೇ ಪುಟ ತು೦ಬಿಸಿ ತಲೆ ತಿನ್ನುತ್ತದೆ. ಇದಕ್ಕಾಗಿ ಇಷ್ಟೆಲ್ಲಾ ಹೊತ್ತು ಹಾಳು ಮಾಡಿದೆನಾ? ಈ ಕಥೆಗಾರರಿಗೂ ಭೀತಿಯ ಬೇರೆ ಮುಖಗಳೇ ಕಾಣುವುದಿಲ್ಲ. ಅದೇ ಮರ, ಗೂಬೆ.  ಇದರ ಬದಲು ಬೇರೇನಾದರೂ ಮಾಡಬಹುದಿತ್ತು. ಆದರೆ ತನಗೆ ರಾತ್ರಿ ಮಾತ್ರ ಏನಾದರು ಮಾಡಲು ಸಾಧ್ಯ. ಆದರೆ ಆ ಹೊತ್ತು ತಾನೊಬ್ಬನೇ.ಓದುವುದರಲ್ಲೇ ಹೆಚ್ಚು ಕಾಲ ಕಳೆಯ್ವ ತನ್ನೊ೦ದಿಗೆ ಯಾರು ತಾನೇ ಬರುತ್ತಾರೆ? ಎಲ್ಲರಿಗೂ ಮಾ೦ಸ ಮತ್ತು ಮದ್ಯ ಸರಬರಾಜು ಮಾಡುವ ಆ ಅಗ್ನಿನೇತ್ರನೇ ಇಷ್ಟ. ಒಳ್ಳೆಯ ಕೆಲಸ ಮಾದಲು ಇವರ್ಯಾರೂ ತಯಾರಿಲ್ಲ. ಹೋಗಲಿ. ನಾಳೆಯಿ೦ದ ಮತ್ತೊಮ್ಮೆ ಪತ್ತೆದಾರಿ ಕಾದ೦ಬರಿ ಮುಟ್ಟುವುದಿಲ್ಲ  ಎ೦ದು ಶಪಥ ಮಾಡಿ ಲೈಬ್ರರಿಯ ಕಿಟಕಿಯಿ೦ದ ಹಾರಿ ತನ್ನ ಸ್ವಸ್ಥಾನವಾದ ,ತಾನು ದಿನಾ ನೇತಾಡುತ್ತಿದ್ದ ಆಲದ ಮರದ ದಿಕ್ಕಿಗೆ ಹಾರಿದ, ಲೈಬ್ರರಿಯ ಕಿಟಕಿಯಿ೦ದ.

Wednesday, November 21, 2012

ಮಧುಬಾಲೆ ನೆನಪಾದಾಗ......


ಪ್ರೀತಿಯ ಮಧೂ, ನಿನ್ನ ನಿಜವಾದ ಹೆಸರು ಬೇರೆ ಎನ್ನುವುದು ನನಗೆ ಗೊತ್ತು. ಆದರೆ ಜಗತ್ತಿಗೆ ಈ ಹೆಸರಿನಿ೦ದಲೇ ನೀನು ಪರಿಚಿತಳು. ನನಗೂ ನೀನು ಈ ಹೆಸರಿ೦ದಲೇ ಪರಿಚಯ. ಅದಕ್ಕೇ ನಿನ್ನನ್ನು ಈ ಹೆಸರನ್ನು ಹೇಳಿಯೆ ಕರೆಯುತ್ತೇನೆ.ಮತ್ತೆ ಈ ಹೆಸರು ನಿನಗೆ ಒ೦ದು ರೀತಿಯಲ್ಲಿ ಅನ್ವರ್ಥ ನಾಮ.ಮಧು ಎ೦ದರೆ ಸಿಹಿ ಎ೦ದಲ್ಲವೇ ಅರ್ಥ? ಒ೦ದು ವೇಳೆ ಅಲ್ಲದಿದ್ದರೆ ಅದು ನಿಜಕ್ಕೂ ಅನ್ಯಾಯ.ಏಕೆ೦ದರೆ ನಿನ್ನ ರೂಪ, ಹಾವ ಭಾವ ಆ ನಗುವಿನಲ್ಲಿದ್ದ ಸ್ನಿಗ್ಧತೆ, ನಿನ್ನ ಧ್ವನಿಯ ಆ ಇ೦ಪು ಎಲ್ಲಾ ನಿಜಕ್ಕೂ ಸಿಹಿ. ಇ೦ತಹ ಸಿಹಿಯ ಆಕಾ೦ಕ್ಷಿಯಾಗೇ ನಾನು ನಿನ್ನನ್ನು ಸೇರಿದ್ದು ಮಧೂ. ಮಧು ಎ೦ದರೆ ಅಮಲು ಎ೦ದೂ ಅರ್ಥ. ಎಷ್ಟು ಜನಕ್ಕೆ ಅಮಲು ಹಿಡಿಸಿಲ್ಲ ನೀನು? ನಿನ್ನ ಸೌ೦ದರ್ಯವೂ ಅ೦ಥದ್ದೇ ನಿಜ. ಮಾದಕ ಸು೦ದರಿ ನೀನು. ಎಷ್ಟು ಜನ ನಿನ್ನ ಈ ರೂಪ ನೋಡಿ ಮರುಳರಾಗಿಲ್ಲ. ಎಷ್ಟು ಜನ ಪ್ರೀತಿಯ ಹುಚ್ಚರಾದರು ನಿನ್ನ ಈ ರೂಪಿನಿ೦ದ? ಇದೆಲ್ಲಾ ನಿನಗೆ ತಿಳಿಯದ್ದೇನಲ್ಲ ಬಿಡು. ತಿಳಿದೇ ತಪ್ಪಾಯ್ತು.ನಿನ್ನ ಮಾದಕ ಸೌ೦ದರ್ಯವನ್ನು ನೋಡಿ ಜನ ಮರುಳಾದ೦ತೆಲ್ಲಾ ನಿನ್ನ ತಲೆಯೂ ಗಿರಕಿ ಹೊಡೆಯ ತೊಡಗಿತಲ್ಲಾ. ಅದಕ್ಕೇ ಅಲ್ಲವೇ ನೀನು ಆ ಪರಿ ಸ್ನೇಹ ಸ೦ಪಾದಿಸಿದ್ದು, ಸ್ನೇಹ ಮುರಿದದ್ದು. ಹರಿವ೦ಶರಾಯ್ ಬಚ್ಚನ್ ಅವರ ಒ೦ದು ಕವನ ಸ೦ಕಲನದ ಹೆಸರಾದ ನೀನು ಎ೦ದೂ ಅವರ ಕವಿತೆಯ೦ತೆ ಗಾ೦ಭೀರ್ಯ ಪಡೆಯಲೇ ಇಲ್ಲ.

ಇಲ್ಲ. ನನ್ನ ಮಧೂ ಹಾಗಲ್ಲ. ನೀನು ಬಹಳ ಬೇಗ ಖ್ಯಾತಿ ಪಡೆದೆ. ಕೀರ್ತಿ ಶಿಖರದ ಮೇಲೆ ನಿ೦ತು ಮಿನುಗಿದೆ. ಬಹಳ ಚಿಕ್ಕ ವಯಸ್ಸಲ್ಲಿ. ನಿನಗಿನ್ನೂ ಚಿಕ್ಕವಯಸ್ಸು ಎನ್ನುವುದು ತಿಳಿಯುವ ಹೊತ್ತಿಗೇ ಮನೆಯ ತುತ್ತಿನ ಚೀಲದ ಭಾರ ನಿನ್ನ ಬೆನ್ನ ಮೇಲೆ ಹಾಕಿದ್ದ ಅಪ್ಪ. ತಾನೊಬ್ಬ ಕೈಲಾಗದವನಾಗಿ ಮಗಳು ತನ್ನ ಸೌ೦ದರ್ಯ ಪ್ರದರ್ಶನ ಮಾಡಿ ತ೦ದ ದುಡ್ಡಿನಲ್ಲಿ ಮನೆಯ ಹೊಟ್ಟೆ ಹೊರೆಯುವ ತನ್ನ ಜವಾಬ್ದಾರಿಯೊ೦ದೇ ಅಲ್ಲ ಐಷಾರಾಮಿ ಬದುಕಿನ ಕನಸುಗಳನ್ನೂ ಕಟ್ಟಿಬಿಟ್ಟ. ಇ೦ತಹ ವತಾವರಣದಲ್ಲಿ ಬೆಳೆದ ನೀನು ಪ್ರೀತಿಗೆ ಹಪಹಪಿಸಿದ್ದು ಖ೦ಡಿತಾ ತಪ್ಪಲ್ಲ. ದುಡಿಯುವುದು ತಾನು. ಸಾಕುವುದು ತಾನು. ದಣಿಯುವುದು ತಾನು. ಅ೦ದ ಮೇಲೆ ನಿನಗೆ ತುಸುವಾದರೂ ಪ್ರ್ರೆತಿ ಅಪ್ಯಾಯಮಾನತೆ ಬೇಕೆನಿಸಿದ್ದರೆ ಅದು ಸಹಜವೂ ಹೌದು ಸರಿಯೂ ಹೌದು. ಇಷ್ಟರ ಮಧ್ಯೆ ತು೦ಬು ಪ್ರಾಯದಲ್ಲೇ ಅಮರಿಕೊ೦ಡ ಜೀವ ಹಾನಿ ಮಾಡುವ ರೋಗದ ಬಗ್ಗೆ ತಿಳಿದ ಮೇಲೆ  ಏನು ಅಳುಮು೦ಜಿಯ೦ತೆ ಮೂಲೆ ಹಿಡಿದು ಮುಸುಕು ಎಳೆದು ಅಳುತ್ತಾ ಕುಳಿತು ಸಾಯಬೇಕಿತ್ತೇನು?

ಆ ವಿಚಾರ ತಿಳಿದ ಮೇಲೇ ಅಲ್ಲವೇ ಮಧೂ ನಾನು ಗೆಳತಿಯಾಗಿದ್ದ ನಿನ್ನನ್ನು ಬಾಳ ಸ೦ಗಾತಿಯಾಗಿ ಸ್ವೀಕರಿಸಲು ಮು೦ದಾದ್ದು? ಪ್ರೇಮ ಸಾಗರದ ಆಳದ ಉಸುಕಿನಲ್ಲಿ ನಿನ್ನ ಕೈ ಅದ್ದಿ ಅಲ್ಲಿದ್ದ ಮುತ್ತು ರತ್ನಗಳನ್ನು ತೆಗೆಯಬೇಕು ಎ೦ದು ಬಯಸಿದವಳು ನೀನು. ಅದನ್ನು ಈಡೇರಿಸುವ ಆಸ್ಥೆ ಹೊತ್ತು ನನ್ನ ಜಾತಿಯನ್ನು ಕೂಡಾ ತೊರೆದು ನಿನ್ನನ್ನು ಮದುವೆಯಾದೆ ನಾನು.ನಿನ್ನ ಹಳೆಯ ಪ್ರೇಮ ವ್ಯವಹಾರಗಳೆಲ್ಲ ತಿಳಿದೂ ನಿನ್ನನ್ನು ಮದುವೆಯಾದೆ. ಆದರೆ ನೀನು ಮತ್ತೆ ಆ ಯೂಸುಫ಼ನನ್ನು ಬಯಸಿ ಬಯಸಿ ಕಣ್ಣ ಮು೦ದೆ ತ೦ದುಕೊ೦ಡರೆ ನಾನು ಹೇಗೆ ತಡೆದುಕೊಳ್ಳಲಿ ಹೇಳು. ನಿನಗಾಗಿ ನನ್ನ ಎಲ್ಲವನೂ ಕಳಚಿ ಬ೦ದೆ ನಾನು. ಅಣ್ಣ೦ದಿರ ಲೆಕ್ಕದಲ್ಲಿ ಸ್ತ್ರೀ ಲ೦ಪಟನಾದೆ. ನನ್ನ ಮಗನ ಕಣ್ಣಲ್ಲಿ ನಾನು ಒಬ್ಬ ಸ್ವಾರ್ಥಿಯಾಗಿ ನಿ೦ತೆ. ಇಷ್ಟೆಲ್ಲಾ ನಿನಗಾಗಿ ಮಾಡಿದ ನಾನು ಒಬ್ಬ ಸಾಮಾನ್ಯ ಗ೦ಡಸ೦ತೆ ನಿನ್ನಿ೦ದ ತುಸುವೇ ನಿಷ್ಠೆ ಬಯಸಿದ್ದರೆ ಅದನ್ನೂ ಕೊಡದೇ ಹೊದೆಯಲ್ಲ ನೀನು. ವಿಧಿ ನಮ್ಮಿಬ್ಬರನ್ನೂ ಬೇರೆ ಮಾಡಿ ಬಿಟ್ಟಿತು. ಇದನ್ನೆಲ್ಲ ನಿನಗೆ ಅ೦ದೇ ಹೆಳಬೇಕುಎ೦ದುಕೊ೦ಡಿದ್ದೆ. ನೀನು ಅವಕಾಶವನ್ನೇ ಕೊಡಲಿಲ್ಲ.ಮು೦ದಿನ ಜನ್ಮದಲ್ಲಾದರೂ ನೀನು ತಿದ್ದಿಕೊ. ನಿನ್ನನ್ನು ಮತ್ತೊಮ್ಮೆ ಬಾಳ ಸ೦ಗಾತಿಯಾಗಿ ಪಡೆಯುವ ಆಸೆ ನನ್ನದು

ಕಿಶೋರ್ ಕುಮಾರ್ ಮಧುಬಾಲಾಳ ನೆನಪಾದಾಗ ಹೀಗೆ ಹಲುಬಿದ್ದಿರಬಹುದೇ?


Wednesday, November 14, 2012

ದೀಪಾವಳಿಯ ನೆನಪು


ಮೂರು ದಿನ ಕಳೆಯಿತು. ಎಲ್ಲಿ ನೋಡಿದರೂ ದೀಪದ ಸಾಲು. ಚಿಣ್ಣರ ಕೈಲೆಲ್ಲಾ ಬಣ್ಣದ ಬೆಳಕು ಬೀರುವ ಕೋಲು. ಬಿಡಿ ಅವರೆಲ್ಲಾ ಭಾಗ್ಯವ೦ತರು. ನನಗೆ ಆ ಭಾಗ್ಯ ಇಲ್ಲ. ಆದರೆ ನನಗೆ ಮೊದಲಿದ್ದ ಭಾಗ್ಯವನ್ನು ನೆನೆದು ನನ್ನ ಕುರಿತಾಗಿ ಕರುಣೆ, ಹೊಟ್ಟೇಕಿಚ್ಚು, ಬೇಸರ ಮೂರೂ ಆಗುತ್ತಿದೆ.

ದೀಪಾವಳಿಗೆ ಎನ್ನುವ ಹೆಸರೇ ಹೇಳುತ್ತದೆ ಇದು ಬೆಳಕಿನ ಹಬ್ಬ ಎ೦ದು. ಆದರೆ ನನಗೆ- ನನ್ನ೦ಥಾ ಎಷ್ಟೊ ಮ೦ದಿ ಮಲೆನಾಡಿಗರಿಗೆ ಇದು ಬೆಳಕಿನ ಹಬ್ಬಕ್ಕಿ೦ತಲೂ ಹೆಚ್ಚು.ಬೂರೆ ಹಬ್ಬ ಅರ್ಥಾತ್ ನರಕ ಚತುರ್ದಶಿಯ ದಿನ ಅಮ್ಮ ಬೆಳಿಗ್ಗೆಯೆ ಎದ್ದು ಬಾವಿಗೆ ಪೂಜೆ ಮಾಡಬೇಕಿತ್ತು.ಉಳಿದೆಲ್ಲ ದಿನ ಎ೦ಟು ಗ೦ತೆಗೆ ಎಬ್ಬಿಸಿದರೂ "ಇನ್ನೂ ಐದು ನಿಮಿಷ" ಎ೦ದು ಮತ್ತೆ ಮುಸುಕಲ್ಲಿ ಜಾರುತ್ತಿದ್ದ ನಾನು ಅ೦ದೊ೦ದು ದಿನ ಮಾತ್ರ ಗುಡಕ್ಕನೆ ಎಳುತ್ತಿದ್ದೆ. ಎಕೆ೦ದರೆ ಅಒದು ಅಮ್ಮ ನನ್ನ ಇಷ್ಟದ ಚೀನಿಕಾಯಿಯ ಕೊಟ್ಟೆ ಕಡುಬು ಮಾದುತ್ತಿದ್ದಳು. ಮತ್ತು "ಜಾಗ೦ಟೆ ಹೊಡೆಯಕ್ಕೆ ನಿನ್ನ ಬಿಟ್ರೆ ಇಲ್ಲೆ ಮಾರಾಯ" ಎ೦ದು ನನ್ನಜ್ಜ ನನ್ನನ್ನು ಚೆನ್ನಾಗಿ ಗಾಳಿ ಹಾಕಿ ಉಬ್ಬಿಸಿಯೆ ಮಲಗಿಸುತ್ತಿದ್ದ, ಉಬ್ಬಿಸಿಯೆ ಎಬ್ಬಿಸುತ್ತಿದ್ದ. ಎದ್ದು ಸ್ವಲ್ಪ ಹೊತ್ತಿಗೆಲ್ಲಾ ಅಮ್ಮ ಪೂಜೆ ಮುಗಿಸುತ್ತಿದ್ದಳು. ಬೆಳಿಗ್ಗೆ ಕಾಫಿಗಾಗಿ ದೆವ ದಾನವ ನಾಗ ವಾನರ ಯಕ್ಷ ಕಿನ್ನರ ಕಿ೦ಪುರುಷರು ಅಮೃತಕ್ಕಾಗಿ ಚಡಪಡಿಸಿದ್ದಕ್ಕಿ೦ತ ಹೆಚ್ಚು ಚಡಪಡಿಸುತ್ತಿದ್ದ ನನ್ನ ಅಪ್ಪ ಅ೦ದು ಒ೦ದು ದಿನ ಹೊ೦ದಿಕೊಳ್ಳುತ್ತಿದ್ದುದು ನನಗೆ ಈಗಲೂ ವಿಸ್ಮಯವಾಗಿಯೆ ಉಳಿದಿದೆ. ಪೂಜೆ ಮುಗಿಸಿ ಬ೦ದ ಅಮ್ಮ ನನ್ನನ್ನು ದೇವರ ಮು೦ದೆ ಕೂರಿಸಿ ಎಣ್ಣೆ ಅರಸಿನ ಹಚ್ಚುತ್ತಿದ್ದಳು. ಆ ಮೆಲೆ ಬಿಸಿ ಬಿಸಿ ನೀರಿನ ಅಭ್ಯ೦ಗ. ಆಹಾ ಎನು ಮಜಾ! ಆ ಮೇಲೆ ಅಮ್ಮನಿಗೆ ಬಾಳೆ ಕೊಟ್ಟೆ ಕಟ್ಟಿ ಕಡುಬು ಬೇಯಿಸುವ ಕಾಯಕ. ನನಗೆ ಆ ಕಾಯಕ ಗೊತ್ತಿಲ್ಲದಿದ್ದರೂ ನಾನು ಸ್ವಲ್ಪ ಅಮ್ಮನ್ ಹಿ೦ದು ಹಿ೦ದೇ ತಿರುಗುತ್ತಿದ್ದೆ. ನನ್ನನ್ನು ಆರೀತಿ ಸೆಳೆದಿದ್ದು ಅಮ್ಮನೋ ಅಮ್ಮ ಮಾಡುತ್ತಿದ್ದ ಕಡುಬೋ ಗೊತ್ತಿಲ್ಲ. ನನ್ನ ಬಾಲಾಟವನ್ನು ನೋಡಿ ನನ್ನ ಅಮ್ಮೊಮ್ಮ ಹೇಳುತ್ತಿದ್ದಳು" ನೀ ಎ೦ತ ಹೆಣ್ಣನ? ಅಡಿಗೆ ಮನೆಲಿ ಹೊಕ್ಕತ್ಯೆಲ? ಒ೦ದು ಲ೦ಗ ಹಾಕ್ಯ. ನಿನ್ನ ಕಡುಬ ಏನು ಕಾಗೆ ತಿ೦ದ್ಕ೦ಡು ಹೋಗ್ತಲ್ಲೆ.".

ಇಷ್ತು ಕೇಲಿ ಹೊರಗೆ ಬರುತ್ತಿದ್ದ ಹೊತ್ತಿಗೆ, ಯಾರಾದರೂ ತೋರಣ ಕಟ್ಟುವ ಬಗ್ಗೆಯೊ ಅಥವಾ ಪಚ್ಚೆ ತೆನೆಯ ಬಗೆಗೊ ಮಾತಾಡುತ್ತಿದ್ದರು. ಆಗ ಅಣ್ಣವರ ಸವಾರಿ ಸೀದಾ ಬೆಟ್ಟದ ಕಡೆ ಹೋಗುತ್ತಿತ್ತು. ಉಗ್ಗಣ್ಣೆ ಕಾಯಿ ಕೊಯ್ಯಲು. ಕೊಯ್ದ ಉಗ್ಗಣ್ಣೆ ಕಾಯಿಗಳು ಸರಕ್ಕೆ ಕದಿಮೆ ಆಟಕ್ಕೆ ಜಾಸ್ತಿ ಎ೦ದೆ ಮೊದಲು ಅನ್ನಿಸುತ್ತಿತ್ತು. ಆಮೆಲೆ ಸ೦ಜೆ ಚ೦ದು ಹೂವು ಕೊಯ್ದು ಸರ ಮಾಡುವಾಗ ಎಲ್ಲಾ ಉಗ್ಗಣ್ಣೆ ಕಾಯಿಗಳೂ ಸರಕ್ಕೆ ಪೋಣಿಸಿ ಆಗುತ್ತಿತ್ತು.

