Thursday, July 13, 2017

ದಿಗ್ಬಂಧನ ಪೂಜೆ

ಗಾವಿಲನ ಬಿ ಇ ಪುರಾಣ ಅಲ್ಲಿಗೇ ಮುಗಿದರೂ ಆತನ ಬದುಕು ಮುಗಿಯಲಿಲ್ಲ.ಬಿ ಇ ಮಾಡಿದ್ದ ಆತ ಮುಂದೆ ಎಮ್ ಬಿ ಎ (ಮನೆ ಬಿಟ್ಟು ಅಲೆಯುವುದು) ಮಾಡದೇ ಎಮ್. ಇ ಮಾಡಿದ (ಮನೆಕಡೆ ಇರುವುದು) ತಾನು ಬಿ ಇ ಮಾಡಿದ ಕಥೆಯನ್ನು ತಾನು ಎಲ್ಲರೊಂದಿಗೆ ಹಂಚಿಕೊಂಡು ಅವರೊಂದಿಗೆ ತಾನೂ ನಗುವ ಪ್ರಬುದ್ಧ ಮನಸ್ಕನಾತ. ಅಪ್ಪ ಮಾಡಿದ ದುಡ್ಡಿನಲ್ಲಿ ಅಣ್ಣ ದುಡಿದ ಆಸ್ತಿಯಲ್ಲಿ ತಾನೊಂದು ಸ್ವಲ್ಪ ಮಜಾ ಮಾಡಿದನೇ ಹೊರತು ಏನನ್ನೂ ಹಾಳು ಮಾಡಲಿಲ್ಲ. ಊರಿಗೆ ಒಬ್ಬ ಆದರ್ಶ ವ್ಯಕ್ತಿಯಾಗಿ ನಿಲ್ಲದಿದ್ದರೂ ಉಪದ್ರವಿಯಾಗಲಿಲ್ಲ. ಮದುವೆ ಮನೆ ಮಕ್ಕಳು ಹೀಗೆ ಸಾಗುತ್ತಿತ್ತು ಅವನ ಜೀವನ. ಅವನ ಅಣ್ಣ ಪರಮೇಶ್ವರ ಅಪ್ಪನಂತೆಯೇ ಪೌರೋಹಿತ್ಯ ಕಲಿತು ವೈದಿಕ ವೃತ್ತಿ ಕೈಗೊಂಡ. ಇದೆಲ್ಲದರ ಜೊತೆ ಕಾಲ ತನ್ನ ಕಾಲನ್ನು ಮುಂದೆ ಮುಂದೆ ಇಡುತ್ತಾ ಸಾಗಿದ ಪರಿಣಾಮ ಇಬ್ಬರೂ ನಡು ವಯಸ್ಸು ದಾಟಿದ್ದಾರೆ ಈಗ.

