Tuesday, October 31, 2017

ವಿಶ್ವನಾಥನ ಲೇಖನದ ಸಲಹೆ

ವಿಶ್ವನಾಥ, ಮಲೆನಾಡಿನ ಮೂಲೆಯಲ್ಲೇ ಹುಟ್ಟಿ ಅಲ್ಲೇ ಬೆಳೆದವ. ಆತ ಅಷ್ಟೊಂದು ಓದಿಕೊಂಡವನಲ್ಲ. ಎಪ್ಪತ್ತರ ದಶಕದಲ್ಲಿ ಹತ್ತನೇ ಇಯತ್ತೆ ಪಾಸಾದವ. ಅಪ್ಪ ಅಮ್ಮನಿಗೆ ಮಕ್ಕಳು ಒಳ್ಳೆಯವರಾದರೆ ಸಾಕು ಎನ್ನುವ ಆಸೆ ಇದ್ದಿದ್ದರಿಂದ ಅವರೇನೂ ಇವನನ್ನು ಓದು ಎಂದು ಒತ್ತಾಯಿಸಲಿಲ್ಲ. ಇವನಿಗೂ ಓದಿ ಆಪೀಸರನಾಗಬೇಕೆಂಬ ಹಟ ಚಟ ಇರಲಿಲ್ಲ. ಪರಿಣಾಮ, ಮನೆಯಲ್ಲೇ ಕುಳಿತ. ತೋಟ ಗದ್ದೆ ಗುಡ್ಡ ಬೆಟ್ಟ ಸಾಗರದ ಪೇಟೆ,  ವ್ಯವಹಾರ ಆತನ ಜೀವನದ ಅವಿಭಾಜ್ಯ ಅಂಗಗಳೇ ಆದವು.

ತಾನು ಓದದೆ ತಪ್ಪು ಮಾಡಿದೆ ಎನ್ನಿಸತೊಡಗಿತ್ತು ವಿಶ್ವನಾಥನಿಗೆ.  ತನ್ನ ಬಳಿಯೇ ಬಂದು, "ವಿಶ್ವಣ್ಣ, ಜಾತ್ರೆಗೇ ಕರ್ಕಂಡು ಹೋಗ ನಮ್ಮನ್ನ, ವಿಶ್ವಣ್ಣ ಆಟಕ್ಕೆ ಆನೂ ಬತ್ನ"  ಎಂಬಿತ್ಯಾದಿ ಮಾತುಗಳಿಂದ ತಾನೊಬ್ಬ ಮುಖ್ಯ ವ್ಯಕ್ತಿ ಎನ್ನುವ ಭಾವನೆಯನ್ನು ತನ್ನಲ್ಲಿ ಹುಟ್ಟಿಸಿ ಬೆಳೆಸಿದ ಊರಿನ ಕೆಲವು ಮಾಣಿಗಳು ಓದುವುದಕ್ಕೆಂದು ಉಡುಪಿಗೆ ಹೋದಾಗ. ಅದು ಹೆಚ್ಚಾಗಿದ್ದು ಅವರಿಗೆಲ್ಲಾ ಕೆಲಸ ಸಿಕ್ಕಿದಾಗ. ಅದು ಮಿತಿ ಮೀರಿ ಬೆಳೆದು ವಿಶ್ವನಾಥನಿಗೆ ಒಂದು ರೀತಿಯ ಅಭದ್ರತೆ ಕಾಡಿಸತೊಡಗಿದ್ದು ಆ ಹುಡುಗರು ಕಾರಿನಲ್ಲಿ ಊರಿಗೆ ಬಂದಿಳಿದಾಗ.
"ಅಯ್ಯೋ!! ಒಂದು ಕಾಲದಲ್ಲಿ ತನ್ನ ಎದುರಿಗೆ ಇದ್ದ ಹುಡ್ರು, ತನ್ನೆದ್ರಿಗೆ ಓದಕ್ಕೆ ಹೋದ. ಆವಾಗಲೇ ಊರಾಗೆ ಯನ್ನ ಮಾತಾಡ್ಸಕ್ಕೆ ಅಂತ ಇದ್ದ ಈ ಹುಡ್ರು ಹೋದ. ಅಲ್ಲೇ ತನ್ನ ಗೌರವ ಕಡಿಮೆ ಆತು ಊರಾಗೆ. ಸಾಲದೆ ಇದ್ದಿದ್ದಕ್ಕೆ, ಇವ್ವು ಊರಿಗೆ ಬಂದ್ರೆ ಎಲ್ಲರೂ ಇವರ ಹತ್ರ ಆ ಊರಿನ ಕತೆ ಕೇಳವ್ವೆ ಆದ. ಸಾಲದೆ ಹೋಗಿದ್ದಕ್ಕೆ, ಕೆಲಸಕ್ಕೆ ಬೇರೆ ಸೇರ್ಕಂಡ. ಇನ್ನೂ ತಾನು ಹೀಂಗೆ ಇದ್ರೆ ಕಥೆ ಅಷ್ಟೇ. ಈ ಹುಡ್ರು ಎಷ್ಟಾಂದ್ರೂ ಯನ್ನ ಜೊತಿಗೆ ಇದ್ಡವ್ವು. ಇವ್ವು ಹೇಂಗೂ ತನಗೆ ಸಹಾಯ ಮಾಡ್ತ. ಈಗ ಆನು ಓದದೆ ಇದ್ರೂ ತಿಳಿವಳಿಕೆ ಇಪ್ಪ ಮನುಷ್ಯ ಅಂತ ತೋರಿಸಕ್ಕು." ಎನ್ನುವ ಮಹತ್ ಯೋಚನೆ ಮಾಡಿದ. ಅದನ್ನು ಕಾರ್ಯಗತ ಮಾಡುವಲ್ಲಿ ಪ್ರತಿ ದಿನ ಲೈಬ್ರರಿ ಕಡೆ ಓಡಾಟ, ಅಲ್ಲಿ ಓದುವವರ, ಓದಿದವರ ಒಡನಾಟ ಎಲ್ಲಾ ಆಯಿತು. ಸ್ವಲ್ಪ ತಿಳುವಳಿಕೆಯೂ ಬಂತು. ಆದರೆ, ವಯಸ್ಸು ಹೆಚ್ಚಿತೆ ಹೊರತು ಅನುಭವ ಸಂಭವಿಸಲಿಲ್ಲ.

ಇವ ಓದಿದ್ದು ಜನರಿಗೆ ಗೊತಾಗುತ್ತಿಲ್ಲವೋ ಎನ್ನುವ ಅನುಮಾನವೂ ಶುರುವಾಯಿತು. ಅದಕ್ಕೆ ಯಾರೇನು ಮಾತಾಡಿದರೂ "ತಂದೊಂದಿದ್ದು" ಎಂದು ಮಾತಾಡುತ್ತಿದ್ದ. ಅದೂ ಸಾಕಾಗಾದಾದಾಗ ಓಶೋ ಹೇಳಿದ ಮಂತ್ರ ಸಿಕ್ಕಿತು-" ಅಲ್ಲ ಅಲ್ಲ ಎನ್ನು ನೀನೇ ಗೆಲ್ಲುವೆ", ಪರಿಣಾಮ ಎಲ್ಲದನ್ನೂ ಅಲ್ಲಗಳೆಯತೊಡಗಿದ್ದ. ಕಾಲದ ಜೊತೆಗೆ ಹೆಸರು ಮಾಡಲು ಬೇಕಾದ ಪ್ರಯತ್ನ ಹೆಚ್ಚಿದ ಫಲ, ಹದ ಹೇಳುವುದು ಶುರುವಾಯಿತು. ಎಷ್ಟು- ಇಂಜಿನಿಯರ್ ಗೆ ಬಿಲ್ಡಿಂಗ್ ಕಟ್ಟುವುದನ್ನು ಹೇಳಿಕೊಡುವುದು, ಲಾಯರ್ ಗೆ ಯಾವ ಸೆಕ್ಷನ್ ಜಡಿಯಬೇಕು ಎನ್ನುವುದು ತಿಳಿಸುವುದು ಎಲ್ಲಾ ಶುರುವಾಯಿತು.

ಆದರೆ, ಇದರಲ್ಲಿ ನಿಜವಾಗಿ ಒದ್ದಾಡುತ್ತಿದ್ದವ ನಾರಾಯಣ. ಸಾಗರದಲ್ಲಿದ್ದುಕೊಂಡು ಲೆಕ್ಕರಿಕೆ ಮಾಡಿಕೊಂಡು ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಇವ ಸಿಕ್ಕಿಬಿದ್ದ. ಅವನಲ್ಲಿ ದಿನಾಲೂ ಒಂದೊಂದು ವಿಷಯದ ಮೇಲೆ ಅಪದ್ಧದ ಸಲಹೆ ಕೊಟ್ಟು ಅದನ್ನು ಲೇಖನದಲ್ಲಿ ಬರೆಯುವಂತೆ ಸೂಚಿಸುತ್ತಿದ್ದ. ಸಲಹೆಗಳು ಬಹಳ ಮಜಾ ಇರುತ್ತಿತ್ತು. "ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದು ಭಾರತದ ದೊಡ್ಡ ತಿರುವು. ಉಳಿದ ರಾಜಕಾರಣಿಗಳು ಇವರನ್ನು ನೋಡಿ ಕಲಿಯಲಿ ಅಂತ ಬರಿ ಅಪಿ" ಒಂದಾದರೆ, ಬರಗಾಲದ ಬಗ್ಗೆ ಇನ್ನೊಂದು. "ಚರಂಡಿಗಳಲ್ಲಿ ಸಣ್ಣ ಸಣ್ಣ ಒಡ್ಡು ಹಾಕಿದರೆ ನೀರು ಅಲ್ಲಳ್ಲೀ ಇಂಗುತ್ತದೆ ಅಂತ ಬಾರಿ ಒಂದು ಇರ್ಲಿ." ಇಡೀ ಇನ್ನೊಂದು. ಇದೆಲ್ಲಾ ಯಾಕೆ ಎಂದರೆ ಊರಲ್ಲಿ ಯಾರಾದರೂ "ನಾಣಿದು ಒಂದು ಆರ್ಟಿಕಲ್ ಬೈಂದು ಸುಧಾದಲ್ಲಿ, ಚನಾಗಿದ್ದು. ಹೀಂಗೆ ಬರೆಯಕ್ಕು" ಅಂದರೆ, "ಆನೆ ಹೇಳಿದ್ದು ಅವಂಗೆ" ಎನ್ನಲು ಅಷ್ಟೇ. ಲೇಖನ ಚೆನ್ನಾಗಿ ಬರಲಿ ಅಂತಲ್ಲ.

ಮೊದಲೆಲ್ಲಾ ಒಪ್ಪದೆ ಇರುತ್ತಿದ್ದ ನಾಣಿ, ಕೊನೆಗೆ ಕಾಟ ತಡೆಯಲಾಗದೆ, ತಲೆ ಆಡಿಸಲು ಶುರು ಮಾಡುತ್ತಿದ್ದ. ಇದು ಓದಿ ಹೋಗುವವನನ್ನು ದೂಡಿ ಬಿಟ್ಟಂತೆ ಆಯಿತೆ ಹೊರತು ಇನ್ನೇನೂ ಇಲ್ಲ." ನಿನ್ನೆ ಹೇಳಿದ್ದನ್ನು ಬರದ್ಯ" ಎಂದು ದಿನಾ ಪ್ರಶ್ನಿಸುವುದು ವಿಶ್ವನಿಗೆ ಅಭ್ಯಾಸವಾದರೆ, ನಾಣಿಗೆ ಕಿರಿ ಕಿರಿ ಆಗ ತೊಡಗಿತ್ತು. ಇಷ್ಟಾಗಿತ್ತು, ಅಷ್ಟರಲ್ಲಿ ಫೇಸ್‌ಬುಕ್- ಟ್ವಿಟ್ಟರ್-ಬ್ಲಾಗುಗಳು ಶುರುವಾದವು.

"ಪೇಪರಾಗೆ ಅಲ್ದಿದ್ರೆ ಅಲ್ಲಾರೂ ಆನು ಹೇಳಿದ್ದು ಬರಿ" ಎಂದು ವರಸೆ ಬದಲಾಯಿತು. ಆ ವಾಕ್ಯದಲ್ಲಿದ್ದ ತೊಂದರೆ ಹೇಳಿದರೆ ಮತ್ತೆರಡು ತಾಸು ಬೈರಿಗೆ ಎಂದು ನಾಣುವಿಗೆ ತಿಳಿದಿತ್ತು. ಅದಕ್ಕೆ ಒಂದು ಹೊಸ ಉಪಾಯ ಮಾಡಿದ. "ವಿಶ್ವಣ್ಣ, ಅದನ್ನ ಯಾರೋ ಬರದ್ದ" ಎಂದುಬಿಟ್ಟ ಒಂದು ದಿನ.

ವಿಶ್ವನಿಗೆ ಮೈ ಎಲ್ಲಾ ಉರಿದು ಅಲೀ ಪ್ರಲಾಪ ಶುರು ಮಾಡಿಕೊಂಡ. "ಆನು ಬರೆಯಕ್ಕು ಮಾಡ್ಕಂಡಿದ್ದಿ. ಮತ್ತೊಬ್ಬವ ಬರದ್ದ. ಸಾಯಲಿ. ಆಪೀ, ಬರೆದವ ಯಾರು ನೋಡಿ ಅವಂಗೆ ಚಡ್ಡಿ ಹರಿ. ಏನು ಇನ್ನೊಬ್ಬರ ಆಲೋಚನೆ ತಂದು ಹೇಳಿ ಬರೆಯದು. ಕೇಸ್ ಹಾಕ್ತಿದ್ದಿ. ಪಾಪ ಹೇಳಿ ಬಿಡ್ತಿ."

ನಾಣಿ, "ಎಂತಾತ ಈಗ!! ನಿನಗೆ ಅದು ಬರೆಯಕ್ಕು ಅಂತಿತ್ತು. ನಾ ಅಲ್ದಿದ್ರೆ ಮತ್ತೊಬ್ಬವ ಮಾಡಿದ. ಅಷ್ಟೆಯಲ. ನಾ ಬೇರೆ ವಿಷಯದ ಮೇಲೆ ಬರಿತಿ ಬಿಡು." ಎಂದ.

ಸಿಟ್ಟು ನೆತ್ತಿಯನ್ನೂ ದಾಟಿ ಎರಡು ಅಡಿ ಮೇಲೆ ನಿಂತಿತು ವಿಶ್ವನಿಗೆ, "ಯನ್ನ ಯೋಚನೆ ನೀ ಬರದ್ರೆ, ನೀನೂ ಒಪ್ತೆ, ಆನು ಹೇಳಿದ್ದು ಅಂತ. ಊರವ್ವೂ ಒಪ್ತ. ಈಗ ಯಾರು ಒಪ್ತ? ಮತ್ತೊಂದು ಆಳೋಕನೆ ತಗಲದು ಎಷ್ಟು ಕಷ್ಟ ಗೊತ್ತಿದ್ದ ನಿನಗೆ? ನಿಂಗ ಏನು ಮಹಾ!! ಕಾಲೇಜ್ ಲೈಬ್ರರಿಲಿ ಯಾರೋ ಬರೆದಿದ್ದು ಓದಿ ಬರ್ಕಂಡು ಹೆಸರು ಮಾಡ್ತಿ.ಇದೆಲ್ಲ ನಿಂಗಳ ಪಿತೂರಿ. ಹೊಟ್ಟೆಕಿಚ್ಚು ನಿಂಗಕ್ಕೆ. ಮತ್ತೊಬ್ಬರು ಹೆಸರು ಮಾಡಿರೆ ಅಂತ ಹೆದರಿಕೆ. ಪಾಸಿಟಿವ್ ಥಿಂಕಿಂಗೇ ಇಲ್ಲೆ.ಡಿಗ್ರಿ ಆಯ್ದು ಅಂತ ಸೊಕ್ಕು ನಿಂಗಕ್ಕೆ.ಯೋಚನೆ ಮಹತ್ವ ನಿಂಗಕ್ಕೆಲ್ಲಿಂದ ಗೊತ್ತಾಗಕ್ಕು? ಮಹಾ ಜ್ಞಾನಿಗಳಿಗೆ ಗೊತ್ತಿರ್ತು........." ಎಂಬಿತ್ಯಾದಿ ಹಲುಬುತ್ತಲೆ ಇದ್ದ.

ನಾಣುವಿಗೆ ಬರಹಗಾರಿಕೆಯ ಮೊದಲ ಪಾಠ ಎಷ್ಟೋ ದಿನ ಕಳೆದ ಮೇಲೆ ತಿಳಿದಿತ್ತು. ಬರೆಯಬೇಕು ಎಂದುಕೊಂಡಿದ್ದನ್ನು ಯಾರಿಗೂ ಮೊದಲೇ ಹೇಳಬಾರದು ಎಂದು

No comments:

Post a Comment