Friday, May 28, 2021

ವಾಲಿಪ್ರಕರಣ ಅಧ್ಯಾಯ 5_ಭವತಾರಿಣಿ



(ಈತನಕ:ವಾಲಿಯನ್ನು ಒಪ್ಪಿಸಿ ಸುಗ್ರೀವ ರುಮೆಯರಿಗೆ ಕ್ಷಮಾದಾನ ಕೊಡಿಸಬೇಕು ಎಂದುಕೊಂಡಿರುವ ತಾರೆ, ಸುಗ್ರೀವ ಬಂದು ಕಾಲು ಹಿಡಿದರೆ ಕ್ಷಮಿಸಬೇಕು ಇಲ್ಲವಾದರೆ ಶಿಕ್ಷಿಸುತ್ತಲೇ ಇರಬೇಕು ಎನ್ನುವ ಮನಃಸ್ಥಿಯ ವಾಲಿ. ಇತ್ತ ನಡೆದ ಘಟನೆಗಳಿಂದ,, ವಾಲಿಯ ಹಿಂಸೆಯಿಂದ ಜರ್ಝರಿತಳಾಗಿ ದುಃಖಿಸುತ್ತಿರುವ ರುಮೆ. ರಾಮನ ನಿರ್ದೇಶನದಂತೆ ಸಪ್ತ ಜನಾಶ್ರಮದ ಮಾರ್ಗವಾಗಿ ತನ್ನ ಜನ್ಮದಿಂದ ಇಲ್ಲಿಯ ತನಕದ ಜೀವನವನ್ನು ಮೆಲುಕು ಹಾಕುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿರುವ ಸುಗ್ರೀವ, ವಾಲಿಯ ಶನ ಕಕ್ಷೆಯತ್ತ ಸಾಗಿದ್ದಾನೆ)

ವಾಲಿಯ ಶಯ್ಯಾಗೃಹದ ಕಿಟಕಿಯ ಬಳಿ ಸಾಗಿದ ಸುಗ್ರೀವ. ತೆರೆದೇ ಇತ್ತು ಆ ಕಿಟಕಿ. ವಾಲಿಯ ಎದುರಿನಲ್ಲಿಯೇ ಕಣ್ಣೆತ್ತಿ ನೋಡಲು ಕಿಷ್ಕಿಂಧೆಯ ಪ್ರಜೆಗಳು ಹಿಂಜರಿಯುತ್ತಿರುವಾಗ ಕಿಟಕಿಯಿಂದ ಇಣುಕುವುದು ದೂರದ ಮಾತಾಗಿತ್ತು. ಅದಕ್ಕೇ ವಾಲಿ ಸದಾಕಾಲ ಆ ಕಿಟಕಿಯನ್ನು ತೆರೆದು ಮಲಗುತ್ತಿದ್ದ. ಆ ಕಿಟಕಿಯಲ್ಲಿ ತನ್ನ ಮುಖವನ್ನಿಟ್ಟು ಸಿಟ್ಟಿನಿಂದ ಬಹಳವೇ ಎನ್ನ ಬಹುದಾದ ಯುದ್ಧೋನ್ಮಾದದಲ್ಲಿ ವಾಲಿಯನ್ನು ಕರೆದ. " ಏ ವಾಲೀ, ದುಷ್ಟ, ನೀಚ, ಅಧರ್ಮಿ, ನಿನ್ನ ಪಾಲಿಗೆ ಯಮನಾಗಿ ಯಮನ ಅನುಜ ನಿನಗೂ ತಮ್ಮನಾದ ಸುಗ್ರೀವ ಬಂದಿದ್ದೇನೆ ಬಾ. ನಿನ್ನ ಯುದ್ಧದಾಹವನ್ನು ಸದಾಕಾಲಕ್ಕೆ ನಿಲ್ಲಿಸಲು ಬಂದಿದ್ದಾನೆ ಈ ಸುಗ್ರೀವ. ನಿನ್ನ ಜೀವಮಾನದಲ್ಲಿ ನಿನಗೆ ಕೊನೆಯ ಯುದ್ಧದ ಅವಕಾಶ ಕೊಡಲು ಬಂದಿದ್ದಾನೆ ಈ ಸುಗ್ರೀವ. ಬಾ."

