Thursday, February 8, 2018

ರಾಹು-ಚಂದ್ರ-ಗ್ರಹಣ

ಚಂದ್ರ ಗ್ರಹಣವಾದೊಡನೆ ಏಕೋ ಏನೋ ಮನಸ್ಸು ಟೈಮ್ ಮಶೀನ್ ಹತ್ತಿ ಬಾಲ್ಯದಲ್ಲಿ ನೋಡಿದ ಮೊದಲ ಚಂದ್ರಗ್ರಹಣದತ್ತ ಸಾಗಿ, ಆ ಸಮಯದಲ್ಲಿ ಕೇಳಿದ ಪ್ರಶ್ನೆಗಳು, ಸಿಕ್ಕ ಉತ್ತರಗಳ ಸುತ್ತ ತೆಂಕಿತಿಟ್ಟಿನ ಯಕ್ಷಗಾನ ವೇಷಧಾರಿಯ ರೀತಿ ಗಿರಕಿ ಹೊಡೆದುಬಿಡುತ್ತದೆ. ಅಲ್ಲಿ ವೇಷಧಾರಿಗೆ ಕರತಾಡನದ ಸ್ವಾಗತ ಸಿಕ್ಕರೆ, ನನಗೆ ಎಲ್ಲೋ ಓದಿದ ಭೌತಶಾಸ್ತ್ರ-ಪುರಾಣಗಳ ಮಿಲನವಾಗಿಬಿಡುತ್ತದೆ. ಚಂದ್ರನನ್ನು ರಾಹು ಬಾಧಿಸಿದರೆ ನನ್ನನ್ನು ಗ್ರಹಣಕ್ಕೊಳಗಾದ ಚಂದ್ರ ಬೋಧಿಸುತ್ತಾನೆ. ಮನೋ ಕಾರಕನಿಗೆ ಗ್ರಹಣವಾದಾಗ ನನಗೆ ಬೋಧನ. ವಿಪರ್ಯಾಸವೇ ಸರಿ. ಅಲ್ಲಿ ಗ್ರಹಣ ಸಮಯದಲ್ಲಿ ಆ ಶಶಾಂಕ ಒದ್ದಾಡಿದರೆ ಈ ಶಶಾಂಕ ಹಳೆಯ ನೆನಪುಗಳನ್ನು ಕೆದಕಿ ಒಮ್ಮೊಮ್ಮೆ ಪ್ರಫುಲ್ಲನಾಗುತ್ತಾನೆ, ಒಮ್ಮೊಮ್ಮೆ ಭ್ರಮೆ-ವಾಸ್ತವ-ವಿಜ್ಞಾನ-ಪದ್ಧತಿಗಳ ಗಾಣದಲ್ಲಿ ಸಿಕ್ಕಿ ಅರೆದು ನುರುಚಿ ಕರಟಿ ಹೋಗುತ್ತಾನೆ.

