Tuesday, October 31, 2017

ವಿಶ್ವನಾಥನ ಲೇಖನದ ಸಲಹೆ

ವಿಶ್ವನಾಥ, ಮಲೆನಾಡಿನ ಮೂಲೆಯಲ್ಲೇ ಹುಟ್ಟಿ ಅಲ್ಲೇ ಬೆಳೆದವ. ಆತ ಅಷ್ಟೊಂದು ಓದಿಕೊಂಡವನಲ್ಲ. ಎಪ್ಪತ್ತರ ದಶಕದಲ್ಲಿ ಹತ್ತನೇ ಇಯತ್ತೆ ಪಾಸಾದವ. ಅಪ್ಪ ಅಮ್ಮನಿಗೆ ಮಕ್ಕಳು ಒಳ್ಳೆಯವರಾದರೆ ಸಾಕು ಎನ್ನುವ ಆಸೆ ಇದ್ದಿದ್ದರಿಂದ ಅವರೇನೂ ಇವನನ್ನು ಓದು ಎಂದು ಒತ್ತಾಯಿಸಲಿಲ್ಲ. ಇವನಿಗೂ ಓದಿ ಆಪೀಸರನಾಗಬೇಕೆಂಬ ಹಟ ಚಟ ಇರಲಿಲ್ಲ. ಪರಿಣಾಮ, ಮನೆಯಲ್ಲೇ ಕುಳಿತ. ತೋಟ ಗದ್ದೆ ಗುಡ್ಡ ಬೆಟ್ಟ ಸಾಗರದ ಪೇಟೆ,  ವ್ಯವಹಾರ ಆತನ ಜೀವನದ ಅವಿಭಾಜ್ಯ ಅಂಗಗಳೇ ಆದವು.

ತಾನು ಓದದೆ ತಪ್ಪು ಮಾಡಿದೆ ಎನ್ನಿಸತೊಡಗಿತ್ತು ವಿಶ್ವನಾಥನಿಗೆ.  ತನ್ನ ಬಳಿಯೇ ಬಂದು, "ವಿಶ್ವಣ್ಣ, ಜಾತ್ರೆಗೇ ಕರ್ಕಂಡು ಹೋಗ ನಮ್ಮನ್ನ, ವಿಶ್ವಣ್ಣ ಆಟಕ್ಕೆ ಆನೂ ಬತ್ನ"  ಎಂಬಿತ್ಯಾದಿ ಮಾತುಗಳಿಂದ ತಾನೊಬ್ಬ ಮುಖ್ಯ ವ್ಯಕ್ತಿ ಎನ್ನುವ ಭಾವನೆಯನ್ನು ತನ್ನಲ್ಲಿ ಹುಟ್ಟಿಸಿ ಬೆಳೆಸಿದ ಊರಿನ ಕೆಲವು ಮಾಣಿಗಳು ಓದುವುದಕ್ಕೆಂದು ಉಡುಪಿಗೆ ಹೋದಾಗ. ಅದು ಹೆಚ್ಚಾಗಿದ್ದು ಅವರಿಗೆಲ್ಲಾ ಕೆಲಸ ಸಿಕ್ಕಿದಾಗ. ಅದು ಮಿತಿ ಮೀರಿ ಬೆಳೆದು ವಿಶ್ವನಾಥನಿಗೆ ಒಂದು ರೀತಿಯ ಅಭದ್ರತೆ ಕಾಡಿಸತೊಡಗಿದ್ದು ಆ ಹುಡುಗರು ಕಾರಿನಲ್ಲಿ ಊರಿಗೆ ಬಂದಿಳಿದಾಗ.
"ಅಯ್ಯೋ!! ಒಂದು ಕಾಲದಲ್ಲಿ ತನ್ನ ಎದುರಿಗೆ ಇದ್ದ ಹುಡ್ರು, ತನ್ನೆದ್ರಿಗೆ ಓದಕ್ಕೆ ಹೋದ. ಆವಾಗಲೇ ಊರಾಗೆ ಯನ್ನ ಮಾತಾಡ್ಸಕ್ಕೆ ಅಂತ ಇದ್ದ ಈ ಹುಡ್ರು ಹೋದ. ಅಲ್ಲೇ ತನ್ನ ಗೌರವ ಕಡಿಮೆ ಆತು ಊರಾಗೆ. ಸಾಲದೆ ಇದ್ದಿದ್ದಕ್ಕೆ, ಇವ್ವು ಊರಿಗೆ ಬಂದ್ರೆ ಎಲ್ಲರೂ ಇವರ ಹತ್ರ ಆ ಊರಿನ ಕತೆ ಕೇಳವ್ವೆ ಆದ. ಸಾಲದೆ ಹೋಗಿದ್ದಕ್ಕೆ, ಕೆಲಸಕ್ಕೆ ಬೇರೆ ಸೇರ್ಕಂಡ. ಇನ್ನೂ ತಾನು ಹೀಂಗೆ ಇದ್ರೆ ಕಥೆ ಅಷ್ಟೇ. ಈ ಹುಡ್ರು ಎಷ್ಟಾಂದ್ರೂ ಯನ್ನ ಜೊತಿಗೆ ಇದ್ಡವ್ವು. ಇವ್ವು ಹೇಂಗೂ ತನಗೆ ಸಹಾಯ ಮಾಡ್ತ. ಈಗ ಆನು ಓದದೆ ಇದ್ರೂ ತಿಳಿವಳಿಕೆ ಇಪ್ಪ ಮನುಷ್ಯ ಅಂತ ತೋರಿಸಕ್ಕು." ಎನ್ನುವ ಮಹತ್ ಯೋಚನೆ ಮಾಡಿದ. ಅದನ್ನು ಕಾರ್ಯಗತ ಮಾಡುವಲ್ಲಿ ಪ್ರತಿ ದಿನ ಲೈಬ್ರರಿ ಕಡೆ ಓಡಾಟ, ಅಲ್ಲಿ ಓದುವವರ, ಓದಿದವರ ಒಡನಾಟ ಎಲ್ಲಾ ಆಯಿತು. ಸ್ವಲ್ಪ ತಿಳುವಳಿಕೆಯೂ ಬಂತು. ಆದರೆ, ವಯಸ್ಸು ಹೆಚ್ಚಿತೆ ಹೊರತು ಅನುಭವ ಸಂಭವಿಸಲಿಲ್ಲ.

ಇವ ಓದಿದ್ದು ಜನರಿಗೆ ಗೊತಾಗುತ್ತಿಲ್ಲವೋ ಎನ್ನುವ ಅನುಮಾನವೂ ಶುರುವಾಯಿತು. ಅದಕ್ಕೆ ಯಾರೇನು ಮಾತಾಡಿದರೂ "ತಂದೊಂದಿದ್ದು" ಎಂದು ಮಾತಾಡುತ್ತಿದ್ದ. ಅದೂ ಸಾಕಾಗಾದಾದಾಗ ಓಶೋ ಹೇಳಿದ ಮಂತ್ರ ಸಿಕ್ಕಿತು-" ಅಲ್ಲ ಅಲ್ಲ ಎನ್ನು ನೀನೇ ಗೆಲ್ಲುವೆ", ಪರಿಣಾಮ ಎಲ್ಲದನ್ನೂ ಅಲ್ಲಗಳೆಯತೊಡಗಿದ್ದ. ಕಾಲದ ಜೊತೆಗೆ ಹೆಸರು ಮಾಡಲು ಬೇಕಾದ ಪ್ರಯತ್ನ ಹೆಚ್ಚಿದ ಫಲ, ಹದ ಹೇಳುವುದು ಶುರುವಾಯಿತು. ಎಷ್ಟು- ಇಂಜಿನಿಯರ್ ಗೆ ಬಿಲ್ಡಿಂಗ್ ಕಟ್ಟುವುದನ್ನು ಹೇಳಿಕೊಡುವುದು, ಲಾಯರ್ ಗೆ ಯಾವ ಸೆಕ್ಷನ್ ಜಡಿಯಬೇಕು ಎನ್ನುವುದು ತಿಳಿಸುವುದು ಎಲ್ಲಾ ಶುರುವಾಯಿತು.

ಆದರೆ, ಇದರಲ್ಲಿ ನಿಜವಾಗಿ ಒದ್ದಾಡುತ್ತಿದ್ದವ ನಾರಾಯಣ. ಸಾಗರದಲ್ಲಿದ್ದುಕೊಂಡು ಲೆಕ್ಕರಿಕೆ ಮಾಡಿಕೊಂಡು ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಇವ ಸಿಕ್ಕಿಬಿದ್ದ. ಅವನಲ್ಲಿ ದಿನಾಲೂ ಒಂದೊಂದು ವಿಷಯದ ಮೇಲೆ ಅಪದ್ಧದ ಸಲಹೆ ಕೊಟ್ಟು ಅದನ್ನು ಲೇಖನದಲ್ಲಿ ಬರೆಯುವಂತೆ ಸೂಚಿಸುತ್ತಿದ್ದ. ಸಲಹೆಗಳು ಬಹಳ ಮಜಾ ಇರುತ್ತಿತ್ತು. "ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದು ಭಾರತದ ದೊಡ್ಡ ತಿರುವು. ಉಳಿದ ರಾಜಕಾರಣಿಗಳು ಇವರನ್ನು ನೋಡಿ ಕಲಿಯಲಿ ಅಂತ ಬರಿ ಅಪಿ" ಒಂದಾದರೆ, ಬರಗಾಲದ ಬಗ್ಗೆ ಇನ್ನೊಂದು. "ಚರಂಡಿಗಳಲ್ಲಿ ಸಣ್ಣ ಸಣ್ಣ ಒಡ್ಡು ಹಾಕಿದರೆ ನೀರು ಅಲ್ಲಳ್ಲೀ ಇಂಗುತ್ತದೆ ಅಂತ ಬಾರಿ ಒಂದು ಇರ್ಲಿ." ಇಡೀ ಇನ್ನೊಂದು. ಇದೆಲ್ಲಾ ಯಾಕೆ ಎಂದರೆ ಊರಲ್ಲಿ ಯಾರಾದರೂ "ನಾಣಿದು ಒಂದು ಆರ್ಟಿಕಲ್ ಬೈಂದು ಸುಧಾದಲ್ಲಿ, ಚನಾಗಿದ್ದು. ಹೀಂಗೆ ಬರೆಯಕ್ಕು" ಅಂದರೆ, "ಆನೆ ಹೇಳಿದ್ದು ಅವಂಗೆ" ಎನ್ನಲು ಅಷ್ಟೇ. ಲೇಖನ ಚೆನ್ನಾಗಿ ಬರಲಿ ಅಂತಲ್ಲ.

ಮೊದಲೆಲ್ಲಾ ಒಪ್ಪದೆ ಇರುತ್ತಿದ್ದ ನಾಣಿ, ಕೊನೆಗೆ ಕಾಟ ತಡೆಯಲಾಗದೆ, ತಲೆ ಆಡಿಸಲು ಶುರು ಮಾಡುತ್ತಿದ್ದ. ಇದು ಓದಿ ಹೋಗುವವನನ್ನು ದೂಡಿ ಬಿಟ್ಟಂತೆ ಆಯಿತೆ ಹೊರತು ಇನ್ನೇನೂ ಇಲ್ಲ." ನಿನ್ನೆ ಹೇಳಿದ್ದನ್ನು ಬರದ್ಯ" ಎಂದು ದಿನಾ ಪ್ರಶ್ನಿಸುವುದು ವಿಶ್ವನಿಗೆ ಅಭ್ಯಾಸವಾದರೆ, ನಾಣಿಗೆ ಕಿರಿ ಕಿರಿ ಆಗ ತೊಡಗಿತ್ತು. ಇಷ್ಟಾಗಿತ್ತು, ಅಷ್ಟರಲ್ಲಿ ಫೇಸ್‌ಬುಕ್- ಟ್ವಿಟ್ಟರ್-ಬ್ಲಾಗುಗಳು ಶುರುವಾದವು.

"ಪೇಪರಾಗೆ ಅಲ್ದಿದ್ರೆ ಅಲ್ಲಾರೂ ಆನು ಹೇಳಿದ್ದು ಬರಿ" ಎಂದು ವರಸೆ ಬದಲಾಯಿತು. ಆ ವಾಕ್ಯದಲ್ಲಿದ್ದ ತೊಂದರೆ ಹೇಳಿದರೆ ಮತ್ತೆರಡು ತಾಸು ಬೈರಿಗೆ ಎಂದು ನಾಣುವಿಗೆ ತಿಳಿದಿತ್ತು. ಅದಕ್ಕೆ ಒಂದು ಹೊಸ ಉಪಾಯ ಮಾಡಿದ. "ವಿಶ್ವಣ್ಣ, ಅದನ್ನ ಯಾರೋ ಬರದ್ದ" ಎಂದುಬಿಟ್ಟ ಒಂದು ದಿನ.

ವಿಶ್ವನಿಗೆ ಮೈ ಎಲ್ಲಾ ಉರಿದು ಅಲೀ ಪ್ರಲಾಪ ಶುರು ಮಾಡಿಕೊಂಡ. "ಆನು ಬರೆಯಕ್ಕು ಮಾಡ್ಕಂಡಿದ್ದಿ. ಮತ್ತೊಬ್ಬವ ಬರದ್ದ. ಸಾಯಲಿ. ಆಪೀ, ಬರೆದವ ಯಾರು ನೋಡಿ ಅವಂಗೆ ಚಡ್ಡಿ ಹರಿ. ಏನು ಇನ್ನೊಬ್ಬರ ಆಲೋಚನೆ ತಂದು ಹೇಳಿ ಬರೆಯದು. ಕೇಸ್ ಹಾಕ್ತಿದ್ದಿ. ಪಾಪ ಹೇಳಿ ಬಿಡ್ತಿ."

ನಾಣಿ, "ಎಂತಾತ ಈಗ!! ನಿನಗೆ ಅದು ಬರೆಯಕ್ಕು ಅಂತಿತ್ತು. ನಾ ಅಲ್ದಿದ್ರೆ ಮತ್ತೊಬ್ಬವ ಮಾಡಿದ. ಅಷ್ಟೆಯಲ. ನಾ ಬೇರೆ ವಿಷಯದ ಮೇಲೆ ಬರಿತಿ ಬಿಡು." ಎಂದ.

ಸಿಟ್ಟು ನೆತ್ತಿಯನ್ನೂ ದಾಟಿ ಎರಡು ಅಡಿ ಮೇಲೆ ನಿಂತಿತು ವಿಶ್ವನಿಗೆ, "ಯನ್ನ ಯೋಚನೆ ನೀ ಬರದ್ರೆ, ನೀನೂ ಒಪ್ತೆ, ಆನು ಹೇಳಿದ್ದು ಅಂತ. ಊರವ್ವೂ ಒಪ್ತ. ಈಗ ಯಾರು ಒಪ್ತ? ಮತ್ತೊಂದು ಆಳೋಕನೆ ತಗಲದು ಎಷ್ಟು ಕಷ್ಟ ಗೊತ್ತಿದ್ದ ನಿನಗೆ? ನಿಂಗ ಏನು ಮಹಾ!! ಕಾಲೇಜ್ ಲೈಬ್ರರಿಲಿ ಯಾರೋ ಬರೆದಿದ್ದು ಓದಿ ಬರ್ಕಂಡು ಹೆಸರು ಮಾಡ್ತಿ.ಇದೆಲ್ಲ ನಿಂಗಳ ಪಿತೂರಿ. ಹೊಟ್ಟೆಕಿಚ್ಚು ನಿಂಗಕ್ಕೆ. ಮತ್ತೊಬ್ಬರು ಹೆಸರು ಮಾಡಿರೆ ಅಂತ ಹೆದರಿಕೆ. ಪಾಸಿಟಿವ್ ಥಿಂಕಿಂಗೇ ಇಲ್ಲೆ.ಡಿಗ್ರಿ ಆಯ್ದು ಅಂತ ಸೊಕ್ಕು ನಿಂಗಕ್ಕೆ.ಯೋಚನೆ ಮಹತ್ವ ನಿಂಗಕ್ಕೆಲ್ಲಿಂದ ಗೊತ್ತಾಗಕ್ಕು? ಮಹಾ ಜ್ಞಾನಿಗಳಿಗೆ ಗೊತ್ತಿರ್ತು........." ಎಂಬಿತ್ಯಾದಿ ಹಲುಬುತ್ತಲೆ ಇದ್ದ.

ನಾಣುವಿಗೆ ಬರಹಗಾರಿಕೆಯ ಮೊದಲ ಪಾಠ ಎಷ್ಟೋ ದಿನ ಕಳೆದ ಮೇಲೆ ತಿಳಿದಿತ್ತು. ಬರೆಯಬೇಕು ಎಂದುಕೊಂಡಿದ್ದನ್ನು ಯಾರಿಗೂ ಮೊದಲೇ ಹೇಳಬಾರದು ಎಂದು

Wednesday, October 25, 2017

ಸರ್ ಮಿರ್ಜಾ ಇಸ್ಮಾಯಿಲ್

ಸರ್ ಮಿರ್ಜಾ ಇಸ್ಮಾಯಿಲ್- ಈ ಹೆಸರು ಕೆಲವರಿಗೆ ಚಿರ ಪರಿಚಿತ ಹೆಸರು ಎನ್ನಿಸಿದರೆ ಇನ್ನು ಕೆಲವರಿಗೆ ಯಾವುದೋ ಒಂದು ಮುಸ್ಲಿಮನ ಹೆಸರು ಎನ್ನಿಸಬಹುದು. ಮುಸಲ್ಮಾನರ ವೋಟ್ ತನ್ನ ಪಿತ್ರಾರ್ಜಿತ ಆಸ್ತಿ ಎಂದುಕೊಂಡಿರುವ ಪಕ್ಷಗಳ ಸದಸ್ಯರಿಗೆ ಒಂದು ಮತ ಮಾತ್ರವಾಗಿ ಗಣನೆಗೆ ಬಂದಿರಬಹುದು.  ಇವರು ಮೈಸೂರಿನ ದಿವಾನ್ ಆಗಿದ್ದರು. ಮೈಸೂರಿನ ಬೃಂದಾವನ ಗಾರ್ಡನ್ ನಿರ್ಮಾತೃ ಇವರೇ.
ಇವರ ಅಜ್ಜ ಅಲಿ ಅಸ್ಗರ್ ಪರ್ಷಿಯಾ ದೇಶದಿಂದ ವ್ಯಾಪಾರಾಕ್ಕೆಂದು ಭಾರತಕ್ಕೆ ಬಂದರು.ಇಲ್ಲಿನ ವ್ಯಾಪಾರದಿಂದ ಶ್ರೀಮಂತರೂ ಆದರು. ಮೊಮ್ಮಗ ಇಸ್ಮಾಯಿಲ್, ಈ ಕಾರಣದಿಂದ ಒಳ್ಳೆಯ ವಿದ್ಯಾಭ್ಯಾಸವನ್ನೇ ಪಡೆದು ಮೈಸೂರು ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ನಂತರ ಮಹಾರಾಜರಿಗೆ ಹುಜೂರ್ ಕಾರ್ಯದರ್ಶಿ ಆದರು. ಅಲ್ಲಿ ಶ್ರೀ ವಿಶ್ವೇಶ್ವರಯ್ಯನವರ ಮಾರ್ಗದರ್ಶನ ಇವರಿಗೆ ಸಿಕ್ಕಿತು. ಮುಂದೆ ವಿಶ್ವೇಶ್ವರಯ್ಯನವರೆ ಇವರನ್ನು ಮುಂದಿನ ದಿವಾನರಾಗಿ ಸೂಚಿಸಿದರು.
ಎಂ ವಿಯವರ ಆಯ್ಕೆ ತಪ್ಪಾಗವುದಕ್ಕೆ ಸಾಧ್ಯವೇ ಇಲ್ಲವಲ್ಲ. ಇಸ್ಮಾಯಿಲ್ ನಿಜಕ್ಕೂ ತಾಮು ಆ ಜಾಗಕ್ಕೆ ಸೂಕ್ತ ಮತ್ತು ಅರ್ಹ ವ್ಯಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿದರು. ಸರ್ ಸಿ ವಿ ರಾಮನ್ ಅವರಿಗೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಬೆಂಗಳೂರಲ್ಲಿ ಜಾಗ ಕೊಟ್ಟರು. ಸಿ ವಿ ರಾಮನ್ ಕೂಡಾ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. “ಆಪತ್ತೆ ಇರಲಿ, ಅಪ್ಯಾಯಮಾನ ಪರಿಸ್ಥಿತಿಯೇ ಇರಲಿ, ಮಿರ್ಜಾ ನನಗೊಬ್ಬ ಒಳ್ಳೆಯ ಸ್ನೇಹಿತ” ಎಂದಿದ್ದರು ರಾಮನ್.
ಇವರ ಸಾಧನೆಗಳನ್ನು ಹೇಳುವುದಾದರ್ ಹಲವು. ಬೆಂಗಳೂರಿನ ಪುರ ಭವನ, ಗಾಜಿನ ಕಾರ್ಖಾನೆ, ಮೈಸೂರ್ ಲ್ಯಾ0ಪ್ಸ್, ಪಿಂಗಾಣಿ ಕಾರ್ಖಾನೆ, ವೈಶ್ಯ ಬ್ಯಾಂಕ್ ಸ್ಥಾಪನೆಗೆ ಸಹಾಯ, ಬೃಂದಾವನ ಗಾರ್ಡನ್, ಮೈಸೂರ್ ಕಾಫಿ ಕ್ಯೂರಿಂಗ್ ಇತ್ಯಾದಿಗಳು.
ನಾಲ್ಮಡಿ ಕೃಷ್ಣರಾಜ ಒಡೆಯರ್ ನಿಧನಾನಂತರ ಕೆಲ ಕಾಲ ದಿವಾನರಾಗಿ ಮುಂದುವರೆದು ನಂತರ ರಾಜಾಸ್ಥಾನದ ಸಂಸ್ಥಾನವೊಂದರ ದಿವಾನರಾದರು. ನಂತರ ಹೈದರಾಬಾದ್ ಸಂಸ್ಥಾನದಲ್ಲಿ ದಿವಾನರಾದರು.
ಭಾರತ ಸ್ವತಂತ್ರವಾಗುವ ಆ ಕಾಲದಲ್ಲಿ, ಜಿನ್ನಾ ಇವರನ್ನು ಪಾಕಿಸ್ಥಾನ ಕ್ಕೆ ಬರುವುದಕ್ಕೆ ಕೇಳಿಕೊಂಡಿದ್ದಾರು.  ದೇಶವಿಭಜನೆಯನ್ನ ವಿರೋಧಿಸಿದ್ದ ಇಸ್ಮಾಯಿಲ್ ಇದಕ್ಕೆ ಒಪ್ಪಲಿಲ್ಲ. ಅನೇಕ ಸಾರಿ ಸಾರ್ವಜನಿಕವಾಗಿ ದೇಶ ವಿಭಜನೆಯನ್ನವರು ವಿರೋಧಿಸಿದ್ದರು. ಕಾಶ್ಮೀರದ ಮುಖ್ಯಮಂತ್ರಿಯಾಗುವ ಅವಕಾಶ ಕೂಡ ತಿರಸ್ಕರಿಸಿದ್ದರು ಇವರು. ಇವರ ಮುಂದೆ ಆಕಸ್ಮಿಕವಾಗಿ ಒಡಗಿದ್ದ, ಸಾಂವಿಧಾನಿಕವಾಗಿ ಸಲ್ಲದ ಪ್ರಧಾನಿ ಪಟ್ಟವನ್ನು ಯಾವುದೇ ಅರ್ಹತೆ ಇಲ್ಲದ ಒಬ್ಬರು ತ್ಯಜಿಸಿದ್ದು ತ್ಯಾಗವೇ?
ಹೈದರಾಬಾದಿನ ನಿಜಾಮನನ್ನು ಭಾರತಕ್ಕೆ ಸೇರುವಂತೆ ಒಪ್ಪಿಸಿದ್ದರು ಕೂಡ. ನಿಜಾಮ ತನ್ನ ನೀಚ ಬುದ್ಧಿ ತೋರುತ್ತಿದ್ದಾಗ ಜಾಗದ ಮೇಲೆ ಆಸೆ ಜಾತಿ ಮೇಲೆ ಪ್ರೀತಿ ಇದ್ದ ಕಾಂಗ್ರೆಸ್ ಅಧಿನಾಯಕರಿಗೆ ಸಂಧಿ ವಿಗ್ರಹಿಯಾಗಿದ್ದರು ಮಿರ್ಜಾ. ಆದರೆ, ನಿಜಾಮ ಗಾಂಧಿಯವರ ಸಾವಿನ ನಂತರ ತನ್ನ ವರಸೆ ಬದಲಿಸಿದ. ಮನನೊಂದ ಮಿರ್ಜಾ ರಾಜೀನಾಮೆ ಕೊಟ್ಟರು. ಸಾಲದ್ದಕ್ಕೆ ನಿಜಾಮ ಮಿರ್ಜಾರನ್ನು ಸಾರ್ವಜನಿಕವಾಗಿ ನಿಂದಿಸಿದ.
ಇದೆಲ್ಲಾ ಆದಮೇಲೆ ಮಿರ್ಜಾ ತಮ್ಮ ಸ್ವಂತ ಊರಾದ ಬೆಂಗಳೂರಿಗೆ ಬಂದು ಕೊನೆಯ ದಿನಗಳನ್ನು ಕಳೆದರು.

ಇಷ್ಟೆಲ್ಲಾ ಮಿರ್ಜಾ ಅವರ ಸಾಧನೆಗೆ ಕಡಿಮೆಯೇ ಬರೆದಂತಾಗಿದೆ. ನಿನ್ನೆ ಅಂದರೆ ಆಕ್ಟೊಬರ್ 24 ಮಿರ್ಜಾ ಅವರ ಹುಟ್ಟಿದ ದಿನ. ಅವರ ಸ್ಮರಣೆಗೆ ಏನನ್ನೂ ಮಾಡಲಿಲ್ಲ ಕರ್ನಾಟಕದ ಕಾಂಗ್ರೆಸ್ ಸರಕಾರ. ಅವರೇನು ಅಲ್ಪಸಂಖ್ಯಾತರಲ್ಲವೇ? ಬಿ ಜೆ ಪಿ ಯವರು ಉಳಿದ ಹೊತ್ತಲ್ಲಿ ದೇಶ ವಿಭಜನೆಯ ಬಗ್ಗೆ ಕಿಲೋಮೀಟರು ಗಟ್ಟಲೆ ಮಾತಾಡುತ್ತಾರೆ. ಇವರ ನೆನಪಾಗಲಿಲ್ಲ. ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರನ್ನು ತೆಗಳುವುದೇ ಕಾರ್ಯವಾಗಿಸಿಕೊಂಡು, ಏನೇಮೋ ಕಾರಣ ಕೊಟ್ಟು ಪ್ರಶಸ್ತಿ ವಾಪಸ್ ಕೊಡುವ ಬು ಜೀ ಗಳ ಬಾಯಿ ಸುಮ್ಮನಿದ್ದಿದ್ದ್ಯಾಕೆ ಗೊತ್ತಿಲ್ಲ. ತಾನು ಪ್ರಶಸ್ಟಿ ಸ್ವೀಕರಿಸಲು ಯಾರಿಗೋ ಅಪ್ಪ ಮಗ ಮೊಮ್ಮಗ ಎಲ್ಲಾ ಆಗುವ ನಟರೂ ಸುಮ್ಮನಿದ್ದಿದ್ದು ಯಾಕೋ ಗೊತ್ತಿಲ್ಲ. ಬಹುಷಃ ಸ್ತ್ರೀಲೋಲ ಶಾಹ್ ಜಹಾನ್ ಕಟ್ಟಿಸಿದ ಸಮಾಧಿ ಉಳಿಸಿಕೊಳ್ಳಲಿಕ್ಕೆ ಹೋಗಿದ್ದರು ಅನ್ನಿಸುತ್ತದೆ. ಸಿಂಹನಂತೆ ಪ್ರತಾಪ ತೋರಿಸುವ ಸಂಸದರು, ಅನಂತ ಹಿಂದೂ ವಾದಿ ಕೇಂದ್ರ ಮಂತ್ರಿಗಳೂ ಬಾಯಿ ಮುಚ್ಚಿಕೊಂಡಿದ್ದರು.

ಈಗ ಹೇಳಿ, ಭಾರತದ ಮೇಲೆ ಆಕ್ರಮಣ ಮಾಡಲಿಕ್ಕೆ ತುರ್ಕಿಯ ಖಲೀಫನಿಗೆ ಪತ್ರ ಬರೆದ ಟಿಪ್ಪು ಜಯಂತಿ ಮಾಡಬೇಕೋ ಅಥವಾ ಮಿರ್ಜಾ ಅವರ ಜಯಂತಿ ಆಚರಿಸಬೇಕೋ?
ಮಿರ್ಜಾರನ್ನು ಮೂಲೆಗುಂಪಾಗಿಸಿದ ರಾಜಕೀಯ ಪಕ್ಷಗಳಿಗೆ, ಅದರ ಸದಸ್ಯರಿಗೆ, ಟಿಪ್ಪು ಎಂದರೆ ತಮ್ಮಜ್ಜನೋ ಎಂಬಂತೆ ವರ್ತಿಸುವ ಬು.ಜೀ ಗಳಿಗೆ ಧಿಕ್ಕಾರವಿರಲಿ.

Tuesday, October 24, 2017

ರಾಮನಾಯಕನ ಚುರುಕು

ಕಿವುಡ ರಾಮ ನಾಯಕನ ಕಿವಿಯೊಳಗೆ ಗುಂಗೆ ಹುಳ ಹೊಕ್ಕಿದ್ದು, ಅದನ್ನಾತ ವಿಮಾನ ಎಂದು ಭ್ರಮಿಸಿದ್ದು ಎಲ್ಲಾ ಈಗ ಹಳೆಯ ಕಥೆ. ಐದು ವರ್ಷಗಳೇ ಕಳೆದು ಹೋದವು. ಆದರೆ ರಾಮನಾಯ್ಕನ ಪೇಚಾಟ ಮತ್ತು ಆತನ ಅರೆಬೆಂದ ಬೆರಕೆ ಜ್ಞಾನದ ಕಾಮೆಂಟ್ ಗಳು ನಿಲ್ಲುತ್ತಿಲ್ಲ, ಅವನ ಬಾಯಿಯಿಂದ ಬೇರೊಬ್ಬರ ಕಿವಿಗೆ ತಾಗಿ ಅಲ್ಲಿಂದ ಅದು ಎಲ್ಲಾ ಕಡೆ ಸುತ್ತಾಡಿ ಹೊಸ ಜೋಕ್ ಆಗುತ್ತದೆ ಅಷ್ಟೇ.

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಛತಿ ಎನ್ನುವಂತೆ, ರಾಮನಾಯ್ಕನ ಯಾವುದೇ ಮಾತು ಜನರ ಕಿವಿ ಸೇರಿ ಜೋಕ್ ಆಗಿ ಮತ್ತೆ ಹೊತ್ತು ಕಳೆಯಲು ಅವನನ್ನು ಕೆಲೆದು ಮಾತಾಡಿ, ಹೊಸಾ ಕಥೆ ಹುಟ್ಟಿಕೊಳ್ಳುತ್ತಿದೆ. ಇಷ್ಟರ ಮಧ್ಯೆ ಇವ ಕೆಪ್ಪ ಎನ್ನುವುದು ಗೊತ್ತಾದ ಮೇಲೆ  ಅವ ಮಾಡಿದ ಕೆಲಸಗಳನ್ನು, ಸಾಹಸಗಳನ್ನು ರಸವತ್ತಾಗಿ ವರ್ಣಿಸುವವರೂ ಹೆಚ್ಚಿದ್ದಾರೆ.

ಅದರಲ್ಲೂ ನಮ್ಮ ಗಾವಿಲ ಬಿ ಇ ಇಂಥಾ ಕಥೆಗಳನ್ನು ಹೇಳುವುದರಲ್ಲಿ ಸಮರ್ಥ. ಒಂದು ದಿನ ಊರ ಚರ್ಚಾ ಕಟ್ಟೆ ಹಾಲು ಡೈರಿಯಲ್ಲಿ ಅವನೇ ಹೇಳಿದ ತನ್ನ ಅನುಭವ ಹೀಗಿದೆ.

ರಾಮನಾಯ್ಕನಿಗೆ ಆಗ ನಡು ಪ್ರಾಯ. ಅವನ ಮಗನಿಗೆ ಹದಿವಯಸ್ಸು. ಇಬ್ಬರಿಗೂ ಕೊಬ್ಬಿಗೇನೂ ಕಮ್ಮಿ ಇರಲಿಲ್ಲ. ರಾಮನಾಯ್ಕನ ಮಗ ಈರ ಒಂದು ದಿನ ವಿಘ್ನೇಶ್ವರ ಭಟ್ಟರ ಜುಟ್ಟು ನೋಡಿ ಏನೋ ಆಡಬಾರದ ಮಾತಾಡಿ ಬಿಟ್ಟ. ಸಮಾಧಾನಿ ವಿಘ್ನೇಶ್ವರ ಭಟ್ಟರು ಏನೂ ಮಾತಾಡದೆ ಸುಮ್ಮನಿದ್ದು ಬಿಟ್ಟರು. ಭಟ್ಟರ ಮೌನ, ಆ ಹದಿವಯಸ್ಸಿನಲ್ಲಿ, ಅದೂ ಗೆಳೆಯರ ಮುಂದೆ ಈರನನ್ನು ವೀರಾಗ್ರೇಸರನನ್ನಾಗಿ ಮಾಡಿಬಿಟ್ಟಿತು. ದಿನಾ ಭಟ್ಟರನ್ನು ಟೀಕಿಸಲು ಒಳ್ಳೆ ಪ್ರಚೋದನೆಯೇ ಸಿಕ್ಕಿತು ಈರನಿಗೆ. ಭಟ್ಟರು ಎಂದಿನಂತೆ ಮೌನ ವಹಿಸಿಯೇ ಇದ್ದರು.

ಇದರಿಂದ ಪ್ರಚೋದಿತನಾದ ಈರ, ಊರೆಲ್ಲಾ ತನ್ನನ್ನು ತಾನೇ ಹೊಗಳಿಕೊಳ್ಳುತ್ತಿದ್ದ." ಹೆಂಗೆ ಇಗ್ಗಾಭಟ್ಟುಗೆ, ದಿನಾ ಮನಿಂದ ಹೊಂಟ ಕೂಡ್ಲೆ ಕೋಳಿ ಜುಟ್ಟ ಅಂದ್ರು ಮುಚ್ಕಂಡ್ ಹೋಕಾನೆ!! ತಂಬ್ಳಿ ಕುಡಿಯ ಭಟ್ಟುಗೆ ಎಲ್ಲಿಂದ ಬರ್ಬೋಕು ಧೈರ್ಯ? ಮುಚ್ಕ ಹೋಬೋಕು. ಮಾತಾಡ್ರೆ ಬೀಳ್ತಾವೆ ಹೊನ್ನಳಿ ಹೊಡ್ತ".

ಇದು ಹೇಗೋ ಒಂದು ದಿನ ಗೋಪಾಲನಿಗೆ ತಿಳಿದು ಹೋಯ್ತು. ಭೂಮಿ ಹುಣ್ಣಿಮೆ ಹಿಂದಿನ ದಿನ ಈರ ಒಬ್ಬನೇ ಸಿಕ್ಕ. ಗೋಪಾಲ ತಡ ಬಡ ಮಾಡದೆ, "ಏನಾ!!! ನಮ್ಮಪ್ಪಂಗೆ ಹಿಂದಿಂದ ಮಾತಾಡದಲ್ದೆ, ಊರ ತುಂಬಾ ಹೇಳ್ತೀಯಂತೆ?" ಎಂದ. ಉತ್ತರವಾಗಿ ಈರ "ಬಾಯೈತೆ ಹೇಳ್ತ್ನಿ." ಎಂದ. ಸಿಟ್ಟಿಗೆದ್ದ ಗೋಪಾಲ ನಾಲ್ಕು ಬಡಿದ.

ವಿಷಯ ಹೇಗೋ ಆಗಿ ಪೇಟೆಗೆ ಹೋಗಿದ್ದ  ರಾಮನಾಯ್ಕನಿಗೆ ತಿಳಿದು ಹೋಯ್ತು. ಒಳಗಿದ್ದ ಪರಮಾತ್ಮ ಸುಮ್ಮನಿರಲು ಬಿಟ್ಟಾನೇ? ಬೇಗ ಊರಿಗೆ ಹೋಗಬೇಕು. ಬಸ್ಸು ತಡವಾಗುತ್ತದೆ ಎಂದು ಒಂದು ಬಾಡಿಗೆ ಸೈಕಲ್ ತೆಗೆದುಕೊಂಡು ಹೊರಟೇ ಬಿಟ್ಟ.

ಊರಿಗೆ ಬರುವ ಹೊತ್ತಿಗೆ ಪರಮಾತ್ಮನೂ ತಣ್ಣಗಾಗಿದ್ದ, ರಾಮನಾಯ್ಕ ದಣಿದಿದ್ದ. ಏನೂ ಮಾತಾಡದೆ ಭಟ್ಟರ ಮನೆಯ ಜಗುಲಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತ. ಗೋಪಾಲ ಬಂದ ಕೂಡಲೇ ಒಂದು ಕಾವಳ ಕೇಳಿ ಬಾಯಿಯಲ್ಲಿ ಹಾಕಿಕೊಂಡು ಅದು ಇದು ಮಾತಾಡ ತೊಡಗಿದ. ಅಷ್ಟರಲ್ಲಿ ಗೋಪಾಲನ ಕಣ್ಣು ಹೊರಗಿದ್ದ ಸೈಕಲ್ ಮೇಲೆ ಬಿತ್ತು.

"ಯಾರದ್ದಾ ಸೈಕಲ್ ರಾಮ?" ಎಂದ.

"ನಂದೆಯ ಭಟ್ರೆ ಬಾಡಿಗೆಗೆ ತಂದೆ" ಅಂದ ರಾಮ

"ಎಂತಕ್ಕೆ? ನಿನಗೆ ಸೈಕಲ್ ಹೊಡಿಯಕ್ಕೆ ಬರದಿಲ್ಲಲಾ!!"

"ಹುಡುಗಗೆ ಹೊಡಿದಿದ್ದು ಕೇಳಿ ಸರಸರನೆ ಬರ್ಬೋಕು ಅಂತ .ವತ್ಗ್ಯ ತಂದೆ"

ರಾಮನಾಯ್ಕನ ಮಾತು ಕೇಳಿ ಗೋಪಾಲ ಸುಧಾರಿಸಿಕೊಳ್ಳಲು ಸಿದ್ಧನಾದ.

ಕೆಪ್ಪ ರಾಮನಾಯಕನ ಕೊಂಡಿ,

https://www.blogger.com/blogger.g?blogID=6962253143673731460#editor/target=post;postID=5624648356771657467

Tuesday, October 17, 2017

ನವಗ್ರಾಮದ ಪಟೇಲನ ಸೈಕಲ್ ಸವಾರಿ

ಇಕ್ಕೇರಿಯ ಅರಸರ ಕಾಲದಲ್ಲಿ ಹೊಸತಾಗಿ ನನಿರ್ಮಿಸಿದ ಊರೇ ನವಗ್ರಾಮ. ಬ್ರಿಟಿಷರ ಕಾಲದಲ್ಲಿ ಕೂಡಾ ಈ ಊರಿಗೆ ಇದ್ದ ಮಹತ್ವ ಕಡಿಮೆಯೇನೂ ಆಗಲಿಲ್ಲ ಈ ಊರಿನ ಪಟೇಲಿಕೆ ವಂಶಪಾರಂಪರ್ಯವಾಗಿ ಬಂದಿತ್ತು ನಾಗಪ್ಪಯ್ಯನಿಗೆ. ಶ್ರೀಮಂತಿಕೆ,ಪಟೇಲಿಕೆ ಎರಡೂ ಪಟೇಲ ನಾಗಪ್ಪಯ್ಯನಿಗೆ ಅಧಿಕಾರದ ಜೊತೆ ಮಿತಿ ಮೀರಿದ ಅಹಂಕಾರವನ್ನು ಕೊಟ್ಟಿತ್ತು.

ಈ ನಾಗಪ್ಪಯ್ಯ ರಸಿಕನಾದರೂ ಕಚ್ಛೆ ಹರುಕನಾಗಿರಲಿಲ್ಲ. ದುಡ್ಡಿನ ಗರ ಬಡಿದಿದ್ದರಿಂದಲೋ ಏನೋ ಸ್ವಲ್ಪ ಸಂಯಮ ಇತ್ತು. ದುಡ್ಡಿನ ಆಸೆಯಲ್ಲಿ, ಪಟೇಲಿಕೆ ಪವರ್ ಉಪಯೋಗಿಸಿ ಅನೇಕರ ಮನೆಯ ಗದ್ದೆ ತೋಟ ಬಂಗಾರಗಳನ್ನು ತನ್ನ ವಶಕ್ಕೆ ಪಡೆದು ವಂಚಿಸಿದ್ದ. ಈ ಹಲ್ಕಾ ಕೆಲಸವನ್ನು ತನ್ನ ಮಹತ್ ಸಾಧನೆ ಎಂಬುವಂತೆ ಎಲ್ಲರೆದುರೂ “ಆನು ಸತ್ತ ಮೇಲೆ ಯನ್ನ ಮಗ ದಿನಾ ಒಂದು ಸಾವಿರ ಖರ್ಚು ಮಾಡ್ಲಕ್ಕು. ಅಷ್ಟು ಮಾಡಿದ್ದಿ” ಎಂದು ಕೊಚ್ಚಿಕೊಂಡು ಎದೆ ತಟ್ಟಿಕೊಳ್ಳುತ್ತಿದ್ದ. ಎದೆಗೆ ಇವನ ಬಡಿತ ತಡೆದುಕೊಳ್ಳುವುದಕ್ಕಾಗಲಿಲ್ಲವೋ ಅಥವಾ ಯಾರ ಶಾಪವೋ, ಮಗ ಹದಿಹರೆಯದಲ್ಲಿದ್ದಾಗಲೇ ನಾಗಪ್ಪಯ್ಯ ತನ್ನ ಆರಾಧ್ಯ ದೇವಿ ಲಕ್ಷ್ಮೀದೇವಿಯ ಗಂಡನನ್ನು ಸೇರಿಕೊಂಡ. ಅಂದರೆ ಸತ್ತ.

ನಾಗಪ್ಪಯ್ಯನ ಮಗ ಕಾಳಿಂಗನಿಗೆ ಸಿಗಬಾರದ ಪ್ರಾಯದಲ್ಲಿ ಸಂಸಾರ ಸಿಕ್ಕಿತು. ಅಪ್ಪನ ಮುದ್ದಿನಿಂದ ಬುದ್ಧಿ ಅರೆ ಬೆರೆ ಆಗಿತ್ತು. ಇವನಿಗೆ ಸುತ್ತಲೂ ಚಮಚಾಗಳು ಸೇರಿಕೊಂಡರು. ಸೇರಿಕೊಂಡ ಚಮಚಗಳು ಬಕೆಟ್ಗಳಾಗಲು ಇವನಿಗೆ ಹೇಳತೊಡಗಿದವು,  “ ಕಾಳಿಂಗಣ್ಣ, ಒಂದು ಹೆಗಡೆ ಪಟೇಲಪ್ಪ ಆಗಿ ನೀನು ಹಿಂಗಿದ್ರೆ ಬೆಲೆ ಇರ್ತಲ್ಲೆ. ಕೊತ್ವಾಲರ ಜತೆ ಇಲ್ಲ ಓಡಾಡ ನೀನು ಸ್ವಲ್ಪ ಮುಂದುವರೆಯಕ್ಕು. ಇಲ್ದಿದ್ರೆ ಅವ್ವು ನಮ್ಮನ್ನ ಮೂಲಿಗೆ ಹಾಕ್ಬಡ್ತ. ಸ್ವಲ್ಪ ಅವರ ಹಾಂಗೆ ಎಣ್ಣೆ ಗಿಣ್ಣೆ ಹಾಕಕ್ಕು ನೀನು. ಪಟೇಲ ಅಲ್ದಾ” ಪಟೇಲನಿಗೂ ಇದು ನಿಜ ಎನ್ನಿಸಿ  ಅಂತೆಯೇ ಮಾಡುತ್ತಿದ್ದ. ಒಂದು ದಿನ ಹೀಗೆಯೇ ಎಣ್ಣೆ ಗುಂಗಲ್ಲಿ ಸೈಕಲ್ ಹತ್ತಿ ಸಾಗರದ ಸಂತೆಗೆ ಹೋದ. ಅಲ್ಲಿ ಇದ್ದವರೆಲ್ಲಾ “ನಮಸ್ಕಾರ ನವಗ್ರಾಮದ ಪಟೇಲರಿಗೆ” ಎಂದಿದ್ದು ಕೇಳಿ ಕೇಳಿ ಪಟೇಲ ಉಬ್ಬಿದ. ತಾನು ಉಬ್ಬಿದ್ದು ಎಲ್ಲರಿಗೂ ಗೊತ್ತಾಗಬೇಕು ಎಂದುಕೊಂಡು ಮುಖದ ಮೇಲೆ ಮಹಾ ಗತ್ತು ತಂದುಕೊಂಡು ರಸ್ತೆ ಬಿಟ್ಟು ಉಳಿದೆಲ್ಲಾ ಕಡೆ ನೋಡುತ್ತಿದ್ದ. ಜೊತೆಗೆ ಒಳಗಿದ್ದ ಪರಮಾತ್ಮ  ಬೇರೆ. ಹೀಗೆ ಹೋದರೆ ಬೀಳದೆ ಇರುತ್ತಾರೆಯೇ? ಪಟೇಲನೂ ಬಿದ್ದ.

ಬಕೆಟ್ ಲೆವೆಲ್ಲಿನ ಪ್ರಮೋಷನ್ನಿಗೆ ಕಾಯುತ್ತಿದ್ದ ಚಮಚಾಗಳು ಮತ್ತು ಈಗಾಗಲೇ ಬಕೆಟ್  ಆಗಿದ್ದವರು ಎಲ್ಲಾ ಓಡಿದರು. ಕೆಲವರು ಸೇರಿ ಸೈಕಲ್ ಎತ್ತಿದರೆ ಕೆಲವರು ಪಟೇಲನನ್ನು ಎತ್ತಿದರು. ಇನ್ನು ಕೆಲವರು ಎದ್ದ ಮೇಲೆ ಪಟೇಲನನ್ನು ಎತ್ತಿದ ಮೇಲೆ ಅವನ ಸೈಕಲ್ ಅನ್ನು ಹಿಡಿದುಕೊಂಡರು. ಸಹಜವಾಗಿ ಎಲ್ಲರೂ ಒಂದೊಂದು ಮಾತು ಎಸೆದರು. ಪಾಪ ಅವರು ಬಕೆಟ್ ಚಮಚಗಳಾದರೂ ಬಿದ್ದವರ ಮೇಲೆ ಕಲ್ಲು ಎಸೆಯುವ ಬುದ್ಧಿ ಇರಲಿಲ್ಲ. ಪಟೇಲನಿಗೆ ಅಗೌರವ ಎಂದೇ ಅವನನ್ನು ಬೀಳುವುದು ತಡೆದಿರಲಿಲ್ಲ ಅಷ್ಟೇ.

ಅವರಲ್ಲಿ ಒಬ್ಬ ಮಾತಾಡುವ ಭರದಲ್ಲಿ, “ಅಯ್ಯೋ ಕಾಳಿಂಗಣ್ಣ! ಬ್ರೇಕ್ ಹಿಡಿಯದಲ್ದನಾ!!” ಎಂದ. ಪಟೇಲ ಅವನ ಕಡೆ ತಡೆಕಚಿತ್ತನಾಗಿ ನೋಡುತ್ತಿದ್ದ. ಮಾತಾಡಿದವ, ಪಟೇಲನಿಂದ ತನಗೊಂದು ಭರ್ಜರಿ ಬಹುಮಾನ ಖಂಡಿತ ಎಂದುಕೊಂಡ. ಪಟೇಲ, “ಏನೋ ಅಂದ್ಯಲ್ಲ. ಇನ್ನೊಂದ್ಸಲ ಹೇಳಬಹುದೋ?” ಎಂದ. ಅದೇನು ಮಹಿಮೆಯೊ, ಪಟೇಲ ಎಣ್ಣೆ ಹಾಕಿದಾಗ ಹವಿಗನ್ನಡ ಆಡುತ್ತಿರಲಿಲ್ಲ. ಹೇಳಿದವ ಮತ್ತೆ, “ಬ್ರೇಕ್…” ಅಂದ. ಅಷ್ಟರಲ್ಲಿ ಪಟೇಲ, ಅವನ ಮುಖಕ್ಕೆ ಗುದ್ದಿ, “ಅಲ್ಲಯ್ಯಾ!!! ಎರಡೂ ಕೈನಲ್ಲಿ ಹ್ಯಾಂಡಲ್ ಹಿಡಿಕೊಂಡಿರೋವಾಗ ಬ್ರೇಕ್ ಹೆಂಗಯ್ಯಾ ಹಾಕೋದು?” ಎಂದ. ಇದಕ್ಕೆ ಕೆಲವು ಬಕೆಟ್ಟುಗಳು “ಹೌದು ಹೌದು” ಎಂದವು ಬಹುಮಾನ ಬಯಸಿದವ ಇನ್ನೂ ನಾಲ್ಕು ಬಿದ್ದರೆ ಕಷ್ಟ ಎಂದುಕೊಂಡು, “ಅದು ಬಿಡಿ.ತಪ್ಪಾತು. ಮನಿಗೆ ಹೋಪನ ಬಾ ಕಾಳಿಂಗಣ್ಣ” ಎಂದು ಮಸ್ಕಾ ಹೊಡೆಯುತ್ತಾ ಪಟೇಲನ ಸೈಕಲ್ ತಳ್ಳತೊಡಗಿದ. ಪಟೇಲ ಅವನ ಮುಂದೆ ರಾಜ ಗಾಂಭೀರ್ಯದಲ್ಲಿ ತೂರಾಡುತ್ತಾ ಹೊರಟ. ಇನ್ನುಳಿದ ಬಕೆಟ್ಟುಗಳು ಹಿಂಬಾಲಿಸಿದವು.

Wednesday, October 11, 2017

ಮುಖೋರ್ಜೀ ಮೀಟ್ಸ್ ದೀಪೇಶ

ಮುಷ0ಡಿಗಳು ತನ್ನ ಎಡಪಂಥೀಯ ಸಮಾತಾವಾದವನ್ನು ಅನೇಕಾಂತವಾದದ ವಿಚಾರಧಾರೆಗೆ ಬಳಸದೆ ಏಕಾಂತದಲ್ಲಿ ಮಾತ್ರ ಇರಬೇಕಾದ ಜಾಗಕ್ಕೆ ಇಟ್ಟಿದ್ದನ್ನು ಕೇಳಿ ಖಿನ್ನನಾಗಿದ್ದ ಮುಖೋರ್ಜೀ, ತನ್ನ ಸೋಲೊಪ್ಪಿಕೊಳ್ಳಲಿಲ್ಲ. ಹೊಸ ಶಿಷ್ಯನನ್ನು ಹುಡುಕುತ್ತಲೇ ಇದ್ದ. ಆಗ ಅವನ ಕಿವಿಗೆ ಬಿದ್ದ ಸುದ್ದಿ, ದೀಪೇಶ ಎಂಬ ಯುವ ಕ್ರಾಂತಿಕಾರಿ ಮತ್ತು ಅವನ ತಂಗಿ.

ಇತ್ತ ದೀಪೇಶ ಕೂಡಾ ತನ್ನ ಮತ್ತು ತನ್ನ ತಂಗಿಯ ಸೋಲಿನ ಕಾರಣಗಳನ್ನು ವಿಮರ್ಶಿಸಿದ್ದ. ಬುದ್ಧಿಜೀವಿ ಎಡಪಂಥೀಯ ವಿಚಾರವಾದಿಯಾಗಲು ಹೊರಟವ ವಿಮರ್ಶಕನಾಗದಿದ್ದರೆ ಹೇಗೆ?
ಅವನ ತರ್ಕ ಹೀಗಿತ್ತು. ಇಷ್ಟು ದಿವಸ ಮೇಲ್ವರ್ಗದವರನ್ನು ವಿರೋಧಿಸಿದ ತನಗೆ ಮೇಲುವರ್ಗದ ಯಾರ ಬೆಂಬಲವೂ ಸಿಗಲಿಲ್ಲ. ಮತ್ತು ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಯಾದ ಯಾವ ಅನುಭವಿಯ ಮಾರ್ಗದರ್ಶನವೂ ದೊರೆಯಲಿಲ್ಲ. ಈಗ ಅದನ್ನು ಪಡೆದರೆ ತಾನೊಬ್ಬ ಮಹಾನ್ ಕ್ರಾಂತಿಕಾರಿ ಆಗುವುದಕ್ಕೆ ಸಂದೇಹವೇ ಇಲ್ಲ.

ಇಷ್ಟರಲ್ಲಿ ಒಂದು ದಿನ ಮುಖೋರ್ಜಿ ಮಂಜಪ್ಪನಿಗೆ ದೀಪೇಶ ಸಿಕ್ಕ. ಅಲ್ಲ ಸಿಕ್ಕಿ ಬಿದ್ದ. ಇಬ್ಬರೂ ದಿನಾ ಉ.ಮ.ಹೇ ಮಾಡದಿದ್ದರೂ ಕ್ರಾಂತಿಕಾರಿ ಚರ್ಚೆಯಲ್ಲಿ ದೀರ್ಘಕಾಲ ತೊಡಗುತ್ತಿದ್ದರು. ಇವರ ಚರ್ಚೆಯನ್ನು ಇಲ್ಲೇ ಎಲ್ಲೋ ಭೂತ ಪ್ರೇತಗಳಾಗಿ ತಿರುಗುತ್ತಿರುವ ಲೆನಿನ್, ಸ್ಟಾಲಿನ್, ಕ್ಯಾಸ್ಟ್ರೊ ಗಳ ಆತ್ಮ ಕೇಳಿರಬೇಕು. ದೇವರನ್ನು ನಂಬದ ಸ್ವರ್ಗ ನರಕಗಳನ್ನು ಅಲ್ಲಗಳೆಯುವ ಇವರ ಆತ್ಮ ಅಲ್ಲಿ ಹೋಗುವುದಿಲ್ಲವಲ್ಲ ಮತ್ತೆ.

ಹೀಗೆ ಇವರ ಚರ್ಚಾಗೋಷ್ಠಿ ಸಾಗುತ್ತಿರುವಾಗ,ಪಿಣರಾಯಿ ವಿಜಯನ್ ಕೇರಳ ದೇವಸ್ಥಾನಗಳಲ್ಲಿ ದಲಿತರೆ ಪೂಜೆ ಮಾಡಬೇಕು ಎನ್ನುವ ಆಜ್ಞೆ ತಂದದ್ದರ ಬಗೆಗೆ ಹೊರಳಿತು.

ಮುಖೋರ್ಜೀ ಹೇಳಿದ." ಅಸಮಾನತೆ ಕೇವಲ ಜಾತಿಗಳ ನಡುವೆ ಇಲ್ಲ. ಸಮಾಜ ಮಟ್ಟದಲ್ಲಿ ಇದು ಸರಿಯಾಗುವ ಮೊದಲು ಮನೆಯಲ್ಲಿನ ಅಸಮಾನತೆಗಳು ದೂರಾಗಬೇಕು."
ದೀಪೇಶ ಕೇಳಿದ,"ಹೇಗೆ?"
ಮುಖೋರ್ಜೀ,"ನೋಡು ದೀಪೇಶ, ಎಲ್ಲಿತನಕ ನೇಣು ನಿನ್ನ ಸ್ವಂತ ವಿಚಾರಗಳನ್ನು ಮಾರ್ಕ್ಸನ ಆಲೋಚನೆಗಳ ಬೆಳಕಿನಲ್ಲಿ, ಲೆನಿನ್ನನ ಮಾತುಗಳ ಮೂಸೆಯಲ್ಲಿ, ಸ್ಟಾಲಿನ್ನನ ಹೋರಾಟದ ನೆಲೆಯಲ್ಲಿ, ಕ್ಯಾಸ್ಟ್ರೋನ ಚಿಂತನೆಗಳಲ್ಲಿ, ಲಂಕೇಶರ ಲಹರಿಗಳಲ್ಲಿನ ಅನೇಕಾಂತವಾದದ ಬೆಂಕಿಯಲ್ಲಿ ಬೀರಿ ಕಾಯಿಸಬೇಕು. ಆಗ ಮಾತ್ರ ಮಾವೋನಾಂತೆ ಕ್ರಾಂತಿಯ ವಿಚಾರಗಳನ್ನು ವಿಶಿಷ್ಟ ರೀತಿಯಲ್ಪಿ ದಮನಿತರ ಧ್ವನಿಯಾಗಿ ವಿಕ್ಷಿಪ್ತ ಪುರೋಹಿತಶಾಹಿ ಜನರೆದುರು ತೆರೆದಿಡಲು ಸಾಧ್ಯ.ಕ್ರಾಂತಿಯ ಕಿಡಿ ಎಲ್ಲೇ ಹತ್ತಿದರೂ ಅದು ಜ್ವಾಲಾಮುಖಿಯಂತೆ ಸಿಡಿದು ಉಕ್ಕೇರಿ ಪಸರಿಸಲೇ ಬೇಕು. ಅದು ವಿಚಾರಧಾರೆಯ ವೈಶಿಷ್ಠ್ಯ…….. ಕ್ರಾಂತಿ ಮನೆಯಲ್ಲೇ ಶುರು ಮಾಡು. ನಾನಿದ್ದೇನೆ.”ಎಂದ

ಮುಖೋರ್ಜೀ ಯಾರಿಂದಲೋ ಎರವಲು ಪಡೆದು ಆಡಿದ  ಈ ಮಾತುಗಳನ್ನು ಕೇಳಿ ದೀಪೇಶನ ಒಳಗಿದ್ದ ಕ್ರಾಂತಿಕಾರಿ ಸಿಡಿದೆದ್ದ. ಆತ ಕೈಗೊಂಡ ತೀರ್ಮಾನ ಈಡೇರುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿ, ತಾನೊಬ್ಬಯಶಸ್ವಿ ಕ್ರಾಂತಿಕಾರಿಯಾದಂತೆ ಸಂಭ್ರಮಿಸುತ್ತಾ ಕನಸು ಹಗಲುಗನಸು ಕಾಣುತ್ತಾ ಮಲಗಿದ.

ಬೆಳಿಗ್ಗೆ, ಅವನ ಅಮ್ಮ ಹಾಲಿ, “ಅಯ್ಯಯ್ಯೋ!!!ಪರಮ ಭಟ್ರ ಹತ್ರ ಹೋಗಿ ಯಾರಾದ್ರೂ ನನ್ನ ಮಗುಂಗೆ ಮಾಡಿದ ಮಾಟ ತೆಗಸ್ರೋ. ಅವತ್ತು ಎಂತೋ ಗೊತ್ತಾಗದೆ ಜಕ್ಕಣಿ ಹಿಡಿಯಕ್ಕೆ ಹೇಳ್ದ. ಈಗ ಮುಕಳಜ್ಜಿ ಭಟ್ರು ಅದನ್ನೇ ಇವಂಗೆ ಹೊಕ್ಸಾರೆ.” ಎಂದು ಎದೆ ಹೊಡೆದುಕೊಂಡು ಅಳುತ್ತಿದ್ದಳು.

ಯಾರೋ ಒಬ್ಬರು ಬಂದು ಸಮಾಧಾನಿಸಿ ಕೇಳಿದಾಗ, “ಬೆಳಗ್ಗೆ ನೋಡ್ರೆ ತನ್ನ ಗಡ್ಡದ ಬ್ಲೇಡ್ನ ಹುಯ್ಡ್ಗಿ ಚೀಲದಾಗೆ ಇಟ್ಟು,  ಹುಯ್ಡ್ಗಿ ಹಾಕ್ಯಳ ಇಸ್ಪರ್ ತಗ್ದ್ ಸಿಕ್ಸ್ಕತ್ತಿದ್ದ. ಕೇಳ್ರೆ ಸಾಮಾನಾತೆ ಅಂದ” ಎನ್ನುತ್ತಾ ಮತ್ತೆ ಮತ್ತೆ ಬಿಕ್ಕಿದಳು

ಆಗಿದ್ದೇನು ಎಎಂದರೆ, ಮನೆಯೊಳಗಿನ ಅಸಮಾನತೆ ತೆಗೆಯಲು, ದೀಪೇಶ ತನ್ನ ಗಡ್ಡ ಮಾಡುವ ಬ್ಲೇಡ್ ಅನ್ನು ತಂಗಿಯ ಚೀಲದಲ್ಲಿಟ್ಟಿದ್ದ. ಅದನ್ನು ನೋಡಿದ ಅವನ ತಂಗಿ ತಾಯಿಗೆ ದೂರಿತ್ತಿದ್ದಳು. ತಾಯಿ ವಿಚಾರಿಸಲೆಂದು ಹೋದಾಗ ಅವ ವಿಸ್ಪರ್ ಪ್ಯಾಕೆಟ್ಟಿನಿಂದ ನ್ಯಾಪ್ಕಿನ್ ತೆಗೆದು ಒಳಸಿಕ್ಕಿಸುತ್ತಿದ್ದ. ಅವಳು ಸಿಟ್ಟಿನಿಂದ ಏನೆಂದು ಕೇಳಿದ್ದಕ್ಕೆ ಸಮಾನತೆ ಎಂದು ಉತ್ತರಿಸಿದ್ದ. ಅನಕ್ಷರಸ್ಥೆ ಹಾಲಿ ಅದೇನೆಂದು ತಿಳಿಯದೆ, ತನ್ನ ತಿಳುವಳಿಕೆಗೆ ಒಗ್ಗಿಸಿದ್ದಳು.

(ಬರಹ ಅಶ್ಲೀಲವಾಗಿದೆ. ಇದಕ್ಕಾಗಿ ಇಷ್ಟು ದಿನ ಪ್ರೋತ್ಸಾಹಿಸಿದ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಸಮಾನತೆಯ ಹೆಸರಲ್ಲಿ ಕಾ.ಕ ಗಳು ಮಾಡುತ್ತಿರುವ ದುರ್ಬುದ್ಧಿಯನ್ನು ಅವರದ್ದೇ ಭಾಷೆಯಲ್ಲಿ ಖಂಡಿಸಲು ಮುಂದಾದಾಗ ನಡೆದ ಪ್ರಮಾದ ಇದು. ದಯವಿಟ್ಟು ಕ್ಷಮಿಸಿ.)

Tuesday, October 10, 2017

ಗೋಡಂಬಿ ಹಣ್ಣು

ಇದು ಕರ್ನಾಟಕದ ರಾಜಧಾನಿ, ಐ ಟಿ ಬಿ ಟಿ ಜನರ ತಾಣ ಟೆಕ್ಕಿಗಳ ಪಾಲಿನ ಸ್ವರ್ಗ ಭಾರತದ ಸಿಲಿಕಾನ್ ವ್ಯಾಲಿ ಎಂಬಿತ್ಯಾದಿ ಹೆಸರುಗಳಿಂದ ಪರಿಶೋಭಿಸುತ್ತಿರುವ (ಈಗ ಒದ್ದೆ ತೊಪ್ಪೆಯಾಗಿ ಮಳೆ ಬರಬಾರದ ನಗರಿ ಎನ್ನಿಸಿಕೊಂಡಿರುವ) ಹೈ ಕೆಟ್ ಸಿಟಿ ಬೆಂದಕಾಳೂರಿನಲ್ಲಿ ನಡೆದ ಕಥೆ. ಆದರೆ ಇದು ಮಲೆನಾಡಿನ ಜೀವನಕ್ಕೆ ಸಂಬಂಧಿಸಿದ್ದೇ ವಿಚಾರ.

ನಗರದ ಉತ್ತರ ಭಾಗದಲ್ಲಿ ಸದಾ ಟ್ರಾಫಿಕ್ ಕಿರಿಕಿರಿಗೆ ಹೆಸರುವಾಸಿಯಾದ ಮೇಖ್ರಿ ಸರ್ಕಲ್ ಬಳಿ ನಡೆದ ಘಟನೆ ಇದು. ಒಂದು ದಿನ ಬೇಸಿಗೆಯಲ್ಲಿ ಬೆಳಿಗ್ಗೆ ಹನ್ನೊಂದು ಘಂಟೆಯ ಘನ ಘೋರ ಬಿಸಿಲಿನಲ್ಲಿ ಗಾಡಿ ನಿಲ್ಲಿಸಿ ಕೆಂಪು ದೀಪ ಹಸಿರಾಗುವುದಕ್ಕೆ ಕಾಯುತ್ತಿದ್ದೆ. (ಆ ಬಿಸಿಲಿಗೆ ಏನೆಲ್ಲವೂ ಕರಗಿ ದ್ರವವಾಗಿ ನಂತರ ಅನಿಲವಾಗುವಂತಿದ್ದರೂ ಅದು ‘ಘನ’ ಘೋರ ಬಿಸಿಲು. ಹೇಗೆ ಅಂತ ನಾ ಹೇಳಲಾರೆ). ಆ ಜಂಗುಳಿಯಲ್ಲಿ ಗೇರು ಹಣ್ಣು ಮಾರುತ್ತಾ ಬರುತ್ತಿರುವ ಒಬ್ಬನನ್ನು ನೋಡಿದೆ. ನನಗೊಂದು ದುರಭ್ಯಾಸ. ಬೆಂಗಳೂರಿನಲ್ಲಿ ನಿತ್ಯ ಕನ್ನಡದ ಕೊಲೆಯನ್ನು ಕೇಳಿ ನೋಡಿ, ಎಲ್ಲದಕ್ಕೂ ಈ 'ನಾಗರೀಕರು' ಏನು ಕರೆಯುತ್ತಾರೆ ಅಂತ ಕಿವಿ ಉದ್ದ ಮಾಡುವುದು. ಇಲ್ಲಿಯೂ ಅದೇ ಮಾಡಿದೆ ಆತ "ಗೋಡಂಬಿ ಹಣ್ಣು,ಗೋಡಂಬಿ ಹಣ್ಣು” ಎನ್ನುತ್ತಾ ಬರುತ್ತಿದ್ದ.

ಆ ಕೆಲವೇ ಕ್ಷಣಗಳಲ್ಲಿ ಮನಸ್ಸು ಎಂದೋ ಬಿಟ್ಟು ಬಂದಿದ್ದ ಮಲೆನಾಡಿನ ಹಳ್ಳಿಯನ್ನೂ, ಗೇರು ಮರಗಳನ್ನೂ, ಸುತ್ತಾಡಿ ಬಂದಿತ್ತು. ಹಸಿ ಗೇರು ಪೀಠದ ಸುದ್ದಿಗೆ ಹೋಗಿ ಕೈ ಬಾಯಿ ಸುಟ್ಟುಕೊಂಡಿದ್ದೆಲ್ಲಾ ನೆನಪಾಗಿತ್ತು. ಉಪ್ಪು ಹಚ್ಚದೆ ಗೇರುಹಣ್ಣು ತಿಂದು ಗಂಟಲು ಕಸರಿ ಕೆರೆತ ಬಂದಿದ್ದು, ಹಣ್ಣಿನ ರಸ ಬಿದ್ದು ಅಂಗಿ ಕಲೆಯಾಗಿದ್ದು ಎಲ್ಲಾ ನೆನಪಾಯಿತು.

ಆ ಹಣ್ಣುಗಳನ್ನು ಇಬ್ಬರು ಹುಡುಗಿಯರು ಹತ್ತಿ ಕುಳಿತಿದ್ದ ಸ್ಕೂಟಿಯೊಂದರಬಳಿ ಹೋಗಿ ಆ ಹುಡುಗಿಯರಿಗೆ ಗೋಡಂಬಿ ಹಣ್ಣು ಮಾರಿದ. ನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯ ಕಂಕುಳಲ್ಲಿ Biology II P.U.C ಪುಸ್ತಕ ಇದ್ದಿದ್ದು ನೋಡಿದೆ. ಅಷ್ಟರಲ್ಲಿ ಹಸಿರು ದೀಪ ಹತ್ತಿತು. ನನಗಿಂತ ಮುಂದಿದ್ದ ಆ ಹುಡುಗಿಯರು ಸ್ವಲ್ಪ ದೂರ ಸಾಗಿ ಗಾಡಿ ನಿಲ್ಲಿಸಿ, ಗೇರು ಹಣ್ಣು ತಿನ್ನಲು ಮುಂದಾದರು. ನಾನು ಕೂಡಾ ಅವರ ಸಮೀಪದಲ್ಲೇ ಗಾಡಿ ನಿಲ್ಲಿಸಿಕೊಂಡು ಯಾರಿಗೋ ಕಾಯುವಂತೆ ನಟಿಸುತ್ತಿದ್ದೆ. ನನ್ನ ಉದ್ದೇಶ ಈ ಹೊಸ ಶತಮಾನದ ಹುಡುಗಿಯರು ಬೆಂಗಳೂರಲ್ಲಿ ಅಪರೂಪವಾಗಿರುವ ಹಣ್ಣು ಹೇಗೆ ತಿನ್ನುತ್ತಾರೆ ಎಂದು ನೋಡುವುದೇ ಆಗಿತ್ತು. ಎಲ್ಲೋ ಒಂದು ಕಡೆ ಇವರೇನಾದರೂ ಗೂಗಲ್ ಓಪನ್ ಮಾಡಿ ನೋಡುತ್ತಾರ, ಹಣ್ಣು ತಿನ್ನುವುದು ಹೇಗೆ ಅಂತ ಎನ್ನುವ ಕುತೂಹಲವೂ ಇತ್ತು. ಎಷ್ತೆಮ್ದರೂ ಮುಂದುವರೆದ ಪೀಳಿಗೆಯವರಲ್ಲವೇ?

ಒಂದು ಹುಡುಗಿ ಹಣ್ಣು ತಿಂದು ಅದರ ಚರಟನ್ನು ಉಗುಲಬೇಕು ಎನ್ನುವುದು ಗೊತ್ತಿಲ್ಲದೆ ನೀರು ಕುಡಿದು ಅದನ್ನು ಒಳಗಿಳಿಸಿದಳು. ಗಂಟಲ ಕೆರೆತಕ್ಕೋ ಏನೋ, ಮತ್ತೊಂದಿಷ್ಟು ನೀರು ಕುಡಿದಳು. ಇನ್ನೊಬ್ಬಳೂ ಇವಳನ್ನು ಅನುಕರಿಸಿದ್ದಳು. ಇಬ್ಬರ ಮುಖವೂ ಕೆಂಪಾಗಿತ್ತು. ಬಿಸಿಲ ಧಗೆಯ ಜೊತೆ ಗೇರು ಹಣ್ಣಿನ ಚರಟು ನುಂಗಲು ಪಟ್ಟ ಕಷ್ಟದ ಪ್ರಭಾವ ಇದು ಎಂದುಕೊಂಡೆ. ಆದರೆ ಸತ್ಯ ಬಹಳ ಬೇಗ ಒಬ್ಬಳ ಬಾಯಿಂದ ಹೊರಬಂತು.

"ಸೀ ಯಾ!!! ದಟ್ ಬಗ್ಗರ್ ಹ್ಯಾಸ್ ಚೀಟೆಡ್ ಅಸ್. ಇಟ್ ಈಸ್ ಸೀಡ್ ಲೆಸ್ ಯಾ!!! ನೋ ಕ್ಯಾಶ್ಯೂ ನಟ್ ಇನ್ ಸೈಡ್!!!"
ಇನ್ನೊಬ್ಬಳೆಂದಳು, " ಯಾ!!! ಹೌ ಬ್ಯಾಡ್ ನಾ!!! ಯಾ....!!!"
("ನೋಡೇ!!! ಆ ಕಂತ್ರಿ ಮೋಸ ಮಾಡಿಬಿಟ್ಟ. ಇದು ಸೀಡ್ಲೆಸ್ ಕಣೇ!!! ಒಳಗೆ ಗೋಡಂಬಿನೇ ಇಲ್ಲ!!!!"

"ಹೌದಮ್ಮಾ!!, ಎಷ್ಟು ಕೆಟ್ಟ ಬುದ್ಧಿ ಅಲ್ವಾ!!!")

ನನಗೆ ನಗು ತಡೆಯಲಾಗಲಿಲ್ಲ. ಒಬ್ಬನೇ ನಕ್ಕರೆ ಹುಚ್ಚ ಎಂದುಕೊಂಡು ಧರ್ಮದೇಟು  ಬೀಳುತ್ತದೆ ಎಂದು ಗಾಡಿ ಸ್ಟಾರ್ಟ್ ಮಾಡಿ ನನ್ನ ಕೆಲಸಕ್ಕೆ ಮುಂದಾದೆ. ಆದರೆ ಒಂದು. ನಾವು ಹಳ್ಳಿ ಗುಗ್ಗುಗಳೇ ಇರಬಹುದು. ಗೋಡಂಬಿ, ಹಣ್ಣಿನ ಒಳಗಿರುವುದಿಲ್ಲ ಮತ್ತು ಅದನ್ನು ಹಸಿಯಾಗಿ ತಿನ್ನುವುದಕ್ಕೆ ಬರುವುದಿಲ್ಲ. ತಿಂದರೆ ಏನಾಗುತ್ತದೆ ಎಂದು ಕಲಿತಿದ್ದೇವೆ. ಠಸ್ ಪುಸ್ ಇಂಗ್ಲೀಷ್ ಮಾತಾಡಬಲ್ಲವರೆಲ್ಲಾ ನಮಗಿಂತ ಬುದ್ಧಿವಂತರಲ್ಲ. ಒಂದು ಭಾಷೆ ಅವರಿಗೆ ನಮಗಿಂತ ಚೆನ್ನಾಗಿ ಬರುತ್ತದೆ ಅಷ್ಟೇ. ಆದರೆ ಮಾತೃಭಾಷೆ ಬಹುಷಃ ನಮಗೇ ಚೆನ್ನಾಗಿ ಬರುತ್ತದೆ. ವಿಶೇಷ ಏನೂ ಇಲ್ಲ. ಜಪಾನೀಗಳು, ಫ್ಫ್ರೆಂಚರು, ಪೋರ್ಚುಗೀಸರು ಕೂಡಾ ಇಂಗ್ಲೀಷ್ ಮಾತಾಡುವುದು ಕಡಿಮೆ.