Tuesday, April 24, 2018

ಮರೆವಿನ ಮಹಾತ್ಮೆ


ಸ್ವಭಾವತಃ ನಾನೊಬ್ಬ ಸೋಮಾರಿ. ಕೆಲಸಗಳ್ಳ. ಆಲಸಿ ಜೊತೆಗೆ ಮರೆಗುಳಿ ಕೂಡಾ. ನನಗೂ ಮರೆಗುಳಿ ಸ್ವಭಾವದ ಅರಿವು ಚೆನ್ನಾಗಿಯೇ ಇದೆ. ಹಾಗಂತ ಮಹಾನ್ ಮರೆಗುಳಿ ಏನಲ್ಲ. ಎಷ್ಟು ಎಂದರೆ ಫ್ರಿಡ್ಜ್ ಬಾಗಿಲು ಹಾಕದೆ ಹೋಗುವುದು. ಆಪೀಸಿಗೆ ಚಪ್ಪಲಿ ಹಾಕಿ ಹೊರಟು ಅರ್ಧ ದೂರ ಹೋದ ಮೇಲೆ ಮತ್ತೆ ಬಂದು ಬೂಟು ತೊಟ್ಟು ಹೊರಡುವುದು. ಮೊಬೈಲ್ ಫೋನ್ ಆಪೀಸಿನಲ್ಲೇ ಬಿಟ್ಟು ಬರುವುದು ಹೀಗೆ. ನಾನೇಕೆ ಮರೆಯುತ್ತೇನೆ ಎನ್ನುವ ಪ್ರಶ್ನೆ ನನಗೆ ಯಾವತ್ತೂ ಕಾಡಲೇ ಇಲ್ಲ. ಯಾಕೆಂದರೆ ನಾನದನ್ನು ಒಪ್ಪಿಕೊಂಡಿದ್ದೇನೆ.

ನನ್ನನ್ನಾಡಿಕೊಳ್ಳುವವರಿಗೆ ಇದೊಂದು ಅಸ್ತ್ರವಾಗಿದೆ. ಅದಕ್ಕೆ ಸ್ವಲ್ಪ ಬೇಸರವಿದೆ. ಆದರೆ ಅವರ ನೆನಪಿನ ಶಕ್ತಿ ಅತ್ಯದ್ಭುತ. ಯಾವುದನ್ನೋ ಯಾವುದಕ್ಕೋ ಸೇರಿಸಿಬಿಡುತ್ತಾರೆ. ನನ್ನ ಪುಣ್ಯ. ಹಾಗಾಗಲಿಲ್ಲ. ಇದರಿಂದ ನನಗೆ ಒಳ್ಳೆಯದಾಗಿದ್ದೇ ಹೆಚ್ಚು ಎಂದರೂ ತಪ್ಪಲ್ಲ. ಎಲ್ಲರೂ ಒಂದು ಪುಸ್ತಕವನ್ನು ಒಂದು ಸಲ ಓದಿ ನೆನಪಿಟ್ಟುಕೊಂಡರೆ ನಾನು ಹಲವು ಸಲ ಓದಬೇಕಾಗುತ್ತದೆ. ಪರಿಣಾಮ, ಹಲವು ದೃಷ್ಟಿಕೋನದಿಂದ ಒಂದೇ ವಿಷಯವನ್ನು ನೋಡುವ ಸುಯೋಗ ನನ್ನ ಪಾಲಿಗೆ.

ಇಂಥಾ ಮರೆವಿನಿಂದ ಒಮ್ಮೆ ಮನೆಯ ಗೀಜರ್ ಆಫ಼್ ಮಾಡದೇ ಅಪೀಸಿಗೆ ಹೋದೆ. ಅಪೀಸಿಗೆ ಹೋದ ಮೇಲೆ ನೆನಪಾಯಿತು. ಭಯವಾಗತೊಡಗಿತು. ಪರಿಣಾಮ ಕೆಲಸದ ಮೇಲೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಆದರೂ ಸಮಾಧಾನಕ್ಕಾಗಿ ಹಲವರನ್ನು ಕೇಳಿದೆ. "ಗೀಜರ್ ಆಫ಼್ ಮಾಡದಿದ್ದರೆ ಏನು ತೊಂದರೆ?" ಎಲ್ಲರೂ ಹೇಳಿದ್ದು ಒಂದೇ. ಆಗಾಗ ಆದರೆ ತೊಂದರೆ ಇಲ್ಲ. ಅದು ತಂತಾನೇ ಆಫ಼್ ಆಗುತ್ತದೆ. ಆದರೆ ಅದರ ಹೀಟ್ ಸ್ಟಾಟ್ ಕೆಟ್ಟು ಹೋದರೆ ಕಷ್ಟ ಎಂದು. ಹಾಳಾದ ನಕರಾತ್ಮಕ ಹುಳ ತಲೆಗೆ ಬಿತ್ತು ಮತ್ತೆ. ಕೆಲಸ ಮಾಡಲು ಸಾಧ್ಯವೇ ಆಗಲಿಲ್ಲ. ಅರ್ಧ ದಿನ ರಜೆ ಹಾಕಿ ಮನೆಗೆ ಬಂದು ಗೀಜರ್ ಆಫ಼್ ಮಾಡಿದೆ.

ಮರುದಿನ ಬೆಳಿಗ್ಗೆ ಎದ್ದು ಗೀಜರ್ ಸ್ವಿಚ್ ಹಾಕಿ ಬಾತ್ ರೂಮಿಗೆ ಹೋಗಿ ಅಂತರಂಗ ಶುದ್ಧಿಗೆ ಕುಳಿತೆ. ಸ್ವಲ್ಪ ಹೊತ್ತಿನಲ್ಲೇ ಶಬ್ದಗಳು ಪ್ರಾರಂಭವಾದವು. ನನ್ನಿಂದ ಅಲ್ಲವೇ ಅಲ್ಲ. "ಗೂಂ" ಎಂದು ವಿಮಾನ ಹಾರಾಟದ ಶಬ್ದ. ರಾಮ ನಾಯಕನ ಟವೆಲ್ಲಿನಲ್ಲಿ ಗುಂಗೆ ಹುಲ ಹೊಕ್ಕ ಘಟನೆಯ ನೆನಪಾಗಿ ನಕ್ಕೆ. ಆದರೆ ನಗು ಕ್ಷಣಿಕವಾಗಿತ್ತು. ಗೀಜರ್ ಆಫ಼್ ಮಾಡದೇ ಹೋಗಿದ್ದು ನೆನಪಾಯಿತು. ಹಾಗಾದರೆ ಗೀಜರ್ ಕೆಟ್ಟಿತೇ? ನಿನ್ನೆ ಬಹಳ ಹೊತ್ತು ಆನ್ ಇದ್ದ ದುಷ್ಪರಿಣಾಮವೇ ಇದು ಎಂದು ತೀರ್ಮಾನಿಸಿ ಬಿಟ್ಟೆ. ಆದರೆ ನನಗಾದ ಭಯದ ಪರಿನಾಮವೋ ಏನೋ ಅಂತರಂಗ ಶುದ್ಧಿ ಮುಗಿಯುತ್ತಲೇ ಇಲ್ಲ. ಹಾಳಾದ ಶಬ್ದವೂ ನಿಲ್ಲುತ್ತಿಲ್ಲ. ಹೆದರಿಕೆ ಹೆಚ್ಚುತ್ತಲೇ ಇತ್ತು. ಅಷ್ಟರಲ್ಲಿ ಅಂತರಂಗ ಶುದ್ಧಿಯೂ ಮುಗಿಯಿತು. ಎದ್ದು ಹೊರಬಂದು ಗೀಜರ್ ಆಫ಼್ ಮಾಡಿದೆ. ಏನೋ ಒಂದು ದೊಡ್ಡ ಅಪಾಯ ತಪ್ಪಿಸಿದ್ದ ಸಮಾಧಾನ ಪಡೆದು ಉಸಿರು ತೆಗೆದೆ.

ಆದರೆ ಶಬ್ದ ನಿಲ್ಲುತ್ತಿಲ್ಲ. ಬದಲಾಗಿ ಜೋರಾಗುತ್ತಲೇ ಇದೆ. ಒಳ್ಳೆ ಸಮಸ್ಯೆಯಾಯಿತಲ್ಲ. ಅಷ್ಟು ಗಡಿಬಿಡಿಯಲ್ಲಿ ಅಂತರಂಗ ಶುದ್ಧಿ ಮುಗಿಸಿ ಬಂದರೂ ಹಾಳು ಶಬ್ದ ನಿಲ್ಲುತ್ತಿಲ್ಲ. ನನ್ನ ಎದೆ ಹೊಟ್ಟೆ ಎರಡರಲ್ಲೂ ಅವಲಕ್ಕಿ ಕುಟ್ಟಿದ ಅನುಭವ. ಒಟ್ಟು ಮರೆವಿಗೆ ಬೆಲೆ ತೆರಬೇಕಾಯಿತು. ಆರು ಸಾವಿರ ರೂಪಾಯಿ ಗಂಟಿಗೆ ಸಂಚಕಾರ ಬಂತು ಎಂದೇ ಭಾವಿಸಿದೆ. ಹಣೆಯ ಬರಹಕ್ಕೆ ಹೊಣೆ ಯಾರು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆದರೆ ಸ್ನಾನ ತಡವಾದರೆ ಕ್ಯಾಬ್ ತಪ್ಪಿಸಿಕೊಳ್ಳಬೇಕಾಗುತ್ತದೆ. ಗಡಿಯಾರದ ಮುಳ್ಳು ಮುಂದೆ ಸಾಗಿದಂತೆಲ್ಲಾ ನನ್ನ ಕಳವಲ ಹೆಚ್ಚುತ್ತಲೇ ಹೋಯಿತು. ಸ್ನಾನಕ್ಕೆ ಹೋಗದಿದ್ದರೆ ಸಾಧ್ಯವಿಲ್ಲ. ಹೋದರೆ ಅದೇ ಸಮಯದಲ್ಲಿ ಗೀಜರ್ ಸಿಡಿದರೆ ಎನ್ನುವ ಭಯ. ನಂಬಿದ ದೇವರಲ್ಲಿ ಮೊರೆ ಇಟ್ಟೆ. ಮತ್ತಿನ್ನೇನು ಮಾಡಲು ಸಾಧ್ಯ ನಮ್ಮ ಕೈ ಮೀರಿದಾಗ?

ಆಗ ಸೂಕ್ಷ್ಮವಾಗಿ ಗಮನಿಸಿದೆ. ಶಬ್ದ ನನ್ನ ಮನೆಯಿಂದ ಬರುತ್ತಿಲ್ಲ. ಹೊರಗಡೆಯಿಂದ ಬರುತ್ತಿದೆ. ಹಾಳಾಗಿ ಹೋಗಲಿ ಎಂದು ಟವೆಲ್ ಹುಡುಕಲು ಹೊರಟಿದ್ದೆ. ಅಷ್ಟರಲ್ಲಿ ಪಕ್ಕದ ಮನೆಯಿಂದ ಶಬ್ದ ಬಂತು "ಟ್ಯಾಂಕ್ ತುಂಬದೆ. ಆಫ಼್ ಮಾಡ್ಲಾ" ಎಂದು. ನಾನೆಂದುಕೊಂಡೆ ನನ್ನ ಮರೆವಿನ ಜತೆ ಇವನ ಮರೆವೂ ಸೇರಿ, ನನ್ನ ಹೊಟ್ಟೆಯಲ್ಲೇ ಅವಲಕ್ಕಿ ಕುಟ್ಟಿತಲ್ಲ, ಏನಾದರಾಗಲಿ. ಒಂದು ಲಘು ಹರಟೆಗಂತೂ ವಿಷಯ ಸಿಕ್ಕಿತು. ಹಂಚಿಕೊಂಡೆ.

Thursday, April 19, 2018

ಸ್ಯಮಂತಕ ಮಣಿ ಮತ್ತು ವರ್ತಮಾನ


ಸತ್ರಾರ್ಜಿತ ಎನ್ನುವ ಯಾದವ ಅರಸ, ಭಗವಾನ್ ಭಾಸ್ಕರನನ್ನು ಆರಾಧಿಸಿ ಸ್ಯಮಂತಕ ಮಣಿಯನ್ನು ಪಡೆಯುತ್ತಾನೆ. ಸ್ಯಮಂತಕ ಮಣಿಯನ್ನು ಪಡೆದವ ಅದನ್ನು ಕಾಪಿಟ್ಟುಕೊಳ್ಳಲು ಕೆಲವು ನೀತಿ ನಿಯಮ ಕಟ್ಟು ಪಾಡುಗಳನ್ನು ಆಚರಿಸಬೇಕಿತ್ತು. ಅದೆಂದರೆ ಆತ ದಾನ ಮಾಡುವುದಕ್ಕೆ ಎಂದಿಗೂ ಹಿಂಜರಿಯಬಾರದು ಎನ್ನುವುದು, ಯಜ್ಞ ತಾಗಗಳನ್ನು ಮಾಡಬೇಕು. ಸದಾ ಶುದ್ಧ ಮನಸ್ಕನಾಗಿರಬೇಕು ಎನ್ನುವುದು. ಸ್ತ್ರಾರ್ಜಿತನ ತಮ್ಮ ಪ್ರಸೇನ, ಬೇಟೆಗೆಂದು ಹೊರಟವ ಅದನ್ನು ತೊಟ್ಟು ಹೋಗುತ್ತಾನೆ. ವಾಸ್ತವದಲ್ಲಿ ಸತ್ರಾರ್ಜಿತ ಕಷ್ಟಾರ್ಜಿತವಾದ ಮಣಿಯನ್ನು ಪ್ರಸೇನನ ಕೈಗೆ ಕೊಟ್ಟಾಗಲೇ ಕಳೆದುಕೊಂಡ. ಉದ್ಧಾರಕ್ಕೆಂದು ಕೊಟ್ಟದ್ದನ್ನು ಅಲಂಕಾರಕ್ಕೆಂದು ತೊಡುವುದಕ್ಕೆ ಕೊಟ್ಟರೆ ಕಳೆದುಕೊಳ್ಳುವುದಲ್ಲದೇ ಮತ್ತೇನು? ಪ್ರಸೇನನನ್ನು ಸಿಂಹವೊಂದು ಕೊಲ್ಲುತ್ತದೆ. ಸಿಂಹವನ್ನು ಜಾಂಬವಂತ ಕೊಂದು ಮಣಿಯನ್ನು ತನ್ನ ಗುಹೆಗೆ ಕೊಂಡೊಯ್ಯುತ್ತಾನೆ.

ಕಡೆ ಕೃಷ್ಣನ ಮೇಲೆ ಅಪವಾದ ಬರುತ್ತದೆ. ಕೃಷ್ಣ ಅದನ್ನು ಕೇಳಿದ್ದೇ ಕಾರಣವಾಗಿತ್ತು ಅಪವಾದಕ್ಕೆ. ತಮಾಷೆ ಎಂದರೆ, ಬೇಟೆಗೆಂದು ಹೊರಟ ಪ್ರಸೇನ ಅಲಂಕಾರಕ್ಕೆ ತೊಡುವುದಕ್ಕೆ ಕೇಳಿದಾಗ ಸತ್ರಾರ್ಜಿತನಿಗೆ ಏನೂ ಅನ್ನಿಸಲಿಲ್ಲ. ಆದರೆ ಕೃಷ್ಣ ಕೇಳಿದಾಗ ತಪ್ಪೆನ್ನಿಸಿತು. ಅವನ ಮೇಲೆ ಅಪವಾದ ಹೊರಿಸುವುದಕ್ಕೂ ಅದೇ ಕಾರಣವಾಯಿತು. ಅಪವಾದವನ್ನು ಹೊತ್ತ ಕೃಷ್ಣ ಕಾಡಿಗೆ ಹೋಗಿ, ಹೆಜ್ಜೆ ಗುರುತಿನ ಜಾಡು ಹಿಡಿದು ಜಾಂಬವ ಗುಹೆಯನ್ನು ಹೊಕ್ಕು, ಜಾಂಬವನೊಡನೆ ಕಾದಾಡಿ ಮಣಿಯನ್ನು ಪಡೆದು ಸತ್ರಾರ್ಜಿತನಿಗೆ ತಂದು ಕೊಡುತ್ತಾನೆ.

ಪ್ರಚಾರ ಪ್ರಿಯ ಸತ್ರಾರ್ಜಿತ ಮಣಿ ಸೂರ್ಯನಿಂದ ಸಿಕ್ಕಿದ್ದಾಗ ಎಲ್ಲರನ್ನೂ ಕರೆದು ಊಟ ಹಾಕಿದ್ದ. ಮಣಿ ಮತ್ತೆ ಸಿಕ್ಕಿದ ಮೇಲೆ ಕೃಷ್ಣನನ್ನು ಅಳಿಯನ್ನಾಗಿಸಿಕೊಂಡು ಎಲ್ಲರಲ್ಲೂ ಹೇಳಿಕೊಂಡು ತಿರುಗಿದ. ಇದು ಮಣಿಯ ಕುರಿತು ಒಂದು ರೀತಿಯ ಈರ್ಷ್ಯಾ ಭರಿತ ಆಸೆ ಹುಟ್ಟಿಸಿತು ಯಾದವರಿಗೆ. ಸುವಿಚಕ್ಷಣ ಎಂದು ಕೃಷ್ಣನಿಂದಲೇ ಕರೆಸಿಕೊಂಡ ಅಕ್ರೂರನಿಗೂ ಆಸೆ ಹುಟ್ಟಿತ್ತು ಎಂದರೆ ಸತ್ರಾರ್ಜಿತನ ಬಾಯಿ ಅದೆಷ್ಟು ಹರಿದಿರಬೇಕು? ಹೀಗೆ ಆಸೆ ಹೊತ್ತ ಅಕ್ರೂರ-ಕೃತವರ್ಮ-ಶತಧನ್ವ ಮೂವರೂ ಒಂದಾದರು. ಶತಧನ್ವ ಸತ್ರಾರ್ಜಿತನನ್ನು ಕೊಂದು ಮಣಿಯನ್ನು ಕದ್ದ.

ಮೊದಲೇ ಒಂದು ಅಪವಾದವನ್ನು ಹೊತ್ತು ಅದನ್ನು ಕಳೆದುಕೊಂಡಿದ್ದ ಕೃಷ್ಣನ ತಲೆಗೇ ಅಪರಾಧದ ಅಪವಾದ ಕಟ್ಟಿದರು ಜನ. ಕೃಷ್ಣನೊಂದಿಗೆ ಬಲಭದ್ರನೂ ಸೇರಿದ. ಮಣಿಯನ್ನೂ ಹಾಗೂ ಅದನ್ನು ಕದ್ದ ಸತ್ರಾರ್ಜಿತನ ಕೊಲೆಗಾರನನ್ನೂ ಹಿಡಿಯಲು ಹೊರಟರು ಇಬ್ಬರೂ. ಇದನ್ನು ತಿಳಿದ ಶತಧನ್ವ ಮಣಿಯನ್ನು ಅಕ್ರೂರನಲ್ಲಿ ಅವನಿಗೇ ತಿಳಿಯದಂತೆ ಬಚ್ಚಿಟ್ಟು ಪಲಾಯನ ಮಾಡಿದ. ಪಲಾಯನ ಮಾಡಿದ್ದ ಶತಧನ್ವನ ಮೇಲೆ ಅನುಮಾನ ತಳೆದ ರಾಮ ಕೃಷ್ಣರಿಬ್ಬರು ಅವನನ್ನು ಬೆನ್ನಟ್ಟಿದ್ದರು. ಕೃಷ್ಣನ ವಿಕ್ರಮದೆದುರು ನಿಲ್ಲದಾದ ಶತಧನ್ವ ಸತ್ತ. ಅವನನ್ನು ಎಷ್ಟು ಜಾಲಾಡಿದರೂ ಮಣಿ ಸಿಗಲಿಲ್ಲ. ಮೊದಲೇ ಅಪವಾದ ಅವಮಾನಗಳಿಂದ ಕಂಗೆಟ್ಟಿದ್ದ ಕೃಷ್ಣ ಈಗ ಅಣ್ಣನ ಭರ್ತ್ಸನೆಯ ಮಾತುಗಳನ್ನೂ ಕೇಳಬೇಕಾಯಿತು. ಸಾಲದ್ದಕ್ಕೆ ಅಣ್ಣನಿಂದ ವಿಯೋಗ ಬೇರೆ. ಸಿಟ್ಟಾದ ಬಲಭದ್ರ ಮಿಥೆಲೆಗೆ ಹೋಗಿ ಕುಳಿತ. ಇಷ್ಟಾಗುವಾಗ, ಅತ್ತೆಯ ಮಕ್ಕಳು ಪಾಂಡವರು ಅರಗಿನ ಮನೆಯಲ್ಲಿ ದಹಿಸಿದ ಸುದ್ದಿ ಬಂತು. ಕಡೆ ಸಾಗಿದ.

ಇತ್ತ ತನಗೆ ಶ್ರಮವಿಲ್ಲದೇ ಬಂದ ಭಾಗ್ಯವಾಗಿದ್ದ ಮಣಿಯನ್ನು ಕಂಡು ಅಕ್ರೂರ ಸಂತೋಷಿಸಿದ್ದ. ಅದನ್ನು ಇಟ್ಟುಕೊಳ್ಳಲು ಬೇಕಾದ ಅರ್ಹತೆ ಯೋಗ್ಯತೆಗಳನ್ನು ಸಂಪಾದಿಸಿದ. ಯಜ್ಞ ಯಾಗಗಳನ್ನು ಮಾಡಿ ದಾನಪತಿ ಎನ್ನಿಸಿಕೊಂಡ. ಇಷ್ಟರಲ್ಲಿ ಕೃಷ್ಣ ದ್ವಾರಕೆಗೆ ಹಿಂದಿರುಗಿದ. ಅಕ್ರೂರನ ದಾನ ಇತ್ಯಾದಿಗಳನ್ನು ನೋಡಿ ಮಣಿ ಅವನನ್ನು ಸೇರಿದ್ದನ್ನು ಗ್ರಹಿಸಿದ. ಅವನನ್ನು ನಾಲ್ಕು ಜನರೆದುರಿಗೆ ಮಣಿಯನ್ನು ಕೊಡುವುದಕ್ಕೆ ಕೇಳಿದ. ಕೃಷ್ಣನಿಗೆ ಹೆದರಿದ್ದ ಅಕ್ರೂರ, ಮಣಿಯನ್ನು ಕೊಟ್ಟ. ಕೃಷ್ಣ ಅದನ್ನು ಅವನಿಗೇ ತಿರುಗಿ ಕೊಟ್ಟ. ಅಪವಾದ ಕಳೆದುಕೊಳ್ಳುವುದೇ ಅವನ ಉದ್ದೇಶವಾಗಿತ್ತೋ ಏನೋ. ಅಥವಾ ತನ್ನ ಮೇಲೆ ಅಪವಾದ ಹಾಕಿದ್ದ ಮಣಿ ಬೇಸರ ತರಿಸಿತ್ತೋ ಏನೋ?

ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರಲಿ ಎಂದು ಶಾಪವಂತೆ. ಅವರು ಸ್ಯಮಂತಕೋಪಾಖ್ಯಾನವನ್ನು ಕೇಳಿದರೆ ಅಪವಾದ ತಟ್ಟುವುದಿಲ್ಲವಂತೆ. ಈಗೇನು ಗಣೇಶ ಚತುರ್ಥಿ ಅಲ್ಲ. ಆದರೂ ಕಥೆ ಹೇಳಿದೆ. ಕಾರಣವಿದೆ. ವರ್ತಮಾನದ ವಿದ್ಯಮಾನಗಳು ಪ್ರಕರಣದ ಸಮೀಪಕ್ಕಿವೆ.

ಆಸಿಫ಼ಾ ಎಂಬ ಹಸುಳೆ ಮಡಿದಳು ಮೊನ್ನೆ ಮೊನ್ನೆ. ಅವಳು ಬಲಾತ್ಕಾರಕ್ಕೆ ಈಡಾಗಿದ್ದಳು, ಅದನ್ನು ಮಾಡಿದ್ದು ಒಬ್ಬ ಬ್ರಾಹ್ಮಣ, ಅದೂ ದೇವಸ್ಥಾನದ ಪೂಜಾರಿಯೊಬ್ಬ ಎಂದೆಲ್ಲಾ ಸುದ್ದಿ ಹರಿದಾಡಿತು. ಆದರೆ ಪ್ರತಿಭಟನೆ ನಡೆಸಿದ್ದು ಮೋದಿಯ ವಿರುದ್ಧವಾಗಿ. ನಿಜವಾದ ಕಾಮುಕ ಪಿಶಾಚಿಗಳಿಗಿಂತ ಹೆಚ್ಚಿನ ಪ್ರತಿಭಟನೆ ಮೋದಿಯವರ ವಿರುದ್ಧವಾಗಿ ಆಗುತ್ತಿದೆ. ಯಾವ ರಾಜಕೀಯ ನಾಯಕರೂ ರಾಕ್ಷಸರನ್ನು ನಿಂದಿಸಿದ್ದು ನಾನು ಕೇಳಿಲ್ಲ. ಬದಲಾಗಿ ಮೋದಿಯ ವಿರುದ್ಧ ಅರಚುತ್ತಿದ್ದಾರೆ. ಸಿನಿಮಾದ ನಟ ನಟಿಯರು ಆಸಿಫ಼ಾಳ ಕೊಲೆಯನ್ನು ವಿರೋಧಿಸುವುದಕ್ಕಿಂತ ಹೆಚ್ಚು ಭಾರತವನ್ನು ತೆಗಳುತ್ತಿದ್ದಾರೆ. ಭಾರತ ಸುರಕ್ಷಿತವಲ್ಲ ಎನ್ನುತ್ತಿದ್ದಾರೆ. ನಿಜ. ರೇಪ್ ಎನ್ನುವ ಘಟನೆ ಭದ್ರತೆಯ ಕುರಿತು ಆತಂಕ ಹುಟ್ಟಿಸುತ್ತದೆ. ಆದರೆ ಅದಕ್ಕೆ ಭಾರತವೇ ಸುರಕ್ಷಿತವಲ್ಲ ಎನ್ನುವುದು ಸರಿಯೇ? ಸಂಸತ್ ಭವನದ ಮೇಲೆ ಧಾಳಿಯಾದಾಗ ವಿಶ್ವದ ಅತಿ ದೊಡ್ದ ಪ್ರಜಾ ಪ್ರಭುತ್ವಕ್ಕೇ ಧರ್ಮಾಧಾರಿತ ಭಯೋತ್ಪಾದನೆ ಅಪಾಯ ತಂದೊಡ್ಡಿದಾಗ ಯಾಕೆ ಮಾತಾಡಲಿಲ್ಲ ನೀವು. ಮುಂಬೈ ನಗರಕ್ಕೆ ಉಗ್ರರು ನುಗ್ಗಿದಾಗ ನಿಮಗೇಕೆ ಅಸುರಕ್ಷತೆ ಕಾಡಲಿಲ್ಲ. ಬದಲಾಗಿ ಮತ್ತೆ ಕಾಂಗ್ರೆಸ್ ಸರಕಾರವೇ ಬಂತು. ಬುದ್ಧಿಜೀವಿಗಳಿಗೆ ೨೦೧೪ರಿಂದ ಭಾರತ ಅಸುರಕ್ಷಿತ ಎನ್ನುವ ಮಾತು ಆಕಳಿಕೆಯಂತೆ ಸಹಜವಾಗಿ ಬರುತ್ತದೆ.ಆದರೆ ಅದಕ್ಕೆ ಬೆಲೆ ಬೇರೆಯದ್ದೆ ಬಾಯಿಯಿಂದ ಬರುವ ಮಾತಿನದ್ದು ಬಿಡಿ. ಉತ್ತರ ಪ್ರದೇಶದಲ್ಲಿ ಅಷ್ಟು ಮಾನಭಂಗಗಳಾದಗಲೂ ನೀವು ಸೊಲ್ಲೆತ್ತಲಿಲ್ಲ ಯಾಕೆ? 

ಉಗ್ರಗಾಮಿಯಾದ ಅಫ಼ಜಲ್ ಗುರುವನ್ನು ನೇಣಿಗೆ ಹಾಕಬಾರದು ಎಂದು ಅರುಂಧತಿ ರಾಯ್ ಅರಚಿ ಕಿರುಚಿದಾಗ ಭಾರತದ ಅಸ್ಮಿತೆಗೆ ಭಂಗ ತರಲು ಪ್ರಯತ್ನಿಸಿದವ ಬದುಕಿದರೆ ಅಪಾಯ ಎಂದು ಉಳಿದ ಪಾಷಂಡಿಗಳು ಮಾತಾಡಲೇ ಇಲ್ಲ. ಕರ್ನಾಟಕದಲ್ಲಿ ಅಷ್ಟು ರೇಪ್ ಆದವು. ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡರು ಆಗೆಲ್ಲಾ ಸುಮ್ಮನಿದ್ದಿದ್ದು ಸರಿಯಾ? ಕರ್ನಾಟಕದ ಚುನಾವಣೆ ಘೋಷಣೆಯಾದಾಗ ಸೋಷಿಯಲ್ ಮೀಡಿಯಾದಲ್ಲಿ ಏನನ್ನೂ ಬರೆಯಬಾರದು ಎಂದರು. ಆದರೆ ರೇಪ್ ಆದ ಹಸುಳೆಯ ಬಗ್ಗೆ ಎಷ್ಟೆಲ್ಲಾ ಬರೆದರು. ಇದನ್ನು ಯಾರೂ ಪ್ರಶ್ನಿಸಲಿಲ್ಲ. ಉಳಿದಂತೆ ಯಕ್ಷಗಾನದಲ್ಲಿ ಹಾಸ್ಯಾಸ್ಪದವಾದ ಮಾತೊಂದನ್ನು ಹಾಸ್ಯಕ್ಕೆ ಆಡಿದರೆ ಕ್ರಮ ಕೈಗೊಂಡರು. ಅದೂ ತತ್ ಕ್ಷಣ, ಈಗ ತಡವಾಗಿದ್ದು ಯಾಕೆ? ಹಸುಳೆಯ ಹೆಸರೆತ್ತಿದಾಗ ಸೊಲ್ಲೆತ್ತದ ನಿಮ್ಮನ್ನು ಕಂದಮ್ಮ ಕ್ಷಮಿಸೀತೇ? ಅವಳ ಆತ್ಮ ಕನಲಿವುದಿಲ್ಲವೇ? ಹಾಗಂತ ನೀವು ನಾನು ಗೌರಿ ಎಂದು ಕೊಲೆ ವಿರೋಧಿಸಿದಿರಿ. ಸರಿ ಅದು. ಕೊಲೆ ಖಂಡನೀಯ. ನಾನು ಆಸಿಫ಼ಾ ಅಂತ ಯಾಕೆ ಹೇಳುತ್ತಿಲ್ಲ? ಆಸಿಫ಼ಾಳ ಜಾಗದಲ್ಲಿ ನಿಮ್ಮ ಕಂದಮ್ಮಗಳಿದ್ದಿದ್ದರೆ ಹೀಗೆ ಮಾಡುತ್ತಿದ್ದಿರಾ ನೀವು?

ಉಳಿದಂತೆ ಧರ್ಮ ನಿರಪೇಕ್ಷರು ನೀವು. ಆದರೆ ವಿಚಾರದಲ್ಲಿ ಧರ್ಮವನ್ನು ಎಳೆತರುವುದೇಕೆ? ಹಿಂದೂ ಉಗ್ರವಾದ ಎಂದಿರಿ. ಬಡಪಾಯಿಗಳು ಸುಮ್ಮನಿದ್ದರು. ಆದರೆ ಶಾಂತಿ ಸಾರುವ ಧರ್ಮದ ಹೆಸರಲ್ಲಿ ಭಯೋತ್ಪಾದನೆ ಮಾಡುವವರಿಗೆ ಬೆಂಬಲ ಕೊಟ್ಟಿರಿ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದಿರಿ. ನಿಜ ಅದು. ಧರ್ಮ ಶಾಂತಿಯನ್ನು ಸಾರುತ್ತದೆ. ಭಯೋತ್ಪಾದನೆಯನ್ನಲ್ಲ. ಆದರೆ ರೇಪ್ ಎನ್ನುವ ಘಟನೆಗೆ ಜಾತಿ ಧರ್ಮ ಎಲ್ಲಾ ಇದೆ ಅಲ್ಲವೇ? ಇಲ್ಲವಾದರೆ ನೀವು ಅದನ್ನೇ ಎತ್ತಿ ಮಾತಾಡುತ್ತಿರುವುದೇಕೆ? ಉಳಿದ ಮಾನಭಂಗ ಸಂತ್ರಸ್ತೆಯರ ಬಗೆಗೆ ಏಕೆ ಮಿಡಿಯುವುದಿಲ್ಲ ನೀವು?

ಪರೇಶ್ ಮೇಸ್ತ ಎನ್ನುವ ಹಸುಳೆ ಮಡಿದಾಗ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಲು ನಿರ್ಬಂಧವಿತ್ತು. ಈಗ ಏಕಿಲ್ಲ?ಇದಕ್ಕೂ ಸೋಜಿಗವೆಂದರೆ ಇಲ್ಲಿ ಮೋದಿಯವರನ್ನು ಹಳಿಯುವ ಅವಶ್ಯಕತೆಯಾದರೂ ಏನು? ಕಾನೂನು ಸುವ್ಯವಸ್ಥೆ ಆಯಾ ರಾಜ್ಯದ ಹೊಣೆ ಎಂದು ತಿಳಿದಿಲ್ಲವೇ? ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಏಕೆ ಸೊಲ್ಲೆತ್ತುತ್ತಿಲ್ಲ? ಧರ್ಮ ಕಾರಣವೇ? ಅದೇ ಸರಿ ಎಂದಾದರೆ ನೀವು ಸೈತಾನ್ ಆಗುವುದಿಲ್ಲವೇ?

ನನಗಿಲ್ಲಿ ರೇಪ್ ಅನ್ನು ವೈಭವೀಕರಿಸುವ ಉದ್ದೇಶವಾಗಲೀ ಅಥವಾ ಅದನ್ನು ನನ್ನ ಬರಹದ ವಸ್ತುವಾಗಿಸಿ ಚಪಲ ತೀರಿಸಿಕೊಳ್ಳುವ ಉದ್ದೇಶವಾಗಲೀ ಇಲ್ಲ. ಶಶಿಧರ ಭಟ್ ಮೊನ್ನೆ ಫ಼ೇಸ್ ಬುಕ್ಕಿನಲ್ಲಿ ಲೈವ್ ಡಿಸ್ಕಷನ್ ಇನ್ವೈಟ್ ಕಳಿಸಿದ್ದರು. ಅದರಲ್ಲಿದ್ದಿದ್ದು ರೇಪ್ ಕುರಿತ ಚರ್ಚೆ. ರೇಪ್ ಎನ್ನುವುದು ತಪ್ಪೇ. ಯಾರಾದರೂ ಮಾಡಿರಲಿ. ಅದರ ಬಗ್ಗೆ ಚರ್ಚೆ ಖಂಡಿತ ಸಲ್ಲ. ವಿಕೃತಿ ಇದು. ಭಟ್ಟರೇ, ನೀವು ಮಠದ ಪಾತ್ರದ ಗುಂಗಿನಿಂದ ಹೊರ ಬಂದಿಲ್ಲ ಎನಿಸುತ್ತಿದೆ ನನಗಿನ್ನೂ. ಒಷೋ ಕಾಮವನ್ನು ಚಪಲವಾಗಿಸಬೇಡಿ ಧ್ಯಾನವಾಗಿಸಿ, ಪ್ರೀತಿಯ ಮಾಧ್ಯಮವಾಗಿಸಿ ಪ್ರೀತಿಯನ್ನು ಕೊಟ್ಟು ಪದೆಯಿರಿ ಎಂದಿದ್ದು ಮರೆತು ಹೋಯಿತೇ?ನಿಮ್ಮ ವಿಕೃತಿ ನಿಲ್ಲಿಸಿ.

ಇಷ್ಟೇ ಅಲ್ಲ. ಮಲ್ಯ, ನೀರವ್ ಮೋದಿಯವರ ಪ್ರಕರಣವನ್ನೇ ತೆಗೆದುಕೊಳ್ಳಿ. ಸಾಲ ಕೊಟ್ಟಿದ್ದು-ಅವ್ಯವಹಾರ ಮಾಡಿದ್ದು ಬ್ಯಾಂಕ್ ಅಧಿಕಾರಿಗಳು. ಅವರನ್ನು ಯಾರೂ ಪ್ರಶ್ನಿಸುತ್ತಿಲ್ಲ, ನಿಂದಿಸುತ್ತಿಲ್ಲ. ಕೊಟ್ಟಾಗ ಅದಕ್ಕೆ ಸುಮ್ಮನಿದ್ದಿದ್ದು ಅಂದಿನ ಸರಕಾರ.ಅಂದು ಸುಮ್ಮನಿದ್ದ ಪಕ್ಷವೇ ಈಗ ಬಾಯಿ ಬಡಿದುಕೊಳ್ಳುತ್ತಿದೆ. ನಿಮ್ಮ ಮೂಗಿನಡಿ ಹಗರಣ ನಡೆದಾಗ ಸುಮ್ಮನಿದ್ದು ಈಗ ಪ್ರತಿಭಟಿಸುವ ನೀವು ಆಷಾಢಭೂತಿಗಳಲ್ಲವೇ? ನೋಟ್ ಬ್ಯಾನ್ ಆದ ಕಾರಣದಿಂದಲೇ ಇದೆಲ್ಲ ಹೊರಬಿದ್ದದ್ದು. ಬ್ಯಾಂಕಿನಲ್ಲಿ ನಡೆಯುವ ಅವ್ಯವಹಾರಗಳ ಬಗೆಗೆ ತಿಳಿದು ಬಂದಿದ್ದು. ಆದರೂ ನೋಟ್ ಬ್ಯಾನ್ ತಪ್ಪು ಎನ್ನುತ್ತಿದ್ದೀರಿ. ಸರಕಾರ ಅಕ್ರಮ ಎಸಗಿದವರ ವಿರುದ್ಧ ತನಿಖೆ ನಡೆಸಿದೆ. ಅಪರಾಧಿಗಳ ದಸ್ತಗಿರಿಯಾಗಿದೆ. ಆದರೂ ನಿಮ್ಮ ಬೊಬ್ಬೆ. ಹೇಸಿಗೆ ಅಲ್ಲವಾ ಇದು.

ಬ್ಯಾಂಕಿನ ಎಲ್ಲಾ ನಿರ್ದೇಶಕರನ್ನೂ ಪ್ರಶ್ನಿಸ ಬೇಕಿದ್ದ ನೀವು ಮೋದಿಯತ್ತ ಬೆಟ್ಟುಮಾಡುತ್ತಿರುವುದು ಸರಿಯಾ? ಹಿಂದೆ ಭಾಜಪ ಸರಕಾರದಲ್ಲಿ ಯು.ಟಿ. ಎನ್ನುವ ಹಗರಣ ನಡೆದಿತ್ತು ಎನ್ನುವ ಸುದ್ದಿ ಬಂದ ಕೂಡಲೇ ಕಲಾಪಕ್ಕೆ ಭಂಗ ತಂದಿದ್ದಿರಿ. ಬೇಸತ್ತ ವಾಜಪೇಯಿ ರಾಜೀನಾಮೆ ಕೊಟ್ಟಿದ್ದರು. ಕೊನೆಗೆ ಮನವೊಲಿಕೆ ನಡೆದು ರಾಜೀನಾಮೆ ವಾಪಸ್ ಪಡೆದರು ಬಿಡಿ. ಯಶವಂತ್ ಸಿನ್ಹಾ ಅವರ ಖಾತೆ ಬದಲಾಗಿತ್ತು ಆಗ. ಯು.ಪಿ. ಸರಕಾರ ಅದರ ತನಿಖೆ ಏಕೆ ನಡೆಸಿಲ್ಲ? ಪಾಲು ನಿಮಗೇ ಸಂದಿತ್ತಾ? ಅಥವಾ ಸಿಕ್ಕಿ ಬೀಳುವ ಭಯವಾ? ಕರ್ನಾಟಕದ ಮಂತ್ರಿಯೊಬ್ಬರ ಮೇಲೆ ಆರ್ಥಿಕ ತೆರಿಗೆ ಇಲಾಖೆ ಧಾಳಿ ನಡೆಸಿತು. ಬಾಯಿಯಲ್ಲಿ ಏನಿತ್ತು ನಿಮಗೆ? ಅವರ ರಾಜೀನಾಮೆ ಏಕೆ ಕೇಳಲಿಲ್ಲ ನೀವು?

ಎಲ್ಲರೂ ಇದು ರಾಜಕೀಯ ಪ್ರೇರಿತ ಎಂದರು. ಮಜಾ ಎಂದರೆ .ಟಿ. ಇಲಾಖೆ ಯಾರದ್ದೋ ಮಾತು ಕೇಳಿ ಧಾಳಿ ನಡೆಸಲು ಸಾಧ್ಯವೇ ಇಲ್ಲ. ಆದಾಯ ತೆರಿಗೆ ಕಾನೂನಿನನ್ವಯ ಧಾಳಿ ನಡೆಸಬೇಕಿದ್ದರೆ ನಂಬಲರ್ಹ ಕಾರಣ ಇರಬೇಕು. ಬೇಕಾದರೆ ಸೆಕ್ಷನ್ ೧೩೩ ನೋಡಿ.

ಈಗ ಮತ್ತೆ ಪೀಠಿಕೆಗೆ ಬರುತ್ತೇನೆ.

ಮಣಿಯನ್ನು ಪಡೆದಿದ್ದು ಸತ್ರಾರ್ಜಿತ, ಅಲಂಕಾರಕ್ಕೆ ಬಳಸಿದ್ದು ಪ್ರಸೇನ. ಕೊಂದಿದ್ದು ಸಿಂಹ. ತೆಗೆದುಕೊಂಡು ಹೋದವ ಜಾಂಬವಂತ, ಅಪವಾದ ಬಂದಿದ್ದು ಕೃಷ್ಣನ ಮೇಲೆ. ಇಷ್ಟ ಪಟ್ಟವ ಬಲಭದ್ರ. ಈರ್ಷ್ಯೆ ಪಟ್ಟವರು ಅಕ್ರೂರ-ಕೃತವರ್ಮ-ಶತಧನ್ವ, ಕೊಲೆಯಾದವ ಸತ್ರಾರ್ಜಿತ, ಅಡಗಿಸಿಟ್ಟಿದ್ದು ಅಕ್ರೂರನಲ್ಲಿ. ಅಪವಾದ ಬಂದಿದ್ದು ಕೃಷ್ಣನ ಮೇಲೆ. ಊರು ಬಿಟ್ಟಿದ್ದು ಬಲರಾಮ.

ಮಡಿದದ್ದು ಹಸುಳೆ. ಕೊಂದದ್ದು ರಕ್ಕಸರು. ಕ್ರಮ ಕೈಗೊಳ್ಳಬೇಕಾದ್ದು ರಾಜ್ಯ ಸರಕಾರ. ಪ್ರತಿಭಟನೆ ಮೋದಿಯ ವಿರುದ್ಧ.

ಸಾಲ ಪಡೆದಿದ್ದು ನೀರವ್ ಮೋದಿ. ಕೊಟ್ಟಿದ್ದು ಬ್ಯಾಂಕ್. ಅಕ್ರಮ ಎಸಗಿದ್ದು ಅಧಿಕಾರಿಗಳು. ತಡೆಯಬೇಕಾದ್ದು ಹಿಂದಿನ ಸರಕಾರ. ಕಂಡು ಹಿಡಿದಿದ್ದು ಈಗಿನ ಸರಕಾರ. ಕ್ರಮ ಕೈಗೊಂಡಿದ್ದು ಈಗಿನ ಸರಕಾರ. ಮೋದಿ ಎಸಗಿದ ಅಕ್ರಮ ಎನ್ನುವ ಮಾತು. ಭಲೇ ಭಲೇ.

ಭಾರತ ಮಾತೆಯೇ, ವೇದ-ಪುರಾಣ-ಉಪನಿಷತ್ತು-ಸೂತ್ರಗಳು ಹುಟ್ಟಿದ ನಿನ್ನಲ್ಲಿ ಎಷ್ಟು ದಡ್ದರು ಹುಟ್ಟಿಬಿಟ್ಟರು. ಶೃತಿ ಹೆತ್ತ ನಿನ್ನೊಡಲಲ್ಲಿ ಇದೆಂಥಾ ಪಾಷಂಡಿಗಳಿಗೆ ಜನ್ಮ ಕೊಟ್ಟುಬಿಟ್ಟೆ ತಾಯಿ. ರಕ್ಕಸರಾದರೂ ಒಳ್ಳೆಯತನ-ಬುದ್ಧಿ ಹೊಂದಿದ್ದರು ಅಂದಿನ ದೈತ್ಯ ದನುಜ ಕಾಲಕೇಯರು. ಇಂದಿನ ಪಾಷಂಡಿಗಳು?