Wednesday, November 29, 2017

ಟಿಪ್ಪುರಾಣ-2

ಸೀದನ ಈ ಪವಿತ್ರವಾದ ವಚನಗಳನ್ನು ಕೇಳಿ ಎಲ್ಲರೂ ಪಾವಣಾರಾದ ಭಾವನೆಯನ್ನು ಅನುಭವಿಸುತ್ತಿರುವಂತೆಯೇ ಕಾಕ ಎಂಬ ಯುವ ಮಹರ್ಷಿಯು, ಉತ್ಸುಕನಾಗಿ ಪ್ರಶ್ನಿಸಿದನು.

"ಓ ಪುರಾಣಿಕನೆ, ಚೇತನದ ಮಹತ್ತನ್ನೂ, ಅದರ ಸೃಜನವನ್ನೂ, ಆ ಚೇತನವು ಹೆಸರು ಪಡೆದ ಬಗೆಯನ್ನೂ ನಮಗೆ ವಿವರಿಸಿದಿರಿ. ಈ ಚೇತನದ ಚರಿತ್ರೆಯು ವಿಸ್ಮೃತವಾಗಲು ಇದ್ದ ಕಾರಣವನ್ನೂ ಅದನ್ನು ಮತ್ತೆ ನೆನಪಿಸಿದವನನ್ನೂ ತಿಳಿಸಿದಿರಿ. ಆದರೆ ವಿಸ್ಮೃತವಾಗಿದ್ದ ಚರಿತ್ರೆಯು ಪುನಃ ಜ್ಞಾತವಾದ ಪರಿಯನ್ನೂ ಮತ್ತೆ ಪ್ರಚುರವಾದ ರೀತಿಯನ್ನೂ ನಮಗೆ ತಿಳಿಸಿ. ಕೇಳಿ ಪುನೀತರಾಗುತ್ತೇವೆ"

ನಮನಗಳಿಗೆ ಪ್ರತಿಯಾಗಿ ಸೀದನು ಹೇಳತೊಡಗಿದನು." ಸ್ಕಂದ ಪುರಾಣದಲ್ಲಿ ಬರುವ ಉತ್ತರ ಸಹ್ಯಾದ್ರಿ ಕಾಂಡದಲ್ಲಿ ಬರುವ ಸಪ್ತ ದ್ರಾವಿಡ ಬ್ರಾಹ್ಮಣರ ಬಗ್ಗೆ ನೀವು ಕೇಳಿ ಬಲ್ಲಿರಲ್ಲ. ಅದರಲ್ಲಿ ಹವ್ಯಕರು ಎಂದು ಕರೆಯಲ್ಪಡುವ ಬ್ರಾಹ್ಮಣರು ಕೂಡಾ ಒಬ್ಬರು. ಸದಾ ಹವ್ಯ ಕವ್ಯ ಗಳಲ್ಲಿ ನಿರತರಾಗಿದ್ದ ಕಾರಣ ಅವರಿಗೆ ಈ ಹೆಸರು ಬಂದಿತು. ಆ ಹವ್ಯಕರು ದೈವ ಲೀಲೆಯೋ ಎಂಬಂತೆ ಟಿಪ್ಪುವಿನ ಚರಿತ್ರೆಯನ್ನು ಸದಾ ಕಾಲ ಅವರಿಗೆ ಅರಿವಿಗೆ ಬಾರದಂತೆ ನೆನಪಿಸಿಟ್ಟರು. ಹೇಗೆಂಬ ಬಗೆ ಹೇಳುತ್ತೇನೆ ಕೇಳು."

