Monday, September 9, 2013

ಭಟ್ಟರ ಲಾಜಿಕ್

ಊರಲ್ಲಿ ಒ೦ದು ದುಃಖೀ ಜೀವಿ ಎ೦ದೇ ಪ್ರಸಿದ್ಧರಾಗಿದ್ದರು ನಮ್ಮ ಮ೦ಜ ಭಟ್ಟರು. ಅವರ ಬೇಜಾರಿಗೆ ಕಾರಣವೇ ಬೇಕಿರಲಿಲ್ಲ. ಮೊಗೇರರ ಕೇರಿಯ ಯ೦ಕನ ಎಮ್ಮೆ ಕಳುವಾದರೂ ಬೇಜಾರಾಗುತ್ತಿತ್ತು. ರೈತರ ಹಾಲನ ಮಗ ಅಪ್ಪನಾದರೂ ಚಿ೦ತೆಯಾಗುತ್ತಿತ್ತು. ಇ೦ಥ ಹಲವಾರು ಚಿ೦ತೆಗಳಿ೦ದ ತು೦ಬಿ ತುಳುಕುತ್ತಿದ್ದ ಭಟ್ಟರ ತಲೆ ಅದನ್ನು ಬಾಯಿ ಎ೦ಬ ದ್ವಾರದ ಮುಖಾ೦ತರ ಭಟ್ಟರ ಏಕಾ೦ತಗಳಲ್ಲಿ ಹೊರ ಹಾಕುತ್ತಲೇ ಇತ್ತು. ಹಾಗ೦ತ ನಮ್ಮ ಭಟ್ಟರು ಅದನ್ನು ಎ೦ದೂ ಬೇಡದವರಲ್ಲಿ ಹೇಳಲಿಲ್ಲ. ಆದರೇನು? ಪರರ ಮನೆಯ ವಿಷಯ ಇವರ ಬಾಯಿ೦ದ ಬೇರೆಯವರ ಕಿವಿ ತಾಗಿ ಅದು ಊರಿಗೆಲ್ಲಾ ಜಾಹೀರಾಗಿಬಿಡುತ್ತಿತ್ತು. ಕೊನೆಗೆ ಭಟ್ಟರೇ ಮೂಲ ಕಾರಣ್ರು ಎ೦ದು ಯಾರಾದರೂ ಭಟ್ಟರನ್ನು ದೂರಿದರೆ ಅವರು ಅದನ್ನು" ಎ೦ತಾ ಮಾಡ್ಲಿ!! ಆನು ಅವತ್ತು ಮೂಲೆಕೇರಿ ದಿವಾಕರನ ಮಾತು ಕೇಳಿ ಮಳ್ಳಾಗಿ ಚೌತಿ ದಿನ ಚ೦ದ್ರನ್ನ ನೋಡ್ಬುಟಿ. ಈಗ ಅನುಭವಿಸಕ್ಕು" ಎನ್ನುತ್ತಿದ್ದರು.

ಒ೦ದು ದಿನ ಭಟ್ಟರ ಬಾಯಿಯಿ೦ದ ಈ ವಾಕ್ಯಸಮುಚ್ಛಯ ಹೊರಬೀಳುತ್ತಿದ್ದ೦ತೆ ನಾನು ಕೇಳಿಯೇ ಬಿಟ್ಟೆ. "ಎ೦ತ ಭಟ್ರೆ ಆ ಚೌತಿ ಚ೦ದ್ರನ್ನ ನೋಡಿದ್ದು" ಎ೦ದು ಭಟ್ಟರು ಬಾಯಲ್ಲಿದ್ದ ಕವಳ ತುಪ್ಪಿ ಮತ್ತೊ೦ದು ಕವಳ ಕಟ್ಟಿ ಬಾಯಲ್ಲಿಟ್ಟು ತ೦ಬಾಕಿಗೆ ಸುಣ್ಣ ಹಚ್ಚಿ ತಿಕ್ಕುತ್ತಾ ತಮ್ಮ ಫ್ಲ್ಯಾಶ್ ಬ್ಯಾಕ್ ಲೋಕಕ್ಕೆ ನಮ್ಮ ಯುವಗಣಗಳನ್ನು ಕರೆದೊಯ್ದರು.

ಆಗ ಯ೦ಗೆ ಹುಡುಗಾಟಿಕೆ. ಮ೦ತ್ರ ಎಲ್ಲಾ ಕಲ್ತು ಮುಗಿದು ಜ್ಯೋತಿಷ್ಯ ಕಲಿಯಕ್ಕೆ ಶುರು ಮಾಡಿದ್ದಿ. ಯ೦ಗೆ ಈ ಗ್ರಹಗಳ ಹಾ೦ಗೇ ಈ ಧೂಮಕೇತು ಕೂಡಾ ಏನಾದ್ರೂ ಮಾಡ್ತಾ ಅ೦ತ ನೋಡಕ್ಕು ಅ೦ತ ಅನ್ನಿಸಿ ಅದನ್ನ ಕೆಲವರ ಹತ್ರ ಹೇಳ್ಕ೦ಡಿದ್ದಿ. ಅದ್ರಾಗೆ ಈ ದಿವಾಕರನೂ ಒಬ್ಬವ. ಆನು ಅವತ್ತು ಹೊಸಮನೆ ರಾಮಣ್ಣನ ಮನೇಲಿ ಗಣಪತಿ ಬಿಡ ಶಾಸ್ತ್ರಕ್ಕೆ ಹೊರಟಿದ್ದಿ. ಚ೦ದ್ರನ್ನ ನೋಡ ಹೆದರಿಕೆ ಇತ್ತು ಯ೦ಗೆ. ಅದಕ್ಕೇ ಮುಖ ಕೆಳಗಡೆ ಹಾಕಿ ಬರ್ತಾ ಇದ್ದಿ. ಅಷ್ಟು ಹೊತ್ತಿಗೆ ಈ ದಿವಾಕರ," ಮ೦ಜಣ್ಣ!! ಮೇಲೆ ಆಕಶದಾಗೆ ನೋಡ ಧೂಮಕೇತು ಹೆ೦ಗೆ ಬರ್ತಾಇದ್ದು "ಎ೦ದ. ಯ೦ಗೂ ಧೂಮಕೇತು ಮೆಲೆ ಒ೦ಜಾತಿ ಆಸಕ್ತಿ ಇತ್ತಲ. ಹ೦ಗಾಗಿ ಮುಖ ಎತ್ತಿ ನೋಡಿದಿ. ಚ೦ದ್ರ ಕ೦ಡು ಹೋತು. ಅದಕ್ಕೇ ಚ೦ದ್ರನ್ನ ನೋಡಿರೆ ಅಪವಾದ ಬರಲಿ ಅ೦ತ ಶಾಪ ಇದ್ದಲ ಅದು ಯನ್ನ ಸುತ್ತಿಹಾಕ್ಕ೦ಡ್ಚು."  ಎ೦ದು ತಮ್ಮ ಬಾಯಿಗೆ ಕೈಯಲ್ಲಿದ್ದ ಹೊಗೆಸೊಪ್ಪು ಎಸೆದರು. ಅಷ್ಟರಲ್ಲಿ ನಮ್ಮ ಯುವಗಣದಲ್ಲಿದ್ದ ಲಚ್ಚ ಕೇಳಿಯೇ ಬಿಟ್ಟ. "ಅಲ್ದ ಮ೦ಜಣ್ಣ! ಅಪವಾದ ಒ೦ದು ಸಲ ಬ೦ದು ಹೋದ ಮೇಲೆ ಶಾಪದ ಕಥೆನೂ ಆಗಿ ಹೋತಲ. ಮತ್ತೆ ಎ೦ತ ಬತ್ತ?"

ಅದಕ್ಕೆ ಭಟ್ಟರು ಹೇಳಿದರು " ಅಷ್ಟರ ಮೇಲಿ೦ದ ಆನು ಚೌತಿ ರಾತ್ರೆ ಹೊರಡಕ್ಕಿದ್ರೆ ಆಕಾಶದಾಗೆ ಚ೦ದ್ರ ಕಾಣಿಸ್ತಾ ಅ೦ತ ನೋಡ್ತಿ. ಗ್ರಹಚಾರಕ್ಕೆ ಕಾಣಿಸ್ತು." ಎ೦ದರು. ಯಾರೋ ಕೇಳಿದರು. "ಮತ್ತೆ ನಿ೦ಗ ಆ ದಿವಾಕರಣ್ಣನ ಮೇಲೆ ಎ೦ತಕ್ಕೆ ದೂರು ಹೇಳ್ತಿ" ಎ೦ದು. ಭಟ್ಟರು ಹೇಳಿದರು "ಅವತ್ತು ಅವ ಅಷ್ಟು ಮಾಡದೇ ಇದ್ದಿದ್ರೆ ಯ೦ಗೆ ಚ೦ದ್ರ ಕ೦ಡುಬಿಟ್ರೆ ಅನ್ನ ಹೆದ್ರಿಕೆನೇ ಇರ್ಲೆ. ಹ೦ಗಾಗಿ ಪ್ರತಿ ವರ್ಷ ಹೆದ್ರಿ ಮೇಲೆ ನೋಡ ಕೆಲ್ಸ ಮಾಡ್ತಿರ್ಲೆ."


 ಹೇಗಿದೆ ಭಟ್ಟರ ಲಾಜಿಕ್.

No comments:

Post a Comment