Tuesday, July 9, 2019

ನಿಷ್ಕ



ಲೆಕ್ಕ ಹಲವಕ್ಕಿದೆ, ಹಲವು ರೀತಿಯಲ್ಲಿ. ಆದರೆ ಲೌಕಿಕವಾಗಿ ಲೆಕ್ಕ ತುತ್ತ ತುದಿಯಲ್ಲಿ ನಿಲುವುದು ಹಣದ ವಿಚಾರಕ್ಕೆ ಹಣದ ಅಳತೆಗೆ. (ಅಲೌಕಿಕವಾಗಿ ನಮ್ಮ ಕರ್ಮದ ಲೆಕ್ಕ. ಲೆಕ್ಕಿಗ ಚಿತ್ರಗುಪ್ತ.) ಆದರೆ ಹಣದ ಲೆಕ್ಕ ಪೈಸೆ- ರೂಪಾಯಿಯ ಮಾನಕ್ಕೇ ಇಂದು ಸೀಮಿತವಾಗಿದೆ. ಕಾರಣ ಹಣದ ಅಪಮೌಲ್ಯ, ಹಣದುಬ್ಬರ. ಪೂರ್ವದಲ್ಲಿ, ಇದಕ್ಕೂ ಬಹಳ ಸೂಕ್ಷ್ಮವಾದ ಹಣದ ಮಾನವಿತ್ತು. ಎಷ್ಟೆಂದರೆ, ಪೂರ್ಣ ಮಾನದ 1/1024 ರಷ್ಟು. ಸುಲಭವಾಗಿ ಅರ್ಥವಾಗುವ ಇಂಗ್ಲೀಷ್ ಭಾಷೆಯಲ್ಲಿ ಹೇಳುವುದಾರರೆ, milli-measurement. (1000^-1) ಇದು ನನಗೆ ಲಭ್ಯವಾಗಿದ್ದು ಭಾಸ್ಕರಾಚಾರ್ಯರ "ಲೀಲಾವತೀ" ಕೃತಿಯಲ್ಲಿ.



ಭಾರತ ಕಂಡ ಅಪ್ರತಿಮ ಮತ್ತು ಅದ್ಭುತ ಗಣುತಜ್ಞರು ಭಾಸ್ಕರಾಚಾರ್ಯರು. ಇಬರು ಬರೆದ ಗ್ರಂಥವೇ ಲೀಲಾವತಿ. ತಿಳಿದವರ ಪಾಲಿಗೆ ಇದೊಂದು ಅನವಶ್ಯಕ ವಿಚಾರ ನಿಜ. ಆದರೆ ತಿಳಿಯದವರಿಗೆ, ಭಾರತೀಯ ಪರಂಪರೆಯ ಬಗ್ಗೆ ಅದೊಂದು ರೀತಿಯ ತಾತ್ಸಾರ, ಅಥವಾ ಮಡಿವಂತಿಕೆ ಇರುವವರಿಗೆ ಅಥವಾ ವಿದೆಶದಿಂದಲೇ ಗಣಿತ ಬಂತು ಎನ್ನುವ ಮಹಾನ್ ತಿಳುವಳಿಕೆಯುಳ್ಳವರಿಗಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಮತ್ತೊಂದು ಸಂಗತಿ. ಭಾಸ್ಕರಾಚಾರ್ಯರು ಜೈನರಾಗಿದ್ದರು ಮತ್ತು ಲೀಲಾವತಿ ಸಂಸ್ಕೃತ ಭಾಷೆಯಲ್ಲಿರುವ ಗ್ರಂಥ.



ಲೀಲಾವತಿಯಲ್ಲಿ ಬರುವ ಮೊದಲ ವ್ಯಾಖ್ಯೆಯೇ ಹಣದ ಕುರಿತಾಗಿನದ್ದು. ಹಾಗಾಗಿ ಮೇಲಿನ ಪೀಠಿಕೆ ಹಾಕಿದೆ. ಭಾಸ್ಕರಾಚಾರ್ಯರ ಹಣದ ವ್ಯಾಖ್ಯೆ ಹೀಗಿದೆ.



ವರಾಟಕಾನಾಂ ದಶಕದ್ವಯಂ ಯತ್ ಸಾ ಕಾಕಿಣೀ ತಾಶ್ಚ ಪಣಶಚಸ್ತ್ರಃ|

ತೆ ಷೋಡಶ ದ್ರಮ್ಮ ಇಹಾವಾಗಮ್ಯೋ ದ್ರಮ್ಮೈಸ್ತಥಾ ಷೋಡಶಾಭಿಶ್ಚ ನಿಷ್ಕಃ||



ವರಾಟಕಗಳು ಇಪ್ಪತ್ತಾಗಲು ಕಾಕಿಣೀ, ಅದು ನಾಲ್ಕಾದಂತೆ ಪಣ

ಅಲ್ಲಿ ಮತ್ತೆ ಹದಿನಾರಾಗಲು ದ್ರಮ್ಮ, ಹೀಗಿರಲು ದ್ರಮ್ಮ ಹದಿನಾರಕ್ಕೆ ನಿಷ್ಕವು



ಸರಳವಾಗಿ ಆದರೆ ಉದ್ದವಾಗಿ ಬರೆಯುವುದಾದರೆ,



16 ವರಾಟಕಗಳು= 1 ಕಾಕಿಣೀ



4 ಕಾಕಿಣೀ= 1 ಪಣ



16 ಪಣ= 1 ನಿಷ್ಕ.



ನಿಷ್ಕವೆಂದರೆ ಒಂದು ಪೂರ್ಣ ಪ್ರಮಾಣದ ಧನಮಾನ ಎಂದಾಯಿತು. ಅಂದರೆ, ಈಗಿನ ಒಂದು ರೂಪಾಯಿಯಂತೆ.



ಈಗ ಮೇಲಿನ ಕೋಷ್ಠಕವನ್ನು ಬೇರೆ ರೀತಿ ನೋಡಿದರೆ,



1ನಿಷ್ಕ=16 ಪಣ=64 ಕಾಕಿಣೀ=1024 ವರಾಟಕಗಳು.



ಅಂದರೆ,



1 ಪಣ=1/16 ನಿಷ್ಕ



1 ಕಾಕಿಣೀ= 1/4 ಪಣ=1/64 ನಿಷ್ಕ



1ವರಾಟಕ=1/16 ಕಾಕಿಣೀ=1/64 ಪಣ=1/1024 ನಿಷ್ಕ.



ಇಂದಿಗೆ ನಮಗೆ ಸಿಗುವ ಹಣದ ಅತಿ ಸೂಕ್ಷ್ಮ ಮೌಲ್ಯ ಪೈಸೆ ಅಂದರೆ 1/100 ರೂಪಾಯಿ. ಆದರೆ ಅಂದು, 1/1024 ರ ತನಕ ಭಾಗಿಸಲಾಗಿತ್ತು, ಈಗ ಲಭ್ಯವಿರುವ ಮಾನದ ಹತ್ತು ಪಟ್ಟು ಹೆಚ್ಚು ಸೂಕ್ಷ್ಮವಾದ ಅಳತೆ. ಹಣದ ಮೌಲ್ಯ ಅಷ್ಟು ಸಣ್ಣ ಅಳತೆಗೆ ಸಿಗಬೇಕಿದ್ದರೆ, ಅಂದು ಹಣದ ಬೆಲೆ ಬಹಳವೇ ಇದ್ದಿರಬೇಕು. ಅಂದರೆ ಹಣದುಬ್ಬರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂದಿನ ಜನರ ಖರೀದಿ ಸಾಮರ್ಥ್ಯವೂ (Purchasing Power) ಬಹಳವಿತ್ತೇನೋ. ಅಂದರೆ ಅಂದಿನ ನಮ್ಮೆಲ್ಲರ ಭಾರತ ಅದೆಷ್ಟು ಶ್ರೀಮಂತವಾಗಿರಬೇಕು?! ಇಷ್ಟು ಬಡವಾದ್ದು ಯಾಕೆ? ಬಡವಾದ ಬೆನ್ನಿನಲ್ಲೇ, ಯಾರ್ಯಾರೋ ಬರೆದ ಥಿಯರಮ್ಮುಗಳು ಬಂದು ನಮ್ಮ ಮೂಲ ಸಿದ್ಧಾಂತಗಳನ್ನೇ ತಿಂದು ತೇಗಿ ನಮ್ಮ ಗಂಟಲಿಗೂ ತುರುಕಿದರಲ್ಲ. ನೀರಿಳಿಯದ ಗಂಟಲಲ್ಲಿ ಥಿಯರಮ್ಮುಗಳ ಕಡುಬು ಸಿಕ್ಕಿ ಕಸುಬಿಲ್ಲದಾಗಿ ಕಸುವೂ ಕಳೆದು ಉಸಿರು ಕಟ್ಟುತ್ತಿದೆಯಲ್ಲವೇ?



#ಲೀಲಾವತಿ






Thursday, June 20, 2019

ಮಾರಾಂಗು

ಮಾರಾಂಗು ಭಟ್ಟರು- ಇವರ ಬಗೆಗೆ ಹೀಗೆ ಹೇಳಿದರೆ ಮಾತ್ರ ಅವರ ಪರಿಚಯ ಇರುವವರಿಗೆ ಅರ್ಥವಾಗಲು ಸಾಧ್ಯ. ಅವರ ಸಿದ್ಧಿ ಪ್ರಸಿದ್ಧಿ ಎರಡೂ ಆ ಹೆಸರಿನಲ್ಲಿದೆ ಆ ಹೆಸರಿನಿಂದಲೇ ಇದೆ. ಇವರ ನಿಜವಾದ ಹೆಸರು ಮಾಡಳ್ಳಿ ರಾಮಚಂದ್ರ ಭಟ್ಟರು ಅಂತ. ಆದರೆ ಭಟ್ಟರನ್ನು ಶಾಲೆಗೆ ಸೇರಿಸುವಾಗ ಅವರ ಅಪ್ಪ ಒಂದು ತಪ್ಪು ಮಾಡಿ ಬಿಟ್ಟ. ಊರ ಹೆಸರಾದ ಮಾಡಳ್ಳಿಯನ್ನು ಹೆಸರಿನ ಹಿಂದಕ್ಕೂ, ತಮ್ಮ ಹೆಸರಾದ ಗುರುಪಾದ ಎನ್ನುವುದನ್ನು ಹೆಸರಿನ ಮುಂದಕ್ಕೂ ಸೇರಿಸಿಬಿಟ್ಟ. ಇಲ್ಲಾದ ಒಂದು ತಪ್ಪಿನ ಫಲವೋ, ಮಾರಾಂಗುವಿನ ತಾಯಿಯ ಭಾಗ್ಯವೋ ಅಥವಾ ರಾಮಚಂದ್ರನ ಹಣೆಬರಹವೋ ಗೊತ್ತಿಲ್ಲ. ಆತನ ಜೀವನದಲ್ಲಿ ತಪ್ಪಿನ ಮೇಲೆ ತಪ್ಪು ಘಟಿಸುತ್ತಾ, ಇನ್ನು ಕೆಲವು ತಪ್ಪುಗಳನ್ನು ಈ ಮಹಾನುಭಾವನೇ ಮಾಡುತ್ತಾ ಹೋದ. ಅಲ್ಲಿಗೆ ಅವನ ಹೆಸರಿನ ಸಂಕ್ಷಿಪ್ತ ರೂಪ ಅವನ ಪಾಲಿನ ಅನ್ವರ್ಥನಾಮವಾಗಿ ಹೋಯ್ತು. ಈ ಮಾರಾಂಗು ಭಟ್ಟನ ಪ್ರಕರಣ ಆತನ ಮನೆತನದ ಹಿನ್ನೆಲೆ ಹೇಳದಿದ್ದರೆ ಸೊಗಸಲ್ಲ.

ಮುತ್ತಜ್ಜ-ಅಜ್ಜ-ಅಪ್ಪ ಮೂವರೂ ಚೆನ್ನಾಗಿ ಕಾಸು ಮಾಡಿದ್ದರು. ಕಾಸು ಮಾಡಿದ್ದೇನೂ ಪೂರ್ವ ಕರ್ಮಗಳಾದ ಮದುವೆ ಮುಂಜಿ ಹೋಮ ಹವನಗಳಿಂದ ಅಲ್ಲ ಅಥವಾ ಅಪರ ಕರ್ಮದಿಂದಲೂ ಅಲ್ಲ. ಅಸಲಿಗೆ ಮೂವರೂ ಮಂತ್ರ ಕಲಿತವರೂ ಅಲ್ಲ. ಅವರಿವರ ಮನೆಗೆ ಮಾಟ ಮಾಡಿಸಿ, ಅಂಜನ ಹಾಕಿ ಕತೆ ಕಟ್ಟಿ, ಅಥವಾ ಯಾರದ್ದೋ ಮನೆಯ ದೈವ ಮುನಿದಿದೆ ಎಂದು ನಂಬಿಸಿ, ಅವರಿವರಿಂದ ಕಾಸು ಪಡೆದು ಯಾಮಾರಿಸಿಯೇ ದುಡ್ಡು ಮಾಡಿದ್ದು. ಆತನ ಅಜ್ಜಿ ಸತ್ತಾಗ ಅಥವಾ ಅಪ್ಪ ಸತ್ತಾಗ, ಯಾವುದೋ ಬೇಡದ ಮಾಟ ಮಂತ್ರ ಮಾಡಿದ್ದರ ಫಲ ಇದು ಅಂದುಕೊಂಡು ಜನ ಆಡಿಕೊಂಡಿದ್ದರು.

ಅದ್ಯಾವುದೋ ರೀತಿಯಲ್ಲಿ, ವಿಧಿ ಲೀಲೆ ಎನ್ನುವಂತೆ ಅಥವಾ ರಬೀಂದ್ರನಾಥ ಟ್ಯಾಗೋರರ ಭಾಷೆಯಲ್ಲಿ ಹೇಳುವುದಾದರೆ "By a mistake of angel of destiny" ಇವರ ಮನೆತನಕ್ಕೆ ಊರ ದೇವಸ್ಥಾನದ ಯಜಮಾನಿಕೆ ಬಂದುಬಿಟ್ಟಿತ್ತು, ಅದೂ ಆತನ ಮುತ್ತಜ್ಜನ ಕಾಲದಲ್ಲಿ. ಆತನ ಮುತ್ತಜ್ಜ ಒಬ್ಬನೇ ಮನೆತನದ ಗಂಡು ಸಂತಾನವಾದ್ದರಿಂದ ಇದು ಆಗಿದ್ದು ಎಂದು ಊರಲ್ಲಿನ ತಲೆ ಹಣ್ಣಾದವರ ಅಂಬೋಣ.ಊರ ಜನರಿಂದ ಇಂದಲ್ಲ ನಾಳೆ ತನ್ನ ಬುಡಕ್ಕೆ ಬಿಸಿನೀರು ತಾಗೀತು ಎಂದು ಮುಂದಾಲೋಚನೆ ಮಾಡಿದ್ದ ಮಾರಾಂಗು ಭಟ್ಟನ ಅಜ್ಜ ಊರ ಜನರಲ್ಲಿ ತನ್ನ ಬಾಲ ಬಡುಕರನ್ನೆಲ್ಲಾ ಒಟ್ಟಾಗಿಸಿ ಒಂದು ಸಮಿತಿ ಮಾಡಿಕೊಂಡಿದ್ದ

ಆದರೆ ಅದೇಕೋ ಏನೊ, ಮಾರಾಂಗು ಭಟ್ಟನ ತಾಯಿ ಬಂಗಾರಮ್ಮನಿಗೆ ದೇವಸ್ಥಾನದ ಯಜಮಾನಿಕೆಯ ಕಡೆ ಅಂಥಾ ಒಲವಿರಲಿಲ್ಲ. ಹಾಗಾಗಿ ಅದರ ಪೂಜಾ ಕೈಂಕರ್ಯಗಳನ್ನು ನೋಡುತ್ತಿದ್ದ ನರಹರಿ ಭಟ್ಟರು ಯಜಮಾನಿಕೆ ಕೈಗೆತ್ತಿಕೊಂಡಾಗ ಆಕೆ ಸುಮ್ಮನೇ ಇದ್ದಳು. ನರಹರಿ ಭಟ್ಟರ ಯಜಮಾನಿಕೆಯ ಕಾಲದಲ್ಲಿ ದೇವಸ್ಥಾನ ಒಳ್ಳೇ ಪ್ರಚಾರಕ್ಕೆ ಬಂತು. ಸ್ವಯಂ ದೈವ ಭಕ್ತರಾಗಿದ್ದ ನರಹರಿ ಭಟ್ಟರು, ದೇವಸ್ಥಾನದ ಅಷ್ಟ ಬಂಧ, ಜೀರ್ಣೋದ್ಧಾರಗಳನ್ನು ನಡೆಸಿ, ದೇವಸ್ಥಾನದ ಅಭಿವೃದ್ಧಿಯನ್ನೂ ಮಾಡಿಸಿ ದೇವಸ್ಥಾನಕ್ಕೆ ಬರಲು ಜನ ಸಂತೋಷಿಸುವಂತೆ ಮಾಡಿದ್ದರು. ಅಷ್ಟೇ ಅಲ್ಲ, ಊರ ಜನರ ಕಣ್ಣಿನಲ್ಲಿ ಗೌರವಾನ್ವಿತರೊ ಆಗಿದ್ದರು.

ಆದರೆ ಮಾರಾಂಗು ಭಟ್ಟನ ಮನೆತನಕ್ಕೆ ನಿಷ್ಠರಾಗಿದ್ದು ಆ ನಿಷ್ಟೆಯನ್ನೇ ದೈವಭಕ್ತಿ ಎಂದು ಬಿಂಬಿಸಿ, ಆರತಿ ತಟ್ಟೆ ದುಡ್ಡು, ಹುಂಡಿ ದುಡ್ಡು ಮತ್ತಿತರ ಖರ್ಚುಗಳಲ್ಲಿ ನಂಬರ್ ಟು ಲೆಕ್ಕ ತೋರಿಸಿ ಸ್ವಲ್ಪ ಕಾಸು-ಕವಡೆ ಸಂಪಾದಿಸಿದ್ದ ಜನಕ್ಕೀಗ ತಲೆಬಿಸಿ ಹತ್ತಿಕೊಂಡಿತು. ಯಾಕೆಂದರೆ ನರಹರಿ ಭಟ್ಟರು ಅವರನ್ನೆಲ್ಲಾ ಹೊರ ನೋಟಕ್ಕೆ ಚೆನ್ನಾಗಿಯೇ ಇಟ್ಟುಕೊಂಡು, ಜನರೆದುರಿನಲ್ಲಿ ಏನೂ ಹೇಳದೆ, ಅವರ ಕೈಗೆ ಯಾವ ಜವಾಬ್ದಾರಿಯೂ ಸಿಗದ ಹಾಗೆ ಮಾಡಿ ಬಿಟ್ಟಿದ್ದರು. ದೇವಸ್ಥಾನದ ವೈಭೋಗವನ್ನು ಕಂಡು ತಾನು ಅದರ ಯಜಮಾನಿಕೆ ವಹಿಸಿಕೊಳ್ಳದೆ ತಪ್ಪು ಮಾಡಿದೆ ಎಂದು ಕೊರಗುತ್ತಿದ್ದ ಬಂಗಾರಮ್ಮನಿಗೆ ಇವರು ಜೊತೆಯಾದರು. ಎಲ್ಲಾ ಸೇರಿ ಅರ್ಧಂಬರ್ಧ ಮಂತ್ರ ಗೊತ್ತಿದ್ದ ದೇವಯ್ಯ ಭಟ್ಟರನ್ನು ದೇವಸ್ಥಾನದ ಅರ್ಚಕ ಸ್ಥಾನಕ್ಕೆ ತಂದು ಕೂರಿಸಿ, ತಮ್ಮ ಯಜಮಾನಿಕೆ ನಡೆಸಿದ್ದರು.

ಆಮೇಲೆ ಬಿಡಿ. ಭೂರಿ ಭೋಜನ. ಆದರೆ, ದೇವರಿಗೆ ಇದು ಸಮ್ಮತವಿರಲಿಲ್ಲವೇನೋ. ದೇವಯ್ಯ ಭಟ್ಟರಿಗೂ-ಬಂಗಾರಮ್ಮ ಅಂಡ್ ಕಂಪನಿಗೂ ಆಗಿ ಬರಲಿಲ್ಲ. ದೇವಯ್ಯ ಭಟ್ಟರು ಗೇಟ್ ಪಾಸ್ ಪಡೆದರು. ಬಂಗಾರಮ್ಮ ಅಂಡ್ ಕಂಪನಿಯ ಬಗ್ಗೆ ಅರಿವಿದ್ದ ಊರಿನ ಜನ ಎಚ್ಚೆತ್ತು, ಪಕ್ಕದೂರಿನ ಯಜ್ಞ ಭಟ್ಟರನ್ನು ದೇವಸ್ಥಾನದ ಅರ್ಚಕ ವೃತ್ತಿ ಮಾಡಲು ಒಪ್ಪಿಸಿದರು. ದೇವಸ್ಥಾನ ಮತ್ತೆ ತನ್ನ ವೈಭೋಗದತ್ತ ಸಾಗುತ್ತಿತ್ತು. ಆದರೆ, ಅಷ್ಟರಲ್ಲಿ ಯಜ್ಞ ಭಟ್ಟರು ಹಾಸಿಗೆ ಹಿಡಿದರು. ಊರ ಜನಕ್ಕೂ ಐಟಿ ಬಿಟಿ ಕೆಲಸ, ಫಾರಿನ್ನು, ಮತ್ತೆ ಐಷಾರಾಮಿ ಬದುಕು ಮೂರೂ ಬಹಳ ಪ್ರಮುಖವಾಗಿ ಊರ ದೇವಳ ನಗಣ್ಯವಾಗಿಬಿಟ್ಟಿತ್ತು.

ಈಗ ಬಂಗಾರಮ್ಮ ಅಂಡ್ ಗ್ಯಾಂಗ್ ಪೀಲ್ಡಿಗೆ ಎಂಟ್ರಿ ಕೊಟ್ಟಿತು. ಮೊತ್ತ ಮೊದಲನೆಯದಾಗಿ, ಅರ್ಚಕ ಸ್ಥಾನಕ್ಕೆ ನರಹರಿ ಭಟ್ಟರ ಶಿಷ್ಯ, ಮೋಹನ ಭಟ್ಟರನ್ನು ತಂದಿತ್ತು. ಅಷ್ಟೇ ಅಲ್ಲ. ಮೋಹನ ಭಟ್ಟರೇ ಯಜಮಾನಿಕೆ ಮುಂದುವರೆಸಿಕೊಂಡು ಹೋಗುತ್ತಾರೆ. ತನ್ನದೇ ಗ್ಯಾಂಗಿನ ಅನೇಕರು ಅವರ ಜೊತೆಯಲ್ಲಿದ್ದು ಆದಳಿತ ಕೈಂಕರ್ಯಗಳನ್ನು ನೋಡಿಕೊಳ್ಳುತ್ತಾರೆತಾನಾಗಲೀ ತನ್ನ ಮಗನಾಗಲೀ ಈ ಎಲ್ಲ ವ್ಯವಹಾರಗಳಿಂದ ದೂರ ಉಳಿಯುವುದಾಗಿ ಬಂಗಾರಮ್ಮ ಬೊಂಬಡ ಹೊಡೆದಿದ್ದಳು. ಸಾಲದ್ದಕ್ಕೆ ಅವಳ ಗ್ಯಾಂಗ್ ಕೂಡಾ ಇದಕ್ಕೆ ಅಪಾರ ಪ್ರಚಾರ ಕೊಟ್ಟಿತ್ತು.

