Monday, September 18, 2017

ಜಕ್ಕಣಿ ತಂದ ಫಜೀತಿ

ಯಂಕಟು ಹೀಗೆ ಊರೆಲ್ಲಾ ಜಕ್ಕಣಿ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಸ್ವಲ್ಪ ಚನ್ನಾಗಿಯೇ ಕಾಸು ಮಾಡಿದ. ಯಂಕಟು ಮಾಣಿ ಎಂದಿದ್ದವರೆಲ್ಲಾ ಯಂಕಟು ಭಟ್ರು ಎಂದು ಕರೆಯುತ್ತಿದ್ದರು. ಇದನ್ನು ಕೇಳಿ ಆತನೂ ಸಂತೋಷಿಸುತ್ತಿದ್ದ. ಇದಕ್ಕೆಲ್ಲಾ ಕಾರಣನಾದ ವಿರೂಪಕ್ಷನ ಕಡೆ ಅಪರಿಮಿತ ಗುರು ಭಕ್ತಿ ಮತ್ತು ಭಯ ಮಿಶ್ರಿತ ಕೃತಜ್ಞತೆ ಇಟ್ಟುಕೊಂಡು ಅಲ್ಲಲ್ಲಿ ಭೂತೋಚ್ಚಾಟನೆ, ದಿಗ್ಬಂಧನ ಇತ್ಯಾದಿಗಳನ್ನು ಮಾಡುತ್ತಿದ್ದ. ಚೋರ ಗುರುವಿನ ಚಾಂಡಾಲ ಶಿಷ್ಯ ಎಂಬಂತೆ ಮಿತಿಮೀರಿದ ಧನದಾಸೆ ಮತ್ತು ಧನ ಗರ್ವ ಎರಡೂ ಬೆಳೆಸಿಕೊಂಡಿದ್ದ.

ವಿರೂಪಾಕ್ಷ ಇಷ್ಟೆಲ್ಲಾ ಮಾಡಿದ್ದು ಪೂರ್ವ ತಯಾರಿ ಆಗಿತ್ತು ಅಷ್ಟೇ. ಅವನ ನಿಜವಾದ ಗುರಿ ಯಂಕಟು ಬೆಳೆಯುವುದಾಗಲೀ ಅಥವಾ ಯಾರದ್ದೋ ಮನೆ ಉದ್ಧಾರವಾಗಲೀ ಆಗಿರದೆ, ಪರಮ ಭಟ್ಟರು ಮತ್ತು ಬೀರ ನಾಯ್ಕನ ಮೇಲೆ ಸೇಡು ತೀರಿಸಿಕೊಳ್ಳುವುದೇ ಆಗಿತ್ತು. ತಕ್ಕ ಸಮಯ ಕಾಯುತ್ತಿದ್ದ ಅಷ್ಟೇ.

ಇದಾಗುತ್ತಿರುವಾಗ ಒಂದು ದಿನ ಕಾಳ ನಾಯ್ಕ ಬಂದು ಅದೂ ಇದೂ ಮಾತಾಡುತ್ತಾ ತನ್ನ ಮನೆ ಗದ್ದೆಗೆ ಹಂದಿ ಕಾಟವೆಂದೂ ಅದನ್ನು ತದೇವಲ್ಲಿ ತಾನು ಸೋತು ಹೊದೆನೆಂದೂ ಹಾಲುಬಿದ. ವಿರೂಪಾಕ್ಷನ ಕರ್ಣಗಳು ಇದನ್ನು ಕೇಳುತ್ತಿದ್ದಂತೆ ಅವನೊಳಗಿನ ಪಿಶಾಚಿ ಪೂರ್ತಿ ಜಾಗೃತವಾಯಿತು.

"ಅಲ್ಲೋ ಕಾಳ, ಹಂದಿ ಹೊಡೆಯಕ್ಕಾಗ್ಲ ಅಂದ್ರೆ ಭಾರಿ ಕಾಟವೇ ಆತಲೋ. ನಿನ್ನ ಗುರಿ ಭಾಳ ಚನಾಗಿದೆ. ಇದು ಮತ್ತೆಂತಲ್ಲ. ಅವತ್ತು ಪರಮ ಭಟ್ರು ಓಡಿಸಿದ್ದ ಭೂತದ ಅಣ್ಣನೋ ತಮ್ಮನೊ ಹಂದಿಯಾಗಿ ಬಂದು ಕಾಟ ಕೊಡ್ತಾ ಇದಾರೆ. ಇಂಥದ್ದಕ್ಕೆಲ್ಲ ಪರಮ ಭಟ್ರು ಸಾಕಾಗದಿಲ್ಲ. ಅವ್ರು ಒಳ್ಳೆ ಜನ. ಪಾಪದವ್ರು. ಸ್ವಲ್ಪ ಜೋರಿನ ಭಟ್ಟರೇ ಬೇಕು. ಒಂದು ಸಾರಿ ಯಂಕಟು ಭಟ್ರ ಹತ್ರ ಮಾತಾಡು." ಎಂದ.

ಮಾತನ್ನು ತಲೆಯಲ್ಲಿ ಹೊತ್ತ ಕಾಳ ಯಂಕಟುವನ್ನು ಕಂಡ. ಯಂಕಟು ಕೂಡಾ ಒಪ್ಪಿದ. ಆದರೆ, ವಿಫಲ ಕ್ರಾಂತಿಕಾರಿ ದೀಪೇಶ ಇದನ್ನು ತಿಳಿದು ಮತ್ತೊಂದು ಕ್ರಾಂತಿಗೆ ಮಾನಸಿಕವಾಗಿ ಸಿದ್ಧನಾದ.

ನಿಶ್ಚಯಿಸಿದ ರಾತ್ರಿ ಬರಬ್ಬರಿ ಹೋಮ ಮಾಡಿಸಿ ಯಂಕಟು ಇನ್ನೇನು ಹೊರಡಬೇಕು ಎಂದುಕೊಂಡಾಗ, ವಿಫಲ ಕ್ರಾಂತಿಕಾರಿ ದೀಪೇಶ ಬಂದ. ಕ್ರಾಂತಿ ವಿಫಲವಾದರೂ, ಬ್ರಾಹ್ಮಣರ ಮೇಲಿನ ಹೊಟ್ಟೆಕಿಚ್ಚಾಗಲಿ ಅಥವಾ ಬುದ್ಧಿಜೀವಿಯಾಗಬೇಕೆಂಬ ಹಂಬಲವಾಗಲೀ ಕಡಿಮೆಯಾಗಿರಲಿಲ್ಲ. ಬಂದೊಡನೆ,"ಭಟ್ಟರೇ, ಜಕ್ಕಣಿ ಕಾಳ ನಾಯ್ಕರಿಗೆ ಬೇಡದಿದ್ದರೆ ಇಲ್ಲ. ನಂಗೆ ಬೇಕು. ಹಿಡಿದು ಕೊಡಿ. ಇಲ್ನೋಡಿ 3,000 ರೂಪಾಯಿ." ಎಂದ.  ಯಂಕಟುವಿಗೆ ಧರ್ಮ ಸಂಕಟ. ಇಲ್ಲದ ಜಕ್ಕಣಿ ಹಿಡಿದು ಕೊಡುವುದು ಎಲ್ಲಿಂದ. ಬಿಟ್ಟರೆ 3,000 ಕ್ಕೆ ಸಂಚಕಾರ.

ಆದರೆ ವಿರೂಪಾಕ್ಷನ ಶಿಷ್ಯತ್ವ ಪಡೆದ ಮೇಲೆ  ತಪ್ಪಿಸಿಕೊಳ್ಳುವುದು ಹೇಗೆಂದು ಚನ್ನಾಗಿ ಕಲಿತಿದ್ದ. ತಡ ಮಾಡದೆ, "ದೀಪೇಶ, ನಾ ಕಲಿತಿದ್ದು ಜಕ್ಕಣಿ ಓಡಿಸದು ಅಷ್ಟೇ. ಹಿಡಿಯದು ಕಲಿತವರನ್ನ ಹುಡುಕಿ ತರ್ತೇನೆ. ನಾಕು ದಿನ ತಡಿ." ಎಂದುಬಿಟ್ಟ.

ದೀಪೇಶ ಸ್ವಲ್ಪ ಅವಮಾನಿತನಾದರೂ, ತೋರಗೊಡದೆ, 'ನಾಕು ದಿನ ಅಲ್ಲ ಒಂದು ತಿಂಗಳು ತಗಳಿ. ತೊಂದ್ರಿಲ್ಲ. ಆದ್ರೆ ಈಗ ದುಡ್ಡು ತಗ ಹೋಬೊಕು". ಎಂದು ದುಡ್ಡನ್ನು ತುರುಕಿಯೇ ಬಿಟ್ಟ.

ಆ ದುಡ್ಡನ್ನು ಎಣಿಸಿಯೂ ನೋಡದೆ ಯಂಕಟು ತನ್ನ ಗುರು ವಿರೂಪಾಕ್ಷನ ಮನೆ ಕಡೆ ನಡೆದ. ದೀಪೇಶನ ಮುಖದಲ್ಲಿ ಏನೋ ಒಂದು ಭರ್ಜರಿ ತಂತ್ರ ಯಶಸ್ವಿಯಾಗುವ ವಿಶ್ವಾಸ ಇತ್ತು.

No comments:

Post a Comment