Thursday, December 3, 2015

ಒಂದು ಅಕ್ಷರದ ಅವಾಂತರ

ಕಟ್ಟೆಗದ್ದೆ ಎಂಬ ಆ ಹಳ್ಳಿ ಮಲೆನಾಡ ಬೆಟ್ಟ ಗುಡ್ಡ ಕಾಡೆ ಮೇಡುಗಳ ನಡುವೆ ಶರಾವತಿ ನದಿಯ ತಟದಲ್ಲಿ ಇರುವ ಒಂದು ಪುಟ್ಟ ಗ್ರಾಮ. ಜನವಸತಿಯೂ ಮಲೆನಾಡ ಇತರ ಹಳ್ಳಿಗಳಂತೆ ವಿರಳ. ಜನರ ಸ್ವಭಾವಗಳೂ ಸರಳ. ಆದರೆ ಆ ಹಳ್ಳಿಯಲ್ಲಿ ನೆಲೆ ನಿಂತಿರುವ ದೇವಿಯ ದೇವಸ್ಥಾನ, ಅಲ್ಲೇ ಇರುವ ಹಾಲು ಉತ್ಪಾದಕರ ಸಹಕಾರ ಸಂಘ, ಹೈ ಸ್ಕೂಲು ಇತ್ಯಾದಿಗಳು ಆ ಊರಿನ ಸ್ಥಾನ ಮಾನವನ್ನು ತುಸು ಹೆಚ್ಚಿಸಿವೆ. ಅಲ್ಲಿನ ಪ್ರಕೃತಿ ಸಿರಿಗೋ ಅಥವಾ ತಮ್ಮ ತಮ್ಮ ಅವಶ್ಯಕತೆಗೋ ಅನುಗುಣವಾಗಿ ಕೆಲವು ಮುಸ್ಲಿಂ ಮತ್ತು ಕ್ರೈಸ್ತ ಕುಟುಂಬಗಳೂ ಸುತ್ತ ಮುತ್ತಲ ಗ್ರಾಮದಲ್ಲಿ ನೆಲೆ ನಿಂತಿವೆ.ಅಲ್ಲಿ ಯಾವ ಬುದ್ಧಿ ಜೀವಿಯೂ ರಾ ಸ್ವ ಸಂ ಎಂಬ ಕ್ಯಾತೆ ಸಂಘವು ಇದ್ದೂ ಇಲ್ಲದಂತಾಗಿದ್ದರಿಂದ ಏನೂ ಗಲಭೆ ಗಲಾಟೆ ಇರಲಿಲ್ಲ. ಈಗಿನ ನಾಗರೀಕತೆಗೆ ಬೇಕಾಗಿ ಒಂದು ಮೊಬೈಲ್ ಟವರ್ ಕೂಡಾ ಅಲ್ಲೇ ಇರುವ ಒಂದು ಗುಡ್ಡದ ಮೇಲೆ ತಲೆ ಎತ್ತಿದೆ.
ಈ ಊರ ದೇವಿಯನ್ನು ತಲತಲಾಂತರದಿಂದ ಒಂದೇ ಮನೆತನದವರು ಪೂಜಿಸುತ್ತಾ ಬಂದಿದ್ದಾರೆ. ಸಧ್ಯ ಅರ್ಚಕ ವೃತ್ತಿಯನ್ನು ನಡೆಸುತ್ತಿರುವವರು ಗಜ್ಜ ಭಟ್ಟರು ಎಂದೇ ಊರಲ್ಲಿ ಹೆಸರಾಗಿರುವ ಗಜಾನನ ಭಟ್ಟರು. ಈ ಭಟ್ಟರು ವೇದಾಧ್ಯಯನ ಮಾಡಿದ್ದು ನಿಜವಾದರೂ ಈಗಿನ ಕಾಲದವರಂತೆ ಸ್ಮಾರ್ಟ್ ಅಲ್ಲ.ಪೌರೋಹಿತ್ಯಕ್ಕೆಂದು ಶಿಷ್ಯರ ಮನೆಗೆ ಹೋದರೆ ಅವರನ್ನು ಕಾಡಿ ಬೇಡಿ ಪೀಕುವ ಜನರಲ್ಲ. ತಮಗೆ ಪಿತ್ರಾರ್ಜಿತವಾಗಿ ಬಂದ ದೇವಸ್ಥಾನ ಪೂಜೆ ಮತ್ತು ಅಡಿಕೆ ತೋಟದಲ್ಲೇ ತೃಪ್ತರು. ಸತ್ಯವಾಕ್ಕು ವಾದರೂ ನಿಷ್ಠುರ ವಾಚಕರಲ್ಲ.