ಈ ಕಡೆ ಮೋಹನ ಭಟ್ಟರು, ಮಂತ್ರ ಹೇಳುವುದಕ್ಕೆ ಬಿಟ್ಟುಮತ್ಯಾವುದಕ್ಕೂ ಬಾಯಿ ತೆಗೆಯದ ಕಾರಣ, ಅವರು ಗುಮ್ಮಣ್ಣ ಭಟ್ಟರು ಎಂದೇ ಊರಿನಲ್ಲಿ ಖ್ಯಾತರಾದರು. ದೇವಸ್ಥಾನದ ಅದೆಷ್ಟೋ ಸೊತ್ತು ಬಂಗಾರಮ್ಮನ ಕೈವಾಡವಿಲ್ಲದೆ ಖಾಲಿಯಾಗಿತ್ತು, ಅವಳ ಗ್ಯಾಂಗಿನ ಕೆಲವರ ಕೈ ಚಳಕದಲ್ಲಿ. ಗುಮ್ಮಣ್ಣ ಭಟ್ಟರು ಆಗಲೂ ದಿವ್ಯ ಮೌನ ವಹಿಸಿದ್ದರು.ಆದರೆ ಆಗಾಗ, ಮಾರಾಂಗು ದೇವಸ್ಥಾನದ ಕಡೆ ಬರುತ್ತಿದ್ದ. ಅವನ ಭಕ್ತಿ, ತೇಜಸ್ಸು, ಓಜಸ್ಸು, ಇದೆಲ್ಲಾ ಅವನ ಕಡೆಯವರ ಬಾಯಿಯಲ್ಲಿ ಭಾರೀ ಪ್ರಚಾರಕ್ಕೆ ಬಿದ್ದಿತ್ತು.

ಆದರೆ ಈ ಮಾರಾಂಗುವೋ, ಪೆದ್ದರ ಪೆದ್ದನಾಗಿ ಕಾಲ ಕಳೆಯುತ್ತಿದ್ದ. ದೇವಸ್ಥಾನದ ಕೆರೆಯಲ್ಲಿನ ಮೀನುಗಳನ್ನು ಗುತ್ತಿಗೆ ಕೊಟ್ಟರೆ ಹೇಗೆ ಎಂದು ಇವ ಆಲೋಚಿಸಿ ಅದರ ಬಗೆಗೆ ಹಲುಬುತ್ತಿದ್ದರೆ, ಅದರ ರಿಪೇರಿ ಹೆಸರಲ್ಲಿ ಇವನ ಗ್ಯಾಂಗಿನವರು ಚೆನ್ನಾಗಿ ಕಾಸು ಮಾಡಿದ್ದರು. ಬೆನ್ನಿಗೇ ಬಂದಿದ್ದು ಮತ್ತೊಂದು. ಅದ್ಯಾರೋ ನಾನ್ ವೆಜ್ ಸ್ವಲ್ಪ ಕಾಸ್ಟ್ಲಿ ಎಂದರು, ಈ ಪುಣ್ಯಾತ್ಮ "ದೇವಸ್ಥಾನದಲ್ಲೂ ನಾನ್ ವೆಜ್ ಬಡಿಸಿದರೆ ಹೇಗೆ?' ಎಂದಿದ್ದ. ಇಷ್ಟಾಗುತ್ತಾ ಹತ್ತು ವರ್ಷ ಕಳೆದಿತ್ತು. ದೇವಸ್ಥಾನದಲ್ಲಿ ಭಕ್ತರ ದುಡ್ಡು ಹಗಲು ದರೋಡೆಯಾಗಿ ಖಾಲಿಯಾಗುತ್ತಾ ಬಂದಿತ್ತು. ಇದೆಲ್ಲಾ ಸುದ್ದಿ ಗೊತ್ತಾದ ಮೇಲೆ ಭಕ್ತರೂ ಬರುವುದನ್ನು ನಿಲ್ಲಿಸಿದ್ದರು. ಆದರೆ ಕಣ್ಣೆದುರೇ ಹಗಲು ದರೋಡೆ ನಡೆತ್ಯ್ವುದನ್ನು ಸುಮ್ಮನೆ ಸಹಿಸಿಯರಾದರೂ ಹೇಗೆ? ದೊಡ್ಡ ಮಟ್ಟದಲ್ಲಿ ಬಂಗಾರಮ್ಮ ಅಂಡ್ ಕಂಪನಿಗೆ ಏಟು ಹಾಕಲು ಸಿದ್ಧತೆಗಳಾಯ್ತು. ತನ್ನ ಮಗ ಮತ್ತು ತನ್ನ ಬಾಲಬಡುಕರ ಬಗ್ಗೆ ಚೆನ್ನಾಗಿ ಅರಿವಿದ್ದ ಬಂಗಾರಮ್ಮ ಸುಮ್ಮನೆ ಹಿಂದೆ ಸರಿದಳು. ಇಲ್ಲಿಂದ ಮಾರಾಂಗುವಿನ ರಾಂಗು ಮಾಡುವ ಕೈಂಕರ್ಯ ಜೋರಾಗಿಯೇ ಸಾಗಿತ್ತು. ಬಾಲಬಡುಕರಿಗೆ ತಿದ್ದುವ ಕಾಯಕ ಬೆನ್ನಿಗಂಟಿತ್ತು.

ಊರ ಜನ ದೇವಸ್ಥಾನದ ಅರ್ಚಕ ಸ್ಥಾನಕ್ಕೆ ಯಾರಾದೀತು ಎಂದು ಅಷ್ಟಮಂಗಲ ಪ್ರಶ್ನೆ ಇಡಿಸಿದ್ದರು. ಆ ಪ್ರಶ್ನೆಯಲ್ಲಿ ಬಂದ ಉತ್ತರ, ದೇವಸ್ಥಾನದ ಯಜಮಾನಿಕೆ ಮತ್ತು ಅರ್ಚಕತನ ಎರಡೂ ಒಂದೇ ಮನೆತನಕ್ಕೆ ಸೇರಬೇಕಾದ್ದು ಎಂದೂ ಮತ್ತೆ ಅದನ್ನು ತಲತಲಾಂತರದ ಹಿಂದೆ ಪಕ್ಕದೂರಿನ ಯಜ್ಞ ಭಟ್ಟರ ಮನೆತನಕ್ಕೆ ಇತ್ತೆನ್ನುವುದೂ ಗೊತ್ತಾಯಿತು. ಯಜ್ಞ ಭಟ್ಟರ ಮೊಮ್ಮಗನೇ ಆದ ಮಹೇಂದ್ರ, ಕಾಶಿ, ಕಾಂಚಿ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ ವೇದಾಭ್ಯಾಸ ಮಾಡಿದ್ದ. ಅವನೇ ದೇವಸ್ಥಾನದ ಅರ್ಚಕವೃತ್ತಿ ಕೈಗೊಂಡ. ದೇವಸ್ಥಾನದಲ್ಲಿ, ನಂಬಿಕಸ್ತರನ್ನು ಇಟ್ಟ. ದೇವಳದ ಗತ ವೈಭವ ಮರುಕಳಿಸುವ ಆಸೆ ಎಲ್ಲರಿಗೂ ಭದ್ರವಾಯಿತು.

ಮಹೇಂದ್ರ ಮಾಡಿದ ಮೊದಲ ಕೆಲಸ ಎಂದರೆ, ದೇವಸ್ಥಾನದಲ್ಲಿ ಬಿಟ್ಟಿ ಕೂಳು ತಿಂದು ಶಲ್ಯ ತಿರುಗಿಸುತ್ತಾ ಹಾರಾಟ ಮಾಡಿಕೊಂಡಿದ್ದ ಎಲ್ಲರಿಗೂ ಕೆಲಸ ಹಚ್ಚಿದ. ಕೆಲಸ ಮಾಡಲು ಸಾಧ್ಯವಿಲ್ಲದವರು ಜಾಗ ಬಿಟ್ಟರು. ಎಲ್ಲೆಲ್ಲೋ ಅಡಮಾನಕ್ಕೆ ಹೋಗಿದ್ದ ದೇವಸ್ಥಾನದ ಆಸ್ತಿಯನ್ನು ಬಿಡಿಸಲು ಮುಂದಾದ. ಆದರೆ ಇಷ್ಟರ ಮಧ್ಯದಲ್ಲಿ, ಒಂದು ಕಾಲದಲ್ಲಿ ದೇವಸ್ಥಾನದ ದುಡ್ಡು ಕದ್ದಿದ್ದ ಕೆಲವರ ಮನೆಯವರು ಬ್ಯಾಂಕಿಗೆ ಡೆಪಾಸಿಟ್ ಮಾಡಲು ಹೋಗಿ ನೋಡಿದರೆ ಕೈನಲ್ಲಿ ಕಳ್ಳನೋಟಿತ್ತು. ದೇವಸ್ಥಾನ್ದ ಕೆರೆಯ ಕೋಡಿಯ ನೀರು ದಿಕ್ಕು ಬದಲಿಸಿ ನೀರಿಲ್ಲದ ಬಡವರ ತೋಟಗಳ ಕಡೆ ಹರಿದಿತ್ತು. ಅವರೂ ಚೆನ್ನಾಗಿ ದೇಣಿಗೆ ಕೊಟ್ಟರು.

ಉರಿದು ಬಿದ್ದಿದ್ದ ಗ್ಯಾಂಗು, ಈಗ ದೇವಸ್ಥಾನದ ಪಕ್ಕದಲ್ಲಿದ್ದ ಜಾಫರ್ ಸಾಬರ ಮನೆಯವರನ್ನು ಎತ್ತಿಕಟ್ಟಲು ಹವಣಿಸಿತು. ಜಾಫರ್ ಸಾಬರು ಒಪ್ಪಲಿಲ್ಲ. ಆದರೆ ಅವರ ಮಕ್ಕಳು ಒಪ್ಪಿದ್ದರು. ಕೀಟಲೆ ಕಾಟ ತಡೆಯಲು ಸಾಧ್ಯವಾಗದಷ್ಟಿತ್ತು. ಅದೇನಾಯ್ತೋ ಏನೋ, ಒಂದು ದಿನ ರಾತ್ರೋ ರಾತ್ರಿ, ಜಾಫರ್ ಸಾಬರ ಮನೆಯ ಕಡೆಯಿಂದ "ಅಯ್ಯಯ್ಯೋ!! ಅಮ್ಮಮ್ಮಾ!!! ನಮ್ದೂ ಇನ್ನು ಇಂಗೆ ಮಾಡಾಕಿಲ್ಲ. ಮಾಫ್ ಮಾಡಿ" ಎನ್ನುವ ಚೀತ್ಕಾರ ಕೇಳಿಸುತ್ತಿತ್ತು. ಯಾರಾದರೂ ವಿಚಾರಿಸಿದರೆ ಜಾಫರ್ ಸಾಬರು," ಸತ್ಯಕ್ಕೆ ಹೇಳಿದ್ರೆ ನಮ್ದೂ ಮರ್ಯಾದೆಗೆ ಇರಾಕಿಲ್ಲ" ಎಂದು ಹೇಳಿ ಕೈ ಮುಗಿಯುತ್ತಿದ್ದರು.