ಇದೇ ರೀತಿ ಗ್ರಹಣವಾದಾಗ, ನಾನು ನನ್ನ ಅಮ್ಮೊಮ್ಮನಲ್ಲಿ ಪ್ರಶ್ನೆ ಕೇಳಿದ್ದೆ. "ಅಮ್ಮೊಮ್ಮ, ಗ್ರಹಣ ಎಂದರೆ ಎಂತ?" ಅಂತ. ಅಮ್ಮೊಮ್ಮ ಎಂದಿನಂತೆ ಕತೆ ಹೇಳಿದ್ದಳು. ಕತೆಯ ಸಾರಾಂಶ ನಮಗೆಲ್ಲಾ ತಿಳಿದದ್ದೇ. ಸಮುದ್ರ ಮಂಥನದ ಕಾಲದಲ್ಲಿ ವಿಷ್ಣು ಮೋಹಿನಿಯ ರೂಪವನ್ನು ಧರಿಸಿ, ಪಂಕ್ತಿ ಬೇಧ ಮಾಡುತ್ತಾ, ದೇವತೆಗಳಿಗೆ ಅಮೃತವನ್ನು ಕೊಡುತ್ತಿರುವಾಗ ಸಂಶಯಿಸಿದ ರಾಹು, ದೇವತೆಗಳಂತೆ ರೂಪ ತಳೆದು ಅಮೃತ ಪಾನ ಮಾಡಿದ. ಇದನ್ನು ಸೂರ್ಯ ಚಂದ್ರರು ಪತ್ತೆ ಹಚ್ಚಿ ವಿಷ್ಣುವಿಗೆ ಹೇಳಿದಾಗ ವಿಷ್ಣು ಆ ರಕ್ಕಸನ ಶಿರಚ್ಚೇದ ಮಾಡಿದ. ಸಿಟ್ಟಿಗೆದ್ದ ರಾಹು, ಕಾಲ ಸಿಕ್ಕಾಗಲೆಲ್ಲಾ ಸೂರ್ಯ ಚಂದ್ರರನ್ನು ಬಾಧಿಸತೊಡಗಿದ. ಇದೇ ಗ್ರಹಣ ಎಂದು. ಅಮ್ಮೊಮ್ಮನಲ್ಲಿ ನಾನು ಕೇಳಿದ್ದೆ "ರಾಹು ಚಂದ್ರನ್ನ ನುಂಗಿರೆ, ಅವ ನಾಳೆ ಬತ್ನಲ್ಯಾ?" ಅಂತ. ಅಮ್ಮೊಮ್ಮ ಹೇಳಿದ್ದಳು. "ರಾಹುವಿಗೆ ಬಾಯಿ ಮಾತ್ರ ಇರ್ತು. ಹೊಟ್ಟೆ ಇರ್ತಲ್ಲೆ. ಹಂಗಾಗಿ ಚಂದ್ರ ಬಾಯಲ್ಲಿ ಇಳಿದು ಗಂಟಲಲ್ಲಿ ಹೊರಗೆ ಬತ್ತ" ಅಂತ.

ಮತ್ತೆ ಹರಕು ಬಾಯಿ ತೆರೆದು ಅಮ್ಮನಲ್ಲಿ ಕೇಳಿದ್ದೆ. ಅಮ್ಮ ಅಪ್ಪ ದೊಡ್ಡಮ್ಮ ಮೂರೂ ಜನಕ್ಕೆ ಪ್ರಾಣ ಹಿಂಡಿಬಿಟ್ಟಿದ್ದೆ ಎಂದರೇ ಬಹುಷಃ ಸರಿಯಾದೀತೇನೊ. ನನ್ನ ಚಿಕ್ಕ ತಲೆಗೆ ಗ್ರಹಣದ ವಾಸ್ತವ ಏನು ಮಾಡಿದರೂ ಹೋಗಲೊಲ್ಲದು. ಆಗ, ದೊಡ್ಡಮ್ಮ ಹೇಳಿದ್ದಳು. "ನೀನು ದೊಡ್ಡವಾಗಿ ಶಾಲೆಗೆ ಕಾಲೇಜಿಗೆ ಹೋದಾಗ ಅಲ್ಲಿ ಪಾಠ ಇರ್ತು. ಅಲ್ಲಿ ಗೊತ್ತಾಗ್ತು" ಅಂತ. ಆದರೆ ನನ್ನ ವರಾತ ನಿಲ್ಲಲಿಲ್ಲ. ಸಂತೋಷದಿಂದಲೇ ಈ ಅಸಹನೆಯನ್ನು ತಡೆದುಕೊಂಡ ಅಪ್ಪ, ಸಂಜೆ ಗ್ರಹಣ ತೋರಿಸಿದ. ರಾಹು ಕಾಣಲಿಲ್ಲ. ಆದರೆ ಕೆಲವು ಗಂಟೆಗಳ ನಂತರ ಮತ್ತೆ ಚಂದ್ರ ಬಾನಲ್ಲಿ ನಕ್ಕಾಗ ಏನೋ ಸಂತೋಷ ಸಮಾಧಾನವಾಗಿತ್ತು. ನಾನು ಮತ್ತೆ ಆಕಾಶದಲ್ಲಿ ಇದ್ದೇನೆ ಎನ್ನುವ ಸಮಾಧಾನ ಅದು.

