Tuesday, October 17, 2017

ನವಗ್ರಾಮದ ಪಟೇಲನ ಸೈಕಲ್ ಸವಾರಿ

ಇಕ್ಕೇರಿಯ ಅರಸರ ಕಾಲದಲ್ಲಿ ಹೊಸತಾಗಿ ನನಿರ್ಮಿಸಿದ ಊರೇ ನವಗ್ರಾಮ. ಬ್ರಿಟಿಷರ ಕಾಲದಲ್ಲಿ ಕೂಡಾ ಈ ಊರಿಗೆ ಇದ್ದ ಮಹತ್ವ ಕಡಿಮೆಯೇನೂ ಆಗಲಿಲ್ಲ ಈ ಊರಿನ ಪಟೇಲಿಕೆ ವಂಶಪಾರಂಪರ್ಯವಾಗಿ ಬಂದಿತ್ತು ನಾಗಪ್ಪಯ್ಯನಿಗೆ. ಶ್ರೀಮಂತಿಕೆ,ಪಟೇಲಿಕೆ ಎರಡೂ ಪಟೇಲ ನಾಗಪ್ಪಯ್ಯನಿಗೆ ಅಧಿಕಾರದ ಜೊತೆ ಮಿತಿ ಮೀರಿದ ಅಹಂಕಾರವನ್ನು ಕೊಟ್ಟಿತ್ತು.

ಈ ನಾಗಪ್ಪಯ್ಯ ರಸಿಕನಾದರೂ ಕಚ್ಛೆ ಹರುಕನಾಗಿರಲಿಲ್ಲ. ದುಡ್ಡಿನ ಗರ ಬಡಿದಿದ್ದರಿಂದಲೋ ಏನೋ ಸ್ವಲ್ಪ ಸಂಯಮ ಇತ್ತು. ದುಡ್ಡಿನ ಆಸೆಯಲ್ಲಿ, ಪಟೇಲಿಕೆ ಪವರ್ ಉಪಯೋಗಿಸಿ ಅನೇಕರ ಮನೆಯ ಗದ್ದೆ ತೋಟ ಬಂಗಾರಗಳನ್ನು ತನ್ನ ವಶಕ್ಕೆ ಪಡೆದು ವಂಚಿಸಿದ್ದ. ಈ ಹಲ್ಕಾ ಕೆಲಸವನ್ನು ತನ್ನ ಮಹತ್ ಸಾಧನೆ ಎಂಬುವಂತೆ ಎಲ್ಲರೆದುರೂ “ಆನು ಸತ್ತ ಮೇಲೆ ಯನ್ನ ಮಗ ದಿನಾ ಒಂದು ಸಾವಿರ ಖರ್ಚು ಮಾಡ್ಲಕ್ಕು. ಅಷ್ಟು ಮಾಡಿದ್ದಿ” ಎಂದು ಕೊಚ್ಚಿಕೊಂಡು ಎದೆ ತಟ್ಟಿಕೊಳ್ಳುತ್ತಿದ್ದ. ಎದೆಗೆ ಇವನ ಬಡಿತ ತಡೆದುಕೊಳ್ಳುವುದಕ್ಕಾಗಲಿಲ್ಲವೋ ಅಥವಾ ಯಾರ ಶಾಪವೋ, ಮಗ ಹದಿಹರೆಯದಲ್ಲಿದ್ದಾಗಲೇ ನಾಗಪ್ಪಯ್ಯ ತನ್ನ ಆರಾಧ್ಯ ದೇವಿ ಲಕ್ಷ್ಮೀದೇವಿಯ ಗಂಡನನ್ನು ಸೇರಿಕೊಂಡ. ಅಂದರೆ ಸತ್ತ.

