Thursday, June 3, 2021

ವಾಲಿಪ್ರಕರಣ ಅಧ್ಯಾಯ-9 ವಾಲಿಯಾತ್ರೆ

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶಯನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ. ಸುಗ್ರೀವನೊಂದಿಗೆ ನಡೆದ ಕೂಟಯುದ್ಧದಲ್ಲಿ ವಾಲಿಯ ಕೈ ಮೇಲಾಗುತ್ತಿದ್ದ ಹೊತ್ತಿನಲ್ಲಿ ಆತನ ಎದೆಯ ಎಡಭಾಗಕ್ಕೆ ಬಾಣವೊಂದು ಪ್ರವೇಶಿಸುತ್ತದೆ. ಆಘಾತಕ್ಕೆ ಕುಸಿದು ಬಿದ್ದ ವಾಲಿಯ ಕಣ್ಣಿಗೆ ಆಕೃತಿಯೊಂದು ಕಾಣಿಸುತ್ತದೆ.ರಾಮನನ್ನು ಕಂಡ ವಾಲಿ ಆತನನ್ನು ಪರಿಪರಿಯಾಗಿ ಜರೆಯುತ್ತಾನೆ. ವಾಲಿಯ ಆಕ್ಷೇಪಗಳಿಗೆಲ್ಲ ರಾಮ ಉತ್ತರಿಸಿ, ವಾಲಿಗೆ ಬದುಕುವಾಸೆ ಇದ್ದರೆ ಹೊಡೆದ ಬಾಣವನ್ನು ಮತ್ತೆ ಹಿಂದೆ ಕರೆಯುವುದಾಗಿ ಹೇಳುತ್ತಾನೆ)

 

ಮೆಲು ದನಿಯಲ್ಲಿ ವಿನಮ್ರನಾಗಿ, "ರಾಮ!!" ಎನ್ನುತ್ತಾ ಮಾತಿಗಾರಂಭಿಸಿದ ವಾಲಿ. "ನಿನ್ನನ್ನು ಪರಿ ಪರಿಯಾಗಿ ನಿಂದಿಸಿ ಕಣ್ಣನ್ನು ಮುಚ್ಚಿ ಕುಳಿತವ ನಾನು. ಬಾಣದ ಏಟಿನ ಆಘಾತದಿಂದಾದ ಆಯಾಸದಿಂದಲೋ ಅಥವಾ ನಿನ್ನ ಮುಖ ನೋಡಬಾರದೆಂಬ ಹಠಕ್ಕೋ ಬಿದ್ದು ಕಣ್ಣು ಮುಚ್ಚಿದ್ದಲ್ಲ. ನಿನ್ನಿಂದ ಹೊರಹೊಮ್ಮುತ್ತಿದ್ದ ವಿಶಿಷ್ಠವಾದ ಪ್ರಭಾವಳಿಯನ್ನು ನೋಡಲಾರದೇ, ಅದರ ಕಾಂತಿಗೆ ಬೆರಗಾಗಿ ಕಣ್ಣುಗಳನ್ನು ಮುಚ್ಚಿದ್ದು ನಾನು. ಆದರೆ, ನಾನು ಕಣ್ಣುಗಳನ್ನು ಮುಚ್ಚಿದಾಗಲೂ ಅದೇ ಅದಮ್ಯ ಪ್ರಭೆ ನನಗೆ ಗೋಚರಿಸುತ್ತಿತ್ತು. ತಡೆಯಲಾಗದೇ ಆಗೊಮ್ಮೆ ಈಗೊಮ್ಮೆ ಮಿಡುಕಿದವ ನಾನು. ಆದರೆ ನಿನ್ನ ಮೃದು ಮಧುರ ವಚನಗಳನ್ನು ಕೇಳುತ್ತ ಹೋದಂತೆ ಪ್ರಭೆಯ ಕಡೆ ಆಕರ್ಷಣೆ ಬೆಳೆಯತೊಡಗಿತ್ತು. ಮಾತುಗಳನ್ನು ನೀನು ಆಡುತ್ತಿದ್ದರೂ, ಅದರಲ್ಲಿ ನನ್ನದೇ ಧ್ವನಿಯನ್ನು ಕೇಳಿದಂತೆ ನನಗನ್ನಿಸುತ್ತಿತ್ತು ರಾಮ. ಅಂದರೆ ನೀನು ಆಡಿದ್ದು ವಾಲಿಯ ಅಂತರಂಗದಲ್ಲಿ ಹುದುಗಿ ಅಹಂಕಾರದಿಂದ ಆಚ್ಛಾದಿಸಲ್ಪಟ್ಟ ನನ್ನದೇ ಅಂತರಂಗದ ಮಾತುಗಳು ಎನ್ನುವುದನ್ನು ತಿಳಿದೆ. ಪ್ರಭೆಯನ್ನು ಕಣ್ಮುಚ್ಚಿದಾಗಲೂ ಕಾಣುತ್ತಿರುವುದಕ್ಕೆ ಕಾರಣ, ಅಂತರಂಗದ ಕಣ್ಣುಗಳು ಹಂತ ಹಂತವಾಗಿ ತೆರೆಯುತ್ತಿರುವುದೇ ಕಾರಣ ಎಂದು ಅರ್ಥವಿಸಿಕೊಂಡೆ. ಹೀಗೆ ಆಂತರ್ಯದ ಬಲ ಹೆಚ್ಚುತ್ತಲೇ ಹೋಯಿತು ನಿನ್ನ ಮಾತುಗಳನ್ನು ಕೇಳಿ. ಈಗ, ನೀನು ನಿನ್ನ ಮಾತುಗಳನ್ನೆಲ್ಲ ಮುಗಿಸಿದಾಗ ಅದೇನೋ ಒಂದು ರೀತಿಯ ದಿವ್ಯಾನುಭವವನ್ನು ಅನುಭವಿಸುತ್ತಿದ್ದೇನೆ. ಯಾವುದೋ ಒಂದು ನವ ಚೈತನ್ಯ ಮೂಡುತ್ತಿದೆ. ಅಂತರಂಗದ ಕಣ್ಣುಗಳು ತೆರೆದ ಮೇಲೆ ಬಾಹ್ಯ ಚಕ್ಷುಗಳಿಂದಲೂ ನಿನ್ನನ್ನು ಇನ್ನಷ್ಟು ನೋಡುವ ಬಯಕೆ ರಾಮ. ಮಾಡುವ ಕಾರ್ಯ ತ್ರಿಕರಣ ಪೂರ್ವಕವಾಗಿರಬೇಕಲ್ಲ. ಮನಸ್ಸಿನಲ್ಲಿ ನಿನ್ನ ಮಾತುಗಳನ್ನು ಪ್ರತಿಧ್ವನಿಸಿಕೊಂಡು ಮನಸ್ಸು ಶುದ್ಧವಾಗಿದೆ. ನಿನ್ನೊಡನೆ ಮಾತಾಡುತ್ತಾ ವಾಕ್ಷುದ್ಧಿಯನ್ನು ಪಡೆಯಬಹುದು, ಅದೇ ರೀತಿಯಲ್ಲಿ ಕಾಯದ ಕಣ್ಣುಗಳಿಂದ ನಿನ್ನನ್ನು ನೋಡುತ್ತಾ ಕಾಯಶುದ್ಧಿಯನ್ನೂ ಮಾಡಿಕೊಳ್ಳುವೆ." 

 

"ಮರ್ತ್ಯರಾಗಿ ನಮ್ಮ ಕರ್ತವ್ಯಗಳನ್ನು ಸದಾಚಾರದಿಂದ, ಸದ್ಭಾವನೆಯಿಂದ, ಸೋಹಮ್ ಭಾವವನ್ನು ತಳೆದು ಸರ್ವಶಕ್ತನಿಗೆ ಸಮರ್ಪಿಸಿ ಬದುಕುವುದೇ ಜೀವನ. ಹರಿಯುವ ನೀರಿಗಿರುವ ಹೆಸರು ಅದು. ಹೇಗೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಇರುವ ಸಾಗರವನ್ನು ಸೇರಿ ಮತ್ತೆ ಮೋಡವಾಗಿ ಮಳೆಯ ಹನಿಗಳಾಗಿ ಭೂಮಿಯನ್ನು ಸೇರುತ್ತದೆಯೋ ಅದೇ ರೀತಿ ಮರ್ತ್ಯರ ಬದುಕು. ಆದರೆ, ಜೀವನವನ್ನು ಸಾಗಿಸುವ ಪರಿ ಜೀವನ್ಮುಕ್ತತೆಯ ಕಡೆ ಇರಬೇಕೆಂದು ಆರ್ಷೇಯವಾದ ಶಾಸ್ತ್ರಗಳು-ಸ್ಮೃತಿಗಳು ಸೂತ್ರಗಳು ಹೇಳುತ್ತವೆ. ಶೃತಿಗಳೂ ಇದನ್ನೇ ಹೇಳುತ್ತವೆ. ಆದರೆ ವಾಲಿ ಅದನ್ನೆಲ್ಲವನ್ನೂ ಮರೆತು ಮೆರೆದ. ಇಂದ್ರನ ಮಗ ಎನ್ನುವ ಭಾವ ನನ್ನಲ್ಲಿ ನಾದು ದೊಡ್ಡವ ಎನ್ನುವ ಅಹಂಕಾರವನ್ನು ತಂದಿತು, ಅಹಂಕಾರದಿಂದ ದೊಡ್ದತನವನ್ನು ಮರೆಸಿತು, ಮೆರೆಯುವುದೇ ದೊಡ್ದ ತನ ಎನ್ನುವಂಥಾ ಭಾಸಕ್ಕೆ ನಾನು ಬಿದ್ದೆ."

 

"ಗೋ ಲಾಂಗೂಲ ಪ್ರಭು ಎನ್ನುವ ಅಭಿದಾನ ಕೊಟ್ಟ ಅಹಂಕಾರ ಗೋ ಎಂದೇ ಕರೆಯಲ್ಪಡುವ ಧರ್ಮದ ಕಡೆಗಿನ ಸೆಳೆತವನ್ನೇ ಮುಚ್ಚಿ ಹಾಕಿತಲ್ಲ ರಾಮ!! ಮಾಯೆ ಎಂದರೆ ಇದೇ ಅಲ್ಲವೇ? ಎಲ್ಲಾ ಮರ್ತ್ಯರಂತೆ ನಾನೂ ಮಾಯೆಯ ಸೆಳೆತಕ್ಕೆ ಸಿಕ್ಕಿದೆ. ಬಾಹ್ಯ ಬದುಕಿನಲ್ಲಿ ಯಾರೂ ಏರದ ಎತ್ತರಕ್ಕೇರಿದವ ವಾಲಿ ಆದರೆ ಮಾಯೆಯ ಸೆಳೆತದಿಂದ ಅಂತರಂಗದಲ್ಲಿ ಅಹಂಕಾರವೆಂಬ ಪಾಪದ ಕೂಪಕ್ಕೆ ಬಿದ್ದ. ಸಮುದ್ರ ಮಂಥನದ ಸಂದರ್ಭದಲ್ಲಿ ಶ್ರೀಮನ್ನಾರಯಣ ನನಗೆ ವರ ಕೊಡಲು ತಾನಾಗಿ ಬಂದ. ಅದೆಷ್ಟೋ ಜನ ಜನ್ಮ ಜನ್ಮಾಂತರಗಳ ತಪಸ್ಸಿನಿಂದ ಆತನನ್ನು ಸಾಕ್ಷಾತ್ಕರಿಸಿಕೊಂಡು, ವರ ಕೇಳಿದ್ದಂತೆ. ಆದರೆ ಬಲದ ಮದದಲ್ಲಿ ಮೈ ಮರೆತ ವಾಲಿಗೆ ಸತ್ಯ ಮರೆತು ಹೋಗಿತ್ತು. ಉದ್ಧಟತನದಿಂದ ಮಾರುತ್ತರಿಸಿದ್ದೆ. "ನಾನು ಯಾರಲ್ಲಿಯೂ ಏನನ್ನೂ ಕೇಳಿಕೊಳ್ಳುವವನಲ್ಲ; ನಿನಗೇನಾದರೂ ಬೇಕಾದಲ್ಲಿ ಕೇಳಿಕೊ" ಎಂದು. ಆತ ನನ್ನ ಪ್ರಾಣವನ್ನು ಕೇಳಿದ. ಕೊಡುವುದಕ್ಕೆ ಮುಂದಾದರೆ, ಮುಂದೊಮ್ಮೆ ಪಡೆಯುವುದಾಗಿ ಹೇಳಿ ಹೊರಟ. ಆಗ ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ನನ್ನಪ್ಪ ಕನಕ ಕಾಂಚನ ಮಾಲೆಯನ್ನು ಕೊಟ್ಟ. ತೊಟ್ಟೆನಾದರೆ ಎದುರಿದ್ದವನ ಅರ್ಧ ಬಲ ನನಗೆಶ್ರೀಮನ್ನಾರಯಣನೇ ಕೊಟ್ಟ ಪ್ರಾಣ ಅದನ್ನು ಇಂದ್ರಿಯಗಳೊಡನೆ ರಕ್ಷಿಸಿಕೊಳ್ಳಲು, ಸುಮನಸರೊಡೆಯ, ಇಂದ್ರಿಯಾಧಿಪತಿ ಇಂದ್ರ ಕೊಟ್ಟ ಮಾಲೆ. ಇದರ ಅಂತರಾರ್ಥವನ್ನು ಸ್ವಲ್ಪವಾದರೂ ತಿಳಿಯಬೇಕಿತ್ತು ವಾಲಿ. ಆದರೆ ಅಹಂಕಾರ ಪಟ್ಟ. ಶ್ರೀಮನ್ನಾರಯಣ ತನಗೆ ಎರವಾಗಿ ದೇಹದಲ್ಲಿಟ್ಟಿದ್ದಾನೆ ಪ್ರಾಣವನ್ನು. ಧರ್ಮಪಾಲಕ, ಸೃಷ್ಟಿಪಾಲಕನಿಂದ ದತ್ತವಾದ ಪ್ರಾಣ, ಪ್ರಾಣವನ್ನು ರಕ್ಷಿಸುವುದು ಸುಮನಸರ ಒಡೆಯ, ಸುಧರ್ಮ ಸಭೆಯ ಅಧ್ಯಕ್ಷನ ಮಾಲೆ. ಅರ್ಥಾತ್, ಹರಿಯ ಪ್ರಾಣವನ್ನು ಸುಮನಸ್ಸಿನಿಂದ ಇಂದ್ರಿಯಗಳೊಡನೆ ಸಂಯೋಜಿಸಿ ಧರ್ಮಕಾರ್ಯವನ್ನು ಸಾಧಿಸಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ."

 

"ರುಮೆಯನ್ನು ಗೋಲಭನಿಂದ ರಕ್ಷಿಸಿದಾಗ, ಇದೊಂದು ಧರ್ಮಕಾರ್ಯ, ನನ್ನ ಕರ್ತವ್ಯ ಎಂದಷ್ಟೇ ಭಾವಿಸಬೇಕಿತ್ತು. ಆದರೆ, ಗಂಧರ್ವನೊಬ್ಬನನ್ನು ಹತ್ತಿಕ್ಕಿದೆ ಎನ್ನುವ ಅಹಂಭಾವಕ್ಕೆ ಬಿದ್ದೆ. ರಾವಣ, ನನ್ನ ತಂದೆಯ ವೈರಿ. ಆತ ನನ್ನಲ್ಲಿ ಪರಿ ಪರಿಯಾಗಿ ಬೇಡಿದಾಗ ಆತನ ಮೇಲಿನ ಕರುಣೆಯಿಂದ ಆತನನ್ನು ಬಿಟ್ಟಿದ್ದಲ್ಲ. ಚತುರ್ದಶ ಭುವನ ತಲ್ಲಣನನ್ನೂ ನಾನು ಗಾರುಗೆಡಿಸಿದೆ ಎನ್ನುವ ಅಹಂಭಾವ. ಅವನನ್ನು ಬಿಟ್ಟು ಕಳುಹಿಸಿದರೆ ಮತ್ತೆ ನಾಲ್ಕು ಜನ ನನ್ನನ್ನು ಹೊಗಳುತ್ತಾರೆ ಎನ್ನುವ ಅರ್ಥಹೀನ ಆಸೆ. ಅಲ್ಲವಾದಲ್ಲಿ ಆತ ಸ್ನೇಹ ಹಸ್ತವನ್ನು ಚಾಚಿದಾಗ ನಾನೇಕೆ ಒಪ್ಪಬೇಕಿತ್ತು? ಇಂಥ ವಿಪರೀತ ಬುದ್ಧಿ ತನ್ನ ಪರಾಕಾಷ್ಠೆ ತಲುಪಿದ್ದನ್ನು ನೋಡಿದ ನನ್ನ ಜನ ಅರಿತರು ವಾಲಿಯ ವಿನಾಶ ಕಾಲ ಸಮೀಪಿಸಿದೆ ಎಂದು. ಅದಕ್ಕಾಗಿಯೇ ಸುಗ್ರೀವನ ಮಾತನ್ನು ನಂಬಿ ನಾನು ಸತ್ತೆನೆಂದು ತಿಳಿದಿದ್ದು."

 

"ಲೋಕಕ್ಕೆ ಲೋಕವೇ ನನ್ನ ಬಲವನ್ನು ಕಂಡು ಅಂಜಿತ್ತು-ಅಳುಕಿತ್ತು. ಕಿಷ್ಕಿಂಧೆಯಲ್ಲಿ ಅನೇಕ ಕಪಿಗಳು ನನ್ನನ್ನು ಹೊಗಳುತ್ತಿದ್ದರು. ಎಲ್ಲ ಹೊಗಳಿಕೆ ನನ್ನಲ್ಲಿ ಮದವನ್ನು ಇನ್ನಷ್ಟು ತುಂಬಿದವು ರಾಮ! ಎಷ್ಟರ ಮಟ್ಟಿಗಿನ ಮದ ಎಂದರೆ ಸುಗ್ರೀವ ನಿಷ್ಪ್ರಯೋಜಕ, ಆತ ಕೇವಲ ನನ್ನ ಆಜ್ಞಾಧಾರಕ ಎಂದೆನಿಸುವಷ್ಟು. ಮಾಯಾವಿಯ ಗುಹೆಯ ಬಾಗಿಲಿನಲ್ಲಿ ನಿಂತ ಸುಗ್ರೀವ ಕಾಣದಾದಾಗ, ನನಗೆ ಆತಂಕಕ್ಕಿಂತ ಹೆಚ್ಚು ಅವಮಾನವಾದಂತಾಯಿತು. ನನ್ನದೇ ಸಿಂಹಾಸನದ ಮೇಲೆ ನನ್ನ ಹೆಂಡತಿಯ ಜೊತೆ ಕುಳಿತಿದ್ದನ್ನು ನನ್ನ ಅಹಂಕಾರ ಸಹಿಸಲಿಲ್ಲ, ಹೊಡೆದಟ್ಟಿದೆ ಸುಗ್ರೀವನನ್ನು. ಸೆರೆಯಲ್ಲಿಟ್ಟೆ ರುಮೆಯನ್ನು. ಬೆನ್ನಟ್ಟಿ ಬೆನ್ನಟ್ಟಿ ಹೋಗಿ ಹೊಡೆದೆ ಸುಗ್ರೀವನನ್ನು. ಆದರೆ ಸುಗ್ರೀವ ಎಲ್ಲಿಯೂ ನನ್ನಲ್ಲಿ ಕ್ಷಮೆ ಕೇಳಲಿಲ್ಲ. ಆತನಲ್ಲಿದ್ದ ನಿಜದ ನೇರಕ್ಕೆ ನಡೆವ ಧೃಢತೆ ಇದು ಎನ್ನುವುದಾಗಿ ನಾನು ತಿಳಿಯಲಿಲ್ಲ. ಲೋಕಕ್ಕೆ ಲೋಕವೇ ವಾಲಿಯನ್ನು ಕಂಡು ನಡುಗುವಾಗ, ದಶಾನನನೇ ನನ್ನ ಕಾಲು ಹಿಡಿದಿರುವಾಗ ಸುಗ್ರೀವ ಒಬ್ಬ ಹಿಡಿಯದಿದ್ದರೆ ಅದು ನನಗಾಗುವ ಅವಮಾನ ಎಂದೇ ಭಾವಿಸಿದೆ. ಪರಿಪರಿಯಾಗಿ ರುಮೆ-ಸುಗ್ರೀವರನ್ನು ಹಿಂಸಿಸಿದೆ."

 

"ಯಾವುದರ ಧಾರಣೆಯಿಂದ ಧೀ ಶಕ್ತಿ ಪ್ರಚೋದಿಸಲ್ಪಟ್ಟು ಧೃತಿ ಸತ್ಕಾರ್ಯದೆಡೆಗೆ ಸಾಗುತ್ತದೆಯೋ, ನಿಟ್ಟಿನಲ್ಲಿ ಎದುರಾಗುವ ಅಡಚಣೆಗಳನ್ನು ಎದುರಿಸುವ ಧೈರ್ಯ ಲಭಿಸುತ್ತದೆಯೋ ಅದೇ ಧರ್ಮ. ಧರ್ಮ ಎನ್ನುವುದು ಸರ್ವತ್ರ ವ್ಯಾಪ್ತ. ಮುಂದೆ-ಹಿಂದೆ ಎನ್ನುವ ಬೇಧ ಅದಕ್ಕಿಲ್ಲ. ಅದರ ಮೂರ್ತ ರೂಪವೇ ನೀನು ರಾಮಚಂದ್ರ. ದೇಹವೇ ತಾನೆಂದು ಭ್ರಮಿಸಿ ಎದುರಿನಲ್ಲಿ ತನ್ನನ್ನು ತಾನು ಅತಿಯಾಗಿ ಬಿಂಬಿಸುತ್ತಾ ಸುತ್ತಮುತ್ತಲನ್ನು ಮರೆಯುವುದೇ ಅಹಂಕಾರ. ಅದರ ಪ್ರತೀಕವೇ ನಾನು. " ಯಾರಿಗಿದೆ ವಾಲಿಯ ಎದುರಿಗೆ ಬರಲು ಧೈರ್ಯ?" ಎಂದುಕೊಂಡು ಮೆರೆದೆ. ಅಹಂಕಾರದ ಮರೆಯಲ್ಲಿ ನಿಂತ ಧರ್ಮವನ್ನು ಮರೆತೆ. ಹಾಗೆ ಮರೆಯಿಂದಲೇ ಧರ್ಮ ನನ್ನನ್ನು ಘಾತಿಸಿತು, ನಿನ್ನ ಶರದ ರೂಪದಲ್ಲಿ."

 

"ನೀನು ಹೇಳಿದೆಯಲ್ಲ, ನಿನ್ನ ಶರ ಸಜೀವ ಶರ, ಸಂಕಲ್ಪ ಶರ ಎಂದು. ನಿಜ. ನಿನ್ನ ಶರ ಮನದ ಸಂಕಲ್ಪದಿಂದ ಹೊಡೆಯಲ್ಪಟ್ಟು ಮತ್ತೊಬ್ಬನ ಸಂಕಲ್ಪವನ್ನು ತೊಡೆಯುತ್ತದೆ. ವಾಲಿಯ ಸಂಕಲ್ಪವಲ್ಲವೇ ದೇಹ?! ನಿನ್ನ ಶರ ದೇಹವನ್ನು ಮಾತ್ರವಲ್ಲ ಮನಸ್ಸನ್ನೂ, ಅದರ ಕಾರಕವಾದ ಅಹಂಕಾರವನ್ನೂ ಬೇಧಿಸುತ್ತದೆ. ನೀನು ಕೇವಲ ದೇಹಕ್ಕೆ ಹೊಡೆಯುವುದಿಲ್ಲ ದೇಹಭಾವಕ್ಕೂ ಹೊಡೆದೆ. ಮನಸ್ಸಿನಿಂದ ಹೊಡೆದದ್ದು ಮಾತ್ರವಲ್ಲ, ವಾಲಿಯ ಮನಸ್ಸಿಗೂ ಹೊಡೆದೆ. ಮನಸ್ಸೇ ಇಲ್ಲವಾದ ಮೇಲೆ ಚಿತ್ತದ ಘನ ಆನಂದ ಸ್ವರೂಪದ ನಿರ್ವಿಕಲ್ಪ ಪ್ರಭೆಯ ದರ್ಶನವನ್ನೂ ಮಾಡಿಸಿದೆ, ಆಂತರ್ಯದಲ್ಲೂ ಬಹಿರಂಗದಲ್ಲೂ. ನಿನಗೆಲ್ಲಿಯ ಅಂತರಂಗ ಬಹಿರಂಗ ಬೇಧ. ಅಂತಸ್ಥವಾದ ಭಾವವೇ ನೀನು, ಈಗ ಎದುರಾಗಿ ನಿಂತಿದ್ದೀಯೆ."

 

"ಎಷ್ಟು ದೊಡ್ದತನ ನಿನಗೆ ರಾಮ!! ಅದೆಷ್ಟು ಕರುಣೆ ನಿನಗೆ!! ಆಗ ನಿಂದಿಸಿದಾಗ ಯಾವ ರೀತಿಯ ಭಾವ ನಿನ್ನ ಮುಖದಲ್ಲಿತ್ತೋ ಈಗ ಸ್ತುತಿಸುತ್ತಿರುವಾಗಲೂ ಅದೇ ಭಾವ ನಿನ್ನ ಮುಖದಲ್ಲಿದೆ. ಗಾಂಭೀರ್ಯವೆಂದರೆ ಇದೇ ಅಲ್ಲವೇ?! ದೊಡ್ದವನೆಂದು ಮೆರೆದು ದೊಡ್ಡತನವನ್ನು ಮರೆತ ವಾಲಿಗೆ ಮತ್ತೆ ಬದುಕುವಾಸೆ ಇದ್ದರೆ ಬಾಣವನ್ನು ಹಿಂದೆ ಕರೆಯುತ್ತೇನೆ ಎನ್ನುತ್ತಿದ್ದೀಯೆ. ಆದರೆ ರಾಮ, ನಿನ್ನ ಬಾಣ ತಾಗಿ ಅಂತಸ್ಥವಾದ ಭಾವದ ಪ್ರಭೆಯ ದರ್ಶನವನ್ನು ಅಂತರಂಗ ಬಹಿರಂಗ ಎರಡರಲ್ಲೂ ಅನುಭವಿಸಿ ಆಗಿದೆ. ಜೀವನದ ಪರಮ ಗುರಿಯನ್ನು ಕಂಡಾಗಿದೆ ಮತ್ತೇಕೆ ಘೋರ ಪಾಪದ ಸಂಸಾರ?"

 

"ನಿನ್ನಿಂದ ಅನುಗ್ರಹ ರೂಪವಾಗಿ ಮುಂದಿನ ಬದುಕನ್ನು ಪಡೆದೆನಾದರೆ ಬದುಕು ನನ್ನ ಇಷ್ಟು ದಿನದ ಬದುಕಿಗಿಂತ ಘೋರಭೀಕರವಾಗುತ್ತದೆ ರಾಮಚಂದ್ರ. ನಿನ್ನಿಂದ ಪಡೆದ ಬದುಕನ್ನು ನಿನ್ನ ದಾಸ್ಯದಲ್ಲಿಯೇ ಕಳೆಯುತ್ತೇನೆ ಖಂಡಿತ. ಆದರೆ ಲೋಕದ ಭಾವ ಏನಿದ್ದೀತು? ನೀನು ಅನುಗ್ರಹಿಸಿದ ಬದುಕು ಲೋಕದ ಪಾಲಿಗೆ ಭಿಕ್ಷೆಯಾಗಿ ಕಾಣಿಸೀತು. ವಾಲಿಯ ಭೂತಕಾಲ ಆತನನ್ನು ಬಿಡದಲ್ಲ. ಪ್ರಾರಬ್ಧ ಎಂದರೆ ಅದೇ ಅಲ್ಲವೇ? ವಾಲಿ ನಿಂದೆಗೊಳಗಾಗುತ್ತಾನೆ. ಮೆರೆದವ ತೆರುವ ಪರಿ ನೋಡು ಎನ್ನುತ್ತಾ ಲೋಕದ ಜನ ಆಡಿಕೊಳ್ಳುತ್ತಾರೆ ರಾಮಚಂದ್ರ.

ಈಗ ದಾಸ್ಯಕ್ಕೆ ಒಳಪಟ್ಟಿದ್ದಾನೆ, ಮೂರು ಲೋಕದಲ್ಲೂ ಮೆರೆದವ ಎಂದು ವಾಲಿಯ ಬದುಕು ಪರಿಹಾಸ್ಯಕ್ಕೀಡಾಗುತ್ತದೆ ರಾಮಚಂದ್ರ. ರಾಮನ ಅನುಗ್ರಹವಾದ ಬದುಕು ಲೋಕದ ನಿಂದೆಗೊಳಗಾಗುವುದು ಸಲ್ಲ. ಸತ್ಯ ಧರ್ಮದಿಂದ ಬದುಕುವುದು ಮೂಢ ಅಹಂಕಾರಿಗಳ ಕಣ್ಣಿಗೆ ದೌರ್ಬಲ್ಯವಾಗಿ ಭಾಸವಾಗುತ್ತದೆ. ನಾನದನ್ನು ಮೀರಿದರೂ ಪ್ರಯೋಜನವಿಲ್ಲ. ರಾಮನ ಅನುಗ್ರಹ ಯಾವ ರೀತಿಯಲ್ಲೂ ಪರಿಹಾಸ್ಯಕ್ಕೋ ನಿಂದನೆಗೋ ಒಳಗಾಗಬಾರದು. ಅದಕ್ಕಾಗಿ ನಾನು ಮತ್ತೆ ಬದುಕುವುದಿಲ್ಲ. ತಿಳಿದಿದ್ದೇನೆ ರಾಮ. ಘೋರ ಪಾಪಗಳನ್ನು ಮಾಡಿದ ಕಾಯದಿಂದ ಮೋಕ್ಷ ಲಭಿಸುವುದಿಲ್ಲ. ಆದರೆ, ಮುಂದಾದರೂ ಮೋಕ್ಷ ಸಾಧಿಸುವ ಬದುಕು ಮತ್ತು ಬುದ್ಧಿಯನ್ನು ಅನುಗ್ರಹಿಸು ರಾಮ."

 

"ಮರ್ತ್ಯ ಲೋಕದ ಯಾತ್ರೆಯನ್ನು ಮುಗಿಸುವ ಮುನ್ನ ಇಲ್ಲಿನ ನನ್ನ ಕೆಲವು ಬಾಧ್ಯತೆಗಳನ್ನೂ ಮುಗಿಸಬೇಕಲ್ಲ. ಅಷ್ಟು ಅವಕಾಶ ಕೊಡು. ತಾರೆ, ಇತ್ತ ಬಾ!! ಸುಗ್ರೀವ ನೀನೂ ಬಾ!! ಮಗನೇ ಅಂಗದ ಬಾರಪ್ಪಾ!!" ಎಂದು ತನ್ನವರನ್ನು ಹತ್ತಿರ ಕರೆದ. ತಾರೆಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ ವಾಲಿ.

 

"ತಾರೆ, ಹಿಂದೊಮ್ಮೆ ನಾನು ಬದುಕಿಯೂ ಸತ್ತಾಗ ನೀನೊಂದು ದಾರಿಯನ್ನು ಕಂಡುಕೊಂಡಿದ್ದೆ. ಈಗ ನಿಜವಾಗಿ ಸತ್ತಮೇಲೂ ದಾರಿ ನಿನಗೆ ಮುಕ್ತವಾಗಿದೆ. ನೀನು ಆತಂಕಪಡಬೇಡ. ಸುಗ್ರೀವ, ನಾನು ರುಮೆಯನ್ನು ಹಿಂಸಿಸಿದ್ದಕ್ಕಾಗಿ ತಾರೆಯ ಮೇಲೆ ಸಿಟ್ಟನ್ನು ತೀರಿಸಿಕೊಳ್ಳಬೇಡ. ಅಂಗದ, ನಿನಗಿನ್ನು ಸುಗ್ರೀವನೇ ತಂದೆ. ಆತ ಏನಾದರೂ ಬೈದಲ್ಲಿ, ಶಿಕ್ಷಿಸಿದಲ್ಲಿ ಅದು ನಿನ್ನ ಒಳ್ಲೆಯದಕ್ಕೆಂದು ತಿಳಿ. ಸುಗ್ರೀವನಿಗೆ ಎಂದೂ ಎದುರಾಡಬೇಡ. ನಿಷ್ಠೆಯಿಂದಿರು. ಶ್ರೀರಾಮನ ಸೇವೆ ಎಂದು ಭಾವಿಸಿ ಸುಗ್ರೀವನನ್ನು ಸೇವಿಸು. ಸುಗ್ರೀವನ ಮನಸ್ಸನ್ನೆಂದೂ ನೋಯಿಸಬೇಡ. ಸುಗ್ರೀವ, ನನ್ನ ಕಾಯವನ್ನು ರಕ್ಷಿಸಿದ ಕನಕ ಕಾಂಚನ ಮಾಲೆಯನ್ನು ನೀನಿಟ್ಟುಕೋ. ಇದು ಕೊಡುವ ಬಲ ರಾಮನ ಕಾರ್ಯಕ್ಕೆ, ಧರ್ಮ ಕಾರ್ಯಕ್ಕೆ ಎನ್ನುವುದನ್ನು ಅರಿತುಕೋ."

 

"ಶ್ರೀರಾಮಚಂದ್ರ!! ಸುಗ್ರೀವ ಅಂಗದರಿಬ್ಬರೂ ವಾನರರು. ಕಪಿ ಬುದ್ಧಿಯನ್ನು ತೋರಿಯಾರು. ಅವರಿಗೆ ಸರಿಯಾದ ದಾರಿಯನ್ನು ತೋರಿಸು. ಎಷ್ಟೇ ಪ್ರಯತ್ನಿಸಿದರೂ ಮಗ ಅಂಗದನ ಮೋಹ ನನ್ನನ್ನು ಬಿಡುತ್ತಿಲ್ಲ. ನಿನ್ನ ತಮ್ಮಂದಿರಲ್ಲಿ ಅವನೂ ಒಬ್ಬ ಎಂದು ತಿಳಿದು ಅವನನ್ನು ರಕ್ಷಿಸುವ ವಚನ ಕೊಡು"

 

"ವಾಲಿ, ನನಗಿನ್ನು ನಾಲ್ಕು ತಮ್ಮಂದಿರು, ನಾಲ್ಕನೆಯವನೇ ಅಂಗದ" ಎಂದು ರಾಮ ಅಭಯವನ್ನು ಕೊಟ್ಟ.

 

ವಾಲಿಯ ಮುಖದ ಮೇಲೆ ದೇವ ಸದೃಷ ತೇಜಸ್ಸು ಕಂಗೊಳಿಸಿತ್ತಿತ್ತು. ಮಂದಹಾಸ ಮಿನುಗುತ್ತಿತ್ತು. ಅಂಗದನ ಮೇಲಿಟ್ಟ ಕೈ ನಿಧಾನವಾಗಿ ನೆಲವನ್ನು ತಾಗಿತ್ತು. ವೀರ ಸ್ವರ್ಗದತ್ತ ನಡೆಯುತ್ತಿದ್ದ ದೇಹವನ್ನು ತ್ಯಜಿಸಿದ ವಾಲಿ. ಅಂಥ ಮಹಾಪ್ರಾಣವನ್ನು ಹೊತ್ತಿದ್ದ ದೇಹಕ್ಕೆ ಅಂಗದ ಸುಗ್ರೀವರು ದುಃಖಿಸುತ್ತಲೇ ವಂದಿಸಿದರು. ತಾರೆಯ ಅಳು ಮೇರೆ ಮೀರಿತ್ತು. ಹನುಮ ತಾರ ಸುಷೇಣ ಜಾಂಬವ ಗಂಧಮಾದನರು ಸಮಾಧಾನಿಸಿ ವಾಲಿಯ ದೇಹಕ್ಕೊದಗ ಬೇಕಾದ ಸಂಸ್ಕಾರಕ್ಕೆ ಸಿದ್ಧತೆ ಮಾಡಿದರು.

 

(ಮುಗಿಯಿತು)

Tuesday, June 1, 2021

ವಾಲಿಪ್ರಕರಣ ಅಧ್ಯಾಯ-8-ರಾಮವಾಕ್ಯ

 

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ. ಸುಗ್ರೀವನೊಂದಿಗೆ ನಡೆದ ಕೂಟಯುದ್ಧದಲ್ಲಿ ವಾಲಿಯ ಕೈ ಮೇಲಾಗುತ್ತಿದ್ದ ಹೊತ್ತಿನಲ್ಲಿ ಆತನ ಎದೆಯ ಎಡಭಾಗಕ್ಕೆ ಬಾಣವೊಂದು ಪ್ರವೇಶಿಸುತ್ತದೆ. ಆಘಾತಕ್ಕೆ ಕುಸಿದು ಬಿದ್ದ ವಾಲಿಯ ಕಣ್ಣಿಗೆ ಆಕೃತಿಯೊಂದು ಕಾಣಿಸುತ್ತದೆ.ರಾಮನನ್ನು ಕಂಡ ವಾಲಿ ಆತನನ್ನು ಪರಿಪರಿಯಾಗಿ ಜರೆಯುತ್ತಾನೆ. ರಾಮ ಅದಕ್ಕೆ ಉತ್ತರ ಕೊಡುವುದಕ್ಕೆ ಮುಂದಾಗಿದ್ದಾನೆ.)

 

ಆಪ್ತತೆ ಬೆರೆತ ಸೌಮ್ಯವಾದ ಮೃದು ಮಧುರ ಧ್ವನಿಯಲ್ಲಿ ಅಧಿಕಾರಯುತ ವಾಣಿಯಲ್ಲಿ ವಾಲಿಯನ್ನು ಸಂಬೋಧಿಸಿದ ಶ್ರೀರಾಮಚಂದ್ರ. "ವಾನರಾಧಿಪ!! ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದು ನನ್ನ ಬಾಧ್ಯತೆಯೂ ಆಗಿದೆ. ಇದಕ್ಕೆ ಕಾರಣ ನಾನು ತಪ್ಪು ಮಾಡಿದ್ದೇನೆ, ನ್ಯಾಯಾಧಿಕಾರಿಯಾಗಿ ಕಿಷ್ಕಿಂಧೆಯಲ್ಲಿ ಮೆರೆದ ನಿನ್ನ ಭೂಮಿಯಲ್ಲಿ ಅಪರಾಧ ಎಸಗಿದ್ದೇನೆ ಎಂದು ತಿಳಿಯಬೇಡ. ಬದಲಾಗಿ ನಿನ್ನ ದೊಡ್ದತನವನ್ನು ಗೌರವಿಸಿ ಉತ್ತರಿಸುತ್ತಿದ್ದೇನೆ. ದೊಡ್ದವನೊಬ್ಬ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಅರಸನಾಗಿ ನನ್ನ ಕರ್ತವ್ಯ, ಸೂರ್ಯವಂಶೀಯನಾಗಿ ನನ್ನ ಬಾಧ್ಯತೆಯಾಗಿದೆ. ತನ್ಮೂಲಕ ನಿನ್ನ ದೊಡ್ದತನವನ್ನು ಗುರುತಿಸಿ ಅದನ್ನು ಗೌರವಿಸುತ್ತಿದ್ದೇನೆ. ದೊಡ್ಡವನಾದ ನಿನ್ನನ್ನು ಗೌರವಿಸದಿದ್ದಲ್ಲಿ ಅದು ಸಣ್ಣತನವಾಗುತ್ತದೆ. ನನಗೆ ವಿದ್ಯೆ ಕಲಿಸಿದ ಗುರುಗಳಿಗೆ, ನನು ಸಂಗಡಿಸಿದ ಸೇವಿಇಸಿದ ಋಷಿಗಳಿಗೆ ಅದು ಅವಮಾನ. ನಾನದನ್ನು ಮಾಡಲು ಸಿದ್ಧನಿಲ್ಲ. ಸತ್ಪುರುಷರಿಗೆ ಅದು ಸಾಧುವಾದ ವ್ಯವಹಾರವಲ್ಲ. ಶೂದ್ರನಾದ ಗುಹನನ್ನು, ಪಕ್ಷಿಯಾದ ಜಟಾಯುವನ್ನು, ದೈತ್ಯನಾದ ನ್ಯಗ್ರೋಧನನ್ನು, ಮಾತಂಗ ಕನ್ಯೆಯಾದ ಶಬರಿಯನ್ನು, ಶಾಪಗ್ರಸ್ಥನಾದ ಕಬಂಧನನ್ನು, ನಾನು ಸಣ್ಣವರನ್ನಾಗಿ ನೋಡಲಿಲ್ಲ. ನಿನ್ನ ತಮ್ಮನಾದ ಸುಗ್ರೀವನನ್ನು ಗೌರವಿಸಿ ಅಗ್ನಿಸಾಕ್ಷಿಯಾಗಿ ವಚನಬದ್ಧನಾಗುವ ನಾನು ನಿನ್ನನ್ನು ಅದು ಹೇಗೆ ಗೌರವಿಸದೇ ಇರಲು ಸಾಧ್ಯ?"

 

"ನಿನ್ನ ದೊಡ್ದತನವನ್ನೊಮ್ಮೆ ನನಪು ಮಾಡಿಕೋ ವಾಲಿ. ಯಾರೂ ಹುಟ್ಟಿನಿಂದ ದೊಡ್ಡವರಾಗುವುದಿಲ್ಲ. ಆದರೆ ನೀನು ಹುಟ್ಟಿನಿಂದಲೇ ದೊಡ್ಡವ. ದೇವಕಲ್ಪದಿಂದ ಹುಟ್ಟಿದವ ನೀನು. ಗೋಲಾಂಗೂಲ ಯೋನಿಜನಾದ ಋಕ್ಷರಜಸ್ಸು, ಕೊಳವೊಂದರಲ್ಲಿ ಮಿಂದು ಎದ್ದಾಗ ಹೆಣ್ಣಾಗುವುದು ಎಂದರೇನು? ಹೆಣ್ಣಿನ ಬಾಲಕ್ಕೆ, ದೇವೇಂದ್ರನ ತೇಜಸ್ಸು ತಾಗಿ ಮಗುವೊಂದು ಜನಿಸುವುದೆಂದರದು ಸಾಮಾನ್ಯ ಸಂಗತಿಯಲ್ಲ. ಸಂತಾನಾಪೇಕ್ಷಿಯಾಗಿ ಹೋದ ಋಕ್ಷರಜಸ್ಸು ಬ್ರಹ್ಮನಿಂದಲೇ ಸೃಷ್ಟಿಸಲ್ಪಟ್ಟವ. ಆತನ ಪ್ರಾರಬ್ಧದಿಂದ ಆತ ಸಂತಾನ ಪಡೆಯಲು ತಪಸ್ಸು ಮಾಡುವ ಪರಿಸ್ಥಿತಿ ಬಂದದ್ದಲ್ಲವಲ್ಲ? ಅದು ದೇವಕಲ್ಪ. ಸುಧರ್ಮ ಸಭೆಯ ಅಧ್ಯಕ್ಷ, ಶತ ಅಶ್ವಮೇಧಗಳನ್ನು ಮಾಡಿದ ಇಂದ್ರನೇನು ಕಾಮಮೋಹಿತನಾಗಿ ತೇಜಸ್ಸನ್ನು ಸುರಿಸಿದ್ದಲ್ಲ. ನಿನ್ನಂಥ ಒಬ್ಬ ಭೂಮಿಯ ಮೇಲೆ ಜನಿಸಬೇಕು ಎಂದು ದೇವೇಶನ ಬಯಕೆ ಅಲ್ಲಿದೆ ವಾಲಿ. ಇಂದ್ರನ ತೇಜಸ್ಸೇನು ಸಾಮಾನ್ಯವೇ? ಅದೆಷ್ಟೋ ಋಷಿ ಮುನಿಗಳು, ಧರ್ಮಾತ್ಮರಾದವರು ಮಾಡುವ ಯಜ್ಞ ಯಾಗಾದಿಗಳ ಹವಿಸ್ಸನ್ನು ಆಹಾರವಾಗಿ ಪಡೆದ ಇಂದ್ರನ ತೇಜಸ್ಸು ಉಂಟಾಗುವುದಲ್ಲವೇ? ತೇಜಸ್ಸು ಬಿದ್ದದ್ದಾದರೂ ಎಲ್ಲಿಗೆ? ಗೋ ಲಾಂಗೂಲ ಪ್ರಭುವಾದ ಋಕ್ಷರಜಸ್ಸಿನ ಬಾಲಕ್ಕೆ. ಗೋವಿನ ಬಾಲವನ್ನು ಹೋಲುವ ಬಾಲ ನಿಮ್ಮದ್ದಾದ್ದರಿಂದ ನಿಮ್ಮನ್ನು ಗೋಲಾಂಗೂಲಗಳು ಎಂದು ಕರೆಯುವುದು ಎನ್ನುವ ವ್ಯಾಖ್ಯಾನ ಬಹಳ ನೀರಸ. ಗೋ ಎಂದರೆ ಧರ್ಮ ಎನ್ನುವ ಅರ್ಥವೂ ಇದೆ ಎನ್ನುವುದನ್ನು ನೀನು ಬಲ್ಲೆಯಲ್ಲ ವಾಲಿ? ಧರ್ಮ ನಿಮ್ಮ ಹಿಂದಿದೆ, ಧರ್ಮವನ್ನು ಮುಂದೆನಿಂತು ಅದನ್ನು ಮುಂದೊಯ್ಯುವವರು ಎನ್ನುವ ಸಂಕಲ್ಪದಿಂದಲೇ ಬ್ರಹ್ಮ ನಿಮ್ಮ ಯೋನಿಯನ್ನು ಸೃಜಿಸಿದ್ದು. ನಿಮ್ಮನ್ನು ಫಕ್ಕನೆ ನೋಡಿದರೆ ನರರೋ? (ನರೋ ವಾ) ಎನ್ನುವ ಭಾವ ಉಂಟಾಗುವುದರಿಂದ ನಿಮ್ಮನ್ನು ವಾನರರು ಎನ್ನುವುದಾಗಿ ಕರೆದದ್ದಲ್ಲವೇ ವಾಲಿ?"ನಿಮ್ಮಲ್ಲಿನ ಚಂಚಲವಾದ ಸ್ವಭಾವದಿಂದ ನಿಮ್ಮನ್ನು ಕಪಿಗಳು ಎಂದು ವಿನೋದಕ್ಕೆ ಆಡಿದ್ದು ಜನ ಅಷ್ಟೇ. ಇದೆನ್ನೆಲ್ಲವನ್ನೂ ನೀನು ಅರಿತಿದ್ದೀ ಆದರೆ ಈಗ ಮರೆತಿದ್ದೀಯೆ."

 

" ಯುಗದ ಆದಿ ಭಾಗದಲ್ಲಿ ನಡೆಯಿತು ಸಮುದ್ರಮಂಥನ ಎನ್ನುವಂಥ ಲೋಕೋತ್ತರವಾದ ಕಾರ್ಯ. ಮೂವತ್ತಮೂರು ಕೋಟಿ ದೇವತೆಗಳು ದೇವೇಂದ್ರನ ಮುಂದಾಳತ್ವದಲ್ಲಿ, ಅರವತ್ತಾರು ಕೋಟಿ ದೈತ್ಯರು ಬಲಿ ಎಂದು ಖ್ಯಾತನಾದ ಇಂದ್ರಸೇನನ ನೇತೃತ್ವದಲ್ಲಿ, ಕೂರ್ಮನ ಮೇಲೆ ಮಂದರಾಚಲವನ್ನು ಇಟ್ಟು ವಾಸುಕಿಯನ್ನು ಹಗ್ಗವಾಗಿಸಿ ಸಮುದ್ರವನ್ನು ಕಡೆದರು. ಒಂದು ಕಡೆಯಲ್ಲಿ ಸುಮನಸರೊಡೆಯ, ವರ್ತಮಾನದ ಇಂದ್ರ. ಇನ್ನೊಂದು ಕಡೆಯಲ್ಲಿ ಸಾವರ್ಣೀ ಮನ್ವಂತರದಲ್ಲಿ ಇಂದ್ರನಾಗುವ ಪರಮ ಧಾರ್ಮಿಕ ಬಲಿ. ಅವರೇ ಆಯಾಸಗೊಂಡಾಗ ನೀನು ಏಕಾಂಗಿಯಾಗಿ ಕಾರ್ಯವನ್ನು ನಡೆಸಿದೆ. ಯಥಾರ್ಥಕ್ಕೆ ನೋಡಿದರೆ ಅದು ನಿನ್ನ ಬಾಹು ಬಲಕ್ಕೆ ಸಂಬಂಧಿಸಿ, ಅದನ್ನು ಪ್ರದರ್ಶಿಸಲು ಸಿಕ್ಕ ಅವಕಾಶ. ಆದರೆ ಅಲ್ಲಿನ ರಹಸ್ಯವನ್ನು ನೀನು ಅರಿಯದಾದೆ. ಸುಮನಸರೊಡೆಯ ಸುಧರ್ಮ ಸಭೆಯ ಅಧ್ಯಕ್ಷ ಮತ್ತು ಪರಮ ಧಾರ್ಮಿಕ ಬಲಿ ಇವರಿಬ್ಬರ ಬಳಗಕ್ಕೂ ಆಗದ ಕಾರ್ಯವನ್ನು ಮಾಡಿದೆ ನೀನು ಅಂತಾದರೆ, ನಿನ್ನ ಆಂತರ್ಯದ ಬಲ ಎಷ್ಟಿರಬೇಕು ವಾಲಿ? ದೇವತೆಗಳನ್ನೂ ಮೀರಿದ ಸು-ಮನಸ್ಸು ನಿನಗಿತ್ತು. ಬಲಿಯನ್ನೂ ಮೀರಿಸಿದ ಧಾರ್ಮಿಕ ಆಚಾರ ನಿನ್ನಲ್ಲಿತ್ತು ಎಂದಲ್ಲವೇ ಅರ್ಥ?!" ಇಂಥಾ ನಿನ್ನನ್ನು, ಯಜ್ಞ ಮುಖೇನವಾಗಿ ಜನಿಸಿದ ನಾನು ಗೌರವಿಸದೇ ಇದ್ದರೆ ನಮ್ಮಿಬ್ಬರ ನಡುವಿನ ಆಧ್ಯಾತ್ಮಿಕ ಸಂಬಂಧದ ಮೂಲವನ್ನು ಅವಮಾನಿಸಿದಂತೆ. ಪರಿಣಾಮವಾಗಿ ನನ್ನನ್ನೂ, ಋಷ್ಯಶೃಙ್ಗರನ್ನೂ, ಯಜ್ಞವನ್ನೂ ಅವಮಾನಿಸಿದಂತೆ"

 

"ನಿನ್ನನ್ನು ನಾನು ಪ್ರಕಾರವಾಗಿ ನೋಡುವಾಗ, ನೀನು ಮೃಗ ಎನ್ನುವುದಾಗಲೀ ಅಥವಾ ವನಚರ ಎನ್ನುವುದಾಗಲೀ ಭಾವಿಸದೇ ಇರುವಾಗ, ಮಾಂಸಕ್ಕಾಗಿಯೋ, ಚರ್ಮಕ್ಕಾಗಿಯೋ, ಎಲುಬಿಗಾಗಿಯೋ ಅಥವಾ ಕೂದಲಿಗಾಗಿಯೋ ನಿನ್ನನ್ನು ಕೊಲ್ಲುತ್ತೇನೆ ಎನ್ನುವ ವಾದವೇ ಅಸಂಗತವಾಗುತ್ತದೆ. ನಿನ್ನನ್ನು ನೀನು ವನಚರ ಎಂದು ಕರೆದುಕೊಂಡೆ. ಅದನ್ನು ನೀನೇ ನಿರಾಕರಿಸುತ್ತಿದ್ದೀ, ನಿನ್ನನ್ನು ನೀನೊಬ್ಬ ರಾಜ, ನಾನು ರಾಜನನ್ನು ವಿನಾಕಾರಣ ಕೊಂದೆ ಎನ್ನುವುದಾಗಿ ಆರೋಪಿಸಿ, ನ್ಯಾಯಾಧಿಕಾರಿ ಎನ್ನುವ ನೆಲೆಯಲ್ಲಿ ನನ್ನನ್ನು ಪ್ರಶ್ನಿಸಿ. ನಿನ್ನ ಪ್ರಶ್ನೆಯನ್ನು ನೀನೇ ನಿರಾಕರಿಸುವಾಗ ಮತ್ತೆ ನಾನು ಉತ್ತರಿಸಬೇಕೇಕೆ? ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಸತ್ಯವನ್ನು ಹೇಳಲೇ ಬೇಕು. ಹೇಳುತ್ತೇನೆ.ಯಾಕೆಂದರೆ ಓರ್ವ ಅರಸನಾಗಿ ನನಗೆ ಅದು ಕರ್ತವ್ಯ."

 

"ನನ್ನನ್ನು ಪ್ರಶ್ನಿಸಿದೆಯಲ್ಲ, ಅರಸು ಮಕ್ಕಳು ಬೇಟೆಯಾಡಬಹುದು ಆದರೆ ನಿಮ್ಮ ಯೋನಿಯವರನ್ನಲ್ಲ ಎಂದು, ಮರು ಕ್ಷಣದಲ್ಲಿ ನನ್ನನ್ನು ಸಾಮ್ರಾಜ್ಯಕ್ಕೆ ಸಲ್ಲದವ ಅಂತ ನೀನು ಹೇಳುತ್ತಿದ್ದೀ. ಒಮ್ಮೆ ನಿನ್ನನ್ನು ರಾಜ ಎನ್ನುವೆ ಇನ್ನೊಮ್ಮೆ ನಿನ್ನನ್ನು ನೀನು ವನಚರ ಎನ್ನುತ್ತಿದ್ದೀ. ಆದರೆ, ನೀನು ವನವಾಸಿಯಂತೂ ಅಲ್ಲ. ಕಿಷ್ಕಿಂಧೆಯಂಥಾ ಪರಮ ವೈಭೋಗದ ನಗರವನ್ನು ಕಟ್ಟಿಕೊಂಡಿದ್ದೀಯೆ. ಹೆಂಡತಿ-ಮಕ್ಕಳು-ಬಾಂಧವರು ಮೊದಲಾದ ಮಾನವೀ ಸಹಜ ಸಂಬಂಧಗಳನ್ನು ಹೊಂದಿದ್ದೀಯೆ. ಆದರೆ ಅದಕ್ಕಿಂತಲೂ ಮಿಗಿಲಾದ ದ್ವಂದ್ವವನ್ನು ಹೊಂದಿದ್ದೀಯೆ ನೀನು. ಇಂಥಾ ದ್ವಂದ್ವ ಯಾವಾಗ ಬರುತ್ತದೆ ಗೊತ್ತೋ ವಾಲಿ? ಅಹಂಕಾರ ನಾನು ನಾನು ಎಂದು ಹಪಹಪಿಸಿ ಮುಂದಾಗುತ್ತಿರುವಾಗ,ಹೊತ್ತ ಭ್ರಮೆಯನ್ನು ಸತ್ಯ ಎಂದು ಸಾಧಿಸಲು ಹೆಣಗುವಾಗ, ಬುದ್ಧಿ ಚಿತ್ತದಲ್ಲಿ ಅಚ್ಚೊತ್ತಿದ ಧರ್ಮದೆಡೆಗೆ ಮನಸ್ಸನ್ನೂ, ಅದರಿಂದ ಮುನ್ನಡೆಸಲ್ಪಡುವ ಇಂದ್ರಿಯಗಳನ್ನು ಧರ್ಮ ಕಾರ್ಯದೆಡೆಗೆ ಪ್ರಚೋದಿಸುತ್ತಿರುತ್ತದೆ. ಬುದ್ಧಿ ಮತ್ತು ಅಹಂಕಾರಗಳ ನಡುವಿನ ತಾಕಲಾಟದಲ್ಲಿ ದ್ವಂದ್ವದ ಮಾತುಗಳು ಹೊರಬೀಳುತ್ತದೆ ವಾಲಿ. ನಿನಗಾಗಿದ್ದು ಕೂಡಾ ಅದೇ."

 

"ನನ್ನನ್ನು ನಿಂದಿಸುತ್ತೀ, ಸಾಮ್ರಾಜ್ಯಕ್ಕೆ ಸಲ್ಲದವ ಎಂದು. ಆದರೆ ನಾನು ಪಿತೃ ವಾಕ್ಯ ಪರಿಪಾಲನೆಗಾಗಿ ಕಾಡಿಗೆ ಬಂದವ. ಯಾವುದೇ ರಾಜ್ಯವಿರಲಿ, ಅಲ್ಲಿನ ಅರಸೊತ್ತಿಗೆ ಹಸ್ತಾಂತರವಾಗುವಾಗ ಜನರ ಮನಸ್ಸಿನಲ್ಲಿ ಕಳವಳ ಸಹಜ. ಕಳವಳವನ್ನು ತೊಡೆದು ಮನಸ್ಸಿಗೆ ಸಮಾಧನ ಉಂಟುಮಾಡುವವನು ಮಾತ್ರ ರಾಜನಾಗಲು ಅರ್ಹ. ರಾಜನಾಗುವವ ತನ್ನ ಪ್ರಜೆಗಳ ವಿಶ್ವಾಸವನ್ನು ಪ್ರೀತಿಯಿಂದ ಗಳಿಸಿಕೊಳ್ಳಬೇಕು ಹೊರತು ದಬ್ಬಾಳಿಕೆಯಿಂದಲ್ಲ. ತಂದೆಯ ಮಾತನ್ನೇ ಕೇಳದವ ತಮ್ಮ ಕಡೆ ಇನ್ನೇನು ಲಕ್ಷ್ಯವಿಟ್ಟಾನು ಎಂದು ಪ್ರಜೆಗಳಿಗೆ ಆತಂಕವಾಗಬಾರದು, ತಾಯಿಯ ಮಾತನ್ನು ನಡೆಸಿಕೊದದ ಕೃತಘ್ನನ ಪ್ರಜೆಗಳು ತಾವು ಎನ್ನುವುದಾಗಿ ಅಯೋಧ್ಯೆಯ ಪ್ರಜೆಗಳು ಖಿನ್ನರಾಗಬಾರದು ಎಂದು ನಾನು ವನವಾಸ ದೀಕ್ಷೆಯ ಆದೇಶವನ್ನು ಶಿರಸಾ ವಹಿಸಿ ಕಾಡಿಗೆ ಬಂದಿದ್ದು. ಅದನ್ನು ಬ್ರಹ್ಮರ್ಷಿಗಳಾದ ವಸಿಷ್ಠರೇ ಅನುಮೋದಿಸಿರುವಾಗ ಮತ್ತೆ ಅದರ ಕುರಿತು ಯಾವ ಆಕ್ಷೇಪವೂ ಸಲ್ಲ, ಸಾಧುವಲ್ಲ. ಈಗಲೂ ನನ್ನ ಪ್ರತಿನಿಧಿಯಾಗಿ ನನ್ನ ಪಾದುಕೆ ಅಯೋಧ್ಯೆಯಲ್ಲಿದೆ."

 

"ರಾಜಧರ್ಮವನ್ನು ಪರಿತ್ಯಜಿಸಿದವ ನೀನು ಎನ್ನುವ ಆರೋಪವನ್ನು ನನ್ನ ಮೇಲೆ ಮಾಡುತ್ತಿದ್ದೀ ವಾಲಿ. ಆದರೆ ಅದೇ ರಾಜಧರ್ಮಕ್ಕನುಗುಣವಾಗಿಯೇ ನಡೆದು ನಾನು ಕಾರ್ಯವನ್ನು ಮಾಡಬೇಕಾಯಿತು. ರಾಜಧರ್ಮದಂತೆ, ಅರಸನಾದವ ಅರಣ್ಯದಲ್ಲಿದ್ದಾಗ ವನವಾಸಿಗಳಿಂದ, ರಕ್ಕಸರಿಂದ, ಪ್ರಾಣಿಗಳಿಂದ ವಿಚಾರವನ್ನು ತಿಳಿದು, ವಿವೇಕದಿಂದ ಪರಾಮರ್ಶಿಸಿ ನಿರ್ಧಾರವನ್ನು ಕೈಗೊಂಡು ವ್ಯವಹರಿಸಬೇಕು. ಅಂತೆಯೇ, ಶಬರಿ, ಕಬಂಧ ಜಟಾಯುಗಳು ಸುಗ್ರೀವ ನಿನ್ನಿಂದ ಸಂತ್ರಸ್ತ- ಸಂತಪ್ತ ಎಂದು ನನಗೆ ತಿಳಿಸಿದ್ದರು. ತಾನೇ ತಾನಾಗಿ ನನ್ನ ಬಳಿ ಬಾರದೆ ಹನುಮನನ್ನು ಕಳುಹಿಸಿ ನನ್ನನ್ನು ಪರೀಕ್ಷಿಸಿ ನಂತರ ನನ್ನ ಸಾಮರ್ಥ್ಯ ಪರೀಕ್ಷೆಯನ್ನು ಮಾಡಿ ನಂತರದಲ್ಲಿ ನನ್ನೊಡನೆ ಅಗ್ನಿ ಸಾಕ್ಷಿಯಾಗಿ ಸ್ನೇಹವನ್ನು ಮಾಡಿದ ಸುಗ್ರೀವ. ಆತ ಧರ್ಮಾಚಾರಣ ನಿರತ ಎನ್ನುವುದಕ್ಕೆ ಇಷ್ಟು ಸಾಕು. ಆತ ನನ್ನಲ್ಲಿ ಶರಣಾಗಿ ತನಗೊದಗಿದ ಸಮಸ್ಯೆಯನ್ನು ಸರಿಪಡಿಸಬೇಕು ಎಂದಾಗ ರಾಜಧರ್ಮದಂತೆ ಅವನಿಗೆ ಅಭಯವನ್ನು ಕೊಟ್ಟೆ. ಆಡಿದ ಮಾತಿನಂತೆ ಆತನಿಗೆ ನ್ಯಾಯವನ್ನು ದೊರಕಿಸಿಕೊಡುವುದಕ್ಕೆ ಮುಂದಾದೆ."

 

"ಇಕ್ಷ್ವಾಕು ವಂಶದ ಅನೇಕ ಅರಸರ ಪ್ರಕರಣವನ್ನು ನನಗೆ ಹೇಳಿದೆ ವಾಲಿ. ಅವರೆಲ್ಲರೂ ಭೂಮಂಡಲಕ್ಕೇ ಮಾದರಿಯಾಗುವಂತೆ ಬದುಕಿದ್ದಾರೆ. ಸಕಲ ಭೂಮಿಯ ಬಗ್ಗಾಗಿ, ಶೈಲ ವನ ಕಾನನ ಪ್ರಾಣಿ ಪಕ್ಷಿಗಳ ಬಗ್ಗಾಗಿ ಧರ್ಮ ಪಾಲನೆಯ ಕುರಿತಾಗಿ ನಮಗೆ ಬಾಧ್ಯತೆ ಇದೆ ವಾಲಿ. ಬಾಧ್ಯತೆ ಇದ್ದಮೇಲೆ ಅದನ್ನು ಕಾರ್ಯರೂಪಕ್ಕೆ ತರುವ ಅಧಿಕಾರ ತಾನಾಗಿ ಬರುತ್ತದೆ. ಒಮ್ಮೆ ಕೇವಲ ಕರ್ತವ್ಯವನ್ನು ಗುರುತಿಸಿ ಅಧಿಕಾರವನ್ನು ಗುರುತಿಸದೇ ಹೋದೆ ವಾಲಿ, ಇನ್ನೊಮ್ಮೆ ಕೇವಲ ಅಧಿಕಾರವನ್ನು ಪ್ರಶ್ನಿಸಿ ಕರ್ತವ್ಯವನ್ನು ಕಡೆಗಭಿಸಿದೆ ವಾಲಿ. ನೀನು ಮಾಡಿದ ಅನೇಕ ತಪ್ಪುಗಳಿವೆ. ಸಣ್ಣ ವ್ಯಕ್ತಿ ಮಾಡಿದ ದೊಡ್ಡ ತಪ್ಪನ್ನೂ ಕ್ಷಮಿಸಬಹುದು. ಆದರೆ ದೊಡ್ದವ ಮಾಡಿದ ಒಂದು ಸಣ್ಣ ತಪ್ಪನ್ನೂ ಕ್ಷಮಿಸಬಾರದು. ಒಂದೊಂದಾಗಿ ಹೇಳುತ್ತೇನೆ ಕೇಳು."

 

" ರಾಜಧರ್ಮದನ್ವಯ ಅರಸನಾದವನು ಮತ್ತನಾದಾಗ ಯುದ್ಧಕ್ಕೆ ಮುಂದಾಗಬಾರದು. ಆದರೆ ನೀನು ದುಂದುಭಿಯಲ್ಲಿ ಸುರಾಪಾನದಿಂದ ಮತ್ತನಾಗಿ ಯುದ್ಧಕ್ಕೆ ಹೋದೆ. ಮೊದಲೇ ಅಧಿಕಾರ, ಯವ್ವನ, ಬಲದ ಮದ ನಿನಗೆ ಮೇಲಿನಿಂದ ಸುರಾಪಾನದ ಮದ. ದುಂದುಭಿಯಂಥಾ ರಕ್ಕಸ ನಿನ್ನನ್ನು ಎಚ್ಚರಿಸಿದ ಅಂತಾದರೆ, ಅಂಥಾ ಅವಮಾನಕ್ಕೊಳಗಾಗುವ ಸಂದರ್ಭವನ್ನು ತಂದುಕೊಳ್ಳುವಲ್ಲಿ ರಾಜಧರ್ಮವನ್ನು ಮರೆತೆ. ದುಂದುಭಿಯನ್ನು ಕೊಂದು ಎಸೆಯುವಾಗ ಸುತ್ತ ಮುತ್ತಲಿನ ಇರವನ್ನೇ ಮರೆತೆ. ಪಕ್ಕದಲ್ಲೇ ಇದ್ದ ಮತಂಗಾಶ್ರಮ ನಿನಗೆ ನೆನಪಿಗೆ ಬಾರದೆ ಹೋಯಿತು. ದುಂದುಭಿಯನ್ನು ಎಸೆಯುವಾಗ ಆಶ್ರಮ ಮಲಿನವಾಯಿತು. "ಯಜ್ಞ ರಕ್ಷಕನಾಗಿ ರಕ್ಕಸರನ್ನು ನಿಗ್ರಹಿಸಿ ಆಶ್ರಮವನ್ನು ರಕ್ಷಿಸಬೇಕಿದ್ದ ವಾಲಿಯಂಥಾ ಅತಿ ಪರಾಕ್ರಮಿಯೂ ಹೀಗೆ ಮಾಡಿದನಲ್ಲಾ" ಎಂದು ಖಿನ್ನರಾಗಿ ಅವರು ನಿನಗೆ ಶಾಪ ಕೊಡುವಂತಾಯಿತು. ಹೆದರಿ ಓಡುವವನನ್ನು ಬೆನ್ನಟ್ಟುವುದು ರಾಜಧರ್ಮವಲ್ಲ. ಅದೂ ರಾತ್ರಿಯ ಕಾಲದಲ್ಲಿ, ಓರ್ವ ರಾಕ್ಷಸನನ್ನು. ನೀನು ಮಾಯಾವಿಯ ವಿಚಾರದಲ್ಲಿ ಅದನ್ನು ಮರೆತೆ. ನಿನ್ನ ಕೊರಳಿನಲ್ಲಿ ಕನಕ ಕಾಂಚನ ಮಾಲೆಯನ್ನು ಹಾಕಿದ್ದ ನಿನ್ನಪ್ಪ ದೇವೇಂದ್ರ. ಅವನನ್ನು ಅವಮಾನಿಸಿದ ರಾವಣನ ಜೊತೆ ತುಲ್ಯಾರಿ ಮಿತ್ರತ್ವವನ್ನು ಮಾಡಿ ದೈವದ್ರೋಹ, ಪಿತೃದ್ರೋಹದ ಪಾಪಗಳನ್ನು ಮಾಡಿದೆ ನೀನು."

 

"ಸುಗ್ರೀವ ತಾರೆಯನ್ನು ಬಲಾತ್ಕರಿಸಲಿಲ್ಲ, ಅವಳಾಗಿ, ಯುಗದ ಪದ್ಧತಿಯಂತೆ ಹೋಗಿ ಸುಗ್ರೀವನನ್ನು ಸೇರಿದ್ದಾಳೆ. ಯಾಕಾಗಿ. ಇರುವ ಒಬ್ಬ ಮಗ ಅಂಗದ ಹಸುಳೆ. ವಾನರರ ವಂಶವನ್ನು ಬೆಳೆಸುವ ಹೊಣೆಗಾರಿಕೆಯನ್ನು ತಾರೆ ಹೊತ್ತಿದ್ದಾಳೆ. ಅದನ್ನು ಅವಳೊಬ್ಬಳೆ ಪೂರೈಸಲು ಶಕ್ಯವಿಲ್ಲ. ಗಂಡಸೊಬ್ಬ ಬೇಕು. ಅದಕ್ಕಾಗಿಯೇ ಶಾಸ್ತ್ರವಾಕ್ಯ ದೇವರನೊಂದಿಗೆ, ವಂಶೋನ್ನತ್ಯಕ್ಕಾಗಿ ಅನುಮತಿಸಿದ್ದು. ಹಾಗಾಗಿ, ತಾನಾಗಿ ಬಂದು ಸೇರಿದ ತಾರೆಯನ್ನು ಸ್ವೀಕರಿಸುವುದು ಸುಗ್ರೀವನಿಗೆ ಕರ್ತವ್ಯವಾಗುತ್ತದೆ. ಆದರೆ, ನೀನು ಸುಗ್ರೀವನನ್ನು ವಿಚಾರಿಸದೇ ಅವನನ್ನು ಹೊರಗಟ್ಟಿದೆ. ಹಿಂಸಿಸಿದೆ. ಬೆನ್ನಟ್ಟಿ ಹೋಗಿ ಹೊಡೆದೆ. ರುಮೆಯನ್ನು ಬಲಾತ್ಕಾರದಿಂದ ಹಿಡಿದಿಟ್ಟೆ. ಬದುಕುವುದಕ್ಕಾಗಿ ಸುಗ್ರೀವ ಋಷ್ಯಮೂಕವನ್ನು ಸೇರಿದ. ಕುದ್ದು ಹೋದೆ ನೀನು. ನಿನ್ನ ದೌರ್ಬಲ್ಯವನ್ನು ಸುಗ್ರೀವ ತನ್ನ ಬದುಕಿಗೆ ಆಧಾರವಾಗಿಸಿಕೊಂಡ. ಆತನನ್ನು ನೇರವಾಗಿ ಯುದ್ಧಕ್ಕೆ ಕರೆಯದೆ ರುಮೆಯನ್ನು ಬಲಾತ್ಕರಿಸಿ, ಸುಗ್ರೀವನ ಅಂತರಂಗವನ್ನು ಘಾಸಿಗೊಳಿಸಿ ಅವನನ್ನು ಕೆಣಕಿ ಯುದ್ಧಕ್ಕೆ ಕರೆದೆ. ಇದು ರಾಜಧರ್ಮವೇ ವಾಲಿ? ತಮ್ಮನ ಸತಿಯನ್ನು ಮುಟ್ಟುವುದು ನ್ಯಾಯವೇ? ಈಗತಾನೆ ನೀನು ಹೇಳಿದ ರಾಜಧರ್ಮವಾದ ಕ್ಷಮೆ, ಅಂತರಿಂದ್ರಿಯ ನಿಗ್ರಹ, ಬಹಿರಿಂದ್ರಿಯ ನಿಗ್ರಹ, ಧೈರ್ಯ, ಸತ್ಯನಿಷ್ಠೆ, ಅನಾಸ್ತೇಯ, ಶುಚಿತ್ವ ಗಳನ್ನು ಮರೆತೆ ವಾಲಿ"

 

" ಸೀತೆಯನ್ನು ಹುಡುಕುವುದಕ್ಕೆ ಸಹಾಯವಾಗಲೀ ಎಂದು ನಾನು ಸುಗ್ರೀವನೊಡನೆ ಮೈತ್ರಿ ಸಾಧಿಸಿದ್ದಲ್ಲ. ನನಗೆ ಆತನ ಸಹಾಯವೂ ಬೇಕಿಲ್ಲ.ರಾಜಧರ್ಮದಂತೆ ವರ್ತಿಸಿದ್ದೇನೆ. ನಿನ್ನ ಮಿತ್ರನಾದ ರಾವಣ ನಿನ್ನದೇ ಕಿಷ್ಕಿಂಧೆಯ ಮೇಲೆ ಸೀತೆಯನ್ನು ಹೊತ್ತೊಯ್ದರೆ ನೀನು ಸುಮ್ಮನುಳಿದೆ. ಆತನ ದೌಷ್ಟ್ಯವನ್ನು ಮೌನವಾಗಿ ಬೆಂಬಲಿಸಿ ದುಷ್ಟ ನಿಗ್ರಹ ಎನ್ನುವ ಆಚಾರವನ್ನು ತ್ಯಜಿಸಿದೆ. ಗೋಲಭನನ್ನು ಹೊಡೆದು ಶಿಕ್ಷಿಸಿದ ನಿನಗೆ ರಾವಣನನ್ನು ಶಿಕ್ಷಿಸಲು ನೈತಿಕ ಬಲ ಇಲ್ಲದೇ ಹೋಗಿತ್ತು. ನೀನು ಮತ್ತೆ ಅವನ ಲಂಕೆಯನ್ನು ಬಾಲದಲ್ಲಿ ಕಟ್ಟಿ ತರುವುದೆಂತು ಸಾಧ್ಯ. ಇಷ್ಟೆಲ್ಲಾ ದೌಷ್ಟ್ಯಗಳನ್ನು ಮಾಡಿದ ನಿನ್ನನ್ನು ಶಿಕ್ಷಿಸುವುದು ನನ್ನ ಪಾಲಿಗೆ ರಾಜಧರ್ಮವಾಗುತ್ತದೆ. ನೀನೇ ಹೇಳಿದಂತೆ ದುಷ್ಟ ನಿಗ್ರಹ ರಾಜ ಧರ್ಮವಷ್ಟೇ? ಅಂತೆಯೇ ಮಗನಾದರೂ ಅಸಮಂಜಸನನ್ನು ಸಗರ ಶಿಕ್ಷಿಸಿದ್ದನ್ನು ನೀನೂ ಬಲ್ಲೆಯಲ್ಲ. "

 

"ಮಗಳಂತೆ ಕಾಣಬೇಕಿದ್ದ ರುಮೆಯನ್ನು ಬಲಾತ್ಕರಿಸಿದ್ದ ನಿನಗೆ ನಿಯಮದನ್ವಯ, ಆತತಾಯಿಗಳಿಗೆ ತಕ್ಕಂತೆ ಮುಖ ನೋಡದೆ ಕಾಯಖಂಡನದ ಶಿಕ್ಷೆ ವಿಧಿಸಬೇಕು.ಆದರೆ, ನಿನ್ನ ಕೊರಳಲ್ಲಿನ, ನಿನಗೆ ವರವಾಗಿ ದೊರೆತ, ದಿವ್ಯವಾದ ಕನಕ ಕಾಂಚನ ಮಾಲೆಯ ಪ್ರಭಾವದಿಂದಎದುರು ಬಂದವನ ಅರ್ಧ ಬಲ ನಿನ್ನನ್ನು ಸೇರುತ್ತದೆ. ನಾನು, ವಸಿಷ್ಟ ವಿಶ್ವಾಮಿತ್ರ ಭಾರ್ಗವರಿಂದ ಸಂಪಾದಿಸಿದ ಶಸ್ತ್ರಬಲ, ಶಾಸ್ತ್ರಬಲ, ಏಕಪತ್ನೀವ್ರತದಿಂದ ಸಾಧಿಸಿದ ಆತ್ಮಬಲ, ತ್ಯಾಗದಿಂದ ಸಂಪಾದಿಸಿದ ಶೀಲ ಮೊದಲಾದ ಬಲಗಳು ಅರ್ಧ ನಿನ್ನನ್ನು ಸೇರಿದರೆ ಬಲಗಳ ಮತ್ತು ಮಾರ್ಗಗಳ ಮರ್ಯಾದೆ ಏನಾಗುತ್ತದೆ ವಾಲಿ?"

 

ಸಜೀವ ಶರಪ್ರಯೋಗದ ಮುಖೇನ ಇಲ್ಲಿಂದಲೇ ಶರಪ್ರಯೋಗವನ್ನು ಮಾಡಿ ರಾವಣನನ್ನು ಕೊಂದು ಸೀತೆಯನ್ನು ಕರೆತರಬಲ್ಲೆ. ಆದರೆ, ರಾಜಧರ್ಮದಂತೆ ಅಪರಾಧಿಗೆ ಆತನ ತಪ್ಪನ್ನು ತಿಳಿಸಬೇಕಾಗುತ್ತದೆ.ನಿನಗೆ ರಾಜನೀತಿಯಂತೆ ಶಿಕ್ಷೆ ವಿಧಿಸಿದ್ದೇನೆ, ಮಾಡಿದ ತಪ್ಪುಗಳ ಬಗೆಗೆ ತಿಳಿಸಿದ್ದೇನೆ. ದುಃಸ್ವಭಾವದಿಂದ ನಿನ್ನ ಮೈ ಸೇರಿದ್ದ ಸತ್ವವೆಲ್ಲಾ ರಕ್ತವಾಗಿ ಹೊರ ಹರಿಯುತ್ತಿದೆ. ದುಷ್ಟ ಆಲೋಚನೆಗಳೆಲ್ಲ ನಿನ್ನ ಮಾತಾಗಿ ಬಂದು ನಷ್ಟವಾಗಿವೆ. ಮನಸ್ಸಿನಲ್ಲಿ ಧಾರ್ಮಿಕತೆಯ ಆಲೋಚನೆಗಳು ಮೂಡುತ್ತಿವೆ. ನೀನು ಪಾವನನಾಗಿದ್ದೀಯೆ. ಸಮಯದಲ್ಲಿ ನಾನು ನಿನ್ನ ಮುಖ ನೋಡಿದ್ದೇನೆ. ದೊಡ್ದವನಾಗಿ ತಪ್ಪು ಮಾಡಿದ್ದ ನೀನು ಈಗ ಮತ್ತೆ ಪುನೀತನಾಗಿದ್ದೀಯೆ. ನಿನ್ನ ತಪ್ಪುಗಳಿಗೆ ಶಿಕ್ಷೆ ಅನುಭವಿಸಿದ್ದೀಯೆ. ಮತ್ತೆ ಬದುಕಬೇಕೆಂಬ ಆಸೆ ಇದ್ದರೆ ನಿನಗೆ ಹೊಡೆದ ಬಾಣವನ್ನು ಮತ್ತೆ ಕರೆಯಬಲ್ಲೆ, ನಿನಗೆ ನೋವಾಗದಂತೆನನ್ನ ಆಜ್ಞಾಧಾರಕ ಸಜೀವಶರ ಅದು ನೀನದನ್ನು ಹಿಡಿದು ನಿಲ್ಲಿಸಿದ್ದಲ್ಲ. ಅಷ್ಟಕ್ಕೇ ನಿಲ್ಲುವಂತೆ ಅದನ್ನು ಹೊಡೆದಿದ್ದೇನೆ. ಆದರೆ ಇನ್ನುಮುಂದಾದರೂ ಅಹಂಕಾರವನ್ನು ತ್ಯಜಿಸಿ, ಸ್ವ-ಪರ ಹಿತಗಳನ್ನು ಸಾಧಿಸುವ ಸತ್ಯವನ್ನು ತ್ಯಜಿಸದೇ ಆತ್ಮಭಾವದಿಂದ, ನಿನ್ನ ಅಂತಸ್ಥವಾದ ಪರಮಜ್ಞಾನದಿಂದ ಸೋಹಮ್ ಭಾವದಿಂದ ಎಲ್ಲರನ್ನೂ ಸದ್ಭಾವದಲ್ಲಿ ನೋಡುತ್ತಾ ಧರ್ಮವನ್ನು ಅನುಸರಿಸಿ, ನಿಜಾರ್ಥದಲ್ಲಿ ಗೋ ಲಾಂಗೂಲ ಪ್ರಭುವಾಗಬೇಕು. ರುಮೆಯನ್ನು ಸುಗ್ರೀವನಿಗೊಪ್ಪಿಸಬೇಕು. ಕರೆಸಲೇ ಶರವನ್ನು ಹಿಂದಕ್ಕೆ?"

 

ನಾಟಿದ್ದ ಶರವನ್ನು ಹೊರಗೆಳೆಯಲು ಒಮ್ಮೆ ತನ್ನ ಎಲ್ಲಾ ಬಲವನ್ನು ಹಾಕಿ ಪ್ರಯತ್ನಿಸಿದ ವಾಲಿ. ಸಾಧ್ಯವಾಗದೇ ನಿಟ್ಟುಸಿರು ಬಿಟ್ಟ. ಮುಖದ ಮೇಲೆ ಒಂದು ರೀತಿಯ ದೇದೀಪ್ಯಮಾನ ಪ್ರಭೆಯಿತ್ತು. ಬಹಳ ಹಿಂದೆ ವಾಲಿಯ ಮುಖದಲ್ಲಿ ಕಂಗೊಳಿಸುತ್ತಿದ್ದ ತೇಜಸ್ಸು ಮತ್ತೆ ಮೂಡಿತ್ತು.ದೀರ್ಘವಾದ ಉಸಿರೊಂದನ್ನು ಎಳೆದುಕೊಂಡ. ಮೆಲು ದನಿಯಲ್ಲಿ ವಿನಮ್ರನಾಗಿ, "ರಾಮ!!" ಎನ್ನುತ್ತಾ ಮಾತಿಗಾರಂಭಿಸಿದ.

 

(ಸಶೇಷ)