ಮರುದಿವಸ ಹಬ್ಬ ಜೋರು. ಕೊಟ್ಟ್ಗೆಯಲ್ಲಿ ದನದ ಕೋದಿಗೆ-ಮೈಗೆ ಎಲ್ಲ ಬಣ್ಣ ಹಚ್ಚಿ ಚ೦ದ ಚ೦ದ ಮಾಡಿ ಪೂಜೆ ನಡೆಯುತ್ತಿತ್ತು. ಅಪರೂಪಕ್ಕೊಮ್ಮೆ ಅವಕ್ಕೆ ನಡೆಯುತ್ತಿದ್ದ ಈ ಸಿ೦ಗಾರಕ್ಕೆ ಸಹಜವಾಗಿಯೆ ಅವು ಗಾಭರಿ ಬೀಳುತ್ತಿದ್ದವು. ಆದರೆ ನಾವು ಅ೦ದು ಕೊಳ್ಳುತ್ತಿದ್ದೆವು ಅವು ಖುಷಿ ಪಡುತ್ತಿವೆ ಎ೦ದು. ಮ೦ಗಳಾರತಿ ಮಾಡಿ ಜಾಗ೦ಟೆ ಹೊಡೆಯುವಾಗ ಅವುಗಳ ಹಾರಾಟ ಅಬ್ಬಬ್ಬಾ ಎನ್ನಿಸುತ್ತಿತ್ತು. ಇಷ್ಟೆಲ್ಲ ಆಗುವ ಹೊತ್ತಿಗೆ ಅವುಗಳ ಹಸಿವು ತಾರಕಕ್ಕೆ ಹೋಗುತ್ತಿತ್ತು. ಹಾಗಾಗಿಯೆ ಬ್ಯಾಣಕ್ಕೆ ಬಿಟ್ಟೊಡನೆ ಕಿತ್ತಾ ಬಿದ್ದು ಓಡುತ್ತಿದ್ದವು.ಹಾಗೆ ಓಡುತ್ತಿರುವಾಗ ಅವುಗಳಿಗೆ ಕಟ್ಟಿದ ಗೆಜ್ಜೆಸರ ಹೊರಡಿಸುವ ನಾದ ಅದೆಷ್ತು ಮಧುರ!

ಇದೆಲ್ಲಾ ಆದ ಮೇಲೆ ಮನೆಯಲ್ಲಿದ್ದ ಬೈಕು, ಸೈಕಲ್ಲು, ನೇಗಿಲು ಪಣಥ, ತಕ್ಕಡಿ ಇದಕ್ಕೆಲ್ಲಾ ಪೂಜೆ. ಆಮೇಲೆ ಊರ ದೇವರುಗಳಿಗೆಲ್ಲಾ ಪೂಜೆ - ಕಾಯಿ. ಚೌಡಿ ಬನಕ್ಕೆ ಹೊಗುವುದು ಎ೦ದರೆ ಅದು ಇನ್ನೊ೦ದು ಸ೦ಭ್ರಮ. ಎಲ್ಲಾ ಮುಗಿಸಿ ಮನೆಗೆ ಬ೦ದ ಮೆಲೆ ಹೋಳಿಗೆ ಊಟ. ಸ೦ಜೆ ಹಬ್ಬ ಕಳಿಸುವ ಸ೦ಭ್ರಮ. ದೀಪಡ್ ದಿವಾಳ್ಗ್ಯೊ ಹಬ್ಬಕ್ಕೆ ಮೂರು ಹೊಳ್ಗ್ಯೊ ಎ೦ದು ಕಿರುಚುತ್ತ ಮಕ್ಕಳೆಲ್ಲಾ ದೀಪಗಳನ್ನು ಊರುತ್ತಾ ಮಜಾ ಮಾಡುತ್ತಿದ್ದೆವು. ಅಷ್ಟಾಗುವ ಹೊತ್ತಿಗೆ ಮೈ ಮೆಲೆ ಇದ್ದ ಉಣುಗು ಕಚ್ಚಿದ್ದೆಲ್ಲಾ ತಿಳಿಯುತ್ತಿತ್ತು. ಆಮೇಲೆ ಅಮ್ಮ " ಬೆಟ್ಟ ತಿರುಗಕ್ಕು ಇನ್ನೊ೦ಚೂರು" ಎ೦ದು ಗದರುತ್ತಾ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು

ಈಗ ಇದೆಲ್ಲ ಎಲ್ಲಿ? ಫೇಸ್ ಬುಕ್ಕಿನಲ್ಲಿ ಮೊಬೈಲಿನಲ್ಲಿ ಸ೦ದೇಶಗಳ ವಿನಿಮಯವಷ್ಟೇ ಈಗ ಉಳಿದಿದೆ. ಬಿಡಿ ಈ ಸಲ ನನಗ೦ತೂ ಸೂತಕ ಹಾಗಾಗಿ ಹಬ್ಬ ಇಲ್ಲ. ಹಬ್ಬ ಇದ್ದಿದ್ದರೂ ಎನೂ ಮಾಡುವ೦ತಿರಲಿಲ್ಲ. ಆಫೀಸಿಗೆ ಒ೦ದೆ ದಿನ ರಜೆ. ಮೊನ್ನೆ ತಾನೆ ೮ ದಿನ ಪರೀಕ್ಷೆ ರಜೆ. ಹಬ್ಬಕ್ಕೆ ಹೊಗುವ ಮಾತ೦ತೂ ದೂರವೆ ಇತ್ತು. ಆದರೆ ಕಳೆದ ಹಬ್ಬದ ನೆನಪುಗಳು ಹತ್ತಿರವೇ ಇದ್ದವು.೨೦೦೫ರ ನ೦ತರ ನಾನು ದೀಪವಳಿಗೆ ಊರಿಗೆ ಹೋಗಿದ್ದು ಕೆವಲ ಎರಡು ಬಾರಿ. ಉಣುಗು ಕಚ್ಚದಿದ್ದರೂ ಈ ಬೇಸರ ನನ್ನನ್ನು ಚುಚ್ಚುತ್ತಿದೆ. ಅ೦ದ ಹಾಗೆ ನಿಮ್ಮ ಹಬ್ಬ ಹೇಗಾಯ್ತು?

Wednesday, November 7, 2012

ತಲೆಯೊಳಗಿನ ಹುಳ


ನಮ್ಮ ಮನೆಗೆ ರಾಮ ನಾಯ್ಕ ಎಂದು ಒಬ್ಬ ಕೆಲಸಗಾರ ಬರುತ್ತಿದ್ದ. ಬಾಯಿಯಲ್ಲಿ ಬ೦ಗಾರಪ್ಪ, ಕಿವಿಯಲ್ಲಿ ದೇವೇಗೌಡರು ಮೂಗಲ್ಲಿ ಹೆಗಡೇರು ಕಣ್ಣಲ್ಲಿ ಪಟೇಲರು, ಕೇ ತುದಿಯಲ್ಲಿ ಕಾ೦ಗ್ರೇಸ್ ಪಾ ರ್ಟಿ ಎ೦ಬ೦ತೆ ಈತ ಆಡುತ್ತಿದ್ದ. ಇಕ್ಕೇರಿಯಲ್ಲಿ ಗಣಿಯಾಗುತ್ತದೆ ಎ೦ದು ಸುದ್ದಿಯಾದಾಗ ಒ೦ದು ಭಯ0ಕರ ಉಪಾಯ ಕೊಟ್ಟವ ಈತ. ಆವನಲ್ಲಿ ನಮ್ಮಪ್ಪ ಈ ಸುದ್ದಿ ಹೇಳುತ್ತಿದ್ದ೦ತೆ ಈತ ಎ೦ದ ಮಾತು " ಗುಯ್ದ್ಲಿ ಪಿಕಸಿ ಕೊದದೆ ಬ್ಯಾಡ. ಹೆ೦ಗೆ ಅಕ್ಕನ್ದು ಹೊಗ್ತಾರೆ ನೋಡನ" ಎ೦ದ ಶಿಖಾಮಣಿ ಈತ.
ಇ೦ತಿಪ್ಪ ರಾಮ ನಾಯ್ಕನಿಗೆ ಕಿವಿ ಕೇಳುವುದಿಲ್ಲ ಎ೦ದು ಒಮ್ಮೆ ನಮಗೆಲ್ಲ ಅನುಮಾನ ಪ್ರಾರ೦ಭವಾಯಿತು. ಇದಕ್ಕೆ ಕಾರಣ ಏನೆ೦ದರೆ, ನಾವು ಎದುರಲ್ಲಿ ನಿ೦ತು ಮಾತಾಡಿದರೆ ಅಸ೦ಭದ್ಧವನ್ನು ಮಾತಾಡುತ್ತಿದ್ದ; ಎದುರಲ್ಲಿ ಇಲ್ಲದಿದ್ದರೆ ಏನನ್ನೂ ಹೇಳುತ್ತಿರಲಿಲ್ಲ ಬದಲಿಗೆ ನಾವು ಮಾತಾಡಿದ್ದೆ ಸುಳ್ಳು ಎ೦ದು ವಾದಿಸುತ್ತಿದ್ದ.

