Friday, September 22, 2017

ಜಕ್ಕಣಿ ಹಿಡಿದರು

ದೀಪೇಶ ಕೊಟ್ಟ ದುಡ್ಡನ್ನು ಜೇಬಿನಲ್ಲಿ ಮತ್ತು ಅವನ ಸವಾಲನ್ನು ತಲೆಯಲ್ಲಿಟ್ಟುಕೊಂಡು ತನ್ನ ಚೋರಗುರುವಿನ ಬಳಿ ದೌಡಾಯಿಸಿದ ಯಂಕಟು.

ವಿಷಯ ಕೇಳಿ ವಿರೂಪಾಕ್ಷ ಹಿರಿ ಹಿರಿ ಹಿಗ್ಗಿದ. ತನಗೆ ಮೆಣಸಿನ ಹೊಗೆ ಇಟ್ಟ ಪರಮ ಭಟ್ಟರ ತೇಜೋವಧೆಗೆ ಸಕಾಲ ಕೂಡಿ ಬಂದಿದ್ದು ಅವನಿಗೆ ವರ್ಣಿಸಲಸದಳ ಸಂತೋಷ ಕೊಟ್ಟಿತ್ತು. ಯಕ್ಷಗಾನದ ಕೌರವನಂತೆ ಮತ್ತಧಿಕ ಸಂತೋಷದುಬ್ಬಿನಲ್ಲಿ ತನ್ನವರ ಕರೆಯುವ ಮನ ಹೊಂದಿದ್ದ.

ಆದರೆ ಕಾರ್ಯ ಮುಖ್ಯ. ತನ್ನ ಶಿಷ್ಯನನ್ನು ಕರೆದುಕೊಂಡು ಪರಮನ ಬಳಿ ಬಂದು ಮುಖ ಸಣ್ಣ ಮಾಡಿ ನಿಂತ. ಪರಮ ಭಟ್ಟರು ವಿಚಾರಿಸಿದಾಗ ಎಲ್ಲವನ್ನೂ ವಿವರಿಸಿದ. ಪರಮ ಭಟ್ಟರು ನಸು ನಗುತ್ತಾ,"ಆನು ನೋಡಕ್ಯತ್ತಿ" ಎಂದರು.

ನಿಗದಿಯಾದ ದಿನದಂದು ಕಾಳ ನಾಯ್ಕನ ಮನೆಗೆ ಬಂದರು, ಯಂಕಟುವನ್ನೂ ಕರೆದುಕೊಂಡು. ಯಂಕಟುವಿಗೂ ತಿಳಿಯದ ವಿಚಾರ, ಭಟ್ಟರು ಒಂದು ಚೀಲ ನಿಂಬೆ ಹಣ್ಣನ್ನು ಏಕೆ ತಂದರು ಎನ್ನುವುದು.

ಭಟ್ಟರು, ಯಂಕಟುವಿನ ಹತ್ತಿರ, ಹೋಮ ಕುಂಡಕ್ಕೆ ಸುಮ್ಮನೆ ತುಪ್ಪ ಹೊಯ್ಯುತ್ತಾ ಮನಸ್ಸಿನಲ್ಲಿ ರಾಮ ರಾಮ ಎನ್ನುತ್ತಿರುವಂತೆ ತಿಳಿಸಿದರು.
ಸ್ವಲ್ಪ ಹೊತ್ತಾದ ಮೇಲೆ ನಿಂಬೆ ಹಣ್ಣನ್ನು ಕೈನಲ್ಲಿ ಹಿಡಿದು ಏನೋ ಮಂತ್ರ ಮನಮಣಿಸಿ, " ಜಕ್ಕಣಿ ಬಾ" ಎನ್ನುತ್ತಾ ನೀರಿಗೆಸೆದರು. ಹೀಗೆ ಹತ್ತು ಹದಿನೈದು ನಿಂಬೆ ಹಣ್ಣುಗಳು ನೀರಿಗೆ ಬಿದ್ದು ತೇಲುತ್ತಿದ್ದವು. ಮತ್ತೂ ಒಂದು ನಿಂಬೆ ಹಣ್ಣನ್ನು "ಜಕ್ಕಣೀ.... ಬಾ......." ಎಂದು ಏರು ಸ್ವರದಲ್ಲಿ ಅರಚುತ್ತಾ ನೀರಿಗೆ ಎಸೆದರು, ಅದು ಮುಳುಗಿತು.

ಪಕ್ಕದಲ್ಲೇ ಇದ್ದ ಯಂಕಟುವನ್ನು ಕರೆದು, "ಸಾಕು ಹವಿಸ್ಸು ಹಾಕಿದ್ದು. ಚೀಲದ ಎಲ್ಲಾ ನಿಂಬೆ ಹಣ್ಣು ಹೋಮಕ್ಕೆ ಹಾಕಿ ಬಾ. ಜಕ್ಕಣಿ ಬಂದಾತು. ಹಿಡ್ಕ ಅದನ್ನ. ಓ ಆ ಕೆಂಪು ಬಟ್ಟೆ ತಗ..." ಎಂದ. ಯಂಕಟು ಕೆಂಪು ಬಟ್ಟೆ ತಂದು ಕೊಟ್ಟ. ಪರಮ ಭಟ್ಟರು ಮುಳುಗಿದ್ದ ನಿಂಬೆ ಹಣ್ಣನ್ನು ಬಟ್ಟೆಯೊಳಗಿಟ್ಟು ಧರ್ಭೆಯಿಂದ ಒಂದು ಕಟ್ಟು ಹಾಕಿ  ಏನೋ ಮಂತ್ರ ಮನಮಣಿಸಿದರು.

ಅರ್ಧ ಬುದ್ಧಿ ಜೀವಿಯಾಗಿದ್ದ ದೀಪೇಶ ಪ್ರಶ್ನಿಸಿಸುವುದನ್ನು ಸ್ವಲ್ಪ ಕಲಿತಿದ್ದ. "ಇದರಾಗೆ ಜಕ್ಕಣಿ ಐತೆ ಅಂತ ನಾ ಹೆಂಗೆ ನಂಬೋಕು" ಎಂದು ಭಟ್ಟರನ್ನು ಪ್ರಶ್ನಿಸಿದ. ಭಟ್ಟರು, "ತಮಾ, ಇದೊಂದೇ ನಿಂಬೆ ಹಣ್ಣು ಮುಳುಗಿದ್ದು. ತೂಕ ಜಕ್ಕಣಿ ಒಳಗೆ ಬರದೆ ಬಂತಾ?" ಎಂದರು. ಪ್ರಶ್ನೆಗೆ ಉತ್ತರಿಸಲಾಗದ ದೀಪೇಶ,'ಸೈನ್ಸ್ ಕಷ್ಟಾಕಾವೆ, ಆಲ್ಟ್ಸ್ ಒಳ್ಳೇದು. ಲಾಯರ್ ಆಬೈದು' ಎಂದು ತನಗೆ ಉಪದೇಶ ಕೊಟ್ಟವ ಯಾರು ಎಂದು ನೆನಪು ಮಾಡಿಕೊಳ್ಳಲು ನೋಡಿದ. ನೆನಪಾಗಲಿಲ್ಲ. ಅಷ್ಟರಲ್ಲಿ ಪರಮ ಭಟ್ಟರು ದೀಪೇಶನನ್ನು ಕರೆದು, " ತಗ ತಮ, ಜಕ್ಕಣಿ ಹಿಡಿದಾತು. ಅದು ಈ ನಿಂಬೆ ಹಣ್ಣೊಳಗಿದೆ. ನಿಂಗೆ ಬೇಕೇ ಬೇಕು ಅಂದ್ರೆ ಮೂರ್ತಿಗೆ ಹಾಕಿ ಕೊಡ್ತೇನೆ. ಆದ್ರೆ ದಿನಾ ಮೂರು ಕೊಳಗ ಅನ್ನ ನೈವೇದ್ಯ ಮಾಡಬೇಕು. ಇಲ್ದಿದ್ರೆ ಮನೆ ಹಾಳು ಮಾಡ್ತದೆ" ಎಂದ.

ತನ್ನ ಬುದ್ಧಿಜೀವಿಯಾಗಬೇಕೆಂಬ ಹಂಬಲಕ್ಕೆ ಹಿಂದೊಮ್ಮೆ ರಾಕ್ಷಸ ಗಾತ್ರದ ನಾಯಿ ತೊಂದರೆ ಮಾಡಿತ್ತು. ಈಗ ಜಕ್ಕಣಿ ತೊಂದರೆ ಮಾಡಿದರೆ ಎಂದು ಯೋಚಿಸಿ, "ಬ್ಯಾಡ ಬಿಡಿ" ಎಂದ. ಸರಿ ಎಂದ ಭಟ್ಟರು ಏನೋ ಮಂತ್ರ ಉಚಚರಿಸಿ ಜಕ್ಕಣಿ ಇದ್ದ ನಿಂಬೆ ಹಣ್ಣನ್ನು ಅಗ್ನಿಗೆ ಹಾಕಿದರು.

ದೀಪೇಶನ ಮುಖ ಭಯದಿಂದ ಬಿಳುಚಿದ್ದರೆ, ವಿರೂಪಾಕ್ಷನ ಮುಖ ಅವಮಾನದಿಂದ ಮತ್ತೆ ಕಪ್ಪಿಟ್ಟಿತ್ತು.

(ಕಥಾಗುಚ್ಛದ ಹಿಂದಿನ ಭಾಗಗಳು ಕೊಟ್ಟ ಕೊಂಡಿಗಳಲ್ಲಿವೆ

http://tenkodu.blogspot.in/2012/12/blog-post_19.html

http://tenkodu.blogspot.in/2016/05/blog-post.html

http://tenkodu.blogspot.in/2017/07/blog-post.html

http://tenkodu.blogspot.in/2017/07/blog-post_13.html

http://tenkodu.blogspot.in/2017/09/blog-post_18.html

http://tenkodu.blogspot.in/2017/09/blog-post_65.html)

No comments:

Post a Comment