Thursday, April 12, 2018

ವಿಷುವ ಪರ್ವ

ಭೂದೇವಿ ತಾನು ಗೋ ರೂಪ ತಳೆದು ಭೂಮಿಯ ಸಸ್ಯ ಮತ್ತಿತರ ಸತ್ವಗಳನ್ನು ಹಾಲಿನ ರೂಪದಲ್ಲಿ ಕೊಟ್ಟಳು. ಹಾಲು ಹರಿದು ಹೋಗಲೆಂದು ಪೃಥು ಭೂಮಿಯನ್ನು ಸಮತಟ್ಟಾಗಿಸಿದ. ಲೋಕದಲ್ಲಿ ತಮ್ಮನ್ನು ತಾವೊಂದು ಜನ ಎಂದು ಬಿಂಬಿಸಲು ಭಾರತೀಯ ಪರಂಪರೆಯನ್ನು ನಿಂದಿಸುವವರು ಇದನ್ನೊಂದು ಆಧಾರ ಮಾಡಿಕೊಂಡರು. ವಿಷ್ಣು ಪುರಾಣದಲ್ಲಿ ಭೂಮಿ ಚಪ್ಪಟೆಯಾಗಿದೆ ಎಂದು ಭೋರಿಟ್ಟರು. ವಾಸ್ತವ ಎಂದರೆ ಭೂಮಿ ಚಪ್ಪಟೆಯಾಗಿದೆ ಎನ್ನುವುದಕ್ಕೆ ವಿಷ್ಣು ಪುರಾಣದ ಆಧಾರ ಕೊಡುವವರು ಇದನ್ನು ಓದಲೇ ಇಲ್ಲ! ವಿಷ್ಣು ಪುರಾಣದಲ್ಲಿ ಭೂಮಿ ಅಂಡಾಕಾರದಲ್ಲಿದೆ ಎಂದೇ ಹೇಳಲಾಗಿದೆ.

ಏತಡಣ್ಡಕಟಾಹೇನ ತಿರ್ಯಕ್ ಚೋರ್ದ್ಗ್ವಮಧಸ್ತಥಾ|
ಕಪಿತ್ಥಸ್ಯ ಯಥಾ ಬೀಜಂ ಸರ್ವತೋ ವೈ ಸಮಾವೃತಮ್||

ವ್ಯಾಸರು ಇಲ್ಲಿ ಭೂಮಿಯನ್ನು ಮಾತ್ರವಲ್ಲ ಸಂಪೂರ್ಣ ಬ್ರಹ್ಮಾಂಡವನ್ನು ಅಂಡಾಕಾರವಾಗಿದೆ ಎಂದಿದ್ದಾರೆ. ಬ್ರಹ್ಮಾಂಡವನ್ನು ಬೇಲದ ಹಣ್ಣಿನ ರಚನೆಗೆ ಹೋಲಿಸಿದ್ದಾರೆ. ಇದು ಬಹಳ ಜನರಿಗೆ ತಿಳಿದ ವಿಚಾರವೇ. ಯಾಕೆಂದರೆ ವರಾಹದ ಧಾಡೆಯ ತುದಿಯ ಮೇಲೆ ಕೂರಬೇಕಿದ್ದರೆ ಭೂಮಿ ಗೋಲವೇ ಆಗಿರಬೇಕು. ಇಲ್ಲವಾದರೆ ಚೂಪಾದ ವಸ್ತುವಿನ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ.

ನಾನೀಗ ಹೇಳ ಹೊರಟಿದ್ದು ಈ ಭೂಮಿ ಸೂರ್ಯನ ಸುತ್ತ ಬರುವ ಒಂದು ವರ್ಷದ ಅವಧಿಯ ಬಗ್ಗೆ. ಇದರ ವಿವರಣೆ ಹೀಗಿದೆ. ಶ್ವೇತವರ್ಷದಲ್ಲಿ ಶೃಂಗವಾನ್ ಎನ್ನುವ ಒಂದು ಪರ್ವತವಿದೆ. ಅದಕ್ಕೆ ಮೂರು ಶೃಂಗಗಳಿವೆ. ಒಂದು ಶೃಂಗವು ಉತ್ತರ ದಿಕ್ಕಿನಲ್ಲಿ ಇದ್ದರೆ ಇನ್ನೊಂದು ದಕ್ಷಿಣ ದಿಕ್ಕಿನಲ್ಲಿದೆ. ಮಧ್ಯದಲ್ಲಿ ಇನ್ನೊಂದು ಶೃಂಗ ಮಧ್ಯದಲ್ಲಿದ್ದು ಅದೇ ವೈಷುವತ. ಈ ವೈಷುವತಕ್ಕೆ ಸೂರ್ಯನು ವರ್ಷದ ಎರಡು ಸಮಯಗಳಲ್ಲಿ ಬರುತ್ತಾನೆ. ಒಂದು ಮೇಷ ಸಂಕ್ರಮಣದಲ್ಲಿ. ಶರತ್ ಮತ್ತು ವಸಂತ ಋತುಗಳ ಮಧ್ಯದಲ್ಲಿ. ಇದನ್ನೇ ನಾವು ವೈಷುವತ ಪರ್ವ ಎಂದು ಆಚರಿಸುವುದು. ಅಸ್ಸಾಂ ರಾಜ್ಯದಲ್ಲಿ ಇದನ್ನೇ ಬಿಹು ಎನ್ನುತ್ತಾರೆ. ನಮ್ಮಲ್ಲಿ ವಿಷು ಎನ್ನುತ್ತಾರೆ, ಸೌರಮಾನ ಯುಗಾದಿ ಎಂದೂ ಕರೆಯುತ್ತಾರೆ.

ಸೂರ್ಯ ಇನ್ನೊಂದು ಸಾರಿ ಈ ವೈಷುವತಕ್ಕೆ ಬರುವುದು ತುಲಾ ಸಂಕ್ರಮಣದಲ್ಲಿ. ಇದರ ಆಚರಣೆ ಎಲ್ಲಾ ಕಡೆ ಇಲ್ಲ. ಅಸ್ಸಾಮಿನಲ್ಲಿ ಚೋಟೀ ಬಿಹು ಎಂದು ಈ ಪರ್ವವನ್ನು ಆಚರಿಸುತ್ತಾರೆ.

ಇಲ್ಲಿ ಶೃಂಗವಾನ್ ಎಂದು ಕರೆದದ್ದು ಇಡೀ ಭೂಮಿಯನ್ನು. ಇಲ್ಲಿ ಸೂರ್ಯನಿಗೆ, ಭೂಮಿಯ ಚಲನೆಯಿಂದಾಗಿ ಬರುವ ಆರೋಹ ಅವರೋಹಗಳು ಬರುತ್ತವೆ. ಆದ್ದರಿಂದಲೇ ಇದನ್ನು ಪರ್ವತ ಎಂದು ಕರೆದಿದ್ದು. ಪರ್ವತವೂ ಹಾಗೆಯೇ ಅಲ್ಲವೇ? ಅದರ ಮೇಲಿನ ನಮ್ಮ ಗಮನ ಮತ್ತು ನಿರ್ಗಮನ ಆರೋಹ ಮತ್ತು ಅವರೋಹಣವೇ ಸರಿ. ಸೂರ್ಯನಿಗೆ ಒಂದು ಶೃಂಗದಿಂದ ಆರೋಹ ಆರಂಭವಾದರೆ, ಇನ್ನೊಂದು ಶೃಂಗದಲ್ಲಿ ಅದು ಕೊನೆಯಾಗಿ ಅವರೋಹಣವಾಗುತ್ತದೆ. ಆರೋಹದ ಗತಿ ಉತ್ತರಾಯನವಾದರೆ, ಅವರೋಹಣದ ಅವಧಿ ದಕ್ಷಿಣಾಯನ.
ಉತ್ತರ ಶೃಂಗದಿಂದ ದಕ್ಷಿಣ ಶೃಂಗದ ಕಡೆ ಸಾಗುವಾಗಲೂ ವೈಷುವತದ ಮೇಲೆ ಸೂರ್ಯ ಬರಲೇ ಬೇಕು. ಅದೇ ರೀತಿ ಅವರೋಹಣದಲ್ಲಿಯೂ ಕೂಡ. ಏಕೆಂದರೆ ಇದು ಮಧ್ಯದಲ್ಲಿದೆ.

