Wednesday, July 26, 2023

ಅಮೃತಮತಿ

ಜೈನ ಸಾಹಿತ್ಯದಲ್ಲಿ ಬರುವ ಒಂದು ಕತೆ ಅಮೃತಮತಿಯದ್ದು. ಜನ್ನನ ಯಶೋಧರ ಚರಿತೆಯ ನಾಯಕಿ ಆಕೆ.(ಖಳನಾಯಕಿಯೂ ಹೌದು) ಮಹಾನ್ ಪ್ರೇಮಕಥೆ, ಅಮೃತಮತಿ ಒಬ್ಬ ಆದರ್ಶ ಪ್ರೇಮಿಕೆ ಎಂದೆಲ್ಲ ನವ ಪೀಳಿಗೆಯ ಸಾಹಿತ್ಯ ವಿಮರ್ಶಕರು ಹೇಳುತ್ತಾರೆ. ಅದು ಒತ್ತಟ್ಟಿಗಿರಲಿ.
ಯಶೋಧರ ಎನ್ನುವ ರಾಜನ ಹೆಂಡತಿ ಆಕೆ. ಅರಮನೆಯಲ್ಲಿ ಸಕಲ ವೈಭೋಗ. ಸುಂದರ ಕಾಯದ, ಜೀವಕ್ಕೂ ಹೆಚ್ಚಾಗಿ ಪ್ರೀತಿಸುವ ಗಂಡ . ಸ್ವರ್ಗವೇ ಕಾಲ ಕೆಳಗೆ ಬಿದ್ದ ಅನುಭೂತಿ. 
ಹೀಗಿರುವಾಗ ಒಮ್ಮೆ ಒಬ್ಬ ಗಂಡಸು ಹಾಡು ಹೇಳುವುದುರಾತ್ರಿ ಕಾಲದಲ್ಲಿ ಕೇಳುತ್ತದೆ ಆಕೆಗೆ. ಆ ಸ್ವರ ಮಾಧುರ್ಯಕ್ಕೆ ಮರುಳಾಗಿ ಸ್ವರದ ಜಾಡು ಹಿಡಿದು ಹೋಗುತ್ತಾಳೆ ಅಮೃತಮತಿ. ನೋಡಿದರೆ ಕುದುರೆ ಲಾಯದಲ್ಲಿನ ಆಳು ಹಾಡುತ್ತಿರುತ್ತಾನೆ. ಆತ ನೋಡಲು ಸುಂದರನಲ್ಲ. ಅಷ್ಟಾಂಗಗಳೂ ವಕ್ರವಾದ್ದರಿಂದ ಅಷ್ಟಾವಕ್ರ ಎನ್ನುವ ಹೆಸರು. ಸ್ವರ ಮಾಧುರ್ಯಕ್ಕೆ ಮರುಳಾದ ಅಮೃತಮತಿ ಅವನೊಂದಿಗೆ ಪ್ರೇಮ ಪ್ರಣಾಯಕ್ಕೆ ಇಳಿಯುತ್ತಾಳೆ, ಅವಳನ್ನೇ ಜೀವ ಎಂದು ಭಾವಿಸಿ ಜೀವಿಸುತ್ತಿದ್ದ ರಾಜ ಯಶೋಧರನ ಮೇಲಿನ ಪ್ರೀತಿ ಇಲ್ಲವಾಗುತ್ತದೆ. ಹಾಗಂತ ಆತನ ದೆಸೆಯಿಂದ ಬಂದ ವೈಭೋಗಗಳೊ ಅಥವಾ ರಾಣಿ ಎನ್ನುವ ಪಟ್ಟವೋ ಆಕೆಗೆ ಬೇಡವಾಗುವುದಿಲ್ಲ. ಅಥವಾ ಅಷ್ಟಾವಕ್ರನೊಂದಿಗಿನ ಪ್ರಣಯಕ್ಕೆ ಅನುಕೂಲ ಎಂದು ಇದ್ದಳೋ, ಅಥವಾ ಪ್ರಣಯಕ್ಕೆ ಅಷ್ಟಾವಕ್ರ, ಪ್ರಮೋದಕ್ಕೆ ರಾಣಿ ಪಟ್ಟ ಎಂದಿದ್ದಳೋ? ಸಮಾಜಕ್ಕೆ ಹೆದರಿದ್ದಳೋ? ಗೊತ್ತಿಲ್ಲ.

ಒಮ್ಮೆ ಯಶೋಧರ ಪ್ರಣಯದ ಹೊತ್ತಿನಲ್ಲಿ ಕಮಲದ ಹೂವಿನಿಂದ ಅಮೃತಮತಿಯನ್ನು ಹೊಡೆಯುತ್ತಾನೆ. ಆಕೆ ಸ್ಮೃತಿ ತಪ್ಪುತ್ತಾಳೆ. ಎಷ್ಟೆಂದರೂ ರಾಣಿ, ಕೋಮಲಾಂಗಿ. ಸಹಜ.

ಕೆಲವು ದಿನಗಳ ನಂತರ ಯಶೋಧರ ರಾಣಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಅನುಮಾನಕ್ಕೆ ತೊಡಗುತ್ತಾನೆ. ಆಕೆಯನ್ನು ಹಿಂಬಾಲಿಸಿ ಕುದುರೆ ಲಾಯಕ್ಕೆ ಹೋಗುತ್ತಾನೆ. ಅಲ್ಲಿ ಅಷ್ಟಾವಕ್ರ, ಹಗ್ಗದಲ್ಲಿ ಯಶೋಧರೆಯ ಬೆನ್ನಿಗೆ ಬಾರಿಸುತ್ತಾನೆ, ಅದೂ ಪ್ರಣಯದಲ್ಲಲ್ಲ, ಆಕೆ ತಡವಾಗಿ ಬಂದಳೆಂಬ ಸಿಟ್ಟಿಗೆ.
ಇದನ್ನು ನೋಡಿದ ಯಶೋಧರ ವೈರಾಗ್ಯ ತಳೆದು ಸನ್ಯಾಸಿಯಾಗುತ್ತಾನೆ.

ಅಷ್ಟಾವಕ್ರನದು, ಕ್ರೌರ್ಯವಾ ಪ್ರಣಾಯವಾ ಪ್ರೇಮವಾ ಎನ್ನುವುದು ಸ್ವಲ್ಪ ಹೊತ್ತು ಆಚೆಗಿರಲಿ. ಅಮೃತಮತಿಯದ್ದು ವಾಂಛೆಯೋ, ಕಾಮವೋ, ಪ್ರೇಮವೋ ಅಥವಾ ಮತ್ತೇನೋ ಎನ್ನುವುದೂ ಇಲ್ಲಿ ಬೇಡ. ಯಶೋಧರನೂ ಬೇಡ.

ಕಮಲದ ದಂಟಿನ ಏಟಿಗೆ ಸ್ಮೃತಿ ತಪ್ಪುವ ಅಮೃತಮತಿ, ಹಗ್ಗದೇಟಿಗೆ ಕಣ್ಣೀರೂ ಹಾಕದಿರುವುದು.

ಕೆಲವರು ಈಗ ಆಧುನಿಕ ಅಮೃತಮತಿಯರು. ತಮಗೆ ಬೇಕಾದಲ್ಲಿ ಕೋಮಲತೆ ಸಿಗುತ್ತದೆ, ಅದು ಕುದುರೆಗೆ ಬಾರಿಸುವ ಹಗ್ಗವಾದರೂ ಸರಿ, ಬೇಡವಾದಲ್ಲಿ ಸ್ಮೃತಿ ತಪ್ಪುತ್ತದೆ ಅದು ಕಮಲದ ದಂಟಾದರೂ ಅಷ್ಟೇ. ಸರಳವಾಗಿ ಹೇಳುವುದಾದರೆ ಒಂದು ರೀತಿಯ Obsessive Selections.

ಈ ಆಧುನಿಕ ಸಮಕಾಲೀನ ಅಮೃತಮತಿಯರೂ ಅಷ್ಟೇ. ಮಣಿಪುರದ ವಿಚಾರದಲ್ಲಿ ಜೋರು ಮಾತು. ಆಡಬೇಕಾದ್ದೆ. ಖಂಡಿಸಲೇ ಬೇಕು. ಆದರೆ,ಉಡುಪಿ ಮರೆತೇ ಹೋಗುತ್ತದೆ. ಕಾಶ್ಮೀರ ನೆನಪಾಗುವುದೇ ಇಲ್ಲ. ರೇಪ್ ರಾಜಧಾನಿ ಅಂತ ದೆಹಲಿಗೆ ಹೆಸರು ಬಂದಿದ್ದು ಪಾಪ ಗೊತ್ತೇ ಇಲ್ಲ. ಆಶಿಫಾ ಎನ್ನುವ ಹಸುಳೆಯನ್ನು ರೇಪ್ ಮಾಡಿ ಅದನ್ನು ಬ್ರಾಹ್ಮಣರ ತಲೆಗೆ ಕಟ್ಟಿದ್ದೂ ಮರೆತಿದೆ. 

ಜನ್ನನ ರೂಪಕ ನಿಜಕ್ಕೂ ಚಂದ. ಇಂಥ ಬುದ್ಧಿ ಯಾವತ್ತೂ ಸಾಯುವುದಿಲ್ಲ. ಹಾಗಾಗಿ ಯಶೋಧರನ ರಾಣಿ ಅಮೃತಮತಿ.

Friday, April 28, 2023

ಪಾಕಿಸ್ತಾನ

ತುಮಿ ಕ್ಯಾ ಭಿ ಕರ್ಕು ಸಬ್ಬಿಕೊ ಕತ್ತೆ ತೋ ಉನೋ ಚುಪ್ ಕರ್ಕು ಭೈತ್ತಿ. ನಕ್ಕೋ ನಕ್ಕೋ ಜ್ಯಾದಾ ಗುಸ್ಸಾ ಕರ್ಕು ಸಬ್ಬಿಕೊ ತುಮಿಚ್ ಬುರಾ ಕರ್ಕು ಕತ್ತೆ. ಉನ್ನೋ ಐಸಾಯ್ಚ್. ತುಮಿ  ಅಡ್ಜಸ್ಟ್ ಕರ್ಕು ಜಾನಾ ಸೋ, ಬೆಂಗ್ಳುರ್ ಕೆ ಬಸ್ ಕೆ ಮಾಫಿಕ್.

ಕೆಲವರು ಈ ರೀತಿ ಮಾತಾಡುವುದನ್ನೇ ಉರ್ದು ಅಂತ ಹೇಳುತ್ತಾರೆ. ನಿಜವಾಗಿ ನೋಡಿದರೆ ಅಲ್ಲ. ಉರ್ದು ಒಂದು ಸುಂದರ ಭಾಷೆ.

ಉರ್ದುವಿನ ಸೌಂದರ್ಯ ಸವಿಯ ಬೇಕಾದರೆ ದಿಲೀಪ್ ಕುಮಾರ್, ದೇವ್ ಆನಂದ್, ರಾಜ್ ಕಪೂರ್ ಚಿತ್ರಗಳನ್ನು ನೋಡಬೇಕು.

ಅದಕ್ಕೂ ಚಂದದ ಉರ್ದು ಸಿಗುವುದು ಹಿಂದಿ ಸಿನಿಮಾಗಳ ಕೋರ್ಟ್ ಸೀನ್ ಬಂದಾಗ.

ಅದಾಲತ್, ಮುವಕ್ಕಿಲ್, ಮುಝರಿಮ್, ಜುಲ್ಮ್, ಸಜಾ ಎ ಕೈದ್, ಬಾ ಮುಷಕ್ಕದ್, ಬೆಹಯಾ, ಹಂಸಫರ್, ಹಮ್ರಾಜ್, ಹಂವತನ್, ಹಂದರ್ದ್, ಹಂ ಅಪನಾ, ತಜುರ್ಬಾ, ಮೌಕಾ ಎ ವಾರದಾತ್, ಚಶಂದೀನ್ ಗವಾಹ್, ಅನೇಕ ಶಬ್ದಗಳಿವೆ.

ಇನ್ನೂ ಒಂದು ಸಂಗತಿ ಎಂದರೆ, ಹಿಂದಿ ಭಾಷೆಗಿಂತ ಉರ್ದು ಹಳೆಯದು. ಹಿಂದಿ  ಕಾವ್ಯಮಯವಾದ ಮಜಲನ್ನೂ ಮೀರಿ ಮಿಕ್ಕಿದರೆ ಉರ್ದು ಎನ್ನಬಹುದು.

ಉರ್ದು ಪಾಕಿಸ್ತಾನದ ರಾಷ್ಟ್ರಭಾಷೆ. ಆದರೆ ಅದೇ ಮನೆಮಾತಾಗಿ ಇರುವ ಯಾವ ಪ್ರಾಂತ್ಯವೂ ಪಾಕಿಸ್ತಾನದಲ್ಲಿ ಇಲ್ಲ. 

ಪಂಜಾಬಿನಲ್ಲಿ ಪಂಜಾಬಿ, ವಾಯವ್ಯ ಪ್ರಾಂತ್ಯದಲ್ಲಿ ಪುಷ್ಟೋ, ಬಲೋಚಿಸ್ತಾನದಲ್ಲಿ ಬಲೋಚ್, ಸಿಂಧ್ ಪ್ರಾಂತ್ಯದಲ್ಲಿ ಸಿಂಧಿ ಹೀಗೆ. 

ಹಾಗಾದರೆ, ಉರ್ದು ಪಾಕಿಸ್ತಾನದ ರಾಷ್ಟ್ರ ಭಾಷೆಯಾಗಿದ್ದು ಹೇಗೆ ಅಂತೀರಾ? ಜಿನ್ನಾ ಎನ್ನುವ ಅಪ್ರತಿಮ ರಾಜಕಾರಣಿಯ ತಂತ್ರ ಅದು. ಭಾಷೆಯ ವಿಚಾರವಾಗಿ ಪಾಕಿಸ್ತಾನ ಒಡೆದು ಚೂರಾದರೆ ಎನ್ನುವ ಆತಂಕವೋ ಅಥವಾ ಭಾಷೆಯ ಮೂಲಕ ಪಾಕಿಸ್ತಾನೀ ಪ್ರಜೆಗಳಿಗೆ ಒಂದು ವಿಶೇಷ ಗುರುತು ಸಿಗಬೇಕು ಎನ್ನುವ ಉದ್ದೇಶವೋ ಅಥವಾ ಎರಡೂ ಉದ್ದೇಶಗಳೂ ಸೇರಿಯೋ ಆತ ಉರ್ದು ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆಯಾಗಿಸಿದ.

ಈ ರಾಷ್ಟ್ರಭಾಷೆ ಪಾಕಿಸ್ತಾನದ ಪಾಲಿಗೆ ಒಂದು ರೀತಿಯಲ್ಲಿ ಎರವಲು ತಂದ ಕಾಳು. ಪಾಕಿಸ್ತಾನವೆಂದು ಗುರುತಿಸಲ್ಪಟ್ಟ ಅಂದಿನ ಭೂಭಾಗಗಳಲ್ಲಿ ಎಲ್ಲಿಯೂ ಉರ್ದು ಮಾತಾಡುತ್ತಿರಲಿಲ್ಲ. ಈ ಭಾಷೆಯನ್ನು ಅಲ್ಲಿಗೆ ಕೊಂಡೊಯ್ದು ಕಲಿಸಿದವರು ಅಲ್ಲಿನವರಿಂದ ಮುಹಾಜಿರ್ ಎಂದು ಕೇವಲವಾಗಿ ಕರೆಸಿಕೊಂಡ, ಕರೆಸಿಕೊಳ್ಳುತ್ತಿರುವ ಭಾರತೀಯ ಮುಸಲ್ಮಾನರು.

ಜಿನ್ನಾ ಮಾಡಿದ ಈ ತಪ್ಪಿನಿಂದ ಉರ್ದು ಒಂದು ಜನಾಂಗೀಯ ಭಾಷೆ ಎನ್ನುವ ಹಣೆಪಟ್ಟಿ ಹೊರಬೇಕಾಯಿತು. ವಾಸ್ತವದಲ್ಲಿ ಲಖನೌ ಭಾಗದಲ್ಲಿ ಕರ್ಮಠ ಬ್ರಾಹ್ಮಣರೂ ಉರ್ದು ಮಾತಾಡುವುದು ಒಂದು ಸ್ಟೇಟಸ್ ಎಂದು ಭಾವಿಸುತ್ತಾರೆ. ಎಷ್ಟೋ ಪಂಜಾಬಿನ ಬ್ರಾಹ್ಮಣರಿಗೆ ಉರ್ದು ಉದುರಿದ ನೆಲ್ಲಿಕಾಯಿ ಅಂಗೈನಲ್ಲಿದ್ದಷ್ಟೇ ಸಲೀಸು.

ಆದರೆ, ಉರ್ದು ಪಾಕಿಸ್ತಾನಕ್ಕಿಂತ ಹೆಚ್ಚು ಬೆಳೆದಿದ್ದು ಭಾರತದಲ್ಲಿ. ಹಳೆಯ ಹಿಂದಿ ಸಿನಿಮಾಗಳನ್ನು ಇಷ್ಟ ಪಡುವ ಯಾವನೋ ಉರ್ದುವನ್ನು ಪ್ರೀತಿಸದೆ ಇರಲಾರ. ಸಾಹಿರ್ ಲುಧಿಯಾನವೀ, ಇಂದೀವರ್, ಜಾವೇದ್ ಅಖ್ತರ್, ಸಲೀಂ- ಜಾವೇದ್, ಗುಲ್ಜಾರ್, ಆನಂದ್ ಭಕ್ಷಿ, ಖಾದರ್ ಖಾನ್, ಶೈಲೇಂದ್ರ ಇವರೆಲ್ಲ ದಂಡಿಯಾಗಿ ಉರ್ದು ಶಬ್ದಗಳನ್ನು ಬಳಸಿದವರೇ, ಗೀತೆಗಳಲ್ಲಿ, ಸಂಭಾಷಣೆಗಳಲ್ಲಿ. 

ಇನ್ನೂ ಮಜಾ ಎಂದರೆ, ಗುಲ್ಜಾರ್ ಅವರ ಕಾವ್ಯನಾಮ. ನಿಜವಾದ ಹೆಸರು ಸಂಪೂರ್ಣ್ ಸಿಂಘ್ ಕಾಲ್ರಾ. ಆನಂದ್ ಭಕ್ಷಿ, ಕಾಶ್ಮೀರಿ ಪಂಡಿತ. 

ಭಾರತ ಅಸಹಿಷ್ಣು ಅಂತ ಹೇಳುವವರು ಮತ್ತು ಭಾವಿಸುವವರಿಗೆ ಇಷ್ಟು ಉದಾಹರಣೆ ಸಾಕು. ಇಲ್ಲಿ ಸಹಿಷ್ಣುತೆ ಅಸಹಿಷ್ಣುತೆ ಚರ್ಚಾ ವಿಷಯವೇ ಅಲ್ಲ. ಸೌಂದರ್ಯವನ್ನು ಸವಿದರು ಒಪ್ಪಿದರು ಅಷ್ಟೇ. 
ಸಹಿಸಿಕೊಳ್ಳಬೇಕಾದ್ದು ಹಿಂಸಾತ್ಮಕವಾದ್ದನ್ನೇ ಹೊರತು ಆನಂದದಾಯಕವಾದ್ದನ್ನಲ್ಲ.

ಆದರೆ ಪಾಕಿಸ್ತಾನದ ಗ್ರಹಚಾರ ನೋಡಿ, ಇಷ್ಟು ವರ್ಷಕ್ಕೆ ಒಬ್ಬ ಸಾಹಿರ್ ಲುಧಿಯಾನವೀ, ಇಂದೀವರ್, ಜಾವೇದ್ ಅಖ್ತರ್, ಸಲೀಂ- ಜಾವೇದ್, ಗುಲ್ಜಾರ್, ಆನಂದ್ ಭಕ್ಷಿ, ಖಾದರ್ ಖಾನ್, ಶೈಲೇಂದ್ರ ಅಲ್ಲಿ ಹುಟ್ಟಲಿಲ್ಲ. 

ಪಾಕಿಸ್ತಾನ ನಿಜಕ್ಕೂ ದುರದೃಷ್ಟವಂತ ದೇಶ. ಒಬ್ಬ ಮಹಾ ನಾಯಕನೊ ಅಥವಾ ಒಬ್ಬ ದೇಶಭಕ್ತನೊ ಜನಿಸಲಿಲ್ಲ ಅಲ್ಲಿ. ಭಾರತ ದ್ವೇಷ ಒಂದೇ ತುಂಬಿ ತುಳುಕಿದರ ಪರಿಣಾಮ ಇರಬಹುದೇ? ಹೂಂ ಎನ್ನೋಣವೆಂದರೆ ಅದು ಈಗಿನ ಪರಿಸ್ಥಿತಿ. 

ತನ್ನೊಂದಿಗೆ ತನ್ನ ಒಡಲಾಗಿ ಬಂದ ಇಂದಿನ ಬಾಂಗ್ಲಾದೇಶಿಗರನ್ನು, ಅಂದಿನ ಪೂರ್ವ ಪಾಕಿಸ್ತಾನವನ್ನು ಪರಿಪರಿಯಾಗಿ ಕಾಡಿದರು. ರೋಸಿ ಹೋದ ಅವರು ಬೇರೆ ದೇಶವಾಗಿ ಹೋಗಿ ಉದ್ಧಾರವಾದರು. 

ಪಾಕಿಸ್ತಾನದ ಹುಟ್ಟೇ ಒಂದು ರೀತಿಯಲ್ಲಿ ವಿಚಿತ್ರ. ಮುಸಲ್ಮಾನರ ಹೆಸರು ಹೇಳಿಕೊಂಡು ಇಸ್ಲಾಮ್ ಅನ್ನು ಗೌರವಿಸದ ಕೆಲವು elite ವರ್ಗದ ಜನ ತಮ್ಮ ಅಸ್ಮಿತೆಗೆ ಹುಟ್ಟು ಹಾಕಿದ ದೇಶ ಅದು. ಜಿಯಾ ಉಲ್ ಹಕ್ ಎನ್ನುವ ಸೇನಾ ಮುಖ್ಯಸ್ಥ ತನ್ನ ಉಳಿವಿಗೆ, ಧರ್ಮದ ಕಟ್ಟುಪಾಡುಗಳ ಆಚರಣೆ( ಸೂಕ್ಷ್ಮವಾಗಿ ನೋಡಿ, ಧರ್ಮದ ಆಚರಣೆ ಅಲ್ಲ) ಧಾರ್ಮಿಕ ಮುಖಂಡರ ಬೆಂಬಲ, ತನ್ಮೂಲಕ ದೇಶದ ಪ್ರಜೆಗಳ ಮೇಲೆ ಹಿಡಿತ ಸಾಧಿಸಲು ಹೋದ ಪರಿಣಾಮ ಮುಗ್ಧ ಪ್ರಜೆಗಳು ಅನುಭವಿಸುತ್ತಿದ್ದಾರೆ. ವಾಸ್ತವದಲ್ಲಿ ಪಾಕಿಸ್ತಾನದ ನಾಯಕರು, ಮಿಲಿಟರಿಯವರನ್ನೂ ಸೇರಿ ದೇಶಭಕ್ತಿ ಎನ್ನುವ ಭಾವನೆಯನ್ನೇ ಹೊಂದಿಲ್ಲ. ಕಾರಣ ದೇಶ ಅವರ ಪಾಲಿಗೆ atm ಅಷ್ಟೇ, ಆತ್ಮವಲ್ಲ. ಅವರ ಆತ್ಮ ವಿದೇಶದಲ್ಲಿ ವಿಲಾಸಿ ಜೀವನ, ಅದಕ್ಕೆ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ನಿತ್ಯ ನೂತನ.

ಇನ್ನಾದರೂ ಭಾರತ ದ್ವೇಷ ಬಿಟ್ಟು ತಾವು ಬದುಕುವ ದಾರಿ ನೋಡುವುದು ಒಳ್ಳೆಯದು. ಹಿತ್ತಲಿನಲ್ಲಿ ಹಾವು ಸಾಕಿದ್ದ ದೇಶದಲ್ಲಿ ಈಗ ಇಲಿಯನ್ನೇ ತಿಂದು ಬದುಕಬೇಕಾದ ಪರಿಸ್ಥಿತಿ. 

ಧರ್ಮಾಧಾರಿತ ರಾಜಕಾರಣ ಬಿಟ್ಟು ಧರ್ಮಧೋರಣೆಯ ರಾಜಕಾರಣ, ಧರ್ಮ ಎನ್ನುವುದರ ತೋರುಗಾಣಿಕೆಯ ರಾಜಕಾರಣದ ಪರಿಣಾಮ.

ಕೊನೆಯದಾಗಿ ಒಂದು ಮಾತು. ನಾನಿಲ್ಲಿ ಯಾವ ಧರ್ಮವನ್ನೂ ನಿಂದಿಸಿಲ್ಲ. ನಾನದನ್ನು ಮಾಡುವುದೂ ಇಲ್ಲ. ಧರ್ಮ ಎನ್ನುವುದು ಒಳ್ಳೆಯ ಬದುಕಿಗೆ ಬೇಕಾದ ಸರ್ವಹಿತಕ್ಕೆ ಬೇಕಾದ ಸೋಪಾನವಾಗದೆ, ಸ್ವಾರ್ಥದ ಸಾಧನವಾದಾಗ ಏನಾಗುತ್ತದೆ ಎಂದು ಹೇಳಿದ್ದೇನೆ ಅಷ್ಟೇ.

ಮೊದಲನೇ ವಾಕ್ಯಪುಂಜ ಯಾರನ್ನೂ ಅಣಕಿಸುವುದಕ್ಕೋ ಅಥವಾ ನೋಯಿಸುವುದಕ್ಕೋ ಅಲ್ಲ. ಲೇಖನದ ಶುರುವಾತಿಗೆ ತೊಡಗುವಾಗ ಸ್ಫುರಿಸಿದ್ದಷ್ಟೇ.

Friday, April 21, 2023

ಕಾಂಗನ್ಯಾಯ

ನಾರಾಯಣ ದತ್ ತಿವಾರಿ

ಈ ಹೆಸರು ಒಂದು ವಿಶಿಷ್ಠ ಕಾರಣಕ್ಕೆ ಪ್ರಸಿದ್ಧ. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದವರು ಇವರು. ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದ ವಿಶೇಷ ದಾಖಲೆ ಇವರದ್ದು.
ಉತ್ತರ ಪ್ರದೇಶ ರಾಜ್ಯಕ್ಕೆ ಮೂರು ಸಲ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಉ.ಪ್ರ ದ ಕೊನೆಯ ಮುಖ್ಯಮಂತ್ರಿ ಕೂಡಾ ಇವರೇ. ಉತ್ತರಾಖಂಡ ರಾಜ್ಯದ ಮೂರನೇ ಮುಖ್ಯಮಂತ್ರಿ. ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದರು.

ಆದರೆ, ಈ ಮುತ್ಸದ್ದಿಯನ್ನು ಕಾಂಗ್ರೆಸ್ ಹೇಗೆಲ್ಲಾ ನಡೆಸಿಕೊಂಡಿತು ಅಂತ ರವಿ ಬೆಳಗೆರೆ ಬರೆದ ಇಂದಿರೆಯ ಮಗ ಸಂಜಯ ಎನ್ನುವ ಪುಸ್ತಕ ಓದಿ. Subtle ಆಗಿ ಸಣ್ಣದಾಗಿ, ಚೊಕ್ಕದಾಗಿ ರವಿ ಇವರಿಗಾದ ಅವಮಾನ ತಿಳಿಸಿದ್ದಾರೆ.

ಇವರ ಕೊನೆಯ ದಿನಗಳು ದುಃಖದಾಯಕ.
ವಯಕ್ತಿಕ ಜೀವನ ಒಂದು ರೀತಿಯ ದುರಂತ ನಿಜ. ಅದು ಒತ್ತಟ್ಟಿಗಿರಲಿ. ನಾನು ಅದರ ಬಗ್ಗೆ ಆಸಕ್ತನೂ ಅಲ್ಲ.