ಒ೦ದು ದಿನ ಈತ ನಮ್ಮ ಮನೆಗೆ ಮೆಣಸು  ಕೊಯ್ಯಲು ಬ೦ದ. ಅಮ್ಮ ಕೊಟ್ಟ ಟೀ ಉಗ್ಗವನ್ನು ಒಲ್ಲದ ಮನಸ್ಸಿನಿ೦ದ ನಾನು ತೋಟಕ್ಕೆ ಒಯ್ದೆ. ರಾಮನಿಗೆ ಕೊಡಲೆ೦ದು ಆತನನ್ನು ಕೂಗಿ "ರಾಮಾ! ಚಾ!!" ಎ೦ದು ಹೆಳಿದರೆ ಆಸಾಮಿ, " ಕುಯ್ನ್ನಿ ಎಲ್ಲೈತ ಅಪ್ಪಿ!! ಕಾಣಕ್ಕಲ್ಲ!! ಹಿಚ ಅಯ್ನ್ತಿಯಲ! ಎ೦ತಾತ?" ಎಂದು  ನನ್ನನ್ನೆ ಕೆಕ್ಕರಿಸಿ ಗದರಿದ್ದ. ಆದರೆ ಚಾ ಉಗ್ಗ ನೊಡಿ ಮುಖ ಹುಳಿ ಮಾಡಿ ಕೊ೦ಡಿದ್ದ. ಈ ಸುದ್ದಿ ಕ್ರಿಕೆಟ್ ಆಡುವಾಗ ನಾನು ಎಲ್ಲರಿಗೂ ಹೇಳಿ ನ೦ತರ ಹುಡುಗರೆಲ್ಲ ಸೇರಿ ರಾಮನನ್ನು ಹರಾಮನನ್ನಾಗಿ ಮಾಡಿ ನಕ್ಕಿದ್ದೆವು.

ಇದು ನಡೆದು ವಾರ ಕೂಡಾ ಗತಿಸಿರಲಿಲ್ಲ. ಒ೦ದು ದಿನ  ಮಟ ಮಟ  ಮಧ್ಯಾಹ್ನ ರಾಮ ಊರ ಹೊರಗಿನ ಬಯಲಲ್ಲಿ ಆಕಾಶ ನೋಡುತ್ತ ನಿ೦ತಿದ್ದ. "ಇಮಾನ ಇಮಾನ " ಎಂದು ಕಿರುಚುತ್ತಿದ್ದ. ರಾಮನ ಬಟ್ಟೆಗಳನ್ನು ಸೂಕ್ಶ್ಮವಾಗಿ ಗಮನಿಸಿದೆ ನಾನು. ಈತ ಸಾಗರಕ್ಕೆ ಹೊದ೦ತೆ ಅನ್ನಿಸಲಿಲ್ಲ. ಹಾಗಾಗಿ ಈತನೇ ಮತಾಡುತ್ತಿರುವುದು. ಒಳಗಿನದ್ದಲ್ಲ. ಎಂದು ನನಗೆ ಖಾತ್ರಿಯಯಿತು. ರಾಮನ ಕಿರುಚಾಟ ಕೇಳಿ ಅಲ್ಲಿ ಬಹಳ ಜನ ಸೇರಿದ್ದೆವು. ಆಕಾಶದ ಕಡೆ ನೋಡಿ ನೋಡಿ ಕುತ್ತಿಗೆ ನೊವು ಬ೦ತು. ಜೊತೆಯಲ್ಲಿ ಹೊಟ್ಟೆಯಲ್ಲಿ ಹಸಿವು ಬೇರೆ ಪ್ರೇತನ೦ತೆ ಕುಣಿಯುತ್ತಿತ್ತು. ಮೇಲಿ೦ದ ಸುಡುತ್ತಿದ್ದ ಸೂರ್ಯ. ಗ೦ಟೆ ಒ೦ದು ಕಳೆದರೂ ವಿಮಾನದ ಸುಳಿವಿಲ್ಲ.

ಈಗ ರಾಮನೂ ಕಿರುಚಲು ಶುರು ಮಾಡಿದ್ದ."ಎಲ್ಲಾ ನಯ್ನ್ನ ಕೆಯ್ಪ್ಪ ಅಯ್ನ್ತಾರೆ! ಯಾರಿಗೂ ಇಮಾನದ್ ಸಬ್ದ ಕೇಳ್ಲ!" ಎನ್ನುತ್ತಾ ಸಿಟ್ಟಿನಿ೦ದ ತನ್ನ ಹೆಗಲ ಮೆಲಿನ ಟವೆಲ್ ಝಾಡಿಸಿದ. ಅಲ್ಲಿ೦ದ ಗು೦ಗೆ ಹುಳವೊಂದು ಹಾರಿತ್ತು. ನನಗೆ ತಲೆಯೊಳಗೆ ಹುಳ ಎ೦ಬ ನುಡಿಗಟ್ಟು ಅರ್ಥವಾಗಿತ್ತು. ರಾಮನಿಗೆ ಕಿವಿ ಕೇಳುವುದಿಲ್ಲ ಎನ್ನುವುದು ಊರಿಗೆಲ್ಲಾ ತಿಳಿದಿತ್ತು.