Thursday, December 28, 2017

ಸೂರ್ಯ

ಶರತ್ಕಾಲದ ಹಿತವಾದ ಚಳಿ, ಶಿಶಿರ ಕಾಲಿಟ್ಟೊಡನೆ ತಾರಕಕ್ಕೇರಿ ಮೈ ಮುಖ ಎಂದು ನೋಡದೆ ಒಡೆದು ಚೂರು ಮಾಡಿ, ಮೈನಲ್ಲಿನ ಎಣ್ಣೆಯ ಪಸೆಯೆಲ್ಲ ಹೀರಿ, ದೇಹವನ್ನೇ ಶುಷ್ಕವಾಗಿಸಿಬಿಡುತ್ತದೆ. ಈ ಋತುಕರ್ತನಾದ ಪ್ರಭಾಕರ ಈ ಋತುವಿನಲ್ಲಿ ಪ್ರಜೆಗಳ ಮೇಲಿನ ಕರುಣೆಯಿಂದ ಸ್ವಲ್ಪ ತಡವಾಗಿಯೇ ಉದಯಿಸುತ್ತಾನೆ ನಿಜ. ಆದರೆ ಆತ ಎಷ್ಟು ತಡವಾಗಿ ಉದಯಿಸಿದರೂ ಸಾಲದು ನಮಗೆ. ಶಿಶಿರದ ಚಳಿ ನೀಡುವ ಸುಖ ಅದು. ಆ ಸುಖದ ನಿದ್ದೆ ವರ್ಣನಾತೀತ.
ಚಳಿಗಾಲದಲ್ಲಿ ಮೊದಲು ಶತ್ರುವಾಗಿ, ಬೆಳಗಿನ ಜಾವದ ಸುಖ ನಿದ್ದೆಯನ್ನು ಹಾಳುಗೆಡವಿ, ಮನಸ್ಸಿಗೆ ಬೇಸರವನ್ನು ನೀಡುವ ಸೂರ್ಯ ತಾನೇ ಬೆಚ್ಚಗಿನ ಕಿರಣಗಳಿಂದ ನಮ್ಮನ್ನು ಹಿತಾನುಭವವನ್ನು ಕೊಟ್ಟು, ಮುದಗೊಳಿಸಿ, ಚೇತನವನ್ನು ನೀಡಿ ಒಂದು ರೀತಿಯ ಕೀಟಲೆ ಮಾಡುವ ಸ್ನೇಹಿತ. ಈ ಭಾಸ್ಕರನ ಬಾಧೆ ಇಲ್ಲಿಗಾದರೂ ನಿಂತೀತೆ ಎಂದರೆ ಇಲ್ಲ. ಈ ಚಳಿಗಾಲದಲ್ಲೇ ಇವನಿಗೆ ಬೇಗ ಹೋಗಬೇಕು, ಕೆಲಸವಿದ್ದಾಗಲೇ ರಜೆ ಹಾಕುವ ಉದ್ಯೋಗಿಗಳಂತೆ. ಆದರೆ ಅವನಿಗೂ ಒಂದು ನಿಯಮವಿದೆಯಲ್ಲ. ನಮಗೂ ಅಂಥಾ ಬೇಸರವೇನೂ ಇಲ್ಲ ಬಿಡಿ. ಎಷ್ಟಂದರೊ 'ಮಿತ್ರ' ಅಲ್ಲವೇ ಆತ? ಬಹು ಭರವಸೆಯ ಮಿತ್ರ ಈ ಗಭಸ್ತಿಮಾನ್, ನಾಳೆ ಉದಯಿಸಿಯೇ ಉದಯಿಸುತ್ತಾನೆ ಎನ್ನುವ ಗ್ಯಾರಂಟಿ ನಮಗೆ.

ಲೋಕದಲ್ಲಿ ಎಲ್ಲೂ ನಿಲ್ಲದ ಪ್ರಯಾಣ ಅಂದರೆ ಅದು ಸೂರ್ಯನದ್ದು. ಚಂದ್ರನಿಗೆ ಬಿಡಿ, ಅಮಾವಾಸ್ಯೆಯ ದಿನ ವಿರಾಮ ಇದೆ. ಇವನಿಗೆ ಇಲ್ಲವೇ ಇಲ್ಲ. ಪಾಪ!! ಸಂಬಳ. ಪ್ರಾವಿಡೆಂಟ್ ಫಂಡ್, ಗ್ರಾಚುಯಿಟಿ ಕೂಡಾ ಇಲ್ಲ ಇವನಿಗೆ. ಆದಾಯ ಇಲ್ಲದ್ದರಿಂದ ತೆರಿಗೆಯ ಪ್ರಶ್ನೆಯೇ ಇಲ್ಲ ಬಿಡಿ. ನಮ್ಮಂಥವರಿಗೆ ತೆರಿಗೆ ವಿಚಾರದಲ್ಲಿ, ಗಿರಾಕಿಗಳ ವಿಚಾರದಲ್ಲಿ ದೊಡ್ಡ ಗ್ಯಾರಂಟಿ ಇವನದ್ದೆ. ಈತ ಎಂದಿಗೂ ನಮ್ಮ ಗಿರಾಕಿಯಾಗುವುದಿಲ್ಲ ಎನ್ನುವ ಗ್ಯಾರಂಟಿ.

ತಾನು ಬೆಳಗಿ ಲೋಕವನ್ನೆಲ್ಲಾ ಬೆಳಗುತ್ತಾನೆ ಈ ಸೂರ್ಯ. ಈತನ ಬಿಸಿಲಿನಿಂದಲ್ಲವೇ ಭೂಮಿಯ ಮೇಲಿನ ನೀರು ಆವಿಯಾಗಿ, ಮೋಡವಾಗಿ, ಮಳೆಯಾಗಿ ನದಿಯಾಗೆ ತೊರೆಯಾಗಿ ಹರಿದು ನಮ್ಮ ಜೀವನವನ್ನು ನಡೆಸಲು ಸಹಾಯವಾಗುವುದು. ಈತನ ಉಪಕಾರ ನಿಜಕ್ಕೂ ತೀರಿಸುವುದು ಕಷ್ಟ. ಈ ಉಪಕಾರದ ಸ್ಮರಣೆ ಇರಲಿ ಎಂದೇ ಇರಬೇಕು, ಆತನಿಗೆ ಮೂರೂ ಹೊತ್ತಿನಲ್ಲಿ ಅರ್ಘ್ಯ ಪ್ರದಾನ ಮಾದಬೇಕು ಎಂದಿದ್ದು.

ಈ ಸೂರ್ಯನ ಉದಯ ಅಸ್ತಗಳೆರಡೂ ರೋಚಕ. ಒಂದು ದಿನವನ್ನು ಕೊಟ್ಟರೆ ಇನ್ನೊಂದು ರಾತ್ರಿಯನ್ನು ಕೊಡುತ್ತದೆ. ಒಂದು ಉಲ್ಲಾಸ-ಉತ್ಸಾಹಗಳನ್ನು ಕೊಟ್ಟರೆ ಇನ್ನೊಂದು ಆಯಾಸ-ವಿಶ್ರಾಂತಿಗಳನ್ನು ನೆನಪಿಸುತ್ತದೆ.ಒಂದು ಇಂದಿನ ಬಗ್ಗೆ ಭರವಸೆ ಕೊಟ್ಟರೆ ಇನ್ನೊಂದು ನಾಳಿನ ಭರವಸೆ ಕೊಡುತ್ತದೆ. ಭೂಮಿಯ ಒಂದು ಪಾರ್ಶ್ವದಲ್ಲಿ ಉದಯಿಸುತ್ತಿರುವಾಗಲೇ, ಇನ್ನೊಂದು ಪಾರ್ಶ್ವದಲ್ಲಿ ಅಸ್ತಮಿಸುತ್ತಿರುತ್ತಾನೆ ಈ ವಿಂಧ್ಯ ವೀಥಿ ಪ್ಲಮಂಗಮ. ಒಂದೆಡೆಯಲ್ಲಿ ನೋಡು ನಾನಿದ್ದೇನೆ ಎಂದು ಉರಿಯುತ್ತಿದ್ದಾನೆ ಮಧ್ಯಾಹ್ನದಲ್ಲಿ, ಇನ್ನೊಂದು ಭಾಗದಲ್ಲಿ ಮತ್ತೆ ಬರುವ ಹವಣಿಕೆಯಲ್ಲಿನ ತುಂಟತನ ಇವನಿಗೆ. ವಾಸ್ತವದಲ್ಲಿ ಸ್ಥಿರನಾದ ಈತನಿಗೆ ಉದಯ-ಅಸ್ತಮಾನಗಳೆರಡೂ ಇಲ್ಲ. ಹಗಲು ಮತ್ತು ರಾತ್ರಿಯಾಗುತ್ತಿರುವುದರಿಂದಷ್ಟೆ ನಮಗೆ ಉದಯ ಅಸ್ತಮಾನಗಳ ಅನುಭವ ಇದೆ.

ಇದೆಲ್ಲಾ ನಮ್ಗೆ ಗೊತ್ತಿದ್ದಿದ್ದೇ ಬಿಡಿ. ನಾವೂ 'ಎಜುಕೇಟೆಡ್' ಅಲ್ಲವೇ? ಫಿರಂಗಿಗಳು ದೂರದ ಬ್ರಿಟನ್ನಿನಿಂದ ನಮ್ಮಲ್ಲಿ ತನಕ ಬಂದು, ಅಲ್ಲಿ ನಡೆದ ವಿಜ್ಞಾನದ ಸಂಶೋಧನೆಗಳನ್ನೆಲ್ಲಾ ನಮಗೆ ಕಲಿಸಿ ಕೃತಾರ್ಥರನ್ನಾಗಿಸಿ, ನಮ್ಮ ತಲೆಯಲ್ಲಿ ನಾವು ವೈಜ್ಞಾನಿಕವಾಗಿ ಹಿಂದುಳಿದವರು ಎನ್ನುವ ಬೀಜ ಬಿತ್ತಿದ್ದಾರಲ್ಲವೇ? ಇರಬಹುದು ಬಿಡಿ. ಆದರೆ, ಆ ಬ್ರೀಟಿಷರು, ಇಲ್ಲಿ ಮಹಾಭಾರತ ಬರೆದಾಗ ಸೊಪ್ಪಿನುಡಿಗೆ ಉಟ್ಟು ತಿರುಗಿದ್ದರು ಎಂದಿದ್ದರಂತೆ ರಾಷ್ಟ್ರಕವಿ ಕುವೆಂಪು. ರಸಋಷಿಯಾಡಿದ ಈ ಮಾತು ನಿಜ. ನಮ್ಮ ಮಹರ್ಷಿಗಳ ಜ್ಞಾನದ ಅಗಾಧತೆ ಪರಿಚಯವಿದ್ದಿರಬೇಕು ಆ ಮಹಾಕವಿಗೆ. ಏಕೆಂದರೆ ವಿಷ್ಣುಪುರಾಣದ ಕೆಲ ಶ್ಲೋಕಗಳು ಅದಕ್ಕೆ ಸಾಕ್ಷಿಯಾಗಿವೆ.
ದಿವಸಸ್ಯ ರವಿರ್ಮಧ್ಯೇ ಸರ್ವಕಾಲಂ ವ್ಯವಸ್ಥಿತಃ||
ಸರ್ವದ್ವೀಪೇಷು ಮೈತ್ರೇಯನಿಶಾರ್ದ್ಧಸ್ಯ ಚ ಸಮ್ಮುಖಃ|
ಉದಯಾಸ್ತಮನೇ ಚೈವ ಸರ್ವಕಾಲಂ ತು ಸಮ್ಮುಖೇ||
ವಿದಿಶಾಸು ತ್ವಶೇಷಾಸು ತಥಾ ಬ್ರಹ್ಮನ್ ದಿಶಾಸು ಚ|
ಯೈರ್ಯತ್ರ ದೃಶ್ಯತೇ ಭಾಸ್ವಾನ್ ಸ ತೇಷಾಮುದಯಃ ಸ್ಮೃತಃ||
ತಿರೋಭಾವಂ ಚ ಯತ್ರೈತಿ ತತ್ರೈವಾಸ್ತಮನಂ ರವೇ:|
ನೈವಾಸ್ತಮನಮಕರ್ಮಸ್ಯ ನೋದಯ: ಸರ್ವದಾ ಸತ:||
ಉದಯಾಸ್ತಮನಾಖ್ಯಮ್ ಹಿ ದರ್ಶನಾದರ್ಶನಂ ರವೇಃ|
ಶಕ್ರಾದೀನಾಂ ಪುರೇ ತಿಷ್ಠನ್ ಸ್ಪೃಷ್ಯ್ತತ್ಯೇಷ ಪುರತ್ರಯಮ್||
ವಿಕೋಣೌ ದ್ವೌ ವಿಕೋಣಸ್ಥಃ ತ್ರೀನ್ ಕೋಣಾನ್ ದ್ವೇ ಪುರುಷಾ ತಥಾ|
ಉದಿತೋ ಉದಿತೋ ವರ್ದ್ಧಮಾನಾಭಿರಾಮಧ್ಯಾಹ್ನತ್ತಪನ್ ರವಿ:||

ಶ್ಲೋಕಗಳ ಅರ್ಥ ಸಂಕ್ಷಿಪ್ತವಾಗಿ ಹೀಗಿದೆ.
ಸೂರ್ಯನು ದಿಕ್ಕುಗಳ ಬ್ರಹ್ಮ ಅಂದರೆ ಸೃಷ್ಟಿಕರ್ತ. ಈತನ ಉದಯ-ಅಸ್ತಗಳಿಂದಲೇ ದಿಕ್ಕುಗಳಾಗಿವೆ. ಈತನು ಉದಯ ಹಾಗೂ ಅಸ್ತದ ಸಮಯದಲ್ಲಿ ಒಂದು ದ್ವೀಪದಲ್ಲಿದ್ದು ಇನ್ನೊಂದು ದ್ವೀಪಕ್ಕೆ ಸಮ್ಮುಖವಾಗಿರುತ್ತಾನೆ. ಮಧ್ಯಾಹ್ನವನ್ನುಂಟು ಮಾಡಿದ ದ್ವೀಪಕ್ಕೆ ಸಮ್ಮುಖನಾಗಿ ಮಧ್ಯರಾತ್ರಿಯನ್ನು ಕೊಡುತ್ತಾನೆ. ಸೂರ್ಯನ ಕಾಣುವಿಕೆಯನ್ನು ಉದಯವೆಂತಲೂ ಕಾಣದಿರುವಿಕೆಯನ್ನು ಅಸ್ತ ಎಂದೂ ವ್ಯವಹರಿಸುತ್ತಾರೆ. ಈತನಿಗೆ ಉದಯ-ಅಸ್ತಮ ಎನ್ನುವ ಕರ್ಮಗಳಿಲ್ಲ. ಇಂದ್ರನ ಪುರದಲ್ಲಿ ನಿಂತು ಉಳಿದ ಮೂರು ಪುರಗಳನ್ನು (ದಿಕ್ಕುಗಳನ್ನು) ಸ್ಪರ್ಷಿಸುತ್ತಾನೆ,  ಒಂದು ಕೋಣದಲ್ಲಿ ನಿಂತು ಎರಡು ವಿಕೋಣಗಳನ್ನು,  ವಿಕೋಣದಲ್ಲಿ ನಿಂತು ಮೂರು ವಿಕೋಣಗಳನ್ನು ಬೆಳಗುತ್ತಾನೆ.
ಕೋಣ ಎಂದರೆ ಮುಖ್ಯ ದಿಕ್ಕು. ಪೂರ್ವ, ಪಶ್ಚಿಮ ಹೀಗೆ. ವಿಕೋಣ ಎಂದರೆ ಉಪದಿಕ್ಕುಗಳು. ಆಗ್ನೇಯ, ವಾಯವ್ಯ ಹೀಗೆ.
ಅಂದರೆ ಪೂರ್ವದಲ್ಲಿದ್ದಾಗ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳನ್ನು ಬೆಳಗುತ್ತಾನೆ. ಈ ಮುಖ್ಯ ದಿಕ್ಕುಗಳು ಬೆಳಗಬೇಕಾದರೆ ಅವುಗಳ ಮಧ್ಯದ ಉಪದಿಕ್ಕುಗಳೂ ಬೆಳಗಬೇಕು. ವಿಕೋಣದಲ್ಲಿದ್ದಾಗ ಉದಾಹರಣೆಗೆ ಈಶಾನ್ಯದಲ್ಲಿದ್ದಾಗ, ನೈರುತ್ಯ, ಆಗ್ನೇಯ, ವಾಯವ್ಯಗಳನ್ನು ಬೆಳಗುತ್ತಾನೆ. ಮುಖ್ಯದಿಕ್ಕುಗಳು ಉಪದಿಕ್ಕುಗಳ ಮಧ್ಯದಲ್ಲಿಯೇ ಇರುವುದರಿಂದ ಸಹಜವಾಗಿಯೇ ಅವೂ ಕೂಡಾ ಬೆಳಗನ್ನು ಪಡೆಯುತ್ತವೆ.
ಇಂದಿನ ಕಾಲದ ಸೋಲಾರ್ ಸೆನ್ಸರ್ ಗಳು ಅಂದೂ ಇದ್ದವೇನೋ ಅನ್ನಿಸುವುದಿಲ್ಲವೇ? ಸೌರಾಧಾರಿತ ಉಪಕರಣಗಳಲ್ಲಿರುವ ಈ ಸೆನ್ಸರ್ ಗಳು ಸೂರ್ಯನಿರುವ ದಿಕ್ಕನ್ನು ಗುರುತಿಸಿ ಉಪಕರಣಗಳು ಕೆಲಸ ಮಾಡುವಂತೆ ಮಾಡುತ್ತವೆಯಲ್ಲ, ಅದಕ್ಕೇ ಕೇಳಿದೆ.

Wednesday, December 27, 2017

ಪಾಷಂಡಿಗಳು

"ಅಸುರರತಿಮಾಂಸಾಹಾರಿಗಳು ಪಾಷಂಡಿಗಳಿಗಿವನಗ್ಗಳದ ದೇವ"- ದಕ್ಷ ಯಜ್ಞ ಯಕ್ಶಗಾನ ಪ್ರಸಂಗದಲ್ಲಿ, ದಕ್ಷ ಶಿವನನ್ನು ನಿಂದಿಸುವಾಗ ಆಡುವ ಮಾತು ಇದು.ದಕ್ಷ ಯಜ್ಞ ಪ್ರಸಂಗದಲ್ಲಿ, ತನ್ನನ್ನು ಕಂಡು ಅಳಿಯನಾದ ಈಶ್ವರ ಎದ್ದು ನಿಂತು ಗೌರವ ಸೂಚಿಸದಿದ್ದಾಗ ಅವಮಾನಿತನಾದ ದಕ್ಷ ಈಶ್ವರನನ್ನು ನಿಂದಿಸುತ್ತಾನೆ. ತನ್ನ ನಾಲಗೆಯನ್ನು ಅತಿಯಾಗಿ ಹರಿಬಿಟ್ಟ. ಇದನ್ನು ಕೇಳಿ, ಇಂದ್ರಾದಿ ದೇವತೆಗಳು ಸಿಟ್ಟಾದರು. ಆದರೂ ದಕ್ಷ ಒಬ್ಬ ಪ್ರಜಾಪತಿ, ಆತನನ್ನು ಎಲ್ಲರೆದುರಿಗೆ ನಿಂದಿಸಬಾರದು ಎನ್ನುವ ಉದ್ದೇಶದಿಂದ, ದೇವೇಂದ್ರ  ನೀತಿಮಾತುಗಳನ್ನು ಹೇಳಿದ. ಈಶ್ವರ ದೇವರು ಎಂದು ನೆನಪು ಮಾಡಿ ಕೊಟ್ಟ. ಅಹಂಕಾರವೇ ಮೈಎಲ್ಲ ತುಂಬಿದ್ದಾಗ ಒಳ್ಳೆ ಮಾತುಗಳಿಗೆ ಕಿವಿ ಹೋದೀತಾದರೂ ಹೇಗೆ? ತಲೆಯಲ್ಲಿ ಬುದ್ಧಿ ಇದ್ದರೆ ಅಹಂಕಾರ ಬರುವುದಿಲ್ಲ. ಅಹಂಕಾರ ಬಂದ ಮೇಲೆ ಬುದ್ಧಿ ಉಳಿಯುವುದಿಲ್ಲ. ದಕ್ಷ ಇಂದ್ರನಿಗೂ ತನ್ನ ಹೊಲಸು ನಾಲಗೆ ತೋರಿಸಿದ. ಶಿವನ ಭಕ್ತರನ್ನೂ ಜರೆದ. ಆಗ ಬರುವ ಪದ್ಯವೇ ಇದು.

ಪ್ರತೀ ಸಲ ಈ ಪ್ರಸಂಗ ನೋಡಿದಾಗಲೆಲ್ಲ ಬಂದ ಪ್ರಶ್ನೆ, ಪಾಷಂಡಿಗಳು ಎನ್ನುವ ಶಬ್ದದ ಅರ್ಥ ಏನು? ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ, ಜಾತಿ ಹೆಸರಿನಲ್ಲಿ ಪ್ರಲೋಭನೆ ಒಡ್ಡುವುದು, ಅದನ್ನೇ ಬಂಡವಾಳವಾಗಿಸಿ ಹೊಗಳಾಟ ಬಯ್ದಾಟ ಮಾಡಿ, ಪ್ರಶಸ್ತಿ ಪುರಸ್ಕಾರ ಗಿಟ್ಟಿಸುವುದು ಹೊಸತೂ ಅಲ್ಲ, ವಿಶೇಷವೂ ಅಲ್ಲ.ಚುನಾವಣೆ ಹೊತ್ತಿನಲ್ಲೂ ಈ ಕೆಲಸ ಬಹಳ ನಡೆಯುತ್ತದೆ. ಯಾವುದೇ ಜಾತಿ ಜಗಳ ಪೇಪರಿನಲ್ಲಿ ಬಂದರೂ, ಈ ಪಾಷಂಡಿ ಎನ್ನುವ ಹೆಸರು ಎಲ್ಲೂ ನನ್ನ ಕಣ್ಣಿಗೆ ಬೀಳಲಿಲ್ಲ.

ಜಾತಿ ಹೆಸರೆತ್ತುವುದಷ್ಟೆ ಅಲ್ಲ. ಅದನ್ನು ಬ್ರಾಹ್ಮಣರು ಮಾಡಿದ್ದು ಎಂದು ವದರುತ್ತಾ, ರಾಮಾಯಣ ಮಹಾಭಾರತಗಳು ಇತಿಹಾಸವಾಗಿದ್ದರೂ ಅದನ್ನು ಪುರಾಣದ ಜತೆ ಸೇರಿಸಿ, ಅದರ ಶ್ಲೋಕಗಳನ್ನು ತಿರುಚಿ, ಏನೇನೋ ಬೊಗಳುವ ಬುದ್ಧಿಜೀವಿಗಳು ಯಾವುದಾದರೂ ಜಾತಿಯ ಬೆಂಬಲ ಅಥವಾ ಸಹಾನುಭೂತಿ ಗಿಟ್ಟಿಸುವ ಭರದಲ್ಲಿ ಅವರ ಜಾತಿಯನ್ನು ಗ್ರನ್ಥಗಳಲ್ಲಿ ಹೀನಾಯವಾಗಿ ಚಿತ್ರಿಸಿದ್ದಾರೆ ಎಂದು ಹೇಳಿ ಅದಕ್ಕೊಂದು ಸುಳ್ಳು ಆಧಾರ ವ್ಯಾಖ್ಯಾನವನ್ನೂ ಕೊಡುವ ಸ-ಮಜಾವಾದಿಗಳೂ ಎಲ್ಲಿಯೂ ಈ ಬಗ್ಗೆ ಹೇಳಿದ್ದು ಕೇಳಿಲ್ಲ.

ಹೋಗಲಿ. ಇದು ಡೈನೋಸಾರಸ್ ಹಾಗೆ ಯಾವುದಾದರೂ ನಾಶವಾದ ಪ್ರಾಣಿಯೋ ಪಕ್ಷಿಯೋ ಇರಬಹುದೇ ಎಂದರೆ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಕ್, ಅನಿಮಲ್ ಪ್ಲಾನೆಟ್ ಚಾನೆಲ್ಲುಗಳು ಕೂಡಾ ಈ ಬಗ್ಗೆ ಏನು ಕೂಡಾ ಹೇಳಿಲ್ಲ. ಸುದ್ದಿವಾಹಿನಿಗಳು ಯಾವ ಮೇಧಾವಿಯನ್ನೂ ಕರೆಯಿಸಿ ಈ ಬಗ್ಗೆ ಚರ್ಚೆ ಕೂಡಾ ನಡೆಸಿಲ್ಲ. ಇದೆಲ್ಲ ಆದಮೇಲೆ ನಾನು ಇನ್ನೀ ಶಬ್ದದ ಅರ್ಥದ ಆಸೆ ಬಿಡುವುದೇ ಒಳ್ಳೆಯದು ಎಂದು ಭಾವಿಸಿದೆ. ನನಗೆ ಸರಿಯಾಗಿ ಮಾಡಲು ಬರುವ ಒಂದೇ ಕೆಲಸ ಓದುವುದು ಮತ್ತೆ ವರ್ಣಾಶ್ರಮ ಧರ್ಮದ ಪ್ರಕಾರ ನನಗೆ ಕರ್ತವ್ಯವೂ ಆದ ಅಧ್ಯಯನ ಮಾಡುತ್ತಿದ್ದೆ, ಉಳಿದ ಕೆಲಸಗಳ ಜೊತೆ.

ವಿಷ್ಣು ಪುರಾಣದಲ್ಲಿ ಒಂದು ಪ್ರಸಂಗ ಬರುತ್ತದೆ. ದೇವ ದಾನವರ ನಡುವೆ ಘನಘೋರ ಯುದ್ಧದಲ್ಲಿ ದೇವತೆಗಳಿಗೆ ಎಷ್ಟು ಪ್ರಯತ್ನಪಟ್ಟರೂ ಗೆಲುವು ದೊರಕುವುದಿಲ್ಲ. ತಾವು ಧರ್ಮಿಗಳಾಗಿಯೂ ಗೆಲುವು ಸಿಗದೆ ಇದ್ದಾಗ ದೇವತೆಗಳು ಅಸುರರ ಶಕ್ತಿಯ ರಹಸ್ಯ ಭೇದಿಸಲು ಹೋದರು. ಆಗ ಅವರಿಗೆ ತಿಳಿಯಿತು. ಈ ಅಸುರರ ಶಕ್ತಿ ರಹಸ್ಯ ಅವರ ನಿಯತ ಮತ್ತು ನೈಮಿತ್ತಿಕ ಕರ್ಮಗಳು, ಅದನ್ನು ಮಾಡುವಲ್ಲಿ ಅವರು ಇಟ್ಟುಕೊಂಡಿರುವ, ಧರ್ಮದ ಧಾರಣೆ, ವೇದೋಕ್ತ ಕರ್ಮಗಳನ್ನು ಕ್ರಮದಂತೆ ಮಾಡುವ ವಿಕ್ರಮವೇ ಅವರ ಪರಾಕ್ರಮಕ್ಕೆ ಕಾರಣ ಎಂದು.  ದೇವೇಂದ್ರ ಯಥಾ ಪ್ರಕಾರ ವಿಷ್ಣುವಿನ ಬಳಿ ಓಡಿದ.

ವಿಷ್ಣು, ವಿಚಾರವನ್ನೆಲ್ಲಾ ತಿಳಿದು ಗೊಂದಲಕ್ಕೀಡಾದ. ಧರ್ಮದ ಮೂಲಕ ದೇವರನ್ನು ತೃಪ್ತಿಪಡಿಸಿ, ಶಕ್ತಿ ಪಡೆದು ದೇವರ ವಿರುದ್ಧವೇ ಅಸುರರ ವರ್ತನೆ. ಉದ್ದೇಶ, ಭೋಗ, ಅಧರ್ಮದಾಚರಣೆ. ರಾಜಸೀ ಶಕ್ತಿಗಳ ಕೈಗೆ ಸಾತ್ವಿಕ ಶಕ್ತಿ ಸೇರಿದರೆ ಆಗುವ ಅಪಾಯ ಸರ್ವನಾಶ ಅಷ್ಟೇ. (ಇಂದಿನ ಉತ್ತರ ಕೊರಿಯಾ ಇದಕ್ಕೆ ಉದಾಹರಣೆ. ರಾಜಸೀ ಸ್ವಭಾವದ ಆಡಳಿತಗಾರನ ವರ್ತನೆ ನೋಡಿದರೆ ಅದರ ದುಷ್ಪರಿಣಾಮದ ಊಹೆ ಭಯ ಹುಟ್ಟಿಸುವುದಿಲ್ಲವೇ?). ಹಾಗಂತ, ಇವರನ್ನು ಕೊಲ್ಲೋಣ ಎಂದರೆ ಅದು ನಿಯಮಬಾಹಿರ. ಧರ್ಮದಲ್ಲಿದ್ದೂ ಕೊಂದರೆ ನಾಳೆ ಲೋಕದ ಜನ ಧರ್ಮ ತ್ಯಜಿಸುತ್ತಾರೆ. ಆಗಲೂ ಸರ್ವನಾಶವೇ ಆಗುವುದು. ಕೊಲ್ಲದೆ ಬಿಟ್ಟರೆ, ಜಗತ್ತಿನ ಚಾಲಕ ಶಕ್ತಿ-ಪಾಲಕ ಶಕ್ತಿ ಸತ್ವಗುಣ ಸಂಕಟಕ್ಕೆ ಸಿಗುತ್ತದೆ. ಸಾಧಕರಿಗೆ ಸಿಗಬೇಕಾದ ಸ್ವರ್ಗ ಮತ್ತು ಸಾತ್ವಿಕ ಶಕ್ತಿಯ ಅಧಿಪತ್ಯ, ದುಷ್ಟಭಾವದಿಂದ ಧರ್ಮ ನಡೆಸಿದ ಅಸುರರ ಕೈ ಸೇರುತ್ತದೆ. ಆಗಲೂ ಜನ ಧರ್ಮದ ಮೇಲಿನ ನಂಬಿಕೆ ಕಳೆದುಕೊಂಡು ಧರ್ಮವನ್ನು ತ್ಯಜಿಸುತ್ತಾರೆ. ಎರಡರಲ್ಲೂ ಧಕ್ಕೆ ಧರ್ಮಕ್ಕೆ.

ಉಪಾಯಗಾರ ವಿಷ್ಣು, ಮಾಯಾಮೋಹನನ್ನು ಸ್ರುಷ್ಟಿಸಿದ. ಆ ಮಾಯಾಮೋಹ ಅಸುರರ ಬಳಿ ಬಂದ. ವಿವಸ್ತ್ರನಾಗಿ, ತಲೆ ಬೋಳಿಸಿಕೊಂಡು, ಸುಂದರ ಶಾಂತ ಮುಖ ಮುದ್ರೆ ಹೊತ್ತು. ಮೃದು ಮಧುರ ಧ್ವನಿ. ಶಬ್ದ ಸೌಂದರ್ಯ, ಮಕರಂದದ ಸಿಹಿಯನ್ನೂ ಮೀರಿಸುತ್ತಿತ್ತು. ಆತನಾಡಿದ ಮಾತುಗಳನ್ನು ಪುರಾಣದಲ್ಲಿ ಪಾಷಂಡವಾದ ಎಂದು ಹೇಳಲಾಗಿದೆ.

ಜಗತ್ತು ನಿರಾಧಾರ. ಮನಸ್ಸಿನ ಭ್ರಮೆಯೇ ಎಲ್ಲ ಗೋಚರ ಅಗೋಚರಕ್ಕೆ ಕಾರಣ. ಯಜ್ಞದಲ್ಲಿ ಅಗ್ನಿಗೆ ಹಾಕಿದ ಹವಿಸ್ಸು ಬೂದ್ಯಾಗುತ್ತದೆ ಅದು ಫಲವನ್ನು ನೀಡುತ್ತದೆ ಎನ್ನುವುದು ಬಾಲಿಶತನ. ಇಂದ್ರನಾಗಿ ಹವಿಸ್ಸಿಗೆ ಹಾಕಿದ ಸಮಿತ್ತುಗಳನ್ನು ಅಂದರೆ ಮರದ ಕಡ್ಡಿಗಳನ್ನು ತಿನ್ನಬೇಕೆ? ಅನ್ಯ ಪುರುಷನು ಶ್ರಾದ್ಧಾನ್ನವನ್ನು ಭುಂಜಿಸಿ ಪಿತೃಗಳಿಗೆ ಹೇಗೆ ತೃಪ್ತಿ ಕೊದಲು ಸಾಧ್ಯ? ಇದು ಸಾಧ್ಯವಿದ್ದಿದ್ದರೆ ಪ್ರವಾಸಿಗರು ತಮ್ಮೊಡನೆ ಬುತ್ತಿ ಒಯ್ಯುವ ಪ್ರಮೇಯವೇ ಇರುತ್ತಿರಲಿಲ್ಲ. ಶ್ರಾದ್ಧ-ಯಜ್ಝಗಳು ಮೌಢ್ಯ. ಅದನ್ನು ಉಪೇಕ್ಷಿಸುವುದರಿಂದ ಮಾತ್ರ ಶ್ರೇಯಸ್ಸು. ವೇದಗಳು ಅಪೌರುಷೇಯ ಎನ್ನುತ್ತಾರೆ? ಅವೇನು ಆಕಾಶದಿಂದ ಉದುರಿ ಬಿದ್ದವೇ? ಇದೆಲ್ಲ ಯುಕ್ತವೂ ತಾರ್ಕಿಕವೂ ಆದ ಮಾತುಗಳೇ? ಖಂಡಿತ ಅಲ್ಲ. ಅತಾರ್ಕಿಕವೂ ನಿರಾಧಾರವೂ ಆದ ಮಾತುಗಳನ್ನು ನಂಬಿ ನಡೆದರೆ ಹೇಗೆ ಶ್ರೇಯಸ್ಸು ಸಾಧ್ಯ? ಆದ್ದರಿಂದ ನಾನು ಹೇಳಿದಂತೆ ನದೆದು, ನನ್ನ ಮಾತುಗಳನ್ನು ಆಚರಿಸಿ ಯುಕ್ತರಾಗಿ ಬದುಕಿ ಸ್ವರ್ಗವನ್ನು ಪಡೆಯಿರಿ..

ಮಾಯಾಮೋಹನ ಮತುಗಳನ್ನು ಕೇಳಿ ಅಸುರರು ವೇದವನ್ನು ತ್ಯಜಿಸಿದರು. ತ್ರಯೀ ಎಂದು ಕರೆಸಿಕೊಂಡ ವೇದಗಳನ್ನು ತ್ಯಜಿಸಿಡೊಡನೆ ನಗ್ನ ಎನ್ನಿಸಿಕೊಂಡರು. ಮೂರೂ ಬಿಟ್ಟವರು ಎನ್ನುವ ಮಾತು ಹುಟ್ಟಿದ್ದೇ ಹೀಗೆ. ಮೂರೂ ಬಿಟ್ಟವರು ಎಂದರೆ ಧರ್ಮಸಮ್ಮತವಾದ ಆಚರಣೆಗಳನ್ನು ವರ್ಜಿಸಿದವರು ಅಂತ ಅರ್ಥ. ಮಾಯಾಮೋಹನು ಹೇಳಿದ ಮಾತುಗಳನ್ನೇ ಆಚರಿಸಿದರು. ಧರ್ಮವನ್ನು ತ್ಯಜಿಸಿದ್ದ ಅವರನ್ನು ದೇವತೆಗಳು ಸುಲಭವಾಗಿ ಸೋಲಿಸಿದರು.

ಉಳಿದ ಕೆಲವರು ತಾವು ನಂಬಿದ್ದ ಮಾಯಾಮೋಹನ ಉಪದೇಶವನ್ನೇ ಆಚರಿಸುತ್ತಾ ವೇದಗಳನ್ನು, ವೈದಿಕ ದೇವತೆಗಳನ್ನು ದೂಷಿಸತೊಡಗಿದರು. ಅವರ ದೂಷಣೆ ವಿತಂಡ ವಾದದಿಂದ ಕೂಡಿತ್ತು. ಅವರ ವಿಚಾರಗಳು ನಿರಾಧಾರವಾಗಿತ್ತು. ವೈದಿಕರು ಯಾವುದಾದರೊಂದನ್ನು ಅವರಿಗೊಪ್ಪುವ ತರ್ಕದಲ್ಲಿ ಸಾಧಿಸಲಿಲ್ಲ ಎನ್ನುವ ಕಾರಣಕ್ಕಷ್ಟೇ ವೈದಿಕರ ಮಾತುಗಳನ್ನು ಸುಳ್ಳು ಎಂದು ಹೇಳುತ್ತಿದ್ದರು. ವೇದದ ವಿಧಾನಗಳನ್ನೂ, ಅದರಲ್ಲಿನ ವಿಚಾರ ವಿಷಗಳನ್ನೂ ಆಚರಣೆಗಳನ್ನೂ ಕುತರ್ಕದ ಮೂಲಕ ಸುಳ್ಳು ಅಥವಾ ತಪ್ಪು ಎಂಬಂತೆ ಬಿಂಬಿಸುತ್ತಿದ್ದರು. ನೀವನ್ದುಕೊಣ್ಡಿದ್ದು ಸತ್ಯ. ನಮ್ಮ ಬಾಯಲ್ಲಿ ಗಂಜಿಗಳು ಅನ್ನಿಸಿಕೊಂಡವರೂ ಇಂಥಾ ಮಾತುಗಳನ್ನೇ ಆಡಿದ್ದು. ಜನ ಇಂಥವರನ್ನು ಪಾಷಂಡಿಗಳು ಎಂದು ಕರೆದರು.

ಮಾಯಾಮೋಹ ಹೇಳಿದ ಮಾತುಗಳನ್ನು ಮುಂದುವರೆಸಿದವರು ಪಾಷಂಡಿಗಳು ಅಂತ ಹೀಗೆ ತಿಳಿದೆ. ಮುಂದೆ ಕಲಿಯುಗದ ವರ್ಣನೆ ಮಾಡುವಾಗ ಅಲ್ಲಿ ಈ ರೀತಿ ಹೇಳಲಾಗಿದೆ.
"ಪಾಷಂಡಮಾಶ್ರಯೀಂ ವೃತ್ತಿಮಾಶ್ರಯಿಷ್ಯನ್ತಿ ಸತ್ಕೃತಾಃ"- ಪಾಷಂಡವಾದಿಗಳನ್ನು ಆಶ್ರಯಿಸಿ ಅವರ ವೃತ್ತಿಗಳನ್ನೇ ಆಶ್ರಯಿಸುತ್ತಾರೆ, ಅದೂ ಸತ್ಕೃತರು ಅಂದರೆ ಒಳ್ಳೆಯದನ್ನು ಮಾಡಿದವರು
ಇಂದಿನ ಬಾಯಿ ಹರುಕ ಭಿಕ್ಷುಕರ ಬಗೆಗೂ ಅಂದೇ ತಿಳಿದಿದ್ದರಲ್ಲ ಪಾರಾಶರ್ಯ ವ್ಯಾಸರು. ಅಚ್ಚರಿ ಅಲ್ಲವೇ?
ವರ್ತಮಾನದಲ್ಲೂ ಹೀಗೆ ವೇದಗಳನ್ನು ಅರಿಯದೆ ಅದನ್ನು ದೂಷಿಸಿ, ಆ ದೂಷಣೆಯನ್ನು ಸರಿ ಎಂದು ಸಾಧಿಸುವ ಜನ ಬಹಳ ಇದ್ದಾರೆ. ರಾಮನನ್ನು ಹೆಂಡಗುಡುಕ ಎಂದರು. ಅಪ್ಪನಿಗೆ ಹುಟ್ಟಿದವನಲ್ಲ ಎಂದರು. ತಾನು ಹಾಗಂದೆ ಇಲ್ಲ ಅಂತಲೂ ಹೇಳಿದರು. ಹಿಂದೂ ಎನ್ನುವ ಶಬ್ದದ ಅರ್ಥ, ಹೀನಶ್ಚ ದೂಷಿಶ್ಚ ಎಂದರು. ಬ್ರಾಹ್ಮಣರನ್ನು ಏನೇನೆಲ್ಲಾ ಅಂದರು. ಯಜ್ಞದಿಂದ ಆಹಾರ ಕೊರತೆ ಸೃಷ್ಟಿಯಾಯಿತು ಎಂದು ಪಾಠ ಬರೆದರು. ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ ಅಂದರು. ಸೀತೆಗೂ ಲಕ್ಶ್ಮಣನಿಗೂ ಅನೈತಿಕ ಸಂಬಂಧವಿತ್ತು ಎಂದರು. ಗಣೇಶನನ್ನು ಗಬ್ಬರ್ ಸಿಂಗ್ ರೀತಿ ಬಿಂಬಿಸಿದರು. ಮೈಸೂರಿನ ಚಾಮುಂಡೇಶ್ವರಿಯನ್ನು ಅಭಿಸಾರಿಕೆ ಎಂದರು. ಮಹಿಷನನ್ನು ಬುದ್ಧ ಎಂದರು. ಇವರ ಭಾಷಾಜ್ಞಾನದ ಅಗಾಧತೆ ಯಾವ ಮಟ್ಟದ್ದು ಎಂದರೆ ಆಸ್ತಿಕ ಎಂದರೆ ಆಸ್ತಿ ಇದ್ದವ ಎನ್ನುವಷ್ಟು. ಇಷ್ಟಾಗಿಯೂ, ಒಬ್ಬರನ್ನೊಬ್ಬರು ಬುದ್ಧಿ ಜೀವಿ ಎಂದು ಕರೆದರು.ಬಿಡಿ. ಪಟ್ಟಿ ಮಾಡಿದರೆ ಸಮಯ ವ್ಯರ್ಥ.
ನಾವೂ ಕಡಿಮೆ ಇಲ್ಲ. ಇವರಿಗೆ ಬಹಳ ಹೇಳಿಬಿಟ್ಟೆವು. ಪಾಕಿಸ್ತಾನಿ ಏಜೆಂಟರು, ಲದ್ದಿ ಜೀವಿಗಳು, ಕಾಂಗಿ ಬಕೆಟ್ಟುಗಳು, ಕೆಂಪಂಗಿಗಳು, ಕಮ್ಮಿನಿಷ್ಟರು, ಕಾಕಗಳು, ಬಾಯಿ ಬಡುಕರು, ಹರ್ಕು ಬಾಯಿಗಳು, ಅಲರ್ಜಿಗಳು, ಕಜ್ಜಿಗಳು, ಕಂತ್ರಿಗಳು.... ಸಾಕು ಬಿಡಿ. ಇವರನ್ನು ಬಯ್ಯುವ ಭರದಲ್ಲಿ ನಾವು ಎಷ್ಟೋ ಬಡವರ ಆಹಾರಕ್ಕೆ ಅವಮಾನ ಮಾಡಿಬಿಟ್ಟೆವು. ಗಂಜಿ ಎಂದು ಬಿಟ್ಟೆವು.
ನಮ್ಮ ಪುರಾಣಗಳೇ ಹೇಳುತ್ತಿವೆ ಇವಕ್ಕೆ ತಕ್ಕ ಹೆಸರು ಏನು ಅಂತ. ಮೂರು ಬಿಟ್ಟವರು, ಪಾಷಂಡಿಗಳು. ನಾವು ಇನ್ನೂ ಹೆಸರು ಹುಡುಕುವುದು ಬೇಡ. ಈಗಾಗಲೇ ಗಂಜಿಗಳು ಎಂದು ಕರೆದು ಎಷ್ಟೋ ಜನ ಬಡತನದಿಂದ ಮೇಲೆ ಬಂದವರು ಪಟ್ಟ ಕಷ್ತವನ್ನು ಅವಮಾನಿಸಿದ್ದೇವೆ. ಅವರು ಗಂಜಿಯಾದರೂ ಕಷ್ಟದಿಂದ ಸಂಪಾದಿಸಿದ್ದರು. ಈ ಪಾಷಂಡಿಗಳು ಸುಳ್ಳು ಹೇಳಿ, ಅರ್ಹರಿಗೆ ಸಿಗಬೇಕಾಗಿದ್ದನ್ನು ದೋಚಿದರು. ಆ ಶ್ರಮಿಕರ ಅರ್ಜನೆ ಇವರ ಚೌರ್ಯಕ್ಕೆ ಹೋಲಿಕೆಯಾಗುವುದು ಬೇಡ. ಇನ್ನೂ ನಾವು ಇವರನ್ನು ಪಾಷಂಡಿಗಳು ಎಂದೇ ಕರೆಯೋಣ. ಮೂರೂ ಬಿಟ್ಟವರು ಎಂದರೂ ಸರಿಯೆ. ಉದ್ದವಾದರೆ ಮೂಬಿ ಎನ್ನೋಣ. ನಗ್ನರು ಎಂದರೂ ಆದೀತು. ಇದಕ್ಕೆ ಆಧಾರ ಕೇಳುವ ಧೈರ್ಯ ಅವಕ್ಕಿಲ್ಲ. ಒಂದು ವೇಳೆ ಕೇಳಿದರೂ ನಮ್ಮಲ್ಲಿದೆ.

Tuesday, December 26, 2017

ಕಾನೂನು ಅಂದ್ರೆ.......

ವರ್ಷದ ಕೊನೆಯ ತಿಂಗಳ ಕೊನೆಯ ರಜೆಯನ್ನು ಕಳೆಯಲೆಂದು ಊರಿಗೆ ಬಂದಿದ್ದೆ. ಯಥಾ ಪ್ರಕಾರ, ನನ್ನಿಷ್ಟದ ಪ್ರಭೃತಿ, ಷೇಕ್ಸ್ ಪಿಯರ್ ಮಾನಸ ಪುತ್ರ ಹಾಲ ನಾಯಕನ ದರ್ಶನವಾಯಿತು. ನನಗೂ ಹೊತ್ತು ಕಳೆಯಬೇಕಿತ್ತಲ್ಲ, ಮತ್ತೆ ಬರೆಯುವುದಕ್ಕೆ ವಿಚಾರವೂ ಬೇಕಿತ್ತು. ಸುಮ್ಮನೆ ಹಾಲನ ಬಾಯಿಗೆ ಕೋಲು ಇಳಿಸಿದೆ ಅಂದರೆ ಮಾತಿಗೆಳೆದೆ.

ಮಾತಿಗೇನು ಮತಿ ಬೇಕೆ? ಮತಿ ಇಲ್ಲದ್ದೂ ಮಾತಾಗುತ್ತದೆ ಕೇಳುವ ತಾಳ್ಮೆ ಇದ್ದರೆ. ಇನ್ನು ಕೆಲವು ಸಲ ಅನಿವಾರ್ಯ ಪರಿಸ್ಥಿತಿ ತಾಳ್ಮೆಯನ್ನು ತಂದು ಕೊಡುತ್ತದೆ ಕೂಡಾ. ಹಾಲ ಅದು ಇದು ಮಾತಾಡುತ್ತಾ, ರವಿ ಬೆಳಗೆರೆಯ ಸುದ್ದಿ ಶುರು ಮಾಡಿದ. ಹಾಲ ಯಾರೋ ದೊಡ್ಡವರ ಸುದ್ದಿಗೆ ಬಾಯ್ದೆರೆದ ಎಂದರೆ ಸಾಕು ಇಂಗ್ಲೀಷ್ ಭಾಷೆಯ ಶಬ್ದವೊಂದು ಹೊಸ ಸಂಧಿ ಸಮಾಸಗಳನ್ನು ಪಡೆದು ನವರೂಪ ತಳೆದು ಕಂಗೊಳಿಸಿ ಶಬ್ದಕೋಶದಲ್ಲಿ ಸ್ಥಾನಪಲ್ಲಟವಾಯಿತೆಂದೇ ಲೆಕ್ಕ.
ಸಿನಿಮಾದಲ್ಲಿ ಹೀರೊಯಿನ್ ಈಜುಕೊಳದಿಂದ ಮೇಲೆದ್ದು ಬರುವಾಗ ನೀರ ಹನಿ ಉದುರುತ್ತಾ, ಸುಮಧುರ ಹಿನ್ನೆಲೆ ಸಂಗೀತ ಕೇಳಿಸುತ್ತದೆಯಲ್ಲ ಹಾಗೆಯೇ, ಇಂಗ್ಲೀಷಿನ ಶಬ್ದಗಳಿಗೆ ಸಂಚಕಾರ ಬರುವ ಮುನ್ನ ಹಾಲನ ಬಾಯಿಯಲ್ಲಿ ಒಂದು ಮಹತ್ತರ ವಿಷಯ ಹೊರಬೀಳುತ್ತದೆ. ಇಷ್ಟಾದರೆ ಸಾಕು ನನ್ನ ಕಿವಿ ಅಗಲವಾಗಿ ತಲೆಯಲ್ಲಿನ ಮೆಮೋರಿ ಕಾರ್ಡ್ ಪೂರ್ತಿ ಆನ್ ಆಗುತ್ತದೆ. ಈ ಕೊಲೆಯ ವರದಿ ಮಾಡಲು.

