Monday, September 18, 2017

ಗುರು ವಿರೂಪಾಕ್ಷನ ಶಿಷ್ಯ ಯಂಕಟು

ಕೆಲವು ಸಲ ಕೆಟ್ಟ ಮನಸ್ಥಿತಿಯಿಂದ ಜನ ಒಳ್ಳೆಯವರಿಗೆ ಕೆಟ್ಟದ್ದು ಮಾಡುವುದಕ್ಕೆ ಮುಂದಾಗಿ ತಾವೇ ಕಷ್ಟಕ್ಕೆ ಸಿಲುಕಿ ಅವಮಾನಗೊಂಡರೂ ಬುದ್ಧಿ ಕಲಿಯುವಿದಿಲ್ಲ. ಇನ್ನು ಕೆಲವರು ತಮಗರಿವಿಲ್ಲದೇ ಇಂಥವರ ಜಾಲದಲ್ಲಿ ಸಿಲುಕಿದರೂ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಹೊಂದಿರುವುದರಿಂದ ತಾತ್ಕಾಲಿಕವಾಗಿ ಕಷ್ಟಪಟ್ಟರೂ ನಂತರ ಒಳ್ಳೆಯದನ್ನೇ ಪಡೆಯುತ್ತಾರೆ.
ವಿರೂಪಾಕ್ಷನ ಪ್ರಕರಣದಲ್ಲಾಗಿದ್ದು ಕೂಡಾ ಇದೇ. ತಾನು ಮೆಣಸಿನ ಹೊಗೆ ಕುಡಿದು ಪಡಿಪಾಟಲು ಪಟ್ಟು ನಗೆಪಾಟಲಾಗುವಂತೆ ಮಾಡಿಕೊಂಡ ಆದರೆ ಕಾಳ ನಾಯ್ಕ, ಅದೇನೋ ದೈವೀ ಕೃಪೆ ಎಂಬಂತೆ ಅಣ್ಣನೊಂದಿಗೆ ರಾಜೀ ಮಾಡಿಕೊಂಡ.
ಮೊದಲೇ ಮೆಣಸಿನ ಹೊಗೆ ಮತ್ತು ಅವಮಾನದಿಂದ ಕೆಂಪಾಗಿದ್ದ ವಿರೂಪಾಕ್ಷ ಈಗ ಸಿಟ್ಟಿನಿಂದ ಮುಖ ಮತ್ತಷ್ಟು ಕೆಂಪು ಮಾಡಿಕೊಂಡ. ಅತ್ತ ಹಳೆ ಶತ್ರು ಕಾಳ ನಾಯ್ಕನ ವಿನಾಶವೂ ಆಗಲಿಲ್ಲ ಇತ್ತ ಹೊಸ ಶತ್ರು ಪರಮ ಭಟ್ಟರ ದಮನವೂ ಆಗಲಿಲ್ಲ. ಆದರೆ ಅಹಂಕಾರ ದುಡ್ಡಿನಾಸೆ ಹೆಚ್ಚಾಗುತ್ತಲೇ ಹೋಯಿತು.

ಇಷ್ಟರಲ್ಲಿ, ವಿಷ್ಣುಭಟ್ಟರ ಮಗ ಯಂಕಟು ಮಂತ್ರ ಕಲಿತದ್ದೂ ಮತ್ತು ಅವನಿಗೆ ಅದರಿಂದಲೇ ದುಡ್ಡು ಮಾಡಿ ಜನ ಆಗುವ ಹಂಬಲ ಇದ್ದದ್ದೂ ತಿಳಿದು ಬಂತು. ಅವನನ್ನು ಭೇಟಿ ಮಾಡಿ, "ತಮ್ಮಾ, ನೀನು ಹಿಂಗೆ ಸಣ್ಣ ಪುಟ್ಟದ್ದು ಮಾಡಿರೆ ಜನ ಆಗ್ತಲ್ಲೆ. ದೊಡ್ಡದು ಮಾಡಕ್ಕು. ಆನು ಎಲ್ಲಾ ಹೇಳ್ತಿ." ಅಂದ.

ಮರುದಿನ ಸರಿಯಾಗಿ ಶುಕ್ರ ಪೂಜಾರಿ ಓಡಿ ಬಂದು ವಿರೂಪಾಕ್ಷಣ ಹತ್ತಿರ ತನ್ನ ಹೊಟ್ಟೆ ನೋಯುತ್ತಿರುವ ಸುದ್ದಿ ಹೇಳಿದ. ಅದಕ್ಕೆ ವಿರೂಪಾಕ್ಷ, "ನಿಮ್ಮನೆ ಹಿತ್ಲಾಗೆ ನಾ ಸಣ್ಣಕಿರ್ತ ಜಕ್ಕಣಿ ಓಡಾಡ್ತಿತ್ತು. ಅದಕ್ಕೆ ಸಿಟ್ಟು ಬಂದಿದೆ. ಯಂಕಟು ಭಟ್ರ ಹತ್ರ ನಾ ಹೇಳಿದೇನೆ ಹೇಳಿ ಪೂಜೆ ಮಾಡಿಸು." ಅಂದ.

ಶುಕ್ರ ಯಂಕಟು ಹತ್ತಿರ ಮಾತಾಡಿ ಪೂಜೆಗೆ ದಿನ(ರಾತ್ರಿ) ನಿಶ್ಚಯಿಸಿ ಸಕಲ ವ್ಯವಸ್ಥೆ ಮಾಡಿದ. ಯಂಕಟು ಅದೇನೋ ಮಂತ್ರ ಮನಮಣಿಸಿ ಪೂಜೆ ಮಾಡಿ ತೀರ್ಥ ಕೊಟ್ಟು ಇನ್ನು ನಲವತ್ತೈದು ದಿನ ಮಾಂಸ ತಿನ್ನದಂತೆ ಮತ್ತು ಹೆಂಡ ಕುಡಿಯದಂತೆ ಆದೇಶ ಇತ್ತ. ಮೀರಿದರೆ ಹೋದ ಜಕ್ಕಣಿ ತಿರುಗಿ ಬರುತ್ತದೆ ಎಂದೂ ಹೇಳಿದ.

ಹೊಟ್ಟೆ ನೋವಿನಿಂದ ಹೈರಾಣಾಗಿದ್ದ ಶುಕ್ರ ಎಲ್ಲವನ್ನೂ ಮಾಡಿದ. ಜಕ್ಕಣಿ ಅವನ ಹೊಟ್ಟೆ ನೋವು ತೆಗೆದುಕೊಂಡು ಹೋಗಿತ್ತು. ಎಲ್ಲರ ಬಾಯಲ್ಲಿ ಯ0ಕಟುವಿನ ಪ್ರಶಂಸೆ ಬಂದಿತ್ತು.ವಿರೂಪಾಕ್ಷನ ಕೃಪೆ. ಈಗ ಯಂಕಟು ಭಟ್ರು ಫುಲ್ ಬಿಜಿ. ಪರಮನ ಅರ್ಧ ಪ್ರಾಯವೂ ಕಲೆಯಾದ ಯಂಕಟು ಫೇಮಸ್ ಆಗಿದ್ದು ನೋಡಿ ವಿರೂಪಾಕ್ಷ ಮೀಸೆಯಡಿಯಲ್ಲೇ ನಕ್ಕಿದ್ದ.

ಇದರ ಹಿಂದಿನ ಅಧ್ಯಾಯಗಳ ಕೊಂಡಿ

https://tenkodu.blogspot.in/2017/07/blog-post.html

https://tenkodu.blogspot.in/2017/07/blog-post_13.html



No comments:

Post a Comment