Thursday, February 15, 2018

ಶಶಾಂಕ ಶರಧಿಯರ ಮಿಲನ ವಿಘ್ನ ಅದೇ ಗ್ರಹಣ

ಎಳವೆಯಲ್ಲಿ ಬರುತ್ತಿದ್ದ ಶಕ್ತಿಮಾನ್ ಎನ್ನುವ ಧಾರವಾಹಿಯಲ್ಲಿ, ವ್ಯಕ್ತಿ, ಸಜ್ಜನರು ಸಂಕಷ್ಠದಲ್ಲಿದ್ದಾಗ ಶಕ್ತಿಮಾನ್ ಅದಲ್ಲದಿದ್ದರೆ ಗಂಗಾಧರ್ ಮಾಯಾಧರ್ ವಿದ್ಯಾಧರ್ ಶಾಸ್ತ್ರಿ. ಮಾಯ್ ಎನ್ನುವ ಶಬ್ದದ ಪರಿಚಯ ಮೊದಲೇ ಆಗಿದ್ದರೂ ಆಶಬ್ದದ ಕುರಿತು ಕುತೂಹಲ-ಆಸಕ್ತಿಗಳು ಬೆಳೆದದ್ದು ಪಾತ್ರ ನೋಡಿದ ಮೇಲೆ. ನಾಣೇನೂ ಶಬ್ದದ ಕುತೂಹಲವನ್ನು ಬೆನ್ನು ಹತ್ತಲಿಲ್ಲ. ಆದರೆ ಎಲ್ಲಾದರೂ ವ್ಯಾಖ್ಯಾನ ಸಿಗುತ್ತದೋ ಎಂದು ಆಗಾಗ ನೋಡುತ್ತಿದ್ದೆ ಅಷ್ಟೆ. ಒಂದು ಯಾವುದೋ ಪುಸ್ತಕ ಓದುತ್ತಿದ್ದಾಗ ಓರ್ವ ಗುರು ತನ್ನ ಶಿಷ್ಯನಿಗೆ ಮಾಯೆಯನ್ನು ತಿಳಿಸಿದ ಪರಿ ಬಲು ಸೊಗಸಾಗಿತ್ತು. ತಾನೇ ಒಂದು ದಿಮ್ಮಿಯನ್ನು ಹಿಡಿದುಕೊಂಡು ನೀರಿನಲ್ಲಿ ಹಾರಿ, ದಿಮ್ಮಿ ತನ್ನನ್ನು ಹಿಡಿದಿದೆ ಎಂದು ಬೊಬ್ಬೆ ಹಾಕಿ ಶಿಷ್ಯನಿಗೆ ಮಾಯೆಯನ್ನು ಅರ್ಥಮಾಡಿಸುತ್ತಾನೆ. ನನಗಂಟಿದ ಮಾಯೆಯ ಕುರಿತಾದ ಪೀಠಿಕೆ ಇದು.