"ಅಲ್ಲೀ ಅಪಿ!! ಎಂತಾಗೈತೆ ಅವಂಗೆ, ಅವಾಗ ನಮ್ಮನೆ ಹುಡ್ರೆಲ್ಲಾ ನೈಟ್ ಆತು ಅಂದ್ರೆ ಸಾಕು ಕ್ಲೈಮ್ ಡೈರಿ ನೋಡ್ಬೋಕು ಅಂತ ಕಾಯ್ತುದ್ದುವು. ಅದರಾಗೆ ಮಾತಾಡವ ಇವ. ನಾನೂ ಕೇಳ್ತುದ್ದೆ. ಒಂಥರಾ ಒಳ್ಳೆ ಸ್ವರ ಅವಂದು. ಅವ ಬರ್ದುದ್ದೆಲ್ಲಾ ಸತ್ಯ ಅಂತುತ್ತು ನಮ್ಮನೆ ಹುಡುಗಿ. ಅವ ಭಾರಿ ಓದ್ಯಾನಂತೆ. ಭಾಳ ವರ್ಷ ಪೇಪರ್ ನಡೆಸ್ಯಾನೆ. ನಂಗೆ ಇಂಗ್ಲಿಷ್ ಮಾತಾಡಕ್ಕೆ ಬಂದ್ರೂ ಕನ್ನಡ ಒಡಕ್ಕೆ ಬರಕಲ್ಲ ಬಿಡಿ. ಅದು ಹಂಗೇ. ಒಂದು ಕೊಡ ಶಿವ ಇನ್ನೊಂದು ಕೊಡಕಲ್ಲ. ಎಂತೋ ಒಂಚೂರು ತಿಳ್ಕಂಡವ್ರ ಸಾವಾಸ ಮಾಡಿ ಸ್ವಲ್ಪ ಮಾತು ಬಂದೈತೆ ಬಿಡಿ. ಇನ್ನೊ ಕೆಲವೈದಾವೆ ನಮ್ಮ ಕೇರಿಲಿ. ಕನ್ನಡವೇ ಬರಕಲ್ಲ ಸಮಾಗಿ, ಇನ್ನು ಇಂಗ್ಲೀಷ್ ಮಾತಾಡಿ ಉಂಡ್ವು ಬಿಡಿ. ಹಾಂ! ನಂದು ಬಿಡಿ ಎಂತ ಹೇಳದು!! ಬೆಳ್ಗೆರೆ ಸುದ್ದಿ ಮಾತಾಡನ ಕಪ್ಪು ಹೊತ್ತಾಗೆ"

ಮುಗಿಯಲಿಲ್ಲ ಹಾಲನ ಭಾಷಣ. ಮುಂದುವರೆಯಿತು."ಅವ ಪೇಪರ್ ಬರೆಯವ ಅಷ್ಟೂ ತಿಳಕಣದು ಬ್ಯಾಡೆ? ಎಲ್ಲಾ ಕಳ್ಳರಿಗೆ ಕೊಲೆಗಾರ್ರಿಗೆ ಸಮಾ ಬೈತುದ್ದ. ಇವಂಗೇ ಗೊತ್ತಾಗುಲ್ಲೇ ಹಂಗರೆ. ಕೊಲೆ ಮಾಡ್ರೆ ಪೋಲೀಎಸರು ಬಿಡಕಲ್ಲ. ಕೊಲೆ ಬಿಡಿ. ಕದ್ರೇ ಬಿಡಕಲ್ಲ. ನಾವು ಬೇರೆ ಅವ್ರಿಗೆ ನೀತಿ ಹೇಳ್ಬೋಕಿದ್ರೆ ಸಮಾ ಇರ್ಬೋಕು. ಯುಲ್ದಿದ್ರೆ ಅಪಾಯಾಕಾವೆ. ಆಗಕಲ್ಲೆ ಮಯ್ತೆ? ಅವ ನನ್ನ ಲೆಕ್ಕ ಒಟ್ಟು ಎಂತೋ ಒಂದು ಬರಿತುದ್ದ ಎಂತೊ ಒಂದು ಹೇಳ್ತುದ್ದ. ಅದೆಲ್ಲ ಮಾಡಕ್ಕೂ ಮುಂಚೆ ತಿಳ್ಕಬೋಕು ನನ್ನ ಹಂಗೆ. ನಾ ತಿಳ್ಕಳ್ದೆ ಒಂದಾದ್ರೂ ಮಾತಾಡ್ತುನ? ಹೇಳಿ ಅಪಿ. ಇಂಗ್ಲಿಶ್ ಮಾತಾಡ್ರೆ ನೀವೇ ಎಂತೂ ಹೇಳಕಲ್ಲ..."

ನನಗಿಲ್ಲಿ ಗೊಂದಲವಾಯಿತು ಈ ಹಾಲ ನನ್ನನ್ನು ಏಣಿ ಹತ್ತಿಸಿದ್ದಾ ಅಥವಾ ತಾನೇ ಹತ್ತಿದ್ದಾ ಅಂತ. ನಾನು ಈತನ ಇಂಗ್ಲಿಷಿಗೆ ಸುಮ್ಮನಿದ್ದು ಕೇಳಿಸಿಕೊಳ್ಳುವುದು ಇಂಗ್ಲಿಷ್ ಮಾತೆಯ ಬೇಸರಕ್ಕೆ ಕಾರಣವಾಗಿ ಈ ಮಾತು ಬಂದಿರಬಹುದೇ ಎಂದೂ ಅನ್ನಿಸಿತ್ತು. ಧರ್ಮ ಸಂಕಟ ನನಗೆ. ಸುಮ್ಮನೆ ಹೂಂ ಎಂದರೆ ಹಾಲ ಮಾತಾಡಿದ್ದು ತಪ್ಪಿದ್ದರೂ ನಾನು ಅರ್ಥ ಮಾಡಿಕೊಳ್ಳಲಿಲ್ಲ ಎಂದಾಗುತ್ತದೆ. ಉಹೂಂ ಎಂದರೆ ಹಾಲನ ಅದ್ಭುತ ಇಂಗ್ಲಿಷ್ ಮಿಸ್ ಮಾಡಿಕೊಳ್ಳಬೇಕು. ಈ ಪುಣ್ಯಾತ್ಮ ಹಾಲಾಹಲದ ಅನುಭವ ಮಾಡಿಸಿದರೂ ಮಾಡಿಸಿಯಾನು ಅವನದ್ದಲ್ಲ ಎಂದರೆ.  ಅದಕ್ಕೇ "ಕಾನೂನು ಎಂತ.... " ಎನ್ನುತ್ತಾ ಮಾತು ಬದಲಿಸಿಸಲು ಪೀಠಿಕೆ ಹಾಕಲು ಮುಂದಾದೆ.

ಇಷ್ಟರಲ್ಲಿ ಹಾಲ ಮುಂದುವರೆಸಿಯೇ ಬಿಟ್ಟ. "ಹೌದು ಅಪಿ. ಕಾನೂನು ಅಂದ್ರೆ ಎಂತ ಭಾಳ ಘನ ಅದು. ಅದಕ್ಕೆ ಗೌರುವ ಕೊಡ್ಬೋಕು. ಅದು ನಮ್ಮನ್ನ ಕಾಯ್ತೈತೆ. ಅದೊಂಥರಾ ಸಾಸ್ತ್ರ ಇದ್ದಂಗೆ. ಈಗ, ನಾವು ಭೂತನ ಮಟ್ಟಿ ಬುಡದಾಗೆ ಉಚ್ಚೆ ಹೊಯ್ಯಾಕೆ ಆಕಾವೇ? ಆಗ್ಕಲ್ಲ. ಅದೊಂದು ಕಾನೂನು. ಕಾನೂನು ಅಂದ್ರೆ ಎಂತ, ರೂಲ್ಸಿಗೆ ಸಮ"

ಇಷ್ಟರಲ್ಲಿ ಅಮ್ಮನಿಂದ ಊಟಕ್ಕೆ ಕರೆ ಬಂತು. ಹಾಲನಿಗೂ ಮನೆ ನೆನಪಾಗಿ ಹೊರಟ. ನಾನು ಹಾಲನ ಮಾತನ್ನು ಹೊತ್ತು ತಂದ ಮಾತಾಗಿಸಿದೆ. ನನಗೂ ಅವತ್ತೇ ಗೊತ್ತಾಗಿದ್ದು ಕಾನೂನು ಅಂದ್ರೆ ರೂಲ್ಸಿಗೆ ಸಮ ಅಂತ. ಇದಕ್ಕೂ ಯಾರೂ ಮೋದಿ ಸರಕಾರ ಹೊಣೆ ಮಾಡದಿದ್ದರೆ ಸಾಕು, ಕಾನೂನು ರೂಲ್ಸಿಗೆ ಸಮವಾಗಿದ್ದಕ್ಕೆ.

Thursday, December 21, 2017

ಅರುಣ

ಬೆಳಗಿನ ಹೆಪ್ಪುಗಟ್ಟಿಸುವ ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ ನಮಗೆ ಸೂರ್ಯ ಯಾಕಾದರೂ ಬಂದನೋ ಎನ್ನಿಸುತ್ತದೆ. ಆತ ಭಾಸ್ಕರನಲ್ಲವೇ? ಆತ ಬರಲೇ ಬೇಕು. ಬೆಳಗಾಗಲೇ ಬೇಕು. ಸ್ವಲ್ಪ ಹೊತ್ತಿನ ಅನಂತರ, ಮತ್ತೆ ಆ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ, ಬೆಚ್ಚಗೆ ಬಿಸಿಲು ಕಾಸುತ್ತಾ, ವಿಟಮಿನ್ ಡಿ ಪಡೆಯುವಾಗ ಈ ಹಿಮಘ್ನ, ತಪನನಾಗಿ ಎಷ್ಟು ಹಿತಕಾರಿಯಲ್ಲವೇ?
ಜಗತ್ತಿನ ಶಕ್ತಿಮೂಲ ಈ ಸೂರ್ಯ. ಈತ ಈ ಕಾರಣದಿಂದಲೇ ಸೂರ್ಯ ನಾರಾಯಣ ಎನ್ನಿಸಿಕೊಂಡಿದ್ದು. ಆದರೆ, ಈ ಸೂರ್ಯ ಕಿರಣಗಳ ಜೊತೆ, ಜಗತ್ತಿಗೆ ಅಹಿತಕಾರಿಯಾದ ವಿಕಿರಣಗಳನ್ನೂ ಉತ್ಸರ್ಜಿಸುತ್ತಾನೆ. ಹಾಗೆ ಹೊರಟ ವಿಕಿರಣಗಳು, ಪೂರ್ಣ ಪ್ರಮಾಣದಲ್ಲಿ ಭೂಮಿಯನ್ನು ತಲುಪುವುದಿಲ್ಲ. ಹಾಗಾದರೆ ಅದನ್ನು ತಡೆಯುವವರು ಅಥವಾ ಹೀರುವವರು ಯಾರು? ಮತ್ಯಾರೂ ಅಲ್ಲ. ಸೂರ್ಯನ ಸಾರಥಿ ಅರುಣ.
ಪ್ರಜಾಪತಿಗಳಲ್ಲಿ ಒಬ್ಬರಾದ ಕಾಶ್ಯಪರ ಮಡದಿಯರು ಕದ್ರು ವಿನತೆಯರು. ಋತುಸ್ನಾತೆಯರಾದಾಗ, ಕದ್ರು ಬಲಶಾಲಿಗಳಾದ, ತನ್ನ ಅಜ್ಞಾಧಾರಕರಾದ ಸರ್ಪಗಳನ್ನು ಕೇಳಿದಳು ಆದರೆ ವಿನುತೆ ಮಹಾಪ್ರತಾಪಿಗಳೂ, ಧಾರ್ಮಿಕರೂ ಆದ ಇಬ್ಬರು ಮಕ್ಕಳನ್ನು ಕೇಳಿದಳು. ಕದ್ರುವಿನ ಅಪೇಕ್ಷೆ ಬೇಗ ಫಲಿಸಿತು. ಸವತಿ ಮಾತ್ಸರ್ಯವೋ ಅಥವಾ ಕೀಳರಿಮೆಯೋ ಏನೋ, ವಿನತೆ, ತನಗೆ ಕೊಟ್ಟಿದ್ದ ಮೊಟ್ಟೆಗಳಲ್ಲಿ ಎರಡು ಮೊಟ್ಟೆಗಳಲ್ಲಿ ಒಂದನ್ನು ಒಡೆದುಬಿಟ್ಟಳು. ಆಗ ಹುಟ್ಟಿದ ಮಗುವೇ ಅರುಣ. ವಿನತೆಯ ಹಿರಿ ಮಗ. ಆತನ ಬೆಳವಣಿಗೆ ಪೂರ್ಣವಾಗದ ಕಾರಣದಿಂದ, ಪಾಪ ಕಾಲುಗಳೇ ಬಂದಿರಲಿಲ್ಲ. ಆತನನ್ನು ಅದಕ್ಕೇ ಅನೂರ ಎಂತಲೂ ಕರೆದರು. ತನ್ನನ್ನು ವಿಕಲಾಂಗನನ್ನಾಗಿ ಮಾಡಿದ ಸಿಟ್ಟಿನಲ್ಲಿ ಅರುಣ, ವಿನತೆಯನ್ನು ದಾಸ್ಯಕ್ಕೊಳಪಡುವಂತೆ ಶಪಿಸಿದ. ಮುಂದೆ ಕದ್ರು ಮತ್ತೆ ಅವಳ ಮಕ್ಕಳು ಹೂಡಿದ ತಂತ್ರದಿಂದ ವಿನತೆ ಕದ್ರುವಿನ ದಾಸಿಯಾದಳು. ಮತ್ತೊಂದು ಮೊಟ್ಟೆ ಬಿರಿದು ಅದರಿಂದ ಹುಟ್ಟಿದವ ಗರುಡ.
ತಾಯಿ ದಾಸಿಯಾದಮೇಲೆ ಮಕ್ಕಳೂ ದಾಸ್ಯವನ್ನು ಮಾಡಲೇ ಬೇಕಲ್ಲ. ಗರುಡನ ಕತೆಯೂ ಹಾಗೆಯೇ ಆಯಿತು. ಆದರೆ ಗರುಡ ತನ್ನಣ್ಣನನ್ನು ಬಿಡಲಿಲ್ಲ. ಆತನನ್ನು ಸದಾ ತನ್ನ ಜೊತೆಗೇ ಕರೆದೊಯ್ಯುತ್ತಿದ್ದ.
ಇನ್ನೊಂದೆಡೆ, ರಾಹು ಪದೇ ಪದೇ ತನ್ನನ್ನು ಕಾಡುತ್ತಿರುವುದರಿಂದ ಕ್ಷೋಭೆಗೊಳಗಾದ ಸೂರ್ಯ, ಸಕಲ ಲೋಕಗಳನ್ನೂ ದಹಿಸಲು ತನ್ನ ಕಿರಣಗಳನ್ನು ತೀವ್ರ ತಾಪಕ್ಕೆ ಈಡು ಮಾಡಿ ಉದಯಿಸುವ ಘೋಷಣೆ ಮಾಡಿ ಅದಕ್ಕೆ ಅನುವಾದ. ಈ ಕಡೆ ಕದ್ರು, ಗರುಡನಲ್ಲಿ, ತನ್ನನ್ನ್ನೂ ತನ್ನ ಮಕ್ಕಳನ್ನೂ ರಾಮಣೀಯಕ ಎನ್ನುವ ದ್ವೀಪಕ್ಕೆ ಕರೆದೊಯ್ಯಲು ಹೇಳಿದಳು. ಗರುಡ, ತನ್ನಣ್ಣ ಅರುಣನನ್ನೂ, ಸರ್ಪಗಳನ್ನೂ ಮತ್ತು ಕದ್ರುವನ್ನೂ ಬೆನ್ನ ಮೇಲೆ ಕೂರಿಸಿಕೊಂಡು ಹಾರುತ್ತಾ ಸಾಗಿದ. ಅದೇ ಸಮಯಕ್ಕೆ ಸೂರ್ಯ ತೀವ್ರ ತಾಪದಿಂದ ಉದಯಿಸುತ್ತಾನೆ. ಸೂರ್ಯನ ಪ್ರಖರತೆಯನ್ನು ಗರುಡ ಅರುಣರು ತಾಳಿಕೊಂಡರೂ ಸರ್ಪಗಳು ಮೂರ್ಛಿತರಾದರು. ಇದನ್ನು ನೋಡಿದ ಕದ್ರು ತನಗೆ ಮಗನ ಸಮಾನನೂ, ದೇವತೆಗಳಿಗೆ ಒಡೆಯನೂ ಆದ ಇಂದ್ರನನ್ನು ಪ್ರಾರ್ಥಿಸಿದಳು. ತನ್ನ ಚಿಕ್ಕಮ್ಮನ ಮೊರೆ ಕೇಳಿದ ಇಂದ್ರ, ಸರ್ಪಗಳನ್ನು ರಕ್ಷಿಸಲು ಸೂರ್ಯನ ಪ್ರಖರತೆಯನ್ನು ಕಡಿಮೆ ಮಾಡುವುದಕ್ಕಾಗಿ ಮೋಡಗಳನ್ನು ಸೃಜಿಸಿ ಮಳೆ ಸುರಿಸಿದ. ಆದರೆ ಇದು ಕೇವಲ ತಾತ್ಕಾಲಿಕ ಉಪಶಮನವೇ ಆಯಿತು. ಪ್ರಕ್ಷುಬ್ಧ ಸೂರ್ಯ, ಭಾಸ್ಕರನಷ್ಟೇ ಆಗಿ ಉಳಿಯದೆ ತಪನನಾಗಿಬಿಟ್ಟಿದ್ದನಲ್ಲ.
ಆಗ, ಗರುಡನ ಬೆನ್ನ ಮೇಲಿದ್ದ ಅರುಣ ತಾನು ಮರೆಯಾಗಿ, ಸರ್ಪಗಳನ್ನು ರಕ್ಷಿಸಿದ. ಸೂರ್ಯನ ತಪನದಿಂದ ಜಗತ್ತನ್ನು ಉಳಿಸಲು ಅರುಣ ಮುಂದಾದ, ಗರುಡನಲ್ಲಿ, ಸೂರ್ಯನ ರಥದ ಸಮೀಪಕ್ಕೆ ಸಾಗಲು ಹೇಳಿದ. ಅಣ್ಣನ ಬಲದ ಬಗ್ಗೆ ತಿಳಿದಿದ್ದ ಗರುಡ ರಥದ ಸಮೀಪ ಸಾಗಿದ. ರಥಾಗ್ರವನ್ನು ಅಂದರೆ ರಥದ ಮೂಕನ್ನು ಸಮೀಪಿಸಿ ನಿಂತ. ಅರುಣ ಆ ಮೂಕಿನ ಮೇಲೆ ಕುಳಿತು, ಸೂರ್ಯನ ರಥದ ಲಗಾಮುಗಳನ್ನು ಹಿಡಿದು ರಥವನ್ನು ನಡೆಸುತ್ತಾ ಸೂರ್ಯನ ತಾಪವನ್ನು ಹೀರತೊಡಗಿದ. ಅಂದಿನಿಂದ ಇಂದಿನ ವರೆಗೂ, ಅರುಣ ತನ್ನ ಅಣ್ಣನೂ ಆದ ಸೂರ್ಯನ ತಾಪವನ್ನು ಶಮಿಸುತ್ತಾ, ಸೃಷ್ಟಿಯನ್ನು ರಕ್ಷಿಸುತ್ತಲೇ ಇದ್ದಾನೆ.
ಇದಿಷ್ಟೂ ಪುರಾಣಸಾರಾಂಶವಾಯಿತು. ಈಗ ವರ್ತಮಾನವನ್ನೊಮ್ಮೆ ನೋಡೊಣ. ಭೂಮಿಯನ್ನು ಆವರಿಸಿರುವ ಗೋಲಗಳಲ್ಲಿ ಅಯಾನುಗೋಲವೂ ಒಂದು. ಈ ಅಯಾನುಗೋಲವು ಓಜೋನ್ ಪದರದ ಮುಂದಿನ ಭಾಗ. ಈ ಅಯಾನುಗಳು ಉಂಟಾಗುವುದು ಸೂರ್ಯನಿಂದ ಉತ್ಸರ್ಜಿತವಾದ ನೇರಳಾತೀತ ಕಿರಣಗಳು ಓಜ಼ೋನ್ ಪದರದ ಮೇಲೆ ಬಿದ್ದು ಪ್ರತಿಫಲಿಸುವುದರಿಂದ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಅಯಾನು ಗೋಳದ ಇರುವಿಕೆ ದೃಢಪಟ್ಟಿದ್ದು ಮಾರ್ಕೋನಿ, ರೇಡಿಯೋ ಅಲೆಗಳನ್ನು ಶಾಂತಸಾಗರದಿಂದ ಆಚೆ ಕಳಿಸಿದಾಗ. ಉದಯದ ಸಮಯದಲ್ಲಿ ಸೂರ್ಯನಿಂದ ವಿಕಿರಣದ ಉತ್ಸರ್ಜನೆ ತೀವ್ರವಾಗಿರುತ್ತದೆ ಎನ್ನುವುದನ್ನೂ ವಿಜ್ಞಾನಿಗಳೂ ದೃಢಪಡಿಸಿದ್ದಾರೆ. ಒಜ಼ೊನ್ ಪದರ ವಿಕಿರಣಗಳನ್ನು ಹೀರಿ ಭೂಮಿಯನ್ನು ರಕ್ಷಿಸುತ್ತಿರುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇಂದ್ರ, ಸೂರ್ಯನ ತಾಪದಿಂದ ರಕ್ಷಿಸಲು ಸೃಜಿಸಿದ ಮಹಾಮೇಘ ಸಮುಚ್ಛಯವೇ ಇದಿರಬಹುದೇ ಹಾಗಾದರೆ?ಸೂರ್ಯನಿಂದ ವಿಕಿರಣಗಳ ಉತ್ಸರ್ಜನೆ ತೀವ್ರವಾಗುವುದು, ಸೂರ್ಯನಲ್ಲಿ ಒತ್ತಡ ಹೆಚ್ಚಾದಾಗ ಅಂದರೆ ಕ್ಷೋಭೆ ಹೆಚ್ಚಿದಾಗ!
ಇಲ್ಲೊಂದು ಶಬ್ದಸಾಮ್ಯವೂ ಸೊಗಸಾಗಿದೆ. ಅರುಣ>>>ಅಯಾನ್!! ಎರಡೂ ಭೂಮಿ ಮತ್ತು ಸೂರ್ಯನ ನಡುವೆ ಇವೆ ಮತ್ತು ಸೂರ್ಯನ ಕಿರಣಗಳು ಇವುಗಳ ಮೂಲಕವೇ ಹಾಯ್ದು ಭೂಮಿಯನ್ನು ಸೋಕಬೇಕು!!!
ನಮ್ಮ ಪೂರ್ವಿಕರು, ಸೂರ್ಯನಿಂದ ಕಿರಣಗಳು ಹೊರ ಹೊಮ್ಮುವ ಬಗೆ-ಅದರ ಕಾರಣಗಳನ್ನೂ ತಿಳಿದಿದ್ದರು. ವಿಕಿರಣಗಳ ಉತ್ಪತ್ತಿ, ಅದರಿಂದ ಉಂಟಾಗುವ ಸಮಸ್ಯೆ- ವಿನಾಶ ಎನ್ನುವುದನ್ನೂ ಅರಿತಿದ್ದರು. ಸೂರ್ಯನಿಂದ ಉತ್ಸರ್ಜಿತವಾಗುವ ವಿಕಿರಣಗಳನ್ನು ಅರುಣ ಹೀರಿದ ಎನ್ನುವಾಗ ಅವರಿಗೆ ಅಯಾನುಗೋಲದ ಪರಿಚಯ ಇದ್ದಿರಲೇ ಬೇಕು ಎನಿಸುವುದಿಲ್ಲವೆ? ಒಜ಼ೋನ್ ಪದರ ಇದ್ದಿದ್ದು ಹೌದಾದರೂ ಅದರ ಸೃಷ್ಟಿಯ ಬಗ್ಗೆ ಇಂದಿಗೂ ಇದಮಿತ್ಥಮ್ ಎನ್ನುವ ವ್ಯಾಖ್ಯಾನ ದೊರೆಯಲಿಲ್ಲ, ನಮ್ಮ ಪುರಾಣಗಳು ನಡೆದಿತ್ತು ಎನ್ನುವುದಕ್ಕೆ ಸಾಕ್ಷಿ ಕೇಳುವುದರಲ್ಲಿ ಸಮಯ ಪೂರ್ತಿ ವ್ಯಯ ಮಾಡಿ ಅವರಿಗೆ ಇದನ್ನು ಕಂಡು ಹಿಡಿಯಲು ಆಗಲಿಲ್ಲವೇನೋ ಬಿಡಿ.
ಉದಯದ ಕಾಲವನ್ನು ಅರುಣೋದಯ ಎನ್ನುತ್ತಾರೆ. ಸಾರಥಿ, ರಥಿಕನಿಗಿಂತಲೂ ಮೊದಲೇ ಬರುವುದು. ಸೂಕ್ಷ್ಮವಾಗಿ ಗಮನಿಸಿದರೆ, ಉದಯ ಸೂರ್ಯನ ಬಣ್ಣ, ಅಸ್ತಮಿಸುತ್ತಿರುವ ಸೂರ್ಯನ ಬಣ್ಣಕ್ಕಿಂತ ತುಸು ಭಿನ್ನವಾಗಿದೆ. ಅದಕ್ಕೇ ಬೆಳಗಿನ ಬಣ್ಣವನ್ನು ಅರುಣವರ್ಣ ಎಂದು ಕರೆಯುವುದು. ಕಿರಣಗಳ ವಕ್ರೀಭವನದಿಂದ ಸೂರ್ಯ ಉದಯ-ಅಸ್ತಮಾನಗಳ ಸಮಯದಲ್ಲಿ ಕೆಂಪಡುರುವುದು ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ.
ಹೀಗೆ ಸೂರ್ಯನಿಂದ ವಿಕಿರಣಗಳ ಉತ್ಸರ್ಜನೆ, ಓಜ಼ೋನ್ ಪದರದ ಮೇಲೆ ಅವು ಬಿದ್ದು ಪ್ರತಿಫಲನಗೊಂಡು ಅಯಾನುಗಳಾಗಿ, ಮತ್ತೆ ಉಳಿದ ಕಿರಣಗಳು ವಕ್ರೀಭವನಗೊಂಡು, ಕೆಂಪಡರುವುದು ಎಲ್ಲವನ್ನೂ ಭಾರತದ ಋಷಿ ಮುನಿಗಳು ಅರಿತಿದ್ದರು., ಅದೂ ಯಾವುದೇ ಹಬಲ್ ದೂರದರ್ಶಕ ಇಲ್ಲದೆ; ನಾಸಾದ ಸಹಾಯ ಪಡೆಯದೆ ಸೂರ್ಯನ ಬೆಳಕಿನ ನ್ಯಾಸ- ವಿನ್ಯಾಸಗಳನ್ನು ತಿಳಿಸಿದ್ದರು.
ಹೀಗೆ ಸೂರ್ಯನನ್ನು ಜಗತ್ಪಿತ ಎಂದು ಕರೆದು, ಅವನ ಕುರಿತಾಗಿ ಅನೇಕ ವಿಚಾರಗಳನ್ನು ಸುಂದರ ಶಬ್ದಗಳಲ್ಲಿ, ರಸ್ವತ್ತಾದ ಅಲಂಕಾರಗಳಿಂದ, ಸೂಕ್ತ ಶಬ್ದಗಳಿಂದ, ರಹಸ್ಯಂ ಚ ಪ್ರಕಾಶಂ ಚ ಎನ್ನುವ ರೀತಿಯಲ್ಲಿ ವರ್ಣಿಸಿ, ಮಾನಕ್ಕೊಪ್ಪುವ ರೀತಿಯಲ್ಲಿ ಬಹಳ ಹಿಂದೆಯೇ ತಿಳಿಸಿದ್ದರು ಈ ಭರತ ಭೂಮಿಯಲ್ಲಿದ್ದ ಋಷಿ ಮುನಿಗಳು.  ಸೂರ್ಯನ ಬೆಳಕಿನ ಮೇಲೆ ಆಧುನಿಕ ವಿಜ್ಞಾನದ ಆಧಾರದಲ್ಲಿ ಸಂಶೋಧನೆ ಮಾಡಿ ಆ ಮಾತುಗಳು ಸತ್ಯ, ಕೇವಲ ಕಪೋಲ ಕಲ್ಪಿತವಲ್ಲ, ಬ್ರಾಹ್ಮಣರ ಅತಿರಂಜಿತ ವಿಚಾರಗಳಲ್ಲ, ಅಡಗೊಲಜ್ಜಿಯ ಕತೆಯೂ ಅಲ್ಲ ಎಂದು ಸಾಧಿಸಿದ್ದು, ಇದೇ ಭರತವರ್ಷದಲ್ಲಿ ಹುಟ್ಟಿದ ಸರ್ ಸಿ. ವಿ. ರಾಮನ್. ಇದು ಕಾಕತಾಳೀಯವೋ ಅಥವಾ ದೈವಲೀಲೆಯೋ?!
ಆದರೂ ಪುರಾಣಗಳ ಬಗೆಗೆ ವೈಜ್ಞಾನಿಕ ಪುರಾವೆ ಬೇಕಾಗಿದೆ. ಕೊಡಲಾರದ್ದು ವಿಜ್ಞಾನಿಗಳ ಅಸಹಾಯಕತೆಯೋ ಅಥವಾ ಕೊಟ್ತದ್ದನ್ನು ಒಪ್ಪದಿರುವುದು ಬುದ್ಧಿ ಇದೆ ಎಂದು ಗುರುತಿಸಲ್ಪಡುವವರ ಅಲ್ಪತನವೋ, ಅಹಂಕಾರವೋ ತಿಳಿಯುತ್ತಿಲ್ಲ.