Monday, September 3, 2018

ಬುದ್ಧಿಜೀವಿಯ ಬಂಡವಾಳ

ನಾನು ಹುಟ್ಟಿದ್ದು ಸಾಗರದಿಂದ ಕೆಲವೇ ಕಿಲೋಮೀಟರುಗಳ ದೂರದ ಒಂದು ಹಳ್ಳಿಯಲ್ಲಿ. ಸಾಗರ ಬಿಟ್ಟರೆ ನಮಗೆ ಹತ್ತಿರದ ದೊಡ್ಡ ಊರೆಂದರೆ ಹೆಗ್ಗೋಡು. ಹೆಗ್ಗೋಡು ನಮಗೆ ಟೆಲಿಫೋನ್ ಎಕ್ಸ್ಚೇಂಜ್, ತತ್ ಕ್ಷಣದ ವೈದ್ಯರ ಊರು ಎಲ್ಲವೂ ಆಗಿತ್ತು. ಹೆಗ್ಗೋಡು ಸಮೀಪದ ಕೆಲವು ಊರುಗಳಿಗಿಂತ ದೊಡ್ಡದಾದಕ್ಕೆ ಕಾರಣ ಬಹುಷಃ ಅಲ್ಲಿದ್ದ ನೀನಾಸಂ. ಕೆಲವೊಮ್ಮೆ ಅಲ್ಲಿಗೆ ನಾಟಕ ನೋಡಲು ಹೋಗುತ್ತಿದ್ದದ್ದೂ ಇದೆ. ಇನ್ನು ಹೆಗ್ಗೋಡಿನಲ್ಲಿ ನಡೆಯುತ್ತಿದ್ದ ಯಕ್ಷಗಾನಗಳೂ ಕೂಡಾ ನಮ್ಮನ್ನು ಅದರೆಡೆ ಮುಖ ಮಾಡುವಂತೆ ಮಾಡುತ್ತಿದ್ದವು. ಆದರೆ ಜಗತ್ತಿನ ಬಹುಭಾಗ ಹೆಗ್ಗೋಡು ಎನ್ನುವ ಗ್ರಾಮದತ್ತ ಮುಖ ಮಾಡಿದ್ದು ೧೯೯೦ರಲ್ಲಿ. ಕುಂಟಗೋಡು ವಿಭೂತಿ ಸುಬ್ಬಣ್ಣ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಬಂದಾಗ. ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದರೂ ಸುಬ್ಬಣ್ಣನವರು ತಮ್ಮ ನಡೆ ನುಡಿ ಯಾವುದರಲ್ಲೂ ಯಾವ ಬದಲಾವಣೆಯನ್ನೂ ತಂದುಕೊಳಲಿಲ್ಲ. ಅದೇ ಜುಬ್ಬಾ, ಪ್ಯಾಂಟು, ಒಂದು ಕೈ ಚೀಲ, ಕವಳದ ಸಂಚಿ ಹಿಡಿದೇ ಓಡಾಡುತ್ತಿದ್ದರು. ಅವರು ನಾಟಕ ಮಾಡಿದ್ದು ಮಾಡಿಸಿದ್ದು ಎರಡೂ ರಂಗದ ಮೇಲೆಯೇ ಹೊರತು, ಜೀವನದಲ್ಲಲ್ಲ. ಅವರಿಗೆ ಆ ರೀತಿಅ ಸಹಜತೆ ಸರಳತೆ ಇದ್ದಿದ್ದರಿಂದಲೇ ನೀನಾಸಂ ಎಂದರೆ ಒಂದು ರೀತಿಯ ಆಕರ್ಷಣೆ- ಸೆಳೆತ ಎಲ್ಲರಿಗೂ ಹುಟ್ಟಿತ್ತು. ಆದರೆ ಚಿಕ್ಕವರಾಗಿದ್ದ ನಮಗೆ ಹೆಗ್ಗೋಡಿನ ಬಗ್ಗೆ ಆಗ ಇದೆಲ್ಲಾ ತಿಳಿದಿರಲಿಲ್ಲ. ಏನೋ ಕೆಲವು ಅಡಾ ಪಡಾ ಸುದ್ದಿಗಳು ಆಗಾಗ ಬಲಗಿವಿಯಲ್ಲಿ ಹೊಕ್ಕು ಎಡಗಿವಿಯಲ್ಲಿ ಹೊರಟುಹೋಗುತ್ತಿದ್ದವು.

ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ನಾನು ಹುಟ್ಟಿದ ಹಳಿಯಿಂದ ಒಂದೇ ಕಿಲೋಮೀಟರ್ ದೂರದ ಸರಕಾರಿ ಶಾಲೆಯಲ್ಲಿ. ಕೆಲವು ಶಾಲೆಗಳನ್ನು ಒಟ್ಟು ಸೇರಿಸಿ ನಡೆಸುತ್ತಿದ್ದ ಕಾರ್ಯಕ್ರಮ ಶಾಲಾ ಸಂಕೀರ್ಣ. ಕ್ರೀಡೆ ಮತ್ತು ಸಾಂಸ್ಕೃತಿಕ ಎರಡೂ ಬಗೆಯ ಸ್ಪರ್ಧೆಗಳು ನಡೆಯುತ್ತಿದ್ದವು. ಅದಕ್ಕೆಂದು ನಾವು ಹೋಗಬೇಕಾಗಿದ್ದು ಹೆಗ್ಗೋಡಿಗೆ. ಅಪರೂಪಕ್ಕೆ ನಾವು ಅಷ್ಟು ದೂರ ನಡೆದೇ ಹೋಗುತ್ತಿದ್ದೆವು. ಪ್ರತಿಯೊಂದೂ ಕೌತುಕ ಕುತೂಹಲದ ಪ್ರಾಯ ಅದು. ಜೊತೆಯಲ್ಲಿಯೇ ಸೂಕ್ಷ್ಮವಾಗಿಇ ಎಲ್ಲವನ್ನೂ ಗಮನಿಸುವ ಕೆಟ್ಟ ಚಾಳಿ ಎರಡೂ ಇತ್ತು. ನಾಲ್ಕು ರಸ್ತೆಯಿಂದ ತುಸುವೇ ದೂರದಲ್ಲಿ ಒಂದು ದೊಡ್ಡ ಶಾಲೆಯಾಕಾರದ ಕಟ್ಟಡ ಬಂದಿತ್ತು. ಅಸ್ದರ ಗೋಡೆಯ ಮೇಲೆಲ್ಲ ಚಿತ್ತಾರಗಳಿದ್ದವು. ಆ ಕಟ್ಟಡದ ಮಾಡು ಹುಲ್ಲಿನದಾಗಿತ್ತು. ಅದರ ಮೇಲೆ ಕವಿ ಕಾವ್ಯ ಟ್ರಸ್ಟ್ ಭೀಮನಕೋಣೆ ಎನ್ನುವ ಬರಹ ಇತ್ತು. ನಾನು ಹೆಗ್ಗೋಡಿನಲ್ಲೇ ಇದ್ದ ಹೈಸ್ಕೂಲಿನಲ್ಲಿ ಓದಿದ್ದು. ಹೈಸ್ಕೂಲಿಗೆ ಹೋಗುವಾಗ ಪಕ್ಕದಲ್ಲಿ ಮೂರು ರತೆ ಸೇರುವಲ್ಲಿ, ಕೇಡಲಸರದ ಪಾಠಶಾಲೆಯ ಎದುರಿಗೆ ಚರಕ ಕೈಮಗ್ಗ ಎನ್ನುವ ಬೋರ್ಡ್ ಹೊತ್ತ ಪುಟ್ಟದಾದ ಆದರೆ ಚಂದದ ಕಟ್ಟಡ ಇತ್ತು. ಇದೇ ಫಲಕ ಮೊದಲು ನಾನು ಹೇಳಿದ ಕಟ್ಟಡದ ಮೇಲೂ ಬಂತು. ಕೊನೆಗೆ ಗೊತ್ತಾಗಿತ್ತು. ಮಗ್ಗ ಎಂದರೆ ಬಟ್ಟೆಯನ್ನು ನೇಯ್ದು, ಆ ಬಟ್ಟೆಯನ್ನು ವಿವಿಧ ಗಾತ್ರ ಆಕಾರಗಳಲ್ಲಿ ಕತ್ತರಿಸಿ ಹೊಲಿದು ಮಾರುತ್ತಿದ್ದರು ಇವರು ಅಂತ. ಯಾರೋ ಹೇಳಿದ್ದೂ ಇತ್ತು. ಇದು ಪ್ರಸನ್ನ ಅವರದ್ದು ಅಂತ. ಎಲ್ಲಾದರೂ ಒಮ್ಮೊಮ್ಮೆ ಪ್ರಸನ್ನ ಕಾಣುತ್ತಿದ್ದರ್ ನಮಗೆ ಹೆಗ್ಗೋಡಿನಲ್ಲಿ. ಹೆಸರಿಗೆ ತಕ್ಕಂತೆ ಇದ್ದ ಮುಖಭಾವ ಅವರದ್ದು.

ಎಲ್ಲಾದರೂ ಸಾಗರದಲ್ಲಿ ಚರಕ ಅಂಗದಿ ಎನ್ನುವ ಬೋರ್ಡ್ ಒಮ್ದು ಕಾಣುತ್ತಿತ್ತು. ನಮ್ಮೂರಿನದ್ದು ಎನ್ನುವ ಸಂತೋಷ ಆಗುತ್ತಿತ್ತು. ಇದೇ ಕತೆ ಬೆಂಗಳೂರಿಗೆ ಬಂದ ಮೇಲೂ ಆಗುತ್ತಿತ್ತು. ನಮ್ಮೊರ ಜನ ಒಂದು ಊಳ್ಳೆಯ ಕೆಲಸಕ್ಕೆ ಮೌನವಾಗಿ ನೀಡುತ್ತಿರುವ ಬೆಂಬಲವನ್ನು ತಿಳಿದು ರೋಮಾಂಚನವೂ ಆಗುತ್ತಿತ್ತು. ಒಂದು ಕಡೆಯಲ್ಲಿ ಸುಬ್ಬಣ್ಣನವರ ನೀನಾಸಂ ಇನ್ನೊಂದೆಡೆಯಲ್ಲಿ ಕವಿ ಕಾವ್ಯ ಟ್ರಸ್ಟ್-ಚರಕ ಎನ್ನುವ ಮತ್ತೊಂದು ಸಂಘಟನೆ. ನನ್ನೂರು ಧನ್ಯ ಎನಿಸುತ್ತಿತ್ತು. ಆದರೆ ನನ್ನೂರಿನ ವಾಸ್ತವವೇ ಬೇರೆಯಾಗಿತ್ತು.

ಅಡಿಕೆ ತೋಟಕ್ಕೆ ಬೆಂಬಲವಾಗಿಯೋ ಎನ್ನುವಂತೆ ಇದ್ದಿದ್ದ ಕಾಡುಗಳಲ್ಲಿದ್ದ ಮಲೆನಾಡ ಮರಗಳು ಮರೆಯಾಗಿ ಅಕೇಷಿಯಾ ತನ್ನ ಐರನ್ ಲೆಗ್ ಇಟ್ಟು ಬಹಳ ಕಾಲ ಸಂದುಹೋಗಿತ್ತು. ಅಡಿಕೆ ತೋಟಕ್ಕೆ ಬೇರುಹುಳದ ಬಾಧೆ ಹತ್ತಿ ಹೈರಾಣು ಮಾಡಿತ್ತು. ಬೆನ್ನಲ್ಲೇ ಮಳೆ ಕಡಿಮೆ. ಭತ್ತದ ಗದ್ದೆಗಳೆಲ್ಲಾ ಶುಂಠಿಯ ಹೊಲಗಳಾಗುತ್ತಾ ಇದ್ದವು. ಅಲ್ಲಲ್ಲಿ ಇಷ್ಟೆಲ್ಲದರ ಮಧ್ಯೆ ಊರ ಅಡಿಕೆ ಬೆಳೆಗಾರ ಮಕ್ಕಳು ಓದಲಿ ಎನ್ನುವ ಆಸೆ ಹೊತ್ತಿದ್ದ. ಮಕ್ಕಳನ್ನು ಓದಿಸುತ್ತಲೂ ಇದ್ದ. ಆದರೆ ಭರವಸೆಯಾಗ್ಗಿದ್ದ ಅಡಿಕೆಯ ಬೆಲೆ ನೆಲದತ್ತ ಸಾಗುತ್ತಿತ್ತು. ಆಗಾಗ ಬರುತ್ತಿದ್ದ ಗುಟ್ಖಾ ನಿಷೇಧ ಎನ್ನುವ ವದಂತಿ ಡವಗುಟ್ಟುತ್ತಿದ್ದ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು. ಹಾಗೋ ಹೀಗೋ ಹೇಗೋ ಬದುಕು ಕಳೆಯುತ್ತಿತ್ತು. ಬೆನ್ನಲ್ಲೇ ಬಂತು ನೋಡಿ ಸುದ್ದಿ. ಉಡುಪಿಯ ಬಳಿ ನಕ್ಸಲರಿಬ್ಬರನ್ನು ಕೊಂದದ್ದು, ಚಿಕ್ಕಮಗಳೂರಿನಲ್ಲಿ ಗುಂಡಿನ ಚಕಮಕಿ, ಬರ್ಕಣ ಜಲಪಾತದ ಬಳಿ ಅದ್ಯಾರದ್ದೋ ಎನ್ ಕೌಂಟರ್, ಶೇಷಪ್ಪ ಗೌಡ್ಲು ಎನ್ನುವವನ ಹತ್ಯೆ.... ಮೆಣಸಿನ ಹಾಡ್ಯ... ಏನೇನೆಲ್ಲಾ ಇತ್ತು. ನಕ್ಸಲೀಯರ ಬಗ್ಗೆ ಕೇಳಿ ತಿಳಿದಿದ್ದ ನಮಗೆ ಆತಂಕ ಇತ್ತು. ಚಿಕ್ಕ ಮಗಳೂರು ಅಥವಾ ಉಡುಪಿ ನಮಗೆ ಕೆಲವೇ ಗಂಟೆಗಳ ದಾರಿ. ದಿನವೂ ಎಷ್ಟೋ ಬಸ್ಸುಗಳು ಕೊಪ್ಪ-ಶೃಂಗೇರಿ-ಕುಂದಾಪುರ-ಉಡುಪಿಯ ಕಡೆ ಹೋಗುತ್ತಿದ್ದವು. ನಮ್ಮೂರಿನ ಅದೆಷ್ಟೋ ಜನಕ್ಕೆ ಆ ಊರುಗಳಲ್ಲಿ ಮಾವನೋ ಅತ್ತೆಯೋ ಚಿಕ್ಕಮ್ಮನೋ ಅಕ್ಕನೋ ತಂಗಿಯೋ ಅಥವ ಮತ್ಯಾರೋ ಬಂಧುಗಳಿದ್ದರು. ಅವರ ಕುರಿತಾಗಿಯೂ ಒಂದು ಆತಂಕ ಮಡುಗಟ್ಟಿತ್ತು. ಸುದ್ದಿ ಸುದ್ದಿಯಾಗುತ್ತಲೇ ಇತ್ತೇ ಹೊರತು ಎಲ್ಲಿಯೂ ಕೊಲೆ ಘಟನೆಗಳು ಅಷ್ಟಾಗಿ ನಡೆಯಲಿಲ್ಲ. ನಮ್ಮ ಭಾಗದ ಪುಣ್ಯ.

ನನ್ನೂರಿನಿಂದ ಶುರುವಾಗಿ ಕವಿ ಕಾವ್ಯವನ್ನು ದಾಟಿ ಈಗ ನಕ್ಸಲರ ಬಗೆಗೆ ಬರೆದೆ. ಒಂದ್ದಕ್ಕೊಂದು ಸಂಬಂಧವಿಲ್ಲ ಎನಿಸುತ್ತಿದೆಯಲ್ಲವೇ. ಸಂಬಂಧವಿದೆ. ಮೇಲೆ ಬರೆದ ನನ್ನೂರಿನ ಕವಿ ಕಾವ್ಯ ಮೊನ್ನೆ ಮೊನ್ನೆ ನಕ್ಸಲರ ಪರ ಮಾತಾಡಿದ ಪ್ರಸನ್ನ ಅವರ ಕೂಸು. ಅದರ ಬಗ್ಗೆ ನನ್ನನ್ನೂ ಸೇರಿ ಜನ ಒಳ್ಳೆಯ ಭಾವನೆ ಇಟ್ಟುಕೊಮ್ಡಿದ್ದಾರೆ. ಇಲ್ಲವಾಗಿದ್ದರೆ ಗುಡಿಸಲಿನಲ್ಲಿದ್ದ ಟ್ರಸ್ಟ್ ಈ ಪಾಟಿ ಬೆಳೆಯಲು ಸಾಧ್ಯವಿರಲಿಲ್ಲ. ಅಲ್ಲಿಯ ಜನ ಸಮಸ್ಯೆಗಳೇ ಇರದ ಸಗ್ಗದಲ್ಲಿ ಬದುಕುತ್ತಿರುವವರೂ ಅಲ್ಲ. ಮಳೆಗಾಲದಲ್ಲಿ ಹನಿ ಕಡಿಯದೆ ಕಾಡಿಸುವ ಮಳೆ ಇದ್ದಕ್ಕಿದ್ದಂತೆ ಮರೆಯಾಗಿ ಬಿಡುತ್ತದೆ. ಅಷ್ಟು ಮಳೆಯಾದರೂ ಕೂಡಾ ಕುಡಿಯುವ ನೀರಿಗೆ ತತ್ವಾರದ ಜಾಗಗಳಿವೆ. ಅಬ್ಬಿ ನೀರಿನ ರಭಸ ಕಡಿಮೆಯಾಗಿದೆ. ಕಾಡು ಅಕೇಷಿಯಾ ಪ್ಲಾಂಟೇಷನ್ ಆಗಿದೆ. ಇಷ್ಟೆಲ್ಲಾ ಆದರೂ ಅಲ್ಲಿನ ಜನ ಬಂದೂಕು ಹಿಡಿಯಲಿಲ್ಲ. ಹಿಂಸೆ ಮಾಡಲಿಲ್ಲ. ಹಾಗದರೆ ಅವರದೆಲ್ಲ ಜನಪರ ನಡವಳಿಕೆಯಲ್ಲವೇ ಪ್ರಸನ್ನ ಅವರೇ?

ಪ್ರಾಕೃತಿಕವಾಗಿ ಇದ್ದ ಕಾಡು ನೆಡುತೋಪಾಗುವಾಗ ನಿಮ್ಮ ನಕ್ಸಲೀಯ ಜನಪರ ಕಾಳಜಿಯ ಸಮಾಜವಾದದ ಜಾತ್ಯತೀತ ಸಂವೇದನೆ ಗೆಣಸು ಕೆರೆಯುತ್ತಾ ಇತ್ತಾ? "ನಾನೊಬ್ಬ ರಂಗಕರ್ಮಿ; ನನಗಿದೆಲ್ಲ ಸಂಬಂಧವಿಲ್ಲ" ಅನ್ನಬೇಡಿ ಸ್ವಾಮಿ. ಸಂಬಂಧವಿರದಿದ್ದರೆ ನಿನ್ನೆಯೇ ಬಾಯಿ ಮುಚ್ಚಿಕೊಂಡಿರಬೇಕಿತ್ತು. ನೀವು ಕಟ್ಟಿದ ಕವಿ ಕಾವ್ಯ ಊರ ಜನರ ಬೆಂಬಲ ಇಲ್ಲದೇ ಬೆಳೆಯಿತೋ ಹಾಗಾದರೆ? ನಿಮ್ಮ ಜನಪರ ಕಾಳಜಿಯ ಸೂಕ್ಷ್ಮ ಸಂವೇದನೆ ನಿಮ್ಮ ಚರಕದ ಅಂಗಡಿಯಲ್ಲೇಕೆ ಕಾಣುವುದಿಲ್ಲ. ಅಲ್ಲೇಕೆ ಬಟ್ಟೆಗಳ ಬೆಲೆ ಸ್ವಲ್ಪ ಹೆಚ್ಚೇ ಇದೆ? ನೀವು ರಂಗಾಯಣದ ನಿರ್ದೇಶಾರಾದಾಗ ಸಂತೋಷಿಸಿದ ಊರ ಜನರ ಬಗ್ಗೆ ನಿಮಗೇಕೆ ಕಾಳಜಿ ಇಲ್ಲ? ನಿಮ್ಮ ಬಟ್ಟೆಗಳ ಬೆಲೆ ಕಡಿಮೆ ಇದ್ದಿದ್ದರೆ ಅಲ್ಲಿನ ಜನ ಬಂಡವಾಳ ಷಾಹಿ ಕಾರ್ಮಿಕ ವಿರೋಧಿ ಜನರ ಬಳಿ ಬಟ್ಟೆ ಕೊಳ್ಳುತ್ತಲೇ ಇರಲಿಲ್ಲ. ಬಂಡವಾಳಷಾಹಿಗಳನ್ನು ಅರಾಮಾಗಿ ಹೆಡೆಮುರಿ ಕಟ್ಟಬಹುದಿತ್ತಲ್ಲ.