ಇಲ್ಲಿ ನೂರೆಂಭತ್ತು ಮಂಡಲ ಎಂದು ಕರೆದಿದ್ದು ಏನಿರಬಹುದು ಎಂದ್ ಯೋಚಿಸಿದರೆ ಅದು ನೂರಾ ಎಂಭತ್ತು ಡಿಗ್ರೀಗಳು. ಅದೆಷ್ಟ್ ದೊಡ್ಡ ಕೋನಮಾಕ ಇಟ್ಟುಕೊಮ್ಡಿದ್ದರೋ ಏನೋ ನಮ್ಮ ಋಷಿ ಮುನಿಗಳು. ನಾನಂತೂ ಎಷ್ಟೋ ಸಲ ಇದ್ದ ಸಣ್ನ ಕೋನಮಾಕವನ್ನೇ ಶಾಲೆಗೆ ತೆಗೆದುಕೊಂಡು ಹೋಗಿರಲಿಲ್ಲ, ಭಾರ ಎನ್ನಿಸಿತ್ತು. ಕರ್ಕಾಟಕ ಮಾಸದಲ್ಲಿ ಸೂರ್ಯ ದಕ್ಷಿಣಾಭಿಮುಖವಾಗಿ ಸಾಗಲು ತೊಡಗಿ ಸಿಂಹ ಕನ್ಯಾ ಸಂಕ್ರಮಣಗಳನ್ನು ಮುಗಿಸಿ ತುಲಾ ಸಂಕ್ರಮಣದಲ್ಲಿ ಈ ವೈಷುವತಕ್ಕೊಮ್ಮೆ ಬರುತ್ತಾನೆ. ಆದರೆ ನಮಗೆ ಇಲ್ಲಿ ಸೆಖೆಯ ಅನುಭವ ಆಗುವುದಿಲ್ಲ. ಅದಕ್ಕೆ ಕಾರಣ ಅಷ್ಟರಲ್ಲೇ ಮುಗಿದ ಮಳೆಗಾಲ. ಈ ಮಳೆಗಾಲಕ್ಕೂ ಕಾರಣ ಒಮ್ದು ರೀತಿಯಲ್ಲಿ ಸೂರ್ಯನೇ. ಈತ ಅವರೋಹಣದ ಅವಧಿಯಲ್ಲಿ ನಾಲ್ಕು ತಿಂಗಳು ಮತ್ತು ಆರೋಹಣದ ಅವಧಿಯಲ್ಲಿ ನಾಲ್ಕು ತಿಂಗಳು ನೀರನ್ನು ತನ್ನ ಕಿರಣಗಳ ಮೂಲಕ ಹೀರಿ ಮೋಡಗಳಿಂದ ಮಳೆ ಸುರಿಸುತ್ತಾನೆ. ಬೇಕಾದರೆ ನೋಡಿ. ಮಿಥುನ ಸಂಕ್ರಮಣದಿಂದ ಮಳೆಗಾಲ ಆರಂಭವಾಗಿರುತ್ತದೆ. (ಜೂನ್ ಹದಿನೈದು).  ಮಕರ ಮಾಸದಿಂದ ಉತ್ತರಕ್ಕೆ ಹೊರಟ ಸೂರ್ಯ, ಮಿಥುನ ಮಾಸದ ಕೊನೆಯಲ್ಲಿ ತನ್ನ ಆರೋಹಣವನ್ನು ಮುಗಿಸುತ್ತಾನೆ. ಮೇಷ ಮಾಸದಲ್ಲಿ ಮಧ್ಯ ಬರುತ್ತಾನೆ. ಅದೇ ನಾಡಿದ್ದು ನಾವೆಲ್ಲ ಆಚರಿಸುವ ವಿಷುವ ಪರ್ವ. ಇದರ ಶುಭಾಶಯಗಳು ನಿಮಗೆ. 

No comments:

Post a Comment