Tuesday, May 3, 2016

ಹೆಣ್ಣುಗಳ ಮಹಾ ಕ್ರಾಂತಿ

ಕ್ರಾಂತಿಯ ಭ್ರಾಂತಿ ದೀಪೇಶನನ್ನು ಬಿಟ್ಟರೂ ಅವನ ತಂಗಿ ಮಂಜುಶ್ರೀಯನ್ನು ಅದು ಅತಿಯಾಗಿ ಪೀಡಿಸತೊಡಗಿತು. ಆದರೆ ನಕ್ಸಲೀಯರಂತೆ ಕಾಡು ಸೇರುವುದು ದೂರದ ಮಾತಾಗಿತ್ತು ಆಕೆಗೆ. ಭಯ ಅಂತೇನೂ ಅಲ್ಲ, ಅಲ್ಲಿ ಕೆಲಸ ಮಾಡಬೇಕಾಗುತ್ತದಲ್ಲಾ ಅದರಿಂದ ಕ್ರಾಂತಿಗೆ ತೊಂದರೆ ಆದರೆ ಎನ್ನುವ ಕಾಳಜಿ ಅಷ್ಟೆ. ಸರಿ ಮತ್ತೇನು ಗತಿ, ಕಾಲೇಜಿನಲ್ಲೇ ಒಂದು ಸಣ್ಣ ಗಲಾಟೆ ಎಬ್ಬಿಸಿದರಾಯಿತು ಎಂದುಕೊಂಡಿದ್ದಳು.
 ಕ್ರಾಂತಿ ಏನು ಸುಲಭವೇ? ಒಂದು ಪೂರ್ತಿ ಸರಿ ಇದ್ದ ವಿಷಯ ಸಿಗಬೇಕು. ಅದನ್ನು ಬುದ್ದು ಜೆವಿಗಳು ಬಹಳ ಸಾರಿ ಖಂಡಿಸಿರಬೇಕು. ಹಾಗೆ ಖಂಡಿಸಿದ್ದನ್ನು ಉಳಿದ ಉದಯೋನ್ಮುಖ ಸಾಯಿತಿಗಳು ಪುರಸ್ಕರಿಸಿ ಬೊಬ್ಬೆ ಹೊಡೆದಿರಬೇಕು ಇತ್ಯಾದಿ ಅಗತ್ಯಗಳೆಲ್ಲಾ ಇವೆಯಲ್ಲ. ಆದರೆ, ತಲೆಯೊಳಗೆ ಹೊಕ್ಕ ಹುಳ ಹೋದೀತೆ? ಗೆಳತಿಯರೊಂದಿಗೆ ಚರ್ಚೆ ಮಾಡಿದಳು ಮಂಜುಶ್ರೀ.
 ಒಬ್ಬಳೆಂದಳು, ಕ್ರಾಂತಿ ಆಗುವುದೇ ಆದಲ್ಲಿ ಸ್ತ್ರೀ ಸಮಾನತೆಯ ಕುರಿತಾಗಿರಬೇಕು ಎಂದು. ಅಷ್ಟರಲ್ಲಿ ಶನಿ ಶಿಂಗ್ಣಾ ಪುರಕ್ಕೆ ಹೆಮ್ಮಕ್ಕಳು ಹೋದ ಸುದ್ದಿಯನ್ನು ಪಬ್ ಲೀಕ್ ಟಿ ವಿ ಯಲ್ಲಿ ಗಂಗಣ್ಣ ಧಾರಾ ಬೋರೇಗೌಡ ಎನುವರ ಜೊತೆ ಚರ್ಚಿಸಿ ಹೇಳೇ ಬಿಟ್ಟಿದ್ದ. "ಸರಿ ಇದೆ ಕಣ್ರೀ ಅವರು ಮಾಡಿದ್ದು. ಅಡಿಗೆ ಮಾಡಕ್ಕೆ ಬೇಕು, ಬಟ್ಟೆ ತೊಳೆಯಕ್ಕೆ ಬೇಕು. ಅವರು ತೊಳೆದ ಬಟ್ಟೆ ಹಾಕ್ಕೊಂಡು ಅವರು ಮಾಡಿದ ಅಡಿಗೇನ ನೈವೇದ್ಯ ಅಂತ ಮಾಡಿ ಪ್ರಸಾದ ತೊಗೊಬಹುದು. ಪೂಜೆ ಯಾಕೆ ಮಾಡ ಬಾರದು?" ಇದಕ್ಕೆ ಧಾರಾ ಧ್ವನಿಗೂಡಿಸಿ "ಔದು. ನೀವು ಏಳೋದು ಸರಿ ಇದೆ. ಧರ್ಮನೇ ಏಳತ್ತೆ. ಎಣ್ಣು ಅಂದ್ರೆನೇ ದೇವ್ರು ಅಂತ. ಎಣ್ಣು ಇರ್ಲಿಲ್ಲಾ ಅಂದ್ರೆ ಪ್ರಪಂಚ ಇರ್ತಿತ್ತಾ ಸಾರ್!! ಇದಕ್ಕೆ ವಿರೋಧ ಮಾಡ್ತರಲ್ಲ ಇವ್ರಿಗೆ ಏನೂ ಏಳಕ್ಕಾಗಲ್ಲ. ಅದು ಆಗೇ. ಈಗ ಮತ್ತೊಂದು ಸುದ್ದಿ ಇದೆ....."
