Tuesday, July 9, 2019

ನಿಷ್ಕ



ಲೆಕ್ಕ ಹಲವಕ್ಕಿದೆ, ಹಲವು ರೀತಿಯಲ್ಲಿ. ಆದರೆ ಲೌಕಿಕವಾಗಿ ಲೆಕ್ಕ ತುತ್ತ ತುದಿಯಲ್ಲಿ ನಿಲುವುದು ಹಣದ ವಿಚಾರಕ್ಕೆ ಹಣದ ಅಳತೆಗೆ. (ಅಲೌಕಿಕವಾಗಿ ನಮ್ಮ ಕರ್ಮದ ಲೆಕ್ಕ. ಲೆಕ್ಕಿಗ ಚಿತ್ರಗುಪ್ತ.) ಆದರೆ ಹಣದ ಲೆಕ್ಕ ಪೈಸೆ- ರೂಪಾಯಿಯ ಮಾನಕ್ಕೇ ಇಂದು ಸೀಮಿತವಾಗಿದೆ. ಕಾರಣ ಹಣದ ಅಪಮೌಲ್ಯ, ಹಣದುಬ್ಬರ. ಪೂರ್ವದಲ್ಲಿ, ಇದಕ್ಕೂ ಬಹಳ ಸೂಕ್ಷ್ಮವಾದ ಹಣದ ಮಾನವಿತ್ತು. ಎಷ್ಟೆಂದರೆ, ಪೂರ್ಣ ಮಾನದ 1/1024 ರಷ್ಟು. ಸುಲಭವಾಗಿ ಅರ್ಥವಾಗುವ ಇಂಗ್ಲೀಷ್ ಭಾಷೆಯಲ್ಲಿ ಹೇಳುವುದಾರರೆ, milli-measurement. (1000^-1) ಇದು ನನಗೆ ಲಭ್ಯವಾಗಿದ್ದು ಭಾಸ್ಕರಾಚಾರ್ಯರ "ಲೀಲಾವತೀ" ಕೃತಿಯಲ್ಲಿ.



ಭಾರತ ಕಂಡ ಅಪ್ರತಿಮ ಮತ್ತು ಅದ್ಭುತ ಗಣುತಜ್ಞರು ಭಾಸ್ಕರಾಚಾರ್ಯರು. ಇಬರು ಬರೆದ ಗ್ರಂಥವೇ ಲೀಲಾವತಿ. ತಿಳಿದವರ ಪಾಲಿಗೆ ಇದೊಂದು ಅನವಶ್ಯಕ ವಿಚಾರ ನಿಜ. ಆದರೆ ತಿಳಿಯದವರಿಗೆ, ಭಾರತೀಯ ಪರಂಪರೆಯ ಬಗ್ಗೆ ಅದೊಂದು ರೀತಿಯ ತಾತ್ಸಾರ, ಅಥವಾ ಮಡಿವಂತಿಕೆ ಇರುವವರಿಗೆ ಅಥವಾ ವಿದೆಶದಿಂದಲೇ ಗಣಿತ ಬಂತು ಎನ್ನುವ ಮಹಾನ್ ತಿಳುವಳಿಕೆಯುಳ್ಳವರಿಗಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಮತ್ತೊಂದು ಸಂಗತಿ. ಭಾಸ್ಕರಾಚಾರ್ಯರು ಜೈನರಾಗಿದ್ದರು ಮತ್ತು ಲೀಲಾವತಿ ಸಂಸ್ಕೃತ ಭಾಷೆಯಲ್ಲಿರುವ ಗ್ರಂಥ.



ಲೀಲಾವತಿಯಲ್ಲಿ ಬರುವ ಮೊದಲ ವ್ಯಾಖ್ಯೆಯೇ ಹಣದ ಕುರಿತಾಗಿನದ್ದು. ಹಾಗಾಗಿ ಮೇಲಿನ ಪೀಠಿಕೆ ಹಾಕಿದೆ. ಭಾಸ್ಕರಾಚಾರ್ಯರ ಹಣದ ವ್ಯಾಖ್ಯೆ ಹೀಗಿದೆ.