ಸಮುದ್ರ ಮಥನದ ಕಾಲದಲ್ಲಿ ಹುಟ್ಟಿದ ಕಾರ್ಕೋಟಕ ವಿಷ ಮತ್ತು ಪೀಯೂಶಗಳ ಹದ ಮಿಶ್ರಣವೇ ಕಾಪಿ ಎಂಬ ಪಾನೀಯ.
ಚರಿತ್ರೆಯು ವಿಸ್ಮೃತವಾಗಿರುವುದನ್ನೂ, ಪುನಃ ಜ್ಞಾತವಾಗಾಗಬೇಕಾದ ಕಾಲ ಸನ್ನಿಹಿತವಾದದ್ದನ್ನೂ ಆ ವಿಶ್ವಚೇತನ ಅರಿಯದೆ ಹೋದೀತೇ? ಅದು ಸುಮೇರು ಪರ್ವತದ ಸಮೀಪದ ಪ್ರದೇಶದಲ್ಲಿ ಬುಡನ್ ಎಂಬ ಹೆಸರಿನಿಂದ ಹುಟ್ಟಿ, ದ್ರೋಣ ಪರ್ವತಕ್ಕೆ ಬಂದಿತು. ಅಲ್ಲಿ ತಾನು ತಂದಿದ್ದ ಕಾಪಿ ಬೀಜಗಳನ್ನು ನೆಟ್ಟು ಬೆಳೆಸಿತು.  ಅದು ಘಟ್ಟದ ಮೇಲಿನ ಸಾಗರ-ಹೊಸನಗರ-ತೀರ್ಥಹಳ್ಳಿ-ಸಕಲೇಶಪುರ-ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ನೆಲೆಸಿದ್ದ ಹವ್ಯಕರ ಪಾಲಿನ ರಾಷ್ಟ್ರೀಯ ಪಾನೀಯವಾಗಿತ್ತು.  ಇದು ಸಮೀಪದಲ್ಲಿ ದೊರೆಯುತ್ತಿದ್ದುದು ಮತ್ತು ಟೀ ಪಿತ್ತಗುಣ ಹೊಂದಿದ್ದುದು ಇದಕ್ಕೆ ಕಾರಣವಾಗಿತ್ತು. ಟೀ ಬಿಡಿಸಿದ ಕಾಪಿ ಎಂದೇ ಅವರು ಈ ಪಾನೀಯವನ್ನು ಸ್ವೀಕರಿಸಿದ್ದರು

ಟೀ ಬ್ರಹ್ಮನಿಂದಲೆ ಆದಿ ಭಾಗದಲ್ಲಿ ಸೃಜಿತವಾದದ್ದು ಮತ್ತು ಟಿಪ್ಪುವಿನ ಜನನಕ್ಕೆ ಆಧಾರವಾದದ್ದು ತಿಳಿದಿದೆಯಲ್ಲ. ಈ ಟೀ ಕೂಡಾ ಹವ್ಯಕರ ರಾಷ್ಟ್ರೀಯ ಪಾನೀಯ. ಎಷ್ಟೆಂದರೆ ಉತ್ತರ ಕನ್ನ್ನಡದಲ್ಲಿ ಇದೇ ಸೇವಿಸಲ್ಪಡುತ್ತದೆ. ಕಾಪಿ ಇಲ್ಲವೇ ಇಲ್ಲ ಎನ್ನಬಹುದು.

ದಕ್ಷಿಣ ಕನ್ನಡ ಭಾಗದಲ್ಲಿ ನೆಲೆನಿಂತ ಹವ್ಯಕರು ಈ ಕಾಪಿ ಟೀ ಎರಾದನ್ನೂ ಸಮಾನವಾಗಿ ಸ್ವೀಕರಿಸಿದರು. ಹೀಗೆ ಹವ್ಯಕರು ಟಿಪ್ಪುವಿನ ಮೊದಲಕ್ಷರವನ್ನು ನೆನಪಿನಲ್ಲಿಟ್ಟರು.

ಇನ್ನು ಹವ್ಯಕರ ತ್ರಿಗುಣಗಳಲ್ಲಿ ವೀಳ್ಯಭಕ್ಷಣವೂ ಒಂದೆಂದು ಬಲ್ಲೆಯಲ್ಲ ನೀನು. ಹಾಗೆ ವೀಳ್ಯ ಭಕ್ಷಿಸಿ ಅದು ಸಾಕಾದಾಗ ಅದನ್ನು ಫೂ ಎಂದು ತುಪ್ಪಿ ಟಿಪ್ಪುವಿನ ಎರಡನೇ ಅಕ್ಷರವನ್ನು ನೆನಪಿನಲ್ಲಿಟ್ಟರು. ಅವರು ಟೀ ಕೇಳುತ್ತಿದ್ದ ಬಗೆಯೇ ಹಾಗಿತ್ತು. ಹೆಂಡತಿಯನ್ನು ಕುರಿತು ಅಥವಾ ಅಮ್ಮನನ್ನು ಕುರಿತು, "ಏ ಇವಳೇ, ಟೀ-ಫೂ " ಎನ್ನುತ್ತಿದ್ದರು, ಅರ್ಥಾತ್ ಟೀಯನ್ನು ಬಯಸಿ ತಾಂಬೂಲ ಉಗಿಯುತ್ತಿದ್ದರು.

ಟಿಪ್ಪು ಅವತಾರವನ್ನು ತಳೆದ ಮೇಲೆ, ಆತನಿಗೆ ಸನಾತನ ಧರ್ಮದ ಬಗೆಗಿದ್ದ ನಿಷ್ಠೆಯನ್ನು ಮನ್ನಿಸಿ ಲೋಕದಲ್ಲಿ ಅತಿ ನಿಷ್ಠಾವಂತವಾಗಿದ್ದ ಪ್ರಾಣಿಗೆ ಆ ಹೆಸರನ್ನಿಟ್ಟು ಸಾಕುತ್ತಿದ್ದರು. ಆ ಪ್ರಾಣಿ ಕೂಡಾ ಹೆಸರು ಕರೆದೊಡನೆ ಹತ್ತಿರ ಬಂದು ಟಿಪ್ಪುವಿನ ಹೆಚ್ಚುಗಾರಿಕೆಯನ್ನು ನೆನಪಿಸುವಲ್ಲಿ ಅಪಾರವಾದ ಕೊಡುಗೆಯನ್ನು ಕೊಟ್ಟಿದೆ.

ಚಂದ್ರಮನೆಂಬ ಬ್ರಾಹ್ಮಣನು ಶಶಾಂಕ ಎಂಬ ಹೆಸರಿನಿಂದ ಹುಟ್ಟಬೇಕೆಂದೂ, ಟಿಪ್ಪುವಿನ ಮಹತ್ವಿಕೆಯನ್ನು ಮತ್ತೆ ಸಾರಬೇಕೆಂದೂ ಇಂದ್ರದೇವನ ಅಣತಿ ಮೊದಲೇ ಇದ್ದದ್ದು ಈಗ ತಾನೇ ಹೇಳಿದೆನಲ್ಲ. ಆ ಶಶಾಂಕನು ಇಂಥಾ ಒಂದು ಹವ್ಯಕರ ಮನೆಯಲ್ಲೇ ಹುಟ್ಟಿದ್ದನು.

ದೇಹ ಬುದ್ಧಿಯನ್ನು ಹೊಂದಿ ಕರ್ತವ್ಯವನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಕಿರಣ ಎನ್ನುವ ಇನ್ನೊಬ್ಬ ದ್ವಿಜನನ್ನು ಇಂದ್ರನು ಭೂಮಿಯಲ್ಲಿ ಹುಟ್ಟುವಂತೆ ಆದೇಶಿಸಿದ್ದನು. ಶಶಾಂಕನನ್ನು ಅನುಸರಿಸಿ ಹುಟ್ಟಿದ್ದರಿಂದ ಆತ ಶಶಿಕಿರಣ ಎಂದು ಹೆಸರಾಗಿದ್ದನು. ಆತನು ಯಾರೋ ಒಬ್ಬ ಆಡಿದ ಸುಳ್ಳು ಮಾತನ್ನು ಇಡೀ ಜಗತ್ತಿಗೆ ತಿಳಿಸಲಾಗಿ ಅದು ಶಶಾಂಕನ ಚಿತ್ತಕ್ಕೂ ತಿಳಿದು ಪೂರ್ವ ಜನಮದಲ್ಲಿ ಇಂದ್ರನು ತನಗೆ ಕೊಟ್ಟ ಆದೇಶದ ನೆನಪಾಗಿ ಈ ಪುರಾಣವನ್ನು ಪುನಃ ರಚಿಸಿದನು.

ಅನೇಕ ಮಂದಿಗಳ ಟಿಪ್ಪುಗಳು ಈ ಪುರಾಣವನ್ನು ರಚಿಸುವಲ್ಲಿ ನೆರವಾದ್ದರಿಂದ ಈ ಪುರಾಣವನ್ನು ಆತ ಟಿಪ್ಪುರಾಣ ಎಂದು ಕರೆದನು. ಮತ್ತು ಇದು ಬೆರಳುಗಳ ಟಿಪ್ ಮೇಲೆ ರಚಿಸಿದ್ದರಿಂದಲೂ, ಟಿಪ್ಪುವಿಗೆ ಸಂಬಂಧಿಸಿದ್ದರಿಂದಲೂ ಟಿಪ್ಪುರಾಣ ಎಂದು ಹೆಸರಾಯಿತು.

ಇತಿ ಟಿಪ್ಪುರಾಣೆ ಆದಿ ಸರ್ಗೇ ಪ್ರಚಾರ ನಾಮಕ ದ್ವಿತೀಯೋಧ್ಯಾಯಃ ಸಂಪೂರ್ಣಮ್.

#ಟಿಪ್ಪುರಾಣ

No comments:

Post a Comment