Tuesday, May 29, 2018

ಕೆರೆ ರಿಪೇರಿ-1


ಬಹಳ ದಿನಗಳು ಕಳೆದವು ಬರೆದು. ಬರೆಯಲು ಕಾಲಾನುಕೂಲ ಈಗ ಆಯ್ತು. ಬರೆಯಬೇಕು ಎನ್ನುವ ಹಂಬಲ ಇದ್ದಾಗ ವಿಷಯವಿರುತ್ತದೆ. ಆದರೆ ಸಮಯ ಲಭ್ಯವಾಗುವುದಿಲ್ಲ. ಸಮಯ ಸಿಕ್ಕಾಗ ಹಟ ಹೊತ್ತು ಬರೆಯಲು ಕುಳಿತರೆ ಕೂರುವುದು ಬಿಟ್ಟು ಇನ್ನೇನೂ ಸಾಧ್ಯವಿಲ್ಲ. ಮರ್ಕಟ ಮನಸ್ಸು ಯಾವಾಗಲೂ ರಿವರ್ಸ್ ಗೇರಿನಲ್ಲೇ ಸಾಗುವುದು. ಹಾಗೆ ರಿವರ್ಸ್ ಗೇರಿನಲ್ಲಿ ಸಾಗಿ ಮತ್ತೆ ಪ್ರಯಾಸದಿಂದ ಅದನ್ನು ನಮಗೆ ಬೇಕಾದಲ್ಲಿ ಕರೆದು ತರುವಾಗ, ಒಂದು ಹೊತ್ತು ತಂದ ಮಾತು ಸಿಗುತ್ತದೆ. ಆದರೆ ವರವೋ ಶಾಪವೋ ಗೊತ್ತಿಲ್ಲ. ಹೆಚ್ಚಾಗಿ ಮಾತು ನನ್ನ ಊರಿನ ಪ್ರಭೃತಿಗಳಾದ ಹಾಲನಾಯ್ಕ, ಶುಕ್ರ, ರಾಮ ನಾಯ್ಕ ಪರಮ ಭಟ್ಟರು ಇಂಥವರದ್ದೇ ಆಗಿರುತ್ತದೆ.

ಊರಿನಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ಕೆರೆ ರಿಪೇರಿ ಮಾಡಲು ಹಣ ಬಿಡುಗಡೆಯಾಗಿತ್ತು. ಕಾಂಟ್ರಾಕ್ಟ್ ಪಡೆದವರು ಅದು ಯಾರೋ ಘಟ್ಟದ ಕೆಳಗಿನ ಜನ ಎನ್ನುವ ಸುದ್ದಿ ಎಲ್ಲರ ಬಾಯಲ್ಲಿ ಓಡಾಡಿತ್ತು. ಆದರೆ ಶುಕ್ರನಿಗೆ ಮಾತ್ರ ಕಿವಿಯಲ್ಲಿ ಮಾತಿನದ್ದೇ ಧೀಂ ತನವಾಗಿತ್ತು. ಅವ ಕಂಡ ಕನಸುಗಳು ಎಷ್ಟೋ ಏನೋ. ತನ್ನ ಊರಿನ ಗುತ್ತಿಗೆದಾರರಾದರೆ ಅದೂ ತನಗೆ ಪರಿಚಿತರಾದರೆ, ತಾನು ಅವರಲ್ಲಿ ದೇಶಾವರಿತನದಿಂದಲೋ ಅಥವಾ ಸತ್ಯವೋ ಸುಳ್ಳೋ ಎಂದು ತೀರ್ಮಾನಿಸಲು ಬಾರದ ತನ್ನದೇ ವಾಗ್ವೈಖರಿಯಿಂದಲೋ ಸೆಳೆದು ತಾನು ಅಲ್ಲಿ ಮೇಸ್ತ್ರಿ ಅಥವಾ ಬಗಲಿಯಾದರೆ ತನ್ನೂರಿನ ಜನ ತನಗೆ ಕೊಡುವ ಗೌರವ ಬದಲಾಗುತ್ತದೆ. ಇನ್ನು ತನಗೆ ಪರಿಚಿತರಲ್ಲದಿದ್ದರೆ, ತನ್ನ ಮಾಜಿ ಯಜಮಾನರಿಂದ ಒಂದು ಮಾತು ಹೇಳಿಸಿಯಾದರೂ ಸರಿ ಕೆಲಸ ಗಿಟ್ಟಿಸಬೇಕು. ಊರಿನ ಜನರೆಲ್ಲಾ ಶುಕ್ರನಿಂದ ತಮ್ಮೂರ ಕೆರೆ ರಿಪೇರಿಯಾಯ್ತು ಎನ್ನುವ ಮಾತು ಹೇಳುವುದನ್ನು ಕೇಳಿ ತಾನು ಎದೆ ಉಬ್ಬಿಸಿಕೊಳ್ಳಬೇಕು ಎಂದು ಭಾರೀ ಲೆಕ್ಕಾಚಾರ ಭರಿತ ಕನಸು ಕಟ್ಟಿಕೊಂಡಿದ್ದ. ಆದರೆ ಗ್ರಹಚಾರಕ್ಕೆ, ಅವನಿಗೆ ಕಂಟ್ರಾಕ್ಟುದಾರರ ಹೆಸರೇ ಗೊತ್ತಾಗಲಿಲ್ಲ.

ಹೀಗೆಯೇ ದಿನವೂ ಲೆಕ್ಕಾಚಾರ ಹಾಕುತ್ತಾ ಕಳೆಯುತ್ತಿದ್ದ. ಹೆಗಡೆಯವರ ಮನೆಯಲ್ಲಿ ನಿತ್ಯದ ಕಾಯಕವನ್ನೂ ಮಾಡುತ್ತಿದ್ದ. ಅಂದು ಹೆಗಡೆಯವರ ಮನೆಯ ಎದುರು ಕಾರೊಂದು ಬಂದು ನಿಂತಿತು. ಇಳಿದವರು ಹೆಗಡೆಯವರ ಹತ್ತಿರ ಮಾತಾಡುತ್ತಿದ್ದರು. ಅಷ್ಟರಲ್ಲಿ ಹೆಗಡೆಯವರು "ಶುಕ್ರಾ" ಎಂದು ಕರೆದರು. ಶುಕ್ರ ಓಡಿದ.

"ಶುಕ್ರ, ಈಗ ಬೇಸಿಗೆ. ಕೆಲಸ ಇರದಿಲ್ಲ. ನೀನು ಹಾಂಗಾಗಿ ಕಂಟ್ರಾಕ್ಟರ್ ಹತ್ರ ಸ್ವಲ್ಪ ದಿನ ಇರು. ನಮ್ಮೂರ ಕೆರೆ ಕೆಲಸ ಸರಿ ಆಗ ತಂಕ ಅಷ್ಟೇ. ನಮ್ಮೂರ ಕೆಲಸಕ್ಕೆ ನಾವೇ ಆಗದಿಲ್ಲ ಅಂದರೆ ಹೆಂಗೆ? ಚನಾಗಿರದಿಲ್ಲ. ಮತ್ತೆ ಕಂಟ್ರಾಕ್ಟರ್ ಹೇಳಿದ್ರು, ಅವರಿಗೆ ನಿಮ್ಮ ಹಳೇ ಯಜಮಾನರು ಗೊತ್ತಿದಾರಂತೆ." ಎಂದರು.

ಸ್ವಲ್ಪ ಹೊತ್ತಿಗೆ ಕಂಟ್ರಾಕ್ಟರ್ ಬಂದರು. ಬಂದವರೇ "ಹೋ!! ಶುಕ್ರ ಅರಾಮಿದ್ಯಾ?! ಬೊಂಬಾಯಂಗೆ ಮಾವನ ಹೋಟ್ಲಂಗೆ ಇಪ್ಪಗ ಕಂಡದ್. ಆಮೇಲೆ ಕಾಣುಕೇ ಇಲ್ಲ ನೀನ್. ನಾ ಯಾರ್ ಗೊತ್ತಾಯ್ಲ್ಯಾ?! ನಿನ್ನ ಸಾವ್ಕಾರ್ರ ಅಳಿಯ ರಾಮಚಂದ್ರ ಮಾರಾಯ."

" ಹೌದಲ್ದೇ? ಅವಾಗ ನೀವ್ ಸಣ್ಣಕಿದ್ರಿ ನಂಗೆ ಗುರ್ತಾಯ್ಲಿಲ್ಲ ಕಾಣಿ. ಈಗ ಬೆಳ್ದೀರೆಲೆ. ನೀವೇ ನನ್ನ ಕರೆದದ್ದ್ ಅಂದ್ರೆ ಭಾಳ ಕುಸಿ ಆಯ್ತ್ ಮಾರ್ರೆ. ಕೆಲಸ ಆಪ್ದ್ ನಾ ಇಪ್ಪ ಊರಿಂದ್. ಮಾಡುದ್ ನಾ ಇಪ್ಪ ಊರಿಂದ್. ಬಿಡುಕಾತ್ತ. ನಾ ಇರ್ತೆ. ನಾ ಬತ್ತೆ. ನೀವ್ ಹೆದರ್ ಬೇಡಿ." ಎಂದ ಶುಕ್ರ.

ರಾಮಚಂದ್ರ ಸಂತೋಷಿಸಿದ. ನಿರಾಳವಾದ. ಶುಕ್ರ ಸಂತೋಷಪಟ್ಟ ತನ್ನ ಬಹುದಿನಗಳ ಆಸೆ ಈಡೇರಿದ್ದಕ್ಕೆ.

ಕೆರೆಯ ಕೆಲಸಕ್ಕೆ ಬೇಕಾದ ಆಳುಗಳು ಬಂದಿಳಿದರು.ಎಲ್ಲರೂ ತೆಲುಗು ಮಾತಾಡುವವರಾಗಿದ್ದರು. ಎಲ್ಲರಿಗೂ ಏನೇನು ಕೆಲಸ ಎಂದು ಅವರವರ ಗುಂಪಿನ ಮೇಸ್ತ್ರಿಗಳು ತಿಳಿಸಿದರು. ಕೆಲಸಗಾರರ ದೈನಂದಿನ ಆಗು ಹೋಗುಗಳನ್ನು ಮತ್ತು ದವಸ ಧಾನ್ಯಗಳ ಪೂರೈಕೆಯ ವ್ಯವಸ್ಥೆ ನೋಡಿಕೊಳ್ಳುವುದು ಶುಕ್ರನ ಪಾಲಿಗೆ ವಹಿಸಿ ರಾಮಚಂದ್ರ ಹೇಳಿದ, "ಶುಕ್ರ, ಇದೆಲ್ಲ ನಿಂದೇ ಇನ್ನು ಮೇಲುಸ್ತುವಾರಿ".

ಶುಕ್ರ ಹಲ್ಲು ಕಿಸಿಯುತ್ತಾ ಹೇಳಿದ "ನಾ ಹಂಗರೆ ಇನ್ನು ಮೇಲೋವರ್ಸೀ"

ರಾಮಚಂದ್ರ ನಗುತ್ತಲೇ, ಶುಕ್ರನಿಗೆ ಒಂದು ಟೊಪ್ಪಿ ಮತ್ತೊಂದು ಚರ್ಮದ ಚೀಲವನ್ನೂ ಕೊಟ್ಟ. ಶುಕ್ರ ಟೊಪ್ಪಿ ತಲೆ ಮೇಲೆ ಹಾಕಿಕೊಂಡು ಚರ್ಮದ ಚೀಲವನ್ನು ಕಂಕುಳಲ್ಲಿಟ್ಟುಕೊಂಡು ಮನೆಗೆ ಹೋಗಿ ಹೆಂಡತಿಯಲ್ಲಿ "ಇಕಾಣ್!! ನಾ ಇನ್ನು ಕೆರೆ ಕೆಲಸಕ್ಕೆ ಮೇಲೋವರ್ಸೀ." ಎಂದು ಗತ್ತಿನಿಂದ ಬೀಗಿದ. ದಿನಾ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಕಂಡವರಲ್ಲಿ ನಕ್ಕು ಒಂದು ನಮಸ್ಕಾರ ಹಾಕಿ, "ಹ್ವಾ ಬತ್ತೆ ಅಕಾ. ಡ್ಯೂಟಿಗೆ ಟೈಮ್ ಆತ್ತ್. ಇದೆಲ್ಲ ಜಂಭ ಅಂದ್ಕಬೇಡಿ. ಊರ ಕೆಲಸ ಅಲ್ದೇ. ನಾ ಮೇಲೋವರ್ಸೀ ಆಯಿ ತಡ ಮಾಡಿ ಹ್ವಾರೆ ಕೆಲಸ ಆತ್ಲ ಕಾಣಿ. ನಾ ತಡ ಮಾಡಿ ಊರಿಗೇ ತೊಂದ್ರಿ ಆತ್. ಅದ್ ಆಪುಕಾಗ. ನಂಗೆ ಒಂದ್ ಜಬಾವ್ದಾರಿ ಕೊಟ್ರ್ ಮೇಲೆ ಅದ್ನ ಸರಿ ಮಾಡ್ಕ್, ಮತ್ತೆ ಜನ ಇದ್ರಲೆ. ಅವ್ವೊಂದ್ ನಮೂನಿ ಮಾರ್ರೆ. ಭಾಸಿ ಬೇರೆ ಬತ್ಲ. ತೆಲುಗಿನವ್ರೆ. ಅಲ್ಲ ನಾ ಬೊಂಬಾಯಂಗೆ ಹೋಟ್ಲಂಗಿಪ್ಪುಕಾರೆ ಇಂಥವ್ರನ್ನ ಸಾವ್ರ ಕಂಡೀದೆ, ಅದ್ ಬೇರೆ. ಅಲ್ಲೆಂತ ಅಂದ್ರೆ ಬೊಂಬಾಯ್. ನಮ್ದೇ ಎಲ್ಲಾ ನಡೀತಿದ್ದೀತ್. ಮತ್ತೆ ಯಜಮಾನ್ರ್ ಪಳಗಿದ್ದೀರ್. ಜನವೂ ಹೆಚ್ಚಿನರ್ ಊರ್ ಬದಿಯರ್. ಹೆಚ್ ಕಮ್ಮಿ ಆರೆ ಅಲ್ಲ ಮಾಡ್ರೆ ಕಾಣ್ಲಕ್ಕಿದ್ದೇತ್. ಆಗಿನ್ ಕಾಲ ಈಗಿಲ್ಲ ಕಾಣಿ, ಮತ್ತೆ ಬೊಂಬಾಯ್ ಎಂತ ಅಂದ್ರೆ ನಮಗೆ ಬೇರೆ ಊರ್. ನಾವೇ ಸ್ವಲ್ಪ ಕಾಣ್ಕಿದ್ದೀತ್. ಇದ್ ಹಂಗಲ್ಲ ನಮ್ಮೂರ್. ಹಾಂಗಾತ್ಲ ಕಾಣಿ. ಮೇಲೋವರ್ಸೀ ಅಲ್ದೆ...." ಎಂದು ಒಂದು ಭಾಷಣ ಬಿಗಿದು ಕೆಲಸಕ್ಕೆ ಹೋಗುತ್ತಿದ್ದ.

ಮೇಸ್ತ್ರಿಗಳೂ ಎಲ್ಲಾ ಶುಕ್ರನನ್ನು ಚೆನ್ನಾಗಿಯೇ ಇಟ್ಟುಕೊಂಡಿದ್ದರು. ಕಾರಣ ರಾಮಚಂದ್ರ ಹೇಳಿದ್ದು." ಶುಕ್ರ ನನ್ನ ಖಾಸಾ ಜನ. ನೀವು ಏನೇ ಹೆಚ್ಚು ಕಮ್ಮಿ ಮಾಡಿದರೂ ನನಗೆ ಗೊತ್ತಾಗುತ್ತೆ." ಅವರು ಅದಕ್ಕೆ ಮತ್ತೆ ರಾತ್ರಿಯ ಎಣ್ಣೆ ವ್ಯವಸ್ಥೆಗೆ ಶುಕ್ರ ಇಲ್ಲದಿದ್ದರೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಅವನ ಜೊತೆ ರಂಪಾಟ ರಗಳೆ ಏನನ್ನೂ ಇಟ್ಟುಕೊಳ್ಳಲಿಲ್ಲ. ಆದರೆ ಇದು ಶುಕ್ರನಿಗೆ ತಿಳಿಯಲೇ ಇಲ್ಲ. ಆತ ಇದೆಲ್ಲ ತನ್ನ ಮೇಲೋವರ್ಸೀ ಸ್ಥಾನಕ್ಕೆ ಸಿಕ್ಕ ಗೌರವ ಎಂದು ಬೀಗಿದ ಬೀಗುತ್ತಲೇ ಇದ್ದ. ಮಿಗಿಲಾಗಿ ಆತನಿಗೆ ರಾಮಚಂದ್ರ ಮತ್ತೆ ಅವನ ಮಾವ ಕಡೆ ಇದ್ದ ನಿಷ್ಟೆಯೂ ಬೀಗುವಿಕೆಗೆ ಸೇರಿ ಕೆಲಸಗಾರರ ಮೇಲೆ ಶುಕ್ರ ಸ್ವಲ್ಪ ಮಟ್ಟಿನ ದರ್ಬಾರ್ ಮಾಡತೊಡಗಿದ, ಅದು ನಡೆಯುತ್ತಲೂ ಇತ್ತು.

ಒಂದು ದಿನ ಒಬ್ಬ ಕೆಲಸದವ ಕೆಲವು ಹತಾರಗಳನ್ನು ತೊಳೆಯದೇ ತೆಗೆದುಕೊಂಡು ಹೋದ. ಮೇಲೋವರ್ಸೀ ಅವನನ್ನು ಸನ್ನೆ ಮಾಡಿ ಕರೆದ. ಬಾಯಲ್ಲಿ "ತೊಳ್ಕ ಹೋಗ್" ಎಂದು ಗತ್ತಿನ ಧ್ವನಿಯಲ್ಲಿ ಹೇಳುತ್ತಲೇ ಕೈ ಸನ್ನೆ ಮಾಡಿಯೂ ತೋರಿಸಿದ. ಶುಕ್ರನ ಮಾತಿಗೆ ಆತ "ರೇಪು ಚೇಸ್ತಾನು"(ನಾಳೆ ಮಾಡುತ್ತೇನೆ) ಎಂದು ಉತ್ತರಿಸಿದ.

ಶುಕ್ರನಿಗೆ ಏರಿ ಹೋಯಿತು. ಅವನಿಗೆ ಏರಿಬಿಟ್ಟರೆ ಇಳಿಯುತ್ತಿರಲಿಲ್ಲ, ಯಾರಾದರೂ ಇಳಿಸಬೇಕಿತ್ತು. "ಹೆಕ್ಕ ತಿಂಬನೆ ಇದೆಂತ ಕೋಳಿ ಪಡೆ ಮಾಡೀದ್ಯಾ? ನಿನ್ನ ಬಜ್ಜಕೆ. ಹಪ್ ಹಿಡ್ದನೆ. ಎಂತ ಮಾಡ್ಕಂಡೀದೆ ನೀ. ಸಂಬಳ ಎಂತ ಧರ್ಮಕ್ಕೆ ಕೊಡೂದ. ಕೆಲಸ ಸರಿ ಮಾದ್ಕ್. ಮಾಡುಕಾಯ್ದಿದ್ರೆ ಆತ್ಲ ಅಂತ ಹೇಳ್ಕ್. ಎಂತಾರು ಮಾತಾಡೂದಲ್ಲ ಬಾಯಿತ್ತ್ ಅಂದೇಳಿ. ಇಕಾಣ್ ನಾ ಬೊಂಬಾಯಾಗಿದ್ ಬಂದವ. ಇಂಥದ್ ಸಾವ್ರ ಕಂಡೀದೆ. ಸಾವ್ರ ಮಾಡೀದೆ. ಆರೆ ದಕ್ಕಸ್ಕಂಡೆ. ಎಂತಕ್ಕೆ ಅಂದ್ರೆ ನಿನ್ನ ಹಂಗೆ ಇಂಥಾ ಹೇಲ್ ತಿನ್ನೂ ಕೆಲ್ಸ ಮಾಡೂ ಯೋಚ್ನೆ ಬರ್ಲಿಲ್ಲ ನಂಗೆ. ಹಪ್ ಹಿಡ್ದನೆ ಹತಾರ ತೊಳ್ಕ ಹೋಗ್. ಇಲ್ದಿದ್ರೆ ಹಾಕತ್ ಬಡ್ಗಿ...."

ಶುಕ್ರ ಇಷ್ಟು ಬಯ್ಯುವಷ್ಟರಲ್ಲಿ ಮೇಸ್ತ್ರಿ ಕೆಲಸಗಾರ ಏನು ಹೇಳಿದ್ದು ಎಂದು ಕೇಳಿ ತಿಳಿದಿದ್ದ. ಶುಕ್ರ ಉಸಿರು ತೆಗೆದುಕೊಳ್ಳುವುದಕ್ಕೆಂದು ಮಾತು ನಿಲ್ಲಿಸಿದಾಗ "ಶುಕ್ರಣ್ಣ ಅವನು ಏನಂದ ನಿಮಗೆ?" ಎಂದ. ಶುಕ್ರ, "ಹಪ್ ಹಿಡ್ದವ. ಹತಾರ ತೊಳ್ಕ ಹೋಗ್ ಅಂದ್ರೆ ರೇಪ್ ಮಾಡ್ತೆ ಅಂದ. ಮಾಡ್ಲಿ ಕಾಂತೆ ನಾ. ತಾಕತ್ತಿದ್ರೆ ರೇಪ್ ಮಾಡ್ಲಿ." ಎಂದ.
ಮೇಸ್ತ್ರಿ ಸಮಾಧಾನ ಪಡಿಸುತ್ತಲೇ ಹೇಳಿದ. "ತೆಲುಗಲ್ಲಿ ರೇಪು ಅಂದರೆ ನಾಳೆ ಅಂತ ಅರ್ಥ"
ಶುಕ್ರ ತನಗೆ ತಿಳಿಯಲಿಲ್ಲ ಎಂದು ಮೇಸ್ತ್ರಿಗೆ ಗೊತ್ತಾದರೆ ಮೇಲೋವರ್ಸೀ ಸ್ಥಾನಕ್ಕೆ ಧಕ್ಕೆ ಎಂದು ಭಾವಿಸಿದನೋ ಅಥವಾ ತನ್ನ ಮರ್ಯಾದೆ ಪ್ರಶ್ನೆ ಎಂದು ಭ್ರಮಿಸಿದನೋ ಗೊತ್ತಿಲ್ಲ. " ಇವತ್ತೇ ತೊಳ್ಕ ಹ್ವಾರೆ ಹತಾರ ಎಂತ ಸಚೆದು ಹ್ವಾತ್ತ? ನಾ ಮೇಲೋವರ್ಸೀ ಹೇಳ್ತೆ ತೊಳ್ಕ ಹ್ವಾಯ್ಕ್ ಅಂದ್ರೆ ತೊಳ್ಕ ಹ್ವಾಯ್ಕ್." ಕೆಲಸದವ ಇಷ್ಟರಲ್ಲಿ ಹತಾರ ತೊಳೆದಿಟ್ಟಿದ್ದ. ಹಾಳು ರಗಳೆ ಬೇಡ ಎಂದು. ಅಂತೂ ಮೇಲೋವರ್ಸೀ ಸ್ಥಾನದ ಮರ್ಯಾದೆ ಉಳಿಯಿತು

#ಶುಕ್ರ
#ಕೆರೆ__ರಿಪೇರಿ