Wednesday, February 7, 2018

ಫ಼ಾರೆವರ್ ಫ಼ಾರ್ಟಿ-ಅನಿಸಿಕೆ

ಎರಡು ವರ್ಷದ ಹಿಂದೆ ಊರಿಗೆ ಹೋದಾಗ ಸಮುದ್ಯತಕ್ಕನ ಮನೆಗೆ ಹೋಗಿದ್ದಾಗ ಅವಳು ಹೇಳಿದ್ದಳು. "ಒಂದು ಇಂಗ್ಲಿಷ್ ಪುಸ್ತಕ ಅನುವಾದ ಮಾಡ್ತಾ ಇದ್ದಿ ಕನ್ನಡಕ್ಕೆ. ಒಂದು ಸೈನಿಕನ ಬಗ್ಗೆ ಅವನ ಮನೆಯವರು ತಮ್ಮ ಮತ್ತೆ ಸೈನಿಕನ ಸ್ನೇಹಿತರ, ಸಂಬಂಧಿಗಳ ಅನುಭವ ಎಲ್ಲ ಸೇರಿಸಿ ಒಂದು ಪುಸ್ತಕ ಬರದ್ದ. ಅದನ್ನ ಅನುವಾದ ಮಾಡ್ತಾ ಇದ್ದಿ." ಎಂದಿದ್ದಳು. ಆದರೆ ಯೋಗಾಯೋಗವೋ ಎನ್ನುವಂತೆ ನನಗೆ ಪುಸ್ತಕ ಓದಲು ಸಾಧ್ಯವೇ ಆಗಿರಲಿಲ್ಲ. ಅನುವಾದ ಸಾಹಿತ್ಯ ಎಂದರೆ ಏನೋ ಒಂದು ರೀತಿಯ ಅಲರ್ಜಿ ಬೆಳೆಸಿಕೊಂಡಿದ್ದವ ನಾನು. ನಾನೊಬ್ಬ ಅನುವಾದಕನಾಗಲು ಸಾಧ್ಯವಾಗದ್ದು ಇದೇ ಕಾರಣಕ್ಕೊ ಅಥವಾ ಸಾಧ್ಯವಾಗದ್ದಕ್ಕೆ ಅಲರ್ಜಿಯೋ ಗೊತ್ತಿಲ್ಲ. ಕೆಲವು ಅನುವಾದ ಸಾಹಿತ್ಯಗಳಲ್ಲಿ ಭಾಷಾ ಸೌಂದರ್ಯ ಮಾತ್ರ ಇದ್ದು ಕೇವಲ ಭಾಷಾಂತರವಾಗಿರುತ್ತದೆ, ಭಾವ ಮರೆಯಾಗಿರುತ್ತದೆ. ಆದರೆ ಸ್ವಯಂ ಗಮಕಿಯಾಗಿರುವ ಸಮುದ್ಯತಕ್ಕನ ಬರಹದಲ್ಲಿ ಭಾಷೆ ಭಾವಗಳ ಸುಂದರ ಸಮ್ಮಿಲನವಾಗುವುದರಲ್ಲಿ ನನಗ್ಯಾವ ಸಂಶಯವೂ ಇರಲಿಲ್ಲ. ನಿರೀಕ್ಷೆ ನಿಜವಾಯಿತು. ಒಂದು ಅದ್ಭುತ ಲೋಕ ಅಕ್ಷರರೂಪದಲ್ಲಿ ತೆರೆಯಿತು.

'ಫ಼ಾರೆವರ್ ಫ಼ಾರ್ಟಿ' ಎನ್ನುವ ಪುಸ್ತಕ ಅದು. ಅದೇ ಹೆಸರಲ್ಲಿ ಕನ್ನಡದಲ್ಲಿ ಅನುವಾದ ಮಾಡಲಾಗಿದೆ. ಒಬ್ಬ ಸೈನಿಕನ ಬದುಕನ್ನು ಆತನ ತಂಗಿ ಮತ್ತು ಪತ್ನಿ ಅವರ ದೃಷ್ಟಿಯಲ್ಲಿ ಮತ್ತು ಸೈನಿಕನ ಸಹೋದ್ಯೋಗಿಗಳ ದೃಷ್ಟಿಯಲ್ಲಿ ಆತನ ವ್ಯಕ್ತಿಚಿತ್ರಣ ಜೀವನ ಚಿತ್ರಣಗಳನ್ನು ಮಾಡಿದ್ದಾರೆ ಇಲ್ಲಿ. ಕೇವಲ ನಲವತ್ತು ವರ್ಷಗಳ ಕಾಲ ಪಾರ್ಥಿವ ದೇಹವನ್ನಿಟ್ಟುಕೊಂಡು ಇದ್ದ ಸೈನಿಕನ ವೃತ್ತಿ ಬದುಕು, ಸಾಂಸಾರಿಕ ಜೀವನ, ಪ್ರೇಮ ಪ್ರಕರಣ, ಆತನ ಹುಡುಗಾಟಿಕೆ ಹಾಸ್ಯ ಪ್ರಜ್ಞೆಗಳು ಅದ್ಭುತವಾಗಿ ಚಿತ್ರಿತವಾಗಿವೆ ಇಲ್ಲಿ.