ಪ್ರಾಯದಲ್ಲಿ ಸೈಕಲ್ ತುಳಿದು ಒಡಾಡುತ್ತಿದ್ದ ಇವರು ಈಗ ವಯಸ್ಸಾದ ಕಾರಣದಿಂದ ಬಸ್ಸಿನಲ್ಲೇ ಇವರ ಓಡಾಟ. ಇಂತಿಪ್ಪ ಭಟ್ಟರಿಗೆ ಅವರ ಮಗ ಒಂದು ಮೊಬೈಲ್ ಕೊಡಿಸಿದ. ಅಭ್ಯಾಸವೋ ಎಂಬಂತೆ "ಯಂಗೆತ್ತಕ್ಕಾ? ಕೆಲಸ ಇಲ್ಲೆ. ಅದನ್ನ ಒತ್ತಕ್ಕೆ ಬೇರೆ ಬತಲ್ಲೆ" ಅಂದರು ಭಟ್ಟರು. ಆದರೆ ಮಗ,"ಅಪ್ಪಾ! ನೀನು ಪುರೋಹಿತಿಕೆಗೆ ಅಂತ ಕರೂರು ಸೀಮೆ ತುದಿ ತಂಕ ಹೋಗ್ತೆ. ಬೇಕಾಗ್ತು. ಈ ಮನೆ ಫೋನ್ ನಂಬಕ್ಕೆ ಬತಲ್ಲೆ" ಎಂದು ಏನೇನೆಲ್ಲಾ ಕಸರತ್ತು ಮಾಡಿ ಕೊಡಿಸಿದ್ದ.
ಒಂದು ದಿನ ಶಿಷ್ಯನೊಬ್ಬನ ಮನೆಯಲ್ಲಿ ಗಣಪತಿ ಹೋಮಕ್ಕೆಂದು ಹೋಗಿದ್ದ ಭಟ್ಟರು ಸಾಗರದಲ್ಲಿ ಬಸ್ಸ್ಸು ಹತ್ತಿ ಮನೆಗೆ ಹೊರಡಲೆಂದು ಕಾದು ಕುಳಿತರುಷ್ಟರಲ್ಲಿ ಪಕ್ಕದ ಊರಿನ ಈಶು ಮಾಣಿ ಕಾಲೇಜ್ ಮುಗಿಸಿ ಬಂದು ಹೊಸತಾಗಿ ಖರೀದಿಸಿದ್ದ ಸ್ಮಾರ್ಟ್ ಫೋನ್ ನಲ್ಲಿ ವಾಯ್ಸ್ ರೆಕಾರ್ಡರ್ ಉಪಯೋಗಿಸುವುದನ್ನು ಕಲಿಯುತ್ತಾ ಕುಳಿತ. ನಿದ್ದೆ ಬರುತ್ತಿದ್ದುದರಿಂದ ಬಸ್ ಏಜೆಂಟನನ್ನು ಮೊದಲೇ ಮಾತಾಡಿಸಿ ಟಿಕೆಟ್ ಪಡೆದು ಒರಗಿ ಕಣ್ಣು ಮುಚ್ಚ್ಹಿ ನಿದ್ದೆ ಹೋದರು. ಸ್ವಲ್ಪ ಹೊತ್ತಿಗೇ ಮಗನ ಫೋನ್ ಬಂತು. ಆತ ಆ ಕಡೆಯಿಂದ ದೂರದ ತೋಟದಲ್ಲಿದ್ದ ಬಾಳೆ ಕೊನೆಗಳು ಹಣ್ಣಾಗಿವೆ ಎಂದೂ, ಮಂಗನ ಹಾವಳಿ ಉಂಟಾದ ಕಾರಣದಿಂದ ಅದನ್ನು ಕಡಿದು ಮುನೀರನ ಅಂಗಡಿಗೆ ಕಳಿಸುತ್ತಿರುವುದಾಗಿ ತಿಳಿಸಿದ. ಭಟ್ಟರಿಗೆ ಒಮ್ಮೆ ತೋಟಕ್ಕಾಗಿ ತಾವು ತಮ್ಮ ಮಗ ಪಟ್ಟ ಶ್ರಮ ಎಲ್ಲಾ ನೆನಪಾಗಿ ಅಯ್ಯೋ! ಎನ್ನಿಸಿ "ಛೆ!ಛೆ!! ಥೋ!! ಥೋ!!! ಹಾಳಾಗಿಹೋಪಲೆ!!ಹೌದನಾ!!! ಕಡಿದು ಮುನೀರಂಗೆ ಕಳಿಸಿಬಿಡು. ನಮಗಂತೂ ಇಲ್ಲೆ. ಅ೦ವ ಆದ್ರೂ ತಿನ್ಲಿ" ಎಂದರು. ಬಸ್ಸು ತಮ್ಮೂರನ್ನು ತಲುಪುತ್ತಿದ್ದಂತೆ ಇಳಿದು ಈಶು ಮಾಣಿಗೆ ಕೈ ಬೀಸಿ ಮನೆಗೆ ಹೋದರು.
ಮರುದಿನ ಬೆಳಿಗ್ಗೆ ದೇವಸ್ಥಾನದ ಕಡೆ ಜೀಪು ಕಾರುಗಳ ಆರ್ಭಟ. ಭಟ್ಟರು ಸ್ಥಿತಪ್ರಜ್ಞರು. ಅವರಿಗೆ ಏನೂ ಆಶ್ಚರ್ಯ ಎನ್ನಿಸಲಿಲ್ಲ. ಆಗಾಗ ಭಾನುವಾರದಂದು ಹೀಗೇ ಜನ ಬರುವುದು ಇತ್ತು. ಭಟ್ಟರು ಸ್ನಾನ ಮಾಡಿ ಅನುಷ್ಠಾನಾದಿಗಳನ್ನು ಮುಗಿಸಿ ದೇವಿ ಪೂಜೆಗೆಂದು ದೇವಸ್ಥಾನದ ಕಡೆ ಹೊರಟರು. ಆದರೆ ಅಲ್ಲಿ ಬಹಳ ದೊಡ್ಡ ದೊಡ್ಡ ಜನವೇ ಇದ್ದಾರೆ.ಸ್ಥಳೀಯ ಹಿಂದೂ ಮುಖಂಡರು, ಗಡ್ಡ ಬಿಟ್ಟು ಖಾದಿ ಜುಬ್ಬಾ ಹಾಕಿ ಹೆಗಲಿಗೆ ಚೀಲ ಜೋಲಿಸಿ ಆಗಾಗ ಸಮಾನತೆ ಮಣ್ಣು ಮಸಿ ಎನ್ನುತ್ತಾ ಬೊಬ್ಬೆ ಹಾಕುವ ಸ್ಥಳೀಯ ಬುದ್ಧಿ ಜೀವಿಗಳು ಸಾಲದ್ದಕ್ಕೆ ಕೊಡೆಗಳಿಂದ ಕೂಡಿದ ಕೆಲ ವಾಹನಗಳೂ ಇವೆ. ಮೇಲಿನಿಂದ ದಿನಾ ಟಿ ವಿ ಯಲ್ಲಿ "ಬರುತ್ತೇವೆ ಒಂದಿ ಚಿಕ್ಕ ವಿರಾಮದ ನಂತರ" ಎನ್ನುವುದನ್ನಷ್ಟೆ ಶುದ್ಧ ಕನ್ನಡದಲ್ಲಿ ನುಲಿಯುತ್ತಾ ಉಲಿಯುವ ವರದಿಗಾರ/ಗಾರ್ತಿಯರು. ಬಹುಷಃ ದೇವಸ್ಥಾನದ ಪೂಜೆ ಟಿ ವಿಯಲ್ಲಿ ತೋರಿಸಲು ಬಂದಿರಬೇಕು ಎಂದುಕೊಂಡರು. ಒಬ್ಬಾಕೆ ಭಟ್ಟರನ್ನು ಮಾತಾಡಿಸಲು ಬಂದಾಗ, ಅಲ್ಲೇ ಇದ್ದ ರಮಾನಂದ,"ಭಟ್ಟರು ಪೂಜೆ ಮುಗಿದು ಅರ್ಧ ಘಂಟೆ ಮಾತಾಡುವುದಿಲ್ಲ " ಎಂದಿದ್ದು ಕೇಳಿ ಆಕೆ ಹಿಂದೆ ಹೋದಳು.