ಅದೇ ಹೊತ್ತಿಗೆ ಅಪ್ಪಯ್ಯ ಇಗ್ಗಾಭಟ್ಟರೂ ವಯಸ್ಸಾಗಿ ಮೂಲೆ ಸೇರಿದರು. ಪರಿಣಾಮ ಪರಮೇಶ್ವರನಿಗೇ ಭಟ್ಟತನ ಸಾಗಿಸುವ ಕೆಲಸ ಬಂತು. ಪರಮ ತನ್ನ ಅದ್ಭುತ ಕಂಠ- ಅಸ್ಖಲಿತ ಉಚ್ಚಾರ- ಅಪಾರ ವಾಗ್ಝರಿಯಿಂದ ಊರಿನಲ್ಲಿ ಒಳ್ಳೆ ಪುರೋಹಿತ ಎಂದು ಹೆಸರಾದ. ಆತ ತನ್ನ ಜ್ಞಾನವನ್ನು ಸರಿಯಾಗಿಯೇ ಬಳಸಿದ್ದ. ಮಕ್ಕಳು ಪೌರೋಹಿತ್ಯ ಕಲಿಯದಿದ್ದರೆ ಎಂಬ ಗೊಡವೆ ಆತನನ್ನು ಎಂದೂ ಕಾಡಲೇ ಇಲ್ಲ. "ಕಾರ್ಯ ಆಗದು ಮುಖ್ಯ. ಯಾರು ಮಾಡಿಸಿದ್ದ ಅಂತಲ್ಲ. ಅಥವಾ ದಕ್ಷಿಣೆಯೂ ಅಲ್ಲ." ಎಂಬ ಮನಸ್ಥಿತಿ ಆತನದ್ದಾಗಿತ್ತು. ಜಗತ್ತಿನಲ್ಲಿ ಹೊಟ್ಟೆಕಿಚ್ಚಿಗೇನು ಬರವೇ? ಸುಮ್ಮ ಸುಮ್ಮನೆ ಮನೆ ಹಾಳು ಮಾಡಬೇಕು ಎಂದು ಕೊಂಡವರಿಗೇನು ಕೊರತೆಯೇ? ಪರಮನ ಕೀರ್ತಿ ಮತ್ತು ಅದರ ಕಡೆ ಆತನಿಗಿದ್ದ ನಿರ್ಲಕ್ಷ ಎರಡನ್ನೂ ಸಹಿಸದ ಒಬ್ಬ ವ್ಯಕ್ತಿ ಇದ್ದ ಊರಿನಲ್ಲಿ. ಆತ ಮತ್ಯಾರೂ ಅಲ್ಲ. ಬೇಕಾದ್ದು ಬೇಡವಾದ್ದು ಎಲ್ಲಾ ಮಾಡಿ ಹೇರಳ ದುಡ್ಡು ಮಾಡಿದ್ದ ವಿರೂಪಾಕ್ಷ. ವಿಶೇಶ ಎಂದರೆ ದುಡ್ಡೊಂದೇ ಮಾಡುವ ಹಠದಲ್ಲಿ ತನ್ನ ಯೌವ್ವನ ಕಳೆದ ವಿರೂಪಾಕ್ಷನಿಗೆ ನಡುವಯಸ್ಸಿನಲ್ಲಿ ಈ ಆಲೋಚನೆ ಪ್ರಾರಂಭವಾಯಿತು.

ಪರಮನನ್ನು ಸೋಲಿಸಿ ಆತನಿಗಿರುವ ಗೌರವ ಕಳೆಯಲು ತಾನೇನು ಮಾಡಬೇಕು ಎಂಬ ಚಿಂತೆ ಆತನಿಗೆ ಸದಾಕಾಲ ಕಾಡುತ್ತಿತ್ತು. ಯಾರಲ್ಲಿಯೂ ಹೇಳಿಕೊಳ್ಳುವ ಹಾಗೂ ಇಲ್ಲ. ಅಂತೂ ಯೋಚಿಸಿ ಯೋಚಿಸಿ ಆತ ಕೊನೆಗೆ ಕೈಗೊಂಡ ನಿರ್ಧಾರ ಪರಮನ ಜೊತೆ ನಗಿತ್ತಲೇ ಇದ್ದು ಆತನನ್ನು ಸೋಲಿಸಬೇಕು ಎಂದು.

ಇಷ್ಟಾಗುವಾಗ ಆತನಿಗೆ ಒಂದು ಸುದ್ದಿ ತಿಳಿಯಿತು. ಪಕ್ಕದ ಬೈನೇಕೊಪ್ಪದ ಕಾಳ ನಾಯ್ಕ ತನ್ನ ತಮ್ಮನೊಂದಿಗೆ ವ್ಯಾಜ್ಯ ಮಾಡುತ್ತಿದ್ದಾನೆ ಎಂದು.ಹೂಂ! ಅವನ ತಮ್ಮ ಬೀರ ನಾಯ್ಕ. ಹಿಂದೊಮ್ಮೆ ತಾನು ಕಡಿದ ಗಂಧ ಪೂರ್ತಿ ಕದ್ದ ಘಟನೆ ನೆನಪಾಗಿ ಶತ್ರುವಿನ ಶತ್ರು ಮಿತ್ರ ಎಂಬ ನೀತಿಯಂತೆ ಕಾಳ ನಾಯ್ಕನ ಸಖ್ಯ ಸಾಧಿಸಿದ. ತನ್ನ ಅಗಾಧ ದುರ್ಬುದ್ಧಿಯಲ್ಲಿ ಸ್ವಲ್ಪ ಅವನಿಗೆ ಹೇಳಿಕೊಟ್ಟು ಅಂತೂ ಬೀರ ನಾಯ್ಕನ ಮೇಲೆ ತನಗಿದ್ದ ಸೇಡು ತೀರಿಸಿಕೊಂಡ. ಈಗ ಇದೇ ಕಾಳ ನಾಯ್ಕನನ್ನು ಪರಮನ ಮೇಲೆ ಛೂ ಬಿಟ್ಟು ತನ್ನ ಆಸೆ ತೀರಿಸಿಕೊಳ್ಳುವ ಯೋಚನೆ ಮಾಡಿದ.

ಕಾಳನಿಗೆ ಹೇಳಿದ, "ನೋಡು ಕಾಳ, ನೀನು ಬೀರ ಅಣ್ಣ ತಮ್ಮ. ಬೀರ ಮಹಾ ಚಾಲಾಕಿ. ಈಗ ಸೋತ್ರೂ ಸುಮ್ನಿರವಲ್ಲ. ನಿಂಗೆ ಯಾವ್ದಾರೂ ಗಣ ಗಿಣ ಬಿಟ್ರೆ ಎಂತ ಕಥೆ ಮಾರಾಯ!" ಅಂದ. ಅದಕ್ಕೆ ಕಾಳ, "ಹೌದ್ಯೋ!! ಹೆಗ್ಡೇರೆ ನೀವೊಂದಿಲ್ದೇ ಹೋದ್ರೆ ನಮ್ಗೆ ಯಾರೈದಾರಿ ಬುದ್ಧಿ ಹೇಳಕ್ಕೆ. ಎಂತ ಮಾಡ್ಬೊಕು ನೀವೇ ಹೇಳಿ" ಅಂದ. ಆದ ಸಂತೋಷ ತೋರಿಸದೆ, "ಹೋಗಿ ಪರಮ ಭಟ್ಟರನ್ನ ನೋಡು. ಅವರು ದಿಗ್ಬಂಧನ ಪೂಜೆ ಎಲ್ಲಾ ಕಲ್ತಾರೆ. ಘಟ್ಟದ ಕೆಳಗೆ. ಸುಮ್ನೆ ಹೇಳಿರೆ ಒಪ್ಪದಿಲ್ಲ. ನೀವು ಮಾಡಿಸ್ದೇ ಇದ್ರೆ ಜೀವ ತೆಕ್ಕತ್ತೇನೆ ಅನ್ನು. ಅವಾಗ ಮಾಡಿಸ್ತಾರೆ." ಅಂದ.

ನಂಬಿದ ಕಾಳ ಪರಮನಲ್ಲಿಗೆ ಬಂದು "ಭಟ್ರೇ!! ನೀವೇ ಗತಿ ನಂಗೆ. ನಾ ಉದ್ಧಾರಾಗದು ಹಾಳಾಗದು ಎರ್ಡೂ ನಿಮ್ಮ ಕೈಯಾಗೆ ಐತೆ. ಟೀ ಬನ್ನು ಪೂಜೆ ಮಾಡ್ಶಿ ನನ್ನ ಉಳ್ಸಿ ಒಡೆಯಾ" ಅನ್ನುತ್ತಾ ಕಾಲು ಹಿಡಿದು ಬಿಟ್ಟ. ಪರಮನಿಗೆ ನಗು-ಸಿಟ್ಟು ಎರಡೂ ಒಟ್ಟಿಗೇ ಬಂತು. ಯಾವುದೋ ಟಿ ವಿ ಚನೆಲ್ಲಿನಲ್ಲಿ ಅರೆಬೆಂದ 'ಗುರೂಜಿ'ಗಳ ಹೇಳಿಕೆ ಇದೆಂದು ಭಾವಿಸಿ ಆತ "ಟೀ ಬನ್ನಿಗೆಲ್ಲ ಎಂತ ಪೂಜೆ ಮಾಡದ? ಮಳ್ಳು" ಎಂದು ಕಾಳನಿಗೆ ಹೇಳಿದ

"ಇಲ್ಲಾ ಭಟ್ರೇ!! ಅದೆಂತೋ ಗಣ ಬರದೇ ಹೋದ ಹಂಗೆ ಹೋಮ ಎಲ್ಲಾ ಮಾಡ್ತಾರಂತಲ್ಯೋ!! ರಾತ್ರಿಗಟ್ಟು!! ಇರ್ಪಾಕ್ಸಯ್ಯ ಹೇಳ್ರಪ. ನೀವು ಮಾಡ್ಸದಿಲ್ಲ ಅಂದ್ರೆ ನಾ ಜೀವ ತೆಕ್ಕತ್ನಿ"

ವಿರೂಪಾಕ್ಷನ ದುರ್ಬುದ್ಧಿ ಬಗ್ಗೆ ಅಲ್ಪ ಸ್ವಲ್ಪ ಕೇಳಿ ತಿಳಿದಿದ್ದ ಪರಮ ಜಾಗರೂಕನಾದ. ತತ್ ಕ್ಷಣ, "ನೋಡು!! ಅದು ಹಂಗೆಲ್ಲಾ ಮಾಡ್ಸಕ್ಕೆ ಬರದಿಲ್ಲ. ಜಾಗ ಎಲ್ಲ ನೋಡ್ಬೇಕು. ಅಂಥಾ ಜಾಗ ಅಂದ್ರೆ ಸದ್ಯಕ್ಕೆ ವ್ರೂಪಾಕ್ಷನ ಮನೆ ಅಂಗಳವೇ ಸೈ. ಅವ್ರು ಮಾಡ್ಸಕ್ಕೆ ಅಡ್ಡಿಲ್ಲ ಅಂದ್ರೆ ನಾ ಮಾಡಸ್ತೇನೆ. ಇದು ನನ್ನ ನಿನ್ನ ಅವರನ್ನ ಬಿಟ್ಟು ಯಾರಿಗೂ ಗೊತ್ತಾಗಬಾರದು. ಗೊತ್ತಾದ್ರೆ ನಿಂದು ಮತ್ತೆ ಅವ್ರದ್ದು ಇಬ್ಬರದ್ದೂ ಮನೆ ಹಾಳೇ ಮತ್ತೆ!!" ಎಂದ.

ಕಾಳ ನಡೆದ ಮಾತುಕತೆ ಹೇಳಿದ ಕೂಡಲೇ ವಿರೂಪಾಕ್ಷ ಹಿಗ್ಗಿದ. ತನ್ನ ಮನೆ ಅಂಗಳವೇ ಪರಮನ ಗುಂಡಿ ತೋಡುವುದಕ್ಕಾಯಿತಲ್ಲಾ ಎನ್ನುವ ಅದ್ಭುತ ಸಂತೋಷವನ್ನೂ ಮನದಲ್ಲೇ ಅನುಭವಿಸಿದ. ಪರಮ ನಿಸ್ಚಯಿಸಿದ ಮಹೂರ್ತಕ್ಕೆ ಹೆಂಡತಿ ಇದ್ದರೆ ತೊಂದರೆ ಎಂದು ಹುಬ್ಬಳ್ಳಿಯಲ್ಲಿದ್ದ ಮಗನ ಮನೆಗೆ ಅವಳನ್ನು ದಾಟಿಸಿದ.

ಪರಮ ಮಹೂರ್ತಕ್ಕೆ ಸರಿಯಾಗಿ ಬಂದು, "ವಿರೂಪಾಕ್ಷ, ಕಾಳನ ಕೈ ನೋಡಿದಿ. ಅವಂಗೆ ಪವಿತ್ರ ಹಾಕಕ್ಕೆ ಬತಲ್ಲೆ. ಮತ್ತೆ ಸ್ಥಳದ ಯಜಮಾನ ನೀನು. ನೀನು ಸ್ನಾನ ಮಾಡಿ ಬಂದು ಮಡಿಲಿ ಕೂತ್ಗ" ಎಂದ. ಪರಮನಿಗೆ ತನ್ನ ಸಂಚು ತಿಳಿದಿಲ್ಲ ಎಂದು ಭಾವಿಸಿದ ವಿರೂಪಾಕ್ಷ ಮಿಂದು ಮಡಿಯುಟ್ಟು ಬಂದ. "ವಿರೂಪಾಕ್ಷ ಈ ಪೂಜೆ ಮಾಡಕ್ಕಿದ್ರ ಮಾತಾಡಲಾಗ. ಆಡಿರೆ ಅಪಾಯ. ಮತ್ತೆ ಆನು ಹೋಮ ಮುಗಿಸಿ ಹೊರಟ ಮೇಲೆ ತಿರುಗಿ ನೋಡಲಾಗ. ನೋಡಿರೆ ದೋಷ. ಆಹುತಿ ಸಾಸ್ವೆ ಎಣ್ಣೆ!! ಇದು ಅಥರ್ವಣ. ಕುಂದದಲ್ಲಿದ್ದ ಅಗ್ನಿ ತಾನಾಗಿ ನಂದಕ್ಕು ನಂದ್ಸಿರೆ ಮನೆ ಸುಡ್ತು" ಎಂದು ಪರಮ ಹೇಳಿ, ಅವನಿಗೆ ಪವಿತ್ರ ಹಾಕಿ ಪೂಜೆ ಶುರು ಮಾಡಿ, ತನ್ನ ಮುಖಕ್ಕೆ ಬಟ್ಟೆಯೊಂದನ್ನು ಕಟ್ಟಿಕೊಂಡ. ಕಾಳ ನಾಯ್ಕ ಭಕ್ತಿಯಿಂದ ಕುಂಡದಿಂದ ಹತ್ತು ಅಡಿ ಆಚೆ ಭಕ್ತಿಯಲ್ಲಿ ಕೈ ಮುಗಿದು ನಿಂತಿದ್ದ. ಪಕ್ಕದಲ್ಲಿದ್ದ ಗಂಟು ಬಿಚ್ಚಿ ಹೋಮಕ್ಕೆ ಸಮಿತ್ತು ಹಾಕಲು ಆರಂಭಿಸಿದ.  ಒಂದು ರೀತಿಯ ದುರ್ವಾಸನೆ ಅಡರಿತು ಅಲ್ಲೆಲ್ಲಾ. ಸಾಲದ್ದಕ್ಕೆ ಆಹುತಿಗೆ ಮೆಣಸಿನ ಕಾಯಿಯನ್ನೂ ಹಾಕತೊಡಗಿದ. ಹೋಮ ಅಂತೂ ಒಂದು ಗಂಟೆ ನಡೆಯಿತು. ಕೊನೆಗೆ ಪೂರ್ಣಾಹುತಿ ಹಾಕುವಂತೆ ಎದ್ದು ನಿಂತು ಚೀಲದಲ್ಲಿದ್ದ ಮೆಣಸಿನ ಕಾಳಿಅನ್ ಹುಡಿ, ಹಿಪ್ಪಳಿ ಮತ್ತೆ ಒಂದು ಹತ್ತು ಮುಷ್ಟಿ ಮೆಣಸಿನ ಕಾಯಿ ಒಟ್ಟಿಗೇ ಹಾಕಿ, ಒಂದಿಶ್ಟು ಸಾಸಿವೆ ಎಣ್ಣೆ ಸುರಿದು ಹೊರಟ.

ಪರಮ ತಂದಿಟ್ಟ ಪೇಚಾಟಕ್ಕೆ ವಿರೂಪಾಕ್ಷ ವಿಲ ವಿಲ ಅಂದು ಬಿಟ್ಟ. ಬಾಯಿ ಬಿಟ್ಟರೆ ಕಾಳನಿಗೆ ತನ್ನ ಬಣ್ಣ ಗೊತ್ತಾಗಿ ಆಗುವ ಅಪಾಯ ನೆನೆದು ಮನೆಯೊಳಗೇ ಕುಳಿತು ಘಾಟು ತಿಂದ. ಅವನಿಗೆ ತಿಳಿಯದ್ದೆಂದರೆ ಪರಮ ಮುಖಕ್ಕೆ ಕಟ್ಟಿದ್ದ ಬಟ್ಟೆ ಗಂಧದ ಎಣ್ಣೆಯಲ್ಲಿ ಅದ್ದಿ ಇಟ್ಟಿದ್ದು ಎಂದು ಮತ್ತೆ ತನ್ನ ಮುಸುಡು ಎಂಪಾಗಿದ್ದು ಅವಮಾನಕ್ಕೋ ಅಥವಾ ಮೆಣಸಿನ ಘಾಟಿಗೋ ಎಂದು. ಕಾಳನ ಪರಿಸ್ಥಿತಿ ಬಹಳ ಭಿನ್ನವಾಗಿ ಇರಲಿಲ್ಲ.

Thursday, July 6, 2017

ಗಾವಿಲ ಬಿ ಇ

ಎಪ್ಪತ್ತರ ದಶಕದಲ್ಲಿ ಊರಿನಲ್ಲಿದ್ದ ಭಟ್ಟರಲ್ಲಿ ಇಗ್ಗಾ ಭಟ್ಟರಿಗೆ ಒ೦ದು ವಿಶೇಷವಾದ ಬೆಲೆ ಇತ್ತು. ಅದಕ್ಕೆ ಕಾರಣ ಭಟ್ಟರು ಊರಿನಲ್ಲಿ ಮಾತ್ರವಲ್ಲದೆ ಕಾಶಿ ಮತ್ತು ಕಾಂಚಿಗಳಲ್ಲಿ ಮಂತ್ರ ಕಲಿತು ನಂತರ ಗೋಕರ್ಣದ ಪಾಠ ಶಾಲೆಯಲ್ಲಿ ಶಾಸ್ತ್ರಿಗಳಾಗಿ ಕೆಲೆಸ ಮಾಡಿದ್ದಷ್ಟೇ ಅಲ್ಲ. ಊರಿನ ಅನೇಕರಿಗೆ ವೇದಾಧ್ಯಯನ ಪ್ರಯೋಗಗಳನ್ನು ಕಲಿಸಿದ್ದು, ಅನೇಕ ಮಂದಿ ಬಡ ಬ್ರಾಹ್ಮಣರ ಮನೆಯಲ್ಲಿ ದಕ್ಷಿಣೆ ಇಲ್ಲದೆ ಕಾರ್ಯಗಳನ್ನು ಸಾಗಿಸಿದ್ದು, ಬ್ರಾಹ್ಮಣ ಕೇವಲ ಪರಿಗ್ರಹಕ್ಕಲ್ಲ ದಾನ ಕೂಡಾ ಮಾಡಬೇಕು ಎಂಬ ನೀತಿಗೆ ಬದ್ಧರಾಗಿ ದಾನವನ್ನೂ ಮಾಡಿದ್ದು. ತಮ್ಮ ವಿದ್ಯ ಗರ್ವವನ್ನು ಸಂಪೂರ್ಣವಾಗಿ ತ್ಯಜಿಸಿದ್ದರಿಂದಲೇ ಭಟ್ಟರು ವಿಘ್ನೇಶ್ವರ ಭಟ್ಟರಾಗಿಯೇ ಉಳಿಯದೆ ಗಾಳಿಕೊಪ್ಪದ ಎಲ್ಲರ ಬಾಯಿಯಲ್ಲೂ ಪ್ರೀತಿಯಿಂದ ಇಗ್ಗಾ ಭಟ್ಟರಾಗಿದ್ದು.

ಇಂತಿಪ್ಪ ಭಟ್ಟರಿಗೆ ಮೂರು ಮಕ್ಕಳು. ದೊಡ್ಡ ಮಗ ಪರಮೇಶ್ವರ ಅಪ್ಪನಂತೆಯೇ ಪೌರೊಹಿತ್ಯದ ದಾರಿಯನ್ನು ಆರಿಸಿಕೊಂಡು ಅದಾಗಲೇ ಮಂತ್ರ ತಂತ್ರ ಕಲಿಯಲಿ ಘಟ್ಟ ಇಳಿದಾಗಿತ್ತು. ಇನ್ನೊಬ್ಬ ಮಗ ಗೋಪಾಲ ಅದೇಕೋ ತೋಟ ಮನೆಗಳ ಕಡೆ ವಿಶೇಷ ಆಸ್ಥೆ ಹೊಂದಿ ಕೃಷಿಯಲ್ಲಿ ಮತ್ತು ಹೈನುಗಾರಿಕೆಗೆ ತೊಡಗಿಕೊಂಡ. ಕೊನೆಯ ಮಗ ಲಕ್ಷ್ಮೀನಾರಾಯಣ. ಕೊನೆಯ ಮಗ ಎಂದು ಮುದ್ದು ಸ್ವಲ್ಪ ಅತಿಯೇ ಆಗಿತ್ತು. ಇದರಿಂದ ಆತ ಸ್ವಲ್ಪ ಉಡಾಫ಼ೆ ಮತ್ತು ಸೋಮಾರಿತನ ಬೆಳೆಸಿಕೊಂಡ.ಗಾಳಿಕೊಪ್ಪದ ವಿಘ್ನೇಶ್ವರ ಭಟ್ಟರ ಮಗ ಅಂತ ಕರ್ಯಲು ಜನಕ್ಕೆ ಕಷ್ಟವೂ ಬೇಸರ್ವೂ ಆಗಿ ಗಾವಿಲ ಎನ್ನಿಸಿಕೊಂಡ. ಊರಲ್ಲಿ ಇಷ್ಟು ದಿನ ಮರ್ಯಾದೆ ಗೌರವಗಳಿಂದ ಬದುಕಿದ್ದ ಭಟ್ಟರಿಗೆ ಮಗ ಬೆಳೆದಂತೆಲ್ಲ ತಲೆಬಿಸಿ ಕೊಡತೊಡಗಿತ್ತು. ಹೆಂಡತಿ ಹತ್ತಿರ " ಸರಸೀ! ಶಣ್ಣ ಮಾಣಿ ಒಬ್ಬವ ದಡ ಹತ್ತಿರೆ ಸಾಕಿತ್ತು ಮಾರಾಯ್ತಿ. ಆಸ್ತಿ ಮನೆ ಬೆಳಸ್ದೇ ಇದ್ರೂ ಅಡ್ಡಿಲ್ಲೆ, ಉಳಿಸಿರೆ ಸಾಕಿತ್ತು." ಎಂದು ಎಷ್ಟೊ ಸಾರಿ ಉದ್ಗರಿಸಿದ್ದರು.

ಗಾವಿಲ ಸೋಮಾರಿಯಾದರೂ ದಡ್ಡನಲ್ಲ. ಎಲ್ಲಾ ತರಗತಿಗಳಲ್ಲೂ ಪಾಸಾಗುತ್ತಿದ್ದ. ಹಾಗೆಯೇ ಎಸ್ ಎಸ್ ಎಲ್ ಸಿ ಕೂಡಾ ಮುಗಿಸಿದ, ಪಿ ಯು ಸಿ ಕೂಡಾ ಪಾಸಾದ. ಜೊತೆಯಲ್ಲಿ ಉಂಡಾಡುತ್ತಿದ್ದ ಇಬ್ಬರು ಹುಡುಗರು ಬಿ ಮಾಡಲು ಬೆಂಗಳೂರು ಸೇರಿದ ನೆಂಟರ ಮಕ್ಕಳ ಬಗ್ಗೆ ಹೊಟ್ಟೆಕಿಚ್ಚಿನ ಮಾತು ಹೊರ ಹಾಕಿದಾಗ ಗಾವಿಲನಿಗೆ ಏನೋ ಒಂದು ಹುಳ ಬಿಟ್ಟಂತಾಗಿತ್ತು.
ಸೀದಾ ಮನೆಗೆ ಬಂದವನೇ, "ಅಪ್ಪ ಆನು ಬಿ ಮಾಡಕ್ಕು ಮಾಡಿದ್ದಿ" ಅಂದ. ಬಿ ಮತ್ತು ಎರಡೂ ತಿಳಿಯದ ಭಟ್ಟರು "ಅಂದ್ರ್ ಎಂತ ಮಾಣಿ?" ಅಂದಿದ್ದಕ್ಕೆ, ಅದು ಹೊಸಾ ತರ ವಿದ್ಯೆ. ಕಲಿಯಲೆ ಬೆಂಗಳೂರಿಗೆ ಹೋಗಕ್ಕು. ಗಪ್ಪತಿ ಮತ್ತೆ ರಾಮು ಚಿಕ್ಕಿ ಮಗ ಮಾಡ್ತಾ ಇದ್ನಡ. ಆನೂ ಹೋಗಿ ಅವನ ಜೊತೆ ಇದ್ಕಂಡು ಓದ್ತಿ. ನೀನು ದುಡ್ಡು ಕಳಸ್ತ್ಯಾ?" ಅಂದ.

ಭಟ್ಟರು ಸಂತೋಷದಿಂದ ಒಪ್ಪಿ ಹಣ ಕೊಟ್ಟು ಕಳಿಸಿದರು. ಭಟ್ಟರು ಕೇವಲ ಸಮಾಧಾನಿಯಾಗಿ ಉಳಿಯಲಿಲ್ಲ. ಊರಲ್ಲಿ ಅನೇಕರ ಹತ್ತಿರ ತಮಗಾದ ಸಂತೋಷವನ್ನು ಹೇಳಿಕೊಂಡಿದ್ದರು. ಆದರೆ ಎರಡನೇ ಮಗ ಗೋಪಾಲನಿಗೆ ಏಕೋ ಅನುಮಾನ ಶುರುವಾಯಿತು. ಆದರೆ ಅದನ್ನು ತೋರಿಸದೆ "ತಮ್ಮನ್ನ ಕಂಡ್ಕ ಬತ್ತಿ" ಎಂದು ಬೆಂಗಳೂರಿನ ಬಸ್ಸು ಹತ್ತಿದ. ಮೊದಲು ಬಂದ ಯಾವುದೋ ಪತ್ರದ ಮೇಲಿದ್ದ ವಿಳಾಸವನ್ನೇ ಹಿಡಿದು ತಮ್ಮನ ರೂಮಿಗೂ ಬಂದ. ತಮ್ಮ ಅಣ್ಣನನ್ನು ಚೆನ್ನಾಗಿ ಮಾತಾಡಿಸಿ ನಂತರ "ಅಣ್ಣ ಕಾಲೇಜಿಗೆ ತಡ ಆಗ್ತು ಆನು ಬತ್ತಿ."ಎಂದು ಹೊರಟ. ಗೋಪಾಲ, "ಪ್ಯಾಟೆ ನೋಡಿದ ಹಂಗೆ ಆಗ್ತಲ ಆನೂ ಬತ್ತಿ. ಹೆಂಗೂ ಕಾಲೇಜು ಹತ್ರ ಇದ್ದಲ" ಎಂದ, ಗಾವಿಲ ತಲೆ ಆಡಿಸಿದ. ಕಾಲೇಜಿನ ಒಳ ಬಂದು ಪರೀಕ್ಷಿಸಬೇಕು ಎಂದುಕೊಂಡಿದ್ದ ಗೋಪಾಲ ಇಂಗ್ಲಿಶ್ ಹೊಡೆತ ನೋಡಿ (ಕೇಳಿ) ಹೊರಗಡೆಯೇ  ಉಳಿದ. ಗೋಪಾಲ ಒಳ ಹೋದ. ಅನುಮಾನ ಪಿಶಾಚಿಯ ಬಾಧೆಗೆ ಒಳಗಾಗಿದ್ದ ಗೋಪಾಲ ಹೊರಗಡೆಯೇ ಉಳಿದ. ಸಂಜೆ ಗಾವಿಲ ಎಲ್ಲರೊಟ್ಟಿಗೇ ಬಂದಾಗ ಗೋಪಾಲನಿಗೆ ತನ್ನ ಮೇಲೇ ಬೇಸರವಾಗಿ ತಮ್ಮನ ಜೇಬಿಗೆ ಒಂದಿಷ್ಟು ದುಡ್ಡು ತುರುಕಿ ಪ್ರಾಯಶ್ಚಿತ್ತ ಮಾಡಿಕೊಂಡ ಭಾವನೆ ತಂದುಕೊಂಡ.

ಹೀಗೇ ಆರೇಳು ವರ್ಷಗಳು ಕಳೆಯಿತು. ಒಮ್ಮೆ ರಜೆಯ ಹೆಳೆ ಹೇಳಿ ಊರಿಗೆ ಬಂದಾಗ ಗಾವಿಲ ದೋಸ್ತಿ ಗಪ್ಪು ಕೇಳಿದ. "ಯಾವಾಗ ಮುಗಿತೋ ಮಾರಾಯ ನಿನ್ನ ಬಿ ?" ಎಂದು. ಗಾವಿಲ ನಗುತ್ತಾ "ಬೆಂಗಳೂರು ಸಾಕಾದಾಗ" ಎಂದುಉತ್ತರ ಕೊಟ್ಟ. ಗಪ್ಪು ಅರ್ಥವಾಗದ ಮುಖಭಾವ ಮಾಡಿದಾಗ, "ಉಲಿದವರಿಗೆಲ್ಲಾ ಬಿ ಅಂದ್ರೆ ಬ್ಯಾಚುಲರ್ ಆಫ಼್ ಇನ್ಜಿನಿಯರಿಂಗ್, ಯಂಗೆ ಬೆಂಗಳೂರಲ್ಲಿ ಇದ್ದೇನೆ" ಅಂದ. ಇದನ್ನೆಲ್ಲಾ ಮರೆಯಲ್ಲಿ ನಿಂತು ಗೋಪಾಲ ಕೇಳಿ ತನ್ನ ಮೈ ಎಲ್ಲಾ ಉರಿದು ಹೋದಂತೆ ತನ್ನ ಮೇಲೆ ತಾನೇ ಹೇಸಿಗೆ ಪಟ್ಟ.


ಭಾವದಿಂದ ಹೊರಬರಲು ಮನೆಗೆ ಬರುತ್ತಿದ್ದಂತೆ ತಮ್ಮನಿಗೆ ಡಿ ಟಿ ಪಿ ಮಾಡಿದ. ಅಂದ್ರೆ ದೊಣ್ಣೆ ತಗಂಡು ಪೆಟ್ಟು. ಹಾಂ! ಅದು ಬೈನೆ ಮರದ ದೊಣ್ಣೆಯಾಗಿದ್ದರಿಂದ ಬಿ ಕೂಡಾ ಆಗುತ್ತದೆ ಅಂದ್ರೆ ಬೈನೆ ಗೂಟದಲ್ಲಿ ಇಟ್ಟ.