ಶಾಲೆಗೆ ಹೋದ ಮೇಲೆ ತಿಳಿಯಿತು. ಸೂರ್ಯ ಚಂದ್ರ ಭೂಮಿ ಕ್ರಮವಾಗಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣವಾಗುತ್ತದೆಂದೂ, ಸೂರ್ಯ ಭೂಮಿ ಚಂದ್ರ ಒಂದೇ ರೇಖೆಯಲ್ಲಿ ಬಂದಾಗ ಚಂದ್ರಗ್ರಹಣ ಘಟಿಸುತ್ತದೆಂದೂ ತಿಳಿಯಿತು. ಭೂಮಿಯ ಮೇಲೆ ಚಂದ್ರನ ನೆರಳು ಬಿದ್ದರೆ ಅದು ಸೂರ್ಯಗ್ರಹಣ, ಚಂದ್ರನ ಮೇಲೆ ಭೊಮಿಯ ನೆರಳು ಬಿದ್ದರೆ ಅದು ಚಂದ್ರಗ್ರಹಣ. ಅಮಾವಾಸ್ಯೆಯಂದು ಮಾತ್ರ ಸೂರ್ಯಗ್ರಹಣಕ್ಕೆ ತಕ್ಕ ಗ್ರಹಸಂಯೋಜನೆ ಘಟಿಸುತ್ತದೆ. ಹುಣ್ಣಿಮೆಯಂದು ಮಾತ್ರ ಚಂದ್ರಗ್ರಹಣಕ್ಕೆ ಬೇಕಾದ ಗ್ರಹ ಸಮ್ಮೇಳನ ನಡೆಯುತ್ತದೆ ಎಂದೂ ತಿಳಿಯಿತು. ಆದರೂ ಮನಸ್ಸು ಪುರಾಣವನ್ನು ಒಪ್ಪದೆ ಇರಲು ಒಲ್ಲದು. ಬುದ್ಧಿ ವಿಜ್ಞಾನವನ್ನು ಬಿಡಲೊಲ್ಲದು. ನನ್ಗೂ ಒಂದು ರೀತಿಯ ಗ್ರಹಣ ಬಾಧೆ. ಹೆಸರೇ ಹಾಗಿದೆಯಲ್ಲ. ನನ್ನ ತಪ್ಪಲ್ಲ.

ಈ ರಾಹುವಿಗೆ ಸ್ವರ್ಭಾನು ಎನ್ನುವ ಹೆಸರೂ ಇದೆ, ಆತನ ರುಂಡ ಹಾವಿನಂತೆ ಇದ್ದದ್ದರಿಂದ ಅದನ್ನು ರಾಹು ಎಂದರು, ಮುಂಡವನ್ನು ಕೇತು (ಬಾಲ) ಎಂದು ಕರೆದರು. ಮಹಾ ಚಾಲಾಕಿ. ಮಹಾ ಮಾಯಾವಿ ವಿಷ್ಣು ತನ್ನ ಮಾಯೆಯಿಂದ ಅಸುರರನ್ನು ಮೋಹಿಸಿದಾಗಲೂ ಮೋಹಕ್ಕೊಳಗಾಗಲಿಲ್ಲ ರಾಹು. ಅದಕ್ಕೇ ಏನೋ ಆತನಿಗೆ ಗ್ರಹಗಳಲ್ಲಿ ಸ್ಥಾನ ಒದಗಿಸಿದ್ದು. ಆ ಶಶಾಂಕನನ್ನು ಗ್ರಹಣ ಸಮಯದಲ್ಲಿ ಬಾಧಿಸುವ ರಾಹು ಈ ಶಶಾಂಕನನ್ನು ಬಹಳ ದಿನ ಕಾಡಿಸಿಬಿಟ್ಟ, ಕಣ್ಣಿಗೆ ಕಾಣಿಸಿಕೊಳ್ಳದೆ. ಕೊನೆಗೊಮ್ಮೆ ತಿಳಿಯಿತು ರಾಹು ಕೇತುಗಳು ಛಾಯಾಗ್ರಹಗಳು, ಅವು ಭೂಮಿಯ ಪಥ ಮತ್ತು ಚಂದ್ರನ ಪಥ ಸೇರುವಲ್ಲಿನ ಬಿಂದುಗಳು ಎಂದು. ಜೋತಿಷ್ಯ ಕೂಡಾ ಇವರನ್ನು ಛಾಯಾಗ್ರಹಗಳು ಎಂದೇ ಗುರುತಿಸುತ್ತದೆ.

ಆದರೆ ವಿಷ್ಣುಪುರಾಣದಲ್ಲಿ ಈ ರಾಹುವಿನ ವರ್ಣನೆ ಹೀಗಿದೆ.

