Tuesday, February 27, 2018

ಆಟ

"ಮಗೂ ಯುದ್ಧ ಅಂದರೆ ಏನು ಮಕ್ಕಳಾಟಿಕೆ ಅಂತ ಮಾಡಿದೆಯಾ?"

"ಇದು ಆಟದ ಅಂಗಳ ಅಲ್ಲ ಮಗೂ, ರಣಕ್ಷೇತ್ರ. ಹುಡುಗಾಟಿಕೆ ಸಲ್ಲುವುದಿಲ್ಲ ಇಲ್ಲಿ. ಇಲ್ಲಿ ವಿಕ್ರಮ ಬೇಕು"

"ಇಲ್ಲಿರುವವರು ನಿನ್ನ ಗೆಳೆಯರಲ್ಲ; ವಿಕ್ರಮಿಗಳು; ಯೋಧರು; ಬಂದಿದ್ದು ಆಡುವುದಕ್ಕಲ್ಲ"

ಯಕ್ಷಗಾನದಲ್ಲಿ ದೊಡ್ಡವಯಸ್ಸಿನ ಪಾತ್ರ ಮಾಡಿದ ವೇಷಧಾರಿಯೊಬ್ಬ ಎದುರಾದ ಹುಡುಗು ಪ್ರಾಯದ ವೇಷ ಮಾಡಿದವನಿಗೆ ತಿಳುವಳಿಕೆ ಹೇಳುವ, ಗದರಿಸುವ, ಅಥವಾ ತನ್ನ ಅಧಿಕಾರದಿಂದಲೋ, ಕಳಕಳಿಯಿಂದಲೋ ಮಾತು ಆಡುವುದು ಇರುತ್ತದೆ. ನಾವೂ ಏನು ಕಮ್ಮಿ ಇಲ್ಲ ಬಿಡಿ. "ಅವ ಜೀವನದಲ್ಲಿ ಆಟ ಆಡಿದ" ಎಂದೋ ಅಥವಾ "ಆಟ ಮಾಡ್ತಾ ಬದುಕು ಕಳೆದು ಹಾಳಾದ" ಎಂದೆಲ್ಲಾ ಎಷ್ಟೋ ಸಲ ಮಾತಾಡಿರುತ್ತೇವೆ. ಘಳಿಗೆಗೊಂದು ಸಾರಿ ಒಂದೊದನ್ನು ಹೇಳುವವನಿಗೆ ನಾವು ಕೂಡಾ ಎಷ್ಟೋ ಸಲ ಕೇಳುತ್ತೇವೆ.

ನಮ್ಮನ್ನು ನಾವು ಹೊಗಳಿಕೊಲ್ಲುವಲ್ಲೂ ಆಟದ ಮಹಾತ್ಮೆ ಇದೆ. ನಾನಂತೂ ಆಗಾಗ ಹೇಳುತ್ತೇನೆ. "ಅಕೌಂಟ್ಸ್ ಎಲ್ಲಾ ಆಟ ಆಡ್ಬುಟಿ ಮಾರಾಯ!" ಅಂತ. ಆಟಕ್ಕೆ ಎಷ್ಟೋ ಸಲ ಚೆಲ್ಲು, ಮಕ್ಕಳು ಎನ್ನುವ ಶಬ್ದಗಳು ಸೇರಿ ಚೆಲ್ಲಾಟ ಮಕ್ಕಳಾಟ ಎಲ್ಲಾ ಬಂದಿವೆ. ಆಟ ಎನ್ನುವುದು ಸುಲಭ ಎನ್ನುವಂತೆ ನಾವಿಂದು ಆಡುತ್ತಿದ್ದೇವೆ. ಆದರೆ ಆಟ ಎಂದರೆ ಅದೊಂದು ಮಾಧ್ಯಮ. ನಮಗರಿವಿಲ್ಲದೆಯೇ ನಮ್ಮೊಳಗಿನ ವ್ಯಗ್ರತೆ-ಉಗ್ರತೆಗಳನ್ನು ಹೊರಹಾಕಿ ನಾವೂ ಸಂತೋಷಪಟ್ಟು, ದೇಹ ದಂಡಿಸಿ, ಬೆವರು ಹರಿಸಿ ಮತ್ತೊಬ್ಬನೂ ಇಷ್ಟೆಲ್ಲಾ ಮಾಡುವಂತಾಗಿ ನಮಗೆ ಎದುರಾಗಿದ್ದರೂ ಅವನೂ ಮತ್ತು ನಾವೂ ಇಬ್ಬರೂ ಸುಸಂತೋಷದಲ್ಲಿ ಭಾಗಿಯಾಗುವಂತೆ ಮಾಡುವುದೇ ಆಟದ ಹೆಗ್ಗಳಿಕೆ. ಅಲ್ಲಿಗೆ ಆಟ ಸುಲಭವಲ್ಲದ್ದನ್ನು ಸುಲಭವಾಗಿಸುವ ಒಂದು ಸಾಧ್ಯತೆ-ಯೋಗ-ಧ್ಯಾನ. ಇಂದು ನಾವೆಲ್ಲಾ ಕ್ರೀಡಾಭಾವನೆ ಎಂದು ಕರೆಯುವುದು ಕರ್ಮಯೋಗದಲ್ಲಿ ಕೃಷ್ಣ ಹೇಳಿದ "ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋಽರ್ಜುನ ಸುಖಂ ಯದಿ ವಾ ದುಃಖಮ್ ಸಃ ಯೋಗಿ ಪರಮೋ ಮತಮ್" ಎಂದಿದ್ದರ ಅವತರಣಿಕೆ ಅಷ್ಟೇ.

ಮೇಲೆ ಹೇಳಿದ್ದು ಹೊಂದಿಕೊಳ್ಳದ ಕೆಲವು ಆಟಗಳೆಂದು ಕರೆಸಿಕೊಂಡ ಕಾರ್ಯಗಳೂ ಇವೆ. ಉದಾಹರಣೆ ಇಸ್ಪೀಟ್-ಮೊಬೈಲ್ ಗೇಮ್ ಎಲ್ಲಾ. ಆದರೆ, ಇವು ನಮ್ಮ ಉಗ್ರತೆ ವ್ಯಗ್ರತೆಗಳನ್ನು ನಮಗರಿವಿಲ್ಲದೆಯೇ ಸಂತೋಷದಲ್ಲಿ ಹೊರಹಾಕದಿದ್ದರೂ ತಾತ್ಕಾಲಿಕವಾಗಿ ಸಂತೋಷದ ಭ್ರಮೆಯನ್ನಾದರೂ ಕೊಡುತ್ತವೆ. ಇದನ್ನೆಲ್ಲಾ ನೋಡಿದ ಮೇಲೆ ಆಟ ಎಂದರೆ ಸಂತೋಷಕ್ಕಾಗಿರುವ ಒಂದು ಸಂಗತಿ ಎನ್ನಬಹುದು.

ಇದೆಲ್ಲಾ ಪೀಠಿಕೆ. ಮೊನ್ನೆ ನಾನು ನನ್ನ ಹೆಚ್ಚಾಗುತ್ತಿರುವ ದೇಹದ ಭಾರ ಮತ್ತು ಕಡಿಮೆಯಾಗುತ್ತಿರುವ ಉತ್ಸಾಹ ಇದಕ್ಕೆ ವ್ಯಾಯಾಮ ಇಲ್ಲದಿರುವುದೇ ಕಾರಣ ಎಂದು ಅರ್ಥವಿಸಿಕೊಂಡೆ. ಜಿಮ್ ಜಾಗಿಂಗಿನಲ್ಲಿ ದೇಹ ದಣಿದೀತು ಆದರೆ ಮನಸ್ಸು ಮಣಿಯಲಾರದು. ಸಂತಸ ಸಿಕ್ಕಲಾರದು ಅದಕ್ಕೇನಿದ್ದರೂ ಆಟವೇ ಸರಿ ಎಂದು ಭಾವಿಸಿ ಏನು ಮಾಡಬೇಕೆಂಬ ಆಲೋಚನೆಯಲ್ಲಿದ್ದೆ. ನನ್ನ ಆಲೋಚನೆಯನ್ನು ಸಮರ್ಥಿಸಲಲ್ಲ ಮೇಲಿನ ಪೀಠಿಕೆ, ಆಟ ಯಾಕೆ ಬೇಕು ಎನ್ನುವ ಕಾರಣಕ್ಕಾಗಿ. ಆಗ ನನ್ನ ಕಣ್ಣಿಗೆ ನಮ್ಮ ಮನೆಯ ಹತ್ತಿರವೇ ಇದ್ದ ಕ್ಲಬ್ ಒಂದು ನೆನಪಾಯಿತು. ಆಫೀಸಿನಿಂದ ಬರುವಾಗ ಕ್ಲಬ್ಬಿನಲ್ಲಿ ವಿಚಾರಿಸಲು ಹೋದೆ.

ಹೋದ ಕೂಡಲೇ ಅಲ್ಲಿದ್ದ ವ್ಯಕ್ತಿ ನನ್ನನ್ನು, "ಏಳಿ ಸಾ..." ಅಂದ.

ಬೆಂಗಳೂರಿಗೆ ಬಂದು ಬಹಳ ವರ್ಷ ಕಳೆಯಿತಲ್ಲ. ಹಾಗಾಗಿ ಈಗ ರೀತಿಯ ಮಾತುಗಳಿಗೆ ಅರ್ಥ ಹುಡುಕುತ್ತಿಲ್ಲ. ಬದಲಾಗಿ ಅರ್ಥ ಮಾಡಿಕೊಂಡು ಬಿಡುತ್ತೇನೆ. ಉತ್ತರಿಸಿತೊಡಗುತ್ತೇನೆ.

"ಕ್ಲಬ್ಬಿನಲ್ಲಿ ಏನೇನು ಆಟಗಳಿದೆ. ಟೈಮಿಂಗ್ಸ್ ಏನು. ಫೀಸ್ ಎಷ್ಟು?"

"ಸಾ ಕ್ಲಬ್ನಾಗೆ ಸಿಮ್ಮಿಂಗು, ಬ್ಯಾಡ್ಮಿಂಟನ್ನು, ಬೌಲಿಂಗು ಮತ್ತೆ ಕಾರ್ಡ್ ಗೇಮ್ಸ್ ಅವೆ ಸಾ.

ಬಾಲ್ಯದ ನೆನಪು ಮತ್ತೆ ಮರುಕಳಿಸುವ ಸುಸಂಧಿ ಇದು ಅನ್ನಿಸಿತು. ಮನಸ್ಸಿನಲ್ಲಿ "ಇದುವೆ ಸಮಯ ಭಲಾ, ದೊರಕಿದುದು ಬಂದುದಕೆ ಫಲ..." ಎಂದು ಗುನುಗಿಕೊಂಡೆ

"ಫೀಸ್ ಎಷ್ಟು?"

"ಸಿಮ್ಮಿಂಗೊಂದೇ ಬೇಕು ಅಂದ್ರೆ ಅದ್ನಾಕು ಸಾವ್ರ ಆಯ್ತವೆ. ಬ್ಯಾಡ್ಮಿಂಟನ್ನೊಂದೇ ಬೇಕು ಅಂದ್ರೆ ಅದ್ನೈದು ಆಯ್ತವೆ ಸಾ. ಎಲ್ಲ ಬೇಕು ಅಂದ್ರೆ ಕಾಸು ಕಡಿಮೆ ಆಯ್ತವೆ. ಇಪ್ಪತ್ತು ಸಾವ್ರ ಯಿಯರ್ರಿಗೆ ಸಾ" ಅಂದ ಆತ.

"ಅಬ್ಭಾ!!" ಎನ್ನಿಸಿತು ನನಗೆ. ಊರಿನಲ್ಲಿದ್ದಿದ್ದರೆ ಬಹುಷಃ ಇದ್ಯಾವುದೂ ಸಮಸ್ಯೆಯೇ ಇರುತ್ತಿರಲಿಲ್ಲ. ಆಟವೂ ಸಾಗುತ್ತಿತ್ತು. ಇಂದು ಊರಿನಲ್ಲೂ ಪರಿಸ್ಥಿತಿ ಇಲ್ಲ ಬಿಡಿ. ಇದಕ್ಕೇ ನಮ್ಮ ಹಳ್ಳಿಗಳೂ ಈಗ ಹಾಳು ಕೊಂಪೆಯಂತಾಗುತ್ತಿರುವುದು ಎನ್ನಿಸಿತು. ನಿಜ. ಇದು ಕಲಿಯುಗ. ಇಲ್ಲಿ ಸಂತಸಕ್ಕೂ ದುಡ್ಡು ಕೊಡಬೇಕು. ಇಲ್ಲವಾದರೆ ಓಷೋ ಹೇಳುವಂತೆ, ಏನೂ ಮಾಡದೆ ಸಂತೋಷ ಅನುಭವಿಸಬೇಕು ದಾರ್ಶನಿಕನ ಹಾದಿ ನಮಗೆ ಸುಲಭಸಾಧ್ಯವಲ್ಲ.


ಆದರೂ ಇಲ್ಲೊಂದು ಸಂತೋಷವಿದೆ. ಇನ್ನು ಯಾರಾದರೂ "ಏನು ಆಟ ಅಂತ ಅಂದ್ಕಂಡ್ಯಾ?" ಅಂದರೆ "ಅದಕ್ಕಿಂತ ಸುಲಭ; ತಾಕತ್ತಿದ್ದರೆ ಬೆಂಗಳೂರಿನ ಕ್ಲಬ್ಬಿನಲ್ಲಿ ಆಡು" ಎನ್ನಬಹುದು. ಅಂತೆಯೇ ನನಗೂ ಇನ್ನು "ಅದು ಬಿಡ. ಅರಾಮು. ಆಟ ಆಡಿದ ಹಂಗೆ" ಎನ್ನುವ ಅಹಂಕಾರದ ಮಾತು ಅಡರಲಾರದೇನೋ. ನಿಮಗೆ?

Thursday, February 22, 2018

ಧರ್ಮನ ಕುಟುಂಬ

ನಾವು ಶಾಲೆಯಲ್ಲಿ ಸಮಾಜಶಾಸ್ತ್ರವೇ ಬೇರೆ-ಅರ್ಥಶಾಸ್ತ್ರವೇ ಬೇರೆ ಎಂದು ಓದುತ್ತೇವೆ. ಇತಿಹಾಸ ಮತ್ತು ವಿಜ್ಞಾನಗಳೆರಡೂ ಭಿನ್ನ ಆಯಾಮಗಳು ಎಂದು ಓದುತ್ತೇವೆ. ಇದರ ಪರಿಣಾಮ ಇಂದು ಕೆಲವನ್ನು ಕಲಿತವರು ಮಾತ್ರ ಮನುಷ್ಯರು ಉಳಿದವರೆಲ್ಲಾ ಮೂರ್ಖ ಆದಿಮಾನವರು ಎಂಬಂತಾಗಿದೆ. ಇದಿಷ್ಟೇ ಅಲ್ಲ. ಸಮಾಜಶಾಸ್ತ್ರಜ್ಞನೊಬ್ಬ ವಿಜ್ಞಾನದಲ್ಲಿ ಅಜ್ಞ ಮತ್ತೊಬ್ಬ ವಿಜ್ಞಾನಿ ಅರ್ಥಶಾಸ್ತ್ರ ಅರಿಯ. ಹೀಗಿದ್ದಾಗ ಜಗತ್ತನ್ನು ಎಳೆಯುವ ಜ್ಞಾನರೂಪಿ ಕುದುರೆ ಬಳಲದೇ ಇದ್ದೀತೆ. ಇಂದಿನ ಸಮಸ್ಯೆಗಳಿಗೆ ನಾವು ಭಿನ್ನತೆಯನ್ನು ಹುಡುಕುವುದು ಹಾಗೂ ಏಕತೆಯನ್ನು ಸಾಧಿಸಲು ಇನ್ನಿಲ್ಲದ ಅನವಶ್ಯಕ ಶ್ರಮ ಪಡುತ್ತಿರುವುದೇ ಕಾರಣವೇ ಎನ್ನಿಸುತ್ತದೆ ಒಮ್ಮೊಮ್ಮೆ. ಅದರಲ್ಲೂ ಪುರಾಣಗಳನ್ನು ಓದಿದರೆ ಯೋಚನೆ ನಂಬಿಕೆಯಾಗಿ ಬದಲಾಗುತ್ತದೆ ಕೆಲವು ಸಲ. ಇದನ್ನು ದಾರ್ಶನಿಕರಾದ ವ್ಯಾಸರು ಅರಿತೇ ಇವೆಲ್ಲದರ ಸಮಗ್ರತೆ ಮತ್ತು ಸರ್ವ ವ್ಯಾಪಕತೆಯನ್ನು ಸಾಧಿಸಿ ಪುರಾಣಗಳನ್ನು ರಚಿಸಿದರೇ ಎಂದು ಎನಿಸುತ್ತದೆ ಒಮ್ಮೊಮ್ಮೆ. ಮೊನ್ನೆ ವಿಷ್ಣುಪುರಾಣದಲ್ಲಿ ಬರುವ ವಂಶಾವಳಿಗಳನ್ನು ಓದುತ್ತಿದ್ದಾಗ ಹೀಗನ್ನಿಸಿತು. ಅದನ್ನೇ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ಸೃಷ್ಟಿ ಕಾರ್ಯದ ಸಮಯದಲ್ಲಿ ಚತುರ್ಮುಖ ಬ್ರಹ್ಮ ಪ್ರಜೋತ್ಪತ್ತಿಯನ್ನು ಮಾಡುವುದಕ್ಕಾಗಿ ಯೋಚಿಸುತ್ತಾ ಕುಳಿತಿದ್ದಾಗ, ಆತನಿಗೆ ಪ್ರಜಾಪತಿಗಳೇ ಇದಕ್ಕೆ ಸರಿ ಎನ್ನಿಸಿತು. ಪ್ರಜಾಪತಿಗಳನ್ನೂ ಅಂಕೆಯಲ್ಲಿಡಲು ಕೂಡಾ ಒಬ್ಬ ಪ್ರಜಾಪತಿಯೇ ಬೇಕು. ಆತನ ಗುಣಗಳೇ ದಕ್ಷತೆ ಎನ್ನಿಸಿಕೊಳ್ಳಬೇಕು ಎಂದೆನಿಸಿ ದಕ್ಷತೆಯ ಕಲ್ಪನೆಯಲ್ಲಿ ತೊಡಗಿದ್ದಾಗ ಕಲ್ಪನೆ ಪೂರ್ತಿಯಾಗುವುದರೊಳಗೇ ಮೈದಳೆದು ನಿಂತಿತು. ಅವನೇ ಬ್ರಹ್ಮಪುತ್ರ ದಕ್ಷ. ಗಡಿಬಿಡಿ-ಮುಂಗೋಪಗಳು ದಕ್ಷನ ಸ್ವಭಾವವಾಗಿ ಹೋದವು. ಆದರೂ ದಕ್ಷ ತನಗೊಪ್ಪಿಸಿದ್ದ ಕೈಂಕರ್ಯ-ಪ್ರಜಾಸೃಷ್ಟಿಯನ್ನು ಮಾಡುತ್ತಲೇ ಇದ್ದ. ಅವನಿಗೆ ಹುಟ್ಟಿದ ಹೆಮ್ಮಕ್ಕಳು ಹಲವರು. ಅಶ್ವಿನ್ಯಾದಿ ನಕ್ಷತ್ರಗಳು, ಸತೀದೇವಿ, ಕೂಡಾ ಇವರಲ್ಲಿದ್ದಾರೆ. ನಾನೀಗ ಹೇಳಹೊರಟಿದ್ದು ಬೇರೆ ಮಕ್ಕಳ ಬಗ್ಗೆ
.
ಶ್ರದ್ಧಾ ಲಕ್ಷ್ಮೀರ್ಧೃತಿಶ್ತುಷ್ಟಿರ್ಮೇಧಾ ಪುಷ್ಟಿಸ್ತಥಾ ಕ್ರಿಯಾ|
ಬುದ್ಧಿರ್ಲಜ್ಜಾ ವಪುಃ ಶಾಂತಿಃ ಸಿದ್ಧಿಃ ಕೀರ್ತಿಸ್ತ್ರಯೋದಶೀ||

ದಕ್ಷನಿಗೆ ಹುಟ್ಟಿದ ಹದಿಮೂರು ಹೆಣ್ಣುಮಕ್ಕಳನ್ನು ಧರ್ಮನು ಮದುವೆಯಾದನು. ಹೆಣ್ಣುಮಕ್ಕಳ ಹೆಸರು ಶ್ರದ್ಧಾ, ಲಕ್ಶ್ಮೀ, ಧೃತಿ, ತುಷ್ಟಿ ಮೇಧಾ, ಪುಷ್ಟಿ, ಕ್ರಿಯಾ, ಬುದ್ಧಿ, ಲಜ್ಜಾ, ವಪು, ಶಾಂತಿ, ಸಿದ್ಧಿ ,ಅತ್ತು ಕೀರ್ತಿ. ಇಲ್ಲಿ ಕವಿ ಬಳಸಿದ ಶಬ್ದಗಳು, ಘಟನೆ ಮತ್ತು ಶಬ್ದಗಳ ಅರ್ಥ ಸ್ವಾರಸ್ಯಮಯವಾಗಿದೆ. ಧರ್ಮನು ಮದುವೆಯಾದ ಎಂಬಲ್ಲಿಗೆ ಹದಿಮೂರು ಹೆಂಗಳೆಯರು ಧರ್ಮನಿದ್ದಲ್ಲಿಗೆ ಹೋಗುತ್ತಾರೆ ಎಂದಾಯಿತಲ್ಲವೇ? ಧರ್ಮದಲ್ಲಿದ್ದರೆ ನಮಗೆ ಶ್ರದ್ಧೆ (Focus) ಇಲ್ಲದಿದ್ದೀತೇ? ಲಕ್ಷ್ಮೀ- ಲಕ್ಷ್ಯ ಇಡುವವಳು ಎಂಬರ್ಥ; ಲಕ್ಷ್ಯ ಪಡೆಯುವವಳು ಎಂಬರ್ಥ ಕೂಡಾ ಸಂಪತ್ತಿನ ಅಧಿದೇವತೆಯ ಹೆಸರು ಕೂಡಾ ಹೀಗೆಯೇ ಇದೆಯಲ್ಲ. ಧರ್ಮವಿದ್ದಲ್ಲಿ ಲಕ್ಷ್ಮೀ ಅಂದರೆ attention ಇರುತ್ತದೆ. ಧೃತಿ (Discretion) ಸರಿ ತಪ್ಪುಗಳ ಪ್ರಜ್ಞೆ ಇರುತ್ತದೆ. ತುಷ್ಟಿ- Satidfaction ಮೇಧಾ- ಗ್ರಹಿಸುವಿಕೆ-Grasping ability. ಪುಷ್ಟಿ- support/ Consent  ಕ್ರಿಯಾ- action; ಬುದ್ಧಿ-ಮನಸ್ಸನ್ನು ಮತ್ತು ಅದರ ಮೂಲಕ ಇಂದ್ರಿಯಗಳನ್ನು ನಿಗ್ರಹಿಸುವ ಸಾಮರ್ಥ್ಯ-Self esteem/self control; ಲಜ್ಜಾ- ನಾಚಿಕೆ-ಬೇರೆಯವರ ದೃಷ್ಟಿಯಲ್ಲಿ ಸಣ್ನವರಾಗಬಾರದೆಂಬ ಭಾವ, ವಪು- ಶಬ್ದಾರ್ಥ ಶರೀರ ಎನ್ನುವುದಾಗಿ ಆದರೂ, ಇಲ್ಲಿ ದೇಹದಾರ್ಢ್ಯತೆ ಎಂದು ಅಥವಾ ಆರೋಗ್ಯ ಎಂದು ಗುರುತಿಸಬೇಕು. ಶಾಂತಿ- ಕಳೆದುಕಕೊಂಡ ಅನುಭವ ಎಲ್ಲರಿಗೂ ಇದೆ; ಹಾಗಾಗಿ ಹೆಚ್ಚು ಹೇಳಬೇಕಿಲ್ಲ. ಕೀರ್ತಿ- ಎಲ್ಲರಿಗೂ ಬೇಕಿದೆ ಹಾಗಾಗಿ ಹೇಳುವುದಿಲ್ಲ ಅನ್ನುವುದಿಲ್ಲ- Fame. ಫ಼ೇಮಸ್ ಅಂತ ಯಾರಿಗೆ ಕರೆಯಿಸಿಕೊಳ್ಳಬೇಕಿಲ್ಲ ಸ್ವಾಮಿ? ತಾತ್ಪರ್ಯ ಇಷ್ಟೆ ಧರ್ಮನಿಂದ ಎಲ್ಲ ಗುಣಗಳೂ ಸಾಧಿಸಲು ಸಾಧ್ಯ ಮತ್ತು ಎಲ್ಲ ಗುಣಗಳಿಂದ ಧರ್ಮವು ಸಾಧಿಸಲ್ಪಡುತ್ತದೆ ಎಂದು.

ಇವರ ಸಂತಾನದ ಬಗ್ಗೆಯೂ ವರ್ಣನೆ ಇದೆ. ಅದು ಇನ್ನೂ ಚಂದ. ಧರ್ಮ ಮತ್ತು ಶ್ರದ್ಧೆಯ ಮಗನ ಹೆಸರು ಕಾಮ ಅಂದರೆ ಬಯಕೆ. ನಾವು ಒಂದರ ಕುರಿತು ಶ್ರದ್ಧೆ ಇಟ್ಟುಕೊಮ್ಡರೆ ಮಾತ್ರ ಅದು ಬಯಕೆಯಾಗುತ್ತದೆ ಮತ್ತು ಕೈಗೂಡುತ್ತದೆ. ಲಕ್ಷ್ಮಿಯ ಮಗ ದರ್ಪ- ಗಮನ ಹೆಚ್ಚಾದರೆ ದರ್ಪ ಹುಟ್ಟುತ್ತದೆ ಅಲ್ಲವೇ, ನಮ್ಮ ಕೆಲವು ರಾಜಕಾರಣಿಗಳ ಹಾಗೆ? ಧೃತಿಯ ಮಗ ನಿಯಮ. ಮೇಲಿನ ವಿವರಣೆ ಸಾಕಲ್ಲ ಇದಕ್ಕೆ. ತುಷ್ಟಿಯಿಂದ ಜನಿಸಿದವ ಸಂತೋಷ. ಪುಷ್ಟಿಯ ಸಂತಾನ ಲೋಭ- ಯಾರು ತಾನೇ ನಮ್ಮನ್ನೊಪ್ಪುವವರನ್ನು ಬಿಟ್ಟುಕೊಡುತ್ತಾರೆ? ಯಾರು ತಾನೇ ತಾವು ಒಪ್ಪಿದ್ದನ್ನು ಬಿಡುತ್ತಾರೆ? ಮೇಧೆಯ ಮಗ ಶ್ರುತ ಅಂದರೆ ಜ್ಞಾನವನ್ನು ಪಡೆದವ (ಶ್ರುತಿ ಎಂದರೆ ವೇದ=ಜ್ಞಾನ). ಕ್ರಿಯೆಗೆ ದಂಡ, ನಯ ವಿನಯ ಮಕ್ಕಳು. ಕ್ರಿಯೆಯೇ ಅಲ್ಲವೇ ನಮಗೆ ಆಯಾಸ-ನಯ-ವಿನಯಗಳನ್ನು ಕೊಡುವುದು? ಬುದ್ಧಿಗೆ ಬೋಧ. ಲಜ್ಜೆಗೆ ವಿನಯ (humbleness).  (ಇಬ್ಬರೂ ವಿನಯ ಒಬ್ಬನೇ ವ್ಯಕ್ತಿಯೋ ಅಥವಾ ಎರಡು ಬೇರೆ ಬೇರೆ ವ್ಯಕ್ತಿಗಳೋ ಗೊತ್ತಿಲ್ಲ). ವಪುವಿನ ಮಗ ವ್ಯವಸಾಯ, ಶಾಂತಿಯ ಮಗ ಕ್ಷೇಮ, ಸಿದ್ಧಿಯ ಮಗ ಸುಖ ಮತ್ತು ಕೀರ್ತಿಯ ಮಗ ಯಶ. ಎಲ್ಲ ಶಬ್ದಗಳ ಅರ್ಥ ಮತ್ತು ಅವುಗಳ ನಡುವಿನ ಸಂಬಂಧ ಎಷ್ಟು ಸೊಗಸು.

ಹೌದು ಧರ್ಮ ಎಂದರೆ ಏನು? ಅರ್ಥ ಮಾಡಿಸಲು ನನಗೂ ಗೊತ್ತಿಲ್ಲ. ಆದರೆ ಶ್ರೀ ಶ್ರೀಧರಸ್ವಾಮಿಗಳು ಬಹಳ ಸರಳವಾಗಿ ಹೇಳಿದ್ದಾರೆ. ಸ್ವ ಪರಹಿತಗಳನ್ನು ಸಾಧಿಸುವುದೇ ಧರ್ಮ ಎಂದು. ಇಂದಿನ ಮ್ಯಾನೇಜ್ಮೆಂಟ್ ಭಾಷೆಯಲ್ಲಿ 'ವಿನ್ ವಿನ್ ಪಾಲಿಸಿ'

ಜೋಸೆಫ್ ಮರ್ಫಿ ಬರೆದ ಪವರ್ ಆಫ಼್ ಯುವರ್ ಸಬ್ ಕಾನ್ಶಿಯಸ್ ಮೈಂಡ್ (ಸುಪ್ತ ಚೇತನದ ಸಾಮರ್ಥ್ಯ) ಮತ್ತು Telepsychics ಎನ್ನುವ ಪುಸ್ತಕಗಳು ವಿಷಯವನ್ನೇ ಹೇಳುತ್ತವೆ, ಬೇರೆ ರೀತಿಯಲ್ಲಿ-ಬೈಬಲ್ಲಿನ ಆಧಾರದಲ್ಲಿ. ಆತ ಇದಕ್ಕೆ ಕೊಟ್ಟ ಹೆಸರು ಪಾಸಿಟಿವ್ ಥಿಂಕಿಂಗ್ ಎಂದು. ನಾರ್ಮನ್ ವಿನ್ಸೆಂಟ್ ಪೀಲೆ ಕೂಡಾ ಇದನ್ನೇ ಹೇಳುವುದು. ಆತನ ಪುಸ್ತಕ ' ಪವರ್ ಆಫ಼್ ಪಾಸಿಟಿವ್ ಥಿಂಕಿಂಗ್'. ಪರಿಕಲ್ಪನೆಯ ಮೇಲೆಯೇ ರೊನ್ನಾ ಬೈರ್ನ್ ಪುಸ್ತಕಗಳನ್ನು ಬರೆದಿದ್ದು.


ನಮ್ಮ ಪುರಾಣದ ಒಂದು ಚಿಕ್ಕ ಭಾಗ ಎಷ್ಟೋ ಪುಸ್ತಕಗಳಿಗೆ ಸಮವಲ್ಲವೇ. ನಮಗೆಲ್ಲ ಹೆಮ್ಮೆಯಾಗಬೇಕು ಇದಕ್ಕೆ. ನಾವು ಆಧುನಿಕ ಶಿಕ್ಷಣದ ಜೊತೆ ಇದನ್ನೂ ಕಲಿತಿದ್ದರೆ ಎಷ್ಟು ಚೆನ್ನಾಗಿತ್ತು? ನಮ್ಮ ದೇಶ ಎನಿತು ಪ್ರಗತಿ ಸಾಧಿಸಿರುತ್ತಿತ್ತೋ ಏನೋ?