ಭಟ್ಟರು ಪೂಜೆ ಮಾಡುತ್ತಿದ್ದಾಗ ಯಾರೂ ಒಳ ಬರಲಿಲ್ಲ. ಭಟ್ಟರೂ ತಲೆ ಕೆಡಿಸಿಕೊಳ್ಳಲಿಲ್ಲ.ಪೂಜೆ ಮುಗಿಸಿ ಅರ್ಧ ಗಂಟೆ ದೇವಸ್ಥಾನದಲ್ಲಿಯೇ ಕುಳಿತು ಮನೆಗೆ ಹೊರಟರು. ಹೊರ ಬರುತ್ತಿದ್ದಂತೆ ಮುನೀರ ತನ್ನ ಹಳೇ ಟಿ ವಿ ಎಸ್ ಏರಿ ಇವರ ಮನೆ ಕಡೆಗೆ ಹೋಗುತ್ತಾ ಪರಿಚಯದ ನಗೆ ಬೀರಿದ. ಭಟ್ಟರು ಇನ್ನೂ ಸ್ವಲ್ಪ ಮುಂದೆ ಬರುತ್ತಿದ್ದಂತೆ ಸಾಬರ ಕೇರಿಯ ಕೆಲ ಚಿಗುರು ಮೀಸೆ ಹುಡುಗರು ಜೊತೆಯಲ್ಲಿ ಹಿರಿಯ ಉಸ್ಮಾನ್ ಖಾನ್ ರನ್ನು ಕರೆದುಕೊಂಡು ದೇವಸ್ಥಾನದ ಹತ್ತಿರವೇ ಬೈಕ್ ನಿಲ್ಲಿಸಿ ಭಟ್ಟರ ಮನೆ ಕಡೆ ಬಂದರು. ಉಸ್ಮಾನ್ ಖಾನ್ ಮತ್ತು ಭಟ್ಟರು ಸ್ನೇಹಿತರಲ್ಲದಿದ್ದರೂ ಜಾತ್ರೆಯಲ್ಲಿ ಅಂಗಡಿ ಹಾಕುವ ಕಾರಣದಿಂದ, ನವರಾತ್ರಿ ಉತ್ಸವದಲ್ಲಿ ದೇವಿ ಅಲಂಕಾರಕ್ಕೆ ಬೇಕಾದ ಹೂವು ಒದಗಿಸುವುದರಿಂದ ಕೆಲ ಕಾಲ ಹರಟುವಷ್ಟು ಪರಿಚಿತರು. ಭಟ್ಟರು, ಖಾನ್ ಅವರ ಮುಖದಲ್ಲಿ ವಿಷಾದ ಭರಿತ ಆತಂಕವೊಂದು ಮಡುಗಟ್ಟಿದ್ದು, ಯುವಕರ ಮುಖದಲ್ಲಿ ಒಂದು ರೀತಿಯ ರೋಷ ಮನೆ ಮಾಡಿದ್ದು ಗಮನಿಸಿದರಾದರೂ ತಲೆ ಬಿಸಿ ಮಾಡಿ ಕೊಳ್ಳಲಿಲ್ಲ. ಯಾಕೆಂದರೆ ದೇವಸ್ಥಾನಕ್ಕೆ ಹೋಗುವಾಗ ಕಂಡಿದ್ದ ವಾಹನಗಳು ಅಲ್ಲೇ ಇದ್ದರೂ ಅಲ್ಲಿದ್ದ ಜನ ಕಾಣಲಿಲ್ಲ. ಅವರೆಲ್ಲಿ ಹೋದರು ಎನ್ನುವ ವಿಷಯ ಭಟ್ಟರ ತಲೆ ಹೊಕ್ಕು ಬಿಟ್ಟಿತ್ತು.
