Tuesday, September 19, 2017

ಉತ್ತಂಕ

ಮಹಾಭಾರತದಲ್ಲಿ ಬರುವ ಅನೇಕ ಋಷಿಗಳಲ್ಲಿ ಈತನೂ ಒಬ್ಬ. ಗುರುದಕ್ಷಿಣೆ ಕೇಳಿದಾಗ ಗುರು ವೇದರು ತನ್ನ ಪತ್ನಿಯನ್ನು ಕಾಣುವಂತೆ ತಿಳಿಸುತ್ತಾರೆ. ಆಗ ಆಕೆ,ತನಗೆ ಪೌಷ್ಯ ರಾಜನ ಪತ್ನಿಯ ಕರ್ಣಾಭಾರಣ ತಂದುಕೊಡುವಂತೆ ತಿಳಿಸುತ್ತಾಳೆ.

ಪೌಷ್ಯ ರಾಜನನ್ನು ಉತ್ತಂಕ ಭೆಟ್ಟಿಯಾಗಿ ಗುರು ಪತ್ನಿಯ ಬಯಕೆ ತಿಳಿಸಿದಾಗ ತನ್ನ ಪತ್ನಿಯನ್ನು ಕಾಣಲು ಹೇಳುತ್ತಾನೆ. ಆದರೆ ಉತ್ತಂಕನಿಗೆ ಆಕೆ ಕಾಣದಾದಾಗ, ಪೌಷ್ಯನು ಉತ್ತಂಕನಲ್ಲೇನೋ ಕ್ಶರ್ಮಾನುಷ್ಠಾನ ಲೋಪವಿರಬೇಕೆನ್ನುತ್ತಾನೆ. ಆಗ ಉತ್ತಂಕ ತನ್ನಿಂದಾದ ಆಚಮನ ಲೋಪವನ್ನು ನೆನಪು ಮಾಡಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡು ರಾಣಿಯನ್ನು ನೋಡಬಲ್ಲವನಾಗುತ್ತಾನೆ.
ರಾಣಿಯಲ್ಲಿ ಗುರು ಪತ್ನಿಯ ಬಯಕೆಯನ್ನು ಹೇಳಿದಾಗ, ಆಕೆ ಸಂತೋಷದಿಂದ ಆಭರಣವನ್ನು ಕೊಟ್ಟು, ನಾಗ ರಾಜ ತಕ್ಷಕನು ಈ ಆಭರಣಗಳನ್ನು ಆಸೆ ಪಟ್ಟಿದ್ದರಿಂದ ಎಚ್ಚರದಿಂದಿರುವಂತೆ ಸೂಚಿಸುತ್ತಾಳೆ.

ಮಾರ್ಗ ಮಧ್ಯದಲ್ಲಿ ಸಾಯಂ ಸಂಧ್ಯಾಕಾಲ ಎದುರಾದಾಗ ಉತ್ತಂಕ, ಆಹ್ನೀಕಕ್ಕೆ ತೆರಳುವಾಗ ತನ್ನ ವಸ್ತುಗಳನ್ನು ತಗೆದಿರಿಸುತ್ತಾನೆ. ಸಮಯ ಸಾಧಿಸಿ ತಕ್ಷಕ ಆಭರಣವನ್ನು ಅಪಹರಿಸಿ ನಾಗಲೋಕ ಸೇರಿದ.

ಕ್ರುದ್ಧನಾದ ಉತ್ತಂಕ, ಮುತ್ತುಗದ ಮರದ ಕೋಲಿನಿಂದ ಹುತ್ತ ಅಗೆಯತೊಡಗಿದ. ಉತ್ತಂಕನ ಮೇಲೆ ಕರುಣೆ ತಾಳಿ ಇಂದ್ರ ತನ್ನ ವಜ್ರಾಯುಧದ ಶಕ್ತಿಯನ್ನು ಕೋಲಿಗೆ ಸಂಸ್ಥಾಪಿಸಿದ.

ನಾಗಲೋಕವನ್ನು ಸೇರಿದ ಉತ್ತಂಕ ಸರ್ಪಗಳನ್ನು ಪರಿಪರಿಯಾಗಿ ಸ್ತುತಿಸಿ ವಿಷಬಾಧೆಯಿಂದ ಪಾರಾದರೂ ಆಭರಣಗಳು ದೊರಕುವುದಿಲ್ಲ. ಆಗ ಇಂದ್ರನನ್ನು ಪ್ರಾರ್ಥಿಸಿದ. ಇಂದ್ರ ಅಗ್ನಿಯನ್ನು ಅಶ್ವ ರೂಪದಲ್ಲಿ ಪಾತಾಳಕ್ಕೆ ಕರೆತಂದು, ಉತ್ತಂಕನಿಗೆ ಅದರ ಪೃಷ್ಠವನ್ನು ಊದಲು ಹೇಳಿದ. ಇದನ್ನು ಆಚರಿಸಿದಾಗ, ನಾಗಲೋಕವೆಲ್ಲಾ ಅಗ್ನಿ ಜ್ವಾಲೆ ವ್ಯಾಪಿಸಿತು. ಬೆದರಿದ ತಕ್ಷಕ ಆಭರಣಗಳನ್ನು ತಂದೊಪ್ಪಿಸಿ ಶರಣಾದ. ಉತ್ತಂಕನ ಗುರುಭಕ್ತಿಗೆ ಮೆಚ್ಚಿದ ಇಂದ್ರ ಸರ್ಪಗಳೆಲ್ಲಾ ಆತನ ಅಂಕೆಯಲ್ಲಿರುವಂತೆ ವರ ಅನುಗ್ರಹಿಸಿದ.

ಉತ್ತಂಕ ನಂತರದಲ್ಲಿ ಆಭರಣಗಳನ್ನು ಗುರು ಪತ್ನಿಗೆ ಒಪ್ಪಿಸಿದ.

ಮನುಷ್ಯ, ಸ್ವಪ್ರಯತ್ನದಿಂದ ಸತ್ಕಾರ್ಯವನ್ನು ಮಾಡಲು ಹೊರಟಾಗ ದೈವ ತಾನೇ ಬಲಕ್ಕೆ ನಿಲ್ಲುತ್ತದೆ ಎನ್ನುವುದಕ್ಕೆ ಉತ್ತಂಕನ ಪ್ರಕರಣವೇ ಸಾಕ್ಷಿ. ಅಲ್ಲವಾದರೆ ಮುತ್ತುಗದ ಕೋಲಿನಿಂದ ಹುತ್ತವನ್ನಗೆದು ಪಾತಾಳ ಸೇರುವುದು ಸಾಧ್ಯವಲ್ಲ. ಗುರುಭಕ್ತಿ, ಗುರುಕೃಪೆ ಇದ್ದಾಗ ಸತ್ಕಾರ್ಯಗಳತ್ತ ನಿಷ್ಕಳಂಕ ಸಮರ್ಪಣಾಭಾವ ಮೂಡುತ್ತದೆ. ಗುರುವಿನ ಆಶೀರ್ವಾದವೇ ಅದನ್ನು ಸಾಗಿಸಲು ದೈವಬಲ ಒದಗಿಸುತ್ತದೆ. ಸ್ವಪ್ರಯತ್ನ, ಸತ್ಪ್ರಯತ್ನವಾಗಿ, ಸಫಲವಾಗುತ್ತದೆ.

No comments:

Post a Comment