Tuesday, September 26, 2017

ಮುಖೋರ್ಜೀ ಮೂರಖ್ ಜೀ

"ಮುಖೋರ್ಜೀ" ಹೀಗೆಂದೇ ಖ್ಯಾತಿ ಪಡೆದಿಇದ ವ್ಯಕ್ತಿ ಆತ. ಆತನೇ ತನ್ನನ್ನು ಈ ಹೆಸರಿಂದ ಕರೆದುಕೊಂಡಿದ್ದರಿಂದ ಊರವರಿಗೆ ಆತನ ನಿಜ ನಾಮಧೇಯ ಮಂಜಪ್ಪ ಎನ್ನುವುದು ಬಹುಷಃ ಮರೆತು ಹೋಗುತ್ತಿತ್ತೇನೋ. ಆದರೆ ಮೂರು ದಿನಕ್ಕೊಮ್ಮೆ ಟಿ ವಿ ಯಲ್ಲಿ ಮುಸುಡು ತೋರಿಸಿ(ಕೆಲವೊಮ್ಮೆ ತೂರಿಸಿ) ಏನೋ ಕೊರೆಯುತ್ತಿದ್ದಾಗ, ಕೆಳಗಡೆ ಬರುವ ಸ್ಕ್ರಾಲ್, "ಮಂಜಪ್ಪ (ಮುಖೋರ್ಜೀ)" ಎಂದಿರುತ್ತಿದ್ದರಿಂದ ಊರಿನವರು ಮಂಜಪ್ಪ ಎಂದೇ ಕರೆಯುತ್ತಿದ್ದರು.

ಈತ ಒಂದು ಕಾಲದಲ್ಲಿ ಸಾಗರದ ಮಾರಿ ಜಾತ್ರೆ ಖರ್ಚಿಗೆ ಅಪ್ಪನಲ್ಲಿ ದುಡ್ಡು ಕೇಳಿದಾಗ ಆತ ಕೊಡದೆ ಇದ್ದಿದ್ದರಿಂದ ಸಿಟ್ಟಾಗಿ ಊರು ಬಿಟ್ಟ. ಸಿಟ್ಟಿಗೆ ಊರು ಬಿಟ್ಟರೇನು, ಹಸಿವು-ಹೊಟ್ಟೆ ಒಂದನ್ನೊಂದು ಬಿಟ್ಟಿರಲಿಲ್ಲ. ನೈವೇದ್ಯವಾಗಿದ್ದ ವಿದ್ಯೆಗೆ ತಕ್ಕ ಕೆಲಸವೊಂದನ್ನು ಹೇಗೋ ಸಂಪಾದಿಸಿದ. ಅಲ್ಲಿ ಕಾರ್ಮಿಕರ ಶ್ರಮದ, ಬಸಿದ ಬೆವರಿನ ಬೆಲೆ ಬಗ್ಗೆ ಚೆನ್ನಾಗಿ ತಿಳಿದು, ಬೇರೆಯವರಿಗೆ ತಿಳಿಸುವ ಕೆಲ ಮಂದಿ ಅವನಿಗೆ ಜೊತೆಯಾದರು. ಅವನಿಗೂ ಇದರ ಬೆಲೆ ತಿಳಿಸಿದರು.

ಪರಿಣಾಮ ಎಂಬಂತೆ ಧರ್ಮ ಬಡವರ ಅಫೀಮು ಎನ್ನಿಸಿ ಜನಿವಾರ ತೆಗೆದಿಟ್ಟ. ಫಾಕ್ಟರಿ ಹೊರಗೆ ನಿಂತು "ಧಿಕ್ಕಾರ" "ಜಿಂದಾಬಾದ್" ಎಂದೆಲ್ಲಾ ಕೂಗಿದ. ಹಾಗೆ ಕೂಗುವುದಕ್ಕೆ ಜೊತೆಯಾಗಲು ಬಂದವನೇ ಭೋನು ತೇಜೋ ಮುಖೋರ್ಜಿ  (ಭಾನು ತೇಜ ಮುಖರ್ಜಿ). ಅವನಿಂದ ಪ್ರಭಾವಿತನಾದ ಈತ ತನಗೂ ಆ ಹೆಸರಿಟ್ಟುಕೊಂಡ.

ಇವರ ಕೂಗಿನ ಫಲ, ಫ್ಯಾಕ್ಟರಿ ಬಂದ್ ಆಯಿತು. ಕೂಗಿಗೆ ಬೆಲೆ ಇಲ್ಲದಾಯಿತು. ಅಲ್ಲಿದ್ದ ಕಾರ್ಮಿಕ ನಾಯಕರು ಬೇರೆ ಕಡೆ ಬೆವರಿನ ಬೆಲೆ ತಿಳಿಸಲು ಹೋಗಿದ್ದರಿಂದ ಮಂಜಪ್ಪ ಮುಖೋರ್ಜಿಯಾಗಿ ಮತ್ತೆ ಊರಿಗೆ ಬಂದ. ಅಪ್ಪನ ಸಿಟ್ಟು ಇಳಿದಿದ್ದರಿಂದ ಏನೂ ಹೇಳಲಿಲ್ಲ. ಅಪ್ಪ ಮಾಡಿಟ್ಟ ಆಸ್ತಿ ಪೂರ್ತಿ ತನ್ನದಾದ ಮೇಲೆ ಈತನಿಗೆ ಮತ್ತೆ ಬೆವರಿನ ಬೆಲೆ ಗೊತ್ತಾಯಿತು. ಮತ್ತೆ ಎಡಪಂಥಕ್ಕೆ ಹೊರಳಿದ. ಆಸ್ತಿ ಮನೆ ಸಂಭಾಳಿಸಲು ಇನ್ನೂ ಅನೇಕ ದುಡಿಯುವ ಕೈಗಳಿದ್ದವಲ್ಲ. ತಲೆಬಿಸಿ ಇರಲಿಲ್ಲ.

ಯಾವುದೋ ವಶೀಲಿಬಾಜಿ ಬಳಸಿ ಟಿ ವಿ ಯಲ್ಲಿ ಮುಸುಡಿ ತೋರಿಸುವ ಅವಕಾಶ ಗಿಟ್ಟಿಸಿದ. ಒಂದು ದಿನ ಹೀಗೆ ಮುಖ ತೋರಿಸಿ ಹೊರಬಂದು, ಹೋರಾಟದ ಅಗ್ನಿಗೆ ತೈಲ ಹಾಕಲು ಆಂಧ್ರದ ಕಾಮ್ರೇಡ್ ಮಲ್ಲನೇನಿ ವೀರ ಸೂರ್ಯನಾರಾಯಣ ರಾಮಾಂಜನೆಯ ಸೀತಾರಾಮ ರಾವ್ (ಮವೀಸೂರಾಸೀ) ಜೊತೆ ಹೋದ. ಆತ ಎಲ್ಲಾ ಬಿಟ್ಟು "ನೀವು ಇಷ್ಟು ದಿನಕ್ಕೆ ಎಷ್ಟು ಜನ ಕಾರ್ಮಿಕ ಸೇನಾನಿಗಳನ್ನು ತಯಾರು ಮಾಡಿದ್ದೀರಿ" ಎಂದ. ಅವಾಕ್ಕಾದ ಮುಖೋರ್ಜೀ, "ಅಬ್ಬಾ !ಎಂಥಾ ದೂರ ದೃಷ್ಟಿ ನಿಮ್ಮದು. ಅನೇಕಾಂತವಾದದ ಮುಖವಾಗಬೇಕೆಂಬ ಹಂಬಲದಲ್ಲಿ, ದಮನಿತ ಶೋಷಿತರ ಬಡವರ ಧ್ವನಿಯಾಗುತ್ತಾ ನಾನಿದನ್ನು ಯೋಚಿಸಿಯೇ ಇಲ್ಲ. ಭವಿತವ್ಯದ ದಮನಿತರ, ದೂಷಿತರ, ಶೋಷಿತರನ್ನು ಮೇಲೆತ್ತಲು ನಿಮ್ಮೆಂಥವರ ದೂರ ದೃಷ್ಟಿ ಬೇಕು. ಇಂಥಾ ವಿಶಾಲ ಮತ್ತು ವಿಶೇಷ ದೃಷ್ಟಿಕೋನ ಇದ್ದಿದ್ದರಿಂದಲೇ ನೀವು ದೊಡ್ಡ ನಾಯಕರಾದಿರಿ "ಎಂದು ಹೊಗಳಿದ. ನಿಜ ಏನೆಂದರೆ ಮುಖೋರ್ಜಿಗೆ ಮುಜುಗರವಾಗಿ ಏನು ಉತ್ತರ ಕೊಡಬೇಕು ಎಂದೇ ತಿಳಿಯಲಿಲ್ಲ. ಅಲ್ಲಿಲ್ಲಿ ಕೇಳಿದ್ದ ಕೆಲ ಶಬ್ದಗಳನ್ನೇ ಪೋಣಿಸಿ ವಾಕ್ಯ ಹೆಣೆದಿದ್ದ. ಸಂತುಷ್ಟನಾದ ಮವೀಸೂರಾಸೀ, ಎಣ್ಣೆ ಜೊತೆ ಖಾರ ಸೇವಿನದ್ದೂ ದುಡ್ಡು ಕೊಟ್ಟ. ಮುಂದಿನ ಪೀಳಿಗೆಯ ದಮನಿತರ ಗಂಟಲುಗಳನ್ನು ಹುಡುಕುವ ನಿರ್ಧಾರದೊಂದಿಗೆ ಮುಖೋರ್ಜೀ ಬಸ್ಸಿನ ಸೀಟಿಗೆ ತಲೆಯಿಟ್ಟ.

