Tuesday, September 19, 2017

ಸತ್ತ ಕೇಡುಗನ ಉತ್ಸವ

ಸತ್ತ ಕೋತಿಯನ್ನು ಸುಟ್ಟು ಬಂದ ಬೆಂಕಿ ಆರುವ ಮೊದಲೇ ಸೂರ್ಯನ ಮನೆಯ ಆಳಿನ ಮೇಲೆ ಉರಿ ಕಾರತೊಡಗಿದ್ದ ಹೆಂಡದಂಗಡಿಯ ಗುಂಪು ಬಾಯಿ ಮುಚ್ಚಿದ್ದರೂ ಸುಮ್ಮನಿರಲಿಲ್ಲ.ಸೂರ್ಯನ ಮೇಲೆ ಮತ್ತು ಅವನ ಆಳಿನ ಮೇಲೆ ಭರಪೂರ ಕೋಪ ಇದ್ದೆ ಇತ್ತು. ಮೇಲಿನಿಂದ ತಮ್ಮ ಪರ ವಹಿಸದ ಊರ ಜನರ ಮೇಲೂ ಸಹ.

ಏನು ಮಾಡುವುದು ಎಂಬ ನಿತ್ಯ ಚರ್ಚೆಯಲ್ಲಿ ಹೆಂಡದಂಗಡಿಗೆ ವ್ಯಾಪಾರ ಸ್ವಲ್ಪ ಜಾಸ್ತಿ ಆಯಿತು. ಊರಲ್ಲಿ ಕುಡಿದ ಅಮಲಿನಲ್ಲಿ ಹಲುಬುವುದೂ ಹೆಚ್ಚಾಯಿತು.

ಸೋಮಾರಿತನವೇ ವೃತ್ತಿ, ಅದರ ಬೇಸರ ಕಳೆಯಲು ಕಳ್ಳತನ ಪ್ರವೃತ್ತಿಯಾಗಿದ್ದ ಇವರ ಪಾಡು ಅಯ್ಯೋ ಪಾಪ. ಗ್ರಹಚಾರ ಎಂದರೆ ಇದನ್ನು ಹೇಳುವುದಕ್ಕೂ ಯಾರೂ ಇಲ್ಲದ್ದು.

ಹೀಗಿರುವಾಗ ಊರಲ್ಲಿದ್ದ ಪಿಂಪ್ ಅರ್ಥಾತ್ ತಲೆ ಹಿಡುಕ ಕೋಣಪ್ಪನ ಹೆಣ ನದಿಯಲ್ಲಿ ಬಿತ್ತು. ಆಗಿದ್ದೇನೆಂದರೆ ದಿನಾ ಕಾಲೇಜಿಗೆ ಹೋಗುವ ಹುಡುಗಿಯೊಬ್ಬಳನ್ನು ಈತ ಕಾಡುತ್ತಿದ್ದ. ಶ್ರೀಮಂತೆಯಾಗಿದ್ದ ಆ ಹುಡುಗಿ ತನ್ನ ಕಾರನ್ನು ಈತ ಅಮಲಿನಲ್ಲಿದ್ದಾಗ ಹಿಂದಿನಿಂದ ಕುತ್ತಿದ್ದಳು. ಸತ್ತದ್ದು ದುಷ್ಟ ಪಿಂಡವಾಗಿದ್ದರಿಂದ ಪೊಲೀಸರೂ ಕೇಸ್ ಹಾಕಲಿಲ್ಲ. ಸಾಕ್ಷಿ ಪುರಾವೆ ಅವಶ್ಯಕತೆಯೂ ಬೀಳಲಿಲ್ಲ.

ಈಗ ಹೆಂಡದಂಗಡಿಯ ಮಿತ್ರ ಮಂಡಳಿ ಜಾಗೃತವಾಯಿತು. ಊರಲ್ಲಿ ತಮ್ಮ ಪಾಡಿಗೆಂಬಂತೆ ಎಲ್ಲರೊಡನೆ ಹೊಂದಿಕೊಂಡಿದ್ದ ಜಾತಿಯವರಲ್ಲಿ ಹೋಗಿ, "ಕೋಣಪ್ಪ ನಿಮ್ಮ ಜಾತಿಯವನು. ನೀವು ಅವನ ಸಾವಿಗೆ ಸುಮ್ಮನಿರುವುದು ಸರಿಯಲ್ಲ. ಏನಾದರೂ ಮಾಡಿ." ಎಂದು ಪೀಡಿಸತೊಡಗಿದವು.

ಕೋಣಪ್ಪನ ಜಾತಿಯ ಕೆಲವು ಹುಡುಗರಿಗೆ ಬಾಡೂಟ ಬೇಕಾಗಿತ್ತು, ಇನ್ನು ಕೆಲ ವಯಸ್ಸಾದವರಿಗೆ ದಯ್ಯದ ಭಯ ಇತ್ತು. ಒಟ್ಟಿನಲ್ಲಿ ಬೇವರ್ಸಿ ಕೋಣಪ್ಪನಿಗೆ ತಿಥಿ ಆಯಿತು. ಇಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಅವನ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನಡೆಯಿತು.

ಈಗ ಹೆಂಡದಂಗಡಿಯ ಮಿತ್ರ ಮಂಡಳಿ ಅವನ ಹೆಸರಲ್ಲಿ ಉತ್ಸವ ಆಚರಿಸಿ, ಕ್ಯಾಬರೆ ನೋಡಲು ಕಾಯುತ್ತಿದೆ.

ವಿ.ಸೂ ಈ ಬರಹ ಇತ್ತೀಚೆಗೆ ಆಚರಿಸಬೇಕು ಎಂದುಕೊಂಡಿರುವ ಯಾವುದೇ ಉತ್ಸವಕ್ಕೂ ಸಂಬಂಧಿಸಿದ್ದಲ್ಲ.

No comments:

Post a Comment