Tuesday, July 10, 2018

ಆಂಗ್ಲಗನ್ನಡ-ಕನ್ನಡಾಂಗ್ಲ

ಭಾರತೀಯ ಇಂಗ್ಲಿಷ್ ಲೇಖಕರ ಸಾಲಿನಲ್ಲಿ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುವವರಲ್ಲಿ ಖುಷ್ವಂತ್ ಸಿಂಘ್ ಕೂಡಾ ಒಬ್ಬರು. ಸ್ವಯಂ ಸರ್ದಾರ್ ಆಗಿ, ಸರ್ದಾರ್ಜಿ ಜೋಕ್ ಗಳನ್ನು ವಿಖ್ಯಾತಗೊಳಿಸಿದ್ದರು ಇವರು. ನಾನಂತೂ ಮೊದಲು ಇವರನ್ನು ಬರೇ ಜೋಕ್ ಮಣ್ಣು ಮಸಿ ಬರೆಯುವ ಒಬ್ಬ ಪತ್ರಕರ್ತ ಎಂದೇ ಭಾವಿಸಿದ್ದೆ. ಆದರೆ ಕನ್ನಡದ ಕಪ್ಪು ಸುಂದರಿಯ ಸೃಷ್ಟಿಕರ್ತ, ರವಿ ಬೆಳಗೆರೆಯವರು ಇವರ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದನ್ನು ಓದಿದ ಮೇಲೆ ಅವರೇ ಹೇಳಿದಂತೆ ಪೋಲಿ ತಾತ (ರವಿ ಬೆಳಗೆರೆ ಬಹಳ ಸಾರಿ ಖುಷ್ವಂತ್ ಸಿಂಘ್ ಅವರ ಬಗ್ಗೆ ಮೆಚ್ಚುಗೆಯಿಂದ ಹೇಳಿದ ಮಾತಿದು) ಬರೆದ ಪುಸ್ತಕಗಳ ಪರಿಚಯ ನನಗಾಯಿತು. ಅದೇನೋ ವಿಶಿಷ್ಠ ಆಕರ್ಷಣೆ ಬೆಳೆದಿತ್ತು. ಆದರೆ ಆಗ ಕೊಂಡು ಓದಲಿಲ್ಲ. ಕಾರಣ ನನಗೂ ಇಂಗ್ಲೀಷ್ ಓದುವುದು ಸ್ವಲ್ಪ ಅಲರ್ಜಿಯಾಗಿತ್ತು, ದುಡ್ಡಿಗೂ ನನ್ನ ಜೇಬೆಂದರೆ ಸ್ವಲ್ಪ ಅಲರ್ಜಿಯೇ ಇತ್ತು.

ಕಾಲೇಜಿನಲ್ಲಿ ನಮಗೆ ಇಂಗ್ಲಿಷ್ ಪಾಠ ಮಾಡುವ ಉಪನ್ಯಾಸಕರು, ಭಾಷಾ ಶಾಸ್ತ್ರ (ಲಿಂಗ್ವಿಸ್ಟಿಕ್ಸ್) ಪರಿಣಿತರಾಗಿದ್ದರು. ಅವರೊಮ್ಮೆ ಪಾಠ ಮಾಡುತ್ತಾ ಹೇಳಿದ್ದರು. "ಖುಷ್ವಂತ್ ಸಿಂಘ್ ಅವರು ಭಾರತೀಯ ಇಂಗ್ಲೀಷ್ ಅನ್ನು ಬರೇ ಇಂಡಿಯನ್ ಇಂಗ್ಲೀಷ್ ಎಂದು ಕರೆದು ಮುಗಿಸಲಿಲ್ಲ. ಅದನ್ನವರು ಇನ್ನೂ ವಿಭಾಗಿಸಿದ್ದಾರೆ. ಉದಾ: ಕನ್ನಡಿಷ್, ಹಿಂದಿಶ್, ತಮಿಳಿಶ್, ಇತ್ಯಾದಿ".

ಇದು ನಿಜ ಕೂಡ. ಬೇಕಾದರೆ ನೋಡಿ.

ಕನ್ನಡದಲ್ಲಿ ನಾವು ಕೇಳುವುದು- "ನೀನು ಇವತ್ತು ಬರುತ್ತೀಯಾ" ಇದನ್ನೇ ಆಂಗ್ಲದಲ್ಲಿ- "You are today comingaa"

ಕನ್ನಡದಲ್ಲಿ "ಊಟ ಆಯಿತಾ" ಎನ್ನುವುದನ್ನು ಇಂಗ್ಲೀಷಿನಲ್ಲಿ "Had your lunch/dinner" ಎನ್ನುವ ಬದಲು, "Finished your lunchaa/dinneraa"

ತಮಿಳಿನವರು "ಓಕೇವಾ" ಅಥವಾ ಅವರ ಸಾಮಾನ್ಯ ಉತ್ತರರೂಪಿ ಪ್ರಶ್ನೆಯಾದ "ಅಪ್ಪಡಿಯಾ" ಎನ್ನುವುದನ್ನು "That typaa" ಎನ್ನುತ್ತಾರೆ.

ಒಂದು ಕಡೆ ನನ್ನನ್ನೊಬ್ಬ ಕೇಳಿದ್ದ. "ಐ ಸಿ ಡಬ್ಲ್ಯು, ಯು ಹ್ಯಾವ್ ಡನ್ನಾ" ಎಂದು. ನಾನದಕ್ಕೆ "ನೋ" ಎಂದರೆ, "ನೋವಾ" ಎನ್ನಬೇಕೆ ಆ ಪ್ರಾಣಿ?! ನನಗೆ ಅವನ ಮೇಲಾಣೆ ನೋವಾಗಲಿಲ್ಲ. ಹಾಲನ ನೆನಪಾಗಿತ್ತು. ಮನಸ್ಸೊಮ್ಮೆ ಪ್ರಫುಲ್ಲವೂ ಆಗಿತ್ತು.


ಸ್ವಲ್ಪ ವರ್ಷಗಳ ಮೊದಲು, ಪೋಲಿ ತಾತನ ಕೊನೆಯ ಪುಸ್ತಕ "ದ ಸನ್ ಸೆಟ್ ಕ್ಲಬ್" ಒಮ್ಮೆ ಪುಸ್ತಕದಂಗಡಿಯಲ್ಲಿ ಕಣ್ಣಿಗೆ ಬಿತ್ತು. ಪುಸ್ತಕ ನನ್ನ ಚೀಲಕ್ಕೆ ಬಿತ್ತು. ಅದನ್ನು ಓದುತ್ತಿದ್ದಾಗ ಅದರಲ್ಲಿ ಬರುವ ಶರ್ಮಾ ಎನ್ನುವ ಓರ್ವ ಹಿರಿಯನ ತಂಗಿ, ಆತ ವಾಯು ವಿಹಾರ ಮುಗಿಸಿ ಮನೆಗೆ ಬಂದಕೂಡಲೇ ಕೇಳುತ್ತಾಳೆ. " Who Who were there" ಅದಕ್ಕೆ ಶರ್ಮಾ, "How many times I have told you, one who is sufficient." ಎಂದು ಸಿಡುಕಿ ಉತ್ತರಿಸುತ್ತಾನೆ. ಪೋಲಿ ತಾತ ಮುಂದೆ ಬರೆಯುತ್ತಾನೆ. ಇದು ಹಿಂದಿಯ ಕೌನ್ ಕೌನ್ ಎನ್ನುವುದರ ಆಂಗ್ಲೀಕರಣ ಎಂದು. ನಿಜವೇ ತಾನೆ?! ಈ ಪೋಲಿ ತಾತನನ್ನು ತಂದಿದ್ದು ನಾನು ಹೋದ ವರ್ಷ ಅನುಭವಿಸಿದ ಒಂದು ಘಟನೆಯ ಬಗ್ಗೆ ಪೀಠಿಕೆಯಾಗಿ.

ಹೋದ ವರ್ಷ ಜಿ ಎಸ್ ಟಿ ಬಂತಲ್ಲ, ಆಗ ಬಿಲ್ಲುಗಳಲ್ಲಿ ಕೆಲವು ಬದಲಾವಣೆಯಾಗಬೇಕಿತ್ತು. ಅದಕ್ಕಾಗಿ ನಮ್ಮ ಕಂಪನಿಯೊಡನೆ ವಹಿವಾಟು ಇಟ್ಟುಕೊಂಡಿದ್ದ ಮತ್ತೊಂದು ಕಂಪನಿಯ ಅಕೌಂಟಂಟ್ ಜೊತೆ ಮಾತುಕತೆ ನಡೆಸ ಬೇಕಾಯ್ತು. ಆಫೀಸಿಗೆ ಕರೆಸಿದ್ದೂ ಆಯ್ತು.

ಆತ ಮಾತಾಡುತ್ತಾ ಹೇಳಿದ-"ಊಂಸಾ.... ಜಿ ಎಸ್ ಟಿ ಬಂದ್ಬುಟ್ಟು ಬಾಳ ಕೆಲಸ ದಾಸ್ತಿ ಆಗ್ಬುಟದೆ...." ತತ್ ಕ್ಷಣದಲ್ಲಿ, ನನ್ನ ಅಂತರಾತ್ಮ ಚೀರಿ ಚೀರಿ ಹೇಳಿತ್ತು "ಇವತ್ತು ಬರೆಯೋಕೆ ಏನೋ ಸಿಕ್ಕಿತು".

ಜಿ ಎಸ್ ಟಿಯನ್ನು ಆತ ದೂಷಿಸುತ್ತಾ ಮುಂದೆ ಸಾಗಿದ. "ಮೊದ್ಲೆಲ್ಲ ಮಂತ್ ಮಂತ್ಲಿ ರಿಟರ್ನ್ ಇರಲಿಲ್ಲ ಸಾ..... ಆರು ತಿಂಗಳಿಗೆ ಒಂದ್ಸಲ ಮಾಡಿರೆ ಆಯ್ತಿತ್ತು. ಈಗ ಅಂಗಲ್ಲ ಸಾ.... ಮಂತ್ ಮಂತ್ಲಿ ಮಾಡಬೇಕಾಯ್ತದೆ. ಇದು ಡಬ್ ಡಬಲ್ ಕೆಲಸ ಆಯಾಕಿಲ್ವಾ ಸಾ...."

ನಾನು ಎಂಜಾಯ್ ಮಾಡುವ ಮನಸ್ಸೇನೋ ಇದ್ದವನೇ ಆದರೂ, ಕೆಲಸ ಮುಖ್ಯವಲ್ಲವೇ. ಆ ಕಡೆ ಗಮನ ಕೊಟ್ಟು, ಮಾತಿಗಿಳಿದೆ.

"ನೋಡಿ ನೀವು ಇಷ್ಟು ದಿವಸ ಒಂದೇ ಇನ್ವಾಯ್ಸ್ ಕೊಡ್ತಿದ್ರಿ. ಇನ್ಮುಂದೆ ಎಲ್ಲಾ ಹೆಡ್ಡಿಗೂ ಬೇರೆ ಬೇರೆಯಾಗಿ ಕೊಡಿ. " ಎಂದೆ.

ಅದಕ್ಕಾತ, " ಆಯ್ತ್ ಸಾ.... ಈಗ ನಾವೂನೂನೂನೇನೇ ಅಂಗೇ ಥಿಂಕ್ ಮಾಡಿದೀರಿ ಸಾ.... ಎಲ್ಲಾ ಸಿಂಗ್ ಸಿಂಗಲ್ ಹೆಡ್ಡಿಗೂ ಸಪ್ ಸಪರೇಟ್ ಇನ್ವಾಯ್ಸ್ ಮಾಡವಾ ಅಂತ.... ಇಲ್ಲಾಂದ್ರೆ ರಿಟರ್ನ್ ಫೈಲ್ ಮಾಡಾಕೆ ಕಸ್ಟ ಆಯ್ತದೆ ಅಲ್ಲವ್ರಾ. ಆಯ್ತ್ ಸಾ... ಮಾಡವ... ನಾ ಬತ್ತೀನಿ ಸಾ...." ಎಂದು ಹೊರಟ.

ಆಗಲೇ ನನಗೆ ಪೋಲಿ ತಾತ ನೆನಪಾಗಿದ್ದ. ಆದರೆ ಬರೆಯಲಾಗಿರಲಿಲ್ಲ. ಇಂದು ನೆನಪಾಯ್ತು. ಬರೆದೆ.

ನೀವೇನೇ ಹೇಳಿ, ನಮ್ಮ ಹಾಲ ಎಷ್ಟೋ ವಾಸಿ. ಗೊತ್ತಿಲ್ಲದೆ ಪಾಪ ಡೌಲು ಮಾಡಲು ಹೋಗಿ ನಗೆಪಾಟಲಾಗುತ್ತಾನೆ. ಮತ್ತು ಹಾಗೆ ಮಾಡುವಾಗ ಇಂಗ್ಲೀಷಿನ ಕೊಲೆ ಮಾತ್ರ ಆಯ್ತದೆ... ಕ್ಷಮಿಸಿ ....ಆಗುತ್ತದೆ.

No comments:

Post a Comment