ಊರಿಗೆ ಬಂದವನೇ ದಾಸನ ಮಗ ಜಟ್ಟ ಮತ್ತು ಬಿಳಿಯನ ಮಗ ಗಾಮನನ್ನು ಕರೆದು ಎಡಪಂಥೀಯ ಗೀತೋಪದೇಶ ಶುರು ಮಾಡಿಯೇ ಬಿಟ್ಟ. "ದಿನವೂ ಎಡಕ್ಕೆ ಜಯವಾಗಲಿ. ಎಡದ ಬಲ ಹೆಚ್ಚಲಿ. ಬಲ ಬಾಳದಿರಲಿ. ನಮ್ಮ ಮಾತಿದು ದರ್ಪಿತರಿಗೆ ದಮನಿತರ ಸಿಂಹ ಘರ್ಜನೆ. ಎಡವೆ ಮಹಾಬಲ" ಎಂಬ ಘೋಷಣೆಯೊಂದಿಗೆ ಇವರ ಚರ್ಚೆ ಮುಕ್ತಾಯವಾಗುತ್ತಿತ್ತು.

ಸ್ವಲ್ಪ ದಿನದಲ್ಲೇ ಹವಾಮಾನ ಬದಲಾಗಿ, ಜಟ್ಟ ಮತ್ತು ಗಾಮ ಇಬ್ಬರಿಗೂ ಜ್ವರ ಬಂತು. ಶಿಷ್ಯರ ಮನೆಗೆ ಹೋಗಿ ಕುಶಲ ವಿಚಾರಿಸಿ, ಅವರ ಕಿವಿಯಲ್ಲಿ ಇನ್ನಮದಿಷ್ಟು ವಿಚಾರದ್ರವ ಸುರಿಸಿ,ಅವರಿಗೆ ದುಡ್ಡು ಕೊಟ್ಟು, ಚಿಕಿತ್ಸೆ ಪಡೆದು ಬೇಗ ಬರಬೇಕೆಂದೂ, ಕ್ರಾಂತಿಗೆ ಕಾಲ ಸನ್ನಿಹಿತವಾಗಿದೆ ಎಂದೂ ತಿಳಿಸಿದ.

ಕೆಲವು ದಿನ ಬಿಟ್ಟು ಇಬ್ಬರೂ ಶಿಷ್ಯರು ಮತ್ತೆ ಗುರುವಿನ ಮನೆಗೆ ಬಂದರು. ಅವರಿಬ್ಬರೂ ಕುಳಿತ ಭಂಗಿ ವಿಶಿಷ್ಟವಾಗಿತ್ತು. ಜಟ್ಟ ಎಡಭಾಗದ ಪೃಷ್ಠ ಎತ್ತಿ ಕುಳಿತಿದ್ದರೆ, ಗಾಮ ಎಡಭಾಗದ ಪೃಷ್ಠ ಊರಿಕುಳಿತಿದ್ದ. ಕುತೂಹಲ ತಡೆಯದೆ, ಮುಖೋರ್ಜೀ ಕಾರಣ ಕೇಳಿದ.

ಜಟ್ಟ, "ಎಡವೇ ಮಹಾಬಲ, ಎಡದ ಬಲ ಹೆಚ್ಚಲಿ ಅಂತ ಮಾತಾಡ್ತುವು ಅಯ್ಯ. ಅದಕ್ಕೆ ಡಾಕ್ಟ್ರಿಗೆ ಅಷ್ಟೂ ಸೂಜಿ ಎಡ ಮುಕ್ಳಿಗೆ ಕೊಡಕ್ಕೆ ಹೇಳ್ದೆ. ಈಗ ನೋಯ್ತಾ ಐತೆ. ಅದಕ್ಕೆ ಎತ್ತಿ ಕುಂತಗಂಡೆ. ಅದಿರ್ಲಿ, ನಾ ಈಗ ಉಣ್ಣದೂ ಎಡಗೈನಾಗೆ" ಎಂದ.

ಗಾಮ, "ಎಡವೇ ಬಲ, ಬಲ ಬೀಳಲಿ ಅಂದ್ರಲ ಅಯ್ಯ ಅದಕ್ಕೆ ಬಲಕ್ಕೆ ಸಮಾ ಆಬೊಕು ಅಂತ ಹೇಳಿ ಎಲ್ಲಾ ಇಂಜೆಕ್ಷನ್ನೂ ಬಲದ ಮುಕ್ಳಿಗೆ ತಗಂಡೆ ಒಡೆಯಾ. ಬಲಕ್ಕೆ ಸಮಾ ಆಬೊಕು ಅಂತ ನಾ ಈಗ ಬಲಗೈನಾಗೆ ಮುಕ್ಳಿ ತೋಳಿತ್ನಿ" ಎಂದ.

ತನ್ನ ಎಡಪಂಥೀಯ ವಿಕಾರಧಾರೆ ಈ ದಡ್ಡರ ಮುಕ್ಳಿಗೆ ಬಿದ್ದಿದ್ದು ತಿಳಿದು ಮುಖೋರ್ಜೀ ಮಮ್ಮಲ ಮರುಗಿದ, ಮನಸ್ಸಿನಲ್ಲೇ.ಒಟ್ಟು ಮುಖೋರ್ಜೀ, ಮೂರಖ್ ಜೀ ಆದ, ಮುಶಂಡಿಗಳ ಮುಕ್ಳಿ ದೆಸೆಯಿಂದ.

Friday, September 22, 2017

ಜಕ್ಕಣಿ ಹಿಡಿದರು

ದೀಪೇಶ ಕೊಟ್ಟ ದುಡ್ಡನ್ನು ಜೇಬಿನಲ್ಲಿ ಮತ್ತು ಅವನ ಸವಾಲನ್ನು ತಲೆಯಲ್ಲಿಟ್ಟುಕೊಂಡು ತನ್ನ ಚೋರಗುರುವಿನ ಬಳಿ ದೌಡಾಯಿಸಿದ ಯಂಕಟು.

ವಿಷಯ ಕೇಳಿ ವಿರೂಪಾಕ್ಷ ಹಿರಿ ಹಿರಿ ಹಿಗ್ಗಿದ. ತನಗೆ ಮೆಣಸಿನ ಹೊಗೆ ಇಟ್ಟ ಪರಮ ಭಟ್ಟರ ತೇಜೋವಧೆಗೆ ಸಕಾಲ ಕೂಡಿ ಬಂದಿದ್ದು ಅವನಿಗೆ ವರ್ಣಿಸಲಸದಳ ಸಂತೋಷ ಕೊಟ್ಟಿತ್ತು. ಯಕ್ಷಗಾನದ ಕೌರವನಂತೆ ಮತ್ತಧಿಕ ಸಂತೋಷದುಬ್ಬಿನಲ್ಲಿ ತನ್ನವರ ಕರೆಯುವ ಮನ ಹೊಂದಿದ್ದ.

ಆದರೆ ಕಾರ್ಯ ಮುಖ್ಯ. ತನ್ನ ಶಿಷ್ಯನನ್ನು ಕರೆದುಕೊಂಡು ಪರಮನ ಬಳಿ ಬಂದು ಮುಖ ಸಣ್ಣ ಮಾಡಿ ನಿಂತ. ಪರಮ ಭಟ್ಟರು ವಿಚಾರಿಸಿದಾಗ ಎಲ್ಲವನ್ನೂ ವಿವರಿಸಿದ. ಪರಮ ಭಟ್ಟರು ನಸು ನಗುತ್ತಾ,"ಆನು ನೋಡಕ್ಯತ್ತಿ" ಎಂದರು.

ನಿಗದಿಯಾದ ದಿನದಂದು ಕಾಳ ನಾಯ್ಕನ ಮನೆಗೆ ಬಂದರು, ಯಂಕಟುವನ್ನೂ ಕರೆದುಕೊಂಡು. ಯಂಕಟುವಿಗೂ ತಿಳಿಯದ ವಿಚಾರ, ಭಟ್ಟರು ಒಂದು ಚೀಲ ನಿಂಬೆ ಹಣ್ಣನ್ನು ಏಕೆ ತಂದರು ಎನ್ನುವುದು.

ಭಟ್ಟರು, ಯಂಕಟುವಿನ ಹತ್ತಿರ, ಹೋಮ ಕುಂಡಕ್ಕೆ ಸುಮ್ಮನೆ ತುಪ್ಪ ಹೊಯ್ಯುತ್ತಾ ಮನಸ್ಸಿನಲ್ಲಿ ರಾಮ ರಾಮ ಎನ್ನುತ್ತಿರುವಂತೆ ತಿಳಿಸಿದರು.
ಸ್ವಲ್ಪ ಹೊತ್ತಾದ ಮೇಲೆ ನಿಂಬೆ ಹಣ್ಣನ್ನು ಕೈನಲ್ಲಿ ಹಿಡಿದು ಏನೋ ಮಂತ್ರ ಮನಮಣಿಸಿ, " ಜಕ್ಕಣಿ ಬಾ" ಎನ್ನುತ್ತಾ ನೀರಿಗೆಸೆದರು. ಹೀಗೆ ಹತ್ತು ಹದಿನೈದು ನಿಂಬೆ ಹಣ್ಣುಗಳು ನೀರಿಗೆ ಬಿದ್ದು ತೇಲುತ್ತಿದ್ದವು. ಮತ್ತೂ ಒಂದು ನಿಂಬೆ ಹಣ್ಣನ್ನು "ಜಕ್ಕಣೀ.... ಬಾ......." ಎಂದು ಏರು ಸ್ವರದಲ್ಲಿ ಅರಚುತ್ತಾ ನೀರಿಗೆ ಎಸೆದರು, ಅದು ಮುಳುಗಿತು.

ಪಕ್ಕದಲ್ಲೇ ಇದ್ದ ಯಂಕಟುವನ್ನು ಕರೆದು, "ಸಾಕು ಹವಿಸ್ಸು ಹಾಕಿದ್ದು. ಚೀಲದ ಎಲ್ಲಾ ನಿಂಬೆ ಹಣ್ಣು ಹೋಮಕ್ಕೆ ಹಾಕಿ ಬಾ. ಜಕ್ಕಣಿ ಬಂದಾತು. ಹಿಡ್ಕ ಅದನ್ನ. ಓ ಆ ಕೆಂಪು ಬಟ್ಟೆ ತಗ..." ಎಂದ. ಯಂಕಟು ಕೆಂಪು ಬಟ್ಟೆ ತಂದು ಕೊಟ್ಟ. ಪರಮ ಭಟ್ಟರು ಮುಳುಗಿದ್ದ ನಿಂಬೆ ಹಣ್ಣನ್ನು ಬಟ್ಟೆಯೊಳಗಿಟ್ಟು ಧರ್ಭೆಯಿಂದ ಒಂದು ಕಟ್ಟು ಹಾಕಿ  ಏನೋ ಮಂತ್ರ ಮನಮಣಿಸಿದರು.

ಅರ್ಧ ಬುದ್ಧಿ ಜೀವಿಯಾಗಿದ್ದ ದೀಪೇಶ ಪ್ರಶ್ನಿಸಿಸುವುದನ್ನು ಸ್ವಲ್ಪ ಕಲಿತಿದ್ದ. "ಇದರಾಗೆ ಜಕ್ಕಣಿ ಐತೆ ಅಂತ ನಾ ಹೆಂಗೆ ನಂಬೋಕು" ಎಂದು ಭಟ್ಟರನ್ನು ಪ್ರಶ್ನಿಸಿದ. ಭಟ್ಟರು, "ತಮಾ, ಇದೊಂದೇ ನಿಂಬೆ ಹಣ್ಣು ಮುಳುಗಿದ್ದು. ತೂಕ ಜಕ್ಕಣಿ ಒಳಗೆ ಬರದೆ ಬಂತಾ?" ಎಂದರು. ಪ್ರಶ್ನೆಗೆ ಉತ್ತರಿಸಲಾಗದ ದೀಪೇಶ,'ಸೈನ್ಸ್ ಕಷ್ಟಾಕಾವೆ, ಆಲ್ಟ್ಸ್ ಒಳ್ಳೇದು. ಲಾಯರ್ ಆಬೈದು' ಎಂದು ತನಗೆ ಉಪದೇಶ ಕೊಟ್ಟವ ಯಾರು ಎಂದು ನೆನಪು ಮಾಡಿಕೊಳ್ಳಲು ನೋಡಿದ. ನೆನಪಾಗಲಿಲ್ಲ. ಅಷ್ಟರಲ್ಲಿ ಪರಮ ಭಟ್ಟರು ದೀಪೇಶನನ್ನು ಕರೆದು, " ತಗ ತಮ, ಜಕ್ಕಣಿ ಹಿಡಿದಾತು. ಅದು ಈ ನಿಂಬೆ ಹಣ್ಣೊಳಗಿದೆ. ನಿಂಗೆ ಬೇಕೇ ಬೇಕು ಅಂದ್ರೆ ಮೂರ್ತಿಗೆ ಹಾಕಿ ಕೊಡ್ತೇನೆ. ಆದ್ರೆ ದಿನಾ ಮೂರು ಕೊಳಗ ಅನ್ನ ನೈವೇದ್ಯ ಮಾಡಬೇಕು. ಇಲ್ದಿದ್ರೆ ಮನೆ ಹಾಳು ಮಾಡ್ತದೆ" ಎಂದ.

ತನ್ನ ಬುದ್ಧಿಜೀವಿಯಾಗಬೇಕೆಂಬ ಹಂಬಲಕ್ಕೆ ಹಿಂದೊಮ್ಮೆ ರಾಕ್ಷಸ ಗಾತ್ರದ ನಾಯಿ ತೊಂದರೆ ಮಾಡಿತ್ತು. ಈಗ ಜಕ್ಕಣಿ ತೊಂದರೆ ಮಾಡಿದರೆ ಎಂದು ಯೋಚಿಸಿ, "ಬ್ಯಾಡ ಬಿಡಿ" ಎಂದ. ಸರಿ ಎಂದ ಭಟ್ಟರು ಏನೋ ಮಂತ್ರ ಉಚಚರಿಸಿ ಜಕ್ಕಣಿ ಇದ್ದ ನಿಂಬೆ ಹಣ್ಣನ್ನು ಅಗ್ನಿಗೆ ಹಾಕಿದರು.

ದೀಪೇಶನ ಮುಖ ಭಯದಿಂದ ಬಿಳುಚಿದ್ದರೆ, ವಿರೂಪಾಕ್ಷನ ಮುಖ ಅವಮಾನದಿಂದ ಮತ್ತೆ ಕಪ್ಪಿಟ್ಟಿತ್ತು.

(ಕಥಾಗುಚ್ಛದ ಹಿಂದಿನ ಭಾಗಗಳು ಕೊಟ್ಟ ಕೊಂಡಿಗಳಲ್ಲಿವೆ

http://tenkodu.blogspot.in/2012/12/blog-post_19.html

http://tenkodu.blogspot.in/2016/05/blog-post.html

http://tenkodu.blogspot.in/2017/07/blog-post.html

http://tenkodu.blogspot.in/2017/07/blog-post_13.html

http://tenkodu.blogspot.in/2017/09/blog-post_18.html

http://tenkodu.blogspot.in/2017/09/blog-post_65.html)

Tuesday, September 19, 2017

ಉತ್ತಂಕ

ಮಹಾಭಾರತದಲ್ಲಿ ಬರುವ ಅನೇಕ ಋಷಿಗಳಲ್ಲಿ ಈತನೂ ಒಬ್ಬ. ಗುರುದಕ್ಷಿಣೆ ಕೇಳಿದಾಗ ಗುರು ವೇದರು ತನ್ನ ಪತ್ನಿಯನ್ನು ಕಾಣುವಂತೆ ತಿಳಿಸುತ್ತಾರೆ. ಆಗ ಆಕೆ,ತನಗೆ ಪೌಷ್ಯ ರಾಜನ ಪತ್ನಿಯ ಕರ್ಣಾಭಾರಣ ತಂದುಕೊಡುವಂತೆ ತಿಳಿಸುತ್ತಾಳೆ.

ಪೌಷ್ಯ ರಾಜನನ್ನು ಉತ್ತಂಕ ಭೆಟ್ಟಿಯಾಗಿ ಗುರು ಪತ್ನಿಯ ಬಯಕೆ ತಿಳಿಸಿದಾಗ ತನ್ನ ಪತ್ನಿಯನ್ನು ಕಾಣಲು ಹೇಳುತ್ತಾನೆ. ಆದರೆ ಉತ್ತಂಕನಿಗೆ ಆಕೆ ಕಾಣದಾದಾಗ, ಪೌಷ್ಯನು ಉತ್ತಂಕನಲ್ಲೇನೋ ಕ್ಶರ್ಮಾನುಷ್ಠಾನ ಲೋಪವಿರಬೇಕೆನ್ನುತ್ತಾನೆ. ಆಗ ಉತ್ತಂಕ ತನ್ನಿಂದಾದ ಆಚಮನ ಲೋಪವನ್ನು ನೆನಪು ಮಾಡಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡು ರಾಣಿಯನ್ನು ನೋಡಬಲ್ಲವನಾಗುತ್ತಾನೆ.
ರಾಣಿಯಲ್ಲಿ ಗುರು ಪತ್ನಿಯ ಬಯಕೆಯನ್ನು ಹೇಳಿದಾಗ, ಆಕೆ ಸಂತೋಷದಿಂದ ಆಭರಣವನ್ನು ಕೊಟ್ಟು, ನಾಗ ರಾಜ ತಕ್ಷಕನು ಈ ಆಭರಣಗಳನ್ನು ಆಸೆ ಪಟ್ಟಿದ್ದರಿಂದ ಎಚ್ಚರದಿಂದಿರುವಂತೆ ಸೂಚಿಸುತ್ತಾಳೆ.

ಮಾರ್ಗ ಮಧ್ಯದಲ್ಲಿ ಸಾಯಂ ಸಂಧ್ಯಾಕಾಲ ಎದುರಾದಾಗ ಉತ್ತಂಕ, ಆಹ್ನೀಕಕ್ಕೆ ತೆರಳುವಾಗ ತನ್ನ ವಸ್ತುಗಳನ್ನು ತಗೆದಿರಿಸುತ್ತಾನೆ. ಸಮಯ ಸಾಧಿಸಿ ತಕ್ಷಕ ಆಭರಣವನ್ನು ಅಪಹರಿಸಿ ನಾಗಲೋಕ ಸೇರಿದ.

ಕ್ರುದ್ಧನಾದ ಉತ್ತಂಕ, ಮುತ್ತುಗದ ಮರದ ಕೋಲಿನಿಂದ ಹುತ್ತ ಅಗೆಯತೊಡಗಿದ. ಉತ್ತಂಕನ ಮೇಲೆ ಕರುಣೆ ತಾಳಿ ಇಂದ್ರ ತನ್ನ ವಜ್ರಾಯುಧದ ಶಕ್ತಿಯನ್ನು ಕೋಲಿಗೆ ಸಂಸ್ಥಾಪಿಸಿದ.

ನಾಗಲೋಕವನ್ನು ಸೇರಿದ ಉತ್ತಂಕ ಸರ್ಪಗಳನ್ನು ಪರಿಪರಿಯಾಗಿ ಸ್ತುತಿಸಿ ವಿಷಬಾಧೆಯಿಂದ ಪಾರಾದರೂ ಆಭರಣಗಳು ದೊರಕುವುದಿಲ್ಲ. ಆಗ ಇಂದ್ರನನ್ನು ಪ್ರಾರ್ಥಿಸಿದ. ಇಂದ್ರ ಅಗ್ನಿಯನ್ನು ಅಶ್ವ ರೂಪದಲ್ಲಿ ಪಾತಾಳಕ್ಕೆ ಕರೆತಂದು, ಉತ್ತಂಕನಿಗೆ ಅದರ ಪೃಷ್ಠವನ್ನು ಊದಲು ಹೇಳಿದ. ಇದನ್ನು ಆಚರಿಸಿದಾಗ, ನಾಗಲೋಕವೆಲ್ಲಾ ಅಗ್ನಿ ಜ್ವಾಲೆ ವ್ಯಾಪಿಸಿತು. ಬೆದರಿದ ತಕ್ಷಕ ಆಭರಣಗಳನ್ನು ತಂದೊಪ್ಪಿಸಿ ಶರಣಾದ. ಉತ್ತಂಕನ ಗುರುಭಕ್ತಿಗೆ ಮೆಚ್ಚಿದ ಇಂದ್ರ ಸರ್ಪಗಳೆಲ್ಲಾ ಆತನ ಅಂಕೆಯಲ್ಲಿರುವಂತೆ ವರ ಅನುಗ್ರಹಿಸಿದ.

ಉತ್ತಂಕ ನಂತರದಲ್ಲಿ ಆಭರಣಗಳನ್ನು ಗುರು ಪತ್ನಿಗೆ ಒಪ್ಪಿಸಿದ.

ಮನುಷ್ಯ, ಸ್ವಪ್ರಯತ್ನದಿಂದ ಸತ್ಕಾರ್ಯವನ್ನು ಮಾಡಲು ಹೊರಟಾಗ ದೈವ ತಾನೇ ಬಲಕ್ಕೆ ನಿಲ್ಲುತ್ತದೆ ಎನ್ನುವುದಕ್ಕೆ ಉತ್ತಂಕನ ಪ್ರಕರಣವೇ ಸಾಕ್ಷಿ. ಅಲ್ಲವಾದರೆ ಮುತ್ತುಗದ ಕೋಲಿನಿಂದ ಹುತ್ತವನ್ನಗೆದು ಪಾತಾಳ ಸೇರುವುದು ಸಾಧ್ಯವಲ್ಲ. ಗುರುಭಕ್ತಿ, ಗುರುಕೃಪೆ ಇದ್ದಾಗ ಸತ್ಕಾರ್ಯಗಳತ್ತ ನಿಷ್ಕಳಂಕ ಸಮರ್ಪಣಾಭಾವ ಮೂಡುತ್ತದೆ. ಗುರುವಿನ ಆಶೀರ್ವಾದವೇ ಅದನ್ನು ಸಾಗಿಸಲು ದೈವಬಲ ಒದಗಿಸುತ್ತದೆ. ಸ್ವಪ್ರಯತ್ನ, ಸತ್ಪ್ರಯತ್ನವಾಗಿ, ಸಫಲವಾಗುತ್ತದೆ.

ಸತ್ತ ಕೇಡುಗನ ಉತ್ಸವ

ಸತ್ತ ಕೋತಿಯನ್ನು ಸುಟ್ಟು ಬಂದ ಬೆಂಕಿ ಆರುವ ಮೊದಲೇ ಸೂರ್ಯನ ಮನೆಯ ಆಳಿನ ಮೇಲೆ ಉರಿ ಕಾರತೊಡಗಿದ್ದ ಹೆಂಡದಂಗಡಿಯ ಗುಂಪು ಬಾಯಿ ಮುಚ್ಚಿದ್ದರೂ ಸುಮ್ಮನಿರಲಿಲ್ಲ.ಸೂರ್ಯನ ಮೇಲೆ ಮತ್ತು ಅವನ ಆಳಿನ ಮೇಲೆ ಭರಪೂರ ಕೋಪ ಇದ್ದೆ ಇತ್ತು. ಮೇಲಿನಿಂದ ತಮ್ಮ ಪರ ವಹಿಸದ ಊರ ಜನರ ಮೇಲೂ ಸಹ.

ಏನು ಮಾಡುವುದು ಎಂಬ ನಿತ್ಯ ಚರ್ಚೆಯಲ್ಲಿ ಹೆಂಡದಂಗಡಿಗೆ ವ್ಯಾಪಾರ ಸ್ವಲ್ಪ ಜಾಸ್ತಿ ಆಯಿತು. ಊರಲ್ಲಿ ಕುಡಿದ ಅಮಲಿನಲ್ಲಿ ಹಲುಬುವುದೂ ಹೆಚ್ಚಾಯಿತು.

ಸೋಮಾರಿತನವೇ ವೃತ್ತಿ, ಅದರ ಬೇಸರ ಕಳೆಯಲು ಕಳ್ಳತನ ಪ್ರವೃತ್ತಿಯಾಗಿದ್ದ ಇವರ ಪಾಡು ಅಯ್ಯೋ ಪಾಪ. ಗ್ರಹಚಾರ ಎಂದರೆ ಇದನ್ನು ಹೇಳುವುದಕ್ಕೂ ಯಾರೂ ಇಲ್ಲದ್ದು.

ಹೀಗಿರುವಾಗ ಊರಲ್ಲಿದ್ದ ಪಿಂಪ್ ಅರ್ಥಾತ್ ತಲೆ ಹಿಡುಕ ಕೋಣಪ್ಪನ ಹೆಣ ನದಿಯಲ್ಲಿ ಬಿತ್ತು. ಆಗಿದ್ದೇನೆಂದರೆ ದಿನಾ ಕಾಲೇಜಿಗೆ ಹೋಗುವ ಹುಡುಗಿಯೊಬ್ಬಳನ್ನು ಈತ ಕಾಡುತ್ತಿದ್ದ. ಶ್ರೀಮಂತೆಯಾಗಿದ್ದ ಆ ಹುಡುಗಿ ತನ್ನ ಕಾರನ್ನು ಈತ ಅಮಲಿನಲ್ಲಿದ್ದಾಗ ಹಿಂದಿನಿಂದ ಕುತ್ತಿದ್ದಳು. ಸತ್ತದ್ದು ದುಷ್ಟ ಪಿಂಡವಾಗಿದ್ದರಿಂದ ಪೊಲೀಸರೂ ಕೇಸ್ ಹಾಕಲಿಲ್ಲ. ಸಾಕ್ಷಿ ಪುರಾವೆ ಅವಶ್ಯಕತೆಯೂ ಬೀಳಲಿಲ್ಲ.

ಈಗ ಹೆಂಡದಂಗಡಿಯ ಮಿತ್ರ ಮಂಡಳಿ ಜಾಗೃತವಾಯಿತು. ಊರಲ್ಲಿ ತಮ್ಮ ಪಾಡಿಗೆಂಬಂತೆ ಎಲ್ಲರೊಡನೆ ಹೊಂದಿಕೊಂಡಿದ್ದ ಜಾತಿಯವರಲ್ಲಿ ಹೋಗಿ, "ಕೋಣಪ್ಪ ನಿಮ್ಮ ಜಾತಿಯವನು. ನೀವು ಅವನ ಸಾವಿಗೆ ಸುಮ್ಮನಿರುವುದು ಸರಿಯಲ್ಲ. ಏನಾದರೂ ಮಾಡಿ." ಎಂದು ಪೀಡಿಸತೊಡಗಿದವು.

ಕೋಣಪ್ಪನ ಜಾತಿಯ ಕೆಲವು ಹುಡುಗರಿಗೆ ಬಾಡೂಟ ಬೇಕಾಗಿತ್ತು, ಇನ್ನು ಕೆಲ ವಯಸ್ಸಾದವರಿಗೆ ದಯ್ಯದ ಭಯ ಇತ್ತು. ಒಟ್ಟಿನಲ್ಲಿ ಬೇವರ್ಸಿ ಕೋಣಪ್ಪನಿಗೆ ತಿಥಿ ಆಯಿತು. ಇಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಅವನ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನಡೆಯಿತು.

ಈಗ ಹೆಂಡದಂಗಡಿಯ ಮಿತ್ರ ಮಂಡಳಿ ಅವನ ಹೆಸರಲ್ಲಿ ಉತ್ಸವ ಆಚರಿಸಿ, ಕ್ಯಾಬರೆ ನೋಡಲು ಕಾಯುತ್ತಿದೆ.

ವಿ.ಸೂ ಈ ಬರಹ ಇತ್ತೀಚೆಗೆ ಆಚರಿಸಬೇಕು ಎಂದುಕೊಂಡಿರುವ ಯಾವುದೇ ಉತ್ಸವಕ್ಕೂ ಸಂಬಂಧಿಸಿದ್ದಲ್ಲ.

Monday, September 18, 2017

ಜಕ್ಕಣಿ ತಂದ ಫಜೀತಿ

ಯಂಕಟು ಹೀಗೆ ಊರೆಲ್ಲಾ ಜಕ್ಕಣಿ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಸ್ವಲ್ಪ ಚನ್ನಾಗಿಯೇ ಕಾಸು ಮಾಡಿದ. ಯಂಕಟು ಮಾಣಿ ಎಂದಿದ್ದವರೆಲ್ಲಾ ಯಂಕಟು ಭಟ್ರು ಎಂದು ಕರೆಯುತ್ತಿದ್ದರು. ಇದನ್ನು ಕೇಳಿ ಆತನೂ ಸಂತೋಷಿಸುತ್ತಿದ್ದ. ಇದಕ್ಕೆಲ್ಲಾ ಕಾರಣನಾದ ವಿರೂಪಕ್ಷನ ಕಡೆ ಅಪರಿಮಿತ ಗುರು ಭಕ್ತಿ ಮತ್ತು ಭಯ ಮಿಶ್ರಿತ ಕೃತಜ್ಞತೆ ಇಟ್ಟುಕೊಂಡು ಅಲ್ಲಲ್ಲಿ ಭೂತೋಚ್ಚಾಟನೆ, ದಿಗ್ಬಂಧನ ಇತ್ಯಾದಿಗಳನ್ನು ಮಾಡುತ್ತಿದ್ದ. ಚೋರ ಗುರುವಿನ ಚಾಂಡಾಲ ಶಿಷ್ಯ ಎಂಬಂತೆ ಮಿತಿಮೀರಿದ ಧನದಾಸೆ ಮತ್ತು ಧನ ಗರ್ವ ಎರಡೂ ಬೆಳೆಸಿಕೊಂಡಿದ್ದ.

ವಿರೂಪಾಕ್ಷ ಇಷ್ಟೆಲ್ಲಾ ಮಾಡಿದ್ದು ಪೂರ್ವ ತಯಾರಿ ಆಗಿತ್ತು ಅಷ್ಟೇ. ಅವನ ನಿಜವಾದ ಗುರಿ ಯಂಕಟು ಬೆಳೆಯುವುದಾಗಲೀ ಅಥವಾ ಯಾರದ್ದೋ ಮನೆ ಉದ್ಧಾರವಾಗಲೀ ಆಗಿರದೆ, ಪರಮ ಭಟ್ಟರು ಮತ್ತು ಬೀರ ನಾಯ್ಕನ ಮೇಲೆ ಸೇಡು ತೀರಿಸಿಕೊಳ್ಳುವುದೇ ಆಗಿತ್ತು. ತಕ್ಕ ಸಮಯ ಕಾಯುತ್ತಿದ್ದ ಅಷ್ಟೇ.

ಇದಾಗುತ್ತಿರುವಾಗ ಒಂದು ದಿನ ಕಾಳ ನಾಯ್ಕ ಬಂದು ಅದೂ ಇದೂ ಮಾತಾಡುತ್ತಾ ತನ್ನ ಮನೆ ಗದ್ದೆಗೆ ಹಂದಿ ಕಾಟವೆಂದೂ ಅದನ್ನು ತದೇವಲ್ಲಿ ತಾನು ಸೋತು ಹೊದೆನೆಂದೂ ಹಾಲುಬಿದ. ವಿರೂಪಾಕ್ಷನ ಕರ್ಣಗಳು ಇದನ್ನು ಕೇಳುತ್ತಿದ್ದಂತೆ ಅವನೊಳಗಿನ ಪಿಶಾಚಿ ಪೂರ್ತಿ ಜಾಗೃತವಾಯಿತು.

"ಅಲ್ಲೋ ಕಾಳ, ಹಂದಿ ಹೊಡೆಯಕ್ಕಾಗ್ಲ ಅಂದ್ರೆ ಭಾರಿ ಕಾಟವೇ ಆತಲೋ. ನಿನ್ನ ಗುರಿ ಭಾಳ ಚನಾಗಿದೆ. ಇದು ಮತ್ತೆಂತಲ್ಲ. ಅವತ್ತು ಪರಮ ಭಟ್ರು ಓಡಿಸಿದ್ದ ಭೂತದ ಅಣ್ಣನೋ ತಮ್ಮನೊ ಹಂದಿಯಾಗಿ ಬಂದು ಕಾಟ ಕೊಡ್ತಾ ಇದಾರೆ. ಇಂಥದ್ದಕ್ಕೆಲ್ಲ ಪರಮ ಭಟ್ರು ಸಾಕಾಗದಿಲ್ಲ. ಅವ್ರು ಒಳ್ಳೆ ಜನ. ಪಾಪದವ್ರು. ಸ್ವಲ್ಪ ಜೋರಿನ ಭಟ್ಟರೇ ಬೇಕು. ಒಂದು ಸಾರಿ ಯಂಕಟು ಭಟ್ರ ಹತ್ರ ಮಾತಾಡು." ಎಂದ.

ಮಾತನ್ನು ತಲೆಯಲ್ಲಿ ಹೊತ್ತ ಕಾಳ ಯಂಕಟುವನ್ನು ಕಂಡ. ಯಂಕಟು ಕೂಡಾ ಒಪ್ಪಿದ. ಆದರೆ, ವಿಫಲ ಕ್ರಾಂತಿಕಾರಿ ದೀಪೇಶ ಇದನ್ನು ತಿಳಿದು ಮತ್ತೊಂದು ಕ್ರಾಂತಿಗೆ ಮಾನಸಿಕವಾಗಿ ಸಿದ್ಧನಾದ.

ನಿಶ್ಚಯಿಸಿದ ರಾತ್ರಿ ಬರಬ್ಬರಿ ಹೋಮ ಮಾಡಿಸಿ ಯಂಕಟು ಇನ್ನೇನು ಹೊರಡಬೇಕು ಎಂದುಕೊಂಡಾಗ, ವಿಫಲ ಕ್ರಾಂತಿಕಾರಿ ದೀಪೇಶ ಬಂದ. ಕ್ರಾಂತಿ ವಿಫಲವಾದರೂ, ಬ್ರಾಹ್ಮಣರ ಮೇಲಿನ ಹೊಟ್ಟೆಕಿಚ್ಚಾಗಲಿ ಅಥವಾ ಬುದ್ಧಿಜೀವಿಯಾಗಬೇಕೆಂಬ ಹಂಬಲವಾಗಲೀ ಕಡಿಮೆಯಾಗಿರಲಿಲ್ಲ. ಬಂದೊಡನೆ,"ಭಟ್ಟರೇ, ಜಕ್ಕಣಿ ಕಾಳ ನಾಯ್ಕರಿಗೆ ಬೇಡದಿದ್ದರೆ ಇಲ್ಲ. ನಂಗೆ ಬೇಕು. ಹಿಡಿದು ಕೊಡಿ. ಇಲ್ನೋಡಿ 3,000 ರೂಪಾಯಿ." ಎಂದ.  ಯಂಕಟುವಿಗೆ ಧರ್ಮ ಸಂಕಟ. ಇಲ್ಲದ ಜಕ್ಕಣಿ ಹಿಡಿದು ಕೊಡುವುದು ಎಲ್ಲಿಂದ. ಬಿಟ್ಟರೆ 3,000 ಕ್ಕೆ ಸಂಚಕಾರ.

