Tuesday, July 31, 2018

ಕೋಳಿ_ಪಡೆ-1


ವಿಶಾರದ ಎಂಬ ತನ್ನ ಬಗ್ಗೆ ತಾನೇ ಇಟ್ಟುಕೊಂಡ ನಂಬುಗೆಗೆ ಇಂಬಾಗಲೋ ಎನ್ನುವಂತೆ ಬೆಂಗಳೂರಿನಲ್ಲಿದ್ದ ಭಾವನಿಗೆ ಕಾಡಿ ಬೇಡಿ ಲ್ಯಾಪ್ ಟಾಪ್ ತರಿಸಿಕೊಂಡ ವಿಶ್ವನಾಥ ಕಷ್ಟ ಪಟ್ಟು ಅಲ್ಲದಿದ್ದರೂ ರಜೆ ಕಳೆಯಲೆಂದು ಮನೆಗೆ ಬಂದ ಮಗಳಿಗೆ ಊರಲ್ಲಿಲ್ಲದ ಕಾಟ ಕೊಟ್ಟು ಕಂಪ್ಯೂಟರ್ ಬೂಟ್ ಮಾಡುವುದು, ಫ಼ೇಸ್ ಬುಕ್ ನೋಡುವುದು ಮತ್ತು ಮೇಲ್ ಕಳಿಸುವುದು ಎಲ್ಲವನ್ನೂ ಸ್ವಲ್ಪ ಮಟ್ಟಿಗೆ ಕಲಿತ. ಕಲಿತ ಎನ್ನುವುದಕ್ಕಿಂತ ತಿಳಿದ ಎನ್ನುವುದು ಸೂಕ್ತವಾದೀತು.



ಈತ ಕಲಿತದ್ದೋ ತಿಳಿದದ್ದೋ ಒತ್ತಟ್ಟಿಗಿರಲಿ. ಊರವರು ಇವನು ಕಂಪ್ಯೂಟರ್ ಕಲಿತದ್ದನ್ನು ತಿಳಿಯಲೇ ಬೇಕು. ಅರ್ಜುನ ಕೌರವರನ್ನು ಸೋಲಿಸಲು ಪಾಶುಪತ ಪಡೆದಂತೆ, ಈತ ನಾಣುವನ್ನು ಹಿಂದಿಕ್ಕಿ ಫೇಸ್ ಬುಕ್ಕಿನಲ್ಲಿ ಹೆಸರು ಮಾಡಲು ಬರೆಯಲು ಕಂಪ್ಯೂಟರ್ ತೆಗೆದುಕೊಂಡಿದ್ದು ದಂಡವಾಗಿಬಿಡುತ್ತದೆ. ತಾನು ಫೇಸ್ ಬುಕ್ಕಿನಲ್ಲಿ ಬರೆದಿದ್ದು ಯಾರದ್ದೋ ಹತ್ತಿರ ಬರೆಸಿದ್ದು ಎಂದು ಸದಾ ಕಾಲ ತನ್ನ ವಿರುದ್ಧವೇ ಮಸಲತ್ತು ಮಾಡುವ ಊರ ಜನ ಮಾತಾಡಿಕೊಳ್ಳಲಿಕ್ಕಿಲ್ಲವೇ? ಅದು ತಪ್ಪ ಬೇಕಿದ್ದರೆ ತನ್ನ ಕೈನಲ್ಲೊಂದು ಕಂಪ್ಯೂಟರ್ ಇರುವುದು, ತಾನು ಅದನ್ನು ಉಪಯೋಗಿಸಲು ಕಲಿತದ್ದು ಎರಡೂ ಊರೆಲ್ಲ ಜಾಹೀರಾಗಬೇಕು. ತಾನೇ ಹೇಳಿಕೊಂಡರೆ ಅದು ಸ್ವಪ್ರಶಂಸೆಯ ಮಾತಾಗಿಬಿಡುತ್ತದೆ. ಯೋಗ್ಯತಾವಂತನಿಗೆ ಅದು ತರವಲ್ಲ. ಬೇರೆ ಯಾರಾದರೂ ಹೇಳಬೇಕು. ಹೇಳಲು ಯಾರೂ ಸಿದ್ಧರಿರದಾಗ ತಾನೇ ಹೇಳಿಸಬೇಕು. ಅದಕ್ಕೆ ಯಾರಾದರೂ ಒಂದು ಲೌಡ್ ಸ್ಪೀಕರ್ ಬೇಕು. ಹೀಗೆಲ್ಲಾ ಯೋಚಿಸಿದ ವಿಶ್ವಣ್ಣ ಯೋಚನೆಗಳ ಕಾರಕ, ದಾಯಕ, ನಿಯಂತ್ರಕ, ಹಂತಕ ಎಲ್ಲವೂ ಆದ ಕವಳ ಕಟ್ಟಿ ಬಾಯಲ್ಲಿಟ್ಟು ಈ ಕೆಲಸಕ್ಕೆ ಯಾರಾದೀತು ಎಂದು ಯೋಚಿಸುತ್ತ ಮನೆಯ ಚಾವಡಿಯಲ್ಲಿ ಅತ್ತಿಂದಿತ್ತ ಸುಳಿದಾಡತೊಡಗಿದ.



ದೂರದಲ್ಲಿ ಯಾವುದೋ ಒಂದು ಆಕೃತಿ ಬರುತ್ತಿರುವುದು ಕಂಡಿತು. ಬಹಳ ಬೇಗ ಅದು ಶುಕ್ರನೇ ಸರಿ ಎನ್ನುವುದು ಸ್ಪಷ್ಟವಾಯಿತು. ತತ್ ಕ್ಷಣದಲ್ಲಿ ಒಳಗೋಡಿ ತನ್ನ ತೊಡೆಗಣಕವನ್ನು ತಂದಿಟ್ಟುಕೊಂಡು ಕುರ್ಚಿಯ ಮೇಲೆ ಕುಳಿತ. ಚಿತ್ತೈಸಿತು ಶುಕ್ರನ ಸವಾರಿ. ಅವ ಬಂದಿದ್ದು ಯಾಕೆ ಎನ್ನುವುದು ವಿಶ್ವನಿಗೆ ಬೇಡವಾಗಿತ್ತು. ಕಂಪ್ಯೂಟರ್ ಕಂಡ ಕೂಡಲೇ ಶುಕ್ರನಿಗೆ ಬಂದ ವಿಚಾರ ಮರೆತೇ ಹೋಗಿತ್ತು. ಮತ್ತೆ ಅವನಿಗೆ ಒಂದು ವಿಚಾರ ಬಹಳ ಚೆನ್ನಾಗಿ ಗೊತ್ತಿತ್ತು. ವಿಶ್ವಣ್ಣನನ್ನು ಹೊಗಳಿದರೆ ಏನೂ ಆದೀತು ಎನ್ನುವುದು.



"ಹ್ವಾ ಭಟ್ರೇ... ಅದೆಂತ... ತೊಡೆ ಮೇಲೆ ಇಟ್ಕಂಡ್ ಕಾಂಬೂ ಟೀವಿಯಾ?!"



"ಅಲ್ಲ"



"ಮತ್ತೆಂತ ಭಟ್ರೇ..... ತಲಿ ನೋವ್ ಅಥವಾ ತೊಡೀ ನೋವ್. ತೆಗೂ ಮಿಷನ್ನಾ... ಅಥವಾ ಕಣ್ ಪರೀಕ್ಷಿ ಮಾಡೂ ಮಿಷನ್ನಾ?! ಎಂತಕ್ಕೆ ಕೇಂಬುದ್ ಅಂದ್ರೆ ನಾ ಇದ್ನ ಬೊಂಬಾಯಂಗೂ ಕಾಣ್ಲ ಕಾಣಿ"



ಮತ್ಯಾರಾದರೂ ಈ ಮಾತಾಡಿದ್ದರೆ ತನ್ನನ್ನು ಕಿಚಾಯಿಸುತ್ತಿದ್ದಾರೆ ಎಂದು ಭಾವಿಸಿ ಸಿಟ್ಟಾಗುತ್ತಿದ್ದನೋ ಏನೋ ವಿಶ್ವಣ್ಣ. ಬೆಂಗಳೂರಿನ ಭಾವನ ಮನ ಒಲಿಸಿ ತಂದ, ಮಗಳ ತಲೆ ಕೆಡಿಸಿ ಕಲಿತ ಕಂಪ್ಯೂಟರ್ ಅನ್ನು ಕಾಲು ನೋವು ತೆಗೆಯುವ ಮಿಷನ್ ಅಂದರೆ ಯಾರಿಗೆ ಸಿಟ್ಟು ಬರುವುದಿಲ್ಲ ಹೇಳಿ. ಆದರೆ ಶುಕ್ರ ಏನೂ ತಿಳಿಯದವ ಎನ್ನುವುದು ಶತಃಸಿದ್ಧ. ಅವನಿಗಿಂತ ತಾನು ತಿಳಿದವ ಅಂತಾಯಿತಲ್ಲ. ಭಲೇ!! ತನ್ನ ಬೆನ್ನನ್ನೊಮ್ಮೆ ತಟ್ಟಿಕೊಳ್ಳಬೇಕೆನ್ನಿಸಿತು ವಿಶ್ವನಿಗೆ. ಆದರೆ ಹಾಗೆ ಮಾಡಲಿಲ್ಲ. ಅದು ಮುಖ್ಯವೂ ಅಲ್ಲ.



"ಇದು ಕಂಪ್ಯೂಟರ್ ಮಾರಾಯ" ಎಂದ ವಿಶ್ವ, ಗರ್ವ ಭರಿತ ಸಂತಸದ ಧ್ವನಿಯಲ್ಲಿ.



"ಹಂಗಂದ್ರೆ ಎಂತ ಹೆಗಡೇರೆ?!"



"ಇದು ಭಾರಿ ಯಂತ್ರ. ಇದಕ್ಕೆ ಎಲ್ಲಾ ಗೊತ್ತಿರ್ತದೆ. ಮಂತ್ರ-ತಂತ್ರ ಎಲ್ಲದೂವ. ಇದಿಟ್ಗಂಡವ ಏನೂ ಕಲಿಯಬಲ್ಲ. ಗೊತ್ತಾಗ್ಲ ಅಂದ್ರೆ ಈ ಮಿಷನ್ ಎಲ್ಲಾ ಹೇಳ್ತದೆ. ಎಂತ ಬೇಕು ಹೇಳು ನಿಂಗೆ. ಹೇಳನ" ಎಂದು ಮತ್ತೆ ತನ್ನ ಸಾತ್ವಿಕ ಅಹಂಕಾರ ಪ್ರದರ್ಶಿಸಿದ ವಿಶ್ವ.



ಶುಕ್ರ ಈಗ ತನ್ನ ಮಾತು ಶುರು ಮಾಡಿದ. "ಭಟ್ರೇ ಅದೆಂತ ಕೇಂತ್ರಿ.... ನಾ ಮೊದ್ಲ್ ಬಾಂಬಿಯಾಂಗಿದ್ದದ್ದ್ ನಿಮಗ್ಗೊತ್ತೀತಲೆ. ಅಲ್ಲಿರ್ತ ಎಲ್ಲ ಕೋಳಿಪಡೆ ಆಡ್ಲ. ಈಗ ಆಡದೆ ಭಾರಿ ವರ್ಸ ಕಳ್ದೀತ್ ಕಾಣಿ....ಮತ್ತೆ ಅದೆಲ್ಲ ಯಾವಾಗ್ಲೂ ಆಡೂದಲ್ದೆ... ಜೂಜಪ. ಆಡ್ರೆ ಮನಿ ಹಾಳಾಪುಕಿತ್ ಮತ್ತೆ.....ಆದ್ರೆ ಮನ್ನೆ ಯಾಸು ಮಾಡದ್ ಕಂಡ್ ಕುಸಿ ಆಯಿ ಗಣೇಸಯ್ಯ ಹೊರ ದೇಸಕ್ಕೆ ಹ್ವಾಪವ್ರ್ ಒಂದ್ ಐನೂರ್ ಕೊಟ್ಟೀರೆ... ಎಂತ ಮಾಡುದ್ ಅಂತ ಕಂಡ್ರೆ ಕೋಳಿಪಡೆ ಆಡುವ ಅಂತ ಅನ್ಸೂಕೆ ಹಿಡಿದೀತೆ. ಆರೆ, ಅವ್ರ್ ಕುಸಿಗೆ ಕೊಟ್ ದುಡ್ ತೆಕ ಹ್ವಾಯಿ ಕೋಳಿ ಪಡೆಯಂಗೆ ಕಂತ್ಸೂದ್ ಸರಿ ಅಲ್ದೆ. ಹಂಗಂತ ಕೋಳಿ ಪಡೆ ಪೂರ್ತಿ ಬಿಡೂಕಾತ್ತ?! ಊರಿನ್ ಗತ್ತ್ ಅಲ್ದೆ ಅದು... ಬಿಟ್ರೆ ಶುಕ್ರ ಕೋಳಿಪಡೆ ಅಂದ್ರೆ ಹೆದರ್ತ ಅಂತೆಲ್ಲ ಆಡ್ಕ್ಂತ್ರ್ ಈ ಹಪ್ ಹಿಡ್ದರ್.. ಅವ್ರ್ ವಾಲಿ ಕಳೂಕೆ..... ಈಗ ಈ ಮಿಸನ್ನಂಗೆ ಕಂಡ್ ಎಲ್ಲಿ ಕೋಳಿ ಪಡಿ ಇತ್ತ್..ಯಾರ್ ಯಾರ್ ಕೋಳಿ ಕಟ್ತ್ರ್... ಯಾವ ಕೋಳಿಗೆ ಎಷ್ಟ್ ಕಟ್ರೆ ಗೆಲ್ಲೂಕಾತ್ತ್ ಅಂತೆಲ್ಲ ಕಂಡ್ ನಂಗೆ ಹೇಳಿನಿ. ಮೇಲೆ ಒಂದ್ ಐನೂರ್ ರುಪಾಯಿ ಕೊಡೀನಿ. ಹೆಂಗೂ ಗೆಲ್ಲೂದ್ ಮಿಸನ್ ಹೇಳಿದ ಕೋಳಿಯೇ ಅಲ್ದೆ... ಗೆದ್ಕ ಬಂದ್ರ್ ಗತಿಗೆ ವಾಪಾಸ್ ಕೊಡ್ತೆ. ಅಸಲೂ ಕೊಡ್ತೆ. ಲಾಭದಂಗೂ ಸ್ವಲ್ಪ ಕೊಡ್ತೆ..." ಎಂದ.



ಬೇರೆ ಸಮಯದಲ್ಲಾಗಿದ್ದರೆ ವಿಶ್ವಣ್ಣ ಕೃದ್ಧನಾಗುತ್ತಿದ್ದ ಆದರೆ ತನಗೂ ಕಂಪ್ಯೂಟರ್ ಕೊಂಡು ಅದನ್ನು ಕಲಿತಿದ್ದೇನೆ ಎಂದು ತಿಳಿಸಲು ಸಿಕ್ಕ ಸುವರ್ಣವಕಾಶವನ್ನು ಕಳೆದುಕೊಳ್ಳಲು ಆತ ತಯಾರಿರಲಿಲ್ಲ. ಅದಕ್ಕೇ ಶುಕ್ರನಿಗೆ, ೧೦೦ ರೂಪಾಯಿ ಕೊಟ್ಟು, ಕಂಪ್ಯೂಟರಿನಲ್ಲಿ ಇಣುಕಿ "ಹೇಳ್ತೇನೆ ತಡಿ" ಎಂದು ಹುಡುಕುತ್ತಿರುವಂತೆ ನಾಟಕ ಮಾಡಿದ. ಆ ಕ್ಷಣದಲ್ಲಿ ಅವನಿಗೆ ಎಂದೋ ಒಂದು ದಿನ ಅವನ ಮನೆಯ ಕೆಲಸದಾಳು ಕನ್ನ ನಾಯ್ಕ ಹೇಳಿದ್ದು ನೆನಪಾಯಿತು, ಕೋರೆತ್ವಾಟದ ಭೂತನ ಕಟ್ಟೆಯ ಹಿಂಭಾಗದಲ್ಲಿನ ಬಯಲಲ್ಲಿ ಕೋಳಿ ಪಡೆ ಇದೆ ಅಂತ ಹೇಳಿದ್ದು. ಗಣಪು ಶೆಟ್ಟಿಗೆ ಆ ಭೂತದ ಕೃಪೆ ಇರುವುದರಿಂದ ಆತನ ಕೋಳಿಯೇ ಸದಾಕಾಲ ಗೆಲ್ಲುತ್ತದೆ ಎಂದಿದ್ದು ಎರಡೂ ನೆನಪಾಯಿತು. ಅದನ್ನೇ ಶುಕ್ರನಿಗೆ ಹೇಳಿದ. ಶುಕ್ರನೂ ನಂಬಿ ಹೋದ.



ಈಗ ವಿಶ್ವ ತನ್ನಲ್ಲೇ ತಾನು ಯೋಚಿಸಿದ. ಒಂದು ವೇಳೆ ಶುಕ್ರ ಗೆದ್ದರೆ, ಅವನ ಹರಕು ಬಾಯಿಯಲ್ಲಿ ಹೇಗೂ ತಾನು ಕಂಪ್ಯೂಟರ್ ನೋಡಿ ಹೇಳಿದ್ದು ಹೊರಬರುತ್ತದೆ. ಆತ ಸೋತರೂ ಕೂಡ ಈ ವಿಚಾರ ಹೊರಬೀಳಲೇ ಬೇಕು. ಸೋತ ಹೊಟ್ಟೆ ಉರಿ ಯಾರಪ್ಪನ ಮನೆಯದ್ದು?! ಹೇಗೂ ತಾನು ಕಂಪ್ಯೂಟರ್ ಕೊಂಡಿದ್ದು ಮತ್ತು ಅದನ್ನು ಉಪಯೋಗಿಸುತ್ತಿರುವುದು ಎರಡೂ ಜಾಹೀರಾಗುತ್ತದೆ. ವಿಶ್ವಣ್ಣನ ವಿಶಾರದತ್ವಕ್ಕೆ ಇದಕ್ಕಿಂತ ಮೀರಿದ ನಿದರ್ಶನ ಬೇಕೆ?



