Wednesday, October 4, 2017

ಶ್ರದ್ಧಾಂಜಲಿ

  ಚಿಟ್ಟಾಣಿಯವರ ಅಗಲಿಕೆ ದೇವೇಂದ್ರನಿಗೆ ಅವರ ಮೇಲೆ ಬಎಂದ ಅಸೂಯೆಯ ಫಲ. ಸ್ವರ್ಗವಿಲ್ಲದೆ,ಅಪ್ಸರೆಯರು ಎದುರಿಲ್ಲದೆ ಹೋದರೂ ಶೃಂಗಾರ ದ ಸುರಿಮಳೆ ಸುರಿಸುತ್ತಿದ್ದ ನವರಸಗಳ ಮೂರ್ತರೂಪ ಮಾಯೆಯಾಗಿದೆ. ಯಕ್ಷರಂಗದ ಪದ್ಮ-ಸದಾ ಹೊಸತನ್ನು ಬಯದುವುದು ಶ್ರೀ- ಸಂಪತ್ತು ಎರಡೂ ಆಗಿದ್ದ ಚಿರಯುವಕ ಇನ್ನಿಲ್ಲ. ಇಂದ್ರನ ಅಸೂಯೆ ಅಲ್ಲದಿದ್ದರೆ ಅಪ್ಸರೆಯರ ಪ್ರೇಮ ಅವರನ್ನು ಕರೆಸಿಕೊಂಡಿತೇ?

ಸಕಲ ರಸಗಳನ್ನೂ ಸೂಸಿದ್ದ ಆ ಕಂಗಳನ್ನು ದಾನ ಮಾಡಿದ ಚಿಟ್ಟಾಣಿ ಕೊನೆಗೂ ಚಿತ್ತಾಗದೆ ಆನೆಯಂತೆ ದೊಡ್ಡವರೆ ಆದರು.

ಇನ್ನು ಕೀಚಕನ ಆತ್ಮಕ್ಕೆ ಶಾಂತಿ ಸಿಗಬಹುದು. ಪರಕಾಯ ಪ್ರವೇಶಕ್ಕೆ ಚಿಟ್ಟಾಣಿಯವರು ಕರೆಯುವುದಿಲ್ಲವಲ್ಲ. ಕೈಲಾಸದ ಪರಮೇಶ್ವರ ಮೇಲಿಂದ ನೋಡಿದಾಗ ಆತನಿಗೆ ಬರುತ್ತಿದ್ದ ಭಸ್ಮಾಸುರನ ನೆನಪು ನಮ್ಮ ಪಾಲಿಗೆ ಬಿಟ್ಟು ಹೊರಟರು ಚಿಟ್ಟಾಣಿ. ತಾನೇ ಕೊಲ್ಲಿಸಿದ ಮಾಗಧನ ನೆನಪು ಇನ್ನು ಎಂದಿಗೂ ಮಾಧವನಿಗೆ ಆಗುವುದಿಲ್ಲ. ಅದನ್ನು ನಮಗೆ ಶಾಶ್ವತವಾಗಿ ಕರುಣಿಸಿ ಸ್ಮರಣಿಕೆಯಾಗಿ ಕೊಟ್ಟು ಹೋದರು ಚಿಟ್ಟಾಣಿ.

ಗಂಧರ್ವ ಮತ್ತು ಯಕ್ಷರಿಗಿನ್ನು ನೆಮ್ಮದಿ ಸಿಕ್ಕೀತು. ಅವರ ನಾಟ್ಯಕ್ಕೆ ಪ್ರೇಕ್ಷಕರು ಬಂದಾರು ಎಂಬ ಆಸೆ ಅವರಿಗೆ.

ಮುದ್ದಣ ತಾನೇ ಚಿತ್ರಿಸಿದ ಭದ್ರಸೇನನನ್ನು ಸ್ವರ್ಗದಲ್ಲಿ ನೋಡಿ ಸಂಭ್ರಮಿಸಿಯಾನು. ನಾವುಡರು, ಮಹಾಬಲ ಹೆಗಡೆಯವರು,ಕಿಟ್ಟಣ್ಣ,ಗುಡಿಗಾರರು ಹಳೆಯ ಜತೆಗಾರನ ಬರವನ್ನು ಸಡಗರದಿಂದ ಕಣ್ತುಂಬಿಕೊಂಡಾರು ಸ್ವರ್ಗದಲ್ಲಿ. ಲಕ್ಷ್ಮೀಶ ತಾನು ಸೃಜಿಸಿದ ದುಷ್ಟಬುದ್ಧಿಯನ್ನು ಕೊಂಡಾಡಿಯಾನು.ಶಂಭು ಹೆಗಡೆಯವರು ಮತ್ತೊಂದು ದಿಗ್ಗಜವನ್ನು ಆಲಂಗಿಸಿಯಾರು. ನಮಗೆ ನೆನಪಷ್ಟೇ ಗತಿ.

ಓ ದೇವತೆಗಳೇ ಇದನ್ನೆಲ್ಲಾ ಕಂಡು ಅಸೂಯೆ ಪಡಬೇಡಿ. ನಮ್ಮ ಪ್ರೀತಿಯ ಕಲಧಾರನನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಇದೆಲ್ಲಾ ಕಷ್ಟ ಅನ್ನಿಸಿದರೆ ಇವರೆಲ್ಲರನ್ನೂ ನಮ್ಮೆಡೆಗೆ ಕಳಿಸಿ ಮತ್ತೆ. ಇವರಿಗಾಗಿ ರಂಗಸ್ಥಳ ಕಾಯುತ್ತಿರುತ್ತದೆ.

No comments:

Post a Comment