ಆದರೆ ವಿರೂಪಾಕ್ಷನ ಶಿಷ್ಯತ್ವ ಪಡೆದ ಮೇಲೆ  ತಪ್ಪಿಸಿಕೊಳ್ಳುವುದು ಹೇಗೆಂದು ಚನ್ನಾಗಿ ಕಲಿತಿದ್ದ. ತಡ ಮಾಡದೆ, "ದೀಪೇಶ, ನಾ ಕಲಿತಿದ್ದು ಜಕ್ಕಣಿ ಓಡಿಸದು ಅಷ್ಟೇ. ಹಿಡಿಯದು ಕಲಿತವರನ್ನ ಹುಡುಕಿ ತರ್ತೇನೆ. ನಾಕು ದಿನ ತಡಿ." ಎಂದುಬಿಟ್ಟ.

ದೀಪೇಶ ಸ್ವಲ್ಪ ಅವಮಾನಿತನಾದರೂ, ತೋರಗೊಡದೆ, 'ನಾಕು ದಿನ ಅಲ್ಲ ಒಂದು ತಿಂಗಳು ತಗಳಿ. ತೊಂದ್ರಿಲ್ಲ. ಆದ್ರೆ ಈಗ ದುಡ್ಡು ತಗ ಹೋಬೊಕು". ಎಂದು ದುಡ್ಡನ್ನು ತುರುಕಿಯೇ ಬಿಟ್ಟ.

ಆ ದುಡ್ಡನ್ನು ಎಣಿಸಿಯೂ ನೋಡದೆ ಯಂಕಟು ತನ್ನ ಗುರು ವಿರೂಪಾಕ್ಷನ ಮನೆ ಕಡೆ ನಡೆದ. ದೀಪೇಶನ ಮುಖದಲ್ಲಿ ಏನೋ ಒಂದು ಭರ್ಜರಿ ತಂತ್ರ ಯಶಸ್ವಿಯಾಗುವ ವಿಶ್ವಾಸ ಇತ್ತು.

ಗುರು ವಿರೂಪಾಕ್ಷನ ಶಿಷ್ಯ ಯಂಕಟು

ಕೆಲವು ಸಲ ಕೆಟ್ಟ ಮನಸ್ಥಿತಿಯಿಂದ ಜನ ಒಳ್ಳೆಯವರಿಗೆ ಕೆಟ್ಟದ್ದು ಮಾಡುವುದಕ್ಕೆ ಮುಂದಾಗಿ ತಾವೇ ಕಷ್ಟಕ್ಕೆ ಸಿಲುಕಿ ಅವಮಾನಗೊಂಡರೂ ಬುದ್ಧಿ ಕಲಿಯುವಿದಿಲ್ಲ. ಇನ್ನು ಕೆಲವರು ತಮಗರಿವಿಲ್ಲದೇ ಇಂಥವರ ಜಾಲದಲ್ಲಿ ಸಿಲುಕಿದರೂ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಹೊಂದಿರುವುದರಿಂದ ತಾತ್ಕಾಲಿಕವಾಗಿ ಕಷ್ಟಪಟ್ಟರೂ ನಂತರ ಒಳ್ಳೆಯದನ್ನೇ ಪಡೆಯುತ್ತಾರೆ.
ವಿರೂಪಾಕ್ಷನ ಪ್ರಕರಣದಲ್ಲಾಗಿದ್ದು ಕೂಡಾ ಇದೇ. ತಾನು ಮೆಣಸಿನ ಹೊಗೆ ಕುಡಿದು ಪಡಿಪಾಟಲು ಪಟ್ಟು ನಗೆಪಾಟಲಾಗುವಂತೆ ಮಾಡಿಕೊಂಡ ಆದರೆ ಕಾಳ ನಾಯ್ಕ, ಅದೇನೋ ದೈವೀ ಕೃಪೆ ಎಂಬಂತೆ ಅಣ್ಣನೊಂದಿಗೆ ರಾಜೀ ಮಾಡಿಕೊಂಡ.
ಮೊದಲೇ ಮೆಣಸಿನ ಹೊಗೆ ಮತ್ತು ಅವಮಾನದಿಂದ ಕೆಂಪಾಗಿದ್ದ ವಿರೂಪಾಕ್ಷ ಈಗ ಸಿಟ್ಟಿನಿಂದ ಮುಖ ಮತ್ತಷ್ಟು ಕೆಂಪು ಮಾಡಿಕೊಂಡ. ಅತ್ತ ಹಳೆ ಶತ್ರು ಕಾಳ ನಾಯ್ಕನ ವಿನಾಶವೂ ಆಗಲಿಲ್ಲ ಇತ್ತ ಹೊಸ ಶತ್ರು ಪರಮ ಭಟ್ಟರ ದಮನವೂ ಆಗಲಿಲ್ಲ. ಆದರೆ ಅಹಂಕಾರ ದುಡ್ಡಿನಾಸೆ ಹೆಚ್ಚಾಗುತ್ತಲೇ ಹೋಯಿತು.

ಇಷ್ಟರಲ್ಲಿ, ವಿಷ್ಣುಭಟ್ಟರ ಮಗ ಯಂಕಟು ಮಂತ್ರ ಕಲಿತದ್ದೂ ಮತ್ತು ಅವನಿಗೆ ಅದರಿಂದಲೇ ದುಡ್ಡು ಮಾಡಿ ಜನ ಆಗುವ ಹಂಬಲ ಇದ್ದದ್ದೂ ತಿಳಿದು ಬಂತು. ಅವನನ್ನು ಭೇಟಿ ಮಾಡಿ, "ತಮ್ಮಾ, ನೀನು ಹಿಂಗೆ ಸಣ್ಣ ಪುಟ್ಟದ್ದು ಮಾಡಿರೆ ಜನ ಆಗ್ತಲ್ಲೆ. ದೊಡ್ಡದು ಮಾಡಕ್ಕು. ಆನು ಎಲ್ಲಾ ಹೇಳ್ತಿ." ಅಂದ.

ಮರುದಿನ ಸರಿಯಾಗಿ ಶುಕ್ರ ಪೂಜಾರಿ ಓಡಿ ಬಂದು ವಿರೂಪಾಕ್ಷಣ ಹತ್ತಿರ ತನ್ನ ಹೊಟ್ಟೆ ನೋಯುತ್ತಿರುವ ಸುದ್ದಿ ಹೇಳಿದ. ಅದಕ್ಕೆ ವಿರೂಪಾಕ್ಷ, "ನಿಮ್ಮನೆ ಹಿತ್ಲಾಗೆ ನಾ ಸಣ್ಣಕಿರ್ತ ಜಕ್ಕಣಿ ಓಡಾಡ್ತಿತ್ತು. ಅದಕ್ಕೆ ಸಿಟ್ಟು ಬಂದಿದೆ. ಯಂಕಟು ಭಟ್ರ ಹತ್ರ ನಾ ಹೇಳಿದೇನೆ ಹೇಳಿ ಪೂಜೆ ಮಾಡಿಸು." ಅಂದ.

ಶುಕ್ರ ಯಂಕಟು ಹತ್ತಿರ ಮಾತಾಡಿ ಪೂಜೆಗೆ ದಿನ(ರಾತ್ರಿ) ನಿಶ್ಚಯಿಸಿ ಸಕಲ ವ್ಯವಸ್ಥೆ ಮಾಡಿದ. ಯಂಕಟು ಅದೇನೋ ಮಂತ್ರ ಮನಮಣಿಸಿ ಪೂಜೆ ಮಾಡಿ ತೀರ್ಥ ಕೊಟ್ಟು ಇನ್ನು ನಲವತ್ತೈದು ದಿನ ಮಾಂಸ ತಿನ್ನದಂತೆ ಮತ್ತು ಹೆಂಡ ಕುಡಿಯದಂತೆ ಆದೇಶ ಇತ್ತ. ಮೀರಿದರೆ ಹೋದ ಜಕ್ಕಣಿ ತಿರುಗಿ ಬರುತ್ತದೆ ಎಂದೂ ಹೇಳಿದ.

ಹೊಟ್ಟೆ ನೋವಿನಿಂದ ಹೈರಾಣಾಗಿದ್ದ ಶುಕ್ರ ಎಲ್ಲವನ್ನೂ ಮಾಡಿದ. ಜಕ್ಕಣಿ ಅವನ ಹೊಟ್ಟೆ ನೋವು ತೆಗೆದುಕೊಂಡು ಹೋಗಿತ್ತು. ಎಲ್ಲರ ಬಾಯಲ್ಲಿ ಯ0ಕಟುವಿನ ಪ್ರಶಂಸೆ ಬಂದಿತ್ತು.ವಿರೂಪಾಕ್ಷನ ಕೃಪೆ. ಈಗ ಯಂಕಟು ಭಟ್ರು ಫುಲ್ ಬಿಜಿ. ಪರಮನ ಅರ್ಧ ಪ್ರಾಯವೂ ಕಲೆಯಾದ ಯಂಕಟು ಫೇಮಸ್ ಆಗಿದ್ದು ನೋಡಿ ವಿರೂಪಾಕ್ಷ ಮೀಸೆಯಡಿಯಲ್ಲೇ ನಕ್ಕಿದ್ದ.

ಇದರ ಹಿಂದಿನ ಅಧ್ಯಾಯಗಳ ಕೊಂಡಿ

https://tenkodu.blogspot.in/2017/07/blog-post.html

https://tenkodu.blogspot.in/2017/07/blog-post_13.html



Thursday, September 14, 2017

ಅಂತ್ಯ ಸಂಸ್ಕಾರ

ಆ ಊರಿನಲ್ಲಿದ್ದ ಇಬ್ರಾಹಿಂ ಸಾಬು ಮಾರುತಿ ಎನ್ನುವ ಮಂಗವೊಂದನ್ನು ಸಾಕಿ ಅದನ್ನು ಆಡಿಸಿ ತನ್ನ ಮತ್ತು ಆ ಮಂಗನ ಹೊಟ್ಟೆ ಹೊರೆದುಕೊಂಡು, ದುಡ್ಡು ಸಾಕಾಗದಿದ್ದರೆ ತನ್ನ ಕೆಟ್ಟ ಬಾಯಿಯಿಂದ ಬ್ರಾಹ್ಮಣರನ್ನು ಮತ್ತು ಹಿಂದುಗಳನ್ನು ಹೆದರಿಸಿ ಬೆದರಿಸಿ ಅಷ್ಟೋ ಇಷ್ಟೊ ಗಿಟ್ಟಿಸಿಕೊಂಡು ತಾನೊಂದು ಸ್ವಲ್ಪ ಕುಡಿದು ತನ ಕೋತಿಗೊಂದಿಷ್ಟು ಕುಡಿಸಿ ತಾನೂ ಮಲಗಿ ತನ್ನ ಕೋತಿಯನ್ನು ಮಲಗಿಸುತ್ತಿದ್ದ.

ಆ ಊರಿನ ಎಷ್ಟೋ ಸಹಜ ಘಟನೆಗಳಂತೆ ಇದೂ ಸಹಜವಾಗಿಯೇ ಇತ್ತು. ಹೀಗಿದ್ದಾಗ ಒಮ್ಮೆಲೇ ಸಾಬಿಯ ಹೃದಯ ಸ್ಥ0ಬಿಸಿ ಉಸಿರು ನಿತ್ತು ಹೋಯಿತು. ಮಂಗ ಮಾತ್ರ ಅವನ ಸಂಗಾತಿಯಾಗಿತ್ತು. ಕೊನೆಹೆ ಅವನ ಜಾತಿಯವರು ಯಾರೂ ಆ ಊರಿನಲ್ಲಿಲ್ಲದ್ದರಿಂದ ಅವನ ಎಣ್ಣೆ ಅಂಗಡಿಯ ಸ್ನೇಹಿತರೆಲ್ಲಾ ಸೇರಿ ಹೆಣ ಹುಗಿದಾಯಿತು.

ಪಾಪ ಆತನ ಕೋತಿ. ಹೊಟ್ಟೆಗೂ ಇಲ್ಲದೆ ಒದ್ದಾಡುವಂತಾಯಿತು. ಊರಿನಲ್ಲಿದ್ದ ಕೆಲವು ಜನ "ಅಯ್ಯೋ ಪಾಪ"!! ಎನ್ನುತ್ತಾ ತಿನ್ನುವುದಕ್ಕೆ ಚೂರೋ ಪಾರೋ ಕೊಟ್ಟು ಕಳಿಸುತ್ತಿದ್ದರು. ಆದರೆ ಎಣ್ಣೆ ಬೇಕಲ್ಲ. ಅದಕ್ಕೆ ಅದೇ ಎಣ್ಣೆ ಅಂಗಡಿಯ ಸ್ನೇಹಿತರ ಮೊರೆ ಹೋಯಿತು. ಅವರೂ ಕೋತಿಯಿಂದ ಅಲ್ಪ ಸ್ವಲ್ಪ ರಂಜನೆ ಪಡೆದು ಎಣ್ಣೆ ಕುಡಿಸುತ್ತಿದ್ದರು. ಆದರೆ ಎಷ್ಟು ದಿನ ಅಂತ ಪುಕ್ಕಟೆ ಕುಡಿಯಲು ಸಾಧ್ಯ. ಒಬ್ಬ ಆ ಕೋತಿಯನ್ನು ಉಪಯೋಗಿಸಿ ಮನೆಕಳ್ಳತನ ಸುಲಭ ಮಾಡಿಕೊಂಡ.

ಒಂದು ದಿನ ಊರಲ್ಲೇ ಮನೆ ಕಟ್ಟಿಸಿ, ದೇಶ ಸೇವೆಗೆಂದು ಸೇನೆಗೆ ಸೇರಿದ್ದ ಸೂರ್ಯನ ತೋಟದ ಮನೆಯಲ್ಲಿ ಕಳ್ಳತನ ಮಾಡುವುದಕ್ಕೆ ಅದನ್ನು ಬಳಸಿದ. ಆದರೆ ಮನೆ ಕಾಯುವ ಆಳು ಅದಕ್ಕೆ ಗುಂಡಿಟ್ಟ. ಏಟು ತಿಂದ ಕೋತಿ ತೋಟದ ಹೊರಗೆ ಬಂದು ಸತ್ತಿತು.

ಎಣ್ಣೆ ಅಂಗಡಿಯ ಗೆಳೆಯರೆಲ್ಲಾ ಒಟ್ಟಾಗಿ ಮನೆ ಆಳು ತಮ್ಮ ಮೇಲಿನ ಹೊಟ್ಟೆ ಕಿಚ್ಚಿಗೇ ಕೋತಿಯನ್ನು ಕೊಂದಿದ್ದು ಎಂದು ಹುಯಿಲೆಬ್ಬಿಸಿ ಕೂಗತೊಡಗಿದರು. ಅಷ್ಟರಲ್ಲಿ ಯಾರೋ "ಮೊದಲು ಆ ಕೋತಿಯ ಹೆಣಕ್ಕೆ ಒಂದು ವ್ಯವಸ್ಥೆ ಮಾಡ್ರೋ ವಾಸನೆ, ರೋಗ ಬಂದ್ರೆ ಕಷ್ಟ" ಅಂದರು.

ಗೆಳೆಯರೆಲ್ಲಾ ಸೇರಿ "ಕೋತಿ ಬಹಳ ಒಳ್ಳೆಯ ಕೋತಿ. ಲೋಕದ ಕೋತಿಗಳೆಲ್ಲ ಹನುಮನ ಅಂಶ ಸಂಭೂತರು. ಅದಕ್ಕೆ ಸರಿಯಾದ ಸಂಸ್ಕಾರ ಆಗಬೇಕು" ಎಂದು ಊರೆಲ್ಲಾ ಓಡಾಡಿ ಚಂದಾ ಎತ್ತಿ ಅದರಲ್ಲಿ ಸ್ವಲ್ಪ ಖರ್ಚು ಮಾಡಿ ಹೆಣ ಹುಗಿದರು. ಉಳಿದ ಹಣದಲ್ಲಿ ಎಂದಿನಂತೆ ಚೈನಿ ಮಾಡಿದರು.

ಆದರೆ ಅವರಂದುಕೊಂಡಿದ್ದು ಆಗಲಿಲ್ಲ. ಮಿಲಿಟರಿ ಮನೆ ಕಳ್ಳತನ ಮಾಡಲಿಲ್ಲ ಎಂದು ಅವರ ಅಹಂಕಾರ ಚುಚ್ಚತೊಡಗಿತು. ತತ್ ಕ್ಷಣ ಅವರ ಸಿಟ್ಟು ಗುಂಡಿಟ್ಟ ಆಳಿನ ಕಡೆ ಹರಿಯಿತು. ಆತ ಹನುಮನ ಅಂಶವಿದ್ದ ಕೋತಿಯನ್ನು ಕೊಂದುಹಾಕಿದ್ದಾನೆ ಆತ ಊರು ಬಿಡಬೇಕು ಎಂದು ಗಲಾಟೆ ಎಬ್ಬಿಸಿದರು. ಆಳು ಮತ್ತು ಆತನ ಒಡೆಯ ಇಬ್ಬರೂ ಗಟ್ಟಿ ಮನಸ್ಕರಾಗಿದ್ದರಿಂದ ಏನೂ ಆಗಲಿಲ್ಲ. ಊರ ಜನ ಕೂಡಾ ಆ ಕೋತಿಯ ಹೊಸ ಮಾಲೀಕನನ್ನು ಪ್ರಶ್ನಿಸಲಿಲ್ಲ.

ವಿ.ಸೂ. ಸದ್ಯ ನಡೆದ ಅಥವಾ ನಡೆಯುತ್ತಿರುವ ಅಥವಾ ಮುಂದಾಗುವ ಯಾವ ಕೊಲೆ ಪ್ರತಿಭಟನೆ ವನ್ಯಜೀವಿ ಹಿಂಸೆ ಇತ್ಯಾದಿಗಳಿಗೂ ಈ ಕಥೆಗೂ ಏನೂ ಸಂಬಂಧವಿಲ್ಲ.