ಇನ್ನು ಈ ಕಡೆ ಮಾರಾಂಗುವಿನ ಹುಚ್ಚಾಟಗಳಿಗೆ ಪಾರವೇ ಇರಲಿಲ್ಲ. ಒಮ್ಮೆ ಹೇಳಿದ್ದ, "ದೇವಸ್ಥಾನದ ತೋಟಕ್ಕೆ ಸಗಣಿ ಗೊಬ್ಬರ ಹಾಕಿ ಫಸಲು ಕಮ್ಮಿ ಆಗ್ತಿದ್ದು. ಸರಕಾರಿ ಗೊಬ್ರ ಹಾಕಕ್ಕು" ಅಂತ. ಪರಿಣಾಮ ಮೊದಲು ಹಾಕಿದ ಸರಕಾರಿ ಗೊಬ್ಬರದ ಲೆಕ್ಕ, ಆಗ ಸಿಕ್ಕಿದ ಫಸಲು ಎರಡರದ್ದೂ ಲೆಕ್ಕ ಹೊರಬಿದ್ದು ಮಾನ ಮರ್ಯಾದೆ ಕಳಕೊಂಡಿದ್ದ. ಇನ್ನೊಮ್ಮೆ ಹೇಳಿದ್ದ "ಮಹೇಂದ್ರ ವಾಲೆ ಆಡ್ತ" ಆಗಿದ್ದಿಷ್ಟೇ. ಓರ್ವ ಹಿರಿಯರು ಊರಿನಲ್ಲಿ ಬಸ್ಸಿಳಿದ ಮರುಕ್ಷಣ ಮಾರಾಂಗು ಕಂಡಿದ್ದ. ಅವನಲ್ಲಿ ಮಹೇಂದ್ರನ ಮನೆಯ ದಾರಿ ಕೇಳಿದ್ದರು. ಇವನೇನೋ ದಾರಿ ಹೇಳಿದ್ದ. ಜೊತೆಗೆ, "ಎಂತಕ್ಕೆ" ಎಂದಿದ್ದ. "ವಾಲೆ ಕೊಡದಿತ್ತು" ಎಂದರು. ಈ ಪುಣ್ಯಾತ್ಮ ಅದನ್ನು ಇಸ್ಪೀಟ್ ವಾಲೆ ಎಂದುಕೊಂಡು ಊರೆಲ್ಲಾ ಹಬ್ಬಿಸಿದ್ದ. ಆದರೆ, ಅದೇ ಹಿರಿಯರು ಊರಿಗೆ ಇನ್ನೊಮ್ಮೆ ಬಂದಾಗ ಸಮಝಾಯಿಷಿ ಕೊಟ್ಟು ಎಲ್ಲಾ ಸುಖಾಂತ್ಯವಾಗಿತ್ತು. ಹೀಗೆ ಮಾರಾಂಗುವಿನ ರಾಂಗು ಮಾಡುವ ಸರಣಿ ಮುಂದುವರೆದಿತ್ತು

ಇಷ್ಟರಲ್ಲಿ ಇವನಿಗೆ ಜೊತೆಯಾದವಳು, ಪದ್ಮಜಾ. ಅವಳ ಮನೆಯವರ ಪ್ರೀತಿಯ ಪದ್ದಿ. ಊರವರ ಬಾಯಲ್ಲಿ ಪೆದ್ದಿ ಅಂತ ಮೊದಲೇ ಖ್ಯಾತಳಾಗಿದ್ದಳು. ಪೆದ್ದಿ ಪೇಟೆ ಸೇರಿ ಹಿಂದಿ-ಇಂಗ್ಲೀಷ್ ಭಾಷೆ ಎಲ್ಲಾ ಕಲಿತಿದ್ದಳು. ನೋಡುವುದಕ್ಕೂ ಮೈ ಕೈ ತುಂಬಿಕೊಂಡು ಬಹಳ ಸುಂದರವಾಗಿದ್ದಳು. ಅವಳ ಸೌಂದರ್ಯಕ್ಕೆ ಮಾರಾಂಗು ಮರುಳಾದನೋ ಅಥವಾ ಅವಳ ಭಾಷೆಗೆ ಬಿದ್ದನೋ ಗೊತ್ತಿಲ್ಲ. ಆದರೆ ಮತ್ತೊಂದು ರಾಂಗು ಮಾಡಿದ್ದ.ಇವರಿಬ್ಬರ ಜೋಡಿ ನೋಡಿ ಅನೇಕರು ಹೇಳಿದ್ದರು. "ಇವೆರಡೂ ಒಟ್ಟಾಗಿದ್ದು ಭಾರಿ ಚನಾಗಾಯ್ದು. ಇಲ್ದಿದ್ರೆ ಇವಂಗೆ ಹಬ್ಬ ಇರ್ಲೆ. ಅವಳಿಗೆ ಮದ್ವೆ ಇರ್ಲೆ". ಈ ಜೋಡಿಯನ್ನು ಎಳೆಯ ಮಕ್ಕಳಂತೂ "ಛೋಟಾ ಭೀಮ್-ಚುಟ್ಕಿ" ಅಂತ ಕರೆದು ಮಜಾ ತೆಗೆದುಕೊಂಡಿದ್ದರು. ಆದರೆ ಮಾರಾಂಗು ಮಹೇಂದ್ರನ ಮರ್ಯಾದೆ ತೆಗೆಯುವ ತನ್ಮೂಲಕ ದೇವಳವನ್ನು ಮತ್ತೆ ತನ್ನ ಕೈಗೆ ತೆಗೆದುಕೊಳ್ಳುವ ಆಸೆ ಈಡೇರದೆ ಚಡಪಡಿಸುತ್ತಿದ್ದ. ಇತ್ತ ಮಹೇಂದ್ರ ದೇವಸ್ಥಾನದ ವಿಮಾನ ಗೋಪುರದ ಕೆಲಸ ಮಾಡಿಸಲು ಮುಂದಾದ.

ಆಗ ಪೆದ್ದಿ ಪ್ರಿಯಕರನಿಗೊಂದು ಉಪಾಯ ಹೇಳಿಕೊಟ್ಟಳು. "ಆವಾಗ ನಿಂಗ ಅದೆಂತದೋ ಗೋಪುರದ ಕೆಲಸ ಮಾಡಸ್ತಿ ಹೇಳಿದ್ರಲ, ಈಗ ಇವ ಹೇಳದು ಅದಕ್ಕಿಂತ ಜಾಸ್ತಿ ಖರ್ಚಾಗ್ತು. ಇದನ್ನೇ ದೊಡ್ಡ ಮಾಡು. " ಎಂದಿದ್ದಳು.

ನಂಬಿದ ಮಾರಾಂಗು ಊರೆಲ್ಲಾ ಚೀರತೊಡಗಿದ್ದ. "ಮಹೇಂದ್ರ ದೇವಸ್ಥಾನದ ವಿಮಾನ ಗೋಪುರದ ಹೆಸರಲ್ಲಿ ದುಡ್ಡು ಹೊಡದ್ದ. ಯಂಗ ಕಮಿಟಿಲಿ ಇದ್ದಾಗ ಲೆಕ್ಕ ಹಾಕಿದ್ದಕ್ಕಿಂತ ಡಬಲ್ ಖರ್ಚಾಗ್ತಾ ಇದ್ದು. ಅಂವ ಆನಂದಾಚಾರಿ ಜೊತಿಗೆ ಸೇರ್ಕಂಡು ಇದೆಲ್ಲ ಮಾಡ್ತಾ ಇದ್ದ" ಆದರೆ ಮಹೇಂದ್ರ ಉತ್ತರಿಸಿದ್ದ. ಖರ್ಚು ಜಾಸ್ತಿ ಆಗಿದ್ದು ಹೌದು. ಎಂತಕ್ಕೆ ಅಂದ್ರೆ ಮುಂಚೆ ಸಿಮೆಂಟ್ ಗೋಪುರ ಮಾಡಿಸ ಯೋಚನೆ ಇತ್ತು. ಈಗ ಮಾಡಿಸದು ಬಂಗಾರದ ಗೋಪುರ" ಜನ ಆತನ ಮೇಲೆ ವಿಶ್ವಾಸ ಇಟ್ಟಿದ್ದರು. ಆನಂದಾಚಾರಿಯೂ ಹೇಳಿದ್ದ. " ನಂಗೆ ಮರದ್ದು ಕಬ್ಬಿಣದ್ದು ಕೆಲಸ ಬತ್ತೇ, ಬಂಗಾರದ್ದು ಆತ್ಲ ಕಾಣಿ"

ಆದರೆ ಮಾರಾಂಗುವಿನ ಬಾಯಿ ಬಂದ್ ಆಗಲೇ ಇಲ್ಲ. ಇದಕ್ಕೆ ಪೆದ್ದಿಯೂ ಚೆನ್ನಾಗಿ ತುಪ್ಪ ಹೊಯ್ದಳು. ಆನು ಇದನ್ನ ಪ್ಯಾಟೆ ಕೋರ್ಟಿಗೆ ಹೋಗಿ ಎಲ್ಲಾ ಸರಿ ಮಾಡ್ಕ ಬತ್ತಿ ನೀ ಹೆದರಡ ಅಂದಳು. ಇವನೂ ಗೋಣಾಡಿಸಿದ್ದ. ಅವನಿಂದ ದುಡ್ಡು ತೆಗೆದುಕೊಂಡ ಪೆದ್ದಿ ಬೆಂಗಳೂರಿಗೆ ಬಂದಳು. ಕೆಲಸದ ಪ್ರಗತಿಯನ್ನು ಮಾರಾಂಗುವಿಗೆ ತಿಳಿಸಿ ಆಗಾಗ ಖರ್ಚಿಗೆ ದುಡ್ಡು ತೆಗೆಯುತ್ತಿದ್ದಳು. ಈ ಪುಣ್ಯಾತ್ಮ ಕೊಡುತ್ತಲೇ ಹೋದ. ಅವಳು ಪಡೆಯುತ್ತಲೇ ಹೋದಳು. ಮಾರಾಂಗು ಊರೆಲ್ಲಾ ಹೇಳಿಕೊಳ್ಳುತ್ತಲೇ ಇದ್ದ, "ಮಹೇಂದ್ರ ಕಳ್ಳ; ಹಸೀ ಕಳ್ಳ".ಇದು ಆತ ಮಾಡಿದ ಮತ್ತೊಂದು ರಾಂಗು-ಅಂದರೆ ತಪ್ಪು

ಮಧ್ಯೆ ಹಿರಿ ಹೆಂಗಸು ರಾಜಮ್ಮ ಮಾರಾಂಗುವನ್ನು ಅಡ್ಡಗಟ್ಟಿ ಕೇಳಿದ್ದಳು. "ಮಹೇಂದ್ರಂಗೆ ಅಷ್ಟೆಲ್ಲಾ ಮಂತ್ರ ಬತ್ತು. ನಿಂಗೆಂತ ಸುಡುಗಾಡು ಗೊತ್ತಿದ್ದು? ಅವನ್ನ ಬೈತ್ಯೇಲ". ಮಾರಾಂಗು ರೊಚ್ಚಿಗೆದ್ದು ಹೇಳ್ತಿ ನೋಡು ರುದ್ರ ಅಂತ ಶುರು ಮಾಡಿದ್ದ-"ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಮ್- ನಿರ್ಮಲ ಭಾಸಿತ ಶೋಭಿತ ಲಿಂಗಂ" ರಾಜಮ್ಮಜ್ಜಿ-" ದಡ್ಡ ಮುಂಡೇ ಗಂಡ!! ಅದು ಲಿಂಗಾಷ್ಟಕ " . ಇದು ಆತ ಮಾಡಿದ ಮತ್ತೊಂದು ರಾಂಗು-ಅಂದರೆ ತಪ್ಪು.ಎಂದು ಉಗಿದು ತಿದ್ದಿದ್ದಳು. ಇವನ ಬಾಲಬಡುಕರೆಲ್ಲ, "ಈಶ್ವರಂಗೆ ಸಂಬಂಧ ಪಟ್ಟಿದ್ದು ಅಂದ ಮೇಲಾತು. ಅದು ರುದ್ರಕ್ಕೆ ಸಮ" ಎಂದು ವಾದಿಸಿದ್ದರು.

ಈ ಕಡೆ ದೇವಸ್ಥಾನದ ಕೆಲಸವಾಯಿತು. ಬಂಗಾರದ ಗೋಪುರವೂ ಕಂಗೊಳಿಸಿತು. ಜನರೂ ಸಂತೋಷಿಸಿದ್ದರು. ಒಂದು ವಾರದ ಭರ್ಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮರುದಿನ, ಪೋಸ್ಟಿನಲ್ಲಿ ಬ್ಯಾಂಕಿನ ಸಾಲ ತೀರಿಸುವ ನೋಟೀಸ್ ಬಂದಿತ್ತು ಬಂಗಾರಮ್ಮನ ಮನೆಗೆ. ಅದರ ಬೆನ್ನಿಗೇ ಪೆದ್ದಿ ಒಂದು ಕಾರಿನಿಂದ ಬಂದು ಇಳಿದಿದ್ದಳು. ಬಂಗಾರಮ್ಮನಿಗೆ ಎಲ್ಲವೂ ತಿಳಿದಿತ್ತು. ಮರ್ಯಾದೆ ಉಳಿಸಿಕೊಳ್ಳಲಿಕ್ಕೆ ಯಾರದ್ದೋ ಮನೆಯಿಂದ ಅವಳ ಗಂಡ ದೇಬಿಕೊಂಡು ಬಂದಿದ್ದ ಕಾಸಿನ ಸರ ಮಾರಿ ಬ್ಯಾಂಕಿನ ಸಾಲ ತೀರಿಸಿದ್ದಳು. ಮಾರಾಂಗುವಿನ ಉತ್ತಮ ಭವಿಷ್ಯಕ್ಕಾಗಿ ಪೆದ್ದಿಯ ಬಳಿ ಮನೆಯ ಮೆಟ್ಟಿಲು ಹತ್ತದಂತೆ ತಾಕೀತು ಮಾಡಿದ್ದಳು.

ಮಹೇಂದ್ರನನ್ನು ಕಳ್ಳ ಕಳ್ಳ ಎಂದು ಕರೆದು ಅದನ್ನು ಸಾಧಿಸ ಹೊರಟಿದ್ದ ಮಾರಾಂಗುವಿಗೆ ಮಾತ್ರ ಪದ್ದಿ ತನ್ನ ಮನೆಯಲ್ಲಿ ಕದ್ದಿದ್ದು ತಿಳಿಯಲಿಲ್ಲ. ಊರವರೆಲ್ಲ ಇವಳು ಪೆದ್ದಿಯೋ ಆತ ಮಹಾ ಪೆದ್ದನೋ ಎನ್ನುವ ಚರ್ಚೆಯಲ್ಲಿ ಬಿಜಿಯಾದರು.ಒಳಗೊಳಗೇ ಆಕೆ ಪೆದ್ದಿಯೋ ಅಥವಾ ಆಕೆಯನ್ನು ಹಾಗೆಂದುಕೊಂಡ ತಾವು ಪೆದ್ದರೋ ಎನ್ನುವ ಸಂಶಯವೂ ಮನೆಮಾಡಿತ್ತು. ಮಾರಾಂಗುವಿನ ಮನೆತನದ ಪರ ವಹಿಸಿದ್ದ ಕಳ್ಳರು, "ಅಬ್ಬಾ ಪೆದ್ದಿಯ ಧೈರ್ಯವೇ?! ತಮ್ಮ ಜೀವಮಾನದಲ್ಲಿ ಮಾಡುವುದು ಬಿಡಿ ಯೊಚಿಸಲೂ ಸಾಧ್ಯವಿಲ್ಲದ್ದನ್ನು ಮಾಡಿದಳಲ್ಲಾ ಘಾಟಿ!! ಎಂದು ಮಾತಾಡಿಕೊಂಡರು. ಮಾರಾಂಗುವಿಗೆ ಆ ಹೆಸರು ಖಾಯಮ್ ಆಗುವುದು ನಿಕ್ಕಿಯಾಗಿತ್ತು.

ಇದೊಂದು ಕಾಲ್ಪನಿಕ ಕತೆಯಷ್ಟೇ.

Thursday, June 13, 2019

ಪೃಥು: ರಾಜೇಂದ್ರ-ನರೇಂದ್ರ

ದ್ಯ ನಡೆದ ಲೋಕಸಭಾ ಚುನಾವಣೆ, ಚುನಾವಣಾ ಪೂರ್ವದಲ್ಲಿ ಕೆಲವರಾಡಿದ ಮಾತುಗಳು, ನೌಟಂಕಿಗಳು ಮತ್ತು ಚುನಾವಣಾ ಫಲಿತಾಂಶ. ಚುನಾವಣೆಗೂ ಕೆಲವೇ ದಿನ ಮೊದಲು ಗೆಳೆಯನೊಬ್ಬ ಮಾತಾಡುತ್ತಾ ಹೇಳಿದ್ದ. ನಮಗೀಗ ಬೇಕಾದ ನಾಯಕ ಪೃಥುವಿನಂಥವನು ಎಂದು. ನನಗೂ ಅದು ನಿಜವೆನ್ನಿಸಿತ್ತು. ಆಗ ನಾನೂ ಹೇಳಿದ್ದೆ. ""ಪೃಥುವಿನ ಬದುಕಿನ ಪೂರ್ವಾರ್ಧದ ಕೆಲಸಗಳೇ ಈಗ ಆಗುತ್ತಿದೆ. ಅರಾಜಕತೆಯಿಂದ ಬದುಕಿನ ಭರವಸೆ ಕಳೆದುಕೊಂದವರಿಗೆ ಭರವಸೆ ಮೂಡುತ್ತಿದೆ. ಅನಾಗರೀಕ ಬದುಕನ್ನು ಬದುಕುತ್ತಾ ಸಜ್ಜನರಿಗೆ, ಧರ್ಮಿಗಳಿಗೆ ಪೀಡೆ ಕೊಡುವವರು ನಿಧಾನವಾಗಿ ಕಾಡಿಗಷ್ಟೇ ತಮ್ಮ ಬದುಕನ್ನು ಸೀಮಿತಗೊಳಿಸುತ್ತಿದ್ದಾರೆ. ಇನ್ನೂ ಉಳಿದ ಕಾರ್ಯಗಲಾಗಬೇಕಿದೆ ಅಷ್ಟೇ.'' ಆದರೆ ಈಗ ನೋಡಿದರೆ ಪೃಥುವಿನ ಬದುಕಿನ ಮಧ್ಯಮ ಭಾಗದ ವಿಚಾರಕ್ಕೂ ಇಲ್ಲಿ ಹೋಲಿಕೆ ಇದೆ.

ಪೃಥುವಿನಂಥವರ ಬದುಕೇ ಹಾಗೆ.ಸದಾ ಕಾಲಕ್ಕೂ ಪ್ರಸ್ತುತವಾಗಿ ಮತ್ತು ಗೌರವಾನಿವಿತರಾಗಿ ಆದರ್ಶವೇ ಮೈದಳೆದ ವ್ಯಕ್ತಿಗಳಾಅಗಿ ಕಾಣುತ್ತಾರೆ. ಅವರು ಚರಿತ್ರೆಯಲ್ಲಿ ಕಂಡು ಬರುವ ಪಾತ್ರಗಳಾಗಿ ಉಳಿಯದೆ ಮಹತ್ವಿಕೆಯ ದ್ಯೋತಕವಾಗಿ, ಅನುಸರಿಸಬೇಕಾದ ಆದರ್ಶಗಳಾಗಿ, ಸದಾ ಕಾಲಕ್ಕೂ ಸಾಧಕರಾಗಿ ಳಿಯುತ್ತಾರೆ. ಇವರ ಬದುಕಿನಲ್ಲಿ ಕೊಂಕುಗಳಿದ್ದರೂ ಅವೆಲ್ಲ ಇವರ ಸಾಧನೆಯ ಅಡಿಪಾಯಗಳಾಗಿ ಇರುತ್ತವೆ ಅಥವಾ ಅಂಥವರ ಸಾಧನೆಯ ಸೋಪಾನಗಳಾಗಿರುತ್ತವೆ.

ವೇನನಂಥ ದುಷ್ಟನ ದೇಹದಿಂದ ಜನಿಸದ್ದ ಪೃಥು. ಆತ ಹುಟ್ಟಿದಾಗ ಸೂತ ಮಾಗಧರು ಆತನನ್ನು ಕುರಿತಾಗಿ ಕಲ್ಪಿಸಿ ಹೊಗಳಿದ್ದನ್ನೇ ತನ್ನ ಆದರ್ಶಗಳಾಗಿ ಬೆಳೆಸಿಕೊಂಡ ಪೃಥು, ಬರಡು ಭೂಮಿಯನ್ನು ಮತ್ತೆ ಹಸಿರಾಗಿಸಿದ್ದ. ಅದೇ ಕಾರಣದಿಂದ ಭೂಮಿ ಪೃಥಿವೀ ಎನ್ನಿಸಿಕೊಂಡಳು. ಅರಾಜಕತೆ ಉಂಟಾಗಿ, ಅಧರ್ಮ ತಾಂಡವವಾಡುತ್ತಿದ್ದ ಸಮಯದಲ್ಲಿ ಸಮರ್ಥ ರಾಜನಾಗಿ ನಿಂತು ಜನರಿಗೆ ಭರವಸೆಯನ್ನು ಮೂಡಿಸಿದ್ದ ಪೃಥು. ವೇನನ ಬದುಕು, ಆತನ ಸಾವು, ನಿಷೀಧನ ಜನನ, ಪೃಥುವಿನ ಜನ್ಮ, ಆತ ಪೃಥಿವಿಯ ಸಂಪತ್ತನ್ನು ಪುನಃಸೃಜಿಸಿದ್ದರ ಕುರಿತಾಗಿ ಹಿಂದೆ, ಬಹುಷಃ ಒಂದು ವರ್ಷಕ್ಕೂ ಮೊದಲಿನ ಲೇಖನಗಳಲ್ಲಿ ಬರೆದಿದ್ದೆ. ಮತ್ತೆ ಪುನರುಲ್ಲೇಖದ ಹೆಸರಿನಲ್ಲಿ ಅದರ ಕುರಿತು ಉದ್ದುದ್ದವಾಗಿ ಬರೆಯುವುದಿಲ್ಲ. ಪ್ರುಥುವಿನ ಬದುಕಿನ ಮಧ್ಯಮ ಭಾಗದ ವಿಚಾರವನ್ನು ನಿಮ್ಮ ಮುಂದಿಡುತ್ತೇನೆ.

ಪೃಥು ಕೇವಲ ಭೂಮಿಯ ಸಂಪತ್ತುಗಳನ್ನು ಪುನಃಸೃಜಿಸಿದ್ದಲ್ಲ. ಉತ್ತಮವಾದ ಸಮಾಜವನ್ನೂ ಧಾರ್ಮಿಕರಿಗೆ ಜೀವನಯೋಗ್ಯವಾದ ಸಾಮ್ರಾಜ್ಯವನ್ನೂ ಕಟ್ಟಿದ. ಎಷ್ಟೇ ಬೆಳೆದರೂ ಮಾರ್ಗದರ್ಶನಕ್ಕಾಗಿ ಸಮರ್ಥ ಗುರುವಿನ ಅವಶ್ಯಕತೆಯಿದೆ ಎಂದು ಆತ ತಿಳಿದಿದ್ದ. ಬೃಹಸ್ಪತಿಗೆ ಸರಿಸಮಾನವಾಗಿದ್ದ ಶುಕ್ರನನ್ನೇ ತನ್ನ ಗುರುವಾಗಿ ವರಿಸಿದ. ಶುಕ್ರಾಚಾರ್ಯರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ,ಆತನ ಜನ್ಮಕ್ಕೂ ಮೊದಲಿದ್ದ ಅರಾಜಕತೆಯ ಪರಿಣಾಮದಿಂದಾಗಿ ಪುರ-ಗ್ರಾಮ-ಮಂಡಲ ಮೊದಲಾದ ವ್ಯವಸ್ಥೆಗಳೇ ಮಾಯವಾಗಿ ಹೋಗಿದ್ದವು. ಜನರು ಅಲೆಮಾರಿಗಳಂತೆ ಕಂಡ ಕಂಡಲ್ಲಿ ಬದುಕುತ್ತಿದ್ದರು. ಪ್ರುಥು ಈ ವ್ಯವಸ್ಥೆಯನ್ನು ಪುನಃ ಪ್ರತಿಷ್ಠಾಪಿಸಿದ. ಸಜ್ಜೀವನಕ್ಕೆ ತೊಂದರೆಯಾಗಿದ್ದ ನಿಷಾಧ, ಅಸುರ ದೈತ್ಯ ದಾನವ ಕಾಲಕೇಯರಲ್ಲಿ ಎದುರು ಸಿಕ್ಕ ಕೆಲವರು ಪೃಥುವಿನಿಂದ ಹತರಾದರು. ಕೆಲವರು ಇನ್ನು ತಾವು ಮೊದಲಿನಂತಿದ್ದರೆ ಉಳಿಗಾಲವಿಲ್ಲ ಎಂದರಿತು ಬದಲಾದರು. ಹೆದರಿದ್ದ ಕೆಲವರು ಮೂಲೆ ಸೇರಿದರು. ಇನ್ನು ಕೆಲವರು ಆಷಾಢಭೂತಿಗಳು, ತಕ್ಕ ಅವಕಾಶಕ್ಕಾಗಿ ಕಾಯ್ದು ಕುಳಿತಿದ್ದರು.

