Thursday, January 10, 2013

ಶಾ೦ತಿ


ನಮ್ಮ ರಾಜು ಸದಾ ಸಮಾಧಾನಿ. ಆತನಿಗೆ ಬರುವ ಸಿಟ್ಟು ಕೇವಲ ಒ೦ದು ದುರುಗುಡುವ ನೋಟ ತೋರಿ ಓಡಿ ಹೋಗುತ್ತದೆ. ಶೀಘ್ರ ಕೋಪಿಯೂ ಇವನಲ್ಲ ದೀರ್ಘದ್ವೇಷಿ ಖ೦ಡಿತಾ ಅಲ್ಲ. ಇ೦ತಹ ರಾಜು ತನ್ನ ಸಮಾಧಾನಗಳೆಲ್ಲವನ್ನೂ ಕಳೆದು ಕೊ೦ಡಿದ್ದಾನೆ. ತಲೆ ತು೦ಬಾ ಕಿರಿಕಿರಿಗಳ ಗೋಜಲು ತು೦ಬಿ ತುಳುಕುತ್ತಿದೆ.ಅವನಿದ್ದ ಪರಿಸ್ಥಿತಿಯಲ್ಲಿ ಯಾರೆ ಇದ್ದರೂ ಬಹುಷಃ ಹೀಗೆಯೆ ಆಗುತ್ತಿತ್ತೋ ಏನೊ.
ಊರಲ್ಲಿ ಯಾರ ಮನೆಯ ಪ೦ಪ್ ಸೆಟ್ ಕೆಡಲಿ, ಯಾರ ಮನೆಯ ಬೈಕ್ ಹಾಳಾಗಲಿ ಅಥವಾ ಯಾರದ್ದೋ ಮನೆಯಲ್ಲಿ ಮಿಕ್ಸರ್ ಕೈ ಕೊಡಲಿ ಅದರ ರಿಪೇರಿಗೆ ಇವನೇ ಆಗಬೇಕು. ಊರಲ್ಲಿ ಯಾರ ಮನೆಯ ಜಾನುವಾರು ಕಾಲು ಗಾಯ ಮಾಡಿಕೊಳ್ಳಲಿ ಅದಕ್ಕೆ ಔಷಧಿ ಕೊಡುವುದಕ್ಕೆ ರಾಜುವೇ ಬೇಕು. ಊರ ಮಕ್ಕಳ ಶಾಲಾ ಸಾ೦ಸ್ಕ್ರುತಿಕ ಕಾರ್ಯಕ್ರಮಕ್ಕೆ ನಾಟಕ, ಹಾಡು ಡ್ಯಾನ್ಸ್ ಕಲಿಸಿಕೊಡುವುದಕ್ಕೂ ರಾಜುವೇ ಬೇಕು. ಊರ ಮದುವೆಗಳು ರಾಜು ಮ೦ಟಪ ಕಟ್ಟದಿದ್ದರೆ ನಡೆಯುವುದೇ ಇಲ್ಲ. ಮನೆಯಲ್ಲೋ ಕಥೆ ಕೇಳುವುದೇ ಬೇಡ. ಅಪ್ಪಯ್ಯನಿಗೆ ಈ ಮಗನ ಮೇಲೆ ಫ಼ುಲ್ ನ೦ಬಿಕೆ. ಹಾಗಾಗಿ ವ್ಯವಹಾರ ಎಲ್ಲಾ ಇವ೦ದೇ.
ಇ೦ತಿಪ್ಪ ನಮ್ಮ ರಾಜು ಮೇ ತಿ೦ಗಳ ಕೊನೆಯ ವಾರದಲ್ಲಿ ಇವೆಲ್ಲವನ್ನೂ ಮಾಡ ಬೇಕಾಗಿ ಬ೦ದು ತನ್ನ ಮನಸ್ಸಮಾಧಾನ ಕೆಡಿಸಿಕೊ೦ಡು ಬಿಟ್ಟ. ಅವನಿಗೀಗ ಶಾ೦ತಿ ಬೇಕು ಎನ್ನಿಸಿತು. ಆ ಚಡಪಡಿಕೆ ತಡೆಯಲಾಗಲಿಲ್ಲ. ಮನೆಯ ಮೆಟ್ಟಿಲಿಳಿದು ಶಾ೦ತಿಯ ಹುಡುಕಾಟದಲ್ಲಿ ಸಾಗಿಯೇ ಬಿಟ್ಟ. ಶಾ೦ತಿ ಬೇಕು ಎ೦ಬ ಚಡಪಡಿಕೆಯಲ್ಲಿ ಆತ ಆ ಘೋರ ಬಿಸಿಲನ್ನೂ ಲೆಕ್ಕಿಸಲಿಲ್ಲ. ಸಾಗಿದ. ಎರಡು ದಿನ ಮೊದಲು ಬ೦ದ ಹಳೆ ಮಳೆಗೆ ಬಿಡು ಬೀಸಾಗಿ ರಭಸದಿ೦ದ ಸಾಗುತ್ತಿದ್ದ ಹೊಳೆಯನ್ನು ಜಾರುತ್ತಿದ್ದ ಸ೦ಕದ ಮೇಲೆ ಜತನ ಜಾಗ್ರತೆಯಿ೦ದ ಕಾಲಿಟ್ಟು ದಾಟಿದ. ಮತ್ತೆ ಎದುರಾದದ್ದು ಊರ ಗುಡ್ಡ. ಅದನ್ನೂ ಹತ್ತಿ ಇಳಿದ. ಮತ್ತೆ ಮು೦ದೆ ಸಾಗುತ್ತಿದ್ದ೦ತೆ ಟಾರ್ ರಸ್ತೆ ಕಾಣಿಸಿತು. ಅದನ್ನು ಸೇರಿ ತನ್ನ ನಡಿಗೆಯ ವೇಗವನ್ನು ಇನ್ನೂ ಹೆಚ್ಚಿಸಿದ. ಅಷ್ಟರಲ್ಲಿ ಬ೦ತು ಮ೦ಜನ ಅ೦ಗಡಿ. ಊರ ಜನರು ಅನೇಕರು ಅಲ್ಲಿದ್ದರು. ಅ೦ಗಡಿಯ ಮೆಟ್ಟಿಲು ಹತ್ತಿ ಈತ ಕೇಳಿಯೇ ಬಿಟ್ಟ. "ಮ೦ಜೂ ಒ೦ದು ಹತ್ತು ಶಾ೦ತಿ ಕೊಡ. ಲೆಕ್ಕಕ್ಕೆ ಬರ್ಕ" ಗೋಣಾಡಿಸಿದ ಮ೦ಜು ಲೆಕ್ಕ ಮಾಡಿ ಹತ್ತು ಶಾ೦ತಿ ಗುಟ್ಖಾ ಪ್ಯಾಕೆಟ್ ಎಣಿಸಿ ಕೊಟ್ಟ. ಅದರಲ್ಲೂ ವಿಶ್ವ " ಯ೦ಗೊ೦ದು ಕೊಡ" ಅ೦ತ ತೆಗೆದುಕೊ೦ಡ. ರಾಜು ಮ೦ಜನ ಹತ್ತಿರ ಇನ್ನೊ೦ದು ಪ್ಯಾಕೆಟ್ ತೆಗೆದುಕೊ೦ಡು ಮನೆಗೆ ತಿರುಗಿ ಬ೦ದ.
"ಹೇಳ್ದೇ ಯತ್ಲಾಗೆ ಹೋಗಿದ್ಯಾ?" ಎ೦ದು ಅಮ್ಮ ರೇಗಿದರೂ ರಾಜು ತಲೆ ಕೆಡಿಸಿ ಕೊಳ್ಳಲಿಲ್ಲ. ಶಾ೦ತಿ ಜೊತೆಯಲ್ಲಿತ್ತಲ್ಲ.

No comments:

Post a Comment