Tuesday, February 27, 2018

ಆಟ

"ಮಗೂ ಯುದ್ಧ ಅಂದರೆ ಏನು ಮಕ್ಕಳಾಟಿಕೆ ಅಂತ ಮಾಡಿದೆಯಾ?"

"ಇದು ಆಟದ ಅಂಗಳ ಅಲ್ಲ ಮಗೂ, ರಣಕ್ಷೇತ್ರ. ಹುಡುಗಾಟಿಕೆ ಸಲ್ಲುವುದಿಲ್ಲ ಇಲ್ಲಿ. ಇಲ್ಲಿ ವಿಕ್ರಮ ಬೇಕು"

"ಇಲ್ಲಿರುವವರು ನಿನ್ನ ಗೆಳೆಯರಲ್ಲ; ವಿಕ್ರಮಿಗಳು; ಯೋಧರು; ಬಂದಿದ್ದು ಆಡುವುದಕ್ಕಲ್ಲ"

ಯಕ್ಷಗಾನದಲ್ಲಿ ದೊಡ್ಡವಯಸ್ಸಿನ ಪಾತ್ರ ಮಾಡಿದ ವೇಷಧಾರಿಯೊಬ್ಬ ಎದುರಾದ ಹುಡುಗು ಪ್ರಾಯದ ವೇಷ ಮಾಡಿದವನಿಗೆ ತಿಳುವಳಿಕೆ ಹೇಳುವ, ಗದರಿಸುವ, ಅಥವಾ ತನ್ನ ಅಧಿಕಾರದಿಂದಲೋ, ಕಳಕಳಿಯಿಂದಲೋ ಮಾತು ಆಡುವುದು ಇರುತ್ತದೆ. ನಾವೂ ಏನು ಕಮ್ಮಿ ಇಲ್ಲ ಬಿಡಿ. "ಅವ ಜೀವನದಲ್ಲಿ ಆಟ ಆಡಿದ" ಎಂದೋ ಅಥವಾ "ಆಟ ಮಾಡ್ತಾ ಬದುಕು ಕಳೆದು ಹಾಳಾದ" ಎಂದೆಲ್ಲಾ ಎಷ್ಟೋ ಸಲ ಮಾತಾಡಿರುತ್ತೇವೆ. ಘಳಿಗೆಗೊಂದು ಸಾರಿ ಒಂದೊದನ್ನು ಹೇಳುವವನಿಗೆ ನಾವು ಕೂಡಾ ಎಷ್ಟೋ ಸಲ ಕೇಳುತ್ತೇವೆ.

ನಮ್ಮನ್ನು ನಾವು ಹೊಗಳಿಕೊಲ್ಲುವಲ್ಲೂ ಆಟದ ಮಹಾತ್ಮೆ ಇದೆ. ನಾನಂತೂ ಆಗಾಗ ಹೇಳುತ್ತೇನೆ. "ಅಕೌಂಟ್ಸ್ ಎಲ್ಲಾ ಆಟ ಆಡ್ಬುಟಿ ಮಾರಾಯ!" ಅಂತ. ಆಟಕ್ಕೆ ಎಷ್ಟೋ ಸಲ ಚೆಲ್ಲು, ಮಕ್ಕಳು ಎನ್ನುವ ಶಬ್ದಗಳು ಸೇರಿ ಚೆಲ್ಲಾಟ ಮಕ್ಕಳಾಟ ಎಲ್ಲಾ ಬಂದಿವೆ. ಆಟ ಎನ್ನುವುದು ಸುಲಭ ಎನ್ನುವಂತೆ ನಾವಿಂದು ಆಡುತ್ತಿದ್ದೇವೆ. ಆದರೆ ಆಟ ಎಂದರೆ ಅದೊಂದು ಮಾಧ್ಯಮ. ನಮಗರಿವಿಲ್ಲದೆಯೇ ನಮ್ಮೊಳಗಿನ ವ್ಯಗ್ರತೆ-ಉಗ್ರತೆಗಳನ್ನು ಹೊರಹಾಕಿ ನಾವೂ ಸಂತೋಷಪಟ್ಟು, ದೇಹ ದಂಡಿಸಿ, ಬೆವರು ಹರಿಸಿ ಮತ್ತೊಬ್ಬನೂ ಇಷ್ಟೆಲ್ಲಾ ಮಾಡುವಂತಾಗಿ ನಮಗೆ ಎದುರಾಗಿದ್ದರೂ ಅವನೂ ಮತ್ತು ನಾವೂ ಇಬ್ಬರೂ ಸುಸಂತೋಷದಲ್ಲಿ ಭಾಗಿಯಾಗುವಂತೆ ಮಾಡುವುದೇ ಆಟದ ಹೆಗ್ಗಳಿಕೆ. ಅಲ್ಲಿಗೆ ಆಟ ಸುಲಭವಲ್ಲದ್ದನ್ನು ಸುಲಭವಾಗಿಸುವ ಒಂದು ಸಾಧ್ಯತೆ-ಯೋಗ-ಧ್ಯಾನ. ಇಂದು ನಾವೆಲ್ಲಾ ಕ್ರೀಡಾಭಾವನೆ ಎಂದು ಕರೆಯುವುದು ಕರ್ಮಯೋಗದಲ್ಲಿ ಕೃಷ್ಣ ಹೇಳಿದ "ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋಽರ್ಜುನ ಸುಖಂ ಯದಿ ವಾ ದುಃಖಮ್ ಸಃ ಯೋಗಿ ಪರಮೋ ಮತಮ್" ಎಂದಿದ್ದರ ಅವತರಣಿಕೆ ಅಷ್ಟೇ.

ಮೇಲೆ ಹೇಳಿದ್ದು ಹೊಂದಿಕೊಳ್ಳದ ಕೆಲವು ಆಟಗಳೆಂದು ಕರೆಸಿಕೊಂಡ ಕಾರ್ಯಗಳೂ ಇವೆ. ಉದಾಹರಣೆ ಇಸ್ಪೀಟ್-ಮೊಬೈಲ್ ಗೇಮ್ ಎಲ್ಲಾ. ಆದರೆ, ಇವು ನಮ್ಮ ಉಗ್ರತೆ ವ್ಯಗ್ರತೆಗಳನ್ನು ನಮಗರಿವಿಲ್ಲದೆಯೇ ಸಂತೋಷದಲ್ಲಿ ಹೊರಹಾಕದಿದ್ದರೂ ತಾತ್ಕಾಲಿಕವಾಗಿ ಸಂತೋಷದ ಭ್ರಮೆಯನ್ನಾದರೂ ಕೊಡುತ್ತವೆ. ಇದನ್ನೆಲ್ಲಾ ನೋಡಿದ ಮೇಲೆ ಆಟ ಎಂದರೆ ಸಂತೋಷಕ್ಕಾಗಿರುವ ಒಂದು ಸಂಗತಿ ಎನ್ನಬಹುದು.

ಇದೆಲ್ಲಾ ಪೀಠಿಕೆ. ಮೊನ್ನೆ ನಾನು ನನ್ನ ಹೆಚ್ಚಾಗುತ್ತಿರುವ ದೇಹದ ಭಾರ ಮತ್ತು ಕಡಿಮೆಯಾಗುತ್ತಿರುವ ಉತ್ಸಾಹ ಇದಕ್ಕೆ ವ್ಯಾಯಾಮ ಇಲ್ಲದಿರುವುದೇ ಕಾರಣ ಎಂದು ಅರ್ಥವಿಸಿಕೊಂಡೆ. ಜಿಮ್ ಜಾಗಿಂಗಿನಲ್ಲಿ ದೇಹ ದಣಿದೀತು ಆದರೆ ಮನಸ್ಸು ಮಣಿಯಲಾರದು. ಸಂತಸ ಸಿಕ್ಕಲಾರದು ಅದಕ್ಕೇನಿದ್ದರೂ ಆಟವೇ ಸರಿ ಎಂದು ಭಾವಿಸಿ ಏನು ಮಾಡಬೇಕೆಂಬ ಆಲೋಚನೆಯಲ್ಲಿದ್ದೆ. ನನ್ನ ಆಲೋಚನೆಯನ್ನು ಸಮರ್ಥಿಸಲಲ್ಲ ಮೇಲಿನ ಪೀಠಿಕೆ, ಆಟ ಯಾಕೆ ಬೇಕು ಎನ್ನುವ ಕಾರಣಕ್ಕಾಗಿ. ಆಗ ನನ್ನ ಕಣ್ಣಿಗೆ ನಮ್ಮ ಮನೆಯ ಹತ್ತಿರವೇ ಇದ್ದ ಕ್ಲಬ್ ಒಂದು ನೆನಪಾಯಿತು. ಆಫೀಸಿನಿಂದ ಬರುವಾಗ ಕ್ಲಬ್ಬಿನಲ್ಲಿ ವಿಚಾರಿಸಲು ಹೋದೆ.

ಹೋದ ಕೂಡಲೇ ಅಲ್ಲಿದ್ದ ವ್ಯಕ್ತಿ ನನ್ನನ್ನು, "ಏಳಿ ಸಾ..." ಅಂದ.

ಬೆಂಗಳೂರಿಗೆ ಬಂದು ಬಹಳ ವರ್ಷ ಕಳೆಯಿತಲ್ಲ. ಹಾಗಾಗಿ ಈಗ ರೀತಿಯ ಮಾತುಗಳಿಗೆ ಅರ್ಥ ಹುಡುಕುತ್ತಿಲ್ಲ. ಬದಲಾಗಿ ಅರ್ಥ ಮಾಡಿಕೊಂಡು ಬಿಡುತ್ತೇನೆ. ಉತ್ತರಿಸಿತೊಡಗುತ್ತೇನೆ.

"ಕ್ಲಬ್ಬಿನಲ್ಲಿ ಏನೇನು ಆಟಗಳಿದೆ. ಟೈಮಿಂಗ್ಸ್ ಏನು. ಫೀಸ್ ಎಷ್ಟು?"

"ಸಾ ಕ್ಲಬ್ನಾಗೆ ಸಿಮ್ಮಿಂಗು, ಬ್ಯಾಡ್ಮಿಂಟನ್ನು, ಬೌಲಿಂಗು ಮತ್ತೆ ಕಾರ್ಡ್ ಗೇಮ್ಸ್ ಅವೆ ಸಾ.

ಬಾಲ್ಯದ ನೆನಪು ಮತ್ತೆ ಮರುಕಳಿಸುವ ಸುಸಂಧಿ ಇದು ಅನ್ನಿಸಿತು. ಮನಸ್ಸಿನಲ್ಲಿ "ಇದುವೆ ಸಮಯ ಭಲಾ, ದೊರಕಿದುದು ಬಂದುದಕೆ ಫಲ..." ಎಂದು ಗುನುಗಿಕೊಂಡೆ

"ಫೀಸ್ ಎಷ್ಟು?"

"ಸಿಮ್ಮಿಂಗೊಂದೇ ಬೇಕು ಅಂದ್ರೆ ಅದ್ನಾಕು ಸಾವ್ರ ಆಯ್ತವೆ. ಬ್ಯಾಡ್ಮಿಂಟನ್ನೊಂದೇ ಬೇಕು ಅಂದ್ರೆ ಅದ್ನೈದು ಆಯ್ತವೆ ಸಾ. ಎಲ್ಲ ಬೇಕು ಅಂದ್ರೆ ಕಾಸು ಕಡಿಮೆ ಆಯ್ತವೆ. ಇಪ್ಪತ್ತು ಸಾವ್ರ ಯಿಯರ್ರಿಗೆ ಸಾ" ಅಂದ ಆತ.

"ಅಬ್ಭಾ!!" ಎನ್ನಿಸಿತು ನನಗೆ. ಊರಿನಲ್ಲಿದ್ದಿದ್ದರೆ ಬಹುಷಃ ಇದ್ಯಾವುದೂ ಸಮಸ್ಯೆಯೇ ಇರುತ್ತಿರಲಿಲ್ಲ. ಆಟವೂ ಸಾಗುತ್ತಿತ್ತು. ಇಂದು ಊರಿನಲ್ಲೂ ಪರಿಸ್ಥಿತಿ ಇಲ್ಲ ಬಿಡಿ. ಇದಕ್ಕೇ ನಮ್ಮ ಹಳ್ಳಿಗಳೂ ಈಗ ಹಾಳು ಕೊಂಪೆಯಂತಾಗುತ್ತಿರುವುದು ಎನ್ನಿಸಿತು. ನಿಜ. ಇದು ಕಲಿಯುಗ. ಇಲ್ಲಿ ಸಂತಸಕ್ಕೂ ದುಡ್ಡು ಕೊಡಬೇಕು. ಇಲ್ಲವಾದರೆ ಓಷೋ ಹೇಳುವಂತೆ, ಏನೂ ಮಾಡದೆ ಸಂತೋಷ ಅನುಭವಿಸಬೇಕು ದಾರ್ಶನಿಕನ ಹಾದಿ ನಮಗೆ ಸುಲಭಸಾಧ್ಯವಲ್ಲ.


ಆದರೂ ಇಲ್ಲೊಂದು ಸಂತೋಷವಿದೆ. ಇನ್ನು ಯಾರಾದರೂ "ಏನು ಆಟ ಅಂತ ಅಂದ್ಕಂಡ್ಯಾ?" ಅಂದರೆ "ಅದಕ್ಕಿಂತ ಸುಲಭ; ತಾಕತ್ತಿದ್ದರೆ ಬೆಂಗಳೂರಿನ ಕ್ಲಬ್ಬಿನಲ್ಲಿ ಆಡು" ಎನ್ನಬಹುದು. ಅಂತೆಯೇ ನನಗೂ ಇನ್ನು "ಅದು ಬಿಡ. ಅರಾಮು. ಆಟ ಆಡಿದ ಹಂಗೆ" ಎನ್ನುವ ಅಹಂಕಾರದ ಮಾತು ಅಡರಲಾರದೇನೋ. ನಿಮಗೆ?

No comments:

Post a Comment