ಮನೆಗೆ ಬರುತ್ತಿದ್ದಂತೆ ವಾಡಿಕೆಯಂತೆ ಹೆಂಡತಿ ಮತ್ತು ಮಗನಿಗೆ ತೀರ್ಥ-ಪ್ರಸಾದ ಕೊಟ್ಟರು.ಕೊಡುವಾಗ ಅವರಿಬ್ಬರ ಮುಖದಲ್ಲಿ ಮಡುಗಟ್ಟಿದ್ದ ಭಯವನ್ನು ಅವರು ಗಮನಿಸೈದ್ದರು. ಜಗಲಿಯಲ್ಲಿ ದೇವಸ್ಥಾನಕ್ಕೆ ಹೋಗುವಾಗ ಕಂಡಿದ್ದ ಜನ ಆಸರಿಗೆ ಕುಡಿಯುತ್ತಿದ್ದರು.ಊರಿನ ಕೆಲ ಜನ ಕೂಡಾ ಬಂದಿದ್ದರು. ತಿಂಗಳು ಎರಡು ತಿಂಗಳಿಗೊಮ್ಮೆ ಬಾಳೆ ಕಾಯಿಗೆ ಬರುವ ಮುನೀರನಿಗೆ ತೀರ್ಥ ಪ್ರಸಾದ ವರ್ಜ್ಯವಾಗಿರಲಿಲ್ಲ. ಉಸ್ಮಾನ್ ಖಾನ್ ಮೊದಲಿನಿಂದಲೂ ಬ್ರಾಹ್ಮಣರ ಒಡನಾಟ ಇಟ್ಟುಕೊಂಡಿದ್ದರಿಂದ ಅವರೂ ಪ್ರಸಾದ ತೆಗೆದುಕೊಂಡರು. ಭಟ್ಟರು, ಕೊಟ್ಟಿಗೆಯಲ್ಲಿದ್ದ ದನವೊಂದಕ್ಕೆ ತೀರ್ಥ ಪ್ರಸಾದ ಕೊಡುವ ರೂಢಿ ಇಟ್ಟುಕೊಂಡಿದ್ದರು. ಅದಕ್ಕಾಗಿ ಮಗನ ಕೈಗೆ ಪೂಜೆ ಬುಟ್ಟಿ ಕೊಟ್ಟು "ಅವಕ್ಕೂ ಎಲ್ಲಾ ಕೊಡು." ಎಂದು ಕೊಟ್ಟಿಗೆ ಕಡೆ ಹೋದರು.ಮಗ ತೆಗೆದುಕೊಳ್ಳುವವರಿಗೆಲ್ಲಾ ತೀರ್ಥ ಪ್ರಸಾದ ಕೊಟ್ಟ. ಅಲ್ಲೇ ಇದ್ದ 'ಹಡೆ ಫಕ್ಕು' ಎಂದೇ ಖ್ಯಾತನಾಗಿ ಮನೆಯಲ್ಲಿದ್ದ ಕಾರಣದಿಂದ ಬ್ರಹ್ಮಚಾರಿಯೇ ಆಗಿ ಉಳಿದಿದ್ದ ಗಣಪ ಟಿ ವಿ ವರದಿಗಾರ್ತಿಯೊಬ್ಬಳಿಗೆ ದೇವಿಯ ಮಹಾತ್ಮೆ ಬಗ್ಗೆ ಕೊರೆಯುತ್ತಾ ಗೆರೆ ಎಳೆಯುತ್ತಿದ್ದ.
ಕೊಟ್ಟಿಗೆಯಿಂದ ಬಂದ ಭಟ್ಟರು ಎಲ್ಲರತ್ತ ನೋಡಿ ಸಮಾಧಾನದಲ್ಲಿಯೇ,"ಏನು ಬಂದಿದ್ದು" ಎಂದರು. ಅಷ್ಟರಲ್ಲಿ ಮುನೀರನ ಕಡೆ ತಿರುಗಿ, "ಸಾಬು, ಇವತ್ತಿಲ್ಲ. ಇನ್ನೊಂದು ಸತಿ ನೋಡನ" ಎಂದರು. ಉಸ್ಮಾನ್ ಖಾನ್ ಮುಖದಲ್ಲಿ ಒಮ್ಮೆ ಸಣ್ಣ ಸಿಟ್ಟು ಬಂತು. ಸ್ಥಳೀಯ ಹಿಂದೂ ಮುಖಂಡರು ಉಕ್ಕಿ ಬರುತ್ತಿದ್ದ ರೋಷವನ್ನು ಕಷ್ಟದಿಂದ ಅದುಮಿಟ್ಟುಕೊಂಡರು. ಮುನೀರ ಹೊರಡುತ್ತಿದ್ದಂತೆ ಸ್ವಭಾವತಃ ವಾಚಾಳಿಗಳಾದ ಬುದ್ಧಿ ಜೀವಿಯೊಬ್ಬರು ಕೇಳಿಯೇ ಬಿಟ್ಟರು"ಕೊಡ್ರೀ! ಏನಾದ್ರೂ ನಾವು ನೋಡ್ಕತ್ತೀವಿ. ನಿಮ್ಮ ಸೊತ್ತು.