ನಾಗಪ್ಪಯ್ಯನ ಮಗ ಕಾಳಿಂಗನಿಗೆ ಸಿಗಬಾರದ ಪ್ರಾಯದಲ್ಲಿ ಸಂಸಾರ ಸಿಕ್ಕಿತು. ಅಪ್ಪನ ಮುದ್ದಿನಿಂದ ಬುದ್ಧಿ ಅರೆ ಬೆರೆ ಆಗಿತ್ತು. ಇವನಿಗೆ ಸುತ್ತಲೂ ಚಮಚಾಗಳು ಸೇರಿಕೊಂಡರು. ಸೇರಿಕೊಂಡ ಚಮಚಗಳು ಬಕೆಟ್ಗಳಾಗಲು ಇವನಿಗೆ ಹೇಳತೊಡಗಿದವು,  “ ಕಾಳಿಂಗಣ್ಣ, ಒಂದು ಹೆಗಡೆ ಪಟೇಲಪ್ಪ ಆಗಿ ನೀನು ಹಿಂಗಿದ್ರೆ ಬೆಲೆ ಇರ್ತಲ್ಲೆ. ಕೊತ್ವಾಲರ ಜತೆ ಇಲ್ಲ ಓಡಾಡ ನೀನು ಸ್ವಲ್ಪ ಮುಂದುವರೆಯಕ್ಕು. ಇಲ್ದಿದ್ರೆ ಅವ್ವು ನಮ್ಮನ್ನ ಮೂಲಿಗೆ ಹಾಕ್ಬಡ್ತ. ಸ್ವಲ್ಪ ಅವರ ಹಾಂಗೆ ಎಣ್ಣೆ ಗಿಣ್ಣೆ ಹಾಕಕ್ಕು ನೀನು. ಪಟೇಲ ಅಲ್ದಾ” ಪಟೇಲನಿಗೂ ಇದು ನಿಜ ಎನ್ನಿಸಿ  ಅಂತೆಯೇ ಮಾಡುತ್ತಿದ್ದ. ಒಂದು ದಿನ ಹೀಗೆಯೇ ಎಣ್ಣೆ ಗುಂಗಲ್ಲಿ ಸೈಕಲ್ ಹತ್ತಿ ಸಾಗರದ ಸಂತೆಗೆ ಹೋದ. ಅಲ್ಲಿ ಇದ್ದವರೆಲ್ಲಾ “ನಮಸ್ಕಾರ ನವಗ್ರಾಮದ ಪಟೇಲರಿಗೆ” ಎಂದಿದ್ದು ಕೇಳಿ ಕೇಳಿ ಪಟೇಲ ಉಬ್ಬಿದ. ತಾನು ಉಬ್ಬಿದ್ದು ಎಲ್ಲರಿಗೂ ಗೊತ್ತಾಗಬೇಕು ಎಂದುಕೊಂಡು ಮುಖದ ಮೇಲೆ ಮಹಾ ಗತ್ತು ತಂದುಕೊಂಡು ರಸ್ತೆ ಬಿಟ್ಟು ಉಳಿದೆಲ್ಲಾ ಕಡೆ ನೋಡುತ್ತಿದ್ದ. ಜೊತೆಗೆ ಒಳಗಿದ್ದ ಪರಮಾತ್ಮ  ಬೇರೆ. ಹೀಗೆ ಹೋದರೆ ಬೀಳದೆ ಇರುತ್ತಾರೆಯೇ? ಪಟೇಲನೂ ಬಿದ್ದ.

ಬಕೆಟ್ ಲೆವೆಲ್ಲಿನ ಪ್ರಮೋಷನ್ನಿಗೆ ಕಾಯುತ್ತಿದ್ದ ಚಮಚಾಗಳು ಮತ್ತು ಈಗಾಗಲೇ ಬಕೆಟ್  ಆಗಿದ್ದವರು ಎಲ್ಲಾ ಓಡಿದರು. ಕೆಲವರು ಸೇರಿ ಸೈಕಲ್ ಎತ್ತಿದರೆ ಕೆಲವರು ಪಟೇಲನನ್ನು ಎತ್ತಿದರು. ಇನ್ನು ಕೆಲವರು ಎದ್ದ ಮೇಲೆ ಪಟೇಲನನ್ನು ಎತ್ತಿದ ಮೇಲೆ ಅವನ ಸೈಕಲ್ ಅನ್ನು ಹಿಡಿದುಕೊಂಡರು. ಸಹಜವಾಗಿ ಎಲ್ಲರೂ ಒಂದೊಂದು ಮಾತು ಎಸೆದರು. ಪಾಪ ಅವರು ಬಕೆಟ್ ಚಮಚಗಳಾದರೂ ಬಿದ್ದವರ ಮೇಲೆ ಕಲ್ಲು ಎಸೆಯುವ ಬುದ್ಧಿ ಇರಲಿಲ್ಲ. ಪಟೇಲನಿಗೆ ಅಗೌರವ ಎಂದೇ ಅವನನ್ನು ಬೀಳುವುದು ತಡೆದಿರಲಿಲ್ಲ ಅಷ್ಟೇ.

ಅವರಲ್ಲಿ ಒಬ್ಬ ಮಾತಾಡುವ ಭರದಲ್ಲಿ, “ಅಯ್ಯೋ ಕಾಳಿಂಗಣ್ಣ! ಬ್ರೇಕ್ ಹಿಡಿಯದಲ್ದನಾ!!” ಎಂದ. ಪಟೇಲ ಅವನ ಕಡೆ ತಡೆಕಚಿತ್ತನಾಗಿ ನೋಡುತ್ತಿದ್ದ. ಮಾತಾಡಿದವ, ಪಟೇಲನಿಂದ ತನಗೊಂದು ಭರ್ಜರಿ ಬಹುಮಾನ ಖಂಡಿತ ಎಂದುಕೊಂಡ. ಪಟೇಲ, “ಏನೋ ಅಂದ್ಯಲ್ಲ. ಇನ್ನೊಂದ್ಸಲ ಹೇಳಬಹುದೋ?” ಎಂದ. ಅದೇನು ಮಹಿಮೆಯೊ, ಪಟೇಲ ಎಣ್ಣೆ ಹಾಕಿದಾಗ ಹವಿಗನ್ನಡ ಆಡುತ್ತಿರಲಿಲ್ಲ. ಹೇಳಿದವ ಮತ್ತೆ, “ಬ್ರೇಕ್…” ಅಂದ. ಅಷ್ಟರಲ್ಲಿ ಪಟೇಲ, ಅವನ ಮುಖಕ್ಕೆ ಗುದ್ದಿ, “ಅಲ್ಲಯ್ಯಾ!!! ಎರಡೂ ಕೈನಲ್ಲಿ ಹ್ಯಾಂಡಲ್ ಹಿಡಿಕೊಂಡಿರೋವಾಗ ಬ್ರೇಕ್ ಹೆಂಗಯ್ಯಾ ಹಾಕೋದು?” ಎಂದ. ಇದಕ್ಕೆ ಕೆಲವು ಬಕೆಟ್ಟುಗಳು “ಹೌದು ಹೌದು” ಎಂದವು ಬಹುಮಾನ ಬಯಸಿದವ ಇನ್ನೂ ನಾಲ್ಕು ಬಿದ್ದರೆ ಕಷ್ಟ ಎಂದುಕೊಂಡು, “ಅದು ಬಿಡಿ.ತಪ್ಪಾತು. ಮನಿಗೆ ಹೋಪನ ಬಾ ಕಾಳಿಂಗಣ್ಣ” ಎಂದು ಮಸ್ಕಾ ಹೊಡೆಯುತ್ತಾ ಪಟೇಲನ ಸೈಕಲ್ ತಳ್ಳತೊಡಗಿದ. ಪಟೇಲ ಅವನ ಮುಂದೆ ರಾಜ ಗಾಂಭೀರ್ಯದಲ್ಲಿ ತೂರಾಡುತ್ತಾ ಹೊರಟ. ಇನ್ನುಳಿದ ಬಕೆಟ್ಟುಗಳು ಹಿಂಬಾಲಿಸಿದವು.

No comments:

Post a Comment