ತಿವಾರಿ ಮಾತ್ರವಲ್ಲ. ನರಸಿಂಹ ರಾವ್, ವಿದ್ಯಾಚರಣ ಶುಕ್ಲಾ, ಅಜಿತ್ ಜೋಗಿ, ಮಾಧವರಾವ್ ಸಿಂಧಿಯಾ, ಇಂದ್ರ ಕುಮಾರ್ ಗುಜರಾಲ್, ಕಾಮ ರಾಜನ್, ಕೃಷ್ಣ ಮೆನನ್, ಸೀತಾರಾಮ ಕೇಸರಿ, ಪ್ರಿಯರಂಜನ್ ದಾಸ್ ಮುನ್ಷಿ, ಎಸ್. ಎಂ ಕೃಷ್ಣ, ಹೀಗೆ ಕಾಂಗ್ರೆಸ್ ಅವಮಾನಿಸಿದ ಮುತ್ಸದ್ದಿಗಳ ದಂಡೇ ಇದೆ.  
ಅಷ್ಟೇ ಅಲ್ಲ. ವಾಜಪೇಯಿ ಎನ್ನುವ ಅಕಳಂಕ ಚರಿತ್ರನ ಭಾವ ಚಿತ್ರವೂ ಇವರ ಕಣ್ಣಿಗೆ ಮುಳ್ಳಾಗಿತ್ತು. 

ಪ್ರಣಬ್ ಮುಖರ್ಜಿ ಅವರಿಗೆ ಕೂಡ ಕಾಂಗ್ರೆಸ್ ಕಡೆಗಣನೆಯ ಮರ್ಯಾದೆ ಕೊಟ್ಟಿತ್ತು. ಆದರೆ ಕೊನೆಗೆ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕೊಂಡೊಯ್ದು ತನ್ನ ಮರ್ಯಾದೆ ಉಳಿಸಿಕೊಂಡಿತ್ತು.

A.P.J ಅಬ್ದುಲ್ ಕಲಾಂ ಎನ್ನುವ ಮೇಧಾವಿ, ದೂರದೃಷ್ಟಿ ಹೊಂದಿದ ವಿಜ್ಞಾನಿಯೋರ್ವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅದೇಕೆ ಮರು ಆಯ್ಕೆ ಮಾಡಲಿಲ್ಲ? ಇದು ವೈಜ್ಞಾನಿಕ ಚಿಂತಕರ ಸಮೂಹಕ್ಕೆ ಎಸೆದ ದ್ರೋಹವಲ್ಲವೇ?

ಆದರೆ ಈಗ ಕಾಂಗ್ರೆಸ್ಸಿಗರಿಗೆ ಕೆಲವು ಮಾಜಿ ಬಿಜೆಪಿಗಳ ಮೇಲೆ ಭಾರೀ ಕಾಳಜಿ. ಅವಮಾನವಾಗಿದೆ ಅಂತಾರೆ.
ಅದನ್ನು ಈ ಮಾಜಿ ಬಿಜೆಪಿಗಳು ನಂಬುತ್ತಾರೆ. 

ಕಾಗೋಡು ತಿಮ್ಮಪ್ಪ ಎನ್ನುವ ಅನುಭವಿ ರಾಜಕಾರಣಿಯನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದನ್ನು ನಾವೆಲ್ಲ ನೋಡಿದವರೇ ಸ್ವಾಮಿ. ಅಷ್ಟು ಹಿರಿಯ ನಾಯಕನನ್ನು ಬಿಟ್ಟು ವಲಸಿಗನೊಬ್ಬನನ್ನು ಮುಖ್ಯಮಂತ್ರಿ ಮಾಡಿದ್ದನ್ನು ಜನ ನೋಡಿಲ್ಲವೇ? 
ತಿಮ್ಮಪ್ಪ ಅವರು ಸ್ಪೀಕರ್ ಆದಾಗ ಖಡಕ್ ಮೇಷ್ಟ್ರಾಗಿದ್ದರು ಎನ್ನುವುದನ್ನೂ ನಾವು ನೋಡಿದ್ದೇವೆ.
ಅವರನ್ನು ಮಂತ್ರಿ ಮಾಡಿದ್ದು ಕೊನೆಗೆ ಯಾವಾಗಲೋ ಆಗಿತ್ತು. ಅದೇ ರೀತಿ 2013ರಲ್ಲಿ ಕಾಂಗ್ರೆಸ್ ಗೆದ್ದು ಬಂದ ಕೂಡಲೇ ರೋಷನ್ ಬೇಗ್ ಮತ್ತು ಡಿ.ಕೆ. ಶಿವಕುಮಾರ ಅವರನ್ನು ಮಂತ್ರಿ ಮಾಡಿರಲಿಲ್ಲ. ಕೊನೆಗೆ ಯಾವಾಗಲೋ ಮಾಡಿದ್ದು.

ಇದನ್ನೆಲ್ಲ ಒಬ್ಬ ರಾಜಕೀಯ ವ್ಯಕ್ತಿಯೊ ವಿಶ್ಲೇಷಕನೊ ಅಲ್ಲದ ನಾನೊ ನನ್ನಂಥವನೋ ಹೇಳುತ್ತಿದ್ದಾನೆ. ರಾಜ್ಯ ಬಿಜೆಪಿಗರು ಇದನ್ನೆಲ್ಲಾ ಹೇಳಬೇಕು. ಯಾಕೆ ಹೇಳುತ್ತಿಲ್ಲ ಗೊತ್ತಿಲ್ಲ.

✍️ಶಶಾಂಕ ತೆಂಕೋಡು

Thursday, March 30, 2023

ಒಂದು ವ್ಯಭಿಚಾರಿಣಿಯ ಆರೋಪ

ಒಂದೂರಲ್ಲಿ ಒಬ್ಬಳು ಸೂಳೆ ಇದ್ದಳು. ಆದರೆ ಲೋಕಕ್ಕೆ ಅಂಜಿ ಸೂಳೆಗಾರಿಕೆಯನ್ನು ಗುಟ್ಟಾಗಿ ಮಾಡುತ್ತಿದ್ದಳು. ಅವಳು ವಯಸ್ಸು ಮೀರುತ್ತಿದ್ದರೂ ಮದುವೆಯಾಗದ್ದನ್ನು ನೋಡಿ ಜನ ಅನುಮಾನಿಸ ತೊಡಗಿದರು. ಕೊನೆಗೆ ಯಾವುದೋ ಒಬ್ಬನನ್ನು ಮದುವೆಯಾದಳು. ಎರಡೋ ಮೂರೋ ಸಂತಾನವೂ ಆಯ್ತು.

ತಾನು ಮಹಾ ಗರತಿ ಅಂತ ತೋರಿಸೋದಕ್ಕೆ ಯಾವ್ಯಾವುದೋ ಧರ್ಮಶಾಸ್ತ್ರದ ಪುಸ್ತಕ ಓದಿ ಇತರ ಹೆಂಗಸರನ್ನು ನಿಂದಿಸುತ್ತಿದ್ದಳು. ಅವಳ ಗಂಡ ಇದಕ್ಕೆಲ್ಲ ತಕರಾರು ಮಾಡಲೇ ಇಲ್ಲ. 

ಅವಳ ಆಪ್ತ ಗಿರಾಕಿಗಳಲ್ಲಿ ಊರ ದೊಡ್ಡ ಮನುಷ್ಯರೂ ಕೆಲವರಿದ್ದರು. 

ಇಂತಿಪ್ಪ ಹೊತ್ತಿನಲ್ಲಿ ಊರಿಗೆ ವೈದ್ಯರೊಬ್ಬರು ಬಂದು ನೆಲೆಯಾದರು. ತಮ್ಮ ಕೈಗುಣದಿಂದ ವೈದ್ಯರು ಒಳ್ಳೆ ಹೆಸರೂ ಸಂಪಾದಿಸಿದರು ಊರ ಗಣ್ಯರಲ್ಲಿ ಒಬ್ಬರು ಎಂದೂ ಎನ್ನಿಸಿಕೊಂಡರು.

ಆದರೆ ಸಾತ್ವಿಕರಾಗಿದ್ದ ವೈದ್ಯರು ಒಂದು ದಿನವೂ ಸೂಳೆಯ ಮನೆ ಕಡೆ ಗುಟ್ಟಾಗಿ ಸುಳಿಯಲಿಲ್ಲ. ತನ್ನ ಚೆಲುವಿಗೆ ಇದು ಅವಮಾನ ಎಂದು ಭಾವಿಸಿದ ಆ ಸೂಳೆ ವೈದ್ಯರ ಹೆಂಡತಿಗೆ ವ್ಯಭಿಚಾರಿಣಿಯ ಪಟ್ಟ ಕಟ್ಟಿದಳು.

ವೈದ್ಯರ ಹೆಂಡತಿ ಜೊತೆ ಹಾದರ ಮಾಡಿದ್ದು ತನ್ನ ಗಂಡನೇ ಅಂದಳು. ಪಂಚಾಯ್ತಿಯನ್ನೂ ಸೇರಿಸಿದಳು. ಅವಳ ಗುಟ್ಟಿನ ಗಿರಾಕಿಗಳೇ ಪಂಚರು.

ವೈದ್ಯರು ಇದನ್ನೆಲ್ಲ ಕೇಳಿ ನಗತೊಡಗಿದರು. ಪಂಚರು ಸಿಟ್ಟಾಗಿ ನಕ್ಕಿದ್ದನ್ನು ಆಕ್ಷೇಪಿಸಿದರು.

ವೈದ್ಯರು ಹೇಳಿದ್ದು ಇಷ್ಟೇ. "ಸಮರ್ಥ ಯೌವ್ವನ ಭರಿತ ಪುರುಷ ನಾನಿರುವಾಗ ನನ್ನ ಹೆಂಡತಿ ಆ ನಪುಂಸಕನ ಜೊತೆ ಹಾದರ ಮಾಡಿದ್ದಾಳೆ ಎಂದರೆ ನಗದೆ ಇನ್ನೇನು ಮಾಡಲಿ".

ಈಗ ಎಲ್ಲರಿಗೂ ಪೀಕಲಾಟ. ವೈದ್ಯರು ನಪುಂಸಕ ಎಂದ ಮೇಲೆ ಅದು ಸತ್ಯವೇ. ಅದನ್ನು ಪ್ರಶ್ನಿಸಿದರೆ ಸೂಳೆಯ ಗಂಡನ ಗಂಡಸುತನ ಸಾಬೀತು ಮಾಡಬೇಕು. ಅದು ಸಾಧ್ಯವಿಲ್ಲ. ಹಾಗಂತ ಸುಮ್ಮನಿದ್ದರೆ ಸೂಳೆ ಹಡೆದ ಮಕ್ಕಳು ಯಾರು ಎನ್ನುವ ಪ್ರಶ್ನೆ. ಎಲ್ಲಾದರೂ ತಮ್ಮನ್ನು ತೋರಿಸಿದರೆ ಎನ್ನುವ ಅಳುಕು ಎಲ್ಲಾ ಪಂಚರಿಗೆ. ತನ್ನ ಗುಟ್ಟು ರಟ್ಟಾಗುವ ಆತಂಕ ಸೂಳೆಗೆ.

ಇಷ್ಟು ದಿವಸ ಏನೇನೋ ಪುಂಗಿ ಭಾರತದ ಆಡಳಿತ ವ್ಯವಸ್ಥೆ ಸರಿ ಇಲ್ಲ, ಸಂವಿಧಾನಕ್ಕೆ ಅಪಾಯ ಎಂದೆಲ್ಲ ಏನೇನೋ ಎಂದವರ ಪಾಡು ಕೂಡಾ ಹೀಗೆಯೇ ಆಗಿದೆ.

ಸಂವಿಧಾನಾತ್ಮಕವಾಗಿ, ಶಾಸನಕ್ಕೆ ತಕ್ಕಂತೆ ಸಾಕ್ಷ್ಯಾಧಾರ ಪರಿಶೀಲಿಸಿ ಕೊಟ್ಟ ತೀರ್ಪನ್ನು ಅನುಸರಿಸಿ ಅನರ್ಹತೆಯ ನೋಟೀಸ್ ಕೊಟ್ಟಿದ್ದಾರೆ. ಇಲ್ಲಿ ನೋಟೀಸ್ ಒಂದು ಶಿಷ್ಠಾಚಾರ ಅಷ್ಟೇ. 

ತೀರ್ಪು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ. ಮಾಡಿದ್ದನ್ನು ಸಮರ್ಥಿಸಿದರೆ ಜಾತ್ಯತೀತರು ಜಾತಿ ನಿಂದನೆ ಸಮರ್ಥಿಸಿದ ಹಾಗೆ. ಏನು ಮಾಡೋದು? ಪಾಪ. ಹೀಗಾಗಬಾರದಿತ್ತು.

