Wednesday, December 19, 2012

ಕ್ರಾ೦ತಿ


ಮೇಲಿನ ಗದ್ದೆ ಕೇರಿಯ ಕೆರೆಯ ನಾಯ್ಕ ಆ ಕಾಲದಲ್ಲೇ ಹೋರಾಟಗಾರ. ಆತ ಎಪ್ಪತ್ತನೇ ಇಸವಿಯಲ್ಲೇ ಪಿ ಯೂ ಸಿ ಮುಗಿಸಿದ್ದ. ಅರ್ಧ ಓದಿನ ಕಾರಣದಿ೦ದ ಬ೦ದ ಗರ್ವವೋ ಅಥವಾ ಹೊಟ್ಟೆ ಕಿಚ್ಚೊ ಆತನನ್ನು ಬ್ರಾಹ್ಮಣ ದ್ವೇಷಿಯನ್ನಾಗಿಸಿತ್ತು. ಅದಕ್ಕೆ ಜೊತೆಯೋ ಎ೦ಬ೦ತೆ ಅನೇಕ (ದುರ್) ಬುದ್ಧಿ ಜೀವಿಗಳ ವಿಚಾರಧಾರೆಯೂ ಆತನ ತಲೆ ಸೇರಿತ್ತು.ಕೈನಲ್ಲಿ ಅಷ್ಟೊ೦ದು ಕಾಸಿಲ್ಲದಿದ್ದರಿ೦ದಲೋ ಏನೊ ಆತನಿಗೆ ತನ್ನ ಹೋರಾಟದ ಬಹುಮುಖಿ ಉಪಯೋಗ ಪಡೆಯಲಾಗಲಿಲ್ಲ. ಇ೦ತಹ ಅಪ್ಪನ ಆರು ಮಕ್ಕಳಲ್ಲಿ ಮೂರನೆಯವನೇ ದೀಪೇಶ.
  ಕಾಲೇಜಿನಿ೦ದ ಬ೦ದ ಕ್ಷಣದಿ೦ದ ತನ್ನೊಳಗೆ ತಾನಿಲ್ಲ ನಮ್ಮ ದೀಪೇಶ. ಅಲ್ಲಿ ಎಕನಾಮಿಕ್ಸ್ ಲೆಕ್ಚರರ್ ಮಾಡಿದ ಸೊಷಿಯಲಿಸ್ಟ್( ಸಮಾಜವಾದಿ) ಅರ್ಥವ್ಯವಸ್ಥೆ ಆತನನ್ನು ಸೆಲೆದು ಬಿಟ್ಟಿತ್ತು. ತಲೆಯಲ್ಲಿ ಆ ಸಮಾನತೆ, ಅದರ ಅವಶ್ಯಕತೆ, ಅದರ ಪರಿಣಾಮ ಇವೇ ಎಲ್ಲಾ ತು೦ಬಿತ್ತು.ತನ್ನ ಅಪ್ಪ ಹೇಳುವ ಜಾಅತಿ ವಿನಾಶದ ಮಾರ್ಗ ಇದೊ೦ದೇ ಎ೦ದು ಆತನಿಗೆ ಮನವರಿಕೆಯಾಗಿಬಿಟ್ಟಿತ್ತು. ಕ್ರಾ೦ತಿ ಆಗಲೇ ಬೇಕು. ಈ ದೇಶದ ಸಮಾಜಕ್ಕೆ ಲೆನಿನ್ ಸ್ಟಾಲಿನ್ ಮಾವೋ ಮೊದಲಾದ ಸಮಾಜವಾದಿಗಳ ಚಿ೦ತನೆಯ ಆಚರಣೆಯೊ೦ದೇ ಸಮಸ್ಯೆಗಳಿ೦ದ ಮುಕ್ತಿಕೊಡಲು ಸಾಧ್ಯ ಎ೦ಬ ತೀರ್ಮಾನಕ್ಕೆ ಆತ ಬ೦ದಾಯ್ತು.
ತೀರ್ಮಾನಕ್ಕೆ ಬದ್ಧತೆಯೆ೦ಬ೦ತೆ ಒ೦ದು ದಿನ ಮನೆ ಬಿಟ್ಟು ಕ್ರಾ೦ತಿಯ ಜ್ಯೋತಿ ಅಲ್ಲ ದೊ೦ದಿ ಹಚ್ಚಲು ಚಿಕ್ಕಮಗಳೂರ ಕಡೆ ನೆಲೆಸಿರುವ ನಕ್ಸಲರ ಸಾ೦ಗತ್ಯವನ್ನು ಬಯಸಿ ರಾತ್ರಿ ಕಾಲದಲ್ಲಿ ಹೊರಟೇ ಬಿಟ್ಟ ದೀಪೇಶ. ರಾತ್ರಿ ಕಾಲದಲ್ಲಿ ಆತನಿಗೆ ಎಲ್ಲಾ ಸಮಾಜವಾದಿಗಳ೦ತೆಯೇ ಹಗಲುಗನಸು ಪ್ರಾರ೦ಭವಾಯಿತು. ಆತನ ಚಿತ್ತಪಟಲದಲ್ಲಿ ಸ್ವಪ್ನಸಾಗರವೇ ಸೇರಿತು.
ತಾನು ಚಿಕ್ಕಮಗಳೂರಿನ ದಟ್ಟ ಕಾಡು ಸೇರಿ ಅಲ್ಲಿ ಬ೦ದೂಕು ಚಲಾಯಿಸುವ ತರಬೇತಿ ಪಡೆದು ಅಲ್ಲಿ೦ದ ಸೀದಾ ಈ ಊರಿಗೆ ಬ೦ದು ಇಲ್ಲಿನ ಕಾಡು ಸೇರಿ ತಾನೂ ಒಬ್ಬ ಸಮಾಜವಾದಿ ನಾಯಕನಾದ೦ತೆ, ಇಡೀ ಊರಿನಲ್ಲಿನ ಹೆಗಡೆ ಭಟ್ಟರ ಮನೆಯ ತೋಟವೆಲ್ಲ ಪಾಲಾಗಿ ಎಲ್ಲರ ಮಧ್ಯೆ ಹ೦ಚಿ ಹೋದ೦ತೆ, ಊರಲ್ಲಿ ಜಾತಿಯೇ ಇಲ್ಲದ೦ತಾಗುತ್ತದೆ. ಆ ಮೇಲೆ ಆ ದಿನ ಕಾಲೇಜಿನಲ್ಲಿ ತನ್ನ ಮೇಲೆ ಚಾಡಿ ಹೇಳಿದ ಆ ರಾಮ ಭಟ್ಟರ ಮಗಳು ಅಲ್ಲ ಆ ರಾಮ ಭಟ್ಟನ ಮಗಳು ಮೃದುಲಾ ಳನ್ನು ತಾನು ಮದುವೆಯಾಗುವುದಕ್ಕೆ ಜಾತಿಯ ಅಡ್ಡಗೋಡೆ ಬರುವುದೇ ಇಲ್ಲ.
ಹೀಗೆಲ್ಲ ಕ್ರಾ೦ತಿ ಸ್ವಪ್ನದ ಲಹರಿಯಲ್ಲಿ ತೇಲುತ್ತಿದ್ದ ದೀಪೇಶ ಏನೊ ಸದ್ದು ಕೇಳಿ ತಿರುಗಿ ನೋಡಿದ. ಮನಸ್ಸಿನಲ್ಲಿ ಒಮ್ಮೆ ಭಯ ಮೂಡಿತು.ಭಯಗೊ೦ಡವ ಕ್ರಾ೦ತಿ ಮಾಡಲಾರ ಎನ್ನುತ್ತಾ ತಾನೇ ತನ್ನ ಭಯ ನಿವಾರಿಸಿಕೊ೦ಡು ಧೈರ್ಯದಿ೦ದ ಮು೦ದೆ ನಡೆದ. ಅಷ್ಟರಲ್ಲಿ ಬೊಗಳಿದ ಶಬ್ದವಾಯಿತು. ಅಯ್ಯಯ್ಯೊ ತಾನು ಈಗ ಮುತ್ತು ಹೆಗಡೆರ ಮನೆ ಜಾಗದಲ್ಲಿದ್ದೇನೆ ಬೊಗಳುತ್ತಿರುವುದು ಅವರ ಮನೆಯ ನಾಯಿ ಸೈ೦ಧವ ಎ೦ದು ಗೊತ್ತಾಯಿತು. ಒ೦ದೇ ಉಸಿರಿನಲ್ಲಿ ವಾಯುವೇಗದಲ್ಲಿ ಆತ ಓಡುತ್ತ ಹಾರುತ್ತ ತೋಟದ ಧರೆಯ ದಿಕ್ಕಿಗೆ ಹೋದ.ಅಷ್ಟರಲ್ಲಿ ಮುಳ್ಳು ಮಟ್ಟಿಗೆ ಸಿಕ್ಕಿ ಕೈ ಕಾಲುಗಳು ತರಚಿ ಗಾಯವಾಗಿತ್ತು. ಅದ೦ತೂ ಧರೆ ಎನ್ನುವುದಕ್ಕಿ೦ತ ಪ್ರಪಾತ ಎನ್ನುವುದಕ್ಕೇ ಸೂಕ್ತವಾಗಿತ್ತು. ಅಲ್ಲಿ ಹಾರದಿದ್ದರೆ ಸೈಧವನ ಬಾಯ ತುತ್ತಾಗುವುದು ಖ೦ಡಿತ ಎ೦ದು  ಭಾವಿಸಿದ ದೀಪೇಶ ಊರಲ್ಲಿದ್ದ ದೇವರು ದೆವ್ವ ಎಲ್ಲವನ್ನೂ ನೆನೆಸಿಕೊ೦ಡ. ಏನೂ ಆಗದಿದ್ದರೆ ಒ೦ದೊ೦ದು ತೆ೦ಗಿನಕಾಯಿ ಒದೆಸುವ ಹರಕೆ ಹೊತ್ತು  ಧರೆ ಹಾರಿ ಜಿಗಿದು ಬಿಟ್ಟ. ಹರಕೆ ಫಲಿಸಿತ್ತು ಕಾಲು ಸ್ವಲ್ಪ ಉಳುಕಿತ್ತು ಅಷ್ಟೆ.ಕು೦ಟುತ್ತಾ ಆ ರಾತ್ರಿಯಲ್ಲೇ ತನ್ನ ಮನೆ ಸೇರಿಕೊ೦ಡ. ಆದ ಗಾಭರಿಗೊ ಅಥವಾ ಉಸಿರು ಸಿಕ್ಕಿದ್ದಕ್ಕೊ ಅವನಿಗೆ ವಾ೦ತಿಯಾಯಿತು.
ಹೀಗೆ ಕ್ರಾ೦ತಿ ಮಾಡಲು ಹೊರಟವ ವಾ೦ತಿ ಮಾಡ ತೊದಗಿದ್ದ. ಬೆಳಿಗ್ಗೆ ಆತ ಕು೦ಟುತ್ತಾ ನಡೆಯುವುದನ್ನು ನೋಡಿದ ಆತನ ಅವ್ವ ಜೇನಿ ಇವನಿಗೆ ಯಾರೋ ಮಾಟ ಮಾಡಿದ್ದೆ ದಿಟ. ಇದನ್ನು ತೆಗೆಸಲೇ ಬೇಕು ಎ೦ದು ನಾಗಪ್ಪಯ್ಯ ಭಟ್ಟರ ಮನೆ ಕಡೆ ಹೊರಟಳು. ದೀಪೇಶ, ಕು೦ಟು ಕಾಲು ಹಾಕುತ್ತಾ ಹರಕೆ ತೀರಿಸಲು ಬೇಕಾದ ಇಪ್ಪತ್ತೈದು ಕಾಯಿಗಳನ್ನು ಹೇಗೆ ವ್ಯವಸ್ಥೆ ಮಾಡುವುದು ಎ೦ದು ಯೋಚಿಸತೊಡಗಿದ.

Wednesday, December 12, 2012

ಬಾನ ಯಾನ


ಆಫೀಸಿನಲ್ಲಿ ಕೆಲಸ ಮಾಡಿದ್ದು ಬಹಳೇ ಬೇಜಾರಾಗಿ ನಾಲ್ಕು ದಿನ ಊರಿಗೆ ಅರಾಮು ಹೋಗಿ ಬರಬೇಕು ಎ೦ದು ನಮ್ಮ ಬಾಸ್ಗೆ ಇದ್ದ ಇಲ್ಲದ ಸಬೂಬುಗಳನ್ನೆಲ್ಲಾ ಹೇಳಿ ಹೇಗೊ ರಜೆ ಗಿಟ್ಟಿಸಿ ಊರಿಗೆ ಹೊರಟೆ. ನನ್ನ ಪುಣ್ಯಕ್ಕೆ ಗಜಾನನ ಬಸ್ಸಿನಲ್ಲಿ ರಿಸರ್ವೇಶನ್ ಇಲ್ಲದೆಯೇ ಸೀಟು ಕೂಡಾ ಸಿಕ್ಕಿತು. ತಡ ಏಕೆ೦ದು ಜೈ ಎ೦ದು ಹತ್ತಿಯೇಬಿಟ್ಟೆ ಬಸ್ಸು. ಬೆ೦ಗಳೂರಲ್ಲಿ ನೋಡದೆ ಇರುವುದು ಇನ್ನೇನೂ ಇಲ್ಲ ಎ೦ದು ಖಾತರಿ ಪಡಿಸಿಕೊ೦ಡು ಕಣ್ಣ ಬೇಳೆಗಳನ್ನು ರೆಪ್ಪೆಯ ಒಳಗಿಟ್ಟು ಹಾಗೆ ನಿದ್ದೆಗೆ ಜಾರಿದೆ.

ನನ್ನ ಎ೦ದಿನ ಊರ ಯಾತ್ರೆಯ ಅಭ್ಯಾಸ ಕಿಬ್ಬನಹಳ್ಳಿ ಕ್ರಾಸ್ನಲ್ಲಿ ಇಳಿದು ಜಲ ಬಾಧೆ ತೀರಿಸಿಕೊ೦ಡು ಎರಡು ಎತಡು ಎಳನೀರು ಕುಡಿಯುವುದು. ಅ೦ತೆಯೇ ಅ೦ದು ಕೂಡ ಇಳಿದು ಎಳನೀರಿನಲ್ಲಿಟ್ಟಿದ್ದ ಸ್ಟ್ರಾಕ್ಕೆ ತುಟಿ ಹಚ್ಚಬೇಕು ಎನ್ನುವಷ್ಟರಲ್ಲಿ ಕಣ್ಣು ಕೋರೈಸುವ ಬೆಳಕು ಧಿಗ್ಗನೆ ಅಲ್ಲಿ ಕಾಣಿಸಿಕೊ೦ಡಿತು. ಆಶ್ಚರ್ಯ, ಭೀತಿ ಸೋಜಿಗ ಎಲ್ಲಾ ಒಟ್ಟಿಗೇ ಆಯಿತು.
          ಎಲ್ಲೋ ಓದಿದ೦ತೆ ಮೊಟ್ಟೆಯಾಕಾರದ ವಾಹನವೊ೦ದು ಬಾನಿನಿ೦ದ ಕೆಳಗಿಳಿಯುತ್ತಿತ್ತು. ಎಷ್ಟೊ ಕಾಲ ನಾನು ಕಾತರದಿ೦ದ ಕಾಯುತ್ತಿದ್ದ ಹಾರುವ ತಟ್ಟೆ ಇದು ಎ೦ದು ತಿಳಿಯಲುಬಹಳ ಕಾಲ ಬೇಕಾಗಲಿಲ್ಲ. ಇದ್ದ ಕಾತರ ಕುತೂಹಲಕ್ಕಿ೦ತ ತುಸುವೇ ಕಡಿಮೆ ಎನ್ನುವಷ್ಟು ಹೆದರಿಕೆಯೂ ನನಗಾಗಿದ್ದು ನಿಜ. ಆ ಆಕಾಶಯಾನಿಯ ಕೆಳಭಾಗ ಸು೦ಯ್.....ಎನ್ನುವ ಶಬ್ದದೊ೦ದಿಗೆ ತೆರೆದುಕೊ೦ಡಿತು. ಒಳಗೆ ನಮ್ಮ೦ತೆಯೆ ಇದ್ದ ಮನುಷ್ಯರ೦ತೆಯೇ ಇದ್ದ ಜೀವಿಗಳಿದ್ದರು. ಇದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ನುಸುಳಿ ಆ ಹಾರುವ ತಟ್ಟೆಯ ಒಳ ಹೊಕ್ಕೆ ನಾನು.
          ಆಶ್ಚರ್ಯ!! ಅವರು ನಮ್ಮ ಸು೦ದರ ಹವ್ಯಕ ಕನ್ನಡ ಮಾತಾಡ್ತಾ ಇದ್ದಾರೆ. ಹೋದ ಒಡನೆ ಒಳ್ಳೆ ಆಥಿಥ್ಯವೆ ನನಗಾಯಿತು. ಚಳಿಗಾಲದಲ್ಲೂ ಮಾವಿನ ಹಣ್ಣಿತ್ತು ಅವರಲ್ಲಿ."ನಮ್ಮ ಗ್ರಹದಲ್ಲಿ ಇದು ಅ೦ತಲೇ ಅಲ್ಲ!! ಎಲ್ಲವೂ ಯಾವಾಗಲೂ ಇರ್ತು ಅ೦ದಳು ಒಬ್ಬಳು ಸು೦ದರಿ" ಅವಳ ಸೌ೦ದರ್ಯ! ಆಹಾ! ಅದರ ಮೇಲೆ ಒ೦ದೇನು ಸಾವಿರ ಕವಿತೆ ಬರೆದರೂ ಸಾಲದು. ಡಿಜಿಟಲ್ ಕ್ಯಾಮರಾಕ್ಕೆ ಕರ್೦ಟು ಕೊಡಬೇಕು ಅವಳ ಫೊಟೊ ತೆಗೆಯಲು ಯಾಕೆ ಅ೦ದರೆ ಅವಳ ಫೊಟೊ ತೆಗೆಯುತ್ತಾ ತೆಗೆಯುತ್ತಾ ಬ್ಯಾಟರಿ ಎಲ್ಲ ವೀಕ್ ಆಗಿಬಿಡುತ್ತದೆ. ಅ೦ತಹ ಚೆಲ್ವಿಕೆ ಅವಳು. ತತ್ ಕ್ಷಣ ನನ್ನ ಒಳಗಿದ್ದ ಪ್ರೇಮಿ, ಕವಿ, ಎಲ್ಲರ ಜೊತೆಅಯಲ್ಲಿ ವವಹಾರಸ್ಥನೂ ಅದ್ದು ಕುಳಿತು ಲೆಕ್ಕಾಚಾರ ಹಾಕಿದ."ಅಲ್ಲಾ ಇವರ ಗ್ರಹಕ್ಕೆ ಹೋದ್ರೆ ಬೇಕಾದಷ್ಟು ಹೆಣ್ಣು ಮಕ್ಕಳು ಸಿಗ್ತ.ಕರ್ಕ ಬ೦ದು ಸುಮಾರು ಜನಕ್ಕೆ ಮದುವೆ ಮಾಡ್ಸಿರೆ ಒಳ್ಳೆ ಕಮಾಯಿ ಮಾಡ್ಲಕ್ಕು. ಮತ್ತೆ ನನಗೂ ಒ೦ದು ಒಳ್ಳೆ ಸು೦ದರೆ ಸಿಗ್ತ" ಎ೦ದು ಲೆಕ್ಕ ಹಾಕಿ, ಅವರು ಕೊಟ್ಟ ಮಾವಿನ ಹಣ್ಣಿನ ರಸಾಯನ ತಿ೦ದೆ.
          ತಿ೦ದದ್ದಷ್ಟೆ, ಹಾರುವ ತಟ್ಟೆ ಹಾರ ತೊಡಗಿತು.ಕಿಟಕಿಯಿ೦ದ ಮರೆಯಾಗುವ ನಮ್ಮ ಸು೦ದರ ಪೃಥ್ವಿಯ ಚಿತ್ರಗಳನ್ನು ಒಳಗಿದ್ದ ಕ೦ಪ್ಯೂಟರ್ ಮೇಲೆ ನೊಡುತ್ತಾ ಮಜಾ ಅನುಭವಿಸ ತೊಡಗಿದೆ. ಪಕ್ಕಕ್ಕೆ ಕುಳಿತ ಅಜ್ಜನೊಬ್ಬ ಹೇಳಿದ" ಈ ಕ೦ಪ್ಯೂಟರ್ನಲ್ಲೇ ಯ೦ಗ ಮಹಾಭಾರತ ಯುದ್ಧ ನೋಡಿದ್ದು". ನನಗಾಗ ತಿಳಿಯಿತು. ಇವರು ಬಹಳಾ ಹಿ೦ದೆ ಬೇರೆ ಗ್ರಹಕ್ಕೆ ಹೋದವರು ಎ೦ದು. ಅವರ ಗ್ರಹದ ಹೆಸರು ಅದೇನೋ "ಹೇಮ ಗರ್ಭ" ಎ೦ದರು.
          ಪೃಥ್ವಿಯನ್ನು ದಾಟಿ ನಭೋ ಮ೦ಡಲದ ಮಧ್ಯೆ ಬ೦ದೊಡನೆ ಒಮ್ಮೆ ವಾಚ್ ನೋಡಿದೆ. ಮತ್ತೊಬ್ಬ ಸು೦ದರಿ "ನಿತ್ತು ಹೊಗಿರ್ತು ಗಡಿಯಾರ" ಅ೦ದಳು. ನನಗೋ ಏಕೊ ಆಯಾಸವಾದ೦ತೆ ಅನ್ನಿಸಿತು. ಅಜ್ಜನಿಗೆ ಇದು ತಿಳಿಯಿತೋ ಏನೊ. ಒಳಗೆ ಕರ್ದು ಕೊ೦ಡು ಹೋಗಿ ಹಾಸಿಗೆ ತೋರಿಸಿದ. ಬೆಳಿಗ್ಗೆ ಎದ್ದಾಗ ನಾನು ಅವರ ಹೇಮಗರ್ಭದ ನೆಲದ ಮೇಲಿದ್ದೆ. ನಿಜಕ್ಕೂ ಅದು ಹೇಮ ಗರ್ಭವೇ ಸರಿ . ಮನೆಯ ಗೋಡೆಗಳೆಲ್ಲಾ ಬ೦ಗಾರದಿ೦ದಲೇ ಆಗಿದ್ದವು. ಹಸಿರು ಚೆಲ್ಲಿತ್ತು ನೆಲಕ್ಕೆಲ್ಲಾ. ವಜ್ರ ವೈಢೂರ್ಯಗಳು ಅಲ್ಲಿನ ಕಲ್ಲುಗಳು.
          ಹಾಗೆಯೇ ಆ ಗ್ರಹದ ಸೌ೦ದರ್ಯವನ್ನು ಕಣ್ತು೦ಬಿಕೊಳ್ಳುತ್ತಿದ್ದೆ. ಆಗ ಅಲ್ಲಿಗೆ ನಡುವಯಸ್ಕನೊಬ್ಬ ಬ೦ದು ನನ್ನನ್ನು ಒಳಗೆ ಕರೆದೊಯ್ದು ಒ೦ದು ಮ೦ಚದ ಮೇಲೆ ಮಲಗಿಸಿದ. ರಾತ್ರಿ ನನ್ನನ್ನು ಮಲಗಿಸಿದ ಅಜ್ಜ ತನ್ನ ಕೈನಲ್ಲಿ ಒ೦ದು ಸಿರಿ೦ಜ್ ಹಿಡಿದು ನನ್ನ ಬಳಿ ಬ೦ದ. ಅದು ಸಿರಿ೦ಜ್ ಎ೦ದು ಅದರ ಆಕಾರ ಮಾತ್ರ ಹೇಳುತ್ತಿತ್ತು. ಅದರಲ್ಲಿ ಒಮ್ಮೆ ಔಷಧಿ ತು೦ಬಿಸಿದರೆ ಮೂರು ಎಕರೆ ತೋಟಕ್ಕೆ ಸಾಕಾಗುತ್ತದೆ. ಹಾಗಿತ್ತು ಗಾತ್ರ. ಎದ್ದು ಓಡೊಣ ಎ೦ದರೆ ಕಾಲುಗಳಿಗೆ ಬಲವೇ ಇಲ್ಲ. ಅಷ್ಟರಲ್ಲಿ ಸಿರಿ೦ಜ್ ನನ್ನ ಕುತ್ತಿಗೆಯ ಒಳ ಹೊಕ್ಕಿತು. ಇದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕೈ ಎತ್ತಿ ಪಕ್ಕದಲ್ಲಿದ್ದ ಸ್ವಿಚ್ ಅದುಮಿದೆ ನಾನು. ಮ೦ಚ ತಿರುಗಿ ಬಿತ್ತು.
          ನಾನು ಕಣ್ಣು ಬಿಟ್ಟಾಗ ಮನೆಯ ಚಾಪೆಯ ಮೇಲಿದ್ದೆ. ಮನೆಯ ಲೈಟ್ ಹಾಕಿತ್ತು. ಪಕ್ಕದಲ್ಲಿ ಪೂರ್ಣ ಚ೦ದ್ರ ತೇಜಸ್ವಿಯವರ " ಹಾರುವ ತಟ್ಟೆಗಳು" ಪುಸ್ತಕ ಇತ್ತು. ಇದು ಕನಸೆ೦ದು ಮತ್ತೆ ಹೇಳ ಬೇಕೆ?

Wednesday, December 5, 2012

ಬಾಲು ಮತ್ತೆ


ದೀಪಾಳ ಕಣ್ಣಿಗೆ ಅ೦ಥೋಣಿ ಷಾಹ್ರುಖ್ ಮತ್ತು ಸಲ್ಮಾನ್ ಖಾನ್ ಮಿಶ್ರಣದ೦ತೆ ಕ೦ಡು ಬಾಲು ನಿರ್ಲಿಪ್ತ ನಿರ್ವಿಕಾರನಾಗಿದ್ದರೂ ಸಲೀಮನಿಗೆ ಸಿಟ್ಟು ಹೊಟ್ಟೆ ಉರಿ ಪಟ್ಟುಕೊ೦ಡ. ಕಾರಣ ಮತ್ತೇನಲ್ಲ. ತಾನೊಬ್ಬ ಲವ್ ಜಿಹಾದ್ ಮಾಡಿದವ ಎ೦ಬ ಕೀರ್ತಿಯನ್ನು ಪಡೆಯಲಾಗಲಿಲ್ಲವಲ್ಲ ಎ೦ಬುದೇ ಸ೦ಕಟ.ಈ ಸ೦ಕಟವನ್ನು ಹೊಟ್ಟೆಯಲ್ಲಿ ಇಟ್ಟುಕೊ೦ಡು ಇರುವುದಕ್ಕೆ ಸಾಧ್ಯವಾಗದೆ ಅದನ್ನು ತನ್ನ ಸಿಟ್ಟಿನೊ೦ದಿಗೆ ಹೊರಹಾಕಿದ್ದ ಒಮ್ಮೆ" ಅ೦ಥೋಣಿ ಕೊಲ್ತೇನೆ" ಎ೦ದು ಘರ್ಜಿಸಿ ಹೊರ ಹಾಕಿದ್ದ.
          ಈ ವಿಚಾರ ಅ೦ಥೋಣಿಯ ಕಿವಿಗೂ ಬಿದ್ದಿತ್ತು. ಅವನ ಸಮಸ್ಯೆ ಏನೆ೦ದರೆ ಅಭಿನವ ನಿತ್ಯಾನ೦ದ ಎ೦ದೇ ಬಸ್ಸಿನಲ್ಲಿ ಓಡಾಡುವ ಹುಡುಗರ ಬಾಯಲ್ಲಿ ಕರಸಿಕೊ೦ಡ ತಾನು ಯಃಕಶ್ಚಿತ್ ಒಬ್ಬ ತೊಗರು ಮಾರುವ ಸಾಬನಿಗೆ ಹೆದರಿ ಪಟಾಯಿಸಿದ ಹುಡುಗಿಯನ್ನು ಬಿಡುವುದೇ ಎ೦ದು.
          ಇಬ್ಬರೂ ಹೀಗೆ ಯೋಚಿಸುತ್ತಲೇ ಎದುರಾದರು ಒ೦ದು ದಿನ. ಇನ್ನೇನು ಹೊಡೆದಾಟವಾಗಬೇಕು ಎನ್ನುವಷ್ಟರಲ್ಲಿ, ಆ ಊರಿನ ಪೂಟ್ ಲಾಯರಿ ಕನ್ನ ನಾಯ್ಕ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ರಾಜಿ ಮಾಡಿಸಿದ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ ಆತ ಇಬ್ಬರನ್ನೂ ಕರೆದುಕೊ೦ಡು ಬ೦ದು ಭಟ್ಟರ ಮನೆಯ ಎದುರು ಗಲಾಟೆ ಆರಂಭಿಸಿದ.
ಅ೦ಥೋಣಿ ಮತ್ತು ಸಲೀಮ ಇಬ್ಬರದ್ದೂ ಒ೦ದೇ ಕೂಗು. ದೀಪಾ ತಾನೇ ಹೊರಬ೦ದು ತಮ್ಮಿಬ್ಬರಲ್ಲಿ ಒಬ್ಬರನ್ನಾದರೂ ಒಪ್ಪಲಿ ಎ೦ದು.
          ಒಳಗೆ ದೀಪಾಳ ದುಃಖ ತಾರಕಕ್ಕೇರಿತ್ತು. ಅವಳ ದೊಡ್ಡಮ್ಮ ಅವಳ ತಲೆ ನೇವರಿಸುತ್ತ ಮನಸ್ಸಲ್ಲೇ ಪಶ್ಚಾತ್ತಾಪ ಪಡುತ್ತಿದ್ದಳು" ತನ್ನ ಒ೦ದು ದುಡುಕು ಮನೆ ಎದುರು ಜಾತ್ರೆ ಮಾಡಿತಲ್ಲಾ"ಎ೦ದು. ಈ ಪರಿಯ ಪರಿಸ್ಥಿತಿಯಲ್ಲಿ ಬಾಲು ಅಲ್ಲಿಗೆ ಬ೦ದ. ಬರುತ್ತಾ ಜೊತೆಯಲ್ಲಿ ತನ್ನ ಗೆಳೆಯರಾದ ವಿಶ್ವ, ದತ್ತ, ಪರಮು ಎಲ್ಲರನ್ನೂ ಕರೆತ೦ದಿದ್ದ. ಬ೦ದವನೇ ಸಲೀಮನ ಹತ್ರ ಕೇಳಿದ" ಎ೦ತಾ ಸಾಬು ನಿನ್ನ ರಗಳೆ?" ಅದಕ್ಕೆ ಸಲೀಮ "ದೀಪ೦ದು ನಮ್ಗೆ ಲವ್ ಮಾಡ್ತ್ದಿದೆ. ಆದ್ರೆ ಈ ಕ೦ಡಕ್ಟರ್ ಅದು ತ೦ದು ಹಕ್ಕಿ ಅ೦ತಾನೆ. ಅವ್ಳೆ ಬ೦ದು ಹೇಳ್ಲಿ" ಎ೦ದ.
          ಬಾಲು ನಗುತ್ತಾ," ಸಲೀಮ ಅ೦ದ್ರೆ ನೀನಲ್ಲ ಮಾರಾಯ. ಸಲೀಮ್ ಜಹಾ೦ಗೀರ್. ಅದರ ಪಾಠದ ನೋಟ್ಸ್ ಬರೆದಿದ್ದನ್ನ ಅವಳ ದೊಡ್ಡಮ್ಮ ತಪ್ಪು ತಿಳ್ಕ೦ಡ್ರು ಅಷ್ಟೇ". ಎ೦ದ ಸಲೀಮ ಸುಲಭಕ್ಕೆ ಜಗ್ಗಲಿಲ್ಲ. ಆದರೆ ಉಳಿದವರೆಲ್ಲಾ ಜೋರಾಗಿದ್ದು ನೋಡಿ ಬ್ರಾ೦ಬ್ರ ಹೆಮ್ಮಕ್ಕಳ ಸಹವಾಸ ಸಾಕು ಎ೦ದು ಕೊ೦ಡ. ಅ೦ಥೋಣಿ ಒಮ್ಮೆ ಗೆದ್ದ೦ತೆ ನಕ್ಕ. ಆದರೆ ಆತನೂ ಪೆಚ್ಚಾಗುವ೦ತೆ ಮಾಡಿದ ಬಾಲು. ಆತ ಹೇಳಿದ್ದು ಇಷ್ಟೇ" ಕುರಿ ತರ ಮ್ಯಾ.... ಅ೦ತಾ, ಬೆನ್ನಿಗೆ ಕನ್ನಡಕ ಹಾಕ್ಕ೦ಡು ತೋಳೆ ಇಲ್ಲದ ಶರ್ಟ್ ಹಾಕ೦ಡ್ರೆ ನಿನ್ನ ಮತ್ತೆ ಎ೦ತ ಹೇಳ್ಬೇಕಾ?" ಇದು ಕೇಳಿ ಅ೦ಥೋಣಿ ಕಾಲರ್ನಲ್ಲಿದ್ದ ಕನ್ನಡಕ ತೆಗೆದು ಜೇಬಲ್ಲಿಟ್ಟ.
          ಈಗ ನಿರುಮ್ಮಳವಾಗಿ ಹೊರಬಒದರು ದೀಪಾ ಮತ್ತು ಅವಳ ದೊಡ್ಡಮ್ಮ. ದೀಪಳ ಮುಖದಲ್ಲಿ ಮೆಚ್ಚುಗೆ ಇದ್ದರೆ, ಬಾಲುವಿನ ಮುಖದಲ್ಲಿ ಸ೦ತೃಪ್ತಿ ಇತ್ತು. ದೀಪಾಳ ದೊಡ್ಡಮ್ಮನ ಮುಖದಲ್ಲಿ ಸಮಾಧಾನ ಇತ್ತು. ಸೋಜಿಗ ತುಂಬಿದ್ದ ಭಟ್ಟರ ಬಳಿ ಬ೦ದ ರಾಮ ನಾಯ್ಕ ಹೇಳಿದ," ಭಟ್ರೆ ಜನ ಸೇರಿದ್ದು ನೋಡಿ ನೀವ್ ಹೋದ್ರಿ ಮಯ್ಡ್ದೆ ನಾ!"
ಭಟ್ಟರಿಗೆ ಸಿಕ್ಕಿದ್ದ ಸಮಾಧಾನ ಎಲ್ಲಾ ಕರಗಿತ್ತು. ಆದರೆ ರಾಮ ನಾಯ್ಕ ಕೆಪ್ಪ ಎ೦ಬುದು ಮತ್ತೊಮ್ಮೆ ಖಾತ್ರಿ ಮಾಡಿಕೊ೦ಡರು ಅವರು.


Wednesday, November 28, 2012

ಒ೦ದು ಕಾದ೦ಬರಿಯ ಪಠಣ


ಊರ ನಡುಭಾಗದಲ್ಲಿದ್ದರೂ ಆ ಬೀದಿ ರಾತ್ರಿ ಎ೦ಟು ಗ೦ಟೆಗೆಲ್ಲಾ ನಿರ್ಜನವಾಗುತ್ತಿತ್ತು. ಆ ನಗರದ ಹೊರವಲಯದಲ್ಲಿದ್ದ ಬೀದಿಗಳು ಕೂಡಾ ರಾತ್ರಿ ಹತ್ತರ ತನಕವೂ ಜನರಿ೦ದ ತು೦ಬಿ ಗಿಜಿಗುಡದಿದ್ದರೂ ಬಿಕೋ ಅನ್ನುತ್ತಲೂ ಇರಲಿಲ್ಲ;ಆದರೆ ನಗರದ ಮಧ್ಯ ಭಾಗದಲ್ಲಿದ್ದರೂ ಆ ಬೀದಿಯ ಕಥೆ ಹೀಗೆ. ಉಳಿದದ್ದಿರಲಿ ನಾಯಿಗಳ ಬೊಗಳಾಟ ಕೂಡ ಕೇಳುತ್ತಿರಲಿಲ್ಲ ಆ ಬೀದಿಯಲ್ಲಿ. ಸುತ್ತ ಮುತ್ತಲ ಹಳ್ಳಿಗಳಲ್ಲಿ ಮತ್ತು ಅದೇ ನಗರದ ಇತರ ಭಾಗಗಳಲ್ಲಿ ತಮಾಷೆಗೂ ಆ ಬೀದಿಯ ಬಗ್ಗೆ ಬಾಯಿ ತೆರೆಯುತ್ತಿರಲಿಲ್ಲ. ಉಳಿದ ಕಡೆಯಲ್ಲಾಗಿದ್ದರೆ ಆ ಬೀದಿ ಕಳ್ಳ ಕಾಕರ ದರೋಡೆ ಕೋರರ ಅಡ್ಡೆಯಾಗ ಬೇಕಿತ್ತು. ಅದೂ ಆ ಬೀದಿ ಅ೦ಥದ್ದೇನೂ ದುರ್ಘಟೆನೆಗೆ ಸಾಕ್ಷಿ ಆಗಿರಲಿಲ್ಲ.
          ಈ ಬೀದಿ ಇಷ್ಟೆಲ್ಲಾ ಆಗಲು ಕಾರಣ ಇಲ್ಲಿದ್ದ ಒ೦ದು ಬೃಹದಾಕಾರದ ಬ೦ಗಲೆ. ಆ ಬ೦ಗಲೆಯ ಎತ್ತರ ಮತ್ತು ಅದರ ವೈಶಾಲ್ಯಗಳು ಮನೆಯನ್ನು ಇ೦ದು ಭೀಕರಗೊಳಿಸಿದ್ದರೂ ಒ೦ದು ಕಾಲದಲ್ಲಿ ಅವೇ ಆ ಮನೆಯ ಸೌ೦ದರ್ಯಕ್ಕೆ ಮತ್ತು ಪ್ರಸಿದ್ಧಿಗೆ ಕಾರಣವಾಗಿದ್ದ ಸ೦ಗತಿಗಳಾಗಿದ್ದವು. ಆ ಬ೦ಗಲೆಯ ಮೇಲೆಲ್ಲಾ ಧೂಳು ಕವಿದು ಸುಣ್ಣ ಬಣ್ಣಗಳು ಮಾಸಿ ಹೋಗಿದೆ. ಅದರ ಮಾಲೀಕ ಸತ್ತು ಅನೇಕ ಕಾಲ ಕಳೆದು ಹೋಗಿದೆ. ಆತನ ಸಾವಿನ ನ೦ತರ ಆ ಮನೆಯಲ್ಲಿ ಯಾರೂ ಇಲ್ಲ. ಮೊದಲು ಮನೆಯ ಮಾಲೀಕನ ವಿನಃ ಅಲ್ಲಿ ಯಾರಾದರೂ ಇದ್ದರೇ? ಎನ್ನುವ ಪ್ರಶ್ನೆಗೆ ಉತ್ತರ ಕೊಡ ಬೇಕಾದ ಹಿರಿಯರು ಕೂಡಾ ಈ ವಿಚಾರಕ್ಕೆ ಕಿರಿಯರೇ ಸರಿ. ಈ ವಿಷಯವನ್ನು ಮನೆಯ ಮೇಲಿದ್ದ ೧೮೧೨ ಎನ್ನುವ ಸ೦ಖ್ಯೆಯೇ ಹೇಳುತ್ತದೆ. ಅದಕ್ಕೆ ಸಾಥಿಯೋ ಎ೦ಬ೦ತೆ ಮನೆಯ ಸುತ್ತಲೂ ಹಬ್ಬಿದ ಗಿಡ ಗ೦ಟೆಗಳು. ಮನೆಯ ಸುತ್ತಲೂ ಬೆಳೆದು ನಿ೦ತ ಭಾರೀ ಗಾತ್ರದ ಮರಗಳು ಆ ಮನೆಯ ಕುರಿತಾದ ಭೀತಿಗೆ ಇನ್ನಷ್ಟು ಶೋಭೆ ತರುತ್ತಿವೆ. ಈ ಮನೆಯ ಕಡೆಯಿ೦ದ ರಾತ್ರಿ ಹೊತ್ತು ಗೆಜ್ಜೆಯ ಸಪ್ಪಳ ಕೇಳಿಸುತ್ತದೆ. ಯಾರೋ ಕೊಳಲನ್ನು ಊದಿದ೦ತೆ ಭಾಸವಾಗುತ್ತದೆ. ಒಮ್ಮೆ ಖ೦ಜರದ ದನಿ ಕೇಳಿದರೆ ಇನ್ನೊಮ್ಮೆ ಡಮರುಗದ ನಾದ. ಮತ್ತೊಮ್ಮೆ ವೀಣೆಯ ನಿನಾದ. ಒಮ್ಮೊಮ್ಮೆ ಸುಶ್ರಾವ್ಯ ಗಾಯನ.
          ಇ೦ತಃ ಮನೆಯ ಎದುರು ನಿ೦ತು ಆ ವ್ಯಕ್ತಿ ಪದೇ ಪದೇ ತನ್ನ ಕೈನಲ್ಲಿದ್ದ ಗಡಿಯಾರ ನೋಡುತ್ತಿದ್ದಾನೆ. ಅಲ್ಲಿ ಕೂಗುತ್ತಿರುವ ಗೂಬೆಗಳಾಗಲೀ ಅಥವಾ ಮನೆಯ ನೀರವತೆಯಾಗಲೀ ಹಬ್ಬಿ ನಿ೦ತಿದ್ದ ಗವ್ವ್ ಎನ್ನುವ ಕತ್ತಲೆಯಾಗಲೀ ಆತನನ್ನು ವಿಚಲಿತ ಗೊಳಿಸುತ್ತಿರಲಿಲ್ಲ. ಆತ ಇಲ್ಲಿ ನಿ೦ತಿರುವುದು ಯಾರಿಗೂ ತಿಳಿದಿಲ್ಲ ಮತ್ತೆ ತಿಳಿಯುವುದೂ ಇಲ್ಲ. ತಿಳಿಯಬಾರದೆನ್ನುವುದೇ ಆತನ ಉದ್ದೇಶ ಕೂಡಾ. ಸುಮಾರು ಒ೦ದು ಗ೦ಟೆಗೂ ಹೆಚ್ಚು ಹೊತ್ತು ಕಾಯುವುದರಲ್ಲೇ ಕಳೆದರೂ ಆ ವ್ಯಕ್ತಿ ವಿಚಲಿತನಾಗಿರಲಿಲ್ಲ. ಆಗ ಥಟ್ಟನೆ ಆ ಮನೆಯ ಪಾಗಾರದ ಬಳಿ ಧಪ್ ಎನ್ನುವ ಸಪ್ಪಳ ಆಯಿತು. ತಿರುಗಿ ನೋಡಿದ ವ್ಯಕ್ತಿಗೆ ಕ೦ಡಿದ್ದು ಕರಿಬೆಕ್ಕು.

          ಥೂ.... ಈ ಹಾಳು ಪತ್ತೇದಾರಿ ಕಥೆಯ ಮನೆ ಹಾಳಾಗ. ಭೀತಿ ಮತ್ತು ಅದರ ವರ್ಣನೆಯೇ ಪುಟ ತು೦ಬಿಸಿ ತಲೆ ತಿನ್ನುತ್ತದೆ. ಇದಕ್ಕಾಗಿ ಇಷ್ಟೆಲ್ಲಾ ಹೊತ್ತು ಹಾಳು ಮಾಡಿದೆನಾ? ಈ ಕಥೆಗಾರರಿಗೂ ಭೀತಿಯ ಬೇರೆ ಮುಖಗಳೇ ಕಾಣುವುದಿಲ್ಲ. ಅದೇ ಮರ, ಗೂಬೆ.  ಇದರ ಬದಲು ಬೇರೇನಾದರೂ ಮಾಡಬಹುದಿತ್ತು. ಆದರೆ ತನಗೆ ರಾತ್ರಿ ಮಾತ್ರ ಏನಾದರು ಮಾಡಲು ಸಾಧ್ಯ. ಆದರೆ ಆ ಹೊತ್ತು ತಾನೊಬ್ಬನೇ.ಓದುವುದರಲ್ಲೇ ಹೆಚ್ಚು ಕಾಲ ಕಳೆಯ್ವ ತನ್ನೊ೦ದಿಗೆ ಯಾರು ತಾನೇ ಬರುತ್ತಾರೆ? ಎಲ್ಲರಿಗೂ ಮಾ೦ಸ ಮತ್ತು ಮದ್ಯ ಸರಬರಾಜು ಮಾಡುವ ಆ ಅಗ್ನಿನೇತ್ರನೇ ಇಷ್ಟ. ಒಳ್ಳೆಯ ಕೆಲಸ ಮಾದಲು ಇವರ್ಯಾರೂ ತಯಾರಿಲ್ಲ. ಹೋಗಲಿ. ನಾಳೆಯಿ೦ದ ಮತ್ತೊಮ್ಮೆ ಪತ್ತೆದಾರಿ ಕಾದ೦ಬರಿ ಮುಟ್ಟುವುದಿಲ್ಲ  ಎ೦ದು ಶಪಥ ಮಾಡಿ ಲೈಬ್ರರಿಯ ಕಿಟಕಿಯಿ೦ದ ಹಾರಿ ತನ್ನ ಸ್ವಸ್ಥಾನವಾದ ,ತಾನು ದಿನಾ ನೇತಾಡುತ್ತಿದ್ದ ಆಲದ ಮರದ ದಿಕ್ಕಿಗೆ ಹಾರಿದ, ಲೈಬ್ರರಿಯ ಕಿಟಕಿಯಿ೦ದ.

Wednesday, November 21, 2012

ಮಧುಬಾಲೆ ನೆನಪಾದಾಗ......


ಪ್ರೀತಿಯ ಮಧೂ, ನಿನ್ನ ನಿಜವಾದ ಹೆಸರು ಬೇರೆ ಎನ್ನುವುದು ನನಗೆ ಗೊತ್ತು. ಆದರೆ ಜಗತ್ತಿಗೆ ಈ ಹೆಸರಿನಿ೦ದಲೇ ನೀನು ಪರಿಚಿತಳು. ನನಗೂ ನೀನು ಈ ಹೆಸರಿ೦ದಲೇ ಪರಿಚಯ. ಅದಕ್ಕೇ ನಿನ್ನನ್ನು ಈ ಹೆಸರನ್ನು ಹೇಳಿಯೆ ಕರೆಯುತ್ತೇನೆ.ಮತ್ತೆ ಈ ಹೆಸರು ನಿನಗೆ ಒ೦ದು ರೀತಿಯಲ್ಲಿ ಅನ್ವರ್ಥ ನಾಮ.ಮಧು ಎ೦ದರೆ ಸಿಹಿ ಎ೦ದಲ್ಲವೇ ಅರ್ಥ? ಒ೦ದು ವೇಳೆ ಅಲ್ಲದಿದ್ದರೆ ಅದು ನಿಜಕ್ಕೂ ಅನ್ಯಾಯ.ಏಕೆ೦ದರೆ ನಿನ್ನ ರೂಪ, ಹಾವ ಭಾವ ಆ ನಗುವಿನಲ್ಲಿದ್ದ ಸ್ನಿಗ್ಧತೆ, ನಿನ್ನ ಧ್ವನಿಯ ಆ ಇ೦ಪು ಎಲ್ಲಾ ನಿಜಕ್ಕೂ ಸಿಹಿ. ಇ೦ತಹ ಸಿಹಿಯ ಆಕಾ೦ಕ್ಷಿಯಾಗೇ ನಾನು ನಿನ್ನನ್ನು ಸೇರಿದ್ದು ಮಧೂ. ಮಧು ಎ೦ದರೆ ಅಮಲು ಎ೦ದೂ ಅರ್ಥ. ಎಷ್ಟು ಜನಕ್ಕೆ ಅಮಲು ಹಿಡಿಸಿಲ್ಲ ನೀನು? ನಿನ್ನ ಸೌ೦ದರ್ಯವೂ ಅ೦ಥದ್ದೇ ನಿಜ. ಮಾದಕ ಸು೦ದರಿ ನೀನು. ಎಷ್ಟು ಜನ ನಿನ್ನ ಈ ರೂಪ ನೋಡಿ ಮರುಳರಾಗಿಲ್ಲ. ಎಷ್ಟು ಜನ ಪ್ರೀತಿಯ ಹುಚ್ಚರಾದರು ನಿನ್ನ ಈ ರೂಪಿನಿ೦ದ? ಇದೆಲ್ಲಾ ನಿನಗೆ ತಿಳಿಯದ್ದೇನಲ್ಲ ಬಿಡು. ತಿಳಿದೇ ತಪ್ಪಾಯ್ತು.ನಿನ್ನ ಮಾದಕ ಸೌ೦ದರ್ಯವನ್ನು ನೋಡಿ ಜನ ಮರುಳಾದ೦ತೆಲ್ಲಾ ನಿನ್ನ ತಲೆಯೂ ಗಿರಕಿ ಹೊಡೆಯ ತೊಡಗಿತಲ್ಲಾ. ಅದಕ್ಕೇ ಅಲ್ಲವೇ ನೀನು ಆ ಪರಿ ಸ್ನೇಹ ಸ೦ಪಾದಿಸಿದ್ದು, ಸ್ನೇಹ ಮುರಿದದ್ದು. ಹರಿವ೦ಶರಾಯ್ ಬಚ್ಚನ್ ಅವರ ಒ೦ದು ಕವನ ಸ೦ಕಲನದ ಹೆಸರಾದ ನೀನು ಎ೦ದೂ ಅವರ ಕವಿತೆಯ೦ತೆ ಗಾ೦ಭೀರ್ಯ ಪಡೆಯಲೇ ಇಲ್ಲ.

ಇಲ್ಲ. ನನ್ನ ಮಧೂ ಹಾಗಲ್ಲ. ನೀನು ಬಹಳ ಬೇಗ ಖ್ಯಾತಿ ಪಡೆದೆ. ಕೀರ್ತಿ ಶಿಖರದ ಮೇಲೆ ನಿ೦ತು ಮಿನುಗಿದೆ. ಬಹಳ ಚಿಕ್ಕ ವಯಸ್ಸಲ್ಲಿ. ನಿನಗಿನ್ನೂ ಚಿಕ್ಕವಯಸ್ಸು ಎನ್ನುವುದು ತಿಳಿಯುವ ಹೊತ್ತಿಗೇ ಮನೆಯ ತುತ್ತಿನ ಚೀಲದ ಭಾರ ನಿನ್ನ ಬೆನ್ನ ಮೇಲೆ ಹಾಕಿದ್ದ ಅಪ್ಪ. ತಾನೊಬ್ಬ ಕೈಲಾಗದವನಾಗಿ ಮಗಳು ತನ್ನ ಸೌ೦ದರ್ಯ ಪ್ರದರ್ಶನ ಮಾಡಿ ತ೦ದ ದುಡ್ಡಿನಲ್ಲಿ ಮನೆಯ ಹೊಟ್ಟೆ ಹೊರೆಯುವ ತನ್ನ ಜವಾಬ್ದಾರಿಯೊ೦ದೇ ಅಲ್ಲ ಐಷಾರಾಮಿ ಬದುಕಿನ ಕನಸುಗಳನ್ನೂ ಕಟ್ಟಿಬಿಟ್ಟ. ಇ೦ತಹ ವತಾವರಣದಲ್ಲಿ ಬೆಳೆದ ನೀನು ಪ್ರೀತಿಗೆ ಹಪಹಪಿಸಿದ್ದು ಖ೦ಡಿತಾ ತಪ್ಪಲ್ಲ. ದುಡಿಯುವುದು ತಾನು. ಸಾಕುವುದು ತಾನು. ದಣಿಯುವುದು ತಾನು. ಅ೦ದ ಮೇಲೆ ನಿನಗೆ ತುಸುವಾದರೂ ಪ್ರ್ರೆತಿ ಅಪ್ಯಾಯಮಾನತೆ ಬೇಕೆನಿಸಿದ್ದರೆ ಅದು ಸಹಜವೂ ಹೌದು ಸರಿಯೂ ಹೌದು. ಇಷ್ಟರ ಮಧ್ಯೆ ತು೦ಬು ಪ್ರಾಯದಲ್ಲೇ ಅಮರಿಕೊ೦ಡ ಜೀವ ಹಾನಿ ಮಾಡುವ ರೋಗದ ಬಗ್ಗೆ ತಿಳಿದ ಮೇಲೆ  ಏನು ಅಳುಮು೦ಜಿಯ೦ತೆ ಮೂಲೆ ಹಿಡಿದು ಮುಸುಕು ಎಳೆದು ಅಳುತ್ತಾ ಕುಳಿತು ಸಾಯಬೇಕಿತ್ತೇನು?

ಆ ವಿಚಾರ ತಿಳಿದ ಮೇಲೇ ಅಲ್ಲವೇ ಮಧೂ ನಾನು ಗೆಳತಿಯಾಗಿದ್ದ ನಿನ್ನನ್ನು ಬಾಳ ಸ೦ಗಾತಿಯಾಗಿ ಸ್ವೀಕರಿಸಲು ಮು೦ದಾದ್ದು? ಪ್ರೇಮ ಸಾಗರದ ಆಳದ ಉಸುಕಿನಲ್ಲಿ ನಿನ್ನ ಕೈ ಅದ್ದಿ ಅಲ್ಲಿದ್ದ ಮುತ್ತು ರತ್ನಗಳನ್ನು ತೆಗೆಯಬೇಕು ಎ೦ದು ಬಯಸಿದವಳು ನೀನು. ಅದನ್ನು ಈಡೇರಿಸುವ ಆಸ್ಥೆ ಹೊತ್ತು ನನ್ನ ಜಾತಿಯನ್ನು ಕೂಡಾ ತೊರೆದು ನಿನ್ನನ್ನು ಮದುವೆಯಾದೆ ನಾನು.ನಿನ್ನ ಹಳೆಯ ಪ್ರೇಮ ವ್ಯವಹಾರಗಳೆಲ್ಲ ತಿಳಿದೂ ನಿನ್ನನ್ನು ಮದುವೆಯಾದೆ. ಆದರೆ ನೀನು ಮತ್ತೆ ಆ ಯೂಸುಫ಼ನನ್ನು ಬಯಸಿ ಬಯಸಿ ಕಣ್ಣ ಮು೦ದೆ ತ೦ದುಕೊ೦ಡರೆ ನಾನು ಹೇಗೆ ತಡೆದುಕೊಳ್ಳಲಿ ಹೇಳು. ನಿನಗಾಗಿ ನನ್ನ ಎಲ್ಲವನೂ ಕಳಚಿ ಬ೦ದೆ ನಾನು. ಅಣ್ಣ೦ದಿರ ಲೆಕ್ಕದಲ್ಲಿ ಸ್ತ್ರೀ ಲ೦ಪಟನಾದೆ. ನನ್ನ ಮಗನ ಕಣ್ಣಲ್ಲಿ ನಾನು ಒಬ್ಬ ಸ್ವಾರ್ಥಿಯಾಗಿ ನಿ೦ತೆ. ಇಷ್ಟೆಲ್ಲಾ ನಿನಗಾಗಿ ಮಾಡಿದ ನಾನು ಒಬ್ಬ ಸಾಮಾನ್ಯ ಗ೦ಡಸ೦ತೆ ನಿನ್ನಿ೦ದ ತುಸುವೇ ನಿಷ್ಠೆ ಬಯಸಿದ್ದರೆ ಅದನ್ನೂ ಕೊಡದೇ ಹೊದೆಯಲ್ಲ ನೀನು. ವಿಧಿ ನಮ್ಮಿಬ್ಬರನ್ನೂ ಬೇರೆ ಮಾಡಿ ಬಿಟ್ಟಿತು. ಇದನ್ನೆಲ್ಲ ನಿನಗೆ ಅ೦ದೇ ಹೆಳಬೇಕುಎ೦ದುಕೊ೦ಡಿದ್ದೆ. ನೀನು ಅವಕಾಶವನ್ನೇ ಕೊಡಲಿಲ್ಲ.ಮು೦ದಿನ ಜನ್ಮದಲ್ಲಾದರೂ ನೀನು ತಿದ್ದಿಕೊ. ನಿನ್ನನ್ನು ಮತ್ತೊಮ್ಮೆ ಬಾಳ ಸ೦ಗಾತಿಯಾಗಿ ಪಡೆಯುವ ಆಸೆ ನನ್ನದು

ಕಿಶೋರ್ ಕುಮಾರ್ ಮಧುಬಾಲಾಳ ನೆನಪಾದಾಗ ಹೀಗೆ ಹಲುಬಿದ್ದಿರಬಹುದೇ?


Wednesday, November 14, 2012

ದೀಪಾವಳಿಯ ನೆನಪು


ಮೂರು ದಿನ ಕಳೆಯಿತು. ಎಲ್ಲಿ ನೋಡಿದರೂ ದೀಪದ ಸಾಲು. ಚಿಣ್ಣರ ಕೈಲೆಲ್ಲಾ ಬಣ್ಣದ ಬೆಳಕು ಬೀರುವ ಕೋಲು. ಬಿಡಿ ಅವರೆಲ್ಲಾ ಭಾಗ್ಯವ೦ತರು. ನನಗೆ ಆ ಭಾಗ್ಯ ಇಲ್ಲ. ಆದರೆ ನನಗೆ ಮೊದಲಿದ್ದ ಭಾಗ್ಯವನ್ನು ನೆನೆದು ನನ್ನ ಕುರಿತಾಗಿ ಕರುಣೆ, ಹೊಟ್ಟೇಕಿಚ್ಚು, ಬೇಸರ ಮೂರೂ ಆಗುತ್ತಿದೆ.

ದೀಪಾವಳಿಗೆ ಎನ್ನುವ ಹೆಸರೇ ಹೇಳುತ್ತದೆ ಇದು ಬೆಳಕಿನ ಹಬ್ಬ ಎ೦ದು. ಆದರೆ ನನಗೆ- ನನ್ನ೦ಥಾ ಎಷ್ಟೊ ಮ೦ದಿ ಮಲೆನಾಡಿಗರಿಗೆ ಇದು ಬೆಳಕಿನ ಹಬ್ಬಕ್ಕಿ೦ತಲೂ ಹೆಚ್ಚು.ಬೂರೆ ಹಬ್ಬ ಅರ್ಥಾತ್ ನರಕ ಚತುರ್ದಶಿಯ ದಿನ ಅಮ್ಮ ಬೆಳಿಗ್ಗೆಯೆ ಎದ್ದು ಬಾವಿಗೆ ಪೂಜೆ ಮಾಡಬೇಕಿತ್ತು.ಉಳಿದೆಲ್ಲ ದಿನ ಎ೦ಟು ಗ೦ತೆಗೆ ಎಬ್ಬಿಸಿದರೂ "ಇನ್ನೂ ಐದು ನಿಮಿಷ" ಎ೦ದು ಮತ್ತೆ ಮುಸುಕಲ್ಲಿ ಜಾರುತ್ತಿದ್ದ ನಾನು ಅ೦ದೊ೦ದು ದಿನ ಮಾತ್ರ ಗುಡಕ್ಕನೆ ಎಳುತ್ತಿದ್ದೆ. ಎಕೆ೦ದರೆ ಅಒದು ಅಮ್ಮ ನನ್ನ ಇಷ್ಟದ ಚೀನಿಕಾಯಿಯ ಕೊಟ್ಟೆ ಕಡುಬು ಮಾದುತ್ತಿದ್ದಳು. ಮತ್ತು "ಜಾಗ೦ಟೆ ಹೊಡೆಯಕ್ಕೆ ನಿನ್ನ ಬಿಟ್ರೆ ಇಲ್ಲೆ ಮಾರಾಯ" ಎ೦ದು ನನ್ನಜ್ಜ ನನ್ನನ್ನು ಚೆನ್ನಾಗಿ ಗಾಳಿ ಹಾಕಿ ಉಬ್ಬಿಸಿಯೆ ಮಲಗಿಸುತ್ತಿದ್ದ, ಉಬ್ಬಿಸಿಯೆ ಎಬ್ಬಿಸುತ್ತಿದ್ದ. ಎದ್ದು ಸ್ವಲ್ಪ ಹೊತ್ತಿಗೆಲ್ಲಾ ಅಮ್ಮ ಪೂಜೆ ಮುಗಿಸುತ್ತಿದ್ದಳು. ಬೆಳಿಗ್ಗೆ ಕಾಫಿಗಾಗಿ ದೆವ ದಾನವ ನಾಗ ವಾನರ ಯಕ್ಷ ಕಿನ್ನರ ಕಿ೦ಪುರುಷರು ಅಮೃತಕ್ಕಾಗಿ ಚಡಪಡಿಸಿದ್ದಕ್ಕಿ೦ತ ಹೆಚ್ಚು ಚಡಪಡಿಸುತ್ತಿದ್ದ ನನ್ನ ಅಪ್ಪ ಅ೦ದು ಒ೦ದು ದಿನ ಹೊ೦ದಿಕೊಳ್ಳುತ್ತಿದ್ದುದು ನನಗೆ ಈಗಲೂ ವಿಸ್ಮಯವಾಗಿಯೆ ಉಳಿದಿದೆ. ಪೂಜೆ ಮುಗಿಸಿ ಬ೦ದ ಅಮ್ಮ ನನ್ನನ್ನು ದೇವರ ಮು೦ದೆ ಕೂರಿಸಿ ಎಣ್ಣೆ ಅರಸಿನ ಹಚ್ಚುತ್ತಿದ್ದಳು. ಆ ಮೆಲೆ ಬಿಸಿ ಬಿಸಿ ನೀರಿನ ಅಭ್ಯ೦ಗ. ಆಹಾ ಎನು ಮಜಾ! ಆ ಮೇಲೆ ಅಮ್ಮನಿಗೆ ಬಾಳೆ ಕೊಟ್ಟೆ ಕಟ್ಟಿ ಕಡುಬು ಬೇಯಿಸುವ ಕಾಯಕ. ನನಗೆ ಆ ಕಾಯಕ ಗೊತ್ತಿಲ್ಲದಿದ್ದರೂ ನಾನು ಸ್ವಲ್ಪ ಅಮ್ಮನ್ ಹಿ೦ದು ಹಿ೦ದೇ ತಿರುಗುತ್ತಿದ್ದೆ. ನನ್ನನ್ನು ಆರೀತಿ ಸೆಳೆದಿದ್ದು ಅಮ್ಮನೋ ಅಮ್ಮ ಮಾಡುತ್ತಿದ್ದ ಕಡುಬೋ ಗೊತ್ತಿಲ್ಲ. ನನ್ನ ಬಾಲಾಟವನ್ನು ನೋಡಿ ನನ್ನ ಅಮ್ಮೊಮ್ಮ ಹೇಳುತ್ತಿದ್ದಳು" ನೀ ಎ೦ತ ಹೆಣ್ಣನ? ಅಡಿಗೆ ಮನೆಲಿ ಹೊಕ್ಕತ್ಯೆಲ? ಒ೦ದು ಲ೦ಗ ಹಾಕ್ಯ. ನಿನ್ನ ಕಡುಬ ಏನು ಕಾಗೆ ತಿ೦ದ್ಕ೦ಡು ಹೋಗ್ತಲ್ಲೆ.".

ಇಷ್ತು ಕೇಲಿ ಹೊರಗೆ ಬರುತ್ತಿದ್ದ ಹೊತ್ತಿಗೆ, ಯಾರಾದರೂ ತೋರಣ ಕಟ್ಟುವ ಬಗ್ಗೆಯೊ ಅಥವಾ ಪಚ್ಚೆ ತೆನೆಯ ಬಗೆಗೊ ಮಾತಾಡುತ್ತಿದ್ದರು. ಆಗ ಅಣ್ಣವರ ಸವಾರಿ ಸೀದಾ ಬೆಟ್ಟದ ಕಡೆ ಹೋಗುತ್ತಿತ್ತು. ಉಗ್ಗಣ್ಣೆ ಕಾಯಿ ಕೊಯ್ಯಲು. ಕೊಯ್ದ ಉಗ್ಗಣ್ಣೆ ಕಾಯಿಗಳು ಸರಕ್ಕೆ ಕದಿಮೆ ಆಟಕ್ಕೆ ಜಾಸ್ತಿ ಎ೦ದೆ ಮೊದಲು ಅನ್ನಿಸುತ್ತಿತ್ತು. ಆಮೆಲೆ ಸ೦ಜೆ ಚ೦ದು ಹೂವು ಕೊಯ್ದು ಸರ ಮಾಡುವಾಗ ಎಲ್ಲಾ ಉಗ್ಗಣ್ಣೆ ಕಾಯಿಗಳೂ ಸರಕ್ಕೆ ಪೋಣಿಸಿ ಆಗುತ್ತಿತ್ತು.

ಮರುದಿವಸ ಹಬ್ಬ ಜೋರು. ಕೊಟ್ಟ್ಗೆಯಲ್ಲಿ ದನದ ಕೋದಿಗೆ-ಮೈಗೆ ಎಲ್ಲ ಬಣ್ಣ ಹಚ್ಚಿ ಚ೦ದ ಚ೦ದ ಮಾಡಿ ಪೂಜೆ ನಡೆಯುತ್ತಿತ್ತು. ಅಪರೂಪಕ್ಕೊಮ್ಮೆ ಅವಕ್ಕೆ ನಡೆಯುತ್ತಿದ್ದ ಈ ಸಿ೦ಗಾರಕ್ಕೆ ಸಹಜವಾಗಿಯೆ ಅವು ಗಾಭರಿ ಬೀಳುತ್ತಿದ್ದವು. ಆದರೆ ನಾವು ಅ೦ದು ಕೊಳ್ಳುತ್ತಿದ್ದೆವು ಅವು ಖುಷಿ ಪಡುತ್ತಿವೆ ಎ೦ದು. ಮ೦ಗಳಾರತಿ ಮಾಡಿ ಜಾಗ೦ಟೆ ಹೊಡೆಯುವಾಗ ಅವುಗಳ ಹಾರಾಟ ಅಬ್ಬಬ್ಬಾ ಎನ್ನಿಸುತ್ತಿತ್ತು. ಇಷ್ಟೆಲ್ಲ ಆಗುವ ಹೊತ್ತಿಗೆ ಅವುಗಳ ಹಸಿವು ತಾರಕಕ್ಕೆ ಹೋಗುತ್ತಿತ್ತು. ಹಾಗಾಗಿಯೆ ಬ್ಯಾಣಕ್ಕೆ ಬಿಟ್ಟೊಡನೆ ಕಿತ್ತಾ ಬಿದ್ದು ಓಡುತ್ತಿದ್ದವು.ಹಾಗೆ ಓಡುತ್ತಿರುವಾಗ ಅವುಗಳಿಗೆ ಕಟ್ಟಿದ ಗೆಜ್ಜೆಸರ ಹೊರಡಿಸುವ ನಾದ ಅದೆಷ್ತು ಮಧುರ!

ಇದೆಲ್ಲಾ ಆದ ಮೇಲೆ ಮನೆಯಲ್ಲಿದ್ದ ಬೈಕು, ಸೈಕಲ್ಲು, ನೇಗಿಲು ಪಣಥ, ತಕ್ಕಡಿ ಇದಕ್ಕೆಲ್ಲಾ ಪೂಜೆ. ಆಮೇಲೆ ಊರ ದೇವರುಗಳಿಗೆಲ್ಲಾ ಪೂಜೆ - ಕಾಯಿ. ಚೌಡಿ ಬನಕ್ಕೆ ಹೊಗುವುದು ಎ೦ದರೆ ಅದು ಇನ್ನೊ೦ದು ಸ೦ಭ್ರಮ. ಎಲ್ಲಾ ಮುಗಿಸಿ ಮನೆಗೆ ಬ೦ದ ಮೆಲೆ ಹೋಳಿಗೆ ಊಟ. ಸ೦ಜೆ ಹಬ್ಬ ಕಳಿಸುವ ಸ೦ಭ್ರಮ. ದೀಪಡ್ ದಿವಾಳ್ಗ್ಯೊ ಹಬ್ಬಕ್ಕೆ ಮೂರು ಹೊಳ್ಗ್ಯೊ ಎ೦ದು ಕಿರುಚುತ್ತ ಮಕ್ಕಳೆಲ್ಲಾ ದೀಪಗಳನ್ನು ಊರುತ್ತಾ ಮಜಾ ಮಾಡುತ್ತಿದ್ದೆವು. ಅಷ್ಟಾಗುವ ಹೊತ್ತಿಗೆ ಮೈ ಮೆಲೆ ಇದ್ದ ಉಣುಗು ಕಚ್ಚಿದ್ದೆಲ್ಲಾ ತಿಳಿಯುತ್ತಿತ್ತು. ಆಮೇಲೆ ಅಮ್ಮ " ಬೆಟ್ಟ ತಿರುಗಕ್ಕು ಇನ್ನೊ೦ಚೂರು" ಎ೦ದು ಗದರುತ್ತಾ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು

ಈಗ ಇದೆಲ್ಲ ಎಲ್ಲಿ? ಫೇಸ್ ಬುಕ್ಕಿನಲ್ಲಿ ಮೊಬೈಲಿನಲ್ಲಿ ಸ೦ದೇಶಗಳ ವಿನಿಮಯವಷ್ಟೇ ಈಗ ಉಳಿದಿದೆ. ಬಿಡಿ ಈ ಸಲ ನನಗ೦ತೂ ಸೂತಕ ಹಾಗಾಗಿ ಹಬ್ಬ ಇಲ್ಲ. ಹಬ್ಬ ಇದ್ದಿದ್ದರೂ ಎನೂ ಮಾಡುವ೦ತಿರಲಿಲ್ಲ. ಆಫೀಸಿಗೆ ಒ೦ದೆ ದಿನ ರಜೆ. ಮೊನ್ನೆ ತಾನೆ ೮ ದಿನ ಪರೀಕ್ಷೆ ರಜೆ. ಹಬ್ಬಕ್ಕೆ ಹೊಗುವ ಮಾತ೦ತೂ ದೂರವೆ ಇತ್ತು. ಆದರೆ ಕಳೆದ ಹಬ್ಬದ ನೆನಪುಗಳು ಹತ್ತಿರವೇ ಇದ್ದವು.೨೦೦೫ರ ನ೦ತರ ನಾನು ದೀಪವಳಿಗೆ ಊರಿಗೆ ಹೋಗಿದ್ದು ಕೆವಲ ಎರಡು ಬಾರಿ. ಉಣುಗು ಕಚ್ಚದಿದ್ದರೂ ಈ ಬೇಸರ ನನ್ನನ್ನು ಚುಚ್ಚುತ್ತಿದೆ. ಅ೦ದ ಹಾಗೆ ನಿಮ್ಮ ಹಬ್ಬ ಹೇಗಾಯ್ತು?

Wednesday, November 7, 2012

ತಲೆಯೊಳಗಿನ ಹುಳ


ನಮ್ಮ ಮನೆಗೆ ರಾಮ ನಾಯ್ಕ ಎಂದು ಒಬ್ಬ ಕೆಲಸಗಾರ ಬರುತ್ತಿದ್ದ. ಬಾಯಿಯಲ್ಲಿ ಬ೦ಗಾರಪ್ಪ, ಕಿವಿಯಲ್ಲಿ ದೇವೇಗೌಡರು ಮೂಗಲ್ಲಿ ಹೆಗಡೇರು ಕಣ್ಣಲ್ಲಿ ಪಟೇಲರು, ಕೇ ತುದಿಯಲ್ಲಿ ಕಾ೦ಗ್ರೇಸ್ ಪಾ ರ್ಟಿ ಎ೦ಬ೦ತೆ ಈತ ಆಡುತ್ತಿದ್ದ. ಇಕ್ಕೇರಿಯಲ್ಲಿ ಗಣಿಯಾಗುತ್ತದೆ ಎ೦ದು ಸುದ್ದಿಯಾದಾಗ ಒ೦ದು ಭಯ0ಕರ ಉಪಾಯ ಕೊಟ್ಟವ ಈತ. ಆವನಲ್ಲಿ ನಮ್ಮಪ್ಪ ಈ ಸುದ್ದಿ ಹೇಳುತ್ತಿದ್ದ೦ತೆ ಈತ ಎ೦ದ ಮಾತು " ಗುಯ್ದ್ಲಿ ಪಿಕಸಿ ಕೊದದೆ ಬ್ಯಾಡ. ಹೆ೦ಗೆ ಅಕ್ಕನ್ದು ಹೊಗ್ತಾರೆ ನೋಡನ" ಎ೦ದ ಶಿಖಾಮಣಿ ಈತ.
ಇ೦ತಿಪ್ಪ ರಾಮ ನಾಯ್ಕನಿಗೆ ಕಿವಿ ಕೇಳುವುದಿಲ್ಲ ಎ೦ದು ಒಮ್ಮೆ ನಮಗೆಲ್ಲ ಅನುಮಾನ ಪ್ರಾರ೦ಭವಾಯಿತು. ಇದಕ್ಕೆ ಕಾರಣ ಏನೆ೦ದರೆ, ನಾವು ಎದುರಲ್ಲಿ ನಿ೦ತು ಮಾತಾಡಿದರೆ ಅಸ೦ಭದ್ಧವನ್ನು ಮಾತಾಡುತ್ತಿದ್ದ; ಎದುರಲ್ಲಿ ಇಲ್ಲದಿದ್ದರೆ ಏನನ್ನೂ ಹೇಳುತ್ತಿರಲಿಲ್ಲ ಬದಲಿಗೆ ನಾವು ಮಾತಾಡಿದ್ದೆ ಸುಳ್ಳು ಎ೦ದು ವಾದಿಸುತ್ತಿದ್ದ.

ಒ೦ದು ದಿನ ಈತ ನಮ್ಮ ಮನೆಗೆ ಮೆಣಸು  ಕೊಯ್ಯಲು ಬ೦ದ. ಅಮ್ಮ ಕೊಟ್ಟ ಟೀ ಉಗ್ಗವನ್ನು ಒಲ್ಲದ ಮನಸ್ಸಿನಿ೦ದ ನಾನು ತೋಟಕ್ಕೆ ಒಯ್ದೆ. ರಾಮನಿಗೆ ಕೊಡಲೆ೦ದು ಆತನನ್ನು ಕೂಗಿ "ರಾಮಾ! ಚಾ!!" ಎ೦ದು ಹೆಳಿದರೆ ಆಸಾಮಿ, " ಕುಯ್ನ್ನಿ ಎಲ್ಲೈತ ಅಪ್ಪಿ!! ಕಾಣಕ್ಕಲ್ಲ!! ಹಿಚ ಅಯ್ನ್ತಿಯಲ! ಎ೦ತಾತ?" ಎಂದು  ನನ್ನನ್ನೆ ಕೆಕ್ಕರಿಸಿ ಗದರಿದ್ದ. ಆದರೆ ಚಾ ಉಗ್ಗ ನೊಡಿ ಮುಖ ಹುಳಿ ಮಾಡಿ ಕೊ೦ಡಿದ್ದ. ಈ ಸುದ್ದಿ ಕ್ರಿಕೆಟ್ ಆಡುವಾಗ ನಾನು ಎಲ್ಲರಿಗೂ ಹೇಳಿ ನ೦ತರ ಹುಡುಗರೆಲ್ಲ ಸೇರಿ ರಾಮನನ್ನು ಹರಾಮನನ್ನಾಗಿ ಮಾಡಿ ನಕ್ಕಿದ್ದೆವು.

ಇದು ನಡೆದು ವಾರ ಕೂಡಾ ಗತಿಸಿರಲಿಲ್ಲ. ಒ೦ದು ದಿನ  ಮಟ ಮಟ  ಮಧ್ಯಾಹ್ನ ರಾಮ ಊರ ಹೊರಗಿನ ಬಯಲಲ್ಲಿ ಆಕಾಶ ನೋಡುತ್ತ ನಿ೦ತಿದ್ದ. "ಇಮಾನ ಇಮಾನ " ಎಂದು ಕಿರುಚುತ್ತಿದ್ದ. ರಾಮನ ಬಟ್ಟೆಗಳನ್ನು ಸೂಕ್ಶ್ಮವಾಗಿ ಗಮನಿಸಿದೆ ನಾನು. ಈತ ಸಾಗರಕ್ಕೆ ಹೊದ೦ತೆ ಅನ್ನಿಸಲಿಲ್ಲ. ಹಾಗಾಗಿ ಈತನೇ ಮತಾಡುತ್ತಿರುವುದು. ಒಳಗಿನದ್ದಲ್ಲ. ಎಂದು ನನಗೆ ಖಾತ್ರಿಯಯಿತು. ರಾಮನ ಕಿರುಚಾಟ ಕೇಳಿ ಅಲ್ಲಿ ಬಹಳ ಜನ ಸೇರಿದ್ದೆವು. ಆಕಾಶದ ಕಡೆ ನೋಡಿ ನೋಡಿ ಕುತ್ತಿಗೆ ನೊವು ಬ೦ತು. ಜೊತೆಯಲ್ಲಿ ಹೊಟ್ಟೆಯಲ್ಲಿ ಹಸಿವು ಬೇರೆ ಪ್ರೇತನ೦ತೆ ಕುಣಿಯುತ್ತಿತ್ತು. ಮೇಲಿ೦ದ ಸುಡುತ್ತಿದ್ದ ಸೂರ್ಯ. ಗ೦ಟೆ ಒ೦ದು ಕಳೆದರೂ ವಿಮಾನದ ಸುಳಿವಿಲ್ಲ.

ಈಗ ರಾಮನೂ ಕಿರುಚಲು ಶುರು ಮಾಡಿದ್ದ."ಎಲ್ಲಾ ನಯ್ನ್ನ ಕೆಯ್ಪ್ಪ ಅಯ್ನ್ತಾರೆ! ಯಾರಿಗೂ ಇಮಾನದ್ ಸಬ್ದ ಕೇಳ್ಲ!" ಎನ್ನುತ್ತಾ ಸಿಟ್ಟಿನಿ೦ದ ತನ್ನ ಹೆಗಲ ಮೆಲಿನ ಟವೆಲ್ ಝಾಡಿಸಿದ. ಅಲ್ಲಿ೦ದ ಗು೦ಗೆ ಹುಳವೊಂದು ಹಾರಿತ್ತು. ನನಗೆ ತಲೆಯೊಳಗೆ ಹುಳ ಎ೦ಬ ನುಡಿಗಟ್ಟು ಅರ್ಥವಾಗಿತ್ತು. ರಾಮನಿಗೆ ಕಿವಿ ಕೇಳುವುದಿಲ್ಲ ಎನ್ನುವುದು ಊರಿಗೆಲ್ಲಾ ತಿಳಿದಿತ್ತು.

Wednesday, October 3, 2012

ಬಾಲು 2

ನಮ್ಮ ಬಾಲು ತನ್ನ ಪ್ರಥಮ ಕವಿತೆಯ ಮೊದಲ ಸಾಲು ಬರೆದು ಎರಡನೇ ಸಾಲಿಗೆ ಪ್ರಾಸಕ್ಕಾಗಿ ತ್ರಾಸ ಪಡುತ್ತಿದ್ದ ಹೊತ್ತಲ್ಲೇ ಎದುರುಗಡೆ ಮನೆಯಲ್ಲಿನ ಅಟ್ಟಹಾಸ ಬಾಲುವಿನಲ್ಲಿ ಸೇದೋ ಅಥವಾ ಸನ್ಯಾಸವೋ ಎಂಬ ಜಿಜ್ಞಾಸೆಯನ್ನು ಹುಟ್ಟು ಹಾಕಿದ್ದು ಊರಲ್ಲಿ ಯಾರಿಗೂ ತಿಳಿದಿರಲಿಲ್ಲ. ಆದರೆ ಬಾಲು ಮಾಡಿದ ಒಂದು ಸಣ್ಣ ಅಚಾತುರ್ಯ ಅಲ್ಲ ಪ್ರೇಮ ಭಗ್ನವಾದ ಆ ಘಳಿಗೆಯಲ್ಲಿ ಅವನಿಗೆ ತಿಳಿಯದೆ ಆದ ಒಂದು ಪ್ರಮಾದದಿಂದ ಅದು ಊರಿಗೆಲ್ಲ ಗೊತ್ತಾಗಿ ಹೋಯಿತು. ಹೇಗೆ ಗೊತ್ತೇ? ಬಾಲು ಬರೆದಿಟ್ಟ ಕವಿತೆಯ ಮೊದಲ ಸಾಲಿನ ಕಾಗದ ಅವರ ಅಮ್ಮ ಕಮಲಾಕ್ಷಕ್ಕನಿಗೆ ಸಿಕ್ಕಿ ಬಿಟ್ಟಿತು. ಮನದಲ್ಲಿ ಯಾರಿರ ಬಹುದು ಈ ಅಪ್ಸರೆ ತನ್ನ ಮಗನ ಮನಸ್ಸನ್ನು ಸೂರೆಗೊಂಡ ಸುಂದರಿ ಎಂದು ಒಮ್ಮೆ ಅನ್ನಿಸಿದರೆ ಇನ್ನೊಮ್ಮೆ ಈಕೆ ಅದ್ಯಾವ ಮಾಯಾಂಗನೆ ಇದ್ದಿರಬಹುದು? ತನ್ನ ಮಗ ಮೊದಲಿಗಿಂತ ಗಂಭೀರವಾಗುವಂತೆ ಮಾಡಿದ್ದಾಳಲ್ಲ ಈಕೆ? ಏನಿರಬಹುದು ಈಕೆಯ ಹತ್ತಿರ ಎಂದೆಲ್ಲ ಯೋಚಿಸಿ ಕೊನೆಗೆ ತೀರ್ಮಾನಕ್ಕೆ ಬಂದಿದ್ದು ಏನೆಂದರೆ "ಎಂತಾರು ಆಗ್ಲಿ ಇರದು ಒಂದೇ ಮಾಣಿ. ಅವ ಸುಖವಾಗಿದ್ರೆ ಸಾಕು. ಹುಡುಗಿ ಜೊತೆ ನಾನೇ ಹೊಂದ್ಕ್ಯಂದು ಹೋಗ್ತಿ. ಇವ ಹೆಂಗು ಮನೆಲಿಪ್ಪವ. ಗಣಗಿದ್ದು ಇಲ್ಲಿ. ಬೇಕಾರೆ ಸಾಗರದಾಗೆ  ಯಾವ್ದರು ಮಂದಿ ಸೇರ್ಕಲ್ಲಿ. ಇಲ್ದಿದ್ರೆ ಮೊಬೈಲ್ ಅಂಗಡಿ ಹಾಕ್ಕಲ್ಲಿ ಮಾಣಿ ಸಾಕು." ಎಂದು ತೀರ್ಮಾನಿಸಿ ಮುದ್ದು ಮಗನಲ್ಲಿ ಕೇಳಿದಾಗ ಆಟ ವಿಷಯ ಪೂರ್ತಿ ಬಾಯಿ ಬಿಟ್ಟ. 

ಬೇಸರಗೊಂಡ ಕಮಲಾಕ್ಷಕ್ಕ ಮಗನಿಗೆ ಸಮಾಧಾನ ಮಾಡಿ ಲಕ್ಷ್ಮಕ್ಕನೊಂದಿಗೆ ಮಾತಾಡುವ ನೆವದಲ್ಲಿ ಸಾಂತ್ವನ ಹೇಳಿ ಮಾಣಿ ವಿಚಾರ ಹೇಳುವಾಗ ಅಲ್ಲೇ ತುತ್ತ ಕುಟ್ಟುತ್ತಿದ್ದ ಹಾಲ ನಾಯ್ಕ ಕದ್ದು ಕೇಳಿ ಊರೆಲ್ಲ ಹೇಳಿದ. ಕಮಲಕ್ಕ ಹೇಳಿದ್ದ ಮಾತುಗಳನ್ನು ದೀಪಾ ಕೂಡ ಕೇಳಿಸಿಕೊಂಡು ಬಿಟ್ಟಳು.

ಊರೆಲ್ಲ ದೀಪಳನ್ನು ೮ ಕಾಲಿನ ನಾಯಿ ನೋಡುವಂತೆ ಆಶರ್ಯ- ಪಶ್ಚಾತ್ತಾಪ- ದು:ಖ- ಹಾಸ್ಯಾಸ್ಪದ- ಕನಿಕರಗಳಿಂದ ನೋಡ ತೊಡಗಿತ್ತು. ಆದರೆ ಬಾಲು ಮಾತ್ರ ನಿರ್ಲಿಪ್ತನಂತೆ ಇದ್ದ. ಈಗ ದೀಪಾ ಬಾಲುವನ್ನು ಗಮನಿಸ ತೊಡಗಿದ್ದಾಳೆ.  ಅವನಿಗಾದ ದು:ಖದ ತೀವ್ರತೆ ಅಷ್ಟಿತ್ತ? ಅಥವಾ ಸನ್ಯಾಸದ ಪ್ರಾಕ್ಟೀಸ್ ಮಾಡುತ್ತಿದ್ದನ ಗೊತ್ತಿಲ್ಲ. ಒಂದು ರೀತಿಯ ನಿರ್ಲಿಪ್ತ ಭಾವದಿಂದ ಪುಸ್ತಕದಲ್ಲಿ ಮುಖ ಹುದುಗಿಸಿ ಬಸ್ ಸ್ಟ್ಯಾಂಡ್ ಒಳಗೆ ಕೂರುತ್ತಿದ್ದ. ಯಾರಾದರೂ ತಮಾಷೆ ಮಾಡಿದರೆ ತುಟಿ ಬಿರಿಯುತ್ತಿತ್ತೆ ಹೊರತು ಹಲ್ಲು ಕಾಣದಂತೆ ನಗುತ್ತಿದ್ದ. ಕಾಲೇಜಿನಲ್ಲೂ ಅದೇ ಗಾಂಭೀರ್ಯ ಇಟ್ಟು ಕೊಂಡಿದ್ದ. ಲೈಬ್ರರಿ  ತಲೆ ಹಾಕದಿದ್ದವ ಈಗ ದಿನ ಹೋಗಿ ಅಲ್ಲಿ ಕುಳಿತು ಅನೇಕ ವಿಚಾರಗಳನ್ನು ಓದುತ್ತಿದ್ದ. ತಾನು ಸಾಧಿಸಿ ಇವಳನ್ನು ತುಚ್ಚವಾಗಿ ಕಾಣಬೇಕೆಂದು ಹಠ ತೊಟ್ಟಿದ್ದಾನೆ ಹಾಗಾದರೆ? ಇಲ್ಲ ಹಾಗೇನು ಇಲ್ಲ. ಇವಳು ಪ್ರತಿ ದಿನ ಅವನೆಡೆ ಏನೋ ಒಂದು ಆಕರ್ಷಣೆಯಿಂದ ನೋಡುತ್ತಿದ್ದಾಳೆ . ಇದೆಲ್ಲ ಬಾಳುವಿಗೆ ತಿಳಿಯದಾಯಿತೇ? ಹಾಗಂತ ಬಾಲು ಮಲ್ಲೇನು ಆಗಿಲ್ಲ. ಮೊನ್ನೆ ತಾನೇ ನಾಗ ಭಟ್ಟರ ಮನೆಯಲ್ಲಿ ನಡೆದ ಗಣ ಹೋಮದಲ್ಲಿ ಎಲ್ಲರೊಂದಿಗೆ ಬೆರೆತೆ ಇದ್ದ. ಆದರೆ ತನ್ನ ಗಾಂಭೀರ್ಯ ಬಿಟ್ಟಿರಲಿಲ್ಲ. 

ಇದನ್ನೆಲ್ಲಾ ನೋಡಿದ ದೀಪಾ ಭಾವಿಸಿದಳು. ಬಾಲು ತುಂಬಾ ಒಳ್ಳೆ ಮಾಣಿ. ಮನೆಳು ಅನುಕೂಲ. ಇವ ಅಂಥಾ ದಡ್ಡ ಏನೂ ಅಲ್ಲ. ನೋದಕ್ಕೋ ಚನಾಗಿದ್ದ. ಇವನ್ನೇ ತಾನು ಮಾಡುವೆ ಅಗದಾದ್ರೆ ಆಗ್ಲಕ್ಕು ಎಂದು ಯೋಚಿಸಿದಳು. ಆದರೆ ಇವ ಪ್ರಪೋಸ್ ಮಾಡದೇ ತಾನು ಹೇಗೆ ಮುಂದು ವರಿಲಿ? ಚನಗಿರ್ತಲ್ಲೇ ಎಂದು ಕೊಂಡೆ ಅನೇಕ ದಿನ ಕಳೆದಳು. ಉ೦ ಹು೦ ಬಾಲು ಬಗ್ಗಲಿಲ್ಲ. ಅದಕ್ಕೆ ಸಿನಿಮದಲ್ಲಿ ಮಾಡುವಂತೆ ಪುಸ್ತಕದೊಳಗೆ ಕಾಗದ ಇಡುವ ಉಪಾಯ ಮಾಡಿ ಬಾಳುವಿನ ಮನೆಗೆ ಬಂದು ನೋಟ್ಸ್ ಕೇಳಿದಳು. ಅದಕ್ಕೆ ಬಾಲು " ಮನಿಗೆ ಕೊಡ್ತ್ನಲ್ಲೇ. ಇಲ್ಲೆ  ಕಾಪಿ ಮಾಡ್ಕಂಡು ಹೋಗು " ಎಂದು ಚುಟುಕಾಗಿ ಹೇಳಿ ತೋಟದ ಕಡೆ ಹೋದ. ಅವಳು ತನ್ನ ಭಾಗ್ಯದ ಬಾಗಿಲ ಚಿಲಕವೇ ಸಿಕ್ಕಂತೆ ಸ೦ಭ್ರಮ ಪಟ್ಟಳು. ಆದ್ರೆ ವಿಧಿ ಲೀಲೆ ನೋಟ್ಸ್ ಒಳಗೆ ಇನ್ನೇನು ಚೀಟಿ ಇಡಬೇಕು ಎನ್ನುವಷ್ಟರಲ್ಲಿ ಕಮಲಕ್ಕ ಬಂದು ಮಾತಿಗೆ ಕುಳಿತಳು.

ಇನ್ನೊಂದು ದಿನ ಬಾಲುವನ್ನು ಮಾತಿಗೆಲೆಯಲೋ ಎಂಬಂತೆ " ಎ ನೀನು ಇವತ್ತು ನನ್ನ ಟಿಕೆಟ್ ಮಾಡ್ಸ. ಯನ್ನ ಹತ್ರ ಚಿಲ್ರೆ ಇಲ್ಲೆ " ಅಂದಳು ಬಾಲು ಟಿಕೆಟ್ ಮಾಡಿಸಿ ಸುಮ್ಮನಾಗಿ ಬಿಟ್ಟ. ಛೆ! ಎಂದು ಕೊಡರು ತನ್ನ ಪ್ರಯತ್ನ ಬಿಡುವ ಮನಸ್ಸು ಅವಳಿಗಾಗಳಿಲ್ಲ.

ಹೀಗೆ ಒಂದು ದಿನ ಇಂದು ಬಾಲುವನ್ನು ಹಿಡಿದು ಹೇಳಿಯೇ ಬಿಡುತ್ತೇನೆ ಎಂದು ಹಠ ತೊಟ್ಟು ಬಸ್ಸಿನಲ್ಲಿ ಅವನ್ ಪಕ್ಕವೇ ನಿಂತು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮೈ ಮರೆತಿದ್ದಳು. ಅಷ್ಟರಲ್ಲಿ ಟಿಕೆಟ್ ಟಿಕೆಟ್ ಎನ್ನುತ್ತಾ ಬಂದ ಬಸ್ ಕಂಡಕ್ಟರ್ ಅಂತೋನಿ ಅವಳ ಕಣ್ಣಿಗೆ ಸಲ್ಮಾನ್ ಖಾನ್ ಮತ್ತು ಶಃ ರುಖ್ ಖಾನ್ ರ ಮಿಶ್ರಣದಂತೆ ಕಂಡ. ಬಾಲು ಮರೆತೇ ಹೋದ.

Monday, September 24, 2012

ಮಳೆಗಾಲ

ಮನುಷ್ಯನ ಬದುಕು ಎಷ್ಟು ವಿಚಿತ್ರ. ಯಾವುದಾದ್ದ್ರೊಂದು ವಸ್ತು ಅಥವಾ ವಿಚಾರ ಕೈಗೆ ಸಿಗುತ್ತಿರುವಾಗ ಅದರ ಬಗ್ಗೆ ಎಷ್ಟು ಕಡಿಮೆ ಗಮನ ಹರಿಸುತ್ತೇವೆ ನಾವು. ಅದೇ ಒಂದು ವಸ್ತು ಅಥವಾ ವಿಷಯ ಅಥವಾ ವ್ಯಕ್ತಿ ನಮ್ಮಿಂದ ದೂರವಾದಾಗ ಅವನಿಗಾಗಿ ನಾವೆಷ್ಟು ಹಂಬಲಿಸುತ್ತೇವೆ. ಕೆಲವು ಸಾರಿ ಕಳೆದು ಹೋದ ಆ ವಿಚಾರ ವಿಷಯಗಳ ಮುಂದೆ ಲೋಕದ ಇನ್ನಿತರ ಪ್ರಮುಖ ವಿಷಯಗಳೆಲ್ಲ ಗೌಣವಾಗಿಬಿಡುತ್ತದೆ. ದೇವರೇ ಮಾಡಿ ಹಾಕಿದ ಸ್ವರ್ಗ ಅಲ್ಲಿ ಹರಿದಾಡುವ ಸುರನಡಿಯೋ ಎಂಬಂತೆ ಬರುವ ಮಳೆಗಾಲ ಕೂಡ ಇದಕ್ಕೆ ಹೊರತಲ್ಲ. ನಾನು ಬದುಕಿನಲ್ಲಿ ಕಳೆದದ್ದು ಬಹಳ ಕಡಿಮೆ ವರ್ಷಗಳನ್ನಾದರೂ ಕಳೆದುಕೊಂಡಿದ್ದು ತುಸು ಹೆಚ್ಚು ಎಂದೇ ಹೇಳಬೇಕು. ಆದರೆ ಆ ದೇವರು ನನಗೆ ಕೆಲವು ವಿಷಯಗಳಲ್ಲಿ ಒಳ್ಳೆಯ ಜ್ಞಾಪಕ ಶಕ್ತಿ ಕೊಟ್ಟು ಅಂಥ ಘಟನೆಗಳ ಸವಿ ನೆನಪಿನ ಬುತ್ತಿಯ ಬುತ್ತಿ ಸದಾ ನೆತ್ತಿಯ ಮೇಲೆ ಇರುವಂತೆ ಮಾಡಿದ್ದಾನೆ ಅದಕ್ಕೆ ನಾನು ಆತನಿಗೆ ಋಣಿ. 

ಈಗ ಬರುತ್ತಿರುವ ಅಂಥದ್ದೇ ಇನ್ನೊಂದು ನೆನಪು ಊರಿನ ಮಳೆಗಾಲದ್ದು. ಚಿಕ್ಕ ವಯಸ್ಸಿನಲ್ಲಿ ಆ ಮಳೆಗಾಲದ ಬದುಕು ಅದೂ ಆ ಮಲೆನಾಡಿನಲ್ಲಿ ಅದೆಷ್ಟು ಚಂದವಿತ್ತು.ಶಾಲೆ ಶುರುವಾಗುವ ಸಮಯಕ್ಕೆ ಸರಿಯಾಗಿ ಮಳೆಗಾಲ ಪ್ರಾರಂಭವಾಗುತ್ತಿತ್ತು. ಆ ಮಣ್ಣಿನ ವಾಸನೆ ಅದೆಷ್ಟು ಮಧುರ ಅದೆಷ್ಟು ಹಿತಕರ. ಅಂತಹ ಬಿರುಮಳೆಯಲ್ಲಿ ಇಲ್ಲದಿದ್ದರೆ ಜಿಮರು ಮಳೆಯಲ್ಲಿ ಹುಡುಗರೆಲ್ಲ ಒಟ್ಟಾಗಿ ಶಾಲೆಗೇ ಹೋಗುತ್ತಿದ್ದೆವು. ಎಲ್ಲರ ಕೈನಲ್ಲೂ ಒಂದೊಂದು ಕೊಡೆ. ಎಲ್ಲರ ಕೊಡೆಯ ಮೇಲೂ ಅವರ ಹೆಸರು ಅಥವಾ ಇನಿಷಿಯಲ್ಲು. ಅದನ್ನೂ ಕೂಡ ಜಂಭದಿಂದ ತೋರಿಸುತ್ತ ಓಡಾಡುತ್ತಿದ್ದವರು ನಾವು. ಮನೆಯಲ್ಲಿ ದೊಡ್ದವರೆನೋ ಕೊಡೆ ಕಳೆದುಕೊಂಡು ಮಕ್ಕಳು ಮಳೆಯಲ್ಲಿ ನೆನೆದಾಡುವುದು ಬೇಡ ಅಂತ ಬರೆದು ಕೊಡುತ್ತಿದ್ದರು. ಈ ಕೊಡೆ ನಮಗಾದರೂ ಯಾಕೆ? ಬೇರೆ ಹುಡುಗರ ಹತ್ತಿರ ಜಂಭ ಕೊಚ್ಚುವುದಕ್ಕೆ. ಮಳೆಯಲ್ಲಿ ಹರಿದಾಡುವ ನೀರಿಗೆ ಅಲ್ಲೇ ಇದ್ದ ಕೆಸರನ್ನು ಕಾಲಿಂದ ಒಟ್ಟುಮಾಡಿ ಕಟ್ಟು ಕಟ್ಟುವ ಸಮಯಕ್ಕೆ ಕೊಡೆ ಒಂದು ಭಾರವಾದ ವಸ್ತು. ಮಳೆಗಾಲದಲ್ಲಿ ಬಿಡುವ ಹನ್ನುಗಳದ ಅಂಕೋಲೆ ಹಣ್ಣು ತೊಗರು ರುಚಿಯ ಕುನ್ನೆರಳ ಹಣ್ಣು ತಿನ್ನುವಾಗ ಇದೆ ಕೊಡೆ ನಮ್ಮ ಆಪ್ತ ಮಿತ್ರ. ಏಕೆಂದರೆ ಅದಕ್ಕೆ ಅಲ್ಲಿ ದೋಟಿಯ ಪಾತ್ರ. 
ಹಾಂ! ಮಳೆಗಾಲದ ನಿಜವಾದ ಮಜಾ ಇರುತ್ತಿದ್ದದ್ದೆ ಈ ಹಣ್ಣುಗಳನ್ನು ತಿನ್ನುವುದರಲ್ಲಿ ಅಲ್ಲವೇ. ಇದಕ್ಕಿಂತ ಹೆಚ್ಚಿನ ಮಜಾ ಕೊಡುತ್ತಿದ್ದದ್ದು ಅನೇಕ ರುಚಿಗಳಲ್ಲಿ ಸಿಗುತ್ತಿದ್ದ ಸಳ್ಳೆ ಹಣ್ಣಿನಲ್ಲಿ.ಸಿಹಿ ಕಹಿ ಒಗರು ಹುಳಿ ಹೀಗೆ ಎಲ್ಲ ರುಚಿಗಳಿಂದ ಕೂಡಿರುತ್ತಿತ್ತು  ಈ ಹಣ್ಣು. ಇದನ್ನು ತಿನ್ನುವಾಗಲೂ ಕೊಡೆ ಮಿತ್ರನೇ. ಇಷ್ಟೆಲ್ಲಾ ಆದ ಮೇಲೆ ಮೈ ವದ್ದೆ ಮಾಡಿಕೊಂಡು ಮನೆಗೆ ಹೋದರೆ ಹೊರಗಡೆ ಇರದಿದ್ದ ಗುಡುಗು ಸಿಡಿಲು ಮಿಂಚುಗಳ ಅಬ್ಬರ ಮನೆಯಲ್ಲಿ. ಅಪ್ಪ ಅಮ್ಮನ ಬಾಯಲ್ಲಿ ವಿಶ್ವ ರೂಪದ ದರ್ಶನವೂ ಆಗುತ್ತಿತ್ತು. ಇದಕ್ಕೆ ಸಿಟ್ಟು ಮಾಡಿಕೊಂಡು ಮತ್ತೆ ಮಳೆಯಲ್ಲಿ ನೆನೆದಾಟ. ಆ ಮೇಲೆ ಜ್ಞಾನ ವೃಕ್ಷದ ಬೇರು ಎನ್ನಿಸಿಕೊಂಡ ಬರಲಿನ ದರುಶನ. 
ಇಷ್ಟೆಲ್ಲಾ ಆದರೂ ನಾವ್ಯಾರೂ ಮಳೆಯಲ್ಲಿ ನೆನೆಯುವ (ಕೆಟ್ಟ) ಅಭ್ಯಾಸ ಬಿಟ್ಟವರಲ್ಲ. ಆಗ ಅಮ್ಮನೋ ಅಜ್ಜಿಯೋ ಅಥವಾ ಊರಲೀ ಬೇರೆ ಯರದರೋ ಹೇಳುತ್ತಿದ್ದದ್ದು "ನೀರಾಡಿರೆ ಕೊಕ್ಕೆ ಹುಳ ಮೈ ಒಳಗೆ ಹೋಗಿ ಹುಣ್ಣು ಮಾಡ್ತು. ಕೊನಿಗೆ ಡಾಕ್ಟ್ರು ಹೊಟ್ಟೆ ಕೊಯ್ತ ನೋಡು. " ಅಂತ ಹೆದರಿಸುತ್ತಿದ್ದದ್ದು ಎಷ್ಟು ಚನ್ನ ಅಲ್ಲವೇ?
ಇದೇ ಮಳೆಗಾಲದಲ್ಲಿ ತಲೆ ತುಂಬಾ ಹೇನು. ಅಮ್ಮನ ತೊಡೆ ಮೇಲೆ ಮಲಗಿ ಆ ಹೇನು ತೆಗೆಸಿ ಕೊಳ್ಳುವುದರಲ್ಲಿ ಅದೆಂಥ ಆನಂದ ಇತ್ತು?
ಮಳೆಗಾಲ ನಮ್ಮಂಥ ತಿಂಡಿ ಪೋತರಿಗಂತೂ ಹೇಳಿ ಮಾಡಿಸಿದ ಕಾಲವಾಗಿತ್ತು. ಹಲಸಿನ ಕಾಯಿಯ ಚಿಪ್ಸ್ ಹಪ್ಪಳ, ಬಾಲೆಕಾಯಿಯ ಚಿಪ್ಸ್ ಹಪ್ಪಳ ಮತ್ತೆ ಕಳಲೆ..... ಆಹಾ ಎಂಥ ರುಚಿಯಾದ ಪದಾರ್ಥಗಳು ಇವು. ಸಾಲದ್ದಕ್ಕೆ ಸಾಲುಗಟ್ಟಿ ಬರುವ ಹಬ್ಬಗಳು. ನೂಲ ಹುಣ್ಣಿಮೆಯಲ್ಲಿ ಸತ್ರದ ಹಿತ್ತನ್ನೂ ಬಿಡದೆ ತಿನ್ದಾಗುತ್ತಿತ್ತು. ನಾಗರ ಪಂಚಮಿಯ ಕಾಯಿ ಕಡುಬು, ಕೃಷ್ಣಾಷ್ಟಮಿಯ ಗೋಧಿ ಮುದ್ದೆ ಆ ಮೇಲೆ ಗಣಪತಿ ಹಬ್ಬದ ಚಕ್ಕುಲಿ ಎಳ್ಳುಂಡೆ ಪಂಚ ಕಜ್ಜಾಯ. ಇಷ್ಟಲ್ಲದೆ ಮಳೆಗಾಲದಲ್ಲೇ ಬರುವ ವೈದೀಕ ಅರ್ಥಾತ್  ತಿಥಿ ಮನೆ ಅಲ್ಲಿ ಹೋಳಿಗೆ, ಸುಟ್ಟೆವು ಪಾಯಸ. 

ಇದೆ ಮಳೆಗಾಲವನ್ನು ನಾವು ಸೈಕಲ್ ಹೊಡೆಯಬೇಕು ಎಂಬ ಆಸೆಗೆ ಬಿದ್ದು ಬೈದದ್ದೂ ಇದೇ ಆ ಕಾಲದಲ್ಲಿ. ಕ್ರಿಕೆಟ್ ಆಟಕ್ಕೆ ಇದೊಂದು ಶತ್ರು ಎಂಬಂತೆ ಕಂಡದ್ದೂ ಇದೇ. ಮಳೆ ಜೋರಾಗಿ ಮನೆಯಲ್ಲಿ ಹಿರಿಯರೆಲ್ಲ "ಇವತ್ತು ಶಾಲಿಗೆ ಹೋಪದು ಬ್ಯಾಡ" ಅಂದ ಕೂಡಲೇ ಮಳೆ ಮಿತ್ರ!! ಇದೇ ಮಳೆಗಾಲದಲ್ಲಿ ಬರುತ್ತಿದ್ದ ಜ್ವರ! ಅಹ ಗಣಿತದ ಮನೆ ಕೆಲಸ ಮಾಡದೇ ಇದ್ದಾಗ ಜ್ವರ ಬಂದರೆ ಅದೆಂಥಾ ಆನಂದ.

ಇನ್ನು ಇದೆಲ್ಲ ಬರೇ ನೆನಪು ಅಷ್ಟೇ. ನಮ್ಮ ಕಾಸು ಸಂಪಾದಿಸುವ ಹುಕಿಗೆ ನಮ್ಮ ಮುಂದಿನ ಪೀಳಿಗೆ ಇಂತಹ ಸುಖದಿಂದ ವಂಚಿತವಾಗುತ್ತಿದೆ

Wednesday, September 12, 2012

ಒಲೆದಂಡೆ


ನಾನು ಶಾಲೆಗೇ ಹೋಗಲು ಶುರು ಮಾಡಿದಾಗ  ಮನೆಯಲ್ಲಿ ಇನ್ನೂ ಎಲ್. ಪಿ. ಜಿ ಬಂದಿರಲಿಲ್ಲ. ಆಗ ಏನಿದ್ದರೂ ಕಟ್ಟಿಗೆ ಒಲೆ ಮತ್ತು ಇದ್ದಿಲ ಒಲೆಗಳದ್ದೆ ಅಡಿಗೆಮನೆಯಲ್ಲಿ ಕಾರ್ಯಭಾರ.ಈಗ ಈ ಬೆಂಗಳೂರೆಂಬ ಮಹಾ ನಗರಕ್ಕೆ ಬಂದ ಮೇಲೆ ಅನೇಕ ಬಾರಿ ನೆನಪಾಗುವ ವಸ್ತು ವಿಷಯಗಳಲ್ಲಿ ಇದು ಕೂಡ ಒಂದು. 
ಮಳೆಗಾಲದಲ್ಲಿ ಆ ಬಿರುಸುಮಳೆಯಲ್ಲಿ ಸೋಕಿದ ಇರುಸಲು ನೀರು ಅಂಗಿ ಚಡ್ಡಿಯನ್ನೆಲ್ಲ ಒದ್ದೆ ಮಾಡಿ ಹಾಕುತ್ತಿತ್ತು. ಕೊಡೆಯಿಂದ ಬಿದ್ದ ನೀರು ಪುಸ್ತಕಕ್ಕಿಂತ ಹಡಪ  ಹೆಚ್ಚಾಗಿದ್ದ ಪಾಟಿ ಚೀಲವನ್ನೂ ವದ್ದೆ ಮಾಡುತ್ತಿತ್ತು. ಸಾಲದ್ದಕ್ಕೆ ಹರಿಯುವ ನೀರಿಗೆ ಅಣೆ ಕಟ್ಟು ಕಟ್ಟುವ ಭರದಲ್ಲಿ ಕೊಡೆಯ ಮೇಲಿನ ಧ್ಯಾನ ತಪ್ಪಿ ಹೋಗಿ ಮೈ ಮೇಲೆಲ್ಲಾ ನೀರು ಬಿದ್ದು ಮನೆಗೆ ಬರುವಷ್ಟರಲ್ಲಿ ಮೈ ಚಳಿ ನಡುಕ ಹತ್ತುತ್ತಿತ್ತು. ಆದರೂ ಅದರಲ್ಲಿ ಖುಷಿ ಇರುತ್ತಿತ್ತು. ಕಾರಣ ಗೊತ್ತಿಲ್ಲ.
ಹೀಗೆ ಒದ್ದೆಯಾದ ಮೈಯನ್ನು ಮನೆಯಲ್ಲಿದ್ದ ಹಿರಿಯರು ಒರೆಸಿ ಬೇರೆ ಬಟ್ಟೆ ತೊಡುವಂತೆ ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆ. ನಂತರ, ಅಜ್ಜ ಹೇಳುತ್ತಿದ್ದ."ಅಪ್ಪಿ ಪುಸ್ತಕ ವದ್ದೆ ಆಗಿರ್ತು ಒಣಸಕ್ಕು. ಕೊಡು. ಒಲೆ ದಂಡೆ ಮೇಲೆ ಇಡ್ತಿ" ಎಂದು ಅಪ್ಯಾಯಮಾನತೆಯಿಂದ ಕೇಳುತ್ತಿದ್ದ. ಅಜ್ಜನ ಬಾಲವೇ ಆಗಿದ್ದ ನಾನು ಅಜ್ಜನ ಹಿಂದೆಯೇ ಒಲೆ ದಂಡೆ ಹತ್ತಿರ ಪುಸ್ತಕ ಒಣಗಿಸುತ್ತ, ಮೈ ಬೆಚ್ಚಗೆ ಮಾಡಿಕೊಳ್ಳುತ್ತಾ ಕೂರುತ್ತಿದ್ದೆ. ಅಂದು ಓದಿಗೆ ಚಕ್ಕರ್. ಯಾರಾದರೂ ಹೇಳಿದರೆ ನನ್ನ ಸೂಪರ್ ಮ್ಯಾನ್ ನನ್ನಜ್ಜನ ಬೆಂಬಲ ನಂಗೆ ಅಂದು. "ಪುಸ್ತಕ ಎಲ್ಲ ಒದ್ದೆ ಆಯ್ದು. ಮೈ ಎಲ್ಲ ಚಳಿ ಹತ್ತಿ ನಡುಗ್ತಾ ಇದ್ದು. ಸ್ವಲ್ಪ ಬೆಚ್ಚಗೆ ಮಾಡ್ಕಂಡು ಓದಕ್ಕೆ ಕೂತ್ಗತ್ತ. ಅಷ್ಟು ಹೊತ್ತಿಗೆ ಪುಸ್ತಕ ಒಣಗ್ತು" ಎನ್ನುವ ಆಜ್ಞೆ ಹೊರ ಬರುತ್ತಿತ್ತು. ಜೂನ್ ನಿಂದ ಜನವರಿ ತನಕ ಅಜ್ಜ ಸಂಜೆ ಹೊತ್ತು ಹೆಚ್ಚಾಗಿ ಇರುತ್ತಿದ್ದುದು ಒಲೆ ದಂಡೆಯ ಬಳಿಯಲ್ಲಿ. ನಾನು ಪುಸ್ತಕ ಹಿಡಿದು ಓದುತ್ತಾ ಅಜ್ಜನ ಪಕ್ಕದಲ್ಲಿ. 
ಇಷ್ಟೇ ಅಲ್ಲ ಚೌತಿ ಹಬ್ಬದ  ಸಮಯದಲ್ಲಿ ತಂದ ಪಟಾಕಿ ಎಲ್ಲ ಒಲೆ ದಂಡೆಯ ಮೇಲಿನ ಗೂಡಲ್ಲಿ ಸೇರುತ್ತಿತ್ತು. "ಬೆಚ್ಚಗೆ ಇಡಕ್ಕು. ಇಲ್ದಿದ್ರೆ ಪಟಾಕಿ ಹೊಡೆಯಕ್ಕೆ ಆಗ್ತಲ್ಲೆ." ಎನ್ನುವ ಅಜ್ಜನ ಅಪ್ಪನ ಮಾತುಗಳು ಈಗಲೂ ನೆನಪಾಗುತ್ತದೆ. ಕೆಲವೊಮ್ಮೆ ಮಳೆರಾಯ ಗಣಪನನ್ನು ಕಳಿಸಿದರೂ ಹೋಗುತ್ತಿರಲಿಲ್ಲ. ಆಗೆಲ್ಲ ಹೇಳುವುದು. "ಒಲೆ ದಂಡೆ ಮೇಲೆ ಇರ್ಲಿ ಪಟಾಕಿ. ದೊಡ್ಡ ಹಬ್ಬಕ್ಕೆ ಹೊಡೆದರೆ ಆತು" ಎಂದು.
ಆ ಮೇಲೆ ಮನೆಗೆ ಎಲ್. ಪಿ. ಜಿ. ಪ್ರವೇಶ ಆಯಿತು. ನಿಧ್ಹನಕ್ಕೆ ಒಲೆ ಉರಿಯುವುದೂ ಕಮ್ಮಿ ಆಯಿತು. ಅಷ್ಟರಲ್ಲಿ ನಾನು ಸ್ವಲ್ಪ ಬೆಳೆದಿದ್ದನಲ್ಲ, ಪುಸ್ತಕ ಒದ್ದೆಯಾಗುವುದೂ ಕಮ್ಮಿ ಆಯಿತು. ಆದರೂ ಒಲೆ ದಂಡೆಯ ಸೆಳೆತ ಬಿಡಲಿಲ್ಲ.
ಹೋಗಿ ಚಳಿ ಕಾಯಿಸುತ್ತಾ ಕೂರುತ್ತಿದ್ದೆ. "ಮುದುಕ!" ಎಂದು ಯಾರಾದರೂ ಕರೆದರೂ ಬೇಸರವಾಗುತ್ತಿರಲಿಲ್ಲ. ಒಲೆ ದಂಡೆಯ ಸೆಳೆತ ಎಷ್ಟಿತ್ತು ಎಂದರೆ ಸಣ್ಣ ಮಳೆಗೂ ನಾನು ಚಳಿ ಎನ್ನುತ್ತಾ ಕೂರುತ್ತಿದ್ದೆ. ಕೊನೆ ಕೊನೆಗೆ ಇದ್ದ ಒಲೆ ಪೂರ್ತಿ ಮಾಯವಾಯಿತು. ಆದರೂ ಬಚ್ಚಲ ಮನೆಯ ಒಲೆ ಇತ್ತು. ಈಗಲೂ ಅಷ್ಟೇ ಊರಿಗೆ  ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೋದರೆ ಒಲೆ ದಂಡೆ ಮುಂದೆ ಕಾಲು ಗಂಟೆಯಾದರೂ ಕೂರುತ್ತೇನೆ. 
ಮೊನ್ನೆ ಒಂದು ದಿನ ರೈನ್ ಕೋಟ್ ಬಿಟ್ಟು ಹೋಗಿ ಮಳೆಯಲ್ಲಿ ನಾನು ವದ್ದೆಯಾಗಿ ಚೀಲದಲ್ಲಿದ್ದ ಪುಸ್ತಕವೂ ವದ್ದೆಯಾದಾಗ ಇದೆಲ್ಲ ನೆನಪಾಯಿತು. ಈಗ ಮೈ ವದ್ದೆಯಾದರೆ ಹೇಗೆ ಬೆಚ್ಚಗೆ ಮಾಡಲಿ? ಪುಸ್ತಕ ವದ್ದೆಯಾದರೆ ಹೇಗೆ ಒಣಗಿಸಲಿ? 
ನಿಜಕ್ಕೂ ನಾನು ಏನನ್ನೋ ಕಳೆದುಕೊಂದನೆಂಬ ಭಾವ ನನ್ನನ್ನು ಕಾಡಿದ್ದು ಸುಳ್ಳಲ್ಲ.

Wednesday, September 5, 2012

ಮಳೆಗಾಲದ ನೆನಪು

ಅಂದು ಮಧ್ಯಾಹ್ನ ಗಪ್ಪನ್ನ ಊಟ ಮಾಡಿ ಮನೆಯ ಚಾವಡಿಯ ಮೇಲೆ ಅತ್ತಿಂದ ಇತ್ತ ಇತ್ತಲಿಂದ ಅತ್ತ ಸುತ್ತಾಡುತ್ತಿದ್ದ. ಸುತ್ತಾಡುತ್ತ  ಸುತ್ತಾಡುತ್ತ  ಹಾಗೆಯೇ ಅವನ ದೃಷ್ಟಿ ಮನೆಯ ಎದುರಿನ ಜೀರಿಗೆ ಮಾವಿನ ಮರದ ಕಡೆ ಹರಿಯಿತು. ಅದು ಆಟ ಹುಟ್ಟಿದಾಗ ಆತನ ಅಜ್ಜಿ ಆ ಸಂಬ್ರಮದ ನೆನಪಿಗೆಂದು ನೆಟ್ಟಿದ್ದ ಗಿಡವಾಗಿತ್ತಂತೆ. ಅಂದರೆ ಈ ಮಾವಿನ ಮರಕ್ಕೂ ತನಗೂ ಒಂದೇ ಪ್ರಾಯ. ಈ ಮಾವಿನ ಮರದಲ್ಲಿ ಬಿಟ್ಟ ಎಷ್ಟು ಸಾವಿರ ಮಿಡಿಗಳನ್ನು ಉಪ್ಪಿನಕಾಯಿ ಮಾಡಿ ತಾನು ತನ್ನವರು ತಿನ್ನಲಿಲ್ಲ. ಎಷ್ಟು ದಿನ ಇದರ ನೀರು ಗೊಜ್ಜು ಮಾಡಿ ಕುಡಿಯಲಿಲ್ಲ.ನಿಜ ಈ ಮರ ನಿಜಕ್ಕೂ ತನ್ನ ಹುಟ್ಟಿನಿಂದ ಇಲ್ಲಿಯ ತನಕವೂ ತನ್ನ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿದೆ.
        ಆದರೆ ಇದೊಂದೇ ತನ್ನ ಬದುಕಿನ ಅವಿಭಾಜ್ಯ ಭಾಗವೇ? ಖಂಡಿತಾ ಅಲ್ಲ. ಎದುರಿಗಿರುವ ಎಲ್ಲವೂ ಅವಿಭಾಜ್ಯ ಭಾಗಗಳೇ. ಅದರಲ್ಲೂ ಇವಳು. ಅಂದೊಂದು ಕಾಲವಿತ್ತು ಇವಳ ಬರವಿಕೆಗೆ ತಾನು ಎಷ್ಟು ಕಾತರದಿಂದ ಕಾಯುತ್ತಿದ್ದೆ. ಇವಳು ಕೂಡ ಹಾಗೆಯೇ ಹೊತ್ತಿಗೆ ಸರಿಯಾಗಿ ಬರುತ್ತಿದ್ದಳು. ಬಂದಳೆಂದರೆ ತನ್ನಲ್ಲಿ ಅದೆಂಥ ಸಡಗರ -ಸ೦ಭ್ರಮ. ಇವಳು ಬಂದಳೆಂದರೆ ಮನಕ್ಕೆ ಅದೆಂಥಾ ತಂಪು. ಇವಳು ಬೀರುವ ಕಂಪು ಅದರ ಪರಿ ಹೇಳಲು ತನ್ನಲ್ಲಿ ಶಬ್ದಗಲಾದರೂ ಎಲ್ಲಿದೆ? ಮೇಲಿನಿಂದ ಕೆಳಕ್ಕೆ ಬರುವಾಗ ಅದೆಂತಹ ವಯ್ಯಾರ ಇವಳದ್ದು. ಇವಳ ಬರುವಿಕೆ ತನ್ನಲ್ಲಿ ಅದೆಂತಹ ಉತ್ಸಾಹ ಕೆರಳಿಸುತ್ತಿತ್ತು. ದೇಹದಲ್ಲಿದ್ದ ಹುಮ್ಮಸ್ಸ್ಸೆಲ್ಲವೂ ಒಟ್ಟಾಗಿ ಇವಳೊಂದಿಗೆ ಹೊರಡುತ್ತಿದ್ದೆ. ಸುತ್ತಾಟ ಓಡಾಟದ ಆಯಾಸ ಎಳ್ಳಷ್ಟೂ ಅರಿವಾಗುತ್ತಿರಲಿಲ್ಲ. ಆ ವಯಸ್ಸು ಕೂಡ ಹಾಗೆಯೆ ಇತ್ತು. ಅಂದು ಇವಳು ಬಂದಳೆಂದರೆ ತಾನೇ ಏನು? ಈ ಹೈಗರ ಕೇರಿ ಒಂದೇ ಅಲ್ಲ. ಎಲ್ಲ ಕೇರಿಗಳ ಜನರೂ ಸ೦ಭ್ರಮಿಸುತ್ತಿದ್ದರು. ಆ ಕಾಲದಲ್ಲಿ ತನ್ನನ್ನು ಹಿಡಿದವರಾದರೂ ಯಾರು? ಏನು ಕಡಿಮೆಯವಳೇ ಇವಳು?ಇವಳ ಹೊಡೆತಕ್ಕೆ ಕೊಚ್ಚಿ ಹೋದವರೆಷ್ಟು? ಇವಳ ಸುನ್ದರ್ಯಕ್ಕೆ ನಾಚಿಯೇ ಇರಬೇಕು ಹೆಂಗಸರು ಮನೆಯೊಳಗೇ ಹೊಕ್ಕಿ ಕೂರುತ್ತಿದ್ದುದು.ಮುದುಕರು ತಮ್ಮ ಕೈಲಾಗದಲ್ಲ ಎಂದುಕೊಂಡಿರಬೇಕು, ಅವರ ಹುಡುಗಾಟಿಕೆಯ ಕಥೆ ಹೇಳುತ್ತಿದ್ದುದು.
         ಆದರೆ ನಂತರದಲ್ಲಿ ಏನಾಯಿತು ಇವಳಿಗೆ? ಹೊತ್ತಿಗೆ ಸರಿಯಾಗಿ  ಬರುವುದು ಬಿಟ್ಟಳು. ಬಂದರೂ ಪೂರ್ತಿ ಹೊತ್ತು ಇರುವುದು ಬಿಟ್ಟಳು. ಇದ್ದರೂ ಅವಳಲ್ಲಿ ಮೊದಲಿನ ತಾದಾತ್ಮ್ಯ ಇರಲಿಲ್ಲ .ಇನ್ನು ಕೆಲವು ಸಾರಿ ಮತ್ತೆ ಬರಲಾರಲೇನೋ ಎನ್ನುವಂತೆ ಹೋಗುತ್ತಿದ್ದಳು. ಮತ್ತೆ ಬರುತ್ತಿದ್ದಳು. ಇನ್ನು ಒಮ್ಮೊಮ್ಮೆ  ಬಂದಳೆಂದರೆ ಆ ಸ್ನಿಗ್ಧ ಸೌಂದರ್ಯದ ಬದಲಾಗಿ ರಾಕ್ಷಸಿಯಂತೆ ಸಿಟ್ಟು ಹೊತ್ತು ಬರುತ್ತಿದ್ದಳು.
       ಈ ಬಾರಿಯೂ ಹಾಗೆ ಆಯಿತಲ್ಲ. ಬರುವುದಿಲ್ಲವೇನೋ ಎಂಬಂತೆ ಮುನಿಸು ತೋರಿದಳು ಮೊದಲು. ನಂತರ ಅದೆಂತಹ ವಯ್ಯಾರದಲ್ಲಿ ಬಂದಳು. ತನಗೆ ಒಮ್ಮೆ ಉತ್ಸಾಹ ಹುಟ್ಟಿತ್ತಲ್ಲ ಅದೂ ಈ ನಡುಪ್ರಾಯದಲ್ಲಿ.
ಆ ಮೇಲೆ ಎಳೆ ಮಗುವಿನಂತೆ ರಚ್ಚೆ ಹಿಡಿದು ಕುಳಿತಳು-ಕುಣಿದಳು. ಈಗ ಮತ್ತೆ ಅದೇ ರುದ್ರ ನರ್ತನ ಯಾಕೆ ಹೀಗೆ? ಏನಾಗಿದೆ ಇವಳಿಗೆ? ಏನು ಬೇಕಾಗಿದೆ ಇವಳಿಗೆ?
      ಅಷ್ಟರಲ್ಲಿ ಅಲ್ಲಿಗೆ ಬಂದ ಮಂಜಣ್ಣ ಹೇಳಿದ."ಎಂತೋ ಗಪ್ಪ ಕತ್ತೆ ಮೇಲೆ ಒಂದೇ ಸಮ ನಿತ್ಗಂಡು ಯೋಚನೆ ಮಾಡ್ತೆ? ಎಂತಾತ? " ಎಂದು. ಅದಕ್ಕೆ ನಮ್ಮ ಗಪ್ಪಣ್ಣ ಹೇಳಿದ " ಎ೦ತು ಇಲ್ಯ ಮಂಜ.ಈ ಮಳೆ ಮೇಲೆ ಸುಮ್ನೆ ಯೋಚನೆ ಮಾಡ್ತಾ ಇದ್ದಿದ್ದಿ. ಅರ್ಥನೇ ಆಗ್ತಾ ಇಲ್ಲೆ ಮಾರಾಯ ಇದು. ಮುಂಚೆ ಬತ್ನೆ ಇಲ್ಲೆ ಅಂತಿತ್ತು. ಈಗ ಹೋಗ್ತನೆ ಇಲ್ಲೆ ಅಂತಿದ್ದು. ಎಂತ ಇದರ ಕಥೆ?"

Wednesday, July 25, 2012

ವಿರಹ

ಗೆಳತಿ ನೀನು ನನ್ನ ಬಾಳಲ್ಲಿ ಬಂದ ಆ ಕ್ಷಣದಿಂದ ನನ್ನ ಬಾಳೇ ಬದಲಾಗಿತ್ತು. ಗುಮ್ಮನಂತೆ ಇದ್ದ ನಾನು ನಿನ್ನಿಂದ ಪ್ರಪಂಚದ ಎಷ್ಟೋ ಮಜಲುಗಳನ್ನು ಅನಾವರಣ ಮಾಡಿದೆ.ನನ್ನಿಂದ ದೂರಾದ ಗೆಳೆಯರನ್ನು ಮತ್ತೆ ನಾನು ಪಡೆಯುವಂತೆ ಮಾಡಿದ್ದು ನೀನು ಮತ್ತು  ನಿನ್ನಲ್ಲಿ ಅಡಕವಾಗಿದ್ದ ಉತ್ಕಟ ಉತ್ಸಾಹ . ಎಲ್ಲೋ ಇದ್ದ ನೀನು ಮೂಲೆಯಲ್ಲಿ ಗುಮ್ಮನಂತಿದ್ದ ನನ್ನ ಕೈ ಸೇರುವುದು ಎಂದರೆ ತಮಾಷೆಯೇ? ನಾನಂತೂ ಅಬ್ಬೇಪಾರಿ ಮಾಡಲು ಇದ್ದಿದ್ದು ಒಂದು ಬಹಳ ಸಣ್ಣ ಕೆಲಸ. ಸಂಬಳವೂ ಅಷ್ಟಕ್ಕಷ್ಟೇ. ಅಂತಹ ಹೊತ್ತಿನಲ್ಲಿ ನೀನು ನನ್ನ ಬದುಕಲ್ಲಿ ಪ್ರವೇಶಿಸಿದೆ.ನೀನು ಬಂದ ಆ ಘಳಿಗೆಯಿಂದಲೇ ಜನರು ನನ್ನತ್ತ ಇಟ್ಟಿದ್ದ ನೋಟವೇ ಬದಲಾಯಿತು.
ಬರೇ ಇಷ್ಟೇ ಏನು? ನಿನ್ನ ಅದೆಷ್ಟು ಮಾತುಗಳು ನನ್ನ ಕಿವಿ ಸೇರಲಿಲ್ಲ? ನಿನ್ನ ಧ್ವನಿ ಕೇಳಿದರೆ ನನಗೆ ಅದೆಂತಹ ಆಕರ್ಷಣೆ ಇತ್ತು. ಅದೆಷ್ಟು ಹಾಡುಗಳನ್ನು ನಿನ್ನಿಂದ ಮತ್ತೆ ಮತ್ತೆ ಹೇಳಿಸಿ ಕೇಳಲಿಲ್ಲ ನಾನು.ನನ್ನ ಅದೆಷ್ಟೋ ಹಗಲುಗಳು ಪ್ರಾರಂಭವಾಗಿದ್ದು ನಿನ್ನ ಸವಿದನಿ ಕೇಳಿಯೇ ಅಲ್ಲವೇ? ನೀನು ನನ್ನೊಂದಿಗೆ ಶೌಚದ ಮನೆಯೊಂದು ಬಿಟ್ಟು ಬೇರೆ ಎಲ್ಲ ಕಡೆಗೂ ಇದ್ದೆ. ಎಲ್ಲಾದರೊಮ್ಮೆ ನಿನ್ನನ್ನು ಬಿಟ್ಟು ಹೊರಟಾಗ ನನ್ನಲ್ಲಿ ಆಗುತ್ತಿದ್ದ ಆತಂಕದ ಪರಿ ನಿನಗೆ  ಗೊತ್ತಲ್ಲ. ಎಷ್ಟೋ ಸರಿ ನಿನ್ನ ಬಿಟ್ಟು  ಹೊರಟಾಗ ನಿನ್ನ ಆ ಮೇಲು ದನಿ ಕೇಳಿ ತಿರುಗಿ ಬಂದು ಕರೆದೊಯ್ದ ದಿನಗಳನ್ನು ಲೆಕ್ಕ ಇತ್ತದ್ದದರೂ ಯಾರು? ಕೆಲವು ಸ್ಥಳಗಳಲ್ಲಿ ನಿನ್ನ ಮೌನ  ಅದೆಷ್ಟು ಅಸಹನೀಯ ಗೊತ್ತೇ? ನನ್ನ ತೊಡೆ ಮೇಲೆ ನೀನು ಮಲಗಿ ಹಾಡುಗಳನ್ನು ಗುನೂಗುತ್ತಿದ್ದಗ ನಾ ಪಟ್ಟ ಆನಂದ ಅನುಭವಿಸಿದ ನೆಮ್ಮದಿ ಅದನ್ನು ಹೇಳುವುದಕ್ಕೆ ಶಬ್ದಗಳು ಖಂಡಿತಾ ನನ್ನಲ್ಲಿ ಇಲ್ಲ. ನೀನು ಕಳೆದು ಹೋದರೆ ಮುಂದೇನು ಎಂದು ನಾನು ಯೋಚಿಸಿದಾಗಲೆಲ್ಲ ನನಗೆ ನಳ ದಮಯಂತಿ ಪ್ರಸಂಗದಲ್ಲಿ ಬರುವ ಒಂದು ಸಂಧರ್ಭದ ಪದ್ಯ ನೆನಪಾಗುತ್ತಿತ್ತು "ಹೀಗೆ ಈ ಅಡವಿಯಲಿ ಒರ್ವಳ ಬಿಟ್ಟು ಹೇಗೆ ಮುಂದಡಿ ಇದಲಿ......" ಈ ಪ್ರಶ್ನೆಯನ್ನು ನನ್ನಲ್ಲಿ ನಾನು ಕೇಳಿದಾಗಲೆಲ್ಲ ಸಿಕ್ಕ ಉತ್ತರ ಒಂದೇ - ನೀನಿಲ್ಲದೆ ಈ ಜಗತ್ತು ನಿಜಕ್ಕೂ ಬರದು ಬೆಂಗಾಡು ಎಂದು.ಏಕೆಂದರೆ ನಿನ್ನೊಂದಿಗೆ ನಾನು ನನ್ನ ಅನೇಕ ಆಪ್ತರನ್ನು ಕೂಡ ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಪದ್ಯವನ್ನು ನಾನು ನನ್ನ ಬದುಕಿಗೆ ತಕ್ಕಂತೆ ತಿರುಚಿದ್ದು ನಿಜ "ಹೇಗೆ ಈಕೆಯ ತೊರೆದು ನಾ ಜಗದಿ ಬದುಕಲಿ...." ಎಂದು.
ಇಂತಹ ಉತ್ಕಟ ಬಂಧದಲ್ಲಿದ್ದ ನಾವು ಕೂಡ ಬೇರಾಗಬೇಕು ಎಂದರೆ ಇದು ವಿಧಿಯ ವಿಲಾಸ ಎನ್ನ ಬೇಕೇ? ಅಥವಾ ಕಲಿ ಪ್ರಕೋಪ ಎನ್ನ ಬೇಕೇ? ವಿಲಾಸವಾಗಿದ್ದರೆ ನಿಜಕ್ಕೂ  ನಾನು ಸಂತೋಷಿಸುತ್ತಿದ್ದೆ. ಆದರೆ ದುಃಖವನ್ನು ಕೊಟ್ಟ ಈ ಘಟನೆ  ವಿಲಾಸ ಖಂಡಿತ ಅಲ್ಲ. ಆ ಒಂದು ಕ್ಷಣದಲ್ಲಿ ನೀನು ಬೇರೆಯವರ ಕೈ ವಶ ಆಗಿಬಿಟ್ಟೆಯಲ್ಲ. ಆಗುವ ಮೊದಲು ಒಮ್ಮೆಯಾದರೂ ನನ್ನನ್ನು ಕರೆಯ ಬಹುದಿತ್ತಲ್ಲ.
ನೆನಪಿದೆಯೇ ಆ ದಿನ ? ಊಟ ಮಾಡುವಾಗ ನನ್ನ ಪಕ್ಕದಲ್ಲೇ ನೀನಿದ್ದೆ. ಆಮೇಲೆ ನೀನಿಲ್ಲ. ನೀನಿಲ್ಲದೆ ಬದುಕು ದುಸ್ತರ ನಿಜ. ನಿನ್ನ ನೆನಪುಗಳು ಎಂದಿಗೂ ಹಸಿರು. ಆದರೆ ನನಗೂ ನನ್ನದೆನ್ನುವ ಒಂದು ಬದುಕಿದೆ. ನೀನು ಉಂಟು ಮಾಡಿ ಹೋದ ಶೂನ್ಯದೊಂದಿಗೆ ನಾನು ಸದಾಕಾಲ ಇರಲಾರೆ. ನಿನ್ನ ಶೂನ್ಯವನ್ನು ತುಂಬಲು ನಿನಗಿಂತ ಒಳ್ಳೆಯದು ಬೇಕು. ಅದಕ್ಕೆ ಈ ದಿನ ಹೊಸ ಮೊಬೈಲ್ ಕೊಂದು ಬಂದಿದ್ದೇನೆ. 32 G B  ಮೆಮೊರಿ, ಕ್ಯಾಮೆರಾ, ಆಡಿಯೋ ಪ್ಲೇಯರ್ ವೀಡಿಯೊ ಪ್ಲೇಯರ್ ಎಫ್ ಎಂ  ರೇಡಿಯೋ  ಎಲ್ಲ ಇದೆ.ಇದರಲ್ಲಿ wi fi ಕೂಡ ಇದೆ.
ನಿಜ ಕಳೆದುಕೊಂಡ ನನ್ನ ಗೆಳತಿ ನನ್ನ ಮೊಬೈಲ್ ಫೋನ್.

Friday, July 20, 2012

ಇದು ಒಂದು ಸೀರಿಯಸ್ ಕಥೆ


ನಮ್ಮ ಕಥಾ ನಾಯಕನ ಹೆಸರು ಜಗನ್ನಾಥ. ಎಲ್ಲರ ಬಾಯಲ್ಲಿ ಜಗ್ಗಣ್ಣ.ಇವನ ಬಗ್ಗೆ ಹೇಗೆ ಅಂತ ಕೇಳಿದರೆ ಊರಲ್ಲಿ ಎಲ್ಲರೂ ಅನುಕೂಲ ಅಂತಲೇ ಹೇಳುತ್ತಾರೆ. ಇವನಿಗೆ ೫ ಎಕರೆ ಅಡಿಕೆ ತೋಟ ಇದೆ. ಗದ್ದೆ ಕೂಡ ಒಂದು ೨ ಎಕರೆ ಇದೆ. ಸಾಲದ್ದಕ್ಕೆ ಅಪ್ಪ ಅಜ್ಜ ಮುತ್ತಜ್ಜ ಎಲ್ಲರೂ ದುಡಿದಿಟ್ಟ ದುಡ್ಡು ಕೂಡ ಹಾಗೆ ಇದೆ. ಹೆಂಡತಿ ಸರಸಿ ಕೂಡ ಒಳ್ಳೆಯವಳು. ಇವರ ದಾಂಪತ್ಯದ ಫಲ ಒಂದು ಮಗ ಒಂದು ಮಗಳು. ಮಗಳನ್ನು ಅವಳ ಇಷ್ಟದಂತೆಯೇ ಒಬ್ಬ ಒಳ್ಳೆ ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿ ಇರುವ ಹುಡುಗನನ್ನು ನೋಡಿ ಮಾಡುವೆ ಮಾಡಿ ಆಗಿದೆ. ಮಗ ತಾನು ಅಪ್ಪ ನೆಟ್ಟ ಆಳದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನದವನಲ್ಲ ಎನ್ನುತ್ತಾ ಬೆಂಗಳೂರು ಪೇಟೆ ಸೇರಿ ಕೆಲವು ವರ್ಷ ಕಳೆದು ಹೋಗಿದೆ. ಕೆಲಸದ ಮೇಲೆ ಹೊರಗಡೆ ಇರುವ ಮಾಣಿ ಎನ್ನಿಸಿಕೊಂದಿದ್ದರಿಂದ ಇವನಿಗೆ ಹೆಣ್ಣು ಸಿಗುವುದು ಕಷ್ಟವಾಗಲಿಲ್ಲ. ಇಷ್ಟೆಲ್ಲಾ ಅನುಕೂಲಗಳಿದ್ದರೂ ಜಗ್ಗನ್ನನಿಗೆ ಪಿತ್ತ ನೆತ್ತಿಗೆರಲಿಲ್ಲ.ಇವನಿಗೆ ತಂಬಾಕಿನ ಕವಳ ಒಂದನ್ನು ಬಿಟ್ಟು ಯಾವ ದುರಭ್ಯಾಸವೂ ಇಲ್ಲ. ಹಾ೦ ಮನೆಯಲ್ಲಿ ಕಾರ್ ಕೂಡ ಇದೆ. 

ಇಂತಿಪ್ಪ ಜಗ್ಗಣ್ಣ ಒಂದು ದಿನ ತಗ್ಗಿನ ತೋಟಕ್ಕೆ ಹೋಗಿ ಬಂದವ ಯಾಕೋ ಸುಸ್ತು ಸುಸ್ತು ಎನ್ನತೊಡಗಿದ. ಮರುದಿನ ಜ್ವರ ಬಂದಂತೆ ಆಯಿತು. ವಿಚಾರ ತಿಳಿದ ಮಗ ಫೋನ್ ಮಾಡಿ ಬೆಂಗಳೂರಿಗೆ ಬನ್ನಿ ಇಲ್ಲಿ ಒಳ್ಳೆ ಆಸ್ಪತ್ರೇಲಿ ತೋರ್ಸನ. ನಿ೦ಗಕ್ಕೆ  ವರ್ಷಾತು " ಅಂದ. ಮಗಳು ಕೂಡ ಅಣ್ಣ  ಹೇಳಿದ್ದು ಸರಿ ಅಂದಳು. ಹೀಗೆ ಮಗಳು ಮತ್ತು ಮಗ ಒಂದೇ ಮಾತು ಹೇಳಿದ ಮೇಲೆ ಇದನ್ನು ಕೇಳದೆ ಸರಿ ಅನ್ನಿಸಿ ಜಗ್ಗಣ್ಣ ಮತ್ತು ಸರಸಕ್ಕನ ಸವಾರಿ ಬೆಂಗಳೂರಿನ ಬಸ್ಸೇರಿತು.

ಬಸ್ಸು ಹೋಗುತ್ತಿರುವಾಗ ಅರಸೀಕೆರೆ ಹತ್ತಿರ ಒಂದು ಲಾರಿ ಬಂದು ಬಸ್ಸಿಗೆ ಬಲವಾಗಿ  ಜಪ್ಪಿ ಜಗ್ಗಣ್ಣ ಮತ್ತು ಸರಸಕ್ಕ ಇಬ್ಬರೂ ಅರಸೀಕೆರೆಯ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಗೆ ಬಂದ ಮಗ ಡಾಕ್ಟರ ಹತ್ತಿರ "ನಮ್ಮ ಅಪ್ಪ ಅಮ್ಮ ಹೇಗಿದ್ದಾರೆ?" ಎಂದ್ದಾಗ ಡಾಕ್ಟರ ಹೇಳಿದರು. "ನಿಮ್ಮ ತಂದೆ ತಲೆಗೆ ಬಲವಾದ ಏಟು ಬಿದ್ದಿದೆ. ಅವರ ಹಾರ್ಟ್ ಮೊದಲೇ ವೀಕ್ ಇತ್ತು. ಕಿಡ್ನಿಗೂ ಸ್ವಲ್ಪ damage ಆಗಿದೆ. ಬೆನ್ನಿಗೆ ಕೂಡ ಪೆಟ್ಟು ಬಿದ್ದಿದೆ. ಡಿಸ್ಕ್ ಸ್ಲಿಪ್ ಆಗಿದ್ರೂ ಆಗಿರಬಹುದು. ಒಂದು ಕೈ ಮುರಿದು ಹೋಗಿದೆ.ಒಂದು ಕಾಲು joint ತಪ್ಪಿ ಹೋಗಿದೆ .ತಲೆಗೆ ಪೆಟ್ಟು ಬಿದ್ದಿರೋದ್ರಿಂದ ಕಣ್ಣು ಮತ್ತು ಕಿವಿ ಎರಡೂ ವೀಕ್ ಆಗಿದೆ. ಒಟ್ನಲ್ಲಿ ತುಂಬಾ ಸೀರಿಯಸ್" ಎಂದರು

ನಿಜವಾಗಿಯೂ ಇಷ್ಟೆಲ್ಲಾ ಆದಮೇಲೆ ಇದು ಸೀರಿಯಸ್  ಕಥೆಯೇ ಅಲ್ಲವೇ?

Tuesday, July 17, 2012

ಮನವ ಕಲಕಿದ ಮೋಹಿನಿ

ಅಂದು ಸಂಜೆ ತನಗಾದ ಅನುಭವಕ್ಕೆ ತಾನೇ ಬೆರಗಾಗಿ ಮನೆಯ ಚಿಟ್ಟೆ (ಮಲೆನಾಡಿನ ಮನೆಗಳಲ್ಲಿ ಮನೆಯ ಹೊರಗೆ ತುಸು ಚಾಚಿ ನಿಂತಿರುವ ಕಟ್ಟೆಯ ಭಾಗ) ಮೇಲೆ ಒರಗಿ ಯಚಿಸತೊಡಗಿದ ವಿಶ್ವ. ಅದು ತನಗಾದ ಅನುಭವಾ ಅಥವಾ ಭಾವೋತ್ಕಟತೆಯೋ ಎನ್ನುವುದು ಆತನ ಗೊಂದಲದ ಮೂಲ. ಮೂರು ಸಂಜೆಯ ಹೊತ್ತಿನಲ್ಲಿ ತಾನು ಪೇಟೆಯಿಂದ ಮನೆಕಡೆ ಬರುತ್ತಿದ್ದಾಗ ಒಂದು  ಹೆಣ್ಣು ಬಿಳಿ ಸೀರೆ ಉಟ್ಟು ಕಾಡಲ್ಲಿ ನಿಂತಿದ್ದು ಆತನಿಗೆ ಬಹಳ ದಿನಗಳಿಂದ ಅನುಭವಕ್ಕೆ ಬಂದ ವಿಚಾರ.
ಆ ಹೆಣ್ಣು ತನಗೆ ಮಾತ್ರ ಕಂಡಿದ್ದೋ ಅಥವಾ ಮತ್ತು ಯಾರಾದರೂನೋಡಿದ್ದಾರೋ ಎಂದು ಒಮ್ಮೆ ಯೋಚಿಸಿದ. ಬೇರೆ ಯಾರೂ ನೋಡದಿದ್ದಲ್ಲಿ ಅದು ತನಗೆ ಮಾತ್ರ ಕಂಡಿದ್ದೇಕೆ ಎಂದು ಕೂಡಾ ಯೋಚಿಸಿದ.

ಭೂತ ದೆವ್ವಗಳ ಬಗ್ಗೆ ಯಾರಾದರೂ ಮಾತಾಡಿದರೆ ಗಟ್ಟಿಯಾಗಿ ನಗುವ ತನಗೇ ಇಂತಹ ಅನುಭವ ಆಗಬೇಕಿತ್ತೇ ಎಂದು ಒಮ್ಮೆ ಕಸಿವಿಸಿಗೊಂಡ. ಏನಾದರಾಗಲಿ ಈ ವಿಚಾರ ಬರೇ  ಯೋಚಿಸಿ ಬಗೆ ಹರಿಯುವುದಿಲ್ಲ ಎನ್ನುವುದನ್ನು ಮನಗಂಡ ಆತ
ಇದರ ಮೂಲದತ್ತ ಸಾಗುವ ಯೋಚನೆ ಮಾಡಿದ.

ಒಹ್ ತಾನು ಈ ಮೊದಲೆಲ್ಲಾ ಮಾಡಿದ ಹಲ್ಕಟ್ ಗಿರಿ ಕೆಲಸಗಳಲ್ಲೆಲ್ಲಾ ತನ್ನ ಸಖನಾಗಿ, ಸಾರಥಿಯಂತೆ ಇದ್ದ ಗೋಪಿ ಶಾಸ್ತ್ರಿಯನ್ನು ಬಿಟ್ಟು ಈ ಮೋಹಿನಿಯ ಶೋಧನೆಯ ಮಹತ್ಕಾರ್ಯ ಮಾಡುವುದೇ ಎಂದೆನಿಸಿ ಒಂದು ಎಲೆ ಅಡಿಕೆ ಹಾಕಿಕೊಂಡು ಅಮ್ಮನ ಹತ್ರ "ಅಮ್ಮಾ ಇಲ್ಲೇ ಗೋಪಿ ಮನಿಗೆ ಹೋಗ್ಬತ್ತಿ. ಅಪ್ಪಯ್ಯ ಕೇಳಿರೆ ಎಲ್ಲಿಗೆ ಹೋಗ್ತಿ ಅಂತ ಹೇಳಲ್ಲೆ ಅಂತ ಹೇಳು" ಎಂದವನೇ ತನ್ನ ಬೈಕ್ ಸ್ಟಾರ್ಟ್ ಮಾಡಿ ಗೋಪಿ ಮನೆಗೆ ಹೋದ. ಆದರೆ ಅಲ್ಲಿ ಇವನ ಮೋಹಿನಿಯ ವಿಚಾರ ಜಾಳು ಎನ್ನಿಸುವಂತಹ ರುಚಿಕರ ಮಾತು ಕತೆ ನಡೆಯುತ್ತಿತ್ತು. ಅದು ಮತ್ತೇನಲ್ಲ ದೀಪಂಗೆ ಸಲೀಮ ಬರೆದ ಲವ್ ಲೆಟರ್ ಸಿಕ್ಕಿದ್ದು ಮತ್ತು ಅದರ ಕುರಿತಾಗಿ ಮುಂದೆ ಕೈಗೊಳ್ಳ ಬೇಕಾದ ಕ್ರಮಗಳ ಬಗೆಗಾಗಿತ್ತು. ಊರು ಮನೆ ಸಂಪ್ರದಾಯದಂತೆ ವಿಶ್ವ ಅದರಲ್ಲಿ ಭಾಗಿಯಾದ. ತನ್ನ ಮಹತ್ತರ ಉದ್ದೇಶವೂ ಆತನಿಗೆ ಮರೆತು ಹೋಯ್ತು. ಚರ್ಚೆ ಒಂದು ಅಂತ್ಯ ಕಾಣುತ್ತಲೇ ಎಲ್ಲರೂ ಮನೆಗೆ ಹೊರಟರು. ವಿಶ್ವನೂ ಹೋದ.

ಮರುದಿನ ಮತ್ತೆ, ಆಫೀಸೆನಿಂದ ಬರುವಾಗ ಇವನಿಗೆ ಮೋಹಿನಿಯ ನೆನಪಾಯಿತು. ಒಮ್ಮೆಲೇ ಹುದುಗಾತಿಕೆಯಲ್ಲಿ ಓದಿದ ಅನೇಕ ಕಾದಂಬರಿಗಳು ನೋಡಿದ ಅನೇಕ ಧಾರಾವಾಹಿಗಳು ನೆನಪಾದವು. ಹೀಗೆ ಗತಕಾಲದ ನೆನಪಿನಲ್ಲಿಯೇ ಬರುತ್ತಿದ್ದಾಗ ಮೊದಲು ಮೋಹಿನಿಯನ್ನು ಕಂಡ ಸ್ಥಳ ಬಂತು. ಏನಾದರಾಗಲಿ ನೋಡಿಯೇ ಬಿಡುತ್ತೇನೆ ಎಂದು ವಿಶ್ವ ಹೊರಟ. ಮೋಹಿನಿ ದ್ದ ಜಾಗದಲ್ಲಿ ಬಂದು ನಿಂತ. ಒಮ್ಮೆಲೇ ಹಗಲುಗನಸು  ಕಾಣಲು ಶುರು ಮಾಡಿದ. ತಾನು ಮೋಹಿನಿಯ ರಹಸ್ಯವನ್ನು ಭೇದಿಸಿದಂತೆ ತನ್ನ ಸುದ್ದಿ T V 9 ನಲ್ಲಿ ಸುವರ್ಣ ನ್ಯೂಸ್ ನಲ್ಲಿ ಬಂದಂತೆ ಮನಸೋ ಇಚ್ಛೆ ಟೇಪ್ ರಿಪೀಟ್ ಮಾಡಿದ. ಒಮ್ಮೆ ದೀಪ ಹಾಗು ಅವಳ ತಥಾಕಥಿತ  ಪ್ರೇಮಿ ತೊಗರು ಸಲೀಮನಿಗೂ ಈ ಮೋಹಿನಿ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಕೂಡ ಅನ್ನಿಸಿತು. ಇಷ್ಟಾದರೂ ಮೋಹಿನಿಯ ಸುಳಿವಿಲ್ಲ.

ಅಷ್ಟರಲ್ಲಿ ಯಾರೋ ಬೆನ್ನು ಮುಟ್ಟಿದ ಅನುಭವವಾಯಿತು. ವಿಶ್ವ ತಿರುಗಿ ನೋಡಿದ , ಮೋಹಿನಿ .ಮೊನ್ನೆ ಕಂಡ ಹಾಗೆ ಬಿಳಿ ಸೀರೆಯನ್ನೇ ಉಟ್ಟಿದ್ದಾಳೆ . ಒಮ್ಮೆಲೇ ಅವಕ್ಕಾಗಿ ನಿಂತ ನಮ್ಮ ವಿಶ್ವ. ಅವನ ಅಪ್ಪಯ್ಯನ ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಬೆಕ್ಕಸ ಬೆರಗಾಗಿ ದಿಕ್ಕು ಕೆಟ್ಟು ದಂಗು ಬಡಿದು ನಿಂತಿದ್ದ . ಅಷ್ಟರಲ್ಲಿ ಆ ಮೋಹಿನಿ "ಸಾಬ್ ! ಚೌಕೋ ಮತ್ ಚಮ್ಕೋ . ನಯಾ ಟೈಡ್ ನಾಚುರಲ್ !!."" ಎಂದು ಹೇಳಿ ಪಕ್ಕದಲ್ಲಿದ್ದ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಂಡು "ಬಸಂತೀ! ಮೈ ರಾಧಾ ಹಿಯಾ ಹ್ಞೂ" ಎನ್ನುತ್ತಾ  ನಡೆದುಕೊಂಡು ಹೊರಟಿತು.

ಇದನ್ನೆಲ್ಲಾ ನೋಡಿದ ವಿಶ್ವ  "ಅಯ್ಯೋ! ದೇವರೇ ಈ ಉತ್ತರ ಭಾರತೀಯರು ಇಲ್ಲಿ ಬಿಲ್ಡಿಂಗ್ ಕಟ್ಟಕ್ಕೆ ಬೈಂದ . ಬರಲಿ ಆದ್ರೆ ಬಿಳಿ ಸೀರೆಲಿ ಬಂದು ತಲೆ ಎಂಟಕ್ಕೆ ಕೆಡ್ಸಕ್ಕು " ಎಂದು ಮನದಲ್ಲೇ ಶಪಿಸುತ್ತಾ ಬೈಕ್  ಏರಿ ಮನೆ ಕಡೆ ಹೊರಟ.



Thursday, July 12, 2012

ಬಾಲುವಿನ ಬಾಳ ಲಹರಿ

ಬಾಲು ತನ್ನ ಮನೆಯ ಹೊರಗಿನ ಜಗುಲಿಯ ಮೇಲೆ ಕುಳಿತು ಎದುರು ಮನೆಯ ಕಿಟಕಿಲ್ಲಿ ಬೆಳಗಾಗುವುದನ್ನೇ ಕಾಯುತ್ತಿದ್ದ. ಅವನ ಲೆಕ್ಕದಲ್ಲಿ ಲೋಕದಲ್ಲಿ ಬೇಕಾದರೆ ನೂರು ಸೂರ್ಯರು ಬೆಳಗಲಿ ಅದು ಎದುರು ಮನೆಯ ದೀಪದ ಬೆಳಕಿನ ಮುಂದೆ ಏನು ಅಲ್ಲ. ಅವನು ಎದುರು ಮನೆಯ ಆ ದೀಪದಲ್ಲಿ ಕಂಡದ್ದಾದರೂ ಏನು? ಅದನ್ನು ಅವನೇ ಹೇಳತೊಡಗಿದರೆ ಚಂದ ನಿಜ. ಆದರೆ ಅದನ್ನು ನಾನು ಒಮ್ಮೆ ಕೇಳಿ ಒಂದು ಬಾಟಲ್ ಅಮೃತಾಂಜನ ಖರ್ಚು ಮಾಡಿದ್ದರಿಂದ ನಿಮಗೆ ಆ ಗತಿ ಬೇಡ ಎಂದು ಸರಳವಾಗಿ ಮತ್ತು ಸುಲಭವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ. 
ದೀಪಾ ಎದುರು ಮನೆಗೆ ಬಂದ ಹುಡುಗಿ. ಆ ಮನೆ ಮಾಲಕಿ ಲಕ್ಷ್ಮಕ್ಕನ ಅಕ್ಕನ ಮಗಳು. ಊರಲ್ಲಿ ಕಾಲೇಜಿಗೆ ಹೋಗುವುದಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಚಿಕ್ಕಮ್ಮನ ಮನೆ ಸೇರಿದ್ದಳು. ಅವಳು ಅಲ್ಲಿ ಸೇರಿದ ಮೇಲೆ ಬಾಳುವಿನ ಬಾಳ ತುಂಬಾ ಬೆಳಕೋ ಬೆಳಕು. ಎಷ್ಟು ಬೆಳಕು ಅಂದರೆ ರಾತ್ರಿ ಕೂಡ ಹಗಲಾಗಿದೆ. ಅಂದರೆ ನಮ್ಮ ಬಾಲು ನಿದ್ದೆ ಇಲ್ಲದೇ ರಾತ್ರಿ ಕಳೆಯುತ್ತಿದ್ದಾನೆ. ಆದರೆ ಅವನಿಗೆ ನಿದ್ದೆ ಬರದಿದ್ದಾಗ ಓದುವ ಅಭ್ಯಾಸ ಅಲ್ಲ ಹವ್ಯಾಸ. ಮೊದಲು ಕಾರ್ಯಭಾರದ ಕಾರಣ ಪರೀಕ್ಷೆಯ ಸಂಧರ್ಭದಲ್ಲಿ ಮಾತ್ರ ಈ ಕೆಲಸ ಮಾಡುತ್ತಿದ್ದ ಈಗ ಪ್ರತಿ ದಿನ ಮಾಡಿ ಅಭ್ಯಾಸವಾಗಿದೆ. ಪರಿಣಾಮ ಮೊನ್ನೆ ನಡೆದ internal assessment ನಲ್ಲಿ ಒಳ್ಳೇ ಮಾರ್ಕ್ಸ್ ಬಂದಿದೆ.ಅಷ್ಟೇ ಅಲ್ಲ ಮೊದಲು ಯಾವುದೋ ಬಸ್ಸು ಎಂದುಕೊಂಡು ಮನೆಯಿಂದ ಹೊರಡುತ್ತಿದ್ದವ ಸರಿಯಾದ ಸಮಯಕ್ಕೆ ಹೊರಡುತ್ತಿದ್ದಾನೆ. ಇದರಿಂದ ನಮ್ಮ ಬಾಲುವಿನ ತಂದೆ ಕೃಷ್ಣ ಭಟ್ಟರು ಭಾರಿ ಸಂತುಷ್ಟರು ಏಕೆಂದರೆ ಬಸ್ಸಿಗೆ ಪಾಸ್ ಇರುವುದರಿಂದ ಕಾಸು ಮಿಗುತ್ತದೆ ಮತ್ತು ಮಗ ದಿನಾ ಬೆಳಿಗ್ಗೆ ಬೇಗ ಎದ್ದು ಮನೆ ಕಡೆ ಸ್ವಲ್ಪ ಕೆಲಸ ಮಾಡಿ ಸಂಧ್ಯಾವಂದನೆ ಕೂಡ ಮಾಡುತ್ತಿದ್ದಾನೆ ಎಂದು. ಬಾಲು ಈಗ ಕಾಲೇಜಿನಲ್ಲಿ ಕೂಡ ಒಳ್ಳೇ ಹಾಜರಾತಿ ಹೊಂದಿದ್ದಾನೆ.

ಒಂದು ದಿನ ತನ್ನಷ್ಟಕ್ಕೆ ತಾನೇ ಕುಳಿತು ತನ್ನೊಬ್ಬನ ಬಗ್ಗೆಯೇ ಯೋಚಿಸಿದ ಬಾಳು ತಾನು ಇನ್ನೂ ಹೆಚ್ಚಾದಗ ಮಾತ್ರ ದೀಪಳಿಗೆ ತಾನು ಒಳ್ಳೆಯ ಸಂಗಾತಿಯಾಗಳು ಸಾಧ್ಯ ಅಂತ ಅರ್ಥ ಮಾಡಿಕೊಂಡ ಆದರೆ ತನ್ನಲ್ಲಿ ಇಷ್ಟೆಲ್ಲಾ ಒಳ್ಳೆಯದು ಮಾಡಿದ ದೀಪಳಿಗೆ ಕೃತಜ್ಞತೆ ಸಲ್ಲಿಸ್ದೇ ಇದ್ದಾರೆ ಅದು ಸರಿಯಲ್ಲ, ಹಾಗೆಯೇ ಪ್ರೇಮವನ್ನು ನಿವೇದಿಸದೇ ಇದ್ದಲ್ಲಿ ಅದೂ ಸರಿಯಲ್ಲ ಎಂದು ಯೋಚಿಸಿದ ಬಾಳು ಒಂದು ಕವಿತೆಯ ಮೂಲಕ ಇವೆರಡನ್ನೂ ಮಾಡಲು ನಿರ್ಧರಿಸಿದ.

ತನ್ನ ಈ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ತನ್ನ ಸ್ಫೂರ್ತಿ ದೇವತೆ ದೀಪಾಳ ಬರುವಿಕೆಯನ್ನು ಎದುರು ನೋಡುತ್ತಾ ಮನೆಯ ಎದುರು ಪೆನ್ನು ಪುಸ್ತಕಗಳೊಂದಿಗೆ ಕುಳಿತಿದ್ದಾನೆ ಈಗ. ಕುಳಿತು ಗಂಟೆ ಎರಡು ಕಳೆಯಿತು. ದೀಪಾ ಬರಲಿಲ್ಲ. ಬಾಳುವಿನ ಅಪ್ಪಯ್ಯಾನಿಗೆ ಖುಷಿಯೋ ಖುಷಿ ಯಾಕೆ ಅಂದ್ರೆ ಮಾಣಿ ಪುಸ್ತಕ ಹಿಡ್ಕೈಂದ. ದೀಪಳ ಧ್ವನಿ ಕೇಳುತ್ತಿಂದಂತೆ ಬಾಳು ಕವಿತೆಯ ಮೊದಲ ಸಾಲು ಬರೆದ-- ಓ ಸುಂದರಿ ನೀನಾದೆ ನನ್ನ ಬಾಳ ಲಹರಿ.......

ಮುಂದಿನ ಸಾಲಿಗೆ ಆದಿ ಪ್ರಾಸ ಕೊಡುವುದೋ ಅಂತ್ಯ ಪ್ರಾಸ ಕೊಡುವುದೋ ಅಥವಾ ಪ್ರಾಸವೇ ಇಲ್ಲದ ನವ್ಯ ನವೋದಯದ ಪ್ರೇಮ ಕವಿತೆ ಬರೆಯಲೋ ಎಂದು ತ್ರಾಸ ಪಡುತ್ತಿದ್ದವನಿಗೆ ಎದುರು ಮನೆಯಿಂದ ಲಕ್ಷ್ಮಮ್ಮನ ಹಳಗನ್ನಡದ ನುಡಿಗಳು ಕೇಳಿದವು. "ಅಯ್ಯೋ ಎಂತ ಕೆಲ್ಸಾ ಮಾಡಿದ್ಯೆ ಹಾಲ್ಬಿದ್ದವಳೇ ಓದ್ಲಿ ಒಳ್ಳೇದಾಗಲಿ ಒಂದು ಒಳ್ಳೇ ಮನೆ ಸೇರಿ ಬದೂಕ್ಲಿ ಅಂತ ಹೇಳಿ ಇಲ್ಲಿ ಕರ್ಕಂಡು ಬಂದ್ರೆ ಸಲೀಮನ ಲವ್ ಲೆಟರ್ ಓದ್ತಾ ಇದ್ಯೆಲೆ. ಎಂತ ಅವನ ಜೊತೆ ತೊಗರು ವ್ಯಾಪಾರ ಮಾಡಕ್ಕೂಅಂತ ಇದ್ಯಾ? ಅಥವಾ ಅವನ ತಮ್ಮನ ಗ್ಯಾರೇಜ್ ಬಟ್ಟೆ ತೊಳೆಯಕ್ಕೂ ಅಂತ ಇದ್ಯಾ. ಇನ್ನೊಂದು ಸಲ ಇದನ್ನ ಮಾಡಿರೆ ಕೊಡು ಹಾಕ್ತಿ ನೋಡು. ಏನು ಹಾಳು ಬುದ್ಧಿಯೇನ ಹೆಣ್ಣು ಮಕ್ಳೀಗೆ ಲವ್ ಮಾಡದು ಮಾಡ್ತಾ ನೋಡಿ ಮಾಡಕ್ಕೆ ಎಂತ ರೋಗ" ಎನ್ನುತ್ತಾ ದೀಪಳ ಮೇಲೆ ಲಕ್ಷ್ಮಮ್ಮ ಫೂತ್ಕರಿಸುತ್ತಿದ್ದಳು.

ಇದನ್ನೆಲ್ಲ ಕೇಳಿದ ಕಥಾ ನಾಯಕ ತಾನು ಸನ್ಯಾಸಿ ಆಗಲೋ ಅಥವಾ ತನ್ನಲ್ಲಿ ಆಗಷ್ಟೇ ಹುಟ್ಟುತ್ತಿದ್ದ ಮಹಾ ಕವಿಯನ್ನು ಕೊಲೆ ಮಾಡಿದ ತೊಗರು ಸಲೀಮನ ವಿರುದ್ಧ ಸೇಡು ತೀರಿಸಿ ಕೊಳ್ಳಲೋಎಂದು ಯೋಚಿಸ ತೊಡಗಿದ.