ಅದು ಬಿಡಿ. ಧಿಢೀರನೆ ಗುಟ್ಖಾ ನಿಶೇಧಿಸಿದರೆ ಅಡಿಕೆ ತೋಟವನ್ನೇ ನಂಬಿ ಕುಳಿತ ಜನ ಎಲ್ಲಿ ಹೋಗಬೇಕು ಸ್ವಾಮಿ? ಅದನ್ನೆಲ್ಲಾ ಪ್ರಶ್ನಿಸುವುದು ಉಳಿದವರಿಗೆ ಕೇವಲ ಜನಪರ ಕಾಳಜಿಯಾಗಿತ್ತು. ಆದರೆ ನಿಮಗೆ ಊರ ಋಣವೂ ಇತ್ತು. ನಿಮ್ಮನ್ನು ಬೆಳೆಸಿದ ಹೆಗ್ಗೋಡಿನ ಕುರಿತಾಗಿ ಆ ಪ್ರಾಂತ್ಯದ ಜನರ ಕುರಿತಾಗಿ ನಿಮಗೆ ಸಹಜವಾಗಿ ಇರಬೇಕಾಗಿದ್ದ ಅಕ್ಕರೆ ಅದು. ಅದೆಲ್ಲ ನೀವು ಯಾವತ್ತೊ ಮಾಡಿದ್ದೇ ನೆನಪಿಲ್ಲ ನಮಗೆ,

ಕೊಳೆ ರೋಗ ಬೇರು ಹುಳಕ್ಕೆ ಇಂದಿಗೂ ಪರಿಹಾರ ಸಮರ್ಪಕವಾಗಿ ಬಂದಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಇಇನ್ನೂ ಹಳಿ ಹತ್ತಿಲ್ಲ. ನಿಮ್ಮೂರ ಆಸುಪಾಸಿನಲ್ಲಿ ಎಷ್ಟೋ ಊರುಗಳಿಗೆ ಬಸ್ಸಿನ ವ್ಯವಸ್ಥೆ ಇಲ್ಲ. ಅದಕ್ಕೆಲ್ಲ ನೀವು ಮಾತಾಡಿಲ್ಲ. ಆದರೆ ಬ್ದನವಾಳು ಸತ್ಯಾಗ್ರಹಕ್ಕೆ ಲಗುಬಗೆಯಿಂದ ಓಡಾದಿದ್ದೀರಿ.

ಚರಕ ಮಾಡಿದಿರಿ. ಆದರೆ ಊರ ಜನರ ಮಾತು-"ಚರಕದ ಕಾಲದಲ್ಲಿ ಕೆಲಸಕ್ಕೆ ಜನ ಇಲ್ಲೆ" ಎನ್ನುವುದು ತುಟಿಯೊಳಗಿನ ಗೊಣಗಾಟವೇ ಆಗಿ ಉಳಿಯಿತು. ಯಾರೂ ನಿಮ್ಮನ್ನು ಹಿಂಸಿಸಲಿಲ್ಲ. ನಿಮ್ಮನ್ನು ವಿರೋಧಿಸಿ ಯಾರೂ ಬೋರ್ಡ್ ಹಿಡಿದು ಜಾಥಾ ಮಾಡಲಿಲ್ಲ. ನಿಮ್ಮ ಬಗ್ಗೆ ನಿಮಗೇ ಮುಜುಗರವಾಗಿತ್ತು ಹಿಂದೊಮ್ಮೆ. ಆಗಲೂ ಯಾರೂ ನಿಮ್ಮನ್ನು ಕೊಲ್ಲಲು ಬರಲಿಲ್ಲ. ಹೋಗಲಿ ಬಿಡು ಏನೋ ಆಗಿ ಹೋತು ಎನ್ನುವ ಉದಾರ ಮನಸ್ಸಿನಿಂದಲೇ ಇದ್ದರು. ಇಷ್ಟಾದರೂ ನಿಮಗೆ ಊರ ಜನರಲ್ಲಿ ಎಷ್ಟು ಜನ ಪರಿಚಯ ಇದ್ದಾರೆ? ನಿಮ್ಮ ಬಾಲ ಬಡಿಯುವವರಷ್ಟೇ ಗೊತ್ತು ನಿಮಗೆ.