#Disqualification 
#disqualified

Tuesday, March 28, 2023

ಎಂತ ಹರ್ಕಂತ ಕಾಂತೆ

ಪರಶುರಾಮ ಭಟ್ಟರು- ಹೀಗೆ ಹೇಳಿದರೆ ನಮ್ಮೂರಲ್ಲಿ ಯಾರಿಗೂ ತಿಳಿಯುವುದಿಲ್ಲ. ಒಂದು ಕಾಲದಲ್ಲಿ ಅಂಗಡಿ ಭಟ್ಟರು ಎಂದರೆ ಎಲ್ಲಾರಿಗೂ ಪರಿಚಯ ಸಿಗುತ್ತಿತ್ತು. ಆದರೆ ಈಗ ಅವರಿಗೆ ಬ್ಲೇಡು ಭಟ್ಟರು ಅಂತಲೇ ಕರೆಯುವುದು. ಆಶ್ಚರ್ಯದ ಸಂಗತಿ ಎಂದರೆ ಭಟ್ಟರು ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಿರುವುದು. ಭಟ್ಟರ ಅತೀವ ಹಾಸ್ಯಪ್ರಜ್ಞೆಯೇ ಭಟ್ಟರಿಗೆ ಈ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸಲು ಸಾಧ್ಯ ಮಾಡಿರಬೇಕು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೆ ಆ ಹೆಸರು ಬೀಳುವ ಮುನ್ನಿನ ಘಟನೆ ಏನಿದ್ದಿರಬಹುದು ಎನ್ನುವ ಕುತೂಹಲ ನನ್ನ ತಲೆಯೊಳಗೆ ಹೊಕ್ಕು ಹುಳುವಾಗಿ ಹಾವಾಗಿ ಕಾಡತೊಡಗಿತ್ತು. ಭಟ್ಟರಿಗೀಗ ಬಹುಶಃ ತೊಂಭತ್ತರ ಹರೆಯ. ಅವರಲ್ಲಿಯೇ ಕೇಳೋಣ ಅಂತ ನಿಶ್ಚಯಿಸಿ ಒಮ್ಮೆ ಅವರ ಬಳಿಯೇ ಕೇಳಿದೆ. ವಿಶೇಷ ಎಂದರೆ ಈ ಕತೆ ನಮ್ಮ ಶುಕ್ರನ ಕಡೆಗೇ ಹೋಗಿದ್ದು.

ಬ್ಲೇಡು ಭಟ್ಟರೇ ಹೇಳಿದ ಕತೆ ಇದು.

ಘಟ್ಟದ ಕೆಳಗಿನ ಭಟ್ಟರ ಅಪ್ಪಯ್ಯ ಕರೂರು ಸೀಮೆಗೆ ಮನೆಯಳಿಯಾನಾಗಿ ಬಂದರಂತೆ. ಮಾವನ ಮನೆಯ ತೋಟ ಗದ್ದೆ ನೋಡಿಕೊಳ್ಳುತ್ತಾ ಇದ್ದ ಭಟ್ಟರ ಅಪ್ಪಯ್ಯನಿಗೆ ಭಟ್ಟರೊಂದೇ ಮನೆ ಸಂತಾನವಂತೆ. ಭಟ್ಟರ ಬೆನ್ನಿಗೆ ಬಿದ್ದದ್ದೆಲ್ಲಾ  ಎಂಟು ಬೇರೆಯವರ ಮನೆಗೆ ಹುಟ್ಟಿದ್ದಂತೆ. 

ಏನು ಅಂತ ನನಗೂ ಗೊತ್ತಾಗಲಿಲ್ಲ. ಬೊಚ್ಚು ಬಾಯಲ್ಲಿದ್ದ ಕವಳ ತುಪ್ಪಿ ಹೇಳಿದರು ಭಟ್ಟರು. "ಆನೊಬ್ಬನೇ ಗಂಡು. ಉಳಿದಿದ್ದೆಲ್ಲಾ ಹೆಣ್ಣು".

ಮುಂದುವರೆದು ಭಟ್ಟರು ಮತ್ತೆ ಕತೆ ಹೇಳತೊಡಗಿದರು. 
"ಶರಾವತಿ ನದಿಗೆ ಹಿರೇಭಾಸ್ಕರ ಡ್ಯಾಮ್ ಕಟ್ಟಿದಾಗ ಯಂಗಳದ್ದು ಎಲ್ಲಾ ಮುಳುಗಿ ಹೋತು. ಪರಿಹಾರಕ್ಕೆ ಅಂತ ಅಪ್ಪಯ್ಯ ಜಮೀನು ತಗಳದೆ ದುಡ್ಡು ತಗಂಡ. ಅವಂಗೆ 7 ಹೆಣ್ಣು ಮಕ್ಕಳನ್ನು ದಡ ಹತ್ತಿಸದೇ ದೊಡ್ಡ ತಲೆಬಿಸಿಯಾಗಿತ್ತು."

ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಒರೆಸಿಕೊಂಡು ಭಟ್ಟರು ಮತ್ತೆ ನಗುತ್ತಾ ಕತೆ ಮುಂದುವರೆಸಿದರು. "ಆಗ ಇಲ್ಲಿ ಯನ್ನ ಚಿಕ್ಕಯ್ಯ ಇದ್ದಿದ್ದ. ಅವ ಶ್ಯಾನುಭೋಗ.ಅದಕ್ಕೇ ಯಂಗ ಈ ಊರಿಗೆ ಬಂದ್ಯ. ದೇವರಂಥಾ ಜನ ಚಿಕ್ಕಯ್ಯ. ಅಪ್ಪಯ್ಯ ಅಮ್ಮನ ಕಷ್ಟ ನೋಡಿ ಯಂಗಕ್ಕೆ ಎರಡೆಕರೆ ಗದ್ದೆ ದರಖಾಸ್ತು ಮಂಜೂರು ಮಾಡಿಸಿ ಕೊಟ್ಟ. ಅವಂಗೆ ಗಂಡು ಮಕ್ಕಳಿರ್ಲೆ. ಅವನ ಒಂದೆಕರೆ ತೋಟ ಹೊಸತಾಗಿತ್ತು. ಜೀವನ ಮಾಡಕ್ಕಲ, ಅದಕ್ಕೇ ಆನು ಮಾಣಿ ಇದ್ದಿದ್ನಲ, ಯನ್ನ ಹತ್ರ ಇದೇ ಊರಾಗೆ ಒಂದು ದಿನಸಿ ಅಂಗಡಿ ಹಾಕಿಸಿ ಕೊಟ್ಟ."

"ಮುಳುಗಡೆ ಪರಿಹಾರ ಪೂರ್ತಿ ತಂಗಿದಿಕ್ಕಳ ಮದುವೆ ಮಾಡಕ್ಕೆ ಸಮಾ ಆತು. ಚಿಕ್ಕಯ್ಯನ ತೋಟದ ಉತ್ಪತ್ತಿ ಅವನ ಮೂರು ಹೆಣ್ಣು ಮಕ್ಕಳ ಮದುವೆಗೆ ಸಮ ಆತು. ಅಂಗಡಿ ದುಡ್ಡಲ್ಲಿ ಜೀವನ ಯಂಗಳದ್ದು."

"ಅಷ್ಟೊತ್ತಿಗೆ ಯಂಗೆ ಓ ಅಲ್ಲಿ ಕೂತಿದ್ದ ನೋಡು, ನಿಂಗಳ ಅಂಬಮ್ಮೊಮ್ಮ ಅವಳನ್ನ ತೋರ್ಶಿದ. ಆನು ಕಟ್ಕಬುಟಿ. ಬಿಡಕ್ಕೆ ಬತ್ತನಾ. ಅಂಥಾ ಚಂದಿದ್ದ ಅವಳು ಆಗ. ಈಗಲೂ ಚಂದವೇ, ಯನ್ನ ಕೈಯಾಗೆ ಹರಿತಲ್ಲೆ ಅಷ್ಟೇ."ಎನ್ನುತ್ತಾ ಮತ್ತೆ ಕವಳ ತುಪ್ಪಿ ಕತೆ ಮುಂದುವರೆಸಿದರು.

"ಹಳ್ಳಿ ಬದಿ ಅಂಗಡಿ ಅಂದರೆ ಕಡದ್ದೆ ವ್ಯವಹಾರ. ನಂಬಿಕೆ ಮೇಲೆ ಎಲ್ಲರೂ ಕೊಡ್ತ. ಆದರೆ ಈ ಶುಕ್ರ ಇದ್ದ ನೋಡು, ಅವ ನಿಂಗೊತ್ತಿದ್ದಲ ಎಂತೋ ಫೇಸ್ ಬುಕ್ಕಾ ಎಂತ ಸುಡುಗಾಡ, ಅದರಾಗೆ ಬರದ್ಯೆಡಲ ಅವನದು ವೇಶದ್ದು ಮತ್ತೆಂತದೋ ಕತೆ ಎಲ್ಲ, ಅವ ಯನ್ನ ಹತ್ರ ಅಂಗಡಿಲಿ ಒಂದು ಮೂರು ಸಾವಿರ ಕಡ ಮಾಡಿದ.ಆನೂ ಕೊಡ್ತ ಮಾಡ್ಕಂಡು ಸುಮ್ಮನಿದ್ದಿ. ಆದರೆ ಇವ ಕಿತಾಪತಿ ಮಾಡದ?"

"ಎಂತ ಮಾಡಿದ ಅಜಾ" ಅಂದೆ ನಾನು.

"ಹೇಳ್ತಾ ತಿರುಗಿದ್ನಡ. ಅಂಗಡಿ ಭಟ್ಟನ ಹತ್ರ ಆರು ಸಾವಿರ ಕಡ ಮಾಡೀದೆ. ಕೊಡೂದಿಲ್ಲ. ಕೇಂಡ್ರೆ ಇತ್ತಲ. ಬಾಂಬಿಯಿಂದ ಜನ ಬತ್ರ್. ಭಟ್ರ್ ಎಂತ ಸಾಂ* ಹರ್ಕಾಂತ್ರ್ ಕಾಂತೆ. ಹಿಂಗೆ ಊರೆಲ್ಲ ಹೇಳ್ತಾ ತಿರುಗಿದ್ನಡ. 

"ಆನೂ ನೋಡ ಅಷ್ಟು ನೋಡಿದಿ. ಇವಂದು ಕಮ್ಮಿ ಆಪ ಲಕ್ಷಣವೇ ಇಲ್ಲೇ. ಬತ್ತ ಎಲ್ಲಿ ಹೋಗ್ತಾ ಅಂತ ಕಾಯ್ತಾ ಇದ್ದಿ. ಅಷ್ಟೊತ್ತಿಗೆ ದೀಪಾವಳಿ ಬಂತು. ಇವನೂ ಬಂದ ಸಾಮಾನು ತಗ ಹೋಗಕ್ಕೆ"

"ಎಲ್ಲಾ ಸಾಮಾನೂ ಕಟ್ಟಿ ಕೊಟ್ಟಿ. ಆಮೇಲೆ ಬ್ಲೇಡ್ ಸುಮ್ನೆ ಕೈಯಾಗೆ ಹಿಡಕಂಡು ದುಡ್ಡು ಕೋಡಾ ಶುಕ್ರ. ಹಳೆದೂ ಎಲ್ಲ ಸೇರಿಸಿ. ಇಲ್ಲದೆ ಹೋದ್ರೆ, ಇಲ್ನೋಡು ಕೈಯಾಗೆ ಎಂತಿದೆ ನೋಡು" ಅಂದಿ.

"ಶುಕ್ರ ಜೋರಾಗಿಬುಡಕ್ಕ. "ಎಂತ *ಟು ಹರ್ಕಂತ್ರಿ ಕಾಂತೆ" ಅನ್ನ ತಂಕ ಮಾತಾಡಿದ. ಆನು ಅವನ್ನ ಅಂಗಡಿ ಒಳಗೆ ದೂಡಿ ಬಾಗಿಲು ಹಾಕಿದಿ. ಬ್ಲೇಡಾಗೆ ಅವನ ಚಡ್ಡಿ ಶಿಗದಿ. ಹೋಗು ತಮಾ ಅಂದಿ"

"ಶುಕ್ರ ಅವಾಗ ಪಕ್ಕಾದ. ಇಷ್ಟು ದಿನ ಹೇಳಿದ್ದು ಹೊರಗೆ ಹೇಳ ಹಾಂಗೆ ಇಲ್ಲೇ. ನಾನು ಬ್ಲೇಡ್ ಹಿಡಕಂಡು ಅವನ್ನ ಒಳಗೆ ಕೂಡಿದ್ದಿ. ಹೊರಗೆ ಕಳಿಸಕ್ಕಿದ್ದರೆ ಅವನ ಚಡ್ಡಿ ಶಿಗದ್ದಿ. ಹಳೆ ಮಾತೇ ಆಡಿರೆ ಯಾರೂ ನಂಬದಿಲ್ಲೆ. ಹೊಸ ಮಾತಾಡಕ್ಕೆ ಧೈರ್ಯ ಇಲ್ಲೆ."

"ಮಕದ ಮೇಲೆ ಟವಲ್ ಹಾಕ್ಯಂಡು ನಿಮ್ಮನೆ ಶಣ್ಣಜ್ಜನ ಹತ್ರ ಹೋಗಿ ದುಡ್ಡು ಇಸ್ಕ ಬಂದು ಕೊಟ್ಟ. ನಿಮ್ಮನೆ ಶಣ್ಣಜ್ಜ ಒಂದಿನ ಎಲ್ಲಾ ಕೂತಾಗ ಎಂತಾತು ಅಂತ ವಿಚಾರ ಕೇಳಿದ. ಆನು ಸತ್ಯ ಇದ್ದಿದ್ದಷ್ಟೂ ಟ ಠ ಡ ಢ ಣ ಹೇಳಿದಿ. ಆಗ ನಿಮ್ಮನೆ ಶಣ್ಣಜ್ಜ, ಓ ಒಳ್ಳೆ ಬ್ಲೇಡ್ ಎಳದ್ದೆ. ಇಲ್ಲದೇ ಇದ್ದರೆ ನಿನ್ನ ದುಡ್ಡು ಮರ್ಯಾದೆ ಎರಡೂ ಗೋವಿಂದ ಆಗ್ತಿತ್ತು ಅಂದ ಅವತ್ತಿಂದ ಆನು ಬ್ಲೇಡ್ ಭಟ್ಟರು ಹೇ ಹೇ ಹೇ." ಹೀಗೆಂದು ಕತೆ ಮುಗಿಸಿದರು ಅಜ್ಜಯ್ಯ.

ಕ್ಷಮೆ ಬಗ್ಗೆ ಕೇಳಿದಾಗ ವೀರಾಧಿವೀರನೊಬ್ಬನನ್ನು ಅಣಕಿಸಿ,ಕೊನೆಗೆ ಕಂಪ್ಲೇಂಟ್ ಎಂದಕೂಡಲೇ ಹೇಂಬೇಡಿಯಂತೆ ಗೋಡೆ ತೊಳೆದು ತಿಕ್ಕಿದವನೊಬ್ಬನ ಕತೆ ಕೇಳಿ ಈ ಘಟನೆ ನೆನಪಾಯಿತು.

#ಶುಕ್ರ