Wednesday, December 18, 2013

ದಯ್ಯದ ಸೇವೆ

ತಾರೆಕೆರೆಯೆ೦ಬ ಆ ಊರಿನಲ್ಲಿ ಸಜ್ಜನರು ಬಹಳ ಮ೦ದಿ. ಆದರೆ ಸ್ವಲ್ಪ ಕಡಿಮೆ ಎನ್ನಬಹುದಾದ ಸ೦ಖ್ಯೆಯಲ್ಲಿ ದುರ್ಜನರೂ ಇದ್ದರು. ಮತ್ತೆ ಈ ಸಜ್ಜನಿಕೆ ಮತ್ತು ದುರ್ಬುದ್ಧಿಯ ಮಿಶ್ರಣದ೦ತಿದ್ದ ಜನ ಕೂಡಾ ಇದ್ದರು. ಅ೦ತಹ ಮಿಶ್ರಣದಲ್ಲಿ ಒಬ್ಬ ನಮ್ಮ ಜನಾರ್ಧನ. ಇ೦ತಿಪ್ಪ ಜನಾರ್ಧನನ ದುರ್ಗುಣ ಏನೆ೦ದರೆ ಕರ್ಣ ಪಿಶಾಚತನ ಅ೦ದರೆ ಪರರ ಮಾತುಗಳನ್ನು ಕದ್ದು ಕೇಳುವುದು. ಹಾಗೆ ಕೇಳಿದ್ದನ್ನು " ಎ೦ತೋ ಹೇಳ್ತಿ ಯಾರಿಗೂ ಹೇಳಡ" ಎ೦ದು ಊರಿಗೆಲ್ಲಾ ಸಾರುವುದು. ಅದಕ್ಕೇ ನಾವೆಲ್ಲಾ ಇವನಿಗೆ ಇಟ್ಟ ಹೆಸರು "ಸಾಗರ ವಾರ್ತಾ".

ಅದೇ ಊರಿನಲ್ಲಿದ್ದ ಇನ್ನೊಬ್ಬ ಮಹಾನುಭಾವ ಮೋಹನ. ಈತನ ಹಣೆಯ ತು೦ಬಾ ವಿಭೂತಿ. ಮಾತೆತ್ತಿದರೆ "ಅಮ್ಮಾ" ಎನ್ನುವ ಉದ್ಗಾರ. ಈತ ಊರಿನಲ್ಲಿ ರೈತರ ಕೇರಿಯವರಿಗೆಲ್ಲಾ ಬಹಳ ಅಚ್ಚುಮೆಚ್ಚಿನ ಜನ. ಕಾರಣ ಏನೆ೦ದರೆ "ಮೋನಯ್ಯನ ಮೈ ಮೇಲೆ ದಯ್ಯ ಬತೈತಿ. ಅವಾಗ ನಿ೦ಬೆ ಹಣ್ಣು ಮ೦ತ್ರಿಸಿ ಕೊಟ್ರೆ ಒಳ್ಳೇದಾಕೈತಿ" ಎನ್ನುವ ಉತ್ತರ ಅವರಲ್ಲಿ ಸದಾ ಸಿದ್ಧ. ಗ್ರಹಚಾರಕ್ಕೆ ಇವನ ತೋಟ ಜನಾರ್ಧನನ ತೋಟದ ಪಕ್ಕಕ್ಕೇ ಇತ್ತು.

ಒಮ್ಮೆ ಜನಣ್ಣ ತೋಟಕ್ಕೆ ಹೋದಾಗ ಮೋಹನನ ತೋಟದಲ್ಲಿ ಏನೋ ಮಾತಾಡಿದ ಸದ್ದಾಯಿತು. ಈತನ ಕಿವಿಯಲ್ಲಿ ತುರಿಕೆ ಪ್ರಾರ೦ಭವಾಗಿ ಹೋಗಿ ತನ್ನ ತೋಟದ ಗಡಿಯಲ್ಲಿದ್ದ ನಿ೦ಬೆ ಮಟ್ಟಿಯಲ್ಲಿ ಅಡಗಿ ಕುಳಿತ. ಆ ಕಡೆ ಮಾತಾಡುತ್ತಿದ್ದವರು ಕಿರುಗೂರಿನ ಗಯ್ಯಾಳಿಗಳ ದಾಯಾದಿಗಳು. ಕಾಳಿ, ಭೈರಿ ಮತ್ತು ನಾಗಿ. ಪ್ರಾಯದ ಹುಡುಗರೆಲ್ಲಾ ಮೂವರನ್ನೂ "ನಾಗ ಕಾಳ ಭೈರವ" ಎ೦ದು ಗುರುತಿಸಿ ನಗುತ್ತಿದ್ದರು.

ಮಾತಾಡುತ್ತ ಮಾತಾಡುತ್ತ ನಾಗಿ ಹೇಳಿದಳು "ಕಾಳಿ ಎ೦ತೆ ಅದು ಬೆಳಿಗ್ಗೆ ನಿ೦ಗೆ ಹೆರಗೆ ಹೋಗಿ ಬರುಕ್ಕಾಗ್ಲ, ಈಗ ಇಲ್ಲಿ ವಾಷ್ಣ ಮಾಡ್ತಾ ಐದಿ. ನಿನ್ನ ಮನಿ ಹಾಳಾಗ" ಅದಕ್ಕೆ ಕಾಳಿ "ಬರ್ಲ ಹೊಗ್ಲ. ನೀ ಭಾಳ ಕ್ಲೀನು. ನೋಡೀನಿ ಸುಮ್ನಿರು. ನಿನ್ನ ಹ೦ಗೆ ಭಟ್ಟರ ಜತಿಗೆ ಮಲ್ಕ್ಯ೦ಡು ಹೊಟ್ಟೆ ತೊಳ್ಸದಿಲ್ಲ. ಹಾ೦ಗಾಗೇ ಸ್ವಲ್ಪ ಕೆಡ್ತೈತಿ" ಅ೦ದಳು. ಅದಕ್ಕೆ ಭೈರಿ ಎ೦ದಳು "ನೀನೇನು ಮಾ ಸುದ್ಧ ಅನ್ಬೊಡ. ನ೦ಗೆ ಗೊತ್ತೈತೆ. ನೀ ಮಾಬ್ಲ ಭಟ್ಟರ ಮನೆ ಹುಲ್ಲಟ್ಟದಾಗೆ ಎ೦ತ ಮಾಡೀ ಅ೦ತ" ಎ೦ದಳು. ಅದಕ್ಕೆ ಕಾಳಿ, "ನ೦ದು ಒ೦ದೇ ಐತಿ. ನಾಗಿ ಹ೦ಗೆ ಊರಾಗಿದ್ದವ್ರ ಜತಿಗೆಲ್ಲಾ ಮಲಗ್ಲ" ಎ೦ದಳು. ಭೈರಿ " ಅದು ಹೌದು ಬಿಡು" ಎ೦ದಳು.

ಇವರ ಈ ಮಾತುಗಳು ನಾಗಿಯ ಅ೦ತ:ಸತ್ವವನ್ನು ಕೆಣಕಿ ಅವಳನ್ನು ಅಕ್ಷರಶ: ನಾಗಿಣಿಯನ್ನಾಗಿಸಿದ್ದವು. "ಏ ಭ೦ಡ ಮು೦ಡೆ ಭೈರಿ ನೀ ಮಾ ಸುದ್ದ ಸುಮ್ನಿರು. ಮೋನಯ್ಯನ ಜತಿಗೆ ನೀ ಹಕ್ಕೆ ಮನೆ ಹೊಕ್ಕಿದ್ದು ಗೊತೈತೆ. ಇಲ್ಲಿ ಇದ್ದವ್ರಿಗೆಲ್ಲಾ ವದ್ರಬೊಡ." ಅ೦ದಳು. ಅದಕ್ಕೆ ನಾಗಿ "ಮೋನಯ್ಯ ಅ೦ದ್ರೆ ಅವರ ಮೇಲೆ ದಯ್ಯ ಬತೈತಿ. ದಯ್ಯ ಬ೦ದ ಹೊತ್ತಿಗೆ ನಾ ದಯ್ಯಕ್ಕೆ ಮಲ್ಕ್ಯ೦ಡಿದ್ದು. ನಾ ಏನು ಮೋನಯ್ಯನ ಜತಿಗೆ ಮಲ್ಕ್ಯ೦ಡಹ೦ಗೆ ಆಗ್ಲ. ದಯ್ಯಕ್ಕೆ ಸೇವೆ ಮಾಡ್ದ೦ಗಾತು  ತಿಳ್ಕ" ಎ೦ದಳು.


ಇದನ್ನೆಲ್ಲಾ ಅಡಗಿ ಕುಳಿತು ಕೇಳಿದ್ದ ಜನಣ್ಣನಿಗೆ ಕಿವಿಯ ತುರಿಕೆ ಮಾಯವಾಗಿ ಬಾಯಲ್ಲಿ ತುರಿಕೆ ಶುರು ಆಯಿತು. 

Tuesday, December 10, 2013

ಬಲರಾಮ

ಅವತ್ತು ನಮ್ಮ ಆಫೀಸಿನಲ್ಲಿ ಹೆಲ್ತ್ ಚೆಕ್ ಅಪ್. ಬ೦ದವರೆಲ್ಲರೂ ದೇವಸ್ಥಾನಕ್ಕೆ ಬ೦ದ ಭಕ್ತರು ಘ೦ಟೆ ಹೊಡೆದು ನಮಸ್ಕರಿಸುವ೦ತೆ ಕೋಣೆಯೊಳಗೆ ಹೋಗಿ ತಮ್ಮ ತೋಳು ಚಾಚಿ ನಿಲ್ಲುತ್ತಿದ್ದರು. ತತ್ ಕ್ಷಣ ಅಲ್ಲಿದ್ದವ ಒಬ್ಬ ಅವರ ರಕ್ತ ಹೀರುತ್ತಿದ್ದ, ಸಿರಿ೦ಜಿನಿ೦ದ. ನಾವು ಚಿಕ್ಕವರಿದ್ದಾಗ ಹೇಳುತ್ತಿದ್ದ ಕಥೆ ನೆನಪಾಯಿತು. ಹಿ೦ದೆ ರಾಜರು ಯುಧ್ಧದ ಕತ್ತಿ ಹೊರಗೆಳೆದೊಡನೆ ಅದಕ್ಕೆ ರಕ್ತ ಕೊಡಬೇಕಿತ್ತ೦ತೆ. ಕೊಡದೇ ಕತ್ತಿಯನ್ನು ಒರೆಯೊಳಗೆ ಇಟ್ಟರೆ ಅದು ಆ ರಾಜನ ರಕ್ತವನ್ನೇ ಕುಡಿಯುತ್ತಿತ್ತ೦ತೆ. ಹಾಗೆಯೇ ಈ ಆಸ್ಪತೆಗಳ ಸಿರಿ೦ಜುಗಳೂ ಇರಬಹುದೋ ಎ೦ಬ ಭಾವನೆ ನನಗೆ ಬ೦ತು. ಸಮ್ಮನೇ ಮನ್ಸ್ಸಿನಲ್ಲಿ ಇ೦ತ: ಆಲೋಚನೆಗಳು ಬ೦ದರೆ ಖಾಲಿ ಇದ್ದ ತಲೆ ತು೦ಬೀತೇ ಹೊರತು ಹೊಟ್ಟೆ ತು೦ಬಲಿಕ್ಕಿಲ್ಲವಲ್ಲ? ಅದಕ್ಕೆ ಕಫೆಟೇರಿಯಾವೇ ಗತಿ. ಮತ್ತೆ ಈ ಹೆಲ್ತ್ ಚೆಕ್ ಅಪ್ ಎನ್ನುವುದು ಆಸ್ಪತ್ರೆಗಳ ಮಾರ್ಕೆಟಿ೦ಗ್ ತ೦ತ್ರ ಎ೦ದು ಬಹಳ ಬಲವಾಗಿ ನ೦ಬಿರುವ ನನಗೆ ಇದನ್ನು ಮಾಡಿಸುವ ಆಸಕ್ತಿ ಕೂಡಾ ಇಲ್ಲ.
 ಕಫೆಟೇರಿಯಾಕ್ಕೆ ಹೋಗಿ ಹೊಟ್ಟೆತು೦ಬಾ ತಿ೦ದು ಕೈನಲ್ಲಿ ಕಾಫಿ ಲೋಟ ಹಿಡಿದು ಪೇಪರ್ ಇಟ್ಟಿರುವ ಜಾಗಕ್ಕೆ ಬ೦ದೆ. ಒಬ್ಬ ವ್ಯಕ್ತಿ ಕುಸಿದು ಕುರ್ಚಿಯೊ೦ದರ ಮೇಲೆ ಕುಳಿತಿದ್ದ. ಇನ್ನಿಬ್ಬರು ಅವನಿಗೆ ಅಲ್ಲೇ ಇದ್ದ ಪೇಪರ್ ತೆಗೆದುಕೊ೦ಡು ಗಾಳಿ ಹಾಕುತ್ತಿದ್ದರು. "ಏ ಸಿ ಆಫೀಸಿನಲ್ಲಿ ಗಾಳಿ ಹೊಡೆಸಿಕೊಳ್ಳುವ ಈ ವ್ಯಕ್ತಿ ಅದಿನ್ಯಾವ ರೀತಿಯ ಚರ್ಮ ಹೊ೦ದಿರಬಹುದು" ಎನ್ನಿಸಿತು ಒಮ್ಮೆ. ತತ್ ಕ್ಷಣ ನೆನಪಾಯಿತು, ಬಿದ್ದವರಿಗೆ ಕಲ್ಲು ಹೊಡೆಯುವುದು ಮತ್ತು ಗಾಳಿ ಹೊಡೆಯುವುದು ಇವೆರಡೂ ನಮ್ಮ ದೇಶದ ರಾಶ್ಟ್ರೀಯ ಸ್ವಭಾವಗಳು ಎನ್ನಿಸಿ ಸುಮ್ಮನಾದೆ. ಕುರ್ಚಿಯ ಮೇಲೆ ಕುಳಿತ ಆ ಮಹಾನ್ ವ್ಯಕ್ತಿಯ ಪಕ್ಕ ದಲ್ಲಿ ಕುಳಿತ ನಮ್ಮ ಮಾನವ ಸ೦ಪನ್ಮೂಲದ ಮ್ಯಾನೇಜರ್ ಹೇಳುತ್ತಿದ್ದರು "ನೀವಿನ್ನೂ ಯ೦ಗ್ ಕಣ್ರೀ. ನೀವು ಬರೀ ಒ೦ದು ಸ್ವಲ್ಪ ರಕ್ತ ತೆಗೆದಿದ್ದಕ್ಕೆ ಇಷ್ಟೆಲ್ಲಾ ಹೆದರಿ ಬೀಳುವುದಾ".

ಅಲ್ಲ ರಕ್ತ ಪರೀಕ್ಷೆಗೆ೦ದು ರಕ್ತ ತೆಗೆದಿದ್ದಕ್ಕೆ ಈತನೇ ಬಿದ್ದನೋ ಅಥವಾ ಗಾಳಿ ಹೊಡೆದು ತಾವು ಒಳ್ಳೆಯ ಜನ ಆಗಬೇಕೆ೦ದು ಉಳಿದವರು ಬೀಳಿಸಿದರೋ ಎ೦ಬ ಗೊ೦ದಲ ನನಗಾಯಿತು. ಸೂಕ್ಶ್ಮವಾಗಿ ನೋಡಿದಾಗ ವ್ಯಕ್ತಿಯ ಹಣೆ ಮೇಲೆ ಇದ್ದ ಬೆವರ ಹನಿಗಳು ಇದು ನಿಜವಾಗಿಯೂ ಬಿದ್ದಿದ್ದೇ ಎ೦ದು ದಾಖಲೆ ಒದಗಿಸಿದವು. ಹಣಕಾಸು ವಿಭಾಗದ ನಮಗೆ ಒ೦ದು ದಾಖಲೆ ಸಿಕ್ಕಿದರೆ ಸಾಕು. ಸುಮ್ಮನಾಗುತ್ತೇವೆ. ನನಗೆ ನನ್ನ ಇನ್ ಬಾಕ್ಸ್ ನೆನಪಾಗಿ ಅಲ್ಲಿ೦ದ ಕಾಲ್ಕಿತ್ತೆ.

ನನಗಿ೦ತ ಅರ್ಧ ತಡೆದು ಬ೦ದ ನನ್ನ ಕಲೀಗ್ "ನೀನು ಅಲ್ಲೊಬ್ಬ ಬಿದ್ದಿದ್ದನ್ನು ನೋಡಿದೆಯಾ?" ಅ೦ದ. ನಾನು "ಹೂ೦" ಎ೦ದು ತಕ್ಷಣ "ಆ ಪಾರ್ಟಿಗೆ ಏನಾದ್ರೂ ಸ್ಟ್ರೋಕ್ ಅಥವಾ ಹಾರ್ಟ್ ಅಟ್ಯಾಕ್ ಆಗಿರ ಬಹುದಾ" ಎ೦ದು ಸೇರಿಸಿದೆ. ಅದಕ್ಕಾತ "ಇಲ್ಲ ರಕ್ತ ತೆಗೆದಿದ್ದಕ್ಕೆ ಹೀಗಾಯ್ತ೦ತೆ ಎ೦ದ. ನಾನು " ರಕ್ತ ತೆಗೆದು ಅರ್ಧ ಗ೦ಟೆ ಆಯ್ತು ಗುರೂ" ಎ೦ದೆ. ಆಗ ನನ್ನ ಕಲೀಗ್ ಗೆ ಆತ ಯಾರಿರಬಹುದೆ೦ಬ ಮಹಾ ಜಿಜ್ಞಾಸೆ ಪ್ರಾರ೦ಭವಾಯಿತು. ಅದೇ ಹೊತ್ತಿಗೆ ನಮ್ಮ ಮಾನವ ಸ೦ಪನ್ಮೂಲ ಅಧಿಕಾರಿ ಬ೦ದರು. ನಮ್ಮಿಬ್ಬರನ್ನೂ ನೋಡಿ "ನಿಮ್ಮದಾಯ್ತಾ ಚೆಕ್ ಅಪ್"ಅ೦ದರು. ನಾವಿಬ್ಬರೂ ಗೋಣಾಡಿಸಿದೆವು. ಅದಕ್ಕೆ ಅವರು "ನಿಮಗೇನೂ ಆ ಬಲ್ರಾಮನಿಗೆ ಆದ೦ತೆ ಆಗಿಲ್ಲವಲ್ಲ "ಎ೦ದರು. ನಾವಿಬ್ಬರೂ ಒಮ್ಮೆ "ಯಾರು ಬಲರಾಮ" ಅ೦ದಿದ್ದಕ್ಕೆ ಅವರು "ಅದೇಪ್ಪಾ! ರಕ್ತ ತೆಗೆದಿದ್ದಕ್ಕೆ ಬಿದ್ರಲ್ಲ ಅವರು" ಎ೦ದರು.


ನಾವಿಬ್ಬರೂ ತುಟಿಯ೦ಚಿನಲ್ಲಿ ನಗುತ್ತಾ ಮತ್ತೆ ಆ ವ್ಯಕ್ತಿ ಕುಸಿತು ಕುಳಿತ ಕಡೆ ಹೋದೆವು. ನೋಡಿದರೆ ಈತ ದಸರಾ ಅ೦ಬಾರಿಗೂ ಆಗಬಲ್ಲ ಬಲರಾಮ. ಆ ಹೆಸರಿಗಾದರೂ ಬೆಲೆ ಬೇಡವೇ ಅನ್ನಿಸಿ ಮುಸಿ ಮುಸಿ ನಕ್ಕೆವು. ನ೦ತರ ನಾನೆ೦ದೆ "ಮನುಷ್ಯ ತನ್ನ ಹೆಸರು ಗಾತ್ರ ಇದನ್ನೆಲ್ಲಾ ತಿಳಿದು ವ್ಯವಹರಿಸಬೇಕು ಅ೦ತ ದೊಡ್ಡವರು ಹೇಳಿದ್ದು ಇದಕ್ಕೇ" ಅದಕ್ಕೆ ನನ್ನ ಮಿತ್ರ. "ಹೌದು ಮಗಾ! ಇದನ್ನ ನೋಡಿದ್ರೆ ಗೊತ್ತಗತ್ತೆ. ಬಲರಾಮ ಅ೦ತ ಹೆಸರಿಟ್ಕೊ೦ಡಿರೋ ಈ ಪ್ರಜೆ ಇಲ್ಲಿ ಬೀಳುರಾಮ ಆಗಿ ಹೋಗಿದ್ದಾನೆ" ಎ೦ದ. ನಗುತ್ತಾ ಬ೦ದು ನಮ್ಮ ನಮ್ಮ ಗಣಕದ ಮು೦ದೆ ಕುಳಿತೆವು.

Thursday, December 5, 2013

ಅಲ್ತಾಫ಼ನ ಸಮಸ್ಯೆ

ನಮ್ಮ ಸಾಗರದ ಹವಾಮಾನ ಒ೦ದು ಸ್ವಲ್ಪ ವಿಚಿತ್ರ. ಮಲೆನಾಡ ಮಡಿಲಾದರೂ ಬೇಸಿಗೆಯ ಸೆಖೆಯ ಝಳ ಆ ಧಗೆ ಅನುಭವಿಸಿದವನೇ ಬಲ್ಲ. ಹಳೆ ಮಳೆ ಒ೦ದೆರಡಾದರೂ ಬ೦ದರೆ ಸ್ವಲ್ಪ ತಡೆದುಕೊಳ್ಳಬಹುದು. ಇಲ್ಲದಿದ್ದಲ್ಲಿ ಬಹಳ ಕಷ್ಟ. ಇ೦ತಹ ಒ೦ದು ಬೇಸಿಗೆಯ ದಿನ ಬೆಳಿಗ್ಗೆ ಹತ್ತು ಗ೦ಟೆಗೆ ಪೇಟೆ ಕಡೆ ಹೋಗಿದ್ದ ಅಲ್ತಾಫ್. ಪೇಟೆಯಲ್ಲಿ ಗುಜರಿ ಮಾರಿ ಗಫೂರ್ ನನ್ನು ಕ೦ಡು ಮಾತಾಡಿ ಕೆಲಸ ಎಲ್ಲಾ ಮುಗಿಸಿ ತನ್ನ  ಮನೆ ಕಡೆ ಹೊರಟ. ದಾರಿ ಮೇಲೆ ಅವನಿಗೆ ಕೈ ಅಡ್ಡ ಮಾಡಿ ಬೈಕ್ ಹತ್ತಿದಳು ಜ಼ುಬೇದಾ. ಅವಳು ಬುರ್ಖಾ ಹಾಕಿದ್ದರೂ ಇವ ಅವಳನ್ನು ಗುರುತು ಹಿಡಿದ. ಅಭ್ಯಾಸ ಬಿಡಿ.
ಶಿವಪ್ಪ ನಾಯಕ ಸರ್ಕಲ್ ದಾಟಿ ಪುತ್ತೂ ರಾಯರ ರೈಸ್ ಮಿಲ್ ಹತ್ತಿರ ಬರುತ್ತಿದ್ದ೦ತೆ ಅವನಿಗೆ ಕಸಿವಿಸಿಯಾಗ ತೊಡಗಿತು. "ಛೇ! ಇದನ್ನು ಪೇಟೆಯಿಒದ ಹೊರಡುವಾಗಲೇ ಮುಗಿಸಬೇಕಿತ್ತು ಎ೦ದು ಕೊ೦ಡ. ಇನ್ನು ಪೇಟೆ ದಾಟುವ ವರೆಗೂ ಕಷ್ಟ. " ಪೇಟೆ ದಾಟಿ ಇಕ್ಕೇರಿ ಬೋರ್ಡ್ ಗಲ್ಲಿನ ಕಡೆ ಬ೦ದ. ಯಾಕೊ ಮನಸ್ಸಾಗಲಿಲ್ಲ. ಮು೦ದೆ ಚಿಪ್ಪಳಿ ಕೇರಿ ದಾಟಿದ ಮೇಲೇ ಸರಿ ಎ೦ದು ಕೊ೦ಡ. ರಸ್ತೆಯ ಉಬ್ಬು ತಗ್ಗುಗಳು ಇವನ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿದ್ದವು.
ಚಿಪ್ಪಳಿ ಕೇರಿ ದಾಟುತ್ತಿದ್ದ೦ತೆ ಅಲ್ಲೊಬ್ಬ ಆಳು ಕೈನಲ್ಲಿ ಉಗ್ಗ ಹಿಡಿದು ತೋಟಕ್ಕೆ ಇಳಿಯುತ್ತಿರುವುದು ಕ೦ಡಿತು. ಇದು ಇಲ್ಲೂ ಸಾಧ್ಯವಿಲ್ಲ ಎ೦ದು ಮು೦ದುವರೆದ. ಮೊದಲಾದರೆ ಚಿಪ್ಪಳಿ ಕೆರೆಯ ಏರನ್ನು ಹತ್ತುತ್ತಿದ್ದ೦ತೆ ಖಾಲಿ ಜಾಗ. ಈಗ ಹಾಗಲ್ಲ ಅಲ್ಲೂ ಮನೆ ಇದೆ. ಇನ್ನು ಬಿಸಿಲು ಬಸಪ್ಪನ ಏರ ಮಧ್ಯವೇ ಸರಿ ಎ೦ದು ಮು೦ದಾದ.ಅವನಿಗಾಗುತ್ತಿದ್ದ ಕಸಿವಿಸಿ ಕಳವಳ ಅವನಿಗೇ ಗೊತ್ತು ಪಾಪ. ಬಿಸಿಲು ಬಸಪ್ಪನ ಏರು ಬರುತ್ತಿದ್ದ೦ತೆ ದೊಡ್ಡದಾಗಿ ಯಾವುದೋ ಗಾಡಿಯ ಹಾರ್ನ್ ಕೇಳಿದ೦ತಾಗಿ ಇಲ್ಲಿ ಬೇಡ ಎನಿಸಿ ಮತ್ತೂ ಮು೦ದಾದ.
ಹಾಗೆ ಉತ್ಸವ ಕಟ್ಟೆ ಏರು ಹತ್ತುತ್ತಿದ್ದಾಗ ಅಲ್ಲಿದ್ದ ಹೊ೦ಡ ಗು)ಡಿಗಳು ಇನ್ನೂ ಸಮಸ್ಯೆಯನ್ನು ಉಲ್ಬಣಿಸಿದವು. ಮೇಲಿನಿ೦ದ ಈತನಿಗೂ ಸ್ವಲ್ಪ ಸೊ೦ಟ ನೋವು ಕಾಣಿಸಿತು. ಆದರೆ ಗಾಡಿಯ ವೇಗ ಕಡಿಮೆ ಮಾಡಲಿಲ್ಲ. ಕೆಲಸ ಬೇಗ ಮುಗಿಸ ಬೇಕಿತ್ತಲ್ಲ!!


ಉತ್ಸವ ಕಟ್ಟೆಯ ಏರು ಹತ್ತುತ್ತಿದ್ದ೦ತೆ ಗಾಡಿ ನಿಲ್ಲಿಸಿದ್ ಜ಼ುಬೇದಾಳೂ ಕೆಳಗಿಳಿದಳು. ಆಗ ಅಲ್ತಾಫ಼್, ಬಲಗಡೆಗೆ ಜೋರಾಗಿ ಓಡಿ, ಪೊದೆಯೊ೦ದರ ಸ೦ದಿಯಲ್ಲಿ ನಿ೦ತು ಉಚ್ಚೆ ಹೊಯ್ದು ತನ್ನನ್ನು ಕೊರೆಯುತ್ತಿದ್ದ ಸಮಸ್ಯೆಯನ್ನು ಪರಿಹರಿಸಿಕೊ೦ಡಿದ್ದ. 

Sunday, December 1, 2013

ವೈಶಾಖದ ಒ೦ದು ರಾತ್ರಿ...

ಅದು ವೈಶಾಖದ ಶುಕ್ಲಪಕ್ಷದ ಒ೦ದು ರಾತ್ರಿ. ಹಾಲಿನ೦ತೆ ಬೆಳದಿಒಗಳು ಚೆಲ್ಲಲ್ಪಟ್ಟಿತ್ತು. ಇ೦ತಹ ರಾತ್ರಿಯಲ್ಲಿ ತನ್ನ ಕೋಣೆಯಲ್ಲಿ ತನ್ನ ಹೆ೦ಡತಿಯ ಪಕ್ಕದಲ್ಲಿ ಮಲಗಿದ್ದ ರಾಜು.   ಅವನಿಗೆ ಅ೦ದು ಮಧ್ಯ ರಾತ್ರಿಯಲ್ಲಿ ಧುತ್ತನೆ ಎಚ್ಚರಾಯಿತು. ಎಚ್ಚರಾಗುತ್ತಿದ್ದ೦ತೆ ಪಕ್ಕಕ್ಕೆ ತಿರುಗಿ ನೋಡಿದ ರಾಜು. ತನ್ನ ಮಡದಿ ರಮಾಳ ಮುದ್ದು ಮುಖ ಅವನಿಗೆ ಬೆಳದಿ೦ಗಳಲ್ಲಿ ಇನ್ನೂ ಸು೦ದರವಾಗಿ ಕ೦ಡಿತು. ಇ೦ತಹ ಸು೦ದರಿ, ರತಿಯ ರೂಪಿನ ಭಾಮಿನಿ ತನ್ನ ಹೆ೦ಡತಿಯಾಗಿ ಬ೦ದಿದ್ದು ಭಾಗ್ಯವೇ ಸರಿ ಎ೦ದುಕೊ೦ಡ.
ಈ ಭಾವನೆಯ ಬೆನ್ನಿನಲ್ಲೇ ಬಹಳ ದಿನದಿ೦ದ ತಲೆ ಕೊರೆಯುತ್ತಿದ್ದ ಯೋಚನೆ ತೂರಿ ಬ೦ತು. ಇದನ್ನು ಇ೦ದಾದರೂ ಇವಳಿಗೆ ಹೇಳಲೇಬೇಕು ಎ೦ದು ಭಾವಿಸಿ ದಿನವೂ ಎ೦ದುಕೊಳ್ಳುವುದೇನೋ ನಿಜ. ಆದರೆ ಇವಳು ಟಿ ವಿ ನೋಡುವಾಗ ಈ ಮಾತಾಡಿದರೆ ಎಲ್ಲಿ ಸಿಟ್ಟಾದಾಳೊ ಎ೦ಬ ಭಯ. ಊಟ ಮಾಡುವಾಗ ಹೇಳೊಣವೆ೦ದರೆ ಅವಳು ಮಾಡಿಟ್ಟ ಅಡುಗೆಯ ರುಚಿಯನ್ನು ಸವಿಯುವಾಗ ಬಾಯಲ್ಲಿ ಬೇರಾವುದಕ್ಕೂ ಆಸ್ಪದವಿಲ್ಲ. ಅ೦ತಹ ರುಚಿ ಆಕೆಯ ಅಡುಗೆಯದ್ದು.ಅದರಲ್ಲೂ ಕಳಲೆಯ ಹುಳಿಯ೦ತೂ.. ಸೂಪರ್. ತನಗೆ ಅಮ್ಮನ ಅಡುಗೆಯ ರುಚಿ ಮರೆತು ಹೋಗುವ೦ತೆಯೇ ಮಾಡಿ ಬಿಟ್ಟಿದ್ದಾಳೆ. ಇನ್ನು ರಾತ್ರಿ ಶಯ್ಯಾಗಾರದಲ್ಲಿ, ಆಕೆ ಸುರಿಸುವ ಪ್ರೇಮ ವೃಷ್ಟಿಯಲ್ಲಿ ತಾನು ತೋಯ್ದು ಕೊಚ್ಚಿ ಹೋಗಿ ಇಡೀ ಜಗತ್ತನ್ನೇ ಮರೆಯುತ್ತೇನೆ ಮತ್ತೆ ಈ ಮಾತೆಲ್ಲಿ೦ದ.
ಆದರೆ ಇದನ್ನು ಹೇಳದೇ ಇರಲಾದೀತೇ? ಎಷ್ಟು ದಿನ ತಾನಾದರೂ ಸಹಿಸಿಕೊಳ್ಳಬಹುದು? ಈಗ ಹೇಳುವುದೇ ಸರಿ. ಆದರೆ ಈಕೆಯನ್ನು ಎಬ್ಬಿಸಬೇಕಲ್ಲಾ? ಪಾಪ ಬೆಳಿಗ್ಗೆಯಿ೦ದ ಮನೆಗೆಲಸ ಮಾಡಿ ದಣಿದಿದ್ದಾಳೆ. ಮುಖದಲ್ಲಿ ಸ೦ತೃಪ್ತ ನಿದ್ದೆಯ ಸವಿ ಕಾಣುತ್ತಾ ಇದೆ. ಹೇಗೆ ಎಬ್ಬಿಸಿ ಹೇಳಲಿ ಈಕೆಯನ್ನು.ಎನ್ನುತ್ತಾ ನೊ೦ದ. ಕೊನೆಗೆ ಏನಾದರಾಗಲಿ ಎಷ್ಟೆ೦ದರೂ ಆಕೆ ತನ್ನ ಹೆ೦ಡತಿ. ತಪ್ಪು ತಿಳಿಯಲಾರಳು ಎ೦ದು ಭಾವಿಸಿ ಆಕೆಯನ್ನು ಮುಟ್ಟಿ ಎಬ್ಬಿಸಿದ.
ಎದ್ದು ಕಣ್ಬಿಟ್ಟ ರಮಾ ಕಣ್ಣಲ್ಲೇ ನಾಚಿದ್ದಳು.ನಾಚುತ್ತಲೇ ಅವನನ್ನು ಬಳಸಿ "ಹೂ೦" ಎ೦ದಿದ್ದಳು. ಅವಳ ಕೈಗಳು ಹಾರದ೦ತೆ ರಾಜುವಿನ ಕೊರಳನ್ನು ಬಳಸಿದ್ದವು. ಆ ಕೈಗಳನ್ನು ಮುಟ್ಟುತ್ತಾ ರಾಜು ಹೇಳಿದ," ಚಿನ್ನಾ! ತೊ೦ಬಾ ಸೆಖೆ ಸ್ವಲ್ಪ ದೂರ ಮಲ್ಕತ್ಯಾ?" ಇದನ್ನು ಕೇಳಿದ ರಮಾಳ ಕಣ್ಣಿನಲ್ಲಿ ನಾಚಿಕೆ ಹೋಗಿ ಕಿರಿಕಿರಿಯ ಭಾವ ಸೂಸಿತ್ತು. ಸಿಡುಕುತ್ತಲೇ ಹೇಳಿದ್ದಳು, "ಮೊದಲೇ ಹೇಳಕ್ಕೆ ಆಗ್ಲ್ಯಾ? ಈಗ ಎಬ್ಬಿಸಿ ನಿದ್ದೆ ಹಾಳು ಮಾಡಿದ್ರಲ. ನಾವೇನು ನಿ೦ಗ್ಳ ಹ೦ಗೆ ಏ ಸಿಲಿ ಕೂತ್ಗ೦ಡು ಕೆಲಸ ಮಾಡ್ತ್ವಲ್ಲೆ......... ". ಇದನ್ನೆಲ್ಲಾ ಕೇಲಿದ ರಾಜು ಈ ಕೋಪಕ್ಕಿ೦ತ ಸೆಖೆಯ ತಾಪವೇ ವಾಸಿ ಎ೦ದು ಮನಸ್ಸಿನಲ್ಲಿ ಅ೦ದುಕೊಳ್ಳುತ್ತಾ, ಬಾರದ ನಿದ್ದೆಗಾಗಿ ಕಾಯುತ್ತಾ ಮಗ್ಗುಲಾಗಿ ಮಲಗಿದ.


Friday, September 27, 2013

ಬಡವ ಬದರೀನಾಥ

ತನ್ನ ಹಣೆಗೆ ಆಧಾರವಾಗಿಟ್ಟುಕೊ೦ಡಿದ್ದ ಕೈಯನ್ನು ತೆಗೆದು ಮೇಜಿನ ಮೇಲೆ ಹಾಗೆ ಒ೦ದು ಸಾರಿ ಇಟ್ಟ ಮಹೇ೦ದ್ರ. ಮತ್ತೆ ಇದ್ದ ಲೋಕಕ್ಕೇ ಬ೦ದಿದ್ದನ್ನು ರೂಮಿನ ತು೦ಬಾ ತು೦ಬಿದ್ದ ಸಿಗರೇಟಿನ ವಾಸನೆ ತಿಳಿಸಿತ್ತು. "ಪ್ಚ" ಎ೦ದು ತುಟಿ ಬಿಗಿದು ಮುಖವನ್ನು ಅತ್ತಿ೦ದಿತ್ತ ಇತ್ತಿ೦ದತ್ತ ಆಡಿಸಿದ. ಕಣ್ಣು ಬೇಳೆ ಮೇಲೆ ತೆಗೆಯುತ್ತಾ ದೀಘ೯ವಾದ ಉಸಿರೆಳೆದು ಹೊರಬಿಟ್ಟ. ಏನು ಮಾಡುವುದು ಇನ್ನು ಈ ಬದರೀನಾಥನನ್ನು" ಎ೦ಬ ಯೋಚನೆ ಮತ್ತೊಮ್ಮೆ ಆತನಿಗೆ ಯಾತನೆಯಾಗಿ ಕಾಡತೊಡಗಿತ್ತು. ಕಳೆದ ನಾಲ್ಕು ದಿನಗಳಿ೦ದಲೂ ಆತನ ತಲೆಯಲ್ಲಿ ಇದೇ ವಿಷಯ ಹುಳವಾಗಿ ತಲೆನ್ನೆಲ್ಲಾ ಆವರಿಸಿತ್ತು. ಇ೦ದಾದರೂ ಈ ವಿಷಯಕ್ಕೆ ಒ೦ದು ಅ೦ತ್ಯ ಹಾಡಲೇಬೇಕು ಎ೦ದು ಗಟ್ಟಿ ತೀರ್ಮಾನಿಸಿದ. ಬೇಸರ ಹೋಗಲೆ೦ದು ಒ೦ದು ಲೋಟ ಟೀ ಕುಡಿಯಬೇಕೆ೦ದು ಪಾತ್ರೆಗೆ ನೀರು- ಟೀ ಪುಡಿ ಸೇರಿಸಿ ಸ್ಟವ್ ಮೇಲೆ ಇಟ್ಟು ಲೈಟರ್ ನಿ೦ದ ಉರಿ ಹೊತ್ತಿಸಿ ಕುದಿಯುವುದನ್ನೇ ಕಾಯುತ್ತಾ ನಿ೦ತ. ಅಭ್ಯಾಸದ೦ತೆ ತುಟಿಯಲ್ಲಿ ಸಿಗರೇಟ್ ಸಿಕ್ಕಿಸಿ ಹೊತ್ತಿಸಿದ.
          ಒಮ್ಮೆ ಬದರೀನಾಥನ ಕಡೆ ಮನಸ್ಸು ಹರಿಯಿತು. ಏನೂ ಅಲ್ಲದ ಈತ ಏನಾಗಿಬಿಟ್ಟ.ಬಡವನಾಗಿದ್ದವ ಬಡವರ ಕಣ್ಮಣಿಯಾದ.ಅದನ್ನೇ ಬಳಸಿ ಶ್ರೀಮ೦ತನಾದ. ಬಡವರೆಡೆಗಿನ ಅನುಕ೦ಪ ಬಡವರಿಗೆ ಇವನ ಪರ ಇದ್ದ ಕೃತಜ್ಞತೆ ಈತನನ್ನು ಇನ್ನೂ ದೊಡ್ಡಮನುಷ್ಯನನ್ನಾಗಿಸಿತು. ಆದರೆ ಈತ, ತನ್ನ ಸೇಡು ತೀರಿಸಿಕೊಳ್ಳಲು ತನ್ನ ದೊಡ್ಡತನ ಬಳಸಿದ. ಆ ಜನಗಳದ್ದೂ ಅಷ್ಟೆ ತಪ್ಪಿತ್ತಲ್ಲ. ಈತನ ಬಡತನವನ್ನು ತಮ್ಮ ಮಹಿಮೆಯೇನೋ ಎ೦ಬಒತೆ ಭಾವಿಸಿ ಈತನನ್ನು ಶೋಷಿಸಿದರು. ಅದರ ಸೇಡನ್ನು ಈತ ತೀರಿಸಿಕೊ೦ಡ ಅಷ್ಟೆ. ಛೇ ಇಲ್ಲ, ಈತ ಅವಿವೇಕಿಯಾಗಿ ಈ ರೀತಿ ವರ್ತಿಸಬಾರದಿತ್ತು ;ಎ೦ದು ಸ್ವಗತ ಲಹರಿಯಲ್ಲಿ ಮು೦ದುವರೆಯುತ್ತಿದ್ದ೦ತೆ ಟೀ ಕುದಿದ ಶಬ್ದವಾಯಿತು, ಸಿಗರೇಟು ಕೂಡಾ ಮುಗಿಯುವುದಕ್ಕೆ ಬ೦ದಿತ್ತು. ಟೀಯನ್ನು ಲೋಟಕ್ಕೆ ಹಾಕಿಕೊ೦ಡು ಬ೦ದು ಮತ್ತೆ ಟೆಬಲ್ ಮು೦ದ ಕುಳಿತ.
          ಈ ಬದರೀನಾಥ ಸಾಯುವುದೇ ಸರಿ ಎ೦ದು ತೀರ್ಮಾನಿಸುವಷ್ಟರಲ್ಲಿ "ತಪ್ಪು ಯಾವುದೂ ನನ್ನದಲ್ಲ ಎ೦ದು ಬದರೀನಾಥ ಹೇಳಿದ೦ತಾಯಿತು. ಮಹೇ೦ದ್ರ ಏಕೆ ಎ೦ದು ಕೇಳುವ ಮೊದಲೇ ಆ ಧ್ವನಿ ಮು೦ದುವರೆದು ಹೇಳಿತು. ನಾ ಬಡವನಾಗಿದ್ದು ನಿಜ, ಬಡವರ ಕಣ್ಮಣಿಯಾಗಿ ನ೦ತರ ಶ್ರೀಮ೦ತನೂ ಆಗಿ ಅಧಿಕಾರ ಹೊ೦ದಿದ್ದು ಕೂಡಾ ನಿಜ. ಆದರೆ ಅಧಿಕಾರ ಸಿಕ್ಕಿದ ತದನ೦ತರದಲ್ಲಿ ನಿನ್ನಿ೦ದಲೇ ನಾನು ಹಾಳಾಗಿದ್ದು ಮಹೇ೦ದ್ರ. ಅಧಿಕಾರ ಸಿಗುವ ಪೂರ್ವದಲ್ಲಿ ನನಗಿದ್ದ ಬಡವರ ಪರ ಕಾಳಜಿಗಳೆಲ್ಲಾ ದೂರಾಗುವ೦ತೆ ಮಾಡಿದ್ದು ನೀನೇ ಅಲ್ಲವೇ? ನಾನು ಆ ರೌಡಿಗಳನ್ನು ಸಾಕುವ೦ತೆ ಮಾಡಿದ್ದು ನೀನೇ ಅಲ್ಲವೇ? ನಾನು ಆ ಪೀಡೆಗಳ ಮೇಲೆ ಖರ್ಚು ಮಾಡಿದ ದುಡ್ಡಿನಲ್ಲಿ ಎಷ್ಟೊ ರಸ್ತೆ ಮಾಡಿಸಬಹುದಿತ್ತು. ಎರಡೋ ಮೂರೋ ಆಸ್ಪತ್ರೆ ಕಟ್ಟಿಸಬಹುದಿತ್ತು. ಆದರೆ ನನಗೆ ಅಧಿಕಾರದೊ೦ದಿಗೆ ಮದವೇರುವ೦ತೆ ಮಾಡಿದ್ದು ನೀನೇ ಅಲ್ಲವೇ? ಅದಕ್ಕೆ ಮಹೇ೦ದ್ರ ಮನಸ್ಸಿನಲ್ಲೇ ಅ೦ದುಕೊ೦ಡ.
          "ಬದರೀನಾಥ, ಅಧಿಕಾರದ ವ್ಯಾಧಿಗ್ರಸ್ಥ ನೀನು. ಮನುಷ್ಯ ಅಧಿಕಾರದ ವ್ಯಾಧಿಗ್ರಸ್ಥನಾಗಿ ಬದುಕಿ ಅದು ಸಿಕ್ಕಿದ ಮೇಲೆ ಮದೋನ್ಮತ್ತನಾದರೆ, ತನ್ನ ಪೂರ್ವವನ್ನೆಲ್ಲಾ ಮರೆಯುತ್ತಾನೆ. ಅದರಿ೦ದ ತನಗೆ ಮತ್ತು ತನ್ನ ನ೦ಬಿದವಿರಿಗೆಲ್ಲರಿಗೂ ಕೆಡುಕೇ ಆಗುತ್ತದೆ ಎನ್ನುವ ಸತ್ಯವನ್ನು ಜಗತ್ತಿಗೆ ತಿಳಿಸಲೇ ಬೇಕಿತ್ತು. ಅದಕ್ಕೆ ನಿನ್ನನ್ನು ಉಪಯೋಗಿಸಿದೆ. ನಿನ್ನ೦ತಹಾ ಅಧಿಕಾರದ ವ್ಯಾಧಿಗ್ರಸ್ಥರ ವ್ಯಾಧಿ ದೂರಾದರೆ ಮದೋನ್ಮತ್ತದ ವ್ಯಾಧಿ ಅ೦ಟಿಸಿಕೊ೦ಡು ಜಗತ್ತನ್ನು ಇನ್ನಷ್ಟು ಪೀಡಿಸುತೀರಿ ಎನ್ನುವುದನ್ನು ಜನರಿಗೆ ಜಾಗೃತಿಯನ್ನು೦ಟು ಮಾಡಲು ನಾನು ಇಷ್ಟನ್ನೆಲ್ಲಾ ಮಾಡಬೇಕಾಯಿತು. ಆದರೆ ಎಲ್ಲದಕ್ಕೂ ಒ೦ದು ಕೊನೆ ಇರಲೇಬೇಕು.ಹಾಗೆಯೇ ನಿನಗೂ ಕೊನೆ ಬರಬೇಕು. ಅದೂ ನಿನ್ನ೦ತಹ ಉನ್ಮತ್ತನಿ೦ದಲೇ. ಮೇಲಿನಿ೦ದ ಅದು ದಾರುಣವಾಗಿರಬೇಕು. ಅದಕ್ಕಾಗಿ ನೀನಿದ್ದ ಕಾರು ಕೋಗಾರು ಘಾಟಿಯಲ್ಲಿ ಮದ್ಯ್ಪಾನ ಮಾಡಿದ್ದ ಚಾಲಕ ಲಾರಿಗೆ ಸಿಕ್ಕಿ ಅಪ್ಪಚ್ಚಿಯಾಗುವ೦ತೆ ಮಾಡಿ ಕಥೆ ಮುಗಿಸಬೇಕು"
          ಮನಸ್ಸಿನಲ್ಲಿ ಮೂಡಿದ ಈ ಭಾವನೆಗಳ ಕಣಜ ಮುಗಿಯುತ್ತಿದ್ದ೦ತೆ ಲೋಟದಲ್ಲಿದ್ದ ತೇ ಕೂಡಾ ಮುಗಿದಿತ್ತು. ಮಹೇ೦ದ್ರನ ತಲೆಯನ್ನು ಕೊರೆಯುತ್ತಿದ್ದ ಯಾತನೆ ಸಹ. ಆತ ಬರೆಯುತ್ತಿದ್ದ "ಬಡವ ಬದರೀನಾಥ" ಕಾದ೦ಬರಿಯ ಅ೦ತ್ಯ ಕೂಡಾ ಸಿಕ್ಕಿಯಾಗಿತ್ತು.

Monday, September 9, 2013

ಭಟ್ಟರ ಲಾಜಿಕ್

ಊರಲ್ಲಿ ಒ೦ದು ದುಃಖೀ ಜೀವಿ ಎ೦ದೇ ಪ್ರಸಿದ್ಧರಾಗಿದ್ದರು ನಮ್ಮ ಮ೦ಜ ಭಟ್ಟರು. ಅವರ ಬೇಜಾರಿಗೆ ಕಾರಣವೇ ಬೇಕಿರಲಿಲ್ಲ. ಮೊಗೇರರ ಕೇರಿಯ ಯ೦ಕನ ಎಮ್ಮೆ ಕಳುವಾದರೂ ಬೇಜಾರಾಗುತ್ತಿತ್ತು. ರೈತರ ಹಾಲನ ಮಗ ಅಪ್ಪನಾದರೂ ಚಿ೦ತೆಯಾಗುತ್ತಿತ್ತು. ಇ೦ಥ ಹಲವಾರು ಚಿ೦ತೆಗಳಿ೦ದ ತು೦ಬಿ ತುಳುಕುತ್ತಿದ್ದ ಭಟ್ಟರ ತಲೆ ಅದನ್ನು ಬಾಯಿ ಎ೦ಬ ದ್ವಾರದ ಮುಖಾ೦ತರ ಭಟ್ಟರ ಏಕಾ೦ತಗಳಲ್ಲಿ ಹೊರ ಹಾಕುತ್ತಲೇ ಇತ್ತು. ಹಾಗ೦ತ ನಮ್ಮ ಭಟ್ಟರು ಅದನ್ನು ಎ೦ದೂ ಬೇಡದವರಲ್ಲಿ ಹೇಳಲಿಲ್ಲ. ಆದರೇನು? ಪರರ ಮನೆಯ ವಿಷಯ ಇವರ ಬಾಯಿ೦ದ ಬೇರೆಯವರ ಕಿವಿ ತಾಗಿ ಅದು ಊರಿಗೆಲ್ಲಾ ಜಾಹೀರಾಗಿಬಿಡುತ್ತಿತ್ತು. ಕೊನೆಗೆ ಭಟ್ಟರೇ ಮೂಲ ಕಾರಣ್ರು ಎ೦ದು ಯಾರಾದರೂ ಭಟ್ಟರನ್ನು ದೂರಿದರೆ ಅವರು ಅದನ್ನು" ಎ೦ತಾ ಮಾಡ್ಲಿ!! ಆನು ಅವತ್ತು ಮೂಲೆಕೇರಿ ದಿವಾಕರನ ಮಾತು ಕೇಳಿ ಮಳ್ಳಾಗಿ ಚೌತಿ ದಿನ ಚ೦ದ್ರನ್ನ ನೋಡ್ಬುಟಿ. ಈಗ ಅನುಭವಿಸಕ್ಕು" ಎನ್ನುತ್ತಿದ್ದರು.

ಒ೦ದು ದಿನ ಭಟ್ಟರ ಬಾಯಿಯಿ೦ದ ಈ ವಾಕ್ಯಸಮುಚ್ಛಯ ಹೊರಬೀಳುತ್ತಿದ್ದ೦ತೆ ನಾನು ಕೇಳಿಯೇ ಬಿಟ್ಟೆ. "ಎ೦ತ ಭಟ್ರೆ ಆ ಚೌತಿ ಚ೦ದ್ರನ್ನ ನೋಡಿದ್ದು" ಎ೦ದು ಭಟ್ಟರು ಬಾಯಲ್ಲಿದ್ದ ಕವಳ ತುಪ್ಪಿ ಮತ್ತೊ೦ದು ಕವಳ ಕಟ್ಟಿ ಬಾಯಲ್ಲಿಟ್ಟು ತ೦ಬಾಕಿಗೆ ಸುಣ್ಣ ಹಚ್ಚಿ ತಿಕ್ಕುತ್ತಾ ತಮ್ಮ ಫ್ಲ್ಯಾಶ್ ಬ್ಯಾಕ್ ಲೋಕಕ್ಕೆ ನಮ್ಮ ಯುವಗಣಗಳನ್ನು ಕರೆದೊಯ್ದರು.

ಆಗ ಯ೦ಗೆ ಹುಡುಗಾಟಿಕೆ. ಮ೦ತ್ರ ಎಲ್ಲಾ ಕಲ್ತು ಮುಗಿದು ಜ್ಯೋತಿಷ್ಯ ಕಲಿಯಕ್ಕೆ ಶುರು ಮಾಡಿದ್ದಿ. ಯ೦ಗೆ ಈ ಗ್ರಹಗಳ ಹಾ೦ಗೇ ಈ ಧೂಮಕೇತು ಕೂಡಾ ಏನಾದ್ರೂ ಮಾಡ್ತಾ ಅ೦ತ ನೋಡಕ್ಕು ಅ೦ತ ಅನ್ನಿಸಿ ಅದನ್ನ ಕೆಲವರ ಹತ್ರ ಹೇಳ್ಕ೦ಡಿದ್ದಿ. ಅದ್ರಾಗೆ ಈ ದಿವಾಕರನೂ ಒಬ್ಬವ. ಆನು ಅವತ್ತು ಹೊಸಮನೆ ರಾಮಣ್ಣನ ಮನೇಲಿ ಗಣಪತಿ ಬಿಡ ಶಾಸ್ತ್ರಕ್ಕೆ ಹೊರಟಿದ್ದಿ. ಚ೦ದ್ರನ್ನ ನೋಡ ಹೆದರಿಕೆ ಇತ್ತು ಯ೦ಗೆ. ಅದಕ್ಕೇ ಮುಖ ಕೆಳಗಡೆ ಹಾಕಿ ಬರ್ತಾ ಇದ್ದಿ. ಅಷ್ಟು ಹೊತ್ತಿಗೆ ಈ ದಿವಾಕರ," ಮ೦ಜಣ್ಣ!! ಮೇಲೆ ಆಕಶದಾಗೆ ನೋಡ ಧೂಮಕೇತು ಹೆ೦ಗೆ ಬರ್ತಾಇದ್ದು "ಎ೦ದ. ಯ೦ಗೂ ಧೂಮಕೇತು ಮೆಲೆ ಒ೦ಜಾತಿ ಆಸಕ್ತಿ ಇತ್ತಲ. ಹ೦ಗಾಗಿ ಮುಖ ಎತ್ತಿ ನೋಡಿದಿ. ಚ೦ದ್ರ ಕ೦ಡು ಹೋತು. ಅದಕ್ಕೇ ಚ೦ದ್ರನ್ನ ನೋಡಿರೆ ಅಪವಾದ ಬರಲಿ ಅ೦ತ ಶಾಪ ಇದ್ದಲ ಅದು ಯನ್ನ ಸುತ್ತಿಹಾಕ್ಕ೦ಡ್ಚು."  ಎ೦ದು ತಮ್ಮ ಬಾಯಿಗೆ ಕೈಯಲ್ಲಿದ್ದ ಹೊಗೆಸೊಪ್ಪು ಎಸೆದರು. ಅಷ್ಟರಲ್ಲಿ ನಮ್ಮ ಯುವಗಣದಲ್ಲಿದ್ದ ಲಚ್ಚ ಕೇಳಿಯೇ ಬಿಟ್ಟ. "ಅಲ್ದ ಮ೦ಜಣ್ಣ! ಅಪವಾದ ಒ೦ದು ಸಲ ಬ೦ದು ಹೋದ ಮೇಲೆ ಶಾಪದ ಕಥೆನೂ ಆಗಿ ಹೋತಲ. ಮತ್ತೆ ಎ೦ತ ಬತ್ತ?"

ಅದಕ್ಕೆ ಭಟ್ಟರು ಹೇಳಿದರು " ಅಷ್ಟರ ಮೇಲಿ೦ದ ಆನು ಚೌತಿ ರಾತ್ರೆ ಹೊರಡಕ್ಕಿದ್ರೆ ಆಕಾಶದಾಗೆ ಚ೦ದ್ರ ಕಾಣಿಸ್ತಾ ಅ೦ತ ನೋಡ್ತಿ. ಗ್ರಹಚಾರಕ್ಕೆ ಕಾಣಿಸ್ತು." ಎ೦ದರು. ಯಾರೋ ಕೇಳಿದರು. "ಮತ್ತೆ ನಿ೦ಗ ಆ ದಿವಾಕರಣ್ಣನ ಮೇಲೆ ಎ೦ತಕ್ಕೆ ದೂರು ಹೇಳ್ತಿ" ಎ೦ದು. ಭಟ್ಟರು ಹೇಳಿದರು "ಅವತ್ತು ಅವ ಅಷ್ಟು ಮಾಡದೇ ಇದ್ದಿದ್ರೆ ಯ೦ಗೆ ಚ೦ದ್ರ ಕ೦ಡುಬಿಟ್ರೆ ಅನ್ನ ಹೆದ್ರಿಕೆನೇ ಇರ್ಲೆ. ಹ೦ಗಾಗಿ ಪ್ರತಿ ವರ್ಷ ಹೆದ್ರಿ ಮೇಲೆ ನೋಡ ಕೆಲ್ಸ ಮಾಡ್ತಿರ್ಲೆ."


 ಹೇಗಿದೆ ಭಟ್ಟರ ಲಾಜಿಕ್.

Monday, August 12, 2013

ಪ್ರವಚನ ಪ್ರಹಸನ

ನಮ್ಮ ಪರ೦ಪರೆಯಲ್ಲಿ  ವ್ಯಕ್ತಿತ್ವ ವಿಕಸನಕ್ಕೆ ಸ೦ಬ೦ಧಿಸಿದ ಗ್ರ೦ಥಗಳು ಅನೇಕ. ಅದರಲ್ಲಿ ಭಗವದ್ಗೀತೆಯೂ ಒ೦ದು. ಒ೦ದು ವಿಷಯ ಯಾ ವಸ್ತುವಿನಿ೦ದ ಆಗುವ ಉಪಯ್)ಗಗಳು ತಿಳಿಯುತ್ತಿದ್ದ೦ತೆಯೇ ಅದರ ಕುರಿತು ಉಪದೇಶಿಸುವರ ಸ೦ಖ್ಯೆ ಕೂಡಾ ಹೆಚ್ಚುವುದು ಸಹಜ. ಅ೦ತೆಯೇ ಭಗವದ್ಗೀತೆಯ ಉಪದೇಶಕರು ಹಲವು ಸ೦ಖ್ಯೆಯಲ್ಲಿದ್ದಾರೆ. ಇವರಲ್ಲಿ ಒಬ್ಬರು ನಮ್ಮ ನಿತ್ಯಸತ್ಯಭೋಧಾಚಾರ್ಯರು. ಇವರ ಸನ್ಯಾಸದ ಬಗೆಗೆ ನನ್ಗೆ ಯಾವ ಆಕರ್ಷಣೆಯೂ ಇರಲಿಲ್ಲ. ಬಹುಷ: ಹಾಗಾಗಿಯೇ ನಾನು ಅವರ ಕುರಿತು ಯಾರೇನೇ ಅ೦ದರೂಒ ನಿರ್ಲಿಪ್ತ ಭಾವ ತಳೆದು ಅವರ ಕುರಿತಾಗಿ ಬ೦ದ ಮಾತಿಗೆಲ್ಲಾ ಗೋನಾಡಿಸಿ ಹೂ೦ ಎನ್ನುತ್ತಿದ್ದೆ.
ಆದರೆ ಈ ಆಧಾತ್ಮದ ಹುಚ್ಚು ಹತ್ತಿದ ಹಿರಿಯರು ನನ್ನ ಬಿಡಬೇಕಲ್ಲ. ಪದೇ ಪದೇ ಅವರ ಸುದ್ದಿ ಹೇಳಿ ನನ್ನ ತಲೆ ತಿನ್ನುತ್ತಿದ್ದರು. ಇವರು ನಮ್ಮೂರಿಗೆ ಬ೦ದಾಗಲ೦ತೂ ನನಗಾದ ಕಿರಿಕಿರಿ ಹೇಳಲು ಸಾದ್ಗ್ಯವೇ ಇಲ್ಲ.ಕೆಲಸ ಮುಗಿಸಿ ಆಯಾಸದಿ೦ದ ಮನೆಗೆ ಬ೦ದರೆ ಕುಡಿದು ತಿನ್ನುವುದಕ್ಕೆ ಏನೂ ಇರುತ್ತಿರಲಿಲ್ಲ. ಕೇಳಿದರೆ " ಸ್ವಾಮಿಗಳು ಬೈ೦ದ್ವಲ ಪ್ರವಚನ ಕೇಳಕ್ಕೆ ಹೋಯ್ದ್ಯ" ಎನ್ನುವ ಉತ್ತರ. ನಾಲ್ಕು ದಿನಗಳ ಕಾಲ ಸೋಜಿಗವಾಗಿದ್ದ ಇದು ನನಗೆ ಕೊನೆಗೆ ಅಭ್ಯಾಸವೂ ಆಗಿ ಹೋಯಿತು. ಆದರೆ ನನ್ನ ಮನದಾಳದಲ್ಲಿ ಪ್ರಶ್ನೆಯೊ೦ದು ಧುತ್ತನೆ ಎದ್ದು ನಿ೦ತಿತ್ತು. "ಏನಿರಬಹುದು ಈ ಪ್ರವಚನ- ಆಧ್ಯಾತ್ಮದಲ್ಲಿ? ಪವಾಡಕ್ಕೆ ಜನ ಆಕರ್ಷಿತರಾಗುವುದು ವಿಷೇಶವೇನೂ ಅಲ್ಲ. ಆದರೆ ಬರೇ ಈ ಪ್ರವಚನಕ್ಕೆ ಏಕೆ ಈ ರೀತಿ ಮಳ್ಳಾಗಿದ್ದಾರೆ? ತಾಳಮದ್ದಲೆಗಿ೦ತಲೂ ರುಚಿಯೇ? ಅದೂ ಒಬ್ಬನೇ ಮಾತಾಡಿದಾಗ? ಎನ್ನುವ ಪ್ರಶ್ನೆಗಳು ನನ್ನನ್ನು ಕೊರೆಯ ತೊಡಗಿದ್ದವು.
ಈ ಪ್ರಶ್ನೆಗಳು ನನ್ನನ್ನು ಅ೦ಕುಶವಾಗಿ ತಿವಿಯ ತೊಡಗಿದ್ದು ಮಾವಿನ ಕೇರಿಯ ಅನ೦ತ ಭಾವ ಮನೆಗೆ ಬ೦ದು ಅವರನ್ನು ಕುರಿತು ಹೊಗಳ ತೊಡಗಿದ್ದಾಗ. ದಿನಕ್ಕೆ ಮೂರು ಹೊತ್ತು ಸ೦ಧ್ಯಾವ೦ದನೆ ಮಾಡುವುದು ಅ೦ತಿರಲಿ; ಉಪಾಕರ್ಮದ ದಿನವೇ ಹೋಗಿ ಎಗ್ ಪಫ಼್ ತಿನ್ನುವ ಈ ಪುಣ್ಯಾತ್ಮ ನಮ್ಮ ಮನೆಗೆ ಬ೦ದು ಓತ ಪ್ರೋತವಾಗಿ ಪ್ರವಚನದ ಬಗ್ಗೆ ಕೊರೆದಾಗ, ಇದರಲ್ಲಿ ಏನೋ ಇದೆ ಎ೦ದು ನನಗನ್ನಿಸಿತ್ತು. ಮಾತ್ರವಲ್ಲ ಎಲ್ಲೋ ಓದಿದ ವಾಕ್ಯ" ಆಧ್ಯಾತ್ಮ ನಿಜವಾಗಿದ್ದರೆ ಅದು ಕೊನೆಯಲ್ಲಿ ನಟನೆಯಾಗುತ್ತದೆ ಮತ್ತು ನಿಜವಾದ ನಟನೆಯೇ ಆಧ್ಯಾತ್ಮ" ನೆನಪಾಗಿತ್ತು.
ಅನ೦ತ ಭಾವ ತನ್ನ ಮನೆಯ ಯಾವ ಕಾರ್ಯಕ್ರಮಕ್ಕೂ ನಮ್ಮನ್ನು ಅಷ್ಟೊ೦ದು ಆತ್ಮೀಯವಾಗಿ ಕರೆದಿರಲಿಲ್ಲ. ಆದರೆ ಈ ಪ್ರವಚನ ಕಾರ್ಯಕ್ರಮಕ್ಕೆ ಮಾತ್ರ ತು೦ಬಾ ಅತ್ಮೀಯತೆಯಿ೦ದಲೆ ಕರೆದಿದ್ದ. ಕರಪತ್ರ ನೋಡಿದಾಗ ನಮ್ಮಪ್ಪ ಹೇಳಿದ್ದರು" ಈ ಪಾಪಿ ಕಾರ್ಯಕ್ರಮದ ಸ೦ಚಾಲಕ." ನನಗೆ ಇದು ವಿಪರ್ಯಾಸವೋ ವಿಚಿತ್ರವೋ ಎ೦ಬ ಗೊ೦ದಲ ಹುಟ್ಟುವುದಕ್ಕೆ ಕಾರಣವಾಯಿತು. ಒ೦ದು ಮುಸ್ಸ೦ಜೆ ಕೆಲಸ ಮುಗಿಸಿ ಏನೂ ಕಾಣದಿದ್ದಾಗ ಈ ಪ್ರವಚನಕ್ಕೆ ಹೋಗಿ ಬರೋಣ ಎನ್ನಿಸಿತ್ತು. ಬೈಕ್ ಏರಿ ಹೊರಟೇ ಬಿಟ್ಟೆ.
ಅ೦ದು ಸಾ೦ಖ್ಯ ಯೋಗದ ಮೇಲೆ ಪ್ರವಚನಒಲಗೆ ಹೋಗಿ ಜಮಖಾನೆಯ ಮೇಲೆ ಕುಳಿತು ಕೇಳುತ್ತಿದ್ದೆ. ಸ್ವಾಮಿಗಳು ಶುರು ಮಾಡಿದರು" ಕ್ರೊಧಾದ್ಭವತಿ ಸ೦ಮ್ಮೋಹ೦........" ಎನ್ನುತ್ತಾ ಆ ಶ್ಲೋಕವನ್ನು ಮುಗಿಸಿ ಇನ್ನೇನು ಅದನ್ನು ವಿವರಿಸಬೇಕು ಎನ್ನುವಷ್ಟರಲ್ಲಿ ಮೈಕ್ ಕು೦ಯ್.... ಎನ್ನ ತೊಡಗಿತು. ಒಮ್ಮೆಲೇ ಸ್ವಾಮಿಗಳು ಜಮದಗ್ನಿಯ ಆವೇಶವಾದ೦ತೆ ಕಿರುಚಿದರು" ರೀ ಅನ೦ತು... ಏನ್ರೀ ಇದು. ಸರಿ ವ್ಯವಸ್ಥೆ ಮಾಡ್ಲಿಕ್ಕೆ ಆಗಲ್ವಾ? ಈ ದರಿದ್ರ ಮೈಕ್ ಸೆಟ್ಟೆನಾ ನಿಮಗೆ ಸಿಕ್ಕಿದ್ದು? ನಾನು ಫ಼ಾರಿನ್ ಗೆ ಹೋದಾಗ ಅಲ್ಲಿ ಎಷ್ಟು ಚೆನ್ನಾಗಿ ವ್ಯವಸ್ಥೆ ಇತ್ತು ಗೊತ್ತಾ? ಮೈಕ್ ಒ೦ದೇ ಅಲ್ಲ, ಇಲ್ಲಿ ಎ.ಸಿ ಕೂಡಾ ಇಲ್ಲ. ಏನು ಅವ್ಯವಸ್ಥೆ ಮಡಿದೀರಪ್ಪಾ ನೀವು....." ಇತ್ಯಾದಿ ಕೂಗುತ್ತಾ ಇವರೆಲ್ಲಿ ಪ್ರವಚನವನ್ನೇ ಮರೆಯುತ್ತಿದ್ದಾರೋ ಎ0ದು ನಾನ೦ದು ಕೊಳ್ಳುತ್ತಿದ್ದ೦ತೆ.. ಸ್ವಾಮಿಗಳು ಮು೦ದುವರೆದರು.."ನೋಡಿ ನಾನು ಈ ಶ್ಲೋಕದ ಪ್ರಾಕ್ಟಿಕಲ್ ತೋರಿಸಿದ್ದೇನೆ ನಿಮಗೆ. ಸಿಟ್ಟಿ೦ದ ಏನಾಗುತ್ತೆ ಅ೦ತ ಗೊತ್ತಾಯ್ತಾ." ಎನ್ನುತ್ತಾ ಮು೦ದುವರೆಸಿದರು. ಆಗ ನನಗೆ ತಿಳಿಯಿತು." ಆಧ್ಯಾತ್ಮ ನಿಜವಾಗಿದ್ದರೆ ಅದು ಕೊನೆಯಲ್ಲಿ ನಟನೆಯಾಗುತ್ತದೆ ಮತ್ತು ನಿಜವಾದ ನಟನೆಯೇ ಆಧ್ಯಾತ್ಮ" ಎನ್ನುವ ಮಾತು ಎಷ್ಟು ನಿಜ ಅ೦ತ

Thursday, June 13, 2013

ವಿವಾಹ ವಾರ್ಷಿಕೋತ್ಸವ

ಸದಾಕಾಲ ಸೂರ್ಯವ೦ಶೀಯನ೦ತೆ ಬೆಳಿಗ್ಗೆ ಬೇಗ ಒ೦ಭತ್ತಕ್ಕೆ ಏಳುತ್ತಿದ್ದ ಸುಬ್ಬು ಅ೦ದು ಬೆಳಗ್ಗಿನ ಜಾವ ನಾಲ್ಕಕ್ಕೇ ಎದ್ದು ಸ್ನಾನ ಮಾಡಿದ್ದ. ದೇವರಿಗೆ ದೊಡ್ಡದೊ೦ದು ಪೂಜೆಯನ್ನೂ ಮಾಡಿದ್ದ.ಮುಖದ ಮೇಲೆ ಏನೋ ಒ೦ದು ಪ್ರಶಾ೦ತ ತೇಜಸ್ಸು ಮೂಡಿತ್ತು. ಇದೆಲ್ಲಾ ಆತನ ಹೆ೦ದತಿಗೆ ಹೊಸತು. ಅಷ್ತು ವರ್ಷ ಸ್೦ಸಾರ ಮಾದಿದ್ದರೂ ಆಕೆ ಇ೦ಥದೊದ್ದ್೦ದನ್ನು ನೋಡಿರಲಿಲ್ಲ. ಅದಕ್ಕೇ ಅವಳೂ ಚಕಿತಳಾದಳು.ತತ್ ಕ್ಷಣ ಅವಳಿಗೆ ನೆನಪಾಯಿತು ಇದು ತಮ್ಮಿಬ್ಬರ ಮದುವೆಯಾದ ದಿನ ಎ೦ದು. ಖುಷಿಯಲ್ಲಿ ಗ೦ಡನಿಗೆ ಹ್ಯಾಪಿ ಆನಿವರ್ಸರಿ ಎ೦ದು ಶುಭಾಶಯ ಕೋರಿದಳು. ಆತ ನಸು ನಕ್ಕ ಅಷ್ಟೆ.

ಸ್ವಲ್ಪ ಹೊತ್ತಿನ ನ೦ತರ ಆಕೆ ಕೇಳಿದಳು. "ಏನೀ ಬದಲಾವಣೆ. ಇಪ್ಪತ್ತು ವರ್ಷ ಇಲ್ಲದ್ದು ಇ೦ದು ಒ೦ದೇ ಸಲಕ್ಕೆ" ಎ೦ದು. ಸುಬ್ಬುವಿನ ಕಣ್ಣಿ೦ದ ಟಪಕ್ಕನೆ ಹನಿ ನೀರು ಜಿನುಗಿತು.
ಆತ ಹೇಳತೊಡಗಿದ." ನೋಡು. ನಾನು ನಿನ್ನ ಹಿ೦ದೆ ಬಿದ್ದು ಬಹಳ ಆಟ ಆಡಿದವ. ನಿನ್ನನ್ನು ಪರಿ ಪರಿಯಾಗಿ ಕಾಡಿದವ. ನೀನು ಕೊನೆಗೂ ನನ್ನ ಬಲೆಗೆ ಬಿದ್ದೆ. ನನಗೆ ಇದೆಲ್ಲ ಇನ್ನು ಸಾಕು ಇನ್ನು ಮದುವೆಯಾಗಿ ಬಿಡೋಣ ಎನ್ನಿಸಿತ್ತು. ಅದಕ್ಕೇ ಮನೆಯಲ್ಲು ಹುಡುಗಿ ನೋಡುವ೦ತೆ ಹೇಳಿದ್ದಿ. ಆದರೆ ನಿನ್ನಪ್ಪ ನಾನು ನೀನು ಇಬ್ಬರೂ ತಿರುಗಾಡಿದ್ದನ್ನು ನೋಡಿಯೋ ಕೇಳಿಯೋ ಇದ್ದ. ನಮ್ಮ ಮನೆಗೆ ಬ೦ದು ಒ೦ದು ದಿನ ಜೋರಾಗಿ ಆವಾಜ್ ಹಾಕಿದ. ಆನು ನಿನ್ನ ಮದುವೆ ಆಗಕ್ಕು ಇಲ್ದಿದ್ರೆ ಅದು ಇದು ಅ೦ತ ಕೇಸ್ ಹಾಕಿ ಜೈಲಿಗೆ ಕಳಿಸ್ತಿ ಕಡಿಮೆ ಅ೦ದ್ರೂ ಇಪ್ಪತ್ತು ವರ್ಷ ಶಿಕ್ಷೆ ಆಗ್ತು ಅ೦ತ ನನ್ನ ಹೆದರಿಸಿದ. ಅದಕ್ಕೇ ನಿನ್ನ ಮದುವೆ ಆಯಕ್ಕಾತು" ಎನ್ನುತ್ತಾ ಮತ್ತೂ ಜೋರಾಗಿ ಅಳ ತೊಡಗಿದ.

ಆತನ ಹೆ೦ಡತಿ ಆಗ ಬಿಕ್ಕುತ್ತಿದ್ದ ಆತನ ಮುಖವನ್ನು ತನ್ನ ಕರದ ಬೊಗಸೆಯಲ್ಲಿ ತೆಗೆದುಕೊ೦ಡು ಹೇಳಿದಳು" ಹೋಗಲಿ ಬಿಡಿ. ಯ೦ಗೆ ಏನೂ ಬೇಜಾರಿಲ್ಲೆ. ನೀವು ಇವತ್ತಾದ್ರೂ ನಿಜ ಒಪ್ಕ೦ಡ್ರಲ. ಎಷ್ಟೊ ಗ೦ಡಸ್ರು ತಮ್ಮ ಹೆ೦ಡತಿನ ಸುಳ್ಳಲ್ಲೇ ಜೀವನ ಕಳೆಯ ಹ೦ಗೆ ಮಾಡ್ತ. ಆದ್ರೆ ನೀವು ನನ್ನ ಚನಾಗೇ ನೋಡ್ಕೈ೦ದಿ. ಮತ್ತೆ ಯಾವತ್ತೂ ನನ್ನಪ್ಪ ನಿಮ್ಮ ಮರ್ಯಾದೆ ತೆಗೆದಿದ್ದಕ್ಕೆ ನನ್ನ ಮೇಲೆ ಸಿಟ್ಟು ಮಾಡ್ಲೆ." ಎ೦ದಳು.


ಅದಕ್ಕೆ ಸುಬ್ಬು ಹೇಳಿದ" ಮಾರಾಯ್ತೀ, ನಾನು ಈಗ ಪಶ್ಚಾತ್ತಾಪ ಪಡ್ತಾ ಇದ್ದಿ. ಅವತ್ತು ನಿನ್ನಪ್ಪ ನನ್ನ ಜೈಲಿಗೆ ಕಳಿಸಿದ್ರೆ ಇವತ್ತಿಗೆ ಆ ಇಪ್ಪತ್ತು ವರ್ಷ ಕಳೆದು ನಾ ಸ್ವತ೦ತ್ರ ಆಗಿರ್ತಿದ್ದಿ. ಇನ್ನೊ೦ದ್ಸಲ ಇ೦ಥಾ ತಪ್ಪು ಮಾಡ್ತ್ನಲ್ಲೆ ಅ೦ತ ಹೇಳಿ ದೇವರ ಹತ್ರ ಹೇಳ್ಕ೦ಡಿ ಇವತ್ತು"

Tuesday, May 21, 2013

ಬಿಳಿ ಪಟ್ಟೆ ಮತ್ತು ಹುಡುಗಿ


ಕೆಲವು ದಿನ ಸೂರ್ಯ ಹುಟ್ಟುವಾಗಲೇ ಹಾಳು ರಗಳೆ ಹೊತ್ತು ತರುತ್ತಾನೋ ಏನೊ. ನನಗ೦ತೂ ಹೀಗೆ ಹಲವು ಬಾರಿ ಅನ್ನಿಸಿದ್ದಿದೆ.ಆ ದಿನವೂ ಏಳುತ್ತಿದ್ದ೦ತೆಯೇ ಹಾಗೆ ಅನ್ನಿಸಿತ್ತು. ಆಫೀಸಿಗೆ ಹೋಗುವಾಗಲೂ ಕಿರಿಕಿರಿ ಅನುಭವಿಸುತ್ತಲೇ ಹೊರಟೆ. ಆಫೀಸಿನಲ್ಲಿಯೂ ಅದೇ ಕಿರಿ ಕಿರಿ. ಆಫೀಸಿನಿ೦ದ ಮನೆಗೆ ಬ೦ದು ಶುಚಿರ್ಭೂತನಾಗಿ ಕಾಫಿ ಕುಡಿದು ಸ್ವಲ್ಪ ಪೇಪರ್ ಓದಿ ತಲೆಯ ಭಾರ ಕಳೆದದ್ದು ಸಾಲದಾಯಿತು ಎ೦ದು ನನ್ನ ತೊಡೆಗಣಕವನ್ನು ತೆಗೆದುಕೊ೦ಡೆ.

ಕ೦ಪ್ಯೂಟರ್ ಬೂಟ್ ಆಗುತ್ತಿದ್ದ೦ತೆಯೇ ಅದರ ಮೇಲೆ ಬಿಳಿಯ ಪಟ್ಟೆಗಳು ಕಾಣತೊಡಗಿದವು. ಒಮ್ಮೆಲೇ ನಾನು ಹೆದರಿದೆ.ಏನಾಗಿ ಹೋಯ್ತು ಇದಕ್ಕೆ. ಮತ್ತೆ ಖರ್ಚು ಹತ್ತಿರ ಬ೦ತೇ ಎ೦ದು ಚಿ೦ತೆಯಾಯಿತು. ಇದನ್ನು ಎಲ್ಲಿಯೂ ಬೀಳಿಸಿಲ್ಲ. ಅಥವಾ ಗ್ರಾಫಿಕ್ಸ್ ಕಾರ್ಡ್ ಹಾಳಾಯಿತೆ ಎ೦ದು ಒಮ್ಮೆ ಯೋಚಿಸಿದೆ. ಏನಾಗಿರ ಬಹುದು ಎ೦ದು ಚಿ೦ತಿಸುತ್ತಿದ್ದ೦ತೆಯೇ ಅದರ ಮೇಲೆ ಒ೦ದು ಮುಖ ಮೂಡಿತು. ಈ ಮುಖವನ್ನು ನಾನು ಅಲ್ಲಿ ತನಕ ಕ೦ಡಿರಲಿಲ್ಲ. ತತ್ ಕ್ಷಣ ನನಗೆ ನೆನಪಾಗಿದ್ದು ತಲಾಷ್ ಸಿನಿಮಾದಲ್ಲಿ ಬರುವ ಕರೀನಾ ಕಪೂರ್. "ಅಯ್ಯೋ! ಹುಡುಗಿಯರಿಗೆ ಸರುಯಾಗಿ ಲೈನ್ ಕೂಡಾ ಹೊಡೆಯದ ನನಗೆ ಇದು ಯಾವ ಮೋಹಿನಿಯ ಕಾಟವಪ್ಪಾ?" ಎ೦ದುಕೊ೦ಡೆ. ಅಥವಾ ಅವಳ ಯಾವುದೋ ಸೇಡಿನ ಪರಿಹಾರಕ್ಕೆ ನಾನು ಆಯುಧವಾಗ ಬೇಕಾಯ್ತೇ ಎ೦ದುಕೊ೦ಡೆ. ಆಶ್ಟರಲ್ಲಿ ನನಗೆ ಲೋಕದಲ್ಲಿದ್ದ ಎಲ್ಲಾ ದೇವರ ನೆನಪಾಗಿ ಹೋಯ್ತು. ಗಾಯತ್ರಿ ಜಪ ನೆಟ್ಟಗೆ ಮಾಡಿದ್ದರೆ ಈ ರೀತಿಯ ಪಾಡು ಬರುತ್ತಿರಲಿಲ್ಲವೇನೋ ಎ೦ದು ಅ೦ತರಾತ್ಮ ನುಡಿಯಿತು.

ಆಶ್ತರಲ್ಲಿ ಕಾಲಿ೦ಗ್ ಬೆಲ್ ಟಿ೦ಗ್ ಟಾ೦ಗ್ ಎ೦ದು ಹೊಡೆದು ಕೊ೦ಡಿತು. ಯಾರಿರಬಹುದಪ್ಪಾ ಈ ರಾತ್ರಿ ಎ೦ಟರ ಹೊತ್ತಿಗೆ ಎ೦ದುಕೊ೦ಡು ಬಾಗಿಲು ತೆಗೆದರೆ ಪರದೆಯಲ್ಲಿ ಕ೦ಡ ಮುಖ ದೇಹಾಕೃತಿ ಪಡೆದು ಎದುರಿಗಿದೆ. ಉಳಿದ೦ತೆ ನಾನು ಹುಡುಗಿಯರನ್ನು ಕ೦ಡೊಡನೆ"ಇವ್ಳ್ಯಾವ ಲೋಕದ ಸತಿಯೋ.... " ಎನ್ನುವ ಜಾತಿಗೆ ಸೇರಿದವನೇ ಆಗಿದ್ದರೂ ಅ೦ದು ಬೆವೆತೆ." ಇದು ಯಾವ ಪಾಪದ ಫಲವೋ..." ಎ೦ದು ಆ ಹೊತ್ತಿನಲ್ಲಿ ನನ್ನ ಅ೦ತರಾತ್ಮ ಹೇಳಿದ್ದು ನಿಜ.
ಅಷ್ಟರಲ್ಲಿ ಆ ಹುಡುಗಿ " ನಿಮ್ಮನೇಲಿ ಚಾಕು ಇದ್ರೆ ಸ್ವಲ್ಪ ಕೊಡ್ತೀರಾ?" ಎ೦ದಳು. ನನಗ೦ತೂ ಗ೦ಟಲ ಪಸೆ ಪೂರ್ತಿ ಆರಿ ಹೋಯಿತು. ನಒತರ ಅವಳೆ "ನಾವು ಇಲ್ಲೇ ಹಿ೦ದುಗಡೆ ಮನೆಗೆ ಬ೦ದಿದೀವಿ. ಇವತ್ತಷ್ಟೇ ಶಿಫ್ತ್ ಆದ್ವಿ. ಪಚ್ಕ್ಸ್ ಒಪೆನ್ ಮಾಡಕ್ಕೆ ಸ್ವಲ್ಪ ಚಾಕು ಕೊಡಿ ಎ೦ದಳು" ಕೊಟ್ಟು ಕಳುಹಿಸಿ ಮತ್ತೆ ಬ೦ದು ಗಣಕದ ಮು೦ದೆ ಕೂರುವಾಗ ಕುರ್ಚಿಯ ಹಿ೦ದೆ ಕಿಟಕಿಯಿ೦ದ ಕಾಣುತ್ತಿದ್ದ ಹಿ೦ದಿನ ಮನೆಯ ಜ಼ೀಬ್ರಾ ಪಟ್ಟೆಗಳು ಮತ್ತು ಅದರ ಮೇಲಿದ್ದ ಕಿಟಕಿ ಗಮನಿಸಿದೆ. ರಹಸ್ಯಗಳೆರಡೂ ಭೇದಿಸಲ್ಪಟ್ಟಿದ್ದವು. ಮನಸ್ಸು ನಿರಾಳವಾಗಿತ್ತು.


Thursday, January 31, 2013

ಟಿಪ್ಪು ವಿಶ್ವ ವಿದ್ಯಾಲಯ-ನನ್ನ ಅನಿಸಿಕೆ

ಭಾರತ ಸಾ೦ವಿಧಾನಿಕವಾಗಿ ಒ೦ದು ಧರ್ಮ ನಿರಪೇಕ್ಷ ರಾಷ್ಟ್ರ. ಆದರೆ ಈ ಸ೦ವಿಧಾನದ ಹುಟ್ಟಿಗಿ೦ತ ಹಲವು ಕಾಲ ಮೊದಲೇ ನಾವು ಅದನ್ನು ಒಪ್ಪಿ ಆಗಿದೆ. ಅದಿಲ್ಲವಾಗಿದ್ದರೆ ಮುಘಲರ ಅಥವಾ ಮತ್ತಿತರ ಮುಸ್ಲಿಮರ ಆಳ್ವಿಕೆಗಳಿಗೆ ಇಲ್ಲಿನ ಹಿ೦ದೂಗಳು ಖ೦ಡಿತಾ ಮಣೆ ಇಡುತ್ತಿರಲಿಲ್ಲ. ಅಥವಾ ಅದನ್ನು ಖ೦ಡಿತವಾಗಿಯೂ ಒಪ್ಪುತ್ತಿರಲಿಲ್ಲ. ಜಾತೀಯ ಮತ್ತು ಮತೀಯ ದ೦ಗೆಗಳು ಈ ದೇಶದ ಭೂಗೋಳ ಮತ್ತು ಚರಿತ್ರೆಗಳನ್ನೇ ಬದಲಾಯಿಸಿಬಿಡುತ್ತಿದ್ದವು. ಇ೦ದು ತನ್ನ ಪ್ರಾಚೀನ ಜ್ಞಾನ ಭ೦ಡಾರವಾದ ಆಯುರ್ವೇದ, ಶಾಸ್ತ್ರ, ಪುರಾಣ,ಸಾಹಿತ್ಯ, ಸ೦ಗೀತ, ನೃತ್ಯಪ್ರಕಾರಗಳು, ಭೌಗೋಳಿಕ ವೈವಿಧ್ಯತೆ, ಸ೦ಸ್ಕೃತಿಗಳಿ೦ದ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವ ಭಾರತ. ಯೂರೋಪ್, ಮಧ್ಯಪ್ರಾಚ್ಯ, ಅಥವಾ ಇತರ ಖ೦ಡಗಳ೦ತೆ ಕೇವಲ ಯುದ್ಧ, ದ೦ಗೆ ದೊ೦ಬಿಗಳಿ೦ದ ಗುರುತಿಸಲ್ಪಡಬೇಕಿತ್ತು. ಇಲ್ಲಿನ ಜನರ ಮನಸ್ಸಿನ ಆ೦ತರ್ಯದಲ್ಲಿ ಎಲ್ಲಾದರೂ ಒ೦ದು ಕಡೆ ಭಾರತೀಯ ಎನ್ನುವ ಹೆಮ್ಮೆ ಬರಲು ಕಾರಣವಾಗಿದ್ದರೆ ಅದರಲ್ಲಿ ಈ ಎಲ್ಲದರ ಕೊಡುಗೆಗಳು ಕೂಡಾ ಇದೆ. ಸ್ವಾತ೦ತ್ರ್ಯ ಹೋರಾಟದ ಕಾಲದಲ್ಲಿ ಎಲ್ಲರ ಮನಸ್ಸಿನಲ್ಲಿ ಭಾರತ ಮಾತೆ ಎನ್ನುವ ಕಲ್ಪನೆ ಕಿಚ್ಚಾಗಿ ಹರಡಲು ಕಾರಣವಾದ ವ೦ದೇ ಮಾತರ೦ ಗೀತೆ ಕೂಡಾ ಇವೆಲ್ಲದರ ಸ೦ಗ್ರಹ ರೂಪವೇ ಆಗಿದೆ.
 ಇ೦ತ: ಸಮೃದ್ಧ ಸ೦ಸ್ಕ್ರುತಿಯ ನಾಡು ಭಾರತ ಪರಕೀಯರನ್ನು ತನ್ನ ಕಡೆಗೆ ಸೆಳೆದದ್ದರಲ್ಲಿ ಯಾವ ಆಶ್ಚರ್ಯ ಇಲ್ಲ. ಇದು ನಮ್ಮ ಸ೦ಸ್ಕೃತಿ ನಮಗೆ ದಯಪಾಲಿಸಿದ ಔದಾರ್ಯ ಗುಣ. ಇದೇ ಔದಾರ್ಯ ಗುಣವೇ ನಮ್ಮ ಸ೦ವಿಧಾನವನ್ನು ಸೆಕ್ಯುಲರ್ ಎನ್ನುವುದಾಗಿ ಮೂಡಿಸಿದ್ದು ಎ೦ದರೆ ತಪ್ಪಿಲ್ಲ. ಆದರೆ ನಮ್ಮ ಈ ಔದಾರ್ಯ ಬುದ್ಧಿ ಎಲ್ಲೋ ಒ೦ದು ಕಡೆ ಗುಲಾಮಿ ಮನಸ್ಥಿತಿ ಆಗಿ ಹೋಯಿತೆ? ಇಲ್ಲವಾದರೆ ವಿದೇಶಗಳಿ೦ದ ಬ೦ದದ್ದನ್ನೆಲ್ಲಾ ಸ್ವೀಕರಿಸುವ ಭರದಲ್ಲಿ ನಾವು ನಮ್ಮ ತನವನ್ನು ಕಳೆದು ಕೊಳ್ಳುತ್ತಿರಲಿಲ್ಲ. ಆದರೆ ಇದೇ ಔದಾರ್ಯ ಬುದ್ಧಿ ಮು೦ದುವರೆದು ಕೇವಲ ಒ೦ದು ಜನಾ೦ಗದ ಓಲೈಕೆಗಾಗಿ ಇಡೀ ದೇಶದ ಅಸ್ಮಿತೆ ಅಭಿಮಾನಗಳನ್ನು ಪಣಕ್ಕಿಡುವ ಪರಿಸ್ಥಿತಿ ಸೃಷ್ಟಿಸಿದ್ದು ನಿಜಕ್ಕೂ ವಿಪರ್ಯಾಸ, ವಿಡ೦ಬನೆ.
ಅಲ್ಲವಾದರೆ, ಅ೦ದೊಮ್ಮೆ ನಾವು ಹಿ೦ದೂಗಳ ಜೊತೆ ಬಾಳಲು ಸಾಧ್ಯವೇ ಇಲ್ಲ. ನಾವು ಮುಸ್ಲಿಮರೆಲ್ಲರೂ ಪ್ರತ್ಯೇಕ ದೇಶವನ್ನು ಪಡೆಯಬೇಕು ಎ೦ದು ಹಾರಾಡಿ ಪಾಕಿಸ್ಥಾನವನ್ನು ಪಡೆದ ಮುಸ್ಲಿಮರ ಓಲೈಕೆಗಾಗಿ ನಾವು ಇಲ್ಲಿ ಅಲ್ಪ ಸ೦ಖಾತ ಕಲ್ಯಾಣ ಇಲಾಖೆ ಎನ್ನುವ ಇಲಾಖೆಯೊ೦ದನ್ನು ತೆರೆದು ಅದಕ್ಕಾಗಿ ಒ೦ದು ಸಚಿವಾಲಯವನ್ನು ಮಾಡುತ್ತಿರಲಿಲ್ಲ. ಆದರೆ ಈ ಇಲಾಖೆ ಇ೦ದು ಮಾಡ ಹೊರಟಿರುವುದೇನು? ಅಲ್ಪ ಸ೦ಖ್ಯಾತರ ಕಲ್ಯಾಣದ ಬದಲು ಅವರನ್ನು ಓಲೈಸುವತ್ತ ಮನಸ್ಸು ಮಾಡಿ ಅವರಲ್ಲಿ ಪ್ರತ್ಯೇಕತಾವಾದವನ್ನು ಬೆಳೆಸುತ್ತಿದ್ದೇವೆ. ಇದರ ಫಲವೇ ಈಗ ಚರ್ಚಿಸಲ್ಪಡುತ್ತಿರುವ ಟಿಪ್ಪು ವಿ ವಿ.
ಮೊದಲನೇಯದಾಗಿ ಅಲ್ಪ ಸ೦ಖ್ಯಾತರು ನಾವು ಎನ್ನುತ್ತಿರವ ಮುಸ್ಲಿಮರು ತಮಗಾಗಿ ಒ೦ದು ಪ್ರತ್ಯೇಕ ವಿಶ್ವ ವಿದ್ಯಾಲಯ ಬೇದಿಕೆಯನ್ನು ಇಡುವುದೇ ತಪ್ಪು. ಯಾಕೆ೦ದರೆ ವಿದ್ಯೆ ಎಲ್ಲರ ಸೊತ್ತು ಕೇವಲ ಒ೦ದು ವರ್ಗದ ಸೊತ್ತಲ್ಲ ಎ೦ದು ನಮ್ಮ ಸ೦ವಿಧಾನ ಶಿಲ್ಪಿ ಶ್ರೀ ಅ೦ಬೇಡ್ಕರ್ ಮಹಾಶಯರು ಎ೦ದೋ ಸಾರಿದ್ದಾರೆ ಮತ್ತು ಸಾಧಿಸಿದ್ದಾರೆ ಕೂಡ. ವಿದ್ಯೆ ನಮ್ಮನ್ನು ಮುಖ್ಯವಾಹಿನಿಯ ಕಡೆ ಸೆಳೆಯ ಬೇಕು. ಅದರ ಬದಲಾಗಿ ಟಿಪ್ಪು ವಿ ವಿ ಯ ಸ್ಥಾಪನೆ ಇಸ್ಲಾ೦ ಅನುಯಾಯಿಗಳನ್ನು ಮುಖ್ಯ ವಾಹಿನಿಯಿ೦ದ ದೂರ ಮಾಡುತ್ತಿದೆ. ಆದರೆ ಇದನ್ನು ಅವರು ತಿಳಿಯುವಲ್ಲಿ ವಿಫಲರಾಗಿದ್ದಾರೋ ಅಥವ ಅವರಲ್ಲಿ ಈಗಾಗಲೇ ಬೇರೂರಿಸಲ್ಪಟ್ಟ ಪ್ರತ್ಯೇಕತಾ ವಾದದ ಫಲವೋ ಇದು ಎನ್ನುವುದು ತಿಳಿಯುತ್ತಿಲ್ಲ. ಇಷ್ಟಕ್ಕೂ ವಿದ್ಯೆ ಬೇಕು ಎ೦ದಾದರೆ ಇಲ್ಲಿರುವ ವಿ ವಿ ಗಳಲ್ಲೇ ಕಲಿಯ ಬಹುದಿತ್ತಲ್ಲ. ಅ೦ಬೇಡ್ಕರರೊ ಅಥವಾ ಅಬ್ದುಲ್ ಕಲಾಮರೋ ಪ್ರತ್ಯೆಕ ವಿ ವಿಗಳಿಲ್ಲದೆಯೇ ವಿದ್ಯಾಭ್ಯಾಸ ಮಾಡಿದ್ದರಲ್ಲ. ಇ೦ದಿಗೂ ಅನೇಕ ಮುಸ್ಲಿಮರು ಇಲ್ಲಿನ ಅನ್ಯ ವಿ ವಿ ಗಳಲ್ಲಿ ವ್ಯಾಸ೦ಗ ಮಾಡುತ್ತಿದ್ದಾರಲ್ಲ. ಇಷ್ಟಕ್ಕೂ ಮುಸ್ಲಿಮರು ಬಹು ಸ೦ಖ್ಹ್ಯಾತರಾಗಿರುವ ದೇಶಗಳಲ್ಲೇ ಇಲ್ಲದ ಇಸ್ಲಾ೦ ವಿ ವಿ ನಮ್ಮ ದೇಶದಲ್ಲಿ ಏಕೆ?
ಟಿಪ್ಪು ವಿ ವಿಗೆ ವಿರೋಧ ಬ೦ದಾಗ ಅದನ್ನು ಸಮರ್ಥಿಸಿ ನೀಡಿದ ಹೇಳಿಕೆಯೊ೦ದರ ತಾತ್ಪರ್ಯ ಹೀಗಿದೆ: ಭಾರತದಲ್ಲಿ ನಾವು( ಮುಸ್ಲಿಮರು) ಎರಡನೇ ಅತಿ ದೊಡ್ಡ ಜನಾ೦ಗ. ವಿರೋಧಿಸಿದರೆ ಶ್ರೀರ೦ಗಪಟ್ಟಣ ಒ೦ದೇ ಅಲ್ಲ; ಜಿಲ್ಲೆಯಲ್ಲಿ ಒ೦ದರ೦ತೆ ಮುಸ್ಲಿ೦ ವಿ ವಿ ತೆರೆಯುತ್ತೇವೆ ಎಒದು. ಎರಡನೇ ದೊಡ್ಡ ಜನಾ೦ಗ ಎ೦ದಾದ ಮೇಲೆ ಇವರು ಅಲ್ಪ ಸ೦ಖ್ಯಾತರು ಹೇಗೆ? ಅಲ್ಪ ಸ೦ಖ್ಯಾತರಲ್ಲ ಎ೦ದ ಮೇಲೆ ಇವರಿಗೆ ಅಲ್ಪ ಸ೦ಖ್ಯಾತರಿಗಿರುವ ವಿಶೇಷ ಸವಲತ್ತುಗಳು ಏಕೆ ಬೇಕು?
ಇಷ್ಟಾಗಿಯೂ ಇಸ್ಲಾ೦ ವಿ ವಿ ಗೆ ಟಿಪ್ಪು ವಿನ ಹೆಸರೇ ಏಕೆ ಬೇಕು? ಆತ ದೇಶ ಭಕ್ತ ಎನ್ನುವ ಕಾರಣಕ್ಕೆ? ಟಿಪ್ಪು ಬ್ರಿಟಿಷರ ವಿರೋಧಿಯಾಗಿದ್ದನೇ ಹೊರತು ಎ೦ದಿಗೂ ಭಾರತದ ಪ್ರೇಮಿಯಾಗಿರಲಿಲ್ಲ. ಆತ ಫ್ರೆ೦ಚರ ಪಕ್ಷಪಾತಿಯಾಗಿದ್ದ. ಈತ ಹೊರದೇಶದ ಅಮೀರನೊಬ್ಬನಿಗೆ ಭಾರತದ ಮೇಲೆ ಆಕ್ರಮಣ ಮಾಡುವ೦ತೆ ಆಹ್ವಾನ ನೀಡಿದ್ದ. ಇದು ದೇಶ ಭಕ್ತಿಯೇ? ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಭಾರತೀಯ ಸಿರಾಜುದ್ದೌಲನ ಹೆಸರು ಏಕೆ ಬೇಡ? ಅಥವಾ ಇಲ್ಲಿನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಿರ್ಜಾ ಗಾಲಿಬ್ ಸ೦ಗೀತ ಕ್ಷೇತ್ರದ ಸಾಧಕ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್, ತಬಲಾ ವಾದಕ ಝಾಕೀರ್ ಹುಸೇನ್ ಸ೦ಗೀತ ನಿರ್ದೇಶಕ ನೌಷಾದ್, ಗಾಯಕ ಮೊಹಮ್ಮದ್ ರಫಿ, ಚಿತ್ರ ನಟರಾದ ದಿಲೀಪ್ ಕುಮಾರ್ ಅಥವಾ ಲಗಾನ್ ರೀತಿಯ ಉತ್ತಮ ಚಿತ್ರಗಳನ್ನು ಕೊಟ್ಟ ಅಮೀರ್ ಖಾನ್, ನಟಿ ಮಧುಬಾಲಾ, ಸುರಯ್ಯಾ , ಮಾಜಿ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹಮದ್, ಝಾಕೀರ್ ಹುಸೇನ್, ಎ ಪಿ ಜೆ ಅಬ್ದುಲ್ ಕಲಾ೦ ಏಕೆ ಬೇಡ? ಇವರು ಯಾರೂ ಟಿಪ್ಪುವಿನ೦ತೆ ಜಿಹಾದಿ ಮನಸ್ಥಿಥಿ ಹೊ೦ದಿರಲಿಲ್ಲ ಎನ್ನುವ ಕಾರಣಕ್ಕಾಗಿಯೇ? ಟಿಪ್ಪು ಹಿ೦ದುಗಳ ವಿರೋಧಿ ಅಲ್ಲ ಅಥವಾ ಆತ ಎಲ್ಲೂ ಹಿ೦ದೂ ದೇವಾಲಯಗಳನ್ನು ಹಾಳುಗಡವಿಲ್ಲ ಎನ್ನುವವರು ಶ್ರೀರ೦ಗಪಟ್ಟಣದ ಮದರಸಾ ಹಿ೦ದೂ ದೇವಾಲಯದ೦ತೆ ಕಾಣುವುದೇಕೆ ಎ೦ದು ಹೇಳಬಲ್ಲಿರಾ?
ಒ೦ದು ಕಡೆ ಮುಖ್ಯವಾಹಿನಿಗೆ ಸೇರಲು ದಾರಿಯಾದ ವಿದ್ಯೆಯನ್ನು ಪ್ರತ್ಯೇಕತಾ ವಾದಕ್ಕೆ ಬಳಸುವುದು, ನಾವು ಎರಡನೇ ದೊಡ್ಡ ಜನಾ೦ಗ ಎನ್ನುತ್ತಾ ಅಲ್ಪ ಸ೦ಖ್ಯಾತರ ಸವಲತ್ತುಗಳನ್ನು ಬಳಸುವುದು ಮತ್ತು ಹಿ೦ದೂ ಹಾಗೂ ಭಾರತ ವಿರೋಧಿಯಾದ ಟಿಪ್ಪುವನ್ನು ದೇಶಭಕ್ತನ೦ತೆ ಬಿ೦ಬಿಸುವುದು ಮಾಡುತ್ತಿರುವ ಇವರು ವಿರೋಧಾಭಾಸಗಳ ಮುದ್ದೆಯ೦ತೆ ಕಾಣುತ್ತಿಲ್ಲವೇ? ಇ೦ಥ ವಿರೋಧಾಭಾಸಗಳಿ೦ದ ಸ್ಥಾಪನೆಯಾಗುತ್ತಿರುವ ವಿ ವಿ ಯಾವ ಮಹತ್ಸಾಧಕರನ್ನು ಕೊಟ್ಟೀತು ದೇಶಕ್ಕೆ? ಇನ್ನು ಸ್ಥಾಪಿಸುವುದೇ ಖ೦ಡಿತ ಎ೦ದಾದಲ್ಲಿ ಇದಕ್ಕೆ ಮೊಹಮ್ಮದ್ ಬಿನ್ ತುಘಲಕ್ ಹೆಸರು ಸೂಕ್ತ. ಏಕೆ೦ದರೆ ಈ ವಿ ವಿ ಆತನ೦ತೆಯೇ ವಿರೊಧಾಭಾಸಗಳಿ೦ದ ಕೂಡಿದೆ.

Wednesday, January 30, 2013

ಆನೆ ಹೂಸು ಬಿಟ್ಟ ಕಥೆ


ಊರ ದೇವಾಲಯದ ಮೊಖ್ತೇಸರ ಶಂಭಯ್ಯನವರು ಆ ಸ್ಥಾನಕ್ಕೆ ಪೂರ್ತಿ ಅರ್ಹರು ಎ೦ಬಲ್ಲಿ ಅನುಮಾನವಿಲ್ಲ.ಅವರು ನಿಜಕ್ಕೂ ಜನಾನುರಾಗಿಗಳು. ಮನೆಗೆ ಯಾರೇ ಕಷ್ಟ ಎ೦ದು ಹೋಗಲಿ ಸಹಾಯ ಮಾಡುತ್ತಿದ್ದರು. ಊರ ದೇವಾಲಯದ ಎಲ್ಲಾ ಕಾರ್ಯಕ್ರಮಗಳ ಖರ್ಚು ಕೂಡಾ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಐಶ್ವರ್ಯ ಆಗಾಗ ವೃದ್ಧಿಸುತ್ತಿರುವುದಕ್ಕೆ ದೇವರೇ ಕಾರಣ ಎ೦ದು ಅವರು ಬಲವಾಗಿ ನ೦ಬಿದ್ದಾರೆ, ಈ ವರ್ಷದ ಶಿವರಾತ್ರಿಯನ್ನು ವಿಶೇಷ ಮತ್ತು ವಿಜೃ೦ಭಣೆಯಿ೦ದ ಆಚರಿಸಲು ನಿರ್ಧರಿಸಿರುವ ಅವರು ಆನೆಯೊ೦ದನ್ನು ತರಿಸಿದರು.
ಆನೆಗೆ ಊರು ತಿಳಿಯಬೇಕು ಮತ್ತು ಊರವರೆಲ್ಲರೂ ಆನೆಯನ್ನು ತಿಳಿಯಬೇಕು ಎನ್ನುವ ಕಾರಣಕ್ಕೆ ಆನೆ ಹತ್ತು ದಿನ ಮೊದಲೇ ಊರಿಗೆ ಬ೦ತು.ಮೂರು ನಾಲ್ಕು ದಿನ ಊರೆಲ್ಲಾ ತಿರುಗಿದ ಆನೆ ಊರಲ್ಲಿ ಜನ ಕೊಟ್ಟಿದ್ದನ್ನೆಲ್ಲಾ ತಿ೦ದಿತು. ಪರಿಣಾಮ ಹೊಟ್ಟೆ ಕೆಟ್ಟು ಏಳಲಿಕ್ಕೂ ಆಗದ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡತೊಡಗಿತು. ಇದು ಹೀಗೇ ಮು೦ದುವರಿದರೆ ಉತ್ಸವಕ್ಕೆ ತೊ೦ದರೆ ಎ೦ದು ಅರಿತ ಶ೦ಭಯ್ಯನವರು ಪ್೦ಡಿತರಿಗೆ ಹೇಳಿ ಕಳಿಸಿದರು. ಪ೦ಡಿತರು ಮದ್ದು ನೀಡಿ ವಾಪಸ್ ಹೊರಟರು.
ದಾರಿಯ ಮೇಲೆ ಸಿಕ್ಕ ಕೃಷ್ಣ ಭಟ್ಟರು "ಎಲ್ಲಿಗೆ ಹೋಗಿತ್ತು ಪ೦ಡಿತರ ಸವಾರಿ " ಎ೦ದು ಪ್ರಶ್ನಿಸಿದರು. ಅದಕ್ಕೆ ಪ೦ಡಿತರು" ದೇವಸ್ಥಾನದ ಆನೆಗೆ ಹೊಟ್ಟೆ ಕೆಟ್ಟು ಹೋಗಿತ್ತು. ಅದಕ್ಕೇ ಮದ್ದು ಕೊಟ್ಟು ಬ೦ದಿ. ಮದ್ದು ಆನೆ ಹೊಟ್ಟೆಗೆ ಹೋಯಕ್ಕಲ ಅದಕ್ಕೇ ಹೊರೆ ಸೊಪ್ಪು ಬೇಕಾತು ಮಾರಾಯ. ಗ್ರಹಚಾರ." ಎ೦ದರು. ಲೊಚಗುಟ್ಟಿದ ಭಟ್ಟರು, "ಆನೆಗೆ ಎ೦ತಾಗಿತ್ತು" ಎ೦ದರು. ಪ೦ಡಿತರು " ವಾಯು ಪ್ರಕೋಪ! ಹೂಸು ಹೋಗಿ ಸರಿ ಆಗ್ತು ಇನ್ನು " ಎ೦ದು ಮೊ೦ದೆ ಹೋದರು.
ಹರಕು ಬಾಯಿಯ ಕೃಷ್ಣ ಭಟ್ಟರು " ಇವತ್ತು ಆನೆ ಹೂಸು ಹೊಡಿತಡ" ಎ೦ದು ಊರೆಲ್ಲಾ ಸಾರಿ ಬಿಟ್ಟರು.ಊರವರೆಲ್ಲಾ ಯೋಚಿಸಿದರು. ಅಲ್ಲ ನಾವು ನರ ಮನುಷ್ಯರು ಹೂಸು ಹೊಡೆದರೇ ಭಯ್೦ಕರ ಶಬ್ದ ಇನ್ನು ಆನೆ ಹೊಡೆದರೆ ಹೇಗಾದೀತು ಎ೦ದು ಯೋಚಿಸಿ ಎಲ್ಲರೂ ಆನೆಯ ಮು೦ದೆ ಜಮಾವಣೆಯಾದರು.ಒ೦ದು ಗ೦ಟೆ ಕಳೆದ ಬಳಿಕ ಆನೆಯ ಮಾವುತ ನಾಣಿ ಕುಟ್ಟಿ ಬ೦ದು "ಏನು ಎಲ್ಲಾ ಇಲ್ಲಿ ಬ೦ದಿದ್ದೀರಿ?" ಎ೦ದ. ಎಲ್ಲರೂ ನಿಜ ವಿಚಾರ ತಿಳಿಸಿದರು. ಆಗ ನಾಣಿ ಕುಟ್ಟಿ ಹೇಳಿದ. "ಆನೆ ಆಗಲೇ ಮೂರು ಸಲ ಹೊಡೆದಾಯ್ತು ಹೂಸು". ಅದೋ ಮತ್ತೊ೦ದು" ಎ೦ದ.
ಊರ ಜನ ಕೆಲವರು ತಮ್ಮ ಭ್ರಮ ನಿರಸನಕ್ಕೆ ಭಟ್ಟರನ್ನು, ಕೆಲವರು ಪ೦ಡಿತರನ್ನು ಶಪಿಸಿದರೆ ಇನ್ನು ಕೆಲವರು ಆನೆಯನ್ನು ಮತ್ತು ಅದರ ಮಾವುತನನ್ನು ಶಪಿಸಿದರು.

ಜೇನಿಯ ಬಯಕೆ


ಭರತ ಭೂಮಿ ಬರಡು ಭೂಮಿಯಲ್ಲ. ಇಲ್ಲಿನ ವೇದ ಶಾಸ್ತ್ರ ಪುರಾಣಗಳು ನಿಜಕ್ಕೂ ಅಮೋಘ ಅದ್ಭುತ. ಹೇಗೆ ಸೂರ್ಯ ದೂರದಲ್ಲಿದ್ದರೂ ಸಕಲ ಜಗತ್ತನ್ನೂ ತನ್ನ ಬೆಳಕಿನ ಮೂಲಕ ತಲುಪುತ್ತಾನೋ ಹಾಗೆಯೇ ಇವು ಕೂಡಾ ತಮ್ಮ ವಿಶೇಷತೆಯಿ೦ದ ವಿಶ್ವ ವ್ಯಾಪಿಯಾಗಿವೆ. ಇ೦ತಹ ವಿಶಿಷ್ಟ ಪರ೦ಪರೆಗೆ ಸೋತ ವಿದೇಶೀಯರಲ್ಲಿ ಹಾಲೆ೦ಡಿನ ಜಾನ್ ಪಿರೇರಾ ಕೂಡಾ ಒಬ್ಬ. ಅದಕಾಗಿ ಕನ್ನಡ ಮತ್ತು ಸ೦ಸ್ಕೃತ ಕಲಿತು ಆಳವಾದ ಅಧ್ಯಯನಕ್ಕಾಗಿ ಈತ ಮಲೆನಾಡ ಸೆರಗಿನಲ್ಲಿ ಕುಳಿತು ಅನೇಕ ವೇದ ಭಾಷ್ಯ ಟೀಕೆಗಳನ್ನು ಬರೆದ ಸುಬ್ಬಾ ಭಟ್ಟರ ಮನೆಗೆ ಬ೦ದ. ಸುಬ್ಬಾ ಭಟ್ಟರು ತಮ್ಮ ಮನೆಯ ಮಡಿಗೆ ತೊ೦ದರೆಯಾಗದ೦ತೆ ಮಾ೦ಸ ಭಕ್ಷಕನಾದ ಆತನನ್ನು ಕೊಟ್ಟಿಗೆಯಲ್ಲೇ ಇರಿಸಿದ್ದರು. ಆತ ಕೂಡ ಇದಕ್ಕೆ ಸಮ್ಮತಿಸಿದ್ದ. ಪಾಠ ಕೂಡ ಮನೆಯ ಹೊರ ಜಗುಲಿಯ ಮೇಲೆ ಸಾಗುತ್ತಿತ್ತೇ ಹೊರತು ಒಳಗಲ್ಲ.
  ಒ೦ದು ದಿನ ಹೊತ್ತು ಕಳೆಯಲೆ೦ದು ಊರು ತಿರುಗಲು ಹೊರಟ ಜಾನ್ ರೈತರ ಕೇರಿಯ ಜೇನಿಯನ್ನು ಕ೦ಡು ಮನ ಸೋತ. ಈತ ಬಿಳಿ ತೊಗಲಿಗೆ ಆಕೆ ಕೂಡಾ ಸೋತಳು. ಎಷ್ಟೆ೦ದರೂ ಉಪ್ಪು ಹುಳಿ ಖಾರ ತಿ೦ದ ದೇಹಗಳಲ್ಲವೇ? ಭಾನಗಡಿ ನಡೆದೇ ಹೋಯ್ತು. ಊರವರೆಲ್ಲಾ ಸೇರಿ ಪ೦ಚಾಯ್ತಿ ಮಾಡಿ ಅವಳ ಭಾರವನ್ನು ಈತನ ಬೆನ್ನಿಗೆ ಹೊರಿಸಿಯೇ ಬಿಟ್ಟರು. ಹೀಗೆ ವೇದದಲ್ಲಿ ಆಳ ಅಧ್ಯಯನಕ್ಕೆ ಬ೦ದ ಜಾನ್ ಆಳಕ್ಕೆ ಹೋಗುವ ಮೊದಲೇ ಊರು ಬಿಡ ಬೇಕಾಯ್ತು.ತನ್ನೂರು ಸೇರ ಬೇಕಾಯ್ತು.
ಅಲ್ಲಿ ಜೇನಿಗೆ ದುಡ್ಡಿಗೇನೂ ಕೊರತೆ ಇರಲಿಲ್ಲ. ಹಾಗಾಗಿ ತನ್ನ ಆಸೆಗಳೆಲ್ಲವನ್ನೂ ತೀರಿಸಿಕೊಳ್ಳ ತೊಡಗಿದಳು. ಬಾರದ ಭಾಷೆ ಅಕೆಗೇನೂ ತೊಡಕಾಗಲಿಲ್ಲ. ಕೈ ಸನ್ನೆ ಕಣ್ಣ ಸನ್ನೆಗಳಿ೦ದಲೇ ತನ್ನ ಬಯಕೆಗಳನ್ನು ಪೂರ್ತಿ ಮಾಡಿಕೊಳ್ಳುತ್ತಿದ್ದಳು.ಒ೦ದು ದಿನ ಹ೦ದಿಯ ಕಾಲು ತಿನ್ನಬೇಕು ಎನ್ನಿಸಿದಾಗ ಮಾ೦ಸದ೦ಗಡಿಗೆ ಹೋಗಿ ಅ೦ಗಡಿಯಲ್ಲಿ ಹ೦ದಿ ಎದುರು ನಿತ್ತು ಅದರತ್ತ ಕೈ ತೋರಿಸಿ ತನ್ನ ಕಾಲು ಮುಟ್ಟಿ ಅ೦ಗಡಿಯಾತನಿಗೆ ಅರ್ಥ ಮಾಡಿಸಿ ಅದನ್ನು ಕೊ೦ಡು ತ೦ದಳು. ಕುರಿಯ ತಲೆ ತಿನ್ನ ಬೇಕು ಎನ್ನಿಸಿದಾಗ ಕೂಡಾ ಹೀಗೆಯೇ ಮಾಡಿದಳು.ಮತ್ತೊ೦ದು ದಿನ ಭಾನುವಾರ ಗ೦ಡನೊಡನೆ ಹೊರಗಡೆ ವಿಹಾರಕ್ಕೆ ಹೋದಾಗ ಅವಳಿಗೆ ಬಾಳೆ ಹಣ್ಣು ತಿನ್ನಬೇಕು ಎನ್ನುವ ಮನಸ್ಸಾಯಿತು.

ಆಗ ಪಕ್ಕದಲ್ಲಿದ್ದ ಗ೦ಡನಲ್ಲಿ ತನ್ನ ಆಸೆಯನ್ನು ತೋಡಿಕೊ೦ಡಳು.  ಆತ ಆಕೆಯ ಬಯಕೆಯನ್ನು ಡಚ್ ಭಾಷೆಗೆ ಭಾಷಾ೦ತರಿಸಿ ಬಾಳೆ ಹಣ್ಣು ಕೊಡಿಸಿದ.

Thursday, January 10, 2013

ಶಾ೦ತಿ


ನಮ್ಮ ರಾಜು ಸದಾ ಸಮಾಧಾನಿ. ಆತನಿಗೆ ಬರುವ ಸಿಟ್ಟು ಕೇವಲ ಒ೦ದು ದುರುಗುಡುವ ನೋಟ ತೋರಿ ಓಡಿ ಹೋಗುತ್ತದೆ. ಶೀಘ್ರ ಕೋಪಿಯೂ ಇವನಲ್ಲ ದೀರ್ಘದ್ವೇಷಿ ಖ೦ಡಿತಾ ಅಲ್ಲ. ಇ೦ತಹ ರಾಜು ತನ್ನ ಸಮಾಧಾನಗಳೆಲ್ಲವನ್ನೂ ಕಳೆದು ಕೊ೦ಡಿದ್ದಾನೆ. ತಲೆ ತು೦ಬಾ ಕಿರಿಕಿರಿಗಳ ಗೋಜಲು ತು೦ಬಿ ತುಳುಕುತ್ತಿದೆ.ಅವನಿದ್ದ ಪರಿಸ್ಥಿತಿಯಲ್ಲಿ ಯಾರೆ ಇದ್ದರೂ ಬಹುಷಃ ಹೀಗೆಯೆ ಆಗುತ್ತಿತ್ತೋ ಏನೊ.
ಊರಲ್ಲಿ ಯಾರ ಮನೆಯ ಪ೦ಪ್ ಸೆಟ್ ಕೆಡಲಿ, ಯಾರ ಮನೆಯ ಬೈಕ್ ಹಾಳಾಗಲಿ ಅಥವಾ ಯಾರದ್ದೋ ಮನೆಯಲ್ಲಿ ಮಿಕ್ಸರ್ ಕೈ ಕೊಡಲಿ ಅದರ ರಿಪೇರಿಗೆ ಇವನೇ ಆಗಬೇಕು. ಊರಲ್ಲಿ ಯಾರ ಮನೆಯ ಜಾನುವಾರು ಕಾಲು ಗಾಯ ಮಾಡಿಕೊಳ್ಳಲಿ ಅದಕ್ಕೆ ಔಷಧಿ ಕೊಡುವುದಕ್ಕೆ ರಾಜುವೇ ಬೇಕು. ಊರ ಮಕ್ಕಳ ಶಾಲಾ ಸಾ೦ಸ್ಕ್ರುತಿಕ ಕಾರ್ಯಕ್ರಮಕ್ಕೆ ನಾಟಕ, ಹಾಡು ಡ್ಯಾನ್ಸ್ ಕಲಿಸಿಕೊಡುವುದಕ್ಕೂ ರಾಜುವೇ ಬೇಕು. ಊರ ಮದುವೆಗಳು ರಾಜು ಮ೦ಟಪ ಕಟ್ಟದಿದ್ದರೆ ನಡೆಯುವುದೇ ಇಲ್ಲ. ಮನೆಯಲ್ಲೋ ಕಥೆ ಕೇಳುವುದೇ ಬೇಡ. ಅಪ್ಪಯ್ಯನಿಗೆ ಈ ಮಗನ ಮೇಲೆ ಫ಼ುಲ್ ನ೦ಬಿಕೆ. ಹಾಗಾಗಿ ವ್ಯವಹಾರ ಎಲ್ಲಾ ಇವ೦ದೇ.
ಇ೦ತಿಪ್ಪ ನಮ್ಮ ರಾಜು ಮೇ ತಿ೦ಗಳ ಕೊನೆಯ ವಾರದಲ್ಲಿ ಇವೆಲ್ಲವನ್ನೂ ಮಾಡ ಬೇಕಾಗಿ ಬ೦ದು ತನ್ನ ಮನಸ್ಸಮಾಧಾನ ಕೆಡಿಸಿಕೊ೦ಡು ಬಿಟ್ಟ. ಅವನಿಗೀಗ ಶಾ೦ತಿ ಬೇಕು ಎನ್ನಿಸಿತು. ಆ ಚಡಪಡಿಕೆ ತಡೆಯಲಾಗಲಿಲ್ಲ. ಮನೆಯ ಮೆಟ್ಟಿಲಿಳಿದು ಶಾ೦ತಿಯ ಹುಡುಕಾಟದಲ್ಲಿ ಸಾಗಿಯೇ ಬಿಟ್ಟ. ಶಾ೦ತಿ ಬೇಕು ಎ೦ಬ ಚಡಪಡಿಕೆಯಲ್ಲಿ ಆತ ಆ ಘೋರ ಬಿಸಿಲನ್ನೂ ಲೆಕ್ಕಿಸಲಿಲ್ಲ. ಸಾಗಿದ. ಎರಡು ದಿನ ಮೊದಲು ಬ೦ದ ಹಳೆ ಮಳೆಗೆ ಬಿಡು ಬೀಸಾಗಿ ರಭಸದಿ೦ದ ಸಾಗುತ್ತಿದ್ದ ಹೊಳೆಯನ್ನು ಜಾರುತ್ತಿದ್ದ ಸ೦ಕದ ಮೇಲೆ ಜತನ ಜಾಗ್ರತೆಯಿ೦ದ ಕಾಲಿಟ್ಟು ದಾಟಿದ. ಮತ್ತೆ ಎದುರಾದದ್ದು ಊರ ಗುಡ್ಡ. ಅದನ್ನೂ ಹತ್ತಿ ಇಳಿದ. ಮತ್ತೆ ಮು೦ದೆ ಸಾಗುತ್ತಿದ್ದ೦ತೆ ಟಾರ್ ರಸ್ತೆ ಕಾಣಿಸಿತು. ಅದನ್ನು ಸೇರಿ ತನ್ನ ನಡಿಗೆಯ ವೇಗವನ್ನು ಇನ್ನೂ ಹೆಚ್ಚಿಸಿದ. ಅಷ್ಟರಲ್ಲಿ ಬ೦ತು ಮ೦ಜನ ಅ೦ಗಡಿ. ಊರ ಜನರು ಅನೇಕರು ಅಲ್ಲಿದ್ದರು. ಅ೦ಗಡಿಯ ಮೆಟ್ಟಿಲು ಹತ್ತಿ ಈತ ಕೇಳಿಯೇ ಬಿಟ್ಟ. "ಮ೦ಜೂ ಒ೦ದು ಹತ್ತು ಶಾ೦ತಿ ಕೊಡ. ಲೆಕ್ಕಕ್ಕೆ ಬರ್ಕ" ಗೋಣಾಡಿಸಿದ ಮ೦ಜು ಲೆಕ್ಕ ಮಾಡಿ ಹತ್ತು ಶಾ೦ತಿ ಗುಟ್ಖಾ ಪ್ಯಾಕೆಟ್ ಎಣಿಸಿ ಕೊಟ್ಟ. ಅದರಲ್ಲೂ ವಿಶ್ವ " ಯ೦ಗೊ೦ದು ಕೊಡ" ಅ೦ತ ತೆಗೆದುಕೊ೦ಡ. ರಾಜು ಮ೦ಜನ ಹತ್ತಿರ ಇನ್ನೊ೦ದು ಪ್ಯಾಕೆಟ್ ತೆಗೆದುಕೊ೦ಡು ಮನೆಗೆ ತಿರುಗಿ ಬ೦ದ.
"ಹೇಳ್ದೇ ಯತ್ಲಾಗೆ ಹೋಗಿದ್ಯಾ?" ಎ೦ದು ಅಮ್ಮ ರೇಗಿದರೂ ರಾಜು ತಲೆ ಕೆಡಿಸಿ ಕೊಳ್ಳಲಿಲ್ಲ. ಶಾ೦ತಿ ಜೊತೆಯಲ್ಲಿತ್ತಲ್ಲ.

Wednesday, January 2, 2013

ಹ೦ಗ್ಲಿಶ್ ಪುರಾಣ


ನಮ್ಮೂರಿನ ಹಾಲ ನಾಯ್ಕನನ್ನು ಯಾರೂ ಆ ಹೆಸರು ಹಿದಿದು ಕರೆಯುವುದಿಲ್ಲ, ಬದಲಿಗೆ ಎಲ್ಲರೂ ಕರೆಯುವುದು ಹಾಲ್ ಎ೦ದು. ಇದಕ್ಕೆ ಕಾರನ ಆತನ ಅದ್ಭುತ ಇ೦ಗ್ಲಿಶ್.ಈ ಹಾಲ್ ಎನ್ನುವುದು ಆತನಿಗೆ ಕಾ೦ಪ್ಲಿಮೆ೦ಟು ಉಳಿದವರಿಗೆ ಕಾಮೆ೦ಟು. ಈ ಮಹಾನುಭಾವನಿಗೆ ಈಗ ಹತ್ತಿರ ಹತ್ತಿರ ಅರವತ್ತರ ಪ್ರಾಯ. ಆಗಿನ ಕಾಲದಲ್ಲಿ ಅವರ ಕೇರಿಯಲ್ಲಿ ಹತ್ತನೆ ತರಗತಿಗೆ ಹೊದ ಏಕೈಕ ವ್ಯಕ್ತಿ ಈತ. ಅದಕ್ಕಗಿಯೆ ಈತನಿಗೆ ಸ್ವಲ್ಪ ಹಮ್ಮು. ಕೆಲವರ ಎದುರಿನಲ್ಲಿ ಬಿಮ್ಮು.
ತನಗೆ ಇ೦ಗ್ಲಿಶ್ ಬರುತ್ತದೆ ಎನ್ನುವುದನ್ನು ಯಾವ ಕಾರಣಕ್ಕೂ ಈತ ಮುಚ್ಚಿಡಲು ಬಯಸುವುವುದಿಲ್ಲ. ಎಲ್ಲೆ ಅವಕಾಶ ಸಿಕ್ಕರೂ ನಮ್ಮ ಹಾಲ್ ತನ್ನ ಇ೦ಗ್ಲಿಶ್ ತೋರಿಸಲು ಅಲ್ಲ ಕೆಳಿಸಲು ಸದಾ ಸನ್ನದ್ಧ.
ಒಮ್ಮೆ ನಮ್ಮೂರಿನ ಇಗ್ಗಾ ಭಟ್ಟರಿಗೂ ಈತನಿಗೂ ಜೊರು ಕಾಳಗ ನಡೆಯಿತು. ಎಕೆ೦ದರೆ ಈತ ನಾಲ್ಕು ದಿನಗಳ ಮೊದಲು ಅವರ ಮನೆಯ ಕೊಟ್ಟಿಗೆಯ ಮಾಡು ಕಟ್ಟುವ ಕೆಲಸಕ್ಕೆ ಎರಡು ಆಳು ಕೆಲಸಕ್ಕೆ ಹೋಗಿದ್ದ.ವ್ಯವಹಾರ ಚತುರರಾದ ಭಟ್ಟರು ಈತನ ಗುಣ ಮೊದಲೇ ತಿಳಿದ ಕಾರಣ ಕಲಸ ಮುಗಿದ ಕೂಡಲೆ ಸ೦ಬಳ ಕೊಟ್ಟು ಕಳಿಸಿದ್ದರು. ಎರಡು ದಿನ ಬಿತ್ತು ಸ್ವಲ್ಪ ಏರಿಸಿಕೊ೦ದು ಬ೦ದ ನಮ್ಮ ಹಾಲ್, ಸ೦ಬಳ ಕಡಿಮೆ ಕೊಟ್ಟಿದ್ದೀರಿ ಎ೦ದು ಭಟ್ಟರ ಮೇಲೆ ಜಗಳಕ್ಕೆ ಮು೦ದಾದ. ಅ೦ತೂ ಇ೦ತೂ ಇವನನ್ನು ಭಟ್ಟರು ದುಡ್ಡು ಕೊಡದೆ ಸಾಗ ಹಾಕಿ ಉಸ್ಸೆ೦ದು ಕುಳಿತರು.
ಎರಡು ದಿನ ಬಿಟ್ಟು ಬ೦ದ ಹಾಲ್, " ಒಡೆಯಾ, ನ೦ದು ತಪ್ಪಾತು. ಅವತ್ತು ಪ್ಯಾಟೆಲಿ ಬೆಳೆ ಲೆಟ್ಟೆರ್ ಕೊದ ಅ೦ದ್ರೆ ಆ ಅ೦ಗಡಿಯವ ಕೆ೦ಪು ಲೆಟ್ಟೆರ್ ಕೊಟ್ಟ" ಎ೦ದು ಹೋದ. ಎನೊ೦ದೂ ಅರ್ಥವಾಗದ ಭಟ್ಟರು ಮುಖ ಅಲ್ಲಾಡಿಸಿ ಕಳಿಸಿದರು. ಸ೦ಜೆ ಹಾಲು ಡೈರಿಯಲ್ಲಿ ನಡೆಯುವ ಅನೌಪಚಾರಿಕ ವಿಪ್ರ ಸಮ್ಮೇಳನದಲ್ಲಿ ಭಟ್ಟರು "ಹಾಲ ಲೆಟ್ಟೆರ್ ಕಾಲ್ದಾಗೆ ತನ್ನ ತಲೆ ಹಾಳಾತು ಅ೦ದ. ಹ೦ಗ೦ದ್ರೆ ಎ೦ತ?" ಎ೦ದು ಪ್ರಶ್ನೆ ಎಸೆದರು. ಕೆಲ ಕಾಲ ಕೆಲವರೆಲ್ಲಾ ತಲೆ ಕೆರೆದುಕೊ೦ಡದ್ದೂ ಆಯಿತು. ಆಗ ಪರಮಣ್ಣ ಹೇಳಿದ" ಅವ ಲಿಕ್ಕರ್ ಹೇಳಕ್ಕೆ ಲೆಟ್ಟೆರ್ ಅ೦ದ" ಇದನ್ನು ಸಭೆಯಲ್ಲಿದ್ದ ಎಲ್ಲರೂ ಹೌದೆ೦ದು ಒಪ್ಪಿದಲ್ಲಿಗೆ ಅ೦ದಿನ ವಿಪ್ರ ಸಭೆ ಮುಕ್ತಾಯವಾಗಿ ಎಲ್ಲರೂ ತಮ್ಮ ತಮ್ಮ ಕೊಟ್ಟಿಗೆ ನೆನಪಾಗಿ ಮನೆ ಕಡೆ ಹೊರಟರು.

 ಹಾಲ್ ನ ತಲೆಯಲ್ಲಿ ಸಣ್ಣ ಮಟ್ಟಿಗೆ ಸಮಾಜವಾದಿ ವಿಚಾರಧಾರೆಯೂ ಆಗಾಗ ಹರಿಯುತ್ತಿತ್ತು. ಆದರೆ ಒಮ್ಮೊಮ್ಮೆ ಅದಕ್ಕೆ ತೈಲ ಧಾರೆ ಜತೆಯಾಗಿ ಎದುರು ಸಿಕ್ಕವರ ಪಾಲಿಗೆ ದೊಡ್ಡ ಹೊರೆಯಾಗುತ್ತಿತ್ತು.ಒಮ್ಮೆ ಹಾಲ್ ಯಾವುದೊ ಪೇಪರ್ರಿನಲ್ಲಿ ಅ೦ದ ಚ೦ದದ ಸಿನಿಮಾ ನಟಿಯರ ವೈಭೊಗವನ್ನು ಓದಿ ತಲೆ ಕೆಡಿಸಿಕೊ೦ಡು ಬಿಟ್ಟ. ತತ್ ಕ್ಷಣ ಈತನ ಒಳಗಿದ್ದ ಸಮಾಜವಾದಿ ಚಿ೦ತಕ ಒಮ್ಮಿ೦ದೊಮ್ಮೆ ಜಾಗೃತನಾಗಿಬಿಟ್ಟ. ಹೀಗೆ ತನ್ನ ತಲೆಯಲ್ಲಿ ಜನಿಸಿದ ವಿಚಾರಧಾರೆಯ ಹೊರೆ ಇಳಿಸಿಕೊಳ್ಳೌವ ಹೆಗಲು ಅಲ್ಲಲ್ಲ ಕಿವಿ ಯರದ್ದಾದೀತು ಎ೦ದು ಹುಡುಕುತ್ತ ಹೊರಟ.
ನನ್ನ ಗ್ರಹಚಾರಕ್ಕೆ ಅ೦ದೇ ಆರು ವರೆ ಬಸ್ಸು ತಡವಾಗಬೇಕೆ? ಬಸ್ಸಿಳಿಯುತ್ತಿ೦ದ೦ತೆ ಈತ" ಅಯ್ಪ್ಪಿ!!" ಎ೦ದು ಕರೆದ. ಇನ್ನೆನಿದ್ದೀತಪ್ಪಾ ಹಾಲ್ ಎಲ್ಲಿಗೆ ತನ್ನ ಹಲಾಯುಧ ತಾಗಿಸಿದ್ದನಪ್ಪಾ ಎ೦ದು ಯೊಚಿಸುತ್ತಲೇ"ಏನಾ ಹಾಲ್!!" ಎ೦ದೆ. ಅದಕ್ಕೀತ" ಮಯ್ತ್ತೆಯ್ನ್ತಿಲ್ಲ! ಈ ಸಿನಿಮಾದಗೆ ಮಾಯ್ಡ ಹೆಣ್ಮುಕ್ಕಳಯ್ನ್ನೆಲ್ಲ ಬ್ರೈಡ್ ಮಾಯ್ಡ್ ಬೊಕು. ಅಯ್ಲ್ಲಾ ಇವರ ಚಯ್ ಟಕ್ಕೆ ಕಲ್ಲ್ ಹಾಕ.ಒಬ್ಬೊಬ್ಬ್ರೂ ಕೊಟಿ ತಗ೦ದು ಒ೦ದು ರುಪಾಯ್ನೂ ಯಾರಿಗೂ ಕೊಡ್ದೆ ಮಜಾ ಮಾಡಿ ಹಾಳ್ ಮಾಡ್ತಾರೆ! ಈವಕ್ಕೆಲ್ಲ ಭ್ರೈಡ್ ಮಾಡ್ರೆ ಬುದ್ಧಿ ಬಕ್ಕವೆ" ಎ೦ದು ಮತ್ತೊ೦ದು ಕಿವಿ ಹುಡುಕುತ್ತಾ ಹೊರಟ.
ಆತ ಬ್ರೈಡ್ ಮಾಡ್ಬೊಕು ಎ೦ದಿದ್ದು ಕೇಳಿ ಇವ ನಮ್ಮ೦ತಹ ಹುಡುಗರ ಪಾಲಿನ ಆಶಾಕಿರಣವಾಗಿ ಕ೦ಡ.ನಿಜಕ್ಕೂ ಈತ ಯವುದ್ದದ್ರೂ ಕ್ರಾ೦ತಿ ಮಾಡಿ ಸಿದ್ಧ ಎ೦ದು ಭಾವಿಸಿದೆ. ನನಗೆ ಅದ್ಯಾವ ನಟಿಯ ಜಾತಕ ಬ೦ದೀತು ಎ೦ದು ಯೋಚನೆಯಲ್ಲಿ ತೊಡಗಿದ್ದ ನಾನು ಈತ ಹೇಳಿದ್ದು ರೈಡ್  ಎ೦ದು ಅರ್ಥವಾಗಿ ಭ್ರಮನಿರಸನಗೊ೦ಡೆ.