ಆದರೆ ಪ್ರಸನ್ನ ಅವರೇ ನಿಮ್ಮನ್ನು ಬೆಳೆಸಿ ನಮ್ಮೂರ ಜನ ಒಂದು ಕರಿನಾಗರವನ್ನು ಬೆಳೆಸಿದ್ದಾರೆ ಎಂದರೆ ನಿಜಕ್ಕೂ ತಪ್ಪಲ್ಲ. ನಿಮಗೆ ಇಬ್ಬಂದಿತನದ ದ್ವಂದ್ವಭರಿತ ವಿರೋಧಾಭಾಸದ ಗಾಳಿ ಬೀಸಿದೆ. ತುಘಲಕ್ಕನ ಹಾಗೆ. ಅದಿಲ್ಲವಾದರೆ, ನಕ್ಸಲ್ ವಾದ ಜನಪರವಾದ ವಾದ ಅದು ತಾತ್ವಿಕವಾಗಿ ಹಿಂಸೆಯನ್ನು ಒಪ್ಪುತ್ತದೆ ಎನ್ನುವ ಅರ್ಥಹೀನ ಮಾತು ಆಡುತ್ತಿರಲಿಲ್ಲ ನೀವು. ಹೌದು. ಈ ತಾತ್ವಿಕ ಒಪ್ಪಿಗೆ ಮತ್ತು ತಾತ್ವಿಕವಲ್ಲದ ಒಪ್ಪಿಗೆ ಎನ್ನುವ ಎರಡು ಪ್ರಕಾರದ ಒಪ್ಪಿಗೆ ಯಾವಾಗಿನಿಂದ ಶುರು ಅಯಿತು ಪ್ರಸನ್ನರೇ? ನಮ್ಮ ಭಗವದ್ಗೀತೆ ಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದು ನಿಮ್ಮ ಬುದ್ಧಿಜೀವಿ ಪಂಗಡದ ಯಾವನೋ ಒದರಿದ್ದ ಒಮ್ಮೆ, ಅದರದ್ದು ಯಾವ ಪ್ರಕಾರದ ಒಪ್ಪಿಗೆ ಹಾಗಾದರೆ? ತಾತ್ವಿಕವಾದದ್ದಲ್ಲವಾ?

ಮಾತು ಮಾತಿಗೆ ಬುದ್ಧ ಬುದ್ಧ ಎನ್ನುವ ನೀವು ಆ ಶಬ್ದದ ಅರ್ಥವನ್ನು ತಿಳಿದುಕೊಳ್ಳುವುದಿರಲಿ ಯೋಚಿಸಿಯೂ ಇಲ್ಲ ಎನ್ನುವುದು ಜಗಜ್ಜಾಹೀರು. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸದಿದ್ದರೆ ನೀವೆಲ್ಲಾ ಅದೇ ಗೌರವದಿಂದ ಬುದ್ಧನನ್ನು ಕಾಣುತ್ತಿದ್ದಿರಾ? ನಿಮ್ಮಪ್ಪನ ಮೇಲಾಣೆ ಇಲ್ಲ. ಸನಾತನ ಧರ್ಮವನ್ನು ಭಂಗ ಮಾಡಲೆತ್ನಿಸಿದ ಚಾರು ವಾಕ್ಕುಗಳನಾಡುತ್ತಿದ್ದ ಚಾರ್ವಾಕ ಸಿದ್ಧಾಂತದವರು ತುಸು ಮಟ್ಟಿಗೆ ಯಸಸ್ವಿಯಾಗಿದ್ದ ಹೊತ್ತಿನಲ್ಲಿ ಬುದ್ಧ ಉಪನಿಷತ್ಭಾಗವನ್ನು ಪುನಃ ಉಪದೇಶಿಸಿದ. ಬುದ್ಧ ಹೇಳಿದ ಮಾತು-"ಅಹಿಂಸಾ ಪರಮೋ ಧರ್ಮಃ" ಇದನ್ನಾತ ತಾತ್ವಿಕವಾಗಿ ಆಡಿದ್ದಲ್ಲವಾ? ತಾತ್ವಿಕವಾಗಿ ಒಂದು ಅತಾತ್ವಿಕವಾಗಿ ಒಂದು ಎನ್ನುವ ದ್ವಿಮುಖ ವ್ಯಕ್ತಿತ್ವದವನೇ ಬುದ್ಧ? ನಿಮ್ಮಪ್ಪನ ಆಣೆಗೂ ಅಲ್ಲ. ದ್ವಿಮುಖ ವ್ಯಕ್ತಿತ್ವದವ ಎಂದಿಗೂ ಬುದ್ಧನಾಗಲು ಸಾಧ್ಯವೂ ಇಲ್ಲ. ಅದೇ ಬುದ್ಧನನ್ನು ಒಪ್ಪಿದ್ದು ಅಪ್ಪಿದ್ದು ಅಂಬೇಡ್ಕರ್ ಅವರು ಹೊರತು ನೀವು ಸೃಷ್ಟಿಸಿದ ಬ್ರಾಹ್ಮಣ ವಿರೋಧಿಯನ್ನಲ್ಲ. ಬುದ್ಧ ತಾತ್ವಿಕವಾಗಿ ವಿರೋಧಿಸಿದ ಹಿಂಸೆಯನ್ನು ಇನ್ನೊಬ್ಬ ತಾತ್ವಿಕವಾಗಿಯೋ ಅಥವಾ ಇನ್ನಾವ ತರದಲ್ಲೇ ಒಪ್ಪಿದರೂ ಅದು ತರವಲ್ಲ.

ನೀವು ಆಗಾಗ ತೆಗೆದುಕೊಳ್ಳುವ ಇನ್ನೊಂದು ಹೆಸರು- "ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ" ಎಂದ ಬಸವಣ್ನನನ್ನು. ಆದರೆ ನೀವಾಡುವ ಕೆಲವು ಮಾತುಗಳನ್ನು ಕೇಳಿದರೆ, ಅವರಿಗೇ "ಇವನಾರವ ಇವನಾರವ ತನ್ನ ಹೆಸರೇ ಹಾಳು ಮಾಡುವ" ಎಂದು ತನ್ನ ವಚನವನ್ನು ಬದಲಾಯಿಸಬೇಕು ಎನ್ನಿಸುತ್ತದೆ. ಅವರು ತಾತ್ವಿಕವಾಗಿ ಹಿಂಸೆಯನ್ನು ಒಪ್ಪಿದ್ದರಾ ಹಾಗಾದರೆ?

ನಿಮ್ಮ ಕಮ್ಯೂನಿಷ್ಟರ ಪಾಲಿನ ಸಗ್ಗವೇ ಆದ ರಷಿಯಾದ ಸಾಹಿತಿ ಲಿಯೋ ಟಾಲ್ ಸ್ಟಾಯ್ ಅವರು ಗಾಂಧೀಜಿಯವರ ಅಹಿಂಸಾ ಚಳುವಳಿಯ ಹಿಂದಿನ ಪ್ರೇರಣೆ ಎಂದು ನಿಮಗೆ ತಿಳಿಯದ್ದಾ?

ಅಲ್ಲ ಸ್ವಾಮೀ, ಬದನವಾಳುವಿನಲ್ಲಿ ಏನೇನೋ ಮಾಡಿದಿರಿ. ನಿಮ್ಮನ್ನು ಬೆಳೆಸಿದ ನಮ್ಮೂರ ಸಮಸ್ಯೆಗೆ ಕಿಂಚಿತ್ತೂ ಮಿಡಿಯದ ನೀವೂ ಪರರಿಗೆ ನೋವಾಗುವುದನ್ನು ತಾತ್ವಿಕವಾಗಿ ಒಪ್ಪಿಯೇ ಅಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸದೇ ಉಳಿದದ್ದಾ ಹಾಗಾದರೆ. ಸ್ಥಳೀಯ ಜನರಾದ ನಾವು ಹೊಂದಿರುವ ಸಮಸ್ಯೆಗಳ ಸಮಾಧಾನವೋ ಪರಿಹಾರವೋ ಸಂವೇದನೆಯೋ ಇಲ್ಲದಿದ್ದರೆ ಇಲ್ಲ ಬಿಡಿ. ಹಾಳಾಗಿ ಹೋಗಲಿ. ನಮ್ಮ ಸಮಸ್ಯೆ ನಾವು ನೋಡಿಕೊಳ್ಳುತ್ತೇವೆ. ಅಲ್ಲಿನ ಜನರ ಜೊತೆಗಾದರೂ ಬೆರೆತಿರಾ ನೀವು? ಇಲ್ಲ, ಅಲ್ಲಿನ ಹವ್ಯಕ ಭಾಶೆಯನ್ನು ಎಷ್ಟು ಮಟ್ಟಿಗೆ ಮಾತಾಡಬಲ್ಲಿರಿ ನೀವು? ಇದ್ದಲ್ಲೇ ಏನನ್ನೂ ಕಡಿದು ಕಿಸಿಯದ ನೀವು ಇನ್ನು ಜಗತ್ತಿನ ಸಮಸ್ಯೆ ಕಲಿತು ಉದ್ಧಾರ.

ನೀವು ಚರಕ ಅಂತ ಮಾಡಿ ಹೆಣ್ಣು ಮಕ್ಕಳಿಗೆ ಸಂಬಳ ಕೊಟ್ಟು ಬದುಕು ಕಟ್ಟಿ ಕೊಡುತ್ತಿದ್ದೇನೆ ಅಂತ ಊರೆಲ್ಲಾ ಪೀಕಿದ ಹಣ ಎಷ್ಟು? ಅದರಲ್ಲಿ ಆ ಶ್ರಮಿಕ ಹೆಣ್ಣು ಮಕ್ಕಳಿಗೆ ನೀವು ಕೊಡುವ ಸಂಬಳ ಎಷ್ಟು? ನಿಮ್ಮಲ್ಲಿ ಕೆಲಸ ಮಾಡುವವರ ಪರಿಸ್ಥಿತಿ ಎಷ್ಟು ಮಹಾ ಸುಧಾರಿಸಿದೆ ಎಂದು ನಾವೆಲ್ಲ ನೋಡಿದವರೇ. ನಿಮ್ಮ ಸಂಸ್ಥೆ ಸೇರುವಾಗ ಅವರ ಪರಿಸ್ಥಿತಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಕಾರಣ ನಿಮ್ಮ ಕೆಂಪಂಗಿ ಬುದ್ಧಿ ಪ್ರೇರಿತ ಕಮ್ಮಂಗಿತನ. ಎಷ್ಟು ಜನ ಸ್ಥಳೀಯರನ್ನು ಬೆಳೆಸಿದ್ದೀರಾ ಸ್ವಾಮಿ ನೀವು?

ಇಷ್ಟಕ್ಕೂ ನೀವು ಕೆಲಸ ಕೊಟ್ಟು ಆ ಹೆಣ್ಣು ಮಕ್ಕಳ ಬದುಕೇನು ಹಸನಾಗಿದ್ದಲ್ಲ. ಅವರ ಮನೋಭಾವ ಅವರು ನಿಮ್ಮಲ್ಲಿಗೆ ಬಂದು ಕೆಲಸ ಮಾಡುವಂತೆ ಮಾಡಿತು. ನೀವಂತೂ ಥಳುಕ್ಕು ಬಳುಕಿನ ಕನಸು ತೋರಿಸಿದಿರಿ. ಅವರು ಅದನ್ನು ನಂಬಿದರು. ಆದರೆ ಅವರಾಡುತ್ತಿದ್ದ ಮನೆಯ ಅಂಗಳದಲ್ಲಿ ಅಡಿಕೆ ಕೊಳೆಯತೊಡಗಿತ್ತು, ಸುಲಿಯುವ ಜನರಿಲ್ಲದೆ. ನೀವು ಕಾಲಿಡುವ ಮುನ್ನ ನಮ್ಮೂರಿನ ಜನ ಏನು ಉಪವಾಸ ಇರಲಿಲ್ಲ. ಹಾಗಾಗಿ ನಾನು ಉದ್ಧಾರ ಮಾಡಿದ್ದೇನೆ ಎನ್ನುವ ಸ್ವಯಂಪ್ರಶಂಸೆಯ ಮಾತುಗಳನ್ನಾಡುವುದು ಬಿಡಿ.

ಹೌದು. ನಿಮ್ಮ ಕವಿ ಕಾವ್ಯ ಮಗ್ಗದಿಂದ-ಚರಕ ಅಂಗಡಿಯ ಮಧ್ಯೆ, ಇದ್ದ ಸಾರಾಯಿ ಅಂಗಡಿ ನಿಮ್ಮ ಕಣ್ಣಿಗೇಕೆ ಬೀಳಲಿಲ್ಲವೋ ಏನೋ. ಬಸ್ಸಿನಲ್ಲಿ ಓಡಾಡದೆ, ನಡೆದುಕೊಂಡು ಓಡಾಡುತ್ತಿದ್ದ ಆ ಹೆಣ್ಣು ಮಕ್ಕಳು ಓಡಾಡುವ ಊರಿಗೆ ಒಂದು ಬಸ್ ಬಿಡುವ ಆಲೋಚನೆ ಯಾಕೆ ಬರಲಿಲ್ಲ ನಿಮ್ಮ ಬುದ್ಧ ಪ್ರೇರಿತ ತಾತ್ವಿಕ ಹಿಂಸಾ ಸಮ್ಮತಿಯ ಮನಃಸ್ಥಿತಿಗೆ? ನಿಮಗೆ ನಮ್ಮೂರ ಜಾಗ ಬೇಕಾಯಿತು. ಆದರೆ ಅಲ್ಲಿನ ಸ್ಥಳೀಯ ವಸ್ತುಗಳಾದ ಅಡಿಕೆ ಹಾಳೆಯ ಉತ್ಪನ್ನ, ಹಲಸು, ಇನ್ನಿತರ ಹಣ್ಣುಗಳು, ಇವನ್ನೆಲ್ಲಾ ಯಾಕೆ ಉಉಪಯೋಗಿಸಲಿಲ್ಲ ಎನ್ನುವುದು ನೀವುಗಳು ನಂಬದ ಭಗವಂತನಿಗೇ ಗೊತ್ತು. ಬಾಳೆಯ ನಾರಿನಿಂದ ಉತ್ಕೃಷ್ಟವಾದ ನಾರನ್ನು ತೆಗೆದು ಬಟ್ಟೆ ಮಾಡಬಹುದು. ನಿಮ್ಮ ತಾತ್ವಿಕ ತಲೆ ಇದಕ್ಕೇಗೆ ಓಡಲಿಲ್ಲವೋ ಏನೋ.

ಬಂಡವಾಳ ಶಾಹಿಗಳು ವ್ಯಾಪಾರ ಮಾಡುತ್ತಾ ತಾವೂ ಉದ್ಧಾರವಾಗುತ್ತಾ ಮತ್ತೊಬ್ಬರೂ ಉದ್ಧಾರವಾಗುತ್ತಾರೆ. ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ನತನೆ ಮಾಡುವವರನ್ನು ಬಳಸುತ್ತಾರೆ. ಆದರೆ ನೀವು? ನೀವೇ ನಾಟಕ ಮಾಡುತ್ತೀರಿ. ಸಿದ್ಧಾಂತದ ಹೊದಿಕೆಯಲ್ಲಿ ಬೆಚ್ಚಗೆ ಕುಳಿತು ಬೇರೆಯವರು ಬೆತ್ತಲೆ ಆಗಬೇಕು ಎನ್ನುತ್ತೀರಿ. ಯಾರೂ ನಿಮ್ಮ ಹಾಗೆ ಸಿದ್ಧಾಂತದ ಸೋಗು ಹಾಕಿ ವ್ಯಾಪಾರ ಮಾಡುವುದಿಲ್ಲ ಸ್ವಾಮಿ, ಅವರು ದುಡ್ಡು ಹಾಕಿ ಉದ್ಯೋಗ ಕೊಟ್ಟು ವ್ಯಾಪಾರ ಮಾಡುವ ಬಂಡವಾಳಷಾಹಿಗಳು. ನೀವು- ವೇಷ ಹಾಕಿ ದುಡ್ಡು ಪೀಕಿ ಜೀವನ ಮಾಡುವ ನಂತರ ಆ ದುಡ್ಡು ಕೊಟ್ಟವನನ್ನೇ ಹಳಿಯುವ 'ಭಂಡ' ನಿವಾಳ ಸಾಯಿತಿಗಳು. ಇಷ್ಟೇ ವ್ಯತ್ಯಾಸ. ಇನ್ನಾದರೂ ನಾಟಕ ಬಿಡಿ. ಕೊಲೆಗಡುಕರನ್ನು ಬೆಂಬಲಿಸಿದ್ದಕ್ಕೆ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ.