Wednesday, July 25, 2012

ವಿರಹ

ಗೆಳತಿ ನೀನು ನನ್ನ ಬಾಳಲ್ಲಿ ಬಂದ ಆ ಕ್ಷಣದಿಂದ ನನ್ನ ಬಾಳೇ ಬದಲಾಗಿತ್ತು. ಗುಮ್ಮನಂತೆ ಇದ್ದ ನಾನು ನಿನ್ನಿಂದ ಪ್ರಪಂಚದ ಎಷ್ಟೋ ಮಜಲುಗಳನ್ನು ಅನಾವರಣ ಮಾಡಿದೆ.ನನ್ನಿಂದ ದೂರಾದ ಗೆಳೆಯರನ್ನು ಮತ್ತೆ ನಾನು ಪಡೆಯುವಂತೆ ಮಾಡಿದ್ದು ನೀನು ಮತ್ತು  ನಿನ್ನಲ್ಲಿ ಅಡಕವಾಗಿದ್ದ ಉತ್ಕಟ ಉತ್ಸಾಹ . ಎಲ್ಲೋ ಇದ್ದ ನೀನು ಮೂಲೆಯಲ್ಲಿ ಗುಮ್ಮನಂತಿದ್ದ ನನ್ನ ಕೈ ಸೇರುವುದು ಎಂದರೆ ತಮಾಷೆಯೇ? ನಾನಂತೂ ಅಬ್ಬೇಪಾರಿ ಮಾಡಲು ಇದ್ದಿದ್ದು ಒಂದು ಬಹಳ ಸಣ್ಣ ಕೆಲಸ. ಸಂಬಳವೂ ಅಷ್ಟಕ್ಕಷ್ಟೇ. ಅಂತಹ ಹೊತ್ತಿನಲ್ಲಿ ನೀನು ನನ್ನ ಬದುಕಲ್ಲಿ ಪ್ರವೇಶಿಸಿದೆ.ನೀನು ಬಂದ ಆ ಘಳಿಗೆಯಿಂದಲೇ ಜನರು ನನ್ನತ್ತ ಇಟ್ಟಿದ್ದ ನೋಟವೇ ಬದಲಾಯಿತು.
ಬರೇ ಇಷ್ಟೇ ಏನು? ನಿನ್ನ ಅದೆಷ್ಟು ಮಾತುಗಳು ನನ್ನ ಕಿವಿ ಸೇರಲಿಲ್ಲ? ನಿನ್ನ ಧ್ವನಿ ಕೇಳಿದರೆ ನನಗೆ ಅದೆಂತಹ ಆಕರ್ಷಣೆ ಇತ್ತು. ಅದೆಷ್ಟು ಹಾಡುಗಳನ್ನು ನಿನ್ನಿಂದ ಮತ್ತೆ ಮತ್ತೆ ಹೇಳಿಸಿ ಕೇಳಲಿಲ್ಲ ನಾನು.ನನ್ನ ಅದೆಷ್ಟೋ ಹಗಲುಗಳು ಪ್ರಾರಂಭವಾಗಿದ್ದು ನಿನ್ನ ಸವಿದನಿ ಕೇಳಿಯೇ ಅಲ್ಲವೇ? ನೀನು ನನ್ನೊಂದಿಗೆ ಶೌಚದ ಮನೆಯೊಂದು ಬಿಟ್ಟು ಬೇರೆ ಎಲ್ಲ ಕಡೆಗೂ ಇದ್ದೆ. ಎಲ್ಲಾದರೊಮ್ಮೆ ನಿನ್ನನ್ನು ಬಿಟ್ಟು ಹೊರಟಾಗ ನನ್ನಲ್ಲಿ ಆಗುತ್ತಿದ್ದ ಆತಂಕದ ಪರಿ ನಿನಗೆ  ಗೊತ್ತಲ್ಲ. ಎಷ್ಟೋ ಸರಿ ನಿನ್ನ ಬಿಟ್ಟು  ಹೊರಟಾಗ ನಿನ್ನ ಆ ಮೇಲು ದನಿ ಕೇಳಿ ತಿರುಗಿ ಬಂದು ಕರೆದೊಯ್ದ ದಿನಗಳನ್ನು ಲೆಕ್ಕ ಇತ್ತದ್ದದರೂ ಯಾರು? ಕೆಲವು ಸ್ಥಳಗಳಲ್ಲಿ ನಿನ್ನ ಮೌನ  ಅದೆಷ್ಟು ಅಸಹನೀಯ ಗೊತ್ತೇ? ನನ್ನ ತೊಡೆ ಮೇಲೆ ನೀನು ಮಲಗಿ ಹಾಡುಗಳನ್ನು ಗುನೂಗುತ್ತಿದ್ದಗ ನಾ ಪಟ್ಟ ಆನಂದ ಅನುಭವಿಸಿದ ನೆಮ್ಮದಿ ಅದನ್ನು ಹೇಳುವುದಕ್ಕೆ ಶಬ್ದಗಳು ಖಂಡಿತಾ ನನ್ನಲ್ಲಿ ಇಲ್ಲ. ನೀನು ಕಳೆದು ಹೋದರೆ ಮುಂದೇನು ಎಂದು ನಾನು ಯೋಚಿಸಿದಾಗಲೆಲ್ಲ ನನಗೆ ನಳ ದಮಯಂತಿ ಪ್ರಸಂಗದಲ್ಲಿ ಬರುವ ಒಂದು ಸಂಧರ್ಭದ ಪದ್ಯ ನೆನಪಾಗುತ್ತಿತ್ತು "ಹೀಗೆ ಈ ಅಡವಿಯಲಿ ಒರ್ವಳ ಬಿಟ್ಟು ಹೇಗೆ ಮುಂದಡಿ ಇದಲಿ......" ಈ ಪ್ರಶ್ನೆಯನ್ನು ನನ್ನಲ್ಲಿ ನಾನು ಕೇಳಿದಾಗಲೆಲ್ಲ ಸಿಕ್ಕ ಉತ್ತರ ಒಂದೇ - ನೀನಿಲ್ಲದೆ ಈ ಜಗತ್ತು ನಿಜಕ್ಕೂ ಬರದು ಬೆಂಗಾಡು ಎಂದು.ಏಕೆಂದರೆ ನಿನ್ನೊಂದಿಗೆ ನಾನು ನನ್ನ ಅನೇಕ ಆಪ್ತರನ್ನು ಕೂಡ ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಪದ್ಯವನ್ನು ನಾನು ನನ್ನ ಬದುಕಿಗೆ ತಕ್ಕಂತೆ ತಿರುಚಿದ್ದು ನಿಜ "ಹೇಗೆ ಈಕೆಯ ತೊರೆದು ನಾ ಜಗದಿ ಬದುಕಲಿ...." ಎಂದು.
ಇಂತಹ ಉತ್ಕಟ ಬಂಧದಲ್ಲಿದ್ದ ನಾವು ಕೂಡ ಬೇರಾಗಬೇಕು ಎಂದರೆ ಇದು ವಿಧಿಯ ವಿಲಾಸ ಎನ್ನ ಬೇಕೇ? ಅಥವಾ ಕಲಿ ಪ್ರಕೋಪ ಎನ್ನ ಬೇಕೇ? ವಿಲಾಸವಾಗಿದ್ದರೆ ನಿಜಕ್ಕೂ  ನಾನು ಸಂತೋಷಿಸುತ್ತಿದ್ದೆ. ಆದರೆ ದುಃಖವನ್ನು ಕೊಟ್ಟ ಈ ಘಟನೆ  ವಿಲಾಸ ಖಂಡಿತ ಅಲ್ಲ. ಆ ಒಂದು ಕ್ಷಣದಲ್ಲಿ ನೀನು ಬೇರೆಯವರ ಕೈ ವಶ ಆಗಿಬಿಟ್ಟೆಯಲ್ಲ. ಆಗುವ ಮೊದಲು ಒಮ್ಮೆಯಾದರೂ ನನ್ನನ್ನು ಕರೆಯ ಬಹುದಿತ್ತಲ್ಲ.
ನೆನಪಿದೆಯೇ ಆ ದಿನ ? ಊಟ ಮಾಡುವಾಗ ನನ್ನ ಪಕ್ಕದಲ್ಲೇ ನೀನಿದ್ದೆ. ಆಮೇಲೆ ನೀನಿಲ್ಲ. ನೀನಿಲ್ಲದೆ ಬದುಕು ದುಸ್ತರ ನಿಜ. ನಿನ್ನ ನೆನಪುಗಳು ಎಂದಿಗೂ ಹಸಿರು. ಆದರೆ ನನಗೂ ನನ್ನದೆನ್ನುವ ಒಂದು ಬದುಕಿದೆ. ನೀನು ಉಂಟು ಮಾಡಿ ಹೋದ ಶೂನ್ಯದೊಂದಿಗೆ ನಾನು ಸದಾಕಾಲ ಇರಲಾರೆ. ನಿನ್ನ ಶೂನ್ಯವನ್ನು ತುಂಬಲು ನಿನಗಿಂತ ಒಳ್ಳೆಯದು ಬೇಕು. ಅದಕ್ಕೆ ಈ ದಿನ ಹೊಸ ಮೊಬೈಲ್ ಕೊಂದು ಬಂದಿದ್ದೇನೆ. 32 G B  ಮೆಮೊರಿ, ಕ್ಯಾಮೆರಾ, ಆಡಿಯೋ ಪ್ಲೇಯರ್ ವೀಡಿಯೊ ಪ್ಲೇಯರ್ ಎಫ್ ಎಂ  ರೇಡಿಯೋ  ಎಲ್ಲ ಇದೆ.ಇದರಲ್ಲಿ wi fi ಕೂಡ ಇದೆ.
ನಿಜ ಕಳೆದುಕೊಂಡ ನನ್ನ ಗೆಳತಿ ನನ್ನ ಮೊಬೈಲ್ ಫೋನ್.

Friday, July 20, 2012

ಇದು ಒಂದು ಸೀರಿಯಸ್ ಕಥೆ


ನಮ್ಮ ಕಥಾ ನಾಯಕನ ಹೆಸರು ಜಗನ್ನಾಥ. ಎಲ್ಲರ ಬಾಯಲ್ಲಿ ಜಗ್ಗಣ್ಣ.ಇವನ ಬಗ್ಗೆ ಹೇಗೆ ಅಂತ ಕೇಳಿದರೆ ಊರಲ್ಲಿ ಎಲ್ಲರೂ ಅನುಕೂಲ ಅಂತಲೇ ಹೇಳುತ್ತಾರೆ. ಇವನಿಗೆ ೫ ಎಕರೆ ಅಡಿಕೆ ತೋಟ ಇದೆ. ಗದ್ದೆ ಕೂಡ ಒಂದು ೨ ಎಕರೆ ಇದೆ. ಸಾಲದ್ದಕ್ಕೆ ಅಪ್ಪ ಅಜ್ಜ ಮುತ್ತಜ್ಜ ಎಲ್ಲರೂ ದುಡಿದಿಟ್ಟ ದುಡ್ಡು ಕೂಡ ಹಾಗೆ ಇದೆ. ಹೆಂಡತಿ ಸರಸಿ ಕೂಡ ಒಳ್ಳೆಯವಳು. ಇವರ ದಾಂಪತ್ಯದ ಫಲ ಒಂದು ಮಗ ಒಂದು ಮಗಳು. ಮಗಳನ್ನು ಅವಳ ಇಷ್ಟದಂತೆಯೇ ಒಬ್ಬ ಒಳ್ಳೆ ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿ ಇರುವ ಹುಡುಗನನ್ನು ನೋಡಿ ಮಾಡುವೆ ಮಾಡಿ ಆಗಿದೆ. ಮಗ ತಾನು ಅಪ್ಪ ನೆಟ್ಟ ಆಳದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನದವನಲ್ಲ ಎನ್ನುತ್ತಾ ಬೆಂಗಳೂರು ಪೇಟೆ ಸೇರಿ ಕೆಲವು ವರ್ಷ ಕಳೆದು ಹೋಗಿದೆ. ಕೆಲಸದ ಮೇಲೆ ಹೊರಗಡೆ ಇರುವ ಮಾಣಿ ಎನ್ನಿಸಿಕೊಂದಿದ್ದರಿಂದ ಇವನಿಗೆ ಹೆಣ್ಣು ಸಿಗುವುದು ಕಷ್ಟವಾಗಲಿಲ್ಲ. ಇಷ್ಟೆಲ್ಲಾ ಅನುಕೂಲಗಳಿದ್ದರೂ ಜಗ್ಗನ್ನನಿಗೆ ಪಿತ್ತ ನೆತ್ತಿಗೆರಲಿಲ್ಲ.ಇವನಿಗೆ ತಂಬಾಕಿನ ಕವಳ ಒಂದನ್ನು ಬಿಟ್ಟು ಯಾವ ದುರಭ್ಯಾಸವೂ ಇಲ್ಲ. ಹಾ೦ ಮನೆಯಲ್ಲಿ ಕಾರ್ ಕೂಡ ಇದೆ. 

ಇಂತಿಪ್ಪ ಜಗ್ಗಣ್ಣ ಒಂದು ದಿನ ತಗ್ಗಿನ ತೋಟಕ್ಕೆ ಹೋಗಿ ಬಂದವ ಯಾಕೋ ಸುಸ್ತು ಸುಸ್ತು ಎನ್ನತೊಡಗಿದ. ಮರುದಿನ ಜ್ವರ ಬಂದಂತೆ ಆಯಿತು. ವಿಚಾರ ತಿಳಿದ ಮಗ ಫೋನ್ ಮಾಡಿ ಬೆಂಗಳೂರಿಗೆ ಬನ್ನಿ ಇಲ್ಲಿ ಒಳ್ಳೆ ಆಸ್ಪತ್ರೇಲಿ ತೋರ್ಸನ. ನಿ೦ಗಕ್ಕೆ  ವರ್ಷಾತು " ಅಂದ. ಮಗಳು ಕೂಡ ಅಣ್ಣ  ಹೇಳಿದ್ದು ಸರಿ ಅಂದಳು. ಹೀಗೆ ಮಗಳು ಮತ್ತು ಮಗ ಒಂದೇ ಮಾತು ಹೇಳಿದ ಮೇಲೆ ಇದನ್ನು ಕೇಳದೆ ಸರಿ ಅನ್ನಿಸಿ ಜಗ್ಗಣ್ಣ ಮತ್ತು ಸರಸಕ್ಕನ ಸವಾರಿ ಬೆಂಗಳೂರಿನ ಬಸ್ಸೇರಿತು.

ಬಸ್ಸು ಹೋಗುತ್ತಿರುವಾಗ ಅರಸೀಕೆರೆ ಹತ್ತಿರ ಒಂದು ಲಾರಿ ಬಂದು ಬಸ್ಸಿಗೆ ಬಲವಾಗಿ  ಜಪ್ಪಿ ಜಗ್ಗಣ್ಣ ಮತ್ತು ಸರಸಕ್ಕ ಇಬ್ಬರೂ ಅರಸೀಕೆರೆಯ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಗೆ ಬಂದ ಮಗ ಡಾಕ್ಟರ ಹತ್ತಿರ "ನಮ್ಮ ಅಪ್ಪ ಅಮ್ಮ ಹೇಗಿದ್ದಾರೆ?" ಎಂದ್ದಾಗ ಡಾಕ್ಟರ ಹೇಳಿದರು. "ನಿಮ್ಮ ತಂದೆ ತಲೆಗೆ ಬಲವಾದ ಏಟು ಬಿದ್ದಿದೆ. ಅವರ ಹಾರ್ಟ್ ಮೊದಲೇ ವೀಕ್ ಇತ್ತು. ಕಿಡ್ನಿಗೂ ಸ್ವಲ್ಪ damage ಆಗಿದೆ. ಬೆನ್ನಿಗೆ ಕೂಡ ಪೆಟ್ಟು ಬಿದ್ದಿದೆ. ಡಿಸ್ಕ್ ಸ್ಲಿಪ್ ಆಗಿದ್ರೂ ಆಗಿರಬಹುದು. ಒಂದು ಕೈ ಮುರಿದು ಹೋಗಿದೆ.ಒಂದು ಕಾಲು joint ತಪ್ಪಿ ಹೋಗಿದೆ .ತಲೆಗೆ ಪೆಟ್ಟು ಬಿದ್ದಿರೋದ್ರಿಂದ ಕಣ್ಣು ಮತ್ತು ಕಿವಿ ಎರಡೂ ವೀಕ್ ಆಗಿದೆ. ಒಟ್ನಲ್ಲಿ ತುಂಬಾ ಸೀರಿಯಸ್" ಎಂದರು

ನಿಜವಾಗಿಯೂ ಇಷ್ಟೆಲ್ಲಾ ಆದಮೇಲೆ ಇದು ಸೀರಿಯಸ್  ಕಥೆಯೇ ಅಲ್ಲವೇ?

Tuesday, July 17, 2012

ಮನವ ಕಲಕಿದ ಮೋಹಿನಿ

ಅಂದು ಸಂಜೆ ತನಗಾದ ಅನುಭವಕ್ಕೆ ತಾನೇ ಬೆರಗಾಗಿ ಮನೆಯ ಚಿಟ್ಟೆ (ಮಲೆನಾಡಿನ ಮನೆಗಳಲ್ಲಿ ಮನೆಯ ಹೊರಗೆ ತುಸು ಚಾಚಿ ನಿಂತಿರುವ ಕಟ್ಟೆಯ ಭಾಗ) ಮೇಲೆ ಒರಗಿ ಯಚಿಸತೊಡಗಿದ ವಿಶ್ವ. ಅದು ತನಗಾದ ಅನುಭವಾ ಅಥವಾ ಭಾವೋತ್ಕಟತೆಯೋ ಎನ್ನುವುದು ಆತನ ಗೊಂದಲದ ಮೂಲ. ಮೂರು ಸಂಜೆಯ ಹೊತ್ತಿನಲ್ಲಿ ತಾನು ಪೇಟೆಯಿಂದ ಮನೆಕಡೆ ಬರುತ್ತಿದ್ದಾಗ ಒಂದು  ಹೆಣ್ಣು ಬಿಳಿ ಸೀರೆ ಉಟ್ಟು ಕಾಡಲ್ಲಿ ನಿಂತಿದ್ದು ಆತನಿಗೆ ಬಹಳ ದಿನಗಳಿಂದ ಅನುಭವಕ್ಕೆ ಬಂದ ವಿಚಾರ.
ಆ ಹೆಣ್ಣು ತನಗೆ ಮಾತ್ರ ಕಂಡಿದ್ದೋ ಅಥವಾ ಮತ್ತು ಯಾರಾದರೂನೋಡಿದ್ದಾರೋ ಎಂದು ಒಮ್ಮೆ ಯೋಚಿಸಿದ. ಬೇರೆ ಯಾರೂ ನೋಡದಿದ್ದಲ್ಲಿ ಅದು ತನಗೆ ಮಾತ್ರ ಕಂಡಿದ್ದೇಕೆ ಎಂದು ಕೂಡಾ ಯೋಚಿಸಿದ.

ಭೂತ ದೆವ್ವಗಳ ಬಗ್ಗೆ ಯಾರಾದರೂ ಮಾತಾಡಿದರೆ ಗಟ್ಟಿಯಾಗಿ ನಗುವ ತನಗೇ ಇಂತಹ ಅನುಭವ ಆಗಬೇಕಿತ್ತೇ ಎಂದು ಒಮ್ಮೆ ಕಸಿವಿಸಿಗೊಂಡ. ಏನಾದರಾಗಲಿ ಈ ವಿಚಾರ ಬರೇ  ಯೋಚಿಸಿ ಬಗೆ ಹರಿಯುವುದಿಲ್ಲ ಎನ್ನುವುದನ್ನು ಮನಗಂಡ ಆತ
ಇದರ ಮೂಲದತ್ತ ಸಾಗುವ ಯೋಚನೆ ಮಾಡಿದ.

ಒಹ್ ತಾನು ಈ ಮೊದಲೆಲ್ಲಾ ಮಾಡಿದ ಹಲ್ಕಟ್ ಗಿರಿ ಕೆಲಸಗಳಲ್ಲೆಲ್ಲಾ ತನ್ನ ಸಖನಾಗಿ, ಸಾರಥಿಯಂತೆ ಇದ್ದ ಗೋಪಿ ಶಾಸ್ತ್ರಿಯನ್ನು ಬಿಟ್ಟು ಈ ಮೋಹಿನಿಯ ಶೋಧನೆಯ ಮಹತ್ಕಾರ್ಯ ಮಾಡುವುದೇ ಎಂದೆನಿಸಿ ಒಂದು ಎಲೆ ಅಡಿಕೆ ಹಾಕಿಕೊಂಡು ಅಮ್ಮನ ಹತ್ರ "ಅಮ್ಮಾ ಇಲ್ಲೇ ಗೋಪಿ ಮನಿಗೆ ಹೋಗ್ಬತ್ತಿ. ಅಪ್ಪಯ್ಯ ಕೇಳಿರೆ ಎಲ್ಲಿಗೆ ಹೋಗ್ತಿ ಅಂತ ಹೇಳಲ್ಲೆ ಅಂತ ಹೇಳು" ಎಂದವನೇ ತನ್ನ ಬೈಕ್ ಸ್ಟಾರ್ಟ್ ಮಾಡಿ ಗೋಪಿ ಮನೆಗೆ ಹೋದ. ಆದರೆ ಅಲ್ಲಿ ಇವನ ಮೋಹಿನಿಯ ವಿಚಾರ ಜಾಳು ಎನ್ನಿಸುವಂತಹ ರುಚಿಕರ ಮಾತು ಕತೆ ನಡೆಯುತ್ತಿತ್ತು. ಅದು ಮತ್ತೇನಲ್ಲ ದೀಪಂಗೆ ಸಲೀಮ ಬರೆದ ಲವ್ ಲೆಟರ್ ಸಿಕ್ಕಿದ್ದು ಮತ್ತು ಅದರ ಕುರಿತಾಗಿ ಮುಂದೆ ಕೈಗೊಳ್ಳ ಬೇಕಾದ ಕ್ರಮಗಳ ಬಗೆಗಾಗಿತ್ತು. ಊರು ಮನೆ ಸಂಪ್ರದಾಯದಂತೆ ವಿಶ್ವ ಅದರಲ್ಲಿ ಭಾಗಿಯಾದ. ತನ್ನ ಮಹತ್ತರ ಉದ್ದೇಶವೂ ಆತನಿಗೆ ಮರೆತು ಹೋಯ್ತು. ಚರ್ಚೆ ಒಂದು ಅಂತ್ಯ ಕಾಣುತ್ತಲೇ ಎಲ್ಲರೂ ಮನೆಗೆ ಹೊರಟರು. ವಿಶ್ವನೂ ಹೋದ.

ಮರುದಿನ ಮತ್ತೆ, ಆಫೀಸೆನಿಂದ ಬರುವಾಗ ಇವನಿಗೆ ಮೋಹಿನಿಯ ನೆನಪಾಯಿತು. ಒಮ್ಮೆಲೇ ಹುದುಗಾತಿಕೆಯಲ್ಲಿ ಓದಿದ ಅನೇಕ ಕಾದಂಬರಿಗಳು ನೋಡಿದ ಅನೇಕ ಧಾರಾವಾಹಿಗಳು ನೆನಪಾದವು. ಹೀಗೆ ಗತಕಾಲದ ನೆನಪಿನಲ್ಲಿಯೇ ಬರುತ್ತಿದ್ದಾಗ ಮೊದಲು ಮೋಹಿನಿಯನ್ನು ಕಂಡ ಸ್ಥಳ ಬಂತು. ಏನಾದರಾಗಲಿ ನೋಡಿಯೇ ಬಿಡುತ್ತೇನೆ ಎಂದು ವಿಶ್ವ ಹೊರಟ. ಮೋಹಿನಿ ದ್ದ ಜಾಗದಲ್ಲಿ ಬಂದು ನಿಂತ. ಒಮ್ಮೆಲೇ ಹಗಲುಗನಸು  ಕಾಣಲು ಶುರು ಮಾಡಿದ. ತಾನು ಮೋಹಿನಿಯ ರಹಸ್ಯವನ್ನು ಭೇದಿಸಿದಂತೆ ತನ್ನ ಸುದ್ದಿ T V 9 ನಲ್ಲಿ ಸುವರ್ಣ ನ್ಯೂಸ್ ನಲ್ಲಿ ಬಂದಂತೆ ಮನಸೋ ಇಚ್ಛೆ ಟೇಪ್ ರಿಪೀಟ್ ಮಾಡಿದ. ಒಮ್ಮೆ ದೀಪ ಹಾಗು ಅವಳ ತಥಾಕಥಿತ  ಪ್ರೇಮಿ ತೊಗರು ಸಲೀಮನಿಗೂ ಈ ಮೋಹಿನಿ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಕೂಡ ಅನ್ನಿಸಿತು. ಇಷ್ಟಾದರೂ ಮೋಹಿನಿಯ ಸುಳಿವಿಲ್ಲ.

ಅಷ್ಟರಲ್ಲಿ ಯಾರೋ ಬೆನ್ನು ಮುಟ್ಟಿದ ಅನುಭವವಾಯಿತು. ವಿಶ್ವ ತಿರುಗಿ ನೋಡಿದ , ಮೋಹಿನಿ .ಮೊನ್ನೆ ಕಂಡ ಹಾಗೆ ಬಿಳಿ ಸೀರೆಯನ್ನೇ ಉಟ್ಟಿದ್ದಾಳೆ . ಒಮ್ಮೆಲೇ ಅವಕ್ಕಾಗಿ ನಿಂತ ನಮ್ಮ ವಿಶ್ವ. ಅವನ ಅಪ್ಪಯ್ಯನ ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಬೆಕ್ಕಸ ಬೆರಗಾಗಿ ದಿಕ್ಕು ಕೆಟ್ಟು ದಂಗು ಬಡಿದು ನಿಂತಿದ್ದ . ಅಷ್ಟರಲ್ಲಿ ಆ ಮೋಹಿನಿ "ಸಾಬ್ ! ಚೌಕೋ ಮತ್ ಚಮ್ಕೋ . ನಯಾ ಟೈಡ್ ನಾಚುರಲ್ !!."" ಎಂದು ಹೇಳಿ ಪಕ್ಕದಲ್ಲಿದ್ದ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಂಡು "ಬಸಂತೀ! ಮೈ ರಾಧಾ ಹಿಯಾ ಹ್ಞೂ" ಎನ್ನುತ್ತಾ  ನಡೆದುಕೊಂಡು ಹೊರಟಿತು.

ಇದನ್ನೆಲ್ಲಾ ನೋಡಿದ ವಿಶ್ವ  "ಅಯ್ಯೋ! ದೇವರೇ ಈ ಉತ್ತರ ಭಾರತೀಯರು ಇಲ್ಲಿ ಬಿಲ್ಡಿಂಗ್ ಕಟ್ಟಕ್ಕೆ ಬೈಂದ . ಬರಲಿ ಆದ್ರೆ ಬಿಳಿ ಸೀರೆಲಿ ಬಂದು ತಲೆ ಎಂಟಕ್ಕೆ ಕೆಡ್ಸಕ್ಕು " ಎಂದು ಮನದಲ್ಲೇ ಶಪಿಸುತ್ತಾ ಬೈಕ್  ಏರಿ ಮನೆ ಕಡೆ ಹೊರಟ.



Thursday, July 12, 2012

ಬಾಲುವಿನ ಬಾಳ ಲಹರಿ

ಬಾಲು ತನ್ನ ಮನೆಯ ಹೊರಗಿನ ಜಗುಲಿಯ ಮೇಲೆ ಕುಳಿತು ಎದುರು ಮನೆಯ ಕಿಟಕಿಲ್ಲಿ ಬೆಳಗಾಗುವುದನ್ನೇ ಕಾಯುತ್ತಿದ್ದ. ಅವನ ಲೆಕ್ಕದಲ್ಲಿ ಲೋಕದಲ್ಲಿ ಬೇಕಾದರೆ ನೂರು ಸೂರ್ಯರು ಬೆಳಗಲಿ ಅದು ಎದುರು ಮನೆಯ ದೀಪದ ಬೆಳಕಿನ ಮುಂದೆ ಏನು ಅಲ್ಲ. ಅವನು ಎದುರು ಮನೆಯ ಆ ದೀಪದಲ್ಲಿ ಕಂಡದ್ದಾದರೂ ಏನು? ಅದನ್ನು ಅವನೇ ಹೇಳತೊಡಗಿದರೆ ಚಂದ ನಿಜ. ಆದರೆ ಅದನ್ನು ನಾನು ಒಮ್ಮೆ ಕೇಳಿ ಒಂದು ಬಾಟಲ್ ಅಮೃತಾಂಜನ ಖರ್ಚು ಮಾಡಿದ್ದರಿಂದ ನಿಮಗೆ ಆ ಗತಿ ಬೇಡ ಎಂದು ಸರಳವಾಗಿ ಮತ್ತು ಸುಲಭವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ. 
ದೀಪಾ ಎದುರು ಮನೆಗೆ ಬಂದ ಹುಡುಗಿ. ಆ ಮನೆ ಮಾಲಕಿ ಲಕ್ಷ್ಮಕ್ಕನ ಅಕ್ಕನ ಮಗಳು. ಊರಲ್ಲಿ ಕಾಲೇಜಿಗೆ ಹೋಗುವುದಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಚಿಕ್ಕಮ್ಮನ ಮನೆ ಸೇರಿದ್ದಳು. ಅವಳು ಅಲ್ಲಿ ಸೇರಿದ ಮೇಲೆ ಬಾಳುವಿನ ಬಾಳ ತುಂಬಾ ಬೆಳಕೋ ಬೆಳಕು. ಎಷ್ಟು ಬೆಳಕು ಅಂದರೆ ರಾತ್ರಿ ಕೂಡ ಹಗಲಾಗಿದೆ. ಅಂದರೆ ನಮ್ಮ ಬಾಲು ನಿದ್ದೆ ಇಲ್ಲದೇ ರಾತ್ರಿ ಕಳೆಯುತ್ತಿದ್ದಾನೆ. ಆದರೆ ಅವನಿಗೆ ನಿದ್ದೆ ಬರದಿದ್ದಾಗ ಓದುವ ಅಭ್ಯಾಸ ಅಲ್ಲ ಹವ್ಯಾಸ. ಮೊದಲು ಕಾರ್ಯಭಾರದ ಕಾರಣ ಪರೀಕ್ಷೆಯ ಸಂಧರ್ಭದಲ್ಲಿ ಮಾತ್ರ ಈ ಕೆಲಸ ಮಾಡುತ್ತಿದ್ದ ಈಗ ಪ್ರತಿ ದಿನ ಮಾಡಿ ಅಭ್ಯಾಸವಾಗಿದೆ. ಪರಿಣಾಮ ಮೊನ್ನೆ ನಡೆದ internal assessment ನಲ್ಲಿ ಒಳ್ಳೇ ಮಾರ್ಕ್ಸ್ ಬಂದಿದೆ.ಅಷ್ಟೇ ಅಲ್ಲ ಮೊದಲು ಯಾವುದೋ ಬಸ್ಸು ಎಂದುಕೊಂಡು ಮನೆಯಿಂದ ಹೊರಡುತ್ತಿದ್ದವ ಸರಿಯಾದ ಸಮಯಕ್ಕೆ ಹೊರಡುತ್ತಿದ್ದಾನೆ. ಇದರಿಂದ ನಮ್ಮ ಬಾಲುವಿನ ತಂದೆ ಕೃಷ್ಣ ಭಟ್ಟರು ಭಾರಿ ಸಂತುಷ್ಟರು ಏಕೆಂದರೆ ಬಸ್ಸಿಗೆ ಪಾಸ್ ಇರುವುದರಿಂದ ಕಾಸು ಮಿಗುತ್ತದೆ ಮತ್ತು ಮಗ ದಿನಾ ಬೆಳಿಗ್ಗೆ ಬೇಗ ಎದ್ದು ಮನೆ ಕಡೆ ಸ್ವಲ್ಪ ಕೆಲಸ ಮಾಡಿ ಸಂಧ್ಯಾವಂದನೆ ಕೂಡ ಮಾಡುತ್ತಿದ್ದಾನೆ ಎಂದು. ಬಾಲು ಈಗ ಕಾಲೇಜಿನಲ್ಲಿ ಕೂಡ ಒಳ್ಳೇ ಹಾಜರಾತಿ ಹೊಂದಿದ್ದಾನೆ.

ಒಂದು ದಿನ ತನ್ನಷ್ಟಕ್ಕೆ ತಾನೇ ಕುಳಿತು ತನ್ನೊಬ್ಬನ ಬಗ್ಗೆಯೇ ಯೋಚಿಸಿದ ಬಾಳು ತಾನು ಇನ್ನೂ ಹೆಚ್ಚಾದಗ ಮಾತ್ರ ದೀಪಳಿಗೆ ತಾನು ಒಳ್ಳೆಯ ಸಂಗಾತಿಯಾಗಳು ಸಾಧ್ಯ ಅಂತ ಅರ್ಥ ಮಾಡಿಕೊಂಡ ಆದರೆ ತನ್ನಲ್ಲಿ ಇಷ್ಟೆಲ್ಲಾ ಒಳ್ಳೆಯದು ಮಾಡಿದ ದೀಪಳಿಗೆ ಕೃತಜ್ಞತೆ ಸಲ್ಲಿಸ್ದೇ ಇದ್ದಾರೆ ಅದು ಸರಿಯಲ್ಲ, ಹಾಗೆಯೇ ಪ್ರೇಮವನ್ನು ನಿವೇದಿಸದೇ ಇದ್ದಲ್ಲಿ ಅದೂ ಸರಿಯಲ್ಲ ಎಂದು ಯೋಚಿಸಿದ ಬಾಳು ಒಂದು ಕವಿತೆಯ ಮೂಲಕ ಇವೆರಡನ್ನೂ ಮಾಡಲು ನಿರ್ಧರಿಸಿದ.

ತನ್ನ ಈ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ತನ್ನ ಸ್ಫೂರ್ತಿ ದೇವತೆ ದೀಪಾಳ ಬರುವಿಕೆಯನ್ನು ಎದುರು ನೋಡುತ್ತಾ ಮನೆಯ ಎದುರು ಪೆನ್ನು ಪುಸ್ತಕಗಳೊಂದಿಗೆ ಕುಳಿತಿದ್ದಾನೆ ಈಗ. ಕುಳಿತು ಗಂಟೆ ಎರಡು ಕಳೆಯಿತು. ದೀಪಾ ಬರಲಿಲ್ಲ. ಬಾಳುವಿನ ಅಪ್ಪಯ್ಯಾನಿಗೆ ಖುಷಿಯೋ ಖುಷಿ ಯಾಕೆ ಅಂದ್ರೆ ಮಾಣಿ ಪುಸ್ತಕ ಹಿಡ್ಕೈಂದ. ದೀಪಳ ಧ್ವನಿ ಕೇಳುತ್ತಿಂದಂತೆ ಬಾಳು ಕವಿತೆಯ ಮೊದಲ ಸಾಲು ಬರೆದ-- ಓ ಸುಂದರಿ ನೀನಾದೆ ನನ್ನ ಬಾಳ ಲಹರಿ.......

ಮುಂದಿನ ಸಾಲಿಗೆ ಆದಿ ಪ್ರಾಸ ಕೊಡುವುದೋ ಅಂತ್ಯ ಪ್ರಾಸ ಕೊಡುವುದೋ ಅಥವಾ ಪ್ರಾಸವೇ ಇಲ್ಲದ ನವ್ಯ ನವೋದಯದ ಪ್ರೇಮ ಕವಿತೆ ಬರೆಯಲೋ ಎಂದು ತ್ರಾಸ ಪಡುತ್ತಿದ್ದವನಿಗೆ ಎದುರು ಮನೆಯಿಂದ ಲಕ್ಷ್ಮಮ್ಮನ ಹಳಗನ್ನಡದ ನುಡಿಗಳು ಕೇಳಿದವು. "ಅಯ್ಯೋ ಎಂತ ಕೆಲ್ಸಾ ಮಾಡಿದ್ಯೆ ಹಾಲ್ಬಿದ್ದವಳೇ ಓದ್ಲಿ ಒಳ್ಳೇದಾಗಲಿ ಒಂದು ಒಳ್ಳೇ ಮನೆ ಸೇರಿ ಬದೂಕ್ಲಿ ಅಂತ ಹೇಳಿ ಇಲ್ಲಿ ಕರ್ಕಂಡು ಬಂದ್ರೆ ಸಲೀಮನ ಲವ್ ಲೆಟರ್ ಓದ್ತಾ ಇದ್ಯೆಲೆ. ಎಂತ ಅವನ ಜೊತೆ ತೊಗರು ವ್ಯಾಪಾರ ಮಾಡಕ್ಕೂಅಂತ ಇದ್ಯಾ? ಅಥವಾ ಅವನ ತಮ್ಮನ ಗ್ಯಾರೇಜ್ ಬಟ್ಟೆ ತೊಳೆಯಕ್ಕೂ ಅಂತ ಇದ್ಯಾ. ಇನ್ನೊಂದು ಸಲ ಇದನ್ನ ಮಾಡಿರೆ ಕೊಡು ಹಾಕ್ತಿ ನೋಡು. ಏನು ಹಾಳು ಬುದ್ಧಿಯೇನ ಹೆಣ್ಣು ಮಕ್ಳೀಗೆ ಲವ್ ಮಾಡದು ಮಾಡ್ತಾ ನೋಡಿ ಮಾಡಕ್ಕೆ ಎಂತ ರೋಗ" ಎನ್ನುತ್ತಾ ದೀಪಳ ಮೇಲೆ ಲಕ್ಷ್ಮಮ್ಮ ಫೂತ್ಕರಿಸುತ್ತಿದ್ದಳು.

ಇದನ್ನೆಲ್ಲ ಕೇಳಿದ ಕಥಾ ನಾಯಕ ತಾನು ಸನ್ಯಾಸಿ ಆಗಲೋ ಅಥವಾ ತನ್ನಲ್ಲಿ ಆಗಷ್ಟೇ ಹುಟ್ಟುತ್ತಿದ್ದ ಮಹಾ ಕವಿಯನ್ನು ಕೊಲೆ ಮಾಡಿದ ತೊಗರು ಸಲೀಮನ ವಿರುದ್ಧ ಸೇಡು ತೀರಿಸಿ ಕೊಳ್ಳಲೋಎಂದು ಯೋಚಿಸ ತೊಡಗಿದ.