ಕರ್ನಲ್ ವಸಂತ್ ಶಿವಮೊಗ್ಗದಂಥಾ ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದು, ನಂತರ ಬೆಂಗಳೂರನು ಸೇರಿದ್ದರು. ಇವರ ನಾಚಿಕೆ ಸ್ವಭಾವ ಎಷ್ಟೆಂದರೆ, ತಾಯಿ ಕಾರು ಓಡಿಸಿದಾಗ ಎಲ್ಲರೂ ಅವರನ್ನೇ ನೋಡುತ್ತಾರೆ ಎನ್ನುವ ಕಾರಣಕ್ಕೆ ಬೇಡ ಎಂದಿದ್ದರು. ಆದರೆ ಇದು ನಾಚಿಕೆಯಲ್ಲ. ಶಿವಮೊಗ್ಗದಂಥಾ ಸಣ್ಣ ಊರಿನ ಕಾಲದ ಜನರ ಮನಃಸ್ಥಿತಿಯನ್ನು ಅವರು ಅರ್ಥ ಮಾಡಿಕೊಂಡಿದ್ದ ಪರಿ.ಅವರಲ್ಲಿ ನಾಚಿಕೆಯ ಸ್ವಭಾವ ಇದ್ದರೂ ಸ್ನೇಹಜೀವಿಯಾಗಿದ್ದರು, ಬಾಲ್ಯದ ಅವರ ನಾಚಿಕೆ ಸ್ವಭಾವ ಅವರ ಸ್ನೇಹಸಂಪಾದನೆಗೆ ಎಂದೂ ಅಡ್ಡಿಯಾಗಲಿಲ್ಲ. ಹುಡುಗು ಬುದ್ಧಿ-ಪುಂಡಾಟಿಕೆ ಎಂದರೆ ಎಲೆ ಅಡಿಕೆ ಉಗಿದು ಕೆಂಪಡರಿದ್ದನ್ನು ಕೊಲೆಯಾಗಿ ಚೆಲ್ಲಿದ ರಕ್ತ ಎಂದು ಗಂಭೀರವಾಗಿ ತನ್ನದೇ ಓರಗೆಯ ಹುಡುಗರನ್ನು ಹೆದರಿಸಿದ್ದರಂತೆ. ಅವರ ಚಿಕ್ಕಮ್ಮ ತಮ್ಮ ಮನೆಯನ್ನು ಹೊಗಳುತ್ತಾ ಅಲ್ಲಿದ್ದವರಿಗೆ ಮಗು ಮದುವೆ ಎಲ್ಲಾ ಆಯಿತು ಅದು auspicious ಎಂದಾಗ ಆಗಬೇಕಾದ್ದು ಹಿಂದೆ ಮುಂದೆ ಆಗಿದೆ. ಹಾಗಾಗಿ ಮನೆ inauspicious ಎಂದಿದ್ದರಂತೆ. ಇಂಥಾ ಹಾಸ್ಯಪ್ರಜ್ಞೆಯ ಚಿತ್ರಣಗಳು, ಎಲ್ಲಿಯೂ ಗಾಂಭೀರ್ಯದ ಚೊಕಟ್ಟನ್ನು ಮೀರದೇ ಸುಂದರವಾಗಿ ಚಿತ್ರಿತವಾಗಿವೆ.ಅವರ ಪ್ರೇಮ ಪ್ರಕರಣದ ಚಿತ್ರಣಗಳು ಬಹಳ ಸೊಗಸಾಗಿ ಮೂಡಿ ಬಂದಿವೆ. ಅವರು ಕಾರಣಾಂತರಗಳಿಂದ ಬೇರೆಯಾಗಿ ಇದ್ದಾಗಿನ ಸಮಯದ ಚಿತ್ರಣ ಪ್ರೀತಿಯ ನಿಜಾರ್ಥವನ್ನು ಬಿಂಬಿಸುತ್ತದೆ.


ಸೈನಿಕರೆಂದರೆ ಬಿಗುಮುಖದ, ಹೈ ಫ಼ೈ ಹಾಸ್ಯ ಪ್ರಜ್ಞೆಯ, ಪರಿವಾರದೊಂದಿಗೆ ಅತ್ಯ್ತ್ತಮ ಸಂಬಂಧದಿಂದ ದೂರಾದ ಜನ ಎನ್ನುವ ಕಲ್ಪನೆಯನ್ನು ತೊಡೆದುಹಾಕುತ್ತದೆ ಪುಸ್ತಕ. ಸೈನಿಕನ ಬದುಕೆಂದರೆ ಬರೇ ಗಡಿ ರಕ್ಷಣೆ, ಯುದ್ಧಗಳಷ್ಟೇ ಎನ್ನುವಂತಾಗಿದೆ ಸೈನಿಕ ಸಾಹಿತ್ಯ. ಅದರಿಂದ ಭಿನ್ನವಾಗಿರುವ ಒಂದು ಒಳ್ಳೆಯ ಪುಸ್ತಕ. ಹೆಸರು ಫ಼ಾರೆವರ್ ಫ಼ಾರ್ಟಿ. pothi.comನಲ್ಲಿ ಲಭ್ಯವಿದೆ.

No comments:

Post a Comment