Monday, December 3, 2018

ವರದಕ್ಕನ ವರಾತಗಳು (ಪ್ರಸಂಗ 3)

[ಇಲ್ಲಿಯವರೆಗೆ: ಚಹಾ ಮಾಡುವುದರಲ್ಲಿ ಸಿದ್ಧಿ ಪ್ರಸಿದ್ಧಿ ಪ್ರಚಾರ ಮೂರನ್ನೂ ಪಡೆದಿದ್ದ ವರದಕ್ಕ ತನ್ನ ಪ್ರಸಿದ್ಧಿಗೆ ಮಗ ಕಾಪಿ ಕುಡಿದು ಕುತ್ತು ತಂದರೆ ಎನ್ನುವ ಭಯದಿಂದ ಆತನಲ್ಲಿ ಒದು ರೀತಿಯ ಭಯವನ್ನು ಹುಟ್ಟಿಸಿದಳು. ನಂತರದಲ್ಲಿ ವರದಕ್ಕ ಇದಕ್ಕೆ ಪಶ್ಚಾತ್ತಾಪ ಪಟ್ಟಳು. ಅದಕ್ಕೆ ಪ್ರಾಯಶ್ಚಿತ್ತವನ್ನು ಯೋಚಿಸುತ್ತಿದ್ದ ಹೊತ್ತಿನಲ್ಲಿ ಅವಳ ಸೋದರ ಮಾವನ ಮಗ ತನ್ನ ಮಗನ ಮದುವೆಗೆ ಕರೆಯೋಲೆ ಕೊಟ್ಟ. ಸೋದರ ಮಾವನ ಮನೆಯಲ್ಲಿನ ಮದುವೆ ಸಂವರಣಿಗೆಯನ್ನು ಹೊರಟ ವರದಕ್ಕನ ಸವಾರಿ ಹೂತನ್ ಜಾನ್ಮನೆಯ ಬದಲು ಅಮ್ಮೆನಳ್ಳಿ ಜಾನ್ಮನೆಯನ್ನು ಸೇರಿ ನಂತರ ಅವಳ ಚಿಕ್ಕಮ್ಮನ ಮಗಳು ಜಲಜಾಕ್ಷಿಯ ಸಂಗಡ ಹೂತನ್ ಜಾನ್ಮನೆಗೆ ಚಿತ್ತೈಸಿತು]

ಸೋದರ ಮಾವನ ಮನೆ ಸೇರಿದ ವರದಕ್ಕನನ್ನು ಅವರೆಲ್ಲರೂ ಪ್ರೀತಿ ಆದರ ಸಡಗರದಿಂದಲೇ ಉಪಚರಿಸಿದರು. ವರದಕ್ಕ ಒಂದೊಂದು ತಯಾರಿಯನ್ನೂ ಕೂಲಂಕುಶವಾಗಿ ನೋಡಿ ಸಂತೋಷ ಪಟ್ಟು "ಚೊಲೋ ಆಜು" ಎಂದೆನ್ನುತ್ತಾ ಸಂಭ್ರಮಿಸಿದ್ದಳು. ನಂತರ ನೀಲಕಂಠನ ಹೆಂದತಿ ಕಲಾವತಿ, ಬಂಗಾರದಾಭರಣಗಳನ್ನು ತೋರಿಸಲು ವರದಕ್ಕನನ್ನು ಕರೆದಳು. ವರದಕ್ಕ, ಜುಮಕಿ ಬೆಂಡೋಲೆ, ತಾಳಿ ಸರ, ಬಳೆ ಎಲ್ಲವನ್ನೂ ನೋಡಿ ಸಂತಸ ಪಟ್ಟಳು. ಅಷ್ಟರಲ್ಲಿ ಕಲಾವತಿಗೆ ಜವಳಿ ತೋರಿಸದೇ ಇದ್ದಿದ್ದು ನೆನಪಾಯಿತು. "ಅಯ್ಯೋ!! ರಾಮನೇ!! ಆನೆಂತಾ ಮಳ್ಳಾಗಿಕ್ಕು!! ಸೀರೆ ತೆಗೆದು ತೋರ್ಸಿದ್ನೇ ಇಲ್ಯೆಲೇ!! ತಡ್ಯೇ ತೆಗದು ತೋರಸ್ತಿ." ಎಂದಳು. ವರದಕನೂ ಮಾತು ಸೇರಿಸಿದಳು "ಇಶಿ ಮಳ್ಳೆಯ. ಆನೂ ಕೇಳಕ್ಕು ಮಾಡಿಗಿದ್ದಿ. ಮರ್ತೇ ಹೋಯ್ದು. ಸೀರೆ ತೆಗದು ತೋರ್ಸೇ" ಎಂದಳು. ಜೊತೆಗಿದ್ದ ಜಲಜಾಕ್ಷಿ ಕೂಡಾ " ಹೌದೇ!! ಮದುವೆ ಮನೆ ಸಂವರಣಿಗೆ ನೋಡವ್ವು ಹೇಳಿ ಬಂಜ್ಯ. ನೀ ಸೀರೆ ತೆಗದ್ ತೋರ್ಸದೇ ಸೈ" ಎಂದಳು. ಮೂರು ಹೆಂಗಸರು ಸೇರಿದ ಮೇಲೆ ಸಣ್ಣ ಧ್ವನಿಯ ಮಾತು ಅದೆಲ್ಲಿ? ಇದೆಲ್ಲವೂ ಹೊರಗಿದ್ದ ಸದಾಶಿವನಿಗೆ ಕೇಳಿಸಿತು. ಆತ "ಬಾಗ್ಲ್ ಹಾಕ್ಯಳ್ರೇ" ಎಂದ. ಪರಿಣಾಮವಾಗಲಿಲ್ಲ. ಆಗ ತನ್ನ ಮಗಳು ಸಿಂಚನಾಳನ್ನು ಕಳಿಸಿದ. ಅವಳು ಬಂದು "ದೊಡ್ಡಾಯಿ!! ಕಾಕಂಗೆ ನಿದ್ದೆ ಮಾಡವ್ವಡ. ನಿಂಗವ್ವು ಬಾಗ್ಲು ಹಾಕ್ಕಂಡು ನೋಡವ್ವಡ" ಎಂದಳು. ಎಂದವಳೇ ದೊಡ್ದ ಧ್ವನಿಯಲ್ಲಿ ನಗತೊದಗಿದ್ದಳು. ಯಾರ್ ಬಂದು ಕೇಳಿದರು. "ಎಂತಾತೇ?"

"ಕಾಕ ಅತ್ತೆ ಅವಕ್ಕೆ ದೊಡ್ದಾಯಿಗೆ ಮತ್ತೆ ಅತ್ತಿಗೆ ಬಾಗ್ಲ್ ಹಾಕ್ಕಂಡ್ ಸೀರೆ ತೆಗೆದು ನೋಡ್ಕಳಿ" ಅಂದ ಎನ್ನುತ್ತಾ ಮತ್ತೂ ದೊಡ್ದದಾಗಿ ನಕ್ಕಳು. ಉಳಿದವರೂ ಎಲ್ಲ ಅವಳ ಜೊತೆ ನಗು ಸೇರಿಸಿದರು. ಮಾತುಉ ನಗು ಹರಟೆಗಳು ಮುಂದುವರೆದವು. ಅಷ್ಟರಲ್ಲಿ ಯಾರಿಗೋ ಚಹಾ ನೆನಪಾಯಿತು. ವರದಕ್ಕನಿದ್ದಂತೆ ಮತ್ತೊಬ್ಬರು ಚಹಾ ಮಾಡುವುದೇ? ಘೋರ ಅಪಮಾನ-ಚಹಾಕ್ಕೆ-ವರದಕ್ಕನಿಗೆ ಇಬ್ಬರಿಗೂ. ಹಾಗಾಗಿ ವರದಕ್ಕನೇ ಚಹಾ ಮಾಡಿದಳು.

"ಮದ್ವೇಲಿ ಚಾಕ್ಕೆ ವ್ಯವಸ್ಥೆ ಮಾಡ್ಶಿದ್ಯೇನೋ ಭಾವ" ಎಂದ ಪಕ್ಕದ ಮನೆಯಿಂದ ಆಗಷ್ಟೇ ಬಂದ ಮಾಬ್ಲೇಸ್ರ.

"ಹೇಳಿದ್ದೆ. ಯಂಗಳ ಬದಿಗೆ ಚಾನೇ ಸೈ. ಕಾಪಿ ಕುಡ್ಯವ್ವು ಇಲ್ದೇ ಇಲ್ಲೆ. ನಿಂಗವ್ವು ಒಳ್ಳೆ ಚಾ ಮಾಡ್ಸವ್ವು ಹೇಳಿ." ಎಂದ ನೀಲಕಂಠ

ಸದಾಶಿವ ಎಂದ " ಅಪರೂಪಕ್ಕೆ ಸಾಗರ ಬದಿಗೆ ಹೋಗಾಗಿರ್ತು. ಯಾರದ್ದಾರು ಮನೇಲಿ ಕಾಪಿ ಕುಡ್ಯವ್ವು ಹೇಳಲೆ ಬಿಡಿಯ ಆಗ್ತು. ಮದ್ವೆ ಮನೆ ಹೇಳ್ಕೆಲಿ ಸಮಾ ಜಡ್ದ್ ಕಾಪಿ ಕುಡ್ಯ ಬಿಡ ಮಾಬ್ಲೇಸ್ರ"

" ಯಾವಾಗ್ಲೂ ಚಾ ಕುಡ್ಯವಕ್ಕೆ ಕಾಪಿ ಕುಡದ್ರೆ ತಡಿತಿಲ್ಯ. ಹೊಟ್ಟೆ ನೋವು ಬತ್ತು"

"ಜೀರಿಗೆ ತಿಂದ್ರಾತಪ" ಎಂದ ಸದಾಶಿವ ನಗುತ್ತಾ.

ಅಷ್ಟರಲ್ಲಿ ವರದಕ್ಕನ ಅಮೃತ ಹಸ್ತದಲ್ಲಿ ತಯಾರಾದ ಚಹಾ ಬಂತು, ಚೂಡಾದೊಂದಿಗೆ. ಎಲ್ಲರಿಗೂ ಚಹಾ ಸೇವನೆಯಾಯಿತು. ವರದಕ್ಕನನ್ನು ಜಲಜಾಕ್ಷಿ ತನ್ನ ಜೊತೆ ಕರೆದೊಯ್ದು ಮತ್ತೆ ಬಸ್ ಸ್ಟ್ಯಾಂಡಿಗೆ ಬಿದದೆ ಅವಳ ಮನೆತನಕ ಕರೆದೊಯ್ದು ಬಿಟ್ಟುಕೊಟ್ಟು ತನ್ನ ಮನೆಗೆ ಹೋದಳು.

ಅಕಾ ಇಕಾ ಎನ್ನುವಷ್ಟರಲ್ಲಿ ಮದುವೆಯ ದಿನ ಬಂತು. ವರದಕ್ಕ ಜಲಜಾಕ್ಷಿ ಮತ್ತು ಗಿರಿಜಾ ದಿಬ್ಬಣದ ಬಸ್ಸೇರಿ ವರದಾಮೂಲಕ್ಕೆ ಬಂದಿಳಿದರು. ಅಲ್ಲಿ ಹೆಣ್ಣಿನ ಕಡೆಯಿಂದ ಗಿರಿಜಾಳ ದೂರದ ಬಂಧು ವೆಂಕಟೇಶ ಬಂದಿದ್ದ. ಆತನೊಂದಿಗೆ ಮಾತಾಡುತ್ತಾ ದೇವಸ್ಥಾನ ನೋಒಡುವ ಕಾರ್ಯಕ್ರಮವೂ ಜರುಗಿತು.

"ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ್ದು ಇಲ್ಲೇಯಾ" ಎಂದಳು ಜಲಜಾಕ್ಷಿ

"ಅಲ್ಲ. ಅದು ವದ್ದಳ್ಳಿ. ಇದು ವರದಾಮೂಲ. ಇದು ವರದಾ ನದಿ ಹುಟ್ಟ ಜಾಗ. ಅಲ್ಲಿ ಒಳಗಿದ್ದಲ ದೇವಿ ಅದೇ ವರದಾಂಬೆ. ಇದೋ ಇಲ್ನೋಡು ಸೂರ್ಯ ನಾರಾಯಣ. ಅವನ್ ಅಪ್ರಭಾವಳಿ ಮೇಲೆ ಉಳಿದ ಎಂಟು ಗ್ರಹ ಇದ್ದು ನೋಡು. ಪಕ್ಕಕ್ಕೆ ರಾಮೇಶ್ವರ. ಅವನ ಪಕ್ಕದಲ್ಲಿ ವೀರಭದ್ರ. ಅಲ್ಲೇ ಪಕ್ಕದಲ್ಲಿ ಶಂಭುಲಿಂಗೇಶ್ವರ. ಅಲ್ಲಿ ನೊಡು ಅನ್ನ ಪೂರ್ಣೇಶ್ವರಿ"

"ಎಷ್ಟು ಪುಟೀಕಿದ್ದು ಅನ್ನಪೂರ್ಣೇಶ್ವರಿ ದೇವ್ರು" ಎಂದಳು ಗಿರಿಜಾ

"ಅಲ್ಲಿ ನೋಡು ಕಲ್ಲಿನ ಹೋಮದ ಹುಟ್ಟು. ಎಷ್ಟು ದೊಡ್ಡಕಿದ್ದು. ಭರತ ಮುನಿ ಇಲ್ಲಿ ಯಜ್ಞ ಮಾಡಿದಾಗ ಇದರಲ್ಲೇ ತುಪ್ಪ ಹಾಕಿದ್ನಡ. ಅದು ಲಕ್ಷ್ಮೀ ತೀರ್ಥ, ಅದು ಸದಾಶಿವ ದೇವಸ್ಥಾನ". ಎಂದು ಒಳಗಿನ ಪ್ರಾಂಗಣವನ್ನೆಲ್ಲಾ ತೋರಿಸಿದ. ನಂತರ ಹೊರಬಂದು, "ಇದೇ ನೋಡು ವರದಾ ತೀರ್ಥ. ವರದಾ ನದಿ ಹುಟ್ಟದು ಇಲ್ಲೇ. ಅಲ್ಲಿದ್ದಲ ಶಣ್ಣ ಗುಡಿ, ಅದು ವರದೇಶ್ವರ. ಶ್ರೀಧರ ಸ್ವಾಮಿಗಳು ಅದನ್ನ ಗುರುತು ಹಿಡಿದು ಅದಕ್ಕೆ ವರದೇಶ್ವರ ಅಂತ ಕರೆದ. ಇಲ್ಲಿ ನೋಡು ಗಣಪತಿ, ಜಪದ ಸರ ಹಿಡ್ಕಂಡ ಅಪರೂಪದ ಗಣಪತಿ ಇದು" ಎಂದು ತೋರಿಸಿದ.

"ವರದಕ್ಕನ ಬುಡ ಇಲ್ಲೇಯಾ" ಎಂದಳು ಜಲಜಾಕ್ಷಿ ನಗುತ್ತಾ. ಉಳಿದವರೂ ನಗು ಸೇರಿಸಿದರು.

ನಂತರ ಅಲ್ಲಿಂದ ಬಲಕ್ಕೆ ಕರೆದುಕೊಂಡು ಹೋಗಿ "ಅಗ್ನಿ ತೀರ್ಥ, ಇದರಲ್ಲಿ ಸ್ನಾನ ಮಾಡಿರೆ ಚರ್ಮ ರೋಗ, ಮೈ ಮೇಲೆ ಬರದು ಎಲ್ಲಾ ಹೊಗ್ತು, ಇದು ಗೋಪಾಲಕೃಷ್ಣ. " ಎಂದು ಎಲ್ಲವನ್ನೂ ತೋರಿಸಿದ.

ವರದಕ್ಕನಿಗೆ ಒಂದು ಅನುಮಾನ ಹೊಕ್ಕಿತು. ತೀರಿಸಿಕೊಂಡು ಬಿಟ್ಟಳು. "ವರದಾ ನದಿ ನಮ್ಮ ಬನವಾಸೆಲಿ ಹರಿತು. ಲಕ್ಷ್ಮೀ ನದಿ, ಅಗ್ನೀ ನದಿ ಎಲ್ಲಿ ಹರಿತು. ಎಲ್ಲೂ ಕೇಳಿದ್ವೇ ಇಲ್ಲೆ."

ಜಲಜಾಕ್ಷಿ ಮಾತು ಸೇರಿಸಿದಳು "ಸರಸ್ವತೀ ನದಿ ಹರೀತಲ ಹಾಂಗೇ ಗುಪ್ತವಾಗಿ ಹರೀತಿಕ್ಕು ತಗ"

"ಎಂತಕ್ಕೆ ಹಿಂಗೆ ಕೇಳಿದ್ಯೇ ವರದಕ್ಕ" ಎಂದ ವೆಂಕಟೇಶ.

"ವರದಾ ತೀರ್ಥದಲ್ಲಿ ವರದಾ ನದಿ ಹುಟ್ಟಿದ್ದು ಅಂದಮೇಲೆ ಲಕ್ಷ್ಮೀ ತೀರ್ಥದಲ್ಲಿ ಲಕ್ಷ್ಮೀ ನದಿ ಹುಟ್ಟವ್ವಲ್ದೋ! ಅಗ್ನಿ ತೀರ್ಥದಲ್ಲಿ ಅಗ್ನಿ ನದಿ ಹುಟ್ಟವಲ್ದೋ." ವೆಂಕಟೇಶನಿಗೂ ಡೌಟ್ ಹತ್ತಿಬಿಟ್ಟಿತು. ಶಂಕರ ಭಟ್ಟರು ಸಿಕ್ಕಿದಾಗ ಕೇಳಿದರಾಯ್ತು ಎಂದುಕೊಂಡ.

ಮತ್ತೆ ಎಲ್ಲರೂ ಕಲ್ಯಾಣ ಮಂಟಪದತ್ತ ಬಂದರು. ಅಲ್ಲಿ ಆಸರಿಗೆ ಕೊಡುವಲ್ಲಿ ಒಬ್ಬ ಫ್ರೆಶ್ ಕಾಪಿ ಮಾಡುತ್ತಿದ್ದ. ವರದಕ್ಕನ ಗಮನವೆಲ್ಲಾ ಆ ಕಡೆಗಿತ್ತು. ಆತ ಕಾಪಿ ಡಿಕಾಕ್ಷನ್ ಹಾಕಿ ನಂತರ ಹಾಲು ಸೇರಿಸುತ್ತಿದ್ದ. ಅದನ್ನು ಗಮನವಿಟ್ಟು ನೋಡಿದ್ದಷ್ಟೇ ಅಲ್ಲ, ಪ್ರಕ್ರಿಯೆಯನ್ನು ಮನದಲ್ಲೇ ಮಂತ್ರದಂತೆ ಮಣಮಣಿಸಿದಳು-"ಕಾಪಿ ಕಣ್ಣು ತೆಕ್ಕಂಡು ಅದನ್ನ ತಣಸ್ಕಂಡು ಆಮೆಲೆ ಬೆಶಿ ಹಾಲು ಹಾಕವ್ವು".

ಮತ್ತೆ ದಿಬ್ಬಣದ ಬಸ್ಸೇರಿ ಮನೆ ಸೇರಿದ ವರದಕ್ಕ, ಗಪ್ಪತಿ ಭಾವನಿಗೆ ಕಾಪಿ ಹಿಟ್ಟು ತರುವಂತೆ ತಾಕೀತು ಮಾಡಿದಳು. ತರದೇ ಇರಲಾದೀತೇ? ತಂದ.

ವರದಕ್ಕ ಕಾಪಿ ಪುಡಿಯನ್ನು ನೀರಿಗೆ ಹಾಕಿ ಒಲೆಯ ಮೇಲಿಟ್ಟು ಕೊತಕೊತನೆ ಕುದಿಸಿದಳು. ಅದು ಮಂದವಾಗಿ ಕಣ್ಣು ತಯಾರಾಯಿತು. ಅಷ್ಟರಲ್ಲಿ ಜಾನ್ಮನೆಯ ಸೋದರ ಮಾವನ ಮನೆಯಲ್ಲಿ ನಡೆದ ಮಾತು ಕತೆ ನೆನಪಾಯಿತು. ಸದಾಕಾಲ ಚಹಾ ಕುಡಿಯುವವರಿಗೆ ಕಾಪಿ ಕುಡಿದರೆ ಹೊಟ್ಟೆ ನೋವು ಬರುವ ಸಾಧ್ಯತೆ ಇರುವುದೂ, ಜೀರಿಗೆ ಅದಕ್ಕೆ ಔಷಧ ಎನ್ನುವುದೂ ನೆನಪಾಗಿ, ತಯಾರಾಗಿದ್ದ ಕಣ್ಣಿಗೆ ಜೀರಿಗೆ ಹಾಕಿ ಮತ್ತಷ್ಟು ಕುದಿಸಿದಳು. ಅದು ತಣಿಯುವುದನ್ನೇ ಕಾಯ್ದು, ಅದಕ್ಕೆ ಹಾಲು ಸೇರಿಸಿದಳು.

ಸಡಗರದಮಿತ ಸಂಭ್ರಮದಿಂದ ಕಾಪಿಯನ್ನು ಬಾಯಿಗಿಟ್ಟ ವರದಕ್ಕ, ಮನೋವೇಗ ವಾಯುವೇಗಗಳನ್ನೂ ಮೀರಿ ಕಾಪಿಯನ್ನು ಅದೇ ಲೋಟಕ್ಕೆ ತುಪ್ಪಿ "ಇಶ್ಶಿಶ್ಶೀ" ಎಂದಳು.

ಅವಳು ಇಶ್ಶಿಶ್ಶೀ ಎಂದ ಪರಿಗೆ ಗಿರಿಜಾ ಗಾಭರಿಗೊಂಡು ಅಡುಗೆ ಮನೆಗೆ ಬಂದು "ಎಂತಾತೇ" ಎಂದಳು.

"ಕಾಪಿ ಮಾಡಿದಿದ್ದಿ. ಬಾಯ್ಗೆ ಹಾಕ್ರೆ ಮಡ್ ಮಡ್ಡಿ" ಎಂದಳು.

"ಅಯ್ಯೋ ವರದಕ್ಕನೇ. ಕಾಪಿ ಮಾಡದು ಹಾಂಗಲ್ದೇ. ಫಿಲ್ಟರಿಗೆ ಹಾಕಿ ಮಾಡವ್ವು. ನೀ ರಾಜಿ ಮನೇಲಿ ನೋಡಿದ್ದಿಲ್ಯೋ" ಎಂದಳು.

"ಅಯ್ಯೋ ಆನ್ ನೋಡಿದ್ನೇ ಇಲ್ಯೇ. ನಿಂಗೆ ಬತ್ತೋ?" ಎಂದಳು ವರದಕ್ಕ.

" ನೀ ಬಂಗಾರದಂಥಾ ಚಾ ಮಾಡಕ್ಕಿದ್ರೆ ನಾ ಎಂತಕ್ಕೆ ಕಾಪಿ ಮಾಡದು ಕಲಿಯವ್ವೇ" ಎಂದಾಗ ವರದಕ್ಕ ಮತ್ತೆ ಸಂತೋಶಿಸಿದ್ದಳು.

ಆದರೆ ಅವಳಿಗೆ ಮಗನ ವಯೋಸಹಜ ಆಸೆಯೊಂದನ್ನು ಮೊಳೆಯುವ ಮುನ್ನವೇ ಚಿವುಟಿದ್ದಕ್ಕೆ ಮತ್ತದಕ್ಕೆ ತಾನು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದಕ್ಕೆ ಬೇಸರ ಹೆಚ್ಚಾಯಿತು. ಹೀಗೆ ಬೇಸರದಲ್ಲಿದ್ದಾಗಲೇ ಮಗ ಫೋನ್ ಮಾಡಿದ. ವರದಕ್ಕ ಮಾತಾಡುತ್ತಾ ಆಡುತ್ತಾ, ಕಾಲೇಜಿನ ಕ್ಯಾಂಟೀನ್ ಬಗ್ಗೆ ವಿಚಾರಿಸಿದಳು. "ಆಯೀ ಚಾ ಸಿಗ್ತಿಲ್ಯೇ ಗನಾಗಿ ಇಲ್ಲಿ. ಆನು ಕಾಪಿ ಕುಡಿತೆ ದಿನಾ ಆಸ್ರಿಗೆ" ಎಂದ. ವರದಕ್ಕನಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಕಾಪಿ ಮಾಡುವುದರಲ್ಲಿ ಆಗಿದ್ದ ಸೋಲು, ಅವಳಲ್ಲಿ ಕಾಪಿಯ ಕುರಿತು ಒಂದು ಛಲ ಹತ್ತಿಬಿಟ್ಟಿತು. ಕಾಲ ಮುಂದೆ ಸಾಗುತ್ತಲೇ ಇತ್ತು.

(ಮುಂದುವರೆಯುವುದು)
#ವರದಕ್ಕನ_ವರಾತಗಳು

Monday, November 26, 2018

ವರದಕ್ಕನ ವರಾತಗಳು (ಪ್ರಸಂಗ 2)

[ಇಲ್ಲಿಯವರೆಗೆ:

ಶಿರಸಿ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಹುಟ್ಟಿ ಅದೇ ತಾಲ್ಲೂಕಿನಲ್ಲಿ ಮದುವೆಯಾದ ವರದಕ್ಕ ಚಹಾ ಮಾಡುವುದರಲ್ಲಿ ಪರಿಣಿತಿ ಮತ್ತು ಪ್ರಸಿದ್ಧಿ ಎರಡನ್ನೂ ಸಾಧಿಸಿದ್ದಳು. ಇದರಿಂದ ಚಹಾ ಎನ್ನುವುದು ವರದಕ್ಕನ ಗುರುತಾಗಿದ್ದಷ್ಟೇ ಅಲ್ಲ, ಅವಳ ಅಸ್ಮಿತೆಯೂ ಆಯಿತು. ಆದರೆ ಈ ಅಸ್ಮಿತೆಗೆ ತನ್ನದೇ ಮಗ ವಿನಯನಿಂದ ಪೆಟ್ಟು ಬಿದ್ದರೆ ಎನ್ನುವ ಅಸಂಗತ ಆತಂಕಕ್ಕೊಳಗಾದ ವರದಕ್ಕ ಆತನ ತಲೆಯಲ್ಲಿ ಕಾಫಿಯ ಕುರಿತಾಗಿ ಒಂದು ರೀತಿಯ ಅವ್ಯಕ್ತ ಭಯವನ್ನು ಬಿತ್ತಿದ್ದಳು.]

ಮಗನನ್ನು ಬಸ್ಸಿಗೆ ಹತ್ತಿಸಿ ಬೆಂಗಳೂರಿಗೆ ಕಳಿಸಿ ಮನೆಗೆ ಬಂದ ವರದಕ್ಕ ಆತಂಕ-ಭಯ-ಕೀಳರಿಮೆ-ಮೇಲರಿಮೆಯ ಭಾವನೆಗಳಿಂದ ಕೂಡಿದ ಸಂಕೀರ್ಣ ಮನಃಸ್ಥಿತಿಯಲ್ಲಿ ತೊಳಲಾಡುತ್ತಿದ್ದಳು. ಚಾ ತನ್ನ ಗುರುತಾಗಿ ತನ್ನನ್ನು ಪ್ರಸಿದ್ಧವಾಗಿಸಿದ್ದಕ್ಕೆ, ತನ್ನ ಕುರಿತಾದ ಒಂದು ಪ್ರತೀತಿಯಾಗಿದ್ದಕ್ಕೆ ಮೇಲರಿಮೆಯಿದ್ದರೆ, ತನಗೆ ಕಾಪಿ ಮಾಡಲು ಬರದೇ ಇದ್ದಿದ್ದಕ್ಕೆ ಕೀಳರಿಮೆ. ಜೊತೆಯಲ್ಲಿ ತಾನು ತನ್ನ ಆ ಕೀಳರಿಮೆಯನ್ನು ಮಗನಿಗೆ ತಿಳಿಸದೆಯೇ ಅವನಲ್ಲಿ ಸುಳ್ಳೊಂದನ್ನು ಹೇಳಿ ಆ ಸುಳ್ಳು ನಿಜವಾಗಿಬಿಟ್ಟರೆ ಎನ್ನುವ ಭಯ ಹಾಗೂ ತನ್ನ ಸುಳ್ಳೆಲ್ಲಾದರೂ ಹೊರಬಿದ್ದರೆ ಎನ್ನುವ ಆತಂಕ. ಇದೀಲದರ ಜೊತೆ ತನಗಿದ್ದ "ಚೊಲೋ ಚಾ ಮಾಡ್ತು ವರದಕ್ಕ" ಎನ್ನುವ ಪ್ರಸಿದ್ಧಿಗೆ ಕುಂದಾದರೆ ಎನ್ನುವ ಕಳವಳ ಎಲ್ಲವೂ ಸೇರಿ ವರದಕ್ಕನೊಳಗೊಂದು ತೊಳಲಾಟವನ್ನು ಉಂಟು ಮಾಡಿದ್ದವು.

" ಅಯ್ಯೋ! ಯಮ್ಮನೆ ತಮ್ಮ ಇನ್ನೂ ಶಣ್ಣಂವ. ಪಾಪ ಎಂತೆಂತ ಆಸೆ ಇರ್ತೋ ಏನೋ. ಅಂವ ವಾಂದ್ ಲೋಟ ಕಾಪಿ ಅಲ್ಲಿ ಕುಡದ್ರೆ ಎನ್ನ ಹೆಸರೆಂತ ಹಾಳಾಗ್ತಿಲ್ಲೆ, ಸ್ವಕಾಗಿ ಅವಂಗೆ ಕಾಪಿ ಕುಡಿಯಡ ಅಂತ ಹೆದರ್ಶಿಗಿದ್ದಿ. ಪಾಪಲ್ದೋ. ಅಂವ ಅಲ್ಲಿ ಬೆಂಗಳೂರಲ್ಲಿ ಕಾಪಿ ಕುಡದ್ರೆ ನೋಡವ್ವು ಹೆಂಗೂ ಯಾರೂ ಇರ್ತಿದ್ವಿಲ್ಲೆ. ಇನ್ನು ನೋಡಿ ಊರಲ್ಲಿ ಹೇಳಿರೂ ಎಂತೂ ಆಗ್ತಿಲ್ಲೆ. ಆನ್ ಹೇಳ್ತೆ.. " ಹೊರಗಡೆ ಇಪ್ಪ ಹುಡ್ರು.. ಈಗ ದೊಡ್ಡಾಜ ನಾವು ಹಾಂಗೆಲ್ಲ ಹೇಳಲೆ ಬತ್ತಿಲ್ಲೆ" ಅಂತ ಸಮಝಾಯಿಷಿ ಕೊಡಲೆ ಬತಿತ್ತು. ತಮ್ಮನ ಆಸೆಗೆ ಆನು ಕಲ್ಲು ಹಾಕಿಗಿದ್ದಿ. ತಪ್ಪಾಜು" ಎಂದು ಅದೆಷ್ಟೋ ಬಾರಿ ಕೊರಗಿ ಬಿಟ್ಟಳು ಕೂಡಾ.

ಇಷ್ಟರಲ್ಲಿ ವರದಕ್ಕನ ಸೋದರ ಮಾವನ ಮಗ, ನೀಲಕಂಠ ಭಾವ ಆಕೆಯ ಮನೆಗೆ ತನ್ನ ಮಗನ ಮದುವೆಯ ಹೇಳಿಕೆಯಲ್ಲಿ ಬಂದ. ಫಾರಿನ್ನಿನಲ್ಲಿರುವ ತನ್ನ ಸೋದರ ಮಾವನ ಮೊಮ್ಮಗನ ಮದುವೆಯ ಕುರಿತು ಸ್ವಲ್ಪ ಹೆಚ್ಚೇ ಕಾತರಳಾಗಿದ್ದಳು ವರದಕ್ಕ. " ಅಲ್ದೋ ಮತ್ತೆ!! ಆ ಮಾಣಿನ ಆನು ಎತ್ತಿ ಆಡ್ಸಿದ್ನಿಲ್ಯೋ?! ಆನು ಅವನಮನೆ ಆಯಿ ಹಂಗೇ ಅಲ್ದೋ?! ಅವನೂ ಯನ್ನ ರಾಶಿ ಹಚ್ಕಂಡಿಗಿದ್ದ. ಹಿಂದನ ಸಲ ಫಾರಿನ್ನಿಂದ ಬರಬೇಕಿದ್ರೆ ಯಂಗೊಂದು ಚೊಲೋ ಬ್ಯಾಗ್ ತಂದುಕೊಟ್ಟಿಗಿದ್ದ. ಎಷ್ಟೆಲ್ಲಾ ಕಿಸೆ ಇದ್ದು ಅದ್ರಾಗೆ? ವರದತ್ತೆಗೆ ಹೇಳೇ ಆರಿಸಿಗಿದ್ನೋ ಎಂತೇನ ಮಾಣಿರಾಯ. ಹಣಿಗೆ, ಕನ್ನಡಿ, ಪೌಡರ್ ಡಬ್ಬ ಎಲ್ಲ ಇಡಲೆ ಅಂತ್ಲೇ ಖಾಸ್ ಕಿಸೆ ಇಟ್ಟಿಗಿದ್ದ ಬ್ಯಾಗಲ್ಲಿ. ದುಡ್ಡು ಇಡ ಖಾನೆ ಭಾಳ ಚೊಲೋ ಇದ್ದು.ಅದಕ್ಕೆ ಕೋಡ್ ಲಾಕ್ ಬೇರೆ ಇಟ್ಟಿಗಿದ್ದ. ಇನ್ನು ಕಲರು ಅಂದ್ರೆ. ಅಯ್ಯೋ ರಾಶಿ ಚೊಲೋ ಇದ್ದು. ಮತ್ತೆ ಅವ್ರಿಗೂ ಒಂದು ಸ್ಪೆಷಲ್ ಗರಗಸ ತಂದಿಗಿದ್ದ. ಕರೆಂಟ್ ಬ್ಯಾಟರಿದು. ಒಳ್ಳೆ ಲಾಯ್ಕಾಗ್ತು, ಮನೆ ಬದಿ ಶಣ್ ಶಣ್ಣ ಕೆಲಸ ಮಾಡಲೆ. ಮತ್ತೆ ಆ ತಮ್ಮ ಯನ್ನ ಹತ್ರ, ಪ್ರೀತಿಂದ ,"ಅತೇ ಚೂರ್ ಚಾ ಕುಡ್ಯವ್ವಲೇ" ಅಂತ ಚೂರೂ ಬಿಡಿಯ ಮಾಡ್ಕಳ್ದೇ ಪ್ರೀತಿಯಿಂದ ಕೇಳಿಗಿದ್ದ ಅವತ್ತು.ಆ ತಮ್ಮನ ಮದ್ವಿಗೆ ಆನು ಹೋಪದಂತೂ ಹೆಂಗೂ ಆತಲಿ, ನಾಕ್ ದಿನ ಮುಂಚೆನೆ , ಮಾವನ ಮನಿಗೆ ಹೋಗವ್ವು. ಮತ್ತೆ ಅದಕ್ಕೂ ಮುಂಚೆ ಸಂವರಣಿಗೆ ಮಾಡಲೂ ಎಲ್ಲ ಹೋಪದೇಯ." ಎಂದು ಮನಸ್ಸಿನಲ್ಲೇ ಮುಂಡಿಗೆ ತಿಂದು ಸೋದರ ಮಾವನ ಮಗ ಮದುವೆಗೆ ಕರೆಯಲು ಬರುವುದನ್ನೇ ಕಾಯುತ್ತಿದ್ದಳು.

ಸೋದರ ಮಾವನ ಮಗ ಬಂದ, ತನ್ನ ಮಗನ ಮದುವೆಯ ಕುರಿತ ಸಂಭ್ರಮವನ್ನು ಮುಖದಲ್ಲಿ ಸೂಸುತ್ತಾ.

"ಭಾವೋ ಅಂದಿ" ಎನ್ನುತ್ತಾ ವರದಕ್ಕ ಹೊರಬಂದಳು. ವರದಕ್ಕನ ಗಂಡ ಗಪ್ಪತಿಯೂ ತೋಟದಿಂದ ಬಂದು ಕುಳಿತಿದ್ದ. "ಭಾವೋ ಮಾತಾಡಸ್ದಿ" ಅಂದ.

ವರದಕ್ಕನ ಚಹಾ ಬಂತು ಯಥಾ ರೀತಿ, ಚೂಡಾದೊಂದಿಗೆ. ಚಹಾ ಕುಡಿದ ಭಾವಯ್ಯನೊಂದಿಗೆ ಮಾತು ಕತೆ ಸಾಗಿತ್ತು.

"ಹುಡುಗಿಗೆ ಯಾವ ಊರು ಭಾವ"

"ಹೊನ್ನೇಸರ, ಸಾಗರದ ಹತ್ರೆ..."

"ಹುಡುಗಿ ಎಂತ ಓದಿದ್ದು?"

" ಅದರದ್ದು ಎಮ್ ಬಿ ಎ ಆಯ್ದಡ"

"ಮದುವೆ ಎಲ್ಲಿ?"

" ವರದಾಮೂಲ ಹೇಳಿ. ಸಾಗರದಿಂದ ಆರು ಕಿಲೋಮೀಟರ್ ಆಗ್ತಡ."

ಮಾತು ಮುಂದುವರೆಯಿತು. ನೀಲಕಂಠ ವರದಕ್ಕನ ಚಹಾವನ್ನು ಪ್ರಶಂಸಿಸಿದ. ವರದಕ್ಕ ಉಬ್ಬಿದಳು. ನಂತರ "ವರದಾ ನೀ ನಾಕ್ ದಿನ ಮುಂಚೆನೆ ಬಾರೆ" ಎಂದು ಕರೆದು ಮಾತು ಮುಗಿಸಿ ಹೊರಡಲನುವಾದ. ಥಟ್ಟನೆ ಗಪ್ಪತಿ ತಡೆದ.

"ಅಲ್ದಾ ಭಾವ ವರದ ಅಷ್ಟೆಲ್ಲ ತಯಾರಿ ಮಾಡ್ಕ ಕೂತಿಗಿದ್ದು. ನೀ ಜಡ್ದ್ ಊಟ ಮಾಡ್ಕ ಹ್ವಾಪದೇಯ. ಬಿಡಿಯ ಮಾಡ್ಕಳಲೆ ಇಲ್ಲೆ. ಅದು ನೀ ಬತ್ತೆ ಹೇಳಿ ಎಲ್ಲರದ್ದೂ ತಲೆ ತಿಂದು ತಯಾರ್ ಮಾಡ್ಸಿಗಿದ್ದು. ನೀ ಜಡ್ದ್ ಊಟ ಮಾಡ್ಕಂಡೇ ಹೋಗವ್ವು. ತೆಳತ್ತಾ " ಎಂದು ಬಹಳ ಒತ್ತಾಯ ಮಾಡಿದ. ಮನೆಯಲ್ಲಿದ್ದ ವರದಕ್ಕನ ಓರಗಿತ್ತಿಯರದ್ದೂ ಇದೇ ವರಾತ. " ಭಾವ ನೀ ಇಲ್ಲೇ ಜಡ್ದ್ ಊಟ ಮಾಡ್ಕಂಡೇ ಹೋಗವ್ವು." ಇವರ ಒತ್ತಾಯಕ್ಕೆ ಸೋತ ನೀಲಕಂಠ ಭಾವ ವಿಧಿಯಿಲ್ಲದೇ ಆದರೆ ಸಂತೋಷದಿಂದಲೇ ಇವರ ಆತಿಥ್ಯವನ್ನು ಸ್ವೀಕರಿಸಿ ತನ್ನ ಕರೆಯದ ಕಾರ್ಯವನ್ನು ಮುಂದುವರೆಸಿದ.

ವರದಕ್ಕನಿಗೆ ಮನಸ್ಸು ಮನೆಯಲ್ಲಿ ನಿಲ್ಲಲಿಲ್ಲ. ಸೋದರ ಮಾವನ ಮೊಮ್ಮಗನ ಮದುವೆಯ ಸಂವರಣಿಗೆಯ ಕ್ರಮ ವಿಕ್ರಮಗಳನ್ನು ನೋಡುವ ಬಯಕೆಯಲ್ಲಿ ಮೈ ಮರೆತಿದ್ದಳು. ಇದರ ವಾಸನೆ ಹಿಡಿದ ವರದಕ್ಕನ ವಾರಗಿತ್ತಿ ಗಿರಿಜಾ, "ಅಕಾ!! ನೀ ಮಾವನ ಮನೆಗೆ ಹೋಗ್ಬಾರೆ. ಮನೆ ಕಡೆ ಎಂತೇನ ಅಂತ ಕಾಳಜಿ ಮಾಡಡ. ಯಂಗ ಎಲ್ಲಾ ಇದ್ಯ. ಬೇಕಾರೆ ನಾಕ್ ದಿನ ಉಳ್ಕ ಬಾ. ಭಾವನ ಬಗ್ಗೆ ಸ್ವಕಾ ಕಾಳಜಿ ಮಾಡಡ. ನಾ ಇದ್ದಿ" ಎಂದು ಹುರಿದುಂಬಿಸಿದಾಗ ಇಲ್ಲ ಎನ್ನಲಾಗದೆ ಹೊರಟಳು. ಬೆಳಿಗ್ಗೆ ಹತ್ತು ಗಂಟೆಗೇ ವರದಕ್ಕನ ಮೈದುನ ಅವಳನ್ನು ಶಿರಸಿ ಪೇಟೆಯ ತನಕ ಬಿಟ್ಟು ಬಂದ. ಈ ಕಡೆ ಗಪ್ಪತಿ ಜಾನ್ಮನೆಯಲ್ಲಿದ್ದ ಅವಳ ಮಾವನ ಮನೆಗೆ ಫೋನ್ ಮಾಡಿ ವಿಷಯ ಅರುಹಿದ.

ವರದಕ್ಕನ ಸವಾರಿ ಅಂತೂ ಹನ್ನೆರಡು ಗಂಟೆಗೆ ಜಾನ್ಮನೆಯ ಸೋದರ ಮಾವನ ಮನೆಗೆ ಚಿತ್ತೈಸಿತು, ಅವಳ ಚಿಕ್ಕಮ್ಮನ ಮಗಳು ಜಲಜಾಕ್ಷಿಯ ಸಂಗಡ, ಅವಳದ್ದೇ ಮನೆಯ ಕಾರಿನಲ್ಲಿ.
ಇತ್ತ ವರದಕ್ಕನ ಬರವನ್ನು ನಿರೀಕ್ಷಿಸಿ ಅವಳು ನಿರೀಕ್ಷಿತ ಸಮಯಕ್ಕೆ ಬಾರದ ಕಾರಣದಿಂದ ಕಳವಳಕ್ಕೊಳಗಾಗಿದ್ದ ಮಾವನ ಮನೆಯವರಿಗೆ ಸಮಾಧಾನ ಭರಿತ ಆಶ್ಚರ್ಯ. ಜೊತೆಯಲ್ಲೇ ಒಂದು ಸಮಸ್ಯೆ. ಹನ್ನೊಂದು ವರೆಗೆಲ್ಲಾ ಬರಬೇಕಿದ್ದ ವರದಕ್ಕನ ಬರವು ತಡವಾಗಿದ್ದೇಕೆ ಅದೂ ಜಲಜಾಕ್ಷಿಯ ಸಂಗಡ ಹೇಗೆ ಎನ್ನುವುದು. ಕುತೂಹಲ ತಣಿಸಲು ಜಲಜಾಕ್ಷಿಯನ್ನೇ ಪ್ರಶ್ನಿಸಿದರು.

" ವರದಕ್ಕ ಸಿರ್ಸಿ ಬಸ್ ಸ್ಟ್ಯಾಂಡಲ್ಲಿ ಮೈಕೋದಲ್ಲಿ ಜಾನ್ಮನೆ ಹೇಳಿ ಕೂಗಿದ್ದು ಕೇಳಿ ಬಸ್ ಹತ್ಗಂಡ್ ಕೂತಿತ್ತಡ. ಅದು ಅಮ್ಮೀನಳ್ಳಿ ಜಾನ್ಮನೆಗೆ ಹೋಪ ಬಸ್ಸು. ಇದು ಜಾನ್ಮನೆ ಹತ್ರೆ ನಿತ್ಗಂಡು ಸದಾಶಿವನ್ನ ಕರ್ಕ ಹೋಪಲೆ ಬತ್ತ ಹೇಳಿದ್ದ್ವಲಿ, ಅವಂಗೆ ಕಾಯ್ಕೋತ ಗಿರಣಿ ಹತ್ರಕೆ ನಿತ್ಗಂಡಿತ್ತು. ನಮ್ಮನೇವ್ರು ಪಂಚಾಯ್ತಿಲಿ ಎಂತೋ ಕೆಲಸ ಇತ್ತು ಅಂತ ಹೋಗಿದಿದ್ದ. ಇದ್ನ ಮಾತಾಡಸ್ದ. ಇದು, ಸದಾಶಿವ ಕರ್ಕ ಹೋಪಲೆ ಬತ್ತೆ ಹೇಳಿಗಿದ್ದ ಅವಂಗೆ ಕಾಯ್ತಿದ್ದಿ ಅಂತ ಹೇಳ್ಚು. ಅವಾಗ ಅವರಿಗೆ ಗೊತ್ತಾತು. ಇದು ಹೂತನ್ ಜಾನ್ಮನೆಗೆ ಹೋಪದು ಕನ್ಫ್ಯೂಸ್ ಮಾಡ್ಕೈಂದು ಅಂತ. ಮನೆಗೆ ಕರ್ಕ ಬಂದು ಯನ್ನ ಜೊತೆ ಮಾಡಿ ಕಾರಲ್ಲಿ ಕಳಿಸಿಗಿದ್ದ." ಎಲ್ಲರಿಗೂ ನಿತ್ತ ಉಸಿರು ಒಮ್ಮೆ ಹೊರಬಿತ್ತು.

ಅಷ್ಟರಲ್ಲಿ ವರದಕ್ಕನ ಬಾಯಿಯಿಂದ ಅಣಿಮುತ್ತೊಂದು ಹೊರಬಿತ್ತು-"ಅವ್ವು ಸಮಾ ಮಾಡಿ ಹೇಳವ್ವಲ್ದೋ. ಹೂತನ್ ಜಾನ್ಮನೆ ಅಥವ ಅಮ್ಮೀನಹಳ್ಳಿ ಜಾನ್ಮನೆ ಅಂತ. ಹೊರಗಡೆಯಿಂದ ಬಪ್ಪವಕ್ಕೆ ಎಂತ ಗೊತ್ತಿರ್ತೋ?"

ನಕ್ಕರೆ ವರದಕ್ಕ ಅವಮಾನ ಸಹಿಸಲಾರಳು ಎಂದು ಎಲ್ಲರಿಗೂ ತಿಳಿದಿತ್ತು. ಅದಕ್ಕೇ ಎಲ್ಲರೂ ನಗುವನ್ನು ಕಟ್ಟಿಕೊಂಡರು.

ಆಗಿದ್ದು ಇಷ್ಟೇ. ವರದಕ್ಕನ ಸೋದರ ಮಾವನ ಮನೆ ಇದ್ದಿದ್ದು ಹೂತನ್ ಜಾನ್ಮನೆಯಲ್ಲಿ ಆದರೆ ಅವಳು ಹತ್ತಿದ್ದು ಅಮ್ಮೀನಹಳ್ಳಿ ಜಾನ್ಮನೆಗೆ ಹೋಗುವ ಬಸ್ಸು. ಚಿಕ್ಕಂದಿನಲ್ಲಿ ಅಮ್ಮ ಅಥವಾ ಅಣ್ಣನ ಸಂಗಡ ಬರುತ್ತಿದ್ದ ವರದಕ್ಕ ಇದರ ಬಗ್ಗೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದಮೇಲೆ ಅವಳೊಬ್ಬಳೇ ಎಲ್ಲೂ ಹೋಗಿರಲೇ ಇಲ್ಲ. ಗಪ್ಪತಿಯೋ ಅವನ ತಮ್ಮಂದಿರೋ ಬೈಕ್ ಮೇಲೆ ಇವಳನ್ನು ಕರೆದೊಯ್ಯುತ್ತಿದ್ದರು ಅಥವಾ ಅವಳ ವಾರಗಿತ್ತಿಯರು ಸಂಗಡಿಸುತ್ತಿದ್ದರು.ಇದರಿಂದ ವರದಕ್ಕ ರಸ್ತೆ ಬಸ್ಸು ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆಯೇ ಸಂಪೂರ್ಣವಾಗಿ ತನ್ನ ಗಮನವನ್ನು ಚಾ ಮಾಡುವುದಕ್ಕೆ ಮೀಸಲಿಟ್ಟಿದ್ದಳು. ಸಿರಸಿ ಬಸ್ ಸ್ಟ್ಯಾಂಡಿನಲ್ಲಿ "ಬಸ್ ನಂಬರ್ ಮೂವತ್ತಾರು ನಲವ್ತ್ರೊಂಬತ್ತು........ "ಜಾನ್ಮನೆ"....." ಎಂದಿದ್ದು ಕೇಳಿ ಆ ಬಸ್ ಹತ್ತಿದ್ದಳು. ಅವಳ ಗ್ರಹಚಾರಕ್ಕೆ ಅದು ಹೂತನ್ ಜಾನ್ಮನೆಗೆ ಹೋಗುವ ಬಸ್ಸಾಗಿರದೆ ಅಮ್ಮೆನಹಳ್ಳಿ ಜಾನ್ಮನೆಗೆ ಹೋಗುವ ಬಸ್ಸಾಗಿತ್ತು. ವರದಕ್ಕ ಹೇಳಿದ್ದು ಸರಿ. ಹೊರಗಡೆಯವರಿಗೆ ಹೇಗೆ ತಿಳಿಯಬೇಕು ಒಂದೇ ಹೆಸರಿನ ಎರಡು ಊರುಗಳಿರುವಾಗ? ಅದೂ ಬೇರೆ ರೂಟಿನಲ್ಲಿ. ಮೈಕಿನಲ್ಲಿ ಹೇಳುವವ ತಿಳಿದು ಹೇಳಬೇಕಲ್ಲವೇ?

#ವರದಕ್ಕನ_ವರಾತಗಳು



Monday, November 19, 2018

ವರದಕ್ಕನ ವರಾತಗಳು (ಅಧ್ಯಾಯ1 ಪ್ರಸಂಗ1)

ವರದಕ್ಕ ಹುಟ್ಟಿದ್ದು ಸಿರಸಿಯ ಒಂದು ಸಣ್ಣ ಊರಿನ ದೊಡ್ಡ ಕುಟುಂಬದಲ್ಲಿ. ಮದುವೆಯಾಗಿದ್ದು ಕೂಡಾ ಅದೇ ಸಿರಸಿ ಪ್ರಾಂತ್ಯದ ಮತ್ತೊಂದು ಸಣ್ಣ ಊರಿನ ದೊಡ್ಡ ಕುಟುಂಬದಲ್ಲಿ. ಅವಳ ತವರು ಮನೆಯವರು ಬನವಾಸಿಯ ಭಕ್ತರಂತೆ. ಅದಕ್ಕೇ ಬನವಾಸಿಗೆ ಸಂಬಂಧಿಸಿದ ಹೆಸರೊಂದು ಅವರ ಮನೆಯಲ್ಲಿ ಹುಟ್ಟಿದ ಹಿರಿಯ ಮಗಳಿಗೆ ಇಡಲೇ ಬೇಕಿತ್ತು. ಮಧುಕೇಶ್ವರನ ಪಾದಕಮಲಗಳನ್ನು ನಿತ್ಯವೂ ತೋಯಿಸುವ ವರದೆಯ ಹೆಸರನ್ನೇ ಅವಳಿಗೆ ಇಟ್ಟಿದ್ದರು ಅವಳ ಅಪ್ಪಯ್ಯ. ಅವಳ ಸೌಭಾಗ್ಯ ಬಹಳ ದೊಡ್ಡದು. ತವರು ಮನೆಯಲ್ಲಿ ಮುತ್ತಜ್ಜಿ ಮತ್ತು ಮುತ್ತಜ್ಜನ ಆಶೀರ್ವಾದವನ್ನು ಪಡೆದು ಮದುವೆಯಾದರೆ ಕೊಟ್ಟ ಮನೆಯಲ್ಲಿಯೂ ಮುತ್ತಜ್ಜ ಮುತ್ತಜ್ಜಿಯ ಆಶೀರ್ವಾದವನ್ನು ಪಡೆದೆ ಒಳ ಸೇರಿದಳು. ಒಂದು ಹಂತದ ಶ್ರೀಮಂತಿಕೆ ಇತ್ತು. ಹಿರಿಯ ಮಗಳಾಗಿದ್ದರಿದ ಸ್ವಲ್ಪ ಮುದ್ದು ಕೂಡಾ ಹೆಚ್ಚಿತ್ತು. ಪರಿಣಾಮ ಅವಳು ಸುಖವಾಗಿಯೇ ಇದ್ದಳು ಇಹ ಪರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆಯೇ. ಹಾಗಂತ ಅವಳ ತವರು ಮನೆಯವರು ಅವಳನ್ನು ಮುದ್ದಿನ ಮುದ್ದೆಯಾಗಿಸಲಿಲ್ಲ. ಅಡುಗೆ ಕೆಲಸ, ಆದರಾತಿಥ್ಯ, ಶಿಸ್ತು, ಸಂಗೀತ ಎಲ್ಲವನ್ನೂ ಅವಶ್ಯಕತೆಯಿದ್ದಷ್ಟು ಕಲಿಸಿದ್ದರು.

ಕೊಟ್ಟ ಮನೆಯಲ್ಲಿಯೂ ಅವಳಿಗೆ ಇದ್ಯಾವುದರ ತಲೆಬಿಸಿ ಉಂಟಾಗಲಿಲ್ಲ. ದೂರದ ಸಂಬಂಧಿಕರೇ ಆಗಿದ್ದ ಗಂಡನ ಮನೆ ತುಂಬಾ ಜನ ಇದ್ದರು. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಮತ್ತೆ ಗಂಡನ ಮನೆಯಲ್ಲಿಯೂ ಸಾಕಷ್ಟು ಸ್ಥಿತಿವಂತರೇ ಆಗಿದ್ದರು. ಇವಳೂ ತನಗೆ ಗೊತ್ತಿದ್ದ ಕೆಲಸಗಳನ್ನು ನಾಜೂಕಿನಿಂದ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಂಡು ಅತ್ತೆ ಮಾವನ ಪ್ರೀತಿಯ ಸೊಸೆಯಾಗಿದ್ದಳು. ಅವಳ ಮೈದುನಂದಿರಿಗೆ ಪ್ರೀತಿಯ ದೊಡ್ಡತ್ತಿಗೆಯಾಗಿದ್ದಳು. ನಾದಿನಿಯರಿಗೆ ಸಲುಗೆಯ ಗೆಳತಿಯಾಗಿ, ಮೈದುನಂದಿರ ಮಕ್ಕಳಿಗೆ ಅಕ್ಕರೆಯ ದೊಡ್ಡಾಯಿಯಾಗಿದ್ದಳು. ತನ್ನ ಮಕ್ಕಳು ಮತ್ತು ಮೈದುನಂದಿರ ಮಕ್ಕಳ ನಡುವೆ ಭೇದ ಮಾಡಲಿಲ್ಲ ಎಂದಿಗೂ. ಓರೆಗಿತ್ತಿಯರಿಗೂ ಕೂಡಾ ಅಕ್ಕ ಎಂದು ಕರೆಸಿಕೊಳ್ಳುತ್ತಿದ್ದ ಗೆಳತಿ ಆಕೆ.

ವರದಕ್ಕನ ಚಹಾ ಮನೆಯಲ್ಲಿ ಎಲ್ಲರಿಗೂ ಪ್ರೀತಿ. ಅವಳ ಅತ್ತೆ ಅವಳಿಂದ ಆ ರೀತಿ ಚಹಾ ಮಾಡುವುದನ್ನು ಕಲಿಯಲು ಸಾಕಷ್ಟು ಪ್ರಯತ್ನ ಪಟ್ಟು ಸೋತಿದ್ದರು. ಇದು ಅವಳ ಅತ್ತೆ ಸುಭದ್ರಮ್ಮನವರಿಗೆ ಒಂದು ಅತೀವ ಮೆಚ್ಚುಗೆಯ ವಿಚಾರವಾಗಿತ್ತು. ಎಲ್ಲರ ಬಳಿಯಲ್ಲಿಯೂ ಸೊಸೆಯನ್ನು ಮೆಚ್ಚಿ " ವರದಾ ಮಾಡ ಚಾನ್ನ ಯಾವ ಹೊಟೇಲಲ್ಲೂ ಮಾಡಲಾಗ್ತಿಲ್ಲೆ ಗೊತ್ತಿದ್ದೊ... ಅಷ್ಟು ಚೊಲೋ ಮಾಡ್ತು. ಇದು ಆನೊಬ್ಬವ್ನೇ ಹೇಳದಲ್ಲ ಮತ್ತೆ ಹಾಂ!! ಮನೆ ಅವ್ವು ಎಲ್ಲರೂ ಹಿಂಗೇ ಹೇಳಿಗಿದ್ದ." ಎಂದು ಎಲ್ಲರ ಎದುರಿನಲ್ಲಿಯೂ ಹೊಗಳಿದ್ದಳು.

ಕೆಲವು ಸಲ ಹೊಗಳಿಕೆಯ ವೈಖರಿ ಇನ್ನೂ ರಂಜಿತವಾಗುತ್ತಿತ್ತು. "ಮನ್ನೆ ಮೂಲೆಮನೆ ಮಾಬ್ಲೇಸ್ರ ಬಂದಿದ್ದ ಅವರ ಮನೆ ರಘುನ ಮದ್ವೆಗೆ ಕರೆಯಲೆ. ಇದು ಚಾ ಮಾಡಿ ಕೊಟ್ಟಿಗಿದ್ದು. ಅವ ಆಮೇಲೆ ಯನ್ನ ಕೈಲಿ ಕೇಳಿಗಿದ್ದ. ಅತೇ ಚಾ ಪುಡಿ ಎಲಿ ಸಿಗ್ತೇ? ಭಾರಿ ಚೊಲೋ ಆಜು. ಆನೂ ಮದ್ವೆಗೆ ಇದನ್ನೇ ತರ್ಸಕ್ಕು ಅಂತ ಈಗ ತೀರ್ಮಾನ ಮಾಡಿಗಿದ್ದಿ ಅಂದ. ಆನು ಹೇಳ್ದಿ ತಮ ಚಾ ಪುಡಿ ಎಂತಾ ಎಲ್ಲಾ ವಾಂದೇಯ ಹೇಳಿ. ಮಾಡವ್ವು ಗನಾಗಿ ಮಾಡವ್ವು. ನಮ್ಮನೆ ಸೊಸೆ ಕೈ ಹಾಂಗಿದ್ದ. ಚಾ ಮಾಡ ಕಲೆ ಒಲ್ದಿಗಿದ್ದು ತಮಾ ಅಂದಿ. ಆದ್ರೂ ಅವಂಗೆ ನಂಬಿಕೆ ಬಂಜಿಲ್ಲೆ."

ಇನ್ನೊಮ್ಮೆ ಸುಭದ್ರಕ್ಕನ ಬಾಯಿಯಲ್ಲಿ ಸೊಸೆಯ ಹೊಗಳಿಕೆಯ ಪ್ರಕಾರ ಬೇರೆಯದೇ ಇರುತ್ತಿತ್ತು. "ಮನ್ನೆ ಯಮ್ಮನೆ ಗಪ್ಪತಿ ಕಾಂಬಲೆ ಸಾಗರದಿಂದ ಅವನ ಹೆಂಡತಿ ಭಾವ ಬಂದಿಗಿದ್ದ. ಇದು ತಾ ಮಾಡಿದ ಚಾ ಕೊಟ್ಟಿಗಿದ್ದು. ಅಂವ ಕಾಪಿ ಕುಡ್ಯಂವ. ಸಾಗರ ಬದಿಯಂವ ಅಲ್ದೋ?! ಅಂವ ಚಾ ಕುಡ್ಕಂಡು ಅತ್ಗೇ, ಆನಿನ್ನು ಕಾಪಿ ಕುಡಿತ್ನಿಲ್ಯೇ. ಯಮ್ಮನೆ ರಾಜಿಗೊಂದು ಚಾ ಮಾಡದು ಕಲಸ್ಕೊಡೇ ಅಂತ ಹೇಳಿಗಿದ್ದ."

ಹೀಗೆ ವರದಕ್ಕನ ಚಹಾಕೆ ಅವಳ ಅತ್ತೆಯೇ ಪಿ ಆರ್ ಓ ಆಗಿ ಅವಳ ಚಹಾ ಬಹಳ ಪ್ರಸಿದ್ಧವಾಯಿತು. ಆದರೆ ಈ ಚಹಾ ಪ್ರಸಿದ್ಧವಾದದ್ದಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ವರದಕ್ಕನ ಐಡೆಂಟಿಟಿ ಆಗಿಬಿಟ್ಟಿತು. ಸಮಸ್ಯೆ ಶುರುವಾಗಿದ್ದೇ ಇಲ್ಲಿಂದ.

ಅಪರೂಪಕ್ಕೆ ಸಾಗರದ ಕಡೆಯ ನೆಂಟರ ಮನೆಗೆ ಹೋದಾಗ ಅಲ್ಲಿ ಚಹಾ ಸಿಗುವುದು ವಿರಳವಾಗಿತ್ತು. ಮತ್ತೆ ಅಲ್ಲಿನ ಫಿಲ್ಟರ್ ಕಾಪಿಯನ್ನು ಸವಿಯುವ ಆಸೆ ವರದಕ್ಕನಿಗಿದ್ದರೂ ಆಸೆ ಈಡೇರಿಸಿಕೊಳ್ಳುವಂತಿಲ್ಲ. ಕಾರಣ ವರದಕ್ಕ ತಾನು ಚಹಾ ಮಾಡುವುದಷ್ಟೇ ಸರಿ ಕುಡಿಯುವುದಿಲ ಎನ್ನುವ ಮಾತು ಬಂದರೆ ಎನ್ನುವ ಒಂದು ಆತಂಕ ಅವಳಲ್ಲಿತ್ತು. ಇದು ಅವಳಿಗೆ ತುಸು ಕಸಿವಿಸಿ ಮುಜುಗರಗಳನ್ನುಂಟುಮಾಡುತ್ತಿತ್ತು. ಆದರೆ ವರದಕ್ಕ ಇದನ್ನು ಸಲೀಸಾಗಿ ನಿರ್ವಹಿಸಿದ್ದಳು. ತನಗೆ ಕಾಪಿ ಕುಡಿಯದಂತೆ ಡಾಕ್ಟರ ಸಲಹೆ ಇದೆ ಎಂದು ಎಲ್ಲರನ್ನೂ ನಂಬಿಸಿದ್ದಳು. ಆದರೆ, ಅವಳ ಒಳಗೆ ಒಂದು ಆಸೆಯೂ ಅಂಕುರಿಸಿತ್ತು. "ತಾನು ಚನಾಗಿ ಕಾಪಿನೂ ಮಾಡವ್ಳು ಹೇಳಿ ಹೆಸ್ರು ಮಾಡವು." ಎನ್ನುವುದೇ ಆ ಆಸೆ. ಆದರೆ ಆ ಆಸೆಯ ಈಡೇರಿಕೆಗೆ ತನಗೆ ಸದ್ಯಕ್ಕಿದ್ದ "ಚಾ ಎಕ್ಸ್ ಪರ್ಟ್" ಎನ್ನುವ ಬಿರುದು ಕಳೆದುಕೊಳ್ಳುವುದು ಅಥವಾ ಅದಕ್ಕೆ ಧಕ್ಕೆ ತಂದುಕೊಳ್ಳುವುದು ಇಷ್ಟವಿರಲಿಲ್ಲ.

ಹೀಗೆ ಸಾಗುತ್ತಿದ್ದ ಕಾಲದ ಜೊತೆಗೆ ವರದಕ್ಕನ ಚಹಾದ ಪ್ರಸಿದ್ಧಿ ಮತ್ತು ಅದರೊಮ್ದಿಗೆ ವರದಕ್ಕನ ಪ್ರಸಿದ್ಧಿಯೂ ಬಹಳ ಮುಂದೆ ಸಾಗಿತ್ತು. ವರದಕ್ಕನ ಮಗ ವಿನಯ ಬೆಳೆದು ದೊಡ್ದವನಾಗುತ್ತಿದ್ದ. ವರದಕ್ಕನಿಗೆ ತಲೆಬಿಸಿ ಹತ್ತಿದ್ದು ಈಗ. ತನ್ನ ಗುರುತು ಹೆಗ್ಗುರುತು ಎರಡೂ ಆಗಿರುವ ಚಹಾವನ್ನು ತನ್ನ ಮಗನೇ ವರ್ಜಿಸಿ ಬಿಟ್ಟರೆ?! ತನ್ನ ಮೇಲೆ ತನ್ನ ಮಗನಿಂದಲೇ ಕಳಂಕ ಬರಬಹುದಾದ ಸಾದ್ಗ್ಯತೆಯನ್ನು ಊಹಿಸಿದಳು ವರದಕ್ಕ. ಇದಕ್ಕೆ ಅವಳ ತಲೆಯಲ್ಲಿ ಒಮ್ದು ಅದ್ಭುತ ಉಪಾಯ ಹೊಳೆಯಿತು. ಮಗನ ಬಳಿ ಹೇಳಿದಳು. " ನೀ ಶಣ್ಣಕಿದ್ದಾಗ ವಾಂದ್ ಸಲ ಸಾಗರದ ರಾಜಿ ಚಿಕ್ಕಿ ಮನೆಗೆ ಕರ್ಕ ಹೋಗಿಗಿದ್ದಿ. ನಿಂಗೆ ಅದು ಕಾಪಿ ಮಾಡಿ ಕೊಟ್ಟಿಗಿತ್ತು. ನಿಂಗೆ ವಾಂತಿ ಬೇಧಿ ಎರ್ಡೂ ಶುರುವಾಗಿತ್ತು. ವಾಂದ್ ದಿನ ಇದ್ಕ ಬಪ್ಪಲೆ ಅಂತ ಹೋದವ ನಿನ್ನ ಸಾಗರದಲ್ಲಿ ಆಸ್ಪತ್ರೇಲಿ ಬಿಟ್ಕಂಡು ಮೂರು ದಿನ ಬಿಟ್ಟು ಬಂದಿಗಿದ್ದಿ ಮನಿಗೆ. ನಿಂಗೆ ಕಾಪಿ ಕುಡದ್ರೆ ಆಗ್ತಿಲ್ಲೆ ಅಂದಿಗಿದ್ರು ಡಾಕ್ಟರು." ಎಂದು ಅವನಿಗೆ ಚನ್ನಾಗಿ ಬೈರಿಗೆ ಬಿಟ್ಟಿದ್ದಳು, ಸಮಯ ಸಿಕ್ಕಾಗಲೆಲ್ಲಾ. ಇದು ವಿನಯನಲ್ಲಿ ಕಾಪಿಯ ಕುರಿತು ಒಂದು ರೀತಿಯ ಅವ್ಯಕ್ತ ಮತ್ತು ಅಸಹಜ ಆತಂಕ ಮಿಶ್ರಿತ ಕುತೂಹಲವನ್ನು ಸೃಜಿಸಿತ್ತು. ಬೆಳೆದು ದೊಡ್ದವನಾದ ವಿನಯ ಸಿ ಇ ಟಿ ಬರೆದು ಒಳ್ಳೆಯ ರ್‍ಯಾಂಕ್ ಪಡೆದು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ.

ವರದಕ್ಕನ ಚಿಂತೆ ಅದೇ ಇದ್ದರೂ ಚಿಂತೆಯ ಸ್ವರೂಪ ಬದಲಾಗಿತ್ತು.ತನ್ನ ಮಗ ಯಾವುದೇ ಕಾರಣಕ್ಕೆ ಕಾಪಿ ಕುಡಿಯಬಾರದು ಎನ್ನುವ ಮಹದಾಸೆ ಹೊತ್ತಿದ್ದ ವರದಕ್ಕ ಹಾಸ್ಟೆಲ್ಲಿನಲ್ಲಿ ಕಾಪಿ ಕುಡಿದುಬಿಟ್ತರೆ ಎನ್ನುವ ಆತಂಕದಲ್ಲಿ ಮಗನನ್ನು ತನ್ನ ಅಣ್ಣನ ಮಗನ ರೂಮಿನಲ್ಲಿಯೇ ಇರಲು ವ್ಯವಸ್ಥೆ ಮಾಡಿಸಿದಳು. ಇಂಜಿನ್ಯರಿಂಗ್ ಕಾಲೇಜಿನ ರ್‍ಯಾಗಿಂಗ್ ಎನ್ನುವ ಭೂತದ ಮಹಾತ್ಮೆ ಗೊತ್ತಿದ್ದ ಆತನೂ ಸಂತೋಷದಿಂದಲೇ ವಿನಯನೊಂದಿಗೆ ಇರಲು ಒಪ್ಪಿದ್ದ. " ಮನೆ ಬಿಟ್ಟಿಕ್ಕೆ ಹೋದ ಮಗ ಅಲ್ಲೆನಾರು ಚಾ ಬಿಟ್ಟು ಕಾಪಿ ಕಲ್ತ್ರೆ?" ಎನ್ನುವ ರೂಪಕ್ಕೆ ಬದಲಾಗಿತ್ತು. ವರದಕ್ಕ ತಡ ಬಡ ಮಾಡಲೇ ಇಲ್ಲ. " ತಮಾ ಕಾಪಿ ಕುಡದ್ರೆ ಬುದ್ಧಿ ಬೆಳೀತಿಲ್ಯಡ. ಮತ್ತೆ ಶಿಟ್ಟೂ ಜಾಸ್ತಿ ಆಗ್ತಡ. ರಾಜಿ ಚಿಕ್ಕಿ ಮಗ ಶಂಕ್ರನ್ನೇ ನೋಡು. ಒಳ್ಳೆ ರೌಡಿಗಳ ನಮ್ನಿ ಶಿಟ್ಟು ಮಾಡ್ತ ಹೌದಾ?! ಮತ್ತೆ ನೀ ಅವನ್ನ ನೋಡಿಗಿದ್ಯ? ಇನ್ನೂ ಹತ್ತನೆತ್ತಿಲಿದ್ದ. ಈಗಲೇ ಗಡ್ಡ ಮೀಸೆ ಹೆಂಗೆ ಬೈಂದು ಅವಂಗೆ. ಕಾಪಿ ಎಷ್ಟ್ ಕುಡಿತಾ ಗೊತಿದ್ದೋ? ಕಾಪಿ ಕುಡದ್ರೆ ಸುಸ್ತ್ ಜಾಸ್ತಿ ಆಗ್ತಡ. ವಯಸ್ಸೂ ಬೇಹ ಆಗ್ಬುಡ್ತಡ. ಸ್ವಕಾಗಿ ಎಂತಕ್ಕೆ ಸಮಸ್ಯೆ ಮೈ ಮೇಲೆ ಎಳ್ಕಂಬದು ಅಲ್ದೋ? ಅಪ್ಪಿ ತಪ್ಪಿ ಕಾಪಿ ಕುಡ್ದಿಕ್ಕಡ ಮತ್ತೆ. ತೆಳತ್ತ?" ಎಂದು ಮತ್ತೊಂದಿಷ್ಟು ಭಯದ ಬೀಜ ಬಿತ್ತಿದ್ದಳು.


ಇದೇ ಭಯದ ಬೀಜವನ್ನು ತಲೆಯಲ್ಲಿ ಹೊತ್ತು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ ಹೊರಟಿದ್ದ ವಿನಯ. ಆದರೆ ವರದಕ್ಕನ ತಲೆಯಲ್ಲಿ ಕಾಪಿ ಬಲವಾಗಿ ಬೇರು ಬಿಟ್ಟಿತ್ತು.

(ಮುಂದುವರೆಯುವುದು)

#ವರದಕ್ಕನ_ವರಾತಗಳು

#ಚಹಾ_ವರದಕ್ಕನ_ಕಾಫಿ_ಪ್ರಕರಣ_1