ಸುವ್ಯವಸ್ಥಿತ ಬದುಕನ್ನು ತನ್ನ ಪ್ರಜೆಗಳಿಗೆ ಕಟ್ಟಿಕೊಟ್ಟ ನಂತರ ಪೃಥು, ಜ್ಯೋತಿಷ್ಟೋಮ, ಸೋಮಯಾಗ, ರಾಜಸೂಯ, ಹೀಗೆ ಮಹತ್ತರ ಯಜ್ಞ ಯಾಗಗಳನ್ನು ಕೈಗೊಂಡ. ಎಲ್ಲಾ ಯಾಗಗಳನ್ನು ಮುಗಿಸಿದ ನಂತರ ಋಷಿಗಳ ಸೂಚನೆಯಂತೆ ಬ್ರಹ್ಮಾವರ್ತದಲ್ಲಿ (ಸರಸ್ವತೀ ನದಿ ಮತ್ತು ದೃಷದ್ವತೀ ನದಿಗಳ ನಡುವಿನ ಪ್ರದೇಶ) ಅಶ್ವಮೇಧಕ್ಕೆ ಮುಂದಾದ. ಒಂದಾದ ಮೇಲೊಂದು ತೊಂಭತ್ತೊಂಭತ್ತು ಅಶ್ವಮೇಧಗಳನ್ನು ಮಾಡಿದ.

ಅಷ್ಟೂ ದಿನಗಳ ಕಾಲ ಪೃಥುವಿನ ಯಜ್ಞದ ಹವಿಸ್ಸನ್ನು ಪಡೆದು ತೃಪ್ತನಾಗಿದ್ದ ಇಂದ್ರನಿಗೆ ಈಗ ಹೊಟ್ಟೆ ಉರಿ ಶುರುವಾಗಿತ್ತು. ಪೃಥುವೇನಾದರೂ ನೂರು ಅಶ್ವಮೇಧಗಳನ್ನು ಪೂರೈಸಿದ್ದೇ ಆದರೆ ಶತಕ್ರತು ಎಂದು ತಾನು ಪಡೆದಿರುವ ಹೆಸರಿಗೆ ಕಳಂಕ ಬರುವುದು ಖಚಿತ. ತಾನೊಬ್ಬನೇ ಶಕ್ರನಾಗಿ ಉಳಿಯುವುದಿಲ್ಲ. ಮುಂದೊಂದು ದಿನ ಪೃಥು ಕೂಡಾ ನಾಕಲೋಕದ ಅಧಿಪತಿಯಾದರೆ? ಎಂಬೆಲ್ಲಾ ಆತಂಕಕ್ಕೆ ಒಳಗಾಗಿ ಪೃಥುವಿನ ಅಶ್ವಮೇಧವನ್ನು ನಿಲ್ಲಿಸಲು ತೀರ್ಮಾನಿಸಿದ.

ಸ್ವಯಂ ಯೋಗ್ಯತೆಯಿಂದ ಪದವಿಯನ್ನು ಪಡೆದು, ಸುಧರ್ಮಾಸನದಲ್ಲಿ ಮಂಡಿಸಿದ್ದರೆ ಬಹುಷಃ ಇಂದ್ರ ಹಾಗಾಗುತ್ತಿರಲಿಲ್ಲವೇನೋ. ಆದರೆ, ಇಂದ್ರಿಯ ಭೋಗವನ್ನೇ ಬಹುವಾಗಿ ಬಯಸಿದ್ದ ಪುರಂದರನ ಉರ ಉರಿದಿದ್ದು ಹೆಚ್ಚೇನಲ್ಲ ಬಿಡಿ. ಅಶ್ವಮೇಧವನ್ನು ನಿಲ್ಲಿಸಲು ಉಪಾಯವನ್ನು ಯೋಚಿಸಿದ ಇಂದ್ರ. ಅಶ್ವಮೇಧ ನಡೆಯಬೇಕಿದ್ದರೆ, ಯಜ್ಞದ ಕುದುರೆ ಮುಂದಾಗಬೇಕು. ಕುದುರೆಯೇ ಇರದಿದ್ದರೆ? ಯಾಗವೇ ನಡೆಯುವುದಿಲ್ಲ. ಪೃಥು ನೂರು ಅಶ್ವಮೇಧಗಳನ್ನು ಮಾಡುವುದಿಲ್ಲ. ಹಾಗಾಗಿ ಕುದುರೆಯನ್ನೇ ಕದಿಯುವ ಹೂಟ ಮಾಡಿದ ಇಂದ್ರ.

ಒಮ್ಮೆ ಭಸ್ಮಧಾರಿಯಾಗಿ ಬಂದ ಇಂದ್ರ ಕುದುರೆಯನ್ನು ಕದ್ದು ಓಡಿಹೋದ. ಆದರೆ ಬ್ರಹ್ಮದರ್ಶನವನ್ನೇ ಮಾಡಿದ್ದ ಅತ್ರಿ ಮುನಿಗಳು ಇಂದ್ರನನ್ನು ಗುರುತು ಹಿಡಿದರು. ಪೃಥುವಿನ ಮಗ ವಿಜಿತಾಶ್ವನಲ್ಲಿ ಕುದುರೆಯನ್ನು ತಿರುಗಿ ತರುವಂತೆ ಹೇಳಿದರು. ವೀರಾವೇಶದಿಂದ ಮುಂದಾಗುತ್ತಿದ್ದ ವಿಜಿತಾಶ್ವನನ್ನು ನೋಡಿ ವೇಷಧಾರಿ ಇಂದ್ರ ಹೆದರಿದ. ಕುದುರೆಯನ್ನು ಬಿಟ್ಟು, ತನ್ನ ವೇಷವನ್ನು ಕಳಚಿ ಓಡಿಹೋದ. ಮತ್ತೊಮ್ಮೆ ದಿಗಂಬರನಾಗಿ ಬಂದ. ಆಗಲೂ ವಿಜಿತಾಶ್ವ ಬೆನ್ನಟ್ಟಿದ. ಇಂದ್ರ ಮತ್ತೆ ತನ್ನ ವೇಷ ಕಳಚಿ ಕುದುರೆಯನ್ನು ಬಿಟ್ಟು ಪಲಾಯನ ಮಾಡಿದ. ಮತ್ತೊಮ್ಮೆ ಕಾಪಾಲಿಕನಾಗಿ ಬಂದ. ಆಗಲೂ ವಿಜಿತಾಶ್ವ ಬೆನ್ನಟ್ಟಿದ. ಕಾಪಾಲಿಕನಂತೆ ತೋರುತ್ತಿದ್ದ ಇಂದ್ರನ ಮೇಲಲ್ಲದಿದ್ದರೂ ಕಾಪಾಲಿಕ ಪಂಥದ ಮೇಲಿನ ಗೌರವದಿಂದ ವಿಜಿತಾಶ್ವ ಬಾಣ ಪ್ರಯೋಗಿಸಲಿಲ್ಲ. ಆದರೆ ಅತ್ರಿ ಮುನಿಗಳು, ""ಕಾಪಾಲಿಕ ವೇಷಧಾರಿಯ ಮೇಲೆ ಕರುಣೆ ಸಲ್ಲ. ನೀನವನ ಮೇಲೆ ಬಾಣ ಪ್ರಯೋಗಿಸುವುದು ಉಚಿತ. ತಪ್ಪೇನೂ ಇಲ್ಲ.'' ಎಂದರು. ವಿಜಿತಾಶ್ವನ ಬಾಣ ಬಿಲ್ಲಿನಿಂದ ಹೊರಡುತ್ತಲೇ ಹೆದರಿದ್ದ ಇಂದ್ರ ಮತ್ತೆ ಕುದುರೆಯನ್ನು ಬಿಟ್ಟು, ತನ್ನ ವೇಷವನ್ನು ಕಳಚಿ ಓಡಿಹೋದ. ಇಂದ್ರ ಧರಿಸಿ ತ್ಯಜಿಸಿದ ಈ ವೇಷಗಳೆಲ್ಲವೂ ಪಾಪದ ಉದ್ದೇಶದಿಂದ ಕೂಡಿದ್ದರಿಂದ,ಪಾಪದ ಭಾಗಗಳೆನ್ನಿಸಿಕೊಂಡು, ಈ ವೇಷಗಳು ಪಾಖಂಡವೇಷಗಳೆನ್ನಿಸಿಕೊಂಡವು. ಪಾಷಂಡವಾದಕ್ಕೆ ಬಳಕೆಯಾದವು. ನೋಡಿ ಬೇಕಾದರೆ, ಇಂದಿಗೂ ಜನರನ್ನು ಮೋಸಗೊಳಿಸುವುದು, ಇಂಥಾ ವೇಷಗಳನ್ನು ಧರಿಸಿಯೇ.

ಯಜ್ಞ ಮಂಟಪದಲ್ಲಿ ಯೂಪಸ್ಥಂಭಕ್ಕೆ ಕುದುರೆಯನ್ನು ಕಟ್ಟಿ ಯಾಗ ಮುಂದುವರೆಯುತ್ತಿತ್ತು. ಕೃತಕ ಕತ್ತಲನ್ನು ಮಾಡಿ ಇಂದ್ರ ಮತ್ತೆ ಕುದುರೆಯನ್ನು ಕದ್ದ. ಈಗ ಪೃಥು ಕೃದ್ಧನಾಗಿ ಇಂದ್ರನನ್ನು ಕೊಲ್ಲಲು ಮುಂದಾದ.

ಋಷಿಗಳು, ""ಯಜ್ಞ ದೀಕ್ಷಿತನಾದವನಿಗೆ ಯಜ್ಞ ಪಶುವನ್ನು ಬಿಟ್ಟು ಬೇರೇನನ್ನೂ ವಧಿಸುವ ಅಧಿಕಾರವಿಲ್ಲ. ಆದರೆ ಇಂದ್ರನನ್ನು ಸುಮ್ಮನೆ ಬಿಡುವ ಪ್ರಶ್ನೆಯೂ ಇಲ್ಲ. ಆತನನ್ನೇ ಯಜ್ಞ ಕುಂಡಕ್ಕೆ ಆಹ್ವಾನಿಸಿ, ಹೋಮಿಸಿಬಿಡುತ್ತೇವೆ'' ಎಂದು ಇಂದ್ರನನ್ನೇ ಹೋಮಿಸಲು ಮುಂದಾದರು.

ಆದರೆ ಜಗತ್ತಿನ ವಿಧಾತನಾಗಿದ್ದ ಬ್ರಹ್ಮ ಮಧ್ಯ ಪ್ರವೇಶಿಸಿದ. ಇಂದ್ರನನ್ನು ಕೊಲ್ಲದಿರುವಂತೆ ಋಷಿ ಮುನಿಗಳಿಗೆ ತಿಳಿಹೇಳಿದ. ""ಸತ್ಸಾಧನೆಗೆ ಬೇಕಾದ ಯಜ್ಞಕಾರ್ಯವು, ಯಾರನ್ನೂ ವಧಿಸುವ ಉದ್ದೇಶದಿಂದ ಸಾಗುವುದು ಸಲ್ಲ. ಸುಧರ್ಮ ಸಭೆಯ ಅಧ್ಯಕ್ಷನಾಗಿ, ಮೂರು ಲೋಕದ ಕ್ಷೇಮ ಚಿಂತಕನಾಗಿ ಧರ್ಮ ಮತ್ತು ಧರ್ಮ ಕಾರ್ಯಗಳ ಆಚರಣೆಗೆ ಬಲವಾಗ ಬೇಕಿದ್ದ ಇಂದ್ರ ಕರ್ತವ್ಯ ಭ್ರಷ್ಟನಾಗಿದ್ದಾನೆ, ತನಗೆ ಆಧಾರವಾಗಿದ್ದ ಸುಧರ್ಮವನ್ನೇ ದುರ್ಬಲಗೊಳಿಸಿ, ಅಧರ್ಮದ ಪಸರಿಸುವಿಕೆಗೆ ಕಾರಣವಾಗಿದ್ದಾನೆ. ತನ್ನನ್ನು ತಾನೇ ಪತನ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾನೆ. ಈತ ಸ್ಥಾನ ಭ್ರಷ್ಟನಾಗುವುದು, ದುರ್ಬಲಗೊಳ್ಳುವುದು ನಡೆಯುತ್ತಲೇ ಇರುತ್ತದೆ'' ಎಂದು ಬುದ್ಧಿ ಹೇಳಿದ. ಅಂತೆಯೇ ಆಯಿತು ಕೂಡಾ. ಹಿರಣ್ಯ ಕಶ್ಯಪ, ತಾರಕಾಸುರ, ತ್ರಿಪುರಾಸುರರು, ಪಹ್ಲಾದ, ಬಲಿ, ವೃತ್ರಾಸುರ ಇವರೆಲ್ಲರೂ ಇಂದ್ರನನ್ನು ಸ್ಥಾನಭ್ರಷ್ಟರಾಗಿಸಿದರು. ಅದೂ, ಪೃಥುವಿನ ಗುರುವಾಗಿದ್ದ ಶುಕ್ರಾಚಾರ್ಯನ ಮಾರ್ಗದರ್ಶನದಿಂದ.

ಯಜ್ಞದಿಂದ ಸಂತುಷ್ಟಗೊಳ್ಳಬೇಕಿದ್ದ ಇಂದ್ರನಿಗೇ ಬೇಸರವಾದಮೇಲೆ ಇನ್ನು ಯಜ್ಞವೇಕೆ ಎಂದು ಪೃಥು ಯಜ್ಞದೀಕ್ಷೆಯನ್ನು ತ್ಯಜಿಸಿ, ಯಜ್ಞವನ್ನು ನಿಲ್ಲಿಸಿದ. ಆದರೆ ಋಷಿ-ಮುನಿಗಳು ಮತ್ತು ಬ್ರಹ್ಮ, ಮಹಾತ್ಯಾಗವಾದ ಯಜ್ಞವನ್ನೇ ತ್ಯಜಿಸಿದ ಪೃಥುವನ್ನು ಇಂದ್ರನನ್ನಾಗಿಸಿದರು. ಅದುವರೆಗೂ ಆದಿರಾಜ ಎನ್ನಿಸಿಕೊಂಡಿದ್ದ ಪೃಥು ನಂತರ, ರಾಜೇಂದ್ರ ಎನ್ನಿಸಿಕೊಂಡ. "ನರೇಂದ್ರ' ಎನ್ನಿಸಿಕೊಂಡ.

ಈಗ ಮತ್ತೆ ಪೀಠಿಕೆಯತ್ತ ಹೊರಳೋಣ. ಒಮ್ಮೆ ಅವ್ಯವಸ್ಥಿತವಾದ ಸಾರ್ವಜನಿಕ ಬದುಕನ್ನು ಊಹೆ ಮಾಡಿಕೊಳ್ಳಿ. ಅದಾಗದಿದ್ದರೆ ೨೦೦೯ರಿಂದ ೨೦೧೪ ಮೇ ತಿಂಗಳ ವರೆಗಿನ ದಿನಗಳನ್ನೊಮ್ಮೆ ನೆನಪು ಮಾಡಿಕೊಂಡರೂ ಕಳೆದೈದು ವರ್ಷಗಳಲ್ಲಿ ಆದದ್ದೂ ಇದೇ. ಅವ್ಯವಸ್ಥೆಯ ಬದುಕಲ್ಲಿ ಹೈರಾಣೆದ್ದು ಹೆಣವಾಗಿ ಹೋಗಿದ್ದ ನಮಗೆ ಒಂದು ವ್ಯವಸ್ಥಿತ ಬದುಕಿನ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆಗಳು ಸಾಕಷ್ಟು ಸುಧಾರಿಸಿದವು. ಆತಂಕ ಆಕ್ರೋಶಗಳೇ ತುಂಬಿದ್ದ ಬದುಕಿನಲ್ಲಿ ನಂಬಿಕೆ, ಭರವಸೆಗಳು ಮೂಡಿದವು. ಗಡಿಯಲ್ಲಿ ನಮ್ಮೆಲ್ಲರ ರಕ್ಷಣೆಗೆ ನಿಂತಿರುವ ಸೈನಿಕರು ಆಯುಧಗಳಿಲ್ಲದೆ, ಶಸ್ತ್ರಾಸ್ತ್ರಗಳಿಲ್ಲದೆ ಕಡೆ ಪಕ್ಷ ಹುರಿದುಂಬಿಸುವವರೂ ಇಲ್ಲದೇ ಶತ್ರು ರಾಷ್ಟ್ರದ ಎದುರಿಗೆ ನಗೆಪಾಟಲಾಗಿದ್ದರು. ನಂತರ, ಭಾರತದ ಸೈನ್ಯದ ಸತ್ವ ಜಗತ್ತಿಗೆ ಗೊತ್ತಾಯಿತು. ಸುವ್ಯವಸ್ಥಿತವಾದ ಬದುಕೊಂದು ಭಾಗಶಃ ದೊರೆತಿತ್ತು. ಇನ್ನಷ್ಟು ದೊರಕುವ ನಿರೀಕ್ಷೆ, ಭರವಸೆಯ ರೂಪು ತಳೆದಿತ್ತು.

ಸುವ್ಯವಸ್ಥಿತ ಬದುಕೊಂದು ದೊರೆತಾಗ, ಅದನ್ನು ಹಾಳು ಮಾಡುವ ವಿಘ್ನ ಸಂತೋಷಿಗಳ ದುರ್ಜನ ಸಂತಾನಕ್ಕೇನೂ ಕೊರತೆಯಿಲ್ಲ. ಇದೂ ಕೂಡಾ ಸಾರ್ವಕಾಲಿಕ ಸತ್ಯ. ಅಚ್ಚರಿಯ ಸಂಗತಿ ಎಂದರೆ, ಇಂಥಾ ದುಷ್ಟರಿಗೆ ಇಂದ್ರಿಯ ಸುಖ ವಿಷಯ ಭೋಗಲಾಲಸೆಗಳೇ ಮುಖ್ಯವಾಗುತ್ತದೆ. ನಿಯಮಬದ್ಧ, ಶಿಸ್ತಿನ, ಧಾರ್ಮಿಕ ಬದುಕಿನ ಕುರಿತು ಅವರ ಆಲೋಚನೆಗಳು ಹೊರಳುವುದು ಸಾಧ್ಯವೇ ಇಲ್ಲ. ಪೃಥುವಿನ ಕಾಲದಲ್ಲಿ ಇಂಥವರೆಲ್ಲರ ಪ್ರತಿನಿಧಿಯಾಗಿ ಇಂದ್ರನಿದ್ದ. (ಅರವಿಂದರು ಇಂದ್ರ ಶಬ್ದವನ್ನು ವಿವರಿಸುತ್ತಾ, ಇಂದ್ರ ಮಾನವರ ಇಂದ್ರಿಯಗಳ ಪ್ರತೀಕ ಎಂದೇ ತಿಳಿಸಿದ್ದಾರೆ) ಆತ ಪಾಖಂಡವೇಷವನ್ನು ಧರಿಸಿ, ಧರ್ಮಕ್ಕೆ ತಡೆಯೊಡ್ಡಿದ. ಇಂದಿನ ಕಾಲದಲ್ಲಿ, ರಾಜಕೀಯ ಸಂತರಂತೆ ವೇಷ ಧರಿಸಿ, ಸಾಹಿತಿಗಳಂತೆ ಅಂದರೆ- ಹಿತವಾಗಿರುವುದರ ಸಂಗಡ ಇರುವ ಭಾವವನ್ನು ತಳೆದು ಇರುವವರಂತೆ ವೇಷ ಧರಿಸುವವರು, ಆರ್ಥಿಕ ತಜ್ಞರಂತೆ, ಸ್ಮಾಜದ ಹಿತ ಚಿಂತಕರಂತೆ, ಸನ್ಯಾಸಿಗಳಂತೆ ವೇಷ ಧರಿಸಿದವರು ಈ ಎಲ್ಲ ಸಜ್ಜೀವನಕ್ಕೆ ಬೇಕಾಗಿ ತೆಗೆದುಕೊಂಡ ನಿರ್ಧಾರಗಳನ್ನು ಹಳಿದರು. ಅಂದಿನ ರಾಕ್ಷಸರೂ ಇದನ್ನೇ ಮಾಡಿದ್ದಿರಬಹುದು ಬಿಡಿ. ಆದರೆ ಅಂಥವರಿಗೆ ನಿರ್ಲಕ್ಷ್ಯ ಮತ್ತು ಶಿಕ್ಷೆಗಳು ಸಿಕ್ಕರೆ ಸುಮ್ಮನಾಗುತ್ತಾರೆ. ಅಂದಿನ ದೈತ್ಯ, ದನುಜ, ಕಾಲಕೇಯ, ನಿಷಾಧರಂತೆ, ಕೊನೆಗೆ ವಿಜಿತಾಶ್ವನಿಂದ ಪೆಟ್ಟು ತಿಂದ ಇಂದ್ರನಂತೆ.

ಈ ಶಿಕ್ಷೆಯ ಭಯದಿಂದ ಕೆಲವರು ದೇಶವನ್ನು ಬಿಟ್ಟರು. ಇನ್ನು ಕೆಲವರು ತಾವಾಗಿ ಶರಣಾದರು. ಇನ್ನೂ ಕೆಲವರು ತಮ್ಮ ಪಥವನ್ನೇ ಬದಲಿಸಿಕೊಂಡರು. ಇನ್ನು ಕೆಲವು ಆಷಾಢ ಭೂತಿಗಳು ಆಗಾಗ ಬಂದು ಕಿರಿಕಿರಿ ಮಾಡಿದರೂ ಅವರನ್ನು ಏನು ಮಾಡಬೇಕೋ ಅದನ್ನು ಮಾಡಿ ಅವರ ಹಿಂದಿರುವವರಿಗೆ ಮತ್ತು ಮುಂದಿರುವವರಿಗೆ ತಕ್ಕ ಸಂದೇಶವನ್ನು ರವಾನೆ ಮಾಡಲಾಗಿತ್ತು.

ಸುವ್ಯವಸ್ಥಿತವಾದ ಬದುಕೊಂದು ಪ್ರಜೆಗಳಿಗೆ ದೊರೆಯಿತಾದರೆ, ಅವರ ಅತಿ ಆಸೆ, ಆಡಂಬರಗಳು, ಅದರ ಕಾರಣ ಪರಿಣಾಮ ಎರಡೂ ಆಗಿರುವ ಅಪರಾಧ ಅಧರ್ಮಗಳು ತನ್ನಿಂತಾನೇ ನಿಲ್ಲುತ್ತವೆ. ಯಾಕೆಂದರೆ ವ್ಯವಸ್ಥೆಯೊಂದು ಸಮರ್ಪಕವಾಗಿದ್ದಾಗ ಅದು ಸಂಪನ್ನ ಸಮಾಜಕ್ಕೆ ಎಡೆ ಮಾಡಿಕೊಡುತ್ತದೆ. ಸಂಪನ್ನ ಸಮಾಜ ಸಕಲ ಸಂಪದ್ಭರಿತವೂ ಶಕ್ತಿಶಾಲಿಯೂ, ಆಗಿದ್ದು ಬದುಕಿನ ಕುರಿತಾಗಿ ಸದ್ಭಾವನೆಯನ್ನು ಸಕರಾತ್ಮಕ ಚಿಂತನೆಗಳನ್ನು ಹೊಂದಿರುತ್ತದೆ. ಈ ರೀತಿಯ ಸಮಾಜದಲಿ ಬದುಕುವ ಜನರು ಸುಧರ್ಮಿಗಳಾಗಿದ್ದು, ಸನ್ನಡತೆಯನ್ನು ಹೊಂದಿರುವ ಕಾರಣದಿಂದ ಧರ್ಮವೂ ಉಚ್ಛ್ರಾಯ ಸ್ಥಿತಿಯಲ್ಲಿದ್ದು ದೇವತೆಗಳೂ ಸಂತುಷ್ಟರಾಗಿ, ಅನುಗ್ರಹಿಸುತ್ತಿರುತ್ತಾರೆ. ಇಂಥಾ ಸುವ್ಯವಸ್ಥಿತ-ಸಂಪನ್ನ-ಸಂಪದ್ಭರಿತ-ಸಮೃದ್ಧ-ಸ್ವಚ್ಛ-ಸ್ವಸ್ಥ ಸಮಾಜದ ಸಾಧನೆಗೆ ಉತ್ತಮ ಸಂಕಲ್ಪ ಹೊಂದಿರುವ ಸ್ವಾರ್ಥಿಯಲ್ಲದ ಸಜ್ಜನನೊಬ್ಬ ಅ ಸಮಾಜದ ಸಾರಥಿಯಾಗಿರಬೇಕು. ಪ್ರಸ್ತುತ ಭರತ ಖಂಡ ಇಂಥಾ ಸಾರಥಿಯ ಕೈನಲ್ಲಿದೆ ಎನ್ನುವ ನಂಬಿಕೆ ನಿಚ್ಚಳ.

ದೇವತೆಗಳು ಅವರ ಅನುಗ್ರಹ ಇದನ್ನು ನಂಬದಿರುವ ನಾಸ್ತಿಕರಿಗೂ ಸುವ್ಯವಸ್ಥಿತ ಬದುಕು ಮತ್ತು ಸ್ವಸ್ಥ ಸಮಾಜದ ಸಂಬಂಧವನ್ನು ದೇವತೆಗಳ ಉಲ್ಲೇಖವಿಲ್ಲದೆಯೇ ಕೊಡಲು ಸಾಧ್ಯ. ಸುವ್ಯವಸ್ಥಿತವಾದ ಬದುಕೆಂದರೆ ಸ್ವೇಚ್ಛಾಚಾರ ಇಲ್ಲದ, ಸದಾಚರಣೆಗೆ ಬೇಕಾಗಿ, ಸ್ವ ಪರ ಹಿತಗಳೆರಡನ್ನೂ ಸಾಧಿಸುವ ಅವಕಾಶ ಇರುವ ವ್ಯವಸ್ಥೆ. ಅಂಥ ಸಮಾಜದಲ್ಲಿ ಅಪರಾಧಗಳೋ, ಕಳ್ಳತನಗಳೋ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇನ್ನೂ ಸುಲಭದಲ್ಲಿ ಹೇಳುವುದಾದರೆ, ಆಲ್ಫ಼್ರೆಡ್ ಮಾರ್ಷಲ್ ಹೇಳಿದ "Welfare State' ಅಥವಾ ಇಂದಿನ "Utopia' ವ್ಯಾಖ್ಯಾನಗಳನ್ನು ನೋಡಿ. ಆಗ ತಿಳಿಯುತ್ತದೆ.

ಈಗ ಕೊನೆಯ ಹಂತಕ್ಕೆ ಬರುತ್ತೇನೆ. ಇಂದ್ರ, ಪೃಥುವಿನ ಅಶ್ವಮೇಧವನ್ನು ನಿಲ್ಲಿಸಲು ಹೋಗಿ ಸ್ಥಾನಭ್ರಷ್ಟನಾದ; ಧರ್ಮಭ್ರಷ್ಟನಾದ. ನಿಜ. ಆದರೆ ಇಂದ್ರನಿಗೆ ಕೇವಲ ತಾನು ಹೊಂದಿದ್ದ ಸ್ಥಾನದ ಬಲವೇ ಅಂಥದ್ದೊಂದು ದುಸ್ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸಿತೇ? ಖಂಡಿತಾ ಇಲ್ಲ.ಅಲ್ಪಸೂಕ್ಷ್ಮಮತಿ ಇಂದ್ರ, ಭೂಮಿಯ ಜನರ ನಾಡಿಮಿಡಿತವನ್ನು ಅವಲೋಕಿಸುತ್ತಿದ್ದ. ಮೂಲೆ ಸೇರಿದ ಪೃಥುವಿನ ವಿರೊಧಿಗಳು ಹಲವರಿದ್ದರು. ಬಹುಷಃ ಅಸುರರಿಗೆ ನಾಕ ಲೋಕದ ಅಧಿಪತ್ಯದ ಆಸೆ ಕರಗಿ ತಮ್ಮ ಅಸುರಾಅಧಿಪತ್ಯ, ಜೀವ ಉಳಿದರೆ ಸಾಕು ಎನ್ನಿಸಿದ್ದಿರಬಹುದು. ಅವರೂ ಇಂದ್ರನಿಗೆ ದಾಯಭಾಗದ ಕರ್ತವ್ಯ ಎನ್ನುವಂತೆ ಹೊರಗಿನಿಂದ ಬೆಂಬಲ ಕೊಟ್ಟಿದ್ದಿರಬಹುದು. ಒಳಗೊಳಗೇ ಕುದಿಯುತ್ತಿದ್ದವರು ಕೆಲವರಿದ್ದರು. ಪೃಥುವಿನ ಕಾರ್ಯಗಳಿಂದ ತೊಂದರೆಗೊಳಗಾಗಿ ಆತನೊಡನೆ ಭಿನ್ನಾಭಿಪ್ರಾಯ ಇದ್ದವರೂ ಇದ್ದರು ಆದರೆ ಅವರು ವಿರೋಧಿಗಳಾಗಿರಲಿಲ್ಲ. ಇಂಥವರೆಲ್ಲರ ಬೆಂಬಲ ತನಗೇ ಸಿಗುತ್ತದೆ ಎಂಬ ಭ್ರಮೆಗೆ ಬಿದ್ದ. ಅದಕ್ಕೆ ಕಾರಣ ದುರಹ್ಂಕಾರ ಮತ್ತು ಅದರಿಂದಾದ ವಿಸ್ಮೃತಿ. ದುರಹಂಕಾರಕ್ಕೆ ಕಾರಣ ಯೋಗ್ಯತೆಗೆ ಮೀರಿದ ಸ್ಥಾನಾಪನ್ನನಾಗಿದ್ದು.

ಹೀಗೆಯೇ, ಕೆಲವು ವಿರೋಧಿಗಳ ಮಾತಿಗೆ ಮರುಳಾಗಿ, ಅಂಥವರೆಲ್ಲಾ ತನ್ನೊಡನೆ ಸೇರಿದ್ದನ್ನು ತನ್ನನ್ನು ಹರಕೆಯ ಕುರಿಯಾಗಿಸಿ, "Heads I win, Tail you loose' ಎನ್ನುವ ಆಷಾಢಭೂತಿತನದ ಜನ ಎನ್ನುವುದರಿಯದೆ, ತನ್ನ ಸಾಮರ್ಥ್ಯವೃದ್ಧಿ ಎಂದು ತಪ್ಪಾಗಿ ಗ್ರಹಿಸಿ ಅಹಂಕಾರದಿಂದ ವಿಭ್ರಮಿಸಿ, ತಾವೇ ಸಮರಸಿಂಹ ಅಹಿಂದವರ್ಮನ ಬೆಂಬಲ ತಮಗಿದ್ದ ಮೇಲೆ ಅಶ್ವಮೇದದ ಕುದುರೆ ಕಟ್ಟುವುದು ಅದ್ಯಾವ ಮಹಾ ಲೆಕ್ಕ ಎನ್ನುವ ಅಹಂಕಾರಕ್ಕೆ ಒಳಗಾಗಿ, ಅಶ್ವಮೇಧದ ಕುದುರೆ ಕಟ್ಟುತ್ತೇನೆ ಎಂದು ಹಾರಾದಿ, ಚೀರಾಡಿ ನಗೆಪಾಟಲಾದರು. ಅದಾದರೆ ಆಗಲಿ ಅವರ ಹಣೆಬರಹ. ಆದರೆ ಆ ಮಾತುಗಳನ್ನಾಡುವಾಗ, ಪರಮ ದೈವ ಭಕ್ತರಂತೆ ಪೋಸು ಕೊಟ್ಟರು. ಇಲ್ಲಿಯೂ ಇಂದ್ರನಂತೆ ಪಾಖಂಡ ವೇಷ ಧರಿಸಿದ್ದರು. ಇದು ಬಹು ಚೋದ್ಯವೇನಲ್ಲ. ಮೋಸಗಾರರು ಮೋಸಕ್ಕೆ ಬೇಕಾಗಿ ತಕ್ಕ ವೇಷವನ್ನೇ ಹಾಕುತ್ತಾರೆ. ವಿಡಂಬನೆಯೆಂದರೆ, ಇಂದ್ರನಂತೆ ತಾವು ಸಿಕ್ಕಿಬೀಳುವುದಿಲ್ಲ, ಗೆಲುವು ತಮ್ಮದೇ ಎಂದು ತಮ್ಮನ್ನೇ ತಾವು ಮೋಸಗೊಳಿಸಿ, ಬೇರೆಯವರನ್ನು ಮೋಸಗೊಳಿಸಿದ ವಿಕೃತಾನಂದ ಅನುಭವಿಸುತ್ತಲೇ ಬೋರಲು ಬಿದ್ದು ನಗೇಗೀಡಾಗುತ್ತಾರೆ, ತಮ್ಮ ಪರಿವಾರ ಮತ್ತು ಬೆಂಬಲಿಗರನ್ನೂ ಬೇರೆಯವರ ದೃಷ್ಟಿಯಲ್ಲಿ ಹಾಸ್ಯಾಸ್ಪದವಾಗಿಸುತ್ತಾರೆ.

ಇಷ್ಟೆಲ್ಲಾ ಹೋಲಿಕೆಗಳು ಸಿಕ್ಕ ಮೇಲೆ, ಭಾರತಮಾತೆ ಮತ್ತೆ ಪೃಥುವಿನಂಥ ರಾಜನನ್ನು ಪಡೆದು, ತನ್ನ ಗತವೈಭವಕ್ಕೆ ಮರಳಿ ವಸುಂಧರೆ ಪುನರ್ವಸುವಾಗುವಲ್ಲಿ ಯಾವ ಸಂದೇಹವೂ ಇಲ್ಲ. ಲೇಖನ ತಡವಾಯಿತು. ಬೇರೆ ಕೆಲಸ ಅದರ ನಡುವೆ ಬಂದ ಅನಾರೋಗ್ಯ ಇದಕ್ಕೆ ಕಾರಣ. ಮೇಲಾಗಿ ಪೃಥುವಿನಂಥವನ ಬದುಕನ್ನು ಗ್ರಹಿಸಿ, ಬಹು ಸಂಕ್ಷಿಪ್ತವಾಗಿ ಬರೆಯುವಷ್ಟು ಜ್ಞಾನ ಸಂಪತ್ತು ಶಬ್ದ ಸಂಪತ್ತು ಎರಡೂ ನನ್ನಲ್ಲಿ ಪರ್ಯಾಪ್ತವಾಗಿಲ್ಲ.
ಹಾಗಾಗಿ ಬರಹ ಅತಿ ಎನ್ನುವಷ್ಟು ಉದ್ದವಾಗಿದೆ. ಕ್ಷಮೆ ಇರಲಿ. ಇಷ್ಟವಾದರೆ ತಿಳಿಸಿ.

ಪೃಥುವಿನ ಬಗೆಗೆ ಹಿಂದೆ ಬರೆದ ಲೇಖನಗಳ ಕೊಂಡಿ ಇಲ್ಲಿದೆ.
https://tenkodu.blogspot.com/2018/04/blog-post_5.html

https://tenkodu.blogspot.com/2018/03/blog-post_29.html

https://tenkodu.blogspot.com/2018/03/blog-post_22.html