ನಿಮ್ಮಿಷ್ಟ.ಯಾರಿಗಾದ್ರೂ ಮಾರಿ. ತಗೊಂಡೋನು ತಾನೇ ತಿನ್ನಲಿ, ಬೇರೆ ಅವ್ರಿಗೆ ತಿನ್ನಸ್ಲಿ.ಇವರದ್ದೇನು ಕ್ಯಾತೆ? ಹೊಳೆ ನೀರಿಗೆ ದೊಣ್ಣೆ ನಾಯ್ಕನ ಅಪ್ಪಣೆ ಬೇಕಾ?" ಎಂದ. ಇನ್ನೊಬ್ಬ ಬಾಯಿ ಹಾಕಿ,"ಬ್ರಾಹ್ಮಣ್ರು ಇಂಥಾ ಕ್ರಾಂತಿಕಾರಿ ಆಲೋಚನೆ ಮಾಡೋ ತನಕ ದೇಶದಲ್ಲಿ ಬದಲಾವಣೆ ಸಾಧ್ಯ ಇಲ್ಲ. ಅದೂ ಹಳ್ಳೀಲಿ ಇಂಥದ್ದಾದ್ರೆ ಕ್ರಾಂತಿ ಸ್ಟ್ರಾಂಗ್ ಆಗೋದು. ರಷ್ಯಾ ದಲ್ಲಿ.........." ಎನ್ನುತ್ತಿದ್ದ. ಮಾಧ್ಯಮದವರು ಕ್ಯಾಮರಾ ಮೈಕ್ ಎಲ್ಲಾ ಅವರ ಕಡೆ ಹಿಡಿದಿದ್ದರು.
ಭಟ್ಟರು ಸಮಾಧಾನದಿಂದಲೇ ಎಲೆಗೆ ಸುಣ್ಣ ಹಚ್ಚುತ್ತಾ "ಎಲ್ಲಾ ನಿಮಗೇ ತಿನ್ನಿಸಿ ಆಯ್ತಲ್ಲ. ಇನ್ನು ಮುನೀರಂಗೆ ಬಾಳೆ ಹಣ್ಣು ಎಲ್ಲಿಂದ ಕೊಡಲಿ" ಎಂದರು. ಉಸ್ಮಾನ್ ಖಾನ್ ಅವರ ಮುಖದಲ್ಲಿ ಕೋಪ ಸ್ವಲ್ಪ ಕಡಿಮೆ ಆಯಿತು. ಅಲ್ಲೇ ಇದ್ದ ರಮಾನಂದ,"ನಾ ಬಡ್ಕಂಡಿ ಭಟ್ರು ಒಳ್ಳೆ ಜನ. ನಮ್ಮೂರಿನ ಸಾಬ್ರು ದನ ಕಡಿಯ ಅಷ್ಟು ಮುಂದುವರಿಲೆ ಅಂತ. ನಿಂಗ ಕೇಳ್ಲೇ ಇಲ್ಲೆ" ಎಂದು ಹಿಂದೂ ಮುಖಂಡನ ಕಡೆ ನೋಡಿ ಸಿಟ್ಟಿನಿಂದ ಹೇಳುತ್ತಿದ್ದ. ಆ ಮನುಷ್ಯ ತಕ್ಷಣ ಹಡೆ ಫಕ್ಕು ಗಣಪನನ್ನು ಎಳೆದು ಬಾರಿಸ ತೊಡಗಿದ. ಅವನ ಪರಿಸ್ಥಿತಿ ನೋಡಲಾರದೇ ಭಟ್ಟರ ಹೆಂಡತಿ ಅವನನ್ನು ಬಿಡಿಸಿದರು.ಆಗ ರಮಾನಂದ ಗಣಪನ ಕಾಲರ್ ಹಿಡಿದು ಮುಖ ಉರಿಸುತ್ತಾ ಹೇಳಿದ"ಬೋಳಿ ಮಗನೆ ನಿಂದು ಬಾಯಿಗೆ ಮುಕ್ಳಿಗೆ ವ್ಯತ್ಯಾಸ ಇಲ್ಯಾ? ತೆಗೆಯಕ್ಕಿದ್ರೆ ಸಮಯ ಸಂದರ್ಭ ಒಂದೂ ಗೊತ್ತಾಗ್ತಲ್ಲೆ.ಅದ್ರಿಂದ ಹೊರಗೆ ಬರದೂ ಗಬ್ಬೇ ಬರೀ". ಪೆಟ್ಟಿನ ಉರಿ ಮತ್ತು ಎಲ್ಲರ ಮುಂದೆ ಆದ ಅವಮಾನದಿಂದ ತತ್ತರಿಸಿದ್ದ ಗಣಪ  ಸೆಟೆದು ನಿಂತ."ಈಶು ಮಾಣಿ ಮೊಬೈಲ್ನಲ್ಲಿ ಭಟ್ರು ದನ ಕಡಿಯಕ್ಕೆ ಹೇಳಿದ್ದು ರೆಕಾರ್ಡ್ ಆಯ್ದು. ಬೇಕಾರೆ ಅವನ್ನೇ ಕರೆಸು. ಗೊತ್ತಾಗ್ತು" ಎಂದ.
ಅಷ್ಟು ಹೊತ್ತಿನ ತನಕ ಸುಮ್ಮನಿದ್ದ ಭಟ್ಟರ ಮಗ ಗಾಡಿ ಹತ್ತಿ ಹೋಗಿ "ಈಶು ಮಾಣಿಯನ್ನು ಕರೆತಂದ.ಗಣಪ, "ಹಾಕಾ, ನಿನ್ನೆ ಡೈರಿಲಿ ಕೇಳ್ಸಿದ್ದನ್ನ. ಭಟ್ಟರ ಹಣೆ ಬರಹೆ ಎಲ್ಲರಿಗೂ ಗೊತ್ತಾಗ್ಲಿ" ಎಂದ. ರಮಾನಂದ ಬಾಯಿ ಹಾಕಿ,"ಭಟ್ರು ನಿನ್ನೆ ಫೋನಲ್ಲಿ ಮುನೀರನ ಹತ್ರ ದನ ತಗಂಡು ಹೋಗಕ್ಕೆ ಹೇಳು ಅಂದಿದ್ದನ್ನ ನೀನು ಕೇಳಸ್ಕೈಂದ್ಯಾ" ಎಂದ. ಈಶು ಮಾಣಿ ರಮಾನಂದನಿಗೆ "ಇಲ್ಲೆ" ಎಂದ. ತಲೆ ಕೆಟ್ಟಂತಾಗಿದ್ದ ಗಣಪ, "ಮತ್ತೆ ಮೊಬೈಲ್ನಲ್ಲಿರದು ಎಂತ?"ಎಂದ. ಈಶು,"ಕತ್ತೆ ವಯಸ್ಸಾಯ್ದು ನಿಂಗೆ. ಹಿಂದೆ ಮುಂದೆ ಗೊತ್ತಾಗ್ತಲ್ಲೆ.ಹೊಟ್ಟೆಗೆ ಅನ್ನ ತಿಂತ್ಯಾ ಸಗಣಿ ತಿಂತ್ಯಾ? ಆನು ಅರ್ಧ ಮಾತು ಮಾತ್ರ ರೆಕಾರ್ಡ್ ಮಾಡಿದ್ದಿ. ಭಟ್ರು ಹೇಳಿದ್ದು ಹೌದನಾ!!! ಕಡಿದು ಮುನೀರಂಗೆ ಕಳಿಸಿಬಿಡು ಅಂತ. ಹೌ ಬಿಟ್ಟು ಹೋಯ್ದು. ನಾ ನಿನ್ನೆ ಡೈರಿಲಿ ಎಂತೋ ಒತ್ತಕ್ಕೆ ಹೋಗಿ ಅದು ಒತ್ತಿ ಹೋತು. ಅದು ಕಲಿಯಕ್ಕೆ ನಾ ರೆಕಾರ್ಡ್ ಮಾಡಿದ್ದು" ಅಂದ.
ಅಲ್ಲಿದ್ದ ಉಸ್ಮಾನ್ ಖಾನ್, ಮುನೀರ್ ಮತ್ತಿತರ ಸಾಬರ ಹುಡುಗರು ಒಮ್ಮೆ ದೊಡ್ಡದೊಂದು ಉಸಿರು ಬಿಟ್ಟರು. ಭಟ್ಟರ ಹೆಂಡತಿ ಮೇಲೆ ನೋಡಿ ಕೈ ಮುಗಿದರು. ಇತ್ತ ಈಶು, ರಮಾನಂದ ಮತ್ತೆ ಭಟ್ಟರ ಮಗ ಸೇರಿ ಗಣಪನನ್ನು ರಿಪೇರಿ ಮಾಡುತ್ತಿದ್ದರು. ಅದಕ್ಕೆ ಕೆಲ ಸಾಬರ ಹುಡುಗರೂ ಜೊತೆಯಾದರು.
