Wednesday, October 11, 2017

ಮುಖೋರ್ಜೀ ಮೀಟ್ಸ್ ದೀಪೇಶ

ಮುಷ0ಡಿಗಳು ತನ್ನ ಎಡಪಂಥೀಯ ಸಮಾತಾವಾದವನ್ನು ಅನೇಕಾಂತವಾದದ ವಿಚಾರಧಾರೆಗೆ ಬಳಸದೆ ಏಕಾಂತದಲ್ಲಿ ಮಾತ್ರ ಇರಬೇಕಾದ ಜಾಗಕ್ಕೆ ಇಟ್ಟಿದ್ದನ್ನು ಕೇಳಿ ಖಿನ್ನನಾಗಿದ್ದ ಮುಖೋರ್ಜೀ, ತನ್ನ ಸೋಲೊಪ್ಪಿಕೊಳ್ಳಲಿಲ್ಲ. ಹೊಸ ಶಿಷ್ಯನನ್ನು ಹುಡುಕುತ್ತಲೇ ಇದ್ದ. ಆಗ ಅವನ ಕಿವಿಗೆ ಬಿದ್ದ ಸುದ್ದಿ, ದೀಪೇಶ ಎಂಬ ಯುವ ಕ್ರಾಂತಿಕಾರಿ ಮತ್ತು ಅವನ ತಂಗಿ.

ಇತ್ತ ದೀಪೇಶ ಕೂಡಾ ತನ್ನ ಮತ್ತು ತನ್ನ ತಂಗಿಯ ಸೋಲಿನ ಕಾರಣಗಳನ್ನು ವಿಮರ್ಶಿಸಿದ್ದ. ಬುದ್ಧಿಜೀವಿ ಎಡಪಂಥೀಯ ವಿಚಾರವಾದಿಯಾಗಲು ಹೊರಟವ ವಿಮರ್ಶಕನಾಗದಿದ್ದರೆ ಹೇಗೆ?
ಅವನ ತರ್ಕ ಹೀಗಿತ್ತು. ಇಷ್ಟು ದಿವಸ ಮೇಲ್ವರ್ಗದವರನ್ನು ವಿರೋಧಿಸಿದ ತನಗೆ ಮೇಲುವರ್ಗದ ಯಾರ ಬೆಂಬಲವೂ ಸಿಗಲಿಲ್ಲ. ಮತ್ತು ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಯಾದ ಯಾವ ಅನುಭವಿಯ ಮಾರ್ಗದರ್ಶನವೂ ದೊರೆಯಲಿಲ್ಲ. ಈಗ ಅದನ್ನು ಪಡೆದರೆ ತಾನೊಬ್ಬ ಮಹಾನ್ ಕ್ರಾಂತಿಕಾರಿ ಆಗುವುದಕ್ಕೆ ಸಂದೇಹವೇ ಇಲ್ಲ.

ಇಷ್ಟರಲ್ಲಿ ಒಂದು ದಿನ ಮುಖೋರ್ಜಿ ಮಂಜಪ್ಪನಿಗೆ ದೀಪೇಶ ಸಿಕ್ಕ. ಅಲ್ಲ ಸಿಕ್ಕಿ ಬಿದ್ದ. ಇಬ್ಬರೂ ದಿನಾ ಉ.ಮ.ಹೇ ಮಾಡದಿದ್ದರೂ ಕ್ರಾಂತಿಕಾರಿ ಚರ್ಚೆಯಲ್ಲಿ ದೀರ್ಘಕಾಲ ತೊಡಗುತ್ತಿದ್ದರು. ಇವರ ಚರ್ಚೆಯನ್ನು ಇಲ್ಲೇ ಎಲ್ಲೋ ಭೂತ ಪ್ರೇತಗಳಾಗಿ ತಿರುಗುತ್ತಿರುವ ಲೆನಿನ್, ಸ್ಟಾಲಿನ್, ಕ್ಯಾಸ್ಟ್ರೊ ಗಳ ಆತ್ಮ ಕೇಳಿರಬೇಕು. ದೇವರನ್ನು ನಂಬದ ಸ್ವರ್ಗ ನರಕಗಳನ್ನು ಅಲ್ಲಗಳೆಯುವ ಇವರ ಆತ್ಮ ಅಲ್ಲಿ ಹೋಗುವುದಿಲ್ಲವಲ್ಲ ಮತ್ತೆ.

ಹೀಗೆ ಇವರ ಚರ್ಚಾಗೋಷ್ಠಿ ಸಾಗುತ್ತಿರುವಾಗ,ಪಿಣರಾಯಿ ವಿಜಯನ್ ಕೇರಳ ದೇವಸ್ಥಾನಗಳಲ್ಲಿ ದಲಿತರೆ ಪೂಜೆ ಮಾಡಬೇಕು ಎನ್ನುವ ಆಜ್ಞೆ ತಂದದ್ದರ ಬಗೆಗೆ ಹೊರಳಿತು.

ಮುಖೋರ್ಜೀ ಹೇಳಿದ." ಅಸಮಾನತೆ ಕೇವಲ ಜಾತಿಗಳ ನಡುವೆ ಇಲ್ಲ. ಸಮಾಜ ಮಟ್ಟದಲ್ಲಿ ಇದು ಸರಿಯಾಗುವ ಮೊದಲು ಮನೆಯಲ್ಲಿನ ಅಸಮಾನತೆಗಳು ದೂರಾಗಬೇಕು."
ದೀಪೇಶ ಕೇಳಿದ,"ಹೇಗೆ?"
ಮುಖೋರ್ಜೀ,"ನೋಡು ದೀಪೇಶ, ಎಲ್ಲಿತನಕ ನೇಣು ನಿನ್ನ ಸ್ವಂತ ವಿಚಾರಗಳನ್ನು ಮಾರ್ಕ್ಸನ ಆಲೋಚನೆಗಳ ಬೆಳಕಿನಲ್ಲಿ, ಲೆನಿನ್ನನ ಮಾತುಗಳ ಮೂಸೆಯಲ್ಲಿ, ಸ್ಟಾಲಿನ್ನನ ಹೋರಾಟದ ನೆಲೆಯಲ್ಲಿ, ಕ್ಯಾಸ್ಟ್ರೋನ ಚಿಂತನೆಗಳಲ್ಲಿ, ಲಂಕೇಶರ ಲಹರಿಗಳಲ್ಲಿನ ಅನೇಕಾಂತವಾದದ ಬೆಂಕಿಯಲ್ಲಿ ಬೀರಿ ಕಾಯಿಸಬೇಕು. ಆಗ ಮಾತ್ರ ಮಾವೋನಾಂತೆ ಕ್ರಾಂತಿಯ ವಿಚಾರಗಳನ್ನು ವಿಶಿಷ್ಟ ರೀತಿಯಲ್ಪಿ ದಮನಿತರ ಧ್ವನಿಯಾಗಿ ವಿಕ್ಷಿಪ್ತ ಪುರೋಹಿತಶಾಹಿ ಜನರೆದುರು ತೆರೆದಿಡಲು ಸಾಧ್ಯ.ಕ್ರಾಂತಿಯ ಕಿಡಿ ಎಲ್ಲೇ ಹತ್ತಿದರೂ ಅದು ಜ್ವಾಲಾಮುಖಿಯಂತೆ ಸಿಡಿದು ಉಕ್ಕೇರಿ ಪಸರಿಸಲೇ ಬೇಕು. ಅದು ವಿಚಾರಧಾರೆಯ ವೈಶಿಷ್ಠ್ಯ…….. ಕ್ರಾಂತಿ ಮನೆಯಲ್ಲೇ ಶುರು ಮಾಡು. ನಾನಿದ್ದೇನೆ.”ಎಂದ

ಮುಖೋರ್ಜೀ ಯಾರಿಂದಲೋ ಎರವಲು ಪಡೆದು ಆಡಿದ  ಈ ಮಾತುಗಳನ್ನು ಕೇಳಿ ದೀಪೇಶನ ಒಳಗಿದ್ದ ಕ್ರಾಂತಿಕಾರಿ ಸಿಡಿದೆದ್ದ. ಆತ ಕೈಗೊಂಡ ತೀರ್ಮಾನ ಈಡೇರುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿ, ತಾನೊಬ್ಬಯಶಸ್ವಿ ಕ್ರಾಂತಿಕಾರಿಯಾದಂತೆ ಸಂಭ್ರಮಿಸುತ್ತಾ ಕನಸು ಹಗಲುಗನಸು ಕಾಣುತ್ತಾ ಮಲಗಿದ.

ಬೆಳಿಗ್ಗೆ, ಅವನ ಅಮ್ಮ ಹಾಲಿ, “ಅಯ್ಯಯ್ಯೋ!!!ಪರಮ ಭಟ್ರ ಹತ್ರ ಹೋಗಿ ಯಾರಾದ್ರೂ ನನ್ನ ಮಗುಂಗೆ ಮಾಡಿದ ಮಾಟ ತೆಗಸ್ರೋ. ಅವತ್ತು ಎಂತೋ ಗೊತ್ತಾಗದೆ ಜಕ್ಕಣಿ ಹಿಡಿಯಕ್ಕೆ ಹೇಳ್ದ. ಈಗ ಮುಕಳಜ್ಜಿ ಭಟ್ರು ಅದನ್ನೇ ಇವಂಗೆ ಹೊಕ್ಸಾರೆ.” ಎಂದು ಎದೆ ಹೊಡೆದುಕೊಂಡು ಅಳುತ್ತಿದ್ದಳು.

ಯಾರೋ ಒಬ್ಬರು ಬಂದು ಸಮಾಧಾನಿಸಿ ಕೇಳಿದಾಗ, “ಬೆಳಗ್ಗೆ ನೋಡ್ರೆ ತನ್ನ ಗಡ್ಡದ ಬ್ಲೇಡ್ನ ಹುಯ್ಡ್ಗಿ ಚೀಲದಾಗೆ ಇಟ್ಟು,  ಹುಯ್ಡ್ಗಿ ಹಾಕ್ಯಳ ಇಸ್ಪರ್ ತಗ್ದ್ ಸಿಕ್ಸ್ಕತ್ತಿದ್ದ. ಕೇಳ್ರೆ ಸಾಮಾನಾತೆ ಅಂದ” ಎನ್ನುತ್ತಾ ಮತ್ತೆ ಮತ್ತೆ ಬಿಕ್ಕಿದಳು

ಆಗಿದ್ದೇನು ಎಎಂದರೆ, ಮನೆಯೊಳಗಿನ ಅಸಮಾನತೆ ತೆಗೆಯಲು, ದೀಪೇಶ ತನ್ನ ಗಡ್ಡ ಮಾಡುವ ಬ್ಲೇಡ್ ಅನ್ನು ತಂಗಿಯ ಚೀಲದಲ್ಲಿಟ್ಟಿದ್ದ. ಅದನ್ನು ನೋಡಿದ ಅವನ ತಂಗಿ ತಾಯಿಗೆ ದೂರಿತ್ತಿದ್ದಳು. ತಾಯಿ ವಿಚಾರಿಸಲೆಂದು ಹೋದಾಗ ಅವ ವಿಸ್ಪರ್ ಪ್ಯಾಕೆಟ್ಟಿನಿಂದ ನ್ಯಾಪ್ಕಿನ್ ತೆಗೆದು ಒಳಸಿಕ್ಕಿಸುತ್ತಿದ್ದ. ಅವಳು ಸಿಟ್ಟಿನಿಂದ ಏನೆಂದು ಕೇಳಿದ್ದಕ್ಕೆ ಸಮಾನತೆ ಎಂದು ಉತ್ತರಿಸಿದ್ದ. ಅನಕ್ಷರಸ್ಥೆ ಹಾಲಿ ಅದೇನೆಂದು ತಿಳಿಯದೆ, ತನ್ನ ತಿಳುವಳಿಕೆಗೆ ಒಗ್ಗಿಸಿದ್ದಳು.

(ಬರಹ ಅಶ್ಲೀಲವಾಗಿದೆ. ಇದಕ್ಕಾಗಿ ಇಷ್ಟು ದಿನ ಪ್ರೋತ್ಸಾಹಿಸಿದ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಸಮಾನತೆಯ ಹೆಸರಲ್ಲಿ ಕಾ.ಕ ಗಳು ಮಾಡುತ್ತಿರುವ ದುರ್ಬುದ್ಧಿಯನ್ನು ಅವರದ್ದೇ ಭಾಷೆಯಲ್ಲಿ ಖಂಡಿಸಲು ಮುಂದಾದಾಗ ನಡೆದ ಪ್ರಮಾದ ಇದು. ದಯವಿಟ್ಟು ಕ್ಷಮಿಸಿ.)

No comments:

Post a Comment