ಗುಂಡೇಟು

ಎಡಚರೆದೆಯ ಸೀಳಿದರೆ ಗುಂಡು,
ನಗರದಲಿ ನೆರೆಯುವುದು ಬಜೀಗಳ ಗಂಜಿ ದಂಡು
ನಗು ಬರ್ತಿದೆ ಹೇಸಿಗೆಯಾಗ್ತಿದೆ ಇವರನು ಕಂಡು
ಹೊಲಸ ಹರಡುವರು ಜನರಿತ್ತ ಭಿಕ್ಷೆ ಯನುಂಡು
ಇನ್ನಾದರೂ ಬಿಡಿ ಗಂಜಿ ಬುಜೀಗಳೇ ನಿಮ್ಮ ಪುಂಡು

Tuesday, September 12, 2017

ಹವಿಂಗ್ಲಿಷ್

ಜಯಲಕ್ಷ್ಮೀ, ನಿಜಕ್ಕೂ ಹೆಸರಿಗೆ ತಕ್ಕಂತೆ ಇದ್ದ ಹುಡುಗಿ. ಕಾರೆಕೊಪ್ಪದ ಶ್ಯಾಮ ಭಟ್ಟ ಮತ್ತು ಸುನಿತಾ ಅವರ ಹಿರಿಯ ಸಂತಾನ. ಹಿರಿಯ ಸಂತಾನ ಅಂತಲೋ ಅಥವಾ ಪರಧನ ಎಂದೋ ಗೊತ್ತಿಲ್ಲ. ಅವಳನ್ನು ತುಸು ಅತಿಯಾದ ಮುದ್ದಿನಿಂದ್ಲೇ ಬೆಳೆಸಿದ್ದು ಅವಳ ದೇಹವನ್ನು ಕೋಮಲವಾಗಿಸಿ ಮನಸ್ಸನ್ನು ಸೂಕ್ಷ್ಮವಾಗಿಸಿ ಗೆಳತಿಯರೆಲ್ಲಾ ಅವಳನ್ನು ಜ್ವರಲಕ್ಷ್ಮಿ ಎಂದು ಹಿಂದಿನಿಂದ ಕರೆಯುವಂತೆ ಮಾಡಿತ್ತು.

ಹೀಗಿದ್ದ ಜಯಲಕ್ಷ್ಮಿ ಸುಖವಾಗಿ ಬದುಕುತ್ತಾ ಕಷ್ಟಪಟ್ಟು ಓದುತ್ತಾ ಎಲ್ಲೂ ಫೇಲಾಗದೆ ಡಿಗ್ರಿ ಮುಗಿಸಿದಳು. ಪ್ರಾಯ ಬಂದ ಮಗಳಿಗೆ ಮದುವೆ ಮಾಡಬೇಕಲ್ಲ. ಗಂಡು ಎಂಥದ್ದಾದರೂ ಆದೀತೆ? ಬೇರೆ ಅವರೆಲ್ಲಾ ಬೆಂಗಳೂರಲ್ಲಿದ್ದ ಹುಡುಗರಿಗೆ ಕೊಟ್ಟಾಗ ತಾನು ಮಗಳನ್ನು ಬೇರೆ ಅವರಿಗೆ ಕೊಟ್ಟರೆ ತನ್ನ ಬೆಲೆ ಏನಾದೀತು. ಸ್ಟಾಪ್ ವೇರ್ ಮಾಣಿಯೇ ಬೇಕು. ಅದಕ್ಕೆ ತಮಗೇನು ತಯಾರಿ ಬೇಕು ಎಂದು ಯೋಚಿಸುವಷ್ಟು ತಲೆ ಭಟ್ಟರಿಗಿಲ್ಲದಿದ್ದರೂ ಭಟ್ಟರ ಹೆಂಡತಿಗಿತ್ತು. ಹೋದಲ್ಲೆಲ್ಲಾ ಕಿವಿ ಉದ್ದ ಮಾಡಿ ತಿಳಿದಿದ್ದು ಏನೆಂದರೆ "ಬೆಂಗಳೂರಿನಲ್ಲಿ ಸ್ಟಾಪ್ ವೇರ್ ನಲ್ಲಿಪ್ಪವಕ್ಕೆ ಬೇರೆ ರಾಜ್ಯದವ್ವು ಎಲ್ಲಾ ಪರಿಚಯ ಇರ್ತ. ಅದಕ್ಕೆ ಇಂಗ್ಲೀಷ್ ಚೊಲೋ ಮಾತಾಡಕ್ಕೆ ಬರದೇ ಇದ್ರೆ ಗ್ರೇಡಿಗೆ ಕಮ್ಮಿ."

ಸುನಿತಾ ತಡ ಮಾಡಲೇ ಇಲ್ಲ. ಮಗಳನ್ನು ಸಿರಸಿಯಲ್ಲೇ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಗೆ ಸೇರಿಸಿ ಇಂಗ್ಲೀಷ್ ಕಲಿಸಿಯೇ ಬಿಟ್ಟಳು. ಮಹಾದೇವನೂ ಕಣ್ಣು ಬಿಟ್ಟ. ಸ್ಟಾಪ್ ವೇರ್ ಅಳಿಯನೇ ಸಿಕ್ಕಿದ. ಆತನ ಟೀಂ ನಲ್ಲಿದ್ದವರೆಲ್ಲಾ ಕನ್ನಡಿಗರೇ ಆಗಿದ್ದರಿಂದ ಪಾಪ ಜಯಲಕ್ಷ್ಮಿಗೆ ಇಂಗ್ಲಿಷ್ ಮಾತಾದುವ ಅವಕಾಶವೇ ಬರಲಿಲ್ಲ. ವರ್ಷ ಒಪ್ಪತ್ತು ಅನ್ನುವಷ್ಟರಲ್ಲಿ ಜಯಲಕ್ಷ್ಮೀ ಸುಂದರ ಗಂಡು ಮಗುವಿನ ತಾಯಿಯಾದಳು. ಮಗು ಹುಟ್ಟಿದ ಘಳಿಗೆಯೋ ಎಂಬಂತೆ ಗಂಡನಿಗೆ ಇಂಗ್ಲೆಂಡಿಗೆ ಆನ್ ಸೈಟ್ ಆಪರ್ಚುನಿಟಿ ಸಿಕ್ಕಿತು. ಸುನಿತಾ ಊರಲ್ಲಿದ್ದ ದೇವಸ್ಥಾನಕ್ಕೆಲ್ಲಾ ಹೋಗಿ, ದೇವರಿಗೆ ಕಾಯಿ ಒಡೆಸಲೋ ಎಂಬಂತೆ, ಊರವರ ಮುಂದೆಲ್ಲಾ "ಅಳಿಯ ಮಗಳು ಫಾರಿನ್ನಿಗೆ ಹೋಪವ್ವಿದ್ದ, ಗೊತ್ತಾಜೋ ನಿಂಗೆ?" ಎಂದು ಟಾಮ್ ಟಾಮ್ ಹೊಡೆದು ತನ್ನ ಬಾಯಿ ತುರಿಕೆ ಕಮ್ಮಿ ಮಾಡಿಕೊಂಡು ಅಹಂಕಾರ ತೃಪ್ತಿ ಪಡಿಸಿಕೊಂಡಳು.


ಇಂಗ್ಲೆಂಡಿಗೆ ಹೋಗಿ ಸ್ವಲ್ಪ ದಿನ ಮಾತ್ರ ಕಳೆದಿತ್ತು. ಮಗು ಒಂದೇ ಸಮನೆ ಅಳತೊಡಗಿತ್ತು. ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರು. ಡಾಕ್ಟರ್, "Yeah tell me What’s the problem" ಎಂದು ಕೇಳಿದಾಗ ಗಂಡ ಏನಾದರೂ ಹೇಳುವ ಮೊದಲೇ ಜಯಲಕ್ಷ್ಮಿ ಬಾಯ್ ಹಾಕಿ, " One hour lost. Nothing eatta nothing drinkta. Gametnoo ille ವೀಪದೊಂದೇ ಆಜು." ( ಒನ್ ಅವರ್ ಲಾಸ್ಟ್. ನಥಿಂಗ್ ಈಟ್ತ ನಥಿಂಗ್ ಡ್ರಿಂಕ್ತ. ಗೇಮ್ತ್ನೂ ಇಲ್ಲೆ. ವೀಪದೊಂದೇ ಆಜು)ಎನ್ನಬೇಕೆ? ಅವಳು ಹೇಳ ಹೊರಟಿದ್ದೇನೆಂದರೆ, "ವಾಂದು ತಾಸ್ ಕಳತ್ತು. ಎಂತೂ ತಿ೦ದಿದಿನಿಲ್ಲೆ ಎಂತೂ ಕುಡದ್ದ್ನಿಲ್ಲೆ. ಆಡಿದ್ನೂ ಇಲ್ಲೆ. ಬರೇ ಅಳದು"