ಸ್ವರ್ಭಾನೊಸ್ತುರಗಾ ಹ್ಯಷ್ಯೌ ಭೃಂಗಾಂಭಾ ಧೂಸರಂ ರಥಮ್|
ಸಕೃದ್ಯುಕಾಸ್ತು ಮೈತ್ರೇಯ ವಹನ್ತ್ಯವಿರತಂ ಸದಾ||
ಆದಿತ್ಯಾನ್ನಿಸೃತೋ ರಾಹುಃ ಸೋಮಂ ಗಚ್ಛತಿ ಪರ್ವಸು|
ಆದಿತ್ಯಮೇತಿ ಸೋಮಾಚ್ಛ ಪುನಃ ಸೌರೇಷು ಪರ್ವಸು||
ತಥಾ ಕೇತುರಥಸ್ಯಾಶ್ಚಾ ಅಷ್ತಷ್ವೌ ವಾತರಹಂಸಃ|
ಪಲಾಲಧೂಮವರ್ಣಾಭಾ ಲಾಕ್ಷಾರಸನಿಭಾರುಣಾಃ||

ರಾಹುವಿನ ರಥವು ಕಪ್ಪು ವರ್ಣದ್ದಾಗಿದ್ದು., ಕಪ್ಪು ಕುದುರೆಗಳು ಅದನ್ನು ಎಳೆಯುತ್ತಿದ್ದಾರೆ. ಕೇತುವಿನ ರಥ ಕೂಡಾ ಹೀಗೆಯೇ ಇದೆ.ಶುಕ್ಲ ಪಕ್ಷದಲ್ಲಿ ಅಂದರೆ ಪ್ರತಿಪದದಿಂದ ಹುಣ್ಣಿಮೆಯ ತನಕ ಈತ ಸೂರ್ಯನಿಂದ ಚಂದ್ರನ ಕಡೆಗೂ, ಕೃಷ್ಣ ಪಕ್ಷದಲ್ಲಿ ಚಂದ್ರನಿಂದ ಸೂರ್ಯನ ಕಡೆಗೂ ಸಾಗುತ್ತಾನೆ.

ಜ್ಞಾನಿಗಳಿಗೆ ಎಲ್ಲವನ್ನೂ ಒಟ್ಟಿಗೆ ಹೇಳಲು ಸಾಧ್ಯ ಎನ್ನುವುದಕ್ಕೆ ಈ ವ್ಯಾಸರು ರಚಿಸಿದ ಈ ಶ್ಲೋಕಗಳೇ ಸಾಕ್ಷಿ. ಸೂರ್ಯ ಮತ್ತು ಚಂದ್ರ ಗ್ರಹಣಗಳು ಅಮಾವಾಸ್ಯೆ ಮತ್ತು ಹುಣ್ಣಿಮೆಯಲ್ಲೇ ಆಗುತ್ತವೆ ಎನ್ನುವುದನ್ನೂ ತಿಳಿಸಿದರು ಜೊತೆಗೆ, ರಾಹು ಕೇತುಗಳು ಪಥಮಿಲನ ಬಿಂದುಗಳು ಎನ್ನುವುದನ್ನೂ ತಿಳಿಸಿದರು. ಈ ಪಥ ಮಿಲನ ಬಿಂದುಗಳು ಸೂರ್ಯನೈಗೆ ಎದುರಾಗಿ ಬರುವುದೇ ಗ್ರಹಣ ಎಂದು ಕೂಡಾ ತಿಳಿದಿದರು. ಜ್ಞಾನದ ಅಗಾಧತೆ ಮತ್ತು ಆಳ ಮಹತ್ತರವಲ್ಲವೇ? ಕಪ್ಪು ಬಣ್ಣ ಹೊಂದಿರುವುದರಿಂದ ಕಣ್ಣಿಗೆ ಕಾಣುವುದಿಲ್ಲ ಎಂದು ಯಾರೂ ಅರಿಯಬಹುದಲ್ಲವೇ.


ಅಂತೂ ಮೊನ್ನೆ ಸುಧಾಕರ ತಾನು ಗ್ರಹಣಕ್ಕೆ ಒಳಗಾಗಿ ಈ ಶಶಾಂಕನ ಬುದ್ಧಿಗೆ ಅಡರಿದ್ದ ಗ್ರಹಣವನ್ನು ತೊಳೆದ.

1 comment: