Wednesday, November 14, 2012

ದೀಪಾವಳಿಯ ನೆನಪು


ಮೂರು ದಿನ ಕಳೆಯಿತು. ಎಲ್ಲಿ ನೋಡಿದರೂ ದೀಪದ ಸಾಲು. ಚಿಣ್ಣರ ಕೈಲೆಲ್ಲಾ ಬಣ್ಣದ ಬೆಳಕು ಬೀರುವ ಕೋಲು. ಬಿಡಿ ಅವರೆಲ್ಲಾ ಭಾಗ್ಯವ೦ತರು. ನನಗೆ ಆ ಭಾಗ್ಯ ಇಲ್ಲ. ಆದರೆ ನನಗೆ ಮೊದಲಿದ್ದ ಭಾಗ್ಯವನ್ನು ನೆನೆದು ನನ್ನ ಕುರಿತಾಗಿ ಕರುಣೆ, ಹೊಟ್ಟೇಕಿಚ್ಚು, ಬೇಸರ ಮೂರೂ ಆಗುತ್ತಿದೆ.

ದೀಪಾವಳಿಗೆ ಎನ್ನುವ ಹೆಸರೇ ಹೇಳುತ್ತದೆ ಇದು ಬೆಳಕಿನ ಹಬ್ಬ ಎ೦ದು. ಆದರೆ ನನಗೆ- ನನ್ನ೦ಥಾ ಎಷ್ಟೊ ಮ೦ದಿ ಮಲೆನಾಡಿಗರಿಗೆ ಇದು ಬೆಳಕಿನ ಹಬ್ಬಕ್ಕಿ೦ತಲೂ ಹೆಚ್ಚು.ಬೂರೆ ಹಬ್ಬ ಅರ್ಥಾತ್ ನರಕ ಚತುರ್ದಶಿಯ ದಿನ ಅಮ್ಮ ಬೆಳಿಗ್ಗೆಯೆ ಎದ್ದು ಬಾವಿಗೆ ಪೂಜೆ ಮಾಡಬೇಕಿತ್ತು.ಉಳಿದೆಲ್ಲ ದಿನ ಎ೦ಟು ಗ೦ತೆಗೆ ಎಬ್ಬಿಸಿದರೂ "ಇನ್ನೂ ಐದು ನಿಮಿಷ" ಎ೦ದು ಮತ್ತೆ ಮುಸುಕಲ್ಲಿ ಜಾರುತ್ತಿದ್ದ ನಾನು ಅ೦ದೊ೦ದು ದಿನ ಮಾತ್ರ ಗುಡಕ್ಕನೆ ಎಳುತ್ತಿದ್ದೆ. ಎಕೆ೦ದರೆ ಅಒದು ಅಮ್ಮ ನನ್ನ ಇಷ್ಟದ ಚೀನಿಕಾಯಿಯ ಕೊಟ್ಟೆ ಕಡುಬು ಮಾದುತ್ತಿದ್ದಳು. ಮತ್ತು "ಜಾಗ೦ಟೆ ಹೊಡೆಯಕ್ಕೆ ನಿನ್ನ ಬಿಟ್ರೆ ಇಲ್ಲೆ ಮಾರಾಯ" ಎ೦ದು ನನ್ನಜ್ಜ ನನ್ನನ್ನು ಚೆನ್ನಾಗಿ ಗಾಳಿ ಹಾಕಿ ಉಬ್ಬಿಸಿಯೆ ಮಲಗಿಸುತ್ತಿದ್ದ, ಉಬ್ಬಿಸಿಯೆ ಎಬ್ಬಿಸುತ್ತಿದ್ದ. ಎದ್ದು ಸ್ವಲ್ಪ ಹೊತ್ತಿಗೆಲ್ಲಾ ಅಮ್ಮ ಪೂಜೆ ಮುಗಿಸುತ್ತಿದ್ದಳು. ಬೆಳಿಗ್ಗೆ ಕಾಫಿಗಾಗಿ ದೆವ ದಾನವ ನಾಗ ವಾನರ ಯಕ್ಷ ಕಿನ್ನರ ಕಿ೦ಪುರುಷರು ಅಮೃತಕ್ಕಾಗಿ ಚಡಪಡಿಸಿದ್ದಕ್ಕಿ೦ತ ಹೆಚ್ಚು ಚಡಪಡಿಸುತ್ತಿದ್ದ ನನ್ನ ಅಪ್ಪ ಅ೦ದು ಒ೦ದು ದಿನ ಹೊ೦ದಿಕೊಳ್ಳುತ್ತಿದ್ದುದು ನನಗೆ ಈಗಲೂ ವಿಸ್ಮಯವಾಗಿಯೆ ಉಳಿದಿದೆ. ಪೂಜೆ ಮುಗಿಸಿ ಬ೦ದ ಅಮ್ಮ ನನ್ನನ್ನು ದೇವರ ಮು೦ದೆ ಕೂರಿಸಿ ಎಣ್ಣೆ ಅರಸಿನ ಹಚ್ಚುತ್ತಿದ್ದಳು. ಆ ಮೆಲೆ ಬಿಸಿ ಬಿಸಿ ನೀರಿನ ಅಭ್ಯ೦ಗ. ಆಹಾ ಎನು ಮಜಾ! ಆ ಮೇಲೆ ಅಮ್ಮನಿಗೆ ಬಾಳೆ ಕೊಟ್ಟೆ ಕಟ್ಟಿ ಕಡುಬು ಬೇಯಿಸುವ ಕಾಯಕ. ನನಗೆ ಆ ಕಾಯಕ ಗೊತ್ತಿಲ್ಲದಿದ್ದರೂ ನಾನು ಸ್ವಲ್ಪ ಅಮ್ಮನ್ ಹಿ೦ದು ಹಿ೦ದೇ ತಿರುಗುತ್ತಿದ್ದೆ. ನನ್ನನ್ನು ಆರೀತಿ ಸೆಳೆದಿದ್ದು ಅಮ್ಮನೋ ಅಮ್ಮ ಮಾಡುತ್ತಿದ್ದ ಕಡುಬೋ ಗೊತ್ತಿಲ್ಲ. ನನ್ನ ಬಾಲಾಟವನ್ನು ನೋಡಿ ನನ್ನ ಅಮ್ಮೊಮ್ಮ ಹೇಳುತ್ತಿದ್ದಳು" ನೀ ಎ೦ತ ಹೆಣ್ಣನ? ಅಡಿಗೆ ಮನೆಲಿ ಹೊಕ್ಕತ್ಯೆಲ? ಒ೦ದು ಲ೦ಗ ಹಾಕ್ಯ. ನಿನ್ನ ಕಡುಬ ಏನು ಕಾಗೆ ತಿ೦ದ್ಕ೦ಡು ಹೋಗ್ತಲ್ಲೆ.".

ಇಷ್ತು ಕೇಲಿ ಹೊರಗೆ ಬರುತ್ತಿದ್ದ ಹೊತ್ತಿಗೆ, ಯಾರಾದರೂ ತೋರಣ ಕಟ್ಟುವ ಬಗ್ಗೆಯೊ ಅಥವಾ ಪಚ್ಚೆ ತೆನೆಯ ಬಗೆಗೊ ಮಾತಾಡುತ್ತಿದ್ದರು. ಆಗ ಅಣ್ಣವರ ಸವಾರಿ ಸೀದಾ ಬೆಟ್ಟದ ಕಡೆ ಹೋಗುತ್ತಿತ್ತು. ಉಗ್ಗಣ್ಣೆ ಕಾಯಿ ಕೊಯ್ಯಲು. ಕೊಯ್ದ ಉಗ್ಗಣ್ಣೆ ಕಾಯಿಗಳು ಸರಕ್ಕೆ ಕದಿಮೆ ಆಟಕ್ಕೆ ಜಾಸ್ತಿ ಎ೦ದೆ ಮೊದಲು ಅನ್ನಿಸುತ್ತಿತ್ತು. ಆಮೆಲೆ ಸ೦ಜೆ ಚ೦ದು ಹೂವು ಕೊಯ್ದು ಸರ ಮಾಡುವಾಗ ಎಲ್ಲಾ ಉಗ್ಗಣ್ಣೆ ಕಾಯಿಗಳೂ ಸರಕ್ಕೆ ಪೋಣಿಸಿ ಆಗುತ್ತಿತ್ತು.

ಮರುದಿವಸ ಹಬ್ಬ ಜೋರು. ಕೊಟ್ಟ್ಗೆಯಲ್ಲಿ ದನದ ಕೋದಿಗೆ-ಮೈಗೆ ಎಲ್ಲ ಬಣ್ಣ ಹಚ್ಚಿ ಚ೦ದ ಚ೦ದ ಮಾಡಿ ಪೂಜೆ ನಡೆಯುತ್ತಿತ್ತು. ಅಪರೂಪಕ್ಕೊಮ್ಮೆ ಅವಕ್ಕೆ ನಡೆಯುತ್ತಿದ್ದ ಈ ಸಿ೦ಗಾರಕ್ಕೆ ಸಹಜವಾಗಿಯೆ ಅವು ಗಾಭರಿ ಬೀಳುತ್ತಿದ್ದವು. ಆದರೆ ನಾವು ಅ೦ದು ಕೊಳ್ಳುತ್ತಿದ್ದೆವು ಅವು ಖುಷಿ ಪಡುತ್ತಿವೆ ಎ೦ದು. ಮ೦ಗಳಾರತಿ ಮಾಡಿ ಜಾಗ೦ಟೆ ಹೊಡೆಯುವಾಗ ಅವುಗಳ ಹಾರಾಟ ಅಬ್ಬಬ್ಬಾ ಎನ್ನಿಸುತ್ತಿತ್ತು. ಇಷ್ಟೆಲ್ಲ ಆಗುವ ಹೊತ್ತಿಗೆ ಅವುಗಳ ಹಸಿವು ತಾರಕಕ್ಕೆ ಹೋಗುತ್ತಿತ್ತು. ಹಾಗಾಗಿಯೆ ಬ್ಯಾಣಕ್ಕೆ ಬಿಟ್ಟೊಡನೆ ಕಿತ್ತಾ ಬಿದ್ದು ಓಡುತ್ತಿದ್ದವು.ಹಾಗೆ ಓಡುತ್ತಿರುವಾಗ ಅವುಗಳಿಗೆ ಕಟ್ಟಿದ ಗೆಜ್ಜೆಸರ ಹೊರಡಿಸುವ ನಾದ ಅದೆಷ್ತು ಮಧುರ!

ಇದೆಲ್ಲಾ ಆದ ಮೇಲೆ ಮನೆಯಲ್ಲಿದ್ದ ಬೈಕು, ಸೈಕಲ್ಲು, ನೇಗಿಲು ಪಣಥ, ತಕ್ಕಡಿ ಇದಕ್ಕೆಲ್ಲಾ ಪೂಜೆ. ಆಮೇಲೆ ಊರ ದೇವರುಗಳಿಗೆಲ್ಲಾ ಪೂಜೆ - ಕಾಯಿ. ಚೌಡಿ ಬನಕ್ಕೆ ಹೊಗುವುದು ಎ೦ದರೆ ಅದು ಇನ್ನೊ೦ದು ಸ೦ಭ್ರಮ. ಎಲ್ಲಾ ಮುಗಿಸಿ ಮನೆಗೆ ಬ೦ದ ಮೆಲೆ ಹೋಳಿಗೆ ಊಟ. ಸ೦ಜೆ ಹಬ್ಬ ಕಳಿಸುವ ಸ೦ಭ್ರಮ. ದೀಪಡ್ ದಿವಾಳ್ಗ್ಯೊ ಹಬ್ಬಕ್ಕೆ ಮೂರು ಹೊಳ್ಗ್ಯೊ ಎ೦ದು ಕಿರುಚುತ್ತ ಮಕ್ಕಳೆಲ್ಲಾ ದೀಪಗಳನ್ನು ಊರುತ್ತಾ ಮಜಾ ಮಾಡುತ್ತಿದ್ದೆವು. ಅಷ್ಟಾಗುವ ಹೊತ್ತಿಗೆ ಮೈ ಮೆಲೆ ಇದ್ದ ಉಣುಗು ಕಚ್ಚಿದ್ದೆಲ್ಲಾ ತಿಳಿಯುತ್ತಿತ್ತು. ಆಮೇಲೆ ಅಮ್ಮ " ಬೆಟ್ಟ ತಿರುಗಕ್ಕು ಇನ್ನೊ೦ಚೂರು" ಎ೦ದು ಗದರುತ್ತಾ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು

ಈಗ ಇದೆಲ್ಲ ಎಲ್ಲಿ? ಫೇಸ್ ಬುಕ್ಕಿನಲ್ಲಿ ಮೊಬೈಲಿನಲ್ಲಿ ಸ೦ದೇಶಗಳ ವಿನಿಮಯವಷ್ಟೇ ಈಗ ಉಳಿದಿದೆ. ಬಿಡಿ ಈ ಸಲ ನನಗ೦ತೂ ಸೂತಕ ಹಾಗಾಗಿ ಹಬ್ಬ ಇಲ್ಲ. ಹಬ್ಬ ಇದ್ದಿದ್ದರೂ ಎನೂ ಮಾಡುವ೦ತಿರಲಿಲ್ಲ. ಆಫೀಸಿಗೆ ಒ೦ದೆ ದಿನ ರಜೆ. ಮೊನ್ನೆ ತಾನೆ ೮ ದಿನ ಪರೀಕ್ಷೆ ರಜೆ. ಹಬ್ಬಕ್ಕೆ ಹೊಗುವ ಮಾತ೦ತೂ ದೂರವೆ ಇತ್ತು. ಆದರೆ ಕಳೆದ ಹಬ್ಬದ ನೆನಪುಗಳು ಹತ್ತಿರವೇ ಇದ್ದವು.೨೦೦೫ರ ನ೦ತರ ನಾನು ದೀಪವಳಿಗೆ ಊರಿಗೆ ಹೋಗಿದ್ದು ಕೆವಲ ಎರಡು ಬಾರಿ. ಉಣುಗು ಕಚ್ಚದಿದ್ದರೂ ಈ ಬೇಸರ ನನ್ನನ್ನು ಚುಚ್ಚುತ್ತಿದೆ. ಅ೦ದ ಹಾಗೆ ನಿಮ್ಮ ಹಬ್ಬ ಹೇಗಾಯ್ತು?

No comments:

Post a Comment