ಒಬ್ಬ ಬುದ್ಧಿ ಜೀವಿ ಕ್ಯಾಮರಾ ನೋಡಿ ಇಟ್ಟ ಮೈಕ್ ನಲ್ಲಿ ಹೀಗೆ ಒದರುತ್ತಿದ್ದ "ಅಲ್ಪ ಸಂಖ್ಯಾತರ ಮೇಲೆ ಸುಳ್ಳು ಸುದ್ದಿ ಹರಡುವ ಜನ ಯಾವಗಲೂ ಇದ್ದಾರೆ.ಕೇಳುವವರು ಬುದ್ಧಿ ಉಪಯೋಗಿಸ ಬೇಕು. ಅವರುಗೆ ಅಲ್ಪ ಸಂಖ್ಯಾತರ ಮೇಲೆ ಸುದ್ದಿ ಮಾಡಿ ಅವರ್ನ್ನು ಹಿಂಸಿಸುವ ಅಭ್ಯಾಸ ಉದೆ. ಇದು ಅಸಹಿಷ್ಣುತೆ.ನಮಗೆ ವಿಶಾಲ ಮನಃಸ್ಥಿತಿ ಇರಬೇಕು. ಝೆಕ್ ರಿಪಬ್ಲಿಕ್ ನಲ್ಲಿ ಒಂದ್ಸಲಾ.........." ಇನ್ನೊಂದು ಕ್ಯಾಮರಾ ನೋಡಿ ಹಿಂದೂ ಮುಖಂಡ ಘರ್ಜಿಸುತ್ತಿದ್ದ "ಸುಳ್ಳು ಹೇಳಿ ಹಿಂದೂಗಳನ್ನು ಒಡೆಯುವ ಹುನ್ನಾರ ಇವರದ್ದು. ಈ ಬುದ್ಧಿ ಜೀವಿಗಳಿಗೆ ಪ್ರಚಾರ ಬೇಕು ಅಷ್ಟೆ. ನಮ್ಮ ಪರಂಪರೆ ಅಂದ್ರೆ......................................................"
ಆಗಿದ್ದು ಇಷ್ಟೆ, ಡೈರಿಯಲ್ಲಿ ಅರ್ಧಂಬರ್ಧ ಕೇಳಿದ ಮಾತುಗಳನ್ನು ಗಣಪ ತನ್ನ ಹರಕು ಬಾಯಿಯಿಂದ ಬುದ್ಧಿ ಜೀವಿಗಳಿಗೂ ಹೇಳಿದ್ದ, ಖಾನ್ ಸಾಹೀಬ್ರಿಗೂ ಒದರಿದ್ದ, ಹಿಂದೂ ಮುಖಂಡನ ಕಿವಿ ಕೂಡಾ ಚುಚ್ಚಿದ್ದ.
ಮಾಧ್ಯಮದವರು ಒಂದು ಸೆನ್ಸೇಷನಲ್ ನ್ಯೂಸ್ ಹುಡುಕಿ ಬಂದಿದ್ದರು. ಅದು ಸಿಗದೇ ಅವರಿಗೆ ಬೇಸರವಾಯ್ತು.ಬುದ್ಧಿ ಜೀವಿಗಳು ಅಸಹಿಷ್ಣುತೆ ಕೂಗು ಹಾಕಿ ಜಾತ್ರೆಯಲ್ಲಿ ತಮಗೆ ಸಿಕ್ಕ ಅವಾರ್ಡ್ ಹಿಂದೆ ಕೊಡುವ ಯೋಚನೆ ಮಾಡಿದ್ದರು. ಅದು ನಡೆಯಲಿಲ್ಲ ಎನ್ನುವ ಕೊರಗು ಅವರಿಗೆ. ಗೋ ಹತ್ಯೆ ನಿಲ್ಲಿಸಿ ಹೆಸರು ಮಾಡುವ ಹಂಬಲ ಹೊಂದಿದ್ದ ಹಿಂದೂ ಮುಖಂಡರಿಗೆ ಅದು ಆಗಲಿಲ್ಲವಲ್ಲಾ ಎಂದು ನೋವು. ಆದರೆ ಉಳಿದವರಿಗೆಲ್ಲಾ ಸಮಾಧಾನ. ಗಣಪನಿಗೆ ಪೆಟ್ಟು, ಅದು ಅವನಿಗೆ ಹೊಸದಲ್ಲ.