Friday, December 2, 2022

ವರದಾಮೂಲ ಮಹಾಭಾರತದಲ್ಲಿ

ಇನ್ನೂ ಹೆಮ್ಮೆಯ ಸಂಗತಿ ಎಂದರೆ ಗಾಯತ್ರೀ ಕ್ಷೇತ್ರವಾಗಿರುವ ವರದಾಮೂಲ, ಗಾಯತ್ರೀ ಕ್ಷೇತ್ರ ಎಂದೇ ಮಹಾಭಾರತದಲ್ಲಿ ಉಲ್ಲೇಖವಾಗಿರುವುದು.

ಪುಲಸ್ತ್ಯ ಮಹರ್ಷಿಯು ಭೀಷ್ಮನಿಗೆ ತೀರ್ಥಯಾತ್ರೆಯ ಕುರಿತಾಗಿ ಹೇಳಿದ್ದನ್ನು ನಾರದ ಮಹರ್ಷಿಗಳು ಧರ್ಮರಾಯನಿಗೆ ಹೇಳುತ್ತಾರೆ.

ಹೀಗೆ ಹೇಳುವಾಗ ಪಾಂಡ್ಯ ದೇಶದ ಬಗೆಗೆ ತಿಳಿಸುತ್ತಾರೆ.(ಇಂದಿನ ತಮಿಳುನಾಡು). ಪಾಂಡ್ಯ ದೇಶದ ಋಷಭ ಪರ್ವತದ ಬಗೆಗೆ ತಿಳಿಸಿ, ನಂತರ ಕನ್ಯಾತೀರ್ಥ( ಕನ್ಯಾಕುಮಾರಿ) ಕುರಿತಾಗಿ ತಿಳಿಸಿ ನಂತರ ಗೋಕರ್ಣ ಕ್ಷೇತ್ರದ ಬಗೆಗೆ ತಿಳಿಸುತ್ತಾರೆ. ಗೋಕರ್ಣ ಕ್ಷೇತ್ರದ ನಂತರ ವೇಣಾ ನದಿಯ ಬಗೆಗೆ ತಿಳಿಸಿ ನಂತರ ಗೋದಾವರೀ ಕ್ಷೇತ್ರದ ಬಗೆಗೆ ತಿಳಿಸುತ್ತಾರೆ.
ಗೋದಾವರೀ ಕ್ಷೇತ್ರ ಇಂದಿನ ಆಂಧ್ರದಲ್ಲಿದೆ. ವೇಣಾ ನದಿ ಕ್ಷೇತ್ರ ಇಂದಿನ ಮಹಾಬಳೇಶ್ವರ.( ಸಜ್ಜನಗಡದ ಸಮೀಪ.)
ಭೌಗೋಳಿಕವಾಗಿ ನೋಡಿದಾಗ ಇಲ್ಲಿ ಒಂದು ರೀತಿಯ ವೃತ್ತ ಪ್ರಕಾರದಲ್ಲಿ ಕ್ಷೇತ್ರಗಳ ವರ್ಣನೆ ಇದೆ. ಗೋಕರ್ಣ ಮತ್ತು ಮಹಾಬಳೇಶ್ವರ ನಡುವೆ ಇರುವ ಗಾಯತ್ರೀ ಕ್ಷೇತ್ರ ಎಂದರೆ ಅದು ವರದಾಮೂಲವೆ ಸರಿ. ಇದಕ್ಕೆ ಇಂಬಾಗಿ ವರದಾನದಿಯ ವರ್ಣನೆ ಮತ್ತು ವರದಾ ಮತ್ತು ವೇಣಾ (ಕೃಷ್ಣವೇಣಾ) ಸಂಗಮದ ಬಗೆಗೆ ಮಾಹಿತಿ ಇದೆ. ಮಹಾಬಲೇಶ್ವರದಲ್ಲಿಯೇ ಗಾಯತ್ರೀ ನದಿ ಜನಿಸಿದರೂ, ಇಲ್ಲಿ ಹೆಸರಿಸಿರುವುದು ವರದಾನದಿ. ಹಾಗಾಗಿ ಇಂದಿನ ವರದಾಮೂಲವೇ ಗಾಯತ್ರೀ ಕ್ಷೇತ್ರ. (ಗಾಯತ್ರಿ ನದಿ ಮಹಾಬಲೇಶ್ವರ ಆರಭ್ಯದಿಂದಲೂ ಗುಪ್ತಗಾಮಿನಿ ಹಾಗಾಗಿ ಸಂಗಮ ಕ್ಷೇತ್ರದ ಪ್ರಶ್ನೆ ಅಪ್ರಸ್ತುತ). ಇದು ನನ್ನ ಹೆಡ್ಡ ತಲೆಗೆ ಬಂದ ವಿಶ್ಲೇಷಣೆ. ತಳಿದವರು ಚೆನ್ನಾಗಿ ವಿವರಿಸಿ. ತಪ್ಪಿದ್ದರೆ ತಿದ್ದಿಕೊಳ್ಳಲು ಸಹಾಯ ಮಾಡಿ.