Tuesday, February 20, 2018

ದಿಕೇಷನ್

ಬೆಂಗಳೂರಿಗೆ ಬಂದ ಮೇಲೆ ಕೇಳಬಾರದಷ್ಟು ಕೆಟ್ಟ ಕನ್ನಡ ಕೇಳಿಬಿಟ್ಟೆ. ಕೆಲವು ಸಲ ಕೇಳಬಾರದಷ್ಟು ಕೆಟ್ಟ ಇಂಗ್ಲೀಷ್ ಕೂಡಾ. "I had came" ಎನ್ನುವ ಅದ್ಭುತ ಇಂಗ್ಲಿಷ್ ಮಾತಾಡುವ ಒಬ್ಬ ಮನುಷ್ಯನನ್ನೂ ನೋಡಿಬಿಟ್ಟೆ. ಎಲ್ಲೇ ಆಗಲಿ, ಕೆಟ್ಟ ಇಂಗ್ಲಿಷ್ ಕನ್ನಡ ಕೇಳಿದರೆ ನೆನಪಾಗುವವ ಹಾಲ ನಾಯ್ಕ. ಊರಿಗೆ ಹೋದಾಗ ನನ್ನ ಸುದೈವವೋ ಅಥವಾ ಇಂಗ್ಲಿಷ್ ಭಾಷೆಯ ದುರ್ದೈವವೋ ಗೊತ್ತಿಲ್ಲ, ಹಾಲನ ಇಂಗ್ಲಿಷ್ ಭಾಷೆಯ ಒಂದಾದರೂ ಶಬ್ದ ನನ್ನ ಕಿವಿಯ ಮೂಲಕ ತಲೆಗಡರಿ ಒಂದು ಹೊತ್ತು ತರುವ ಮಾತಾಗುತ್ತದೆ. ಬಿಡಿ. ನಮ್ಮ ಸ್ವಾತಂತ್ರ್ಯ ಯೋಧರನ್ನು ಚಿತ್ರ ಹಿಂಸೆ ನೀಡಿದ ಇಂಗ್ಲಿಷರ ಭಾಷೆಗೆ ಗತಿ ಒಂದು ರೀತಿಯಿಂದ ನೋಡಿದಾಗ ಸರಿಯೇ. ಡೌಲು ಮಾಡಲು ಹೋಗಿ ನಗೆಪಾಟಲಾಗುವವರ, ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗುವ ದಂಭಾಚಾರಿಗಳ ವ್ಯಂಗ್ಯರೂಪವಾಗಿ ನನಗೆ ಕಾಣಿಸುತ್ತಾನೆ ಹಾಲ ನಾಯ್ಕ

ಆದರೆ ನನಗೆ ಹಾಲ ನಾಯ್ಕನ ಮೇಲೆ ಅತೀವ ಸೆಳೆತ-ಅಭಿಮಾನ-ಗೌರವ. ನನಗೆ ಬರೆಯಲು ಏನೂ ಸಿಗದಿದ್ದಾಗ, ಹಾಲ ನಾಯ್ಕನೊಡನೆ ಆಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತೇನೆ. ಸಪ್ತ ಸಾಗರದ ಒಟ್ಟೂ ಆಲಕ್ಕಿಂತಲೂ ಮಿಗಿಲಾದ ಸುಪ್ತ ಸಾಗರವಾದ ಮನಸ್ಸಿನ ಆಳದಲ್ಲೆಲ್ಲೋ ಈತನ ಒಂದು ಮಾತು ಇರುತ್ತದೆ, ನನ್ನ ಹೊತ್ತು ತಂದ ಮಾತುಗಳಲ್ಲಿ ಒಂದಾಗಿ. ಅಂಥದ್ದೇ ಒಂದು ಹೆಕ್ಕಿತಂದ ನೆನಪಿದು.

ಒಮ್ಮೆ ಊರಿಗೆ ಹೋದಾಗ ಆಗಾಗ ನಮ್ಮ ಮನೆಗೆ ಬರುವ  ಹಾಲ ನಾಯ್ಕ ಬಂದಿದ್ದ. ಅಮ್ಮ ಕೊಟ್ಟಿದ್ದ ಟೀ ಕುಡಿದು ಲೋಟವನ್ನು ತೊಳೆದಿಟ್ಟು ಮಾತಿಗೆ ಶುರು ಮಾಡಿದ ಹಾಲ ನಾಯ್ಕ. ಏರು ಪೇರಾಗುತ್ತಿರುವ ಹವಾಮಾನ, ಬದಲಾಗುತ್ತಿರುವ ಮನುಷ್ಯನ ಜಾಯಮಾನ, ದೊರೆಯುತ್ತಿರುವ ಹೊಸ ಜ್ಞಾನ ಇತ್ಯಾದಿಗಳ ಕುರಿತು ಮಾಟಾಡುತ್ತಲೇ ಇದ್ದ ಹಾಲ ನಾಯ್ಕ. ಅವನ ಮುಗ್ಧತೆಯ ಕಾರಣದಿಂದಲೋ ಅಥವಾ ಅವನ ಡೌಲಿನ ಸ್ವಭಾವವೋ ಗೊತ್ತಿಲ್ಲ, ಅವನ ಮಾತು ಎಂದಿಗೂ ಯಾರಿಗೂ ಪ್ರಬುದ್ಧ ಅನ್ನಿಸಲೇ ಇಲ್ಲ. ಅದಕ್ಕೆ ಹಾಲ ನಾಯ್ಕನಿಗೂ ತಲೆಬಿಸಿ ಇಲ್ಲ. ಎಷ್ಟು ಹೊತ್ತಾದರೂ ಹಾಲನ ಇಂಗ್ಲಿಷ್ ಬರಲೊಲ್ಲದು. ನನಗೋ ಕಸಿವಿಸಿ ಕಳವಳ.

ಅಷ್ಟು ಹೊತ್ತಿಗೆ ಹೊರಡಲನುವಾದ ಹಾಲ. ನಾನಂತೂ ಪ್ರತಿಜ್ಞೆ ಮಾಡಿಬಿಟ್ಟಿದ್ದೆ. ಎಂದಿನಂತೆ ಇಂದೂ ಇವನ ಬಾಯಲ್ಲಿ ಇಂಗ್ಲಿಷ್ ಕೊಲೆ ಮಾಡಿಸುವುದೇ ಸರಿ ಎಂದು. ಅವನನ್ನು ಒಂದು ಕವಳ ಕೊಟ್ಟು, "ಹೋಗ್ಬೋದಂತ ಹಾಲ, ಎಂತ ಕೆಲಸವಾ ಇನ್ನು" ಎಂದೆ. ಅವನಿಗೂ ಮಾತು ಬೇಕಿತ್ತೋ ಏನೋ. ಮಾತು ಮುಂದುವರೆಸಿದ. ತಡೆಯಲಾರದೆ ನಾನು ಕೇಳಿಯೇ ಬಿಟ್ಟೆ. "ಹಾಲ ಇಷ್ಟು ಇಂಗ್ಲಿಷ್ ಹೆಂಗೆ ಕಲಿತೆ ನೀನು ಅಂತ" ಒಳಗೆ ನನ್ನಮ್ಮ ಗೊಣಗುತ್ತಿದ್ದಿರಬೇಕು, "ಬೇರೆ ಉದ್ಯೋಗ ಇಲ್ಲೆ ಇವಂಗೊಂದು" ಎಂದು. ಆನ್ ಆಯಿತು ಹಾಲನ ಹಿಸ್ಟರಿ ಚಾನಲ್.

"ಅಯ್ಪಿ, ಎಂತ ಕೇಳ್ತುರಿ ಅಯ್ದ್ನಾ? ಅಯ್ದೇ ಒಯ್ಂದು ದೊಯ್ಡ ಕಯ್ತೆ. ಅದು ಹೋಯ್ರಾಟದ ಟೈಮ್ನಾಗೆ ಕಲ್ತುದ್ದು. ಆಗ ಭೂ ಸುಯ್ಧಾರಣೆ ಕಾಯ್ನೂನು ಬಯ್ಂತು ನೋಯ್ಡಿ, ಆಗ ನಾನೂ ಹೋದವ. ಗೇಣಿದಾರರ ಹೋರಾಟಕ್ಕೆ ಅಂತ. ನಾನು ಎಲ್ಲೂ ಗೇಯ್ಣಿ ಮಾಡುಲ್ಲ ಬಿಡಿ. ಆಯ್ದ್ರೂ ನಮ್ಮ ಜನ ಬಿಡಕ್ಕಾತೈತೇ ಅಗಕ್ಕುಲ್ಲ. ಅದಕ್ಕೇ ದಿಕೇಷನ್ ಕೇಸ್ ಹಾಕ್ದವ್ರ ಜತಿಗೆ ಹೊಯ್ಂಟುವು. ಒಯ್ಂದ್ ದಿಯ್ನ ಸ್ಮಾ ಕಳ್ಳಬಟ್ಟಿ ಕುಯ್ಡ್ಕಂದು ಸಾಗರ ಪ್ಯಾಟೇಲಿ ಧಿಯ್ಕ್ಕಾರ ಧಿಯ್ಕ್ಕಾರ ಅಯ್ಂತಾ ಕೂಗ್ತಾ ಹೋದುಂವು. ಅಯ್ದ್ ನೋಯ್ಡಿ ಓಯ್ಂದಿಷ್ಟು ಜಯ್ನ ಕೂಗಾಕೆ ಹಿಡದ್ರು. ಪೋಲೀಸರು ಬಿಯ್ಟ್ಟಾರಾ, ಎಳ್ಕ ಹೋಯ್ದ್ರು. ಮರು ದಿನ ಯಾರೋ ಬಯ್ಂದು ಜಾಮೀನು ಕೊಟ್ಟು ಬಿಡಸ್ಕ ಬಯ್ಂದ್ರು."

"ಅಲ್ಲಾ ಇಂಗ್ಲಿಷ್ ಕಲ್ತಿದ್ದು ಹೇಳಾ ಮಾರಾಯ" ಅಂದೆ ನಾನು ತವಕ ತಾಳಲಾರದೆ.

"ಅಯ್ದೇ ಹೇಳದಾ ಅಯ್ಪಿ. ಅಯ್ಲ್ಲಿಂದ ಬಿಡಸ್ಕ ಬಯ್ಂದ ಮೇಲೆ ಎಂತ ಮಾಡದು ಗೊಯ್ತ್ತಾಗ್ದೆ, ಹೋರಾಟ ಮಾಡವ್ರ ಹಿಂದುಕೆ ಹೋಯ್ದೆ ನಾ. ಅಯ್ಲ್ಲಿ ಒಯ್ಂದ್ ಕಡಿಗೆ ಬಂಗಾರಿ ಭಾವೋರು, ಮತ್ತೊಂದಿಷ್ಟ್ ಜನ ಪ್ಯಾಟೆ ಜನ ಎಲ್ಲಾ ಇದ್ರು. ನಾನೂ ಅವ್ರೆಲ್ಲರ ಜತಿಗೆ ಹೋರಾಟಕ್ಕೆ ಹೋಯ್ದೆ. ಅಯ್ಲ್ಲಿ ಅವ್ರೆಲ್ಲಾ ಮಾಯ್ತಾಡದು ನೋಯ್ಡಿ ಕಲ್ತೆ" ಎಂದ.

"ಎಂತಕ್ಕಾ?" ಅಂದೆ.

ಅದಕ್ಕಾತ, "ಯುಲ್ದಿದ್ರೆ ನಮ್ಗೆ ವಾಲ್ವ್ ಇರಕಲ್ಲ" ಎಂದ. ಆತ ಹೇಳಿದ್ದು ವ್ಯಾಲ್ಯೂ ಎಂದು ಅರ್ಥವಾಯಿತು. ಹಾಲ ಹೊರಟ. ಹೊತ್ತು ಕೂಡಾ ಬಹಳವಾದ್ದರಿಂದ ನಾನು ಒತ್ತಾಯ ಮಾಡಲಿಲ್ಲ, ಕತ್ತಲಿದ್ದಿದ್ದರಿಂದ ಅಮ್ಮ "ಬ್ಯಾಟರಿ ಬೇಕನ ಹಾಲ?" ಎಂದಳು "ಬ್ಯಾದೀ ಅಮ, ಟಾರ್ಚರ್ ಐತೆ" ಎಂದ

ಮೊನ್ನೆ ಬರೆಯಲು ವಿಚಾರವಿಲ್ಲದೇ ಸುಮ್ಮನೆ ಕುಳಿತಿದ್ದಾಗ ಸಿಕ್ಕ ನೆನಪಿನ ಬುತ್ತಿ ಇದು. ಆತ ದಿಕೇಷನ್ ಎಂದಿದ್ದು ಡಿಕ್ಲೇರೇಷನ್ ಗೆ


1 comment: