Monday, November 26, 2018

ವರದಕ್ಕನ ವರಾತಗಳು (ಪ್ರಸಂಗ 2)

[ಇಲ್ಲಿಯವರೆಗೆ:

ಶಿರಸಿ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಹುಟ್ಟಿ ಅದೇ ತಾಲ್ಲೂಕಿನಲ್ಲಿ ಮದುವೆಯಾದ ವರದಕ್ಕ ಚಹಾ ಮಾಡುವುದರಲ್ಲಿ ಪರಿಣಿತಿ ಮತ್ತು ಪ್ರಸಿದ್ಧಿ ಎರಡನ್ನೂ ಸಾಧಿಸಿದ್ದಳು. ಇದರಿಂದ ಚಹಾ ಎನ್ನುವುದು ವರದಕ್ಕನ ಗುರುತಾಗಿದ್ದಷ್ಟೇ ಅಲ್ಲ, ಅವಳ ಅಸ್ಮಿತೆಯೂ ಆಯಿತು. ಆದರೆ ಈ ಅಸ್ಮಿತೆಗೆ ತನ್ನದೇ ಮಗ ವಿನಯನಿಂದ ಪೆಟ್ಟು ಬಿದ್ದರೆ ಎನ್ನುವ ಅಸಂಗತ ಆತಂಕಕ್ಕೊಳಗಾದ ವರದಕ್ಕ ಆತನ ತಲೆಯಲ್ಲಿ ಕಾಫಿಯ ಕುರಿತಾಗಿ ಒಂದು ರೀತಿಯ ಅವ್ಯಕ್ತ ಭಯವನ್ನು ಬಿತ್ತಿದ್ದಳು.]

ಮಗನನ್ನು ಬಸ್ಸಿಗೆ ಹತ್ತಿಸಿ ಬೆಂಗಳೂರಿಗೆ ಕಳಿಸಿ ಮನೆಗೆ ಬಂದ ವರದಕ್ಕ ಆತಂಕ-ಭಯ-ಕೀಳರಿಮೆ-ಮೇಲರಿಮೆಯ ಭಾವನೆಗಳಿಂದ ಕೂಡಿದ ಸಂಕೀರ್ಣ ಮನಃಸ್ಥಿತಿಯಲ್ಲಿ ತೊಳಲಾಡುತ್ತಿದ್ದಳು. ಚಾ ತನ್ನ ಗುರುತಾಗಿ ತನ್ನನ್ನು ಪ್ರಸಿದ್ಧವಾಗಿಸಿದ್ದಕ್ಕೆ, ತನ್ನ ಕುರಿತಾದ ಒಂದು ಪ್ರತೀತಿಯಾಗಿದ್ದಕ್ಕೆ ಮೇಲರಿಮೆಯಿದ್ದರೆ, ತನಗೆ ಕಾಪಿ ಮಾಡಲು ಬರದೇ ಇದ್ದಿದ್ದಕ್ಕೆ ಕೀಳರಿಮೆ. ಜೊತೆಯಲ್ಲಿ ತಾನು ತನ್ನ ಆ ಕೀಳರಿಮೆಯನ್ನು ಮಗನಿಗೆ ತಿಳಿಸದೆಯೇ ಅವನಲ್ಲಿ ಸುಳ್ಳೊಂದನ್ನು ಹೇಳಿ ಆ ಸುಳ್ಳು ನಿಜವಾಗಿಬಿಟ್ಟರೆ ಎನ್ನುವ ಭಯ ಹಾಗೂ ತನ್ನ ಸುಳ್ಳೆಲ್ಲಾದರೂ ಹೊರಬಿದ್ದರೆ ಎನ್ನುವ ಆತಂಕ. ಇದೀಲದರ ಜೊತೆ ತನಗಿದ್ದ "ಚೊಲೋ ಚಾ ಮಾಡ್ತು ವರದಕ್ಕ" ಎನ್ನುವ ಪ್ರಸಿದ್ಧಿಗೆ ಕುಂದಾದರೆ ಎನ್ನುವ ಕಳವಳ ಎಲ್ಲವೂ ಸೇರಿ ವರದಕ್ಕನೊಳಗೊಂದು ತೊಳಲಾಟವನ್ನು ಉಂಟು ಮಾಡಿದ್ದವು.

" ಅಯ್ಯೋ! ಯಮ್ಮನೆ ತಮ್ಮ ಇನ್ನೂ ಶಣ್ಣಂವ. ಪಾಪ ಎಂತೆಂತ ಆಸೆ ಇರ್ತೋ ಏನೋ. ಅಂವ ವಾಂದ್ ಲೋಟ ಕಾಪಿ ಅಲ್ಲಿ ಕುಡದ್ರೆ ಎನ್ನ ಹೆಸರೆಂತ ಹಾಳಾಗ್ತಿಲ್ಲೆ, ಸ್ವಕಾಗಿ ಅವಂಗೆ ಕಾಪಿ ಕುಡಿಯಡ ಅಂತ ಹೆದರ್ಶಿಗಿದ್ದಿ. ಪಾಪಲ್ದೋ. ಅಂವ ಅಲ್ಲಿ ಬೆಂಗಳೂರಲ್ಲಿ ಕಾಪಿ ಕುಡದ್ರೆ ನೋಡವ್ವು ಹೆಂಗೂ ಯಾರೂ ಇರ್ತಿದ್ವಿಲ್ಲೆ. ಇನ್ನು ನೋಡಿ ಊರಲ್ಲಿ ಹೇಳಿರೂ ಎಂತೂ ಆಗ್ತಿಲ್ಲೆ. ಆನ್ ಹೇಳ್ತೆ.. " ಹೊರಗಡೆ ಇಪ್ಪ ಹುಡ್ರು.. ಈಗ ದೊಡ್ಡಾಜ ನಾವು ಹಾಂಗೆಲ್ಲ ಹೇಳಲೆ ಬತ್ತಿಲ್ಲೆ" ಅಂತ ಸಮಝಾಯಿಷಿ ಕೊಡಲೆ ಬತಿತ್ತು. ತಮ್ಮನ ಆಸೆಗೆ ಆನು ಕಲ್ಲು ಹಾಕಿಗಿದ್ದಿ. ತಪ್ಪಾಜು" ಎಂದು ಅದೆಷ್ಟೋ ಬಾರಿ ಕೊರಗಿ ಬಿಟ್ಟಳು ಕೂಡಾ.

ಇಷ್ಟರಲ್ಲಿ ವರದಕ್ಕನ ಸೋದರ ಮಾವನ ಮಗ, ನೀಲಕಂಠ ಭಾವ ಆಕೆಯ ಮನೆಗೆ ತನ್ನ ಮಗನ ಮದುವೆಯ ಹೇಳಿಕೆಯಲ್ಲಿ ಬಂದ. ಫಾರಿನ್ನಿನಲ್ಲಿರುವ ತನ್ನ ಸೋದರ ಮಾವನ ಮೊಮ್ಮಗನ ಮದುವೆಯ ಕುರಿತು ಸ್ವಲ್ಪ ಹೆಚ್ಚೇ ಕಾತರಳಾಗಿದ್ದಳು ವರದಕ್ಕ. " ಅಲ್ದೋ ಮತ್ತೆ!! ಆ ಮಾಣಿನ ಆನು ಎತ್ತಿ ಆಡ್ಸಿದ್ನಿಲ್ಯೋ?! ಆನು ಅವನಮನೆ ಆಯಿ ಹಂಗೇ ಅಲ್ದೋ?! ಅವನೂ ಯನ್ನ ರಾಶಿ ಹಚ್ಕಂಡಿಗಿದ್ದ. ಹಿಂದನ ಸಲ ಫಾರಿನ್ನಿಂದ ಬರಬೇಕಿದ್ರೆ ಯಂಗೊಂದು ಚೊಲೋ ಬ್ಯಾಗ್ ತಂದುಕೊಟ್ಟಿಗಿದ್ದ. ಎಷ್ಟೆಲ್ಲಾ ಕಿಸೆ ಇದ್ದು ಅದ್ರಾಗೆ? ವರದತ್ತೆಗೆ ಹೇಳೇ ಆರಿಸಿಗಿದ್ನೋ ಎಂತೇನ ಮಾಣಿರಾಯ. ಹಣಿಗೆ, ಕನ್ನಡಿ, ಪೌಡರ್ ಡಬ್ಬ ಎಲ್ಲ ಇಡಲೆ ಅಂತ್ಲೇ ಖಾಸ್ ಕಿಸೆ ಇಟ್ಟಿಗಿದ್ದ ಬ್ಯಾಗಲ್ಲಿ. ದುಡ್ಡು ಇಡ ಖಾನೆ ಭಾಳ ಚೊಲೋ ಇದ್ದು.ಅದಕ್ಕೆ ಕೋಡ್ ಲಾಕ್ ಬೇರೆ ಇಟ್ಟಿಗಿದ್ದ. ಇನ್ನು ಕಲರು ಅಂದ್ರೆ. ಅಯ್ಯೋ ರಾಶಿ ಚೊಲೋ ಇದ್ದು. ಮತ್ತೆ ಅವ್ರಿಗೂ ಒಂದು ಸ್ಪೆಷಲ್ ಗರಗಸ ತಂದಿಗಿದ್ದ. ಕರೆಂಟ್ ಬ್ಯಾಟರಿದು. ಒಳ್ಳೆ ಲಾಯ್ಕಾಗ್ತು, ಮನೆ ಬದಿ ಶಣ್ ಶಣ್ಣ ಕೆಲಸ ಮಾಡಲೆ. ಮತ್ತೆ ಆ ತಮ್ಮ ಯನ್ನ ಹತ್ರ, ಪ್ರೀತಿಂದ ,"ಅತೇ ಚೂರ್ ಚಾ ಕುಡ್ಯವ್ವಲೇ" ಅಂತ ಚೂರೂ ಬಿಡಿಯ ಮಾಡ್ಕಳ್ದೇ ಪ್ರೀತಿಯಿಂದ ಕೇಳಿಗಿದ್ದ ಅವತ್ತು.ಆ ತಮ್ಮನ ಮದ್ವಿಗೆ ಆನು ಹೋಪದಂತೂ ಹೆಂಗೂ ಆತಲಿ, ನಾಕ್ ದಿನ ಮುಂಚೆನೆ , ಮಾವನ ಮನಿಗೆ ಹೋಗವ್ವು. ಮತ್ತೆ ಅದಕ್ಕೂ ಮುಂಚೆ ಸಂವರಣಿಗೆ ಮಾಡಲೂ ಎಲ್ಲ ಹೋಪದೇಯ." ಎಂದು ಮನಸ್ಸಿನಲ್ಲೇ ಮುಂಡಿಗೆ ತಿಂದು ಸೋದರ ಮಾವನ ಮಗ ಮದುವೆಗೆ ಕರೆಯಲು ಬರುವುದನ್ನೇ ಕಾಯುತ್ತಿದ್ದಳು.

ಸೋದರ ಮಾವನ ಮಗ ಬಂದ, ತನ್ನ ಮಗನ ಮದುವೆಯ ಕುರಿತ ಸಂಭ್ರಮವನ್ನು ಮುಖದಲ್ಲಿ ಸೂಸುತ್ತಾ.

"ಭಾವೋ ಅಂದಿ" ಎನ್ನುತ್ತಾ ವರದಕ್ಕ ಹೊರಬಂದಳು. ವರದಕ್ಕನ ಗಂಡ ಗಪ್ಪತಿಯೂ ತೋಟದಿಂದ ಬಂದು ಕುಳಿತಿದ್ದ. "ಭಾವೋ ಮಾತಾಡಸ್ದಿ" ಅಂದ.

ವರದಕ್ಕನ ಚಹಾ ಬಂತು ಯಥಾ ರೀತಿ, ಚೂಡಾದೊಂದಿಗೆ. ಚಹಾ ಕುಡಿದ ಭಾವಯ್ಯನೊಂದಿಗೆ ಮಾತು ಕತೆ ಸಾಗಿತ್ತು.

"ಹುಡುಗಿಗೆ ಯಾವ ಊರು ಭಾವ"

"ಹೊನ್ನೇಸರ, ಸಾಗರದ ಹತ್ರೆ..."

"ಹುಡುಗಿ ಎಂತ ಓದಿದ್ದು?"

" ಅದರದ್ದು ಎಮ್ ಬಿ ಎ ಆಯ್ದಡ"

"ಮದುವೆ ಎಲ್ಲಿ?"

" ವರದಾಮೂಲ ಹೇಳಿ. ಸಾಗರದಿಂದ ಆರು ಕಿಲೋಮೀಟರ್ ಆಗ್ತಡ."

ಮಾತು ಮುಂದುವರೆಯಿತು. ನೀಲಕಂಠ ವರದಕ್ಕನ ಚಹಾವನ್ನು ಪ್ರಶಂಸಿಸಿದ. ವರದಕ್ಕ ಉಬ್ಬಿದಳು. ನಂತರ "ವರದಾ ನೀ ನಾಕ್ ದಿನ ಮುಂಚೆನೆ ಬಾರೆ" ಎಂದು ಕರೆದು ಮಾತು ಮುಗಿಸಿ ಹೊರಡಲನುವಾದ. ಥಟ್ಟನೆ ಗಪ್ಪತಿ ತಡೆದ.

"ಅಲ್ದಾ ಭಾವ ವರದ ಅಷ್ಟೆಲ್ಲ ತಯಾರಿ ಮಾಡ್ಕ ಕೂತಿಗಿದ್ದು. ನೀ ಜಡ್ದ್ ಊಟ ಮಾಡ್ಕ ಹ್ವಾಪದೇಯ. ಬಿಡಿಯ ಮಾಡ್ಕಳಲೆ ಇಲ್ಲೆ. ಅದು ನೀ ಬತ್ತೆ ಹೇಳಿ ಎಲ್ಲರದ್ದೂ ತಲೆ ತಿಂದು ತಯಾರ್ ಮಾಡ್ಸಿಗಿದ್ದು. ನೀ ಜಡ್ದ್ ಊಟ ಮಾಡ್ಕಂಡೇ ಹೋಗವ್ವು. ತೆಳತ್ತಾ " ಎಂದು ಬಹಳ ಒತ್ತಾಯ ಮಾಡಿದ. ಮನೆಯಲ್ಲಿದ್ದ ವರದಕ್ಕನ ಓರಗಿತ್ತಿಯರದ್ದೂ ಇದೇ ವರಾತ. " ಭಾವ ನೀ ಇಲ್ಲೇ ಜಡ್ದ್ ಊಟ ಮಾಡ್ಕಂಡೇ ಹೋಗವ್ವು." ಇವರ ಒತ್ತಾಯಕ್ಕೆ ಸೋತ ನೀಲಕಂಠ ಭಾವ ವಿಧಿಯಿಲ್ಲದೇ ಆದರೆ ಸಂತೋಷದಿಂದಲೇ ಇವರ ಆತಿಥ್ಯವನ್ನು ಸ್ವೀಕರಿಸಿ ತನ್ನ ಕರೆಯದ ಕಾರ್ಯವನ್ನು ಮುಂದುವರೆಸಿದ.

ವರದಕ್ಕನಿಗೆ ಮನಸ್ಸು ಮನೆಯಲ್ಲಿ ನಿಲ್ಲಲಿಲ್ಲ. ಸೋದರ ಮಾವನ ಮೊಮ್ಮಗನ ಮದುವೆಯ ಸಂವರಣಿಗೆಯ ಕ್ರಮ ವಿಕ್ರಮಗಳನ್ನು ನೋಡುವ ಬಯಕೆಯಲ್ಲಿ ಮೈ ಮರೆತಿದ್ದಳು. ಇದರ ವಾಸನೆ ಹಿಡಿದ ವರದಕ್ಕನ ವಾರಗಿತ್ತಿ ಗಿರಿಜಾ, "ಅಕಾ!! ನೀ ಮಾವನ ಮನೆಗೆ ಹೋಗ್ಬಾರೆ. ಮನೆ ಕಡೆ ಎಂತೇನ ಅಂತ ಕಾಳಜಿ ಮಾಡಡ. ಯಂಗ ಎಲ್ಲಾ ಇದ್ಯ. ಬೇಕಾರೆ ನಾಕ್ ದಿನ ಉಳ್ಕ ಬಾ. ಭಾವನ ಬಗ್ಗೆ ಸ್ವಕಾ ಕಾಳಜಿ ಮಾಡಡ. ನಾ ಇದ್ದಿ" ಎಂದು ಹುರಿದುಂಬಿಸಿದಾಗ ಇಲ್ಲ ಎನ್ನಲಾಗದೆ ಹೊರಟಳು. ಬೆಳಿಗ್ಗೆ ಹತ್ತು ಗಂಟೆಗೇ ವರದಕ್ಕನ ಮೈದುನ ಅವಳನ್ನು ಶಿರಸಿ ಪೇಟೆಯ ತನಕ ಬಿಟ್ಟು ಬಂದ. ಈ ಕಡೆ ಗಪ್ಪತಿ ಜಾನ್ಮನೆಯಲ್ಲಿದ್ದ ಅವಳ ಮಾವನ ಮನೆಗೆ ಫೋನ್ ಮಾಡಿ ವಿಷಯ ಅರುಹಿದ.

ವರದಕ್ಕನ ಸವಾರಿ ಅಂತೂ ಹನ್ನೆರಡು ಗಂಟೆಗೆ ಜಾನ್ಮನೆಯ ಸೋದರ ಮಾವನ ಮನೆಗೆ ಚಿತ್ತೈಸಿತು, ಅವಳ ಚಿಕ್ಕಮ್ಮನ ಮಗಳು ಜಲಜಾಕ್ಷಿಯ ಸಂಗಡ, ಅವಳದ್ದೇ ಮನೆಯ ಕಾರಿನಲ್ಲಿ.
ಇತ್ತ ವರದಕ್ಕನ ಬರವನ್ನು ನಿರೀಕ್ಷಿಸಿ ಅವಳು ನಿರೀಕ್ಷಿತ ಸಮಯಕ್ಕೆ ಬಾರದ ಕಾರಣದಿಂದ ಕಳವಳಕ್ಕೊಳಗಾಗಿದ್ದ ಮಾವನ ಮನೆಯವರಿಗೆ ಸಮಾಧಾನ ಭರಿತ ಆಶ್ಚರ್ಯ. ಜೊತೆಯಲ್ಲೇ ಒಂದು ಸಮಸ್ಯೆ. ಹನ್ನೊಂದು ವರೆಗೆಲ್ಲಾ ಬರಬೇಕಿದ್ದ ವರದಕ್ಕನ ಬರವು ತಡವಾಗಿದ್ದೇಕೆ ಅದೂ ಜಲಜಾಕ್ಷಿಯ ಸಂಗಡ ಹೇಗೆ ಎನ್ನುವುದು. ಕುತೂಹಲ ತಣಿಸಲು ಜಲಜಾಕ್ಷಿಯನ್ನೇ ಪ್ರಶ್ನಿಸಿದರು.

" ವರದಕ್ಕ ಸಿರ್ಸಿ ಬಸ್ ಸ್ಟ್ಯಾಂಡಲ್ಲಿ ಮೈಕೋದಲ್ಲಿ ಜಾನ್ಮನೆ ಹೇಳಿ ಕೂಗಿದ್ದು ಕೇಳಿ ಬಸ್ ಹತ್ಗಂಡ್ ಕೂತಿತ್ತಡ. ಅದು ಅಮ್ಮೀನಳ್ಳಿ ಜಾನ್ಮನೆಗೆ ಹೋಪ ಬಸ್ಸು. ಇದು ಜಾನ್ಮನೆ ಹತ್ರೆ ನಿತ್ಗಂಡು ಸದಾಶಿವನ್ನ ಕರ್ಕ ಹೋಪಲೆ ಬತ್ತ ಹೇಳಿದ್ದ್ವಲಿ, ಅವಂಗೆ ಕಾಯ್ಕೋತ ಗಿರಣಿ ಹತ್ರಕೆ ನಿತ್ಗಂಡಿತ್ತು. ನಮ್ಮನೇವ್ರು ಪಂಚಾಯ್ತಿಲಿ ಎಂತೋ ಕೆಲಸ ಇತ್ತು ಅಂತ ಹೋಗಿದಿದ್ದ. ಇದ್ನ ಮಾತಾಡಸ್ದ. ಇದು, ಸದಾಶಿವ ಕರ್ಕ ಹೋಪಲೆ ಬತ್ತೆ ಹೇಳಿಗಿದ್ದ ಅವಂಗೆ ಕಾಯ್ತಿದ್ದಿ ಅಂತ ಹೇಳ್ಚು. ಅವಾಗ ಅವರಿಗೆ ಗೊತ್ತಾತು. ಇದು ಹೂತನ್ ಜಾನ್ಮನೆಗೆ ಹೋಪದು ಕನ್ಫ್ಯೂಸ್ ಮಾಡ್ಕೈಂದು ಅಂತ. ಮನೆಗೆ ಕರ್ಕ ಬಂದು ಯನ್ನ ಜೊತೆ ಮಾಡಿ ಕಾರಲ್ಲಿ ಕಳಿಸಿಗಿದ್ದ." ಎಲ್ಲರಿಗೂ ನಿತ್ತ ಉಸಿರು ಒಮ್ಮೆ ಹೊರಬಿತ್ತು.

ಅಷ್ಟರಲ್ಲಿ ವರದಕ್ಕನ ಬಾಯಿಯಿಂದ ಅಣಿಮುತ್ತೊಂದು ಹೊರಬಿತ್ತು-"ಅವ್ವು ಸಮಾ ಮಾಡಿ ಹೇಳವ್ವಲ್ದೋ. ಹೂತನ್ ಜಾನ್ಮನೆ ಅಥವ ಅಮ್ಮೀನಹಳ್ಳಿ ಜಾನ್ಮನೆ ಅಂತ. ಹೊರಗಡೆಯಿಂದ ಬಪ್ಪವಕ್ಕೆ ಎಂತ ಗೊತ್ತಿರ್ತೋ?"

ನಕ್ಕರೆ ವರದಕ್ಕ ಅವಮಾನ ಸಹಿಸಲಾರಳು ಎಂದು ಎಲ್ಲರಿಗೂ ತಿಳಿದಿತ್ತು. ಅದಕ್ಕೇ ಎಲ್ಲರೂ ನಗುವನ್ನು ಕಟ್ಟಿಕೊಂಡರು.

ಆಗಿದ್ದು ಇಷ್ಟೇ. ವರದಕ್ಕನ ಸೋದರ ಮಾವನ ಮನೆ ಇದ್ದಿದ್ದು ಹೂತನ್ ಜಾನ್ಮನೆಯಲ್ಲಿ ಆದರೆ ಅವಳು ಹತ್ತಿದ್ದು ಅಮ್ಮೀನಹಳ್ಳಿ ಜಾನ್ಮನೆಗೆ ಹೋಗುವ ಬಸ್ಸು. ಚಿಕ್ಕಂದಿನಲ್ಲಿ ಅಮ್ಮ ಅಥವಾ ಅಣ್ಣನ ಸಂಗಡ ಬರುತ್ತಿದ್ದ ವರದಕ್ಕ ಇದರ ಬಗ್ಗೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದಮೇಲೆ ಅವಳೊಬ್ಬಳೇ ಎಲ್ಲೂ ಹೋಗಿರಲೇ ಇಲ್ಲ. ಗಪ್ಪತಿಯೋ ಅವನ ತಮ್ಮಂದಿರೋ ಬೈಕ್ ಮೇಲೆ ಇವಳನ್ನು ಕರೆದೊಯ್ಯುತ್ತಿದ್ದರು ಅಥವಾ ಅವಳ ವಾರಗಿತ್ತಿಯರು ಸಂಗಡಿಸುತ್ತಿದ್ದರು.ಇದರಿಂದ ವರದಕ್ಕ ರಸ್ತೆ ಬಸ್ಸು ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆಯೇ ಸಂಪೂರ್ಣವಾಗಿ ತನ್ನ ಗಮನವನ್ನು ಚಾ ಮಾಡುವುದಕ್ಕೆ ಮೀಸಲಿಟ್ಟಿದ್ದಳು. ಸಿರಸಿ ಬಸ್ ಸ್ಟ್ಯಾಂಡಿನಲ್ಲಿ "ಬಸ್ ನಂಬರ್ ಮೂವತ್ತಾರು ನಲವ್ತ್ರೊಂಬತ್ತು........ "ಜಾನ್ಮನೆ"....." ಎಂದಿದ್ದು ಕೇಳಿ ಆ ಬಸ್ ಹತ್ತಿದ್ದಳು. ಅವಳ ಗ್ರಹಚಾರಕ್ಕೆ ಅದು ಹೂತನ್ ಜಾನ್ಮನೆಗೆ ಹೋಗುವ ಬಸ್ಸಾಗಿರದೆ ಅಮ್ಮೆನಹಳ್ಳಿ ಜಾನ್ಮನೆಗೆ ಹೋಗುವ ಬಸ್ಸಾಗಿತ್ತು. ವರದಕ್ಕ ಹೇಳಿದ್ದು ಸರಿ. ಹೊರಗಡೆಯವರಿಗೆ ಹೇಗೆ ತಿಳಿಯಬೇಕು ಒಂದೇ ಹೆಸರಿನ ಎರಡು ಊರುಗಳಿರುವಾಗ? ಅದೂ ಬೇರೆ ರೂಟಿನಲ್ಲಿ. ಮೈಕಿನಲ್ಲಿ ಹೇಳುವವ ತಿಳಿದು ಹೇಳಬೇಕಲ್ಲವೇ?

#ವರದಕ್ಕನ_ವರಾತಗಳು



No comments:

Post a Comment