ನಿದ್ದೆಗಣ್ಣಿನಲ್ಲೂ ಸುಗ್ರೀವನ ಸ್ವರ ಕೇಳಿದರೆ ಸಿಡಿದೇಳುವ ವಾಲಿ, ನಿದ್ದೆಯಲ್ಲೂ ಸುಗ್ರೀವನ ಸ್ವಪ್ನವನ್ನೇ ಕಾಣುತ್ತಿದ್ದ. ಆದರೆ ಸ್ವಪ್ನ ಬಹಳ ಸಲ ವಾಸ್ತವಕ್ಕೆ ವಿರುದ್ಧವಾಗಿರುತ್ತದೆ. ಅಹಂಕಾರಿಯೊಬ್ಬ ಮಾತ್ರ ಅದು ಇಂದಲ್ಲ ನಾಳೆ ವಾಸ್ತವ ಎಂದು ಭಾವಿಸಲು ಸಾಧ್ಯ. ಗರ್ವದ ಮೂಟೆಯನ್ನು ಹೊತ್ತಿದ್ದ ವಾಲಿಯೂ ಇದೇ ತಪ್ಪನ್ನು ಮಾಡಿದ್ದ. ಸುಗ್ರೀವನ ಧ್ವನಿ, ಅದರಲ್ಲಿನ ಕಂಪನಕ್ಕೆ ವಾಲಿ ಲಗುಬಗೆಯೊಂದ ಗಡಬಡಿಸಿ ಬರಸೆಳೆದು ಮಲಗಿದ್ದ ತಾರೆಯನ್ನು ಪಕ್ಕಕ್ಕೆ ಸರಿಸಿ ಎದ್ದಿದ್ದ. ವಾಲಿ ಪಕ್ಕಕ್ಕೆ ತಳ್ಳಿದ್ದ ರಭಸಕ್ಕೆ ತಾರೆಗೂ ನಿದ್ರೆಯಿಂದ ಎಚ್ಚರವಾಯಿತು. ಗಡಗದನೆ ಚುರುಕಿನ ಹೆಜ್ಜೆಗಳನ್ನಿಟ್ಟಿದ್ದ ವಾಲಿ ಆಭರಣದ ಪೆಟ್ಟಿಗೆಯಿಂದ ತೆಗೆದು ಕನಕ ಕಾಂಚನ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದ. " ಎಲಾ ಸುಗ್ರೀವ!! ನಿನ್ನಿಂದ ಕ್ಷಮಾಯಾಚನೆಯ ಅಪೇಕ್ಷೆಯಲ್ಲಿದ್ದ ನನಗೆ ಪಂಥಾಹ್ವಾನ ಕೊಡುತ್ತಿದ್ದೀಯ? ನಿನ್ನಣ್ಣ ಯಮ. ನಿನಗಿಂದು ಈ ಅಣ್ಣನೇ ಯಮ. ಇಂದು ನಿನ್ನ ಜೀವನದ ಕೊನೆಯ ರಾತ್ರಿ." ಎಂದು ಘರ್ಜಿಸಿ ಧಾವಿಸಿದ್ದ.

ತಾರೆ ತಡೆದಳು. "ಸ್ವಾಮೀ!! ಸುಗ್ರೀವ ಯುದ್ಧಕ್ಕೆ ಕರೆದಕ್ಷಣ ಲಗುಬಗೆಯಿಂದ ಎದ್ದು ಹೊರಟಿದ್ದೀರಿ. ಕಾಲಾಕಾಲಗಳ ಪರಿವೆ ಬೇಡವೆ ನಿಮಗೆ" ಎಂದು ಕೇಳಿದಳು. ವಾಲಿ ಸ್ವಲ್ಪ ಅವಾಕ್ಕಾದ. ಆದರೂ ಸಾವರಿಸಿಕೊಂಡ. "ಇಷ್ಟು ದಿನಗಳ ಕಾಲ ಸಜ್ಜೆ ಮನೆಯಲ್ಲಿ ಇನಿಯನೊಂದಿಗೆ ಸಲ್ಲಾಪದ ಮಾತುಗಳನ್ನಷ್ಟೇ ಆಡಿದವಳು ನೀನು. ಇಂದು ಕಾಲಾಕಾಲಗಳ ಬಗ್ಗೆ ಮಾತನಾಡುತ್ತಿದ್ದೀ. ಆಗಲಿ!! ನೀನು ಏನು ಮಾಡಿದರೂ ನನಗೆ ಚಂದ. ನಿನ್ನ ಬಾಯಿಯಲ್ಲಿ ಬರುವ ಈ ಮಾತುಗಳನ್ನು ಕೇಳುವ ಭಾಗ್ಯ ನನ್ನ ಪಾಲಿಗೆ ಸೌಭಾಗ್ಯ ಎಂದು ಭಾವಿಸಿ ಮಾತನಾಡುತ್ತೇನೆ. ಏನು ನಿನ್ನ ಸಮಸ್ಯೆ? ಇದು ಕಾಲವಲ್ಲ ಎಂದಷ್ಟೇ? ವಾನರ ವೀರ ಕಾಮರೂಪಿಯಾದ ವಾಲಿಗೆ ಇರುವುದು ಎರಡೇ ಕಾಲ. ಯುದ್ಧವಿರುವುದು ಇಲ್ಲ ಯುದ್ಧವಿಲ್ಲದಿರುವುದು. ಹಾಗಾಗಿ ಕಾಲಾಕಾಲಗಳ ಪರಿವೆ ಇಲ್ಲ. ಅದರ ಕುರಿತು ಯೋಚಿಸುವುದಕ್ಕೆ ವ್ಯವಧಾನವೂ ಇಲ್ಲ. ಈಗ ಅದಕ್ಕಂತೂ ಕಾಲವಲ್ಲ"

"ಸ್ವಲ್ಪ ಯೋಚಿಸಿ ಸ್ವಾಮಿ. ನಿಮ್ಮಲ್ಲಿ ಪೆಟ್ಟು ತಿಂದು ಹೋದ ಸುಗ್ರೀವ ಎಷ್ಟೋ ಶತಮಾನಗಳನ್ನು ಕಳೆದು ಮತ್ತೆ ಬರುತ್ತಿದ್ದ. ಆದರೆ ಇಂದು ಬೆಳಿಗ್ಗೆ ನಿಮ್ಮನ್ನು ಹೊಡೆದಾಟಕ್ಕೆ ಕರೆದು ಪೆಟ್ಟು ತಿಂದು ಮಧ್ಯಾಹ್ನದ ಕಾಲಕ್ಕೆ ಕಿಷಿಂಧೆಯ ಆ ಗಡಿಯಿಂದ ಸಾಗಿದವ ಈಗ ಕಿಷ್ಕಿಂಧೆಯ ಹಿಂಬಾಗಿಲಿನಿಂದ ಬಂದಿದ್ದಾನೆ, ಅವನ ಸ್ವರದಲ್ಲಿ ಸ್ವಲ್ಪವೂ ಅಳುಕಾಗಲೀ ಅಂಜಿಕೆಯಾಗಲೀ ಇಲ್ಲ. ಪೆಟ್ಟು ತಿಂದ ಆಯಾಸವೂ ಕಾಣುತ್ತಿಲ್ಲ. ಅತೀವ ಧೈರ್ಯದಿಂದ ಕೂಡಿದ ಹಾಗೆ ಅನ್ನಿಸುತ್ತದೆ. ಸ್ವಲ್ಪ ಯೋಚಿಸಿ."

"ತಾರೆ, ಅಮಲು ಹೆಚ್ಚಾದರೆ ಹಾಗೆಯೇ. ಆಯಸವೋ ಅವಮಾನವೋ ಅಳುಕೋ ಅಂಜಿಕೆಯೋ ಅಲ್ಲಿ ಇರುವುದಿಲ್ಲ. ಮತ್ತೆ ಆಯಸ್ಸು ತೀರಿದವನಿಗೆ ಇಂಥಾ ವಿಪರೀತ ಬುದ್ಧಿಗಳು ಸಾಮಾನ್ಯ. ಅದಿಲ್ಲವಾಗಿದ್ದರೆ ವಾಲಿಯ ಕಡೆ ಕಣ್ಣೆತ್ತಿ ನೋಡಲೂ ಅಂಜುವ ಸುಗ್ರೀವ ಕಿಟಕಿಯಲ್ಲಿ ಬಂದು ಕೂಗಿ ಯುದ್ಧಕ್ಕೆ ಕರೆಯುತ್ತಾನೆಯೇ? ಅವನಿಗೆ ಬದುಕು ಸಾಕಾಗಿದೆ. ತಾನಾಗಿ ಸಾಯುವುದಕ್ಕೂ ಧೈರ್ಯವಿಲ್ಲದೆ ಅಣ್ಣ ವಾಲಿಯಿಂದಲೇ ಮರಣವನ್ನು ಪಡೆಯುವ ಹಠ ಹೊತ್ತು ಇಲ್ಲಿಗೆ ಬಂದಿದ್ದಾನೆ. ಈ ಮೊದಲು ಕೂಡಾ ಆತನ ಅದೆಷ್ಟೊ ಬೇಕು ಬೇಡಗಳನ್ನು ಪೂರೈಸಿದವ ನಾನು. ಆತನ ಈ ಬಯಕ್ಕೆಯನ್ನೂ ಈಡೇರಿಸಿಕೊಡುತ್ತೇನೆ"

"ಸ್ವಾಮಿ, ಆತನಿಗೆ ಅಮಲೋ ಅಲ್ಲವೋ ನಾನರಿಯೆ. ನನಗದು ಬೇಡವೂ ಬೇಡ. ನನ್ನ ಆಲೋಚನೆ ಏನಿದ್ದರೂ ನಿಮ್ಮ ಬಗ್ಗೆ."

"ಭಲೇ ತಾರಾದೇವಿ. ನೀನು ನನ್ನ ಪಾಲಿನ ಭಾಗ್ಯ ತಾರೆ ಎಂದೇ ಭಾವಿಸಿದವ, ನಿನ್ನನ್ನೂ ಅಂತೆಯೇ ನಡೆಸಿಕೊಂಡವ. ನಿನ್ನನ್ನು ಒಂದು ಲೆಕ್ಕದಲ್ಲಿ ನಾನು ಸಂಪಾದಿಸಿದವ. ಅತ್ಯಮೂಲ್ಯವಾದ ರತ್ನವೊಂದನ್ನು ಪಡೆದೆ ಎನ್ನುವ ಅಭಿಮನದಲ್ಲಿಯೇ ಇರುವವ. ನಿನಗೆ ನನ್ನ ಬಗ್ಗಾಗಿ ಏನು ಆಲೋಚನೆ? ಏನು ಕಳವಳ? ನನಗೆ ನೀನು ಬಹು ಮುದ್ದು. ಆದರೆ ವೈದ್ಯ ಸುಷೇಣನ ಮಗಳಾಗಿ ನೀನು ನನಗೆ ಮದ್ದು ಕೂಡಾ ಆಗಿದ್ದೀಯೆ. ಒಂಟಿತನ ಎನ್ನುವ ಘೋರ ಭೀಕರ ರೋಗಕ್ಕೆ ಮದ್ದು ನೀನು. ವಾಲಿಯ ಪರಾಕ್ರಮವನ್ನು ಕಂಡವಳು ನೀನು. ಕೇಳಿದವಳು ನೀನು. ನಿನಗೇಕೆ ಇಂಥಾ ಅಸಂಬದ್ಧ ಆಲೋಚನೆ"

"ಇಂದು ಅಂಗದ ತನ್ನ ಗೆಳೆಯರೊಡನೆ ಋಷ್ಯಮೂಕದೆಡೆಗೆ ವಿಹಾರಕ್ಕಾಗಿ ಹೋಗಿದ್ದ. ಅಲ್ಲಿ ತಾರ-ಜಾಂಬವಾದಿಗಳು ಆಡುತ್ತಿದ್ದ ಮಾತುಗಳನ್ನು ಕೇಳಿ ಬಂದು ನನಗೆ ಎಲ್ಲವನ್ನೂ ತಿಳಿಸಿದ. ಆ ವಿಚಾರವನ್ನು ಕೇಳಿ ತಿಳಿದ ಮೇಲೆ ನಿಮ್ಮ ಹೆಂಡತಿಯಾದ ನನಗೆ ಆತಂಕವಾಗಿದೆ. ಯಾವ ಹೆಂಡತಿಗೂ ಇಂಥಾ ವಿಚಾರವನ್ನು ಕೇಳಿದಾಗ ಆತಂಕವೇ ಆಗುತ್ತದೆ. ದೂರದ ಉತ್ತರದ ಅಯೋಧ್ಯೆಯ ರಾಜಕುಮಾರ ರಾಮ, ರಾವಣನಿಂದ ಅಪಹೃತಳಾದ ತನ್ನ ಹೆಂಡತಿ ಸೀತೆಯನ್ನು ಹುಡುಕುತ್ತಾ ತಮ್ಮ ಲಕ್ಷ್ಮಣನೊಂದಿಗೆ ಹೊರಟನಂತೆ. ಮಾರ್ಗ ಮಧ್ಯದಲ್ಲಿ ಸಿಕ್ಕಿದ ಜಟಾಯು, ಕಬಂಧ, ಶಬರಿಯರ ಮುಖಾಂತರ ನಿಮ್ಮ ಮತ್ತು ಸುಗ್ರೀವರ ವಿಚಾರವನ್ನು ತಿಳಿದು ಆತನನ್ನು ಭೇಟಿಯಾಗಲು ಮುಂದಾಗಿದ್ದನಂತೆ. ಹನುಮ ಮಾರು ವೇಷದಲ್ಲಿ ಹೋಗಿ ವಿಚಾರಿಸಲಾಗಿ ರಾಮನೇ ಇದೆಲ್ಲವನ್ನೂ ತಿಳಿಸಿದನಂತೆ. ಹನುಮ ತನ್ನ ನಿಜರೂಪ ತೋರಿಸಿ ರಾಮನ ಕಾಲಿಗೆರಗಿದ್ದಾಗ ಹನುಮನನ್ನಾವರಿಸಿದ ಮೌಢ್ಯ ತೊಲಗಿತಂತೆ."

"ಯಾರೋ ಒಬ್ಬ ಹೆಂಡತಿಯನ್ನು ಕಳೆದುಕೊಂಡವ ಸುಗ್ರೀವನನ್ನು ಭೆಟ್ಟಿಯಾದರೆ ಅದರಲ್ಲಿ ನಾವು ಹೆದರುವಂಥದ್ದೇನೂ ಇಲ್ಲ ತಾರೆ. ಸುಮ್ಮನೆ ನನ್ನನ್ನು ಇಲ್ಲಿ ನಿಲ್ಲಿಸಿಕೊಂಡು ಕಾಲ ಹರಣ ಮಾಡಬೇಡ. ಸುಗ್ರೀವನ ಪ್ರಾಣ ಹರಣವನ್ನು ಮಾಡುವಲ್ಲಿನ ನನ್ನ ಉತ್ಸಾಹವನ್ನೊ ಸಮಯವನ್ನೊ ವ್ಯರ್ಥಗೊಳಿಸಬೇಡ."

" ತಾಳಿ ಸ್ವಾಮೀ ತಾಳಿ. ಸುಗ್ರೀವನನ್ನು ಭೆಟ್ಟಿಯಾದ ಮಾತ್ರಕ್ಕೇ ಅಂಜುವವಳು ನಾನಲ್ಲ. ಅದಷ್ಟನ್ನೇ ನನಗೆ ತಿಳಿಸಲು ಅಂಗದನೂ ಅವಿವೇಕಿಯಲ್ಲ. ಸುಗ್ರೀವ ಮತ್ತು ರಾಮನ ನಡುವೆ ಅಗ್ನಿಸಾಕ್ಷಿಯಾಗಿ ಮಿತ್ರತ್ವ ಉಂಟಾಗಿದೆಯಂತೆ. ನಿನ್ನ ಶತ್ರು ನನ್ನ ಶತ್ರು. ನಿನ್ನ ಮಿತ್ರ ನನ್ನ ಮಿತ್ರ ಎನ್ನುವ ರೀತಿಯಲ್ಲಿ ಪರಸ್ಪರರು ವಚನ ಕೊಟ್ಟಿದ್ದಾರಂತೆ. ವಾಲಿಯನ್ನು ಕೊಂದಾದರೂ ನಿನ್ನ ಹೆಂಡತಿ ರುಮೆಯನ್ನು ನಿನಗೆ ಕೊಡಿಸುತ್ತೇನೆ ಎಂದು ರಾಮ ತಿಳಿಸಿದ್ದಾನಂತೆ. ನಿಮ್ಮನ್ನು ಹೀಗೆ ನಿಲ್ಲಿಸಲು ಕಾರಣ ನನ್ನ ಕುತ್ತಿಗೆಗೆ ನೀವು ಕಟ್ಟಿದ ತಾಳಿ"

"ಅಯೋಧ್ಯೆಯ ಆ ರಾಮನ ಬಗ್ಗೆ ನಾನೇನೂ ತಿಳಿಯದವನಲ್ಲ. ಸಿಂಹಾಸನವನ್ನು ಏರುವ ಸಮಯದಲ್ಲಿ ತನ್ನದೇ ರಾಜ್ಯದಿಂದ ಹೊರಹಾಕಲ್ಪಟ್ಟವನಾತ. ರಾಜ್ಯಭ್ರಷ್ಟನಾದವ, ಹೆಂಡತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದವ ಹೆಂಡತಿಯನ್ನು ದೂರ ಮಾಡಿಕೊಂಡ ಸುಗ್ರೀವನಿಗೆ ಮಾತು ಕೊಟ್ಟ. ಈ ಪರಮ ಹೆಡ್ಡ ಸುಗ್ರೀವ ಅದನ್ನು ನಂಬಿದ. ಪಾಪ ನಮ್ಮ ಅಂಗದ ಅದನ್ನೆಲ್ಲವನ್ನೂ ಸ್ವಲ್ಪ ಹೆಚ್ಚಾಗಿ ಗ್ರಹಿಸಿದ. ಅಪ್ಪ ಎನ್ನುವ ಅಭಿಮಾನದಲ್ಲಿ ಮಂಕಾಗಿ ಹೆದರಿದ. ಈಗ ಹೋಗಿ ಸುಗ್ರೀವನನ್ನು ಕೊಂದು ಬಂದೆನಾದರೆ ಅಂಗದನಿಗೂ ಮುಂದೆ ಅಂಥಾ ಹೆದರಿಕೆ ಇರುವುದಿಲ್ಲ. ನಿನಗೂ ಕಳವಳಗೊಳ್ಳಬೇಕಾಗುವುದಿಲ್ಲ."

"ಅದಷ್ಟೇ ಆಗಿದ್ದರೆ ನಾನೂ ಹೆದರುತ್ತಿರಲಿಲ್ಲ. ಸುಗ್ರೀವ ರಾಮನನ್ನು ಪರೀಕ್ಷಿಸಿದ್ದಾನಂತೆ. ಹೆಬ್ಬೆರಳ ಮೇಲೆ ಮೊಣಕಾಲ ಪರ್ಯಂತರವಾಗಿ ನೀವು ಎತ್ತುತ್ತಿದ್ದ ದುಂದುಭಿಯ ಅಟ್ಟೆಯನ್ನು ಶ್ರೀರಾಮ ಒದೆದು ಯೋಜನಾಂತರಕ್ಕೆ ಹಾರಿಸಿದ್ದಾನಂತೆ. ನೀವು ನಿಮ್ಮ ಕೌಶಲ್ಯದ ಮುಖಾಂತರ ಸಪ್ತಸಾಲ ವೃಕ್ಷಗಳ ಒಂದೊಂದೇ ಗರಿಯನ್ನು ಕತ್ತರಿಸುತ್ತಿದ್ದಿರಿ. ಆದರೆ ಶ್ರೀರಾಮ ಮರ್ಮ ಸ್ಥಾನಕ್ಕೆ ಒದೆದು ಸಪ್ತಸಾಲ ವೃಕ್ಷಗಳನ್ನು ಒಂದೇ ನೇರಕ್ಕೆ ತಂದು ಒಂದೇ ಬಾಣದಿಂದ ತುಂಡರಿಸಿದನಂತೆ. ನಿಮ್ಮ ಸಾಮರ್ಥಕ್ಕಿಂತ ರಾಮನ ಸಾಮರ್ಥ್ಯ ಮಿಗಿಲಾಗಿದೆ ಎಂದು ಇವು ತೋರಿಸುತ್ತವಲ್ಲ ಸ್ವಾಮಿ. ಅದಕ್ಕೇ ಮತ್ತೆ ಹೇಳುತ್ತೇನೆ. ತಾಳಿ. ಸುಗ್ರೀವನ ಮೇಲಿನ ಈ ಸಿಟ್ಟನ್ನು ತಾಳಿಸಿ.ಈ ಕೋಪವನ್ನು ತಾಳಿಸಿ ನನ್ನ ತಾಳಿಯನ್ನುಳಿಸಿ. ನಿಮ್ಮ ಭಾಗ್ಯತಾರೆ ಎಂದು ಭಾವಿಸಿದ್ದೀರಿ ನನ್ನನ್ನು. ದ್ವೇಷದ ಗಾಢಾಂಧಕಾರದಲ್ಲಿ ದಿಕ್ಕು ತಪ್ಪಿದ ನಿಮಗೆ ದಿಕ್ಕನ್ನು ತೋರಿಸುತ್ತಿರುವ ಧೃವತಾರೆ ನಾನಾಗಿದ್ದೇನೆ ಎಂದು ಭಾವಿಸಿ ನನ್ನ ಮಾತನ್ನು ಮನ್ನಿಸಿ ಸ್ವಾಮೀ. ಯುದ್ಧಕ್ಕೆ ಹೋಗಬೇಡಿ"

" ಅಟ್ಟೆಯನ್ನು ಒದೆದು ಹಾರಿಸುವುದು ವಾಲಿಗೆ ಎಷ್ಟುಹೊತ್ತಿನ ಕೆಲಸವೂ ಅಲ್ಲ. ನಿಜವಾದ ಕ್ಷಮತೆ ಇರುವುದು ಅದನ್ನು ಎತ್ತುವುದರಲ್ಲಿ. ಸಪ್ತಸಾಲ ವೃಕ್ಷಗಳನ್ನು ಒಂದೇ ನೇರಕ್ಕೆ ತರುವುದೋ ಅಥವಾ ಅದನ್ನು ಕಡಿದುರಿಳಿಸುವುದೋ ಕೌಶಲ್ಯವಲ್ಲ. ಕೌಸಲ್ಯಾಸುತನಾಗಿಯೂ ದಶರಥನ ಮಗನಾಗಿಯೂ ರಾಮ ಇದನ್ನು ತಿಳಿಯದೇ ಹೋದನಲ್ಲ! ಅಲ್ಲಿಗೆ ಆತನನ್ನು ಸಂಗರ ಭೀಮ ಎಂದು ಭಾವಿಸುವುದು ಅಪ್ಪಟ ಮೂರ್ಖತನ ತಾರೆ. ಹಿಂದೊಮ್ಮೆ ಶ್ರೀಮನ್ನಾರಾಯಣನಿಗೆ ಎರವಾಗಿಟ್ಟ ಈ ಜೀವವನ್ನು ಯಾರೋ ಒಬ್ಬ ಮನೆ ಬಿಟ್ಟು ಹೆಂಡತಿ ಕಳಕೊಂಡವ ತೆಗೆಯುತ್ತಾನೆ ಎಂದು ಬ್ಯೋಚಿಸಿ ಹೆದರಿದರೆ, ಅದೂ ಈ ವಾಲಿಯ ಪತ್ನಿ, ವಾಲಿಗೆ ಅವಮಾನವಲ್ಲವೇನೆ? ಸುಮ್ಮನೆ ಆರತಿ ಎತ್ತಿ, ವೀರತಿಲಕವನ್ನಿಟ್ಟು ವಾಲಿಯನ್ನು ಯುದ್ಧಕ್ಕೆ ಕಳುಹಿಸಿಕೊಡು. ಮೂರು ಮೂರ್ತಿಗಳೇ ವಾಲಿಯ ವೀರತನಕ್ಕೆ ಅಂಜುವಾಗ ಮತ್ತೆ ವಾಲಿ ಒಬ್ಬ ಹುಲು ಮಾನವನಿಗೆ ಅಂಜುವುದೇ?" ಎನ್ನುತ್ತಾ ತಲೆ ಕೆರೆದುಕೊಂಡು ನೆಲವನ್ನು ಕಾಲಿನಿಂದ ಗೀರಿ ಬಾಲವನ್ನು ನೆಲಕ್ಕಪ್ಪಳಿಸಿ ಉಗುರು ಕಚ್ಚಿದ ವಾಲಿ.

"ಸ್ವಾಮಿ, ಹಿಂದೆ ಭಾರ್ಗವರಾಮರಲ್ಲಿ ಕಾದಾಡಿ ಅವರನ್ನು ನಿಗ್ರಹಿಸಿದ್ದನಂತೆ ರಾಮ. ಕಲ್ಲಾಗಿ ಬಿದ್ದಿದ್ದ ಅಹಲ್ಯೆಯನ್ನು ಉದ್ಧರಿಸಿದನಂತೆ. ಕಬಂಧನನ್ನು ಕೊಂದು ಆತನ ಶಾಪವನ್ನು ಕಳೆದನಂತೆ. ಇದೆಲ್ಲವೂ ಆತನ ಹೆಚ್ಚುಗಾರಿಕೆಯಲ್ಲವೇ? ತ್ರಿಮೂರ್ತಿಗಳು ನಮ್ಮ ಮೇಲೆ ಪ್ರಸನ್ನರಾಗಬೇಕೇ ಹೊರತು, ನಮಗೆ ಹೆದರುವುದಲ್ಲ ಬದುಕು. ಆರತಿಯನ್ನು ಎತ್ತಿ ತಿಲಕವನ್ನಿಟ್ಟು ಕಳುಹಿಸುತ್ತೇನೆ. ಆದರೆ ಯುದ್ಧಾಸಕ್ತರಾದ ನಿಮಗಲ್ಲ. ರಾಮನನ್ನು ಕಾಣಲು ಹೊರಟ ನನ್ನ ಪತಿಗೆ. ಸುಗ್ರೀವನನ್ನು ಮರಳಿ ಕರೆತಂದು ಕಿಷ್ಕಿಂಧೆಯ ವೈಭವವನ್ನು ಪುನಃಸ್ಥಾಪಿಸ ಹೊರಟ ವಾಲಿಗೆ. ಶಕುನಗಳೂ ಸರಿಯಿಲ್ಲ, ಉಗುರು ಕಚ್ಚುತ್ತಾ, ತಲೆ ತುರಿಸಿಕೊಳ್ಳುತ್ತಾ, ನೆಲ ಕೆರೆಯುತ್ತಾ, ಉಗುರು ಕಚ್ಚುತ್ತಾ ಬಾಲವನ್ನು ನೆಲಕ್ಕಪ್ಳಿಸುತ್ತಿದ್ದೀರಿ. ಸ್ವಲ್ಪವೇ ಹೊತ್ತಿಗೆ ಮುಂಚೆ ಹಾಲು ಚೆಲ್ಲಿದ್ದಂತೆ ಚೆಲ್ಲಿದ ಬೆಳದಿಂಗಳಲ್ಲಿದ್ದ ಕಿಷ್ಕಿಂಧೆಯ ಮೇಲೆ ಈಗ ಮೋಡ ಕವಿದಿದೆ, ಮಳೆಗಾಲ ಇನ್ನೂ ದೂರವಿದ್ದರೂ. ಸ್ವಲ್ಪ ನೋಡಿ" ಎನ್ನುತ್ತಾ ಅಂಗಲಾಚಿದಳು ತಾರೆ.

"ತಾರೆ, ನೀನು ಈಗೆಂದ ಮಾತಿನ ಪೂರ್ವಾರ್ಧವನ್ನು ನೋಡಿದರೆ ಶ್ರೀರಾಮ ಶ್ರೀಮನ್ನಾರಯಣನೇ ಇರಬೇಕು. ಆತನೇ ನನ್ನ ಜೀವವನ್ನೊಯ್ಯಲು ಬಂದರೆ ನಾನು ನಿರಾಕರಿಸಲಾರೆ. ಅದು ಅಸಾಧ್ಯ ಮತ್ತು ಅಸಾಧು, ಸಮುದ್ರ ಮಂಥನದ ನಂತರ ನನ್ನ ಶೌರ್ಯವನ್ನು ಮೆಚ್ಚಿ ನನಗೆ ವರ ಕೊಡಲು ಬಂದ. ಯಾರಿಂದಲೂ ಏನನ್ನೂ ಕೇಳಿ ಪಡೆಯದ ವಾಲಿ ನಿನಗೇನು ಬೇಕೆಂದು ಪ್ರಶ್ನಿಸಿದ್ದ. ಪ್ರಾಣ ಬೇಕೆಂದ. ಕೊಡಲಿಕ್ಕೆ ಮುಂದಾದೆ. ಆಗ, ತನಗೆ ಬೇಕಾದಾಗ ತೆಗೆದುಕೊಳ್ಳುವುದಾಗಿ ಹೇಳಿದ. ಪರಿಣಾಮ ನನ್ನಪ್ಪ ನನಗೆ ಕೊಟ್ಟ ಈ ಕನಕ ಕಾಂಚನ ಮಾಲಿಕೆ. ಧರಿಸಿ ಹೊರಟರೆ ಎದುರಿದ್ದವನ ಅರ್ಧ ಬಲ ನನಗೆ. ಹೀಗೆ ಶ್ರೀರಾಮ ಶ್ರೀಮನ್ನಾರಯಣನೇ ಆಗಿದ್ದಲ್ಲಿ ನನ್ನ ಪ್ರಾಣ ಅವನಿಗೇ ಸಲ್ಲಬೇಕು. ಇಲ್ಲವಾದಲ್ಲಿ ಸುಗ್ರೀವ ಸಾಯಬೇಕು, ಸಾಯುತ್ತಾನೆ. ನಿನ್ನ ಮನದ ಬಯಕೆ ದಿಕ್ಕು ತಪ್ಪಿದ ನನಗೆ ದಿಕ್ಕುಗಾಣಿಸುವ ಧೃವತಾರೆಯಾಗಬೇಕು ಎಂದಲ್ಲವೇ? ಅದೂ ನಡೆದು ಹೋಗಿದೆ ನೋಡು. ನಾನು ಸಾಗಲಿರುವ ದಿಕ್ಕಿನ ಕುರಿತಾಗಿ ನನಗೆ ಸ್ಪಷ್ಟತೆ ಲಭವಾಗಿದೆ. ಒಂಟಿ ತನಕ್ಕೆ ಮದ್ದಾಗಿದ್ದ ನೀನು ಈಗ ಭವ ರೋಗಕ್ಕೂ ಮದ್ದಾಗುವ ಕಾಲ ಬಂದಿದೆ. ಹೆಂಡತಿಗೆ ಇರಬೇಕಾದ ಮುಖ್ಯ ಗುಣ ಸಂಸಾರ ಸಾಗರದ ತಾರಿಣಿಯಾಗುವುದು. ಉತ್ತಮ ಸತಿ ಬೇಕಾದ ಪ್ರತಿಯೊಬ್ಬನೂ ಸ್ವಯಂವರ ಪಾರ್ವತೀ ಮಂತ್ರದಲ್ಲಿ ಇದನ್ನೇ ಬೇಡಿಕೊಳ್ಳುವುದು. ಅಂತೆಯೇ ನನಗೆ ಆರತಿ ಎತ್ತಿ ಕಳಿಸು. ಭವತಾರಿಣಿಯಾಗು. ಇನ್ನು ತಡ ಮಾಡಬೇಡ. ನನ್ನನ್ನೂ ತಡೆಯಬೇಡ."

"ಹತೋವಾ ಪ್ರಾಪ್ಯಸೇ ಸ್ವರ್ಗಮ್ ಜಿತೋ ವಾ ಪಾಲಸೇ ಮಹಿಮ್- ಬದುಕಿ ಭುವಿಯನ್ನಾಳುವೆ ಸತ್ತರೆ ಸ್ವರ್ಗಕ್ಕೇರುವೆ ಎಂದು ಹೊರಟಿರುವ ನಿಮ್ಮನ್ನು ಇನ್ನೂ ತಡೆಯಲು ನನ್ನಿಂದಾಗದು" ಎನ್ನುತ್ತಾ ದು:ಖಿಸುತ್ತಲೇ ನೀರಾಜನದಿಂದ ಆರತಿ ಎತ್ತಿ ತಿಲಕವಿಟ್ಟಳು ತಾರೆ ಭವತಾರಿಣಿಯಾದೆನೋ, ಧೃವತಾರೆಯಾದೆನೋ ಎನ್ನುವ ಗೊಂದಲದ ಜೊತೆಯಲ್ಲಿ, ಮತ್ತೊಂದು ವಿಪ್ಲವಕ್ಕೆ ತಾನು ಸಾಕ್ಷಿಯಾದೆ ಎನ್ನುವ ಭಾವ ಅವಳ ಮುಖದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ವಾಲಿಗೆ ಅದರ ಪರಿವೆಯಿಲ್ಲ. "ಎಲಾ ಸುಗ್ರೀವ" ಎನ್ನುತ್ತಾ ಹೊರಬಿದ್ದ ವಾಲಿ. ಹೊರಬಿದ್ದವನ ಕಣ್ಣಿಗೆ ಕಂಡ ದೃಷ್ಯಗಳು ನಂಬಲಸಾಧ್ಯವಾಗಿದ್ದವು.

(ಸಶೇಷ)

No comments:

Post a Comment