 ಇದನ್ನು ಟಿ ವಿ ಯಲ್ಲಿ ನೋಡಿ ಮಂಜುಶ್ರೀ ಧಿಗ್ಗನೆದ್ದಳು. ಅವಳನ್ನು ನೋಡಿದ ದೀಪೇಶ ಮೂರು ದಿನದ ಹಿಂದೆ ವರದಾಮೂಲದ ಜಾತ್ರೆಯಲ್ಲಿ ನಡೆದ ಆಟದ ಶಶಿಪ್ರಭೆಯನ್ನು ನೆನಪಿಸಿಕೊಂಡ.
 ಮರುದಿನವೇ ಮಂಜುಶ್ರೀ ತನ್ನ ಬಳಗಕ್ಕೆಲ್ಲಾ ಒಂದು ಐಡಿಯಾ ಕೊಟ್ಟಳು.ಎಲ್ಲರಿಗೂ ಮುಜುಗರವಾದರೂ ಒಪ್ಪಿಗೆಯಾಯಿತು.ಕ್ರಾಂತಿಯ ಸ್ಥಳ ಸಾಗರದ ಬಸ್ ನಿಲ್ದಾಣ ಎಂದು ತೀರ್ಮಾನವಾಯಿತು. ಕ್ರಾಂತಿಯ ಮೊದಲ ಹೆಜ್ಜೆ ಎಂದ ಮೇಲೆ ಪ್ರಚಾರ ಬೇಡವೆ? ಟಿ ವಿ ಚಾನೆಲ್ಲಿನವರು ಬೇಕೇ ಬೇಕಲ್ಲವೇ? ಸರಿ. ಕರೆದರು. ಪಬ್ ಲೀಕ್ ಟಿವಿಯಲ್ಲಿ ಗಂಗಣ್ಣ ಮತ್ತು ಧಾರಾ ಬೋರೇಗೌಡ ಇಬ್ಬರೂ ಚರ್ಚೆಗೆ ಕುಳಿತರು. ಸಂಯಮದಲ್ಲೂ ಚರ್ಚೆ ಆರಂಭವಾಯಿತು. ಆ ಟಿ ವಿ ವಾಹಿನಿಯಲ್ಲಿ ಶಂಖನಾದ ಭೇರಿಧ್ವಾಜ ಕೂಡಾ ಕುಳಿತ. ನೀಲಿ ಪತ್ರಿಕೆ ಹಲೋ ರಾಜಧಾನಿ, ಶಾರಿ ಲಿಂಗೇಶ್ ರ ಲಿಂಗೇಶ್ ಪತ್ರಿಕೆಯ ವರದಿಗಾರರು ಕೂಡಾ ಬಂದರು.
