Sunday, May 30, 2021

ವಾಲಿಪ್ರಕರಣ ಅಧ್ಯಾಯ-7 ವಾಲಿಪ್ರಶ್ನಾವಲೀ

 

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ. ಸುಗ್ರೀವನೊಂದಿಗೆ ನಡೆದ ಕೂಟಯುದ್ಧದಲ್ಲಿ ವಾಲಿಯ ಕೈ ಮೇಲಾಗುತ್ತಿದ್ದ ಹೊತ್ತಿನಲ್ಲಿ ಆತನ ಎದೆಯ ಎಡಭಾಗಕ್ಕೆ ಬಾಣವೊಂದು ಪ್ರವೇಶಿಸುತ್ತದೆ. ಆಘಾತಕ್ಕೆ ಕುಸಿದು ಬಿದ್ದ ವಾಲಿಯ ಕಣ್ಣಿಗೆ ಆಕೃತಿಯೊಂದು ಕಾಣಿಸುತ್ತದೆ.)

 

ಕಂಡ ಆಕೃತಿ ಮುಂದೆ ಮುಂದೆ ಬರುತ್ತಿದೆ. ಆಜಾನು ಬಾಹುವಾದ ವ್ಯಕ್ತಿಯೊಬ್ಬ ನಾರು ಮಡಿಯನ್ನುಟ್ಟು, ಬಿಲ್ಲನ್ನು ಹಿಡಿದು ಬತ್ತಳಿಕೆಯನ್ನು ತೊಟ್ಟು ಮುಂದೆ ಮುಂದೆ ಬರುತ್ತಿದೆ. ಹತ್ತಿರ ಬಂದಾಗ ಆಕೃತಿಯ ಸುತ್ತ ಒಂದು ವಿಶೇಷವಾದ ಪ್ರಭಾವಳಿಯೂ ಅವ್ಯಕ್ತವಾಗಿ ಭಾಸವಾಗುತ್ತಿದೆ. ಇಲ್ಲವಾದರೆ, ಮುಖದಲ್ಲಿನ ಪ್ರಸನ್ನತೆ, ಸ್ಥಿತ ಪ್ರಜ್ಞ ಭಾವ, ದೈವೀ ತೇಜಸ್ಸು ಇದನ್ನೆಲ್ಲವನ್ನೂ ರಾತ್ರಿಯ ಕಾಲದ ಕತ್ತಲಿನಲ್ಲಿ ವಾಲಿ ಅದೆಂತು ಗುರುತಿಸಲು ಸಾಧ್ಯವಿತ್ತು. ಕಂಡೊಡನೆ ವಾಲಿಗೆ ಹಿಂದೊಮ್ಮೆ ಇದೇ ಪ್ರಭಾವಳಿಯನ್ನು ಇದೇ ತೇಜಸ್ಸನ್ನು ಕಂಡಂತೆ ಅನುಭವವಾಗುತ್ತಿದೆ. ಯಾರಿರಬಹುದು? ಊರ್ಧ್ವಲೋಕದ ದೇವತೆಯೇ? ಗಂಧರ್ವನೇ? ಯಕ್ಷನೇ? ಕಿನ್ನರನೇ? ಕಿಂಪುರುಷನೇ? ಅಥವಾ ಕಾಮರೂಪದಿಂದ ನಿಜ ರೂಪ ಮರೆಸಿ ಬಂದ ರಾಕ್ಷಸನೇ? ಅಥವಾ ತಪೋ ತೇಜದಿಂದ ಕಂಗೊಳಿಸುವ ಋಷಿಯೇ? ಎಂಬೆಲ್ಲ ಗೊಂದಲಗಳು ಮನಸ್ಸಿನಲ್ಲಿ ಮಿಂಚಂತೆ ಮೂಡಿ ಮರೆಯಾಗುತ್ತದೆ.ಆದರೆ ದೇಹಕ್ಕಾದ ಘಾತದ ಮುಂದೆ ಅವೆಲ್ಲವೂ ಮರೆಯಾಗೆ ವಾಲಿಯ ಎದೆಯಲ್ಲಿ ಉರಿ ತಾಳಲಾಗದೇ "ಅಯ್ಯೋ!! ಹಾ!! ಎಂದು ಜೋರಾಗಿ ಕಿರುಚಿದ ವಾಲಿ.

 

ಒಮ್ಮೆ ಎದ್ದು ನಿಂತು ಎದುರಿಗೆ ಬಂದು ನಿಂತ ವ್ಯಕ್ತಿಯನ್ನು ಯುದ್ಧಕ್ಕೆ ಕರೆಯಲು ಯೋಚಿಸಿದ. ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ದೇಹಕ್ಕಾದ ನೋವೇ ಅಥವಾ ಮನಸ್ಸಿಗಾದ ಆಘಾತವೇ ಎಂದು ಕ್ಷಣದಲ್ಲಿ ತುಸು ಗೊಂದಲಕ್ಕೊಳಗಾದ ವಾಲಿ. ತತ್ ಕ್ಷಣ ತಾರೆ ಆಡಿದ ಮಾತುಗಳು ನೆನಪಾದವು. ಎದುರಿಗಿದ್ದ ಆಕೃತಿ ರಾಮನೇ ಸರಿ ಎಂದು ವಾಲಿ ಗ್ರಹಿಸಿದ. ಒಮ್ಮೆ ದೀರ್ಘವಾದ ಉಸಿರನ್ನು ಎಳೆದುಕೊಂಡು ಮಾತಾಡತೊಡಗಿದ.

 

"ಅಯ್ಯಾ ಶ್ರೀರಾಮಚಂದ್ರ, ಏಕೆ ಇಂಥಾ ಕೆಲಸವನ್ನು ಮಾಡಿದೆ? ಸುಗ್ರೀವ ಮತ್ತು ನನ್ನ ನಡುವಿನ ಕೂಟ ಕಾಳಗದಲ್ಲಿ ನೀನೇಕೆ ಕೈ ಹಾಕಿದೆ? ಸೂರ್ಯವಂಶೀಯನಾಗಿ ವಿಶ್ವಾಮಿತ್ರ ವಸಿಷ್ಠರ ಶಿಷ್ಯನಾಗಿ ನಿನಗಿದು ಶೋಭೆಯೇ? ಅಹಲ್ಯೆಯನ್ನು ಉದ್ಧರಿಸಿದವನಂತೆ ನೀನು. ಪರಾಙ್ಮುಖ ವಧೆಯ ಪ್ರಕಾರದಿಂದ ನನ್ನ ಮೇಲೆ ಅದೇಕೆ ಬಾಣವನ್ನು ಪ್ರಯೋಗಿಸಿದೆ? ನಿನಗೂ ನನಗೂ ಯಾವುದೇ ರೀತಿಯ ವೈರವಿಲ್ಲ. ನಿಮ್ಮ ಅಯೋಧ್ಯೆಯ ಮೇಲೆ ನಾನು ಸದಾಕಾಲ ಗೌರವ ಭಾವವನ್ನಿಟ್ಟುಕೊಂಡೇ ಬದುಕಿದವ. ನಿನ್ನ ಮಾಂಡಲಿಕ ಸಾಮಂತರ ಮೇಲೆ ಎಂದೂ ಬಲಪ್ರಯೋಗಕ್ಕೆ ಮುಂದಾಗಲಿಲ್ಲ.ನೀನು ಅಭಯವನ್ನು ಕೊಟ್ಟ ಯಾರ ಮೇಲೂ ನಾನು ಅತಿಕ್ರಮಣಕ್ಕೆ ಮುಂದಾಗಲಿಲ್ಲ. ನಿಮ್ಮ ಅಯೋಧ್ಯೆಯ ಸಂಪತ್ತಿಗೋ ಅಥವಾ ಅಲ್ಲಿನ ಹೆಣ್ಣು ಮಕ್ಕಳ ಮೇಲೋ ಕಣ್ಣು ಹಾಕಲಿಲ್ಲ ನಾನು. ಆದರೂ ನೀನೇಕೆ ಹೀಗೆ ಮಾಡಿದೆ?ನನ್ನ ಮೇಲಿನ ಅಧಿಕಾರಂದಿಂದ ಹೀಗೆ ವರ್ತಿಸಲು, ನಾನೇನು ನಿನ್ನ ಅಧೀನ ಅರಸನಲ್ಲ. ಸರ್ವ ತಂತ್ರ ಸ್ವತಂತ್ರ.ಅರಸು ಮಕ್ಕಳು ಮೃಗಬೇಟೆಯನ್ನು ಆಡಬಹುದು. ಆದರೆ ನಾವು ಗೋಲಾಂಗೂಲಗಳು. ಮೃಗಗಳಲ್ಲ. ಇನ್ನು ಸ್ವಭಾವ ಪ್ರಕಾರದಿಂದ ನಮ್ಮನ್ನು ಮೃಗ ಅಂತ ಭಾವಿಸಿದರೂ ಬೇಟೆಗೆ ಯೋಗ್ಯವಾದ ಮೃಗಗಳಲ್ಲ ನಾವು. ಅರಸು ಮಕ್ಕಳಿಗೆ ಮೃಗಮಾಂಸ ಭೋಜನ ವರ್ಜ್ಯವಲ್ಲ.

 

ಐದು ಉಗುರುಗಳಿರುವ ಖಡ್ಗಮೃಗ, ಮುಳ್ಳುಹಂದಿ, ಉಡ, ಮೊಲ ಮತ್ತು ಆಮೆ ಐದು ಜೀವಿಗಳು ಮಾತ್ರ ಕ್ಷತ್ರಿಯರಿಗೂ ಬ್ರಾಹ್ಮಣರಿಗೂ ಭೋಜನಕ್ಕೆ ಅರ್ಹವಾಗಿವೆ. ಇದರಲ್ಲಿ ಗೋಲಾಂಗೂಲ ವಾನರರ ಹೆಸರಿಲ್ಲ. ಇನ್ನು ಚರ್ಮ, ಕೂದಲು ಮತ್ತು ಮೂಳೆಗಳಿಗಾಗಿ ಕೊಂದೆಯೋ ಎಂದರೆ ನಮ್ಮ ಕೂದಲು, ಚರ್ಮ ಮೂಳೆಗಳು ಶಾಸ್ತ್ರಪ್ರಕಾರವಾಗಿ ನಿಷಿದ್ಧ. ಹಾಗಾಗಿ ಜಿಂಕೆಯ ಚರ್ಮವನ್ನು ಹೆಂಡತಿಗೆ ಕೊಡಲಾಗಲಿಲ್ಲ ಎಂದು ಮಂಗನ ಚರ್ಮ ಕೊಡುವುದಕ್ಕೆ ನೀನು ಮುಂದಾಗಲಿಲ್ಲ.

 

"ಹುಂ!! ಸಾಮ್ರಾಜ್ಯಕ್ಕೆ ಸಲ್ಲದೇ ಹೊರಬಿದ್ದವ ನೀನು. ನನ್ನಿಂದ ಪೆಟ್ಟು ತಿಂದು ಹೊರಹಾಕಲ್ಪಟ್ಟವ ಸುಗ್ರೀವ. ಹೆಂಡತಿಯನ್ನು ಕಾಪಾಡಿಕೊಳ್ಳಲಾಗದ ನೀನು, ಹೆಂಡತಿಯನ್ನು ಬಿಟ್ಟು ಬಂದ ಸುಗ್ರೀವ. ಎಂಥಾ ಜೋಡಿ ಮಹಾರಾಯ ನಿಮ್ಮದ್ದು. ವಿಧಿ ಬೆಸೆದ ಜೋಡಿ. ವಾಲಿಯನ್ನು ಕೊಲ್ಲುವುದಕ್ಕಾಗಿ ಸಮಾನ ಸ್ಕಂದರಾದ ಸಮಾನ ದುಃಖಿಗಳಾದ ನೀವಿಬ್ಬರೂ ಒಂದಾದಿರಿ. ನಿನ್ನ ವಿಚಾರದಲ್ಲಿ ಔದಾಸೀನ್ಯವನ್ನು ತೋರಿದ್ದ ವಾಲಿಗೆ ರೀತಿ ಮೋಸದಿಂದ ಹೊಡೆದು ಕೊಂದೆಯಲ್ಲ. ನೀನು ಪಾಪಿಯಲ್ಲದೇ ಮತ್ತೇನು?"

 

"ಸುಗ್ರೀವನಿಗೂ ನಿನಗೂ ಅಗ್ನಿಸಾಕ್ಷಿಯಾಗಿ ಸ್ನೇಹವಾಯಿತಂತೆ. ಸುಗ್ರೀವನಿಗೆ ಆತನ ಹೆಂಡತಿಯನ್ನು ನೀನು ದೊರಕಿಸಿಕೊಡಬೇಕು; ಆತ ನಿನ್ನ ಹೆಂಡತಿಯಾದ ಸೀತಾನ್ವೇಷಣೆಗೆ ಸಹಾಯ ಮಾಡಬೇಕು ಎನ್ನುವಂತೆ ಪರಸ್ಪರ ವಚನ ಕೊಟ್ಟಿರಂತೆ. ಆದರೆ ಪರಸ್ಪರ ನಂಬಿಕೆಯ ಮೇಲೆಯೇ ಯಾವುದೇ ಅಪೇಕ್ಷೆಯಿಲ್ಲದೆ ಪರಿಶುದ್ಧ ಮನಸ್ಸಿನಿಂದ ಸ್ನೇಹವಾಗಬೇಕು. ನಿಮ್ಮಲ್ಲಿ ಹಾಗಾಗಲಿಲ್ಲ. ಒಂದು ರೀತಿಯ ಒಪ್ಪಂದ ಮಾತ್ರ ನಡೆದಿದೆ. ನಿನಗೆ ನಿನ್ನ ಹೆಂಡತಿಯನ್ನು ಹುಡುಕಲು ಸಹಾಯವಾಗಲು ತನ್ನ ಹೆಂಡತಿಯಿಂದ ದೂರಾದ ಸುಗ್ರೀವನೊಡನೆ ಒಪ್ಪಂದ ಮಾಡಿಕೊಂಡು ನನ್ನನ್ನು ವಿನಾ ಕಾರಣ ಕೊಂದೆ. ನನ್ನಲ್ಲಿ ಒಂದು ಮಾತನ್ನು ಹೇಳಿದ್ದರೆ ಸಾಕಿತ್ತು. ಲಂಕೇಶ್ವರನನ್ನು ಆತನ ನಗರಿ ಲಂಕೆಯ ಸಹಿತವಾಗಿ ನನ್ನ ಬಾಲಕ್ಕೆ ಕಟ್ಟಿ ಎಳೆದು ತಂದು ನಿನ್ನ ಮುಂದಿಡುತ್ತಿದ್ದೆ. ಅಲ್ಲವಾದರೆ ನನ್ನ ಬಾಲಕ ಅಂಗದನನ್ನು ಕಳುಹಿಸಿ ರಾವಣನಿಗೆ ಬುದ್ಧಿ ಹೇಳಿಸಿ, ಸಾಕಾಗದಿದ್ದರೆ ಅವನಿಗೆ ನಾಲ್ಕು ಬಡಿಸಿ ನಿನ್ನ ಮುಂದೆ ಸೀತೆಯನ್ನು ತಂದಿರಿಸುತ್ತಿದ್ದೆ"

 

"ಇಕ್ಷ್ವಾಕು ವಂಶದ ಅರಸರು ಧರ್ಮಭೀರುಗಳಂತೆ. ಹಿಂದೆ ನನ್ನಪ್ಪ ಒಂದು ಪಾರಿವಾಳವಾಗಿ, ಅಗ್ನಿ ಗಿಡುಗನಾಗಿ ನಿನ್ನ ವಂಶದ ಹಿರಿಯ ಶಿಬಿ ಚಕ್ರವರ್ತಿಯನ್ನು ಪರೀಕ್ಷಿಸಿದಾಗ ಪಾರಿವಾಳಕ್ಕೆ ಅಭಯವನ್ನು ಕೊಟ್ಟು ಹಸಿದ ಗಿಡುಗಕ್ಕೆ ಆಹಾರವಾಗಿ ತನ್ನ ತೊಡೆಯ ಮಾಂಸವನ್ನೇ ಕೊಟ್ಟವನಂತೆ ಆತ. ಬೇಟೆಯೂ ಬದುಕಬೇಕು, ಹಸಿದವನೂ ಉಣ್ಣಬೇಕು ಎನ್ನುವ ನೀತಿ ಅದು. ಬಹುಜನ ಹಿತಾಯ ಬಹುಜನ ಸುಖಾಯ ಎನ್ನುವ ನೀತಿ ಅದು. ಅದಷ್ಟೇ ಅಲ್ಲ. ಕರಂಧಮನೆನ್ನುವ ಅರಸ ಮಕ್ಕಳಿಲ್ಲದ ತನಗೆ ಪಿತೃ ಶಾಪದಿಂದ ಮಕ್ಕಳಾಗಲಿಲ್ಲವೆನ್ನುವುದನ್ನು ತಿಳಿದು ಅವರ ತೃಪ್ತಿಗಾಗಿ ಜಿಂಕೆ ಮಾಂಸವನ್ನರ್ಪಿಸಬೇಕೆಂದು ತಿಳಿದು ಬೇಟೆಗೆ ಹೋದಾಗ, ಜಿಂಕೆಗಳು ತಾವಾಗಿ ನಾ ಮುಂದು ತಾ ಮುಂದು ಎಂದು ಸಮರ್ಪಿಸಿಕೊಳ್ಳಲು ಬಂದುವಂತೆ. ಆದರೆ, ಕರುಣೆ ತಳೆದ ಆತ ಕೊಲ್ಲುವ ಅಭೀಪ್ಸೆಯನ್ನು ತೊರೆದು ತಪಶ್ಚರ್ಯೆಯಿಂದ ಅವಿಕ್ಷಿತನನ್ನು ಪಡೆದನಂತೆ. ಗಂಗೆಯನ್ನೇ ಭುವಿಗಿಳಿಸಿದ ಭಗೀರಥ, ಮತ್ತೊಬ್ಬನಿಗೆ ನಿಷ್ಚಯವಾಗಿದ್ದ ವೈಶ್ಯ ಕನ್ಯೆಯನ್ನು ಮದುವೆಯಾಗಿದ್ದರಿಂದ ವರ್ಣ ತ್ಯಜಿಸಬೇಕಾಗಿ ಬಂದಾಗ ಅಂತೆಯೇ ಮಾಡಿದ ನಾಭಾಗ, ನಂತರದಲ್ಲಿ ಮಗನಿಂದ ರಾಜ್ಯ ದಕ್ಕಿದರೂ ಅದನ್ನು ಸ್ವೀಕರಿಸಲಿಲ್ಲವಂತೆ. ಇಂಥ ಎಷ್ಟೊ ಜನ ಅರಸರು ಆಗಿಹೋಗಿದ್ದಾರೆ ಸೂರ್ಯವಂಶದಲ್ಲಿ. ಅಂತರಿಂದ್ರಿಯ ನಿಗ್ರಹ, ಬಹಿರಿಂದ್ರಿಯ ನಿಗ್ರಹ, ಕ್ಷಮೆ, ಧೈರ್ಯ,ಸತ್ಯನಿಷ್ಠೆ,ಅನಾಸ್ತೇಯ,ದುಷ್ಟ ಶಿಕ್ಷಣ, ಶುಚಿತ್ವ ಮೊದಲಾದ ಗುಣಗಳ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟ ಅರಸರು ಬಹುಷಃ ನಿನಗೆ ಆದರ್ಶವಾಗಲಿಲ್ಲ. ಗುರುವಿಗೇ ಶಾಪವನ್ನು ಕೊಡಲು ಮುಂದಾಗಿದ್ದ ಮಿತ್ರಸಹ, ಮಕ್ಕಳನ್ನು ಮುಳುಗಿಸಿ ಆನಂದ ಪಡೆಯುತ್ತಿದ್ದ ಅಸಮಂಜಸರು ಆದರ್ಶವಾದರೇ ನಿನಗೆ? ನಿನ್ನಪ್ಪನೂ ಹೀಗೆಯೇ ಮರೆಯಲ್ಲಿ ನಿಂತು ಶ್ರವಣನೆನ್ನುವ ಬ್ರಾಹ್ಮಣಕುಮಾರನನ್ನು ಕೊಂದು ಶಪಿಸಲ್ಪಟ್ಟಿದ್ದನಂತೆ. ಆದರೆ ಮಹಾತ್ಮ ಅದಕ್ಕೆ ಪಶ್ಚಾತ್ತಾಪ ಪಟ್ಟಿದ್ದ. "

 

"ನನ್ನ ಹೆಂಡತಿ ತಾರೆ ನನ್ನನ್ನು ತಡೆದು ಎಚ್ಚರಿಸಿದ್ದಳು. ಹಾಗೆ ಎಚ್ಚರಿಸುವಾಗ ನಿನ್ನನ್ನು ಬಹುವಾಗಿ ಕೊಂಡಾಡಿದ್ದಳು. ನಿನ್ನ ಬಗ್ಗೆ ಇನ್ನಿತರರಿಂದಲೂ ನಾನು ಮೊದಲೇ ಕೇಳಿ ತಿಳಿದಿದ್ದೆ, ನಿನ್ನ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದೆ. ಆದರೆ ಅವರೆಲ್ಲ ಸುಳ್ಳು ಹೇಳಿದ್ದರೇ ಹಾಗಾದರೆ? ಅದಿಲ್ಲವಾದರೆ, ಕಾಮಪೀಡುತನಾಗಿ ಅರ್ಥ ಧರ್ಮಗಳಲ್ಲಿ ಚಿತ್ತವನ್ನಿಡದೇ ಕೇವಲ ಕಾಮಕ್ಕಾಗಿ, ಅದನ್ನು ತೀರಿಸುವ ಹೆಣ್ಣಿಗಾಗಿ ನನ್ನನ್ನು ಮರೆಯಲ್ಲಿ ನಿಂತು ಕೊಲ್ಲುತ್ತಿರಲಿಲ್ಲ. ರಾಜನ ಗುಣಗಳಾದ ದಂಡನೀತಿ, ವಿನಯ ನಿಗ್ರಹ ಅನುಗ್ರಹಗಳಿಂದ ದೂರಾಗಿ ಹೀನಕಾರ್ಯ ಮಾಡುತ್ತಿರಲಿಲ್ಲ. ಧರ್ಮ- ಶಾಸ್ತ್ರಗಳನ್ನು ತಿಳಿದೂ ವನಚರಿಯಾದ ನನ್ನನ್ನು ರೀತಿ ಕೊಲ್ಲುತ್ತಿರಲಿಲ್ಲ. ಕರ್ತವ್ಯಾಕರ್ತವ್ಯದ ವಿಚಾರದಲ್ಲಿ ವಿವೇಕವನ್ನು ಮರೆಯುತ್ತಿರಲಿಲ್ಲ. ಗಂಡನೊಬ್ಬ ಮನೆಯ ಮುಂಭಾಗದಲ್ಲಿ ಸತ್ಕರ್ಮ ನಿರತನಾದಾಗ, ಹಿತ್ತಲಿನಲ್ಲಿ ಹೆಂಡತಿಯಾದವಳು ವ್ಯಭಿಚಾರವನ್ನು ಮಾಡುವಂತೆ ನನಗೆ ಬಾಣವನ್ನು ಹೊಡೆದೆಯಲ್ಲ. ಯಾಕೆ? ಸೂರ್ಯವಂಶದ ಸತ್ಕೀರ್ತಿಗೆ ಅದೇಕೆ ಕಳಂಕವನ್ನು ತಂದೆ? ಮತ್ತೇರಿ ಮಲಗಿದ್ದವನನ್ನು ವಿಷಸರ್ಪವೊಂದು ಮೋಸದಿಂದ ಕಚ್ಚಿ ಕೊಲ್ಲುವಂತೆ ನನ್ನ ಮೇಲೇಕೆ ಬಲಪ್ರಯೋಗ ಮಾಡಿದೆ? ಯಾವ ಗುರುಗಳಿಂದ ಹೇಡಿ ವಿದ್ಯೆಯನ್ನು ಕಲಿತೆ? ನೀನು ಹಿಂದೆ ಸೇವಿಸಿದ ವಸಿಷ್ಠ, ವಿಶ್ವಾಮಿತ್ರ, ಭರದ್ವಾಜ, ಸತ್ಯಕಾಮ ಜಾಬಾಲಿ, ಗೌತಮ, ಮತಂಗ ಮೊದಲಾದ ಋಷಿಗಳಿಗೆ ಅವಮಾನ ಮಾಡುವ ಲಂಡಿ ವೃತ್ತಿಯನ್ನದೇಕೆ ಕೈಗೊಂಡೆ? ನಿನ್ನನ್ನು ಸಂಗಡಿಸಿದ ಅಥವಾ ಕೀರ್ತಿಸಿದ ಸತ್ಪುರುಷರೆಲ್ಲರೂ ನಿನ್ನ ಕುರಿತಾಗಿ ಖೇದ ವ್ಯಕ್ತಪಡಿಸುವಂತೆ ನೀನೇಕೆ ವರ್ತಿಸಿದೆ? ಉತ್ತರಿಸು ರಾಮಾ ಉತ್ತರಿಸು"

 

"ರಾಜನಾಗಿ ನೀನು ರಾಜಧರ್ಮವನ್ನು ತ್ಯಜಿಸಿರಬಹುದು. ಆದರೆ ವಾಲಿ ತ್ಯಜಿಸಲಿಲ್ಲ. ಕಿಷ್ಕಿಂಧೆಯಲ್ಲಿ ನಡೆದ ತಪ್ಪಿನ ಕುರಿತಾಗಿ ವಿಚಾರಿಸುವ ಬಾಧ್ಯತೆ ಮತ್ತು ಅಧಿಕಾರ ಎರಡೂ ನನ್ನ ಪಾಲಿಗಿದೆ. ರಾಜನನ್ನು ಕೊಂದವ, ಬ್ರಾಹ್ಮಣನನ್ನು ಸಂಹರಿಸಿದವ, ಗುರುಪತ್ನಿಯನ್ನು ಭೋಗಿಸಿದವ ಇವರೆಲ್ಲ ನರಕಕ್ಕೆ ಹೋಗುತ್ತಾರೆ ಎನ್ನುತ್ತದೆ ಧರ್ಮಶಾಸ್ತ್ರ. ಕಿಷ್ಕಿಂಧೆಯ ಪ್ರಭುವಾಗಿ ನೀನು ಮಾಡಿದ ಎಲ್ಲ ತಪ್ಪುಗಳನ್ನು ವಿಚಾರಿಸಬೇಕೆಂದು ಎಡಗೈನಲ್ಲಿ ಬಾನವನ್ನು ತಡೆದು ಪ್ರಶ್ನಿಸುತ್ತಿದ್ದೇನೆ. ಯಾಕೆ ಹೀಗೆ ಮಾಡಿದೆ? ನಾನು ನಿನ್ನ ಮೇಲೆ ಅಧಿಕಾರಯುತವಾಗಿ ಕೇಳುವುದು ನಿನಗೋ ನಿನ್ನ ಕೀರ್ತಿಗೋ ತಕ್ಕುದಲ್ಲದಿದ್ದರೆ ನಾಳೆಯ ದಿನ ನೀನು ಅನೇಕ ಸತ್ಪುರುಷರು ಇದನ್ನು ಪ್ರಶ್ನಿಸಿದಾಗ ಏನು ಹೇಳುವೆಯೋ ಅದನ್ನು ನನಗೆ ಹೇಳು. ಒಬ್ಬ ಘಾತಿತ ವ್ಯಕ್ತಿಯಾಗಿ ನಾನಿದನ್ನು ಕೇಳುವ ಅಧಿಕಾರ ಹೊಂದಿದ್ದೇನೆ. ಅಪರಾಧಿಯೇ ಆಗಿದ್ದರೂ ನನ್ನ ಅಪರಾಧ ಏನು ಎನ್ನುವುದು ತಿಳಿಯಬೇಕಾಗಿದೆ. ದಂಡಾಧಿಕಾರಿಯಾಗಿ ಶಿಕ್ಷಿಸುವ ಮುನ್ನ ಅಪರಾಧಿಗೆ ಆತನ ಅಪರಾಧವನ್ನು ತಿಳಿಸಬೇಕಾಗುತ್ತದೆ. ಎಲ್ಲ ನೆಲೆಯಲ್ಲಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ ರಾಮ, ಉತ್ತರಿಸು". ಹೀಗೆಂದು ನಿಡುಸುಯ್ದು ವಾಲಿ. ರಾಮ ನಸು ನಕ್ಕು ಪ್ರಸನ್ನ ವದನನಾಗಿ ತನ್ನ ಬಲ ಅಂಗೈಯನ್ನು ಅಭಯಹಸ್ತವೋ ಎನ್ನುವಂತೆ ತೋರಿಸಿದ. ಪ್ರಯಾಸದಿಂದ ಕಣ್ಮುಚ್ಚಿ, ರಾಮನ ಮಾತುಗಳಿಗೆ ಕಿವಿಯಾದ  ವಾಲಿ.

 

(ಸಶೇಷ)

Friday, May 28, 2021

ವಾಲಿಪ್ರಕರಣ ಅಧ್ಯಾಯ-6 ಕೂಟಕಾಳಗ

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ ಸುಗ್ರೀವನ ಪಂಥಾಹ್ವಾನವನ್ನು ಸ್ವೀಕರಿಸಿ ಯುದ್ಧಕ್ಕೆ ಹೊರಟ ವಾಲಿಯನ್ನು ತಾರೆ ತಡೆಯುತ್ತಾಳೆ. ರಾಮ ಸುಗ್ರೀವನಿಗೆ ಅಭಯದಾನ ಮಾಡಿದ ವಿಷಯ ತಿಳಿಸುತ್ತಾಳೆ. ರಾಮನ ಹಿರಿಮೆಯನ್ನು ತಿಳಿಸುತ್ತಾಳೆ. ಆಗ ವಾಲಿ ಒಂದೋ ಮೋಕ್ಷ ಇಲ್ಲವೇ ಸುಗ್ರೀವನ ಸಾವು ಎಂದು ತಾರೆಗೆ ಸಾರಿ ಮುಂದುವರೆಯುತ್ತಾನೆ.)

"ಎಲಾ ಸುಗ್ರೀವ" ಎನ್ನುತ್ತಾ ಹೊರಬಿದ್ದ ವಾಲಿ. ಹೊರಬಿದ್ದವನ ಕಣ್ಣಿಗೆ ಕಂಡ ದೃಷ್ಯಗಳು ನಂಬಲಸಾಧ್ಯವಾಗಿದ್ದವು. ವಾಲಿಯ ಮನೆಯ ಅಡುಗೆಮನೆಯಲ್ಲಿ ತಯಾರಿಸಿದ ಸುಗ್ರಾಸ ಭೋಜನವನ್ನುಂಡು ಕೈ ತೊಳೆದು ಮಧು ಸೇವಿಸಿ, ವಾಲಿಯ ವೀರತನ ಆತನ ನಿಲುವುಗಳನ್ನು ಕೊಂಡಾಡಿ ತಾಂಬೂಲ ಸೇವಿಸಿ ವಾಲಿಯ ಅರಮನೆಯ ಹಜಾರದ ಮೇಲೆ ಹಾಸಿಗೆ ಹಾಸಿಕೊಂಡು ಹೊದ್ದು ಮಲಗಿದ್ದ ವಾಲಿಗೆ ನಿಷ್ಠರಾಗಿದ್ದ ಅದೆಷ್ಟೋ ವಾನರ ವೀರರು ಕಾಣುತ್ತಿಲ್ಲ. ತನ್ನ ಪರವಾಗಿಯೇ ಇವರೂ ಯುದ್ಧ ಸನ್ನದ್ಧರಾಗಿ ಹೊರಟವರಾಗಿದ್ದರೆ ಆಯುಧ ಹಿಡಿದು ತನ್ನನ್ನು ಇದಿರುನೋಡುತ್ತಿದ್ದರು. ಆದರೆ ತನಗೆ ಕಾಣದಂತೆ ಎಲ್ಲಿಯೋ ಸಾಗಿದ್ದಾರೆಯೇ? ಅಥವಾ ಯುದ್ಧಕ್ಕೆ ಹೆದರಿ ಅಡಗಿದ್ದಾರೆಯೇ? ಇಲ್ಲ ಇವರೆಲ್ಲವೂ ಸುಗ್ರೀವನನ್ನು ಸೇರಿದ್ದಾರೆ ಎಂದು ತತ್ ಕ್ಷಣದಲ್ಲಿ ಅರಿತ ವಾಲಿ. ಶತಮಾನಗಳ ಕಾಲದ ರಾಜಕೀಯದ ಅನುಭವ ಅದು.
ಇದನ್ನು ಮತ್ತೆ ಎತ್ತಿ ಹಿಡಿದಿದ್ದು, ಈ ಘಟನೆಗೆ ಇಂಬು ಕೊಟ್ಟಿದ್ದು ಕೋಟೆಯಲ್ಲಿ ಕಂಡ ಬಿರುಕು, ಬೀಳುತ್ತಿದ್ದ ಕಲ್ಲುಗಳು. ಎಲ್ಲರೂ ಪರಸ್ಪರರಲ್ಲಿ ಕಲ್ಲೆಸೆದುಕೊಳ್ಳುತ್ತಿದ್ದರು. ವಾಲಿಗೆ ಎಸೆಯುವ ಧೈರ್ಯ ಯಾರಿಗೂ ಇರಲೂ ಇಲ್ಲ, ಈಗಲೂ ಇಲ್ಲ.

ವಾಲಿಯ ಮನದಾಳದಲ್ಲಿ ಎಂದೋ ಮೂಡಿ ಮರೆಯಾಗಿದ್ದ ಯೋಚನೆ ಮತ್ತೆ ಛಂಗನೆ ಹೊಳೆದು ಮರೆಯಾಯಿತು. ಸುಗ್ರೀವ ರಾಜ್ಯದ ಮೇಲಿನ ಅಧಿಕಾರದ ಆಸೆಯಿಂದಲೇ ವಾಲಿ ಸತ್ತ ಕಥೆಯನ್ನು ಹೇಳಿದ್ದು. ಆ ಹೆಡ್ಡನ ಕೈನಲ್ಲಿ ಅಧಿಕಾರವಿದ್ದರೆ ತಮ್ಮ ಸುಖಮಯ ಬದುಕು ಸುಗಮವಾಗಿ ಸಾಗುತ್ತದೆ ಎಂದು ವಿಭ್ರಮಿಸಿದ್ದ ವಾನರರು ಅದನ್ನು ನಂಬಿದ್ದು. ಅಂಥವರ ಸಂಖ್ಯೆ ಹೆಚ್ಚಿದ್ದಿದ್ದರಿಂದ ತನ್ನ ಬಗ್ಗೆ ತಿಳಿದಿದ್ದ ತನ್ನ ಪರಮ ನಿಷ್ಠರು ಸುಮ್ಮನಿದ್ದರು. ಸತ್ಯ ಶೀಘ್ರದಲ್ಲಿ ಹೊರಬೀಳುವ ನಂಬಿಕೆ ಅವರಿಗಿತ್ತು. ಇಲ್ಲವಾದರೆ ಇಂದೀಗ ಈ ಕೂಟಯುದ್ಧ, ಈ ಪರಸ್ಪರ ಕಲ್ಲೆಸೆತ ಸಾಧ್ಯವಿರಲಿಲ್ಲ.

ಸುಗ್ರೀವನನ್ನು ಮನಸ್ಸಿನಲ್ಲಿಯೇ ನಿಂದಿಸುತ್ತಾ ಸಾಗಿದವನಿಗೆ ಸುಗ್ರೀವ ಎದುರಾದ. ವಾಲಿಯನ್ನು ಕಂಡ ಕ್ಷಣ ಕೋಟೆಯ ಮೇಲೆ ಹಾರಿ ಕಿಷ್ಕಿಂಧೆಯ ಕೋಟೆಯ ಹಿಂಬಾಗಿಲಿನತ್ತ ಸಾಗಿದ್ದ. ಅವನಿಗಿಂತಲೂ ವೇಗವಾಗಿ ನೆಗೆದು ಕೋಟೆಯ ಆಚೆ ಅವನ ದಾರಿ ಕಾಯುತ್ತಿದ್ದ ವಾಲಿ. ಸಿಟ್ಟಿನಿಂದ ಹಲ್ಲು ಕಡೆಯುತ್ತಾ, ಸುಗ್ರೀವನನ್ನು ಎದುರುಗೊಂಡ. ಸಿಟ್ಟಿನಿಂದಲೇ ಪ್ರಶ್ನಿಸಿದ. "ಪೆಟ್ಟು ತಿಂದು ಶತಮಾನ ಕಳೆದ ಮೇಲೆ ಬರುವ ನಿನಗೆ ಮಧ್ಯಾಹ್ನವೇ ಪೆಟ್ಟು ತಿಂದು ರಾತ್ರಿ ಕಾಲದಲ್ಲಿ ತಿರುಗಿ ನನ್ನನ್ನು ಯುದ್ಧಕ್ಕೆ ಕರೆಯಲು, ಅದೂ ನಾನು ತಾರೆಯ ಆಲಿಂಗನದಲ್ಲಿ ಆನಂದವನ್ನನುಭವಿಸುತ್ತಿದ್ದ ಹೊತ್ತಿನಲ್ಲಿ ನನ್ನ ಸಜ್ಜೆ ಮನೆಯ ಕಿಟಕಿಯಲ್ಲಿ ಮುಖವಿಟ್ಟು ಕೂಗಲು ಅದೆಷ್ಟು ಧೈರ್ಯ? ಎಲ್ಲಿಂದ ಪಡೆದೆ ಈ ಧೈರ್ಯ? ತಪಸ್ಸಿನಿಂದ ಸಾಧಿಸಲು ನಿನಗೆ ಸಾಧ್ಯವಿಲ್ಲ. ಏಕೆಂದರೆ ಲಾಲಸೆಯೇ ಮೈವೆತ್ತವ ನೀನು. ಇನ್ನು ಯಜ್ಞ ಯಾಗಾದಿಗಳು, ಅದಕ್ಕೆ ಬೇಕಾದ ದ್ರವ್ಯಗಳೂ ನಿನ್ನಲ್ಲಿಲ್ಲ. ಅದು ಹೇಗೆ ಪಡೆದೆ ಇಷ್ಟು ಧೈರ್ಯ"

ಸುಗ್ರೀವನೂ ಕೃದ್ಧನಾಗಿ ಉತ್ತರಿಸಿದ್ದ. "ನನ್ನ ಹೆಂಡತಿ ರುಮೆ ಮಾನಿನಿ. ಅವಳನ್ನು ಬಿಟ್ಟಿರಲು ಸಾಧ್ಯವಿಲ್ಲ. ನಿನ್ನಿಂದ ಅವಳ ಮಾನಭಂಗವನ್ನು ಅವಳಿಗೆ ನಿನ್ನಿಂದಾಗುತ್ತಿರುವ ಹಿಂಸೆಯನ್ನು ತಾಳಲಾರದೇ ಧೈರ್ಯ ಒಗ್ಗೂಡಿಸಿಕೊಂಡು ಬಂದಿದ್ದೇನೆ, ಮರ್ಯಾದೆಯಿಂದ ನನ್ನ ಹೆಂಡತಿಯನ್ನು ಮತ್ತೆ ನನ್ನೊಡನೆ ಕಳಿಸು. ದಾಯಭಾಗದಲ್ಲಿ ಈ ಸುಗ್ರೀವನ ಪಾಲಿಗೆ ಸೇರಬೇಕಾದ ರಾಜ್ಯವನ್ನು ಸಲ್ಲಿಸು. ಈಗಲೂ ನಾನು ಸಾಗಲಿಕ್ಕೆ ಸಿದ್ಧನಿದ್ದೇನೆ."

"ಭಲೇ ಭಲೇ ಸುಗ್ರೀವ. ಈಗ ತಾನೇ ಯುದ್ಧಕ್ಕೆ ಆಹ್ವಾನ ಕೊಟ್ಟು ಯುದ್ಧದಿಂದ ಹಿಂದೆ ಸರಿಯುವ ಮಾತುಗಳನ್ನಾಡುತ್ತಿದ್ದೀಯೆ. ಈ ನಿನ್ನ ಜಾಣ ಹೇಡಿತನದ ಪ್ರದರ್ಶನವನ್ನು ಅರಿಯಲಾಗದವನಲ್ಲ ವಾಲಿ. ಈಗ ನನ್ನವಳಾಗಿರುವ ನಿನ್ನ ರುಮೆಯನ್ನು ನಾನು ಕಳುಹಿಸಲಾರೆ. ನನಗೆ ನೀನು ಮತ್ತು ಅವಳು ಇಬ್ಬರೂ ಸೇರಿ ಮಾಡಿದ ದ್ರೋಹಕ್ಕೆ ವಂಚನೆಗೆ ಈ ಶಿಕ್ಷೆ. ಅವಳ ತಪ್ಪೇನು ಎಂದು ನೀನು ಕೇಳಬಹುದು. ನೀನು ಸಿಂಹಾಸನವನ್ನು ಏರುವಾಗ, ಅಥವಾ ತಾರೆಯನ್ನು ಸೇರುವಾಗ ನೀತಿ ಮಾತುಗಳನ್ನು ಹೇಳಿ ತಡೆಯಬೇಕಾಗಿತ್ತು. ಅದು ಬಿಟ್ಟು ಮಹಾರಾಣಿ ಎನ್ನುವ ಪಟ್ಟದ ದುರಾಸೆಗೆ ಬಿದ್ದು, ನಿನ್ನಿಂದ ನಡೆಯುತ್ತಿದ ತಪ್ಪಿಗಳಿಗೆಲ್ಲ ಮೌನ ಸಮ್ಮತಿ ಕೊಟ್ಟು ಪ್ರೋತ್ಸಾಹಿಸಿದಳು. ಅದಕ್ಕೇ ನಿನ್ನೊಡನೆ ಅವಳನ್ನೂ ಶಿಕ್ಷಿಸುತ್ತಿದ್ದೇನೆ."

"ನನ್ನ ಪಕ್ಕದಲ್ಲಿ ನಿನ್ನ ಹೆಂಡತಿ ತಾನಾಗಿ ಬಂದು ಕುಳಿತಳು. ಅವಳು ತಾನಾಗಿ ನನ್ನನ್ನು ಸೇರಿದಳು. ಅದೂ ಶಾಸ್ತ್ರವಾಕ್ಯಕ್ಕೆ ಅನುಸಾರವಾಗಿ. ನೀನು ಇದರಲ್ಲಿ ನನ್ನ ತಪ್ಪನ್ನು ಮಾತ್ರ ಗ್ರಹಿಸುತ್ತಿದ್ದೀ. ನಿನ್ನ ಹೆಂಡತಿಯ ತಪ್ಪನ್ನು ನಿರ್ಲಕ್ಷಿಸಿ ಪಕ್ಷಪಾತ ಧೋರಣೆಯಿಂದ ನನ್ನನ್ನೂ ನನ್ನ ಹೆಂಡತಿಯನ್ನೂ ಹಿಂಸಿಸುತ್ತಿದ್ದೀಯೆ. ಒಬ್ಬ ರಾಜನಾಗಿ, ನ್ಯಾಯಾಧಿಕಾರಿಯಾಗಿ ನೀನು ಈ ರೀತಿ ಮಾಡುವುದು ಸಮಂಜಸವಲ್ಲ. ನಿನ್ನ ಹೆಂಡತಿಗೂ ಶಿಕ್ಷೆ ಕೊಡಬೇಕಿತ್ತಲ್ಲ. ಕೊಡಲಿಲ್ಲವಲ್ಲ"

ನಿನ್ನಂಥ ದುರ್ಬಲನ ತೋಳಿನಲ್ಲಿ ತಾರೆಯಂಥಾ ರತಿ ಸಮಾನಳಿಗೆ ಕರಗುವುದು ಶಿಕ್ಷೆಯಲ್ಲದೇ ಇನ್ನೇನು. ನಿನ್ನ ಧೂರ್ತತನವನ್ನು ತಿಳಿದಿದ್ದ ತಾರೆ ಎಲ್ಲಿ ಅಂಗದನಿಗೆ ನೀನು ವಿಷವಿಕ್ಕುತ್ತೀಯೋ ಎನ್ನುವ ಭಯದಲ್ಲಿ ಈ ಕಾರ್ಯವನ್ನು ಮಾಡಿದಳು. ವಾಲಿಯ ಹೆಂಡತಿಯಾಗಿ ಭಯಗ್ರಸ್ಥಳಾಗಿ ಬದುಕುವುದು, ನಿನ್ನಂಥವನ ಜೊತೆ ಮಲಗುವುದಕ್ಕಿಂತ ದೊಡ್ಡ ಶಿಕ್ಷೆ  ಬೇರೆ ಏನು ಸಾಧ್ಯ. ಧೂರ್ತತನದಿಂದ ಮತ್ತೇರಿಸಿಕೊಂಡ ನೀನು ಮತ್ತೆ ಮತ್ತೆ ಕಾಡುತ್ತಿದ್ದೀ. ಈ ಕಾಡುವಿಕೆ ನನಗೆ ಸಾಕು ಸಾಕಾಗಿದೆ. ಈ ಕಾಡುವಿಕೆ ನಿಲ್ಲಬೇಕಿದ್ದರೆ ನಿನ್ನ ಉಸಿರು ನಿಲ್ಲಬೇಕು. ನಿಲ್ಲಿಸುತ್ತೇನೆ ಎನ್ನುತ್ತಾ ಮುಷ್ಟಿ ಪ್ರಹಾರಕ್ಕೆ ಮುಂದಾದ ವಾಲಿ.

ಸುಗ್ರೀವ ಪಕ್ಕದಲ್ಲಿಯೇ ಇದ್ದ ಮರವನ್ನು ಅಡ್ಡಲಾಗಿ ಹಿಡಿದು ಆ ಪ್ರಹಾರದಿಂದ ತಪ್ಪಿಸಿಕೊಂಡ. ವಾಲಿಯೂ ಮರವೋಮ್ದನ್ನು ಕಿತ್ತು ಸುಗ್ರೀವನತ್ತ ಎಸೆದ. ಸುಗ್ರೀವ ಬಂಡೆಯೊಂದನ್ನೆಸೆದ. ಬಂಡೆ ಚೂರಾಯ್ತು ಅಷ್ಟೇ. ಮತ್ತೊಂದು ಬಂಡೆಯನ್ನು ಸುಗ್ರೀವ ವಾಲಿಯತ್ತ ಎಸೆದ ವಾಲಿ ಅದಕ್ಕೆ ಪ್ರಹಾರವನ್ನು ಮಾಡಿದ. ಹೀಗೆ ಮರಕ್ಕೆ ಮರ, ಮುಷ್ಟಿಗೆ ಮುಷ್ಟಿ ಗುಡ್ಡಕ್ಕೆ ಗುಡ್ಡ ಬಂಡೆಗೆ ಬಂಡೆ ಅಡ್ಡಲಾಗಿಟ್ಟು ಯುದ್ಧ ಮಾಡುತ್ತಿದ್ದರು ಇಬ್ಬರೂ. ಸುಗ್ರೀವ ಚಾಣಾಕ್ಷ ತನದಿಂದ ಹೆಜ್ಜೆಗಳನ್ನಿಡುತ್ತಾ ವಾಲಿಯನ್ನು ಕಿಷ್ಕಿಂಧೆಯ ಗಡಿಯ ಅರಣ್ಯದತ್ತ ತಂದಿದ್ದ. ವಾಲಿಗೆ ಈ ಕಲ್ಲೆಸೆಯುವುದು, ಮರ ಮುರಿಯುವುದು ಎಲ್ಲವೂ ಬೇಡವಾಗಿತ್ತು. ಆತ ಯುದ್ಧಕ್ಕೆ ಮುಂದಾಗಿದ್ದು ಸುಗ್ರೀವನನ್ನು ಕೊಲ್ಲುವ ಉದ್ದೇಶದಿಂದಲೇ ಹೊರತು ಪರಾಕ್ರಮ ಪ್ರದರ್ಶನಕ್ಕಲ್ಲ. ದಾಪುಗಾಲನಿಟ್ಟು ಸುಗ್ರೀವನ ಭುಜಗಳನ್ನು ಅಮುಕಿ ನೆಲಕ್ಕೆ ಒತ್ತುತ್ತಿದ್ದ ವಾಲಿ. ಆರ್ತ ಭಾವದಿಂದ ಸುಗ್ರೀವ ಒಮ್ಮೆ ಅರಣ್ಯದತ್ತ ಕಣ್ಣು ಹಾಯಿಸಿದ. ಧನುಷ್ಠೇಂಕಾರ ಮೊಳಗಿತ್ತು. ಹಕ್ಕಿಗಳೆಲ್ಲಾ ಹೆದರಿ ಗೂಡು ಬಿಟ್ಟು ಚೆಲ್ಲಾಪಿಲ್ಲಿಯಾಗಿ ಹಾರಾಡಿದ್ದವು. ಸುಗ್ರೀವನ ಮುಖದ ಮೇಲೊಂದು ಗೆಲುವಿನ ನಗು ಸಣ್ನದಾಗಿ ಮೂಡಿತ್ತು. ಸುಗ್ರೀವನನ್ನು ಕೊಲ್ಲುವ ಕಡೆಯೇ ಗಮನ ಹರಿಸಿದ್ದ ವಾಲಿಗೆ ಇದ್ಯಾವುದೂ ಕಾಣಿಸಲಿಲ್ಲ. ಅಷ್ಟರಲ್ಲಿ....

ವಾಲಿಯ ಎದೆಯ ಎಡಭಾಗವನ್ನು ರಭಸದಿಂದ ಬಂದು ತಾಕಿತ್ತು ಒಂದು ಬಾಣ. ಇನ್ನೂ ಒಳಕ್ಕಿಳಿಯದಂತೆ ತನ್ನ ಎಲ್ಲಾ ಬಲವನ್ನು ಉಪಯೋಗಿಸಿ ಆ ಬಾಣವನ್ನು ಹಿಡಿದು ಕುಸಿದು ಬಿದ್ದ ವಾಲಿ, ಹಾಗೆಯೇ ಆಶ್ಚರ್ಯ, ದುಃಖ, ಅವಮಾನ, ಬೇಸರ ಸೋಲಿನ ಸಮ್ಮಿಶ್ರಣದಿಂದ ಪ್ರಯಾಸದಿಂದ ಕುತ್ತಿಗೆ ತಿರುಗಿಸಿ ನೋಡುತ್ತಿದ್ದ. ಆಗ ಕಂಡಿತು ಆ ಆಕೃತಿ.
 
(ಸಶೇಷ)

ವಾಲಿಪ್ರಕರಣ ಅಧ್ಯಾಯ 5_ಭವತಾರಿಣಿ



(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ)

ವಾಲಿಯ ಶಯ್ಯಾಗೃಹದ ಕಿಟಕಿಯ ಬಳಿ ಸಾಗಿದ ಸುಗ್ರೀವ. ತೆರೆದೇ ಇತ್ತು ಆ ಕಿಟಕಿ. ವಾಲಿಯ ಎದುರಿನಲ್ಲಿಯೇ ಕಣ್ಣೆತ್ತಿ ನೋಡಲು ಕಿಷ್ಕಿಂಧೆಯ ಪ್ರಜೆಗಳು ಹಿಂಜರಿಯುತ್ತಿರುವಾಗ ಕಿಟಕಿಯಿಂದ ಇಣುಕುವುದು ದೂರದ ಮಾತಾಗಿತ್ತು. ಅದಕ್ಕೇ ವಾಲಿ ಸದಾಕಾಲ ಆ ಕಿಟಕಿಯನ್ನು ತೆರೆದು ಮಲಗುತ್ತಿದ್ದ. ಆ ಕಿಟಕಿಯಲ್ಲಿ ತನ್ನ ಮುಖವನ್ನಿಟ್ಟು ಸಿಟ್ಟಿನಿಂದ ಬಹಳವೇ ಎನ್ನ ಬಹುದಾದ ಯುದ್ಧೋನ್ಮಾದದಲ್ಲಿ ವಾಲಿಯನ್ನು ಕರೆದ. " ಏ ವಾಲೀ, ದುಷ್ಟ, ನೀಚ, ಅಧರ್ಮಿ, ನಿನ್ನ ಪಾಲಿಗೆ ಯಮನಾಗಿ ಯಮನ ಅನುಜ ನಿನಗೂ ತಮ್ಮನಾದ ಸುಗ್ರೀವ ಬಂದಿದ್ದೇನೆ ಬಾ. ನಿನ್ನ ಯುದ್ಧದಾಹವನ್ನು ಸದಾಕಾಲಕ್ಕೆ ನಿಲ್ಲಿಸಲು ಬಂದಿದ್ದಾನೆ ಈ ಸುಗ್ರೀವ. ನಿನ್ನ ಜೀವಮಾನದಲ್ಲಿ ನಿನಗೆ ಕೊನೆಯ ಯುದ್ಧದ ಅವಕಾಶ ಕೊಡಲು ಬಂದಿದ್ದಾನೆ ಈ ಸುಗ್ರೀವ. ಬಾ."

ನಿದ್ದೆಗಣ್ಣಿನಲ್ಲೂ ಸುಗ್ರೀವನ ಸ್ವರ ಕೇಳಿದರೆ ಸಿಡಿದೇಳುವ ವಾಲಿ, ನಿದ್ದೆಯಲ್ಲೂ ಸುಗ್ರೀವನ ಸ್ವಪ್ನವನ್ನೇ ಕಾಣುತ್ತಿದ್ದ. ಆದರೆ ಸ್ವಪ್ನ ಬಹಳ ಸಲ ವಾಸ್ತವಕ್ಕೆ ವಿರುದ್ಧವಾಗಿರುತ್ತದೆ. ಅಹಂಕಾರಿಯೊಬ್ಬ ಮಾತ್ರ ಅದು ಇಂದಲ್ಲ ನಾಳೆ ವಾಸ್ತವ ಎಂದು ಭಾವಿಸಲು ಸಾಧ್ಯ. ಗರ್ವದ ಮೂಟೆಯನ್ನು ಹೊತ್ತಿದ್ದ ವಾಲಿಯೂ ಇದೇ ತಪ್ಪನ್ನು ಮಾಡಿದ್ದ. ಸುಗ್ರೀವನ ಧ್ವನಿ, ಅದರಲ್ಲಿನ ಕಂಪನಕ್ಕೆ ವಾಲಿ ಲಗುಬಗೆಯೊಂದ ಗಡಬಡಿಸಿ ಬರಸೆಳೆದು ಮಲಗಿದ್ದ ತಾರೆಯನ್ನು ಪಕ್ಕಕ್ಕೆ ಸರಿಸಿ ಎದ್ದಿದ್ದ. ವಾಲಿ ಪಕ್ಕಕ್ಕೆ ತಳ್ಳಿದ್ದ ರಭಸಕ್ಕೆ ತಾರೆಗೂ ನಿದ್ರೆಯಿಂದ ಎಚ್ಚರವಾಯಿತು. ಗಡಗದನೆ ಚುರುಕಿನ ಹೆಜ್ಜೆಗಳನ್ನಿಟ್ಟಿದ್ದ ವಾಲಿ ಆಭರಣದ ಪೆಟ್ಟಿಗೆಯಿಂದ ತೆಗೆದು ಕನಕ ಕಾಂಚನ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದ. " ಎಲಾ ಸುಗ್ರೀವ!! ನಿನ್ನಿಂದ ಕ್ಷಮಾಯಾಚನೆಯ ಅಪೇಕ್ಷೆಯಲ್ಲಿದ್ದ ನನಗೆ ಪಂಥಾಹ್ವಾನ ಕೊಡುತ್ತಿದ್ದೀಯ? ನಿನ್ನಣ್ಣ ಯಮ. ನಿನಗಿಂದು ಈ ಅಣ್ಣನೇ ಯಮ. ಇಂದು ನಿನ್ನ ಜೀವನದ ಕೊನೆಯ ರಾತ್ರಿ." ಎಂದು ಘರ್ಜಿಸಿ ಧಾವಿಸಿದ್ದ.

ತಾರೆ ತಡೆದಳು. "ಸ್ವಾಮೀ!! ಸುಗ್ರೀವ ಯುದ್ಧಕ್ಕೆ ಕರೆದಕ್ಷಣ ಲಗುಬಗೆಯಿಂದ ಎದ್ದು ಹೊರಟಿದ್ದೀರಿ. ಕಾಲಾಕಾಲಗಳ ಪರಿವೆ ಬೇಡವೆ ನಿಮಗೆ" ಎಂದು ಕೇಳಿದಳು. ವಾಲಿ ಸ್ವಲ್ಪ ಅವಾಕ್ಕಾದ. ಆದರೂ ಸಾವರಿಸಿಕೊಂಡ. "ಇಷ್ಟು ದಿನಗಳ ಕಾಲ ಸಜ್ಜೆ ಮನೆಯಲ್ಲಿ ಇನಿಯನೊಂದಿಗೆ ಸಲ್ಲಾಪದ ಮಾತುಗಳನ್ನಷ್ಟೇ ಆಡಿದವಳು ನೀನು. ಇಂದು ಕಾಲಾಕಾಲಗಳ ಬಗ್ಗೆ ಮಾತನಾಡುತ್ತಿದ್ದೀ. ಆಗಲಿ!! ನೀನು ಏನು ಮಾಡಿದರೂ ನನಗೆ ಚಂದ. ನಿನ್ನ ಬಾಯಿಯಲ್ಲಿ ಬರುವ ಈ ಮಾತುಗಳನ್ನು ಕೇಳುವ ಭಾಗ್ಯ ನನ್ನ ಪಾಲಿಗೆ ಸೌಭಾಗ್ಯ ಎಂದು ಭಾವಿಸಿ ಮಾತನಾಡುತ್ತೇನೆ. ಏನು ನಿನ್ನ ಸಮಸ್ಯೆ? ಇದು ಕಾಲವಲ್ಲ ಎಂದಷ್ಟೇ? ವಾನರ ವೀರ ಕಾಮರೂಪಿಯಾದ ವಾಲಿಗೆ ಇರುವುದು ಎರಡೇ ಕಾಲ. ಯುದ್ಧವಿರುವುದು ಇಲ್ಲ ಯುದ್ಧವಿಲ್ಲದಿರುವುದು. ಹಾಗಾಗಿ ಕಾಲಾಕಾಲಗಳ ಪರಿವೆ ಇಲ್ಲ. ಅದರ ಕುರಿತು ಯೋಚಿಸುವುದಕ್ಕೆ ವ್ಯವಧಾನವೂ ಇಲ್ಲ. ಈಗ ಅದಕ್ಕಂತೂ ಕಾಲವಲ್ಲ"

"ಸ್ವಲ್ಪ ಯೋಚಿಸಿ ಸ್ವಾಮಿ. ನಿಮ್ಮಲ್ಲಿ ಪೆಟ್ಟು ತಿಂದು ಹೋದ ಸುಗ್ರೀವ ಎಷ್ಟೋ ಶತಮಾನಗಳನ್ನು ಕಳೆದು ಮತ್ತೆ ಬರುತ್ತಿದ್ದ. ಆದರೆ ಇಂದು ಬೆಳಿಗ್ಗೆ ನಿಮ್ಮನ್ನು ಹೊಡೆದಾಟಕ್ಕೆ ಕರೆದು ಪೆಟ್ಟು ತಿಂದು ಮಧ್ಯಾಹ್ನದ ಕಾಲಕ್ಕೆ ಕಿಷಿಂಧೆಯ ಆ ಗಡಿಯಿಂದ ಸಾಗಿದವ ಈಗ ಕಿಷ್ಕಿಂಧೆಯ ಹಿಂಬಾಗಿಲಿನಿಂದ ಬಂದಿದ್ದಾನೆ, ಅವನ ಸ್ವರದಲ್ಲಿ ಸ್ವಲ್ಪವೂ ಅಳುಕಾಗಲೀ ಅಂಜಿಕೆಯಾಗಲೀ ಇಲ್ಲ. ಪೆಟ್ಟು ತಿಂದ ಆಯಾಸವೂ ಕಾಣುತ್ತಿಲ್ಲ. ಅತೀವ ಧೈರ್ಯದಿಂದ ಕೂಡಿದ ಹಾಗೆ ಅನ್ನಿಸುತ್ತದೆ. ಸ್ವಲ್ಪ ಯೋಚಿಸಿ."

"ತಾರೆ, ಅಮಲು ಹೆಚ್ಚಾದರೆ ಹಾಗೆಯೇ. ಆಯಸವೋ ಅವಮಾನವೋ ಅಳುಕೋ ಅಂಜಿಕೆಯೋ ಅಲ್ಲಿ ಇರುವುದಿಲ್ಲ. ಮತ್ತೆ ಆಯಸ್ಸು ತೀರಿದವನಿಗೆ ಇಂಥಾ ವಿಪರೀತ ಬುದ್ಧಿಗಳು ಸಾಮಾನ್ಯ. ಅದಿಲ್ಲವಾಗಿದ್ದರೆ ವಾಲಿಯ ಕಡೆ ಕಣ್ಣೆತ್ತಿ ನೋಡಲೂ ಅಂಜುವ ಸುಗ್ರೀವ ಕಿಟಕಿಯಲ್ಲಿ ಬಂದು ಕೂಗಿ ಯುದ್ಧಕ್ಕೆ ಕರೆಯುತ್ತಾನೆಯೇ? ಅವನಿಗೆ ಬದುಕು ಸಾಕಾಗಿದೆ. ತಾನಾಗಿ ಸಾಯುವುದಕ್ಕೂ ಧೈರ್ಯವಿಲ್ಲದೆ ಅಣ್ಣ ವಾಲಿಯಿಂದಲೇ ಮರಣವನ್ನು ಪಡೆಯುವ ಹಠ ಹೊತ್ತು ಇಲ್ಲಿಗೆ ಬಂದಿದ್ದಾನೆ. ಈ ಮೊದಲು ಕೂಡಾ ಆತನ ಅದೆಷ್ಟೊ ಬೇಕು ಬೇಡಗಳನ್ನು ಪೂರೈಸಿದವ ನಾನು. ಆತನ ಈ ಬಯಕ್ಕೆಯನ್ನೂ ಈಡೇರಿಸಿಕೊಡುತ್ತೇನೆ"

"ಸ್ವಾಮಿ, ಆತನಿಗೆ ಅಮಲೋ ಅಲ್ಲವೋ ನಾನರಿಯೆ. ನನಗದು ಬೇಡವೂ ಬೇಡ. ನನ್ನ ಆಲೋಚನೆ ಏನಿದ್ದರೂ ನಿಮ್ಮ ಬಗ್ಗೆ."

"ಭಲೇ ತಾರಾದೇವಿ. ನೀನು ನನ್ನ ಪಾಲಿನ ಭಾಗ್ಯ ತಾರೆ ಎಂದೇ ಭಾವಿಸಿದವ, ನಿನ್ನನ್ನೂ ಅಂತೆಯೇ ನಡೆಸಿಕೊಂಡವ. ನಿನ್ನನ್ನು ಒಂದು ಲೆಕ್ಕದಲ್ಲಿ ನಾನು ಸಂಪಾದಿಸಿದವ. ಅತ್ಯಮೂಲ್ಯವಾದ ರತ್ನವೊಂದನ್ನು ಪಡೆದೆ ಎನ್ನುವ ಅಭಿಮನದಲ್ಲಿಯೇ ಇರುವವ. ನಿನಗೆ ನನ್ನ ಬಗ್ಗಾಗಿ ಏನು ಆಲೋಚನೆ? ಏನು ಕಳವಳ? ನನಗೆ ನೀನು ಬಹು ಮುದ್ದು. ಆದರೆ ವೈದ್ಯ ಸುಷೇಣನ ಮಗಳಾಗಿ ನೀನು ನನಗೆ ಮದ್ದು ಕೂಡಾ ಆಗಿದ್ದೀಯೆ. ಒಂಟಿತನ ಎನ್ನುವ ಘೋರ ಭೀಕರ ರೋಗಕ್ಕೆ ಮದ್ದು ನೀನು. ವಾಲಿಯ ಪರಾಕ್ರಮವನ್ನು ಕಂಡವಳು ನೀನು. ಕೇಳಿದವಳು ನೀನು. ನಿನಗೇಕೆ ಇಂಥಾ ಅಸಂಬದ್ಧ ಆಲೋಚನೆ"

"ಇಂದು ಅಂಗದ ತನ್ನ ಗೆಳೆಯರೊಡನೆ ಋಷ್ಯಮೂಕದೆಡೆಗೆ ವಿಹಾರಕ್ಕಾಗಿ ಹೋಗಿದ್ದ. ಅಲ್ಲಿ ತಾರ-ಜಾಂಬವಾದಿಗಳು ಆಡುತ್ತಿದ್ದ ಮಾತುಗಳನ್ನು ಕೇಳಿ ಬಂದು ನನಗೆ ಎಲ್ಲವನ್ನೂ ತಿಳಿಸಿದ. ಆ ವಿಚಾರವನ್ನು ಕೇಳಿ ತಿಳಿದ ಮೇಲೆ ನಿಮ್ಮ ಹೆಂಡತಿಯಾದ ನನಗೆ ಆತಂಕವಾಗಿದೆ. ಯಾವ ಹೆಂಡತಿಗೂ ಇಂಥಾ ವಿಚಾರವನ್ನು ಕೇಳಿದಾಗ ಆತಂಕವೇ ಆಗುತ್ತದೆ. ದೂರದ ಉತ್ತರದ ಅಯೋಧ್ಯೆಯ ರಾಜಕುಮಾರ ರಾಮ, ರಾವಣನಿಂದ ಅಪಹೃತಳಾದ ತನ್ನ ಹೆಂಡತಿ ಸೀತೆಯನ್ನು ಹುಡುಕುತ್ತಾ ತಮ್ಮ ಲಕ್ಷ್ಮಣನೊಂದಿಗೆ ಹೊರಟನಂತೆ. ಮಾರ್ಗ ಮಧ್ಯದಲ್ಲಿ ಸಿಕ್ಕಿದ ಜಟಾಯು, ಕಬಂಧ, ಶಬರಿಯರ ಮುಖಾಂತರ ನಿಮ್ಮ ಮತ್ತು ಸುಗ್ರೀವರ ವಿಚಾರವನ್ನು ತಿಳಿದು ಆತನನ್ನು ಭೇಟಿಯಾಗಲು ಮುಂದಾಗಿದ್ದನಂತೆ. ಹನುಮ ಮಾರು ವೇಷದಲ್ಲಿ ಹೋಗಿ ವಿಚಾರಿಸಲಾಗಿ ರಾಮನೇ ಇದೆಲ್ಲವನ್ನೂ ತಿಳಿಸಿದನಂತೆ. ಹನುಮ ತನ್ನ ನಿಜರೂಪ ತೋರಿಸಿ ರಾಮನ ಕಾಲಿಗೆರಗಿದ್ದಾಗ ಹನುಮನನ್ನಾವರಿಸಿದ ಮೌಢ್ಯ ತೊಲಗಿತಂತೆ."

"ಯಾರೋ ಒಬ್ಬ ಹೆಂಡತಿಯನ್ನು ಕಳೆದುಕೊಂಡವ ಸುಗ್ರೀವನನ್ನು ಭೆಟ್ಟಿಯಾದರೆ ಅದರಲ್ಲಿ ನಾವು ಹೆದರುವಂಥದ್ದೇನೂ ಇಲ್ಲ ತಾರೆ. ಸುಮ್ಮನೆ ನನ್ನನ್ನು ಇಲ್ಲಿ ನಿಲ್ಲಿಸಿಕೊಂಡು ಕಾಲ ಹರಣ ಮಾಡಬೇಡ. ಸುಗ್ರೀವನ ಪ್ರಾಣ ಹರಣವನ್ನು ಮಾಡುವಲ್ಲಿನ ನನ್ನ ಉತ್ಸಾಹವನ್ನೊ ಸಮಯವನ್ನೊ ವ್ಯರ್ಥಗೊಳಿಸಬೇಡ."

" ತಾಳಿ ಸ್ವಾಮೀ ತಾಳಿ. ಸುಗ್ರೀವನನ್ನು ಭೆಟ್ಟಿಯಾದ ಮಾತ್ರಕ್ಕೇ ಅಂಜುವವಳು ನಾನಲ್ಲ. ಅದಷ್ಟನ್ನೇ ನನಗೆ ತಿಳಿಸಲು ಅಂಗದನೂ ಅವಿವೇಕಿಯಲ್ಲ. ಸುಗ್ರೀವ ಮತ್ತು ರಾಮನ ನಡುವೆ ಅಗ್ನಿಸಾಕ್ಷಿಯಾಗಿ ಮಿತ್ರತ್ವ ಉಂಟಾಗಿದೆಯಂತೆ. ನಿನ್ನ ಶತ್ರು ನನ್ನ ಶತ್ರು. ನಿನ್ನ ಮಿತ್ರ ನನ್ನ ಮಿತ್ರ ಎನ್ನುವ ರೀತಿಯಲ್ಲಿ ಪರಸ್ಪರರು ವಚನ ಕೊಟ್ಟಿದ್ದಾರಂತೆ. ವಾಲಿಯನ್ನು ಕೊಂದಾದರೂ ನಿನ್ನ ಹೆಂಡತಿ ರುಮೆಯನ್ನು ನಿನಗೆ ಕೊಡಿಸುತ್ತೇನೆ ಎಂದು ರಾಮ ತಿಳಿಸಿದ್ದಾನಂತೆ. ನಿಮ್ಮನ್ನು ಹೀಗೆ ನಿಲ್ಲಿಸಲು ಕಾರಣ ನನ್ನ ಕುತ್ತಿಗೆಗೆ ನೀವು ಕಟ್ಟಿದ ತಾಳಿ"

"ಅಯೋಧ್ಯೆಯ ಆ ರಾಮನ ಬಗ್ಗೆ ನಾನೇನೂ ತಿಳಿಯದವನಲ್ಲ. ಸಿಂಹಾಸನವನ್ನು ಏರುವ ಸಮಯದಲ್ಲಿ ತನ್ನದೇ ರಾಜ್ಯದಿಂದ ಹೊರಹಾಕಲ್ಪಟ್ಟವನಾತ. ರಾಜ್ಯಭ್ರಷ್ಟನಾದವ, ಹೆಂಡತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದವ ಹೆಂಡತಿಯನ್ನು ದೂರ ಮಾಡಿಕೊಂಡ ಸುಗ್ರೀವನಿಗೆ ಮಾತು ಕೊಟ್ಟ. ಈ ಪರಮ ಹೆಡ್ಡ ಸುಗ್ರೀವ ಅದನ್ನು ನಂಬಿದ. ಪಾಪ ನಮ್ಮ ಅಂಗದ ಅದನ್ನೆಲ್ಲವನ್ನೂ ಸ್ವಲ್ಪ ಹೆಚ್ಚಾಗಿ ಗ್ರಹಿಸಿದ. ಅಪ್ಪ ಎನ್ನುವ ಅಭಿಮಾನದಲ್ಲಿ ಮಂಕಾಗಿ ಹೆದರಿದ. ಈಗ ಹೋಗಿ ಸುಗ್ರೀವನನ್ನು ಕೊಂದು ಬಂದೆನಾದರೆ ಅಂಗದನಿಗೂ ಮುಂದೆ ಅಂಥಾ ಹೆದರಿಕೆ ಇರುವುದಿಲ್ಲ. ನಿನಗೂ ಕಳವಳಗೊಳ್ಳಬೇಕಾಗುವುದಿಲ್ಲ."

"ಅದಷ್ಟೇ ಆಗಿದ್ದರೆ ನಾನೂ ಹೆದರುತ್ತಿರಲಿಲ್ಲ. ಸುಗ್ರೀವ ರಾಮನನ್ನು ಪರೀಕ್ಷಿಸಿದ್ದಾನಂತೆ. ಹೆಬ್ಬೆರಳ ಮೇಲೆ ಮೊಣಕಾಲ ಪರ್ಯಂತರವಾಗಿ ನೀವು ಎತ್ತುತ್ತಿದ್ದ ದುಂದುಭಿಯ ಅಟ್ಟೆಯನ್ನು ಶ್ರೀರಾಮ ಒದೆದು ಯೋಜನಾಂತರಕ್ಕೆ ಹಾರಿಸಿದ್ದಾನಂತೆ. ನೀವು ನಿಮ್ಮ ಕೌಶಲ್ಯದ ಮುಖಾಂತರ ಸಪ್ತಸಾಲ ವೃಕ್ಷಗಳ ಒಂದೊಂದೇ ಗರಿಯನ್ನು ಕತ್ತರಿಸುತ್ತಿದ್ದಿರಿ. ಆದರೆ ಶ್ರೀರಾಮ ಮರ್ಮ ಸ್ಥಾನಕ್ಕೆ ಒದೆದು ಸಪ್ತಸಾಲ ವೃಕ್ಷಗಳನ್ನು ಒಂದೇ ನೇರಕ್ಕೆ ತಂದು ಒಂದೇ ಬಾಣದಿಂದ ತುಂಡರಿಸಿದನಂತೆ. ನಿಮ್ಮ ಸಾಮರ್ಥಕ್ಕಿಂತ ರಾಮನ ಸಾಮರ್ಥ್ಯ ಮಿಗಿಲಾಗಿದೆ ಎಂದು ಇವು ತೋರಿಸುತ್ತವಲ್ಲ ಸ್ವಾಮಿ. ಅದಕ್ಕೇ ಮತ್ತೆ ಹೇಳುತ್ತೇನೆ. ತಾಳಿ. ಸುಗ್ರೀವನ ಮೇಲಿನ ಈ ಸಿಟ್ಟನ್ನು ತಾಳಿಸಿ.ಈ ಕೋಪವನ್ನು ತಾಳಿಸಿ ನನ್ನ ತಾಳಿಯನ್ನುಳಿಸಿ. ನಿಮ್ಮ ಭಾಗ್ಯತಾರೆ ಎಂದು ಭಾವಿಸಿದ್ದೀರಿ ನನ್ನನ್ನು. ದ್ವೇಷದ ಗಾಢಾಂಧಕಾರದಲ್ಲಿ ದಿಕ್ಕು ತಪ್ಪಿದ ನಿಮಗೆ ದಿಕ್ಕನ್ನು ತೋರಿಸುತ್ತಿರುವ ಧೃವತಾರೆ ನಾನಾಗಿದ್ದೇನೆ ಎಂದು ಭಾವಿಸಿ ನನ್ನ ಮಾತನ್ನು ಮನ್ನಿಸಿ ಸ್ವಾಮೀ. ಯುದ್ಧಕ್ಕೆ ಹೋಗಬೇಡಿ"

" ಅಟ್ಟೆಯನ್ನು ಒದೆದು ಹಾರಿಸುವುದು ವಾಲಿಗೆ ಎಷ್ಟುಹೊತ್ತಿನ ಕೆಲಸವೂ ಅಲ್ಲ. ನಿಜವಾದ ಕ್ಷಮತೆ ಇರುವುದು ಅದನ್ನು ಎತ್ತುವುದರಲ್ಲಿ. ಸಪ್ತಸಾಲ ವೃಕ್ಷಗಳನ್ನು ಒಂದೇ ನೇರಕ್ಕೆ ತರುವುದೋ ಅಥವಾ ಅದನ್ನು ಕಡಿದುರಿಳಿಸುವುದೋ ಕೌಶಲ್ಯವಲ್ಲ. ಕೌಸಲ್ಯಾಸುತನಾಗಿಯೂ ದಶರಥನ ಮಗನಾಗಿಯೂ ರಾಮ ಇದನ್ನು ತಿಳಿಯದೇ ಹೋದನಲ್ಲ! ಅಲ್ಲಿಗೆ ಆತನನ್ನು ಸಂಗರ ಭೀಮ ಎಂದು ಭಾವಿಸುವುದು ಅಪ್ಪಟ ಮೂರ್ಖತನ ತಾರೆ. ಹಿಂದೊಮ್ಮೆ ಶ್ರೀಮನ್ನಾರಾಯಣನಿಗೆ ಎರವಾಗಿಟ್ಟ ಈ ಜೀವವನ್ನು ಯಾರೋ ಒಬ್ಬ ಮನೆ ಬಿಟ್ಟು ಹೆಂಡತಿ ಕಳಕೊಂಡವ ತೆಗೆಯುತ್ತಾನೆ ಎಂದು ಬ್ಯೋಚಿಸಿ ಹೆದರಿದರೆ, ಅದೂ ಈ ವಾಲಿಯ ಪತ್ನಿ, ವಾಲಿಗೆ ಅವಮಾನವಲ್ಲವೇನೆ? ಸುಮ್ಮನೆ ಆರತಿ ಎತ್ತಿ, ವೀರತಿಲಕವನ್ನಿಟ್ಟು ವಾಲಿಯನ್ನು ಯುದ್ಧಕ್ಕೆ ಕಳುಹಿಸಿಕೊಡು. ಮೂರು ಮೂರ್ತಿಗಳೇ ವಾಲಿಯ ವೀರತನಕ್ಕೆ ಅಂಜುವಾಗ ಮತ್ತೆ ವಾಲಿ ಒಬ್ಬ ಹುಲು ಮಾನವನಿಗೆ ಅಂಜುವುದೇ?" ಎನ್ನುತ್ತಾ ತಲೆ ಕೆರೆದುಕೊಂಡು ನೆಲವನ್ನು ಕಾಲಿನಿಂದ ಗೀರಿ ಬಾಲವನ್ನು ನೆಲಕ್ಕಪ್ಪಳಿಸಿ ಉಗುರು ಕಚ್ಚಿದ ವಾಲಿ.

"ಸ್ವಾಮಿ, ಹಿಂದೆ ಭಾರ್ಗವರಾಮರಲ್ಲಿ ಕಾದಾಡಿ ಅವರನ್ನು ನಿಗ್ರಹಿಸಿದ್ದನಂತೆ ರಾಮ. ಕಲ್ಲಾಗಿ ಬಿದ್ದಿದ್ದ ಅಹಲ್ಯೆಯನ್ನು ಉದ್ಧರಿಸಿದನಂತೆ. ಕಬಂಧನನ್ನು ಕೊಂದು ಆತನ ಶಾಪವನ್ನು ಕಳೆದನಂತೆ. ಇದೆಲ್ಲವೂ ಆತನ ಹೆಚ್ಚುಗಾರಿಕೆಯಲ್ಲವೇ? ತ್ರಿಮೂರ್ತಿಗಳು ನಮ್ಮ ಮೇಲೆ ಪ್ರಸನ್ನರಾಗಬೇಕೇ ಹೊರತು, ನಮಗೆ ಹೆದರುವುದಲ್ಲ ಬದುಕು. ಆರತಿಯನ್ನು ಎತ್ತಿ ತಿಲಕವನ್ನಿಟ್ಟು ಕಳುಹಿಸುತ್ತೇನೆ. ಆದರೆ ಯುದ್ಧಾಸಕ್ತರಾದ ನಿಮಗಲ್ಲ. ರಾಮನನ್ನು ಕಾಣಲು ಹೊರಟ ನನ್ನ ಪತಿಗೆ. ಸುಗ್ರೀವನನ್ನು ಮರಳಿ ಕರೆತಂದು ಕಿಷ್ಕಿಂಧೆಯ ವೈಭವವನ್ನು ಪುನಃಸ್ಥಾಪಿಸ ಹೊರಟ ವಾಲಿಗೆ. ಶಕುನಗಳೂ ಸರಿಯಿಲ್ಲ, ಉಗುರು ಕಚ್ಚುತ್ತಾ, ತಲೆ ತುರಿಸಿಕೊಳ್ಳುತ್ತಾ, ನೆಲ ಕೆರೆಯುತ್ತಾ, ಉಗುರು ಕಚ್ಚುತ್ತಾ ಬಾಲವನ್ನು ನೆಲಕ್ಕಪ್ಳಿಸುತ್ತಿದ್ದೀರಿ. ಸ್ವಲ್ಪವೇ ಹೊತ್ತಿಗೆ ಮುಂಚೆ ಹಾಲು ಚೆಲ್ಲಿದ್ದಂತೆ ಚೆಲ್ಲಿದ ಬೆಳದಿಂಗಳಲ್ಲಿದ್ದ ಕಿಷ್ಕಿಂಧೆಯ ಮೇಲೆ ಈಗ ಮೋಡ ಕವಿದಿದೆ, ಮಳೆಗಾಲ ಇನ್ನೂ ದೂರವಿದ್ದರೂ. ಸ್ವಲ್ಪ ನೋಡಿ" ಎನ್ನುತ್ತಾ ಅಂಗಲಾಚಿದಳು ತಾರೆ.

"ತಾರೆ, ನೀನು ಈಗೆಂದ ಮಾತಿನ ಪೂರ್ವಾರ್ಧವನ್ನು ನೋಡಿದರೆ ಶ್ರೀರಾಮ ಶ್ರೀಮನ್ನಾರಯಣನೇ ಇರಬೇಕು. ಆತನೇ ನನ್ನ ಜೀವವನ್ನೊಯ್ಯಲು ಬಂದರೆ ನಾನು ನಿರಾಕರಿಸಲಾರೆ. ಅದು ಅಸಾಧ್ಯ ಮತ್ತು ಅಸಾಧು, ಸಮುದ್ರ ಮಂಥನದ ನಂತರ ನನ್ನ ಶೌರ್ಯವನ್ನು ಮೆಚ್ಚಿ ನನಗೆ ವರ ಕೊಡಲು ಬಂದ. ಯಾರಿಂದಲೂ ಏನನ್ನೂ ಕೇಳಿ ಪಡೆಯದ ವಾಲಿ ನಿನಗೇನು ಬೇಕೆಂದು ಪ್ರಶ್ನಿಸಿದ್ದ. ಪ್ರಾಣ ಬೇಕೆಂದ. ಕೊಡಲಿಕ್ಕೆ ಮುಂದಾದೆ. ಆಗ, ತನಗೆ ಬೇಕಾದಾಗ ತೆಗೆದುಕೊಳ್ಳುವುದಾಗಿ ಹೇಳಿದ. ಪರಿಣಾಮ ನನ್ನಪ್ಪ ನನಗೆ ಕೊಟ್ಟ ಈ ಕನಕ ಕಾಂಚನ ಮಾಲಿಕೆ. ಧರಿಸಿ ಹೊರಟರೆ ಎದುರಿದ್ದವನ ಅರ್ಧ ಬಲ ನನಗೆ. ಹೀಗೆ ಶ್ರೀರಾಮ ಶ್ರೀಮನ್ನಾರಯಣನೇ ಆಗಿದ್ದಲ್ಲಿ ನನ್ನ ಪ್ರಾಣ ಅವನಿಗೇ ಸಲ್ಲಬೇಕು. ಇಲ್ಲವಾದಲ್ಲಿ ಸುಗ್ರೀವ ಸಾಯಬೇಕು, ಸಾಯುತ್ತಾನೆ. ನಿನ್ನ ಮನದ ಬಯಕೆ ದಿಕ್ಕು ತಪ್ಪಿದ ನನಗೆ ದಿಕ್ಕುಗಾಣಿಸುವ ಧೃವತಾರೆಯಾಗಬೇಕು ಎಂದಲ್ಲವೇ? ಅದೂ ನಡೆದು ಹೋಗಿದೆ ನೋಡು. ನಾನು ಸಾಗಲಿರುವ ದಿಕ್ಕಿನ ಕುರಿತಾಗಿ ನನಗೆ ಸ್ಪಷ್ಟತೆ ಲಭವಾಗಿದೆ. ಒಂಟಿ ತನಕ್ಕೆ ಮದ್ದಾಗಿದ್ದ ನೀನು ಈಗ ಭವ ರೋಗಕ್ಕೂ ಮದ್ದಾಗುವ ಕಾಲ ಬಂದಿದೆ. ಹೆಂಡತಿಗೆ ಇರಬೇಕಾದ ಮುಖ್ಯ ಗುಣ ಸಂಸಾರ ಸಾಗರದ ತಾರಿಣಿಯಾಗುವುದು. ಉತ್ತಮ ಸತಿ ಬೇಕಾದ ಪ್ರತಿಯೊಬ್ಬನೂ ಸ್ವಯಂವರ ಪಾರ್ವತೀ ಮಂತ್ರದಲ್ಲಿ ಇದನ್ನೇ ಬೇಡಿಕೊಳ್ಳುವುದು. ಅಂತೆಯೇ ನನಗೆ ಆರತಿ ಎತ್ತಿ ಕಳಿಸು. ಭವತಾರಿಣಿಯಾಗು. ಇನ್ನು ತಡ ಮಾಡಬೇಡ. ನನ್ನನ್ನೂ ತಡೆಯಬೇಡ."

"ಹತೋವಾ ಪ್ರಾಪ್ಯಸೇ ಸ್ವರ್ಗಮ್ ಜಿತೋ ವಾ ಪಾಲಸೇ ಮಹಿಮ್- ಬದುಕಿ ಭುವಿಯನ್ನಾಳುವೆ ಸತ್ತರೆ ಸ್ವರ್ಗಕ್ಕೇರುವೆ ಎಂದು ಹೊರಟಿರುವ ನಿಮ್ಮನ್ನು ಇನ್ನೂ ತಡೆಯಲು ನನ್ನಿಂದಾಗದು" ಎನ್ನುತ್ತಾ ದು:ಖಿಸುತ್ತಲೇ ನೀರಾಜನದಿಂದ ಆರತಿ ಎತ್ತಿ ತಿಲಕವಿಟ್ಟಳು ತಾರೆ ಭವತಾರಿಣಿಯಾದೆನೋ, ಧೃವತಾರೆಯಾದೆನೋ ಎನ್ನುವ ಗೊಂದಲದ ಜೊತೆಯಲ್ಲಿ, ಮತ್ತೊಂದು ವಿಪ್ಲವಕ್ಕೆ ತಾನು ಸಾಕ್ಷಿಯಾದೆ ಎನ್ನುವ ಭಾವ ಅವಳ ಮುಖದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ವಾಲಿಗೆ ಅದರ ಪರಿವೆಯಿಲ್ಲ. "ಎಲಾ ಸುಗ್ರೀವ" ಎನ್ನುತ್ತಾ ಹೊರಬಿದ್ದ ವಾಲಿ. ಹೊರಬಿದ್ದವನ ಕಣ್ಣಿಗೆ ಕಂಡ ದೃಷ್ಯಗಳು ನಂಬಲಸಾಧ್ಯವಾಗಿದ್ದವು.

(ಸಶೇಷ)

Thursday, May 27, 2021

ವಾಲಿಪ್ರಕರಣ ಅಧ್ಯಾಯ-4 ಸುಗ್ರೀವಸ್ವಗತ

(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ)

ರಾತ್ರಿಯ ಕಾಲದಲ್ಲಿ ಹೊರಟಿದ್ದೇನೆ ನಾನು, ನನ್ನದೇ ನಗರಿ, ನನ್ನದೇ ಮನೆಯಾದ ಕಿಷ್ಕಿಂಧೆಗೆ. ನಾನು ಬೆಳೆದ ನನ್ನನ್ನು ಬೆಳೆಸಿದ ನನ್ನ ಜನರ ವಾಸಸ್ಥಾನದತ್ತ. ಮೊದಲೂ ಎಷ್ಟೊ ಬಾರಿ ನಾನು ನನ್ನ ಮನೆಯತ್ತ ಪುನಃ ಪ್ರಯಾಣ ಬೆಳೆಸಿದ್ದಿದೆ. ನನ್ನ ಹುಟ್ಟಿನಿಂದಲೇ ಹೀಗೆ. ನಾನು ಮನೆಯಲ್ಲಿ ಹುಟ್ಟಿದವನೂ ಅಲ್ಲ. ಮನೆಯ ಹೆಂಡತಿಗೆ ಹುಟ್ಟಿದವನೂ ಅಲ್ಲ. ಒಂದು ರೀತಿಯಿಂದ ನೋಡಿದರೆ ಸುಗ್ರೀವನ ಜನ್ಮದಿಂದಲೇ ವೈರುಧ್ಯಗಳು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅಲ್ಲ, ಸುಗ್ರೀವನ ಬದುಕೇ ವೈರುಧ್ಯಗಳ ಆಡುಂಬೊಲ. ಮನೆಯತ್ತ ಹಿಂದಿರುಗುತ್ತಿರುವ ಈ ಹೊತ್ತಿನಲ್ಲಿ ಬದುಕಿನತ್ತಲೂ ಒಂದು ಸಣ್ಣ ಹಿನ್ನೋಟ ಹರಿಯುತ್ತಿದೆ, ನನಗರಿವಿಲ್ಲದೆಯೇ. ಸಹಜವಲ್ಲವೇ?! ವರ್ತಮಾನ ಎನ್ನುವುದು ಭೂತಕಾಲದ ಮೇಲೆ ಕಟ್ಟಿದ ಸೌಧ, ಭವಿಷ್ಯತ್ಕಾಲದ ಸೋಪಾನ.

ನನ್ನಪ್ಪ ವೃಕ್ಷರಜಸ್ಸು. ಆತ ಬ್ರಹ್ಮ ಮಾನಸ ಪುತ್ರನಂತೆ. ಅವನಿಗೆ ಬ್ರಹ್ಮನಿಂದ ಕೊಡಲ್ಪಟ್ಟ ಭೂಮಿಯಂತೆ ಕಿಷ್ಕಿಂಧೆ. "ಭಲ್ಲೂಕ- ಗೋಲಾಂಗೂಲಗಳ ರಾಜನಾಗಿ ಬದುಕು" ಎನ್ನುವ ಆಶೀರ್ವಾದ ಪೂರ್ವಕ ಆಜ್ಞೆಯನ್ನು ಹೊತ್ತು ಕಿಷ್ಕಿಂಧೆಯ ಅರಸನಾದನಂತೆ ನನ್ನಪ್ಪ. ವಯೋಮಾನದಲ್ಲಿ ಅವನಿಗಿಂತ ಬಹಳೇ ದೊಡ್ಡವರು ಜಾಂಬವರು. ಆದರೆ ಅಪ್ಪನಿಗೆ ಗುರುವಾಗಿ, ಸಖನಾಗಿ ನಿಂತರು. ಅವರ ವಿಶೇಷತೆ ಅದು. ಕುಕ್ಷಿ ಎನ್ನುವಳೊಬ್ಬ ವಾನರಿಯನ್ನು ನನ್ನಪ್ಪನಿಗೆ ಬ್ರಹ್ಮದೇವ ಮದುವೆ ಮಾಡಿಸಿದನಂತೆ. ಆದರೆ ವಿಧಿಯ ಮಗನ ಬದುಕಿನಲ್ಲೂ ವಿಧಿಯಾಟ. ಸಂತಾನವಿಲ್ಲ. ಸಂತಾನಾಪೇಕ್ಷಿಯಾಗಿ ನನ್ನಪ್ಪ ಹಿಮಾಲಯದ ಕಡೆ ಹೋದನಂತೆ. ಸ್ನಾನಕ್ಕೆಂದು ಕೊಳವೊಂದರಲ್ಲಿ ಮಿಂದೆದ್ದಾಗ ಹೆಣ್ಣಾದನಂತೆ. ಆಗ ಆತನ ಬಾಲಕ್ಕೆ ಇಂದ್ರನ ತೇಜಸ್ಸು ಬಿದ್ದು ಹುಟ್ಟಿದವನಂತೆ ನನ್ನಣ್ಣ ವಾಲಿ. ಕುತ್ತಿಗೆಯ ಭಾಗಕ್ಕೆ ಸೂರ್ಯನ ತೇಜಸ್ಸು ತಾಗಿ ನಾನು ಹುಟ್ಟಿದ್ದಂತೆ. ಎರಡೂ ಮಕ್ಕಳನ್ನು ತಾನೇ ತಾಯಾಗಿ ಹೆತ್ತವ ನನ್ನಪ್ಪ. ಇಂದ್ರ ಸೂರ್ಯರೇ ಹೇಳಿದ್ದಂತೆ. ಪಕ್ಕದ ಕೊಳದಲ್ಲಿ ಮಿಂದೇಳು ಮತ್ತೆ ಗಂಡಾಗುವೆ ಎಂದು. ಅಂತೆಯೇ ನನ್ನಪ್ಪ ಮಾಡಿದ. ಮತ್ತೆ ಗಂಡು ದೇಹವನ್ನು ಪಡೆದ. ನನ್ನನ್ನು ಮತ್ತು ಅಣ್ಣನನ್ನು ಕರೆದುಕೊಂಡು  ಕಿಷ್ಕಿಂಧೆಗೆ ಬಂದ. ನಮ್ಮ ಲಾಲನೆ ಪಾಲನೆಗಳನ್ನೂ ಚೆನ್ನಾಗಿ ಮಾಡಿದ. 

ಆದರೆ ಬಾಲ್ಯದ ಆ ಕಾಲದಿಂದಲೂ ತನಗೆ ಬಲವಾಗಿ, ತನ್ನ ರಕ್ಷಕನಾಗಿ ಮೆರೆದದ್ದು ಅಣ್ಣ ವಾಲಿಯೇ. ಅಂಥಾ ಪರಾಕ್ರಮಿ ಅಣ್ಣನ ತಮ್ಮ ನಾನು ಎಂದು ಅದೆಷ್ಟು ಸಂತಸ ಹಮ್ಮು ಬಿಮ್ಮಿನಿಂದ ಹೇಳಿಕೊಳ್ಳುತ್ತಿದ್ದವ ನಾನು. ಕಿಷ್ಕಿಂಧೆಯಲ್ಲಿ ಎಲ್ಲರೂ ವಿನೋದ ಮಿಶ್ರಿತ ಹೆಮ್ಮೆಯಿಂದ ಆಡುತ್ತಿದ್ದ ಮಾತು. "ವಾಲಿಯ ಬೆನ್ನಿನ ಹಿಂದೆ ಬಾಲ. ಬಾಲದ ಹಿಂದೆ ಅವನ ತಮ್ಮ ಸುಗ್ರೀವ" "ವಾಲಿಯನ್ನು ಎಂದಾದರೊಂದು ದಿನ ಆತನ ನೆರಳು ತ್ಯಜಿಸೀತು. ಸುಗ್ರೀವ ತ್ಯಜಿಸಲಾರ." ಈ ಮಾತುಗಳನ್ನು ಕೇಳಿದಾಗಲೆಲ್ಲ ಬೀಗಿದ್ದವ ನಾನು. ಅಣ್ಣನೂ ಅಷ್ಟೇ.
ಅದೆಷ್ಟು ಯುದ್ಧಗಳಿಗೆ ಒಟ್ಟಾಗಿ ತೆರಳಿದ್ದವರು ನಾವು. ಆದರೆ ಅಣ್ಣ ಎಂದಿಗೂ ನನಗೆ ಒಂದು ಸಣ್ಣ ಗಾಯವೂ ಆಗಲಿಕ್ಕೆ ಬಿಡಲಿಲ್ಲ. ಯುದ್ಧದಲ್ಲಿ ನಾನು ಮುಂದಾಗುವಷ್ಟರಲ್ಲಿ ನನ್ನಣ್ಣ ಯುದ್ಧ ಮುಗಿಸಿ, "ಸುಗ್ರೀವ, ನೀನು ಕ್ಷೇಮವಷ್ಟೇ! ಏಳು ಮನೆಗೆ ಹೋಗುವ" ಎನ್ನುತ್ತಿದ್ದ. ಅವನಿಗೆ ತನಗಾದ ನೋವಿನ ಪರಿವೆಯೇ ಇರುತ್ತಿರಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದರೆ ಆತ ಹೇಳುತ್ತಿದ್ದುದು ಒಂದೇ ಮಾತು. "ವೀರನಿಗೆ ನೋವೆಲ್ಲಿಯದು. ಆತನ ದೇಹಕ್ಕಾದ ಗಾಯಗಳು ಆತನ ವೀರತನದ ಕುರುಹುಗಳು."

ನನ್ನಣ್ಣನಿಗೊಂದು ಅಭ್ಯಾಸ. ಮೂರು ಹೊತ್ತು ಮೂರು ಸಮುದ್ರದಲ್ಲಿ ಅರ್ಘ್ಯ ಪ್ರದಾನ ಮಾಡುವುದು. ಒಂದು ದಿನ ಅಣ್ಣನಲ್ಲಿ ಪ್ರಶ್ನಿಸಿದ್ದೆ. "ಏಕಣ್ಣ ಇಷ್ಟು ಶ್ರಮ ಪಟ್ಟು ಮೂರು ಹೊತ್ತು ಮೂರು ಬೇರೆ ಬೇರೆ ದಿಕ್ಕಿನ ಸಮುದ್ರ ತೀರಕ್ಕೆ ಹೋಗಿ ಅರ್ಘ್ಯ ಬಿಡುವುದು?" ಅಣ್ಣನೆಂದಿದ್ದ, "ನಿನ್ನಂಥಾ ತಮ್ಮನನ್ನು ಕೊಟ್ಟಿದ್ದಾನೆ ಭಗವಾನ್ ಸೂರ್ಯ ನಾರಾಯಣ. ಅದಕ್ಕಾಗಿ ಅವನಿಗೆ ಕೃತಜ್ಞತೆ ಸಲ್ಲಿಸಬೇಡವೇ?"

ಇಂತಿದ್ದ ನನ್ನಣ್ಣ ಸಮುದ್ರ ಮಂಥನದಲ್ಲಿ ಪಾಲ್ಗೊಂಡು ತಾರೆಯನ್ನು ತನ್ನರಸಿಯಾಗಿ ಪಡೆದ. ನನಗೆ ರುಮೆಯನ್ನು ತಂದು ಮದುವೆ ಮಾಡಿಸಿದ. ತಂಗಿ ಅಂಜನೆಗೆ ಮಾಲ್ಯವಂತದ ಅರಸ ಕೇಸರಿಯೊಂದಿಗೆ ಮದುವೆ ಮಾಡಿಸಿದ. ಸಾಂಸಾರಿಕವಾಗಿ ಈ ಎಲ್ಲ ಕರ್ತವ್ಯಗಳನ್ನೂ ನಿರ್ವಹಿಸಿದ ನನ್ನಣ್ಣ. ಅದರಲ್ಲಿ ಸಂತೋಷ ಪಟ್ಟು ತನ್ನವರನ್ನೂ ಸಂತಸಗೊಳಿಸಿದ್ದ. ಆಗಲೇ ನಡೆದಿದ್ದು ಒಂದು ದುರ್ಘಟನೆ. ಸೂರ್ಯನನ್ನು ತಿನ್ನಲು ಹೋಗಿದ್ದ ನಮ್ಮಳಿಯ ಹನುಮ, ಆ ಬಾಲ್ಯದಲ್ಲಿ ಅದೆಷ್ಟೋ ವರಗಳನ್ನು ಸಂಪಾದಿಸಿದ. ಆದರೆ ಹುಡುಗಾಟಿಕೆ ಮಾಡಿಬಿಟ್ಟ. ಪರಿಣಾಮ ಋಷಿಗಳ ಶಾಪದಿಂದ ಮಂಕಾಗಿ ಕುಳಿತ. ಆದರೆ ತಂಗಿ ಅಂಜನಾದೇವಿ ಗಟ್ಟಿಗಿತ್ತಿ. ಅವಳು ಆತನಿಗೆ ಹೇಳಿದ್ದು, "ಮಗನೇ ಸದಾಕಾಲ ರಾಮಧ್ಯಾನದಲ್ಲಿರು. ರಾಮನೊಲುಮೆ ನಿನಗೆ ದೊರೆತು ಉದ್ಧಾರವಾಗುತ್ತೀ". ತನ್ನ ಸಭ್ಯತೆಯಿಂದಲೇ ಅದೆಷ್ಟೊ ರಾಕ್ಶಸರನ್ನು ವೈರಿಯಾಗಿ ಪಡೆದಿದ್ದ ಭಾವ ಕೇಸರಿ. ಇದೆಲ್ಲದರ ಪ್ರಭಾವ ಹನುಮನ ಮೇಲಾಗಿ ಆತನಿಗೆ ತೊಂದರೆಯಾಗಬಾರದೆಂದು ನಾನು ಹನುಮನನ್ನು ಕಿಷ್ಕಿಂಧೆಗೆ ಕರೆತಂದೆ. ನನಗೂ ಅಂತರಂಗದಲ್ಲಿ ಇದ್ದ ಧೈರ್ಯ ವಾಲಿಯದ್ದೊಂದೇ. ವಾಲಿಯೂ ನಾನು ಮಾಡಿದ್ದು ಸರಿಯಾಗಿಯೇ ಇದೆ. ಅಂಗದನಿಗೂ ಜೊತೆಯಾಯ್ತು ಎಂದೇ ಹೇಳಿದ್ದ.

ಒಂದು ದಿನ ಅರ್ಘ್ಯಪ್ರದಾನ ಮಾಡಿ ಬಂದ ಅಣ್ಣ, ಬಾಲದಿಂದ ಒಂದು ವಿಚಿತ್ರ ಆಕೃತಿಯನ್ನು ಹೊರತೆಗೆದು ಅಂಗದ ತೊಟ್ಟಿಲಿಗೆ ಕಟ್ಟುತ್ತಿದ್ದ. ನೋಡಿದರೆ ಅದಕ್ಕೆ ಹತ್ತು ತಲೆಗಳಿದ್ದವು. ಆ ಆಕೃತಿ ಏನನ್ನೊ ಹೇಳಲು ತವಕಿಸುತ್ತಿತ್ತು. ಸೂಕ್ಷ್ಮವಾಗಿ ಇದನ್ನು ಗಮನಿಸಿದ ನಾನು ಅಣ್ನನಲ್ಲಿ ಹೇಳಿದೆ. ಅಣ್ಣನೂ ಅದನ್ನು ಗಮನಿಸಿ, ಕಟ್ಟು ಬಿಚ್ಚಿದ. ಆ ಆಕೃತಿ ಬೆಳೆದು ನಿಂತಿತು. ತನ್ನನ್ನು ಲಂಕೇಶ್ವರ ರಾವಣ ಎನ್ನುವುದಾಗಿ ಪರಿಚಯಿಸಿಕೊಂಡು ಅಣ್ಣನಲ್ಲಿ ಸ್ನೇಹವನ್ನು ಕೋರಿದ. ಮೊದಲೇ ನಮ್ಮಣ್ಣ ವೈರ ಮತ್ತು ಸ್ನೇಹ ಎರಡರಲ್ಲೂ ಎತ್ತಿದ ಕೈ. ಕೊಟ್ಟೇ ಬಿಟ್ಟ ಕೇಳಿದ್ದನ್ನು.

ನಮ್ಮಣ್ಣನ ಸ್ವಭಾವ ನಿಧಾನವಾಗಿ ಬದಲಾಗ ಹತ್ತಿತು. ಅರಮನೆಯಲ್ಲಿಯೂ ಅಷ್ಟೇ ಕಿಷ್ಕಿಂಧೆಯ ಇತರರೊಡನೆಯೂ ಅಷ್ಟೇ. ನಾನು ಹೇಳಿದ್ದೇ ಆಗಬೇಕು ಎನ್ನುವ ಭಾವದ ವರ್ತನೆ. ಮಿತಿ ಮೀರಿದ್ದ ಮಧು ಸೇವನೆ. ಅಸಂಖ್ಯ ಹೆಂಡತಿಯರ ನಡುವೆ ಕೈಗೆ ಸಿಕ್ಕವಳನ್ನು ಎಳೆದು ಹೊತ್ತುಗೊತ್ತಿನ ಪರಿವೆಯಿಲ್ಲದೇ ಭೋಗಿಸುತ್ತಿದ್ದ. ಆದರೂ ಪ್ರತಿ ದಿನ ಮಲಗಲಿಕ್ಕೆ ತಾರೆಯ ಮನೆಗೇ ಹೋಗುತ್ತಿದ್ದ. ಸದಾಕಾಲ, ಅವರಿವರಿಗೆ ಬಡಿಯುವ ಮಾತುಗಳೇ. ಯಾರೇ ಯುದ್ಧಕ್ಕೆ ಕರೆಯಲಿ. ಯಾವ ಪರಿವೆಯೂ ಇಲ್ಲದೆಯೇ ಹೋಗಿ ತುಡುಕಿ ಕೊಂದು ಇಲ್ಲವಾದರೆ ಸಾಯುವಂತೆ ಬಡಿದು ಬರುತ್ತಿದ್ದ. ತಡೆದರೆ, ಕೊರಳಲ್ಲಿನ ಹಾರ ಎತ್ತಿ ತೋರಿಸಿ ಹೇಳುತ್ತಿದ್ದ. "ಈ ಹಾರದ ಬಲದಿಂದ ಎದುರಿನವನ ಅರ್ಧ ಬಲ ನನ್ನನ್ನು ಸೇರುತ್ತದೆ. ಮತ್ತೇಕೆ ಭಯ? ಪ್ರಾಣವೇ, ಸೃಷ್ಟಿಯನ್ನು ಪಾಲಿಸುವವನೇ ಅದನ್ನೂ ಪಾಲಿಸುತ್ತಾನೆ". ಋಷ್ಯಮೂಕದೆಡೆಗೆ ಪ್ರತಿದಿನವೂ ಗೌರವದಿಂದ ನೋಡಿ ನಮಸ್ಕರಿಸುತ್ತಿದ್ದ ನನ್ನಣ್ಣ ಅದನ್ನು ಮರೆತೇ ಬಿಟ್ಟಿದ್ದ.

ಅದ್ಯಾವ ಕಾರಣದಿಂದ ಇಂಥ ವಿಪರೀತ ಬುದ್ಧಿಗಳು ಅಣ್ಣನನ್ನು ಸೇರಿದ್ದವೋ ಏನೋ? ಭಗವಂತನೇ ಬಲ್ಲ. ಇಷ್ಟೆಲ್ಲ ಇದ್ದಾಗಲೇ ಬಂದವ ದುಂದುಭಿ. ವರುಣ ಸೂರ್ಯ ಹಿಮವಂತರು ಹೇಳಿದ್ದಂತೆ ವಾಲಿ ನಿನಗೆ ತಕ್ಕ ಪರಾಕ್ರಮಿ ಎಂದು. ಕುಡಿದ ಮತ್ತಿನಲ್ಲಿಯೂ ಕಾದಾಡಿ ಅವನನ್ನು ಕೊಂದಿದ್ದ. ಕಳೇಬರವನ್ನು ಎಸೆಯುವಾಗ ಋಷ್ಯಮೂಕದ ಮಾರ್ಗದಲ್ಲಿ ಎಸೆದಿದ್ದ. ಮಾರನೆಯ ದಿನದಿಂದ ಮೂರು ಸಮುದ್ರದಲ್ಲಿ ಅರ್ಘ್ಯ ಕೊಡುವ ಅಭ್ಯಾಸವೂ ನಿಂತಿತ್ತು. ಕಳೇಬರದಿಂದ ಸುರಿದ ರಕ್ತದಿಂದ ಆಶ್ರಮ ಮಲಿನವಾಯಿತೆಂದು ಮತಂಗರು ಶಾಪ ಕೊಟ್ಟರಂತೆ. "ವಾಲಿ ಈ ಋಷ್ಯಮೂಕಕ್ಕೆ ಬಂದರೆ ಸಾಯಲಿ" ಎಂದು. ವಿಷಯ ತಿಳಿದ ವಾಲಿ ಅದನ್ನು ಕಡೆಗಣಿಸಿದ್ದ. ತಾರೆ-ಜಾಂಬವರು ಮತ್ತು ನಾನು ಒತ್ತಾಯಿಸಿದ್ದಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಮತಂಗರಲ್ಲಿ ಕ್ಷಮೆಯಾಚಿಸಿದ. ಅದು ಹೇಗೆ ದಕ್ಕೀತು?

ಸಾಲದ್ದಕ್ಕೆ ಬಲಪ್ರದರ್ಶನದ ಮತ್ತು ಕೌಶಲ್ಯ ಪ್ರದರ್ಶನದ ಚಟ ನನ್ನಣ್ಣನಿಗೆ. ಮನೆಗೆ ಬಂದ ಬಂಧು ಬಾಂಧವರನ್ನೆಲ್ಲ ಕರೆದುಕೊಂಡು ಬಂದು ದುಂದುಭಿಯ ಅಟ್ಟೆಯನನ್ನು ಹೆಬ್ಬೆರಳ ಮೇಲೆ ಮೊಣಕಾಲ ತನಕ ಎತ್ತುವುದು; ಒಂದೇ ಬಾಣದಿಂದ ವರ್ತುಲಾಕಾರದಲ್ಲಿ ಇದ್ದ ಸಪ್ತಸಾಲ ವೃಕ್ಷಗಳ ಗರಿ ಕತ್ತರಿಸುವುದು ಹೀಗೆ.

ಆಮೇಲೆ ಬಂದವ ಮಾಯಾವಿ. ಅವನನ್ನು ಕೊಲ್ಲಲ್ಲು ಅಣ್ಣ ಹೊರಟ. ಅದೂ ರಾತ್ರಿಯ ಕಾಲದಲ್ಲಿ. ಕತ್ತಿನಲ್ಲಿ ಕನಕ ಕಾಂಚನ ಮಾಲೆ ಕಾಣಲಿಲ್ಲ ನನಗೆ. ಕಂಗೆಟ್ಟು ನಾನೂ ಓಡಿದೆ. ಮಾಯಾವಿ ಹೊಕ್ಕ ಗುಹೆಯ ಬಾಗಿಲಿನಲ್ಲಿ ನನ್ನನ್ನು ನಿಲ್ಲಿಸಿ ತಾನು ಒಳಹೋದ ಅಣ್ಣ ಅದೆಷ್ಟು ದಿನ ಕಳೆದರೂ ಬರಲಿಲ್ಲ. ನನಗಂತೂ ಹೇಳಲಸಾಧ್ಯವಾದ ಭಯ. ಅಷ್ಟರಲ್ಲಿ ಗುಹೆಯಲ್ಲಿ ಹರಿದು ಬಂತು ರಕ್ತದ ಕೋಡಿ. ಬೆನ್ನಿಗೇ ನನ್ನಣ್ಣನ ಆರ್ತನಾದ" ಹಾ!! ಸುಗ್ರೀವ!! ಬದುಕಿಕೋ". ದುಃಖದಲ್ಲಿಯೂ ತನಗೆ ದೇವರು ಬುದ್ಧಿ ಕೊಟ್ಟ. ಗುಹೆಗೆ ಬಂಡೆಯೊಂದನ್ನು ಅಡ್ಡಲಾಗಿಟ್ಟು, ಕೀಲು ಹೊಡೆದು ಮನೆಗೆ ಬಂದೆ. ಕಂಡ ಘಟನೆಯನ್ನು ಹೇಳಿ, ಕೋಣೆಯ ಬಾಗಿಲು ಹಾಕಿಕೊಂಡು ಕುಳಿತೆ. ಅಳಲಿಕ್ಕೂ ಸಾಧ್ಯವಿಲ್ಲದಷ್ಟು ನಿತ್ರಾಣನಾಗಿದ್ದೆ ನಾನು.

ಕೊನೆಗೊಂದು ದಿನ ಜಾಂಬವರು ಬಂದು ತಿಳಿ ಹೇಳಿ ನನಗೆ ರಾಜ್ಯಾಭಿಷೇಕವನ್ನು ಮಾಡಿಸಿದರು. ನಾನು ಮತ್ತು ರುಮೆ ರಾಜ ರಾಣಿಯರಾಗಿ ಸಿಂಹಾಸನ ಏರಿದ್ದೆವು. ತತ್ ಕ್ಷಣದಲ್ಲಿ ತಾರೆ ಬಂದು ನನ್ನ ಬಲಕ್ಕೆ ಕುಳಿತಳು.

ವಾಲಿ ಇಲ್ಲ ಎನ್ನುವ ಬೇಸರದ ನಡುವೆಯೂ ಸುಖ ಸಂತೋಷಗಳಿಂದ ದಿನಗಳು ಕಳೆಯುತ್ತಿದ್ದವು. ಒಂದು ದಿನ ಬಂದ ವಾಲಿ. ಸಿಂಹಾಸನದ ಮೇಲೆ ನನ್ನನ್ನು ನೋಡುತ್ತಿದ್ದಂತೆ ಸಿಟ್ಟಿನಿಂದ ಘರ್ಜಿಸಿ ರುಮೆಯನ್ನು ಎಳೆದೊಯ್ದು ಕೂಡಿ ಹಾಕಿ ನನ್ನನ್ನು ನಿಂದಿಸುತ್ತಾ ಅಟ್ಟಿಸಿಕೊಂಡು ಬಂದು ಹೊಡೆದ. ಹೊಡೆಯುತ್ತಲೇ ಇದ್ದ. "ಕ್ಷಮಿಸು" ಎಂದಿದ್ದು ಆತನಿಗೆ ಕೇಳಿಸಲೇ ಇಲ್ಲ. ಆಗ ನನ್ನಪ್ಪ ನನ್ನನ್ನು ತನ್ನ ರಥ ಹತ್ತಿಸಿಕೊಂಡ. ಋಷ್ಯಮೂಕದಲ್ಲಿ ಇಳಿಸಿದ.

ಮರುದಿವಸ ರಾತ್ರಿ ಕಂಡಿದ್ದು ಕಿಷ್ಕಿಂಧೆಯ ಅರಮನೆಯ ಉಪ್ಪರಿಗೆಯಲ್ಲಿ ಬಲಾತ್ಕಾರಗೊಳ್ಳುತ್ತಿದ್ದ ನನ್ನರಸಿ ರುಮೆ. ತಿರುಗಿ ಹೋಗಿ ಕೇಳಿದ್ದೆ. "ಅಣ್ಣಾ!! ರುಮೆಯನ್ನು ನನ್ನೊಂದಿಗೆ ಕಳಿಸಿಕೊಡು" ವಾಲಿ ನನಗೆ ಪೆಟ್ಟು ಕೊಟ್ಟು ಕಳಿಸಿದ್ದ. ಶತಮಾನಕ್ಕೊ ದಶಮಾನಕ್ಕೋ ಒಮ್ಮೆ ಈ ಘಟನೆ ಪುನರಾವರ್ತಿತವಾಗುತ್ತಿತ್ತು. ಇಂದೂ ಆಯಿತು.

ಆದರೆ ಅದಕ್ಕೆ ಪೂರ್ವದಲ್ಲಿ, ಇಂದಿನ ದಿನ ರಾಮ ಲಕ್ಷ್ಮಣರನ್ನು ದೂರದಿಂದಲೇ ಕಂಡೆ. ಹನುಮನನ್ನು ಕಳುಹಿಸಿ ಅವರ ಬಗ್ಗೆ ವಿಚಾರಿಸಲು ಹೇಳಿದೆ. ಹನುಮ ಬಾಲ ವಟುವಾಗಿ ಹೋದ. ರಾಮ ಲಕ್ಷ್ಮಣರು ತಾವು ಸುಗ್ರೀವನನ್ನು ಕಾಣಲು ಬಂದವರೆಂದು ತಿಳಿದಾಗ ತನ್ನ ನಿಜ ರೂಪದಲ್ಲಿ ಪ್ರಕಟವಾಗಿ ಅವರಿಗೆ ನಮಿಸಿದ. ಮಂಕನಂತಿದ್ದ ಹನುಮನ ಮುಖದಲ್ಲಿ ಮೇಧಾವಿಯ ವರ್ಚಸ್ಸು ಮೂಡಿತ್ತು. ಅಗ್ನಿ ಸಾಕ್ಷಿಯಾಗಿ ನನ್ನ ಮತ್ತು ರಾಮರ ನಡುವೆ ಮಿತ್ರತ್ವ ಮೂಡಿತು.

ರಾಮನಿಗೆ ಎಲ್ಲವನ್ನೂ ತಿಳಿಸಿದೆ. ವಾಲಿಯನ್ನು ಯುದ್ಧಕ್ಕೆ ಕರೆದರೆ ತಾನು ವಾಲಿಯನ್ನು ನಿಗ್ರಹಿಸುವುದಾಗಿ ರಾಮ ವಚನವನ್ನು ಕೊಟ್ಟ. ಅಂತೆಯೇ ಕರೆದೆ. ಯಾವಾಗಲೂ ಆಗುವುದೇ ಆಯಿತು. ಬೇಸರದಿಂದ ರಾಮನನ್ನು ಅದೆಷ್ಟು ನಿಂದಿಸಲಿಲ್ಲ ನಾನು. ಅದೆಷ್ಟು ಟೀಕಿಸಿದೆ. ಆದರೆ ರಾಮ "ಧೈರ್ಯ ತಾಳು" ಎಂದ. ವಾಲಿ-ಸುಗ್ರೀವರ ನಡುವಿನ ಬೇಧ ನನಗೆ ತಿಳಿಯಲಿಲ್ಲ ಎಂದ. ಸೂಕ್ಷ್ಮದಲ್ಲಿ ರಾಮ ನನಗೆ ಪಾಠವೊಂದನ್ನು ಹೇಳಿದ್ದ. ಎಷ್ಟೆಲ್ಲ ಪರೀಕ್ಷಿಸಿದ್ದೆ ನಾನು ರಾಮನನ್ನು. ದುಂದುಭಿಯ ಅಟ್ಟೆ ಎತ್ತಿದ್ದನ್ನು ತಿಳಿಸಿದಾಗ ರಾಮ ಅದನ್ನು ಒದೆದು ಹಾರಿಸಿದ್ದ. ಪೂರ್ಣ ನಂಬಿಕೆ ಬಾರಲಿಲ್ಲ ನನಗೆ. ವಾಲಿ ಸಪ್ತ ಸಾಲ ವೃಕ್ಷಗಳ ಗರಿ ಕತ್ತರಿಸುವುದನ್ನು ಹೇಳಿದೆ. ಆದರೆ ರಾಮ ಆ ಸಪ್ತ ಸಾಲ ವೃಕ್ಷಗಳನ್ನು ಒಂದೇ ನೇರಕ್ಕೆ ತಂದು ಅವೆಲ್ಲವನ್ನೂ ಒಂದೇ ಬಾಣದಲ್ಲಿ ತುಂಡರಿಸಿ ಮತ್ತೆ ಆ ಬಾಣ ರಾಮನ ತೂಣೀರವನ್ನು ಸೇರಿತ್ತು. ಆದರೂ ನಾನು ನಂಬಲಿಲ್ಲ. ನನ್ನ ಅಹಂಕಾರವೇ ಸರಿ.

ರಾಮ ನನಗಿಲ್ಲಿ ಕಲಿಸಿದ್ದು ಎರಡು ಪ್ರಮುಖ ಪಾಠಗಳು. ವಾಲಿಗೆ ನಾನು ಅಷ್ಟೊಂದು ಕನಿಷ್ಠನಲ್ಲ ಎನ್ನುವುದು, ಇನ್ನೊಂದು ಪರೀಕ್ಷಕ ತಾನು ಮೊದಲು ಸಂಪೂರ್ನ ಸತ್ಯವನ್ನು ತಿಳಿದು, ಅದನ್ನು ಪರೀಕ್ಷಾರ್ಥಿಗೆ ತಿಳಿಸಿ ಪರೀಕ್ಷಿಸಬೇಕು ಎನ್ನುವುದು. ರಾಮ ತರಿಸಿ ಹಾಕಿದ್ದಾನೆ ನನಗೆ ಗಜಪುಷ್ಪದ ಮಾಲಿಕೆಯನ್ನು. ಸಾಲದ್ದಕ್ಕೆ, ಯಾವ ಸಪ್ತ ಜನಾಶ್ರಮಕ್ಕೆ ಕಾಲಿಟ್ಟರೆ ದುರ್ಜನರ ತಲೆ ಸಾವಿರ ಹೋಳಾಗುತ್ತದೆ ಎನ್ನುವ ಪ್ರತೀತಿ ಇದೆಯೋ ಅದೇ ಸಪ್ತ ಜನಾಶ್ರಮದ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ಅಲ್ಲ ರಾಮ ನನ್ನನ್ನು ಈ ದಾರಿಯಲ್ಲಿ ಕರೆದುಕೊಂಡು ಬಂದಿದ್ದಾನೆ, ರಾಮ ಅದೆಷ್ಟು ಮಹೋನ್ನತ ವ್ಯಕ್ತಿ. ದಾರಿ ತೋರಿಸುವುದು ಮಾತ್ರವಲ್ಲ, ನಂಬಿದವರನ್ನು ಕೈ ಹಿಡಿದು ಸರಿದಾರಿಯಲ್ಲಿ ಸಾಗಿಸುತ್ತಾನೆ. ಶ್ರೀರಾಮಚಂದ್ರನ ಮಾರ್ಗದರ್ಶನದಲ್ಲಿ ಸಾಗುವ ಈ ಸಮಯ ಸುಗ್ರೀವನ ಬದುಕಿನ ಅತ್ಯಮೂಲ್ಯ-ಅವಿಸ್ಮರಣೀಯ- ಅನುಪಮ ಕ್ಷಣ. ಶ್ರೀರಾಮನ ನಿರ್ದೇಶನದಂತೆ ಆತ ತೋರಿದ ದಾರಿಯಲ್ಲಿ ಸಾಗಿದರೆ ಸತ್ಪ್ರಭಾವ ಆಗಿಯೇ ಆಗುತ್ತದೆ. ಹನುಮನೇ ಸಾಕ್ಷಿಯಲ್ಲವೇ ಇದಕ್ಕೆ? 

ಸಪ್ತ ಜನಾಶ್ರಮವನ್ನೊ ದಾಟಿಯಾಗಿದೆ. ಕಾಡಿನ ಸರಹದ್ದು ಮುಗಿಯುತ್ತಿದೆ. ಅದೋ ಕಿಷ್ಕಿಂಧೆಯ ಅರಮನೆ ಕಾಣುತ್ತಿದೆ. . ವನವಾಸ ದೀಕ್ಷಾಬದ್ಧನಾದ ರಾಮ ಕಿಷ್ಕಿಮ್ಧೆಯ ನಗರಿಯನ್ನು ಪ್ರವೇಶಿಸುವಂತಿಲ್ಲ. ರಾಮ ನಿಯಮ ಮೀರುವವನಲ್ಲ.ಸರಹದ್ದಿನಲ್ಲಿ ನಿಂತು ರಾಮ ತನ್ನ ಬಲಗೈನಿಂದ ಸನ್ನೆ ಮಾಡಿ ಸಾಗಲು ಹೇಳುತ್ತಿದ್ದಾನೆ ಆ ಸನ್ನೆ ನನ್ನ ಪಾಲಿಗೆ ಕೇವಲ ಹೋಗು ಎನ್ನುವ ಸನ್ನೆಯಲ್ಲ. ಹೋಗು ನಾನುದ್ಧರಿಸುತ್ತೇನೆ ಎನ್ನುವ ಸನ್ನೆಯಂತೆ ಕಾಣುತ್ತಿದೆ. ಹಿಂದಿರುವ ರಾಮನ ಮೇಲಿನ ನಂಬಿಕೆಯಿಂದ ಮುಂದೆ ಸಾಗುತ್ತೇನೆ, ಅದೋ ವಾಲಿಯ ಶಯನ ಕಕ್ಷೆ. ಕಿಟಕಿಯ ಹತ್ತಿರ ನಿಂತಾಗಿದೆ. ಇನ್ನು ಕಾರ್ಯ ಸಾಧಿಸಬೇಕು.

(ಸಶೇಷ)

Tuesday, May 25, 2021

ವಾಲಿಪ್ರಕರಣ ಅಧ್ಯಾಯ_3_ರುಮೆಯ_ಉಮ್ಮಳಿಕೆ



[ಈತನಕ: ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೇಳಲು ತಾರೆ ಮುಂದಾಗಿದ್ದಾಳೆ. ತನ್ನ ಯಾವ ಕಾರ್ಯಕ್ಕೂ ಪಶ್ಚಾತ್ತಾಪವಿಲ್ಲದ ವಾಲಿ ಸುಗ್ರೀವ ತಾನಾಗಿ ಬಂದು ತನ್ನಲ್ಲಿ ಕ್ಷಮೆಯಾಚಿಸುವಂತೆ ಮಾಡುತ್ತೇನೆಂಬ ಭಾವದಲ್ಲಿ ವಾಲಿ ಇದ್ದಾನೆ]

ಕಿಷ್ಕಿಂಧೆಯ ಅರಮನೆಯಲ್ಲಿ ಈ ರಾತ್ರಿ ಕಾಲದಲ್ಲಿ ನನ್ನದೇ ಮನೆಯಲ್ಲಿ ಸೆರೆಯಾಳಿನಂತಾಗಿ ಬದುಕುತ್ತಿದ್ದೇನೆ ನಾನು ರುಮೆ. ನನ್ನ ಪಾಲಿಗೆ ಹಗಲು ರಾತ್ರಿಗಳೆನ್ನುವ ಬೇಧ ಸೂರ್ಯಸುತ ಇಲ್ಲಿಂದ ಹೋದಾಗಲೇ ಇಲ್ಲವಾಯಿತು. ಅಂದಿನಿಂದ ಇಂದಿನವರೆಗೂ ನನ್ನ ಬಾಳಿನಲ್ಲಿ ಬರೀ ಕತ್ತಲು. ನನ್ನ ಬಗ್ಗೆ ಹೆಚ್ಚೇನೂ ಹೇಳುವುದಕ್ಕಿಲ್ಲ. ನಾನು ಹೆಚ್ಚಿನವಳೂ ಅಲ್ಲ. ಆದರೆ ಹಚ್ಚಿಕೊಂಡವಳು. ನನ್ನ ಗಂಡ ಸುಗ್ರೀವನಿಗೆ ಮೆಚ್ಚಿನವಳು. ನನ್ನಪ್ಪ ದಧಿಮುಖನಿಗೆ ನೆಚ್ಚಿನವಳು. ಎಲ್ಲರೂ ಹುಟ್ಟುವಂತೆಯೇ ನನ್ನ ಹುಟ್ಟು ಕೂಡಾ. ದಧಿಮುಖನಿಗೆ ಮಗಳಾಗಿ ಹುಟ್ಟಿದೆ, ಬೆಳೆದೆ. ನನ್ನ ಮನೆಗೆ ಆಗಾಗ ಬರುತ್ತಿದ್ದ ನನ್ನ ಅತ್ತೆಯ ಮಕ್ಕಳು ವಾಲಿ-ಸುಗ್ರೀವ-ಅಂಜನೆಯರೊಡನೆ ಆಡುತ್ತಾ ಆಡುತ್ತಾ ಬೆಳೆದೆ. ಎಲ್ಲಾದರೊಮ್ಮೆ ವಿನೋದಕ್ಕೆ ನನ್ನ ದೊಡ್ದ ಭಾವ ವಾಲಿ ಆಡುತ್ತಿದ್ದ ಮಾತು "ನೀನು ನನ್ನನ್ನು ಭಾವ ಎಂದು ಕರೆಯುವುದು ಸದಾ ಇದ್ದಿದ್ದೇ. ಸುಗ್ರೀವನಿಗೆ ಸ್ವಾಮಿ ಎಂದು ಕರೆಯುವುದನ್ನು ಅಭ್ಯಾಸ ಮಾಡಿಕೋ." ನಾಚುತ್ತಿದ್ದೆ ನಾನು. ಸುಗ್ರೀವನದು ಎಂದಿನಂತೆ ಪ್ರಸನ್ನತೆಯ ಮುಗುಳ್ನಗು. ಪ್ರಾಯಸಮರ್ಥಳಾದೆ. ಆದರೂ ಭಾವನವರ ವಿನೋದ ನಿಲ್ಲಲಿಲ್ಲ. ಭಾವನೆಂಬ ಸಲುಗೆಯಲ್ಲಿ ನಾನು ಒಮ್ಮೆ ಕೇಳಿಬಿಟ್ಟಿದ್ದೆ. "ನೀವು ಹೀಗೆನ್ನುತ್ತೀರಿ. ಸುಗ್ರೀವ ಒಪ್ಪಬೇಕಲ್ಲ" ಎಂದು. ಭಾವ ತನ್ನ ಭಾವನೆಯನ್ನು ಬದಲಾಯಿಸಿ ಹೇಳಿದ್ದರು. "ಒಪ್ಪಬೇಕು ಅಷ್ಟೇ. ಅಲ್ಲ ಎನ್ನುವ ಮಾತಿಲ್ಲ. ಅವನ ಅಣ್ಣ ನಾನು. ಆತನ ಸಂತೋಷ ಏನು ಎಲ್ಲಿ ಎನ್ನುವುದನ್ನು ಚೆನ್ನಾಗಿ ಬಲ್ಲೆ. ನೀನೊಪ್ಪದಿದ್ದರೆ ಮತ್ತೆ ಚೆನ್ನಾಗಿರಲಿಕ್ಕಿಲ್ಲ" ಎಂದು. ನನ್ನಲ್ಲಿ ಒಂದು ಭಯಮಿಶ್ರಿತ ಸಂತೋಷ ಮನೆಮಾಡಿತ್ತು. ನನಗೆ ನೆನಪಿದ್ದಂತೆ ಭಾವನವರಾಗಲೀ ಸ್ವಾಮಿಯಾಗಲೀ ಒಬ್ಬರೇ ಮಧುವನಕ್ಕೆ ಬಂದಿದ್ದು ನೆನಪಿಲ್ಲ. ಕಾಯದ ಜೊತೆಯ ನೆರಳಂತೆ ಇಬ್ಬರೂ ಒಟ್ಟಾಗಿಯೇ ಬಂದಿದ್ದು. 

ಪ್ರಾಯ ಸಮರ್ಥೆಯಾದ ನನ್ನನ್ನು ಕಿಷ್ಕಿಂಧೆಯ ಯಾವ ವಾನರನೂ ಕೆಟ್ಟ ದೃಷ್ಟಿಯಿಂದ ನೋಡಿದ್ದು ನೆನಪಿಲ್ಲ. ಅಥವಾ ಸಾಮಾನ್ಯ ವಾನರಿಯಂತೆ ನೋಡಿದ್ದೂ ಇಲ್ಲ. ಕಿಷ್ಕಿಂಧೆಯ ಯುವರಾಣಿ ನಾನು ಎಂಬಂತೆಯೇ ನೋಡಿದ್ದು. ಆದರೆ ನಡೆಯಿತು ಒಂದು ಕಹಿ ಘಟನೆ. ಗೋಲಭನೆನ್ನುವ ಗಂಧರ್ವ ನನ್ನನ್ನು ಹೊತ್ತು ಆಕಾಶಮಾರ್ಗವಾಗಿ ಹೊರಟಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಬಂದ ಭಾವನವರು ಆತನ ಮುಖಕ್ಕೆ ಗುದ್ದಿದ್ದರು. ಆತ ಕೆಳಗೆ ಬಿದ್ದಿದ್ದ. ನನ್ನನ್ನು ಹೊತ್ತು ತಂದರು. ಸುಗ್ರೀವನೊಡನೆ ಮದುವೆ ಮಾಡಿಸಿಯೇ ಬಿಟ್ಟಿದ್ದರು. ಅವರ ಮುಖದಲ್ಲಿನ ಸಿಟ್ಟು ಹೋಗಿರಲಿಲ್ಲ, ಮದುವೆಯ ಕಾರ್ಯಕ್ರಮವೆಲ್ಲ ಮುಗಿದ ಮೇಲೆ ಅಪ್ಪನಿಗೆ ಒಂದು ಸಾರಿ ಏರು ದನಿಯಲ್ಲಿ ಹೇಳಿದ್ದರು "ರುಮೆಯನ್ನು ಸುಗ್ರೀವನಿಗೆಂದು ನಿಶ್ಚಯಿಸಿ ಆಗಿತ್ತು. ಅವಳು ನಿನ್ನಲ್ಲಿ ಇದ್ದಿದ್ದು ನ್ಯಾಸಪೂರ್ವಕವಾಗಿ. ಪರಧನವನ್ನು ಹೀಗೆಯೇ ನೋಡಿಕೊಳ್ಳುವುದು? ಬಂದು ನನ್ನಲ್ಲಿಯೇ ತಿಳಿಸುವಷ್ಟಾದರೂ ವಿವೇಕ ಬಂತಲ್ಲ ನಿನಗೆ." ಅಬ್ಬಾ!! ಭಾವನ ಸಿಟ್ಟೇ.

ಇದೇ ಭಾವನ ಸಿಟ್ಟಿನ ಸ್ವಭಾವ ಹೆಪ್ಪುಗಟ್ಟಿ ಸೇಡಿನ ಬೆಟ್ಟವಾಗಿ ನನಗೆ ಕೆಟ್ಟ ಕಾಲ ಬಂತಲ್ಲ. ಎಲ್ಲಿ ತಪ್ಪಿದೆ ನಾನು ಎನ್ನುವುದೇ ತಿಳಿಯುತ್ತಿಲ್ಲ. ಅಕ್ಕ ತಾರೆ ನನ್ನವರನ್ನು ಸೇರಿದಾಗ ನಾನು ವಿರೋಧಿಸಲಿಲ್ಲ ನಿಜ. ಅದಕ್ಕೆ ಕಾರಣವೂ ಇದೆ. ಒಂದು ಕಡೆ ಕಿಷ್ಕಿಂಧೆಯ ಭವಿಷ್ಯದ ಕುಡಿ ಅಂಗದ. ಆತನ ಭವಿತವ್ಯ ಮುಖ್ಯ. ಕಿಷ್ಕಿಂಧೆಯ ಅಸಂಖ್ಯ ವಾನರರ ಭದ್ರತೆ ಮುಖ್ಯ. ಈ ಸಾಮ್ರಾಜ್ಯಕ್ಕೆ ಭವಿತವ್ಯದ ರಾಜನಾಗಬೇಕಾದ ಅಂಗದನ ಹಿತದೃಷ್ಟಿಯಿಂದ ಅಕ್ಕ ನನ್ನವರನ್ನು ಸೇರಿದ್ದು ಎನ್ನುವುದನ್ನು ನಾನು ಅರಿಯದವಳಲ್ಲ. ಧರ್ಮಶಾಸ್ತ್ರ ತಾರೆಯ ಕಾರ್ಯಕ್ಕೆ ಸಮ್ಮತಿ ಸೂಚಿಸಿದೆಯೇ ಹೊರತು ನಿಷೇಧವನ್ನು ಹೇರಲಿಲ್ಲ, ಧರ್ಮದ ಪ್ರಕಾರ ಸರಿ ಇರುವುದನ್ನು ನಾನೇಕೆ ವಿರೋಧಿಸಲಿ? ಭಾವನವರು ತಮ್ಮ ಬಲಪ್ರದರ್ಶನದ ಹಪಹಪಿಕೆಯಿಂದ ಅನೇಕರಲ್ಲಿ ವೈರವನ್ನು ಕಟ್ಟಿಕೊಂಡಿದ್ದರು. ಅನೇಕರಲ್ಲಿ ಸ್ನೇಹವನ್ನೂ ಸಂಪಾದಿಸಿದ್ದರು ನಿಜ. ಆದರೆ ಎರಡೂ ಬಣದಲ್ಲಿದ್ದವರು ದುಷ್ಟರೇ. ಅಂತರಂಗದಲ್ಲಿ ನನ್ನ ಸ್ವಾಮಿ ಇದರ ಕುರಿತು ಅದೆಷ್ಟೋ ಬಾರಿ ಆತಂಕ ವ್ಯಕ್ತ ಪಡಿಸಿದ್ದರೂ, ಅಣ್ಣನ ಬಲದ ಮೇಲಿನ ವಿಶ್ವಾಸದಿಂದ ಸಮಾಧಾನ ಪಡುತ್ತಿದ್ದರು ಇದರಿಂದಲೇ ಈ ವಿಷಯ ತನಗೆ ತಿಳಿದಿದ್ದು. ಅಂಗದ ಅನಾಥ, ತಾರೆ ಮೊದಲೇ ಸುಂದರಿ ಈಗ ಆಶ್ರಯ ಹೀನೆ ಅಂತ ಗೊತ್ತಾದರೆ ಇಲ್ಲವಾದ ವಾಲಿಯ ಮೇಲಿನ ದುಷ್ಟರ ಸಿಟ್ಟು ಇವರ ಕಡೆ ತಿರುಗದಿದ್ದೀತೇ? ಖಂಡಿತ ಇಲ್ಲ. ನನ್ನ ಪರಿವಾರದ, ವಾನರರ ಭವಿತವ್ಯದ ದೃಷ್ಟಿಯಿಂದಲೇ ನಾನು ಅದನ್ನು ಒಪ್ಪಿದ್ದು. ಒಂದು ಹೆಣ್ಣಾಗಿ ನನಗಿಷ್ಟು ಅರ್ಥವಾಗದೇ ಇದ್ದೀತೇ?

