Tuesday, December 5, 2017

' ಹೊನ್ನಳ್ಳಿ ಹೊಡ್ತ

' ಹೊನ್ನಳ್ಳಿ ಹೊಡ್ತ ' ಸಾಗರ ಸೊರಬ ತಾಲೂಕಿನ ಹವ್ಯಕರಿಗೆ ಈ ಶಬ್ದ ಚಿರಪರಿಚಿತ ಅಲ್ಲದಿದ್ದರೂ ಅಪರಿಚಿತವಂತೂ ಅಲ್ಲ. ಕ್ರಿಕೆಟ್ಟಿನಲ್ಲಿ ಪಿಂಚ್ ಹಿಟ್ ಮಾಡಿದಾಗ, ಭಾರತ ಕ್ರಿಕೆಟ್ ತಂಡ ಸೊಕ್ಕಿನಿಂದ ನಡೆದು ಅವಮಾನಕರ  ರೀತಿಯಲ್ಲಿ ಸೋತಾಗ "ಬಿಟ್ಟು ನೋಡು ಹೊನ್ನಳ್ಳಿ ಹೊಡ್ತ ಎನ್ನುವ ಮಾತು ಸಾಮಾನ್ಯವಾಗಿತ್ತು.

ಆದರೆ, ಆಗ ಬರೆಯುವ ಯೋಚನೆಯಾಗಲಿ ಅಥವಾ ಮುಂದೊಂದು ದಿನ ಯಾರಿಗಾದರೂ ಈ ಶಬ್ದದ ಅರ್ಥ ವ್ಯುತ್ಪತ್ತಿಗಳನ್ನು ತಿಳಿಸಬೇಕಾಗುತ್ತದೆ ಎನ್ನುವ ಕಲ್ಪನೆಯಾಗಲೀ ಇಲ್ಲದೆ ನಾನು ಕೂಡಾ ಈ ಶಬ್ದವನ್ನು ಬಹಳ ಬಾರಿ ಉಪಯೋಗಿಸಿದ್ದಿದೆ.  ಆಗೆಲ್ಲ ಯಾರೂ ಕೇಳಿರಲಿಲ್ಲ. ನನಗೂ ಪ್ರಶ್ನೆ ಮೂಡಿರಲಿಲ್ಲ.

ಮೊನ್ನೆ ಬರಹವೊಂದರಲ್ಲಿ ಈ ಶಬ್ದವನ್ನು ಉಪಯೋಗಿಸಿದ್ದೆ. ಅದನ್ನು ಓದಿದ ನಿರಂಜನ ಮೆಸೇಜ್ ಕಳಿಸಿದ.

"ಈ ಹೊನ್ನಳ್ಳಿ ಹೊಡ್ತ ಅಂತ ಬರದ್ಯೆಲ ಇದೆಂತ ಮಾರಾಯ ಅಂತ."

"ನನಗೂ ಗೊತ್ತಿಲ್ಲೆ. ತಿಳಿದು ಹೇಳಕ್ಕು. ಸಿಕ್ಕಾಪಟ್ಟೆ ಜೋರಾಗಿ ಹೊಡೆತ ಬಿದ್ದಿದ್ದನ್ನು ಈ ತರ ಹೇಳ್ತ" ಅಂತ ಅವನಿಗೆ ಹೇಳಿದೆ.

ಇಷ್ಟೆಲ್ಲಾ ಬರೆದಿದ್ದಲ್ಲ ಗೀಚಿದ್ದು ಎಂದು ಆಗ ಅರ್ಥವಾಯಿತು ನನಗೆ. ಒಂದೇ ಶಬ್ದದ ಅರ್ಥ ಕೇಳಿ ನನ್ನ ಮಿತ್ರಾ ನನಗಡರಿದ್ದ ಅಹಂಕಾರವನ್ನು ಪೂರ್ತಿ ಕೊಂದು ಹಾಕಿದ್ದ.  ಸನ್ಮಿತ್ರರೆಂದರೆ ಹಾಗೆ. ಅಡರಿದ್ದ ಅಹಂಕಾರವನ್ನು ನಮಗರಿವಿಲ್ಲದೆಯೆ ತೆಗೆದು ಹಾಕುತ್ತಾರೆ.

ಈ ಮಾತು ಹೊನ್ನಾಳಿಯಿಂದ ಆರಿಸಿ ಬಂದು ಸಚಿವರಾದ ವ್ಯಕ್ತಿಯೊಬ್ಬರ ಹೊಡೆತ, ಅದಕ್ಕೆ ನಡೆದ ಶುಶ್ರೂಷೆ, ಅದನ್ನು ಮಾಡಿದ ಶುಶ್ರೂಷಕಿ ಅರ್ಥಾತ್ ನರ್ಸ್ (ಮಾನ ನಷ್ಟ ಮೊಕದ್ದಮೆಯ ಭಯ. ಹೆಸರು ಬರೆಯುತ್ತಿಲ್ಲ) ಈ ಎಲ್ಲ ಕತೆಗಳು ನಡೆಯುವ ಮೊದಲೇ ಈ ಶಬ್ದವನ್ನು ನಾವು ಕೇಳಿ ಆಗಿತ್ತು. ಹಾಗಾಗಿ ಅದಕ್ಕೊ ಇದಕ್ಕೂ ಖಂಡಿತ ಸಂಬಂಧವಿಲ್ಲ ಎಂದು ಖಾತ್ರಿಯಾಯಿತು.

ಉತ್ತರ ಬೇಕಾಗಿದ್ದು ಅರ್ಥ ಏನು ಎನ್ನುವ ಪ್ರಶ್ನೆಗೆ ಹೊರತು ಅರ್ಥ ಏನಲ್ಲ ಎನ್ನುವುದಕ್ಕಲ್ಲವಲ್ಲ. ಹುಡುಕಾಟ ಮುಂದುವರೆಸಿದೆ. ಗೂಗಲೆಶ್ವರನ ದೇವಸ್ಥಾನಕ್ಕೆ ದಿನಾ ಓಡಾಡತೊಡಗಿದೆ. ಗೂಗಲೆಶ್ವರನಿಗೆ ಪೂಜೆ ನಡೆದು ಇನ್ನೂ ಏನೇನೋ ಗೊತ್ತಾಯಿತು ಬಿಟ್ಟರೆ, ಇದರ ಅರ್ಥ ಮಾತ್ರ ಗೊತ್ತಾಗಲಿಲ್ಲ.

ಹೊನ್ನಾಳಿ ಊರು ಅಥವಾ ಆ ಪ್ರದೇಶಕ್ಕೂ ಈ ನುಡಿಗಟ್ತಿನಲ್ಲಿನ ಹೊನ್ನಳ್ಳಿಗೂ ಏನು ಸಂಬಂಧವಿರಬಹುದು? ಎಂದು ಹುಡುಕಿದೆ. ಹೊನ್ನಾಳಿ ನಮ್ಮ ಜಿಲ್ಲೆಯಲ್ಲೇ ಇದ್ದರೂ, ಅಲ್ಲಿಗೂ ನಮ್ಮ ಪ್ರದೇಶಕ್ಕೂ ಅಂತಾ ಹೊಕ್ಕು ಬಳಕೆ ಇಲ್ಲ. ಇನ್ನು ಸೊರಬ ಪ್ರದೇಶಕ್ಕೆ ಶಿಕಾರಿಪುರ-ಶಿಕಾರಿಪುರಕ್ಕೆ ಹೊನ್ನಾಳಿ ಹತ್ತಿರವಾದ ಕಾರಣದಿಂದ ಏನಾದರೂ ಹೀಗಿದ್ದಿರಬಹುದೇ? ಎಂದು ಕೂಡಾ ಯೋಚಿಸಿದೆ. ಯಾಕೋ ಸಮೀಚೀನವಾದ ಉತ್ತರ ಸಿಗಲಿಲ್ಲ.

ಅಷ್ಟು ಹೊತ್ತಿಗೆ ಯಾಕೋ ಊರಿಗೆ ಹೋಗುವ ಕೆಲಸ ಬಂತು. ಊರಿಗೆ ಹೋದಾಗ ನಮ್ಮ ಮನೆಯ ಒಕ್ಕಲು ಹಾಲ ನಾಯ್ಕ ಬಂದಿದ್ದ. ಅವನಲ್ಲಿ ಗದ್ದೆ ಬೇಸಾಯದ ಮೇಲೆ ಬಿಲ್ಡ್ ಅಪ್ ಕೊಡುವುದಕ್ಕೆ ಹೋದೆ. (ಬೇಕು ಅಂತಲ್ಲ. ಗೊತ್ತಿಲ್ಲದೆ ಆಗಿದ್ದು.)

ಆತ ಹೇಳಿದ." ಮುಂಚೆ ಎಲ್ಲ ಎತ್ತಿ ಕ್ವಾಣ ತಗಂಡು ಹೂಡ್ತಿದ್ದುವು. ಈಗೆ ಟ್ಯಾಕ್ಟರಿ-ಟಿಲ್ಲರ್ ತಗಂಡು ಹೂಡ್ತುವು. ಕೆಲಸ ಬೇಗ ಆಗ್ತೈತೆ ಆಪೀ. ಆಯ್ದ್ರೆ ಅಷ್ಟು ಕಾಲ್ಟಿ ಕೆಲಸ ಆಗಕ್ಕಲ್ಲ. ಆವಾಗೆಲ್ಲ ಮರದ ನಳ್ಳಿ ಹಾಕ್ತುದ್ದುವು. ಒಂದು ಬ್ಯಾಸಾಯಕ್ಕೆ ಒಂದು ನಳ್ಳಿ ತೆಗೀತುದ್ದುವು. ಪ್ರತಿ ಬೇಸಾಯಕ್ಕೂ ಹೊಸ ನಳ್ಳಿ ಮಾಡ್ಟುದ್ದುವು. ಎತ್ತು ಕ್ವಾಣಕ್ಕೂ ಹಂಗೆ. ಗೆದ್ದೆ ಅಂದ್ರೆ ನೀವು ಟ್ರಿಕೆಟ್ ಆಡ ಬಯಲ ಹಾಂಗೆ ಮಟ್ಟ ಆಗ್ತುತ್ತು ಅದ್ರಾಗೆ. ಹಾಳಿ ಅಂಚೂ ಬಿಡದೆ ಮತ್ತ ಮಾಡ್ತುದ್ದುವು ನಾವ್. ಹೊಸ ನಳ್ಳಿ ಹೊಡ್ತ ಅಂದ್ರೆ ಹಂಗೆ. ಹೊನ್ನಳ್ಳಿ ಹೊಡ್ತ."

ನನ್ನ ತಲೆಯಲ್ಲಿದ್ದ ಪ್ರಶ್ನೆಗೆ ಸ್ವಲ್ಪ ಒಪ್ಪ ಬಹುದಾದ ಉತ್ತರ ಸಿಕ್ಕಿತ್ತು. ಗದ್ದೆಗೆ ಉಪಯೋಗಿಸಿದ ಹೊಸ ನಳ್ಳಿಯ ಹೊಡೆತವೆ, ಹೊನ್ನಳ್ಳಿ ಹೊಡ್ತ.

ಇದಲ್ಲದೆ ಬೇರೆ ಇದ್ದರೆ ಕಾಮೆಂಟಿನಲ್ಲಿ ಹಾಕಿ, ಪ್ಲೀಸ್...

No comments:

Post a Comment