Sunday, March 3, 2019

ಎಜೆಕ್ಟ್- ಎಜಾಕ್ಯುಲೇಟ್

ಕರಿಮಾರಲ ಕಾಯಿಯ ಪ್ರಭಾವದಿಂದ ಹುಟ್ಟಿದ್ದ ಬೇಧಿಯನ್ನು ಮತ್ತು ಅದರ ಪರಿಣಾಮವನ್ನು ಭರಿಸುತ್ತಲೇ ಹೈರಾಣೆದ್ದಿದ್ದ ಶುಕ್ರನನ್ನು ಮತ್ತಷ್ಟು ಹೈರಾನಾಗಿಸಿದ್ದು ಗೋಪಾಲನ ಬಾಯಿ.

ಗೋಪಾಲನ ಬಾಯಿಯ ಮುಖಾಂತರ ಶುಕ್ರನಿಗಾಗಿದ್ದ ಬೇಧಿ ಊರೆಲ್ಲಾ ಹರಡಿತ್ತು. ಬೇಧಿಗೆಂದು ಔಷಧ ಕೊಟ್ಟ ಡಾಕ್ಟರನ್ನೇ ತನ್ನ ಅತಿಬುದ್ಧಿವಂತಿಕೆಯಿಂದ ಪ್ರಶ್ನಿಸಿದ್ದ ಗೋಪಾಲನ ಹರಕು ಬಾಯಿ ಸುಮ್ಮನಿದ್ದೀತಾದರೂ ಹೇಗೆ? ಅದರ ಸ್ವಭಾವವೇ ಅದಲ್ಲ. ಯಾರಿಗೆ ಏನೇ ಆದರೂ ಗೋಪಾಲನ ಬಾಯಿ ಬೇಧಿ ನಿಲ್ಲುವಂಥದ್ದಲ್ಲ.

ಸುಧಾರಿಸಿಕೊಂಡು ಓಡಾಡುತ್ತಿದ್ದ ಶುಕ್ರನಿಗೆ ಎಲ್ಲರೂ ಕೇಳುವವರೇ. "ಹ್ವಾಯ್ ಶುಕ್ರಣ್ಣ!! ಬೇಧಿ ಅಂಬ್ರೆಲೇ ನಿಮಗೆ. ಈಗ ಹ್ಯಾಂಗಿತ್ತ್?" ಶುಕ್ರನಿಗೆ ಉತ್ತರಿಸಿ ಉತ್ತರಿಸಿ ಸಾಕಾಗಿ ಹೋಗಿತ್ತು. ಮನಸ್ಸಿನಲ್ಲೇ ಗೋಪಾಲನನ್ನು ಬಯ್ಯುತ್ತಿದ್ದ. " ವಾಲಿ ಕಳೂಕೆ. ಈ ಗೋಪಾಲ ಒಬ್ಬ ಹೆಕ್ಕ ತಿಂಬವ. ಇವನ ಕಾಲದಂಗೆ ನನ್ನ ಬೇಧಿ ಊರೆಲ್ಲಾ ಆಯ್ತ್. ಅವನ ಬಜ್ಜ. "

ಬೇಧಿಯ ಸುಸ್ತು, ಉತ್ತರ ಕೊಟ್ಟು ಕೊಟ್ಟು ಆದ ಆಯಾಸದ ಪರಿಣಾಮ, ವಿಶ್ವನಾಥನನ್ನು ಕಾಡಿ ಬೇಡಿ ತಿಳಿದಿದ್ದ ಕೋಳಿಪಡೆಯ ವಿಚಾರ ಶುಕ್ರನಿಗೆ ಮರೆತೇ ಹೋಯ್ತು. ಆದರೆ ಕೋಳಿ ಪಡೆಯ ಟ್ರೀಟ್ ಮಿಸ್ಸಾಗಲಿಲ್ಲ. ಯಾಕೆಂದರೆ ಗೆದ್ದವ ಗೋಪಾಲ.

ಇಷ್ಟಾಗುವಾಗ ನಾನೂ ಊರ ಕಡೆ ಪಯಣಿಸಿದೆ. ಸಂಜೆ ಏಳೋ ಎಂಟೋ ಗಂಟೆಯಾಗಿತ್ತು. ಕೆಲಸವಿಲ್ಲದೆ ಮನೆಯ ಕಟ್ಟೆಯ ಮೇಲೆ ಕುಳಿತು ಕರೆಕರೆದು ಆಕಳಿಕೆ ತೆಗೆಯುತ್ತಾ ಕುಳಿತಿದ್ದೆ. ನನ್ನ ಬೇಸರದ ಮೊರೆಯ ಕರೆ ದೇವರನ್ನು ಸೇರಿತೋ ಏನೋ. ನನ್ನ ಬೇಜಾರ ನೀಗಿಸಲೋಸುಗವೋ ಎನ್ನುವಂತೆ ಹಾಲ ನಾಯ್ಕ ಚಿತ್ತೈಸಿದ, ತನ್ನ ಬಹುಕಾಲದ ಸಂಗಾತಿ ರಾಮನಾಯ್ಕನೊಂದಿಗೆ.

" ಬಾರ ಹಾಲ.ಆರಾಮಿದೀಯಲ". ಎಂದೆ. ರಾಮ ನಾಯಕನಿಗೆ ಹಸ್ತ ತೋರಿಸಿ ಕುಶಲ ವಿಚಾರಿಸಿದೆ.

"ಆರಾಮ್ ಐದುಂವು ಅಯ್ಪಿ. ನೀವ್ ಯಾವಯ್ತ್ ಬೈಂದೀರಿ" ಎಂದ ಹಾಲ.

"ಬೆಳಗೆ ಬಂದ್ನಾ. ನೀ ಎಂತ ಇಷ್ಟೊತ್ತಿಗೆ. ಅದೂ ರಾಮನಾಯ್ಕನ ಜೊತಿಗೆ. ಎಲ್ಲಾರೂ ಹೋಗಿದ್ರಾ?" ಎಂದೆ.

"ಹೌಯ್ಡ್ ಅಯ್ಪಿ. ಆಸ್ಪತ್ರೆಗೆ ಹೋಗಿದ್ದುಂವು. ಶುಕ್ರನ್ನ ಅಡ್ಡಪೆಟ್ಟು ಮಾಡಿ ಮನ್ಶ್ಯಾರೆ."

ಅಯ್ಯೋ ದೇವರೇ!! ಈ ಶುಕ್ರ ಬಿಲ್ಡ್ ಅಪ್ ಹೆಚ್ಚಾಗಿ ಪೆಟ್ಟು ತಿನ್ನುವಂತಾಯಿತೇ ಎಂದು ನನಗೂ ಬೇಸರವಾಯ್ತು.

"ಎಂತ ಹೊಡೆದಾಟವಾ ಮಾರಾಯ? ಅದೂ ಶುಕ್ರನದು. ಅವ ಸ್ವಲ್ಪ ಹರಕು ಬಾಯಿ ಆದ್ರೂ ಪೆಟ್ಟಿನ ಜನ ಅಲ್ಲಲ್ಲ ಮಾರಾಯ" ಎಂದೆ.

"ಅಯ್ಯ ಅಯ್ಪಿ. ಹೊಡೆದಾಟದ ಪೆಟ್ಟಲ್ಲೀ. ಆಯ್ಸ್ಪೆತ್ರೆ ಪೇಯ್ಟ್ಟು." ಎಂದ ಹಾಲ.

ನನಗಾಗ ಗೊತ್ತಾಯ್ತು. ಪ್ರಾಣಿ ಅಡ್ಡಪೆಟ್ಟು ಹೇಳಿದ್ದು ಅಡ್ಮಿಟ್ ಎನ್ನುವುದಕ್ಕೆ ಎಂದು. ತಿರುಗಿ ಕೇಳಿದೆ.

"ಎಂತ ಆಗಿತ್ತಾ?"

"ಅದು ಎಂತ ಹೇಳದೀ ಅಯ್ಪಿ. ಅವತ್ತು ಇರೂಪಾಕ್ಸಯ್ಯನ ಮನೆ ಕೆಲಸಕ್ಕೆ ಹೋದವ ಹಶ್ವಾತು ಅಂತೇಳಿ ದಾರೆಕಾಯಿ (ಕರುಮಾರಲ) ಸಮಾ ತಿಂದ. ತಡೀತಾವೆ? ಬೇಧಿ ಹತ್ತಿ ಮುಕಳೆಲ್ಲ ಎಜಾಕ್ಯುಲೇಟ್ ಆಗಕ್ಕೆ ಹಿಡತ್ತು. ಡಾಕ್ಟ್ರು ಮನಿಗೆ ಬಂದು ಕಾಶಿ ಡ್ರಿಪ್ ಕೊಟ್ಟುದ್ರು. ಸ್ವಲ್ಪ ದಿನ ಒದ್ದಾಡಿ ಆರಾಮಾಗುದ್ದ. ಮಯ್ನೆ ಎದ್ದು ಓಡಾಡ ಹಂಗಾಗುದ್ದ. ಅಷ್ಟೊತ್ತಿಗೆ ಗೆದ್ದೆ ಕಣದಾಗೆ ಚಿಕನ್ ಗೇಮ್ ಆರೆಂಜ್ ಮಾಡಿದ್ದುಂವು. ಅದ್ರಾಗೆ ಗೋಯ್ಪಾಲನ ಚಿಕನ್ ವಿಕ್ಟರಿ ಮಾಯ್ಡ್ಕಂಡು ಮನೇಲಿ ಪಾಲ್ಟಿ ಇಟ್ಟುದ್ದ. ಶುಕ್ರ ಬೈಂದ. ಬೈಂದವ ಗೋಯ್ಪಾಲನ ಚಿಕನ್ ಗೆದ್ದುತ್ತಲ ಆ ಚಿಕನ್ನಿನ್ನ ಹಾಪು ಇವನೇ ತಿಂದ. ಮೊದ್ಲೇ ಮುಕಳಾಗೆ ಎಜಾಕ್ಯೂಲೇಟ್ ಆತುತ್ತು. ಈಗ ನಿಂತಗ ಅಂದ್ರೆ ನಿತ್ಗತ್ತೈತ? ಬೇಧಿ ಜೋರಾತು. ಮುಂಚಿನ ಎಜಾಕ್ಯುಲೇಟ್ ಹತ್ರಷ್ಟು ಮುಕ್ಳರಿ ಎಜಾಕ್ಯುಲೇಟು. ಅಸ್ಪತ್ರಿಗೆ ಅಡಪೆಟ್ಟು ಮಾಡದೆ ಮತ್ತೆಂತ ಆಕೈತೆ. ಬಾಂಬಾಯಾಗಿದ್ದೆ ಎಂತೂ ಆಗಕಲ್ಲ ಅಂದ್ರೆ ತೈತಾ? ಬೇಧಿ ಆಗದು ಮುಕಳಾಗೆ. ಬಂಬಾಯಾಗಲ್ಲ ಅಂತ ತಿಳಿಯಕಲ್ಲ ಅವಂಗೆ. ಬ್ಯಾಡದೆ ಹೋಗಿದ್ದು ಮಾಡಿ ಮುಕಳಾಗೆ ಎಜಾಕ್ಯುಲೇಶನ್ ಆಗಿ ಆಸ್ಪತ್ರೆಗೆ ಅಡ್ಡಪೆಟ್ಟು ಆಗ ಹಂಗಾತು ಈಗ. " ಎಂದು ಇಷ್ಟುದ್ದ ಹೇಳಿ ಮುಗಿಸಿದ.

ಆದರೆ ಇಷ್ಟೂ ಹೊತ್ತು ಸುಮ್ಮನಿದ್ದ ರಾಮನಾಯ್ಕ ಬಾಯಿ ಹಾಕಿದ. "ಮುಕಳಾಗೆ ಬೇಧಿ ಆತುತ್ತು ಅಂತ ಹೇಳಕ್ಕೆ ಬರಕಲ್ಲ ನಿಂಗೆ? ಅದೆಂತ ಚಾಕಲೇಟು ಅಂತಿಯ. ಆಯ್ಪ್ಪಿಗೆ ಗೊತ್ತೈತೆ. ಚಾಕಲೇಟು ಅಂಗಡಿಲಿ ಸಿಗವು. ಮುಕಳಾಗೆ ಅಲ್ಲ ಅಂತ."

ಕಿವುಡುತನ ಇದ್ದ ಆತನಿಗೆ ಎಜಾಕ್ಯುಲೇಟ್ ಎಂದಿದ್ದು ಚಾಕ್ಲೆಟ್ ಎಂದು ಕೇಳಿಸಿದ್ದು ವಿಶೇಷ ಏನೂ ಅಲ್ಲ ಬಿಡಿ.

ಹಾಲನ ಇಂಗ್ಲೀಷ್ ಈಗೀಗ ಚನ್ನಾಗಿ ಪರಿಚಯವಾದ್ದರಿಂದ ನನಗೆ ಸುಲಭದಲ್ಲಿ ಅರ್ಥವಾಯಿತು. ಆತ ಎಜಾಕ್ಯುಲೇಟ್ ಎಂದಿದ್ದು ಎಜೆಕ್ಟ್ ಎನ್ನುವುದಕ್ಕೆ, ಹೊರಬೀಳು ಎನ್ನುವ ಅರ್ಥದಲ್ಲಿ. ಹಾಲನ ಇಂಗ್ಲೀಷೇ ಹಾಗೆ. ತತ್ಸಮ ತದ್ಭವಗಳು ಬೇಕಷ್ಟಿರುತ್ತವೆ. ಅದು ತಪ್ಪಲ್ಲ. ಯಾಕಂದರೆ ಎಂಥೆಂಥ 'ಪ್ರತಿಭಾ'ವಂತರೇ ಅದೇನೋ ವಿಮಾನದ ಎಜೆಕ್ಟ್ ಮಣ್ಣು ಮಸಿ ಅಂತ ಬೂಸಿ ಬಿಟ್ಟು ಆ'ನಂದ' ಪಡೆಯುತ್ತಿರುವಾಗ ನಿರಕ್ಷರಿ ಹಾಲ ನಾಯ್ಕ ಇಂಥಾ ಮಾತಾಡಿದರೆ ಅದೇನೂ ವಿಶೇಷವಲ್ಲ ಅಲ್ಲವೇ?! ಆತನಿಗೆ ಎಜಾಕ್ಯುಲೇಟ್ ಎಂದರೆ ಏನು ಅಂತಲೂ ಗೊತ್ತಿಲ್ಲ. ಅದು ಯಾವಾಗ ಎಲ್ಲಿ ಆಗುತ್ತದೆ ಎಂದೂ ತಿಳಿದಿಲ್ಲ ಪಾಪ.

#ಎಜೆಕ್ಟ್