 ಪಬ್ ಲೀಕ್ ಟಿ ವಿಯಲ್ಲಿ ಗಂಗಣ್ನ ಹೇಳುತ್ತಿದ್ದರು." ನೋಡ್ರಿ ಈ ಹೆಣ್ಮಕ್ಕಳನ್ನ. ಆ ಕಾಲದಲ್ಲಿ ದುರ್ಗೆ ರಾಕ್ಷಸರನ್ನ ಸಂಹರಿಸಿದ್ದಳಂತೆ.ಈಗ ಈ ಹೆಣ್ಮಕ್ಕಳು ಕ್ರಾಂತಿ ಮಾಡಿ ದೇಶಕ್ಕೆ ಹೊಸ ರೀತಿ ಸ್ವಾತಂತ್ರ್ಯ ಕೊಡುತ್ತಿದ್ದಾರೆ....." ಮಧ್ಯ ಬಾಯಿ ಹಾಕಿ ಧಾರಾ ಬೋರೇಗೌಡ ಬೊಬ್ಬಿರಿದಳು" ಎಣ್ಣು ಮಕ್ಕಳು ಈಗೆ ಮೊಂದೆ ಬಂದ್ರೆನೇ ದೇಶ ಮೊಂದೆ ಓಗತ್ತೆ. ಇಲ್ಲಾ ಅಂದ್ರೆ ಇಂದುಳಿತಾನೇ ಓಗತ್ತೆ. ಈಗೆಲ್ಲ ಆಗಿ ಉಳಿದ ಎಣ್ಣುಗಳಿಗೂ ಸ್ಪೂರ್ತಿ ಕೊಡಬೇಕು. ನೀವಿ ಏಳೊದೂ ಇದೇ ಅಲ್ವಾ? ನಿಮ್ಮ ಮನಸಲ್ಲೂ ಇಂಥದ್ದೇ ಯೊಚನೆ ಒಳಿತಾ ಇಲ್ವಾ?" ನೋಡೊಣ ಉಡುಗೀರು ಏನು ಮಾಡ್ತಾರೆ ಅಂತ. ಈಗ ಒಂದು ಬ್ರೇಕ್."
 ಶಂಖನಾದ ನಡೆಯಿತು. "ಹೆಣ್ಣು ಮಕ್ಕಳೆಲ್ಲಾ ಒಟ್ಟಾಗಿ ಕ್ರಾಂತಿಗೆ ಮುಂದಾಗಿದ್ದಾರೆ. ಇದು ಸಂತೋಷದ ವಿಚಾರ. ಇದರ ಬಗ್ಗೆ ಮಾತಾಡೊಖೆ ನಮ್ಮ ಜೊತೆ ಚಿಂತಕರೊಬ್ಬರು ಜೊತೆಯಾಗ್ತಾರೆ. ಅದಕ್ಕೆ ಮೊದಲು ಒಂದು ಸಣ್ಣ ವಿರಾಮ".
 ಬ್ರೇಕ್ ಮುಗಿದ ಮೇಲೆ ಹೆಣ್ಣು ಮಕ್ಕಳ ಕ್ರಾಂತಿ ಬರಲೇ ಇಲ್ಲ. ಬೇರೆ ಯಾವುದೋ ಸುದ್ದಿ ಬಂತು. ಜನ ಕೂಡಾ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಮಂಜುಶ್ರೀಯ ಮನೆಯವರಿಗೆ ಮತ್ತು ಆ ಕೇರಿಯವರಿಗೆ ಟಿ ವಿ ಚನೆಲ್ಲಿನವರು ದುಡ್ಡಿಗೆ ತಮ್ಮ ಮಗಳ ಕ್ರಾಂತಿ ಕಾರ್ಯಕ್ರಮ ಪ್ರಸಾರ ಮಾಡದೇ ಇದ್ದಿದ್ದು ನಹಳ ಬೇಜಾರಾಗಿ, ಯಾರೋ ದುಡ್ಡು ಕೊಟ್ಟು ನಿಲ್ಲಿಸಿದ್ದಾರೆ ಎನ್ನುತ್ತಾ ನೆನಪಾದವರಿಗೆಲ್ಲಾ ಬಯ್ಯತೊಡಗಿದರು.
 ಆದರೆ ಅವರ ಆಸೆ ಭಾನುವಾರದ ಹೀಗೆಲ್ಲಾ ಉಂಟೆ.... ಕಾರ್ಯಕ್ರಮದಲ್ಲಿ ಈಡೇರಿತು. ನಿರೂಪಕ ಹೇಳುತ್ತಿದ್ದ.: "ಅವತ್ತು ಸಾಗರದಲ್ಲಿ ಅಷ್ಟೊಂದು ಜನ ಹೆಣ್ಣು ಮಕ್ಕಳು ಏಕಾ ಏಕಿ ಗಂಡಸರ ಟಾಯ್ಲೆಟ್ಟಿಗೆ ನುಗ್ಗಿದ್ದಾದರೂ ಏಕೆ? ಅವರನ್ನು ಆ ಕಡೆ ಸೆಳೆದ ಶಕ್ತಿಯಾದರೂ ಎಂಥದ್ದು? ಅವರನ್ನು ಆ ಕಾರ್ಯಕ್ಕೆ ಮುನ್ನುಗ್ಗುವಂತೆ ಮಾಡಿದ ಆ ಮಹಾ ಚೇತನ ಏನು. ತಿಳಿಯೋಣ ಇವತ್ತಿನ ಹೀಗೆಲ್ಲಾ ಉಂಟೆ... ಕಾರ್ಯಕ್ರಮದಲ್ಲಿ.......