ನಿಜ. ಚಂದ್ರ ಎನ್ನುವುದು ನನಗೊಂದು ಮಾಯೆಯೇ ಸರಿ. ನನ್ನ ಹೆಸರನ್ನು ಆತ ಇಟ್ಟುಕೊಂಡದ್ದಲ್ಲ. ಆತನ ಹೆಸರನ್ನು ನಾನಿಟ್ಟುಕೊಂಡಿದ್ದು. ಗ್ರಹಣ ಆತನಿಗೆ ಹಿಡಿದರೆ ಅದು ನನಗೇ ಬಾಧಿಸಿದಂತೆ ನಾನೇಕೆ ಭಾವಿಸಬೇಕು? ಅದು ಮಾಯೆಯೇ ಅಲ್ಲವೇ. ರಾಹು ಅವನಿಗೆ ಹಿಡಿದಿದ್ದರಿಂದ ಬಿಟ್ಟ, ಗ್ರಹಣ ಮೋಕ್ಷವೂ ಆಯಿತು. ಆದರೆ ಇಲ್ಲಿ ಯಾರೋ ಬಿಡಲಾಗುವುದಿಲ್ಲ ನಾನೇ ಬಿಡಬೇಕು. ಶಶಾಂಕನಿಗೆ ಶಶಾಂಕನ ಮತ್ತವನ ಗ್ರಹಣದ ಕುರಿತಾಗಿ ತಾನೇ ಹಿಡಿಸಿಕೊಂಡ ಗ್ರಹಣವನ್ನು ಶಶಾಂಕನೇ ಬಿಡಿಸಿಕೊಳ್ಳಬೇಕು. ಅದಕ್ಕೆ ದಾರಿ ಬರಹವೇ ಗತಿ. ನೋಡೋಣ ಇಲ್ಲಾದರೂ ಗ್ರಹಣ ಹಿಡಿಸಿದ ಗ್ರಹಣ ಬಿಟ್ಟೀತೇ ಎಂದು. ಗಟ್ಟಿ ಕೇಳಿದರೆ ಇದೆಲ್ಲ ಬರೀ ಬಾಯಿ ಮಾತು. ಬಿಡಿಸಿಕೊಳ್ಳಲು ನನಗೂ ಮನಸ್ಸಿಲ್ಲ. ಅತ್ರಿಸುತನ ಮತ್ತು ಕಾಶ್ಯಪೇಯನ ಮಹತ್ತು ಅಂಥದ್ದು.

ಸೂರ್ಯನಿಂದ ನೀರನ್ನು ಪಡೆದ ಚಂದ್ರ ಅದನ್ನು ಪ್ರತಿಪದೆಯಿಂದ ಚತುರ್ದಶಿಯ ತನಕ ದೇವತೆಗಳು ಕುಡಿಯುವಂತೆ ಮಾಡಿ ಸುಧಾಕರ ಎನ್ನಿಸಿಕೊಂಡಿದ್ದು, ನಂತರ ಅಮಾವಾಸ್ಯೆಯಂದು ಪಿತೃಗಳು ಚಂದ್ರನ ಕೊನೆಯ ಎರಡನೆಯ ಕಲೆಯನ್ನು ಕುಡಿಯುವುದನ್ನು ಹೇಳಿದ್ದೇನೆ ಈಗಾಗಲೇ. ಆದರೆ ಚಂದ್ರ ಸೂರ್ಯ ಮತ್ತು ನೀರಿನ ಸಂಬಂಧ ಇಷ್ಟಕ್ಕೇ ನಿಂತಿಲ್ಲ. ಇನ್ನೂ ಇದೆ. ತಪ್ಪೀತಾದರೂ ಹೇಗೆ? ಸೂರ್ಯ ಭೂಮಿಯನ್ನು ಬೆಳಗಿದರೆ ಚಂದ್ರ ಸೂರ್ಯನಿಂದ ನೀರನ್ನು ಪಡೆಯುತ್ತಾನೆ. ನೀರು ಭೂಮಿಯನ್ನು ಒಮ್ಮೆ ತನ್ನಲ್ಲಿ ಇಟ್ಟುಕೊಂಡಿತ್ತು. ಈಗ ತನ್ನ ಮೇಲೆ ತೇಲಿಸುತ್ತಿದೆ. ಸೂರ್ಯನಿಂದ ಆವಿಯಾಗಿ ಆಗಸ ಸೇರಿ ಮೋಡವಾಗಿ ನಂತರ ಮಳೆಯಾಗಿ ಸುರಿದು ನಮ್ಮನ್ನು ಮುದಗೊಳಿಸಿ ಮತ್ತೆ ಸಾಗರವನ್ನೇ ಸೇರುತ್ತದೆ.

ಮೋಡಕ್ಕೂ ಚಂದ್ರನಿಗೂ ಇರುವ ಸಂಬಂಧ ಹೀಗಿದೆ.

ವಿವಸ್ವಾನಂಶುಭಿಸ್ತೀಕ್ಷೈರಾದಾಯ ಜಗತೋ ಜಲಮ್|
ಸೋಮಂ ಪುಷ್ಣಾತ್ಯಥೇನ್ದುಶ್ಚ ವಾಯುನಾಡೀಮಯೈರ್ದಿವಿ||

ನಾಲೈರ್ವಿಖ್ಷಿಪತೇಽಭ್ರೇಷು ಧೂಮಾಗ್ನ ನಿಲಮೂರ್ತಿಷು|
ಭ್ರಶ್ಯನ್ತಿ ಯತಸ್ತೇಭ್ಯೋ ಜಲಾನ್ಯಭ್ರಾಣಿ ತಾನ್ಯತಃ||

ಸೂರ್ಯನು ಹೀರಿದ ನೀರನ್ನು ಚಂದ್ರನಿಗೆ ಕೊಡುತ್ತಾನೆ. ಚಂದ್ರನು ಹದಿನಾರು ಕಲೆಗಳಷ್ಟನ್ನು ಪುನರಜ್ಜೀವಿಸಿಕೊಂಡು ವಾಯುನಾಡಿಯ ಮುಖೇನ ಮೋಡಗಳನ್ನುಂಟುಮಾಡುತ್ತಾನೆ. ಮೋಡಗಳಿಂದ ನೀರು ತತ್ ಕ್ಷಣದಲ್ಲಿ ಭ್ರಂಶವಾಗದ ಕಾರಣ ಅವನ್ನು ಅಭ್ರ ಎನ್ನಲಾಗಿದೆ.
ಕ್ರಿಯೆ ನಡೆಯುವುದು ಶುಕ್ಲ ಪಕ್ಷದಲ್ಲಿ. ಸುಷುಮ್ನಾ ಎಂಬ ಕಿರಣದಿಂದ ನೀರನ್ನು ಹೀರುವುದೂ ಅದನ್ನು ದೇವತೆಗಳು ಮತ್ತು ಪಿತೃಗಳು ಕೃಷ್ಣಪಕ್ಷದಲ್ಲಿ ಸೇವಿಸುವುದನ್ನೂ ಮೊದಲೇ ಹೇಳಿದ್ದೇನೆ.ಹೀಗೆ ಶುಕ್ಲಪಕ್ಷದ ಪ್ರತಿಪದೆಯಿಂದ ಕೃಷ್ಣ ಪಕ್ಷದ ಅಮಾವಾಸ್ಯೆಯ ತನಕ ರಜನೀಕರನಿಗೆ ಕೆಲಸ. ಅವನಿಗೂ ಒಂದು ವಿಶ್ರಾಂತಿ ಬೇಡವೇ? ವಿಶ್ರಾಂತಿಯ ದಿನ ಯಾವುದು ಅಂದು ನಡೆಯುವ ಘಟನಾವಳಿಗಳೇನು ಎನ್ನುವುದನ್ನು ವ್ಯಾಸರು ಹೀಗೆ ಬರೆದಿದ್ದಾರೆ:

ಕಲಾದ್ವಯಾವಶಿಷ್ಟಸ್ತು ಪ್ರವಿಷ್ಟ: ಸೂರ್ಯಮಣ್ಡಲಮ್|
ಅಮಾಖ್ಯರಶ್ಮೌ ವಸತಿ ಅಮಾವಾಸ್ಯಾ ತತ: ಸ್ಮೃತಾಃ||

ಅಪ್ಸು ತಸ್ಮಿನ್ನಹೋರಾತ್ರೇ ಪೂರ್ವಂ ವಿಶತಿ ಚಂದ್ರಮಾಃ
ತತೋ ವೀರುತ್ಸು ವಸತಿ ಪ್ರಯಾತ್ಯರ್ಕಮ್ ತತಃ ಕ್ರಮಾತ್||

ಛಿನ್ದನ್ತಿ ವೀರುಧೋ ಯಸ್ತು ವೀರುತ್ಸಂಸ್ಥೇ ನಿಶಾಕರೇ|
ಪತ್ರಂ ವಾ ಪಾತಯತ್ಯೇಕಂ ಬ್ರಹ್ಮಹತ್ಯಾಂ ವಿಂದತಿ||

ಸುಷುಮ್ನ ಕಿರಣದಿಂದ ನೀರನ್ನು ಪಡೆದ ಸೋಮ ಕೃಷ್ಣ ಪಕ್ಷದ ಕೊನೆಯ ದಿನದಂದು ಅಮಾ ಎನ್ನುವ ಕಿರಣದಲ್ಲಿ ವಾಸಿಸುತ್ತಾನೆ. ಅದಕ್ಕೇ ದಿನಕ್ಕೆ ಅಮಾವಾಸ್ಯೆ ಎಂದು ಹೇಳುವುದು. ಅಂದು ಚಂದ್ರ ಮೊದಲು ಗಿಡ ಮರ ಬಳ್ಳಿಗಳಲ್ಲಿದ್ದು ನಂತರ ಸೂರ್ಯನನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಅಂದು ಗಿಡ ಮರ ಬಳ್ಳಿಗಳನ್ನು ಕಡಿಯುವವ ಬ್ರಹ್ಮ ಹತ್ಯೆಯ ಪಾತಕಕ್ಕೆ ಗುರಿಯಾಗುತ್ತಾನೆ.

ಸೂರ್ಯ-ಚಂದ್ರರಿಗೆ ಹ್ರಾಸ ವೃದ್ಧಿಗಳು ಭೂಮಿಯ ಚಲನೆಯಿಂದ ಉಂಟಾಗುವುತ್ತವೆಯಲ್ಲ. ಆದರೆ ಶುಕ್ಲಪಕ್ಷದಲ್ಲಿ ಸುಷುಮ್ನಾ ಕಿರಣದಿಂದ ಚಂದ್ರನು ಸೂರ್ಯನಿಂದ ನೀರು ಪಡೆಯುತ್ತಾನೆ. ಹುಣ್ಣಿಮೆಯ ದಿನ ಚಂದ್ರ ಸಂಪೂರ್ಣ ವೃದ್ಧಿಯಾಗಿರುತ್ತಾನೆ. ಅಂದು ನೀರಿಗೆ ಅವನ ಸುಮನೋಹರ ರೂಪವನ್ನು ಕಂಡು ಅದೇನೋ ಆಕರ್ಷಣೆ-ಆನಂದ. ಅದಕ್ಕೇ ದಿನ ಭರತದ ದಿನ ಅಂದರೆ ನೀರು ಉಕ್ಕುತ್ತದೆ. ನಮಗೆ ತಿಳಿದಿರುವಂತೆ ಹೈ ಟೈಡ್ ಆಗುತ್ತದೆ. ಗ್ರಹಣವಾಗುವುದು ಕೂಡಾ ಚಂದ್ರ ಸುಷುಮ್ನದಿಂದ ನೀರನ್ನು ಪಡೆಯುವ ದಿನ ಅಂದರೆ ಹುಣ್ಣಿಮೆಯ ದಿನ. ಆದರೆ ದಿನ ನೀರಿಗೆ ಗಲಿಬಿಲಿ-ಕಳವಳ-ಭಯ ಎಲ್ಲಾ ಆಗುತ್ತದೆ. ತಾನು ಸೇರಬೇಕೆಂದು ಕೊಂಡಿರುವ ಚಂದ್ರ ಮರೆಯಾಗಿದ್ದಾನೆ. ಆತ ಆಗಸದಲ್ಲಿ ಮರೆಯಾದ ದಿನ ಅಂದರೆ ಅಮಾವಾಸ್ಯೆಯಂದು ತಾನೇ ಬಂದು ನೀರನ್ನು ಸೇರಬೇಕಿತ್ತು ಇದೆರಡೂ ಆಗುವುದಿಲ್ಲ ಗ್ರಹಣದ ದಿನದಂದು. ಅಂದರೆ ಗ್ರಹಣದ ದಿನ ಚಂದ್ರ ಅರ್ಥಾತ್ ಆನಂದ ಲುಪ್ತವಾಗಿರುತ್ತದೆ. ಹೈ ಟೈಡ್ ಆಗಬೇಕಾದ ದಿನ ಲೋ ಟೈಡ್ ಆಗುತ್ತಿದೆ. ಶಶಾಂಕ ಶರಧಿಯರ ಮಿಲನವಾಗಬೇಕಿತ್ತು. ರಾಹು ಅಡ್ಡ ಬಂದು ತಪ್ಪಿಸಿಬಿಟ್ಟ

ಗ್ರಹಣದಂದು ಚಂದ್ರ ಆಗಸದಲ್ಲಿ ಪೂರ್ಣವಾಗಿದ್ದರೂ ನೀರು ಆತನನ್ನು ಸೇರುವಂತಿಲ್ಲ, ಯಾಕೆಂದರೆ ಆತ ಮರೆಯಾಗಿದ್ದಾನೆ. ತಾನೇ ಬಂದು ನೀರನ್ನು ಸೇರಲೂ ಇಲ್ಲ, ಏಕೆಂದರೆ ಆತ ಅಮಾ ಎನ್ನುವ ಕಿರಣದಲ್ಲಿಲ್ಲ. ಕಾರಣದಿಂದ ಗಲಿಬಿಲಿಗೊಂಡ ನೀರಿನ ಸ್ವಭಾವ ಬದಲಾಗುತ್ತದೆ. ಅದು ತನ್ನ ಚಂದ್ರನನ್ನು ಸೇರಿಲ್ಲ. ಚಂದ್ರ ಕೂಡಾ ತಾನೇ ಸೇರಬೇಕಾದ ನೀರನ್ನು ಸೇರಲಿಲ್ಲ. ತಮಾಷೆಗೆ ಹೇಳುವುದಾದರೆ, ಆಪೀಸಿಗೂ ಹೋಗಿಲ್ಲ ಮನೆಯಲ್ಲೂ ಇಲ್ಲ ಎನ್ನುವ ಸ್ಥಿತಿ. ನಮ್ಗೇ ಇಂಥಾ ಸ್ಥಿತಿಯಲ್ಲಿ ಗೊಂದಲ ಗಲಿಬಿಲಿ ಸಹಜ. ನಮ್ಮನ್ನು ಪೊರೆಯುವ ನೀರಿಗೆ, ಭಾವನೆಗಳನ್ನುಂಟುಮಾಡುವ ಚಂದ್ರನಿಗೆ ಉಂಟಾಗುವ  ಪರಿಸ್ಥಿತಿ ಹೇಗಿದ್ದೀತು? ಎಲ್ಲದರಲ್ಲೂ ಇರುವ ನೀರು ಕೂಡಾ ವ್ಯತಿರಿಕ್ತ ಸ್ವಭಾವದಲ್ಲಿದೆ ಅಂದು.ಶಶಾಂಕ ಶರಧಿಯರ ಮಿಲನವಾಗದಿದ್ದದ್ದೇ ವ್ಯತಿರಿಕ್ತತೆ. ನಿಯಮ ಒಂದೆಡೆ ತಪ್ಪಿದರೆ ಪರಿಣಾಮ ಎಲ್ಲೆಡೆ.

ಇನ್ನು ನಮ್ಮ ಅಂದರೆ ಮನುಷ್ಯರ ಮನಃಸ್ಥಿತಿ ಲೋಕದ ಎಲ್ಲ ಚರಾಚರ ಜೀವಿಗಳ ಮನಃಸ್ಥಿತಿಗಿಂತ ಬಲು ಭಿನ್ನ. ಊರವರಿಗೆಲ್ಲಾ ಒಂದು ದಾರಿಯಾದರೆ ಯಡವಟ್ಟನಿಗೊಂದು ದಾರಿ ಎಂಬಂತೆ ಜಗತ್ತು ಎಂಬ ಊರಿನ ಯಡವಟ್ಟರು ನಾವು. ಎಲ್ಲ ಜೀವಿಗಳೂ ಕ್ರಿಯೆಯನ್ನು ಕುರಿತು ಯೋಚಿಸಿ ಮುಂದಾದರೆ ನಾವು ಪ್ರತಿಕ್ರಿಯಿಸುವ ಸ್ವಭಾವದವರು. ರಾತ್ರಿಯಾದಾಗ ಎಲ್ಲ ಪ್ರಾಣಿಗಳೂ ವಿಶ್ರಮಿಸುತ್ತವೆ ಆದರೆ ನಾವು ದೀಪ ಹಚ್ಚಿಯಾದರೂ ಸರಿ ಮುಂದುವರೆಯುತ್ತೇವೆ. ಧಾರಾಕಾರ ಮಳೆ ಬರುತ್ತಿರುವಾಗ ಎಲ್ಲ ಪ್ರಾಣಿಗಳೂ ಮಳೆಯಿಂದ ತಪ್ಪಿಸಿಕೊಳ್ಳಲು ಸೂರೊಂದನ್ನು ಹುಡುಕಿದರೆ ನಾವು ಛತ್ರಿ ಅಥವಾ ರೈನ್ ಕೋಟ್ ಹಾಕಿಕೊಂಡು ತಿರುಗುತ್ತೇವೆ. ಇದಕ್ಕೆ ಮತ್ತೆ ನಮ್ಮ ದೇಹ ಪ್ರತಿಕ್ರಿಯಿಸುತ್ತದೆ, ರೋಗಗಳ ಮೂಲಕ.ಜಗತ್ತಿನ ನಡೆಗೆ ನಮ್ಮದೊಂದು ವಿರುದ್ಧ ನಡೆ. ಹೀಗೆ ಕ್ರಿಯೆ ತ್ಯಜಿಸಿ ಪ್ರತಿಕ್ರಿಯೆಗೆ ತೊಡಗಿ, ಪುನಃಪ್ರತಿಕ್ರಿಯೆಗೂ ಪ್ರತಿರೋಧ ಒಡ್ಡುವ ವಿಚಿತ್ರ ಜೀವಿಗಳು ನಾವು. ವಿರುದ್ಧಕ್ಕೆ ವ್ಯತಿರಿಕ್ತ ಸೇರಿದರೆ ಏನಾಗಬೇಡ? ಕ್ರಿಯೆ ಈಗಾಗಲೇ ಹದ್ದು ಮೀರಿದೆ ಪರಿಣಾಮ ಜಗತ್ತನ್ನೇ ತಮ್ಮ ಸ್ವಾರ್ಥಕ್ಕೆ ಗುರಿಮಾಡ ಹೊರಟ ನಾಯಕರು. ಪ್ರಕ್ಷುಬ್ಧ ಮನಃಸ್ಥಿತಿ. ಇಂಥಾ ಸ್ಥಿತಿ ಸಾಧ್ಯ ಎಂದು ದಾರ್ಶನಿಕರಾದ ಶಾಸ್ತ್ರಕಾರರು ಊಹಿಸಿದ್ದಿರಬೇಕು. ದರ್ಶನಕ್ಕೆ ಮಾತ್ರ ಸೂಕ್ಷ್ಮ ಪರಿಣಾಮಗಳನ್ನು ಊಹಿಸಲು ಸಾಧ್ಯ. ಸೂಕ್ಷ್ಮತೆಯೇ ದರ್ಶನದ ತಳಹದಿ. ಕ್ರಿಯೆ ಪ್ರತಿಕ್ರಿಯೆಗಳೆರಡೂ ಇಲ್ಲದ ಸ್ಥಿತಿಯನ್ನು ಸಾಧಿಸಿದಾಗ ಮಾತ್ರ ದರ್ಶನ ಸಾಧ್ಯ.


ಅದಕ್ಕೇ ಅವರು ಗ್ರಹಣದ ದಿನ ನೀರಿನಲ್ಲಿ ಬೇಯಿಸಿದ ಆಹಾರ ಪದಾರ್ಥಗಳನ್ನೂ, ನೀರನ್ನೂ ಗ್ರಹಣ ಮೋಕ್ಷಾನಂತರ ಚೆಲ್ಲಬೇಕೆಂದಿದ್ದುಸುಲಭದಲ್ಲಿ ವ್ಯತಿರಿಕ್ತತೆ ವರ್ಜ್ಯ ಎಂದಿದ್ದು.

No comments:

Post a Comment