Tuesday, October 10, 2017

ಗೋಡಂಬಿ ಹಣ್ಣು

ಇದು ಕರ್ನಾಟಕದ ರಾಜಧಾನಿ, ಐ ಟಿ ಬಿ ಟಿ ಜನರ ತಾಣ ಟೆಕ್ಕಿಗಳ ಪಾಲಿನ ಸ್ವರ್ಗ ಭಾರತದ ಸಿಲಿಕಾನ್ ವ್ಯಾಲಿ ಎಂಬಿತ್ಯಾದಿ ಹೆಸರುಗಳಿಂದ ಪರಿಶೋಭಿಸುತ್ತಿರುವ (ಈಗ ಒದ್ದೆ ತೊಪ್ಪೆಯಾಗಿ ಮಳೆ ಬರಬಾರದ ನಗರಿ ಎನ್ನಿಸಿಕೊಂಡಿರುವ) ಹೈ ಕೆಟ್ ಸಿಟಿ ಬೆಂದಕಾಳೂರಿನಲ್ಲಿ ನಡೆದ ಕಥೆ. ಆದರೆ ಇದು ಮಲೆನಾಡಿನ ಜೀವನಕ್ಕೆ ಸಂಬಂಧಿಸಿದ್ದೇ ವಿಚಾರ.

ನಗರದ ಉತ್ತರ ಭಾಗದಲ್ಲಿ ಸದಾ ಟ್ರಾಫಿಕ್ ಕಿರಿಕಿರಿಗೆ ಹೆಸರುವಾಸಿಯಾದ ಮೇಖ್ರಿ ಸರ್ಕಲ್ ಬಳಿ ನಡೆದ ಘಟನೆ ಇದು. ಒಂದು ದಿನ ಬೇಸಿಗೆಯಲ್ಲಿ ಬೆಳಿಗ್ಗೆ ಹನ್ನೊಂದು ಘಂಟೆಯ ಘನ ಘೋರ ಬಿಸಿಲಿನಲ್ಲಿ ಗಾಡಿ ನಿಲ್ಲಿಸಿ ಕೆಂಪು ದೀಪ ಹಸಿರಾಗುವುದಕ್ಕೆ ಕಾಯುತ್ತಿದ್ದೆ. (ಆ ಬಿಸಿಲಿಗೆ ಏನೆಲ್ಲವೂ ಕರಗಿ ದ್ರವವಾಗಿ ನಂತರ ಅನಿಲವಾಗುವಂತಿದ್ದರೂ ಅದು ‘ಘನ’ ಘೋರ ಬಿಸಿಲು. ಹೇಗೆ ಅಂತ ನಾ ಹೇಳಲಾರೆ). ಆ ಜಂಗುಳಿಯಲ್ಲಿ ಗೇರು ಹಣ್ಣು ಮಾರುತ್ತಾ ಬರುತ್ತಿರುವ ಒಬ್ಬನನ್ನು ನೋಡಿದೆ. ನನಗೊಂದು ದುರಭ್ಯಾಸ. ಬೆಂಗಳೂರಿನಲ್ಲಿ ನಿತ್ಯ ಕನ್ನಡದ ಕೊಲೆಯನ್ನು ಕೇಳಿ ನೋಡಿ, ಎಲ್ಲದಕ್ಕೂ ಈ 'ನಾಗರೀಕರು' ಏನು ಕರೆಯುತ್ತಾರೆ ಅಂತ ಕಿವಿ ಉದ್ದ ಮಾಡುವುದು. ಇಲ್ಲಿಯೂ ಅದೇ ಮಾಡಿದೆ ಆತ "ಗೋಡಂಬಿ ಹಣ್ಣು,ಗೋಡಂಬಿ ಹಣ್ಣು” ಎನ್ನುತ್ತಾ ಬರುತ್ತಿದ್ದ.

ಆ ಕೆಲವೇ ಕ್ಷಣಗಳಲ್ಲಿ ಮನಸ್ಸು ಎಂದೋ ಬಿಟ್ಟು ಬಂದಿದ್ದ ಮಲೆನಾಡಿನ ಹಳ್ಳಿಯನ್ನೂ, ಗೇರು ಮರಗಳನ್ನೂ, ಸುತ್ತಾಡಿ ಬಂದಿತ್ತು. ಹಸಿ ಗೇರು ಪೀಠದ ಸುದ್ದಿಗೆ ಹೋಗಿ ಕೈ ಬಾಯಿ ಸುಟ್ಟುಕೊಂಡಿದ್ದೆಲ್ಲಾ ನೆನಪಾಗಿತ್ತು. ಉಪ್ಪು ಹಚ್ಚದೆ ಗೇರುಹಣ್ಣು ತಿಂದು ಗಂಟಲು ಕಸರಿ ಕೆರೆತ ಬಂದಿದ್ದು, ಹಣ್ಣಿನ ರಸ ಬಿದ್ದು ಅಂಗಿ ಕಲೆಯಾಗಿದ್ದು ಎಲ್ಲಾ ನೆನಪಾಯಿತು.

ಆ ಹಣ್ಣುಗಳನ್ನು ಇಬ್ಬರು ಹುಡುಗಿಯರು ಹತ್ತಿ ಕುಳಿತಿದ್ದ ಸ್ಕೂಟಿಯೊಂದರಬಳಿ ಹೋಗಿ ಆ ಹುಡುಗಿಯರಿಗೆ ಗೋಡಂಬಿ ಹಣ್ಣು ಮಾರಿದ. ನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯ ಕಂಕುಳಲ್ಲಿ Biology II P.U.C ಪುಸ್ತಕ ಇದ್ದಿದ್ದು ನೋಡಿದೆ. ಅಷ್ಟರಲ್ಲಿ ಹಸಿರು ದೀಪ ಹತ್ತಿತು. ನನಗಿಂತ ಮುಂದಿದ್ದ ಆ ಹುಡುಗಿಯರು ಸ್ವಲ್ಪ ದೂರ ಸಾಗಿ ಗಾಡಿ ನಿಲ್ಲಿಸಿ, ಗೇರು ಹಣ್ಣು ತಿನ್ನಲು ಮುಂದಾದರು. ನಾನು ಕೂಡಾ ಅವರ ಸಮೀಪದಲ್ಲೇ ಗಾಡಿ ನಿಲ್ಲಿಸಿಕೊಂಡು ಯಾರಿಗೋ ಕಾಯುವಂತೆ ನಟಿಸುತ್ತಿದ್ದೆ. ನನ್ನ ಉದ್ದೇಶ ಈ ಹೊಸ ಶತಮಾನದ ಹುಡುಗಿಯರು ಬೆಂಗಳೂರಲ್ಲಿ ಅಪರೂಪವಾಗಿರುವ ಹಣ್ಣು ಹೇಗೆ ತಿನ್ನುತ್ತಾರೆ ಎಂದು ನೋಡುವುದೇ ಆಗಿತ್ತು. ಎಲ್ಲೋ ಒಂದು ಕಡೆ ಇವರೇನಾದರೂ ಗೂಗಲ್ ಓಪನ್ ಮಾಡಿ ನೋಡುತ್ತಾರ, ಹಣ್ಣು ತಿನ್ನುವುದು ಹೇಗೆ ಅಂತ ಎನ್ನುವ ಕುತೂಹಲವೂ ಇತ್ತು. ಎಷ್ತೆಮ್ದರೂ ಮುಂದುವರೆದ ಪೀಳಿಗೆಯವರಲ್ಲವೇ?

ಒಂದು ಹುಡುಗಿ ಹಣ್ಣು ತಿಂದು ಅದರ ಚರಟನ್ನು ಉಗುಲಬೇಕು ಎನ್ನುವುದು ಗೊತ್ತಿಲ್ಲದೆ ನೀರು ಕುಡಿದು ಅದನ್ನು ಒಳಗಿಳಿಸಿದಳು. ಗಂಟಲ ಕೆರೆತಕ್ಕೋ ಏನೋ, ಮತ್ತೊಂದಿಷ್ಟು ನೀರು ಕುಡಿದಳು. ಇನ್ನೊಬ್ಬಳೂ ಇವಳನ್ನು ಅನುಕರಿಸಿದ್ದಳು. ಇಬ್ಬರ ಮುಖವೂ ಕೆಂಪಾಗಿತ್ತು. ಬಿಸಿಲ ಧಗೆಯ ಜೊತೆ ಗೇರು ಹಣ್ಣಿನ ಚರಟು ನುಂಗಲು ಪಟ್ಟ ಕಷ್ಟದ ಪ್ರಭಾವ ಇದು ಎಂದುಕೊಂಡೆ. ಆದರೆ ಸತ್ಯ ಬಹಳ ಬೇಗ ಒಬ್ಬಳ ಬಾಯಿಂದ ಹೊರಬಂತು.

"ಸೀ ಯಾ!!! ದಟ್ ಬಗ್ಗರ್ ಹ್ಯಾಸ್ ಚೀಟೆಡ್ ಅಸ್. ಇಟ್ ಈಸ್ ಸೀಡ್ ಲೆಸ್ ಯಾ!!! ನೋ ಕ್ಯಾಶ್ಯೂ ನಟ್ ಇನ್ ಸೈಡ್!!!"
ಇನ್ನೊಬ್ಬಳೆಂದಳು, " ಯಾ!!! ಹೌ ಬ್ಯಾಡ್ ನಾ!!! ಯಾ....!!!"
("ನೋಡೇ!!! ಆ ಕಂತ್ರಿ ಮೋಸ ಮಾಡಿಬಿಟ್ಟ. ಇದು ಸೀಡ್ಲೆಸ್ ಕಣೇ!!! ಒಳಗೆ ಗೋಡಂಬಿನೇ ಇಲ್ಲ!!!!"

"ಹೌದಮ್ಮಾ!!, ಎಷ್ಟು ಕೆಟ್ಟ ಬುದ್ಧಿ ಅಲ್ವಾ!!!")

ನನಗೆ ನಗು ತಡೆಯಲಾಗಲಿಲ್ಲ. ಒಬ್ಬನೇ ನಕ್ಕರೆ ಹುಚ್ಚ ಎಂದುಕೊಂಡು ಧರ್ಮದೇಟು  ಬೀಳುತ್ತದೆ ಎಂದು ಗಾಡಿ ಸ್ಟಾರ್ಟ್ ಮಾಡಿ ನನ್ನ ಕೆಲಸಕ್ಕೆ ಮುಂದಾದೆ. ಆದರೆ ಒಂದು. ನಾವು ಹಳ್ಳಿ ಗುಗ್ಗುಗಳೇ ಇರಬಹುದು. ಗೋಡಂಬಿ, ಹಣ್ಣಿನ ಒಳಗಿರುವುದಿಲ್ಲ ಮತ್ತು ಅದನ್ನು ಹಸಿಯಾಗಿ ತಿನ್ನುವುದಕ್ಕೆ ಬರುವುದಿಲ್ಲ. ತಿಂದರೆ ಏನಾಗುತ್ತದೆ ಎಂದು ಕಲಿತಿದ್ದೇವೆ. ಠಸ್ ಪುಸ್ ಇಂಗ್ಲೀಷ್ ಮಾತಾಡಬಲ್ಲವರೆಲ್ಲಾ ನಮಗಿಂತ ಬುದ್ಧಿವಂತರಲ್ಲ. ಒಂದು ಭಾಷೆ ಅವರಿಗೆ ನಮಗಿಂತ ಚೆನ್ನಾಗಿ ಬರುತ್ತದೆ ಅಷ್ಟೇ. ಆದರೆ ಮಾತೃಭಾಷೆ ಬಹುಷಃ ನಮಗೇ ಚೆನ್ನಾಗಿ ಬರುತ್ತದೆ. ವಿಶೇಷ ಏನೂ ಇಲ್ಲ. ಜಪಾನೀಗಳು, ಫ್ಫ್ರೆಂಚರು, ಪೋರ್ಚುಗೀಸರು ಕೂಡಾ ಇಂಗ್ಲೀಷ್ ಮಾತಾಡುವುದು ಕಡಿಮೆ.

No comments:

Post a Comment