ವರಾಟಕಾನಾಂ ದಶಕದ್ವಯಂ ಯತ್ ಸಾ ಕಾಕಿಣೀ ತಾಶ್ಚ ಪಣಶಚಸ್ತ್ರಃ|

ತೆ ಷೋಡಶ ದ್ರಮ್ಮ ಇಹಾವಾಗಮ್ಯೋ ದ್ರಮ್ಮೈಸ್ತಥಾ ಷೋಡಶಾಭಿಶ್ಚ ನಿಷ್ಕಃ||



ವರಾಟಕಗಳು ಇಪ್ಪತ್ತಾಗಲು ಕಾಕಿಣೀ, ಅದು ನಾಲ್ಕಾದಂತೆ ಪಣ

ಅಲ್ಲಿ ಮತ್ತೆ ಹದಿನಾರಾಗಲು ದ್ರಮ್ಮ, ಹೀಗಿರಲು ದ್ರಮ್ಮ ಹದಿನಾರಕ್ಕೆ ನಿಷ್ಕವು



ಸರಳವಾಗಿ ಆದರೆ ಉದ್ದವಾಗಿ ಬರೆಯುವುದಾದರೆ,



16 ವರಾಟಕಗಳು= 1 ಕಾಕಿಣೀ



4 ಕಾಕಿಣೀ= 1 ಪಣ



16 ಪಣ= 1 ನಿಷ್ಕ.



ನಿಷ್ಕವೆಂದರೆ ಒಂದು ಪೂರ್ಣ ಪ್ರಮಾಣದ ಧನಮಾನ ಎಂದಾಯಿತು. ಅಂದರೆ, ಈಗಿನ ಒಂದು ರೂಪಾಯಿಯಂತೆ.



ಈಗ ಮೇಲಿನ ಕೋಷ್ಠಕವನ್ನು ಬೇರೆ ರೀತಿ ನೋಡಿದರೆ,



1ನಿಷ್ಕ=16 ಪಣ=64 ಕಾಕಿಣೀ=1024 ವರಾಟಕಗಳು.



ಅಂದರೆ,



1 ಪಣ=1/16 ನಿಷ್ಕ



1 ಕಾಕಿಣೀ= 1/4 ಪಣ=1/64 ನಿಷ್ಕ



1ವರಾಟಕ=1/16 ಕಾಕಿಣೀ=1/64 ಪಣ=1/1024 ನಿಷ್ಕ.



ಇಂದಿಗೆ ನಮಗೆ ಸಿಗುವ ಹಣದ ಅತಿ ಸೂಕ್ಷ್ಮ ಮೌಲ್ಯ ಪೈಸೆ ಅಂದರೆ 1/100 ರೂಪಾಯಿ. ಆದರೆ ಅಂದು, 1/1024 ರ ತನಕ ಭಾಗಿಸಲಾಗಿತ್ತು, ಈಗ ಲಭ್ಯವಿರುವ ಮಾನದ ಹತ್ತು ಪಟ್ಟು ಹೆಚ್ಚು ಸೂಕ್ಷ್ಮವಾದ ಅಳತೆ. ಹಣದ ಮೌಲ್ಯ ಅಷ್ಟು ಸಣ್ಣ ಅಳತೆಗೆ ಸಿಗಬೇಕಿದ್ದರೆ, ಅಂದು ಹಣದ ಬೆಲೆ ಬಹಳವೇ ಇದ್ದಿರಬೇಕು. ಅಂದರೆ ಹಣದುಬ್ಬರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂದಿನ ಜನರ ಖರೀದಿ ಸಾಮರ್ಥ್ಯವೂ (Purchasing Power) ಬಹಳವಿತ್ತೇನೋ. ಅಂದರೆ ಅಂದಿನ ನಮ್ಮೆಲ್ಲರ ಭಾರತ ಅದೆಷ್ಟು ಶ್ರೀಮಂತವಾಗಿರಬೇಕು?! ಇಷ್ಟು ಬಡವಾದ್ದು ಯಾಕೆ? ಬಡವಾದ ಬೆನ್ನಿನಲ್ಲೇ, ಯಾರ್ಯಾರೋ ಬರೆದ ಥಿಯರಮ್ಮುಗಳು ಬಂದು ನಮ್ಮ ಮೂಲ ಸಿದ್ಧಾಂತಗಳನ್ನೇ ತಿಂದು ತೇಗಿ ನಮ್ಮ ಗಂಟಲಿಗೂ ತುರುಕಿದರಲ್ಲ. ನೀರಿಳಿಯದ ಗಂಟಲಲ್ಲಿ ಥಿಯರಮ್ಮುಗಳ ಕಡುಬು ಸಿಕ್ಕಿ ಕಸುಬಿಲ್ಲದಾಗಿ ಕಸುವೂ ಕಳೆದು ಉಸಿರು ಕಟ್ಟುತ್ತಿದೆಯಲ್ಲವೇ?



#ಲೀಲಾವತಿ