Tuesday, October 24, 2017

ರಾಮನಾಯಕನ ಚುರುಕು

ಕಿವುಡ ರಾಮ ನಾಯಕನ ಕಿವಿಯೊಳಗೆ ಗುಂಗೆ ಹುಳ ಹೊಕ್ಕಿದ್ದು, ಅದನ್ನಾತ ವಿಮಾನ ಎಂದು ಭ್ರಮಿಸಿದ್ದು ಎಲ್ಲಾ ಈಗ ಹಳೆಯ ಕಥೆ. ಐದು ವರ್ಷಗಳೇ ಕಳೆದು ಹೋದವು. ಆದರೆ ರಾಮನಾಯ್ಕನ ಪೇಚಾಟ ಮತ್ತು ಆತನ ಅರೆಬೆಂದ ಬೆರಕೆ ಜ್ಞಾನದ ಕಾಮೆಂಟ್ ಗಳು ನಿಲ್ಲುತ್ತಿಲ್ಲ, ಅವನ ಬಾಯಿಯಿಂದ ಬೇರೊಬ್ಬರ ಕಿವಿಗೆ ತಾಗಿ ಅಲ್ಲಿಂದ ಅದು ಎಲ್ಲಾ ಕಡೆ ಸುತ್ತಾಡಿ ಹೊಸ ಜೋಕ್ ಆಗುತ್ತದೆ ಅಷ್ಟೇ.

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಛತಿ ಎನ್ನುವಂತೆ, ರಾಮನಾಯ್ಕನ ಯಾವುದೇ ಮಾತು ಜನರ ಕಿವಿ ಸೇರಿ ಜೋಕ್ ಆಗಿ ಮತ್ತೆ ಹೊತ್ತು ಕಳೆಯಲು ಅವನನ್ನು ಕೆಲೆದು ಮಾತಾಡಿ, ಹೊಸಾ ಕಥೆ ಹುಟ್ಟಿಕೊಳ್ಳುತ್ತಿದೆ. ಇಷ್ಟರ ಮಧ್ಯೆ ಇವ ಕೆಪ್ಪ ಎನ್ನುವುದು ಗೊತ್ತಾದ ಮೇಲೆ  ಅವ ಮಾಡಿದ ಕೆಲಸಗಳನ್ನು, ಸಾಹಸಗಳನ್ನು ರಸವತ್ತಾಗಿ ವರ್ಣಿಸುವವರೂ ಹೆಚ್ಚಿದ್ದಾರೆ.

ಅದರಲ್ಲೂ ನಮ್ಮ ಗಾವಿಲ ಬಿ ಇ ಇಂಥಾ ಕಥೆಗಳನ್ನು ಹೇಳುವುದರಲ್ಲಿ ಸಮರ್ಥ. ಒಂದು ದಿನ ಊರ ಚರ್ಚಾ ಕಟ್ಟೆ ಹಾಲು ಡೈರಿಯಲ್ಲಿ ಅವನೇ ಹೇಳಿದ ತನ್ನ ಅನುಭವ ಹೀಗಿದೆ.

ರಾಮನಾಯ್ಕನಿಗೆ ಆಗ ನಡು ಪ್ರಾಯ. ಅವನ ಮಗನಿಗೆ ಹದಿವಯಸ್ಸು. ಇಬ್ಬರಿಗೂ ಕೊಬ್ಬಿಗೇನೂ ಕಮ್ಮಿ ಇರಲಿಲ್ಲ. ರಾಮನಾಯ್ಕನ ಮಗ ಈರ ಒಂದು ದಿನ ವಿಘ್ನೇಶ್ವರ ಭಟ್ಟರ ಜುಟ್ಟು ನೋಡಿ ಏನೋ ಆಡಬಾರದ ಮಾತಾಡಿ ಬಿಟ್ಟ. ಸಮಾಧಾನಿ ವಿಘ್ನೇಶ್ವರ ಭಟ್ಟರು ಏನೂ ಮಾತಾಡದೆ ಸುಮ್ಮನಿದ್ದು ಬಿಟ್ಟರು. ಭಟ್ಟರ ಮೌನ, ಆ ಹದಿವಯಸ್ಸಿನಲ್ಲಿ, ಅದೂ ಗೆಳೆಯರ ಮುಂದೆ ಈರನನ್ನು ವೀರಾಗ್ರೇಸರನನ್ನಾಗಿ ಮಾಡಿಬಿಟ್ಟಿತು. ದಿನಾ ಭಟ್ಟರನ್ನು ಟೀಕಿಸಲು ಒಳ್ಳೆ ಪ್ರಚೋದನೆಯೇ ಸಿಕ್ಕಿತು ಈರನಿಗೆ. ಭಟ್ಟರು ಎಂದಿನಂತೆ ಮೌನ ವಹಿಸಿಯೇ ಇದ್ದರು.

ಇದರಿಂದ ಪ್ರಚೋದಿತನಾದ ಈರ, ಊರೆಲ್ಲಾ ತನ್ನನ್ನು ತಾನೇ ಹೊಗಳಿಕೊಳ್ಳುತ್ತಿದ್ದ." ಹೆಂಗೆ ಇಗ್ಗಾಭಟ್ಟುಗೆ, ದಿನಾ ಮನಿಂದ ಹೊಂಟ ಕೂಡ್ಲೆ ಕೋಳಿ ಜುಟ್ಟ ಅಂದ್ರು ಮುಚ್ಕಂಡ್ ಹೋಕಾನೆ!! ತಂಬ್ಳಿ ಕುಡಿಯ ಭಟ್ಟುಗೆ ಎಲ್ಲಿಂದ ಬರ್ಬೋಕು ಧೈರ್ಯ? ಮುಚ್ಕ ಹೋಬೋಕು. ಮಾತಾಡ್ರೆ ಬೀಳ್ತಾವೆ ಹೊನ್ನಳಿ ಹೊಡ್ತ".

ಇದು ಹೇಗೋ ಒಂದು ದಿನ ಗೋಪಾಲನಿಗೆ ತಿಳಿದು ಹೋಯ್ತು. ಭೂಮಿ ಹುಣ್ಣಿಮೆ ಹಿಂದಿನ ದಿನ ಈರ ಒಬ್ಬನೇ ಸಿಕ್ಕ. ಗೋಪಾಲ ತಡ ಬಡ ಮಾಡದೆ, "ಏನಾ!!! ನಮ್ಮಪ್ಪಂಗೆ ಹಿಂದಿಂದ ಮಾತಾಡದಲ್ದೆ, ಊರ ತುಂಬಾ ಹೇಳ್ತೀಯಂತೆ?" ಎಂದ. ಉತ್ತರವಾಗಿ ಈರ "ಬಾಯೈತೆ ಹೇಳ್ತ್ನಿ." ಎಂದ. ಸಿಟ್ಟಿಗೆದ್ದ ಗೋಪಾಲ ನಾಲ್ಕು ಬಡಿದ.

ವಿಷಯ ಹೇಗೋ ಆಗಿ ಪೇಟೆಗೆ ಹೋಗಿದ್ದ  ರಾಮನಾಯ್ಕನಿಗೆ ತಿಳಿದು ಹೋಯ್ತು. ಒಳಗಿದ್ದ ಪರಮಾತ್ಮ ಸುಮ್ಮನಿರಲು ಬಿಟ್ಟಾನೇ? ಬೇಗ ಊರಿಗೆ ಹೋಗಬೇಕು. ಬಸ್ಸು ತಡವಾಗುತ್ತದೆ ಎಂದು ಒಂದು ಬಾಡಿಗೆ ಸೈಕಲ್ ತೆಗೆದುಕೊಂಡು ಹೊರಟೇ ಬಿಟ್ಟ.

ಊರಿಗೆ ಬರುವ ಹೊತ್ತಿಗೆ ಪರಮಾತ್ಮನೂ ತಣ್ಣಗಾಗಿದ್ದ, ರಾಮನಾಯ್ಕ ದಣಿದಿದ್ದ. ಏನೂ ಮಾತಾಡದೆ ಭಟ್ಟರ ಮನೆಯ ಜಗುಲಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತ. ಗೋಪಾಲ ಬಂದ ಕೂಡಲೇ ಒಂದು ಕಾವಳ ಕೇಳಿ ಬಾಯಿಯಲ್ಲಿ ಹಾಕಿಕೊಂಡು ಅದು ಇದು ಮಾತಾಡ ತೊಡಗಿದ. ಅಷ್ಟರಲ್ಲಿ ಗೋಪಾಲನ ಕಣ್ಣು ಹೊರಗಿದ್ದ ಸೈಕಲ್ ಮೇಲೆ ಬಿತ್ತು.

"ಯಾರದ್ದಾ ಸೈಕಲ್ ರಾಮ?" ಎಂದ.

"ನಂದೆಯ ಭಟ್ರೆ ಬಾಡಿಗೆಗೆ ತಂದೆ" ಅಂದ ರಾಮ

"ಎಂತಕ್ಕೆ? ನಿನಗೆ ಸೈಕಲ್ ಹೊಡಿಯಕ್ಕೆ ಬರದಿಲ್ಲಲಾ!!"

"ಹುಡುಗಗೆ ಹೊಡಿದಿದ್ದು ಕೇಳಿ ಸರಸರನೆ ಬರ್ಬೋಕು ಅಂತ .ವತ್ಗ್ಯ ತಂದೆ"

ರಾಮನಾಯ್ಕನ ಮಾತು ಕೇಳಿ ಗೋಪಾಲ ಸುಧಾರಿಸಿಕೊಳ್ಳಲು ಸಿದ್ಧನಾದ.

ಕೆಪ್ಪ ರಾಮನಾಯಕನ ಕೊಂಡಿ,

https://www.blogger.com/blogger.g?blogID=6962253143673731460#editor/target=post;postID=5624648356771657467

No comments:

Post a Comment