Thursday, February 1, 2018

ಶಿಶುಮಾರ

ಕಲ್ಪನೆ- ಜಗತ್ತೇ ಚಂದ. ಮರುಭೂಮಿಯಲ್ಲೊಂದು ಜಲಪಾತವೂ ಸಾಧ್ಯ. ಭಾರತದ ಕಾಡಿನಲ್ಲಿ ಡೈನೋ ಸಾರಸ್ ಕೂಡಾ ನೋಡಬಹುದು ಜಗತ್ತಿನಲ್ಲಿ. ಸ್ಥಾವರ ಜಂಗಮವಾಗುತ್ತದೆ. ಜಂಗಮವಾಗಿದ್ದು ಎಲ್ಲೆಲ್ಲೋ ಸಂಚರಿಸುತ್ತದೆ. ಆದರೆ ಕಲ್ಪನೆ ತನ್ನ ಪರಾಕಾಷ್ಠೆಯನ್ನು ತಲುಪಬೇಕಿದ್ದರೆ ವಾಸ್ತವದ ಅರಿವಿರಬಾರದು. ಚಿಕ್ಕ ಮಕ್ಕಳ ಕಲ್ಪನೆಗಳು ಸುಂದರವಾಗಿರುವುದು ಬಹುಷಃ ಇದೇ ಕಾರಣಕ್ಕೆ. ಅವರ ಕಲ್ಪನೆಗಳಲ್ಲಿ ತುಸುವೇ ವಾಸ್ತವ ಬೆರೆತು, ಕೆಲವೊಮ್ಮೆ ಬಹಳ ಸುಂದರ ಜಗತ್ತು ನಮ್ಮ ಪಾಲಿಗೆ ತೆರೆದುಕೊಳ್ಳುವ ಸಂಭಾವ್ಯತೆ ಇರುತ್ತದೆ. ಸೋಪಿನ ಬಿಲ್ಲೆ ಬಸ್ಸಾಗಿಬಿಡುತ್ತದೆಇದೇ ಕಾರಣಕ್ಕೆ ಇರಬೇಕು ಓಶೋ, "ಅಪ್ಪ ಮಗನಿಗೆ ಜನ್ಮ ಕೊಡುವುದಿಲ್ಲ. ಬದಲಾಗಿ ಮಗುವಿನ ಮೂಲಕ ತಾನೊಂದು ಹೊಸ ಜನ್ಮ ಪಡೆಯುತ್ತಾನೆ. ಅಲ್ಲಿಯ ತನಕ ಆತ ಅಪ್ಪನಾಗಿರುವುದಿಲ್ಲ. ಮಗು ಹುಟ್ಟಿದ ಮೇಲೆ ಆತನಿಗೆ ಅಪ್ಪನ ಜನ್ಮ ದೊರೆಯುತ್ತದೆ." ಎಂದಿದ್ದು. "ಆತ್ಮೈವ ಪುತ್ರ ನಾಮಾಸಿ" ಎನ್ನುವ ಮಾತನ್ನು ಜ್ಞಾನಿ ನಮಗೆ ತಿಳಿಸಿದ್ದು ಹೀಗೆ. ಕಲ್ಪನೆಗಳು ಮೂಡುವುದು ಚಿತ್ತದಲ್ಲಂತೆ. ಅದಕ್ಕೇ ವಸಿಷ್ಠ ಮುನಿಗಳು ರಾಮನಿಗೆ ಹೇಳಿದ್ದು, "ರಾಮಾ!! ಚಿತ್ತವನ್ನು ಒಂದು ಲಕ್ಷ ಕಣಗಳಾಗಿ ಒಡೆದರೆ, ಕಣಗಳನ್ನೂ ಮತ್ತೆ ಲಕ್ಷ ಕಣಗಳಾಗಿ ಭಾಗಿಸಿದರೆ ಸಿಗುವ ಒಂದು ಕನದಲ್ಲಿ ಇಡೀ ಜಗತ್ತು ಇರುತ್ತದೆ" ಎಂದು

            ಕಲ್ಪನೆಗಳನ್ನು ಸುಂದರ ಶಬ್ದಗಳಿಂದ, ಅತಿಶಯ ಅಲಂಕಾರಗಳಿಂದ ವಾಸ್ತವದೊಂದಿಗೆ ಸಮ್ಮಿಳಿತಗೊಳಿಸಿದಾಗ ಒಂದು ಸುಂದರ ಸಾಹಿತ್ಯ ಸೃಷ್ಟಿಯಾಗುತ್ತದೆ. ಒಬ್ಬ ಉತ್ತಮ ಕಲ್ಪನಾಕಾರನಿಗೆ ಸಿಕ್ಕಿದರೆ, ಉತ್ತಮ ನಟರು ಅದರೊಂದಿಗೆ ಸೇರಿದರೆ ಒಂದು ಉತ್ಕೃಷ್ಟ ದೃಷ್ಯಕಾವ್ಯ ಕಣ್ಣೆದುರಿಗೆ ಬರುತ್ತದೆ. ಹೀಗೆ ವಾಸ್ತವ-ಕಲ್ಪನೆ-ಭಾಷೆಗಳ ಸುಂದರ ಸಮ್ಮಿಶ್ರಣ ನಮ್ಮ ಪುರಾಣಗಳು. ಅದರಲ್ಲೊಂದು ವಿಷ್ಣುಪುರಾಣ. ಇದರಲ್ಲಿ ಸೂರ್ಯನ ವರ್ಣನೆ ನಿಜಕ್ಕೂ ಕಲ್ಪನಾತೀತ. ನಾವಿರುವ, ನಮ್ಮ ಕಲ್ಪನೆಗಳಿಗೆ ನಿಲುಕಿರುವ ಭೌತಿಕ ಪ್ರಪಂಚ ಎಲ್ಲಿದೆ ಎಂದು ಇದರಲ್ಲಿ ಬರುವ ಬಗೆ ಹೀಗಿದೆ.

ತಾರಾಮಯಂ ಭಗವತಃ ಶಿಶುಮಾರಾಕೃತಿ ಪ್ರಭೋಃ|
ದಿವಿ ರೂಪಂ ಹರೇರ್ಯತ್ತು ತಸ್ಯ ಪುಚ್ಛೇ ಸ್ಥಿತೋ ಧೃವಃ||

ಸೈಷ ಭ್ರಮನ್ ಭ್ರಾಮಯತಿ ಚಂದ್ರಾದಿತ್ಯಾನ್ ಗ್ರಹಾನ್|
ಭ್ರಮನ್ತಮನು ತಂ ಯಾನ್ತಿ ನಕ್ಷತ್ರಾಣಿ ಚಕ್ರವತ್||

ಸೂರ್ಯಾಚಂದ್ರಮಸೌ ತಾರಾ ನಕ್ಷತ್ರಾಣಿ ಗ್ರಹೈಃ ಸಹ|
ವಾತಾನೀಕಮಯೈರ್ಬಂಧೈರ್ಧ್ರುವೇ ಬದ್ಧಾನಿ ತಾನಿ ವೈ||

ಶಿಶುಮಾರಾಕೃತಿ ಪ್ರೋಕ್ತಂ ಯದ್ರೂಪಂ ಜ್ಯೋತಿಷಾಂ ದಿವಿ|
ನಾರಾಯಣೋಽಯನಂ ಧಾಮ್ನಾಂ ತಸ್ಯಾಧಾರಃ ಸ್ವಯಂ ಹೃದಿ||

ಆಧಾರ ಶಿಶುಮಾರಸ್ಯ ಸರ್ವಾಧ್ಯಕ್ಷೋ ಜನಾರ್ಧನಃ|
ಧ್ರುವಸ್ಯ ಶಿಶುಮಾರಸ್ತು ಧ್ರುವೇ ಭಾನುರ್ವ್ಯವಸ್ಥಿತಃ||

ಶ್ರೀಹರಿಯು ಶಿಶುಮಾರಚಕ್ರ ರೂಪವನ್ನು ಧರಿಸಿ ತಾರಾಮಯನಾಗಿದ್ದಾನೆ. ಶಿಶುಮಾರದ ಬಾಲದಲ್ಲಿ ಧೃವನಿದ್ದಾನೆ. ಆತ ತಾನೂ ತಿರುಗುತ್ತಾ ಚಂದ್ರ-ಸೂರ್ಯ-ತಾರೆಗಳಿಂದ ಕೂಡಿದ ವಿಶ್ವವನ್ನು ತಿರುಗಿಸುತ್ತಿದ್ದಾನೆ. ತಾರೆ-ಚಂದ್ರ-ಸೂರ್ಯರು ತಮ್ಮದೇ ಆದ ವಾಯುಮಂಡಲವನ್ನು ಹೊಂದಿವೆ. ತಾನು ಧರಿಸಿದ ಶಿಶುಮಾರದ ಹೃದಯಭಾಗದಲ್ಲಿದ್ದಾನೆ. ಶಿಶುಮಾರಕ್ಕೆ, ಮಹಾವಿಷ್ಣುವೇ ಆಧಾರ. ಶಿಶುಮಾರವು, ಧೃವ ನಕ್ಷತ್ರಕ್ಕೆ ಆಧಾರ ಮತ್ತು ಧೃವ ನಕ್ಷತ್ರವು ಸೂರ್ಯನಿಗೆ ಆಧಾರ.

ಶಿಶುಮಾರ ಎಂದರೆ ಏನಿದ್ದಿರಬಹುದು ಎಂದು ಗೂಗಲೇಶ್ವರ ಸ್ವಾಮಿಗಳಲ್ಲಿ ಕೇಳಿದೆ. ಗೂಗಲೇಶ್ವರ ಸ್ವಾಮಿಗಳ ಬಗ್ಗೆ ಗೊತ್ತಲ್ಲ. ಸುತ್ತಿ ಬಳಸಿ ಉತ್ತರ ಸಿಗಬಹುದಾದ ಒಂದು ಜಾಲತಾಣಕ್ಕೆ ಕರೆದೊಯ್ಯುವುದು. ಸಲವೂ ಹಾಗೆಯೇ ಆಯಿತು. ಶಿಶುಮಾರ ಎಂದರೆ, ಡಾಲ್ಫಿನ್ ಎಂದು ಅರ್ಥವಂತೆ. ಆಗ ನನಗನ್ನಿಸಿದ್ದು, ಆಹಾ ವ್ಯಾಸ ಮಹರ್ಶಿಗಳ ಕಲ್ಪನೆಯೇ!!. ಏನು ಚಂದ. ಜಗತ್ತನ್ನು ಸಂಪೂರ್ಣವಾಗಿ ನೋಡುವುದು ದುಸ್ಸಾಧ್ಯ. ಆದರೆ, ಅದರ ಕುರಿತಾಗಿ ಮಧುರ ಕಲ್ಪನೆಯೊಂದನ್ನು, ಸುಮಧುರ ಶಬ್ದಗಳಲ್ಲಿ ಹೇಳುವುದು ಸಾಧ್ಯ. ವ್ಯಾಸ ಮಹರ್ಷಿಗಳು ರೀತಿ ಎಷ್ಟು ಸುಂದರವಾಗಿ ವರ್ಣಿಸಿದ್ದಾರೆ ಎಂದು ಮನಸ್ಸು ತುಂಬಿ ಬಂತು.

ಮತ್ತೊಂದು ದಿನ ಸುಮ್ಮನೆ ವಿಕಿಪೀಡಿಯಾದಲ್ಲಿ ಬೇರೆ ಏನನ್ನೋ ಕೆದಕುತ್ತಿರುವಾಗ, ಲೋಕಲ್ ಇಂಟರ್ ಸ್ಟೆಲ್ಲರ್ ಕ್ಲೌಡ್ (Local interstellar cloud) ಬಗ್ಗೆ ಓದಿದೆ. ಅದರ ಚಿತ್ರ ಡಾಲ್ಫಿನ್ನಂತೆಯೇ ಇದೆಇಷ್ಟಕ್ಕೇ ಮುಗಿಯಲಿಲ್ಲ. ಅದರ ಸೃಜನದ ಬಗೆ ನೋಡಿದರೆ, ಅದು ನಕ್ಷತ್ರಗಳ ಮಹಾಸ್ಫೋಟದಿಂದ ಉಂಟಾದ ಧೂಳಿನ ಕಣಗಳ ಮೋಡವಂತೆ. ಇದೇ ಕಾರಣದಿಂದ ಇರಬೇಕು,  'ವಾತಾನೀಕಮಯೈರ್ಬಂಧೈರ್ಧ್ರುವೇ ಬದ್ಧಾನಿ ತಾನಿ ವೈ' ಎಂದಿದ್ದು.


ಯಾವ ದೂರದರ್ಶಕ ಅಥವಾ ಸ್ಪೇಸ್ ಷಟಲ್ ಅಥವಾ ಗಗನಯಾತ್ರಿಯ ಸಹಾಯವಿಲ್ಲದೇ ನಮ್ಮ ಋಷಿಗಳು ಇಂಥಾ ಒಂದು ಶೋಧವನ್ನು ಮಾಡಿ, ಅದನ್ನು ಸಾಹಿತ್ಯಿಕವಾಗಿಯೂ ಸೊಂದರಗೊಳಿಸಿ ಮತ್ತದಕ್ಕೆ ತತ್ವವನ್ನೂ ಲೇಪಿಸಿದರಲ್ಲ ಇದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಹೆಗ್ಗಳಿಕೆ. ಇಂಥಾ ಸತ್ಯಗಳೆ ಸಾಕಲ್ಲವೇ ಪುರಾಣಗಳ ಸತ್ವ-ಸತ್ಯ ಅರಿಯಲು.

No comments:

Post a Comment