#ವಿಶಾರದ_ವಿಶ್ವಣ್ಣ



#ಶುಕ್ರ



#ಕೋಳಿ_ಪಡೆ

Monday, July 30, 2018

ಕಳ್ಳಿಪೀರ

ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಗದ್ದೆ ಬೇಸಾಯ ನಡೆಯುತ್ತಿತ್ತು. ಗದ್ದೆ ಕೊಯ್ಲಿನ ನಂತರದಲ್ಲಿ ಅದನ್ನು ತಂದು ಹರ ಹಾಕಿ, ಒಕ್ಕಿ, ಭತ್ತ ಜಪ್ಪಿ ನಂತರ ಭತ್ತವನ್ನು ಒಟ್ಟು ಮಾಡಿ ಪಣಥ ಸೇರಿಸುತ್ತಿದ್ದರು. ಈ ಸಮಯದಲ್ಲಿ ಹರ ಹಾಕಿದ ಹುಲ್ಲಿನ ಮೇಲೆ ಎತ್ತಿಗೆ ರೋಣಗಲ್ಲನ್ನು ಕಟ್ಟಿ ಓಡಿಸುವವನ ಕೂಗಾಟ ಚೀರಾಟದ ಮಧ್ಯೆ, ಮನೆಯ ಎದುರಿಗೆ ಎತ್ತರದಲ್ಲಿದ್ದಎಲೆಕ್ಟ್ರಿಕ್ ತಂತಿಯ ಮೇಲೆ ಸಾಲಾಗಿ ಕೂರುತ್ತಿದ್ದ ಹಕ್ಕಿಗಳ ಸಾಲು. ಹಕ್ಕಿಗಳು ಹಸಿರು ಬಣ್ಣದಲಿದ್ದವು. ಅದನ್ನು ನೋಡಿ ಎಲ್ಲರೂ ಗಿಳಿ ಎಂದು ಕರೆಯುತ್ತಿದ್ದೆವು. ನಂತರದಲ್ಲಿ ನಮ್ಮ ಮನೆಯಲ್ಲಿ ಗದ್ದೆ ಮಾಡುವುದನ್ನು ಕೈಬಿಡಲಾಯ್ತು. ಅದಾಗಿ ಸ್ವಲ್ಪ ದಿನಗಳಲ್ಲಿ ನಾವು ಗಿಳಿ ಎಂದುಉ ಕರೆಯುತ್ತಿದ್ದ ಆ ಹಕ್ಕಿಗಳ ಆಗಮನವೂ ನಿತ್ತು ಹೋಯ್ತು. ಆದರೂ ಅಲ್ಲಲ್ಲಿ ಆ ಹಕ್ಕಿ ದರ್ಶನವನ್ನು ಕೊಡುತ್ತಿತ್ತು. ಆದರೆ, ಬೆಲೆಯುತ್ತಿದ್ದ ದೇಹ ಅದರೊಂದಿಗೆ ಹ್ಸೆದು ಬೆಸೆದುಕೊಂಡಿದ್ದ ಮನಸ್ಸು ಅವೆರಡೂ ಆ ಕಡೆ ಕುತೂಹಲವನ್ನು ತಾಳಲಿಲ್ಲ. ಗೊತ್ತಾದ ಒಂದೇ ವಿಚಾರವೆಂದರೆ, ಮಿರ್ನುವುದೆಲ್ಲಾ ಪೊನ್ನಲ್ಲ ಎನ್ನುವಂತೆ ಹಸಿರು ಬಣ್ಣದ ಹಕ್ಕಿಗಳೆಲ್ಲಾ ಗಿಳಿಗಳಲ್ಲ ಎನ್ನುವುದು.

ಕೊನೆಗೆ ನಾನೂ ಅನೇಕರಂತೆ ಕ್ಯಾಮರಾ ತೆಗೆದುಕೊಂಡೆ. ಆಗ ಹೊಸ ಬಿಸಿಯಲ್ಲಿ ಸಿಕ್ಕ ಸಿಕ್ಕಲ್ಲೆಲ್ಲಾ ನನ್ನ ಕ್ಯಾಮರಾ ಕಣ್ಣು ಹರಿಯುತ್ತಿತ್ತು. ಮಧ್ಯೆ ತೇಜಸ್ವಿಯವರ ಪುಸ್ತಕಗಳನ್ನು ಓದಿದ್ದು ಮನುಷ್ಯನಿಗಿಂತ ಅನ್ಯ ಜೀವಿಗಳ, ಅದರಲ್ಲೂ ಹಕ್ಕಿಗಳೆಡೆಗೆ ನನ್ನಲ್ಲಿ ಅದೇನೋ ವಿಶೇಷ ಆಕರ್ಷಣೆ ಬೆಳೆಸಿತ್ತು. ಕ್ಯಾಮೆರಾದಲ್ಲಿ ಒಮ್ಮೆ ಈ ಹಕ್ಕಿಯ ಚಿತ್ರವನ್ನು ತೆಗೆದು ಫೇಸ್ ಬುಕ್ಕಿನಲ್ಲಿ ಹಾಕಿದೆ. ಆಗೆಲ್ಲಾ ಫೋಟೋಗಳು ಕೇವಲ ನನ್ನ ಗೋಡೆಯ ಮೇಲೆ ಮಾತ್ರ ಇರುತ್ತಿದ್ದವು. ನನ್ನ ಫೋಟೋಗ್ರಫಿ ಸೊಗಸಲ್ಲ, ನೋಡುವುದಕ್ಕೂ ಯೋಗ್ಯವಲ್ಲ. ಆದರೂ ನಾನು ಹಕ್ಕಿಗಳ ಫೋಟೊ ತೆಗೆಯುವುದು ಬಿಡಲಿಲ್ಲ. ಕಾರಣ ಇಷ್ಟೇ. ಗುಬ್ಬಿಗಳಂತೆ ನಾಳೆ ಉಳಿದ ಹಕ್ಕಿಗಳೂ ಮರೆಯಾದರೆ ನೋಡುವುದಕ್ಕಾದರೂ ಇರಲಿ ಎನ್ನುವಂತೆ. (ಔಷಧಿಗೆ ಎಂದು ಹಳೆಯ ಕಾಲದಲ್ಲಿ ಕಲ್ಲುಸಕ್ಕರೆ ತೆಗೆದಿಟ್ಟಂತೆ.)

ಹೀಗೆ ಕ್ಯಾಮರಾವನ್ನು ಕಂಡ ಕಂಡಲ್ಲಿಟ್ಟು ಬಟನ್ ಒತ್ತುತ್ತಿದ್ದಾಗ (ಫೋಟೋಗ್ರಫಿ ಎನ್ನುವ ಶಬ್ದಕ್ಕೆ ನಾನು ತೆಗೆದ-ತೆಗೆಯುವ ಎಷ್ಟೋ ಚಿತ್ರಗಳು ಅಪವಾದ-ಅಪಸವ್ಯ. ಹಾಗಾಗಿ ನಾನು ಆ ಶಬ್ದ ಬಳಸುತ್ತಿಲ್ಲ) ಸಿಕ್ಕ ಹಕ್ಕಿಗಳ ಫೋಟೋಗಳನ್ನು ಫೇಸ್ ಬುಕ್ಕಿನ ಹಕ್ಕಿಗಳಿಗೆ ಸಂಬಂಧಿಸಿದ ಗ್ರೂಪಿನಲ್ಲಿ ಹಾಕಿ ಅವುಗಳ ಹೆಸರನ್ನು ತಿಳಿಯುತ್ತಿದ್ದೆ. ಆಗ ಈ ಹಕ್ಕಿಯ ಹೆಸರು ಗ್ರೀನ್ ಬೀ ಈಟರ್ ಎಂದು ತಿಳಿಯಿತು. ಕನ್ನದದಲ್ಲಿ ನೇರವಾಗಿ ಭಾಷಾಂತರಿಸಿದರೆ " ಹಸಿರು ನೊಣ ಹಿಡುಕ" ಎಂದಾಗುತ್ತದೆ. ಆದರೆ ಸಂಧಿ ಸಮಾಸಗಳನ್ನು ಸೃಷ್ಟಿಸಿ ಆಡುವ ಭಾಷೆಯನ್ನು ಸುಲಭ-ಸುಲಲಿತಗೊಳಿಸಿದ ನಮ್ಮ ಜನ ಇಷ್ಟುದ್ದದ ಹೆಸರನ್ನು ಖಂಡಿತಾ ಇಟ್ಟಿರಲಾರರು. ಕೊನೆಗೆ ಮತ್ತೆಲ್ಲೋ ಹಕ್ಕಿಗಳ ಬಗ್ಗೆ ಓದುತ್ತಿದ್ದಾಗ ತಿಳಿದಿದ್ದು ಈ ಹಕ್ಕಿಯ ಹೆಸರು "ಜೇನುಬಾಕ" ಎನ್ನುವುದು. ಇದಕ್ಕೇ "ಕಳ್ಳಿಪೀರ" ಎಂದೂ ಕರೆಯುತ್ತಾರೆ ಎಂದು ತಿಳಿಯಿತು.

ಮೊನ್ನೆ ಎಲ್ಲೋ ಹಳೆಯ ಫೋಟೋಗಳನ್ನು ಹುಡುಕುತ್ತಿದ್ದಾಗ, ಈ ಹಕ್ಕಿಯ ಕೆಲವು ಫೋಟೋಗಳು ಸಿಕ್ಕವು. ತೆಗೆದು ಫೇಸ್ ಬುಕ್ಕಿನಲ್ಲಿ ಹಾಕುವ ಮೊದಲು ಕೆಲಾನ್ನು ತಿಳಿಯೋಣ ಎಂದು ಹುಡುಕಾಟ ನಡೆಸಿದೆ. ಸಿಕ್ಕ ವಿಚಾರಗಳು ಇಂತಿವೆ.

ಈ ಹಕ್ಕಿಯ ಮುಖ್ಯ ಆಹಾರ, ಜೇನ್ನೊಣ. ಹುಳ ಹುಪ್ಪಟೆಗಳು ಇರುವೆಗಳು ಕೂಡಾ ಇದರ ಆಹಾರ. ಇದನ್ನು ಸಂಸ್ಕೃತದಲ್ಲಿ ಸಾರಂಗ ಎಂದು ಕರೆಯುತ್ತಾರೆ. ತುಳು ಭಾಷೆಯಲ್ಲಿ ಇದನ್ನು ತುಂಬೆ ಪಕ್ಕಿ ಎನ್ನುತ್ತಾರೆ. ಎತ್ತರದ ಸ್ಥಳಗಳಲ್ಲಿ ಕೂರುವ ಸ್ವಭಾವ ಇದೆ. ವಿಶೇಷತೆ ಎಂದರೆ, ಇದು ಬಿಲದಲ್ಲಿ ವಾಸಿಸುತ್ತದೆ. ಗುಂಪಾಗಿ ಕೂರುವುದು ಇವುಗಳ ಸ್ವಭವ. ಮಳೆ ಆಧರಿಸಿ ಇವುಗಳ ವಲಸೆ ಇರುತ್ತದಂತೆ. ಮರಳು ಸ್ನಾನವೂ ಇವುಗಳ ವಿಶೇಷತೆಯಲ್ಲೊಂದು. ಆವಾಸ ಸ್ಥಾನ ಏಷಿಯಾ, ಪಶ್ಚಿಮ ಆಫ್ರಿಕಾ, ನೈಲ್ ಕಣಿವೆ, ಹಿಮಾಲಯ ಪರ್ವತ ಪ್ರದೇಶ ಹೀಗೆ ಎಲ್ಲೆಡೆ ವ್ಯಾಪಿಸಿದೆ. ಬೇಟೆಯಾಡಿದ ಹುಳುಗಾನ್ನು ತಿನ್ನುವ ಮೊದಲು ಅವುಗಳ ರೆಕ್ಕೆಗಳನ್ನು ಹರಿದು ಬಿಚ್ಚಿ, ಹೊರಭಾಗದ ಆವರಣವನ್ನು ಬೇರ್ಪಡಿಸಿ ತಿನ್ನುತ್ತವೆ. ಇದಕ್ಕಾಗಿ ಹಿಡಿದ ಬೇಟೆಯನ್ನು ಹಿಡಿದು ಕುಳಿತ ಕಂಬಿಗೆ ಪದೇ ಪದೇ ಬಡಿಯುತ್ತವೆ. ನಂತರ ನುಂಗುತ್ತವೆ.

ಕ್ಯಾಮರಾ ಹಿಡಿದು ಬಟನ್ ಒತ್ತಿದ್ದನ್ನು ಹೀಗೆ ಸಾರ್ಥಕಗೊಳಿಸಲೆಂದು ಗಡಿಬಿಡಿಯಲ್ಲಿ ಇಷ್ಟನ್ನೇ ತಿಳಿದು ಕಕ್ಕಿದ್ದೇನೆ. ಪಕ್ಷಿ ಪ್ರಪಂಚದಲ್ಲಿ ಇಟ್ಟ ಮೊದಲ ಅಂಬೆಗಾಲು. ವಿಚಾರ ಹೆಚ್ಚು ತಿಳಿಸಲಿಲ್ಲ. ನಾನೂ ತಿಳಿದಿಲ್ಲ. ಒಟ್ರಾಸಿ ಇದೆ. ನೀವು ತಿಳಿಸಿದರೆ ತಿಳಿವಾಸೆ ಇದೆ. ತಿಳಿಸಿ.






Thursday, July 26, 2018

ಅಸ್ಗಾಡ್ರಿಯಾ..ವಿಮಾನ...ವಿಯಾನ

ಅಸ್ಗಾಡ್ರಿಯಾ.. ಹೆಸರು ಕೇಳಿದರೆ ಕುಂದಾಪುರದ ಕಡೆ "ತೆಕಂಡ್ರಿಯಾ" "ಈಗ ಬಂದ್ರ್ಯಾ" ಎಂದೆಲ್ಲ ತೆಗೆಯುವ ಉದ್ಗಾರ ನೆನಪಾಗುತ್ತದೆ ನನಗೆ. ಉಮ್ದಾಪುರ ಭಾಷೆಯ ಸೊಗಸು ಅದು ಬಿಡಿ.ಆದರೆ ಈ ಹೆಸರ ಪಕ್ಕದಲ್ಲಿಯೇ ಇದ್ದ ಹೆಸರು ಅಂತರಿಕ್ಷದಲ್ಲೊಂದು ದೇಶ ಎನ್ನುವ ವಾಕ್ಯ ಕುತೂಹಾಕ್ಕೆಡೆಮಾಡಿಕೊಟ್ಟಿತು. ಲೇಖನ ಪೂರ್ತಿಯಾಗಿ ಓದಿದೆ. ಅಮೆರಿಕಾದ ಸಾಹಸಿ ಮತ್ತು ಉತ್ಸಾಹಿ ಜನರ ಗುಂಪೊಂದು ಅಂತರಿಕ್ಷದಲ್ಲಿ ವಾಸಾನುಕೂಲದ ಸ್ಪೇಸ್ ಷಟಲ್ ಒಂದನ್ನು ನಿರ್ಮಿಸಲಿದೆಯಂತೆ. ಅವರೇ ಹೇಳಿಕೊಳ್ಳುವ ಪ್ರಕಾರ ಆ ಸ್ಪೇಸ್ ಷಟಲ್ ಓಮ್ದು ದೇಶವಾಗಿರಲಿದೆಯಂತೆ. ಅಲ್ಲಿಗೆ ವಾಸಿಸಲು ಬರುವವರಿಗೆ ಒಂದು ನಿಬಂಧನೆ ಇದೆಯಂತೆ. ಅದೇನೆಂದರೆ ಅಲ್ಲಿ ರಿಲಿಜಿಯನ್ ಇಲ್ಲವಂತೆ. ಒಂದು ರೀತಿಯಲ್ಲಿ ಒಳ್ಳೆಯದು. ರಿಲಿಜಿಯನ್ ಇಲ್ಲದಲ್ಲಿ, ಅನವಶ್ಯಕ ಕಟ್ಟುಪಾಡುಗಳಿಲ್ಲದಲ್ಲಿ ಧರ್ಮ ತಂತಾನೇ ಬರುತ್ತದೆ ಬಿಡಿ. ನಾನೇನು ಒಬ್ಬ ನಾಗರೀಕತೆಯ ವಿಷ್ಲೇಶಕನಲ್ಲ. ಹಾಗಾಗಿ ಅಸ್ಗಾಡ್ರಿಯಾ ದೇಶದ ಮುಂದಿನ ಭವಿತವ್ಯದ ಬಗ್ಗೆ ನಾನು ಚಿಂತಿಸುವುದಿಲ್ಲ. ಹೊಸತನ, ಹೊಸ ಸಾಹಸಗಳು ಎಂದಿದ್ದರೂ ಚೆನ್ನವೇ ಸರಿ.

ಅಸ್ಗಾಡ್ರಿಯಾದ ಎನ್ನುವ ಹೆಸರಿನ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದೆ. ನನಗಿದ್ದ ಕುತೂಹಲ ಅದರ ಹೆಸರಿನ ಮೂಲದ ಬಗ್ಗೆ. ಕುತೂಹಲವನ್ನು ಕೇವಲ ಕುತೂಹಲವಾಗಿಡುವುದು ಬಹಳ ಕಷ್ಟ. ಅದನ್ನು ಪರಿಹರಿಸಿಕೊಳ್ಳಲು ಗೂಗಲ್ ಸಹಾಯ ಪಡೆಯುವುದು ಇನ್ನೂ ಕಷ್ಟ. ಆದರೆ ತಲೆಯೊಳಗೆ ಹೊಕ್ಕ ಹುಳ ಬಿಡಬೇಕಲ್ಲ... ಕಂಬಳಿ ಹುಳದಂತೆ ಕಾಲು ಬಾಲ ಹಚ್ಚಿಕೊಂಡು ಬೆಳೆಯತೊಡಗಿತು. ಅಸ್ಗಾಡ್ರಿಯಾ ಎಂದರೆ ಮಲೇರಿಯಾ, ಪೈಲೇರಿಯಾ, ಎನ್ನುವಂಥಾ ರೋಗಕ್ಕೂ ಹೋಲಿಕೆ ಇದೆ. ಯಾರೂ ತಮ್ಮ ಉದ್ದೇಶಿತ ಕನಸಿನ ಜಾಗಕ್ಕೆ ರೋಗದ ಹೆಸರಿಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಸ್ಗಾಡ್ರಿಯಾ ಎಂದರೆ ರೋಗವೊಂದಲ್ಲವೇ ಅಲ್ಲ ಎನ್ನುವುಸು ಖಾತ್ರಿಯಾಯಿತು.

ಅಸ್ಗಾಡ್ರಿಯಾ ಎಂದರೆ ಏನು ಎನ್ನುವುದು ನನ್ನ ಹುಡುಕಾಟದ ಉದ್ದೇಶವಾಗಿರಲಿಲ್ಲ. ಬದಲಾಗಿ, ಅದು ಏನೆಂದು ತಿಳಿಯುವ ಕುತೂಹಲವನ್ನು ತಣಿಸುವುದೇ ಆಗಿತ್ತು. ಹುಡುಕಾಟ ಮುಂದುವರೆಯಿತು. ಅಸ್ಗಾಡ್ರಿಯಾ ಎಂದರೆ ಯೂರೋಪ್ ದೇಶಗಳಲ್ಲಿ ಪ್ರಚಲಿತವಿರುವ 'ನಾರ್ಡಿಕ್ ಪುರಾಣ'ದಲ್ಲಿ ಬರುವ ಒಂದು ಸ್ಥಳವಂತೆ. ನಮ್ಮದೇ ಪುರಾಣಗಳಲ್ಲಿ ಮಾಡಬೇಕಾದ ಅಧ್ಯಯನ ಸಾವಿರದಷ್ಟಿರುವಾಗ ಮತ್ತೆ ಈ ನಾರ್ಡಿಕ್ ಪುರಾಣದ ಸಹವಾಸ ಬೇಡ ಎಂದು ಸುಮ್ಮನಾದೆ.

ನಮ್ಮ ಇತಿಹಾಸವಾದ ಮಹಾಭಾರತ ಗ್ರಂಥದಲ್ಲಿ ಬರುವ ವಸುರಾಜ, ತಾನೊಂದು ವಿಮಾನದಲ್ಲೇ ವಾಸಿಸುತ್ತಿದ್ದ. ಅಂತೆಯೇ ಯಯಾತಿ ಕೂಡ. ದೇವಯಾನಿ ಶರ್ಮಿಷ್ಠೆಯರ ಹಸಿ ಮೈನ ಅಪ್ಪುಗೆಯಲ್ಲಿ ಬಿಸಿ ಕಡಿಮೆಯಾದಾಗ, ಮಗನ ಯೌವನವನ್ನೇ ಪಡೆದು ವಿಶ್ವಾಚಿ ಎನ್ನುವ ಅಪ್ಸರೆಯೊಂದಿಗೆ ವಿಮಾನವೊಂದನ್ನೇರಿ ಇರುತ್ತಿದ್ದನಂತೆ. ಇನ್ನು ಕೃಷ್ಣ ರಾಜಸೂಯಕ್ಕೆಂದು ತೆರಳಿದ ಸಂದರ್ಭದಲ್ಲಿ ದ್ವಾರಕೆಯಮೇಲೆ ಧಾಳಿ ಮಾಡಿದ ಶಾಲ್ವರಾಜ ತನ್ನ ಸೌಭವಿಮಾನದಲ್ಲೇ ಕುಳಿತು ಸಂಚರಿಸುತ್ತಿದ್ದ. ಅವರ ವಿಮಾನದ ವರ್ಣನೆಗಳನ್ನು ನೋಡಿದರೆ ಅತ್ಯದ್ಭುತ-ಸುಂದರ-ಮನನನೀಯ-ಸ್ಮರಣೀಯ.

ಮರೆತು ಹೋಗಿದ್ದ ಈ ಅಸ್ಗಾಡ್ರಿಯಾದ ವಿಚ್ಗಾರ ನೆನಪಾಗಿದ್ದು, ಮೊನ್ನೆ ಮೊನ್ನೆ ಶಾಲ್ವ ವಧಾ ಪ್ರಕರಣವನ್ನು ಓದುತ್ತಿದ್ದಾಗ ಅದರಲ್ಲಿ ಬಂದ ಸೌಭ ವಿಮಾನವನ್ನು ಓದಿದಾಗ. ದೇವನಹಳ್ಳಿಯ ವಿಮಾನ ಶಾಸ್ತ್ರಿಗಳು ಎಂದೇ ಖ್ಯಾತರಾಗಿರುವ ಸುಬ್ಬಾ ಶಾಸ್ತ್ರಿಗಳು ವಿಮಾನ ಸೂತ್ರ ಎನ್ನುವ ಒಂದು ಗ್ರಂಥವನ್ನೇ ಬರೆದಿದ್ದಾರಂತೆ. ರಾಮಾಯಣದಲ್ಲೂ ಇದರ ಉಲ್ಲೇಖವಿದೆ.ಪುಷ್ಪಕ ವಿಮಾನದ ಬಗೆಗೆ ಯಾರಿಗೆ ತಿಳಿದಿಲ್ಲ?! ಗಂಧರ್ವರು, ಋಷಿ-ಮುನಿಗಳು, ಪಿತೃದೇವತೆಗಳು ವಿಮಾನವನ್ನು ಬಳಸುವುದು ಎಂದೇ ಉಲ್ಲೇಖವಿದೆ. ಶ್ರಾದ್ಧಗಳಲ್ಲಿ, ಪಿತೃಗಳಿಗೆ ಪಿಂಡವಿಡುವಾಗ ವಿಮಾನದ ಚಿತ್ರ ಬಿಡಿಸುತ್ತಾರೆ. ಇತ್ತೀಚೆಗಷ್ಟೇ ರೈಟ್ ಸಹೋದರರಿಗಿಂತ ಮೊದಲು ಭಾರತೀಯನೊಬ್ಬ ವಿಮಾನ ಹಾರಿಸಿದ್ದ ಎನ್ನುವ ವಿಷಯ ಬಹಳ ಚರ್ಚೆಗೂ ಒಳಗಾಗಿತ್ತು.

ನನಗನಿಸುವುದು, ಅಂದಿನ ಕಾಲದಲ್ಲಿ ಏರೋಕ್ರಾಫ಼್ಟ್ ಅಥವಾ ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯೆಯೂ ಇತ್ತು. ಅರಗಿನ ಮನೆಯಿಂದ ಪಾರಾದ ಪಾಂಡವರು ಕಾಡಿನಲ್ಲಿದ್ದಾಗ ಚಿತ್ರರಥ ಎನ್ನುವ ಗಂಧರ್ವ ಏ ವಿದ್ಯೆಯನ್ನು ಅರ್ಜುನನಿಗೆ ಉಪದೇಶಿಸುತ್ತಾನೆ.

ಆದರೆ, ಅಸ್ಗಾಡ್ರಿಯಾ ಒಂದು ಸ್ಪೇಸ್ ಶಿಪ್ ಅಥವಾ ಸ್ಪೇಸ್ ಷಟಲ್. ಅಂದಿನ ಕಾಲದಲ್ಲಿ ಸ್ಪೇಶ್ ಷಟಲ್ ಮತ್ತು ವಿಮಾನ ಎರಡನ್ನೂ ಒಂದೇ ಹೆಸರಿನಿಂದ ಕರೆಯುತ್ತಿದ್ದರೇನೋ. ಯಾಕೆಂದರೆ ವಿಯಾನ ಎನ್ನುವ ಒಂದು ಪ್ರಯೋಗವೂ ಇದೆ. ಆದರೆ ವಿಯಾನ ಎನ್ನುವ ಶಬ್ದ ಪ್ರಯೋಗ ಪುರಾಣಗಳಲ್ಲಿ ಇಲ್ಲಿಯ ತನಕ ನನ್ನ ಕಣ್ಣಿಗೆ ಬಿದ್ದಿಲ್ಲ. ಆದರೆ ಇರುವುದು ಖಡಾಖಂಡಿತ. ನಾನು ಬಹಳ ಅಧ್ಯಯನ ಮಾಡಿಲ್ಲ. ಆದರೆ ಮಾಡಿದವರು ಹೇಳಿದ್ದನ್ನು ಕೇಳಿದ್ದೇನೆ. ಈ ವಿಯಾನ ಎನ್ನುವ ಶಬ್ದವನ್ನು ನಾನು ಕೇಳಿದ್ದು ವಾಗ್ದೇವಿಯ ವರಪುತ್ರ ಯಕ್ಷಗಾನ ಅರ್ಥಗಾರಿಕೆಯ ವಾಚಸ್ಪತಿ- ಶ್ರೀ ವಾಸುದೇವ ಸಾಮಗರ ಬಾಯಿಯಲ್ಲಿ. ಅವರು ವಿಮಾನ ವಿಯಾನ ಶಬ್ದಗಳ ವ್ಯತ್ಯಾಸವನ್ನು ಬಹಳ ಸೊಗಸಾಗಿ ವರ್ಣಿಸಿದ್ದರು, ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಲು ಸಿದ್ಧನಾದ ವಿಶ್ವಾಮಿತ್ರನ ಪಾತ್ರದಲ್ಲಿ- "ವಿ-ಮಾನ ಎಂದರೆ ವಿಶಿಷ್ಠವಾದ ಮಾನವುಳ್ಳದ್ದು. ಜನ ಹೆಚ್ಚಿದಂತೆಲ್ಲ ಅದರ ಧಾರಣಾ ಸಾಮರ್ಥ್ಯ, ಉದ್ದ ಅಗಲಗಳೂ ಹೆಚ್ಚುತ್ತವೆ. ಮಾನ ಅಂದರೆ ಇದೇ ಅಲ್ಲವೇ? ವಿ-ಯಾನ ಎಂದರೆ ವಿಶಿಷ್ಠವಾದ ಯಾನ. ಅದು ನೆಲ ಬಿಟ್ಟು ಎಲ್ಲಿಯೇ ಸಂಚರಿಸುವ ಸಾಧನವಾದರೂ ಅದು ವಿಯಾನ. ಅಸ್ಗಾಡ್ರಿಯಾ ಕೂಡಾ ಒಂದು ವಿಯಾನವೇ ಇರಬೇಕು.

ಅಂದಹಾಗೆ ನಾರ್ಡಿಕ್ ಪುರಾನಗಳಿಗೆ ಇನ್ನೊಂದು ಹೆಸರು "norse mythology". ಇದು ಬಹುಷಃ ನ ಆರ್ಷ ಎನ್ನುವ ಶಬ್ದದಿಂದ ಬಂದಿದ್ದಿರಬೇಕು. ಆರ್ಷ ಎಂದರೆ ಋಷಿಗಳಿಂದ ಬಂದಿದ್ದು ಎಂದರ್ಥ. ಋಷಿಗಳಿಂದ ಅಲ್ಲದೇ ಇರುವುದು ನಾರ್ಷ=+ಆರ್ಷ. ಇದೇ ಮುಂದೆ "Norse" ಎಂದಾಗಿರಬೇಕು.

Tuesday, July 24, 2018

ಶುಕ್ರನ ಡೌಟ್

ಊರ ಹೆಗಡೆಯವರ ಮನೆಯ ಕೆಲಸ, ಅದರ ಮಧ್ಯೆ ಕೆರೆ ರಿಪೇರಿಯ ಮೇಲೋವರ್ಸೀ ಹೀಗೆ ಆಗಾಗ ಸಂದರ್ಭಕ್ಕೆ ತಕ್ಕಂತೆ ಅವತಾರಗಾಳನ್ನು ತಳೆಯುತ್ತಾ ಅವಾಂತರಗಲನ್ನು ಮೈ ಮೇಲೆ ಎಳೆದುಕೊಳ್ಳುತ್ತಾ ಸಾಗುವ ಶುಕ್ರ ಏನನ್ನಾದರೂ ಬಿಟ್ಟಾನು ಆದರೆ ತಾನು ಅರೆ ಬೆರೆ ಕಲಿತ ಯಕ್ಶಗಾನದಿಂದಲೇ ತಾನೊಬ್ಬ ಹೆಸ್ರಾಂತ ಕಲಾವಿದನಾಗಬೇಕು ಎನ್ನುವ ಆಸೆಯನ್ನಾಗಲೀ ಅಲ್ಲ. ಇವನ ಆಸೆಗೆ ಇಂಬು ಕೊಡಲೋ ಎನ್ನುವಂತೆ ಊರಿನಲ್ಲಿ ಹುಟ್ಟಿ, ಯಕ್ಷಗಾನ ಕಲಿತು ಜೊತೆಯಲ್ಲಿಯೇ ಇಂಜಿನಿಯರಿಂಗ್ ಓದಿ, ಕೊನೆಗೆ ಅಮೆರಿಕಾ ಸೇರಿ ದೊಡ್ಡ ಕೆಲಸ ಹಿಡಿದು ಈಗ ಮಕ್ಕಳೊಂದಿಗೆ ರಜೆ ಕಲೆಯಲು ಬಂದ ಗಣೇಶನ ವೇಷ ಮಾಡುವ ತಲುಬು ಜೊತೆಯಾಯಿತು.

ಒಂದು ಕಾಲದಲ್ಲಿ ತನ್ನ ಜತೆಗಾರನಾಗಿದ್ದ ನಾಗೇಂದ್ರನನ್ನು ಕರೆದು ತನ್ನ ಆಸೆ ಹೇಳಿಕೊಂಡ. ಗಣೇಶನ ಪ್ರತಿಭೆಯ ಸಂಪೂರ್ಣ ಪರಿಚಯವಿದ್ದ ನಾಗೇಂದ್ರ, ಒಪ್ಪಿದ್ದ. ಇಬ್ಬರೂ ಗೆಳೆಯರು ಮನೆಯ ಜಗುಲಿಯಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತಾ ಪ್ರಸಂಗ ಶರಸೇತು ಬಂಧನ ಎಂದು ತೀರ್ಮನಿಸಿದರು, ಅದೇ ಊರಿನ ಮಹಾಬಲ ಹನುಮಂತನ ವೇಷ ಮಾಡುವುದು ಗಣೇಶ ಅರ್ಜುನನ ಪಾತ್ರ ನಿರ್ವಹಿಸುವುದು ಎಂದೂ ನಿರ್ಧಾರವಾಯಿತು. ಬ್ರಾಹ್ಮಣ ಪಾತ್ರಧಾರಿಯ ಬಗ್ಗೆ ಚರ್ಚಿಸುತ್ತಿರುವಾಗ ಪಕ್ಕದ ಮನೆಯಲ್ಲಿ ಸಗಣಿ ಎತ್ತುತ್ತಿದ್ದ ಶುಕ್ರ ಓಡಿ ಬಂದು ತಲೆ ತುರಿಸುತ್ತಾ ನಿಂತ
ನಾಗೇಂದ್ರ ಗಣೇಶ ಇಬ್ಬರೂ ಇರಿಸು ಮುರಿಸು ಅನುಭವಿಸತೊಡಗಿದ್ದರು ಶುಕ್ರ ಅಲಿದ್ದಿದ್ದರಿಂದ. ಈ ಇರಿಸು ಮುರಿಸು ಕೊನೆಯಾಗಬೇಕಿದ್ದರೆ ಶುಕ್ರ ಅಲ್ಲಿಂದ ತೊಲಗಬೇಕಿತ್ತು. ಆದರೆ ಇವ ಸುಲಭದಲ್ಲಿ ತೊಲಗ. ಅದಕ್ಕೇ ನಾಗೇಂದ್ರ ಮಾತಿಗೆಳೆದ. "ಎಂತಾ ಶುಕ್ರ! ಎಲ್ಲಾರೂ ವೇಷ ಮಾಡಿದ್ಯೇನ ಮತ್ತೆ!"

ಶುಕ್ರ ಶುರುವಿಟ್ಟುಕೊಂಡ. "ಎಂತ ಯಾಸು ಮಾಡುದೇ.. ಮೊದ್ಲಾರೆ ನಾವುಡ್ರ ನೆನಪಿತ್ತು. ನಾ ಅವ್ರ ಹೆಸ್ರ್ ಹೆಳ್ರೆ ಸಾಕಿತ್ ಒಂದ್ ಯಾಸು ಆಯ್ತಿದ್ದೀತ್. ಈಗ ಹಾಂಗಾ. ಅಲ್ಲ ವಾಲಿ ಕಳೂಕೆ... ದುಡ್ ಕೊಟ್ ಯಾಸು ಮಾಡೂ ಜನ ತಯಾರಾಯೀರ್ ಈಗ. ನಮಗೆ ಅದೆಲ್ಲ ಆತ್ತ?! ಹಪ್ ಹಿಡೂಕೆ. ಹಿಂಗೇ ಎಲ್ಲಾರೊ ಹವ್ಯಾಸಕ್ಕೆ ಸಿಕ್ರೆ ಮಾಡ್ವ ಅಂತ. ಮತ್ತೆ ನಂಗೂ ಈಗ ಮುಂಚಿನ ಕಸುವಿಲ್ಯೆ... ಕುಣೂಕಾತ್ಲ. ಅದ್ಕೇ ಸಣ್ ಯಾಸು ಕುಣಿತ ಕಮ್ಮಿ ಇಪ್ದಾರೆ ಮಾಡ್ಲಕ್....." ಹೀಗೆಲ್ಲಾ ಹಲುಬುತ್ತಿದ್ದಾಗ ನಾಗೇಂದ್ರನಿಗೆ ಶುಕ್ರನ ವಿದ್ಯುಲ್ಲೋಚನ ನೆನಪಾಗಿ ಒಳಗೊಳಗೇ ಕುದಿದ ಒಮ್ಮೆ. ಸಿಕ್ಕ ಸಮಯ ಅಂತ ನವಿರಾಗಿ ಝಾಡಿಸಿದ.

"ಮತ್ತೆ ಶುಕ್ರ ನಿಂಗೂ ಈಗ ಮರೆವು ಶುರುವಾತು ಕಾಣ್ತದೆ. ಅವತ್ತು ವಿದ್ಯುಲ್ಲೋಚನನ ಪ್ರವೇಶ ತಪ್ಪಿ ಹೊಗಿತ್ತು ನೋಡು.."

ವೇಷ ಮಾಡುವ ಆತುರದಲ್ಲಿದ್ದ ಶುಕ್ರನಿಗೆ ಅವಮಾನವಾಗಲೇ ಇಲ್ಲ, ಅವಕಾಶವೇ ಆಯಿತು. "ಹೌದೆ... ಆರೆ ಮಹಾಭಾರತದ ಪೌರಾಣಿಕ ಪ್ರಸಂಗ ಪೂರ್ತಿ ನೆನಪಿತ್.. ಭೀಷ್ಮ ವಿಜಯ, ಸುಭದ್ರಾ ಕಲ್ಯಾಣ, ಕೃಷ್ಣಾರ್ಜುನ, ಭೀಷ್ಮ ಪ್ರತಿಜ್ಞೆ ಎಲ್ಲಾ ಪೂರಾ ನೆನಪಿತ್ ಕಾಣೀ... ಅದ್ರಾಗೆಲ್ಲ ಬಪ್ಪ ವನಪಾಲಕ, ಕಂದರ, ದಾರುಕ ಎಲ್ಲಾ ಮಾಡೂದಾರೆ ಆತ್ತ್..."

ಈಗ ಗಣೇಶ ಬಾಯಿ ಹಾಕಿದ. "ಶರಸೇತು ಬಂಧನದ ಬ್ರಾಹ್ಮಣನ ನಡೆ ಗೊತ್ತಿದೆಯಾ ಶುಕ್ರ..." ನಾಗೇಂದ್ರ ತಡೆಯಲು ನೋಡಿದನಾದರೂ ಸಾಧ್ಯವಾಗಲಿಲ್ಲ.

ಶುಕ್ರ ನಡೆ ಬಿಚ್ಚಿಟ್ಟ. "ಅರ್ಜುನ ಹನುಮಂತ ಮಾತಾಡ್ಕಂಡ್ ಮಾತು ವಾದ ಆಯಿ ಪಂಥ ಆತ್ತ್... ಮತ್ತೆ ಅರ್ಜುನ ಸೇತುವೆ ಕಟ್ಟಿದ ಹಾಂಗೂ ಸೇತುವೆ ಮುರ್ದೆ ಹಾಕ್ತ ಹನ್ಮಂತ. ಸೊಕ್ಕಿಳಿದ ಅರ್ಜುನ ಬೆಂಕಿಗೆ ಹಾರೂಕೆ ಹ್ವಾತ. ಅಶ್ಟೋತ್ತಿಗೆ ಕಿಷ್ಣ ಬ್ರಾಮಣ ಆಯಿ ಬಂದ್ ಮತ್ತೊಂದ್ ಸತಿ ಸೇತ್ವೆ ಕಟ್ಟೂಕೆ ಹನುಮಂತನ ಕೈನಂಗೆ ಮುರೂಕೆ ಹೇಳೂದ್.. ಹನುಮಂತಂಗೆ ಆತ್ಲ... ಆಗ ರಾಮರೂಪ ಬತತ್ ಕಾಣಿ..."
ಗಣೇಶ ನಾಗೇಂದ್ರನಿಗೆ ಹೇಳಿದ "ಇವನೇ ಮಾಡ್ಲಿ ಬಿಡ. ನಡೆ ಗೊತ್ತಿದ್ದಲ"

ನಾಗೇಂದ್ರನಿಗೂ ಹೌದೆನ್ನಿಸಿತ್ತು. ಒಪ್ಪಿದ. ಆದರೆ ಈಗ ಶುಕ್ರನಿಗೆ ಯೋಚನೆ ಶುರುವಾಯಿತು.

"ಅಲ್ಲ ಗಣೇಶಯ್ಯ ಸಿಕ್ಕಾಪಟ್ಟೆ ಓದೀರಂಬ್ರ್. ಅವ್ರಿಪ್ಪ ದೇಶ್ದಂಗೆ ಇಂಗ್ಲೀಷೇ ಮಾತಾಡ್ತ್ರಂಬ್ರ್. ಈಗೆನಾರು ಯಾಸು ಮಾಡಿ ಅವ್ರ್ ಇಂಗ್ಲೀಷ್ ಮಾತಾಡಿಬಿಟ್ರೆ?! ಆಟ ಹಾಳಾಪೂದ್ ಅತ್ಲಾಗಿರ್ಲಿ. ನಂಗೆ ಇಂಗ್ಲೀಷ್ ಬತ್ಲ ಅಂತಾಯಿ ಮರ್ಯಾದಿ ಹ್ವಾತ್ತ್. ಎಂತ ಮಾಡೂದ್ ಈಗ. ನಾನೇ ಮೇಲ್ಬಿದ್ ಯಾಸು ಮಾಡ್ತೆ ಅಂದೇಳಿ ಕೈ ಕೊಟ್ರೆ ಮತ್ತೆ ಯಾಸು ಸಿಕ್ಕೂದಿಲ್ಲ. ಎಂತ ಮಾಡೂದ್..." ಹೀಗೆಯೇ ಯೋಚಿಸುತ್ತಾ ಮನೆ ಕಡೆ ಸಾಗುತ್ತಿದ್ದಾಗ ಥಟ್ಟನೆ ಉಪಾಯವೊಂದು ಎಲ್ಲಿಂದಲೋ ಬಂದು ಸೇರಿತ್ತು. ಶುಕ್ರ ಸಮಾಧಾನ ಪಟ್ಟಿದ್ದ.

ಆಟದ ದಿನ ಬಂತು. ರಂಗಸ್ಥಳ ಸಜ್ಜಾಯಿತು. ಎಷ್ಟೋ ವರ್ಷಗಳ ನಂತರ ಹಳೆಯ ಗೆಳೆಯರ ಕೂಡುವಿಕೆಯಲ್ಲಿ ನಡೆಯುವ ಪ್ರದರ್ಶನಕ್ಕೆ ಊರ ಜನರೂ ಕಾತುರರಾಗಿ ನೆರೆದರು. ಪ್ರದರ್ಶನ ಶುರುವಾಯಿತು. ಅರ್ಜುನ ಹನುಮಂತ ಇಬ್ಬರಲ್ಲೂ ಒಳ್ಳೆಅಯ ಹೊಂದಾಣಿಕೆ ಇದ್ದಿದ್ದರಿಂದ ಆಟ ಚೆನ್ನಾಗಿಯೇ ಸಾಗುತ್ತಿತ್ತು. ಅರ್ಜುನ ಅಗ್ನಿ ಪ್ರವೇಶಕ್ಕೆ ಸಿದ್ಧನಾಗುವ ಘಳಿಗೆ ಬಂತು. ಹೊಳೆದ ಉಪಾಯವನ್ನೇ ತಲೆಯಲ್ಲಿಟ್ಟುಕೊಂಡು ಬಂದ ಶುಕ್ರ, ಮಾತಾಡಿಯೇ ಬಿಟ್ಟ-"ಹುಡುಗಾ ನನಗೊಂದು ಡೌಟು ಬಂದದೆ. ಸ್ವಲ್ಪ ಪರಿಹಾರ ಮಾಡಿಕೊಡು"

ಪಾತ್ರದಲ್ಲಿ ತಲ್ಲೀನನಾಗಿದ್ದ ಗಣೇಶ ಒಮ್ಮೆಲೆ ಅವಾಕ್ಕಾದ. ಆದರೆ ಆತನ ಸಮಯ ಪ್ರಜ್ಞೆ ಆತನನ್ನು ಉಳಿಸಿತು. ಆಟವನ್ನೂ ಉಳಿಸಿತು. "ಸ್ವಾಮೀ ಭವಸಾಗರವನ್ನು ದಾಟಿಸಲು ನೆರವಾಗುವ ನಿಮ್ಮಂಥಾ ವೃದ್ಧ ಬ್ರಾಹ್ಮಣರು ದಾಟಿ ಬರುವುದರಲ್ಲಿ ಏನೂ ಅಸಹಜತೆ ಇಲ್ಲ. " ಎಂದ. ನಂತರ ಶುಕ್ರ ಚೆನ್ನಾಗಿಯೇ ಪಾತ್ರ ನಿರ್ವಹಿಸಿದ. ಗಣೇಶ-ಮಹಾಬಲ ಕೂಡಾ ಚೆನ್ನಾಗಿಯೇ ಅಭಿನಯಿಸಿ ಪ್ರಸಂಗ ಚೆನ್ನಾಗಿಯೇ ಆಯಿತು.

ಚೌಕಿಯಲ್ಲಿ ವೇಷ ಬಿಚ್ಚುತ್ತಾ, ಗಣೇಶ ಕೇಳಿದ. "ಇಂಗ್ಲೀಷ್ ಎಂತಕ್ಕೆ ಮಾತಾಡಿದ್ಯೋ ಶುಕ್ರ?!"

"ಮತ್ತೆ ನೀವು ದಿನಾ ಮಾತಾಡ್ತ್ರಿ ಅಪ್ಪಿ ತಪ್ಪಿ ಇವತ್ ನೀವ್ ಇಂಗ್ಲೀಷ್ ಮಾತಾಡಿ ನಂಗೆ ಉತ್ರ ಕೊಡೂಕೆ ಆಯ್ದೀರ್ಗತಿಗೆ, ಶುಕ್ರಂಗೆ ಇಂಗ್ಲಿಷ್ ಬತ್ತಿಲ್ಲ ಅಂತ ಊರಂಗೆಲ್ಲ ಮಾತಾಡ್ತ್ರ್. ನಾ ಎಷ್ಟ್ ಝಾಪ್ ಮಾಡ್ರೂ ಸಾಕಾತ್ಲ ಕೊನಿಗೆ. ಅದ್ಕೇ, ನಂಗೆ ಸ್ವಲ್ಪ ಇಂಗ್ಲೀಷ್ ಬತತ್ ಅಂತ ತೋರ್ಸೂಕೆ ಹಂಗೆ ಮಾಡಿದ್ದೇ... ಹೆಂಗೆ?! ಈಗ ಯಾರಾರೂ ಹೇಳ್ತ್ರ ಶುಕ್ರ್ಂಗೆ ಇಂಗ್ಲೀಷ್ ಬತ್ಲ ಅಂತ?!"

ಶುಕ್ರನ ಪುಣ್ಯ ಗಟ್ಟಿ ಇತ್ತು. ಆತ ರಂಗಸ್ಥಳದ ಮೇಲೆ "ಡೌಟ್" ಎಂದಾಗ ನಾಗೇಂದ್ರ ತಾಳ ಬಿಟ್ಟು ಟೀ ಕುಡಿಯುತ್ತಿದ್ದ. ಇದೆಲ್ಲ ಕೇಳಲಿಲ್ಲ.

Tuesday, July 17, 2018

ಆಸ್ನ

ಒಂದು ದಿನ ಆಪೀಸಿನಲ್ಲಿ ಹೊಸದಾಗಿ ಬಂದ ಪ್ಯಾಂಟ್ರಿ ಹುಡುಗನ ಹತ್ತಿರ ಕಾಫಿ ತರಲು ಹೇಳಿ ಕುಳಿತೆ. ಎಷ್ಟು ಹೊತ್ತಾದರೂ ಬರಲಿಲ್ಲ. ಕಾಯ್ದ್ಯ್ ಕಾಯ್ದು ಕಾಫಿ ಹೇಳಿದ್ದೇ ಮರೆತು ಹೋಗಿತ್ತು. ಅಷ್ಟರಲ್ಲಿ ಕಾಫಿಯವನ ಸವಾರಿ ಕಾಫಿ ಸಹಿತ ಚಿತ್ತೈಸಿತು. ನನ್ನ ಚಿತ್ತಕ್ಕೂ ಕಾಫಿಗೆ ಹೇಳಿದ್ದ ಸ್ಮರನೆಯಾಯಿತು. ಕಾಫಿ ತರುವ ಹುಡುಗನಲ್ಲವೇ? ನಾನು ಕಂಪ್ಯೂಟರ್ ಮುಂದೆ ಕೂರುವವನಾಗಿ ಸ್ವಲ್ಪ ಜಬರ್ದಸ್ತು ಮಾದದಿದ್ದರೆ ಸಾವಿರಗಟ್ಟಲೆ ಕೊಟ್ಟು ತಂದ ಕಂಪ್ಯೂಟರ್ ಮರ್ಯಾದೆ ಏನಾಗಬೇಡ? ಅದಕ್ಕೇ ಸ್ವಲ್ಪ ಗಡುಸಾಗಿ ಕೇಳಿದೆ.

"ಎಷ್ತು ಹೊತ್ತೋ ಮಹಾರಾಯ?!"

ಅವನಂದ "ಅಲ್ಲಿ ಬಿದ್ದುಬಿಟ್ಟಿತ್ತು ಸಾ...!"

"ಎಲ್ಲೋ"

"ಕಾಪಿ ಕಪ್ನಾಗೆ ಸಾ...."

"ಏನು ಬಿದ್ದಿತ್ತು?!"

"ಅಲ್ಲಿ ಸಾ...."

""ಎಲ್ಲೊ?!”

ಅವನಿಗೆ ನನ್ನ ಕನ್ಫ್ಯೂಶನ್ ತಲೆಗೆ ಹೊಕ್ಕಿತ್ತು ಎನಿಸುತ್ತದೆ. ಉತ್ತರ ಅರ್ಥವಾಗುವಂತೆ ಬಿಡಿಸಿ ಹೇಳಿದ. "ಕಾಪಿ ಮಾಡ್ಬುಟ್ಟು ಮಸೀನ್ ಕ್ಲೀನ್ ಮಾಡ್ತಿದ್ದೆ ಸಾ... ಅಷ್ಟ್ರಲ್ಲಿ ಮೇಲಿಂದ ಕಪ್ ಒಳಗೇ ಬಿದ್ಬುಡ್ತು ಸಾ.... ವಿಸ ಅಂತ ಕಾಪಿ ಚೆಲ್ಬುಟ್ಟು ಬೇರೆ ಕಾಪಿ ಮಾಡ್ಕಂಡು ತಂದೆ ಸಾ...." ನನಗಷ್ಟು ಹೊತ್ತಿಗೆ ಗೊತ್ತಾಯಿತು. ಅಲ್ಲಿ ಬಿದ್ದಿದ್ದು ಹಲ್ಲಿ ಅಂತ. ಈತ ನಾಮಪದವನ್ನು ಅಕ್ಷರವೊಂದರ ಅಪಭ್ರಂಶದ ಮುಖೇನ ಸ್ಥಾನವಾಚಕವಾಗಿಸಿದ್ದ. ಇರಲಿ ಬಿಡಿ. ಅದೂ ಒಂದು ಪ್ರತಿಭೆಯೇ ಸರಿ.

ಇತ್ತೀಚೆಗೆ ಒಮ್ಮೆ ರಜೆ ಹಾಕಿ ಊರಿಗೆ ಹೋಗಿ ಬಂದೆ. ಆ ಹುಡುಗ ನನ್ನ ಹತ್ತಿರ ಕೇಳಿದ.

"ಸಾ.. ಊರಿಗೆ ಓಗಿದ್ರಾ?!"

ನಾನೆಂದೆ "ಹೌದು ಕಣೋ."

"ಮಳೆನಾ ಸಾ ನಿಮ್ಮೂರ್ನಾಗೆ?!"

"ಹೌದು ಕಣೋ. ನಾಲ್ಕೈದು ವರ್ಷಗಳಿಂದ ಮಳೆನೇ ಇರಲಿಲ್ಲ. ಈ ವರ್ಷ ಸಿಕ್ಕಾಪಟ್ಟೆ ಮಳೆ. "

"ಊಂ ಸಾ.... ಮಳೆ ಇಲ್ಲ ಅಂದ್ರೆ ಕಸ್ಟ ಆಯ್ತದೆ. ಕುಡಿಯಕ್ಕಾದ್ರೂ ನೀರು ಬೇಕಲ್ಲ ಸಾ... ನಿಮ್ಮೂರು ಯಾವ್ದು ಸಾ..."

"ಸಾಗರ. ನಿಮ್ಮೂರು?!"

"ಆಸ್ನ ಸಾ...."

ನಾನು ಆತ ಕೊಟ್ಟ ಉತ್ತರಕ್ಕೆ ಒಮ್ಮೆ ಅವಾಕ್ಕಾಗಿ ಮುಖದಲ್ಲಿ ಆಶ್ಚರ್ಯ-ಸಂಶಯ ಎಲ್ಲಾ ಸೇರಿಸಿ ಎರಡೂ ಹುಬ್ಬುಗಳನ್ನು ಗಂಟಿಕ್ಕಿ ಕೇಳಿದೆ. "ಆಸ್ನ?!"

"ಊಂ ಸಾ... ಆಸ್ನ..."

"ಎಲ್ಲೋ ಬರುತ್ತೆ ಅದು?"

"ಆಸ್ನ ಸಾ... ನಿಮಗೆ ಆಸ್ನ ಗೂತ್ತಿಲ್ವಾ?"

ಮನಸ್ಸಿನಲ್ಲೇ ಅಂದುಕೊಂಡೆ. ನನಗೆ ಗೊತ್ತಿರುವ ಆಸನಗಳು ಕೆಲವಿದೆ. ಕೆಲವನ್ನು ಹೇಳಲಾರೆ. ಆದರೆ ಇವನ ಅರ್ಧಗನ್ನಡ ನನ್ನ ಆಸನಕ್ಕೆ ಇಡುತ್ತಿರುವ ಉರಿಯನ್ನೂ ತಡೆಯಲಾರೆ. ಆದರೂ ಸಹಿಸಿಕೊಳ್ಳುತ್ತಾ ಕೇಳಿದೆ.

"ಗೊತ್ತಿಲ್ಲ ಕಣೋ. ನೀನೇ ಹೇಳಿದರೆ ಒಳ್ಳೆಯದು,. ನಮಗೆ ಯೋಗದ ಆಸನ ಮಾತ್ರ ಗೊತ್ತು."

"... ಅಂಗಾಯ್ತಾ ಸಾ..... ಅದು ಆ ಆ ಅಲ್ಲ ಸಾ.... ಅ ಆ ಇ ಈ ನಲ್ಲಿ ಬತ್ತದಲ್ಲ ಆ ಆ ಅಲ್ಲ. ಯ ರ ಅ ವ ದಾಗೆ ಬತ್ತದಲ್ಲ ಆ ಆ ಸಾ...."

ನನಗೆ ಆಗ ಗೊತ್ತಾಯಿತು. ಇವನ ಊರು ಹಾಸನ ಎಂದು.