ಇಲ್ಲ. ತಾರೆ ಸುಗ್ರೀವರ ವಿಷಯದಲ್ಲಿ ನಾನು ಮಾಡಿದ್ದು ಯಾವುದೇ ರೀತಿಯಿಂದಲೂ ತಪ್ಪಲ್ಲ. ಹಾಗಾದರೆ ಎಲ್ಲಿ ತಪ್ಪಿದೆ ನಾನು? ಮಾಯಾವಿಯೊಡನೆ ಕಾದಾಟಕ್ಕೆ ಭಾವನ ಬೆನ್ನ ಹಿಂದೆಯೇ ಹೊರಟರಲ್ಲ ನನ್ನವರು ಆಗ ತಡೆಯದೇ ತಪ್ಪಿದ್ದ್ದೇನೆಯೇ? ಇಲ್ಲ. ಅಂದು ಅವರಿಬ್ಬರ ಸಹಜ ಗುಣದಂತೆ ವ್ಯವಹರಿಸಿದ್ದರು ಅವರು. ಹಾಗಾಗಿ ಅಲ್ಲಿಯೂ ನಾನು ತಪ್ಪಲಿಲ್ಲ. ಹಾಗಾದರೆ ತಪ್ಪಿಲ್ಲದ ತನಗೇಕೆ ಈ ಶಿಕ್ಷೆ? ಅಂದೊಮ್ಮೆ ರಕ್ಷೆಯನ್ನು ಕೊಟ್ಟ, ರಕ್ಷೆ ಶಾಶ್ವತವಾಗಿರಲಿ ಎಂದು ಮದುವೆ ಮಾಡಿಸಿದ ವಾಲಿಯೇ ತನ್ನನ್ನು ಈ ಪರಿ ದೈಹಿಕವಾಗಿ ಹಿಂಸಿಸುವುದೇಕೆ? ಅವರ ಸಿಟ್ಟಿರುವುದಾದರೂ ಯಾರ ಮೇಲೆ? ಅಕ್ಕ ತಾರೆಯನ್ನು ಎಂದಿಗೂ ಪ್ರಶ್ನಿಸಿದ್ದನ್ನು ನಾನು ನೋಡಲಿಲ್ಲ, ಆದರೆ ನನ್ನನ್ನು ನನ್ನವರು ಋಷ್ಯಮೂಕದಿಂದಲೂ ಕಾಣುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಲಾತ್ಕರಿಸುವುದಾದರೂ ಏಕೆ? ಋಷ್ಯಮೂಕದಲ್ಲಿರುವ ನನ್ನವರು ಇದನ್ನೆಲ್ಲ ನೋಡಿ ಇಲ್ಲಿ ಬರಲಿ ಎಂದೇ? ಅದರ ಬದಲು ವಾಲಿಯೇ ಋಷ್ಯಮೂಕಕ್ಕೆ ಹೋಗ ಬಹುದಲ್ಲ. ಓಹ್!! ಅದು ಅಸಾಧ್ಯ. ಅವರಿಗೆ ಶಾಪವಿದೆ. ಅಂದರೆ ತಮ್ಮ ಸಿಟ್ಟನ್ನು ತೀರಿಸಿಕೊಳ್ಳಲಾಗದ ದೌರ್ಬಲ್ಯಕ್ಕೆ ತಾನು ಎರವೇ? ಅಲ್ಲದೇ ಮತ್ತೇನು?

ಹಾಗಾದರೆ ನಾನೆಲ್ಲಿ ತಪ್ಪಿದೆ? ವಾಲಿ ಹತನಾದ ಎಂದು ಸುಗ್ರೀವ ಹೇಳಿದೊಡನೆ "ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು" ಎನ್ನುವ ಮಾತಿನಂತೆ ನಡೆಯದೇ ಇದ್ದಿದ್ದೇ ನನ್ನ ತಪ್ಪೇ. ಒಂದು ದೃಷ್ಟಿಯಿಂದ ನಿಜ. ಆದರೆ ವಾಲಿಯ ಎಷ್ಟೋ ಹೆಂಡತಿಯರು ಅನೇಕ ಬಾರಿ ಮಾತನಾಡಿದ್ದನ್ನು ನಾನೇ ಕೇಳಿದವಳು. "ನಮ್ಮವರ ವಿಪರೀತ ಬುದ್ಧಿಯಿಂದ ಮಾಂಗಲ್ಯದ ಉಳಿವಿನ ಬಗೆಗೆ ನಮಗೇ ಭಯವಾಗುತ್ತದೆ ಎಂದು." ಅದೆಷ್ಟೊ ಬಾರಿ ಅವರಿವರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದನ್ನು ಕೇಳಿದ್ದೇನೆ. "ವಾಲಿಯ ವಿಪರೀತ ಬುದ್ಧಿಯನ್ನು ನೋಡಿದರೆ ಭಯವೇ ಆಗಿದೆ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಾದೀತೇ?" ಎಂದು. ಕಿಷ್ಕಿಂಧೆಯ ಎಲ್ಲರಲ್ಲಿ ಸುಪ್ತವಾಗಿ ವಾಲಿಯ ಬಗ್ಗೆ ಇದ್ದ ಭಾವನೆ ಅದು. ವಾಲಿಯ ಅಂತ್ಯಕಾಲ ಸಮೀಪಿಸಿದೆ ಎಂದು. ಹಾಗಾಗಿಯೇ ವಾಲಿ ಸತ್ತಿದ್ದಾನೆ ಎಂದ ಕೂಡಲೇ ಎಲ್ಲರೂ ಅದನ್ನು ಪರಾಮರ್ಷಿಸದೇ ಒಪ್ಪಿದ್ದು. ಸಮಷ್ಟಿಯ ಭಾವದಲ್ಲಿದ್ದ ನನ್ನ ತಪ್ಪೇನೂ ಇಲ್ಲವಲ್ಲ.

ಆದರೆ, ನನ್ನನ್ನು ಬಲಾತ್ಕರಿಸುವಾಗ ವಾಲಿಯಾಡುವ ಮಾತುಗಳನ್ನು ಕೇಳಿದರೆ ಇವೆಲ್ಲದರಲ್ಲಿಯೂ ನನ್ನ ತಪ್ಪಿದೆ. ಬಲಾತ್ಕಾರವನ್ನು ತಾಳಲಾರದೆ ಉಮ್ಮಳಿಸಿದರೆ, " ದುಃಖಿಸು ನೀಚ ಹೆಣ್ಣೆ. ಅಳು ಜಾರಿಣಿ. ನಿನ್ನ ಉಮ್ಮಳಿಕೆಗಳು ವಾಲಿಯ ಪಾಲಿನ ಮಂಗಳವಾದ್ಯದಂತೆ. ಸುಖಿಸಿದೆಯಲ್ಲ ಅಂದು ನಿನ್ನ ನೀಚ ಹೇಡಿ ದುರ್ಬಲ ಗಂಡನೊಡನೆ ಸಿಂಹಾಸನದ ಮೇಲೆ ಕುಳಿತು. ಆತ ತಾರೆಯನ್ನು ಭೋಗಿಸಿದಾಗ ತಾರೆಗಾದ ಹೇಸಿಗೆ ನಿನಗೂ ಆಗಬೇಕು. ಆ ನೋವನ್ನು ನೀನೇ ಉಣ್ಣಬೇಕು. ನಿನ್ನ ಸ್ವೇಚ್ಛಾಚಾರದ ಸ್ವೇಚ್ಛಾ ಪ್ರಾರಬ್ಧ ಇದು. ಅನುಭವಿಸು"
ಸಾಲದ್ದಕ್ಕೆ ಎಲ್ಲಾದರೊಮ್ಮೆ ನನ್ನಪ್ಪನನ್ನು ಕರೆದು ಅವಮಾನಿಸುವುದೂ ಇದೆ. 

ಈ ಎಲ್ಲ ದುಃಖವನ್ನು ಸಂತೈಸುವರು ಯಾರೂ ಇಲ್ಲವೆಂದಲ್ಲ. ಅಕ್ಕ ತಾರೆ ಸಂತೈಸುತ್ತಾಳೆ ನಿಜ. ಆದರೆ ಅದೂ ಭಯದಲ್ಲಿಯೇ, ಅದು ಸಾಂತ್ವನ ಎನ್ನುವುದಕ್ಕಿಂತ ನಮ್ಮಿಬ್ಬರ ನಡುವಿನ ಸಮಾನ ದುಃಖ ಎಂದರೆ ತಪ್ಪಲ್ಲ. ಅಕ್ಕನಲ್ಲಿರುವುದು ಅನುಕಂಪ ಮಾತ್ರ. ಅವಳ ಮಿತಿಯಲ್ಲಿ ಇಷ್ಟಲ್ಲದೇ ಇನ್ನೇನು ಸಾಧ್ಯ?

ಹೇಳಲಿಕ್ಕೆ ಧರ್ಮಾಧಿಪತಿ ಯಮ ಮತ್ತು ಕರ್ಮಾಧಿಪತಿ ಶನಿ ನನ್ನವರ ಅಣ್ಣಂದಿರು. ಆದರೆ ಅವರ ಕುರಿತಾಗಿ ಅವರೂ ಏನೂ ಮಾಡುತ್ತಿಲ್ಲ. ಅವರಿಗೂ ವಾಲಿಯ ಭಯ. ಸೂರ್ಯದೇವ ಇವರ ನೋವು ನೋಡಲಾರದೆ ಋಷ್ಯಮೂಕದಲ್ಲಿ ಬಿಟ್ಟ. ಆದ್ರೆ ತನ್ನೊದನೆ ಕರೆದೊಯ್ಯಲಿಲ್ಲ. ದೇವ ವೈದ್ಯರಾದ ಅಶ್ವಿನೀ ದೇವತೆಗಳೂ ನನ್ನ ಭಾವಂದಿರು. ಆದರೆ ನನಗಿರುವ ನೋವಿಗೆ ಅವರಲ್ಲಿ ಮದ್ದಿಲ್ಲವಲ್ಲ. ನಾನು ಹತಾಶಳಾಗುವುದಿಲ್ಲ, ನನ್ನವರ ಒಳ್ಳೆಯತನ ಅವರ ಕೈಬಿಡದು. ಅವರೇನೂ ದುರ್ಬಲರಲ್ಲ. ಹೇಡಿಯಲ್ಲ. ಅಣ್ಣನೊಡನೆ ಕಾದಾಡುವಾಗ ಅವರಿಗೆ ಭ್ರಾತೃಪ್ರೇಮ ಅಡ್ಡ ಬರುತ್ತಿದೆ. ಆದರೆ, ನಾನು ನಾಳಿನ ಒಳ್ಳೆಯದರ ನಿರೀಕ್ಷೆ ಅಪೇಕ್ಷೆ ಕಳೆದುಕೊಳ್ಳುವುದಿಲ್ಲ. ಭಗವಂತ ಏನಾದರೂ ದಾರಿ ತೋರಿಯಾನು. ನನ್ನ ಈ ಸಂಕಷ್ಟಕ್ಕೆ ಒಂದು ಮುಕ್ತಿಯನ್ನು ಇಂದಲ್ಲ ನಾಳೆ ಕೊಟ್ಟಾನು.  ನನ್ನವರು ಮತ್ತಿಲ್ಲಿ ಬಂದಾರು. ನಾವಿಬ್ಬರೂ ಒಂದಾಗಿ ಬಾಳುವಂತಾದೀತು.

ವಾಲಿಪ್ರಕರಣ ಅಧ್ಯಾಯ-2 ವಾಲಿವಿಪ್ಲವ


[ಈತನಕ: ಕಿಷ್ಕಿಂಧೆಯ ವರ್ತಮಾನ ಪರಿಸ್ಥಿತಿಗೆ ಕಾರಣವಾದ ಘಟನೆಗಳನ್ನು ತನ್ನನ್ನೇ ಕೇಂದ್ರವಾಗಿಸಿಕೊಂಡು ತನ್ನ ಭೂತಕಾಲವನ್ನು ನೆನಪಿಸಿಕೊಳ್ಳುತ್ತ ವಾಲಿಯ ನಿರೀಕ್ಷಯಲ್ಲಿರುವ ತಾರೆ. ಅಂಗದ ತಂದ ವರ್ತಮಾನವನ್ನು ತಿಳಿದು ವಾಲಿಯಲ್ಲಿ ಸುಗ್ರೀವ ಮತ್ತು ರುಮೆಯರಿಗೆ ಕ್ಷಮಾದಾನವನ್ನು ಯಾಚಿಸುವ ಮನಸ್ಸು ಮಾಡಿ ಎಲ್ಲ ಧೈರ್ಯ ಒಗ್ಗೂಡಿಸಿಕೊಳ್ಳಲು ಪ್ರಯತ್ನಿಸಿದ್ದಳು]

 

ಬಿಡು ಬೀಸಾದ ಹೆಜ್ಜೆಗಳನ್ನಿಡುತ್ತಾ ತಾರೆಯ ಅಂತಃಪುರಕ್ಕೆ ಬಂದ ವಾಲಿ ಅವಳನ್ನು ಬರಸೆಳೆದು ಮುದ್ದುಗರೆದು ರಮಿಸಿ ಸುಖಿಸಿ ಹಾಸಿಗೆಯ ಮೇಲೆ ಒರಗಿ ಆ ಸುಖದ ಹಂಬಲಿನಲ್ಲೇ ಇದ್ದೇನೆ. ಹಾಲು ಚೆಲ್ಲಿದಂತೆ ಚೆಲ್ಲಿದ ಬೆಳದಿಮ್ಗಳಿನಲ್ಲಿ ನನ್ನ ತಾರೆ ಮತ್ತಷ್ಟು ಮುದ್ದಾಗಿ ಕಾಣುತ್ತಾಳೆ. ಯಾರವ ಒದರಿದವ? ಬಾಲ ವನಿತಾ ಸುರತ ಮೃದಿತಾ ಕ್ಷೀಣೈರ್ಯಪಿ ಶೋಭತೇ ಎಂದವ. ಕಲ್ಪನೆಯಲ್ಲಿ ಶೋಭಿಸುವುದನ್ನು ಅಭ್ಯಾಸ ಮಾಡಿದ ಹುಚ್ಚು ಕವಿಯಾತ. ಖಂಡಿತಕ್ಕೂ. ಏಕೆಂದರೆ ಶೋಭಿಸುವುದು ಎನ್ನುವುದನ್ನು ಅಕ್ಷರಶಃ ಅಭ್ಯಸಿಸಿ ಅನುಭವಿಸಿದವ ನಾನು. ವಾನರೇಶ್ವರ, ಇಂದ್ರನಂದನ ವಾಲಿ. ಆ ಕವಿ ನಿಜಕ್ಕೂ ದೌರ್ಭಾಗ್ಯವಂತ. ನನ್ನ ತಾರೆಯಂಥಾ ಸುಂದರವಾದ ಹೆಂಡತಿ ಆತನಿಗೆ ಒಲಿಯಲಿಲ್ಲ, ನನ್ನ ತಾರೆಯಂಥಾ ಕಾಮಿನಿ ಆತನ ಸತಿಯಲ್ಲ. ನನ್ನ ತಾರೆಯಂಥಾ ಮೋಹಿನಿ ಮತ್ಯಾರಿಗೂ ಸಿಗಲಿಲ್ಲ. ಸಿಗಲು ಸಾಧ್ಯವೂ ಇಲ್ಲ. ಕಾರಣ ಈ ವಾಲಿಯ ಶ್ರೇಷ್ಠತೆ, ಉತ್ಕೃಷ್ಟತೆ.  ಆಯಾಸದಲ್ಲೂ ಸುಖ ಎನ್ನುವುದಿದ್ದರೆ ಅದು ಈ ಕ್ರೀಡೆಯಲ್ಲಿ, ಸಾಹಸ ಪ್ರದರ್ಶಿಸುವ ಮಲ್ಲ ಯುದ್ಧದಲ್ಲಿ. ಅಥವಾ ಪಂಥಾಹ್ವಾನವನ್ನು ಗೆಲ್ಲುವಲ್ಲಿ ಮಾಡುವ ಕಾರ್ಯದಲ್ಲಿ.

 

ಆಹಾ!! ತಾರೆಯ ಮುಖಭಾವವೇ!! ಅದೆಂಥಾ ಸೊಗಸು, ಅದೇನು ಸೌಂದರ್ಯ. ತನ್ನ ತನುಸುಖವನ್ನು ವಾಲಿಗೆ ಧಾರೆ ಎರೆದು ಧನ್ಯಳಾದ ಭಾವವನ್ನು ಅವಳ ಮುಖದಲ್ಲಿ ಕಾಣುತ್ತಿದ್ದೇನೆ. ತಾರೆಯೇ ಏನು? ಕಿಷ್ಕಿಂಧೆಯಲ್ಲಿನ ನನ್ನ ಎಲ್ಲ ರಾಣಿಯರ ಮುಖದಲ್ಲಿ ನಾನು ಈ ಧನ್ಯತಾಭಾವವನ್ನು ಕಂಡವ. ಆಗದಿದ್ದೀತೇ ಮತ್ತೆ? ಸುಖೋಪಭೋಗದ ಸುಧಾಮ ಎನ್ನಿಸಿಕೊಂಡ ಸ್ವರ್ಗದ ಅಧಿಪತಿಯ ಮಗನ ತೋಳುಗಳಲ್ಲಿ ಕರಗಿದಾಗ? ದೈತ್ಯ ದೇವತೆಗಳ ಗಡಣ ಹೈರಾಣಾಗಿ ಬಿದ್ದಾಗ ಕಡಲನ್ನೇ ಕಡೆದವನ ಹೆಂಡತಿ ಎಂದು ಲೋಕ ಗುರುತಿಸುವಾಗ?

ಎದುರಾಳಿಯ ಅರ್ಧ ಬಲವನ್ನು ಸೂರೆಗೊಂಡು ಅದರಿಂದಲೇ ಆತನನ್ನು ಮಣಿಸುವ ವರ ಪಡೆದವನ ವಧು ತಾನೆನ್ನಿಸಿಕೊಂಡಾಗ? ಸಪ್ತ ಸಾಲ ವೃಕ್ಷಗಳ ಒಂದೊಂದೇ ಗರಿಯನ್ನು ಕತ್ತರಿಸುವ ಕೌಶಲ್ಯ ಹೊಂದಿದವ ದೇಹ ತನ್ನೆದುರು ಸುಖಕ್ಕಾಗಿ ಕಾತರಿಸಿದಾಗ? ಇಂದ್ರಿಯಗಳ ಪ್ರತೀಕವಾಗಿರುವವನ ಮಗನಿಂದಲೇ ಇಂದ್ರಿಯ ಸುಖ ಕೊಟ್ಟು ಪಡೆವಾಗ ಯಾವ ಹೆಣ್ಣು ತಾನೇ ಧನ್ಯತಾಭಾವವನ್ನು ಅನುಭವಿಸುವುದಿಲ್ಲ? ಅದು ಸಹಜವೂ ಹೌದು. ಸ್ವಾಭಾವಿಕವೂ ಹೌದು. ಹೆಚ್ಚುಗಾರಿಕೆ ಇರುವುದು ಅಲ್ಲಲ್ಲ. ತಾರೆಯೊಂದಿಗೆ ರಮಿಸಿದಾಗ ನಾನು ಧನ್ಯ ಎಂದು ನನಗನ್ನಿಸುತ್ತದೆ.

 

ಕಾರಣ ಇಷ್ಟೇ. ಈ ತಾರೆ ನನ್ನ ಪಾಲಿನ ಭಾಗ್ಯ ತಾರೆ. ಇವಳು ಬಂದ ಮೇಲಲ್ಲವೇ ವಾಲಿ  ವಾನರೇಶ್ವರ ಎಂದು ಲೋಕ ವಿಖ್ಯಾತನಾಗಿದ್ದು. ಲೋಕದಲ್ಲಿ ಸಮುದ್ರ ಕಡೆದಿದ್ದು ದೊಡ್ಡ ಸಂಗತಿಯೇನಲ್ಲ. ಆದರೆ ದೇವ ದೈತ್ಯರಿಬ್ಬರೂ ಒಪ್ಪಿ ತಾರೆಯನ್ನು ನನಗೆ ಕೊಟ್ಟಿದ್ದು ಹೆಚ್ಚುಗಾರಿಕೆ. ನನ್ನ ಪರಾಕ್ರಮದ ಸಂಪಾದನೆ ನನ್ನೀ ಭಾಗ್ಯತಾರೆ. ಈ ನನ್ನ ಭಾಗ್ಯತಾರೆಯೊಂದಿಗೆ ಸುಖ ಸಂತೋಷದಿಂದ ಕಳೆಯುತ್ತಿದ್ದೆ. ಮಗ ಅಂಗದನ ಮುಗ್ಧ ಲೀಲೆಗಳಿಗೆ ಮರುಳಾಗುತ್ತಿದ್ದೆ. ತನಗಿಂಥಾ ಭಾಗ್ಯತಾರೆ ದೊರೆತ ಮೇಲೆ ತನ್ನ ತಮ್ಮ ಸುಗ್ರೀವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿದ್ದೆ. ಆಗಲೇ ನಡೆದಿದ್ದು ಗೋಲಭ ಗಂಧರ್ವನೊಡನೆ ಯುದ್ಧ. ಕಿಷ್ಕಿಂಧೆಯ ಹೆಣ್ಣು ಮಗಳು ರುಮೆ. ನನ್ನ ಮಾವನ ಮಗಳು. ಅಂದು ಅವಳನ್ನು ಹೊತ್ತೊಯ್ದಿದ್ದ ಗಂಧರ್ವ ಗೋಲಭನೊಂದಿಗೆ ಕಾದಾಡಿ ಅವನ ಮುಸುಡಿಗೆ ಗುದ್ದಿ ರುಮೆಯನ್ನು ಮತ್ತೆ ಕರೆತಂದಿದ್ದೆ. ರುಮೆಯ ಮುಂದಿನ ಬದುಕು ಸುಖಮಯವಾಗಬೇಕು. ತಮ್ಮ ಸುಗ್ರೀವನೂ ಸಂಸಾರದ ಸುಖವನ್ನು ಪಡೆಯಲಿ ಎಂದು ಸೋದರಿಕೆಯ ಸಂಬಂಧದಲ್ಲಿ ಮದುವೆ ಮಾಡಿಸಿ ರುಮೆಯನ್ನು ಮನೆದುಂಬಿಸಿಕೊಂಡಿದ್ದೆ. ನಂತರದಲ್ಲಿ ನನ್ನ ಸ್ನೇಹಿತನಾಗಿ ಚತುರ್ದಶ ಭುವನ ತಲ್ಲಣ ಎಂದು ಕರೆಸಿಕೊಂಡಿದ್ದ ರಾವಣನೊಡನೆ ತುಲ್ಯಾರಿ ಮಿತ್ರತ್ವದ ಸಾಧನೆಯಾಗಿತ್ತು. ಸಾಧನೆ ನನಗಲ್ಲ ಅವನಿಗೆ. ನನಗಂತೂ ಅದು ಆ ಮೊದಲಿನಂತೆ ಎಂತೆಂಥವರಿಗೋ ಕೊಟ್ಟ ಪ್ರಾಣ ಭಿಕ್ಷೆ. ಆದರೂ ಸ್ನೇಹಕ್ಕಾಗಿ ಆತ ಕೈ ಮುಂದೆ ಮಾಡಿದಾಗ ಒಪ್ಪಿದ್ದೆ. ಕಾರಣ ಇಷ್ಟೇ. ಆತನ ಹರಭಕ್ತಿ. ವಿಶ್ರಾವಸುವಿನ ಮಗ ಎನ್ನುವುದಾಗಿ. ಆತನಲ್ಲಿ ಅಲ್ಲದಿದ್ದರೂ ಆತನ ತಂದೆಯಲ್ಲಿ ದೊಡ್ಡತನ ನೋಡಿ ಸ್ನೇಹಿತನಾಗಿದ್ದೆ.

 

ಆದರೆ ಆಗ ವಕ್ಕರಿಸಿದ ದುಂದುಭಿ. ಕೋಣನ ವೇಷದಲ್ಲಿ. ಕಿಷ್ಕಿಂಧೆಯ ಅರಮನೆಯ ಉಪ್ಪರಿಗೆಯ ಹಜಾರದಲ್ಲಿ ನನ್ನ ಹೆಂಡತಿಯರು, ಮಿತ್ರರು ಬಾಂಧವರೊಡನೆ ಆಮೊದ ಪ್ರಮೋದ ವಿಲಾಸದಲ್ಲಿದ್ದಾಗ ಬಂದು ಯುದ್ಧಕ್ಕೆ ಕರೆದಿದ್ದ. "ವರುಣ, ಹಿಮವಂತ ಸೂರ್ಯರು ತಿಳಿಸಿದ್ದಾರೆ,, ನನ್ನ ಪರಾಕ್ರಮಕ್ಕೆ ಲೋಕದಲ್ಲಿ ನೀನೋರ್ವನೇ ಸಾಟಿಯಂತೆ. ನೋಡೋಣ ಬಾ!!" ಎನ್ನುತ್ತಾ ಗುಟುರು ಹಾಕುತ್ತಾ ನನ್ನನ್ನು ಕೆಣಕಿದ್ದ ಆ ಮೂಢ. ಉಪ್ಪರಿಗೆಯಿಂದಿಳಿದು ಆತನೆದುರಿಗೆ ನಿಂತಾಗ, " ಹೆಂಡ ಕುಡಿದ ಕೋತಿಯಾಗಿದ್ದೀ ವಾಲಿ. ನಿನ್ನೊದನೆ ಕಾದಾಡುವುದು ಧರ್ಮವಲ್ಲ" ಎಂದಿದ್ದ ಆ ಅಧಮ. ಸುಧರ್ಮ ಸಭೆಯ ಅಧ್ಯಕ್ಷನ ಮಗನಿಗೆ ಹಸಿ ಮಾಂಸ ತಿನ್ನುವ ರಕ್ಕಸನ ಬಾಯಿಯಲ್ಲಿ ಧರ್ಮ ಬೋಧೆ. ನನ್ನ ರಕ್ತ ಕುದಿಯ ತೊಡಗಿತ್ತು. ಹೋಗಿ ಆತನ ಕೋಡು ಹಿಡಿದು ನೆಲಕ್ಕೆ ಬಡಿದು ಕೊಂದು ಹಾಕಿದ್ದೆ. ಮತ್ತವನ ಕಳೇಬರ ನೋಡಿದರೆ ಹೇಸಿಗೆಯಾಗಿತ್ತು. ಬಿಸಾಡಿದ್ದೆ.

 

ಹಾಗೆ ಬಿಸಾಡುವಾಗ ಆತನ ದೇಹದಿಂದ ರಕ್ತ ಬಿತ್ತಂತೆ ಋಷ್ಯಮೂಕದಲ್ಲಿರುವ ಮತಂಗ ಮುನಿಯ ಆಶ್ರಮದ ಅಂಗಳದಲ್ಲಿ. ಶಪಿಸಿದರಂತೆ. ವಾಲಿ ಇಲ್ಲಿಗೆ ಕಾಲಿಟ್ಟರೆ ಸಾಯಲಿ ಎಂದು. ಸಿಟ್ಟು ಬಂದಿತ್ತು ನನಗೆ. ಯಜ್ಞ ಯಾಗಾದಿಗಳನ್ನು ಹಾಳುಗೆಡಹುವ ರಕ್ಕಸನನ್ನು ಕೊಮ್ದಿದ್ದಕ್ಕೆ ಪರಿತೋಷಗೊಂಡು ಪಾರಿತೋಷಕವಾಗಿ ವರದಿಂದ ಅನುಗ್ರಹಿಸುವ ಬದಲು ಶಪಿಸಿದರಲ್ಲಾ ಎಂದು ಸಿಟ್ಟು ಬಂದಿತ್ತು ನನಗೆ. ಆದರೂ ಜಾಂಬವರು ಹಿರಿಯರೆಂದು ಅವರ ಮಾತಿಗೆ ಬೆಲೆ ಕೊಟ್ಟು ಪಂಪಾ ತೀರದಲ್ಲಿ ಅವರ ಕಾಲು ಹಿಡಿದು ಕ್ಷಮೆ ಕೇಳಿದ್ದೆ. ಕೊಡಲಿಲ್ಲ. ವಿಧಿಯ ಇಚ್ಛೆ ಎಂದು ಸುಮ್ಮನಾಗಿದ್ದೆ. ನಂತರದಲ್ಲಿ ಆ ದುಂದುಭಿಯ ಅಟ್ಟೆಯನ್ನು ಕಾಲ ಹೆಬ್ಬೆರಳಿನಿಂದ ಮೊಣಕಾಲ ಪರ್ಯಂತ ಎತ್ತಿ ನನ್ನ ಬಲ ಪ್ರದರ್ಶಿಸುತ್ತಿದ್ದೆ.

 

ಕೆಲವೇ ದಿನಗಳು ಕಳೆದಿತ್ತು. ಮಾಯಾವಿ ಬಂದು ಯುದ್ಧಕ್ಕೆ ಕರೆದ. ಆಗಲೂ ರಾತ್ರಿಯ ಕಾಲ. ಯುದ್ಧಕ್ಕೆ ಆಹ್ವಾನ ಬಂದ ಮೇಲೆ ಬಿಡಲಾದೀತೇ? ಖಂಡಿತಕ್ಕೂ ಇಲ್ಲ. ಹೊಡೆದು ಬಡಿದು ತುಳಿಯುತ್ತಿದ್ದೆ ಮಾಯಾವಿಯನ್ನು. ಮಾಯಕದಲ್ಲಿ ತಪ್ಪಿಸಿಕೊಂಡು ಓಡಿದ. ಶತ್ರು ಶೇಷ ಬಿಡಬಾರದು ಎಂದು ಬೆನ್ನಟ್ಟಿದೆ. ನನ್ನ ಬೆನ್ನ ಹಿಂದೆ ನನ್ನ ಬಾಲ. ಅದರ ಹಿಂದೆ ತಮ್ಮ ಸುಗ್ರೀವ. ಗುಹೆಯೊಂದನ್ನು ಹೊಕ್ಕ ಮಾಯಾವಿ. ಸುಗ್ರೀವ ಸ್ವಲ್ಪ ಸಾಧು ಸ್ವಭಾವದವ. ಅಲ್ಲ ಹಾಗೆ ನಟಿಸುತ್ತಿದ್ದವ. ನಾನದನ್ನು ತಿಳಿಯದೆಯೇ ಕತ್ತಲಿನಲ್ಲಿ ತನ್ನ ಶಕ್ತಿ ಹೆಚ್ಚ್ಚಿಸಿಕೊಳ್ಳುವ ರಕ್ಕಸನಿಂದ ಸುಗ್ರೀವನಿಗೆ ತೊಂದರೆಯಾಗಬಾರದು ಎಂದು ಆತನಿಗೆ ಗುಹೆಯ ಹೊರಕ್ಕೆ ನಿಲ್ಲಲು ಹೇಳಿ ಒಳಗೆ ಹೊಕ್ಕೆ. ಆಮೇಲೆ ಮಾಯಾವಿಯೊಡನೆ ಕಾದಾಟ. ಕಳೆದ ಕಾಲ ಎಷ್ಟೊ ಏನೋ ನನಗೆ ತಿಳಿಯಲಿಲ್ಲ. ಆತನನ್ನು ಕೊಂದು ಗುಹೆಯ ಬಾಗಿಲಿಗೆ ಬಂದರೆ ಬಂಡೆಯೊಂದು ಗುಹೆಯ ಬಾಗಿಲನ್ನು ಮುಚ್ಚಿದೆ. ಕನಲ್ಲಿನ ಗಧೆಯಿಂದ ಅದನ್ನು ಕುಟ್ಟಿ ಪುಡಿಮಾಡಿ ಹೊರಕ್ಕೆ ಬಂದೆ. ಸುಗ್ರೀವ ಕಾಣುತ್ತಿಲ್ಲ.

 

ಗಾಭರಿಗೊಂಡು ನಾನು ಆ ಗೊಂಡಾರಣ್ಯದಲ್ಲಿ ಹುಡುಕತೊಡಗಿದೆ. ಮತಿಭ್ರಾಂತನಾಗಿ ಹೋದೆ. ಅಂಗದ ನನ್ನ ತನುಜಾತನಿರಬಹುದು. ಆದರೆ ಸುಗ್ರೀವ ನನ್ನ ಸಹಜಾತ. ನಾನವನಿಗೆ ಅಣ್ಣ ಮಾತ್ರವಲ್ಲ. ತಂದೆಯಾಗಿದ್ದೆ. ತಾಯಿಯೂ ಆಗಿದ್ದೆ. ಎಳವೆಯಲ್ಲಿ ಮಾವ ದಧಿಮುಖನ ಮಧುವನದಲ್ಲಿ ಕ್ರೀಡಿಸಿ ಆಯಾಸಗೊಂಡ ಸುಗ್ರೀವನನ್ನು ತನ್ನ ಹೆಗಲಮೇಲೆ ಮಲಗಿಸಿಕೊಂಡು ನಾನು ಕೂರುತ್ತಿದ್ದೆ. ಆತ "ಅಣ್ಣಾ ಕಾಲು ನೋವು ನಡೆಯಲಾರೆ" ಎಂದು ಅತ್ತರೆ ಆತನನ್ನು ಎತ್ತಿ ಸಾಗುತ್ತಿದ್ದೆ. ಅಣ್ಣನಾಗಿದ್ದ ನನಗೆ ಸುಗ್ರೀವ ತಮ್ಮನಷ್ಟೇ ಅಲ್ಲದೆ ಕಣ್ಣ ಪಾಪೆಯಾಗಿದ್ದವ. ಆತ ಕಾಣುತ್ತಿಲ್ಲ. ಆತ ಕೂರದ ಕಿಷ್ಕಿಂಧೆಯ ಯುವರಾಜ ಪೀಠವನ್ನು ನಾನು ಕಲ್ಪಿಸಿಕೊಳ್ಳುವುದೂ ಅಶಕ್ಯ. ಹುಡುಕಿ ಹೈರಾಣಾದ ನಾನು ಕಿಷ್ಕಿಂಧೆಗೆ ಮರಳಿ ಸಕಲ ವಾನರ ಸಮೂಹವನ್ನು ಅಟ್ಟಿ ಸುಗ್ರೀವನ ಇರವನ್ನು ಹುಡುಕಿಸಿ ತಮ್ಮನನ್ನು ಮತ್ತೆ ಸೇರಬೇಕೆಂದು ಹೊರಟೆ.

 

ಕಿಷ್ಕಿಂಧೆಗೆ ಬಂದರೆ ನನ್ನನ್ನು ನೋಡಿ ಗೌರವದಿಂದ ಹೆದರುತ್ತಿದ್ದವರು ಭೂತ ಭಯಕ್ಕೆ ಒಳಗಾದವರಂತೆ ಹೆದರಿದ್ದರು. ಲಕ್ಷಿಸಲಿಲ್ಲ ನಾನು. ಬಂದು ನೋಡಿದರೆ, ಸುಗ್ರೀವ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಮನದ ಆಳದಲ್ಲಿ ಎಲ್ಲಿಯೋ ಒಂದು ಸಣ್ಣ ಸಂತೋಷ ನನಗಾಗಿತ್ತಾ? ಗೊತ್ತಿಲ್ಲ. ಯಾಕೆಂದರೆ ತತ್-ಕ್ಷಣದಲ್ಲಿ ಸುಗ್ರೀವನ ಬಲಭಾಗದಲ್ಲಿ ಕುಳಿತಿದ್ದವಳು ನನ್ನ ತಾರೆ. ನಾನು ತಡ ಮಾಡಲಿಲ್ಲ. ರುಮೆಯನ್ನು ಕೂದಲನ್ನು ಹಿಡಿದು ಜಗ್ಗುತ್ತಾ ನನ್ನ ರಾಣೀವಾಸದಲ್ಲಿ ಎಸೆದು ಬಂದು ಸುಗ್ರೀವನನ್ನು ಎಡಗಾಲಿನಲ್ಲಿ ಒದ್ದಿದ್ದೆ. ತಡೆಯ ಬಂದಿದ್ದ ಜಾಂಬವ. ಹಿರಿಯನೆನ್ನುವ ಗರ್ವ ಇಳಿಯುವಂತೆ ಆತನನ್ನು ಹೊಡೆದಿದ್ದೆ.  ಓಡುತ್ತಿದ್ದ ಸುಗ್ರೀವನನ್ನು ಬೆನ್ನಟ್ಟಿದ್ದೆ. ಹೊಡೆಯುತ್ತಿದ್ದೆ. ಒದೆಯುತ್ತಿದ್ದೆ. ತುಳಿಯುತ್ತಿದ್ದೆ. ಮತ್ತೆ ನನ್ನ ಭಾಗ್ಯತಾರೆಯನ್ನು ತನ್ನೆಡೆಗೆಳೆದವನನ್ನು ಸುಮ್ಮನೇ ಬಿಡಲೆ. ತಾರೆ ನೆನಪಾಗಿ ಮನೆಗೆ ಬಂದಿದ್ದೆ. ಸುಗ್ರೀವನನ್ನು ನೀನೇಕೆ ಸೇರಿದೆ? ಎಂದು ನಾನು ಎಂದಿಗೂ ತಾರೆಯನ್ನು ಪ್ರಶ್ನಿಸಲಿಲ್ಲ. ನನಗೆ ಗೊತ್ತಿದೆ. ಜಾಂಬವ-ಸುಗ್ರೀವರ ಬೆಣ್ಣೆ ಮಾತುಗಳಿಗೆ ಮರುಳಾಗಿ ಅಥವಾ ಸುಗ್ರೀವನ ಷಡ್ಯಂತ್ರದ ಅರಿವಿದ್ದ ಆಕೆ ಅಂಗದನ ಭವಿತವ್ಯಕ್ಕಾಗಿ ಒಲ್ಲದ ಮನಸ್ಸಿನಿಂದಲೇ ಸುಗ್ರೀವನನ್ನು ಸೇರಿದ್ದಳು. ಪಾಪ ನನ್ನ ತಾರೆ. ಆ ಹೇಡಿಯನ್ನು ಸೇರಿ ಸುಖಿಸುವ ನೆಪದಲ್ಲಿ ಅದೆಷ್ಟು ಹೇಸಿಗೆ ಅನುಭವಿಸಿದ್ದಳೋ ಏನೋ.

 

ಮತ್ತೊಮ್ಮೆ ಸುಗ್ರೀವನನ್ನು ಬೆನ್ನಟ್ಟಿ ಸಾಗಿದ್ದೆ. ಆದರೆ ಮಾರ್ಗ ಮಧ್ಯದಲ್ಲಿ ಬಂದಿದ್ದ ಸೂರ್ಯ. ತನ್ನ ರಥಕ್ಕೆ ತನ್ನ ಮಗನಾಗಿದ್ದ ಸುಗ್ರೀವನನ್ನು ಹತ್ತಿಸಿಕೊಂಡ. ಎಲ್ಲೋ ಒಂದೆಡೆ ದುಂದುಭಿಯ ಮಾತು ಮೊರೆಯುತ್ತಿತ್ತು. ಸುಗ್ರೀವನನ್ನು ಮನಸೋ ಇಚ್ಚೆ ಥಳಿಸಿ ಸೇಡು ತೀರಿಕೊಳ್ಳಬೇಕು ಎಂದುಕೊಂಡಿದ್ದ  ನಾನು ಕೈ ಹಿಸುಕಿಕೊಂಡಿದ್ದೆ. ಆದರೆ ಅದು ಕೆಲವೇ ಕೆಲವು ದಿನ ಮಾತ್ರ. ಋಷ್ಯಮೂಕದಲ್ಲಿ ಸುಗ್ರೀವನ ಸುಟ್ಟ ಮುಖ ಕಂಡಿತ್ತು. ." ಎಲಾ ಹೇಡಿ!! ನನ್ನ ಶಾಪದ ಸಮಾಚಾರವನ್ನು ತಿಳಿದು, ಋಷ್ಯಮೂಕದಲ್ಲಿ ಅವಿತಿದ್ದೀಯಾ?"  ಎಂದು ಕಿರುಚಿದ್ದೆ. ಕೆಲವೇ ಹೊತ್ತಿನಲ್ಲಿ ಸುರ್ತಂಗದ ತುದಿಯಲ್ಲಿ ಬೆಳಕಿನ ಕಿರಣವೊಂದು ಕಂಡಂತೆ. ಮೋಡದ ಮರೆಯಲ್ಲಿ ಬೆಳ್ಳಿಯ ಬೆಳಗು ಕಂಡಂತೆ ತನಗೆ ಹೊಳಹೊಂದು ಕಂಡಿತ್ತು. ಗಹಗಹಿಸಿ ಅಟ್ಟಹಾಸಗೈದಿದ್ದೆ.

 

ಅಂದೇ ರಾತ್ರಿ ರುಮೆಯ ಜುಟ್ಟು ಹಿಡಿದು ದರ ದರನೆ ಎಳೆಯುತ್ತಾ ಅರಮನೆಯ ಮಾಳಿಗೆಗೆ ಕರೆದೊಯ್ದಿದ್ದೆ. ಬೇಕೆಂದೇ ಕರ್ಪೂರ-ಶ್ರೀಗಂಧದ ಮರಗಳಿಂದ ತಯಾರಿಸಿದ್ದ ಹಿಲಾಲುಗಳನ್ನು ಹಚ್ಚಿ ರುಮೆಯನ್ನು ಭೋಗಿಸಿದ್ದೆ. ಉಳಿದ ರಾಣಿಯರಂತೆ ರುಮೆ ಸಾರ್ಥಕ್ಯವನ್ನೋ ಧನ್ಯತೆಯನ್ನೋ ಅನುಭವಿಸಲಿಲ್ಲ. ಅನುಭವಿಸಬಾರದು. ತನ್ನ ಗಂಡ ಅವನ ಅತ್ತಿಗೆಯನ್ನು ಸೇರಿದ್ದನ್ನು ಆಕೆ ತಡೆಯಬೇಕಿತ್ತು. ಗೋಲಭನಿಂದ ಬಿಡಿಸಿ ತಂದಿದ್ದರ ಬಗೆಗೆ ಕ್ರುತಜ್ಞತೆ ಹೊಂದಿ ಅಕಾರ್ಯ ಘಟಿಸದಂತೆ ನೋಡಿಕೊಳ್ಳಬೇಕಿತ್ತು. ಹೋಗಲಿ. ಸಣ್ಣ ಸವತಿ ಮಾತ್ಸರ್ಯವಾದರೂ ಮೂಡಿ ತಾರೆಯನ್ನು ಸುಗ್ರೀವ ಸೇರದಂತೆ ತಡೆಯಬೇಕಿತ್ತು. ಮಾಡಲಿಲ್ಲ ಅವಳು. ದುಃಖಿಸಬೇಕು ಆಕೆ. ದುಃಖದಿಂದ ಬಿಕ್ಕಳಿಸುತ್ತಿದ್ದಳು. ರುಮೆಯ ಬಿಕ್ಕಳಿಕೆಗಳ ನಡುವೆ ಋಷ್ಯಮೂಕದತ್ತ ನೋಡಿದರೆ ಮ್ಲಾನವದನನಾಗಿದ್ದ ಸುಗ್ರೀವ ಕಂಡಿದ್ದ. ಗಹಗಹಿಸಿ ನಕ್ಕಿದ್ದೆ ನಾನು. ಮರುದಿನ ನಾನು ನಿರೀಕ್ಷಿಸಿದ್ದೇ ಆಗಿತ್ತು, ನಾನು ಋಷ್ಯಮೂಕದ ಕಡೆ ಹೋದರೆ ಸಾಯುತ್ತೇನೆ. ಅದಕ್ಕೇ ಸುಗ್ರೀವ ತಾನೇ ಈಕಡೆ ಬರುವಂತೆ ಮಾಡಿದ್ದೇನೆ. ನನ್ನೆಣಿಕೆಯಂತೆಯೇ ಆಗಿತ್ತು. ಬಂದಿದ್ದ ಸುಗ್ರೀವ. ಬಡಿದಿದ್ದೆ ಸಾಯುವಂತೆ, ಆದರೆ ಸಾಯದಂತೆ. ಅಣ್ಣನಾಗಿ ತಮ್ಮನನ್ನು ಸಾಯಿಸಿದ ಎನ್ನುವ ಅಪಕೀರ್ತಿ ಬೇಡವಾಗಿ. ಶತಮಾನಕ್ಕೊ ದಶಮಾನಕ್ಕೋ ಒಮ್ಮೆ ಈ ಘಟನೆ ಪುನರಾವರ್ತಿತವಾಗುತ್ತಿತ್ತು. ಇಂದೂ ಆಯಿತು. ಆದರೆ ಇಂದು ಬಂದ ಸುಗ್ರೀವ ಎಂದಿನಂತಿರಲಿಲ್ಲ. ಸ್ವಲ್ಪ ಧೈರ್ಯ ಬಂದಿದೆ. ವಾಲಿಯ ತಮ್ಮನಲ್ಲವೇ? ಬಾರದಿದ್ದೀತೇ?

 

ಒಮ್ಮೆ ಸುಗ್ರೀವ ನನ್ನ ಕಾಲು ಹಿಡಿದು ತಪ್ಪಾಯಿತೆಂದು ಬೇಡಿಕೊಳ್ಳಲಿ ಸಾಕು. ಕಿಷ್ಕಿಂಧೆಯ ಪಟ್ಟ ಕಟ್ಟಿ ವಾನಪ್ರಸ್ಥಕ್ಕೆ ಸಾಗುತ್ತೇನೆ. ಅಲ್ಲ. ಸೃಷ್ಟಿಕರ್ತನನ್ನು ಕರೆಸಿ ಸುಗ್ರೀವನಿಗೊಂದು ಲೋಕದ ನಿರ್ಮಾಣ ಮಾಡುತ್ತೇನೆ. ಅಲ್ಲಿಗೆ ಸುಗ್ರೀವನನ್ನು ಅಧಿಪತಿಯಾಗಿಸುತ್ತೇನೆ. ಆದರೆ ಸುಗ್ರೀವ ಮಣಿದು ಕ್ಷಮೆ ಯಾಚಿಸಬೇಕು. ಅಷ್ಟಾದರಾಯ್ತು.

 

ಮತ್ತೆ ತಾರೆಯ ಮುದ್ದುಮುಖ ಕರೆಯುತ್ತಿದೆ. ದಣಿದಿರುವ ಆಕೆಯನ್ನು ನನ್ನ ಸುಖಕ್ಕಾಗಿ ಮತ್ತೆ ಕರೆಯಲಾರೆ. ಹಾಗೆ ತಬ್ಬಿ ಮಲಗುತ್ತೇನೆ.

Monday, May 24, 2021

ವಾಲಿಪ್ರಕರಣ ಅಧ್ಯಾಯ-1 ತಾರಾಂತರಂಗ

ಕಿಷ್ಕಿಂಧೆಯ ದಿನ ಯಾಕೋ ಮುನ್ನಿನ ದಿನಗಳಂತಿಲ್ಲ ನ್ನಿಸುತ್ತಿದೆ ನನಗೆ. ಮುನ್ನಿನ ದಿನಗಳೆಂದರೆ ಯಾವುದು? ಏನು ಅಂತ ಹೇಳಲಿ ನಾನು? ಯಾವ ದಿನವನ್ನು ಮುನ್ನಿನ ದಿನದ ಆರಂಭವೆಂದು ಪರಿಗಣಿಸಲಿ? ಯಾವುದನ್ನೇ ಪರಿಗಣಿಸಿದರೂ ಅದು ಮತ್ತೆ ಮತ್ತೆ ಹೋಗಿ ನಿಲ್ಲುವುದು ನನ್ನ ಜನನದ ದಿನದಂದು. ಮತ್ತೆ ತೊಳಲಾಡಿ ಉರುಳಿ ವರ್ತಮಾನಕ್ಕೆ ಬಂದು ನಿಲ್ಲುತ್ತದೆ ನನ್ನ ಯೋಚನೆಗಳು. ಅಬ್ಬಾ ಮನಸ್ಸೆಂಬ ಮಾಯಾವಿಯೇ! ಅದೆಷ್ಟು ಬೇಗ ಶತಶತಮಾನಗಳ ಹಿಂದಕ್ಕೆ ನನ್ನನ್ನು ಕರೆದೊಯ್ದು ಮತ್ತೆ ಶರವೇಗದಲ್ಲಿ ವರ್ತಮಾನಕ್ಕೆ ತ್ರುವೆ ನೀನು. ಮನಸ್ಸಿನ ಹೊಯ್ದಾಟಕ್ಕೆ ಕಾರಣವಾದರೂ ಏನಿರಬಹುದು? ಮತ್ತೇನು ಸಾಧ್ಯ ಅಂದಿನ ದಿನಕ್ಕೂ ಇಂದಿಗೂ ಇರುವ ವೈರುಧ್ಯಗಳಲ್ಲವೇ. ಅಂದಿದ್ದ ಸುಖ ಸಮಾಧಾನಗಳು ಇಂದಿಗೆ ಕೇವಲ ನೆನಪು ಮಾತ್ರ. ಕೆಲವು ದಿನಗಳ ಹಿಂದೆ ನೆನಪುಗಳು ಸವಿ ನೆನಪುಗಳಾಗಿದ್ದವು. ನಂತರದಲ್ಲಿ ನೆನಪಿಗೆ ಕಾರಣವಾದ ಘಟನೆಗಳು ನಾಳಿನ ನಿರೀಕ್ಷೆಗಳಾದವು. ಒಂದು ಬದಲಾವಣೆ ಘಟಿಸೀತು ಎಂದು ಭಾವಿಸಿ ಬದುಕಿಗೆ ಒಂದು ಆಧಾರ ನಾಳಿನ ಕುರಿತಾದ  ನಿರೀಕ್ಷೆಯಾದವು. ಆದರೆ ಇಂದು.... ನಾಳೆ ಎನ್ನುವುದು ಇದೆಯೋ ಇಲ್ಲವೋ ಎಂದು ಅನಿಸುವಂತಾಗಿದೆ. ಭವಿತವ್ಯದ ಕುರಿತಾಗಿ ಯಾವುದೇ ನಿರೀಕ್ಷೆಯೂ ಭಯ ಹುಟ್ಟಿಸುವಂತಾಗುತ್ತಿರುವಾಗ ಹಳೆಯ ನೆನಪುಗಳು ಮತ್ತೆ ಮರುಕಳಿಸುತ್ತಿವೆ, ಆದರೆ ನಾಳಿನ ನಿರೀಕ್ಷೆಗಳಾಗಿ ಅಲ್ಲ. ಕನವರಿಕೆಗಳಾಗಿಆದರೂ ನೆನಪುಗಳಲ್ಲಿ ಏನೋ ಒಂದು ಸುಖವಿದೆ. ಹಾಗಾಗಿ ನೆನಪುಗಳನ್ನೀಗ ಮೆಲುಕು ಹಾಕುವೆ. ಹೊತ್ತು ಬಹಳವೇ ಇದೆ. ಮಧುವನ್ನು ಸೇವಿಸಿ, ರುಮೆಯ ಅಂತಃಪುರಕ್ಕೆ ನುಗ್ಗಿ ಅವಳನ್ನು ಹಿಂಸಿಸಿ, ಅವಳ ಆಕ್ರಂದನ ಋಷ್ಯಮೂಕವನ್ನು ತಲುಪುವಂತೆ ಅವಳನ್ನು ಕಿರುಚಾಡಿಸಿ ಮೇಲೆ ಅಲ್ಲವೇ ನನ್ನವರು ನನ್ನ ಮನೆಗೆ ಬರುವುದು. ಅಲ್ಲಿಯ ತನಕ ದಾರುಣ ಎನ್ನಿಸುವ ನಾಳಿನ ನಿರೀಕ್ಷೆಗಳನ್ನು ತೊರೆದು ಸುಖದಾಯಿಯಾದ ಹಳೆಯ ನೆನಪುಗಳನ್ನಾದರೂ ಅನುಭವಿಸುತ್ತೇನೆ.

 

ದೇವತೆಗಳು ಮತ್ತು ದೈತ್ಯರ ನಡುವಿನ ದಾಯಾದಿ ಮತ್ಸರ, ಸುಮನಸ ಮತ್ತು ಕುಮನಸರ ನಡುವಿನ ವೈರುಧ್ಯ ಭರಿತ ಕಂದರ ದ್ವೇಷವಾಗಿ ದಳ್ಳುರಿಯಾಗಿ ಜಗತ್ತಿಗೇ ಕಂಟಕವಾಗತೊಡಗಿದ್ದ ಕಾಲ. ಭಗವಂತ ತನ್ನ ದೈತ್ಯ ಕುಲದಲ್ಲಿ ಹುಟ್ಟಿದ ಒಬ್ಬನಿಗೆ ತನ್ನ ಕುರಿತಾದ ಭಕ್ತಿ ಮೂಡುವಂತೆ ಲೀಲೆ ಮಾಡಿದ. ಮಾಯೆ ಎನ್ನಲೇ?! ಕುಲದಲ್ಲಿ ಜನಿಸಿದ ಪ್ರಹ್ಲಾದನ ಮಗ ವಿರೋಚನ. ಆತನ ಮಗ ಇಂದ್ರಸೇನ, ಪರಮ ಧಾರ್ಮಿಕ. ದಾನಿ. ಅತಿ ಬಲಾನ್ವಿತ. ಬಲಿ ಎನ್ನುವುದಾಗಿ ಲೋಕವಿಖ್ಯಾತ.ಇಂಥಾ ಸಮಯದಲ್ಲಿ ಇಂದ್ರದೇವರು ಮಧುವನ್ನು ಸೇವಿಸಿ ಮತ್ತರಾಗಿ ಮದ ಬಂದ ಐರಾವತದ ಮೇಲೆ ಹತ್ತಿ ಸಂಚರಿಸುತ್ತಿದ್ದಾಗ ದುರ್ವಾಸರಿಂದ ದತ್ತವಾದ ಮಾಲೆಯನ್ನು ಆನೆಯ ಕೊರಳಿಗಿಕ್ಕಿದ್ದಕ್ಕೆ ಸಿಕ್ಕ ಪ್ರತಿಫಲ "ಸ್ವರ್ಗದ ಸಂಪತ್ತುಗಳೆಲ್ಲಾ ಸಮುದ್ರದ ಪಾಲಾಗಿ ಹೋಗಲಿ" ಎನ್ನುವ ಶಾಪ. ಶಾಪ ಕ್ರಿಯಾ ರೂಪಕ್ಕೆ ಬಂದಿದ್ದು ಬಲಿಯ ದೆಸೆಯಿಂದ. ಪರಿಣಾಮ ಸಮುದ್ರದ ಮಂಥನ. ಒಂದು ಕಡೆಯಲ್ಲಿ ಮೂವತ್ಮೂರು ಕೋಟಿ ದೇವತೆಗಳು. ಇನ್ನೊಂದು ಕಡೆಯಲ್ಲಿ ಅರವತ್ತಾರು ಕೋಟಿ ದೈತ್ಯರು. ಆದರೆ ಅವರಿಬ್ಬರೂ ಆಯಾಸಗೊಂಡು ಕಾರ್ಯವನ್ನು ಎಸಗಲು ಸಾಧ್ಯವಿಲ್ಲದ ಹೊತ್ತಿನಲ್ಲಿ ಅಲ್ಲಿಗೆ ಬಂದಿದ್ದು ಒಬ್ಬ ವಾನರ. ವಾಲ ಭಾಗದಿಂದ ಜನಿಸಿದ್ದರಿಂದ ವಾಲಿ ಎನ್ನುವ ಹೆಸರಾಯಿತಂತೆ. ವಾನರ ಏಕಾಂಗಿಯಾಗಿ ಕಡೆದ ಸಮುದ್ರವನ್ನು. ಪರಿಣಾಮವಾಗಿ ಜನಿಸಿದವಳು ತಾನು. ಅಪ್ಸರೆಯೋ ವಾನರೆಯೋ ಎನ್ನುವ ಗೊಂದಲದಲ್ಲಿದ್ದಾಗ ದೇವ ದಾನವರಿಬ್ಬರಿಗೂ ಸಮ್ಮತಿಯಾಗಿ ವಾನರನಿಗೆ ಹೆಂಡತಿಯಾಗಿ ಕೊಡಲ್ಪಟ್ಟವಳು ನಾನು, ತಾರೆ.

 

ತವರಿಲ್ಲದ ತನಗೆ ತಂದೆಯಾಗಿ ನಿಂತವ ವಾನರರ ವೈದ್ಯ ಸುಷೇಣ. ಇನ್ನು ಪತಿಯಾಗಿ ಪಡೆದಿದ್ದು- ಸ್ವಯಂ ಇಂದ್ರನಂದನನನ್ನು. ಶ್ರೀಹರಿ ತಾನಾಗಿ ಬಂದು "ನಿನ್ನ ಬಲಕ್ಕೆ ಮೆಚ್ಚಿದ್ದೇನೆ? ಏನು ವರ ಬೇಕು ಕೇಳಿಕೋ " ಎಂದಾಗ " ವಾಲಿ ಯಾರ ಮುಂದೆಯೂ ಕೈ ಚಾಚಲೊಲ್ಲ. ನಿನಗೇನು ಬೇಕು ಬೇಡಿಕೊ" ಎಂದ ಸ್ವಾಭಿಮಾನಿ. ಪ್ರತಿಯಾಗಿ ಶ್ರೀಹರಿ "ನಿನ್ನ ಪ್ರಾಣ ಬೇಕು" ಎಂದರೆ ಕೊಡಲು ಸಿದ್ಧನಾದ ಸಮರ್ಪಣಾ ಭಾವೋನ್ಮತ್ತತೆಯ ಭಕ್ತಾಗ್ರೇಸರ. ಆದರೆ ಹರಿ ಆತನಿಗೆ ಹೇಳಿದ್ದು "ಈಗ ನೀನಿಟ್ಟುಕೋ. ನನಗೆ ಬೇಕಾದಾಗ ಪಡೆವೆ. ನಿನ್ನ ಪ್ರಾಣ ಇನ್ನು ನನಗಿಟ್ಟ ಎರವಿನೊಡವೆ" ಎಂದು. ಹರಿಗೆರವಾದ ಪ್ರಾಣ ಹೊತ್ತವ ನನ್ನ ಪ್ರಾಣನಾಥ. ಮೇಲಿನಿಂದ ಕನಕ ಕಾಂಚನ ಮಾಲೆ. ಧರಿಸಿ ನಿಂತರೆ ಮೊದಲೇ ಬಲಾನ್ವಿತನಾಗಿದ್ದ ವಾಲಿಗೆ ಎದುರಿಗೆ ನಿಂತವನ ಅರ್ಧ ಬಲ ವಾಲಿಗೆ. ಮೈದುನನಾಗಿ ಸಿಕ್ಕ ಸೂರ್ಯಸುತ ಸುಗ್ರೀವ. ಸೂರ್ಯನ ವರದಿಂದ ಕುತ್ತಿಗೆಯಲ್ಲಿ ಜನಿಸಿದವ ಎನ್ನುವ ಕಾರಣಕ್ಕಾಗಿ ಹೆಸರಂತೆ. ಆದರೆ, ನಿಜದಲ್ಲಿ ಅದು ಆತನ ಅನ್ವರ್ಥ ನಾಮ. ಮಧುರ ಸ್ವರ. ಮಧುರವಾದ, ಹಿತವಾದ ಮಾತುಗಳು. ಅಣ್ಣ ಎಂದರೆ ದೇವರಂತೆ. ಅಣ್ಣ ತನ್ನ ಭ್ರಾತ ಮಾತ್ರನಲ್ಲ ತನ್ನನ್ನು ಸದಾಕಾಲ ಭರಿಸುವ ಭರ್ತಾರ ಎನ್ನುವ ಭಾವನೆಯಿಂದ ಬದುಕಿದ್ದವ. ಸೋದರಳಿಯ ಹನುಮಂತ.ಮಾಲ್ಯವಂತದ ವಾನರ ರಾಜಕುಮಾರ. ತಂಗಿಯಂಥಾ ನಾದಿನಿ ಅಂಜನಾದೇವಿ. ಸ್ವಂತ ಅಣ್ಣನಂತೆ ನನ್ನನ್ನು ನೋಡಿಕೊಳ್ಳುತ್ತಿದ್ದ ಆಕೆಯ ಪತಿ ಕೇಸರಿ. ಮಾಲ್ಯವಂತದ ಅರಸ. ಕೆಲವೇ ಕಾಲದಲ್ಲಿ ಜನಿಸಿದ ಮಗ ಅಂಗದ. ಕಿಷ್ಕಿಂಧೆಯ ಪ್ರೀತಿಸುವ ಪ್ರಜೆಗಳು. ಇನ್ನೇನು ಬೇಕು? ಸ್ವರ್ಗದಧಿಪನ ಮಗನ ಮಡದಿಯಾಗಿ ಪ್ರತಿಸ್ವರ್ಗವನ್ನೇ ನಾನು ಅನುಭವಿಸುತ್ತಿದ್ದೆ ಕಿಷ್ಕಿಂಧೆಯಲ್ಲಿ. ಎಲ್ಲ ಸುಖ ಸಂತೋಷಗಳ ನಡುವೆ ಘಟಿಸಿದ್ದು ಒಂದು ಘಟನೆ. ಅದರಿಂದಲೇ ರುಮೆ ನಮ್ಮ ಮನೆ ಸೇರಿದ್ದಳು.

 

ವಾಲಿಯ ಸೋದರಮಾವ ದಧಿಮುಖ ಏದುಸಿರು ಬಿಡುತ್ತಾ ಓಡಿಬಂದು ತನ್ನ ಮಗಳಾದ ರುಮೆಯನ್ನು ಗೋಲಭ ಎನ್ನುವ ಗಂಧರ್ವಕರೆದೊಯ್ಯುತ್ತಿರುವ ಬಗ್ಗೆ ಹುಯಿಲಿಟ್ಟ. ಒಂದೇ ನೆಗೆತಕ್ಕೆ ನಭಕ್ಕೆಗರಿ ಆತನ ಮುಖವನ್ನು ಗುದ್ದಿ, ರುಮೆಯನ್ನು ಕರೆತಂದು ಸುಗ್ರೀವನಿಗೆ ಮದುವೆ ಮಾದಿಸಿದ್ದರು ನನ್ನವರು. ಆಮೇಲೊಮ್ಮೆ ಮನೆಗೆ ಬಂದವರು ಅಂಗದನ ತೊಟ್ಟಿಲಿಗೆ ಹತ್ತು ತಲೆ ಹೊಂದಿದ್ದ ಜೀವವೊಂದನ್ನು ಕಟ್ಟಿದ್ದರು. ಆತ ಲಂಕೇಶ್ವರ ರಾವಣ ಎಂದರು ಯಾರೋ. ಕೊನೆಗೆ ಅವನೊಡನೆ ಸ್ನೇಹ ಸಂಪಾದಿಸಿದರು. ಇಬ್ಬರು ಬಲಾಢ್ಯರ ನಡುವೆ ತುಲ್ಯಾರಿ ಮಿತ್ರತ್ವ.

 

 ಹೀಗೆ ಸುಖ ಸಂತೋಷದಿಂದ ಇದ್ದ ಹೊತ್ತಿನಲ್ಲಿ ಇಲ್ಲಿಗೆ ಬಂದು ಯುದ್ಧಾಹ್ವಾನ ಕೊಟ್ಟು ನನ್ನವರಿಂದ ಹತನಾದ ದುಂಧುಭಿ. ಅವನ ಸಾವಿನ ಸೇಡು ತೀರಿಸಿಕೊಳ್ಳಲು ಬಂದವ ಅವನ ಅಣ್ಣನ ಮಗ ಮಾಯಾವಿ. ಆತನ ಮೂಲಕವೇ ಕಿಷಿಂಧೆಗೆ ಅದಾವುದೋ ಮಾಯೆ ತಾಗಿ ಇಲ್ಲಿನ ಸುಖ ಸಂತಸಗಳೆಲ್ಲಾ ನಲುಗಿ ಹೋದವು. ಅಪರ ರಾತ್ರಿಯ ಕಾಲದಲ್ಲಿ ಬಂದು ಪಂಥಾಹ್ವಾನ ಕೊಟ್ಟ ಮಾಯಾವಿ. ಅವನನ್ನು ಬಡಿಯುತ್ತಿದ್ದರು ನನ್ನವರು. ಪೆಟ್ಟು ತಿನ್ನಲಾರದೇ ಆತ ಓಡಿದ. ಬೆನ್ನಟ್ಟಿದರು. ಅಣ್ಣನ ಬೆನ್ನಿಗೇ ಸಾಗಿದ ಸುಗ್ರೀವ. ಅದೆಷ್ಟೋ ಮಾಸಗಳ ನಂತರ ಬಂದ ಸುಗ್ರೀವ. ಆದರೆ ಅಂದು ಆತನ ಕಂಠದಿಂದ ಹೊರಟ ನುಡಿಗಳು ನಿಜಕ್ಕೂ ದುರ್ಭರವಾಗಿತ್ತು. ನನ್ನವರು ಅಸುನೀಗಿದ್ದ ವಿಷಯವನ್ನು ಅರುಹಿದ ಸುಗ್ರೀವ.

 

ಇಂಥ ಮಾತು ಕೇಳಿ ಇಡೀ ಕಿಷ್ಕಿಂಧೆಯೇ ದುಃಖದಲ್ಲಿ ಮುಳುಗಿತು. ಸುಗ್ರೀವ ಸುಳ್ಳಾಡುವವನಲ್ಲವಲ್ಲಸುಗ್ರೀವ ಮೂಲೆ ಹಿಡಿದು ಮುಖ ಕೆಳಗೆ ಹಾಕಿ ಅಣ್ಣನನ್ನು ನೆನೆಸಿ ಮೌನವಾಗಿ ಗೋಳಿಡುತ್ತಿದ್ದ. ರುಮೆ ರಮಿಸಿದರೂ ಅಷ್ಟೆ ಸಮಾಧಾನಿಸಿದರೂ ಅಷ್ಟೇ. ಎಲ್ಲವೂ ಪಂಪಾ ನದಿಯಲ್ಲಿ ತೊಳೆದು ಹೋಗುತ್ತಿತ್ತು.ವಾಲಿ ಮಡಿದ ಸುದ್ದಿ ಕೇಳಿ ಅವರೊದನೆ ತುಲ್ಯಾರಿ ಮಿತ್ರತ್ವ ಸಾಧಿಸಿದ್ದ ರಾವಣ ಬಾರಲಿಲ್ಲ. ಸಾವಿರುವನಕದ ಸ್ನೇಹ ಒಬ್ಬನ ಸಾವಿನೊಂದಿಗೆ ಮಣ್ಣಾಗಿ ಹೋಯಿತೇ ಹಾಗಿದ್ದಲ್ಲಿ. ಹಾಗಾದರೆ ಅಲ್ಲಿ ಸ್ನೇಹಕ್ಕೆ ಬೇಕಾದ ಸು-ಹೃದ್ ಭಾವ ಇರಲಿಲ್ಲವೇ? ಗೊತ್ತಿಲ್ಲ. ಆಗ ಹಿರಿಯರಾದ ಜ್ಞಾನಿಗಳಾದ ಜಾಂಬವರು ಸುಗ್ರೀವನಿಗೆ ನೀತಿ ಹೇಳಿ ಕಿಷ್ಕಿಂಧೆಯ ಸಿಂಹಾಸನ ಏರುವಂತೆ ಸೂಚಿಸಿದರು. ಹಿರಿಯರ ಮಾತಿಗೆ ಸಮ್ಮತಿಯೇನೋ ಸೂಚಿಸಿದ್ದ ಸುಗ್ರೀವ. ಆದರೆ ದುಃಖದಿಂದಲೇ. ಸುಗ್ರೀವ ಸಿಂಹಾಸನ ಏರಿ ಪಕ್ಕದಲ್ಲಿ ರುಮೆಯನ್ನು ಕೂರಿಸಿಕೊಂಡ ತತ್ ಕ್ಷಣದಲ್ಲಿ ನಾನೂ ಸಿಂಹಾಸನದಲ್ಲಿ ಸುಗ್ರೀವನ ಬಲಭಾಗದಲ್ಲಿ ಕುಳಿತಿದ್ದೆ, ಯಾರೂ ಒತ್ತಾಯಿಸದಿದ್ದರೂ ಸ್ವಯಂ ಪ್ರೇರಿತಳಾಗಿ. ಅಚ್ಚರಿ ಮೂಡುವುದೇ ಇಲ್ಲಿ.

 

ಗಂಡನಾದವನು ಅಳಿದಾಗ ಸಂತಾನಕ್ಕಾಗಿ, ಇರುವ ಸಂತಾನದ ರಕ್ಷಣೆಗಾಗಿ ಹೆಂಡತಿಯಾದವಳು ಗಂಡನ ತಮ್ಮನನ್ನು ಸೇರಬಹುದು ಎನ್ನುವ ಶಾಸ್ತ್ರವಾಕ್ಯ ನಾನು ತಿಳಿದ ವಿಚಾರವೇ ಆಗಿತ್ತು. ಆದರೆ ಅದೆಂದೂ ನನ್ನನ್ನು, ಕಡೆಯ ಪಕ್ಷ ಸುಗ್ರೀವ ಸಿಂಹಾಸನ ಏರುವ ತನಕ  ಪ್ರಭಾವಿಸಿರಲಿಲ್ಲ. ಸುಗ್ರೀವನ ಕುರಿತಾಗಿ ಅಲ್ಲಿಯ ತನಕ ನನಗೆ ಅಂಥ ಯಾವ ಭಾವನೆಯೂ ಮೂಡಿರಲಿಲ್ಲ, ಆದರೆ ಸುಗ್ರೀವ ಸಿಂಹಾಸನವನ್ನು ಏರಿದ ಹೊತ್ತಿನಲ್ಲಿ ನನಗದೇನಾಯಿತು? ಒಂದಾನೊಂದು ಕಾಲದಲ್ಲಿ ನಾನು ಅದನ್ನೇರಿ ಕುಳಿತಿದ್ದವಳು ಇಂದಿಗೂ ಅದು ತನ್ನದಾಗಿರಬೇಕು ಎನ್ನುವ ಅಹಂಕಾರ ಭರಿತ ಅಧಿಕಾರ ಭಾವವೇ? ರುಮೆ ಅದರ ಮೇಲೆ ಕುಳಿತಿದ್ದಕ್ಕೆ ತನಗಾಗಿದ್ದ ಮತ್ಸರವೇ? ಅಥವಾ ಮಗ ಅಂಗದನ ಭವಿತವ್ಯದ ಕುರಿತಾಗಿ ಇದ್ದ ಆತಂಕವೇ?ಭೂಮಿಯಲ್ಲಿ ಅತಿ ಬಲಾಢ್ಯನಾಗಿದ್ದ ವಾಲಿಯನ್ನು ಸೇರಿ ಸುಖಿಸಿ ಫಲ ಪಡೆದಿದ್ದವಳಿಗೂ ಇನ್ನೂ ಆರದ ಮೈ ಬಿಸಿಯ ದೇಹದ ತೆವಲೇ? ಅಥವಾ ಸುಗ್ರೀವನಂಥ ನಿಗರ್ವಿ ಸಜ್ಜನನ ಸೇವೆಗೊದಗಿ ಸಾರ್ಥಕ್ಯ ಪಡೆಯಬೇಕೆಂಬ ಆಕಾಂಕ್ಷೆಯೇ? ಗೊತ್ತಿಲ್ಲ.

 

ಮತ್ತೆ ಮಲಗಿದವಳು ಮಗ್ಗುಲು ಬದಲಿಸುತ್ತೇನೆ. ಹೀಗೆಲ್ಲ ಯೋಚಿಸುತ್ತಿದ್ದಾಗ ನಿಡುಸುಯ್ಯುತ್ತೇನೆ. ನಿಟ್ಟುಸಿರು ತಂತಾನೇ ಹೊರ ಬರುತ್ತದೆ. ನಿಟ್ಟುಸಿರೇ ನನ್ನ ಸದಾ ಕಾಲದ ಸಂಗಾತಿಯಾಗಿಬಿಡಬಹುದೇ? ಹೀಗೆಲ್ಲ ಯೋಚಿಸುತ್ತಲೇ ಮನಸ್ಸು ಮತ್ತೆ ಹಿಂದಕ್ಕೆ ಜಾರಿತು. ಒಂದು ದಿನ ಬೆಳಿಗ್ಗೆ ಸುಗ್ರೀವ ಒಡ್ಡೋಲಗ ಕೊಡುತ್ತಿದ್ದ. ಸಿಂಹಾಸನದ ಮೇಲೆ ಸುಗ್ರೀವನ ಬಲ ಭಾಗದಲ್ಲಿ ತಾನಿದ್ದೆ. ಎಡಭಾಗದಲ್ಲಿ ರುಮೆ. ದ್ವಾರದಲ್ಲಿ ವಾಲಿಯ ಶರೀರ ಕಂಡಿತು. ಕಂಡ ಶರೀರ ಧುತ್ತನೆ ಸಿಂಹಾಸನದತ್ತ ನುಗ್ಗಿ ಸುಗ್ರೀವನನ್ನು ಕೆಡಗಿ,"ಭಾತೃ ದ್ರೋಹಿ" ಎನ್ನುತ್ತಾ ಇನ್ನೂ ಅದೆಷ್ಟೋ ಅವಾಚ್ಯ ಶಬ್ದಗಳಿಂದ ಸುಗ್ರೀವನನ್ನು ನಿಂದಿಸುತ್ತಾ ಆತನನ್ನು ಒದೆಯತೊಡಗಿತ್ತು. ಮೂರ್ಛಿತನಾದ ಸುಗ್ರೀವ ಎಚ್ಚರಗೊಳ್ಳುವ ಮೊದಲೇ ರುಮೆಯನ್ನು ಕೋಣೆಯೊಂದಕ್ಕೆ ಕೂಡಿ ಬಂದಿದ್ದರು ನನ್ನವರು. ಎಚ್ಚರಗೊಂಡ ಸುಗ್ರೀವನಿಗೆ ಮಾತಾಡುವುದಕ್ಕೂ ಅವಕಾಶ ಕೊಡದೇ ಹೊಡೆಯುತ್ತಿದ್ದರು. ಹೊಡೆತ ತಿನ್ನಲಾರದೆ ಸುಗ್ರೀವ ಓಡತೊಡಗಿದ. ಬೆನ್ನಟ್ಟಿದರು.

 

ಕೊನೆಗೊಂದು ದಿನ ತಾರ-ಹನುಮಂತ ಮೊದಲಾದವರು ಕಾಣಿಸಲಿಲ್ಲ. ಅದ್ಯಾರೋ ಹೇಳಿದರು ಅವರು ಋಷ್ಯಮೂಕದಲ್ಲಿ ಸುಗ್ರೀವನೊಂದಿಗಿದ್ದಾರೆ ಎಂದು. ಸಿಡುಕಿದ್ದವರು ನನ್ನವರು." ಎಲಾ ಹೇಡಿ!! ನನ್ನ ಶಾಪದ ಸಮಾಚಾರವನ್ನು ತಿಳಿದು, ಋಷ್ಯಮೂಕದಲ್ಲಿ ಅವಿತಿದ್ದೀಯಾ?" ಎಂದು. ಜೊತೆಗೆ ಒಂದು ರೀತಿಯ ಕುಹಕ ಭರಿತ ವಿಲಕ್ಷಣ ನಗೆ ಮೂಡಿತ್ತು ಮುಖದಲ್ಲಿ. ಅಂದಿನಿಂದ ನಿತ್ಯದ ಕಾಯಕವಾಗಿ ಹೋಗಿದೆ. ರುಮೆಯನ್ನು ಕರೆದುಕೊಂಡು ಅರಮನೆಯ ಉಪ್ಪರಿಗೆ ಏರಿ ಋಷ್ಯಮೂಕದ ಕಡೆ ಮುಖ ಮಾಡಿ ನಿಂತು ಅವಳನ್ನು ಹಿಂಸಿಸುವುದು. ಅವಳು ಅಳುವುದು. ಎಲ್ಲೋ ದಶಕಕ್ಕೋ ಶತಮಾನಕ್ಕೋ ಒಮ್ಮೆ ಸುಗ್ರೀವ ಬರುವುದು. " ನನ್ನ ಹೆಂಡತಿಯನ್ನು ಬಿಟ್ಟು ಕಳಿಸು" ಎಂದು ಕೂಗಾಟ, ಅರಚಾಟ ಮಾಡಿ ಹೊಡೆದಾಡುವುದು, ಕೊನೆಗೆ ಪೆಟ್ಟು ತಿಂದು ಹೋಗುವುದು. ಇಂದಾಗಿದ್ದೂ ಅದೇ. ಆದರೆ ಅಷ್ಟೇ ಆಗಿದ್ದಲ್ಲವಲ್ಲ. ಅಂಗದ ತಂದ ಘೋರ ಸಮಾಚಾರವೂ ಇದೆಯಲ್ಲ.

 

ಆದರೆ ಸುಗ್ರೀವ ಅಂದು ವಾಲಿ ಮಡಿದಿದ್ದಾನೆ ಎಂದೊಡನೆ ಇಡೀ ಕಿಷ್ಕಿಂಧೆಯೆ ಅದನ್ನು ಒಪ್ಪಿದ್ದೇಕೆ? ತಾನೂ ಒಪ್ಪಿದ್ದೇಕೆ? ಸುಗ್ರೀವ ಸತ್ಯವಂತನೆಂದೇ? ಅಥವಾ ವಾಲಿಯ ಅಹಂಕಾರ ಮೇರೆ ಮೀರಿ ಮೆರೆದಾಟ ಅತಿಯಾಗಿ ಗರ್ವಿಷ್ಠನಾಗಿ ಹೊಂದಿದ್ದ ವಿಪರೀತ ಬುದ್ದ್ಗಿ ವಿನಾಶ ಕಾಲದ ಮುನ್ಸೂಚನೆಯನ್ನು ಸುಪ್ತವಾಗಿ ಕೊಟ್ಟಿತ್ತೇ? ಅಥವಾ ಎರಡೂ ಕಾರಣಗಳಿರಬಹುದೇ?ಎಷ್ಟೊಂದು ಕಾಲವಾಯಿತು ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಳ್ಳುತ್ತಾ. ಉತ್ತರ ಮಾತ್ರ ಸಿಗುತ್ತಿಲ್ಲ. ಅದೊ ಹೆಜ್ಜೆಯ ಸಪ್ಪಳವಾಗುತ್ತಿದೆ. ನನ್ನವರು ಬಂದರೆನಿಸುತ್ತದೆ. ತಿಳಿಯದೇ ಮಾಡಿದ ತಪ್ಪನ್ನು ಮನ್ನಿಸುವ ಉದಾರಗುಣ ತನ್ನೆಡೆಗೆ ಹೊಂದಿದ್ದಾರೆ. ಇಂದಾದರೂ ಇವರನ್ನು ರಮಿಸಿದ ನಂತರ ಉದಾರ ಗುಣದ ಲಾಭವನ್ನು ಸುಗ್ರೀವ ರುಮೆಯರಿಗೂ ಕರುಣಿಸಲು ಕೇಳಬೇಕು. ಕಾಮೋನ್ಮತ್ತನಾಗಿ ಅದು ತಣಿದ ಘಳಿಗೆಯಲ್ಲಿ ಗಂಡಸು ಏನನ್ನೂ ಕರುಣಿಸುತ್ತಾನೆ. ಆದರೆ ಕೇಳಲು ತನಗೆ ಧೈರ್ಯ ಬೇಕು ಅಷ್ಟೇ. ಇಂದು ಅಂಗದ ತಂದ ಸುದ್ದಿ ಕೇಳಿ ಈಗಲಾದರೂ ಧೈರ್ಯವನ್ನು ಪಡೆಯಲೇ ಬೇಕು.